ರಾಜ್ಯದ ಸುವಾರ್ತೆ ಅದೇನು?
ರಾಜ್ಯದ ಸುವಾರ್ತೆ ಅದೇನು?
ಕಳೆದ ವರ್ಷ ಲೋಕದಾದ್ಯಂತ ಸುಮಾರು 235 ದೇಶಗಳಲ್ಲಿ ಆಬಾಲವೃದ್ಧರೆಲ್ಲರೂ ಸೇರಿ 60,35,564 ಜನರು, ಇತರರೊಂದಿಗೆ ಅದರ ಕುರಿತಾಗಿ ಮಾತಾಡುವುದರಲ್ಲಿ 117,12,70,425 ತಾಸುಗಳನ್ನು ವ್ಯಯಿಸಿದರು. ಅವರು ಬಾಯಿಮಾತಿನಲ್ಲಿ ಹೇಳಿದ್ದಲ್ಲದೆ, ಇದನ್ನು ಪ್ರಕಟಪಡಿಸಲು ಮತ್ತು ವಿವರಿಸಲು ಸಾರ್ವಜನಿಕರ ಕೈಯಲ್ಲಿ ಸುಮಾರು 70 ಕೋಟಿಗಿಂತಲೂ ಹೆಚ್ಚಿನ ಮುದ್ರಿತ ಸಾಹಿತ್ಯಗಳನ್ನು ಕೊಟ್ಟರು. ಇದನ್ನು ಪ್ರಚುರಪಡಿಸಲಿಕ್ಕಾಗಿ ಅವರು ಸಾವಿರಾರು ಆಡಿಯೋಕ್ಯಾಸೆಟ್ಗಳು ಹಾಗೂ ವಿಡಿಯೋಕ್ಯಾಸೆಟ್ಗಳನ್ನು ವಿತರಿಸಿದರು. ಅದು ಏನಾಗಿದೆ?
ಅದು ದೇವರ ರಾಜ್ಯದ ಸುವಾರ್ತೆಯೇ ಆಗಿದೆ. ಇಂದು “ರಾಜ್ಯದ ಈ ಸುವಾರ್ತೆಯು” ಬಹಳಷ್ಟು ವ್ಯಾಪಕವಾಗಿ ಸಾರಲ್ಪಡುತ್ತಿದೆ. ಹಿಂದೆಂದೂ ಮಾನವನ ಇತಿಹಾಸದಲ್ಲಿ ಈ ರೀತಿ ಸಾರಲ್ಪಟ್ಟಿಲ್ಲ.—ಮತ್ತಾಯ 24:14.
ಲೋಕವ್ಯಾಪಕವಾಗಿ ಸಾರುವ ಹಾಗೂ ಕಲಿಸುವ ಈ ಕೆಲಸವನ್ನು ಮಾಡುತ್ತಿರುವವರು ಸ್ವಯಂಸೇವಕರಾಗಿದ್ದಾರೆ. ಐಹಿಕ ದೃಷ್ಟಿಕೋನದಿಂದ ನೋಡುವುದಾದರೆ, ಈ ಕೆಲಸಕ್ಕೆ ಇವರು ಅರ್ಹರಲ್ಲ ಎಂದನಿಸಬಹುದು. ಹಾಗಾದರೆ, ಅವರ ದಿಟ್ಟ ಹೆಜ್ಜೆ ಹಾಗೂ ಸಫಲತೆಗೆ ಯಾವ ಒಂದು ಅಂಶವು ಕಾರಣವಾಗಿರುತ್ತದೆ? ಹೌದು, ರಾಜ್ಯದ ಈ ಸುವಾರ್ತೆಯ ಶಕ್ತಿಯೇ ಒಂದು ಮಹತ್ವದ ಅಂಶವಾಗಿದೆ. ಏಕೆಂದರೆ, ಇದು ಮಾನವಕುಲದ ಮೇಲೆ ಸುರಿಸಲ್ಪಡುವ ಆಶೀರ್ವಾದಗಳ ಕುರಿತಾದ ವಾರ್ತೆಯಾಗಿದೆ. ಈ ಸುವಾರ್ತೆಯಲ್ಲಿ ಸಂತೋಷ, ಆರ್ಥಿಕ ಸಂಕಷ್ಟದಿಂದ ಮುಕ್ತಿ, ಒಳ್ಳೆಯ ಸರಕಾರ, ಶಾಂತಿ, ಭದ್ರತೆ ಹಾಗೂ ಅಧಿಕಾಂಶ ಜನರು ಕನಸಿನಲ್ಲಿಯೂ ನೆನಸದ ಅನಂತಕಾಲ ಜೀವನಕ್ಕಾಗಿ ಸಕಲರೂ ಹಾತೊರೆಯುವ ಆಶೀರ್ವಾದಗಳೇ ಒಳಗೂಡಿವೆ! ಜೀವನದ ಅರ್ಥ ಹಾಗೂ ಉದ್ದೇಶವನ್ನು ಹುಡುಕುತ್ತಿರುವ ಜನರಿಗೆ ಇದು ನಿಜವಾಗಿಯೂ ಒಂದು ಸುವಾರ್ತೆಯಾಗಿದೆ. ರಾಜ್ಯದ ಈ ಸುವಾರ್ತೆಗೆ ನೀವು ಪ್ರತಿಕ್ರಿಯಿಸಿ ಅದಕ್ಕೆ ತಕ್ಕಂತೆ ಕ್ರಿಯೆಗೈಯುವಲ್ಲಿ, ಈ ಎಲ್ಲ ಆಶೀರ್ವಾದಗಳು ಹಾಗೂ ಇನ್ನೂ ಹೆಚ್ಚಿನವುಗಳು ನಿಮ್ಮದಾಗುವವು.
ರಾಜ್ಯ ಅಂದರೇನು?
ಸುವಾರ್ತೆಯೋಪಾದಿ ಘೋಷಿಸಲ್ಪಡುವ ಈ ರಾಜ್ಯವು ವಾಸ್ತವದಲ್ಲಿ ಏನಾಗಿದೆ? “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ಈ ಸುಪರಿಚಿತ ಮಾತುಗಳಲ್ಲಿ ಪ್ರಾರ್ಥಿಸುವಂತೆ ಕೋಟ್ಯಂತರ ಜನರಿಗೆ ಕಲಿಸಲಾಗಿದೆ. ಮತ್ತು ಇದೇ ಆ ರಾಜ್ಯವಾಗಿದೆ.—ಮತ್ತಾಯ 6:9, 10.
ಸುಮಾರು 25 ಶತಮಾನಗಳ ಹಿಂದೆ ಇಬ್ರಿಯ ಪ್ರವಾದಿಯಾದ ದಾನಿಯೇಲನು ಹೇಳಿದ ಮಾತೇ ಈ ರಾಜ್ಯವಾಗಿದೆ. ಅವನು ಬರೆದುದು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಹೀಗೆ ಈ ಸುವಾರ್ತೆಯು, ಎಲ್ಲ ದುಷ್ಟತನವನ್ನು ತೆಗೆದುಹಾಕಿ, ಅನಂತರ ಭೂಮಿಯಲ್ಲೆಲ್ಲ ಶಾಂತಿಯಿಂದ ಆಳುವ ದೇವರ ರಾಜ್ಯ ಅಥವಾ ಸರಕಾರದ ಕುರಿತಾಗಿದೆ. ಮಾನವಕುಲ ಹಾಗೂ ಭೂಮಿಗಾಗಿದ್ದ ಸೃಷ್ಟಿಕರ್ತನ ಮೂಲ ಉದ್ದೇಶವನ್ನು ಈ ಸರಕಾರವು ನೆರವೇರಿಸುವುದು.—ಆದಿಕಾಂಡ 1:28.
“ಪರಲೋಕರಾಜ್ಯವು ಸಮೀಪವಾಯಿತು”
ಸುಮಾರು 2,000 ವರ್ಷಗಳ ಹಿಂದೆ, ತನ್ನನ್ನೇ ಸಮರ್ಪಿಸಿಕೊಂಡ ಒಬ್ಬ ವ್ಯಕ್ತಿಯು ಮೊದಲ ಬಾರಿಗೆ ಎಲ್ಲರಿಗೂ ಮತ್ತಾಯ 3:1-6.
ರಾಜ್ಯದ ಸುವಾರ್ತೆಯನ್ನು ಸಾರಿದನು. ಇವನ ತೋರಿಕೆ ಹಾಗೂ ಗುಣವು ಎಲ್ಲರ ಗಮನವನ್ನು ಸೆಳೆಯಿತು. ಅವನೇ ಸ್ನಾನಿಕನಾದ ಯೋಹಾನನು. ಇವನು ಯೆಹೂದಿ ಯಾಜಕನಾದ ಜಕರೀಯ ಹಾಗೂ ಅವನ ಪತ್ನಿ ಎಲಿಸಬೇತಳ ಪುತ್ರನಾಗಿದ್ದನು. ಯೋಹಾನನು ಒಂಟೆಯ ಕೂದಲಿನಿಂದ ಮಾಡಿದ ವಸ್ತ್ರವನ್ನೂ ಸೊಂಟದಲ್ಲಿ ಚರ್ಮದ ನಡುಕಟ್ಟನ್ನೂ ಧರಿಸುತ್ತಿದ್ದನು. ಅವನನ್ನು ಮುನ್ಚಿತ್ರಿಸಿದ ಪ್ರವಾದಿ ಎಲೀಯನಂತಹ ವಸ್ತ್ರಗಳನ್ನು ಯೋಹಾನನು ಧರಿಸುತ್ತಿದ್ದನು. ಆದರೂ, ಅನೇಕರ ಮನಸೆಳದದ್ದು ಅವನ ಸಂದೇಶವೇ ಎಂಬುದರಲ್ಲಿ ಎರಡು ಮಾತಿಲ್ಲ. “ಪರಲೋಕರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಅವನು ಸಾರಿದನು.—ಯೋಹಾನನ ಸಂದೇಶವನ್ನು ಕೇಳಿಸಿಕೊಂಡವರು ಯೆಹೂದ್ಯರಾಗಿದ್ದರು. ಇವರು, ತಾವು ಸತ್ಯ ದೇವರಾದ ಯೆಹೋವನ ಆರಾಧಕರೆಂದು ಪ್ರತಿಪಾದಿಸಿಕೊಳ್ಳುತ್ತಿದ್ದರು. ಒಂದು ಜನಾಂಗವಾಗಿ, ಸುಮಾರು 1,500 ವರ್ಷಗಳ ಹಿಂದೆಯೇ ಮೋಶೆಯ ಮುಖಾಂತರ ನಿಯಮದ ಒಡಂಬಡಿಕೆಯನ್ನು ಪಡೆದುಕೊಂಡಿದ್ದರು. ನಿಯಮದ ಪ್ರಕಾರ ಯಜ್ಞಗಳು ಅರ್ಪಿಸಲ್ಪಡುತ್ತಿದ್ದ ಭವ್ಯವಾದ ದೇವಾಲಯವು ಇನ್ನೂ ಯೆರೂಸಲೇಮಿನಲ್ಲಿತ್ತು. ಆದುದರಿಂದ ತಮ್ಮ ಆರಾಧನೆಯು ದೇವರ ದೃಷ್ಟಿಯಲ್ಲಿ ಯೋಗ್ಯವಾಗಿದೆಯೆಂದು ಯೆಹೂದ್ಯರು ನಿಶ್ಚಿತರಾಗಿದ್ದರು.
ಆದರೆ ಯೋಹಾನನ ಸಂದೇಶವನ್ನು ಕೇಳಿಸಿಕೊಂಡ ಕೆಲವು ಜನರು ತಮ್ಮ ಧರ್ಮವು ತಾವು ನೆನಸಿಕೊಂಡಂತೆ ದೇವರ ದೃಷ್ಟಿಯಲ್ಲಿ ಯೋಗ್ಯವಾಗಿರುವ ಧರ್ಮವಾಗಿಲ್ಲವೆಂಬುದನ್ನು ಗ್ರಹಿಸಲಾರಂಭಿಸಿದರು. ಗ್ರೀಕ್ ಸಂಸ್ಕೃತಿ ಹಾಗೂ ತತ್ತ್ವಜ್ಞಾನವು ಯೆಹೂದಿ ಧಾರ್ಮಿಕ ಬೋಧನೆಗಳಲ್ಲಿ ಬೆರಕೆಯಾಗಿ ಹೋಗಿತ್ತು. ಮೋಶೆಯ ಮುಖಾಂತರ ದೇವರು ಕೊಟ್ಟಂತಹ ನಿಯಮಶಾಸ್ತ್ರವು, ಮನುಷ್ಯ ನಂಬಿಕೆಗಳು ಹಾಗೂ ಸಂಪ್ರದಾಯಗಳಿಂದ ಈಗ ಕಲಬೆರಕೆಯಾಗಿತ್ತು ಮಾತ್ರವಲ್ಲ ನಿರರ್ಥಕವಾಗಿತ್ತು. (ಮತ್ತಾಯ 15:6) ಕಲ್ಲುಹೃದಯದವರೂ ನಿರ್ದಯಿಗಳೂ ಆದ ಧಾರ್ಮಿಕ ಗುರುಗಳಿಂದ ದಾರಿತಪ್ಪಿಹೋದ ಹೆಚ್ಚಿನವರು ದೇವರಿಗೆ ಸ್ವೀಕಾರಯೋಗ್ಯವಾದಂತಹ ರೀತಿಯಲ್ಲಿ ಆರಾಧನೆ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದರು. (ಯಾಕೋಬ 1:27) ಅವರು ದೇವರ ಹಾಗೂ ನಿಯಮದ ಒಡಂಬಡಿಕೆಯ ವಿರುದ್ಧವಾಗಿ ಮಾಡಿದ ಪಾಪಕ್ಕಾಗಿ ಪಶ್ಚಾತ್ತಾಪವನ್ನು ತೋರಿಸಬೇಕಾಗಿತ್ತು.
ಆ ಸಮಯದಲ್ಲಿ ಅನೇಕ ಯೆಹೂದ್ಯರು, ಕಾಣಿಸಿಕೊಳ್ಳಬೇಕಾಗಿದ್ದ ವಾಗ್ದತ್ತ ಮೆಸ್ಸೀಯ ಅಥವಾ ಕ್ರಿಸ್ತನನ್ನು ಎದುರುನೋಡುತ್ತಿದ್ದರು. ಮತ್ತು ಕೆಲವರು ಯೋಹಾನನು “ಆ ಕ್ರಿಸ್ತನಾಗಿರಬಹುದೋ” ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದರು. ಆದರೆ ಯೋಹಾನನು ತಾನು ಕ್ರಿಸ್ತನಲ್ಲವೆಂದು ಮಾತ್ರವಲ್ಲ “ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳುವ ಮೂಲಕ ಅವರನ್ನು ಯೇಸುವಿನ ಕಡೆಗೆ ಮಾರ್ಗದರ್ಶಿಸಿದನು. (ಲೂಕ 3:15, 16) ಯೇಸುವಿನ ಶಿಷ್ಯರಿಗೆ ಅವನನ್ನು ಪರಿಚಯಿಸುತ್ತಾ ಯೋಹಾನನು ಹೇಳಿದ್ದು: “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.”—ಯೋಹಾನ 1:29.
ಇದು ನಿಜವಾಗಿಯೂ ಸುವಾರ್ತೆಯಾಗಿತ್ತು, ಏಕೆಂದರೆ ಈ ಮೂಲಕ ಯೋಹಾನನು ಎಲ್ಲ ಜನರನ್ನು ಜೀವ ಹಾಗೂ ಸಂತೋಷದ ಮಾರ್ಗದ ಕಡೆಗೆ ಅಂದರೆ, ‘ಈ ಲೋಕದ ಪಾಪವನ್ನು ನಿವಾರಣೆ ಮಾಡುವ’ ಯೇಸುವಿನ ಕಡೆಗೆ ಮಾರ್ಗದರ್ಶಿಸುತ್ತಿದ್ದನು. ಆದಾಮಹವ್ವರ ವಂಶದವರೆಲ್ಲರೂ ಪಾಪ ಹಾಗೂ ಮರಣವೆಂಬ ದಬ್ಬಾಳಿಕೆಯ ಕೆಳಗೆ ಜನಿಸಿದ್ದಾರೆ. ರೋಮಾಪುರ 5:19 ವಿವರಿಸುವುದು: “ಒಬ್ಬನ ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.” ಯೇಸು ಯಜ್ಞದ ಕುರಿಮರಿಯೋಪಾದಿ ‘ಪಾಪವನ್ನು ನಿವಾರಣೆ ಮಾಡುವವನಾಗಿದ್ದನು’ ಮತ್ತು ಮನುಷ್ಯರು ಅನುಭವಿಸುತ್ತಿರುವ ದುಃಖಭರಿತ ಪರಿಸ್ಥಿತಿಗಳನ್ನು ಒಳ್ಳೆಯದನ್ನಾಗಿ ಮಾರ್ಪಡಿಸಲಿಕ್ಕಿದ್ದನು. “ಪಾಪವು ಕೊಡುವ ಸಂಬಳ ಮರಣ” ಆದರೆ, “ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” ಆಗಿದೆ ಎಂದು ಬೈಬಲು ವಿವರಿಸುತ್ತದೆ.—ರೋಮಾಪುರ 6:23.
ಜೀವಿಸಿದವರಲ್ಲಿಯೇ ಅತ್ಯಂತ ಮಹಾನ್ ಪುರುಷನಾಗಿದ್ದು ಒಬ್ಬ ಪರಿಪೂರ್ಣ ಮನುಷ್ಯನೋಪಾದಿ ಯೇಸು ಸುವಾರ್ತೆಯನ್ನು ಸಾರಿದನು. ಮಾರ್ಕ 1:14, 15ರಲ್ಲಿನ ಬೈಬಲ್ ವೃತ್ತಾಂತವು ನಮಗೆ ಹೇಳುವುದು: “ಯೋಹಾನನು ಸೆರೆಗೆ ಬಿದ್ದ ಮೇಲೆ ಯೇಸು ಗಲಿಲಾಯ ಸೀಮೆಗೆ ಬಂದು—ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು.”
ಯೇಸುವಿನ ಸಂದೇಶಕ್ಕೆ ಕಿವಿಗೊಟ್ಟು, ಸುವಾರ್ತೆಯಲ್ಲಿ ನಂಬಿಕೆಯನ್ನಿಟ್ಟವರು ಹೇರಳವಾಗಿ ಆಶೀರ್ವದಿಸಲ್ಪಟ್ಟರು. ಯೋಹಾನ 1:12 ಹೇಳುವುದು: “ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರಕೊಟ್ಟನು.” ದೇವರ ಮಕ್ಕಳು ಅಥವಾ ಪುತ್ರರಾಗುವ ಮೂಲಕ, ಅವರು ನಿತ್ಯಜೀವವನ್ನು ಪಡೆದುಕೊಳ್ಳಲು ಯೋಗ್ಯರಾದರು.—1 ಯೋಹಾನ 2:25.
ಆದರೆ, ರಾಜ್ಯದ ಆಶೀರ್ವಾದಗಳನ್ನು ಪಡೆದುಕೊಳ್ಳುವ ಸುಯೋಗವು ಪ್ರಥಮ ಶತಮಾನದಲ್ಲಿದ್ದ ಜನರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಈ ಮುಂಚೆಯೇ ತಿಳಿಸಿದಂತೆ, ದೇವರ ರಾಜ್ಯದ ಸುವಾರ್ತೆಯು ಇಂದು ಭೂಮಿಯಲ್ಲೆಲ್ಲ ಸಾರಲ್ಪಡುತ್ತಿದೆ ಹಾಗೂ ಕಲಿಸಲ್ಪಡುತ್ತಿದೆ. ಆದುದರಿಂದ, ರಾಜ್ಯದ ಆಶೀರ್ವಾದಗಳು ಈಗಲೂ ಲಭ್ಯವಿವೆ. ಇಂತಹ ಆಶೀರ್ವಾದಗಳನ್ನು ಪಡೆದುಕೊಳ್ಳಲು ನೀವು ಏನು ಮಾಡತಕ್ಕದ್ದು? ಮುಂದಿನ ಲೇಖನವು ಇದನ್ನು ವಿವರಿಸುವುದು.