ಒಂದೇ ಸಂಪುಟದಲ್ಲಿ ಬೈಬಲ್
ಒಂದೇ ಸಂಪುಟದಲ್ಲಿ ಬೈಬಲ್
ಬೈಬಲಿನ ಪ್ರತಿಗಳನ್ನು ಮಾಡಲಿಕ್ಕಾಗಿ ಕೋಡೆಕ್ಸನ್ನು ಉಪಯೋಗಿಸಿದವರಲ್ಲಿ ಆದಿ ಕ್ರೈಸ್ತರು ಅಗ್ರಗಣ್ಯರಾಗಿದ್ದರು. ಕೋಡೆಕ್ಸ್ ಎಂಬುದು ಒಂದು ಸುರುಳಿಯಲ್ಲ, ಬದಲಾಗಿ ಗ್ರಂಥವಾಗಿದೆ. ಆದರೂ, ಆ ಕೂಡಲೆ ಕ್ರೈಸ್ತರು ಬೈಬಲಿನ ಎಲ್ಲ ಪುಸ್ತಕಗಳನ್ನು ಒಳಗೊಂಡಿದ್ದ ಒಂದೇ ಸಂಪುಟವನ್ನು ಸಿದ್ಧಗೊಳಿಸಲು ಆರಂಭಿಸಲಿಲ್ಲ. ಆರನೆಯ ಶತಮಾನದಲ್ಲಿ ಫ್ಲೇವೀಯಸ್ ಕ್ಯಾಸಿಯೊಡಾರಸ್ ಎಂಬ ವ್ಯಕ್ತಿಯು, ಒಂದೇ ಸಂಪುಟದ ಬೈಬಲ್‌ಗಳನ್ನು ವ್ಯಾಪಕವಾಗಿ ಸಿದ್ಧಗೊಳಿಸುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಂಡನು.
ಸಾ.ಶ. 485-490ರಲ್ಲಿ, ಆಧುನಿಕ ದಿನದ ಇಟಲಿಯ ದಕ್ಷಿಣ ತುದಿಯಲ್ಲಿರುವ ಕಲಾಬ್ರಿಯದ ಶ್ರೀಮಂತ ಕುಟುಂಬದಲ್ಲಿ ಫ್ಲೇವೀಯಸ್ ಮಾಗ್ನಸ್ ಆರೇಲಿಯಸ್ ಕ್ಯಾಸಿಯೊಡಾರಸನು ಜನಿಸಿದನು. ಇಟಲಿಯ ಇತಿಹಾಸದಲ್ಲೇ ತುಂಬ ಗೊಂದಲಮಯವಾಗಿದ್ದ ಕಾಲಾವಧಿಯಲ್ಲಿ ಅವನು ಜೀವಿಸಿದ್ದನು. ಆ ಸಮಯದಲ್ಲಿ ಈ ಪರ್ಯಾಯ ದ್ವೀಪವು, ಮೊದಲು ಗಾತ್ ಜನರಿಂದ ತದನಂತರ ಬೈಸಾಂಟೈನ್‌ರಿಂದ ಆಕ್ರಮಿಸಲ್ಪಟ್ಟಿತ್ತು. ಕ್ಯಾಸಿಯೊಡಾರಸನು 60 ಅಥವಾ 70 ವರ್ಷ ಪ್ರಾಯದವನಾಗಿದ್ದಾಗ, ಕಲಾಬ್ರಿಯದ ಸ್ಕ್ವೀಲಾಚೆಯಲ್ಲಿದ್ದ ತನ್ನ ಮನೆಯ ಸಮೀಪವೇ ವಿವೇರಿಯಂ ಸಂನ್ಯಾಸಿಮಠವನ್ನು ಹಾಗೂ ಗ್ರಂಥಾಲಯವನ್ನು ಸ್ಥಾಪಿಸಿದನು.
ಶ್ರದ್ಧೆಯುಳ್ಳ ಒಬ್ಬ ಬೈಬಲ್ ಸಂಪಾದಕ
ಬೈಬಲನ್ನು ಜನರಿಗೆ ಹೇಗೆ ಲಭ್ಯಗೊಳಿಸುವುದು ಎಂಬುದೇ ಕ್ಯಾಸಿಯೊಡಾರಸ್‌ನ ಪ್ರಮುಖ ಚಿಂತೆಯಾಗಿತ್ತು. ಇತಿಹಾಸಕಾರನಾದ ಪೀಟರ್ ಬ್ರೌನ್ ಬರೆಯುವುದು: “ಕ್ಯಾಸಿಯೊಡಾರಸ್‌ನ ಅಭಿಪ್ರಾಯಕ್ಕನುಸಾರ, ಶಾಸ್ತ್ರವಚನಗಳನ್ನು ಜನರಿಗೆ ಲಭ್ಯಗೊಳಿಸುವುದರಲ್ಲಿ ಎಲ್ಲ ಲ್ಯಾಟಿನ್ ಸಾಹಿತ್ಯವನ್ನು ಉಪಯೋಗಿಸಬೇಕಾಗಿತ್ತು. ಈ ಮುಂಚೆ ಶಾಸ್ತ್ರೀಯ ಮೂಲಪಾಠಗಳನ್ನು ಓದಲು ಮತ್ತು ಅದರ ಪ್ರತಿಗಳನ್ನು ಮಾಡಲು ಉಪಯೋಗಿಸಲ್ಪಡುತ್ತಿದ್ದ ಎಲ್ಲ ಸಹಾಯಕಗಳನ್ನು, ಶಾಸ್ತ್ರವಚನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಜಾಣ್ಮೆಯಿಂದ ಅವುಗಳನ್ನು ನಕಲುಮಾಡಲು ಉಪಯೋಗಿಸಬೇಕಾಗಿತ್ತು. ಹೊಸದಾಗಿ ರೂಪಿಸಲ್ಪಟ್ಟ ಸೌರವ್ಯೂಹದಂತೆ, ದೇವರ ವಾಕ್ಯವೆಂಬ ಬಹು ದೊಡ್ಡ ಸೂರ್ಯನ ಸುತ್ತಲೂ ಇಡೀ ಲ್ಯಾಟಿನ್ ಸಂಸ್ಕೃತಿಯು ಸುತ್ತಬೇಕಾಗಿತ್ತು.”
ಇಡೀ ಬೈಬಲನ್ನು ಸಂಗ್ರಹಿಸಲಿಕ್ಕಾಗಿ ಕ್ಯಾಸಿಯೊಡಾರಸನು, ಭಾಷಾಂತರಕಾರರನ್ನು ಹಾಗೂ ವ್ಯಾಕರಣಜ್ಞರನ್ನು ವಿವೇರಿಯಂ ಸಂನ್ಯಾಸಿಮಠದಲ್ಲಿ ಒಟ್ಟುಗೂಡಿಸಿದನು ಮತ್ತು ಶ್ರದ್ಧೆಯಿಂದ ಸಂಪಾದಕೀಯ ಕೆಲಸವನ್ನು ಮಾಡುವ ಮೇಲ್ವಿಚಾರಣೆಯನ್ನು ವಹಿಸಿಕೊಂಡನು. ಅವನು ಈ ಕೆಲಸವನ್ನು ತುಂಬ ಸುಶಿಕ್ಷಿತರಾಗಿದ್ದ ಕೆಲವು ವ್ಯಕ್ತಿಗಳಿಗೆ ಮಾತ್ರ ವಹಿಸಿಕೊಟ್ಟನು. ಬರಹಗಾರರು ನಕಲುಮಾಡುವಾಗ ತಪ್ಪುಗಳನ್ನು ಮಾಡಿದ್ದಾರೆಂದು ಇವರಿಗೆ ಅನಿಸುವುದಾದರೂ, ಇವರು ತಿದ್ದುಪಡಿಯನ್ನು ಮಾಡಬಾರದಾಗಿತ್ತು. ವ್ಯಾಕರಣದ ಬಗ್ಗೆ ಏನಾದರೂ ಪ್ರಶ್ನೆಯೇಳುವಲ್ಲಿ, ಅಂಗೀಕೃತ ಲ್ಯಾಟಿನ್ ಭಾಷೆಯ ಸಾಮಾನ್ಯ ಉಪಯೋಗಕ್ಕೆ ಬದಲಾಗಿ, ಪುರಾತನ ಬೈಬಲ್ ಹಸ್ತಪ್ರತಿಗಳಲ್ಲಿರುವ ಉಪಯೋಗಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿತ್ತು. ಕ್ಯಾಸಿಯೊಡಾರಸನು ಈ ರೀತಿ ಆದೇಶ ನೀಡಿದನು: “ವ್ಯಾಕರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಷ್ಟೇ ಭಿನ್ನತೆಯಿರಲಿ . . . ಅದರಲ್ಲಿ ಸ್ವಲ್ಪವೂ ಬದಲಾವಣೆಗಳನ್ನು ಮಾಡಬಾರದು. ಏಕೆಂದರೆ ದೈವಪ್ರೇರಿತವೆಂದು ಪ್ರಸಿದ್ಧವಾಗಿರುವ ಮೂಲಪಾಠದಲ್ಲಿ ತಪ್ಪುಗಳು ಇವೆಯೆಂದು ಅನುಮಾನಿಸಲು ಸಾಧ್ಯವೇ ಇಲ್ಲ. . . . ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಅಭಿವ್ಯಕ್ತಿ, ರೂಪಕಾಲಂಕಾರ ಹಾಗೂ ನುಡಿಗಟ್ಟುಗಳು ಸಾಮಾನ್ಯವಾದ ಲ್ಯಾಟಿನ್ ಭಾಷಾಮಟ್ಟಗಳಿಗಿಂತ ಎಷ್ಟೇ ಭಿನ್ನವಾಗಿರಲಿ, ಅವುಗಳನ್ನು ಹಾಗೆಯೇ ಉಳಿಸಿಕೊಂಡುಹೋಗಬೇಕು; ‘ಹೀಬ್ರು ಭಾಷೆಯ’ ಅಂಕಿತ ನಾಮರೂಪಗಳನ್ನು ಸಹ ಹಾಗೆಯೇ ಉಳಿಸಿಕೊಂಡುಹೋಗುವ ಅಗತ್ಯವಿದೆ.”—ದ ಕೇಂಬ್ರಿಡ್ಜ್ ಹಿಸ್ಟರಿ ಆಫ್ ದ ಬೈಬಲ್.
ಕೋಡೆಕ್ಸ್ ಗ್ರಾಂಡಿಯೋರ್
ವಿವೇರಿಯಂ ಸಂನ್ಯಾಸಿಮಠದಲ್ಲಿದ್ದ ನಕಲುಗಾರರು, ಲ್ಯಾಟಿನ್ ಭಾಷೆಯಲ್ಲಿ ಬೈಬಲಿನ ಕಡಿಮೆಪಕ್ಷ ಮೂರು ಬೇರೆ ಬೇರೆ ಆವೃತ್ತಿಗಳನ್ನು ಸಿದ್ಧಗೊಳಿಸುವ ನೇಮಕವನ್ನು ಪಡೆದರು. ಮೊದಲ ಆವೃತ್ತಿಯಲ್ಲಿ ಒಂಬತ್ತು ಸಂಪುಟಗಳಿದ್ದು, ಇದು ಹಳೆಯ ಲ್ಯಾಟಿನ್ ಮೂಲಪಾಠವನ್ನು ಒಳಗೊಂಡಿದ್ದಿರಬಹುದು. ಈ ಹಳೆಯ ಲ್ಯಾಟಿನ್ ಮೂಲಪಾಠವು ಎರಡನೆಯ ಶತಮಾನದ ಕೊನೆಯಲ್ಲಿ ಮಾಡಲ್ಪಟ್ಟ ಭಾಷಾಂತರವಾಗಿತ್ತು. ಎರಡನೆಯ ಆವೃತ್ತಿಯಲ್ಲಿ ಲ್ಯಾಟಿನ್ ವಲ್ಗೆಟ್ ಒಳಗೂಡಿದ್ದು, ಐದನೆಯ ಶತಮಾನದ ಆರಂಭದ ಸುಮಾರಿಗೆ ಜೆರೋಮನು ಇದನ್ನು ಪೂರ್ಣಗೊಳಿಸಿದ್ದನು. ಮೂರನೆಯ ಆವೃತ್ತಿಯು, “ದೊಡ್ಡ ಕೋಡೆಕ್ಸ್” ಎಂಬರ್ಥವುಳ್ಳ ಕೋಡೆಕ್ಸ್ ಗ್ರಾಂಡಿಯೋರ್ ಆಗಿದ್ದು, ಮೂರು ಬೈಬಲ್ ಮೂಲಪಾಠಗಳಿಂದ ಇದನ್ನು ತೆಗೆದುಕೊಳ್ಳಲಾಗಿತ್ತು. ಎರಡನೆಯ ಹಾಗೂ ಮೂರನೆಯ ಆವೃತ್ತಿಗಳು, ಬೈಬಲಿನ ಎಲ್ಲ ಪುಸ್ತಕಗಳನ್ನು ಒಂದೇ ಸಂಪುಟದಲ್ಲಿ ಒಟ್ಟುಗೂಡಿಸಿದವು.
ಒಂದೇ ಸಂಪುಟದಲ್ಲಿ ಲ್ಯಾಟಿನ್ ಬೈಬಲುಗಳನ್ನು ಸಿದ್ಧಗೊಳಿಸುವುದರಲ್ಲಿ ಕ್ಯಾಸಿಯೊಡಾರಸ್‌ನೇ ಮೊದಲಿಗನಾಗಿದ್ದನು ಎಂಬಂತೆ ತೋರುತ್ತದೆ. ಈ ಬೈಬಲಿಗೆ ಅವನು ಪಾಂಡೆತೀಸ್ ಎಂದು ಹೆಸರು * ಅವನು ಬೈಬಲಿನ ಎಲ್ಲ ಪುಸ್ತಕಗಳನ್ನು ಒಂದೇ ಸಂಪುಟದಲ್ಲಿ ಒಟ್ಟುಗೂಡಿಸುವುದರ ಪ್ರಾಯೋಗಿಕ ಪ್ರಯೋಜನವನ್ನು ಮನಗಂಡನು ಎಂಬುದರಲ್ಲಿ ಸಂಶಯವೇ ಇಲ್ಲ. ಇದರಿಂದಾಗಿ, ಬೇರೆ ಬೇರೆ ಸಂಪುಟಗಳನ್ನು ತೆರೆದು ನೋಡಬೇಕಾದಂತಹ ಸಮಯವನ್ನು ವ್ಯಯಮಾಡುವ ತೊಂದರೆಯು ಇಲ್ಲವಾಯಿತು.
ಕೊಟ್ಟನು.ದಕ್ಷಿಣ ಇಟಲಿಯಿಂದ ಬ್ರಿಟಿಷ್ ದ್ವೀಪಗಳಿಗೆ
ಕ್ಯಾಸಿಯೊಡಾರಸನು ಮರಣಪಟ್ಟು (ಬಹುಶಃ ಸಾ.ಶ. 583ರಲ್ಲಿ) ಸ್ವಲ್ಪ ಸಮಯ ಕಳೆದ ಬಳಿಕ, ಕೋಡೆಕ್ಸ್ ಗ್ರಾಂಡಿಯೋರ್‌ನ ಪ್ರಯಾಣವು ಆರಂಭವಾಯಿತು. ಆ ಸಮಯದಲ್ಲಿ, ವಿವೇರಿಯಂ ಗ್ರಂಥಾಲಯದ ಕೆಲವು ಪುಸ್ತಕಗಳು, ರೋಮ್‌ನಲ್ಲಿದ್ದ ಲೆಟ್‌ರನ್ ಗ್ರಂಥಾಲಯಕ್ಕೆ ರವಾನಿಸಲ್ಪಟ್ಟಿದ್ದವು ಎಂದು ನಂಬಲಾಗುತ್ತದೆ. ಸಾ.ಶ. 678ರಲ್ಲಿ, ಚೇಲ್‌ಫ್ರಿಥ್ ಎಂಬ ಆ್ಯಂಗ್ಲೊ-ಸ್ಯಾಕ್ಸನ್ ಮಠಾಧಿಪತಿಯು, ರೋಮ್‌ನಲ್ಲಿ ಸ್ವಲ್ಪ ಕಾಲ ಉಳಿದು ತನ್ನ ಸ್ವಸ್ಥಳಕ್ಕೆ ಹಿಂದಿರುಗುವಾಗ ಈ ಕೋಡೆಕ್ಸ್ ಅನ್ನು ತನ್ನೊಂದಿಗೆ ಬ್ರಿಟಿಷ್ ದ್ವೀಪಕ್ಕೆ ಕೊಂಡೊಯ್ದನು. ಈ ರೀತಿಯಲ್ಲಿ ಇದು, ಚೆಲ್‌ಫ್ರಿಥ್‌ನಿಂದ ನಿರ್ದೇಶಿಸಲ್ಪಟ್ಟ ವಿರ್‌ಮತ್ ಹಾಗೂ ಜಾರೋದ ಎರಡು ಸಂನ್ಯಾಸಿಮಠಗಳಿಗೆ ಬಂತು. ಈ ಸಂನ್ಯಾಸಿಮಠಗಳು ಈಗ ಇಂಗ್ಲೆಂಡ್‌ನ ನಾರ್ತಂಬ್ರಿಯದಲ್ಲಿವೆ.
ಕ್ಯಾಸಿಯೊಡಾರಸ್‌ನ ಒಂದೇ ಸಂಪುಟದ ಬೈಬಲ್, ಚೇಲ್‌ಫ್ರಿಥ್ ಹಾಗೂ ಅವನ ಸಂನ್ಯಾಸಿಗಳನ್ನು ಖಂಡಿತವಾಗಿಯೂ ಆಕರ್ಷಿಸಿದ್ದಿರಬೇಕು. ಅದರ ಸುಲಭ ಉಪಯೋಗಕ್ಕೇ ಅವರು ಆಕರ್ಷಿತರಾಗಿರಬಹುದು. ಹೀಗೆ, ಕೆಲವೇ ದಶಕಗಳಲ್ಲಿ ಅವರು, ಇನ್ನಿತರ ಮೂರು ಪೂರ್ಣ ಬೈಬಲುಗಳನ್ನು ಒಂದೇ ಸಂಪುಟದಲ್ಲಿ ಸಿದ್ಧಗೊಳಿಸಿದರು. ಇವುಗಳಲ್ಲಿ ಒಂದು ದೊಡ್ಡ ಹಸ್ತಪ್ರತಿಯು ಮಾತ್ರ ಜೋಪಾನವಾಗಿ ಉಳಿಸಲ್ಪಟ್ಟಿದ್ದು, ಇದನ್ನು ಕೋಡೆಕ್ಸ್ ಆಮಿಯಾಟೀನಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ 2,060 ಪುಟಗಳಿದ್ದು, ಇವು ಕರುವಿನ ಚರ್ಮದಿಂದ ಮಾಡಲ್ಪಟ್ಟವುಗಳಾಗಿವೆ. ಪ್ರತಿಯೊಂದು ಪುಟದ ಉದ್ದ 51 ಸೆಂಟಿಮೀಟರ್ ಹಾಗೂ ಅಗಲ 33 ಸೆಂಟಿಮೀಟರಾಗಿದೆ. ಹೊರಪುಟಗಳನ್ನೂ ಸೇರಿಸಿ ಇದು ಸುಮಾರು 25 ಸೆಂಟಿಮೀಟರುಗಳಷ್ಟು ದಪ್ಪವಾಗಿದೆ ಮತ್ತು 34 ಕಿಲೊಗ್ರಾಮ್‌ಗಳಿಗಿಂತಲೂ ಹೆಚ್ಚು ಭಾರವುಳ್ಳದ್ದಾಗಿದೆ. ಇದು ಈಗಲೂ ಅಸ್ತಿತ್ವದಲ್ಲಿರುವ ಲ್ಯಾಟಿನ್ ಭಾಷೆಯ ಒಂದೇ ಸಂಪುಟದ ಅತ್ಯಂತ ಹಳೆಯ ಬೈಬಲಾಗಿದೆ. 19ನೆಯ ಶತಮಾನದ ಪ್ರಖ್ಯಾತ ಬೈಬಲ್ ಪಂಡಿತನಾಗಿದ್ದ ಫೆಂಟನ್ ಜೆ. ಹೋರ್ಟ್ ಎಂಬುವವನು 1887ನೆಯ ಇಸವಿಯಲ್ಲಿ ಕೋಡೆಕ್ಸನ್ನು ಗುರುತಿಸಿದನು. ಹೋರ್ಟ್ ಹೀಗೆ ಹೇಳಿಕೆ ನೀಡಿದನು: “ಲ್ಯಾಟಿನ್ ಬೈಬಲಿನ [ಹಸ್ತಪ್ರತಿಯ] ಈ ಅದ್ಭುತ ಕೃತಿಯು, 19ನೆಯ ಶತಮಾನದಲ್ಲಿ ಜೀವಿಸುತ್ತಿರುವ ಒಬ್ಬ ಆಧುನಿಕ ವ್ಯಕ್ತಿಯ ಮೇಲೆ ಸಹ ಭಯಭಕ್ತಿಯ ಪ್ರಭಾವವನ್ನು ಬೀರಬಲ್ಲದು.”
ಇಟಲಿಗೆ ಹಿಂದಿರುಗುವುದು
ಕ್ಯಾಸಿಯೊಡಾರಸ್‌ನಿಂದ ಸಿದ್ಧಪಡಿಸಲ್ಪಟ್ಟ ಕೋಡೆಕ್ಸ್ ಗ್ರಾಂಡಿಯೋರ್‌ನ ಮೂಲ ಪ್ರತಿಯು ಈಗ ಕಳೆದುಹೋಗಿದೆ. ಆದರೆ ಅದರ ಆ್ಯಂಗ್ಲೊ-ಸ್ಯಾಕ್ಸನ್ ವಂಶಜವಾಗಿರುವ ಲ್ಯಾಟಿನ್ ಕೋಡೆಕ್ಸ್ ಆಮಿಯಾಟೀನಸ್ ಹಸ್ತಪ್ರತಿಯು, ಬರೆದು ಪೂರ್ಣಗೊಂಡ ಕೂಡಲೆ ಹಿಂದಿರುಗಿ ಇಟಲಿಗೆ ಪ್ರಯಾಣ ಬೆಳೆಸಿತು. ತಾನು ಮರಣಪಡುವ ಸ್ವಲ್ಪ ಕಾಲಕ್ಕೆ ಮುಂಚೆ ಚೇಲ್‌ಫ್ರಿಥ್, ರೋಮ್‌ಗೆ ಹಿಂದಿರುಗಲು ನಿರ್ಧರಿಸಿದನು. ತನ್ನ ಬಳಿಯಿದ್ದ ಮೂರು ಲ್ಯಾಟಿನ್ ಬೈಬಲ್ ಹಸ್ತಪ್ರತಿಗಳಲ್ಲಿ ಒಂದನ್ನು ಅವನು ತನ್ನೊಂದಿಗೆ ಕೊಂಡೊಯ್ದನು. ಅವನು IIನೆಯ ಪೋಪ್ ಗ್ರೆಗರಿಗೆ ಅದನ್ನು ಉಡುಗೊರೆಯಾಗಿ ಕೊಡಲು ಬಯಸಿದನು. ಸಾ.ಶ. 716ರಲ್ಲಿ, ಫ್ರಾನ್ಸ್‌ನ ಲಾಂಗ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಚೇಲ್‌ಫ್ರಿಥ್ ಮೃತಪಟ್ಟನು. ಆದರೆ ಅವನ ಕೋಡೆಕ್ಸ್ ಬೈಬಲ್, ಉಳಿದ ಪ್ರಯಾಣಿಕರೊಂದಿಗೆ ತನ್ನ ಪ್ರಯಾಣವನ್ನು ಮುಂದುವರಿಸಿತು. ಕಟ್ಟಕಡೆಗೆ ಆ ಕೋಡೆಕ್ಸ್ ಮಧ್ಯ ಇಟಲಿಯ ಮೌಂಟ್ ಆಮಿಯಾಟದ ಸಂನ್ಯಾಸಿಮಠದಲ್ಲಿರುವ ಗ್ರಂಥಾಲಯವನ್ನು ಸೇರಿತು. ಆದುದರಿಂದಲೇ ಇದಕ್ಕೆ ಕೋಡೆಕ್ಸ್ ಆಮಿಯಾಟೀನಸ್ ಎಂಬ ಹೆಸರು ಬಂತು. 1782ರಲ್ಲಿ ಈ ಹಸ್ತಪ್ರತಿಯು, ಇಟಲಿಯ ಫ್ಲಾರೆನ್ಸ್‌ನಲ್ಲಿರುವ ಮೆಡಿಸೀಯನ್ ಲಾರೆಂಶಿಯನ್ ಗ್ರಂಥಾಲಯಕ್ಕೆ ಸ್ಥಳಾಂತರಿಸಲ್ಪಟ್ಟಿತು. ಅಲ್ಲಿ ಇದು ಆ ಗ್ರಂಥಾಲಯದ ಅಪೂರ್ವ ಆಸ್ತಿಯಲ್ಲಿ ಒಂದಾಗಿ ಉಳಿದಿದೆ.
ಕೋಡೆಕ್ಸ್ ಗ್ರಾಂಡಿಯೋರ್ ನಮ್ಮ ಮೇಲೆ ಹೇಗೆ ಪ್ರಭಾವ ಬೀರಿದೆ? ಕ್ಯಾಸಿಯೊಡಾರಸ್‌ನ ಕಾಲದಿಂದಲೂ, ನಕಲುಗಾರರು ಮತ್ತು ಪ್ರಕಾಶಕರು ಒಂದೇ ಸಂಪುಟದ ಬೈಬಲುಗಳನ್ನು ಉತ್ಪಾದಿಸುವ ಕೆಲಸಕ್ಕೆ ತುಂಬ ಮಹತ್ವವನ್ನು ನೀಡಿದ್ದಾರೆ. ಇಂದಿನ ತನಕವೂ ಒಂದೇ ಸಂಪುಟದಲ್ಲಿ ಬೈಬಲ್ ಲಭ್ಯವಿರುವುದರಿಂದ, ಜನರು ಅದನ್ನು ಅಭ್ಯಾಸಮಾಡುವುದು ಮತ್ತು ಅದರ ಶಕ್ತಿಯಿಂದ ತಮ್ಮ ಜೀವಿತಗಳಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುವುದು ಸುಲಭವಾಗಿದೆ.—ಇಬ್ರಿಯ 4:12.
[ಪಾದಟಿಪ್ಪಣಿ]
^ ಪ್ಯಾರ. 9 ಗ್ರೀಕ್ ಭಾಷೆಯ ಇಡೀ ಬೈಬಲ್, ನಾಲ್ಕನೆಯ ಅಥವಾ ಐದನೆಯ ಶತಮಾನದಿಂದ ಚಲಾವಣೆಯಲ್ಲಿದ್ದಂತೆ ತೋರುತ್ತದೆ.
[ಪುಟ 29ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಕೋಡೆಕ್ಸ್ ಗ್ರಾಂಡಿಯೋರ್‌ನ ಪ್ರಯಾಣ
ವಿವೇರಿಯಂ ಸಂನ್ಯಾಸಿಮಠ
ರೋಮ್
ಜಾರೋ
ವಿರ್‌ಮತ್
ಕೋಡೆಕ್ಸ್ ಆಮಿಯಾಟೀನಸ್‌ನ ಪ್ರಯಾಣ
ಜಾರೋ
ವಿರ್‌ಮತ್
ಮೌಂಟ್ ಆಮಿಯಾಟ
ಫ್ಲಾರೆನ್ಸ್
[ಕೃಪೆ]
Mountain High Maps® Copyright © 1997 Digital Wisdom, Inc.
[ಪುಟ 30ರಲ್ಲಿರುವ ಚಿತ್ರಗಳು]
ಮೇಲೆ: ಕೋಡೆಕ್ಸ್ ಆಮಿಯಾಟೀನಸ್ ಎಡಭಾಗದಲ್ಲಿ: ಕೋಡೆಕ್ಸ್ ಆಮಿಯಾಟೀನಸ್‌ನಲ್ಲಿರುವ ಎಜ್ರನ ಭಾವಚಿತ್ರ
[ಕೃಪೆ]
Biblioteca Medicea Laurenziana, Firenze