‘ಯೆಹೋವನ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು’
‘ಯೆಹೋವನ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು’
“ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ; ಆತನ ವಾಕ್ಯವು ಬಹುವೇಗಶಾಲಿಯಾಗಿದೆ.”—ಕೀರ್ತನೆ 147:15.
1, 2. ಯೇಸು ತನ್ನ ಶಿಷ್ಯರಿಗೆ ಯಾವ ನೇಮಕವನ್ನು ಕೊಟ್ಟನು, ಮತ್ತು ಅದರಲ್ಲಿ ಏನೆಲ್ಲಾ ಒಳಗೂಡಿತ್ತು?
ಬೈಬಲಿನಲ್ಲಿರುವ ಅತ್ಯಾಶ್ಚರ್ಯಕರವಾದ ಪ್ರವಾದನೆಗಳಲ್ಲಿ ಒಂದು ಪ್ರವಾದನೆಯು ಅ. ಕೃತ್ಯಗಳು 1:8ರಲ್ಲಿದೆ. ಸ್ವರ್ಗಕ್ಕೇರಿಹೋಗುವ ಸ್ವಲ್ಪ ಸಮಯಕ್ಕೆ ಮುಂಚೆ, ಯೇಸು ತನ್ನ ನಂಬಿಗಸ್ತ ಹಿಂಬಾಲಕರಿಗೆ ಹೇಳಿದ್ದು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರಬೇಕು.” ಇದು ಎಷ್ಟೊಂದು ಬೃಹತ್ಪ್ರಮಾಣದ ಕೆಲಸವಾಗಿರಲಿತ್ತು!
2 ಆ ಸಮಯದಲ್ಲಿದ್ದ ಬೆರಳೆಣಿಕೆಯಷ್ಟು ಶಿಷ್ಯರಿಗೆ, ಭೂಮಿಯಾದ್ಯಂತ ದೇವರ ವಾಕ್ಯವನ್ನು ಘೋಷಿಸುವ ಈ ಕೆಲಸವು ಒಂದು ದೊಡ್ಡ ಸವಾಲಾಗಿ ತೋರಿರಬಹುದು. ಇದನ್ನು ಮಾಡುವುದರಲ್ಲಿ ಏನೆಲ್ಲ ಒಳಗೂಡಿರಲಿತ್ತು ಎಂಬುದನ್ನು ಪರಿಗಣಿಸಿರಿ. ದೇವರ ರಾಜ್ಯದ ಸುವಾರ್ತೆಯನ್ನು ಅರ್ಥಮಾಡಿಕೊಳ್ಳಲು ಅವರು ಜನರಿಗೆ ಸಹಾಯಮಾಡಬೇಕಾಗಿತ್ತು. (ಮತ್ತಾಯ 24:14) ಯೇಸುವಿನ ಕುರಿತಾದ ಸಾಕ್ಷಿಯನ್ನು ಕೊಡುವುದಕ್ಕಾಗಿ, ಅವನ ಶಕ್ತಿಶಾಲಿಯಾದ ಬೋಧನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮತ್ತು ಯೆಹೋವನ ಉದ್ದೇಶದಲ್ಲಿ ಅವನಿಗಿರುವ ಪಾತ್ರವನ್ನು ವಿವರಿಸುವುದು ಆವಶ್ಯಕವಾಗಿತ್ತು. ಅಷ್ಟುಮಾತ್ರವಲ್ಲದೆ, ಜನರನ್ನು ಶಿಷ್ಯರನ್ನಾಗಿ ಮಾಡುವುದು ಮತ್ತು ಅನಂತರ ಅವರಿಗೆ ದೀಕ್ಷಾಸ್ನಾನಮಾಡಿಸುವುದು, ಆ ಕೆಲಸದಲ್ಲಿ ಒಳಗೂಡಿತ್ತು. ಮತ್ತು ಇದೆಲ್ಲವನ್ನು ಲೋಕವ್ಯಾಪಕವಾಗಿ ಮಾಡಬೇಕಾಗಿತ್ತು!—ಮತ್ತಾಯ 28:19, 20.
3. ಯೇಸು ತನ್ನ ಹಿಂಬಾಲಕರಿಗೆ ಯಾವ ಆಶ್ವಾಸನೆಯನ್ನು ಕೊಟ್ಟನು, ಮತ್ತು ಅವರಿಗೆ ಕೊಡಲ್ಪಟ್ಟ ಕೆಲಸದ ಕಡೆಗೆ ಅವರ ಪ್ರತಿಕ್ರಿಯೆ ಏನಾಗಿತ್ತು?
3 ಹಾಗಿದ್ದರೂ, ಅವರಿಗೆ ಕೊಡಲ್ಪಟ್ಟಿರುವ ಈ ಕೆಲಸವನ್ನು ಪೂರೈಸಲಿಕ್ಕಾಗಿ ಪವಿತ್ರಾತ್ಮವು ಸಹಾಯಮಾಡುವುದೆಂಬ ಆಶ್ವಾಸನೆಯನ್ನು ಯೇಸು ತನ್ನ ಹಿಂಬಾಲಕರಿಗೆ ಕೊಟ್ಟನು. ಹೀಗಿರುವುದರಿಂದಲೇ, ಅವರ ನೇಮಕವು ತುಂಬ ಬೃಹತ್ತಾಗಿದ್ದರೂ ಮತ್ತು ಅವರ ಬಾಯಿಮುಚ್ಚಿಸಲು ಶತ್ರುಗಳು ಹಿಂಸಾತ್ಮಕ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಯೇಸುವಿನ ಆದಿ ಶಿಷ್ಯರು ಅವನ ನಿರ್ದೇಶನಕ್ಕನುಸಾರ ಕೆಲಸ ಮಾಡುವುದರಲ್ಲಿ ಯಶಸ್ಸನ್ನು ಪಡೆದರು. ಇದು, ಇತಿಹಾಸದ ನಿರಾಕರಿಸಲಾಗದಂಥ ಸತ್ಯಾಂಶವಾಗಿದೆ.
4. ಇತರರಿಗೆ ಸಾರುವ ಮತ್ತು ಕಲಿಸುವ ನೇಮಕದಲ್ಲಿ ದೇವರ ಪ್ರೀತಿಯು ಹೇಗೆ ತೋರಿಸಲ್ಪಟ್ಟಿತು?
4 ಲೋಕವ್ಯಾಪಕವಾಗಿ ಸಾರುವ ಮತ್ತು ಕಲಿಸುವ ಕಾರ್ಯಾಚರಣೆಯು, ದೇವರ ಬಗ್ಗೆ ಅರಿಯದವರಿಗಾಗಿ ಆತನಿಗಿರುವ ಪ್ರೀತಿಯ ಅಭಿವ್ಯಕ್ತಿಯಾಗಿತ್ತು. ಇದು ಅವರಿಗೆ ಯೆಹೋವನ ಹತ್ತಿರಕ್ಕೆ ಬರಲು ಮತ್ತು ಪಾಪಗಳ ಕ್ಷಮೆಯನ್ನು ಪಡೆಯಲು ಅವಕಾಶವನ್ನು ಕೊಟ್ಟಿತು. (ಅ. ಕೃತ್ಯಗಳು 26:18) ಸಾರುವ ಮತ್ತು ಕಲಿಸುವ ನೇಮಕವು, ಆ ಸಂದೇಶವನ್ನು ತರುವವರ ಕಡೆಗೂ ದೇವರಿಗಿರುವ ಪ್ರೀತಿಯನ್ನು ತೋರಿಸುತ್ತದೆ. ಏಕೆಂದರೆ ಈ ನೇಮಕವು ಅವರಿಗೆ, ಯೆಹೋವನಿಗಾಗಿರುವ ತಮ್ಮ ಭಕ್ತಿ ಮತ್ತು ಜೊತೆ ಮಾನವರಿಗಾಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಅವಕಾಶವನ್ನು ಕೊಟ್ಟಿತು. (ಮತ್ತಾಯ 22:37-39) ಅಪೊಸ್ತಲ ಪೌಲನು ಕ್ರೈಸ್ತ ಶುಶ್ರೂಷೆಯನ್ನು ಎಷ್ಟು ಅಮೂಲ್ಯವಾದದ್ದಾಗಿ ಪರಿಗಣಿಸಿದನೆಂದರೆ, ಅವನು ಅದನ್ನು ಒಂದು “ನಿಕ್ಷೇಪ” ಎಂದು ಕರೆದನು.—2 ಕೊರಿಂಥ 4:7.
5. (ಎ) ಆದಿ ಕ್ರೈಸ್ತರ ಅತಿ ಭರವಸಾರ್ಹ ಇತಿಹಾಸವನ್ನು ನಾವು ಎಲ್ಲಿ ಕಂಡುಕೊಳ್ಳಬಹುದು, ಮತ್ತು ಅದರಲ್ಲಿ ಯಾವ ರೀತಿಯ ವೃದ್ಧಿಯ ಕುರಿತಾಗಿ ವರ್ಣಿಸಲಾಗಿದೆ? (ಬಿ) ಅಪೊಸ್ತಲರ ಕೃತ್ಯಗಳ ಪುಸ್ತಕವು ಇಂದು ದೇವರ ಸೇವಕರಿಗೆ ಏಕೆ ಅರ್ಥಪೂರ್ಣವಾಗಿದೆ?
5 ಆದಿ ಕ್ರೈಸ್ತರ ಸಾರುವ ಚಟುವಟಿಕೆಯ ಬಗ್ಗೆ ಅತ್ಯಂತ ಭರವಸಾರ್ಹವಾದ ಇತಿಹಾಸವು, ದೇವಪ್ರೇರಿತವಾದ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿದೆ. ಇದನ್ನು ಶಿಷ್ಯನಾದ ಲೂಕನು ಬರೆದನು. ಅದು, ಬೆರಗುಗೊಳಿಸುವಂಥ ಮತ್ತು ವೇಗಗತಿಯ ವೃದ್ಧಿಯ ಒಂದು ದಾಖಲೆಯಾಗಿದೆ. ದೇವರ ವಾಕ್ಯದ ಕುರಿತಾದ ಜ್ಞಾನವು ಹೆಚ್ಚುತ್ತಾ ಹೋಗುವುದರ ಬಗ್ಗೆ ಓದುವಾಗ, ಕೀರ್ತನೆ 147:15 ನಮ್ಮ ನೆನಪಿಗೆ ಬರುತ್ತದೆ. ಅದು ಹೇಳುವುದು: “[ಯೆಹೋವನು] ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ; ಆತನ ವಾಕ್ಯವು ಬಹುವೇಗಶಾಲಿಯಾಗಿದೆ.” ಪವಿತ್ರಾತ್ಮದಿಂದ ಶಕ್ತಿಯನ್ನು ಪಡೆದುಕೊಂಡ ಆದಿ ಕ್ರೈಸ್ತರ ವೃತ್ತಾಂತವು, ಇಂದು ಉತ್ತೇಜನದಾಯಕವೂ, ತುಂಬ ಅರ್ಥಪೂರ್ಣವಾದದ್ದೂ ಆಗಿದೆ. ಯಾಕೆಂದರೆ ಯೆಹೋವನ ಸಾಕ್ಷಿಗಳು ಸಹ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ವ್ಯತ್ಯಾಸ ಇಷ್ಟೇ, ಯೆಹೋವನ ಸಾಕ್ಷಿಗಳು ಆ ಕೆಲಸವನ್ನು ಅವರಿಗಿಂತಲೂ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಪ್ರಥಮ ಶತಮಾನದ ಕ್ರೈಸ್ತರು ಎದುರಿಸಿದಂಥದ್ದೇ ರೀತಿಯ ಸಮಸ್ಯೆಗಳನ್ನೂ ನಾವು ಎದುರಿಸುತ್ತಿದ್ದೇವೆ. ಆದರೆ ಆದಿ ಕ್ರೈಸ್ತರನ್ನು ಯೆಹೋವನು ಹೇಗೆ ಆಶೀರ್ವದಿಸಿ, ಅವರಿಗೆ ಶಕ್ತಿಯನ್ನು ಕೊಟ್ಟನು ಎಂಬುದನ್ನು ನಾವು ಪರಿಗಣಿಸುವಾಗ, ಆತನು ಕೊಡುವ ಬೆಂಬಲದಲ್ಲಿ ನಮ್ಮ ನಂಬಿಕೆಯು ಬಲಗೊಳಿಸಲ್ಪಡುತ್ತದೆ.
ಶಿಷ್ಯರ ಸಂಖ್ಯೆಯು ಹೆಚ್ಚುತ್ತಾ ಹೋಯಿತು
6. ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಯಾವ ವಾಕ್ಸರಣಿಯು ಇದೆ, ಮತ್ತು ಅದು ಯಾವುದಕ್ಕೆ ಸೂಚಿಸುತ್ತದೆ?
6ಅ. ಕೃತ್ಯಗಳು 1:8ರ ನೆರವೇರಿಕೆಯನ್ನು ಪರಿಶೀಲಿಸುವ ಒಂದು ವಿಧವು, “ದೇವರ [“ಯೆಹೋವನ,” NW] ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು” (ಓರೆಅಕ್ಷರಗಳು ನಮ್ಮವು.) ಎಂಬ ವಾಕ್ಸರಣಿಯನ್ನು ಪರಿಗಣಿಸುವುದು ಆಗಿದೆ. ಈ ವಾಕ್ಸರಣಿಯು, ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಇಡೀ ಬೈಬಲಿನಲ್ಲಿ ಕೇವಲ ಮೂರು ಸಲ ಕಂಡುಬರುತ್ತದೆ ಮತ್ತು ಮೂರು ಸಲವೂ ಅದು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಕಂಡುಬರುತ್ತದೆ. (ಅ. ಕೃತ್ಯಗಳು 6:7; 12:24; 19:20) ಈ ವಚನಗಳಲ್ಲಿ ತಿಳಿಸಲ್ಪಟ್ಟಿರುವ ‘ಯೆಹೋವನ ವಾಕ್ಯ’ ಅಥವಾ “ದೇವರ ವಾಕ್ಯವು,” ಸುವಾರ್ತೆಗೆ ಸೂಚಿಸುತ್ತದೆ. ಮತ್ತು ಈ ಸುವಾರ್ತೆಯು, ದೈವಿಕ ಸತ್ಯದ ಪ್ರಚೋದಿಸುವಂಥ ಸಂದೇಶ ಹಾಗೂ ಅದನ್ನು ಸ್ವೀಕರಿಸಿದವರ ಜೀವಿತಗಳನ್ನೇ ಬದಲಾಯಿಸಿದ ಒಂದು ಜೀವಂತ, ಶಕ್ತಿಶಾಲಿ ಸಂದೇಶವಾಗಿತ್ತು.—ಇಬ್ರಿಯ 4:12.
7. ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದನ್ನು ಅ. ಕೃತ್ಯಗಳು 6:7ರಲ್ಲಿ ಯಾವುದಕ್ಕೆ ಜೋಡಿಸಲಾಗಿದೆ, ಮತ್ತು ಸಾ.ಶ. 33ರ ಪಂಚಾಶತ್ತಮದಂದು ಏನಾಯಿತು?
7 ದೇವರ ವಾಕ್ಯವು ಹೆಚ್ಚಾಗುತ್ತಾ ಹೋಗುವುದರ ಕುರಿತಾಗಿ ಹೇಳುವ ಮೊದಲ ವಚನವು, ಅ. ಕೃತ್ಯಗಳು 6:7 ಆಗಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.” ಇಲ್ಲಿ ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದನ್ನು, ಶಿಷ್ಯರ ಸಂಖ್ಯೆಯಲ್ಲಿನ ವೃದ್ಧಿಗೆ ಜೋಡಿಸಲಾಗಿದೆ. ಈ ಹಿಂದೆ ಸಾ.ಶ. 33ರ ಪಂಚಾಶತ್ತಮದಂದು ದೇವರ ಪವಿತ್ರಾತ್ಮವು, ಒಂದು ಮೇಲಿನ ಕೋಣೆಯಲ್ಲಿ ಜೊತೆಗೂಡಿದ್ದ 120 ಮಂದಿ ಶಿಷ್ಯರ ಮೇಲೆ ಸುರಿಸಲ್ಪಟ್ಟಿತು. ಅನಂತರ ಅಪೊಸ್ತಲ ಪೇತ್ರನು ಒಂದು ಪ್ರಚೋದಿಸುವಂಥ ಭಾಷಣವನ್ನು ಕೊಟ್ಟನು. ಅದನ್ನು ಕೇಳಿಸಿಕೊಂಡವರಲ್ಲಿ, ಸುಮಾರು 3,000 ಮಂದಿ ಅದೇ ದಿನ ವಿಶ್ವಾಸಿಗಳಾದರು. ಸುಮಾರು 50 ದಿವಸಗಳ ಹಿಂದೆ ಒಬ್ಬ ಅಪರಾಧಿಯೋಪಾದಿ ಕಂಭಕ್ಕೆ ಜಡಿಯಲ್ಪಟ್ಟಿದ್ದ ಮನುಷ್ಯನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯಲು ಇವರೆಲ್ಲರೂ ಯೆರೂಸಲೇಮಿನಲ್ಲಿ ಮತ್ತು ಅದರ ಸುತ್ತಲೂ ಇದ್ದ ಕೊಳ ಇಲ್ಲವೇ ಕೊಳಗಳ ಕಡೆಗೆ ಹೋಗುತ್ತಿದ್ದಾಗ ಎಷ್ಟೊಂದು ಗದ್ದಲವಿದ್ದಿರಬಹುದು!—ಅ. ಕೃತ್ಯಗಳು 2:41.
8. ಸಾ.ಶ. 33ರ ಪಂಚಾಶತ್ತಮದ ನಂತರದ ವರ್ಷಗಳಲ್ಲಿ ಶಿಷ್ಯರ ಸಂಖ್ಯೆಯು ಹೇಗೆ ಹೆಚ್ಚಿತು?
8 ಆದರೆ ಅದು ಕೇವಲ ಆರಂಭವಾಗಿತ್ತು. ಸಾರುವ ಚಟುವಟಿಕೆಯನ್ನು ನಿಲ್ಲಿಸಲಿಕ್ಕಾಗಿ ಯೆಹೂದಿ ಧಾರ್ಮಿಕ ಮುಖಂಡರು ಸತತವಾಗಿ ಮಾಡುತ್ತಿದ್ದ ಪ್ರಯತ್ನಗಳು ನಿಷ್ಫಲವಾದವು. “ಕರ್ತನು [“ಯೆಹೋವನು,” NW] ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ ಸೇರಿಸುತ್ತಿದ್ದನು.” ಮತ್ತು ಇದು ಆ ಮುಖಂಡರಿಗೆ ಆಶಾಭಂಗವನ್ನುಂಟುಮಾಡಿತು. (ಅ. ಕೃತ್ಯಗಳು 2:47) ಸ್ವಲ್ಪ ಸಮಯದೊಳಗೆ, “ಗಂಡಸರ ಸಂಖ್ಯೆ ಸುಮಾರು ಐದು ಸಾವಿರ ತನಕ ಬೆಳೆಯಿತು.” (ಅ. ಕೃತ್ಯಗಳು 4:4; 5:14) ತದನಂತರದ ಒಂದು ಅವಧಿಯ ಕುರಿತಾಗಿ ನಾವು ಹೀಗೆ ಓದುತ್ತೇವೆ: “ಹೀಗಿರಲಾಗಿ ಯೂದಾಯ ಗಲಿಲಾಯ ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂತು.” (ಅ. ಕೃತ್ಯಗಳು 9:31) ಕೆಲವು ವರ್ಷಗಳ ನಂತರ, ಅಂದರೆ ಸುಮಾರು ಸಾ.ಶ. 58ರಲ್ಲಿ, “ನಂಬಿರುವವರು ಎಷ್ಟೋ ಸಾವಿರ ಮಂದಿ”ಯ ಕುರಿತಾಗಿ ತಿಳಿಸಲ್ಪಟ್ಟಿದೆ. (ಅ. ಕೃತ್ಯಗಳು 21:20) ಆ ಸಮಯದಷ್ಟಕ್ಕೆ, ಅನ್ಯಜನಾಂಗಗಳ ಅನೇಕ ವಿಶ್ವಾಸಿಗಳೂ ಇದ್ದರು.
9. ಆದಿ ಕ್ರೈಸ್ತರ ಕುರಿತು ನೀವು ಯಾವ ವಿವರಣೆಯನ್ನು ಕೊಡಬಹುದು?
9 ಸಂಖ್ಯೆಯಲ್ಲಿನ ಈ ವೃದ್ಧಿಗೆ ಒಂದು ದೊಡ್ಡ ಕಾರಣ, ಹೊಸಬರು ಸೇರುತ್ತಿದ್ದುದ್ದೇ ಆಗಿತ್ತು. ಈ ಧರ್ಮವು ಹೊಸದಾಗಿದ್ದರೂ, ಅದು ಹುರುಪುಭರಿತವಾಗಿ ಕ್ರಿಯಾಶೀಲವಾಗಿತ್ತು. ಚರ್ಚುಗಳ ಸದಸ್ಯರಂತೆ ನಿಷ್ಕ್ರಿಯರಾಗಿರದೆ, ಶಿಷ್ಯರು ತಮ್ಮನ್ನು ಯೆಹೋವನಿಗೆ ಮತ್ತು ಆತನ ವಾಕ್ಯಕ್ಕೆ ಪೂರ್ಣವಾಗಿ ಅರ್ಪಿಸಿದರು. ಕೆಲವು ಸಂದರ್ಭಗಳಲ್ಲಿ ಇವರು, ತೀವ್ರವಾಗಿ ಹಿಂಸಿಸಲ್ಪಟ್ಟವರಿಂದ ಸತ್ಯವನ್ನು ಕಲಿತಿದ್ದರು. (ಅ. ಕೃತ್ಯಗಳು 16:23, 26-33) ಕ್ರೈಸ್ತ ಧರ್ಮವನ್ನು ಸ್ವೀಕರಿಸಿದವರು, ತರ್ಕಬದ್ಧವಾದ ಹಾಗೂ ಮನಸ್ಸಾಕ್ಷಿಗನುಸಾರ ಮಾಡಿದ ನಿರ್ಣಯದ ಆಧಾರದ ಮೇಲೆ ಹಾಗೆ ಮಾಡಿದರು. (ರೋಮಾಪುರ 12:1) ಅವರು ದೇವರ ಮಾರ್ಗಗಳಲ್ಲಿ ಶಿಕ್ಷಿತರಾಗಿದ್ದರು; ಸತ್ಯವು ಅವರ ಹೃದಮನಗಳಲ್ಲಿ ತುಂಬಿಕೊಂಡಿತ್ತು. (ಇಬ್ರಿಯ 8:10, 11) ತಮ್ಮ ನಂಬಿಕೆಗಳಿಗಾಗಿ ಅವರು ಜೀವವನ್ನು ಕೊಡಲೂ ಸಿದ್ಧರಿದ್ದರು.—ಅ. ಕೃತ್ಯಗಳು 7:51-60.
10. ಆದಿ ಕ್ರೈಸ್ತರು ಯಾವ ಜವಾಬ್ದಾರಿಯನ್ನು ಅಂಗೀಕರಿಸಿದರು, ಮತ್ತು ಇಂದು ಅದಕ್ಕೆ ಯಾವ ಸಮನಾಂತರವಿದೆ?
10 ಕ್ರೈಸ್ತ ಬೋಧನೆಯನ್ನು ಸ್ವೀಕರಿಸಿದವರು, ತಾವು ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಜವಾಬ್ದಾರಿಯನ್ನು ಸಹ ಅಂಗೀಕರಿಸಿದರು. ಇದು, ಶಿಷ್ಯರ ಸಂಖ್ಯೆಯು ಹೆಚ್ಚುತ್ತಾ ಹೋಗುವಂತೆ ತುಂಬ ಸಹಾಯಮಾಡಿತು. ಒಬ್ಬ ಬೈಬಲ್ ವಿದ್ವಾಂಸನು ಹೇಳಿದ್ದು: “ನಂಬಿಕೆಯ ಕುರಿತಾಗಿ ಇತರರಿಗೆ ಹೇಳುವುದು, ತುಂಬ ಹುರುಪುಳ್ಳವರ ಅಥವಾ ಅಧಿಕೃತವಾಗಿ ನೇಮಿಸಲ್ಪಟ್ಟ ಸಂಚಾರಿ ಬೋಧಕನಿಗೆ ಮಾತ್ರ ಮೀಸಲಾಗಿಟ್ಟ ಹಕ್ಕೆಂದು ಪರಿಗಣಿಸಲಾಗುತ್ತಿರಲಿಲ್ಲ. ಸುವಾರ್ತೆಯ ಉಪದೇಶಮಾಡುವಿಕೆಯು, ಚರ್ಚಿನ ಪ್ರತಿಯೊಬ್ಬ ಸದಸ್ಯನ ವಿಶೇಷಾಧಿಕಾರವಾಗಿತ್ತು. . . . ಇಡೀ ಕ್ರೈಸ್ತ ಸಮುದಾಯವು ಸ್ವಂತ ಇಷ್ಟದಿಂದ ನೀಡಿದ ಸಹಾಯಹಸ್ತವು, ಆರಂಭದಿಂದಲೇ ಕ್ರೈಸ್ತತ್ವಕ್ಕೆ ಭಾರೀ ಚಾಲಕಶಕ್ತಿಯನ್ನು ಕೊಟ್ಟಿತು.” ಅವನು ಮುಂದೆ ಬರೆದುದು: “ಸುವಾರ್ತೆಯ ಉಪದೇಶಮಾಡುವಿಕೆಯು, ಆದಿ ಕ್ರೈಸ್ತರ ಜೀವನಾಡಿಯೇ ಆಗಿತ್ತು.” ಇಂದಿನ ಸತ್ಯ ಕ್ರೈಸ್ತರ ವಿಷಯದಲ್ಲೂ ಇದು ನಿಜವಾಗಿದೆ.
ದೇಶಗಳ ಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ
11. ಅ. ಕೃತ್ಯಗಳು 12:24ರಲ್ಲಿ ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದನ್ನು ಯಾವ ರೀತಿಯಲ್ಲಿ ವರ್ಣಿಸಲಾಗಿದೆ, ಮತ್ತು ಇದು ಹೇಗೆ ನಡೆಯಿತು?
11 ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದರ ಕುರಿತಾಗಿ ಎರಡನೆಯ ಬಾರಿ ಅ. ಕೃತ್ಯಗಳು 12:24ರಲ್ಲಿ ತಿಳಿಸಲಾಗಿದೆ: “ದೇವರ [“ಯೆಹೋವನ,” NW] ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು.” ಇಲ್ಲಿ ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದರ ವಾಕ್ಸರಣಿಯನ್ನು, ದೇಶಗಳ ಸಂಖ್ಯೆಯಲ್ಲಿ ಆದಂಥ ವೃದ್ಧಿಗೆ ಜೋಡಿಸಲಾಗಿದೆ. ಸರಕಾರದಿಂದ ವಿರೋಧವು ಬಂದರೂ, ಕೆಲಸವು ಏಳಿಗೆ ಹೊಂದುತ್ತಾ ಇತ್ತು. ಪವಿತ್ರಾತ್ಮವು ಪ್ರಥಮವಾಗಿ ಯೆರೂಸಲೇಮಿನಲ್ಲಿ ಸುರಿಸಲ್ಪಟ್ಟಿತ್ತು ಮತ್ತು ಅಲ್ಲಿಂದ ದೇವರ ವಾಕ್ಯವು ವೇಗವಾಗಿ ಎಲ್ಲೆಡೆಯೂ ಹಬ್ಬಿಕೊಂಡಿತು. ಯೆರೂಸಲೇಮಿನಲ್ಲಿನ ಹಿಂಸೆಯು, ಶಿಷ್ಯರನ್ನು ಯೂದಾಯ ಮತ್ತು ಸಮಾರ್ಯದಲ್ಲೆಲ್ಲಾ ಚದರಿಸಿತು. ಆದರೆ ಫಲಿತಾಂಶವೇನಾಗಿತ್ತು? “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾ ವಾಕ್ಯವನ್ನು ಸಾರುತ್ತಿದ್ದರು.” (ಅ. ಕೃತ್ಯಗಳು 8:1, 4) ಸಾಕ್ಷಿಕೊಡಲಿಕ್ಕಾಗಿ ಫಿಲಿಪ್ಪನನ್ನು ಒಬ್ಬ ಮನುಷ್ಯನ ಬಳಿ ನಿರ್ದೇಶಿಸಲಾಯಿತು. ಆ ವ್ಯಕ್ತಿಯು ದೀಕ್ಷಾಸ್ನಾನ ಪಡೆದ ಬಳಿಕ, ಐಥಿಯೋಪ್ಯ ದೇಶಕ್ಕೆ ಆ ಸಂದೇಶವನ್ನು ಕೊಂಡುಹೋದನು. (ಅ. ಕೃತ್ಯಗಳು 8:26-28, 38, 39) ಸತ್ಯವು ಬೇಗನೆ ಲುದ್ದದಲ್ಲಿ, ಸಾರೋನಪ್ರಾಂತ್ಯದಲ್ಲಿ ಮತ್ತು ಯೊಪ್ಪದಲ್ಲಿ ದೃಢವಾಗಿ ಸ್ಥಾಪಿತವಾಯಿತು. (ಅ. ಕೃತ್ಯಗಳು 9:35, 42) ಅನಂತರ, ಅಪೊಸ್ತಲ ಪೌಲನು, ಸಾವಿರಾರು ಕಿಲೊಮೀಟರುಗಳ ದೂರದ ವರೆಗೆ ಸಮುದ್ರ ಹಾಗೂ ಭೂಮಾರ್ಗವಾಗಿ ಪ್ರಯಾಣ ಮಾಡಿ, ಅನೇಕ ಮೆಡಿಟರೇನಿಯನ್ ದೇಶಗಳಲ್ಲೆಲ್ಲಾ ಸಭೆಗಳನ್ನು ಸ್ಥಾಪಿಸಿದನು. ಮತ್ತು ಅಪೊಸ್ತಲ ಪೇತ್ರನು ಬಬಿಲೋನಿಗೆ ಹೋದನು. (1 ಪೇತ್ರ 5:13) ಪಂಚಾಶತ್ತಮದಂದು ಪವಿತ್ರಾತ್ಮವು ಸುರಿಸಲ್ಪಟ್ಟು 30 ವರ್ಷಗಳು ಕಳೆಯುವಷ್ಟರೊಳಗೆ, ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ’ ಅಂದರೆ ಆ ಸಮಯದಲ್ಲಿ ಪರಿಚಿತವಾಗಿದ್ದ ಲೋಕದ ಭಾಗಕ್ಕೆ ‘ಸಾರಲ್ಪಟ್ಟಿದೆ’ ಎಂದು ಪೌಲನು ಬರೆದನು.—ಕೊಲೊಸ್ಸೆ 1:23.
12. ದೇವರ ವಾಕ್ಯವು ಅನೇಕ ದೇಶಗಳಲ್ಲಿ ಹೆಚ್ಚುತ್ತಾ ಹೋಯಿತೆಂಬುದನ್ನು ಕ್ರೈಸ್ತತ್ವದ ವಿರೋಧಿಗಳು ಸಹ ಹೇಗೆ ಒಪ್ಪಿಕೊಂಡರು?
ಅ. ಕೃತ್ಯಗಳು 17:6 ಹೇಳುತ್ತದೆ. ಅಲ್ಲದೆ, ಎರಡನೆಯ ಶತಮಾನದ ಆರಂಭದಲ್ಲಿ, ಬಿಥೂನ್ಯದಿಂದ ಪ್ಲೀನಿ ದ ಯಂಗರ್ ಎಂಬುವವನು, ರೋಮನ್ ಸಾಮ್ರಾಟ ಟ್ರಾಜನ್‌ನಿಗೆ ಕ್ರೈಸ್ತತ್ವದ ಕುರಿತಾಗಿ ಬರೆದನು. ಅವನು ಹೀಗೆ ದೂರುಸಲ್ಲಿಸಿದನು: “[ಅದು] ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಅದರ ಸೋಂಕು ಸುತ್ತಮುತ್ತಲಿರುವ ಹಳ್ಳಿಗಾಡುಗಳಲ್ಲಿಯೂ ಹರಡಿದೆ.”
12 ಕ್ರೈಸ್ತತ್ವದ ವಿರೋಧಿಗಳು ಸಹ, ದೇವರ ವಾಕ್ಯವು ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಬೇರೂರಿಬಿಟ್ಟಿದೆ ಎಂಬುದನ್ನು ಒಪ್ಪಿಕೊಂಡರು. ಉದಾಹರಣೆಗಾಗಿ ಉತ್ತರ ಗ್ರೀಸಿನ ಥೆಸಲೊನೀಕದಲ್ಲಿನ ವಿರೋಧಿಗಳು, “ಲೋಕವನ್ನು ಅಲ್ಲಕಲ್ಲೋಲ ಮಾಡಿದ ಆ ಮನುಷ್ಯರು ಇಲ್ಲಿಗೂ ಬಂದಿದ್ದಾರೆ” ಎಂದು ಕೂಗಿದರೆಂದು13. ದೇಶಗಳ ಸಂಖ್ಯೆಯು ಹೀಗೆ ಹೆಚ್ಚುತ್ತಾ ಹೋದದ್ದು, ಮಾನವಕುಲಕ್ಕಾಗಿ ದೇವರಿಗಿರುವ ಪ್ರೀತಿಯನ್ನು ಹೇಗೆ ಪ್ರತಿಬಿಂಬಿಸಿತು?
13 ದೇಶಗಳ ಸಂಖ್ಯೆಯು ಹೀಗೆ ಹೆಚ್ಚುತ್ತಾ ಹೋದದ್ದು, ಉದ್ಧರಿಸಲು ಶಕ್ಯವಾಗಿರುವ ಮಾನವಕುಲದ ಕಡೆಗೆ ಯೆಹೋವನ ಗಾಢವಾದ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿತ್ತು. ಪವಿತ್ರಾತ್ಮವು ಅನ್ಯಜನಾಂಗದವನಾದ ಕೊರ್ನೇಲ್ಯನ ಮೇಲೆ ಬರುವುದನ್ನು ಪೇತ್ರನು ನೋಡಿದಾಗ, ಅವನಂದದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” (ಅ. ಕೃತ್ಯಗಳು 10:34, 35) ಹೌದು, ಸುವಾರ್ತೆಯು ಆ ಸಮಯದಲ್ಲಿ ಮಾತ್ರವಲ್ಲದೆ ಈಗಲೂ ಎಲ್ಲ ಜನರಿಗಾಗಿರುವ ಒಂದು ಸಂದೇಶವಾಗಿದೆ. ಮತ್ತು ದೇವರ ವಾಕ್ಯವು ಅನೇಕ ದೇಶಗಳಿಗೆ ಹಬ್ಬಿದ್ದರಿಂದ, ಎಲ್ಲೆಡೆಯೂ ಜನರಿಗೆ ದೇವರ ಪ್ರೀತಿಯ ಕಡೆಗೆ ಪ್ರತಿಕ್ರಿಯೆತೋರಿಸುವ ಅವಕಾಶವು ದೊರೆಯಿತು. ನಮ್ಮ ಈ 21ನೆಯ ಶತಮಾನದಲ್ಲೂ ದೇವರ ವಾಕ್ಯವು ಕಾರ್ಯತಃ, ಭೂಮಿಯ ಎಲ್ಲ ಭಾಗಗಳಿಗೂ ಹಬ್ಬಿಕೊಂಡಿದೆ.
ಪ್ರಬಲವಾದ ವೃದ್ಧಿಯು
14. ಅ. ಕೃತ್ಯಗಳು 19:20ರಲ್ಲಿ ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದನ್ನು ಯಾವ ವಿಧದಲ್ಲಿ ವರ್ಣಿಸಲಾಗಿದೆ, ಮತ್ತು ದೇವರ ವಾಕ್ಯವು ಯಾವುದಕ್ಕಿಂತಲೂ ಹೆಚ್ಚು ಪ್ರಬಲವಾಯಿತು?
14 ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದರ ಕುರಿತಾಗಿ ಮೂರನೆಯ ಬಾರಿ ಅ. ಕೃತ್ಯಗಳು 19:20ರಲ್ಲಿ ತಿಳಿಸಲಾಗಿದೆ: “ಕರ್ತನ [“ಯೆಹೋವನ,” NW] ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.” ‘ಪ್ರಬಲವಾಗು’ ಎಂದು ಭಾಷಾಂತರಿಸಲ್ಪಟ್ಟಿರುವ ಪದದ ಮೂಲ ಗ್ರೀಕ್ ಪದವು, “ಶಕ್ತಿಯನ್ನು ಪ್ರಯೋಗಿಸು” ಎಂಬ ಅರ್ಥವನ್ನು ಕೊಡುತ್ತದೆ. ಎಫೆಸದಲ್ಲಿದ್ದ ಅನೇಕರು ವಿಶ್ವಾಸಿಗಳಾದರು ಮತ್ತು ಮಾಟಮಂತ್ರದ ವಿದ್ಯೆಯನ್ನು ಬಳಸುತ್ತಿದ್ದವರು, ಎಲ್ಲರ ಮುಂದೆ ತಮ್ಮ ಪುಸ್ತಕಗಳನ್ನು ಸುಟ್ಟುಹಾಕಿದರೆಂದು ಈ ಹಿಂದಿನ ವಚನಗಳು ತೋರಿಸುತ್ತವೆ. ಈ ರೀತಿಯಲ್ಲಿ ದೇವರ ವಾಕ್ಯವು ಸುಳ್ಳು ಧಾರ್ಮಿಕ ನಂಬಿಕೆಗಳಿಗಿಂತಲೂ ಹೆಚ್ಚು ಪ್ರಬಲವಾಯಿತು. ಸುವಾರ್ತೆಯು, ಹಿಂಸೆಯಂಥ ಇತರ ಅಡೆತಡೆಗಳಿಗಿಂತಲೂ ಹೆಚ್ಚು ಪ್ರಬಲವಾಯಿತು. ಅದನ್ನು ಯಾರೂ ತಡೆಯಲು ಸಾಧ್ಯವಿರಲಿಲ್ಲ. ಇದರ ಗಮನಾರ್ಹವಾದ ಸಮನಾಂತರವನ್ನು ನಾವು ಈಗ ನಮ್ಮ ಸಮಯದಲ್ಲಿರುವ ನಿಜ ಕ್ರೈಸ್ತತ್ವದಲ್ಲೂ ನೋಡಬಹುದು.
15. (ಎ) ಆದಿ ಕ್ರೈಸ್ತರ ಕುರಿತಾಗಿ ಒಬ್ಬ ಬೈಬಲ್ ಇತಿಹಾಸಗಾರನು ಏನು ಬರೆದನು? (ಬಿ) ಶುಶ್ರೂಷೆಯಲ್ಲಿನ ತಮ್ಮ ಯಶಸ್ಸಿಗಾಗಿ ಶಿಷ್ಯರು ಯಾರಿಗೆ ಕೀರ್ತಿಯನ್ನು ಸಲ್ಲಿಸಿದರು?
15 ಅಪೊಸ್ತಲರು ಮತ್ತು ಇತರ ಆದಿ ಕ್ರೈಸ್ತರು ದೇವರ ವಾಕ್ಯವನ್ನು ಹುರುಪಿನಿಂದ ಘೋಷಿಸಿದರು. ಅವರ ಕುರಿತಾಗಿ ಒಬ್ಬ ಬೈಬಲ್ ಇತಿಹಾಸಗಾರ ಗಮನಿಸಿದ್ದು: “ತಮ್ಮ ಪ್ರಭುವಿನ ಕುರಿತಾಗಿ ಮಾತಾಡಲು ಜನರಿಗೆ ಮನಸ್ಸಿರುವಾಗ, ಅದನ್ನು ಮಾಡಲು ಅವರು ಅನೇಕಾನೇಕ ಮಾರ್ಗಗಳನ್ನು ಹುಡುಕುತ್ತಾರೆ. ಈ ಸ್ತ್ರೀಪುರುಷರು ಉಪಯೋಗಿಸುವ ವಿಧಾನಗಳಿಗಿಂತಲೂ ಹೆಚ್ಚಾಗಿ, ಅವರನ್ನು ಪ್ರಚೋದಿಸುವ ಶಕ್ತಿಯೇ ನಮ್ಮನ್ನು ಹೆಚ್ಚು ಪ್ರಭಾವಿಸುತ್ತದೆ.” ಹಾಗಿದ್ದರೂ, ತಮ್ಮ ಶುಶ್ರೂಷೆಯ ಯಶಸ್ಸು, ಕೇವಲ ತಮ್ಮ ಸ್ವಂತ ಪ್ರಯತ್ನಗಳ ಮೇಲೆ ಅವಲಂಬಿಸಿರುವುದಿಲ್ಲ ಎಂಬುದನ್ನು ಆ ಆದಿ ಕ್ರೈಸ್ತರು ಅಂಗೀಕರಿಸಿದರು. ತಮ್ಮ ಕೆಲಸವನ್ನು ಮುಂದುವರಿಸಲಿಕ್ಕಾಗಿ ಅವರಿಗಿದ್ದ ನೇಮಕವು ದೈವಿಕವಾಗಿತ್ತು ಮತ್ತು ಅದನ್ನು ಪೂರೈಸಲಿಕ್ಕಾಗಿ ಅವರಿಗೆ ದೈವಿಕ ಬೆಂಬಲವಿತ್ತು. ಆತ್ಮಿಕ ವೃದ್ಧಿಗೆ ಕಾರಣನು ದೇವರಾಗಿದ್ದಾನೆ. ಕೊರಿಂಥದಲ್ಲಿದ್ದ ಸಭೆಗೆ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಇದನ್ನು ಅಂಗೀಕರಿಸಿದನು. ಅವನು ಬರೆದುದು: “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳಿಸುತ್ತಾ ಬಂದವನು ದೇವರು. ನಾವು ದೇವರ ಜೊತೆಕೆಲಸದವರು.”—1 ಕೊರಿಂಥ 3:6, 9.
ಪವಿತ್ರಾತ್ಮವು ಕಾರ್ಯೋನ್ಮುಖವಾಗಿದೆ
16. ಪವಿತ್ರಾತ್ಮವು ಶಿಷ್ಯರನ್ನು ಧೈರ್ಯದಿಂದ ಮಾತಾಡುವಂತೆ ಶಕ್ತಗೊಳಿಸಿತೆಂಬುದು ಹೇಗೆ ಗೊತ್ತಾಗುತ್ತದೆ?
16 ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದರಲ್ಲಿ, ಪವಿತ್ರಾತ್ಮವು ಪಾತ್ರವಹಿಸುವುದೆಂದು ಮತ್ತು ಶಿಷ್ಯರ ಸಾರುವ ಚಟುವಟಿಕೆಯಲ್ಲಿ ಪವಿತ್ರಾತ್ಮವು ಅವರಿಗೆ ಬಲವನ್ನು ಕೊಡುವುದೆಂದು ಯೇಸು ತನ್ನ ಶಿಷ್ಯರಿಗೆ ಆಶ್ವಾಸನೆ ಕೊಟ್ಟಿದ್ದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. (ಅ. ಕೃತ್ಯಗಳು 1:8) ಇದು ಹೇಗೆ ಸಂಭವಿಸಿತು? ಪಂಚಾಶತ್ತಮದಂದು ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟ ಸ್ವಲ್ಪ ಸಮಯದೊಳಗೆ, ಪೇತ್ರಯೋಹಾನರನ್ನು ಯೆಹೂದಿ ಹಿರೀಸಭೆಯ ಮುಂದೆ ಕರೆತಂದು ನಿಲ್ಲಿಸಲಾಯಿತು. ಇದು ಆ ದೇಶದ ಅತ್ಯುಚ್ಚ ನ್ಯಾಯಾಲಯವಾಗಿತ್ತು ಮತ್ತು ಅದರ ನ್ಯಾಯಾಧೀಶರೇ ಯೇಸು ಕ್ರಿಸ್ತನ ಹತ್ಯೆಗೆ ಜವಾಬ್ದಾರರಾಗಿದ್ದರು. ಇಂಥ ಪ್ರಭಾವಶಾಲಿ ಮತ್ತು ಹಗೆತನವಿರುವ ಶಾಸನಸಭೆಯ ಮುಂದೆ ನಿಂತುಕೊಂಡಾಗ ಅಪೊಸ್ತಲರು ಭಯದಿಂದ ಕಂಪಿಸುತ್ತಿದ್ದರೊ? ಖಂಡಿತವಾಗಿಯೂ ಇಲ್ಲ! ಅದಕ್ಕೆ ಬದಲು, ಪವಿತ್ರಾತ್ಮವು ಅವರಿಗೆ ಎಷ್ಟು ಧೈರ್ಯದಿಂದ ಮಾತಾಡುವಂತೆ ಶಕ್ತಗೊಳಿಸಿತೆಂದರೆ, ಅವರ ವಿರೋಧಿಗಳು ಬೆರಗಾಗಿ, “ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು.” (ಅ. ಕೃತ್ಯಗಳು 4:8, 13, 14) ಸ್ತೆಫನನು ಸಹ ಹಿರೀಸಭೆಯ ಮುಂದೆ ದಿಟ್ಟತನದಿಂದ ಸಾಕ್ಷಿಕೊಡುವಂತೆ ಪವಿತ್ರಾತ್ಮವು ಸಹಾಯಮಾಡಿತು. (ಅ. ಕೃತ್ಯಗಳು 6:12; 7:55, 56) ಈ ಹಿಂದೆ, ಶಿಷ್ಯರು ಧೈರ್ಯದಿಂದ ಸಾರುವಂತೆ ಪವಿತ್ರಾತ್ಮವೇ ಪ್ರಚೋದಿಸಿತ್ತು. ಲೂಕನು ವರದಿಸುವುದು: “ಪ್ರಾರ್ಥನೆ ಮಾಡಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು, ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು.”—ಅ. ಕೃತ್ಯಗಳು 4:31.
17. ಪವಿತ್ರಾತ್ಮವು ಇನ್ನಾವ ವಿಧಗಳಲ್ಲಿ ಶಿಷ್ಯರಿಗೆ ತಮ್ಮ ಶುಶ್ರೂಷೆಯಲ್ಲಿ ಸಹಾಯಮಾಡಿತು?
17 ಯೆಹೋವನು ತನ್ನ ಶಕ್ತಿಶಾಲಿ ಪವಿತ್ರಾತ್ಮದ ಮೂಲಕ, ಪುನರುತ್ಥಿತ ಯೇಸುವಿನೊಂದಿಗೆ ಸಾರುವ ಚಟುವಟಿಕೆಯನ್ನು ನಿರ್ದೇಶಿಸಿದನು. (ಯೋಹಾನ 14:28; 15:26) ಪವಿತ್ರಾತ್ಮವು ಕೊರ್ನೇಲ್ಯ, ಅವನ ಸಂಬಂಧಿಕರ ಮತ್ತು ಆಪ್ತ ಮಿತ್ರರ ಮೇಲೆ ಸುರಿಸಲ್ಪಟ್ಟಾಗ, ಸುನ್ನತಿಪಡೆದಿರದ ಅನ್ಯಜನಾಂಗದವರು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಹೊಂದಲು ಅರ್ಹರಾಗಸಾಧ್ಯವಿದೆ ಎಂಬುದು ಅಪೊಸ್ತಲ ಪೇತ್ರನಿಗೆ ತಿಳಿದುಬಂತು. (ಅ. ಕೃತ್ಯಗಳು 10:24, 44-48) ಬಾರ್ನಬ ಮತ್ತು ಸೌಲರನ್ನು (ಅಪೊಸ್ತಲ ಪೌಲನು) ಮಿಷನೆರಿ ಚಟುವಟಿಕೆಗಾಗಿ ನೇಮಿಸುವುದರಲ್ಲಿ ಮತ್ತು ಅವರು ಎಲ್ಲಿ ಹೋಗಬೇಕು ಇಲ್ಲವೇ ಎಲ್ಲಿ ಹೋಗಬಾರದೆಂಬುದನ್ನು ನಿರ್ದೇಶಿಸುವುದರಲ್ಲಿ ಪವಿತ್ರಾತ್ಮವು ಮುಖ್ಯ ಪಾತ್ರವನ್ನು ವಹಿಸಿತು. (ಅ. ಕೃತ್ಯಗಳು 13:2, 4; 16:6, 7) ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ಮಾಡುತ್ತಿದ್ದ ನಿರ್ಣಯಗಳನ್ನು ಸಹ ಅದು ನಿರ್ದೇಶಿಸಿತು. (ಅ. ಕೃತ್ಯಗಳು 15:23, 28, 29) ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರಕರ ನೇಮಕವನ್ನು ಸಹ ಪವಿತ್ರಾತ್ಮವೇ ಮಾರ್ಗದರ್ಶಿಸಿತು.—ಅ. ಕೃತ್ಯಗಳು 20:28.
18. ಆದಿ ಕ್ರೈಸ್ತರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿದರು?
18 ಇದಲ್ಲದೆ, ಪವಿತ್ರಾತ್ಮವು ಸ್ವತಃ ಕ್ರೈಸ್ತರಲ್ಲೂ ತನ್ನನ್ನು ವ್ಯಕ್ತಪಡಿಸಿತು. ಅದು ಅವರಲ್ಲಿ ಪ್ರೀತಿಯಂಥ ದೈವಿಕ ಗುಣಗಳನ್ನು ಉತ್ಪಾದಿಸಿತು. (ಗಲಾತ್ಯ 5:22, 23) ಪ್ರೀತಿಯು, ಕ್ರೈಸ್ತರನ್ನು ಪರಸ್ಪರ ಹಂಚಿಕೊಳ್ಳುವಂತೆ ಪ್ರಚೋದಿಸಿತು. ಉದಾಹರಣೆಗಾಗಿ, ಸಾ.ಶ. 33ರ ಪಂಚಾಶತ್ತಮದ ನಂತರ, ಯೆರೂಸಲೇಮಿನಲ್ಲಿದ್ದ ಶಿಷ್ಯರ ಭೌತಿಕ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಒಂದು ಸಾಮಾನ್ಯ ನಿಧಿಯನ್ನು ಏರ್ಪಡಿಸಲಾಯಿತು. ಬೈಬಲ್ ವೃತ್ತಾಂತವು ಹೀಗನ್ನುತ್ತದೆ: “ಅವರಲ್ಲಿ ಕೊರತೆಪಡುವವನು ಒಬ್ಬನೂ ಇರಲಿಲ್ಲ, ಯಾಕಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಕ್ರಯವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು; ಅದನ್ನು ಪ್ರತಿಯೊಬ್ಬನಿಗೆ ಅವನವನ ಅವಶ್ಯದಂತೆ ಹಂಚಿಕೊಡುತ್ತಿದ್ದರು.” (ಅ. ಕೃತ್ಯಗಳು 4:34, 35) ಈ ಪ್ರೀತಿಯನ್ನು ಕೇವಲ ಜೊತೆ ವಿಶ್ವಾಸಿಗಳಿಗೆ ಮಾತ್ರವಲ್ಲ, ಬದಲಾಗಿ ಇತರರಿಗೂ ತೋರಿಸಲಾಯಿತು. ಇದನ್ನು ಸುವಾರ್ತೆ ಸಾರುವುದರ ಮೂಲಕವೂ ದಯೆಯ ಇತರ ಕೃತ್ಯಗಳ ಮೂಲಕವೂ ಮಾಡಲಾಯಿತು. (ಅ. ಕೃತ್ಯಗಳು 28:8, 9) ಸ್ವ-ತ್ಯಾಗದ ಪ್ರೀತಿಯು ತನ್ನ ಹಿಂಬಾಲಕರ ಗುರುತಾಗಿರುವುದೆಂದು ಯೇಸು ಹೇಳಿದ್ದನು. (ಯೋಹಾನ 13:34, 35) ಇಂದಿನ ಸಮಯದಲ್ಲಿ ಆಗುವಂತೆ, ಆ ಪ್ರಥಮ ಶತಮಾನದಲ್ಲಿಯೂ ಪ್ರೀತಿಯೆಂಬ ಅತ್ಯಾವಶ್ಯಕ ಗುಣವೇ ಜನರನ್ನು ದೇವರ ಬಳಿ ಆಕರ್ಷಿಸಿತು ಮತ್ತು ವೃದ್ಧಿಗೆ ಸಹಾಯಮಾಡಿತು.—ಮತ್ತಾಯ 5:14, 16.
19. (ಎ) ಪ್ರಥಮ ಶತಮಾನದಲ್ಲಿ ಯೆಹೋವನ ವಾಕ್ಯವು ಯಾವ ಮೂರು ವಿಧಗಳಲ್ಲಿ ಹೆಚ್ಚುತ್ತಾ ಹೋಯಿತು? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನು ಪರೀಕ್ಷಿಸಿನೋಡುವೆವು?
19 ಅಪೊಸ್ತಲರ ಕೃತ್ಯಗಳ ಪುಸ್ತಕದ ಮೂಲ ಭಾಷೆಯ ಗ್ರಂಥಪಾಠದಲ್ಲಿ, “ಪವಿತ್ರಾತ್ಮ” ಎಂಬ ಅರ್ಥವುಳ್ಳ ಗ್ರೀಕ್ ಅಭಿವ್ಯಕ್ತಿಯು ಒಟ್ಟು 41 ಬಾರಿ ಕಂಡುಬರುತ್ತದೆ. ಪ್ರಥಮ ಶತಮಾನದಲ್ಲಿ ನಿಜ ಕ್ರೈಸ್ತರು ಹೆಚ್ಚುತ್ತಾ ಹೋದದ್ದು, ಪವಿತ್ರಾತ್ಮದ ಶಕ್ತಿ ಮತ್ತು ಮಾರ್ಗದರ್ಶನದ ಕಾರಣದಿಂದಲೇ ಎಂಬುದು ಸ್ಪಷ್ಟ. ಶಿಷ್ಯರ ಸಂಖ್ಯೆಯು ಹೆಚ್ಚುತ್ತಾ ಹೋಯಿತು, ದೇವರ ವಾಕ್ಯವು ವ್ಯಾಪಕವಾಗಿ ಅನೇಕ ದೇಶಗಳಲ್ಲಿ ಹಬ್ಬಿಕೊಂಡಿತು ಮತ್ತು ಆ ಯುಗದಲ್ಲಿದ್ದ ಧರ್ಮಗಳು ಹಾಗೂ ತತ್ವಜ್ಞಾನಗಳಿಗಿಂತ ಹೆಚ್ಚು ಪ್ರಬಲವಾಯಿತು. ಪ್ರಥಮ ಶತಮಾನದಲ್ಲಿ ದೇವರ ವಾಕ್ಯವು ಹೆಚ್ಚುತ್ತಾ ಹೋದಂತೆಯೇ, ಇಂದು ಯೆಹೋವನ ಸಾಕ್ಷಿಗಳ ಕೆಲಸದಲ್ಲೂ ಆಗುತ್ತಿದೆ. ನಮ್ಮ ಈ ಆಧುನಿಕ ಸಮಯಗಳಲ್ಲಿಯೂ ದೇವರ ವಾಕ್ಯವು ಹೇಗೆ ಅಷ್ಟೇ ಹೃದಯಂಗಮವಾದ ರೀತಿಯಲ್ಲಿ ಹೆಚ್ಚುತ್ತಾ ಹೋಗಿದೆಯೆಂಬುದನ್ನು ನಾವು ಮುಂದಿನ ಲೇಖನದಲ್ಲಿ ಪರೀಕ್ಷಿಸಿನೋಡುವೆವು.
ನಿಮಗೆ ಜ್ಞಾಪಕವಿದೆಯೊ?
• ಆದಿ ಶಿಷ್ಯರ ಸಂಖ್ಯೆಯು ಹೇಗೆ ಹೆಚ್ಚುತ್ತಾ ಹೋಯಿತು?
• ದೇವರ ವಾಕ್ಯವು ಅನೇಕ ದೇಶಗಳಿಗೆ ಹಬ್ಬಿಕೊಂಡದ್ದು ಹೇಗೆ?
• ಪ್ರಥಮ ಶತಮಾನದಲ್ಲಿ ದೇವರ ವಾಕ್ಯವು ಹೇಗೆ ಪ್ರಬಲವಾಯಿತು?
• ದೇವರ ವಾಕ್ಯವು ಹೆಚ್ಚುತ್ತಾ ಹೋಗುವುದರಲ್ಲಿ ಪವಿತ್ರಾತ್ಮದ ಪಾತ್ರವೇನಾಗಿತ್ತು?
[ಅಧ್ಯಯನ ಪ್ರಶ್ನೆಗಳು]
[ಪುಟ 12ರಲ್ಲಿರುವ ಚಿತ್ರ]
ಫಿಲಿಪ್ಪನು ಐಥಿಯೋಪ್ಯದವನಿಗೆ ಸಾರುವ ಮೂಲಕ, ಸುವಾರ್ತೆಯನ್ನು ಬೇರೊಂದು ದೇಶಕ್ಕೆ ಹಬ್ಬಿಸಿದನು
[ಪುಟ 13ರಲ್ಲಿರುವ ಚಿತ್ರ]
ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರನ್ನು ಪವಿತ್ರಾತ್ಮವು ನಿರ್ದೇಶಿಸಿತು
[ಪುಟ 10ರಲ್ಲಿರುವ ಚಿತ್ರ ಕೃಪೆ]
ಮೇಲೆ ಬಲಗಡೆಯ ಮೂಲೆಯಲ್ಲಿ: Reproduction of the City of Jerusalem at the time of the Second Temple - located on the grounds of the Holyland Hotel, Jerusalem