ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಬ್ರಹಾಮನಂತಹ ನಂಬಿಕೆ ನಿಮಗಿರಲಿ!

ಅಬ್ರಹಾಮನಂತಹ ನಂಬಿಕೆ ನಿಮಗಿರಲಿ!

ಅಬ್ರಹಾಮನಂತಹ ನಂಬಿಕೆ ನಿಮಗಿರಲಿ!

“ನಂಬಿಕೆಗೆ ಅಂಟಿಕೊಂಡಿರುವವರು ಅಬ್ರಹಾಮನ ಪುತ್ರರಾಗಿದ್ದಾರೆ.”​—ಗಲಾತ್ಯ 3:​7, NW.

1. ಅಬ್ರಾಮನು ಕಾನಾನಿನಲ್ಲಿ ಹೇಗೆ ಒಂದು ಹೊಸ ಪರೀಕ್ಷೆಯನ್ನು ಎದುರಿಸಿದನು?

ಯೆಹೋವನ ಆಜ್ಞೆಗೆ ವಿಧೇಯತೆ ತೋರಿಸುತ್ತಾ ಅಬ್ರಾಮನು, ಊರ್‌ ಪಟ್ಟಣದ ಸುಖಸೌಕರ್ಯಗಳಿಂದ ಕೂಡಿದ ಜೀವಿತವನ್ನು ಬಿಟ್ಟುಬಂದಿದ್ದನು. ತದನಂತರದ ವರ್ಷಗಳಲ್ಲಿ ಅವನು ಅನುಭವಿಸಿದ ಅನನುಕೂಲಗಳು, ಅವನು ಐಗುಪ್ತ ದೇಶದಲ್ಲಿ ಎದುರಿಸಿದ ನಂಬಿಕೆಯ ಪರೀಕ್ಷೆಗೆ ಕೇವಲ ಪೀಠಿಕೆಯಾಗಿದ್ದವು. ಬೈಬಲ್‌ ವೃತ್ತಾಂತವು ಹೇಳುವುದು: ‘ಈಗ ಆ ದೇಶದಲ್ಲಿ ಘೋರ ಕ್ಷಾಮವು ಉಂಟಾಯಿತು.’ ಈ ಸಮಯದಲ್ಲಿ, ತನ್ನ ಸನ್ನಿವೇಶದ ಕುರಿತು ಅಬ್ರಾಮನು ಎಷ್ಟು ಸುಲಭವಾಗಿ ಅಸಮಾಧಾನಪಡಬಹುದಿತ್ತು! ಅದಕ್ಕೆ ಬದಲಾಗಿ, ತನ್ನ ಕುಟುಂಬಕ್ಕೆ ಬೇಕಾದ ಒದಗಿಸುವಿಕೆಗಳನ್ನು ಮಾಡಲು ಅವನು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಂಡನು. “ಆ ದೇಶದಲ್ಲಿ ಘೋರ ಕ್ಷಾಮವಿದ್ದದರಿಂದ ಅಲ್ಲಿರದೆ, ಐಗುಪ್ತದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದು ಹೋದನು.” ಅಬ್ರಾಮನ ದೊಡ್ಡ ಮನೆವಾರ್ತೆಯು ಖಂಡಿತವಾಗಿಯೂ ಐಗುಪ್ತದಲ್ಲಿ ಎಲ್ಲರ ಗಮನವನ್ನು ಸೆಳೆಯಿತು. ಯೆಹೋವನು ತಾನು ವಾಗ್ದಾನಿಸಿದ್ದಂತೆ ಮಾಡಿ, ಅಬ್ರಾಮನನ್ನು ಅಪಾಯದಿಂದ ಸಂರಕ್ಷಿಸಲಿದ್ದನೋ?​—ಆದಿಕಾಂಡ 12:10; ವಿಮೋಚನಕಾಂಡ 16:​2, 3.

2, 3. (ಎ) ಅಬ್ರಾಮನು ತನ್ನ ಪತ್ನಿಯ ನಿಜ ಗುರುತನ್ನು ಏಕೆ ಮರೆಮಾಚಿದನು? (ಬಿ) ಸನ್ನಿವೇಶಕ್ಕೆ ಪ್ರತಿಕ್ರಿಯಿಸುತ್ತಿರುವಾಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ಹೇಗೆ ವ್ಯವಹರಿಸಿದನು?

2ಆದಿಕಾಂಡ 12:​11-13ರಲ್ಲಿ ನಾವು ಓದುವುದು: “ಅವನು ಐಗುಪ್ತದೇಶದ ಹತ್ತಿರಕ್ಕೆ ಬಂದಾಗ, ತನ್ನ ಹೆಂಡತಿಯಾದ ಸಾರಯಳಿಗೆ​—ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ; ಐಗುಪ್ತದೇಶದವರು ನಿನ್ನನ್ನು ಕಂಡು​—ಈಕೆಯು ಇವನ ಹೆಂಡತಿ ಎಂದು ನನ್ನನ್ನು ಕೊಂದು ನಿನ್ನನ್ನು ಉಳಿಸಾರು. ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು [“ದಯವಿಟ್ಟು,” NW] ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿಮಿತ್ತ ನನಗೆ ಹಿತವಾಗುವದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು ಎಂದು ಹೇಳಿದನು.” ಸಾರಯಳು 65ಕ್ಕಿಂತ ಹೆಚ್ಚು ಪ್ರಾಯದವಳಾಗಿದ್ದರೂ, ಈಗಲೂ ಅವಳು ಅತ್ಯಂತ ಸುಂದರಿಯಾಗಿ ಕಾಣುತ್ತಿದ್ದಳು. ಇದು ಅಬ್ರಾಮನ ಜೀವವನ್ನು ಅಪಾಯಕ್ಕೊಡ್ಡಿತು. * (ಆದಿಕಾಂಡ 12:​4, 5; 17:17) ಇನ್ನೂ ಪ್ರಾಮುಖ್ಯವಾಗಿ, ಯೆಹೋವನ ಉದ್ದೇಶಕ್ಕೆ ಸಂಬಂಧಿಸಿದ ವಿಷಯಗಳು ಅಪಾಯಕ್ಕೆ ಒಳಗಾಗಿದ್ದವು; ಏಕೆಂದರೆ ಅಬ್ರಾಮನ ಸಂತತಿಯ ಮೂಲಕವೇ ಭೂಮಿಯ ಎಲ್ಲ ಜನಾಂಗಗಳು ಆಶೀರ್ವಾದವನ್ನು ಪಡೆದುಕೊಳ್ಳುವವು ಎಂದು ಆತನು ಹೇಳಿದ್ದನು. (ಆದಿಕಾಂಡ 12:​2, 3, 7) ಅಷ್ಟರ ತನಕ ಅಬ್ರಾಮನಿಗೆ ಮಕ್ಕಳಿರಲಿಲ್ಲವಾದದರಿಂದ, ಅವನು ಜೀವಂತವಾಗಿ ಉಳಿಯುವುದು ತುಂಬ ಪ್ರಾಮುಖ್ಯವಾಗಿತ್ತು.

3 ಈ ಮುಂಚೆ ಅವರಿಬ್ಬರೂ ನಿರ್ಧರಿಸಿದ್ದಂತೆಯೇ, ಒಂದು ಉಪಾಯವನ್ನು ಬಳಸುವುದರ ಕುರಿತು ಅಬ್ರಾಮನು ತನ್ನ ಪತ್ನಿಯೊಂದಿಗೆ ಮಾತಾಡಿದನು; ತಾನು ಅಬ್ರಾಮನ ತಂಗಿಯಾಗಿದ್ದೇನೆಂದು ಸಾರಯಳು ಹೇಳಬೇಕಾಗಿತ್ತು. ಅವನಿಗೆ ಕುಲಪತಿಯ ಅಧಿಕಾರವಿದ್ದರೂ ಅವನು ತನ್ನ ಸ್ಥಾನವನ್ನು ದುರುಪಯೋಗಿಸಲಿಲ್ಲ, ಬದಲಾಗಿ ಅವಳ ಸಹಕಾರ ಹಾಗೂ ಬೆಂಬಲವನ್ನು ಕೇಳಿಕೊಂಡನು ಎಂಬುದನ್ನು ಗಮನಿಸಿರಿ. (ಆದಿಕಾಂಡ 12:​11-13; 20:13) ಹೀಗೆ ಮಾಡುವ ಮೂಲಕ ಅಬ್ರಾಮನು, ಪ್ರೀತಿಯಿಂದ ತಲೆತನವನ್ನು ನಡೆಸುವಂತೆ ಗಂಡಂದಿರಿಗಾಗಿ ಅತ್ಯುತ್ತಮ ಮಾದರಿಯನ್ನು ಇಟ್ಟನು, ಮತ್ತು ಪತಿಗೆ ಅಧೀನತೆ ತೋರಿಸುವ ಮೂಲಕ ಸಾರಯಳು ಇಂದು ಹೆಂಡತಿಯರಿಗೆ ಒಂದು ಮಾದರಿಯಾಗಿದ್ದಾಳೆ.​—ಎಫೆಸ 5:​23-28; ಕೊಲೊಸ್ಸೆ 4:6.

4. ತಮ್ಮ ಸಹೋದರರ ಜೀವಗಳು ಅಪಾಯದಲ್ಲಿರುವಾಗ, ಇಂದು ದೇವರ ನಂಬಿಗಸ್ತ ಸೇವಕರು ತಮ್ಮನ್ನು ಹೇಗೆ ನಡೆಸಿಕೊಳ್ಳತಕ್ಕದ್ದು?

4 ತಾನು ಅಬ್ರಾಮನ ತಂಗಿಯಾಗಿದ್ದೇನೆಂದು ಸಾರಯಳು ಹೇಳಸಾಧ್ಯವಿತ್ತು, ಏಕೆಂದರೆ ನಿಜವಾಗಿಯೂ ಅವಳು ಅವನ ಮಲತಂಗಿಯಾಗಿದ್ದಳು. (ಆದಿಕಾಂಡ 20:12) ಇದಲ್ಲದೆ, ಯಾರಿಗೆ ಹಕ್ಕಿಲ್ಲವೋ ಅಂತಹ ಜನರಿಗೆ ಮಾಹಿತಿಯನ್ನು ತಿಳಿಯಪಡಿಸುವ ಹಂಗು ಅಬ್ರಾಮನಿಗಿರಲಿಲ್ಲ. (ಮತ್ತಾಯ 7:6) ಆಧುನಿಕ ಸಮಯಗಳಲ್ಲಿ ದೇವರ ನಂಬಿಗಸ್ತ ಸೇವಕರು, ಪ್ರಾಮಾಣಿಕರಾಗಿರಬೇಕೆಂಬ ಬೈಬಲ್‌ ಆಜ್ಞೆಗೆ ಲಕ್ಷ್ಯಕೊಡುತ್ತಾರೆ. (ಇಬ್ರಿಯ 13:18) ಉದಾಹರಣೆಗೆ, ನ್ಯಾಯಸಭೆಯಲ್ಲಿ ಅವರೆಂದೂ ಸುಳ್ಳು ಪ್ರತಿಜ್ಞೆಯನ್ನು ಮಾಡುವುದಿಲ್ಲ. ಆದರೂ, ಹಿಂಸೆ ಅಥವಾ ಆಂತರಿಕ ಕಲಹಗಳಂಥ ಸಮಯದಲ್ಲಿ ತಮ್ಮ ಸಹೋದರರ ಶಾರೀರಿಕ ಅಥವಾ ಆತ್ಮಿಕ ಜೀವಗಳು ಅಪಾಯದಲ್ಲಿರುವಾಗ, “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರುವಂತೆ ಕೊಡಲ್ಪಟ್ಟ ಯೇಸುವಿನ ಸಲಹೆಯನ್ನು ಅವರು ಪಾಲಿಸುತ್ತಾರೆ.​—ಮತ್ತಾಯ 10:16; ನವೆಂಬರ್‌ 1, 1996ರ ಕಾವಲಿನಬುರುಜು ಪತ್ರಿಕೆಯ 18ನೆಯ ಪುಟದಲ್ಲಿರುವ 19ನೆಯ ಪ್ಯಾರಗ್ರಾಫನ್ನು ನೋಡಿರಿ.

5. ಸಾರಯಳು ಅಬ್ರಾಮನ ವಿನಂತಿಗೆ ಮನಃಪೂರ್ವಕವಾಗಿ ವಿಧೇಯಳಾಗಲು ಏಕೆ ಸಿದ್ಧಳಿದ್ದಳು?

5 ಅಬ್ರಾಮನ ವಿನಂತಿಗೆ ಸಾರಯಳು ಹೇಗೆ ಪ್ರತಿಕ್ರಿಯಿಸಿದಳು? ಅವಳಂಥ ಸ್ತ್ರೀಯರನ್ನು ಅಪೊಸ್ತಲ ಪೇತ್ರನು “ದೇವರ ಮೇಲೆ ನಿರೀಕ್ಷೆಯಿಟ್ಟ” ಸ್ತ್ರೀಯರೆಂದು ವರ್ಣಿಸುತ್ತಾನೆ. ಆದುದರಿಂದ, ಈ ಸನ್ನಿವೇಶದಲ್ಲಿ ಒಳಗೂಡಿರುವ ಆತ್ಮಿಕ ವಾದಾಂಶವನ್ನು ಸಾರಯಳು ಅರ್ಥಮಾಡಿಕೊಂಡಳು. ಅಷ್ಟುಮಾತ್ರವಲ್ಲ, ಅವಳು ತನ್ನ ಗಂಡನನ್ನು ಪ್ರೀತಿಸುತ್ತಿದ್ದಳು ಮತ್ತು ತುಂಬ ಗೌರವಿಸುತ್ತಿದ್ದಳು. ಹೀಗಿರುವುದರಿಂದ, ಸಾರಯಳು ‘ತನ್ನ ಗಂಡನಿಗೆ ಅಧೀನಳಾಗಿ,’ ತನ್ನ ವೈವಾಹಿಕ ಸ್ಥಿತಿಯನ್ನು ಮರೆಮಾಚುವ ಆಯ್ಕೆಯನ್ನು ಮಾಡಿದಳು. (1 ಪೇತ್ರ 3:5) ಹೀಗೆ ಮಾಡುವುದು ಅವಳನ್ನು ಅಪಾಯಗಳಿಗೆ ಒಡ್ಡಲಿತ್ತು ಎಂಬುದಂತೂ ಖಂಡಿತ. “ಅಬ್ರಾಮನು ಐಗುಪ್ತದೇಶಕ್ಕೆ ಬಂದಾಗ ಐಗುಪ್ತ್ಯರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿಯೆಂದರು. ಫರೋಹನ ಪ್ರಧಾನರು ಆಕೆಯನ್ನು ನೋಡಿ ಬಂದು ಅವನ ಮುಂದೆ ಹೊಗಳಲಾಗಿ ಫರೋಹನು ಆ ಸ್ತ್ರೀಯನ್ನು ಅರಮನೆಗೆ” ಕರೆತರುವಂತೆ ಮಾಡಿದನು.​—ಆದಿಕಾಂಡ 12:​14, 15.

ಯೆಹೋವನ ವಿಮೋಚನೆ

6, 7. ಅಬ್ರಾಮ ಮತ್ತು ಸಾರಯಳು ಯಾವ ಸಂಕಟಮಯ ಸನ್ನಿವೇಶದಲ್ಲಿ ಸಿಕ್ಕಿಕೊಂಡಿದ್ದರು, ಮತ್ತು ಯೆಹೋವನು ಸಾರಯಳನ್ನು ಹೇಗೆ ಕಾಪಾಡಿದನು?

6 ಇದು ಅಬ್ರಾಮ ಮತ್ತು ಸಾರಯಳನ್ನು ಎಷ್ಟು ಸಂಕಟಕ್ಕೆ ಗುರಿಪಡಿಸಿದ್ದಿರಬೇಕು! ಇನ್ನೇನು ಸಾರಯಳು ಫರೋಹನಿಂದ ಬಲಾತ್ಕರಿಸಲ್ಪಡಲಿದ್ದಾಳೋ ಎಂಬಂತೆ ತೋರಿತು. ಅಷ್ಟುಮಾತ್ರವಲ್ಲ, ಸಾರಯಳ ನಿಜ ವೈವಾಹಿಕ ಸ್ಥಿತಿಯ ಅರಿವಿಲ್ಲದವನಾದ ಫರೋಹನು, ಅಬ್ರಾಮನಿಗೆ ಧಾರಾಳವಾಗಿ ಉಡುಗೊರೆಗಳನ್ನು ನೀಡಿದನು. ಇದರಿಂದಾಗಿ ಅಬ್ರಾಮನಿಗೆ “ಕುರಿದನಗಳೂ ಗಂಡು ಹೆಣ್ಣು ಕತ್ತೆಗಳೂ ದಾಸದಾಸಿಯರೂ ಒಂಟೆಗಳೂ ದೊರೆತವು.” * (ಆದಿಕಾಂಡ 12:16) ಈ ಉಡುಗೊರೆಗಳನ್ನು ನೋಡಿ ಅಬ್ರಾಮನಿಗೆ ಮನಸ್ಸಿನಲ್ಲಿ ಎಷ್ಟು ತಿರಸ್ಕಾರವುಂಟಾಗಿರಬೇಕು! ಆದರೆ ಸನ್ನಿವೇಶವು ತುಂಬ ನಿರೀಕ್ಷಾಹೀನವಾಗಿ ಕಂಡುಬಂದರೂ, ಯೆಹೋವನು ಅಬ್ರಾಮನ ಕೈಬಿಟ್ಟಿರಲಿಲ್ಲ.

7 “ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿಮಿತ್ತ ಬಹಳ ಉಪದ್ರವಗಳನ್ನು ಉಂಟುಮಾಡಿ ಬಾಧಿಸಿದನು.” (ಆದಿಕಾಂಡ 12:17) ಬಯಲುಪಡಿಸಲ್ಪಟ್ಟಿರದಂತಹ ಯಾವುದೋ ರೀತಿಯಲ್ಲಿ ಈ “ಉಪದ್ರವಗಳ” ಹಿಂದಿರುವ ನಿಜವಾದ ಕಾರಣವು ಫರೋಹನಿಗೆ ಬಹಿರಂಗಪಡಿಸಲ್ಪಟ್ಟಿತು. ಆ ಕೂಡಲೆ ಅವನು ಹೀಗೆ ಪ್ರತಿಕ್ರಿಯಿಸಿದನು: “ಆಗ ಫರೋಹನು ಅಬ್ರಾಮನನ್ನು ಕರಿಸಿ​—ಯಾಕೆ ಹೀಗೆ ಮಾಡಿದೆ? ಹೆಂಡತಿಯೆಂದು ಯಾಕೆ ನನಗೆ ತಿಳಿಸಲಿಲ್ಲ? ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು ಎಂದು ಹೇಳಿ ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನು ಅವನಿಗಿದ್ದ ಸರ್ವಸ್ವಸಹಿತವಾಗಿ ಸಾಗಕಳುಹಿಸಿದರು.”​—ಆದಿಕಾಂಡ 12:​18-20; ಕೀರ್ತನೆ 105:​14, 15.

8. ಇಂದಿನ ಕ್ರೈಸ್ತರಿಗೆ ಯೆಹೋವನು ಯಾವ ರೀತಿಯ ಸಂರಕ್ಷಣೆಯನ್ನು ವಾಗ್ದಾನಿಸುತ್ತಾನೆ?

8 ಇಂದು, ಮರಣ, ದುಷ್ಕೃತ್ಯ, ಕ್ಷಾಮ ಅಥವಾ ನೈಸರ್ಗಿಕ ವಿಪತ್ತಿನ ಪರಿಣಾಮಗಳಿಂದ ಯೆಹೋವನು ತನ್ನ ಸೇವಕರನ್ನು ಸಂರಕ್ಷಿಸುವ ಖಾತ್ರಿಯನ್ನು ನೀಡುವುದಿಲ್ಲ. ಆದರೆ ನಮ್ಮ ಆತ್ಮಿಕತೆಗೆ ಅಪಾಯವೊಡ್ಡಸಾಧ್ಯವಿರುವ ವಿಷಯಗಳಿಂದ ಯೆಹೋವನು ಯಾವಾಗಲೂ ರಕ್ಷಣೆಯನ್ನು ಒದಗಿಸುವನು ಎಂಬ ವಾಗ್ದಾನವು ನಮಗೆ ಮಾಡಲ್ಪಟ್ಟಿದೆ. (ಕೀರ್ತನೆ 91:​1-4) ಮೊದಲಾಗಿ ತನ್ನ ವಾಕ್ಯ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ನಮಗೆ ಸಮಯೋಚಿತ ಎಚ್ಚರಿಕೆಗಳನ್ನು ಕೊಡುವ ಮೂಲಕ ಆತನು ಅದನ್ನು ಮಾಡುತ್ತಾನೆ. (ಮತ್ತಾಯ 24:45) ಹಿಂಸೆಯಿಂದ ಬರುವ ಮರಣದ ಬೆದರಿಕೆಯ ಕುರಿತಾಗಿ ಏನು? ಕೆಲವು ವ್ಯಕ್ತಿಗಳು ಸಾಯುವಂತೆ ಅನುಮತಿಸಲ್ಪಡುವುದಾದರೂ, ತನ್ನ ಜನರೆಲ್ಲರೂ ಸಂಪೂರ್ಣವಾಗಿ ನಿರ್ಮೂಲರಾಗುವಂತೆ ದೇವರು ಎಂದಿಗೂ ಅನುಮತಿಸುವುದಿಲ್ಲ. (ಕೀರ್ತನೆ 116:15) ಮತ್ತು ಮರಣವು ಕೆಲವು ನಂಬಿಗಸ್ತರನ್ನು ಬಲಿತೆಗೆದುಕೊಳ್ಳುವುದಾದರೂ, ಅವರು ಖಂಡಿತವಾಗಿಯೂ ಪುನರುತ್ಥಾನಗೊಳಿಸಲ್ಪಡುತ್ತಾರೆ ಎಂಬ ಖಾತ್ರಿ ನಮಗಿರಬಲ್ಲದು.​—ಯೋಹಾನ 5:​28, 29.

ಶಾಂತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ತ್ಯಾಗಮಾಡುವುದು

9. ಕಾನಾನಿನಲ್ಲಿ ಅಬ್ರಾಮನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತಾ ಇದ್ದನು ಎಂಬುದನ್ನು ಯಾವುದು ಸೂಚಿಸುತ್ತದೆ?

9 ಕಾನಾನ್‌ ದೇಶದ ಘೋರ ಕ್ಷಾಮವು ಕೊನೆಗೊಂಡ ಬಳಿಕ, “ಅಬ್ರಾಮನು ತನ್ನದನ್ನೆಲ್ಲಾ ತೆಗೆದುಕೊಂಡು ಹೆಂಡತಿಯನ್ನೂ ಲೋಟನನ್ನೂ ಸಂಗಡ ಕರಕೊಂಡು ಐಗುಪ್ತದೇಶವನ್ನು ಬಿಟ್ಟು ಕಾನಾನ್‌ದೇಶದ ದಕ್ಷಿಣಪ್ರಾಂತ್ಯಕ್ಕೆ [“ನೆಗೆಬ್‌ಗೆ,” NW] [ಯೆಹೂದದ ಪರ್ವತಗಳ ಅರೆಬಂಜರು ಕ್ಷೇತ್ರಕ್ಕೆ] ಏರಿ ಬಂದನು. ಅಬ್ರಾಮನು ಬಹು ಐಶ್ವರ್ಯವಂತನಾಗಿದ್ದನು; ಅವನಿಗೆ ಪಶುಗಳೂ ಬೆಳ್ಳಿಬಂಗಾರವು ಇದ್ದವು.” (ಆದಿಕಾಂಡ 13:​1, 2) ಹೀಗೆ, ಸ್ಥಳಿಕ ನಿವಾಸಿಗಳು ಅವನನ್ನು ಅಧಿಕಾರ ಮತ್ತು ಪ್ರಭಾವವುಳ್ಳ ಒಬ್ಬ ಬಲಿಷ್ಠ ಮಹಾಪ್ರಭುವಾಗಿ ಪರಿಗಣಿಸಲಿದ್ದರು. (ಆದಿಕಾಂಡ 23:6) ಅಬ್ರಾಮನಿಗೆ ಅಲ್ಲಿಯೇ ನೆಲೆಯೂರುವ ಹಾಗೂ ಕಾನಾನ್ಯರ ರಾಜಕೀಯದಲ್ಲಿ ಒಳಗೂಡುವ ಬಯಕೆ ಇರಲಿಲ್ಲ. ಅದಕ್ಕೆ ಬದಲಾಗಿ, ‘ಅವನು ದಕ್ಷಿಣದೇಶವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡುತ್ತಾ ಬೇತೇಲಿನ ವರೆಗೆ ಅಂದರೆ ಬೇತೇಲಿಗೂ ಆಯಿ ಎಂಬ ಊರಿಗೂ ನಡುವೆ ತಾನು ಪೂರ್ವದಲ್ಲಿ ಗುಡಾರಹಾಕಿಸಿದ್ದ ಕ್ಷೇತ್ರಕ್ಕೆ ತಿರಿಗಿ ಬಂದನು.’ ಎಂದಿನಂತೆ, ತಾನು ಹೋದಲ್ಲೆಲ್ಲ ಅಬ್ರಾಮನು ಯೆಹೋವನ ಆರಾಧನೆಗೆ ಆದ್ಯತೆಯನ್ನು ನೀಡಿದನು.​—ಆದಿಕಾಂಡ 13:​3, 4.

10. ಅಬ್ರಾಮ ಮತ್ತು ಲೋಟರ ದನಕಾಯುವವರ ಮಧ್ಯೆ ಯಾವ ಸಮಸ್ಯೆಯು ಉಂಟಾಯಿತು, ಹಾಗೂ ಆ ಕೂಡಲೆ ಅದನ್ನು ಬಗೆಹರಿಸುವುದು ಏಕೆ ಪ್ರಾಮುಖ್ಯವಾಗಿತ್ತು?

10 “ಅವನ [ಅಬ್ರಾಮನ] ಜೊತೆಯಲ್ಲಿದ್ದ ಲೋಟನಿಗೂ ಕುರಿದನಗುಡಾರಗಳಿದ್ದವು. ಆ ಸ್ಥಳವು ಅವರಿಬ್ಬರ ಜೀವನಕ್ಕೆ ಸಾಲದೆ ಹೋಯಿತು. ಅವರಿಬ್ಬರ ಆಸ್ತಿ ಬಹಳವಾದದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರುವದು ಅಸಾಧ್ಯವಾಯಿತು. ಇದರಿಂದ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಹುಟ್ಟಿತು. ಇದಲ್ಲದೆ ಕಾನಾನ್ಯರೂ ಪೆರಿಜೀಯರೂ ಆ ಕಾಲದಲ್ಲಿ ದೇಶದೊಳಗೆ ಇದ್ದರು.” (ಆದಿಕಾಂಡ 13:​5-7) ಅಬ್ರಾಮನ ದನಕುರಿಗಳನ್ನು ಮತ್ತು ಲೋಟನ ದನಕುರಿಗಳನ್ನು ಪೋಷಿಸಲು ಸಾಕಷ್ಟು ನೀರು ಮತ್ತು ಮೇವನ್ನು ಆ ಪ್ರದೇಶವು ಒದಗಿಸಲಿಲ್ಲ. ಹೀಗೆ, ಅಬ್ರಾಮನ ದನಕಾಯುವವರು ಮತ್ತು ಲೋಟನ ದನಕಾಯುವವರ ನಡುವೆ ದ್ವೇಷ ಮತ್ತು ಅಸಮಾಧಾನವು ಬೆಳೆಯಿತು. ಅಂತಹ ಚಿಕ್ಕಪುಟ್ಟ ಜಗಳಗಳು ಸತ್ಯ ದೇವರ ಆರಾಧಕರಿಗೆ ಶೋಭಿಸುತ್ತಿರಲಿಲ್ಲ. ಇದೇ ರೀತಿ ಕಾದಾಟವು ಮುಂದುವರಿಯುತ್ತಿದ್ದಲ್ಲಿ, ಶಾಶ್ವತವಾದ ಬಿರುಕು ಉಂಟಾಗಲಿತ್ತು. ವಿಷಯವು ಹೀಗಿರುವಾಗ, ಅಬ್ರಾಮನು ಈ ಸನ್ನಿವೇಶವನ್ನು ಹೇಗೆ ನಿರ್ವಹಿಸಿದನು? ಲೋಟನ ತಂದೆಯು ಮರಣಪಟ್ಟ ಬಳಿಕ ಅಬ್ರಾಮನು ಲೋಟನನ್ನು ದತ್ತು ತೆಗೆದುಕೊಂಡಿದ್ದನು; ಬಹುಶಃ ಅವನನ್ನು ತನ್ನ ಸ್ವಂತ ಕುಟುಂಬದ ಭಾಗವಾಗಿ ಬೆಳೆಸಿದ್ದನು. ಈ ಇಬ್ಬರಲ್ಲಿ ಅಬ್ರಾಮನೇ ಹಿರಿಯನಾಗಿದ್ದದ್ದರಿಂದ, ಅತ್ಯುತ್ತಮ ಪಾಲನ್ನು ತೆಗೆದುಕೊಳ್ಳಲು ಅವನು ಅರ್ಹನಾಗಿರಲಿಲ್ಲವೋ?

11, 12. ಯಾವ ಉದಾರವಾದ ಆಯ್ಕೆಯನ್ನು ಅಬ್ರಾಮನು ಲೋಟನ ಮುಂದಿಟ್ಟನು, ಮತ್ತು ಲೋಟನ ಆಯ್ಕೆಯು ಅವಿವೇಕಯುತವಾಗಿತ್ತೇಕೆ?

11 ಆದರೆ “ಅಬ್ರಾಮನು ಲೋಟನಿಗೆ​—ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ. ದೇಶವೆಲ್ಲಾ ನಿನ್ನೆದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು ಎಂದು ಹೇಳಿದನು.” ಯಾವುದು “ಪ್ಯಾಲೆಸ್ಟಿನ್‌ನ ವೀಕ್ಷಣ ಸ್ಥಾನಗಳಲ್ಲಿ ಒಂದು” ಎಂದು ಕರೆಯಲ್ಪಟ್ಟಿದೆಯೋ ಅದು ಬೇತೇಲಿನ ಬಳಿಯಿದೆ. ಬಹುಶಃ ಇಲ್ಲಿಂದಲೇ “ಲೋಟನು ಕಣ್ಣೆತ್ತಿ ನೋಡಲಾಗಿ ಯೊರ್ದನ್‌ ಹೊಳೆಯ ಸುತ್ತಲಿನ ಪ್ರದೇಶವು ಚೋಗರೂರಿನ ತನಕ ಎಲ್ಲಾ ಕಡೆಯಲ್ಲಿಯೂ ನೀರಾವರಿಯ ಸ್ಥಳವೆಂದು ತಿಳುಕೊಂಡನು. ಯೆಹೋವನು ಸೊದೋಮ್‌ ಗೊಮೋರ ಪಟ್ಟಣಗಳನ್ನು ನಾಶಮಾಡುವದಕ್ಕಿಂತ ಮುಂಚೆ ಆ ಸೀಮೆಯು ಯೆಹೋವನ ವನದಂತೆಯೂ ಐಗುಪ್ತದೇಶದಂತೆಯೂ ನೀರಾವರಿಯಾಗಿತ್ತು.”​—ಆದಿಕಾಂಡ 13:​8-10.

12 ಲೋಟನು ‘ನೀತಿವಂತನು’ ಎಂದು ಬೈಬಲ್‌ ವರ್ಣಿಸುತ್ತದಾದರೂ, ಯಾವುದೋ ಕಾರಣದಿಂದ ಅವನು ಈ ವಿಷಯದಲ್ಲಿ ಅಬ್ರಾಮನಿಗೆ ಅಧೀನನಾಗಲಿಲ್ಲ, ಮತ್ತು ಅವನು ಆ ಹಿರೀಪುರುಷನ ಸಲಹೆಯನ್ನು ಯಾಚಿಸಲಿಲ್ಲ. (2 ಪೇತ್ರ 2:7) “ಲೋಟನು ಯೊರ್ದನ್‌ ಹೊಳೆಯ ಸುತ್ತಣ ಪ್ರದೇಶವನ್ನು ಆದುಕೊಂಡು ಮೂಡಣ ಕಡೆಗೆ ಹೊರಟನು. ಹೀಗೆ ಅವರಿಬ್ಬರು ಪ್ರತ್ಯೇಕವಾದರು; ಅಬ್ರಾಮನು ಕಾನಾನ್‌ದೇಶದಲ್ಲಿ ವಾಸಮಾಡಿದನು; ಲೋಟನು ಯೊರ್ದನ್‌ ಹೊಳೆಯ ಸುತ್ತಣ ಊರುಗಳಲ್ಲಿ ಗುಡಾರಹಾಕಿಸಿ ವಸತಿ ಮಾಡುತ್ತಾ ಸೊದೋಮಿಗೆ ಬಂದನು.” (ಆದಿಕಾಂಡ 13:​11, 12) ಸೊದೋಮ್‌ ತುಂಬ ಸಮೃದ್ಧ ಸ್ಥಳವಾಗಿದ್ದು, ಅಲ್ಲಿ ಬಹಳಷ್ಟು ಪ್ರಾಪಂಚಿಕ ಲಾಭವನ್ನು ಪಡೆಯುವ ಅವಕಾಶವಿತ್ತು. (ಯೆಹೆಜ್ಕೇಲ 16:​49, 50) ಪ್ರಾಪಂಚಿಕ ದೃಷ್ಟಿಕೋನದಿಂದ ನೋಡುವಾಗ ಲೋಟನ ಆಯ್ಕೆಯು ವಿವೇಕಯುತವಾಗಿ ಕಂಡುಬಂದಿರಬಹುದಾದರೂ, ಆತ್ಮಿಕ ದೃಷ್ಟಿಕೋನದಿಂದ ನೋಡುವಾಗ ಅದು ಅವಿವೇಕಯುತ ಆಯ್ಕೆಯಾಗಿತ್ತು. ಏಕೆ? ಏಕೆಂದರೆ, ಆದಿಕಾಂಡ 13:13 ಹೇಳುವಂತೆ “ಸೊದೋಮ್‌ ಪಟ್ಟಣದವರು ದುಷ್ಟರೂ ಯೆಹೋವನಿಗೆ ಮಹಾಪರಾಧಿಗಳೂ ಆಗಿದ್ದರು.” ಅಲ್ಲಿಗೆ ಸ್ಥಳಾಂತರಿಸುವ ಲೋಟನ ನಿರ್ಧಾರವು, ಕಾಲಕ್ರಮೇಣ ಅವನ ಕುಟುಂಬಕ್ಕೆ ಅತ್ಯಧಿಕ ದುಃಖವನ್ನು ಉಂಟುಮಾಡಲಿತ್ತು.

13. ಹಣಕಾಸಿನ ಜಗಳವೊಂದರಲ್ಲಿ ಒಳಗೂಡಬಹುದಾದ ಕ್ರೈಸ್ತರಿಗೆ ಅಬ್ರಾಮನ ಮಾದರಿಯು ಹೇಗೆ ಸಹಾಯಕರವಾದದ್ದಾಗಿದೆ?

13 ಆದರೂ, ಕಾಲಕ್ರಮೇಣ ತನ್ನ ಸಂತತಿಯು ಇಡೀ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದು ಎಂಬ ಯೆಹೋವನ ವಾಗ್ದಾನದಲ್ಲಿ ಅಬ್ರಾಮನು ನಂಬಿಕೆಯಿಟ್ಟನು; ಆ ದೇಶದ ಚಿಕ್ಕ ಭಾಗಕ್ಕಾಗಿ ಅವನು ವಾಗ್ವಾದಮಾಡಲಿಲ್ಲ. ಉದಾರಭಾವದಿಂದ, 1 ಕೊರಿಂಥ 10:24ರಲ್ಲಿ ತಿಳಿಸಲ್ಪಟ್ಟ ಮೂಲತತ್ವಕ್ಕೆ ಹೊಂದಿಕೆಯಲ್ಲಿ ಅವನು ಕ್ರಿಯೆಗೈದನು. ಆ ವಚನವು ಹೀಗೆ ಹೇಳುತ್ತದೆ: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” ಒಬ್ಬ ಜೊತೆ ವಿಶ್ವಾಸಿಯೊಂದಿಗೆ ಯಾರು ಹಣಕಾಸಿನ ಜಗಳದಲ್ಲಿ ಒಳಗೂಡುತ್ತಿರಬಹುದೋ ಅಂಥವರಿಗೆ ಇದು ಒಂದು ಒಳ್ಳೆಯ ಜ್ಞಾಪನವಾಗಿದೆ. ಮತ್ತಾಯ 18:​15-17ರಲ್ಲಿರುವ ಸಲಹೆಯನ್ನು ಅನುಸರಿಸುವುದರ ಬದಲು, ಕೆಲವರು ತಮ್ಮ ಸಹೋದರರನ್ನು ಕೋರ್ಟಿಗೆ ಕರೆದೊಯ್ದಿದ್ದಾರೆ. (1 ಕೊರಿಂಥ 6:​1, 7) ಯೆಹೋವನ ಹೆಸರಿಗೆ ಕಳಂಕವನ್ನು ತರುವುದು ಅಥವಾ ಕ್ರೈಸ್ತ ಸಭೆಯ ಶಾಂತಿಗೆ ಭಂಗವನ್ನು ಉಂಟುಮಾಡುವುದರ ಬದಲು, ಹಣಕಾಸಿನ ನಷ್ಟವನ್ನು ಅನುಭವಿಸುವುದೇ ಲೇಸು ಎಂಬುದನ್ನು ಅಬ್ರಾಮನ ಮಾದರಿಯು ತೋರಿಸುತ್ತದೆ.​—ಯಾಕೋಬ 3:18.

14. ತನ್ನ ಉದಾರ ಮನೋಭಾವಕ್ಕಾಗಿ ಅಬ್ರಾಮನು ಹೇಗೆ ಆಶೀರ್ವದಿಸಲ್ಪಡಲಿದ್ದನು?

14 ತನ್ನ ಉದಾರ ಮನೋಭಾವಕ್ಕಾಗಿ ಅಬ್ರಾಮನು ಆಶೀರ್ವದಿಸಲ್ಪಡಲಿದ್ದನು. ದೇವರು ಹೇಳಿದ್ದು: “ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂಮಿಯಲ್ಲಿರುವ ಧೂಳನ್ನು ಲೆಕ್ಕಮಾಡುವದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಲಾದೀತು.” ಮಕ್ಕಳಿರದಿದ್ದಂತಹ ಅಬ್ರಾಮನಿಗೆ ಈ ಪ್ರಕಟನೆಯು ಎಷ್ಟು ಉತ್ತೇಜನದಾಯಕವಾಗಿದ್ದಿರಬೇಕು! ತದನಂತರ ದೇವರು ಆಜ್ಞಾಪಿಸಿದ್ದು: “ನೀನೆದ್ದು ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು.” (ಆದಿಕಾಂಡ 13:​16, 17) ಒಂದು ಪಟ್ಟಣದ ಸುಖಸೌಕರ್ಯದ ಪರಿಸ್ಥಿತಿಗಳಲ್ಲಿ ನೆಲೆಯೂರಲು ಅಬ್ರಾಮನಿಗೆ ಖಂಡಿತವಾಗಿಯೂ ಅನುಮತಿಯಿರಲಿಲ್ಲ. ಏಕೆಂದರೆ ಅವನು ಕಾನಾನ್ಯರಿಂದ ಪ್ರತ್ಯೇಕವಾಗಿ ಉಳಿಯಬೇಕಿತ್ತು. ತದ್ರೀತಿಯಲ್ಲಿ ಇಂದು ಕ್ರೈಸ್ತರು ಲೋಕದಿಂದ ಪ್ರತ್ಯೇಕವಾಗಿ ಉಳಿಯಬೇಕು. ತಾವು ಇತರರಿಗಿಂತ ಶ್ರೇಷ್ಠರಾಗಿದ್ದೇವೆಂದು ಅವರು ನೆನಸುವುದಿಲ್ಲವಾದರೂ, ಅಶಾಸ್ತ್ರೀಯವಾದ ನಡತೆಯಲ್ಲಿ ಒಳಗೂಡುವಂತೆ ತಮ್ಮನ್ನು ಪ್ರಚೋದಿಸಬಹುದಾದ ಯಾವುದೇ ವ್ಯಕ್ತಿಯೊಂದಿಗೆ ಅವರು ನಿಕಟ ಸಹವಾಸವನ್ನು ಬೆಳೆಸುವುದಿಲ್ಲ.​—1 ಪೇತ್ರ 4:​3, 4.

15. (ಎ) ಅಬ್ರಾಮನ ಪ್ರಯಾಣಗಳಿಗೆ ಯಾವ ವಿಶೇಷತೆಯು ಇದ್ದಿರಬಹುದು? (ಬಿ) ಇಂದಿನ ಕ್ರೈಸ್ತ ಕುಟುಂಬಗಳಿಗೆ ಅಬ್ರಾಮನು ಯಾವ ಮಾದರಿಯನ್ನು ಇಟ್ಟನು?

15 ಬೈಬಲ್‌ ಕಾಲಗಳಲ್ಲಿ, ಒಬ್ಬ ವ್ಯಕ್ತಿಯು ಒಂದು ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮೊದಲು ಅವನು ಅದನ್ನು ಪರೀಕ್ಷಿಸಿ ನೋಡಬೇಕಾಗಿತ್ತು. ಹೀಗೆ, ಎಲ್ಲಾ ಕಡೆಯೂ ತಿರುಗಾಡಿ ನೋಡುವುದು, ಒಂದಲ್ಲ ಒಂದು ದಿನ ಈ ದೇಶವು ಅಬ್ರಾಮನ ಸಂತಾನಕ್ಕೆ ಸೇರುವುದು ಎಂಬ ಸತತ ಜ್ಞಾಪನದೋಪಾದಿ ಕಾರ್ಯನಡಿಸಿದ್ದಿರಬೇಕು. ವಿಧೇಯತೆಯಿಂದ, “ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರಹಾಕಿಸಿಕೊಳ್ಳುತ್ತಾ ಹೆಬ್ರೋನಿನಲ್ಲಿರುವ ಮಮ್ರೆ ತೋಪಿಗೆ ಬಂದು ಅಲ್ಲೇ ವಾಸಮಾಡಿಕೊಂಡು ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಿಸಿದನು.” (ಆದಿಕಾಂಡ 13:18) ಈ ರೀತಿಯಲ್ಲಿ, ತಾನು ಆರಾಧನೆಗೆ ನೀಡಿದ ಆದ್ಯತೆಯನ್ನು ಅಬ್ರಾಮನು ಪುನಃ ಒಮ್ಮೆ ವ್ಯಕ್ತಪಡಿಸಿದನು. ನಿಮ್ಮ ಕುಟುಂಬದಲ್ಲಿ ಕುಟುಂಬ ಅಭ್ಯಾಸ, ಕುಟುಂಬದ ಪ್ರಾರ್ಥನೆ ಮತ್ತು ಕೂಟದ ಹಾಜರಿಗೆ ಆದ್ಯತೆಯು ನೀಡಲ್ಪಟ್ಟಿದೆಯೋ?

ಶತ್ರುಗಳಿಂದ ದಾಳಿಗಳು

16. (ಎ) ಆದಿಕಾಂಡ 14:1ರ ಆರಂಭದ ಮಾತುಗಳು ಏಕೆ ಭಯಸೂಚಕ ಶೈಲಿಯಲ್ಲಿವೆ? (ಬಿ) ಮೂಡಲ ಕಡೆಯಿಂದ ಬಂದ ಆ ನಾಲ್ಕು ಮಂದಿ ಅರಸರ ದಾಳಿಗೆ ಕಾರಣವೇನಾಗಿತ್ತು?

16 ‘ಆ ದಿವಸಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, * ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು ಯುದ್ಧಮಾಡಿದರು.’ ಮೂಲ ಹೀಬ್ರು ಭಾಷೆಯಲ್ಲಿ ಈ ವಚನವು ಭಯಸೂಚಕ ಶೈಲಿಯ ಅಭಿವ್ಯಕ್ತಿಯಿಂದ ಆರಂಭವಾಗಿದ್ದು, ‘ಆಶೀರ್ವಾದದಲ್ಲಿ ಕೊನೆಗೊಳ್ಳುವ ಒಂದು ಪರೀಕ್ಷೆಯ ಕಾಲಾವಧಿಯನ್ನು’ ಸೂಚಿಸುತ್ತದೆ. (ಆದಿಕಾಂಡ 14:​1, NW ಪಾದಟಿಪ್ಪಣಿ) ಮೂಡಲ ಕಡೆಯಿಂದ ಬಂದ ಈ ನಾಲ್ಕು ಮಂದಿ ಅರಸರು ಮತ್ತು ಅವರ ಸೈನ್ಯಗಳು ಕಾನಾನ್‌ ದೇಶದ ಮೇಲೆ ಧ್ವಂಸಕರ ರೀತಿಯಲ್ಲಿ ದಾಳಿಮಾಡಿದಾಗ, ಆ ಪರೀಕ್ಷೆಯು ಆರಂಭವಾಯಿತು. ಅವರ ಹೇತುವೇನಾಗಿತ್ತು? ಸೊದೋಮ್‌, ಗೊಮೋರ, ಅದ್ಮಾಹ, ಚೆಬೋಯೀಮ್‌, ಬೇಲಗ್‌ ಎಂಬ ಐದು ಪಟ್ಟಣಗಳ ದಂಗೆಯನ್ನು ಅಡಗಿಸುವುದೇ ಆಗಿತ್ತು. ಈ ಐದು ಪಟ್ಟಣಗಳನ್ನು ಸೋಲಿಸುತ್ತಾ, ಈ ನಾಲ್ವರು ಅರಸರು ‘ಲವಣಸಮುದ್ರವಾಗಿರುವ ಸಿದ್ದೀಮ್‌ ತಗ್ಗಿನೊಳಗೆ ಕೂಡಿಬಂದರು.’ ಲೋಟನು ಮತ್ತು ಅವನ ಕುಟುಂಬವು ಸಮೀಪದಲ್ಲೇ ವಾಸಿಸುತ್ತಿತ್ತು.​—ಆದಿಕಾಂಡ 14:​3-7.

17. ಲೋಟನು ಸೆರೆಹಿಡಿದೊಯ್ಯಲ್ಪಟ್ಟದ್ದು ಅಬ್ರಾಮನಿಗೆ ನಂಬಿಕೆಯ ಒಂದು ಪರೀಕ್ಷೆಯಾಗಿತ್ತೇಕೆ?

17 ಕಾನಾನ್ಯ ಅರಸರು ದಾಳಿಮಾಡುತ್ತಿದ್ದವರನ್ನು ಪ್ರತಿರೋಧಿಸಲು ಘೋರವಾಗಿ ಕಾದಾಡಿದರೂ, ಅವಮಾನಕರ ರೀತಿಯಲ್ಲಿ ಸೋಲನ್ನು ಅನುಭವಿಸಿದರು. “ಗೆದ್ದವರು ಸೊದೋಮ್‌ ಗೊಮೋರ ಪಟ್ಟಣಗಳನ್ನು ಸೂರೆಮಾಡಿ ಅವುಗಳಲ್ಲಿದ್ದ ಎಲ್ಲಾ ಆಸ್ತಿಯನ್ನೂ ದವಸವನ್ನೂ ತೆಗೆದುಕೊಂಡು ಹೋದರು. ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.” ಈ ವಿನಾಶಕರ ಘಟನೆಗಳ ಸುದ್ದಿಯು ಅತಿ ಬೇಗನೆ ಅಬ್ರಾಮನಿಗೆ ತಲಪಿತು: “ತಪ್ಪಿಸಿಕೊಂಡವನೊಬ್ಬನು ಇಬ್ರಿಯನಾದ ಅಬ್ರಾಮನ ಬಳಿಗೆ ಬಂದು ಇದನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆಯನು ಎಷ್ಕೋಲ ಆನೇರರಿಗೆ ಸಹೋದರನು; ಇವರಿಬ್ಬರಿಗೂ ಅಬ್ರಾಮನಿಗೂ ಒಡಂಬಡಿಕೆಯಿತ್ತು. ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು” ಕೇಳಿಸಿಕೊಂಡನು. (ಆದಿಕಾಂಡ 14:​8-14) ನಂಬಿಕೆಯ ಎಂತಹ ಪರೀಕ್ಷೆ! ತನ್ನ ಸೋದರಳಿಯನು ದೇಶದ ಅತ್ಯುತ್ತಮ ಭಾಗವನ್ನು ತೆಗೆದುಕೊಂಡದ್ದಕ್ಕಾಗಿ ಅಬ್ರಾಮನು ಅಸಮಾಧಾನವನ್ನು ಬೆಳೆಸಿಕೊಂಡಿದ್ದನೋ? ದಾಳಿಮಾಡಿದಂತಹ ಈ ಜನರು ಅವನ ಸ್ವದೇಶವಾದ ಶಿನಾರಿನಿಂದ ಬಂದವರಾಗಿದ್ದರು ಎಂಬುದು ಸಹ ನೆನಪಿರಲಿ. ಅವರ ವಿರುದ್ಧ ಹೋರಾಟಕ್ಕಿಳಿಯುವುದು, ಅವನು ಸ್ವದೇಶಕ್ಕೆ ಹೋಗುವ ಯಾವುದೇ ಸಾಧ್ಯತೆಯನ್ನು ಹಾಳುಮಾಡಸಾಧ್ಯವಿತ್ತು. ಅಷ್ಟುಮಾತ್ರವಲ್ಲ, ಕಾನಾನಿನ ಸಂಯುಕ್ತ ಸೈನ್ಯಗಳೇ ಸೋಲಿಸಲು ಅಶಕ್ತವಾಗಿದ್ದಂತಹ ಸೈನ್ಯದ ವಿರುದ್ಧ ಅಬ್ರಾಮನು ಏನು ಮಾಡಸಾಧ್ಯವಿತ್ತು?

18, 19. (ಎ) ಅಬ್ರಾಮನು ಲೋಟನನ್ನು ಹೇಗೆ ರಕ್ಷಿಸಲು ಶಕ್ತನಾದನು? (ಬಿ) ವಿಜಯಕ್ಕಾಗಿ ಕೀರ್ತಿಯು ಯಾರಿಗೆ ಸಲ್ಲಿಸಲ್ಪಟ್ಟಿತು?

18 ಪುನಃ ಅಬ್ರಾಮನು ಯೆಹೋವನಲ್ಲಿ ತನ್ನ ಪೂರ್ಣ ಭರವಸೆಯನ್ನು ಇಟ್ಟನು. “ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನ ವರೆಗೆ ಹಿಂದಟ್ಟಿದನು. ಆಗ ಅವನು ರಾತ್ರಿವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗ ಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು ಹೊಡೆದು ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಹಿಂದಟ್ಟಿದನು. ರಾಜರು ಅಪಹರಿಸಿದ ಎಲ್ಲಾ ವಸ್ತುಗಳನ್ನು ಅವನು ತೆಗೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ ಸೆರೆಯಲ್ಲಿದ್ದ ಸ್ತ್ರೀಯರನ್ನೂ ಮಿಕ್ಕಾದವರನ್ನೂ ತೆಗೆದುಕೊಂಡು ಬಂದನು.” (ಆದಿಕಾಂಡ 14:​14-16) ಅಬ್ರಾಮನು ಯೆಹೋವನಲ್ಲಿ ಬಲವಾದ ನಂಬಿಕೆಯನ್ನು ತೋರಿಸುತ್ತಾ, ಲೋಟನನ್ನೂ ಅವನ ಕುಟುಂಬವನ್ನೂ ಬಿಡಿಸಿಕೊಂಡು, ತನ್ನ ಸೈನ್ಯಕ್ಕಿಂತಲೂ ಅತ್ಯಧಿಕವಾಗಿದ್ದ ಶತ್ರು ಸೈನ್ಯವನ್ನು ಸೋಲಿಸಿ ಜಯವನ್ನು ಪಡೆದುಕೊಂಡನು. ಈಗ ಅಬ್ರಾಮನು ಸಾಲೇಮಿನ ಅರಸನಾದ ಮೆಲ್ಕೀಚೆದೆಕನನ್ನು ಎದುರುಗೊಂಡನು. “ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದು ಅಬ್ರಾಮನನ್ನು ಆಶೀರ್ವದಿಸಿ​—ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ; ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು.”​—ಆದಿಕಾಂಡ 14:​18-20.

19 ಹೌದು, ವಿಜಯವು ಯೆಹೋವನಿಗೆ ಸೇರಿದ್ದಾಗಿದೆ. ತನ್ನ ನಂಬಿಕೆಯ ಕಾರಣ ಅಬ್ರಾಮನು ಪುನಃ ಯೆಹೋವನ ವಿಮೋಚನೆಯನ್ನು ಅನುಭವಿಸಿದನು. ಇಂದು ದೇವಜನರು ಅಕ್ಷರಾರ್ಥಕವಾದ ಯುದ್ಧದಲ್ಲಿ ಒಳಗೂಡುವುದಿಲ್ಲವಾದರೂ, ಅವರು ಅನೇಕ ಪರೀಕ್ಷೆಗಳು ಹಾಗೂ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. ಅವುಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ಅಬ್ರಾಮನ ಮಾದರಿಯು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ನಮ್ಮ ಮುಂದಿನ ಲೇಖನವು ತೋರಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 2 ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟದ್ದು) ಎಂಬ ಪುಸ್ತಕಕ್ಕನುಸಾರ, “ಒಬ್ಬ ಸುಂದರ ಸ್ತ್ರೀಯನ್ನು ಬಲಾತ್ಕಾರವಾಗಿ ಹಿಡಿದು, ಅವಳ ಗಂಡನನ್ನು ಕೊಲ್ಲುವಂತೆ ಶಸ್ತ್ರಸಜ್ಜಿತ ಪುರುಷರನ್ನು ನೇಮಿಸಿದ ಒಬ್ಬ ಫರೋಹನ ಕುರಿತು ಒಂದು ಪುರಾತನ ಪಪೈರಸ್‌ ತಿಳಿಸುತ್ತದೆ.” ಆದುದರಿಂದ ಅಬ್ರಾಮನ ಭಯವು ಅತಿಶಯವಾದದ್ದೇನಲ್ಲ.

^ ಪ್ಯಾರ. 6 ಈ ಸಮಯದಲ್ಲಿ ಅಬ್ರಾಮನಿಗೆ ಕೊಡಲ್ಪಟ್ಟ ದಾಸಿಯರಲ್ಲಿ, ಸಮಯಾನಂತರ ಅಬ್ರಾಮನ ಉಪಪತ್ನಿಯಾಗಿ ಪರಿಣಮಿಸಿದ ಹಾಗರಳೂ ಇದ್ದಿರಬಹುದು.​—ಆದಿಕಾಂಡ 16:1.

^ ಪ್ಯಾರ. 16 ಏಲಾಮ್‌, ಶಿನಾರಿನಲ್ಲಿ ಅಂತಹ ಪ್ರಭಾವವನ್ನು ಎಂದೂ ಹೊಂದಿರಲಿಲ್ಲ ಮತ್ತು ಕೆದೊರ್ಲಗೋಮರನ ದಾಳಿಯ ಕುರಿತಾದ ವೃತ್ತಾಂತವು ಸುಳ್ಳಾಗಿದೆ ಎಂದು ಒಮ್ಮೆ ಟೀಕಾಕಾರರು ವಾದಿಸಿದರು. ಆದರೆ ಬೈಬಲ್‌ ವೃತ್ತಾಂತವನ್ನು ಬೆಂಬಲಿಸುವ ಪ್ರಾಕ್ತನಶಾಸ್ತ್ರದ ಪುರಾವೆಯ ಕುರಿತಾದ ಚರ್ಚೆಗಾಗಿ, ಜುಲೈ 1, 1989ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ 4-7ನೆಯ ಪುಟಗಳನ್ನು ನೋಡಿರಿ.

ನೀವು ಗಮನಿಸಿದಿರೋ?

• ಕಾನಾನ್‌ ದೇಶದಲ್ಲಿನ ಕ್ಷಾಮವು ಹೇಗೆ ಅಬ್ರಾಮನಿಗೆ ನಂಬಿಕೆಯ ಒಂದು ಪರೀಕ್ಷೆಯಾಗಿ ಪರಿಣಮಿಸಿತು?

• ಇಂದಿನ ಗಂಡಂದಿರು ಮತ್ತು ಹೆಂಡತಿಯರಿಗಾಗಿ ಅಬ್ರಾಮನೂ ಸಾರಯಳೂ ಹೇಗೆ ಅತ್ಯುತ್ತಮ ಮಾದರಿಯನ್ನಿಟ್ಟರು?

• ತನ್ನ ಸೇವಕರು ಹಾಗೂ ಲೋಟನ ಸೇವಕರ ಮಧ್ಯೆ ಉಂಟಾದ ಜಗಳವನ್ನು ಅಬ್ರಾಮನು ನಿರ್ವಹಿಸಿದ ವಿಧದಿಂದ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚಿತ್ರ]

ಅಬ್ರಾಮನು ತನ್ನ ಹಕ್ಕನ್ನು ಸಮರ್ಥಿಸಿಕೊಳ್ಳಲಿಲ್ಲ, ಬದಲಾಗಿ ತನ್ನ ಅಭಿರುಚಿಗಳಿಗಿಂತಲೂ ಹೆಚ್ಚಾಗಿ ಲೋಟನ ಅಭಿರುಚಿಗಳಿಗೆ ಆದ್ಯತೆ ನೀಡಿದನು

[ಪುಟ 24ರಲ್ಲಿರುವ ಚಿತ್ರ]

ತನ್ನ ಸೋದರಳಿಯನಾದ ಲೋಟನನ್ನು ಕಾಪಾಡುವುದರಲ್ಲಿ ಅಬ್ರಾಮನು ಯೆಹೋವನ ಮೇಲೆ ಆತುಕೊಂಡನು