ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ನಿಮಗೆ ಅನಿಸುತ್ತದೋ?

ನಿಮ್ಮನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ನಿಮಗೆ ಅನಿಸುತ್ತದೋ?

ನಿಮ್ಮನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ನಿಮಗೆ ಅನಿಸುತ್ತದೋ?

ಆಂಟೊನಿಯೊಗೆ ಒಂದೂ ಅರ್ಥವಾಗಲಿಲ್ಲ. ಇದ್ದಕ್ಕಿದ್ದಂತೆ ಸ್ಪಷ್ಟವಾದ ಯಾವುದೇ ಕಾರಣಗಳಿಲ್ಲದೆ ಅವನ ಆಪ್ತ ಸ್ನೇಹಿತನಾದ ಲಿಯೊನಾರ್ಡೊ ಅವನೊಂದಿಗೆ ಸರಿಯಾಗಿ ಮಾತಾಡುವುದನ್ನು ನಿಲ್ಲಿಸಿಬಿಟ್ಟನು. * ಹಲವಾರು ಸಂದರ್ಭಗಳಲ್ಲಿ ಆಂಟೋನಿಯೊ ಹೇಳಿದ ಅಭಿವಂದನೆಗಳಿಗೂ ಅವನು ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಇಬ್ಬರು ಜೊತೆಯಾಗಿದ್ದಾಗಲೂ ಕೂಡ ಅವರ ಮಧ್ಯೆ ಒಂದು ಗೋಡೆ ಇದ್ದಂತಿತ್ತು. ತಾನು ಮಾಡಿದ ಅಥವಾ ಹೇಳಿದ ಯಾವುದೋ ಒಂದು ವಿಷಯವನ್ನು ತನ್ನ ಸ್ನೇಹಿತನು ಅಪಾರ್ಥಮಾಡಿಕೊಂಡಿರಬೇಕು ಎಂಬ ಅನಿಸಿಕೆಯಿಂದ ಆಂಟೊನಿಯೊ ಗಾಬರಿಗೊಂಡನು. ಆದರೆ ಅವನು ಯಾವುದನ್ನು ಅಪಾರ್ಥಮಾಡಿಕೊಂಡಿದ್ದನು?

ಅಪಾರ್ಥಮಾಡಿಕೊಳ್ಳುವುದು ಸಾಮಾನ್ಯವಾದ ವಿಷಯವಾಗಿದೆ. ಹಲವಾರು ಸಂದರ್ಭಗಳಲ್ಲಿ ಅವು ಚಿಕ್ಕಪುಟ್ಟ ವಿಷಯಗಳಾಗಿರುತ್ತವೆ ಮತ್ತು ಸುಲಭವಾಗಿ ಪರಿಹರಿಸಲ್ಪಡುತ್ತವೆ. ಆದರೆ ಇನ್ನಿತರ ಸಂದರ್ಭಗಳಲ್ಲಿ, ಅಪಾರ್ಥಗಳನ್ನು ಕೊನೆಗಾಣಿಸಲು ಶತಪ್ರಯತ್ನಗಳನ್ನು ಮಾಡಿದ ನಂತರವೂ ಅವು ಉಳಿಯುವುದಾದರೆ ನಿಮಗೆ ಹೆಚ್ಚು ನಿರುತ್ಸಾಹವಾಗಬಹುದು. ಅಪಾರ್ಥಗಳು ಹೇಗೆ ತಾನೇ ಉಂಟಾಗುತ್ತವೆ? ಸಂಬಂಧಪಟ್ಟ ವ್ಯಕ್ತಿಗಳನ್ನು ಅವು ಹೇಗೆ ಬಾಧಿಸುತ್ತವೆ? ನೀವು ಮಾಡಿದಂಥ ವಿಷಯಗಳನ್ನು ಇತರರು ಅಪಾರ್ಥಮಾಡಿಕೊಂಡಿದ್ದರೆ ನೀವು ಏನು ಮಾಡಬಹುದು? ಏನೇ ಆದರೂ, ನಿಮ್ಮ ಬಗ್ಗೆ ಬೇರೆಯವರು ಏನು ನೆನಸುತ್ತಾರೆ ಎಂಬುದರ ಕುರಿತು ನೀವು ನಿಜವಾಗಿಯೂ ಚಿಂತಿಸಬೇಕೋ?

ತಪ್ಪಿಸಲಾಗದಂತಹ ನಿಜತ್ವ

ನಮ್ಮ ಆಲೋಚನೆಗಳು ಹಾಗೂ ಉದ್ದೇಶಗಳೇನೆಂಬುದನ್ನು ಬೇರೆಯವರು ತಿಳಿದುಕೊಳ್ಳಲು ಅಶಕ್ತರಾಗಿರುವ ಕಾರಣ, ಒಂದಲ್ಲ ಒಂದು ಸಮಯ ನಮ್ಮ ಮಾತು ಹಾಗೂ ಕ್ರಿಯೆಗಳನ್ನು ಯಾರಾದರೂ ಖಂಡಿತವಾಗಿಯೂ ತಪ್ಪರ್ಥಮಾಡಿಕೊಳ್ಳುವರು. ಅಪಾರ್ಥಮಾಡಿಕೊಳ್ಳಲು ಇರುವ ಸಾಧ್ಯತೆಗಳು ಅನೇಕ. ಕೆಲವು ವೇಳೆ, ನಮ್ಮ ವಿಚಾರಗಳನ್ನು ನಾವು ಬಯಸಿದಷ್ಟು ಸ್ಪಷ್ಟವಾಗಿ ಮತ್ತು ನಿಷ್ಕೃಷ್ಟವಾಗಿ ತಿಳಿಸಲು ತಪ್ಪಿಹೋಗುತ್ತೇವೆ. ಸುತ್ತಮುತ್ತಲಿನ ಸದ್ದು ಹಾಗೂ ಅಪಕರ್ಷಣೆಗಳಿಂದಾಗಿ, ಬೇರೆಯವರು ನಮಗೆ ಸಂಪೂರ್ಣವಾದ ಗಮನವನ್ನು ಕೊಡಲು ಕಷ್ಟಕರವಾಗಿರಬಹುದು.

ಕೆಲವು ರೀತಿಗಳು ಮತ್ತು ಶಿಷ್ಟಾಚಾರಗಳನ್ನು ಕೂಡ ತಪ್ಪರ್ಥಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, ನಾಚಿಕೆ ಸ್ವಭಾವವುಳ್ಳ ಒಬ್ಬ ವ್ಯಕ್ತಿಯು ಸ್ನೇಹಪರನಲ್ಲ, ತನ್ನನ್ನು ತಾನೇ ಪ್ರತ್ಯೇಕವಾಗಿ ಇಟ್ಟುಕೊಳ್ಳುವವನು ಅಥವಾ ಗರ್ವಿಷ್ಠನು ಆಗಿದ್ದಾನೆಂದು ಜನರು ತಪ್ಪುತಿಳಿದುಕೊಳ್ಳಬಹುದು. ಹಿಂದಿನ ವೈಯಕ್ತಿಕ ಅನುಭವಗಳಿಂದಾಗಿ, ಕೆಲವೊಂದು ಸನ್ನಿವೇಶಗಳಲ್ಲಿ ನ್ಯಾಯಬದ್ಧವಾಗಿ ಪ್ರತಿಕ್ರಿಯಿಸುವ ಬದಲು ಒಬ್ಬ ವ್ಯಕ್ತಿಯು ಭಾವುಕತೆಯಿಂದ ಪ್ರತಿಕ್ರಿಯಿಸಬಹುದು. ಅಲ್ಲದೆ, ಸಾಂಸ್ಕೃತಿಕ ಹಾಗೂ ಭಾಷಾಸಂಬಂಧಿತ ವ್ಯತ್ಯಾಸಗಳಿಂದಾಗಿ, ನಿರೀಕ್ಷಿಸಿದಂಥ ರೀತಿಯಲ್ಲಿ ಜನರು ಒಬ್ಬರನ್ನೊಬ್ಬರು ಸುಲಭವಾಗಿ ಅರ್ಥಮಾಡಿಕೊಳ್ಳಲಾರರು. ಇದರ ಜೊತೆಗೆ ತಪ್ಪಾದ ವರದಿಗಳು ಹಾಗೂ ಹರಟೆಮಾತೂ ಇದೆ. ಕೆಲವೊಮ್ಮೆ ಯಾವ ಉದ್ದೇಶದಿಂದ ವಿಷಯಗಳನ್ನು ಹೇಳಲಾಗುತ್ತದೊ ಅಥವಾ ಮಾಡಲಾಗುತ್ತದೊ ಅದಕ್ಕೆ ವಿರುದ್ಧವಾದ ಅರ್ಥವು ಕೊಡಲ್ಪಡುವಾಗ ನಾವು ಆಶ್ಚರ್ಯಪಡಬಾರದು. ಹೀಗಿದ್ದರೂ, ತಮ್ಮ ಉದ್ದೇಶಗಳನ್ನು ತಪ್ಪುತಿಳಿದುಕೊಳ್ಳಲಾಗಿದೆ ಎಂದನಿಸುವವರಿಗೆ ಈ ಎಲ್ಲ ಕಾರಣಗಳು ಅಷ್ಟೇನೂ ಸಾಂತ್ವನವನ್ನು ಕೊಡುವುದಿಲ್ಲ.

ಉದಾಹರಣೆಗಾಗಿ, ಆ್ಯನಾ ಎಂಬುವವಳು ಆ ಹೊತ್ತಿನಲ್ಲಿ ಅವರೊಂದಿಗೆ ಇಲ್ಲದಿದ್ದ ಒಬ್ಬ ಗೆಳತಿಯ ಖ್ಯಾತಿಯ ಕುರಿತು ಯಾವುದೇ ಕೆಟ್ಟ ಉದ್ದೇಶಗಳಿಲ್ಲದೆ ಒಂದು ಹೇಳಿಕೆಯನ್ನು ಮಾಡಿದಳು. ಈ ವಿಷಯವನ್ನು ಆ್ಯನಾ ಯಾವ ಸಂದರ್ಭದಲ್ಲಿ ಮತ್ತು ಏಕೆ ಹೇಳಿದಳೆಂಬುದನ್ನು ತಿಳಿಸದೆ, ಆ ಗೆಳತಿಯ ಕಿವಿಯಲ್ಲಿ ಅದನ್ನು ಊದಲಾಯಿತು. ಆದುದರಿಂದ ಆ್ಯನಾಳಿಗೆ ಆಶ್ಚರ್ಯ ಹಾಗೂ ದಿಗಿಲನ್ನುಂಟುಮಾಡುತ್ತಾ, ಅವಳ ಗೆಳತಿ ಎಲ್ಲರ ಮುಂದೆ ಕೋಪದಿಂದ ಆ್ಯನಾಳ ಮೇಲೆ ಅಪವಾದ ಹೊರಿಸಿದಳು. ಅದೇನೆಂದರೆ, ನಿರ್ದಿಷ್ಟವಾದ ಒಬ್ಬ ಪರಿಚಯಸ್ಥನು ತನ್ನನ್ನು ಓಲೈಸಲು ಪ್ರಯತ್ನಿಸುತ್ತಿರುವುದರಿಂದ ಆ್ಯನಾಳಿಗೆ ತನ್ನ ಬಗ್ಗೆ ಹೊಟ್ಟೆಕಿಚ್ಚಾಗುತ್ತಿದೆಯೆಂದೇ. ಆ ಗೆಳತಿಯು ಆ್ಯನಾಳ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ. ತಾನು ಅವಳಿಗೆ ಯಾವುದೇ ಕೇಡನ್ನು ಬಯಸಲಿಲ್ಲ ಎಂಬುದನ್ನು ರುಜುಪಡಿಸಲು ಆ್ಯನಾ ಎಷ್ಟೇ ಪ್ರಯತ್ನಿಸಿದರೂ, ಅದು ನಿಷ್ಫಲವಾಯಿತು. ಈ ಸನ್ನಿವೇಶವು ಅವಳಿಗೆ ತುಂಬ ನೋವನ್ನುಂಟುಮಾಡಿತು. ಆ್ಯನಾ ಈ ಅಪಾರ್ಥವನ್ನು ಸಂಪೂರ್ಣವಾಗಿ ಬಗೆಹರಿಸಲು ತುಂಬ ಸಮಯ ಹಿಡಿಯಿತು.

ನಿಮ್ಮನ್ನು ಇತರರು ಹೇಗೆ ಅಳೆಯುತ್ತಾರೆ ಎಂಬುದು, ನಿಮ್ಮ ಉದ್ದೇಶಗಳನ್ನು ಅವರು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿಸಿದೆ. ಆದುದರಿಂದ, ನಿಮ್ಮ ಉದ್ದೇಶಗಳನ್ನು ಜನರು ತಪ್ಪಾಗಿ ಅರ್ಥಮಾಡಿಕೊಳ್ಳುವಾಗ ನಿಮಗೆ ಬೇಸರವಾಗುವುದು ಸ್ವಾಭಾವಿಕವಾದದ್ದೇ. ಯಾರೇ ಆಗಲಿ ನಿಮ್ಮ ಬಗ್ಗೆ ಏಕೆ ಅಪಾರ್ಥಮಾಡಿಕೊಳ್ಳಬೇಕು ಎಂದು ನೆನಸುತ್ತಾ, ನೀವು ಕುಪಿತರಾಗಬಹುದು. ನಿಮ್ಮ ದೃಷ್ಟಿಯಲ್ಲಿ ಇಂತಹ ಅಳೆಯುವಿಕೆಗಳು, ಪಕ್ಷಪಾತವಾಗಿ, ಟೀಕಾತ್ಮಕವಾಗಿ ಅಥವಾ ಸಂಪೂರ್ಣವಾಗಿ ತಪ್ಪಾಗಿರಬಹುದು. ಅದಲ್ಲದೆ ಇಂತಹ ಅಳೆಯುವಿಕೆಯನ್ನು, ನೀವು ಯಾರ ಅಭಿಪ್ರಾಯಗಳಿಗೆ ತುಂಬ ಬೆಲೆಕೊಡುತ್ತೀರೊ ಅಂತಹ ಒಬ್ಬ ವ್ಯಕ್ತಿಯೇ ಮಾಡುವಲ್ಲಿ ನಿಮಗೆ ಹೆಚ್ಚು ನೋವಾಗಬಹುದು.

ಬೇರೆಯವರು ನಿಮ್ಮ ಯೋಗ್ಯತೆಯನ್ನು ನಿರ್ಧರಿಸುವ ರೀತಿಯು ನಿಮಗೆ ಸಿಟ್ಟುಬರಿಸಿದರೂ, ಅವರ ಅಭಿಪ್ರಾಯಗಳನ್ನು ಗೌರವಿಸುವುದು ಸೂಕ್ತವಾಗಿದೆ. ‘ಬೇರೆಯವರು ನನ್ನ ಕುರಿತು ಏನು ಬೇಕಾದರೂ ಯೋಚಿಸಲಿ, ನನಗೇನೂ ಚಿಂತೆಯಿಲ್ಲ,’ ಎನ್ನುವುದು ಕ್ರೈಸ್ತ ಮನೋಭಾವವಲ್ಲ. ಆದರೆ ನಾವು ನಮ್ಮ ನಡೆನುಡಿಗಳಿಂದ ಬೇರೆಯವರಿಗೆ ಹಾನಿಯನ್ನು ಉಂಟುಮಾಡಲೂ ಬಯಸುವುದಿಲ್ಲ. (ಮತ್ತಾಯ 7:​12; 1 ಕೊರಿಂಥ 8:​12) ಆದುದರಿಂದ ಕೆಲವೊಮ್ಮೆ ನಿಮ್ಮ ಕುರಿತು ತಪ್ಪಭಿಪ್ರಾಯವಿರುವ ಒಬ್ಬ ವ್ಯಕ್ತಿಯೊಂದಿಗೆ ವಿಷಯಗಳನ್ನು ಬಗೆಹರಿಸಲು, ನೀವು ಒಮ್ಮೆ ಪ್ರಯತ್ನವನ್ನು ಮಾಡಬೇಕಾಗಬಹುದು. ಆದರೆ ಮೆಚ್ಚುಗೆಯನ್ನು ಪಡೆಯುವುದರ ಬಗ್ಗೆ ವಿಪರೀತವಾಗಿ ಚಿಂತಿಸುವುದರಿಂದ ಇದಕ್ಕೆ ವಿರುದ್ಧವಾದ ಫಲಿತಾಂಶವು ಸಿಗಬಹುದು ಮತ್ತು ಸ್ವಗೌರವದ ನಷ್ಟ ಅಥವಾ ತ್ಯಜಿಸಲ್ಪಟ್ಟಿರುವ ಅನಿಸಿಕೆಗೆ ಕಾರಣವಾಗಬಹುದು. ನಿಮ್ಮ ನಿಜವಾದ ಮೌಲ್ಯವು ಬೇರೆಯವರು ನಿಮ್ಮ ಕುರಿತು ಏನನ್ನು ಯೋಚಿಸುತ್ತಾರೆ ಎಂಬುದರ ಮೇಲೆ ಅವಲಂಬಿಸಿಲ್ಲ.

ಇನ್ನೊಂದು ಕಡೆಯಲ್ಲಿ, ನಿಮ್ಮ ಕುರಿತಾದ ಟೀಕೆಯು ನಿಜವಾಗಿದೆ ಎಂದು ನೀವು ಗ್ರಹಿಸಬಹುದು. ಅದು ಕೂಡ ನಿಮ್ಮನ್ನು ನೋಯಿಸಬಹುದು. ಆದರೆ ನಿಮ್ಮ ಸ್ವಂತ ಕೊರತೆಗಳನ್ನು ಸಿದ್ಧಮನಸ್ಸಿನಿಂದ ಹಾಗೂ ಪ್ರಾಮಾಣಿಕವಾಗಿ ಒಪ್ಪಿಕೊಂಡರೆ, ಇಂತಹ ಅನುಭವಗಳು ಉಪಯುಕ್ತವಾಗಿದ್ದು, ಅವಶ್ಯವಾದ ಬದಲಾವಣೆಗಳನ್ನು ಮಾಡಲು ನಿಮ್ಮನ್ನು ಪ್ರೋತ್ಸಾಹಿಸಬಲ್ಲವು.

ನಕಾರಾತ್ಮಕ ಪರಿಣಾಮಗಳು

ಅಪಾರ್ಥಗಳು ಗಂಭೀರವಾದ ಪರಿಣಾಮಗಳಿಗೆ ನಡೆಸಬಹುದು ಇಲ್ಲವೆ ನಡೆಸದೆ ಇರಬಹುದು. ಉದಾಹರಣೆಗೆ, ಒಂದು ರೆಸ್ಟರಾಂಟ್‌ನಲ್ಲಿ ಒಬ್ಬ ವ್ಯಕ್ತಿಯು ಜೋರಾಗಿ ಮಾತಾಡುತ್ತಿರುವುದನ್ನು ನೀವು ಕೇಳಿಸಿಕೊಳ್ಳುವುದಾದರೆ, ಅವನು ಒಬ್ಬ ಬಹಿರ್ಮುಖಿಯಾಗಿದ್ದಾನೆ ಅಥವಾ ಮೆರೆಸುತ್ತಿದ್ದಾನೆ ಎಂದು ನೀವು ತೀರ್ಮಾನಿಸಬಹುದು. ಆದರೆ ನಿಮ್ಮ ತೀರ್ಮಾನವು ತಪ್ಪಾಗಿರಬಹುದು. ಅವನು ಯಾರೊಂದಿಗೆ ಮಾತಾಡುತ್ತಿದ್ದಾನೋ ಆ ವ್ಯಕ್ತಿಗೆ ಸರಿಯಾಗಿ ಕಿವಿಕೇಳಿಸದೇ ಇರಬಹುದು. ಅಥವಾ ಒಬ್ಬ ಮಾರಾಟಗಾರಳು ಒರಟುತನದಿಂದ ವ್ಯವಹರಿಸುತ್ತಿರುವಂತೆ ನಿಮಗೆ ಅನಿಸಬಹುದು. ಆದರೆ ಒಂದುವೇಳೆ ಅವಳಿಗೆ ಸೌಖ್ಯವಿಲ್ಲದಿರಬಹುದು. ಇಂತಹ ಅಪಾರ್ಥಗಳು ನಕಾರಾತ್ಮಕವಾದ ಭಾವನೆಗಳಿಗೆ ನಡೆಸುವುದಾದರೂ, ಅವು ಗಂಭೀರವಾದ ಅಥವಾ ಶಾಶ್ವತವಾದ ಸಮಸ್ಯೆಗಳಾಗಿ ಪರಿಣಮಿಸುವುದಿಲ್ಲ. ಆದರೂ, ಕೆಲವೊಮ್ಮೆ ಅಪಾರ್ಥಗಳು ಒಂದು ದುರಂತವನ್ನೇ ಉಂಟುಮಾಡಬಹುದು. ಪುರಾತನ ಇಸ್ರಾಯೇಲಿನ ಚರಿತ್ರೆಯಲ್ಲಿ ನಡೆದ ಎರಡು ಘಟನೆಗಳನ್ನು ಪರಿಗಣಿಸಿರಿ.

ಅಮ್ಮೋನಿಯರ ರಾಜನಾದ ನಾಹಾಷ್‌ ಮೃತಪಟ್ಟಾಗ, ಅವನ ಸ್ಥಾನದಲ್ಲಿ ಆಳಲು ಪ್ರಾರಂಭಿಸಿದ್ದ ಅವನ ಮಗನಾದ ಹಾನೂನನನ್ನು ಸಂತೈಸಲು, ದಾವೀದನು ದೂತರನ್ನು ಕಳುಹಿಸಿದನು. ಆದರೆ, ಆ ದೂತರ ಭೇಟಿಗೆ ತಪ್ಪರ್ಥವನ್ನು ಕಲ್ಪಿಸಿ ಅಂದರೆ, ಅವರು ಅಮ್ಮೋನಿಯರ ಕ್ಷೇತ್ರದಲ್ಲಿ ಗೂಢಚಾರ ಕೆಲಸಕ್ಕಾಗಿ ಬಂದಿದ್ದಾರೆ ಎಂದು ನೆನಸಲಾಯಿತು. ಇದರಿಂದಾಗಿ, ಮೊದಲು ಹಾನೂನನು ಆ ದೂತರನ್ನು ಅವಮಾನಿಸಿ, ತದನಂತರ ಇಸ್ರಾಯೇಲಿನ ಮೇಲೆ ಯುದ್ಧಮಾಡಲೂ ನಡೆಸಿತು. ಇದರ ಪರಿಣಾಮವಾಗಿ 47,000 ಜನರು ಕೊಲ್ಲಲ್ಪಟ್ಟರು. ಇದೆಲ್ಲವೂ, ಒಳ್ಳೆಯ ಉದ್ದೇಶಗಳನ್ನು ಅಪಾರ್ಥಮಾಡಿಕೊಂಡ ಕಾರಣದಿಂದಲೇ ಸಂಭವಿಸಿತು.​—1 ಪೂರ್ವಕಾಲವೃತ್ತಾಂತ 19:​1-​19.

ಇದಕ್ಕಿಂತಲೂ ಮುಂಚೆ, ಇಸ್ರಾಯೇಲಿನ ಇತಿಹಾಸದಲ್ಲಿ ಮತ್ತೊಂದು ಅಪಾರ್ಥವು ಇದಕ್ಕೆ ತದ್ವಿರುದ್ಧವಾದ ರೀತಿಯಲ್ಲಿ ಬಗೆಹರಿಸಲ್ಪಟ್ಟಿತು. ಗಾದ್‌ ರೂಬೇನ್‌ ಕುಲಗಳು ಮತ್ತು ಮನಸ್ಸೆಕುಲದ ಅರ್ಧಜನರು, ಯೊರ್ದನ್‌ ಹೊಳೆಯ ಹತ್ತಿರದಲ್ಲಿ ಎದ್ದುಕಾಣುವಂತಹ ಒಂದು ಮಹಾವೇದಿಯನ್ನು ಕಟ್ಟಿದರು. ಇಸ್ರಾಯೇಲ್‌ ಜನಾಂಗದ ಉಳಿದ ಜನರು ಇದನ್ನು ಅಪನಂಬಿಗಸ್ತಿಕೆಯ ಒಂದು ಕೃತ್ಯ ಮತ್ತು ಯೆಹೋವನ ವಿರುದ್ಧವಾದ ದಂಗೆಯಾಗಿ ವೀಕ್ಷಿಸಿದರು. ಆದುದರಿಂದ ಅವರು ಮಿಲಿಟರಿ ಕಾರ್ಯಾಚರಣೆಗಾಗಿ ಒಟ್ಟುಗೂಡಿದರು. ಆದರೆ ಆತುರದಿಂದ ಏನನ್ನಾದರೂ ಮಾಡುವ ಮುನ್ನ, ಈ ಇತರ ಇಸ್ರಾಯೇಲ್ಯರು, ಈ ಅಪನಂಬಿಗಸ್ತ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಲು ಆ ಕುಲಗಳ ಬಳಿ ದೂತರನ್ನು ಕಳುಹಿಸಿದರು. ಅವರು ಹೀಗೆ ಮಾಡಿದ್ದು ಒಳ್ಳೆಯದಾಯಿತು. ಏಕೆಂದರೆ, ಆ ಮಹಾವೇದಿಯನ್ನು ಕಟ್ಟಿದವರು, ತಮಗೆ ಶುದ್ಧಾರಾಧನೆಯನ್ನು ಬಿಟ್ಟುಬಿಡುವ ಯಾವುದೇ ಉದ್ದೇಶ ಇಲ್ಲವೆಂದು ಪ್ರತ್ಯುತ್ತರಕೊಟ್ಟರು. ಇದಕ್ಕೆ ವಿರುದ್ಧವಾಗಿ, ಆ ವೇದಿಯು ಯೆಹೋವನ ಕಡೆಗಿನ ಅವರ ನಂಬಿಗಸ್ತಿಕೆಯ ಒಂದು ಸ್ಮಾರಕವಾಗಿರಲಿತ್ತು. ಈ ಅಪಾರ್ಥವು ರಕ್ತದೋಕುಳಿಯಲ್ಲಿ ಪರಿಣಮಿಸಸಾಧ್ಯವಿತ್ತು. ಆದರೆ, ಇಂತಹ ಘೋರವಾದ ಪರಿಣಾಮಗಳನ್ನು ವಿವೇಕವು ತಡೆಗಟ್ಟಿತು.​—ಯೆಹೋಶುವ 22:​10-​34.

ಪ್ರೀತಿಯಿಂದ ವಿಷಯಗಳನ್ನು ಸರಿಪಡಿಸಿಕೊಳ್ಳಿರಿ

ಈ ದಾಖಲೆಗಳನ್ನು ಹೋಲಿಸಿ ನೋಡುವುದರಿಂದ ನಾವು ಕೆಲವೊಂದು ವಿಷಯಗಳನ್ನು ಕಲಿಯಬಹುದು. ನಿಸ್ಸಂದೇಹವಾಗಿ, ವಿಷಯವನ್ನು ಚರ್ಚಿಸಿ ಸ್ಪಷ್ಟಪಡಿಸುವುದೇ ಬುದ್ಧಿವಂತಿಕೆಯ ಕೆಲಸವಾಗಿದೆ. ಹಿಂದಿನ ಪ್ಯಾರದಲ್ಲಿ ನಾವು ಚರ್ಚಿಸಿದ ಘಟನೆಯಲ್ಲಿ ಎರಡೂ ಪಕ್ಷದವರು ಬರಿ ಮಾತಾಡಿಕೊಂಡ ಕಾರಣ, ಎಷ್ಟೋ ಜೀವಗಳು ಉಳಿಸಲ್ಪಟ್ಟವು. ಹೆಚ್ಚಿನ ಸಂದರ್ಭಗಳಲ್ಲಿ, ಮತ್ತೊಬ್ಬರ ನಿಜವಾದ ಉದ್ದೇಶಗಳನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದ ಕಾರಣ ಜೀವಗಳು ಅಪಾಯಕ್ಕೊಳಗಾಗದೆ ಇರಬಹುದು, ಆದರೆ ಗೆಳತನವು ಅಪಾಯದಲ್ಲಿರಸಾಧ್ಯವಿದೆ. ಆದುದರಿಂದ, ಯಾರಾದರೂ ನಿಮ್ಮೊಂದಿಗೆ ಅನ್ಯಾಯದಿಂದ ವರ್ತಿಸಿದ್ದಾರೆಂದು ನಿಮಗೆ ಅನಿಸಿದರೆ, ಸನ್ನಿವೇಶವು ಹೇಗಿದೆಯೋ ಹಾಗೆಯೇ ನೀವು ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ ಎಂಬುದು ನಿಮಗೆ ಖಂಡಿತವಾಗಿಯೂ ಗೊತ್ತೋ ಅಥವಾ ನೀವು ತಪ್ಪರ್ಥಮಾಡಿಕೊಂಡಿದ್ದೀರೋ? ಆ ವ್ಯಕ್ತಿಯ ಉದ್ದೇಶಗಳೇನಾಗಿದ್ದವು? ಅವರನ್ನು ಕೇಳಿ. ನಿಮ್ಮನ್ನು ಅಪಾರ್ಥಮಾಡಿಕೊಂಡಿರುವುದಾಗಿ ನಿಮಗೆ ಅನಿಸುತ್ತದೋ? ಅದರ ಕುರಿತು ಮಾತಾಡಿ. ಹೆಮ್ಮೆ ನಿಮಗೆ ಅಡ್ಡಗೋಡೆಯಾಗುವಂತೆ ಬಿಡಬೇಡಿ.

ಅಪಾರ್ಥಗಳನ್ನು ಬಗೆಹರಿಸುವುದರ ಕುರಿತು ಅತ್ಯುತ್ತಮವಾದ ಉತ್ತೇಜನವನ್ನು ಯೇಸು ನೀಡಿದನು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾಯ 5:​23, 24) ಹಾಗಾದರೆ, ಇತರರನ್ನು ಒಳಪಡಿಸದೆ, ಖಾಸಗಿಯಾಗಿ ಆ ವ್ಯಕ್ತಿಯ ಬಳಿ ಹೋಗಿ ಮಾತಾಡುವುದೇ ಸೂಕ್ತವಾದದ್ದಾಗಿದೆ. ತಪ್ಪುಮಾಡಿರುವ ವ್ಯಕ್ತಿ ನಿಮ್ಮ ದೂರನ್ನು ಮೊದಲು ಬೇರೊಬ್ಬ ವ್ಯಕ್ತಿಯ ಬಾಯಿಂದ ಕೇಳಿಸಿಕೊಳುವುದು ಯಾವ ಒಳಿತನ್ನೂ ಮಾಡಲಾರದು. (ಜ್ಞಾನೋಕ್ತಿ 17:9) ಪ್ರೀತಿಯಿಂದ ಆ ವ್ಯಕ್ತಿಯೊಂದಿಗೆ ಸಮಾಧಾನವಾಗುವುದೇ ನಿಮ್ಮ ಗುರಿಯಾಗಿರಬೇಕು. ಶಾಂತಭಾವದಿಂದ ನಿಮ್ಮ ಸಮಸ್ಯೆಯನ್ನು ಸ್ಪಷ್ಟ, ಸರಳವಾದ ಹಾಗೂ ಅಪವಾದಹೊರಿಸದಂತಹ ಮಾತುಗಳಲ್ಲಿ ವಿವರಿಸಿ. ಈ ಸನ್ನಿವೇಶದಿಂದ ನಿಮಗೆ ಹೇಗನಿಸುತ್ತದೆ ಎಂಬುದನ್ನು ವಿವರಿಸಿ. ಅನಂತರ ಅವರ ದೃಷ್ಟಿಕೋನಕ್ಕೂ ಕಿವಿಗೊಡಿ. ತಪ್ಪಾದ ಹೇತುಗಳನ್ನು ಹೊರಿಸಲು ಆತುರಪಡಬೇಡಿರಿ. ತಪ್ಪಾದ ಉದ್ದೇಶವಿರಲಿಲ್ಲ ಎಂದು ಆ ವ್ಯಕ್ತಿ ಹೇಳುವುದಾದರೆ ಅದನ್ನು ನಂಬಲು ಸಿದ್ಧರಾಗಿರ್ರಿ. ಜ್ಞಾಪಕದಲ್ಲಿಟ್ಟುಕೊಳ್ಳಿ, ಪ್ರೀತಿಯು “ಎಲ್ಲವನ್ನೂ ನಂಬುತ್ತದೆ.”​—1 ಕೊರಿಂಥ 13:7.

ಆದರೂ, ಅಪಾರ್ಥಗಳು ಬಗೆಹರಿಸಲ್ಪಟ್ಟ ಬಳಿಕವೂ, ಗಾಯಗೊಂಡ ಅನಿಸಿಕೆಗಳು ಅಥವಾ ನಕಾರಾತ್ಮಕ ಪರಿಣಾಮಗಳು ಇರಬಹುದು. ಆಗ ಏನು ಮಾಡಬಹುದು? ಅಗತ್ಯವಿದ್ದಲ್ಲಿ, ಯಥಾರ್ಥವಾಗಿ ಕ್ಷಮೆಯಾಚಿಸುವುದು ಮತ್ತು ಇದರೊಂದಿಗೆ ವಿಷಯಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ಬೇರಾವುದೇ ಕ್ರಮವನ್ನು ತೆಗೆದುಕೊಳ್ಳಬೇಕಾದರೆ ಅದನ್ನು ಮಾಡುವುದು ಖಂಡಿತವಾಗಿಯೂ ಸೂಕ್ತವಾಗಿರುವುದು. ಇಂತಹ ಎಲ್ಲ ಸಂದರ್ಭಗಳಲ್ಲಿ, ಹಾನಿಗೊಳಗಾದ ವ್ಯಕ್ತಿಯು ಈ ಪ್ರೇರಿತ ಬುದ್ಧಿವಾದವನ್ನು ಪಾಲಿಸುವುದು ಒಳ್ಳೆಯದಾಗಿರುವುದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”​—ಕೊಲೊಸ್ಸೆ 3:​13, 14; 1 ಪೇತ್ರ 4:8.

ನಾವು ಎಷ್ಟರ ವರೆಗೆ ಅಪರಿಪೂರ್ಣರಾಗಿರುವೆವೊ ಅಷ್ಟರ ವರೆಗೆ ಅಪಾರ್ಥಗಳು ಮತ್ತು ನೋವಿನ ಅನಿಸಿಕೆಗಳು ಇರುವವು. ನಾವೆಲ್ಲರೂ ತಪ್ಪು ಮಾಡುತ್ತೇವೆ ಅಥವಾ ನಿರ್ಭಾವವಾಗಿ ಇಲ್ಲವೆ ಕಠಿನವಾಗಿ ಮಾತಾಡಬಹುದು. ಈ ವಿಷಯದಲ್ಲಿ ಬೈಬಲ್‌ ಹೇಳುವುದು: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ [“ಪರಿಪೂರ್ಣ ಮನುಷ್ಯನೂ,” NW] ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” (ಯಾಕೋಬ 3:2) ಇದನ್ನು ಯೆಹೋವ ದೇವರು ಚೆನ್ನಾಗಿ ಅರಿತಿರುವ ಕಾರಣ, ಆತನು ನಮಗೆ ಈ ಸೂಚನೆಗಳನ್ನು ಒದಗಿಸಿದ್ದಾನೆ: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ. ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು; ನಿನ್ನ ಆಳು ನಿನ್ನನ್ನು ಶಪಿಸುವದು ಕಿವಿಗೆ ಬಿದ್ದೀತು. ನೀನೂ ಅನೇಕ ವೇಳೆ ಇತರರನ್ನು ಶಪಿಸಿದ್ದೀ ಎಂಬದಕ್ಕೆ ನಿನ್ನ ಮನಸ್ಸೇ ಸಾಕ್ಷಿ.”​—ಪ್ರಸಂಗಿ 7:​9, 21, 22.

“ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು”

ಇದೆಲ್ಲವನ್ನು ಮಾಡಿದ ನಂತರವೂ, ಒಬ್ಬ ವ್ಯಕ್ತಿಗೆ ನಿಮ್ಮ ಕುರಿತು ಇರುವ ತಪ್ಪಭಿಪ್ರಾಯವನ್ನು ಸರಿಪಡಿಸಲು ಸಾಧ್ಯವಿಲ್ಲದ್ದಾಗಿ ತೋರುವುದಾದರೆ ಆಗೇನು? ನಿರಾಶರಾಗಿ ಪ್ರಯತ್ನಿಸುವುದನ್ನು ಬಿಟ್ಟುಬಿಡಬೇಡಿ. ನಿಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಹಾಗೂ ಅದನ್ನು ಪ್ರದರ್ಶಿಸುತ್ತಾ ಇರ್ರಿ. ಅವಶ್ಯವಿದ್ದಲ್ಲೆಲ್ಲಾ ಅಭಿವೃದ್ಧಿಯನ್ನು ಮಾಡಲು ಬೇಕಾದ ಸಹಾಯವನ್ನು ಒದಗಿಸಲು ಯೆಹೋವನನ್ನು ಬೇಡಿಕೊಳ್ಳಿ. ಒಬ್ಬ ವ್ಯಕ್ತಿಯೋಪಾದಿ ನಿಮ್ಮ ನಿಜವಾದ ಮೌಲ್ಯವೇನೆಂಬುದನ್ನು ಸಂಪೂರ್ಣವಾಗಿ ನಿರ್ಧರಿಸುವವರು ಬೇರೆಯವರಲ್ಲ. ಯೆಹೋವನು ಮಾತ್ರವೇ ನಿಷ್ಕೃಷ್ಟವಾಗಿ ‘ಹೃದಯಗಳನ್ನು ಪರೀಕ್ಷಿಸ’ಬಲ್ಲನು. (ಜ್ಞಾನೋಕ್ತಿ 21:​2) ಯೇಸುವನ್ನು ಕೂಡ ಜನರು ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ ಮತ್ತು ಅವನನ್ನು ಧಿಕ್ಕರಿಸಿದರು. ಆದರೆ ಇದು ಯೆಹೋವನು ಯೇಸುವನ್ನು ದೃಷ್ಟಿಸುವ ರೀತಿಯನ್ನು ಬಾಧಿಸಲಿಲ್ಲ. (ಯೆಶಾಯ 53:3) ಬೇರೆಯವರಿಗೆ ನಿಮ್ಮ ಬಗ್ಗೆ ತಪ್ಪಾದ ಅಭಿಪ್ರಾಯಗಳಿದ್ದರೂ, ಯೆಹೋವನು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬ ಭರವಸೆಯೊಂದಿಗೆ ಆತನ ಮುಂದೆ ‘ನಿಮ್ಮ ಹೃದಯವನ್ನು ಬಿಚ್ಚಬಹುದು.’ ಏಕೆಂದರೆ “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (ಕೀರ್ತನೆ 62:8; 1 ಸಮುವೇಲ 16:7) ಉತ್ತಮವಾದದ್ದನ್ನು ಮಾಡುವುದರಲ್ಲಿ ನೀವು ಪಟ್ಟುಹಿಡಿದರೆ, ನಿಮ್ಮ ಕುರಿತು ತಪ್ಪಭಿಪ್ರಾಯವನ್ನು ಇಟ್ಟುಕೊಂಡಿರುವವರು, ಕಾಲಕ್ರಮೇಣ ತಮ್ಮ ತಪ್ಪನ್ನರಿತು ಅವರ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬಹುದು.​—ಗಲಾತ್ಯ 6:9; 2 ತಿಮೊಥೆಯ 2:​15.

ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಆಂಟೊನಿಯೊ ಬಗ್ಗೆ ನಿಮಗೆ ಜ್ಞಾಪಕವಿದೆಯೋ? ಶಾಸ್ತ್ರೀಯ ಬುದ್ಧಿವಾದವನ್ನು ಅನುಸರಿಸಲು ಇವನು ಧೈರ್ಯ ಮಾಡಿಕೊಂಡನು. ತನ್ನ ಸ್ನೇಹಿತನಾದ ಲಿಯೊನಾರ್ಡೊವಿನೊಂದಿಗೆ ಮಾತಾಡಿ, ಅವನು ಬೇಸರಗೊಳ್ಳುವಂತೆ ತಾನು ಏನು ಮಾಡಿದೆನೆಂದು ಕೇಳಿದನು. ಇದರ ಪರಿಣಾಮ ಏನಾಗಿತ್ತು? ಲಿಯೊನಾರ್ಡೊ ಮಾತಿಲ್ಲದೆ ಮೂಕನಾದನು. ತಾನು ಬೇಸರಗೊಳ್ಳುವಂಥ ರೀತಿಯಲ್ಲಿ ಆಂಟೊನಿಯೊ ಏನನ್ನೂ ಮಾಡಿರಲಿಲ್ಲವೆಂದು ಅವನು ಉತ್ತರಿಸಿದನು ಮತ್ತು ಅವನೊಂದಿಗೆ ತಾನು ಯಾವುದೇ ವಿಧದಲ್ಲಿ ಭಿನ್ನವಾಗಿ ವರ್ತಿಸಲು ಉದ್ದೇಶಿಸಿರಲಿಲ್ಲವೆಂದು ಲಿಯೊನಾರ್ಡೊ ಆಶ್ವಾಸನೆಕೊಟ್ಟನು. ತಾನು ಗಮನಕೊಡದ ಹಾಗೆ ತೋರಿಬಂದಿದ್ದರೆ, ಅದು ಒಂದುವೇಳೆ ತಾನು ಬೇರಾವುದೊ ಯೋಚನೆಯಲ್ಲಿ ಮುಳುಗಿಹೋಗಿದ್ದರಿಂದ ಆಗಿರಬಹುದೆಂದು ಅವನು ಹೇಳಿದನು. ಲಿಯೊನಾರ್ಡೊ ತಾನು ತಿಳಿಯದೆ ತನ್ನ ಸ್ನೇಹಿತನ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕ್ಷಮೆಯನ್ನು ಕೇಳಿದನು ಮತ್ತು ಈ ವಿಷಯವನ್ನು ತನ್ನ ಗಮನಕ್ಕೆ ತಂದದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದನು. ಭವಿಷ್ಯತ್ತಿನಲ್ಲಿ ಇದೇ ರೀತಿಯ ಅಭಿಪ್ರಾಯವು ಬೇರೆಯವರ ಮನಸ್ಸಿನಲ್ಲಿ ಬಾರದಂತೆ ನೋಡಿಕೊಳ್ಳುವುದಾಗಿ ಅವನು ಕೂಡಿಸಿ ಹೇಳಿದನು. ಅವರ ನಡುವಿನ ಎಲ್ಲ ರೀತಿಯ ಮಾನಸಿಕ ಆತಂಕವು ತೊಲಗಿಹೋಯಿತು, ಮತ್ತು ಎಂದಿನಂತೆ ಈ ಇಬ್ಬರೂ ಸ್ನೇಹಿತರು ಆಪ್ತರಾದರು.

ನಮ್ಮನ್ನು ಯಾರಾದರು ಅಪಾರ್ಥಮಾಡಿಕೊಳ್ಳುವಾಗ, ಖಂಡಿತವಾಗಿಯೂ ನಮಗೆ ಅದು ಎಂದೂ ಹಿತವೆನಿಸುವುದಿಲ್ಲ. ಆದರೂ, ವಿಷಯಗಳನ್ನು ಸ್ಪಷ್ಟೀಕರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡು, ಪ್ರೀತಿ ಹಾಗೂ ಕ್ಷಮೆಯ ಕುರಿತಾದ ಶಾಸ್ತ್ರೀಯ ತತ್ತ್ವಗಳನ್ನು ನೀವು ಅನ್ವಯಿಸುವುದಾದರೆ, ಹೆಚ್ಚಾಗಿ ಇದೇ ರೀತಿಯ ಒಳ್ಳೆಯ ಫಲಿತಾಂಶಗಳನ್ನು ನೀವೂ ಪಡೆದುಕೊಳ್ಳುವಿರಿ.

[ಪಾದಟಿಪ್ಪಣಿ]

^ ಪ್ಯಾರ. 2 ಈ ಲೇಖನದಲ್ಲಿ ಕೆಲವು ಬದಲಿ ಹೆಸರುಗಳನ್ನು ಉಪಯೋಗಿಸಲಾಗಿದೆ.

[ಪುಟ 23ರಲ್ಲಿರುವ ಚಿತ್ರಗಳು]

ಪ್ರೀತಿಯ ಹಾಗೂ ಕ್ಷಮಿಸುವ ಆತ್ಮದಿಂದ ವಿಷಯಗಳನ್ನು ಸ್ಪಷ್ಟೀಕರಿಸುವುದು ಒಳ್ಳೆಯ ಫಲಿತಾಂಶಗಳೆಡೆಗೆ ನಡೆಸಬಲ್ಲದು