ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಶೀರ್ವಾದವು ನಿಮಗೆ ಪ್ರಾಪ್ತವಾಗುವುದೋ?

ಯೆಹೋವನ ಆಶೀರ್ವಾದವು ನಿಮಗೆ ಪ್ರಾಪ್ತವಾಗುವುದೋ?

ಯೆಹೋವನ ಆಶೀರ್ವಾದವು ನಿಮಗೆ ಪ್ರಾಪ್ತವಾಗುವುದೋ?

“ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು.”​—ಧರ್ಮೋಪದೇಶಕಾಂಡ 28:2.

1. ಇಸ್ರಾಯೇಲ್ಯರು ಒಂದೋ ಆಶೀರ್ವಾದಗಳನ್ನು ಇಲ್ಲವೆ ಶಾಪಗಳನ್ನು ಪಡೆಯುವುದನ್ನು ಯಾವುದು ನಿರ್ಣಯಿಸಲಿತ್ತು?

ಇಸ್ರಾಯೇಲ್ಯರು ತಮ್ಮ ಅರಣ್ಯ ಸಂಚಾರದ 40 ವರುಷಗಳ ಅಂತ್ಯಕ್ಕೆ ಬಂದಾಗ, ಮೋವಾಬ್ಯ ಬಯಲುಗಳಲ್ಲಿ ಪಾಳೆಯ ಹೂಡಿದ್ದರು. ಅವರ ಮುಂದೆ ವಾಗ್ದಾನ ದೇಶವು ಹರಡಿತ್ತು. ಈಗ ಮೋಶೆ, ಆಶೀರ್ವಾದ ಮತ್ತು ಶಾಪೋಚ್ಚಾರ ಅಥವಾ ಶಾಪಗಳ ಸರಣಿಯೇ ಇದ್ದ ಧರ್ಮೋಪದೇಶಕಾಂಡ ಪುಸ್ತಕವನ್ನು ಬರೆದನು. ಜನರು “ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ,” ಆಶೀರ್ವಾದಗಳು ಅವರಿಗೆ “ಪ್ರಾಪ್ತ”ವಾಗಲಿದ್ದವು. ಯೆಹೋವನು ಅವರನ್ನು “ಸ್ವಕೀಯಜನ”ರಾಗಿ ಪ್ರೀತಿಸುತ್ತಿದ್ದುದರಿಂದ, ಅವರ ಪರವಾಗಿ ತನ್ನ ಬಲವನ್ನು ತೋರ್ಪಡಿಸಲು ಬಯಸಿದನು. ಆದರೆ ಅವರು ಆತನ ಮಾತುಗಳಿಗೆ ಕಿವಿಗೊಡದೆ ಹೋಗುವಲ್ಲಿ, ಶಾಪಗಳು ಅವರಿಗೆ ಪ್ರಾಪ್ತವಾಗುವುದೂ ಖಂಡಿತವಾಗಿತ್ತು.​—ಧರ್ಮೋಪದೇಶಕಾಂಡ 8:​10-14; 26:18; 28:​2, 15.

2. ಧರ್ಮೋಪದೇಶಕಾಂಡ 28:2ರಲ್ಲಿ “ಕಿವಿಗೊಟ್ಟು ನಡೆದರೆ” ಮತ್ತು “ಪ್ರಾಪ್ತವಾಗುವವು” ಎಂದು ಭಾಷಾಂತರವಾಗಿರುವ ಹೀಬ್ರು ಕ್ರಿಯಾಪದಗಳ ಹಿಂದಿರುವ ಅರ್ಥವೇನು?

2ಧರ್ಮೋಪದೇಶಕಾಂಡ 28:2ರಲ್ಲಿ “ಕಿವಿಗೊಟ್ಟು ನಡೆದರೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಕ್ರಿಯಾಪದವು ಮುಂದುವರಿಯುತ್ತಿರುವ ಕ್ರಿಯೆಯನ್ನು ಸೂಚಿಸುತ್ತದೆ. ಯೆಹೋವನ ಜನರು ಕೆಲವೊಮ್ಮೆ ಮಾತ್ರ ಆತನಿಗೆ ಕಿವಿಗೊಡಬೇಕೆಂದಲ್ಲ, ಬದಲಾಗಿ ಕಿವಿಗೊಡುತ್ತಿರುವುದನ್ನು ಅವರ ಜೀವನ ರೀತಿಯಾಗಿ ಮಾಡಿಕೊಳ್ಳಬೇಕೆಂಬುದು ಇದರರ್ಥ. ಆಗ ಮಾತ್ರ ದೈವಿಕ ಆಶೀರ್ವಾದಗಳು ಅವರಿಗೆ ಪ್ರಾಪ್ತವಾಗುವವು. “ಪ್ರಾಪ್ತವಾಗುವವು” ಎಂದು ಭಾಷಾಂತರವಾಗಿರುವ ಹೀಬ್ರು ಕ್ರಿಯಾಪದವು ಬೇಟೆಯಲ್ಲಿ ಉಪಯೋಗಿಸುವ ಪದವಾಗಿದ್ದು, ಅದು ಅನೇಕವೇಳೆ “ಹಿಡಿಯುವುದು” ಅಥವಾ “ಮುಟ್ಟುವುದು” ಎಂಬ ಅರ್ಥವನ್ನು ಕೊಡುತ್ತದೆ.

3. ನಾವು ಹೇಗೆ ಯೆಹೋಶುವನಂತೆ ಇರಬಲ್ಲೆವು, ಮತ್ತು ಇದು ಏಕೆ ಅತ್ಯಾವಶ್ಯಕವಾದದ್ದಾಗಿದೆ?

3 ಇಸ್ರಾಯೇಲ್ಯರ ನಾಯಕನಾಗಿದ್ದ ಯೆಹೋಶುವನು ಯೆಹೋವನ ಮಾತಿಗೆ ಕಿವಿಗೊಡುವ ಆಯ್ಕೆಮಾಡಿದ್ದರಿಂದ ಆಶೀರ್ವಾದಗಳನ್ನು ಅನುಭವಿಸಿದನು. ಯೆಹೋಶುವನು ಹೇಳಿದ್ದು: “ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. . . . ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” ಆಗ ಜನರು ಉತ್ತರ ಕೊಟ್ಟದ್ದು: “ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವದು ನಮಗೆ ದೂರವಾಗಿರಲಿ.” (ಯೆಹೋಶುವ 24:15, 16) ಯೆಹೋಶುವನು ಅತ್ಯುತ್ತಮ ಮನೋಭಾವವನ್ನು ತೋರಿಸಿದ ಕಾರಣ, ವಾಗ್ದಾನ ದೇಶವನ್ನು ಪ್ರವೇಶಿಸುವ ಸದವಕಾಶವಿದ್ದ ತನ್ನ ಸಂತತಿಯ ಕೆಲವರಲ್ಲಿ ಇವನು ಒಬ್ಬನಾಗಿದ್ದನು. ಇಂದು ನಾವು ಅದಕ್ಕಿಂತ ಎಷ್ಟೋ ಶ್ರೇಷ್ಠವಾದ ವಾಗ್ದಾನ ದೇಶವೊಂದರ ಹೊಸ್ತಿಲಲ್ಲಿ ನಿಂತಿದ್ದೇವೆ. ದೇವರ ಒಪ್ಪಿಗೆಯಿರುವವರೆಲ್ಲರಿಗೂ ಯೆಹೋಶುವನ ದಿನಗಳ ಆಶೀರ್ವಾದಗಳಿಗಿಂತ ಎಷ್ಟೋ ಹೆಚ್ಚು ಸಂಪದ್ಭರಿತವಾದ ಆಶೀರ್ವಾದಗಳಿರುವ ಭೂಪರದೈಸಿನ ಹೊಸ್ತಿಲೇ ಅದಾಗಿದೆ. ಇಂತಹ ಆಶೀರ್ವಾದಗಳು ನಿಮಗೆ ಪ್ರಾಪ್ತವಾಗುವವೋ? ನೀವು ಯೆಹೋವನಿಗೆ ಕಿವಿಗೊಡುತ್ತ ಹೋಗುವಲ್ಲಿ ಖಂಡಿತವಾಗಿಯೂ ಪ್ರಾಪ್ತವಾಗುವವು. ನಿಮ್ಮ ಈ ನಿರ್ಧಾರವನ್ನು ಬಲಪಡಿಸುವಂತೆ ಸಹಾಯಮಾಡಲು, ಪುರಾತನ ಇಸ್ರಾಯೇಲಿನ ರಾಷ್ಟ್ರೀಯ ಇತಿಹಾಸವನ್ನೂ ಶಿಕ್ಷಣಾತ್ಮಕವಾದ ವೈಯಕ್ತಿಕ ಮಾದರಿಗಳನ್ನೂ ಪರಿಗಣಿಸಿರಿ.​—ರೋಮಾಪುರ 15:4.

ಆಶೀರ್ವಾದವೊ ಶಾಪೋಚ್ಚಾರವೊ?

4. ಸೊಲೊಮೋನನ ಪ್ರಾರ್ಥನೆಗೆ ಉತ್ತರವಾಗಿ ದೇವರು ಅವನಿಗೆ ಏನನ್ನು ದಯಪಾಲಿಸಿದನು, ಮತ್ತು ಅಂತಹ ಆಶೀರ್ವಾದಗಳ ಕುರಿತು ನಮಗೆ ಹೇಗನಿಸಬೇಕು?

4 ಅರಸನಾದ ಸೊಲೊಮೋನನ ಆಳಿಕೆಯ ಹೆಚ್ಚಿನ ಅವಧಿಯಲ್ಲಿ ಇಸ್ರಾಯೇಲ್ಯರಿಗೆ ಯೆಹೋವನಿಂದ ಅಸಾಮಾನ್ಯವಾದ ಆಶೀರ್ವಾದಗಳು ದೊರೆತವು. ಅವರು ಭದ್ರತೆಯನ್ನೂ ಸದ್ವಿಷಯಗಳನ್ನೂ ಸಮೃದ್ಧವಾಗಿ ಪಡೆದರು. (1 ಅರಸುಗಳು 4:25) ಸೊಲೊಮೋನನ ಐಶ್ವರ್ಯವು ಇತಿಹಾಸಪ್ರಸಿದ್ಧವಾಗಿ ಪರಿಣಮಿಸಿದರೂ ಅವನು ಐಹಿಕ ಐಶ್ವರ್ಯಕ್ಕಾಗಿ ಕೇಳಿಕೊಂಡಿರಲಿಲ್ಲ. ಬದಲಿಗೆ, ಅವನು ಇನ್ನೂ ಚಿಕ್ಕವನೂ ಅನನುಭವಿಯೂ ಆಗಿದ್ದಾಗಲೇ, ವಿಧೇಯ ಹೃದಯಕ್ಕಾಗಿ ಪ್ರಾರ್ಥಿಸಿದ್ದನು. ಯೆಹೋವನು ಅವನಿಗೆ ವಿವೇಕ ಮತ್ತು ತಿಳಿವಳಿಕೆಯನ್ನು ಕೊಟ್ಟು ಆ ಬಿನ್ನಹವನ್ನು ಅನುಗ್ರಹಿಸಿದ್ದನು. ಇದರಿಂದಾಗಿ ಸೊಲೊಮೋನನು ಒಳ್ಳೇದರ ಹಾಗೂ ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ಗ್ರಹಿಸುತ್ತಾ, ಜನರಿಗೆ ವಿವೇಚನೆಯಿಂದ ನ್ಯಾಯತೀರಿಸಲು ಶಕ್ತನಾದನು. ದೇವರು ಅವನಿಗೆ ಐಶ್ವರ್ಯ ಮತ್ತು ವೈಭವವನ್ನು ಕೊಟ್ಟರೂ, ಯುವಕನಾಗಿದ್ದಾಗ ಸೊಲೊಮೋನನು ಆತ್ಮಿಕ ಐಶ್ವರ್ಯಗಳ ಅತ್ಯುತ್ಕೃಷ್ಟವಾದ ಬೆಲೆಯನ್ನು ಮಾನ್ಯಮಾಡಿದನು. (1 ಅರಸುಗಳು 3:​9-13) ನಾವು ಈಗ ಐಹಿಕ ರೀತಿಯಲ್ಲಿ ಸಮೃದ್ಧರಾಗಿರಲಿ ಅಥವಾ ಇಲ್ಲದಿರಲಿ, ಯೆಹೋವನ ಆಶೀರ್ವಾದಗಳನ್ನು ಅನುಭವಿಸಿ ಆತ್ಮಿಕವಾಗಿ ಸಂಪದ್ಭರಿತರಾಗಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬಲ್ಲೆವು!

5. ಇಸ್ರಾಯೇಲಿನ ಮತ್ತು ಯೆಹೂದದ ಜನರು ಯೆಹೋವನಿಗೆ ಕಿವಿಗೊಡುತ್ತಾ ಮುಂದುವರಿಯಲು ತಪ್ಪಿದಾಗ ಏನು ಸಂಭವಿಸಿತು?

5 ಇಸ್ರಾಯೇಲ್ಯರು ಯೆಹೋವನ ಆಶೀರ್ವಾದಗಳಿಗಾಗಿ ಕೃತಜ್ಞತೆ ತೋರಿಸಲು ತಪ್ಪಿಹೋದರು. ಅವರು ಆತನಿಗೆ ಕಿವಿಗೊಡುತ್ತ ಮುಂದುವರಿಯದ ಕಾರಣ, ಮುಂತಿಳಿಸಲ್ಪಟ್ಟ ಶಾಪಗಳು ಅವರಿಗೆ ಪ್ರಾಪ್ತವಾದವು. ಇದರ ಫಲವಾಗಿ ಅವರ ಶತ್ರುಗಳು ಅವರನ್ನು ಜಯಿಸಿದರು; ಇಸ್ರಾಯೇಲ್‌ ಮತ್ತು ಯೆಹೂದದ ನಿವಾಸಿಗಳು ದೇಶಭ್ರಷ್ಟರಾದರು. (ಧರ್ಮೋಪದೇಶಕಾಂಡ 28:36; 2 ಅರಸುಗಳು 17:​22, 23; 2 ಪೂರ್ವಕಾಲವೃತ್ತಾಂತ 36:​17-20) ಇಂತಹ ಕಷ್ಟಗಳು ಬಂದದ್ದರಿಂದ, ದೈವಿಕ ಆಶೀರ್ವಾದಗಳು ಯೆಹೋವನಿಗೆ ಕಿವಿಗೊಡುತ್ತಾ ಮುಂದುವರಿಯುವವರಿಗೆ ಮಾತ್ರ ಪ್ರಾಪ್ತವಾಗುವವು ಎಂಬುದನ್ನು ದೇವಜನರು ಕಲಿತುಕೊಂಡರೊ? ಸಾ.ಶ.ಪೂ. 537ರಲ್ಲಿ ತಮ್ಮ ಸ್ವದೇಶಕ್ಕೆ ಹಿಂದಿರುಗಿದ ಯೆಹೂದಿ ಉಳಿಕೆಯವರಿಗೆ, ಅವರು ಈಗ “ಜ್ಞಾನದ ಹೃದಯ”ವನ್ನು ಪಡೆದುಕೊಂಡಿದ್ದಾರೊ ಇಲ್ಲವೊ ಎಂಬುದನ್ನು ತೋರಿಸುವ ಅವಕಾಶವು ಒದಗಿಬಂದಿತ್ತು ಮತ್ತು ಹೀಗೆ ಅವರು ದೇವರಿಗೆ ಕಿವಿಗೊಡುತ್ತಾ ಮುಂದುವರಿಯುವುದರ ಅಗತ್ಯವನ್ನು ಮನಗಂಡರು.​—ಕೀರ್ತನೆ 90:12.

6. (ಎ) ತನ್ನ ಜನರಿಗೆ ಪ್ರವಾದಿಸಲು ಯೆಹೋವನು ಹಗ್ಗಾಯ ಮತ್ತು ಜೆಕರ್ಯರನ್ನು ಕಳುಹಿಸಿದ್ದೇಕೆ? (ಬಿ) ಹಗ್ಗಾಯನ ಮೂಲಕ ದೇವರು ಕೊಟ್ಟ ಸಂದೇಶದಲ್ಲಿ ಯಾವ ಮೂಲತತ್ತ್ವವು ಅಡಕವಾಗಿದೆ?

6 ಸ್ವದೇಶಕ್ಕೆ ಹಿಂದಿರುಗಿದ ಯೆಹೂದ್ಯರು ಯಜ್ಞವೇದಿಯನ್ನು ಸ್ಥಾಪಿಸಿ, ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ಕೆಲಸವನ್ನು ಆರಂಭಿಸಿದರು. ಬಲಾಢ್ಯವಾದ ವಿರೋಧವು ಎದ್ದಾಗ, ಅವರ ಹುರುಪು ಕಡಿಮೆಯಾಗಿ ದೇವಾಲಯದ ರಚನೆಯು ನಿಂತುಹೋಯಿತು. (ಎಜ್ರ 3:​1-3, 10; 4:​1-4, 23, 24) ಇವರು ತಮ್ಮ ವ್ಯಕ್ತಿಪರವಾದ ಸೌಕರ್ಯಗಳಿಗೂ ಆದ್ಯತೆಯನ್ನು ನೀಡತೊಡಗಿದರು. ಆಗ ದೇವರು ಸತ್ಯಾರಾಧನೆಯ ಕಡೆಗೆ ತನ್ನ ಜನರ ಹುರುಪನ್ನು ಪುನಃ ಹೊತ್ತಿಸಲಿಕ್ಕಾಗಿ, ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರನ್ನು ಕಳುಹಿಸಿದನು. ಹಗ್ಗಾಯನ ಮೂಲಕ ಯೆಹೋವನು ಹೇಳಿದ್ದು: “ಈ [ಆರಾಧನಾ] ಆಲಯವು ಹಾಳುಬಿದ್ದಿದೆಯಲ್ಲಾ; ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ? . . . ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ. ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ತಿನ್ನುತ್ತೀರಿ, ತೃಪ್ತಿಯಾಗದು, . . . ಸಂಬಳಗಾರನು ಸಂಬಳಹಾಕುವ ಚೀಲವು ತೂತಿನದು.” (ಹಗ್ಗಾಯ 1:​4-6) ಲೌಕಿಕ ಪ್ರಯೋಜನಗಳನ್ನೂ ಅಭಿರುಚಿಗಳನ್ನೂ ಹುಡುಕುತ್ತ ಇರುವಾಗ, ಆತ್ಮಿಕ ಅಭಿರುಚಿಗಳನ್ನು ತ್ಯಾಗಮಾಡುವುದರಿಂದ ಯೆಹೋವನ ಆಶೀರ್ವಾದಗಳು ಫಲಿಸಲಾರವು.​—ಲೂಕ 12:​15-21.

7. ಯೆಹೋವನು ಯೆಹೂದ್ಯರಿಗೆ, “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ” ಎಂದು ಹೇಳಿದ್ದೇಕೆ?

7 ದಿನನಿತ್ಯದ ಚಿಂತೆಗಳಲ್ಲಿ ಮುಳುಗಿದ್ದ ಯೆಹೂದ್ಯರು, ವಿರೋಧದ ಎದುರಿನಲ್ಲಿಯೂ ತಾವು ದೇವರಿಗೆ ವಿಧೇಯತೆಯನ್ನು ತೋರಿಸುತ್ತಾ ಮುಂದುವರಿಯುವಲ್ಲಿ ಮಾತ್ರ ಮಳೆ ಮತ್ತು ಫಲವತ್ತಾದ ಋತುಗಳ ರೂಪದಲ್ಲಿ ದೈವಿಕ ಆಶೀರ್ವಾದಗಳು ಪ್ರಾಪ್ತವಾಗುವವು ಎಂಬುದನ್ನು ಮರೆತಿದ್ದರು. (ಹಗ್ಗಾಯ 1:​9-11) ಹಾಗಾದರೆ, “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ” ಎಂಬ ಬುದ್ಧಿವಾದವು ಅದೆಷ್ಟು ಸೂಕ್ತವಾದದ್ದಾಗಿದೆ! (ಹಗ್ಗಾಯ 1:7) ಕಾರ್ಯತಃ, ಯೆಹೋವನು ಅವರಿಗೆ ಹೀಗೆನ್ನುತ್ತಿದ್ದನು: ‘ಯೋಚಿಸಿ! ನೀವು ಹೊಲಗಳಲ್ಲಿ ಮಾಡುತ್ತಿರುವ ವ್ಯರ್ಥ ಕೆಲಸ ಮತ್ತು ನನ್ನ ಆರಾಧನಾಲಯದ ಹಾಳುಬಿದ್ದಿರುವ ಸ್ಥಿತಿಯ ಮಧ್ಯೆ ಇರುವ ಸಂಬಂಧವನ್ನು ನೋಡಿ.’ ಯೆಹೋವನ ಪ್ರವಾದಿಗಳ ಪ್ರೇರಿತ ಮಾತುಗಳು ಕೊನೆಗೆ ಕೇಳುಗರ ಹೃದಯಗಳನ್ನು ತಲಪಿದಾಗ, ಜನರು ದೇವಾಲಯದ ಕೆಲಸವನ್ನು ಪುನಃ ಆರಂಭಿಸಿ, ಅದನ್ನು ಸಾ.ಶ.ಪೂ. 515ರಲ್ಲಿ ಮುಗಿಸಿದರು.

8. ಯೆಹೋವನು ಯೆಹೂದ್ಯರಿಗೆ ಮಲಾಕಿಯನ ದಿನಗಳಲ್ಲಿ ಯಾವ ಸಲಹೆಯನ್ನು ಕೊಟ್ಟನು, ಮತ್ತು ಏಕೆ?

8 ಸಮಯಾನಂತರ, ಪ್ರವಾದಿಯಾದ ಮಲಾಕಿಯನ ದಿನಗಳಲ್ಲಿ, ಯೆಹೂದ್ಯರು ಪುನಃ ಆತ್ಮಿಕವಾಗಿ ಕ್ಷೀಣಿಸತೊಡಗಿದರು ಮತ್ತು ದೇವರಿಗೆ ಸ್ವೀಕಾರಯೋಗ್ಯವಲ್ಲದ ಯಜ್ಞಗಳನ್ನೂ ಅರ್ಪಿಸಿದರು. (ಮಲಾಕಿಯ 1:​6-8) ಆಗ ಯೆಹೋವನು, ಅವರು ತಮ್ಮ ಉತ್ಪನ್ನದ ದಶಮಾಂಶವನ್ನು ಆತನ ಉಗ್ರಾಣಕ್ಕೆ ತಂದರೆ, ಆತನು ಸ್ವರ್ಗದ್ವಾರಗಳನ್ನು ತೆರೆದು ಅವರ ಮೇಲೆ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಸುವನೊ ಇಲ್ಲವೊ ಎಂದು ಆತನನ್ನು ಪರೀಕ್ಷಿಸುವಂತೆ ಸಲಹೆ ನೀಡಿದನು. (ಮಲಾಕಿಯ 3:10) ತನ್ನ ಮಾತಿಗೆ ಕಿವಿಗೊಡುತ್ತ ಹೋಗುವಲ್ಲಿ, ದೇವರೇ ಸಮೃದ್ಧಿಯಾಗಿ ಕೊಡಬಲ್ಲ ವಸ್ತುಗಳಿಗಾಗಿ ಯೆಹೂದ್ಯರು ವ್ಯರ್ಥವಾಗಿ ದುಡಿಯುವ ಸಂಗತಿಯು ಎಂತಹ ಮೂರ್ಖತನವಾಗಿತ್ತು!​—2 ಪೂರ್ವಕಾಲವೃತ್ತಾಂತ 31:10.

9. ಬೈಬಲ್‌ ದಾಖಲೆಯ ಯಾವ ಮೂವರು ವ್ಯಕ್ತಿಗಳ ಜೀವನಗಳನ್ನು ನಾವು ಪರೀಕ್ಷಿಸುವೆವು?

9 ಇಸ್ರಾಯೇಲಿನ ರಾಷ್ಟ್ರೀಯ ಇತಿಹಾಸಕ್ಕೆ ಸೇರಿಸಿ, ಯೆಹೋವನಿಗೆ ಕಿವಿಗೊಡುತ್ತ ಹೋದದ್ದರ ಇಲ್ಲವೆ ಹೋಗದೆ ಇದ್ದುದರ ಕಾರಣ ದೈವಿಕ ಆಶೀರ್ವಾದಗಳನ್ನೊ ಶಾಪಗಳನ್ನೊ ಪಡೆದ ವ್ಯಕ್ತಿಗಳ ವೃತ್ತಾಂತಗಳನ್ನೂ ಬೈಬಲು ದಾಖಲಿಸುತ್ತದೆ. ಅವರಲ್ಲಿ ಮೂವರಿಂದ ಅಂದರೆ ಬೋವಜ, ನಾಬಾಲ ಮತ್ತು ಹನ್ನರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವೆಂದು ನಾವೀಗ ನೋಡೋಣ. ಈ ಸಂಬಂಧದಲ್ಲಿ, ನೀವು ರೂತಳು ಪುಸ್ತಕವನ್ನು ಮತ್ತು 1 ಸಮುವೇಲ 1:​1–2:21 ಮತ್ತು 1 ಸಮುವೇಲ 25:​2-42ರಲ್ಲಿರುವ ಭಾಗಗಳನ್ನು ಓದಲು ಬಯಸಬಹುದು.

ಬೋವಜನು ದೇವರಿಗೆ ಕಿವಿಗೊಟ್ಟನು

10. ಬೋವಜನಿಗೂ ನಾಬಾಲನಿಗೂ ಯಾವ ಸಾಮಾನ್ಯ ಹೋಲಿಕೆಗಳಿದ್ದವು?

10 ಬೋವಜ ಮತ್ತು ನಾಬಾಲರು ಸಮಕಾಲೀನರಾಗಿರದಿದ್ದರೂ, ಅವರಿಬ್ಬರಲ್ಲೂ ಕೆಲವು ಸಂಗತಿಗಳು ಸಾಮಾನ್ಯವಾಗಿದ್ದವು. ಉದಾಹರಣೆಗೆ, ಇಬ್ಬರೂ ಯೆಹೂದ ದೇಶದಲ್ಲಿ ಜೀವಿಸುತ್ತಿದ್ದರು. ಅವರು ಧನಿಕರಾದ ಜಮೀನ್ದಾರರಾಗಿದ್ದುದರಿಂದ, ಅವರಿಬ್ಬರಿಗೂ ದಿಕ್ಕಿಲ್ಲದವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸುವ ವಿಶೇಷ ಅವಕಾಶವಿತ್ತು. ಆದರೆ ಹೋಲಿಕೆಗಳು ಇಲ್ಲಿಗೆ ಅಂತ್ಯಗೊಳ್ಳುತ್ತವೆ.

11. ತಾನು ಯೆಹೋವನಿಗೆ ಕಿವಿಗೊಡುತ್ತಿರುವವನೆಂದು ಬೋವಜನು ಹೇಗೆ ತೋರಿಸಿದನು?

11 ಬೋವಜನು ಇಸ್ರಾಯೇಲಿನ ನ್ಯಾಯಾಧಿಪತಿಗಳ ಕಾಲದಲ್ಲಿ ಜೀವಿಸುತ್ತಿದ್ದನು. ಅವನು ಇತರರನ್ನು ಗೌರವದಿಂದ ಕಾಣುತ್ತಿದ್ದನು ಮತ್ತು ಅವನ ಹೊಲದಲ್ಲಿ ಕೊಯ್ಯುವವರಿಗೆ ಅವನ ಮೇಲೆ ತುಂಬ ಗೌರವವಿತ್ತು. (ರೂತಳು 2:4) ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ತೋರಿಸುತ್ತ ಬೋವಜನು ತನ್ನ ಹೊಲದ ಹಕ್ಕಲನ್ನು ಸಂಕಟದಲ್ಲಿರುವವರಿಗೂ ಬಡವರಿಗೂ ಬಿಟ್ಟುಬಿಡುವಂತೆ ನೋಡಿಕೊಳ್ಳುತ್ತಿದ್ದನು. (ಯಾಜಕಕಾಂಡ 19:​9, 10) ರೂತಳು ಮತ್ತು ನೊವೊಮಿಯ ಕುರಿತು ಬೋವಜನಿಗೆ ತಿಳಿದುಬಂದಾಗ ಮತ್ತು ತನ್ನ ವೃದ್ಧ ಅತ್ತೆಯನ್ನು ನೋಡಿಕೊಳ್ಳುವುದರಲ್ಲಿ ರೂತಳು ವಹಿಸುವ ಶ್ರದ್ಧೆಯನ್ನು ನೋಡಿದಾಗ ಅವನು ಏನು ಮಾಡಿದನು? ಅವನು ರೂತಳಿಗೆ ವಿಶೇಷ ಪರಿಗಣನೆಯನ್ನು ತೋರಿಸಿ, ಆಕೆ ಅವನ ಸ್ವಂತ ಹೊಲದಲ್ಲಿ ಹಕ್ಕಲಾಯಲು ಬಿಡುವಂತೆ ತನ್ನ ಕೆಲಸಗಾರರಿಗೆ ಆಜ್ಞಾಪಿಸಿದನು. ತನ್ನ ನುಡಿಗಳಿಂದಲೂ ಪ್ರೀತಿಯ ಕ್ರಿಯೆಗಳಿಂದಲೂ ತಾನು ಯೆಹೋವನಿಗೆ ಕಿವಿಗೊಡುವ ಆತ್ಮಿಕ ವ್ಯಕ್ತಿಯೆಂದು ಬೋವಜನು ತಿಳಿಯಪಡಿಸಿದನು. ಆದಕಾರಣ ಅವನು ದೇವರ ಅನುಗ್ರಹಕ್ಕೆ ಮತ್ತು ಆಶೀರ್ವಾದಕ್ಕೆ ಪಾತ್ರನಾದನು.​—ಯಾಜಕಕಾಂಡ 19:18; ರೂತಳು 2:​5-16.

12, 13. (ಎ) ಬೋವಜನು ಯೆಹೋವನ ಪುನಃ ಕೊಂಡುಕೊಳ್ಳುವಿಕೆಯ ನಿಯಮಕ್ಕೆ ಆಳವಾದ ಗೌರವವನ್ನು ಹೇಗೆ ತೋರಿಸಿದನು? (ಬಿ) ಬೋವಜನಿಗೆ ಯಾವ ದೈವಿಕ ಆಶೀರ್ವಾದಗಳು ಪ್ರಾಪ್ತವಾದವು?

12 ಬೋವಜನು ಯೆಹೋವನ ಮಾತುಗಳಿಗೆ ಕಿವಿಗೊಡುತ್ತಾ ನಡೆಯುತ್ತಿದ್ದನೆಂಬುದರ ಅತಿ ಗಮನಾರ್ಹವಾದ ರುಜುವಾತು, ಪುನಃ ಕೊಂಡುಕೊಳ್ಳುವ ಸಂಬಂಧದಲ್ಲಿ ದೇವರ ನಿಯಮಕ್ಕನುಸಾರ ಅವನು ನಿಸ್ವಾರ್ಥಭಾವದಿಂದ ವರ್ತಿಸಿದ ರೀತಿಯೇ ಆಗಿತ್ತು. ತನ್ನ ಸಂಬಂಧಿಯಾಗಿದ್ದ ನೊವೊಮಿಯ ಸತ್ತಿದ್ದ ಗಂಡನಾದ ಎಲೀಮೆಲೆಕನ ಬಾಧ್ಯತೆ ಎಲೀಮೆಲೆಕನ ಕುಟುಂಬದಲ್ಲೇ ಉಳಿಯುವಂತೆ ಬೋವಜನು ಸಕಲ ಪ್ರಯತ್ನವನ್ನೂ ಮಾಡಿದನು. “ಮೈದುನಧರ್ಮ”ದ ವಿವಾಹದಲ್ಲಿ, ವಿಧವೆಯು ತನ್ನ ಸತ್ತಿದ್ದ ಗಂಡನ ಸಮೀಪಬಂಧುವನ್ನು ಮದುವೆಯಾಗಿ, ಅವರಿಗೆ ಹುಟ್ಟುವ ಮಗನ ಮೂಲಕ ಬಾಧ್ಯತೆಯನ್ನು ಮುಂದುವರಿಸಬಹುದಿತ್ತು. (ಧರ್ಮೋಪದೇಶಕಾಂಡ 25:​5-10; ಯಾಜಕಕಾಂಡ 25:​47-49) ಈಗ ಮಗುವನ್ನು ಹೆರುವ ಪ್ರಾಯ ದಾಟಿಹೋಗಿದ್ದ ನೊವೊಮಿಯ ಸ್ಥಾನದಲ್ಲಿ ರೂತಳೇ ತನ್ನನ್ನು ಮದುವೆಗೆ ಅರ್ಪಿಸಿಕೊಂಡಳು. ಎಲೀಮೆಲೆಕನ ಸಮೀಪಬಂಧುವೊಬ್ಬನು ನೊವೊಮಿಗೆ ಸಹಾಯಮಾಡಲು ನಿರಾಕರಿಸಿದಾಗ, ಬೋವಜನು ರೂತಳನ್ನು ತನ್ನ ಪತ್ನಿಯಾಗಿ ತೆಗೆದುಕೊಂಡನು. ಅವರ ಮಗನಾದ ಓಬೇದನನ್ನು ನೊವೊಮಿಯ ಸಂತಾನವೆಂಬಂತೆ ಮತ್ತು ಎಲೀಮೆಲೆಕನ ನ್ಯಾಯವಾದ ಬಾಧ್ಯಸ್ಥನೆಂಬಂತೆ ಕಾಣಲಾಯಿತು.​—ರೂತಳು 2:​19, 20; 4:​1, 6, 9, 13-16.

13 ಬೋವಜನು ನಿಸ್ವಾರ್ಥ ಭಾವದಿಂದ ದೇವರ ನಿಯಮಕ್ಕನುಸಾರ ನಡೆದುಕೊಂಡದ್ದರಿಂದ ಹೇರಳ ಆಶೀರ್ವಾದಗಳು ಅವನಿಗೆ ಪ್ರಾಪ್ತವಾದವು. ತಮ್ಮ ಮಗನಾದ ಓಬೇದನ ಮೂಲಕ ಅವನೂ ರೂತಳೂ ಯೇಸು ಕ್ರಿಸ್ತನ ಪೂರ್ವಜರಾಗುವ ಸುಯೋಗದಿಂದ ಆಶೀರ್ವದಿತರಾದರು. (ರೂತಳು 2:12; 4:​13, 21, 22; ಮತ್ತಾಯ 1:​1, 5, 6) ಬೋವಜನ ನಿಸ್ವಾರ್ಥ ಕ್ರಿಯೆಗಳಿಂದ, ಬೇರೆಯವರಿಗೆ ಪ್ರೀತಿ ತೋರಿಸುವವರಿಗೆ ಮತ್ತು ದೇವರ ಆವಶ್ಯಕತೆಗಳಿಗನುಸಾರ ವರ್ತಿಸುವವರಿಗೆ ಆಶೀರ್ವಾದಗಳು ಪ್ರಾಪ್ತವಾಗುವವೆಂದು ನಾವು ಕಲಿತುಕೊಳ್ಳುತ್ತೇವೆ.

ನಾಬಾಲನು ಕಿವಿಗೊಡಲಿಲ್ಲ

14. ನಾಬಾಲನು ಯಾವ ರೀತಿಯ ಮನುಷ್ಯನಾಗಿದ್ದನು?

14 ಬೋವಜನಿಗಿಂತ ಭಿನ್ನ ರೀತಿಯಲ್ಲಿ ವರ್ತಿಸಿದ ನಾಬಾಲನು ಯೆಹೋವನಿಗೆ ಕಿವಿಗೊಡಲು ತಪ್ಪಿಹೋದನು. ಅವನು, “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ದೇವರ ನಿಯಮವನ್ನು ಉಲ್ಲಂಘಿಸಿದನು. (ಯಾಜಕಕಾಂಡ 19:18) ನಾಬಾಲನು ಆತ್ಮಿಕ ಮನುಷ್ಯನಾಗಿರಲಿಲ್ಲ. ಅವನು “ನಿಷ್ಠುರನೂ ದುಷ್ಕರ್ಮಿಯೂ ಆಗಿದ್ದನು.” ಅವನ ಕೆಲಸಗಾರರೇ ಅವನನ್ನು “ಮೂರ್ಖ”ನೆಂಬಂತೆ ಕಾಣುತ್ತಿದ್ದರು. ಮತ್ತು ಆ ನಾಬಾಲನೆಂಬ ಹೆಸರಿನ ಅರ್ಥವೂ ಹೊಂದಿಕೆಯಾಗಿಯೇ “ಬುದ್ಧಿಹೀನ” ಅಥವಾ “ಮೂರ್ಖ” ಎಂದಾಗಿತ್ತು. (1 ಸಮುವೇಲ 25:​3, 17, 25) ಹಾಗಾದರೆ, ಅಗತ್ಯದಲ್ಲಿದ್ದ ಒಬ್ಬ ವ್ಯಕ್ತಿಗೆ ಅಂದರೆ ಈ ಸಂದರ್ಭದಲ್ಲಿ ಯೆಹೋವನ ಅಭಿಷಿಕ್ತನಾದ ದಾವೀದನಿಗೆ ದಯೆತೋರಿಸುವ ಸಂದರ್ಭ ಬಂದಾಗ ನಾಬಾಲನು ಯಾವ ರೀತಿಯ ಪ್ರತಿವರ್ತನೆ ತೋರಿಸುವನು?​—1 ಸಮುವೇಲ 16:13.

15. ನಾಬಾಲನು ದಾವೀದನನ್ನು ಹೇಗೆ ದುರುಪಚರಿಸಿದನು, ಮತ್ತು ಈ ವಿಷಯದಲ್ಲಿ ಅಬೀಗೈಲಳು ತನ್ನ ಗಂಡನಿಗಿಂತ ಹೇಗೆ ಭಿನ್ನವಾಗಿದ್ದಳು?

15 ನಾಬಾಲನ ಮಂದೆಗಳಿದ್ದ ಪ್ರದೇಶದಲ್ಲಿ ಪಾಳೆಯ ಹೂಡಿದ್ದ ದಾವೀದನೂ ಅವನ ಜನರೂ, ಯಾವುದೇ ಪ್ರತಿಫಲವನ್ನು ಕೇಳದೆ ಕೊಳ್ಳೆ ಹೊಡೆಯುವವರಿಂದ ಆ ಮಂದೆಗಳನ್ನು ಕಾಪಾಡುತ್ತಿದ್ದರು. ನಾಬಾಲನ ಒಬ್ಬ ಕುರುಬನು ಹೇಳಿದ್ದು: “ಅವರು ಹಗಲಿರುಳು ನಮಗೆ ಕಾವಲುಗೋಡೆಯಂತಿದ್ದರು.” ಆದರೂ, ದಾವೀದನ ದೂತರು ನಾಬಾಲನ ಬಳಿ ಸ್ವಲ್ಪ ಆಹಾರವನ್ನು ಕೇಳಿಕೊಂಡಾಗ ಅವನು “ಬಂದವರ ಮೇಲೆ ಬಿದ್ದು ಬೈದನು.” ಮತ್ತು ಅವರನ್ನು ಬರಿಗೈಯಿಂದ ಕಳುಹಿಸಿದನು. (1 ಸಮುವೇಲ 25:​2-16) ಆಗ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳು ಒಡನೆ ದಾವೀದನಿಗೆ ಆಹಾರವನ್ನು ಕೊಂಡೊಯ್ದಳು. ಸಿಟ್ಟಿಗೇರಿದ್ದ ದಾವೀದನು ನಾಬಾಲನನ್ನೂ ಅವನ ಕೆಲಸಗಾರರನ್ನೂ ಹತಿಸಲಿಕ್ಕಿದ್ದನು. ಆದರೆ ಅಬೀಗೈಲಳ ಈ ಉದ್ಯಮಶೀಲತೆಯು ಅನೇಕ ಜೀವಗಳನ್ನು ರಕ್ಷಿಸಿ, ದಾವೀದನು ರಕ್ತಾಪರಾಧಿಯಾಗುವುದರಿಂದ ಅವನನ್ನು ತಪ್ಪಿಸಿತು. ಆದರೆ ನಾಬಾಲನ ಲೋಭ ಮತ್ತು ಕ್ರೌರ್ಯವು ಮಿತಿಮೀರಿಹೋಗಿತ್ತು. ಸುಮಾರು ಹತ್ತು ದಿನಗಳಾದನಂತರ ನಾಬಾಲನು “ಯೆಹೋವನಿಂದ ಹತನಾಗಿ ಸತ್ತನು.”​—1 ಸಮುವೇಲ 25:​18-38.

16. ನಾವು ಬೋವಜನನ್ನು ಅನುಕರಿಸಿ ನಾಬಾಲನ ಮಾರ್ಗಗಳನ್ನು ಹೇಗೆ ತ್ಯಜಿಸಬಲ್ಲೆವು?

16 ಬೋವಜ ಮತ್ತು ನಾಬಾಲರಲ್ಲಿ ಎಷ್ಟು ವ್ಯತ್ಯಾಸವಿತ್ತು! ನಾವು ನಾಬಾಲನ ನಿಷ್ಠುರದ ಮತ್ತು ಸ್ವಾರ್ಥ ರೀತಿಗಳನ್ನು ತೊಲಗಿಸಿ, ಬೋವಜನ ದಯೆ ಮತ್ತು ನಿಸ್ವಾರ್ಥತೆಯನ್ನು ಅನುಕರಿಸೋಣ. (ಇಬ್ರಿಯ 13:16) ನಾವು “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ” ಎಂಬ ಅಪೊಸ್ತಲ ಪೌಲನ ಸಲಹೆಯನ್ನು ಅನ್ವಯಿಸುವ ಮೂಲಕ ಹಾಗೆ ಮಾಡಬಲ್ಲೆವು. (ಗಲಾತ್ಯ 6:10) ಇಂದು ಯೇಸುವಿನ “ಬೇರೆ ಕುರಿಗಳು,” ಅಂದರೆ ಭೂನಿರೀಕ್ಷೆಯುಳ್ಳ ಕ್ರೈಸ್ತರು, ಯೆಹೋವನ ಅಭಿಷಿಕ್ತರಿಗೆ ಅಂದರೆ ಸ್ವರ್ಗದಲ್ಲಿ ಅಮರತ್ವವು ದಯಪಾಲಿಸಲ್ಪಡಲಿರುವ 1,44,000 ಮಂದಿಯಲ್ಲಿ ಉಳಿದವರಿಗೆ ಒಳ್ಳೆಯದನ್ನು ಮಾಡುವ ಸುಯೋಗವುಳ್ಳವರಾಗಿದ್ದಾರೆ. (ಯೋಹಾನ 10:16; 1 ಕೊರಿಂಥ 15:​50-53; ಪ್ರಕಟನೆ 14:​1, 4) ಇಂತಹ ಪ್ರೀತಿಯ ಕ್ರಿಯೆಗಳನ್ನು ಜನರು ಸ್ವತಃ ತನಗೇ ಮಾಡಿರುವಂತೆ ಯೇಸು ಪರಿಗಣಿಸುತ್ತಾನೆ ಮತ್ತು ಇಂತಹ ಒಳ್ಳೇ ವಿಷಯಗಳನ್ನು ಮಾಡುವುದು ಯೆಹೋವನಿಂದ ಧಾರಾಳವಾದ ಆಶೀರ್ವಾದಗಳನ್ನು ಫಲಿಸುತ್ತದೆ.​—ಮತ್ತಾಯ 25:​34-40; 1 ಯೋಹಾನ 3:​18.

ಹನ್ನಳ ಪರೀಕ್ಷೆಗಳು ಮತ್ತು ಆಶೀರ್ವಾದಗಳು

17. ಹನ್ನಳಿಗೆ ಯಾವ ಪರೀಕ್ಷೆಗಳು ಬಂದವು, ಮತ್ತು ಆಕೆ ಎಂತಹ ಮನೋಭಾವವನ್ನು ಪ್ರದರ್ಶಿಸಿದಳು?

17 ಯೆಹೋವನ ಆಶೀರ್ವಾದವು ದೇವಭಕ್ತಿಯಿದ್ದ ಸ್ತ್ರೀಯಾದ ಹನ್ನಳಿಗೂ ಪ್ರಾಪ್ತವಾಯಿತು. ಆಕೆ ಎಫ್ರಾಯೀಮ್‌ ಬೆಟ್ಟದ ಸೀಮೆಯಲ್ಲಿ, ಲೇವ್ಯನಾಗಿದ್ದ ತನ್ನ ಗಂಡ ಎಲ್ಕಾನನ ಜೊತೆಯಲ್ಲಿ ಜೀವಿಸುತ್ತಿದ್ದಳು. ಧರ್ಮಶಾಸ್ತ್ರವು ಅನುಮತಿಸಿ ವಿಧಿಬದ್ಧಗೊಳಿಸಿದಂತೆ, ಅವನಿಗೆ ಪೆನಿನ್ನಳೆಂಬ ಇನ್ನೊಬ್ಬ ಹೆಂಡತಿಯಿದ್ದಳು. ಹನ್ನಳು ಇಸ್ರಾಯೇಲ್ಯ ಸ್ತ್ರೀಯರಿಗೆ ಅವಮಾನಕರವಾದ ಬಂಜೆತನವನ್ನು ಅನುಭವಿಸುತ್ತಿದ್ದಾಗ, ಪೆನಿನ್ನಳಿಗೆ ಅನೇಕ ಮಕ್ಕಳಿದ್ದರು. (1 ಸಮುವೇಲ 1:​1-3; 1 ಪೂರ್ವಕಾಲವೃತ್ತಾಂತ 6:​16, 33, 34) ಆದರೆ ಹನ್ನಳನ್ನು ಸಂತೈಸುವ ಬದಲಿಗೆ ಪೆನಿನ್ನಳು ಅವಳೊಂದಿಗೆ ಪ್ರೀತಿರಹಿತವಾಗಿ ವರ್ತಿಸಿದ ಕಾರಣ, ಅವಳು ನೊಂದು ಅಳುತ್ತ ಹಸಿವೆಯಿಲ್ಲದವಳಾದಳು. ಇನ್ನೂ ವಿಪರೀತವಾದ ವಿಷಯವೇನಂದರೆ, “ಪ್ರತಿವರ್ಷವೂ” ಅಂದರೆ ಕುಟುಂಬವು ಶೀಲೋವಿಗೆ ಯೆಹೋವನ ಮಂದಿರಕ್ಕೆ ಹೋಗುವಾಗೆಲ್ಲ ಹೀಗೆಯೇ ನಡೆಯುತ್ತಿತ್ತು. (1 ಸಮುವೇಲ 1:​4-8) ಪೆನಿನ್ನಳು ಎಷ್ಟು ನಿರ್ದಯಿಯಾಗಿದ್ದಳು ಮತ್ತು ಇದು ಹನ್ನಳಿಗೆ ಎಂತಹ ಪರೀಕ್ಷೆಯಾಗಿತ್ತು! ಆದರೂ ಹನ್ನಳು ಯೆಹೋವನನ್ನು ದೂರಿದ್ದೂ ಇಲ್ಲ, ಆಕೆಯ ಗಂಡನು ಶೀಲೋವಿಗೆ ಹೋದಾಗ ಆಕೆ ಮನೆಯಲ್ಲಿ ಉಳಿದದ್ದೂ ಇಲ್ಲ. ಈ ಕಾರಣದಿಂದ, ಕಾಲಕ್ರಮೇಣ ಸಮೃದ್ಧವಾದ ಆಶೀರ್ವಾದವು ಆಕೆಗೆ ಪ್ರಾಪ್ತವಾಗುವುದು ಖಂಡಿತವಾಗಿತ್ತು.

18. ಹನ್ನಳು ಯಾವ ಮಾದರಿಯನ್ನಿಟ್ಟಳು?

18 ಹನ್ನಳು ಇಂದಿನ ಯೆಹೋವನ ಜನರಿಗೆ, ವಿಶೇಷವಾಗಿ ಇತರರ ಕಟುನುಡಿಗಳಿಂದ ಮನನೊಂದಿರುವವರಿಗೆ ಒಂದು ಉತ್ತಮವಾದ ಮಾದರಿಯನ್ನಿಟ್ಟಳು. ಇಂತಹ ಸಂದರ್ಭಗಳಲ್ಲಿ, ತಮ್ಮನ್ನು ಇತರರಿಂದ ಬೇರ್ಪಡಿಸಿಕೊಳ್ಳುವುದು ಪರಿಹಾರವನ್ನು ಕೊಡುವುದಿಲ್ಲ. (ಜ್ಞಾನೋಕ್ತಿ 18:1) ಹನ್ನಳ ಪರೀಕ್ಷೆಗಳು, ದೇವರ ವಾಕ್ಯವು ಕಲಿಸಲ್ಪಡುತ್ತಿರುವಲ್ಲಿ ಮತ್ತು ದೇವಜನರು ಆರಾಧನೆಗಾಗಿ ಕೂಡಿಬರುವಲ್ಲಿ ತಾನಿರಬೇಕೆಂಬ ಆಕೆಯ ಬಯಕೆಯನ್ನು ಕುಂದಿಸಲಿಲ್ಲ. ಈ ಕಾರಣದಿಂದ ಆಕೆ ಆತ್ಮಿಕವಾಗಿ ಬಲಾಢ್ಯಳಾಗಿ ಉಳಿದಳು. ಆಕೆಯ ಆತ್ಮಿಕತೆಯ ಗಾಢತೆಯು 1 ಸಮುವೇಲ 2:​1-10ರಲ್ಲಿ ಬರೆಯಲ್ಪಟ್ಟಿರುವ ಸುಂದರವಾದ ಪ್ರಾರ್ಥನೆಯಲ್ಲಿ ತೋರಿಬರುತ್ತದೆ. *

19. ನಾವು ಆತ್ಮಿಕ ವಿಷಯಗಳಿಗಾಗಿ ನಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಬಲ್ಲೆವು?

19 ಯೆಹೋವನ ಇಂದಿನ ಸೇವಕರಾಗಿರುವ ನಾವು ಸಾಕ್ಷಿಗುಡಾರದಲ್ಲಿ ಆರಾಧಿಸುವುದಿಲ್ಲ. ಆದರೂ, ಹನ್ನಳಂತೆ ನಾವು ಆತ್ಮಿಕ ವಿಷಯಗಳಿಗಾಗಿ ನಮ್ಮ ಕೃತಜ್ಞತೆಯನ್ನು ತೋರಿಸಬಲ್ಲೆವು. ಉದಾಹರಣೆಗೆ, ಕ್ರೈಸ್ತ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ನಮ್ಮ ಕ್ರಮವಾದ ಹಾಜರಿಯಿಂದ ನಾವು ಆತ್ಮಿಕ ಸಂಪತ್ತಿಗಾಗಿ ಗಾಢವಾದ ಕೃತಜ್ಞತೆಯನ್ನು ತೋರಿಸಬಲ್ಲೆವು. ಯಾರು ನಮಗೆ, “ಭಯವಿಲ್ಲದವರಾಗಿದ್ದು . . . ನಿರ್ಮಲಚಿತ್ತದಿಂದಲೂ ನೀತಿಯಿಂದಲೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ಅನುಕೂಲ”ಮಾಡಿದ್ದಾನೊ, ಆ ಯೆಹೋವನ ಸತ್ಯಾರಾಧನೆಯಲ್ಲಿ ಪರಸ್ಪರ ಪ್ರೋತ್ಸಾಹಿಸಲಿಕ್ಕಾಗಿ ನಾವು ಈ ಸಂದರ್ಭಗಳನ್ನು ಉಪಯೋಗಿಸೋಣ.​—ಲೂಕ 1:​74, 75; ಇಬ್ರಿಯ 10:​24, 25.

20, 21. ಹನ್ನಳ ದೇವಭಕ್ತಿಗಾಗಿ ಆಕೆಗೆ ಯಾವ ಪ್ರತಿಫಲ ದೊರೆಯಿತು?

20 ಯೆಹೋವನು ಹನ್ನಳ ದೇವಭಕ್ತಿಯನ್ನು ಗಮನಿಸಿ ಆಕೆಗೆ ಹೇರಳವಾದ ಪ್ರತಿಫಲವನ್ನು ಕೊಟ್ಟನು. ಹನ್ನಳ ಕುಟುಂಬವು ಶೀಲೋವಿಗೆ ಮಾಡುತ್ತಿದ್ದ ಒಂದು ವಾರ್ಷಿಕ ಪ್ರಯಾಣದಲ್ಲಿ, ಆಕೆ ಕಣ್ಣೀರುಬಿಟ್ಟು ಶ್ರದ್ಧಾಪೂರ್ವಕವಾಗಿ ದೇವರಿಗೆ ಪ್ರಾರ್ಥಿಸುತ್ತಾ ಹೀಗೆ ಪ್ರತಿಜ್ಞೆಮಾಡಿದಳು: “ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು.” (1 ಸಮುವೇಲ 1:​9-11) ದೇವರು ಹನ್ನಳ ಬಿನ್ನಹವನ್ನು ಕೇಳಿ, ಸಮುವೇಲನೆಂದು ಆಕೆಯೇ ಹೆಸರಿಟ್ಟ ಒಬ್ಬ ಪುತ್ರನನ್ನು ಆಕೆಗೆ ಅನುಗ್ರಹಿಸಿದನು. ಅವನು ಮೊಲೆಬಿಟ್ಟ ಬಳಿಕ, ಅವನು ಸಾಕ್ಷಿಗುಡಾರದಲ್ಲಿ ಸೇವೆಮಾಡುವಂತೆ ಆಕೆ ಅವನನ್ನು ಶೀಲೋವಿಗೆ ಕರೆದುಕೊಂಡುಹೋದಳು.​—1 ಸಮುವೇಲ 1:​20, 24-28.

21 ಹನ್ನಳು ದೇವರಿಗೆ ಪ್ರೀತಿಯನ್ನು ತೋರಿಸಿ, ಸಮುವೇಲನ ಸಂಬಂಧದಲ್ಲಿ ತಾನು ದೇವರಿಗೆ ಮಾಡಿದ ಹರಕೆಯನ್ನು ನೆರವೇರಿಸಿದಳು. ತಮ್ಮ ಪ್ರಿಯ ಪುತ್ರನು ಯೆಹೋವನ ಸಾಕ್ಷಿಗುಡಾರದಲ್ಲಿ ಸೇವೆಮಾಡುತ್ತಿದ್ದ ಕಾರಣ ಹನ್ನಳೂ ಎಲ್ಕಾನನೂ ಎಷ್ಟು ಹೇರಳವಾದ ಆಶೀರ್ವಾದಗಳನ್ನು ಪಡೆದರೆಂಬುದನ್ನು ತುಸು ಯೋಚಿಸಿ! ಅನೇಕ ಕ್ರೈಸ್ತ ಹೆತ್ತವರು ಇಂದು ತದ್ರೀತಿಯ ಸಂತೋಷವನ್ನೂ ಆಶೀರ್ವಾದಗಳನ್ನೂ ಅನುಭವಿಸುತ್ತಿದ್ದಾರೆ. ಏಕೆಂದರೆ ಅವರ ಪುತ್ರಪುತ್ರಿಯರು ಪೂರ್ಣ ಸಮಯದ ಪಯನೀಯರ್‌ ಶುಶ್ರೂಷಕರಾಗಿ, ಬೆತೆಲ್‌ ಕುಟುಂಬಗಳ ಸದಸ್ಯರಾಗಿ, ಇಲ್ಲವೆ ಯೆಹೋವನನ್ನು ಗೌರವಿಸುವ ಇನ್ನಿತರ ವಿಧಗಳಲ್ಲಿ ಸೇವೆಮಾಡುತ್ತಿದ್ದಾರೆ.

ಯೆಹೋವನಿಗೆ ಕಿವಿಗೊಡುತ್ತ ಮುಂದುವರಿಯಿರಿ!

22, 23. (ಎ) ಯೆಹೋವನ ಸ್ವರಕ್ಕೆ ಕಿವಿಗೊಡುತ್ತ ಹೋಗುವಲ್ಲಿ ನಮಗೆ ಯಾವುದರ ಖಾತ್ರಿಯಿರಸಾಧ್ಯವಿದೆ? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಪರಿಗಣಿಸಲಾಗುವುದು?

22 ನಾವು ಯೆಹೋವನಿಗೆ ಕಿವಿಗೊಡುತ್ತ ಹೋಗುವಲ್ಲಿ ನಮಗೆ ಏನು ದೊರೆಯುವುದೆಂಬ ಖಾತ್ರಿಯಿರಸಾಧ್ಯವಿದೆ? ನಾವು ದೇವರಿಗೆ ಪೂರ್ಣಪ್ರಾಣದ ಪ್ರೀತಿಯನ್ನು ತೋರಿಸಿ, ಆತನಿಗೆ ನಾವು ಮಾಡಿರುವ ಸಮರ್ಪಣೆಯನ್ನು ಪೂರೈಸುವಲ್ಲಿ, ನಾವು ಆತ್ಮಿಕವಾಗಿ ಸಂಪದ್ಭರಿತರಾಗುವೆವು. ಈ ಮಾರ್ಗವನ್ನು ಬೆನ್ನಟ್ಟುವಾಗ ನಾವು ಕಠಿನ ಪರೀಕ್ಷೆಗಳನ್ನು ತಾಳಿಕೊಳ್ಳಬೇಕಾಗಿ ಬಂದರೂ, ಅನೇಕವೇಳೆ ನಾವು ಭಾವಿಸಿರುವುದಕ್ಕಿಂತಲೂ ಹೆಚ್ಚಿನ ಮಟ್ಟಿಗೆ ಯೆಹೋವನ ಆಶೀರ್ವಾದವು ನಮಗೆ ಪ್ರಾಪ್ತವಾಗುವುದು ಅನಿವಾರ್ಯ.​—ಕೀರ್ತನೆ 37:4; ಇಬ್ರಿಯ 6:10.

23 ಭವಿಷ್ಯತ್ತಿನಲ್ಲಿ ದೇವಜನರ ಮೇಲೆ ಅನೇಕ ಆಶೀರ್ವಾದಗಳು ಸುರಿಸಲ್ಪಡುವವು. ವಿಧೇಯತೆಯಿಂದ ಯೆಹೋವನಿಗೆ ಕಿವಿಗೊಡುತ್ತ ಹೋಗುವ ಕಾರಣ “ಒಂದು ಮಹಾಸಮೂಹವು” “ಮಹಾ ಹಿಂಸೆ”ಯನ್ನು ಪಾರಾಗಿ, ದೇವರ ನೂತನ ಲೋಕದಲ್ಲಿ ಜೀವನದ ಆನಂದಗಳನ್ನು ಅನುಭವಿಸುವುದು. (ಪ್ರಕಟನೆ 7:​9-14; 2 ಪೇತ್ರ 3:13) ಅಲ್ಲಿ ಯೆಹೋವನು ತನ್ನ ಜನರ ನೀತಿಯ ಬಯಕೆಗಳನ್ನು ಪೂರ್ತಿಯಾಗಿ ನೆರವೇರಿಸುವನು. (ಕೀರ್ತನೆ 145:16) ಹೀಗಿದ್ದರೂ, ಮುಂದಿನ ಲೇಖನವು ತೋರಿಸುವಂತೆ, ಯೆಹೋವನ ಸ್ವರಕ್ಕೆ ಕಿವಿಗೊಡುತ್ತ ಹೋಗುವವರಿಗೆ ಈಗಲೂ ‘ಒಳ್ಳೇ ದಾನಗಳೂ ಕುಂದಿಲ್ಲದ ವರಗಳೂ’ ಅನುಗ್ರಹಿಸಲ್ಪಡುವವು.​—ಯಾಕೋಬ 1:17.

[ಪಾದಟಿಪ್ಪಣಿ]

^ ಪ್ಯಾರ. 18 ಹನ್ನಳ ಮಾತುಗಳು, ತಾನು ಮೆಸ್ಸೀಯನ ತಾಯಿಯಾಗಲಿದ್ದೇನೆಂದು ತಿಳಿದ ಸ್ವಲ್ಪದರಲ್ಲಿ ಕನ್ಯೆ ಮರಿಯಳು ಆಡಿದ ಮಾತುಗಳನ್ನು ಸ್ಪಲ್ಪಮಟ್ಟಿಗೆ ಹೋಲುತ್ತವೆ.​—ಲೂಕ 1:​46-55.

ನಿಮಗೆ ನೆನಪಿದೆಯೇ?

• ದೈವಿಕ ಆಶೀರ್ವಾದಗಳ ಕುರಿತು ಇಸ್ರಾಯೇಲಿನ ಇತಿಹಾಸ ನಮಗೆ ಏನನ್ನು ಕಲಿಸಬಲ್ಲದು?

• ಬೋವಜ ಮತ್ತು ನಾಬಾಲರ ಮಧ್ಯೆ ಯಾವ ​ವ್ಯತ್ಯಾಸವಿತ್ತು?

• ನಾವು ಹನ್ನಳನ್ನು ಹೇಗೆ ಅನುಕರಿಸಬಲ್ಲೆವು?

• ನಾವು ಯೆಹೋವನ ಸ್ವರಕ್ಕೆ ಏಕೆ ಕಿವಿಗೊಡುತ್ತ ಮುಂದು​ವರಿಯಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ರಾಜ ಸೊಲೊಮೋನನು ವಿಧೇಯ ಹೃದಯವನ್ನು ಬೇಡಿಕೊಳ್ಳಲಾಗಿ, ಯೆಹೋವನು ಅವನಿಗೆ ವಿವೇಕವನ್ನು ಅನುಗ್ರಹಿಸಿದನು

[ಪುಟ 12ರಲ್ಲಿರುವ ಚಿತ್ರ]

ಬೋವಜನು ಇತರರಿಗೆ ಗೌರವವನ್ನೂ ದಯೆಯನ್ನೂ ತೋರಿಸಿದನು

[ಪುಟ 15ರಲ್ಲಿರುವ ಚಿತ್ರ]

ಯೆಹೋವನ ಮೇಲೆ ಆತುಕೊಂಡದ್ದಕ್ಕಾಗಿ ಹನ್ನಳು ಹೇರಳವಾಗಿ ಆಶೀರ್ವದಿಸಲ್ಪಟ್ಟಳು