ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೋಬನು ಎಷ್ಟು ದೀರ್ಘ ಕಾಲಾವಧಿಯ ವರೆಗೆ ಕಷ್ಟಾನುಭವಿಸಿದನು?

ಯೋಬನ ಪರೀಕ್ಷೆಗಳು ಅನೇಕ ವರ್ಷಗಳ ವರೆಗೆ ಇದ್ದವು ಎಂದು ಕೆಲವು ಜನರು ಯೋಚಿಸುತ್ತಾರೆ. ಆದರೆ ಯೋಬನ ಪುಸ್ತಕವು ಅಂತಹ ದೀರ್ಘಾವಧಿಯ ಕಷ್ಟಾನುಭವದ ಕುರಿತು ಹೇಳುವುದಿಲ್ಲ.

ಯೋಬನ ಪರೀಕ್ಷೆಗಳ ಮೊದಲ ಹಂತ, ಅಂದರೆ ಅವನು ತನ್ನ ಕುಟುಂಬದ ಸದಸ್ಯರನ್ನು ಮತ್ತು ಸ್ವತ್ತುಗಳನ್ನು ಕಳೆದುಕೊಂಡ ಹಂತವು ತುಂಬ ಕ್ಷಿಪ್ರವಾಗಿ ನಡೆದಂತೆ ತೋರುತ್ತದೆ. “ಒಂದಾನೊಂದು ದಿವಸದಲ್ಲಿ ಯೋಬನ ಗಂಡುಹೆಣ್ಣುಮಕ್ಕಳು ಹಿರಿಯವನ ಮನೆಯಲ್ಲಿ ಉಂಡು ಕುಡಿಯುತ್ತಿರುವಾಗ,” ಎಂದು ನಾವು ಓದುತ್ತೇವೆ. (ಓರೆ ಅಕ್ಷರಗಳು ನಮ್ಮವು.) ಯೋಬನಿಗೆ ಅವನ ಎತ್ತುಗಳು, ಕತ್ತೆಗಳು, ಕುರಿಗಳು, ಒಂಟೆಗಳು, ಮತ್ತು ಅವುಗಳನ್ನು ಮೇಯಿಸುತ್ತಿದ್ದ ಆಳುಗಳ ನಷ್ಟದ ಕುರಿತಾದ ವರದಿಗಳು ಒಂದರ ಹಿಂದೆ ಇನ್ನೊಂದು ಬಂದವು. ಮತ್ತು ಇದಾದ ಕೂಡಲೇ, ‘ಹಿರಿಯವನ ಮನೆಯಲ್ಲಿ ಉಂಡು ಕುಡಿಯುತ್ತಿದ್ದ’ ತನ್ನ ಗಂಡುಹೆಣ್ಣುಮಕ್ಕಳ ಮರಣದ ಕುರಿತು ಯೋಬನಿಗೆ ತಿಳಿದುಬಂದಿರಬೇಕು. ಇವೆಲ್ಲವೂ ಒಂದೇ ದಿನದಲ್ಲಿ ಸಂಭವಿಸಿದಂತೆ ತೋರುತ್ತದೆ.​—ಯೋಬ 1:13-19.

ಯೋಬನ ಪರೀಕ್ಷೆಗಳ ಮುಂದಿನ ಹಂತವು ಹೆಚ್ಚಿನ ಸಮಯವನ್ನು ತೆಗೆದುಕೊಂಡಿರಬಹುದು. ಸೈತಾನನು ಯೆಹೋವನ ಸಮ್ಮುಖಕ್ಕೆ ಹೋಗಿ, ಬಾಧೆಯು ಯೋಬನನ್ನು ವೈಯಕ್ತಿಕವಾಗಿ ಅಂದರೆ ಅವನ ದೇಹವನ್ನು ತಟ್ಟಿದರೆ ಅವನು ತನ್ನ ಸಮಗ್ರತೆಯನ್ನು ಬಿಟ್ಟುಬಿಡುವನು ಎಂಬುದಾಗಿ ವಾದಿಸಿದನು. ನಂತರ ಯೋಬನು, ‘ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ಕೆಟ್ಟಕುರುಗಳಿಂದ’ ಬಾಧಿಸಲ್ಪಟ್ಟನು. ಈ ರೋಗವು ಅವನ ಇಡೀ ದೇಹದಲ್ಲಿ ಹರಡಲು ಸ್ವಲ್ಪ ಸಮಯ ಹಿಡಿದಿರಬಹುದು. ಮತ್ತು ಈ ಎಲ್ಲ “ಆಪತ್ತಿನ ಸುದ್ದಿ” ಯೋಬನ ಬಳಿ ಬಂದ ಆ ನಾಮಮಾತ್ರದ ಸಂತೈಸುವವರನ್ನು ತಲಪಲು ಸಮಯ ಹಿಡಿದಿರಬಹುದು.​—ಯೋಬ 2:3-11.

ಎಲೀಫಜನು ಎದೋಮ್‌ ದೇಶದ ತೇಮಾನ್‌ನಿಂದ ಬಂದಿದ್ದನು ಮತ್ತು ಚೋಫರನು ವಾಯವ್ಯ ಅರೇಬಿಯದ ಒಂದು ಕ್ಷೇತ್ರದಿಂದ ಬಂದಿದ್ದನು. ಆದುದರಿಂದ ಅವರು ವಾಸಿಸುತ್ತಿದ್ದ ಪ್ರದೇಶಗಳು, ಪ್ರಾಯಶಃ ಉತ್ತರ ಅರೇಬಿಯದಲ್ಲಿದ್ದ ಯೋಬನ ಊರಾದ ಊಚ್‌ನಿಂದ ತುಂಬ ದೂರದಲ್ಲಿರಲಿಲ್ಲ. ಬಿಲ್ದದನು ಒಬ್ಬ ಶೂಹ್ಯನಾಗಿದ್ದನು, ಮತ್ತು ಇವನ ಜನರು ಯೂಫ್ರೇಟೀಸ್‌ ನದಿಯುದ್ದಕ್ಕೂ ಜೀವಿಸುತ್ತಿದ್ದರು ಎಂಬುದು ಗ್ರಾಹ್ಯವೇ. ಈ ಸಮಯದಲ್ಲಿ ಬಿಲ್ದದನು ತನ್ನ ಸ್ವದೇಶದಲ್ಲಿದ್ದಿದ್ದರೆ, ಯೋಬನ ಪರಿಸ್ಥಿತಿಯ ಕುರಿತಾಗಿ ಕೇಳಿಸಿಕೊಳ್ಳಲು ಮತ್ತು ಊಚ್‌ಗೆ ಪ್ರಯಾಣಿಸಲು ಅವನಿಗೆ ಅನೇಕ ವಾರಗಳು ಅಥವಾ ತಿಂಗಳುಗಳು ಹಿಡಿದಿದ್ದಿರಬಹುದು. ಯೋಬನ ಬಾಧೆಯು ಆರಂಭವಾದಾಗ, ಈ ಮೂವರು ಅವನ ಅಕ್ಕಪಕ್ಕದ ಊರುಗಳಲ್ಲೇ ಇದ್ದಿರುವ ಸಾಧ್ಯತೆಯಿದೆ. ವಿಷಯವು ಏನೇ ಇರಲಿ, ಯೋಬನ ಮೂವರು ಸಂಗಡಿಗರು ಬಂದಾಗ, ಅವರು “ಏಳು ದಿನಗಳ ವರೆಗೆ ಹಗಲಿರುಳೂ ನೆಲದ ಮೇಲೆ ಅವನೊಂದಿಗೆ ಕುಳಿತು”ಕೊಂಡು ಏನೂ ಮಾತಾಡದೇ ಇದ್ದರು.​—ಯೋಬ 2:12, 13.

ನಂತರ ಯೋಬನ ಪರೀಕ್ಷೆಗಳ ಕೊನೆಯ ಹಂತವು ಬಂತು. ಅದರ ವಿವರಗಳು ಯೋಬನ ಪುಸ್ತಕದ ಅನೇಕ ಅಧ್ಯಾಯಗಳನ್ನು ಆವರಿಸುತ್ತವೆ. ಆ ನಾಮಮಾತ್ರದ ಸಂತೈಸುವವರಿಂದ ವಾಗ್ವಾದಗಳ ಮತ್ತು ಭಾಷಣಗಳ ಒಂದು ಸರಮಾಲೆ ಇತ್ತು, ಮತ್ತು ಇವುಗಳಲ್ಲಿ ಅನೇಕವುಗಳಿಗೆ ಯೋಬನು ಪ್ರತಿಕ್ರಿಯಿಸಿದನು. ಅದು ಕೊನೆಗೊಂಡ ನಂತರ, ಯುವಕನಾಗಿದ್ದ ಎಲೀಹು ತಿದ್ದುಪಾಟನ್ನು ನೀಡಿದನು, ಮತ್ತು ಯೆಹೋವನು ಪರಲೋಕದಿಂದ ಯೋಬನನ್ನು ತಿದ್ದಿದನು.​—ಯೋಬ 32:​1-6; 38:1; 40:​1-6; 42:1.

ಆದುದರಿಂದ, ಯೋಬನ ಬಾಧೆ ಮತ್ತು ಅದರ ಪರಿಹಾರವು ಕೆಲವೇ ತಿಂಗಳುಗಳೊಳಗೇ, ಬಹುಶಃ ಒಂದು ವರ್ಷದೊಳಗೇ ಸಂಭವಿಸಿದ್ದಿರಬಹುದು. ಕಠಿನವಾದ ಪರೀಕ್ಷೆಗಳು ಎಂದೂ ಕೊನೆಗೊಳ್ಳುವುದೇ ಇಲ್ಲವೆಂಬಂತೆ ತೋರುತ್ತವೆ ಎಂಬುದನ್ನು ನೀವು ಅನುಭವದಿಂದ ತಿಳಿದುಕೊಂಡಿರಬಹುದು. ಆದರೂ, ಯೋಬನ ವಿಷಯದಲ್ಲಿ ಆದಂತೆಯೇ, ಅವು ಖಂಡಿತವಾಗಿಯೂ ಕೊನೆಗೊಳ್ಳುವವು ಎಂಬುದನ್ನು ನಾವು ಮರೆಯಬಾರದು. ನಾವು ಎದುರಿಸುವಂಥ ಪರೀಕ್ಷೆಗಳು ಎಷ್ಟೇ ಕಾಲ ಉಳಿಯಲಿ, ದೇವರ ಬೆಂಬಲದ ಕುರಿತು ನಾವು ಮರೆಯದಿರೋಣ. ಇದು ಈ ಪ್ರೇರಿತ ಮಾತುಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ: “ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ.” (2 ಕೊರಿಂಥ 4:17) ಅಪೊಸ್ತಲ ಪೇತ್ರನು ಬರೆದದ್ದು: “ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.”​—1 ಪೇತ್ರ 5:10.