“ಫ್ರಾನ್ಸ್‌ನಲ್ಲಿ ಏನು ನಡೆಯುತ್ತಾ ಇದೆ?”
“ಫ್ರಾನ್ಸ್‌ನಲ್ಲಿ ಏನು ನಡೆಯುತ್ತಾ ಇದೆ?”
“ಸ್ವಾತಂತ್ರ್ಯ, ಪ್ರಿಯ ಸ್ವಾತಂತ್ರ್ಯ” ಎಂಬ ಪದಗಳು, ಫ್ರಾನ್ಸ್ ದೇಶದ ರಾಷ್ಟ್ರಗೀತೆಯಾಗಿರುವ “ಲಾ ಮಾರ್ಸೆಯಾಸ್”ನಲ್ಲಿ ಅಡಕವಾಗಿವೆ. ನಿಸ್ಸಂದೇಹವಾಗಿಯೂ, ಸ್ವಾತಂತ್ರ್ಯವು ತುಂಬ ಅಮೂಲ್ಯವಾದ ವಿಷಯವಾಗಿದೆ. ಆದರೆ ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳು, ಮೂಲಭೂತ ಸ್ವಾತಂತ್ರ್ಯಗಳನ್ನು ಶಿಥಿಲಗೊಳಿಸಲಾಗುತ್ತಿದೆಯೆಂಬ ಚಿಂತೆಗೆ ಕಾರಣವಾಗಿವೆ. ಆದುದರಿಂದ ಇಸವಿ 2000ದ ನವೆಂಬರ್ 3ರ ಶುಕ್ರವಾರದಂದು, ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು, ಒಂದು ವಿಶೇಷ ಕಿರುಹೊತ್ತಗೆಯ 1.2 ಕೋಟಿ ಪ್ರತಿಗಳನ್ನು ಹಂಚಿದರು. ಆ ಕಿರುಹೊತ್ತಗೆಯ ಶೀರ್ಷಿಕೆಯು, “ಫ್ರಾನ್ಸ್‌ನಲ್ಲಿ ಏನು ನಡೆಯುತ್ತಾ ಇದೆ? ಸ್ವಾತಂತ್ರ್ಯದ ಹಿಂಜರಿತವಾಗುತ್ತಿದೆಯೆ?” ಎಂದಾಗಿತ್ತು.
ಫ್ರಾನ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳು ಇತ್ತೀಚೆಗೆ ಹಲವಾರು ವರ್ಷಗಳಿಂದ ಬೇರೆ ಬೇರೆ ರಾಜಕಾರಣಿಗಳು ಮತ್ತು ಪಂಥವಿರೋಧಿ ಗುಂಪುಗಳ ದಾಳಿಗೆ ತುತ್ತಾಗಿದ್ದಾರೆ. ಇದು ಸಾಕ್ಷಿಗಳಿಗೆ ಒಬ್ಬೊಬ್ಬರೋಪಾದಿ, ಸಭೆಯೋಪಾದಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತೊಂದರೆಗಳನ್ನುಂಟುಮಾಡಿದೆ. ಆದರೆ 2000ದ ಜೂನ್ 23ರಂದು, ಕಾನ್ಸೆ ಡೆಟಾ ಎಂಬ ಫ್ರಾನ್ಸ್‌ನ ಅತ್ಯುಚ್ಛ ಆಡಳಿತ ನ್ಯಾಯಾಲಯವು, 1,100 ಮೊಕದ್ದಮೆಗಳ ಕುರಿತಾಗಿ ಕೆಳವರ್ಗದ 31 ನ್ಯಾಯಾಲಯಗಳ ಅಭಿಪ್ರಾಯವನ್ನು ದೃಢೀಕರಿಸಿದ ಒಂದು ಗಮನಾರ್ಹ ತೀರ್ಪನ್ನು ನೀಡಿತು. ಯೆಹೋವನ ಸಾಕ್ಷಿಗಳು ಪಾಲಿಸುತ್ತಿರುವ ಧರ್ಮವು, ಫ್ರೆಂಚ್ ಕಾನೂನಿಗೆ ಹೊಂದಿಕೆಯಲ್ಲಿದೆ ಮತ್ತು ಅವರ ರಾಜ್ಯ ಸಭಾಗೃಹಗಳಿಗೆ ಸಹ ಬೇರೆ ಧರ್ಮಗಳಿಗೆ ಕೊಡಲಾಗುತ್ತಿರುವ ಆರ್ಥಿಕ ವಿನಾಯಿತಿಗಳನ್ನು ಪಡೆಯುವ ಹಕ್ಕಿದೆಯೆಂಬುದನ್ನು ಉಚ್ಚ ನ್ಯಾಯಾಲಯವು ದೃಢೀಕರಿಸಿತು.
ಆದರೆ ಈ ತೀರ್ಪನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಾ, ಫ್ರಾನ್ಸ್‌ನ ಆರ್ಥಿಕ ಖಾತೆಯು, ಧಾರ್ಮಿಕ ಸಂಸ್ಥೆಗಳಿಗೆ ಕೊಡಲಾಗುತ್ತಿರುವ ಕಂದಾಯ ವಿನಾಯಿತಿಯನ್ನು ಯೆಹೋವನ ಸಾಕ್ಷಿಗಳಿಗೆ ಕೊಡಲು ಈಗಲೂ ನಿರಾಕರಿಸುತ್ತಿದೆ. ಫ್ರಾನ್ಸ್‌ನಲ್ಲಿರುವ 1,500 ಸ್ಥಳಿಕ ಸಭೆಗಳೊಂದಿಗೆ ಸಹವಾಸಮಾಡುತ್ತಿರುವ ಸಾಕ್ಷಿಗಳು ಮತ್ತು ಸ್ನೇಹಿತರು ಕೊಡುವಂಥ ಕಾಣಿಕೆಗಳ ಮೇಲೆ ಈ ಖಾತೆಯು 60 ಪ್ರತಿಶತ ತೆರಿಗೆಯನ್ನು ವಿಧಿಸಿದೆ. ಸದ್ಯದಲ್ಲಿ ಈ ಮೊಕದ್ದಮೆಯು ನ್ಯಾಯಾಲಯದಲ್ಲಿ ನಡೆಯುತ್ತಾ ಇದೆ.
ಈ ಮುಂಚೆ ತಿಳಿಸಲ್ಪಟ್ಟಿರುವ ಕಾರ್ಯಾಚರಣೆಯ ಗುರಿಯು, ಈ ವಿರೋಧಾಭಾಸವನ್ನು ಬಯಲಿಗೆಳೆದು, ಅಂಥ ಕಡ್ಡಾಯ ತೆರಿಗೆ ಪದ್ಧತಿ ಮತ್ತು ಎಲ್ಲರ ಧಾರ್ಮಿಕ ಸ್ವಾತಂತ್ರ್ಯವನ್ನು *
ಶಿಥಿಲಗೊಳಿಸುವ ಯೋಜಿತ ನಿಯಮಗಳಲ್ಲಿ ಅಡಕವಾಗಿರುವ ಗಂಡಾಂತರಗಳನ್ನು ಎತ್ತಿತೋರಿಸುವುದಾಗಿತ್ತು.ಒಂದು ಕಾರ್ಯಮಗ್ನ ದಿನ
ಬೆಳಗ್ಗೆ ಎರಡು ಗಂಟೆಗೆ, ಕೆಲವು ಸಭೆಗಳಲ್ಲಿನ ಸಾಕ್ಷಿಗಳು ರೈಲ್ವೇ ನಿಲ್ದಾಣಗಳು ಮತ್ತು ಕಾರ್ಖಾನೆಗಳ ಹೊರಗೆ ಮತ್ತು ಅನಂತರ ವಿಮಾನನಿಲ್ದಾಣಗಳಲ್ಲಿ ವಿತರಣೆಯನ್ನು ಆರಂಭಿಸಿದರು. ಆರು ಗಂಟೆಗೆ ಪ್ಯಾರಿಸ್ ನಗರವು ಎಚ್ಚೆತ್ತುಕೊಳ್ಳುತ್ತದೆ. ಕೆಲಸಕ್ಕೆ ಹೋಗುತ್ತಿರುವ ಜನರನ್ನು ಭೇಟಿಯಾಗಲು, ಮೊದಲೇ ನಿಯೋಜಿಸಲ್ಪಟ್ಟ ಸ್ಥಳಗಳಲ್ಲಿ ಸುಮಾರು 6,000 ಸ್ವಯಂ ಸೇವಕರು ನಿಂತುಕೊಂಡಿದ್ದರು. ಒಬ್ಬ ಯುವ ಮಹಿಳೆಯು ಹೇಳಿದ್ದು: “ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನೀವೇನನ್ನು ಮಾಡುತ್ತಿದ್ದೀರೊ ಅದು ಒಳ್ಳೇದು. ಅದು ಕೇವಲ ಯೆಹೋವನ ಸಾಕ್ಷಿಗಳನ್ನು ಒಳಗೂಂಡಿರುವ ವಿಷಯವಾಗಿರುವುದಿಲ್ಲ.” ಮಾರ್ಸೇಯಲ್ಲಿ, 350ಕ್ಕಿಂತಲೂ ಹೆಚ್ಚು ಸಾಕ್ಷಿಗಳು ಭೂಗರ್ಭ ರೈಲ್ವೇ (ಮೆಟ್ರೊ) ನಿಲ್ದಾಣಗಳಲ್ಲಿ ಮತ್ತು ಬೀದಿಗಳಲ್ಲಿ ಈ ಕಿರುಹೊತ್ತಗೆಯನ್ನು ವಿತರಿಸುತ್ತಿದ್ದರು. ಒಂದು ತಾಸಿನೊಳಗೆ, ರಾಷ್ಟ್ರೀಯ ರೇಡಿಯೋ ಈ ಕಾರ್ಯಾಚರಣೆಯ ಕುರಿತಾಗಿ ತನ್ನ ಶ್ರೋತೃವೃಂದಕ್ಕೆ ಪ್ರಕಟಿಸುತ್ತಾ, ಅವರನ್ನು ಒಬ್ಬ ಯೆಹೋವನ ಸಾಕ್ಷಿಯು ಭೇಟಿಯಾಗಿ ಮಾತಾಡಿಸುವಲ್ಲಿ ಆಶ್ಚರ್ಯಪಡದಂತೆ ಹೇಳಿತು. ಮಾನವ ಹಕ್ಕುಗಳ ಯೂರೋಪಿಯನ್ ನ್ಯಾಯಾಲಯದ ಸ್ಥಾನವಾಗಿರುವ ಸ್ಟ್ರಾಸ್‌ಬರ್ಗ್‌ನ ಕೇಂದ್ರ ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು, ಕಿರುಹೊತ್ತಗೆಯ ಒಂದು ಪ್ರತಿಯನ್ನು ಪಡೆಯಲಿಕ್ಕಾಗಿ ತಾಳ್ಮೆಯಿಂದ ಸಾಲಿನಲ್ಲಿ ನಿಂತುಕೊಂಡರು. ನಮ್ಮ ನಂಬಿಕೆಗಳನ್ನು ನಂಬದಿದ್ದರೂ, ನಮ್ಮ ಹೋರಾಟವು ತುಂಬ ಪ್ರಾಮುಖ್ಯವೂ ನ್ಯಾಯವಾದದ್ದೂ ಆಗಿರುವುದರಿಂದ ನಮ್ಮ ಮೊಕದ್ದಮೆಯನ್ನು ತುಂಬ ಆಸಕ್ತಿಯಿಂದ ಗಮನಿಸುತ್ತಿದ್ದೇನೆ ಎಂದು ಒಬ್ಬ ವಕೀಲನು ಹೇಳಿದನು.
ಎಂಟು ಗಂಟೆಗೆ, ಭಾರಿ ಮಳೆಯಿದ್ದರೂ ಗ್ರನೊಬಲ್‌ನ ಆ್ಯಲ್‌ಪೈನ್ ನಗರದಲ್ಲಿ 507 ಮಂದಿ ಸಾಕ್ಷಿಗಳು, ಬೀದಿಗಳಲ್ಲಿ ಜನರಿಗಾಗಿ ಹುಡುಕಿದರು ಅಥವಾ ಪತ್ರ ಪೆಟ್ಟಿಗೆಗಳಲ್ಲಿ ಕಿರುಹೊತ್ತಗೆಗಳನ್ನು ಹಾಕಿದರು. ಕಾರುಗಳ ಮತ್ತು ಟ್ರ್ಯಾಮ್‌ಗಳ ಚಾಲಕರು, ಏನೋ ನಡೆಯುತ್ತಾ ಇದೆಯೆಂಬುದನ್ನು ಗಮನಿಸಿ ತಮ್ಮ ವಾಹನಗಳನ್ನು ನಿಲ್ಲಿಸಿ ಒಂದು ಕಿರುಹೊತ್ತಗೆಗಾಗಿ ಕೇಳಿದರು. ಪೊಯಿಟ್ಯರ್ಸ್ ಎಂಬ ಪಾಶ್ಚಾತ್ಯ ನಗರಕ್ಕೆ ಒಂಬತ್ತು ಗಂಟೆಗೆ ರೈಲಿನಲ್ಲಿ ಆಗಮಿಸುತ್ತಿದ್ದ ಪ್ರಯಾಣಿಕರು ಈಗಾಗಲೇ ತಾವು ರೈಲನ್ನು ಹತ್ತಿದ ನಿಲ್ದಾಣದಲ್ಲೇ ಕಿರುಹೊತ್ತಗೆಯನ್ನು ಪಡೆದಿದ್ದರು. ಜರ್ಮನ್ ಗಡಿಪ್ರದೇಶದ ಹತ್ತಿರದಲ್ಲಿರುವ ಮಲ್‌ಹೂಸ್‌ನಲ್ಲಿ ಈಗಾಗಲೇ 40,000 ಪ್ರತಿಗಳನ್ನು ವಿತರಿಸಲಾಗಿತ್ತು.
ಹತ್ತು ಗಂಟೆಯೊಳಗೆ, ಅನೇಕ ಸಭೆಗಳು ತಮ್ಮ ಬಳಿ ಇದ್ದ ಕಿರುಹೊತ್ತಗೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚನ್ನು ವಿತರಿಸಿದರು. ಬೆಳಗ್ಗಿನ ಸಮಯವು ದಾಟಿದಂತೆ ಕಿರುಹೊತ್ತಗೆಯನ್ನು ತೆಗೆದುಕೊಳ್ಳಲು ನಿರಾಕರಿಸಿದವರು ತೀರ ಕಡಿಮೆ ಮಂದಿ, ಮತ್ತು ಫಲಿತಾಂಶವಾಗಿ ಅನೇಕ ಆಸಕ್ತಿಕರ ಸಂಭಾಷಣೆಗಳು ನಡೆಸಲ್ಪಟ್ಟವು. ಸ್ವಿಸ್ ಗಡಿಪ್ರದೇಶದಿಂದ ಕೇವಲ 80ಕ್ಕಿಂತಲೂ ಹೆಚ್ಚು ಕಿಲೋಮೀಟರ್ ದೂರವಿರುವ ಬಾಸನ್‌ಸನ್‌ನಲ್ಲಿ, ಒಬ್ಬ ಯುವಕನು ಬೈಬಲಿನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸುತ್ತಾ, ದೇವರು ದುಷ್ಟತನವನ್ನು ಏಕೆ ಅನುಮತಿಸಿದ್ದಾನೆಂದು ಕೇಳಿದನು. ಹತ್ತಿರದಲ್ಲಿರುವ ರಾಜ್ಯ ಸಭಾಗೃಹದಲ್ಲಿ ಚರ್ಚೆಯನ್ನು ಮುಂದುವರಿಸುವಂತೆ ಸಾಕ್ಷಿಯು ಅವನನ್ನು ಕೇಳಿಕೊಂಡನು. ಮತ್ತು ಅಲ್ಲಿ ಕೂಡಲೇ ಅವನೊಂದಿಗೆ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ನಿಂದ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲಾಯಿತು.
ಮಧ್ಯಾಹ್ನದ ಹೊತ್ತಿನಲ್ಲಿ ಅನೇಕ ಸಾಕ್ಷಿಗಳು ತಮ್ಮ ವಿರಾಮದ ಅವಧಿಯನ್ನು, ಒಂದೊ ಎರಡೊ ತಾಸುಗಳನ್ನು ಸಾರಲಿಕ್ಕಾಗಿ ಉಪಯೋಗಿಸಿದರು. ಇಡೀ ಮಧ್ಯಾಹ್ನ ಈ ವಿತರಣೆಯು ಮುಂದುವರಿಯಿತು. ಮತ್ತು ಹಲವಾರು ಸಭೆಗಳು ಆ ಮಧ್ಯಾಹ್ನ ಮೂರು ಅಥವಾ ನಾಲ್ಕು ಗಂಟೆಯೊಳಗೆ ತಮ್ಮ ಕೆಲಸವನ್ನು ಮುಗಿಸಿಬಿಟ್ಟರು. ಶಾಂಪೇನ್‌ನ ರಾಜಧಾನಿಯಾಗಿರುವ ರೀಮ್ಸ್‌ನಲ್ಲಿ, ಗತಕಾಲದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಮಾಡಿದ್ದ ಅಥವಾ ಸಹವಾಸಮಾಡುತ್ತಿದ್ದ ಕೆಲವು ಜನರು, ಸಭೆಯೊಂದಿಗೆ ಪುನಃ ಸಂಪರ್ಕವನ್ನು ಬೆಳೆಸುವ ಆಶೆಯನ್ನು ವ್ಯಕ್ತಪಡಿಸಿದರು. ಬಾರ್ಡ್ಯಕ್ಸ್‌ನಲ್ಲಿ ಮೂರು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲಾಯಿತು. ಅದೇ ನಗರದಲ್ಲಿ, ಒಬ್ಬ ಸಾಕ್ಷಿಯು ವಾರ್ತಾಪತ್ರಿಕೆಯನ್ನು ಖರೀದಿಸಲು ಒಂದು ಅಂಗಡಿಯನ್ನು ಪ್ರವೇಶಿಸಿದಾಗ, ಕೌಂಟರ್ ಮೇಲೆ ಆ ಕಿರುಹೊತ್ತಗೆಗಳ ಒಂದು ರಾಶಿ ಇರುವುದನ್ನು ನೋಡಿದಳು. ಹಿಂದೆ ಒಬ್ಬ ಸಾಕ್ಷಿಯಾಗಿದ್ದ ಆ ಅಂಗಡಿಯ ಮಾಲೀಕಳು, ಆ ಕಿರುಹೊತ್ತಗೆಯನ್ನು ಪಡೆದುಕೊಂಡು, ಅದೆಷ್ಟು ಪ್ರಾಮುಖ್ಯವಾಗಿದೆಯೆಂಬುದನ್ನು ಗ್ರಹಿಸಿ, ಸ್ವತಃ ಬೇರೆಯವರಿಗೆ ಅದನ್ನು ನೀಡಲಿಕ್ಕಾಗಿ ಅದರ ಫೋಟೋಕಾಪಿಗಳನ್ನು ಮಾಡಿದ್ದಳು.
ನಾರ್ಮಂಡಿಯ ಲಹಾವ್ರಲ್ಲಿ, ಯೆಹೋವನ ಸಾಕ್ಷಿಗಳ ಕಾಣಿಕೆಗಳ ಮೇಲೆ ತೆರಿಗೆಯನ್ನು ಹೊರಿಸಲಾಗಿದೆಯೆಂದು ರೇಡಿಯೋದಲ್ಲಿ ಕೇಳಿಸಿಕೊಂಡ ಒಬ್ಬ ಪ್ರಾಟೆಸ್ಟೆಂಟ್ ಮಹಿಳೆಗೆ ಧಕ್ಕೆ ಹೊಡೆದಂತಾಯಿತು.
ಅವಳು ಕಿರುಹೊತ್ತಗೆಯನ್ನು ಆತುರದಿಂದ ಸ್ವೀಕರಿಸಿದಳು, ಮತ್ತು ಇಂಥ ಅನ್ಯಾಯದ ವಿರುದ್ಧ ತಮ್ಮ ಧ್ವನಿಯೆತ್ತಿದ್ದಕ್ಕಾಗಿ ಸಾಕ್ಷಿಗಳನ್ನು ಅಭಿನಂದಿಸುತ್ತಾಳೆ. ಸಾಯಂಕಾಲ 7:20ಕ್ಕೆ, ಲಾಯನ್ಸ್‌ನಲ್ಲಿನ ಪ್ರಾದೇಶಿಕ ಟಿವಿ ವಾರ್ತೆಗಳಲ್ಲಿ ಆ ವಿತರಣೆಯ ಕುರಿತಾಗಿ ಹೀಗೆ ಹೇಳಲಾಯಿತು: “ಇಂದು ಬೆಳಗ್ಗೆ, ಯೆಹೋವನ ಸಾಕ್ಷಿಗಳ ಕಿರುಹೊತ್ತಗೆಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ಮಳೆಹನಿಗಳಿಂದ ತಪ್ಪಿಸಿಕೊಳ್ಳುವುದು ಹೆಚ್ಚು ಸುಲಭವಾಗಿತ್ತು.” ಇಬ್ಬರು ಸಾಕ್ಷಿಗಳನ್ನು ಇಂಟರ್‌ವ್ಯೂ ಮಾಡಲಾಯಿತು, ಮತ್ತು ಆ ಕಾರ್ಯಾಚರಣೆಯ ಕಾರಣಗಳನ್ನು ವಿವರಿಸಲಾಯಿತು.ತಮ್ಮ ಐಹಿಕ ಕೆಲಸದ ನಂತರ ಈ ಕೆಲಸದಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದ ಸಾಕ್ಷಿಗಳು, ಮನೆಗೆ ಹಿಂದಿರುಗುತ್ತಿದ್ದ ಪ್ರಯಾಣಿಕರಿಗೆ ಕಿರುಹೊತ್ತಗೆಗಳನ್ನು ವಿತರಿಸಿದರು ಮತ್ತು ಇನ್ನೂ ಕೆಲವೊಂದನ್ನು ಪತ್ರ ಪೆಟ್ಟಿಗೆಗಳಲ್ಲಿ ಹಾಕಿದರು. ಪಿಂಗಾಣಿ ವಸ್ತುಗಳಿಗಾಗಿ ಪ್ರಸಿದ್ಧವಾಗಿರುವ ಲೀಮೊಸ್ ಮತ್ತು ಬ್ರೆಸ್ಟ್‌ನಂಥ ಪಟ್ಟಣಗಳಲ್ಲಿ, ರಾತ್ರಿ 11:00 ಗಂಟೆಗೆ ಚಿತ್ರಮಂದಿರದಿಂದ ಹೊರಬರುತ್ತಿದ್ದ ಜನರು, ಆ ದಿನ ಕಿರುಹೊತ್ತಗೆಯನ್ನು ಪಡೆದ ಕೊನೆಯ ವ್ಯಕ್ತಿಗಳಾಗಿದ್ದರು. ಉಳಿದಂಥ ಕಿರುಹೊತ್ತಗೆಗಳನ್ನು ಶೇಖರಿಸಿ, ಮುಂದಿನ ಬೆಳಗ್ಗೆ ವಿತರಿಸಲಾಯಿತು.
ಫಲಿತಾಂಶಗಳು
ಒಬ್ಬ ಸಾಕ್ಷಿ ಹೀಗೆ ಬರೆದಳು: “ನಮ್ಮ ಶತ್ರುಗಳು ನಮ್ಮನ್ನು ದುರ್ಬಲಗೊಳಿಸುತ್ತಿದ್ದಾರೆಂದು ನೆನಸುತ್ತಿರಬಹುದು. ವಾಸ್ತವದಲ್ಲಿ ಇದಕ್ಕೆ ತದ್ವಿರುದ್ಧವಾದದ್ದೇ ನಡೆಯುತ್ತಿದೆ.” ಹೆಚ್ಚಿನ ಸಭೆಗಳಲ್ಲಿ 75 ಪ್ರತಿಶತಕ್ಕಿಂತಲೂ ಹೆಚ್ಚು ಸಾಕ್ಷಿಗಳು ಆ ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು, ಮತ್ತು ಕೆಲವರು ಈ ಚಟುವಟಿಕೆಯಲ್ಲಿ 10, 12 ಅಥವಾ 14 ತಾಸುಗಳನ್ನು ಕಳೆದರು. ಫ್ರಾನ್ಸ್‌ನ ಉತ್ತರಭಾಗದಲ್ಲಿರುವ ಹೆಮ್‌ನಲ್ಲಿ, ಒಬ್ಬ ಸಾಕ್ಷಿ ರಾತ್ರಿ ಶಿಫ್ಟ್ ಕೆಲಸಮುಗಿಸಿ, ಬೆಳಗ್ಗೆ ಐದು ಗಂಟೆಯಿಂದ ಹಿಡಿದು ಮಧ್ಯಾಹ್ನ ಮೂರು ಗಂಟೆಯ ವರೆಗೆ ಈ ಕಿರುಹೊತ್ತಗೆಗಳನ್ನು ವಿತರಿಸಿದನು. ಹತ್ತಿರದಲ್ಲಿದ್ದ ಡೀನೇನ್ ಎಂಬ ಸ್ಥಳದಲ್ಲಿ 1906ರಿಂದಲೂ ಒಂದು ಸಭೆಯಿತ್ತು. ಅಲ್ಲಿ 75 ಮಂದಿ ಸಾಕ್ಷಿಗಳು ಶುಕ್ರವಾರದಂದು ಕಿರುಹೊತ್ತಗೆಯನ್ನು ವಿತರಿಸುತ್ತಾ 200 ತಾಸುಗಳನ್ನು ಕಳೆದರು. ಇನ್ನಿತರರು ವೃದ್ಧಾಪ್ಯ, ದೌರ್ಬಲ್ಯ, ಮತ್ತು ಕೆಟ್ಟ ಹವಾಮಾನದ ಎದುರಿನಲ್ಲೂ ಪಾಲ್ಗೊಳ್ಳುವ ದೃಢನಿರ್ಧಾರವನ್ನು ಮಾಡಿದರು. ಉದಾಹರಣೆಗಾಗಿ ಲೇ ಮಾನ್ಸ್‌ನಲ್ಲಿ, 80ರ ಪ್ರಾಯದವರಾಗಿದ್ದ ಮೂವರು ಮಹಿಳೆಯರು ಪತ್ರಗಳ ಪೆಟ್ಟಿಗೆಗಳಲ್ಲಿ ಕಿರುಹೊತ್ತಗೆಗಳನ್ನು ಹಾಕುತ್ತಾ ಎರಡು ತಾಸುಗಳನ್ನು ಕಳೆದರು, ಮತ್ತು ಒಂದು ಗಾಲಿಕುರ್ಚಿಯಲ್ಲಿದ್ದ ಸಾಕ್ಷಿಯೊಬ್ಬನು, ರೈಲ್ವೇ ನಿಲ್ದಾಣದ ಮುಂದೆ ಕಿರುಹೊತ್ತಗೆಗಳನ್ನು ನೀಡಿದನು. ಮತ್ತು ಈ ವಿಶೇಷ ಚಟುವಟಿಕೆಯಲ್ಲಿ ಈ ಹಿಂದೆ ನಿಷ್ಕ್ರಿಯರಾಗಿದ್ದ ಎಷ್ಟೋ ಮಂದಿ ಸಾಕ್ಷಿಗಳು ಪಾಲ್ಗೊಳ್ಳುತ್ತಿದ್ದದ್ದನ್ನು ನೋಡುವುದು ಎಷ್ಟು ಉತ್ತೇಜನದಾಯಕವಾಗಿತ್ತು!
ನಿಸ್ಸಂದೇಹವಾಗಿಯೂ, ಈ ವಿತರಣೆಯು ವಿಸ್ತಾರವಾದ ಸಾಕ್ಷಿಯನ್ನು ಕೊಟ್ಟಿದೆ. ಎಲ್ಲ ಅಂತಸ್ತುಗಳ ಜನರು, ತಮ್ಮ ಮನೆಗಳಲ್ಲಿ ಸಂಪರ್ಕಿಸಲು ಅಸಾಧ್ಯವಾಗಿದ್ದ ಜನರು ಸಹ, ಈ ಕಿರುಹೊತ್ತಗೆಯ ಒಂದು ಪ್ರತಿಯನ್ನು ಪಡೆದರು. ಈ ಕಾರ್ಯವು, ಸಾಕ್ಷಿಗಳ ಅಭಿರುಚಿಗಳ ಸಂರಕ್ಷಣೆಗಿಂತಲೂ ಹೆಚ್ಚಿನದ್ದನ್ನು ಸಾಧಿಸಿತೆಂದು ಅನೇಕರಿಗನಿಸಿತು. ಅದು ಫ್ರಾನ್ಸ್‌ನಲ್ಲಿರುವ ಎಲ್ಲ ಜನರ ಮನಸ್ಸಾಕ್ಷಿ ಮತ್ತು ಆರಾಧನೆಯ ಸ್ವಾತಂತ್ರ್ಯದ ಸಮರ್ಥನೆಯಾಗಿತ್ತೆಂಬುದು ಅನೇಕರ ಅಭಿಪ್ರಾಯವಾಗಿತ್ತು. ಸಾರ್ವಜನಿಕರಲ್ಲಿ ಅನೇಕರು ತಮ್ಮ ಮಿತ್ರರು, ಸಹಕಾರ್ಮಿಕರು ಅಥವಾ ಸಂಬಂಧಿಕರಿಗಾಗಿ ಈ ಕಿರುಹೊತ್ತಗೆಯ ಹೆಚ್ಚಿನ ಪ್ರತಿಗಳನ್ನು ಕೇಳಿಪಡಕೊಂಡದ್ದು ಅವರಿಗಿದ್ದ ಈ ಅಭಿಪ್ರಾಯಕ್ಕೆ ಸಾಕ್ಷ್ಯವನ್ನು ಕೊಟ್ಟಿತು.
ಹೌದು, ಯೆಹೋವನ ನಾಮವನ್ನು ಪ್ರಸಿದ್ಧಪಡಿಸಲು ಮತ್ತು ರಾಜ್ಯಾಭಿರುಚಿಗಳನ್ನು ಸಮರ್ಥಿಸಲು ಫ್ರಾನ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳು ಹೆಮ್ಮೆಪಡುತ್ತಾರೆ. (1 ಪೇತ್ರ 3:15) ಅವರಿಗೆ ‘ಸುಖಸಮಾಧಾನಗಳು ಉಂಟಾಗಿ ಅವರು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪಮಾಡಲು’ ಶಕ್ತರಾಗುವುದು ಮತ್ತು ತಮ್ಮ ಸ್ವರ್ಗೀಯ ತಂದೆಯಾಗಿರುವ ಯೆಹೋವನನ್ನು ಸ್ತುತಿಸುವುದರಲ್ಲಿ ಇನ್ನೂ ಸಾವಿರಾರು ಮಂದಿ ತಮ್ಮನ್ನು ಜೊತೆಗೂಡುವುದು ಅವರ ಪ್ರಾಮಾಣಿಕ ಆಸೆಯಾಗಿದೆ.—1 ತಿಮೊಥೆಯ 2:2.
[ಪಾದಟಿಪ್ಪಣಿ]
^ ಪ್ಯಾರ. 5 ಧಾರ್ಮಿಕ ಭೇದಭಾವದ ವಿರುದ್ಧ ಪ್ರತಿಭಟಿಸಲು 1999ರ ಜನವರಿಯಲ್ಲಿ ತದ್ರೀತಿಯ ಒಂದು ಕಾರ್ಯಾಚರಣೆಯು ನಡೆಯಿತು. 1999, ಆಗಸ್ಟ್ 1ರ ಕಾವಲಿನಬುರುಜು ಪತ್ರಿಕೆಯ ಪುಟ 9ನ್ನು ಮತ್ತು 2000 ಯಿಯರ್‌ಬುಕ್ ಆಫ್ ಜೆಹೋವಾಸ್ ವಿಟ್ನೆಸಸ್‌ನಲ್ಲಿ 24-6ನೆಯ ಪುಟಗಳನ್ನು ನೋಡಿ.