ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನಿಂದಾದ ಸಮಾಧಾನವು ನಮ್ಮ ಹೃದಯಗಳನ್ನು ಹೇಗೆ ನಿಯಂತ್ರಿಸಬಲ್ಲದು?

ಕ್ರಿಸ್ತನಿಂದಾದ ಸಮಾಧಾನವು ನಮ್ಮ ಹೃದಯಗಳನ್ನು ಹೇಗೆ ನಿಯಂತ್ರಿಸಬಲ್ಲದು?

ಕ್ರಿಸ್ತನಿಂದಾದ ಸಮಾಧಾನವು ನಮ್ಮ ಹೃದಯಗಳನ್ನು ಹೇಗೆ ನಿಯಂತ್ರಿಸಬಲ್ಲದು?

“ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ [“ನಿಯಂತ್ರಿಸಲಿ,” NW]; ನೀವು ಒಂದೇ ದೇಹಕ್ಕೆ ಸೇರಿದವರಾದದರಿಂದ ಸಮಾಧಾನದಿಂದಿರುವದಕ್ಕಾಗಿ ಕರೆಯಲ್ಪಟ್ಟಿರಿ.”​—ಕೊಲೊಸ್ಸೆ 3:15.

1, 2. ‘ಕ್ರಿಸ್ತನಿಂದಾದ ಸಮಾಧಾನವು’ ಯಾವ ರೀತಿಯಲ್ಲಿ ಒಬ್ಬ ಕ್ರೈಸ್ತನ ಹೃದಯವನ್ನು ನಿಯಂತ್ರಿಸಬೇಕು?

ನಿಯಂತ್ರಣ​—ಈ ಪದವು ಅನೇಕರಿಗೆ ಹಿಡಿಸುವುದಿಲ್ಲ. ಕಾರಣವೇನೆಂದರೆ ಅದು ಬಲಾತ್ಕಾರ ಮತ್ತು ಶೋಷಣೆಯ ಚಿತ್ರಗಳನ್ನು ಮನಸ್ಸಿಗೆ ತರುತ್ತದೆ. ಆದುದರಿಂದ ‘ಕ್ರಿಸ್ತನ ಸಮಾಧಾನವು ನಿಮ್ಮ ಹೃದಯಗಳನ್ನು ನಿಯಂತ್ರಿಸಲಿ’ ಎಂದು ಪೌಲನು ಕೊಲೊಸ್ಸೆಯಲ್ಲಿದ್ದ ಜೊತೆ ಕ್ರೈಸ್ತರಿಗೆ ಕೊಟ್ಟ ಉತ್ತೇಜನವು ಕೆಲವರಿಗೆ ವಿವೇಚನೆಯಿಲ್ಲದ್ದಾಗಿ ತೋರಬಹುದು. (ಕೊಲೊಸ್ಸೆ 3:15) ನಾವು ಇಚ್ಛಾಸ್ವಾತಂತ್ರ್ಯವುಳ್ಳ ವ್ಯಕ್ತಿಗಳಲ್ಲವೊ? ಆದುದರಿಂದ ಯಾವುದೇ ವ್ಯಕ್ತಿಯಾಗಲಿ, ಯಾವುದೇ ಸಂಗತಿಯಾಗಲಿ ನಮ್ಮ ಹೃದಯಗಳನ್ನು ನಿಯಂತ್ರಿಸುವಂತೆ ನಾವೇಕೆ ಬಿಡಬೇಕು?

2 ಕೊಲೊಸ್ಸೆಯವರು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ಬಿಟ್ಟುಕೊಡಬೇಕೆಂದು ಪೌಲನು ಹೇಳುತ್ತಿರಲಿಲ್ಲ. ಕೊಲೊಸ್ಸೆ 3:15ರಲ್ಲಿ ‘ನಿಯಂತ್ರಣ’ ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ಆ ದಿನಗಳಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನವನ್ನು ವಿತರಿಸುತ್ತಿದ್ದ ಆಟದ ತೀರ್ಪುಗಾರನಿಗಿರುವ ಪದಕ್ಕೆ ಸಂಬಂಧಿಸಿದೆ. ಸ್ಪರ್ಧಿಗಳಿಗೆ, ಆಟದ ನಿಯಮಗಳ ಮೇರೆಗಳೊಳಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವಿತ್ತು. ಆದರೆ ಕೊನೆಯಲ್ಲಿ, ಯಾರು ನಿಯಮಗಳನ್ನು ಪಾಲಿಸಿ, ಈ ಕಾರಣದಿಂದ ಸ್ಪರ್ಧೆಯಲ್ಲಿ ಜಯಿಸಿದ್ದರೆಂಬುದನ್ನು ಆ ತೀರ್ಪುಗಾರನು ನಿರ್ಣಯಿಸುತ್ತಿದ್ದನು. ತದ್ರೀತಿಯಲ್ಲಿ ನಮಗೆ ಜೀವಿತದಲ್ಲಿ ಅನೇಕ ನಿರ್ಣಯಗಳನ್ನು ಮಾಡುವ ಸ್ವಾತಂತ್ರ್ಯವಿದೆ. ಆದರೆ ನಾವು ಆ ನಿರ್ಣಯಗಳನ್ನು ಮಾಡುವಾಗ, ಕ್ರಿಸ್ತನಿಂದಾದ ಸಮಾಧಾನವು ಯಾವಾಗಲೂ “ತೀರ್ಪುಗಾರ”ನಾಗಿರಬೇಕು, ಅಥವಾ ಎಡ್‌ಗರ್‌ ಜೆ. ಗುಡ್‌ಸ್ಪೀಡ್‌ ಎಂಬ ತರ್ಜುಮೆಗಾರರು ಅದನ್ನು ತರ್ಜುಮಿಸಿದಂತೆ, ನಮ್ಮ ಹೃದಯಗಳಲ್ಲಿ “ಆಳುವ ತತ್ವವಾಗಿರಬೇಕು.”

3. ‘ಕ್ರಿಸ್ತನಿಂದಾದ ಸಮಾಧಾನವು’ ಏನಾಗಿದೆ?

3 ‘ಕ್ರಿಸ್ತನಿಂದಾದ ಸಮಾಧಾನವು’ ಏನಾಗಿದೆ? ಅದು, ನಾವು ಯೇಸುವಿನ ಶಿಷ್ಯರಾಗಿ ಯೆಹೋವ ದೇವರು ಮತ್ತು ಆತನ ಪುತ್ರನಿಂದ ಪ್ರೀತಿಸಲ್ಪಟ್ಟು ಸಮ್ಮತಿಸಲ್ಪಟ್ಟಿದ್ದೇವೆಂದು ಕಲಿತಾಗ ನಮಗೆ ಸಿಕ್ಕಿರುವ ನೆಮ್ಮದಿ, ಆಂತರಿಕ ಪ್ರಶಾಂತತೆ ಆಗಿದೆ. ಯೇಸು ತನ್ನ ಶಿಷ್ಯರನ್ನು ಬಿಟ್ಟುಹೋಗಲಿದ್ದಾಗ, ಅವನು ಅವರಿಗೆ ಹೇಳಿದ್ದು: “ನನ್ನ ಸಮಾಧಾನವನ್ನು ನಿಮಗೆ ಬಿಟ್ಟುಹೋಗುತ್ತೇನೆ, . . . ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.” (ಯೋಹಾನ 14:​27, NW) ಬಹುಮಟ್ಟಿಗೆ 2,000 ವರ್ಷಗಳಿಂದ ಕ್ರಿಸ್ತನ ದೇಹಕ್ಕೆ ಸೇರಿರುವ ನಂಬಿಗಸ್ತ ಅಭಿಷಿಕ್ತ ಸದಸ್ಯರು ಈ ಸಮಾಧಾನದಲ್ಲಿ ಆನಂದಿಸಿದ್ದಾರೆ ಮತ್ತು ಇಂದು ಅವರ ಸಂಗಡಿಗರಾಗಿರುವ ‘ಬೇರೆ ಕುರಿಗಳು’ ಅದರಲ್ಲಿ ಪಾಲ್ಗೊಳ್ಳುತ್ತಾರೆ. (ಯೋಹಾನ 10:16) ಆ ಸಮಾಧಾನವು, ನಮ್ಮ ಹೃದಯಗಳನ್ನು ನಿಯಂತ್ರಿಸುವಂಥ ಶಕ್ತಿಯಾಗಿರಬೇಕು. ಅದು ನಾವು ತುಂಬ ಕಠಿನ ಪರೀಕ್ಷೆಯನ್ನು ಅನುಭವಿಸುತ್ತಿರುವಾಗ, ಭಯದಿಂದ ನಿಸ್ತೇಜಿತರಾಗುವುದನ್ನು ಅಥವಾ ಅತಿಯಾಗಿ ಕಳವಳಪಡುವುದನ್ನು ತಡೆಗಟ್ಟಲು ಸಹಾಯಮಾಡುವುದು. ನಾವು ಅನ್ಯಾಯವನ್ನು ಎದುರಿಸುತ್ತಿರುವಾಗ, ಚಿಂತೆಯು ಕಾಡುತ್ತಿರುವಾಗ ಮತ್ತು ನಾವು ಅಯೋಗ್ಯರೆಂದು ನಮಗನಿಸುವಾಗ ಇದು ಹೇಗೆ ಸತ್ಯವಾಗಿರುತ್ತದೆಂಬುದನ್ನು ನಾವು ನೋಡೋಣ.

ನಾವು ಅನ್ಯಾಯವನ್ನು ಎದುರಿಸುತ್ತಿರುವಾಗ

4. (ಎ) ಯೇಸು ಅನ್ಯಾಯದೊಂದಿಗೆ ಪರಿಚಿತನಾದದ್ದು ಹೇಗೆ? (ಬಿ) ಅನ್ಯಾಯಕ್ಕೆ ಬಲಿಗಳಾಗುವ ಸಂಗತಿಗೆ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದ್ದಾರೆ?

4 ರಾಜ ಸೊಲೊಮೋನನು ಗಮನಿಸಿದ್ದು: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆ. (ಪ್ರಸಂಗಿ 8:9) ಆ ಮಾತುಗಳು ಎಷ್ಟು ಸತ್ಯವಾಗಿವೆ ಎಂಬುದು ಯೇಸುವಿಗೆ ತಿಳಿದಿತ್ತು. ಅವನು ಸ್ವರ್ಗದಲ್ಲಿರುವಾಗ, ಮನುಷ್ಯರು ಪರಸ್ಪರರ ಮೇಲೆ ಬರಮಾಡುತ್ತಿದ್ದ ಗಂಭೀರವಾದ ಅನ್ಯಾಯಗಳನ್ನು ಅವನು ನೋಡಿದ್ದನು. ಅವನು ಭೂಮಿಯ ಮೇಲಿದ್ದಾಗ, ವೈಯಕ್ತಿಕವಾಗಿ ಅತಿ ದೊಡ್ಡ ಅನ್ಯಾಯವನ್ನು ಸಹಿಸಿದನು. ಅವನು ಒಬ್ಬ ಪಾಪರಹಿತ ವ್ಯಕ್ತಿಯಾಗಿದ್ದರೂ ಅವನ ಮೇಲೆ ದೇವನಿಂದೆಯ ಆರೋಪವನ್ನು ಹಾಕಲಾಯಿತು ಮತ್ತು ಒಬ್ಬ ಅಪರಾಧಿಯಂತೆ ಕೊಲ್ಲಿಸಲಾಯಿತು. (ಮತ್ತಾಯ 26:​63-66; ಮಾರ್ಕ 15:27) ಇಂದು ಸಹ, ಅನ್ಯಾಯವು ಎಲ್ಲೆಲ್ಲೂ ಹಬ್ಬಿಕೊಂಡಿರುತ್ತದೆ. ಮತ್ತು ಸತ್ಯ ಕ್ರೈಸ್ತರು ‘ಎಲ್ಲ ಜನಾಂಗಗಳವರಿಂದ ಹಗೆಮಾಡಲ್ಪಟ್ಟು’ ವಿಪರೀತವಾಗಿ ಕಷ್ಟಾನುಭವಿಸುತ್ತಿದ್ದಾರೆ. (ಮತ್ತಾಯ 24:9) ನಾಸಿ ಮರಣ ಶಿಬಿರಗಳಲ್ಲಿ ಮತ್ತು ಸೋವಿಯಟ್‌ ಗುಲಾಗ್‌ (ಕೆಲಸ ಶಿಬಿರಗಳು)ನಲ್ಲಿನ ಭಯಂಕರವಾದ ಅನುಭವಗಳ ಎದುರಿನಲ್ಲೂ, ದೊಂಬಿ ಹಿಂಸಾಚಾರ, ಸುಳ್ಳು ಆರೋಪಗಳು, ಮತ್ತು ಹುಸಿ ದಾಳಿಗಳ ಎದುರಿನಲ್ಲೂ ಕ್ರಿಸ್ತನಿಂದಾದ ಸಮಾಧಾನವು ಅವರನ್ನು ದೃಢವಾಗಿರಿಸಿದೆ. ಅವರು ಯೇಸುವನ್ನು ಅನುಕರಿಸಿದ್ದಾರೆ. ಅವನ ಬಗ್ಗೆ ನಾವು ಹೀಗೆ ಓದುತ್ತೇವೆ: “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.”​—1 ಪೇತ್ರ 2:23.

5. ಸಭೆಯಲ್ಲಿ ಅನ್ಯಾಯದಂತೆ ತೋರುವ ಯಾವುದೋ ಸಂಗತಿಯು ನಡೆದಿದೆಯೆಂದು ನಾವು ಕೇಳುವಾಗ, ನಾವು ಪ್ರಥಮವಾಗಿ ಏನನ್ನು ಪರಿಗಣಿಸಬೇಕು?

5 ಇದೆಲ್ಲದಕ್ಕಿಂತಲೂ ಚಿಕ್ಕ ಪ್ರಮಾಣಕ್ಕಿಳಿಯೋಣ. ಕ್ರೈಸ್ತ ಸಭೆಯೊಳಗೆ ಒಬ್ಬ ಸಹೋದರ ಅಥವಾ ಸಹೋದರಿಯನ್ನು ಅನ್ಯಾಯದಿಂದ ಉಪಚರಿಸಲಾಗಿದೆಯೆಂದು ನಾವು ನೆನಸಬಹುದು. ಅಂಥ ಸಂದರ್ಭದಲ್ಲಿ, ನಮಗೆ ಪೌಲನಂತೆ ಅನಿಸಬಹುದು. ಅವನಂದದ್ದು: “ಯಾವನಾದರೂ ಪಾಪದಲ್ಲಿ ಸಿಕ್ಕಿಕೊಂಡರೆ [“ಮುಗ್ಗರಿಸಿಕೊಂಡರೆ,” NW] ನಾನು ತಾಪಪಡುವದಿಲ್ಲವೋ?” (2 ಕೊರಿಂಥ 11:29) ನಾವೇನು ಮಾಡಬಹುದು? ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು, ‘ಅದು ನಿಜವಾಗಿಯೂ ಅನ್ಯಾಯವಾಗಿದೆಯೊ?’ ಹೆಚ್ಚಿನ ಸಂದರ್ಭದಲ್ಲಿ ನಮಗೆ ಒಳಗೂಡಿರುವ ಎಲ್ಲ ವಾಸ್ತವಾಂಶಗಳು ಸರಿಯಾಗಿ ತಿಳಿದಿರುವುದಿಲ್ಲ. ತನಗೆ ಎಲ್ಲವೂ ಗೊತ್ತಿದೆಯೆಂದು ಹೇಳಿಕೊಳ್ಳುತ್ತಿರಬಹುದಾದ ಯಾವುದೊ ವ್ಯಕ್ತಿಯ ಮಾತುಗಳನ್ನು ಕೇಳಿ ನಾವು ತುಂಬ ಕೋಪದಿಂದ ಪ್ರತಿಕ್ರಿಯಿಸುತ್ತಿರಬಹುದು. ಸಕಾರಣದಿಂದಲೇ ಬೈಬಲ್‌ ಹೀಗೆ ತಿಳಿಸುತ್ತದೆ: “ಮೂಢನು ಯಾವ ಮಾತನ್ನಾದರೂ ನಂಬುವನು.” (ಜ್ಞಾನೋಕ್ತಿ 14:15) ಆದುದರಿಂದ ನಾವು ಎಚ್ಚರಿಕೆಯಿಂದಿರಬೇಕಾಗಿದೆ.

6. ಸಭೆಯೊಳಗೆ ಅನ್ಯಾಯವಾಗಿದೆಯೆಂದು ನಮಗನಿಸುವ ಸಂದರ್ಭಗಳ ಕುರಿತು ನಾವು ಹೇಗೆ ಪ್ರತಿಕ್ರಿಯಿಸಬಹುದು?

6 ಅನ್ಯಾಯವೆಂದು ನೆನಸಲಾಗುವ ವಿಷಯಕ್ಕೆ ಸ್ವತಃ ನಾವೇ ಬಲಿಯಾಗಿದ್ದೇವೆಂದು ಇಟ್ಟುಕೊಳ್ಳಿ. ತನ್ನ ಹೃದಯದಲ್ಲಿ ಕ್ರಿಸ್ತನಿಂದಾಗುವ ಸಮಾಧಾನವುಳ್ಳ ಒಬ್ಬ ವ್ಯಕ್ತಿಯು ಹೇಗೆ ಪ್ರತಿಕ್ರಿಯಿಸುವನು? ನಮಗೆ ಅನ್ಯಾಯವನ್ನು ಮಾಡಿದ್ದಾನೆಂದು ನಮಗನಿಸುವ ವ್ಯಕ್ತಿಯೊಂದಿಗೆ ನಾವು ಮೊದಲು ಮಾತಾಡಬೇಕು. ಅನಂತರ, ನಮ್ಮ ಮಾತುಗಳಿಗೆ ಕಿವಿಗೊಡಲು ಆತುರರಾಗಿರುವ ಯಾವುದೇ ವ್ಯಕ್ತಿಯೊಂದಿಗೆ ಅದರ ಕುರಿತಾಗಿ ಚರ್ಚಿಸುವ ಬದಲು, ಆ ವಿಷಯವನ್ನು ಪ್ರಾರ್ಥನೆಯ ಮೂಲಕ ಯೆಹೋವನ ಹಸ್ತಗಳಲ್ಲಿ ಬಿಟ್ಟು, ನ್ಯಾಯವನ್ನು ತೀರಿಸುವಂತೆ ಆತನಲ್ಲಿ ಏಕೆ ಭರವಸೆಯಿಡಬಾರದು? (ಕೀರ್ತನೆ 9:10; ಜ್ಞಾನೋಕ್ತಿ 3:5) ಹಾಗೆ ಮಾಡುವುದರಿಂದ, ನಾವು ವಿಷಯವನ್ನು ನಮ್ಮ ಹೃದಯದಲ್ಲೇ ಇತ್ಯರ್ಥಗೊಳಿಸಿ, ‘ಮೌನಿಯಾಗಿರುವುದರಲ್ಲಿ’ ತೃಪ್ತರಾಗಬಹುದು. (ಕೀರ್ತನೆ 4:4) ಹೆಚ್ಚಿನ ಸಂದರ್ಭಗಳಲ್ಲಿ, ಪೌಲನ ಈ ಬುದ್ಧಿವಾದವು ಅನ್ವಯಿಸುವುದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”​—ಕೊಲೊಸ್ಸೆ 3:13.

7. ನಮ್ಮ ಸಹೋದರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಾವು ಯಾವಾಗಲೂ ಏನನ್ನು ನೆನಪಿನಲ್ಲಿಡಬೇಕು?

7 ಆದರೆ ನಾವು ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ಈಗಾಗಲೇ ಏನು ನಡೆದಿದೆಯೊ ಅದನ್ನು ನಾವು ನಿಯಂತ್ರಿಸಲಾರೆವು. ಆದರೆ ಈಗಿನ ನಮ್ಮ ಪ್ರತಿಕ್ರಿಯೆಯನ್ನು ನಾವು ಖಂಡಿತವಾಗಿಯೂ ನಿಯಂತ್ರಿಸಬಲ್ಲೆವು. ಅನ್ಯಾಯದಂತೆ ತೋರುವ ಘಟನೆಗೆ ನಾವು ಸಮತೋಲನವಿಲ್ಲದ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿದರೆ, ಆದಂಥ ಅನ್ಯಾಯದ ಮೇಲೆ ಅದು ಯಾವ ಪರಿಣಾಮವನ್ನೂ ಬೀರದೆ ನಮ್ಮ ಸಮಾಧಾನದ ಮೇಲೆಯೇ ಹಾನಿಕರ ಪರಿಣಾಮವನ್ನು ಬೀರುವುದು. (ಜ್ಞಾನೋಕ್ತಿ 18:14) ನಾವು ಮುಗ್ಗರಿಸಿಬೀಳಬಹುದು ಮತ್ತು ಆ ವ್ಯಕ್ತಿಗೆ ನ್ಯಾಯ ಸಿಕ್ಕಿದೆಯೆಂದು ನಮಗನಿಸುವವರೆಗೆ ಸಭೆಯೊಂದಿಗೆ ಸಹವಾಸಮಾಡುವುದನ್ನೂ ನಿಲ್ಲಿಸಬಹುದು. ಆದರೆ ಯೆಹೋವನ ನಿಯಮಗಳನ್ನು ಪ್ರೀತಿಸುವವರಿಗೆ “ವಿಘ್ನಕರವಾದದ್ದೇನೂ ಇಲ್ಲ” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 119:165) ಸತ್ಯ ಸಂಗತಿಯೇನೆಂದರೆ, ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಅನ್ಯಾಯವನ್ನು ಖಂಡಿತವಾಗಿಯೂ ಅನುಭವಿಸುತ್ತಾರೆ. ಆದರೆ ಅಂಥ ಪ್ರತಿಕೂಲ ಅನುಭವಗಳು ಯೆಹೋವನಿಗೆ ನೀವು ಸಲ್ಲಿಸುವ ಸೇವೆಗೆ ಅಡ್ಡಬರುವಂತೆ ಎಂದಿಗೂ ಬಿಡಬೇಡಿ. ಅದರ ಬದಲು, ಕ್ರಿಸ್ತನಿಂದಾಗುವ ಸಮಾಧಾನವು ನಿಮ್ಮ ಹೃದಯವನ್ನು ನಿಯಂತ್ರಿಸಲಿ.

ನಮ್ಮನ್ನು ಚೆಂತೆಯು ಕಾಡುತ್ತಿರುವಾಗ

8. ಚಿಂತೆಯನ್ನುಂಟುಮಾಡುವ ಕೆಲವು ಸಂಗತಿಗಳು ಯಾವುವು, ಮತ್ತು ಚಿಂತೆಯ ಫಲಿತಾಂಶವೇನಾಗಿರಬಲ್ಲದು?

8 ಈ “ಕಡೇ ದಿವಸಗಳಲ್ಲಿ” ಚಿಂತೆಯು ಜೀವಿತದ ತಪ್ಪಿಸಿಕೊಳ್ಳಲಾಗದಂಥ ಒಂದು ಭಾಗವಾಗಿಬಿಟ್ಟಿದೆ. (2 ತಿಮೊಥೆಯ 3:1) “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟಮಾಡಬೇಕು? ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ” ಎಂದು ಯೇಸು ಹೇಳಿದ್ದಾನೆಂಬುದು ನಿಜ. (ಲೂಕ 12:22) ಆದರೆ ಎಲ್ಲ ಚಿಂತೆಯು ಕೇವಲ ಭೌತಿಕ ವಿಷಯಗಳ ಕಾರಣದಿಂದ ಉಂಟಾಗುವುದಿಲ್ಲ. ಲೋಟನು, ಸೋದೋಮಿನ ನೀತಿಭ್ರಷ್ಟ ಆಚರಣೆಯಿಂದಾಗಿ ‘ವೇದನೆಗೊಂಡಿದ್ದನು.’ (2 ಪೇತ್ರ 2:7) ಪೌಲನಿಗೆ “ಎಲ್ಲ ಸಭೆಗಳ ವಿಷಯವಾದ ಚಿಂತೆ” ಇತ್ತು. (2 ಕೊರಿಂಥ 11:28) ತನ್ನ ಮರಣದ ಹಿಂದಿನ ರಾತ್ರಿಯಂದು ಯೇಸು ಎಷ್ಟು ಮನೋವ್ಯಥೆಯುಳ್ಳವನಾಗಿದ್ದನು ಅಂದರೆ, “ಆತನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.” (ಲೂಕ 22:44) ಆದುದರಿಂದ ಎಲ್ಲ ರೀತಿಯ ಚಿಂತೆಯು ದುರ್ಬಲವಾದ ನಂಬಿಕೆಯ ಪರಿಣಾಮವೆಂದು ಹೇಳಲಾಗುವುದಿಲ್ಲ. ಚಿಂತೆಗೆ ಕಾರಣವು ಏನೇ ಆಗಿರಲಿ ಅದು ವಿಪರೀತವಾಗಿರುವಲ್ಲಿ ಮತ್ತು ದೀರ್ಘಕಾಲದ ವರೆಗೆ ಉಳಿಯುವಲ್ಲಿ, ಅದು ನಮ್ಮಿಂದ ಸಮಾಧಾನವನ್ನು ಕಸಿದುಕೊಳ್ಳಬಲ್ಲದು. ಕೆಲವರು ಚಿಂತೆಯಲ್ಲಿ ಮುಳುಗಿಹೋಗಿ, ಯೆಹೋವನ ಸೇವೆಮಾಡುವುದರಲ್ಲಿ ಸೇರಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಅಶಕ್ತರಾಗಿದ್ದೇವೆಂದು ಅನಿಸುವಂತೆ ಮಾಡಿದೆ. ಬೈಬಲ್‌ ಹೀಗನ್ನುತ್ತದೆ: “ಕಳವಳವು [“ಚಿಂತೆಯು,” NW] ಮನಸ್ಸನ್ನು ಕುಗ್ಗಿಸುವದು.” (ಜ್ಞಾನೋಕ್ತಿ 12:25) ಹಾಗಾದರೆ, ಚಿಂತೆಯಿಂದಾಗಿ ನಾವು ಸಂಕಟಪಡುತ್ತಿರುವಲ್ಲಿ ನಾವೇನು ಮಾಡಬಲ್ಲೆವು?

9. ಚಿಂತೆಯನ್ನು ತೊಲಗಿಸಲು ತೆಗೆದುಕೊಳ್ಳಬಹುದಾದ ಕೆಲವು ಪ್ರಾಯೋಗಿಕ ಕ್ರಮಗಳು ಯಾವುವು, ಆದರೆ ಯಾವ ರೀತಿಯ ಚಿಂತೆಯ ಕಾರಣಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ?

9 ಕೆಲವು ಸನ್ನಿವೇಶಗಳಲ್ಲಿ, ನಾವು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲು ಶಕ್ತರಾಗಿರಬಹುದು. ನಮ್ಮ ಚಿಂತೆಗೆ ಕಾರಣ ಒಂದು ಆರೋಗ್ಯ ಸಮಸ್ಯೆಯಾಗಿರುವಲ್ಲಿ, ನಾವು ಅದಕ್ಕೆ ಗಮನಕೊಡುವುದು ಬುದ್ಧಿವಂತಿಕೆಯಾಗಿದೆ. ಆದರೆ ಹಾಗೆ ಮಾಡುವುದು ಬಿಡುವುದು ನಿಮ್ಮ ವೈಯಕ್ತಿಕ ನಿರ್ಣಯವಾಗಿದೆ. * (ಮತ್ತಾಯ 9:12) ನಮಗೆ ಅತಿ ಹೆಚ್ಚಿನ ಜವಾಬ್ದಾರಿಗಳಿರುವಲ್ಲಿ, ಇವುಗಳಲ್ಲಿ ಕೆಲವನ್ನು ಬೇರೆಯವರಿಗೆ ವಹಿಸಿಕೊಡಬಹುದು. (ವಿಮೋಚನಕಾಂಡ 18:​13-23) ಆದರೆ ಹೆತ್ತವರಿಗಿರುವಂಥ​—ಬೇರೆಯವರಿಗೆ ವಹಿಸಿಕೊಡಲು ಸಾಧ್ಯವಿಲ್ಲದಿರುವ​—ರೀತಿಯ ಜವಾಬ್ದಾರಿಗಳುಳ್ಳವರ ಕುರಿತಾಗಿ ಏನು? ವಿರೋಧಿಸುವಂಥ ಸಂಗಾತಿಯೊಂದಿಗೆ ಬಾಳುತ್ತಿರುವ ಒಬ್ಬ ಕ್ರೈಸ್ತನ/ಕ್ರೈಸ್ತಳ ಕುರಿತಾಗಿ ಏನು? ಆರ್ಥಿಕವಾಗಿ ತುಂಬ ಬಿಕ್ಕಟ್ಟಿನ ಸ್ಥಿತಿಯಲ್ಲಿರುವ ಅಥವಾ ಯುದ್ಧ ಕ್ಷೇತ್ರದಲ್ಲಿ ವಾಸಿಸುತ್ತಿರುವ ಒಂದು ಕುಟುಂಬದ ಕುರಿತಾಗಿ ಏನು? ಇವರೆಲ್ಲರ ಚಿಂತೆಯ ಕಾರಣಗಳನ್ನು ಈ ವಿಷಯಗಳ ವ್ಯವಸ್ಥೆಯಲ್ಲಂತೂ ನಾವು ನಿರ್ಮೂಲಮಾಡಲು ಸಾಧ್ಯವಿಲ್ಲ. ಆದರೂ, ನಾವು ನಮ್ಮ ಹೃದಯಗಳಲ್ಲಿ ಕ್ರಿಸ್ತನಿಂದಾಗುವ ಸಮಾಧಾನವನ್ನು ಸಂರಕ್ಷಿಸಿಡಬಲ್ಲೆವು. ಹೇಗೆ?

10. ಒಬ್ಬ ಕ್ರೈಸ್ತನು ಯಾವ ಎರಡು ವಿಧಗಳಲ್ಲಿ ಚಿಂತೆಯನ್ನು ತೊಲಗಿಸಲು ಪ್ರಯತ್ನಿಸಬಹುದು?

10 ಒಂದು ವಿಧವು, ದೇವರ ವಾಕ್ಯದಿಂದ ಸಾಂತ್ವನವನ್ನು ಪಡೆಯುವುದರ ಮೂಲಕವೇ. ರಾಜನಾದ ದಾವೀದನು ಬರೆದುದು: “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತನೆ 94:19) ಯೆಹೋವನ ‘ಸಂತೈಸುವಿಕೆಗಳನ್ನು’ ಬೈಬಲಿನಲ್ಲಿ ಕಂಡುಕೊಳ್ಳಬಹುದು. ಆ ಪ್ರೇರಿತ ಪುಸ್ತಕವನ್ನು ಕ್ರಮವಾಗಿ ವಿಚಾರಿಸಿನೋಡುವುದು, ನಮ್ಮ ಹೃದಯಗಳಲ್ಲಿ ಕ್ರಿಸ್ತನಿಂದಾಗುವ ಸಮಾಧಾನವನ್ನು ಸಂರಕ್ಷಿಸಿಡಲು ಸಹಾಯಮಾಡುವುದು. ಬೈಬಲ್‌ ಹೀಗನ್ನುತ್ತದೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಅದೇ ರೀತಿಯಲ್ಲಿ ಪೌಲನು ಬರೆದುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಮನಃಪೂರ್ವಕ ಮತ್ತು ಕ್ರಮವಾದ ಪ್ರಾರ್ಥನೆಯು, ನಮ್ಮ ಸಮಾಧಾನವನ್ನು ಸಂರಕ್ಷಿಸಿಡುವಂತೆ ನಮಗೆ ಸಹಾಯಮಾಡುವುದು.

11. (ಎ) ಪ್ರಾರ್ಥನೆಯ ವಿಷಯದಲ್ಲಿ ಯೇಸು ಒಂದು ಉತ್ತಮ ಮಾದರಿಯಾಗಿದ್ದನು ಹೇಗೆ? (ಬಿ) ಪ್ರಾರ್ಥನೆಯ ಕುರಿತಾಗಿ ನಮ್ಮ ದೃಷ್ಟಿಕೋನ ಏನಾಗಿರಬೇಕು?

11 ಈ ವಿಷಯದಲ್ಲಿ ಯೇಸು ಒಂದು ಉತ್ಕೃಷ್ಟ ಮಾದರಿಯಾಗಿದ್ದಾನೆ. ಆಗಾಗ್ಗೆ ಅವನು ಗಂಟಾನುಗಟ್ಟಲೆ ಸಮಯ ತನ್ನ ಸ್ವರ್ಗೀಯ ತಂದೆಯೊಂದಿಗೆ ಪ್ರಾರ್ಥನಾಪೂರ್ವಕವಾಗಿ ಮಾತಾಡಿದನು. (ಮತ್ತಾಯ 14:23; ಲೂಕ 6:12) ಅತಿ ಕೆಡುಕಿನ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಪ್ರಾರ್ಥನೆಯು ಅವನಿಗೆ ಸಹಾಯಮಾಡಿತು. ತನ್ನ ಮರಣದ ಹಿಂದಿನ ರಾತ್ರಿಯಂದು, ಅವನ ಸಂಕಟವು ತುಂಬ ತೀವ್ರವಾಗಿತ್ತು. ಅವನು ಏನು ಮಾಡಿದನು? ಅವನು ‘ಇನ್ನೂ ಆಸಕ್ತಿಯಿಂದ ಪ್ರಾರ್ಥಿಸಿದನು.’ (ಲೂಕ 22:44) ಹೌದು, ದೇವರ ಪರಿಪೂರ್ಣ ಮಗನೇ ಪ್ರಾರ್ಥನೆಯ ಮೇಲೆ ಆತುಕೊಂಡಿದ್ದ ವ್ಯಕ್ತಿಯಾಗಿದ್ದನು. ಆದುದರಿಂದ, ಅವನ ಅಪರಿಪೂರ್ಣ ಹಿಂಬಾಲಕರು ಪ್ರಾರ್ಥನೆಯ ರೂಢಿಯನ್ನು ಎಷ್ಟು ಹೆಚ್ಚಾಗಿ ಬೆಳೆಸಿಕೊಳ್ಳಬೇಕು! ತನ್ನ ಶಿಷ್ಯರು ‘ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರುವಂತೆ’ ಯೇಸು ಕಲಿಸಿದನು. (ಲೂಕ 18:1) ಪ್ರಾರ್ಥನೆಯು, ನಮಗೆ ನಮ್ಮ ಕುರಿತಾಗಿಯೇ ತಿಳಿದಿರುವುದಕ್ಕಿಂತಲೂ ಹೆಚ್ಚು ಉತ್ತಮವಾಗಿ ತಿಳಿದುಕೊಂಡಿರುವವನೊಂದಿಗಿನ ನೈಜವಾದ ಮತ್ತು ಅತ್ಯಾವಶ್ಯಕವಾದ ಸಂವಾದವಾಗಿದೆ. (ಕೀರ್ತನೆ 103:14) ಕ್ರಿಸ್ತನಿಂದಾಗುವ ಸಮಾಧಾನವನ್ನು ನಾವು ನಮ್ಮ ಹೃದಯಗಳಲ್ಲಿ ಸಂರಕ್ಷಿಸಿಡಬೇಕಾದರೆ, ನಾವು ‘ಎಡೆಬಿಡದೆ ಪ್ರಾರ್ಥನೆಮಾಡಬೇಕು.’​—1 ಥೆಸಲೊನೀಕ 5:16.

ನಮ್ಮ ಇತಿಮಿತಿಗಳನ್ನು ಜಯಿಸುವುದು

12. ಯಾವ ಕಾರಣಗಳಿಗಾಗಿ ಕೆಲವರಿಗೆ ತಮ್ಮ ಸೇವೆಯು ಯಥೋಚಿತವಲ್ಲವೆಂದು ಅನಿಸಬಹುದು?

12 ಯೆಹೋವನು ತನ್ನ ಸೇವಕರಲ್ಲಿ ಒಬ್ಬೊಬ್ಬರನ್ನೂ ಅಮೂಲ್ಯವೆಂದು ಪರಿಗಣಿಸುತ್ತಾನೆ. (ಹಗ್ಗಾಯ 2:​7, NW ಪಾದಟಿಪ್ಪಣಿ) ಹಾಗಿದ್ದರೂ, ಅನೇಕರಿಗೆ ಇದನ್ನು ಅಂಗೀಕರಿಸಲು ಕಷ್ಟವಾಗುತ್ತದೆ. ಕೆಲವರು ವೃದ್ಧಾಪ್ಯ, ಹೆಚ್ಚುತ್ತಿರುವ ಕೌಟುಂಬಿಕ ಜವಾಬ್ದಾರಿಗಳು, ಅಥವಾ ಕೆಡುತ್ತಿರುವ ಆರೋಗ್ಯದಿಂದಾಗಿ ನಿರುತ್ಸಾಹಗೊಳ್ಳಬಹುದು. ಇನ್ನಿತರರಿಗೆ, ಅವರು ಬಾಲ್ಯದಲ್ಲಿ ಅನುಭವಿಸಿದಂಥ ಕೆಟ್ಟ ಅನುಭವಗಳಿಂದಾಗಿ ಧಿಕ್ಕರಿಸಲ್ಪಟ್ಟ ಭಾವನೆಯಿರಬಹುದು. ಇನ್ನೂ ಕೆಲವರಿಗೆ, ತಾವು ಹಿಂದೆ ಮಾಡಿದಂಥ ತಪ್ಪುಗಳನ್ನು ಯೆಹೋವನು ಎಂದಾದರೂ ಕ್ಷಮಿಸುವನೋ ಎಂಬ ಸಂದೇಹವಿದ್ದು, ಇದು ಅವರನ್ನು ಕಾಡಿಸುತ್ತಿರಬಹುದು. (ಕೀರ್ತನೆ 51:3) ಇಂಥ ಅನಿಸಿಕೆಗಳ ಕುರಿತಾಗಿ ಏನು ಮಾಡಸಾಧ್ಯವಿದೆ?

13. ತಾವು ಅಯೋಗ್ಯರಾಗಿದ್ದೇವೆಂದು ಅನಿಸುವವರಿಗೆ ಯಾವ ಶಾಸ್ತ್ರೀಯ ಸಾಂತ್ವನವಿದೆ?

13 ಕ್ರಿಸ್ತನಿಂದಾಗುವ ಸಮಾಧಾನವು, ನಮಗೆ ಯೆಹೋವನ ಪ್ರೀತಿಯ ಆಶ್ವಾಸನೆಯನ್ನು ಕೊಡುವುದು. ಇತರರು ಏನನ್ನು ಮಾಡುತ್ತಾರೊ ಅದರೊಂದಿಗೆ ನಮ್ಮ ಕೆಲಸವನ್ನು ಹೋಲಿಸಿನೋಡುವ ಮೂಲಕ ನಮ್ಮ ಮೌಲ್ಯವನ್ನು ಅಳೆಯಲಾಗುತ್ತದೆಂದು ಯೇಸು ಒಮ್ಮೆಯೂ ಹೇಳಲಿಲ್ಲ. ಈ ವಾಸ್ತವಾಂಶದ ಕುರಿತಾಗಿ ಯೋಚಿಸುವ ಮೂಲಕ ನಾವು ನಮ್ಮ ಹೃದಯಗಳಲ್ಲಿ ಸಮಾಧಾನವನ್ನು ಪುನಸ್ಸ್ಥಾಪಿಸಬಹುದು. (ಮತ್ತಾಯ 25:​14, 15; ಮಾರ್ಕ 12:​41-44) ಯೇಸು ನಿಷ್ಠೆಗೆ ಹೆಚ್ಚು ಮಹತ್ವವನ್ನು ಕೊಟ್ಟನು. ಅವನು ತನ್ನ ಶಿಷ್ಯರಿಗಂದದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಸ್ವತಃ ಯೇಸುವೇ ಮನುಷ್ಯರಿಂದ ‘ಧಿಕ್ಕರಿಸಲ್ಪಟ್ಟನು.’ ಹಾಗಿದ್ದರೂ, ತನ್ನ ತಂದೆಯು ತನ್ನನ್ನು ಪ್ರೀತಿಸುತ್ತಾನೆಂಬುದರ ಕುರಿತಾಗಿ ಅವನಿಗೆ ಯಾವುದೇ ಶಂಕೆಯಿರಲಿಲ್ಲ. (ಯೆಶಾಯ 53:3; ಯೋಹಾನ 10:17) ಮತ್ತು ತನ್ನ ಶಿಷ್ಯರು ಸಹ ದೇವರಿಗೂ ತನಗೂ ಪ್ರಿಯರಾಗಿದ್ದಾರೆಂದು ಅವನು ಅವರಿಗೆ ಹೇಳಿದನು. (ಯೋಹಾನ 14:21) ಇದನ್ನು ಒತ್ತಿಹೇಳಲಿಕ್ಕಾಗಿ, ಯೇಸು ಅಂದದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29-31) ಇದು ಯೆಹೋವನ ಪ್ರೀತಿಯ ಎಷ್ಟೊಂದು ಅನುರಾಗಭರಿತ ಆಶ್ವಾಸನೆಯಾಗಿದೆ!

14. ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರನ್ನು ಅಮೂಲ್ಯವೆಂದೆಣಿಸುತ್ತಾನೆ ಎಂಬುದಕ್ಕೆ ಯಾವ ಆಶ್ವಾಸನೆ ನಮಗಿದೆ?

14 ಯೇಸು ಇದನ್ನೂ ಹೇಳಿದನು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ಯೇಸುವನ್ನು ಹಿಂಬಾಲಿಸುವಂತೆ ಯೆಹೋವನು ನಮ್ಮನ್ನು ಎಳೆದಿರುವುದರಿಂದ ನಾವು ರಕ್ಷಿಸಲ್ಪಡುವಂತೆ ಆತನು ಬಯಸುತ್ತಾನೆಂಬುದು ಸುವ್ಯಕ್ತ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು [“ನಾಶವಾಗುವುದು,” NW] ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.” (ಮತ್ತಾಯ 18:14) ಆದುದರಿಂದ ನೀವು ಪೂರ್ಣ ಹೃದಯದಿಂದ ಸೇವೆಸಲ್ಲಿಸುತ್ತಿರುವಲ್ಲಿ, ನಿಮ್ಮ ಉತ್ತಮ ಕೆಲಸಗಳ ಕುರಿತಾಗಿ ನೀವು ಸಂತೋಷಪಡಬಹುದು. (ಗಲಾತ್ಯ 6:4) ಒಂದುವೇಳೆ ನೀವು ಹಿಂದೆ ಮಾಡಿದಂಥ ತಪ್ಪುಗಳು ನಿಮ್ಮನ್ನು ಕಾಡಿಸುತ್ತಿರುವಲ್ಲಿ, ನಿಜವಾಗಿ ಪಶ್ಚಾತ್ತಾಪಪಟ್ಟಿರುವವರನ್ನು ಯೆಹೋವನು “ಮಹಾಕೃಪೆಯಿಂದ” ಕ್ಷಮಿಸುವನು ಎಂಬುದರ ಕುರಿತು ಆಶ್ವಾಸನೆಯುಳ್ಳವರಾಗಿರಿ. (ಯೆಶಾಯ 43:25; 55:7) ಬೇರೆ ಯಾವುದೇ ಕಾರಣಕ್ಕಾಗಿ ನೀವು ಎದೆಗುಂದಿರುವುದಾದರೆ, “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂಬುದನ್ನು ನೆನಪಿನಲ್ಲಿಡಿ.​—ಕೀರ್ತನೆ 34:18.

15. (ಎ) ಸೈತಾನನು ನಮ್ಮ ಸಮಾಧಾನವನ್ನು ಹೇಗೆ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ? (ಬಿ) ನಮಗೆ ಯೆಹೋವನಲ್ಲಿ ಯಾವ ಭರವಸೆ ಇರಸಾಧ್ಯವಿದೆ?

15 ನಿಮ್ಮ ಸಮಾಧಾನವನ್ನು ಕಸಿದುಕೊಳ್ಳುವುದರಿಂದ ಸಿಗುವ ಆನಂದವು ಸೈತಾನನಿಗೆ ಇನ್ಯಾವುದೇ ಸಂಗತಿಯಿಂದ ಸಿಗುವುದಿಲ್ಲ. ನಾವೆಲ್ಲರೂ ಯಾವುದರ ವಿರುದ್ಧ ಹೋರಾಡುತ್ತೇವೊ, ಆ ಬಾಧ್ಯತೆಯಾಗಿ ಪಡೆದಿರುವ ಪಾಪಕ್ಕೆ ಅವನೇ ಜವಾಬ್ದಾರನು. (ರೋಮಾಪುರ 7:​21-24) ನಿಮ್ಮ ಅಪರಿಪೂರ್ಣತೆಯಿಂದಾಗಿ ನಿಮ್ಮ ಸೇವೆಯು ದೇವರಿಗೆ ಅಂಗೀಕಾರಾರ್ಹವಾಗಿಲ್ಲವೆಂದು ನಿಮಗನಿಸುವಂತೆ ಅವನು ಖಂಡಿತವಾಗಿಯೂ ಇಷ್ಟಪಡುತ್ತಾನೆ. ಪಿಶಾಚನು ನಿಮ್ಮನ್ನು ನಿರುತ್ತೇಜಿಸುವಂತೆ ಎಂದೂ ಬಿಡಬೇಡಿ! ಅವನ ಸಂಚುಗಳ ಕುರಿತಾಗಿ ನಿಮಗೆ ಅರಿವಿರಲಿ, ಮತ್ತು ಆ ಅರಿವು ನಿಮ್ಮನ್ನು ತಾಳಿಕೊಳ್ಳಲು ದೃಢನಿರ್ಧಾರವುಳ್ಳವರನ್ನಾಗಿ ಮಾಡಲಿ. (2 ಕೊರಿಂಥ 2:11; ಎಫೆಸ 6:​11-13) “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ” ಎಂಬುದನ್ನು ನೆನಪಿನಲ್ಲಿಡಿ. (1 ಯೋಹಾನ 3:20) ಯೆಹೋವನು ಕೇವಲ ನಮ್ಮ ಬಲಹೀನತೆಗಳನ್ನು ನೋಡುವುದಿಲ್ಲ. ಅವನು ನಮ್ಮ ಹೇತುಗಳನ್ನು ಮತ್ತು ಉದ್ದೇಶಗಳನ್ನೂ ನೋಡುತ್ತಾನೆ. ಆದುದರಿಂದ, “ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವದಿಲ್ಲ; ತನ್ನ ಸ್ವಾಸ್ತ್ಯವನ್ನು ಕೈಬಿಡುವದಿಲ್ಲ” ಎಂಬ ಕೀರ್ತನೆಗಾರನ ಮಾತುಗಳಿಂದ ಸಾಂತ್ವನವನ್ನು ಪಡೆದುಕೊಳ್ಳಿ.​—ಕೀರ್ತನೆ 94:14.

ಕ್ರಿಸ್ತನಿಂದಾಗುವ ಸಮಾಧಾನದಲ್ಲಿ ಐಕ್ಯರು

16. ತಾಳಿಕೊಳ್ಳಲಿಕ್ಕಾಗಿ ನಾವು ಮಾಡುವ ಪ್ರಯಾಸದಲ್ಲಿ ನಾವು ಒಬ್ಬಂಟಿಗರಾಗಿಲ್ಲ ಹೇಗೆ?

16 ಕ್ರಿಸ್ತನಿಂದಾಗುವ ಸಮಾಧಾನವು ನಮ್ಮ ಹೃದಯಗಳನ್ನು ನಿಯಂತ್ರಿಸುವಂತೆ ನಾವು ಬಿಡಬೇಕು, ಯಾಕೆಂದರೆ ನಾವು ‘ಒಂದೇ ದೇಹಕ್ಕೆ ಸೇರಿರಲು ಕರೆಯಲ್ಪಟ್ಟೆವು’ ಎಂದು ಪೌಲನು ಬರೆದನು. ಪೌಲನು ಯಾರಿಗೆ ಬರೆದನೊ ಆ ಅಭಿಷಿಕ್ತ ಕ್ರೈಸ್ತರು ಕ್ರಿಸ್ತನ ದೇಹದ ಭಾಗವಾಗಿರಲು ಕರೆಯಲ್ಪಟ್ಟಿದ್ದರು. ಇದು, ಇಂದು ಉಳಿದಿರುವ ಅಭಿಷಿಕ್ತರ ವಿಷಯದಲ್ಲೂ ಸತ್ಯವಾಗಿದೆ. ಅವರ ಸಂಗಡಿಗರಾದ ‘ಬೇರೆ ಕುರಿಗಳು’ ಅವರೊಂದಿಗೆ ‘ಒಬ್ಬನೇ ಕುರುಬನಾಗಿರುವ’ ಯೇಸು ಕ್ರಿಸ್ತನ ಕೆಳಗೆ ‘ಒಂದೇ ಹಿಂಡಾಗಿ’ ಅವರೊಂದಿಗೆ ಐಕ್ಯರಾಗಿದ್ದಾರೆ. (ಯೋಹಾನ 10:16) ಜೊತೆಯಾಗಿ, ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಲೋಕವ್ಯಾಪಕ “ಹಿಂಡು,” ಕ್ರಿಸ್ತನಿಂದಾಗುವ ಸಮಾಧಾನವು ತಮ್ಮ ಹೃದಯಗಳನ್ನು ನಿಯಂತ್ರಿಸುವಂತೆ ಅನುಮತಿಸುತ್ತಿದ್ದಾರೆ. ನಾವು ಒಬ್ಬಂಟಿಗರಲ್ಲವೆಂಬುದನ್ನು ತಿಳಿದಿರುವುದು, ನಮಗೆ ತಾಳಿಕೊಳ್ಳುವಂತೆ ಸಹಾಯಮಾಡುತ್ತದೆ. ಪೇತ್ರನು ಬರೆದುದು: “ನೀವು ನಂಬಿಕೆಯಲ್ಲಿ ದೃಢವಾಗಿದ್ದು [ಸೈತಾನನನ್ನು] ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.”​—1 ಪೇತ್ರ 5:9.

17. ಕ್ರಿಸ್ತನಿಂದಾಗುವ ಸಮಾಧಾನವು ನಮ್ಮ ಹೃದಯಗಳನ್ನು ನಿಯಂತ್ರಿಸುವಂತೆ ಬಿಡಲು ನಮಗೆ ಯಾವ ಕಾರಣವಿದೆ?

17 ಹೀಗಿರುವುದರಿಂದ, ನಾವೆಲ್ಲರೂ ದೇವರ ಪವಿತ್ರಾತ್ಮದ ಪ್ರಮುಖ ಫಲವಾಗಿರುವ ಸಮಾಧಾನವನ್ನು ಬೆಳೆಸುತ್ತಾ ಇರೋಣ. (ಗಲಾತ್ಯ 5:​22, 23) ಯಾರು ನಿರ್ಮಲರೂ, ನಿರ್ದೋಷಿಗಳೂ, ಶಾಂತರೂ ಆಗಿರುವುದನ್ನು ಯೆಹೋವನು ಕಂಡುಕೊಳ್ಳುತ್ತಾನೊ ಅವರು ಕಟ್ಟಕಡೆಗೆ ಪರದೈಸ ಭೂಮಿಯಲ್ಲಿ ನಿತ್ಯಜೀವದೊಂದಿಗೆ ಆಶೀರ್ವದಿಸಲ್ಪಡುವರು ಮತ್ತು ಅಲ್ಲಿ ನೀತಿಯು ವಾಸವಾಗಿರುವುದು. (2 ಪೇತ್ರ 3:​13, 14) ಕ್ರಿಸ್ತನಿಂದಾಗುವ ಸಮಾಧಾನವು ನಮ್ಮ ಹೃದಯಗಳನ್ನು ನಿಯಂತ್ರಿಸುವಂತೆ ಬಿಡಲು ನಮಗೆ ಪ್ರತಿಯೊಂದು ಕಾರಣವಿದೆ.

[ಪಾದಟಿಪ್ಪಣಿ]

^ ಪ್ಯಾರ. 9 ಕೆಲವೊಂದು ಸಂದರ್ಭಗಳಲ್ಲಿ, ಚಿಂತೆಯು ಅನಾರೋಗ್ಯದಿಂದಾಗಿ ಉಂಟಾಗಬಹುದು ಅಥವಾ ಹೆಚ್ಚಾಗಬಹುದು. ಇದರ ಒಂದು ಉದಾಹರಣೆ, ಕಾಯಿಲೆಯಿಂದ ಬರುವ ಖಿನ್ನತೆಯಾಗಿದೆ.

ನಿಮಗೆ ಜ್ಞಾಪಕವಿದೆಯೊ?

• ಕ್ರಿಸ್ತನಿಂದಾಗುವ ಸಮಾಧಾನವು ಏನಾಗಿದೆ?

• ನಾವು ಅನ್ಯಾಯವನ್ನು ಎದುರಿಸುತ್ತಿರುವಾಗ ಕ್ರಿಸ್ತನಿಂದಾಗುವ ಸಮಾಧಾನವು ನಮ್ಮ ಹೃದಯಗಳನ್ನು ಹೇಗೆ ನಿಯಂತ್ರಿಸಬಹುದು?

• ಕ್ರಿಸ್ತನಿಂದಾಗುವ ಸಮಾಧಾನವು ನಾವು ಚಿಂತೆಯನ್ನು ನಿಭಾಯಿಸುವಂತೆ ಹೇಗೆ ಸಹಾಯಮಾಡಬಲ್ಲದು?

• ನಾವು ಅಯೋಗ್ಯರೆಂದು ನಮಗನಿಸುವಾಗ, ಕ್ರಿಸ್ತನ ಸಮಾಧಾನವು ನಮ್ಮನ್ನು ಹೇಗೆ ಸಂತೈಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ತನ್ನ ಮೇಲೆ ಆರೋಪಹೊರಿಸಿದವರ ಮುಂದೆ, ಯೇಸು ತನ್ನನ್ನೇ ಯೆಹೋವನಿಗೆ ವಹಿಸಿಕೊಟ್ಟನು

[ಪುಟ 16ರಲ್ಲಿರುವ ಚಿತ್ರ]

ಒಬ್ಬ ಪ್ರೀತಿಪರ ತಂದೆಯ ಬೆಚ್ಚಗಿನ ಆಲಿಂಗನದಂತೆ, ಯೆಹೋವನ ಸಂತೈಸುವಿಕೆಗಳು ನಮ್ಮ ಚಿಂತೆಯನ್ನು ಶಮನಗೊಳಿಸಬಲ್ಲವು

[ಪುಟ 18ರಲ್ಲಿರುವ ಚಿತ್ರ]

ದೇವರ ದೃಷ್ಟಿಯಲ್ಲಿ ತಾಳ್ಮೆಯು ತುಂಬ ಅಮೂಲ್ಯವಾಗಿದೆ