ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆಯಲ್ಲಿ ಐಶ್ವರ್ಯದಾಯಕ ಜೀವನ

ಯೆಹೋವನ ಸೇವೆಯಲ್ಲಿ ಐಶ್ವರ್ಯದಾಯಕ ಜೀವನ

ಜೀವನ ಕಥೆ

ಯೆಹೋವನ ಸೇವೆಯಲ್ಲಿ ಐಶ್ವರ್ಯದಾಯಕ ಜೀವನ

ರಸಲ್‌ ಕರ್‌ಝನ್‌ ಅವರು ಹೇಳಿದಂತೆ

ಇಸವಿ 1907, ಸೆಪ್ಟೆಂಬರ್‌ 22ರಂದು ನನ್ನ ಜನನವಾಯಿತು. ಅದು ಮೊದಲನೆ ಜಾಗತಿಕ ಯುದ್ಧದೊಂದಿಗೆ ಆರಂಭಿಸಿದ ಆ ಗಮನಾರ್ಹ ಯುಗಕ್ಕೆ ಏಳು ವರ್ಷ ಮುಂಚೆ ಆಗಿತ್ತು. ನಮ್ಮ ಕುಟುಂಬವು ಅತಿ ಪ್ರಮುಖ ರೀತಿಯಲ್ಲಿ ಐಶ್ವರ್ಯದಾಯಕವಾಗಿತ್ತು. ನಮ್ಮ ಇತಿಹಾಸದ ಕೆಲವು ವಿವರಗಳನ್ನು ಕೇಳಿಸಿಕೊಂಡ ನಂತರ ನೀವಿದನ್ನು ಒಪ್ಪಿಕೊಳ್ಳುವಿರಿ ಎಂಬುದು ನನ್ನೆಣಿಕೆ.

ಕರ್‌ಝನ್‌ ಕುಟುಂಬದ ನನ್ನ ಅಜ್ಜಿ ಚಿಕ್ಕಂದಿನಿಂದಲೇ ದೇವರ ಕುರಿತಾದ ಸತ್ಯಕ್ಕಾಗಿ ಹುಡುಕುತ್ತಿದ್ದರು. ಹದಿಹರೆಯಕ್ಕೆ ಮುಂಚೆಯೇ ಅವರು ತಮ್ಮ ಸುಂದರವಾದ ಊರಾದ ಸ್ವಿಟ್ಸರ್‌ಲೆಂಡಿನ ಸ್ಪೀಟ್ಸ್‌ನ ಹಲವಾರು ವಿವಿಧ ಚರ್ಚುಗಳನ್ನು ಭೇಟಿಮಾಡಿದ್ದರು. ಅವರಿಗೆ ಮದುವೆಯಾದ ಕೆಲವು ವರ್ಷಗಳಲ್ಲಿ ಅಂದರೆ 1887ರಲ್ಲಿ, ವಲಸೆ ಹೋಗುತ್ತಿದ್ದ ಸಾವಿರಾರು ಜನರೊಂದಿಗೆ ಕೂಡಿಕೊಂಡು ಕರ್‌ಝನ್‌ ಕುಟುಂಬವು ಅಮೆರಿಕದ ದಡಸೇರಿತು.

ಕುಟುಂಬವು ಒಹಾಯೊದಲ್ಲಿ ತಳವೂರಿತು. ಅಲ್ಲಿ 1900ನೆಯ ಇಸವಿಯಲ್ಲಿ ಅಜ್ಜಿಗೆ, ಅವರು ಹುಡುಕುತ್ತಾ ಇದ್ದ ನಿಕ್ಷೇಪವು ಸಿಕ್ಕಿತು. ಚಾರ್ಲ್ಸ್‌ ಟೇಸ್‌ ರಸಲರ ಕಾಲವು ಸಮೀಪವಾಗಿದೆ ಎಂಬ ಜರ್ಮನ್‌ ಭಾಷೆಯ ಪುಸ್ತಕದಲ್ಲಿ ಅದು ಅವರಿಗೆ ಸಿಕ್ಕಿತು. ಅವರು ಏನನ್ನು ಓದಿದರೋ ಅದರಲ್ಲಿ ಬೈಬಲ್‌ ಸತ್ಯತೆಯ ಬೆಳಕು ಅಡಕವಾಗಿತ್ತೆಂದು ಕೂಡಲೇ ಗ್ರಹಿಸಿದರು. ನಮ್ಮ ಅಜ್ಜಿಗೆ ಇಂಗ್ಲಿಷ್‌ ಸ್ವಲ್ಪವೇ ಬರುತ್ತಿತ್ತಾದರೂ, ಅವರು ಇಂಗ್ಲಿಷ್‌ ವಾಚ್‌ಟವರ್‌ ಪತ್ರಿಕೆಗೆ ಚಂದಾಮಾಡಿದರು. ಹೀಗೆ ಅವರು ಅಧಿಕ ಬೈಬಲ್‌ ಸತ್ಯಗಳನ್ನು ಕಲಿತುಕೊಂಡರು, ಅದೇ ಸಮಯದಲ್ಲಿ ಇಂಗ್ಲಿಷ್‌ ಭಾಷೆಯನ್ನೂ ಕಲಿತರು. ಅಜ್ಜನಿಗಾದರೋ ತಮ್ಮ ಪತ್ನಿಗಿದ್ದಂಥ ಆತ್ಮಿಕ ವಿಷಯಗಳ ಅಭಿರುಚಿಯು ಇರಲೇ ಇಲ್ಲ.

ಅಜ್ಜಿ ಕರ್‌ಝನ್‌ನ 11 ಮಂದಿ ಮಕ್ಕಳಲ್ಲಿ ಇಬ್ಬರು ಗಂಡುಮಕ್ಕಳಾದ ಜಾನ್‌ ಮತ್ತು ಅವನ ತಮ್ಮ ಅಡಾಲ್ಫ್‌, ಆಕೆಯು ಕಂಡುಕೊಂಡ ಆತ್ಮಿಕ ನಿಕ್ಷೇಪದಲ್ಲಿ ಆಸಕ್ತರಾಗಿದ್ದರು. ಜಾನ್‌ ನನ್ನ ತಂದೆಯಾಗಿದ್ದರು ಮತ್ತು 1904ರಲ್ಲಿ ಮಿಸ್ಸೂರಿಯ ಸೆಂಟ್‌ ಲೂಯಿಯಲ್ಲಾದ ಬೈಬಲ್‌ ವಿದ್ಯಾರ್ಥಿಗಳು (ಯೆಹೋವನ ಸಾಕ್ಷಿಗಳ ಆಗಿನ ಹೆಸರು) ಅಧಿವೇಶನದಲ್ಲಿ ಅವರಿಗೆ ದೀಕ್ಷಾಸ್ನಾನವಾಯಿತು. ಹೆಚ್ಚಿನ ಬೈಬಲ್‌ ವಿದ್ಯಾರ್ಥಿಗಳು ಅನುಕೂಲಸ್ಥರು ಆಗಿರದಿದ್ದರಿಂದ, ಸೆಂಟ್‌ ಲೂಯಿ ಜಾಗತಿಕ ಉತ್ಸವ ನಡೆಯುವ ಅದೇ ಸಮಯಕ್ಕೆ ಅಧಿವೇಶನವನ್ನು ಏರ್ಪಡಿಸಲಾಗಿತ್ತು, ಏಕೆಂದರೆ ಟ್ರೈನ್‌ ಯಾತ್ರೆಯ ವಿಶೇಷ ರಿಯಾಯಿತಿ ದರದ ಸದುಪಯೋಗವನ್ನು ಸಹೋದರರು ಮಾಡಬಹುದಿತ್ತು. ತದನಂತರ 1907ರಲ್ಲಿ, ನನ್ನ ಚಿಕ್ಕಪ್ಪ ಅಡಾಲ್ಫ್‌ರವರು ನ್ಯೂ ಯಾರ್ಕಿನ ನಯಾಗರಾ ಫಾಲ್ಸ್‌ ಅಧಿವೇಶನದಲ್ಲಿ ದೀಕ್ಷಾಸ್ನಾನಪಡೆದರು. ನನ್ನ ತಂದೆ ಮತ್ತು ಚಿಕ್ಕಪ್ಪ ಬೈಬಲಿನಿಂದ ಏನನ್ನು ಕಲಿತರೊ ಅದನ್ನು ಹುರುಪಿನಿಂದ ಸಾರಿದರು ಮತ್ತು ಕೊನೆಗೆ ಇಬ್ಬರೂ ಪೂರ್ಣ ಸಮಯದ ಶುಶ್ರೂಷಕರು (ಈಗ ಪಯನೀಯರರೆಂದು ಕರೆಯಲ್ಪಡುತ್ತಾರೆ) ಆದರು.

ಹೀಗೆ, 1907ರಲ್ಲಿ ನನ್ನ ಜನನವಾದಾಗ, ನನ್ನ ಕುಟುಂಬವು ಆತ್ಮಿಕ ರೀತಿಯಲ್ಲಿ ಐಶ್ವರ್ಯದಾಯಕವಾಗಿತ್ತು. (ಜ್ಞಾನೋಕ್ತಿ 10:​22, NW) ನನ್ನ ಹೆತ್ತವರಾದ ಜಾನ್‌ ಮತ್ತು ಈಡಾ, 1908ರಲ್ಲಿ ನಾನು ಚಿಕ್ಕ ಮಗುವಾಗಿರುವಾಗಲೇ ಒಹಾಯೋದ ಪುಟ್‌ ಇನ್‌ ಬೇ ಎಂಬಲ್ಲಿ ನಡೆದ “ವಿಜಯದೆಡೆಗೆ ಮುನ್ನಡೆ” ಎಂಬ ಅಧಿವೇಶನಕ್ಕೆ ನನ್ನನ್ನೊಯ್ದರು. ಅಲ್ಲಿ, ಆಗ ಸಂಚರಣಾ ಶುಶ್ರೂಷಕರಾಗಿದ್ದ ಜೋಸೆಫ್‌ ಎಫ್‌. ರದರ್‌ಫರ್ಡರು, ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಕೆಲವೇ ವಾರಗಳ ಹಿಂದೆ, ಒಹಾಯೋದ ಡೂಲ್ಟನ್‌ಗೆ ಭೇಟಿಯಿತ್ತಾಗ ಅವರು ನಮ್ಮ ಮನೆಯನ್ನು ಸಂದರ್ಶಿಸಿ ಸ್ಥಳಿಕ ಬೈಬಲ್‌ ವಿದ್ಯಾರ್ಥಿಗಳಿಗೆ ಭಾಷಣಗಳನ್ನಿತ್ತರು.

ನನಗೆ ವೈಯಕ್ತಿಕವಾಗಿ ಈ ಎಲ್ಲಾ ಘಟನಾವಳಿಗಳ ನೆನಪಿಲ್ಲ ನಿಶ್ಚಯ, ಆದರೆ 1911ರಲ್ಲಿ ಮೇರಿಲ್ಯಾಂಡಿನ ಮೌಂಟನ್‌ ಲೇಕ್‌ ಪಾರ್ಕ್‌ ಅಧಿವೇಶನ ಮಾತ್ರ ನನಗೆ ಸರಿಯಾಗಿ ನೆನಪಿದೆ. ನಾನು ಮತ್ತು ನನ್ನ ತಂಗಿ ಎಸ್ತರ್‌, ಚಾರ್ಲ್ಸ್‌ ಟೇಸ್‌ ರಸಲರನ್ನು ಭೇಟಿಯಾದದ್ದು ಅಲ್ಲಿಯೇ. ಆ ಸಮಯದಲ್ಲಿ ಬೈಬಲ್‌ ವಿದ್ಯಾರ್ಥಿಗಳು ನಡೆಸುತ್ತಿದ್ದ ಜಗದ್ವ್ಯಾಪಕ ಸಾರುವ ಕೆಲಸದ ಮೇಲ್ವಿಚಾರಣೆಯನ್ನು ಅವರೇ ಮಾಡುತ್ತಿದ್ದರು.

ಸಾರಯೆವೊದಲ್ಲಿ ಆರ್ಚ್‌ಡ್ಯೂಕ್‌ ಫರ್ಡಿನಾಂಡ್‌ ಮತ್ತು ಅವನ ಪತ್ನಿಯ ಹತ್ಯೆಯಿಂದಾಗಿ ಲೋಕವು ಯುದ್ಧರಂಗಕ್ಕಿಳಿದ 1914ನೆಯ ಜೂನ್‌ 28ರಂದು, ನಾನು ನನ್ನ ಕುಟುಂಬದೊಂದಿಗೆ ಒಹಾಯೋದ ಕೊಲಂಬಸ್‌ನಲ್ಲಿ ನಡೆದ ಒಂದು ಶಾಂತಿಭರಿತ ಅಧಿವೇಶನಕ್ಕೆ ಹಾಜರಾಗಿದ್ದೆ. ಆ ಪ್ರಾರಂಭದ ವರ್ಷಗಳಿಂದಲೇ ಯೆಹೋವನ ಜನರ ಅನೇಕ ಅಧಿವೇಶನಗಳಲ್ಲಿ ಉಪಸ್ಥಿತನಿರುವ ಸುಯೋಗವು ನನಗಿತ್ತು. ಅವುಗಳಲ್ಲಿ ಕೆಲವು ಕೇವಲ 100 ಅಥವಾ ಅದಕ್ಕೆ ಆಸುಪಾಸಿನ ಸಂಖ್ಯೆಯ ಜನರಿಂದ ಕೂಡಿದ್ದು, ಬೇರೆಯವು ಜಗತ್ತಿನ ಕೆಲವೊಂದು ಮಹತ್ತಮ ಸ್ಟೇಡಿಯಮ್‌ಗಳಲ್ಲಿ ನಡೆದ ಮಹಾ ಒಕ್ಕೂಟಗಳಾಗಿದ್ದವು.

ಕಾರ್ಯಯೋಜನೆಯ ಸ್ಥಳದಲ್ಲಿ ನಮ್ಮ ಮನೆ

ನಮ್ಮ ಮನೆಯು, ಪೆನ್ಸಿಲ್‌ವೇನಿಯದ ಪಿಟ್ಸ್‌ಬರ್ಗ್‌ ಮತ್ತು ಒಹಾಯೋದ ಕ್ಲೀವ್‌ಲೆಂಡ್‌ನ ನಡುವೆ ನೆಲೆಸಿರುವ ಡೋಲ್ಟನ್‌ನಲ್ಲಿತ್ತು. 1908ರಿಂದ 1918ರ ವರೆಗೆ ಬೈಬಲ್‌ ವಿದ್ಯಾರ್ಥಿಗಳ ಒಂದು ಚಿಕ್ಕ ಸಭೆಯ ಕೂಟಗಳು ಅಲ್ಲಿ ನಡೆಯುತ್ತಿದ್ದವು. ನಮ್ಮ ಮನೆಯು, ಅನೇಕ ಸಂಚಾರಿ ಭಾಷಣಕರ್ತರಿಗೆ ಒಂದು ರೀತಿಯ ಅತಿಥಿಸತ್ಕಾರದ ಕೇಂದ್ರವೂ ಆಗಿತ್ತು. ಅವರು ತಮ್ಮ ಕುದುರೆ ಮತ್ತು ಗಾಡಿಗಳನ್ನು ನಮ್ಮ ಮನೆ ಹಿಂದೆ ಹಿತ್ತಲಲ್ಲಿ ಕಟ್ಟಿಹಾಕಿ, ನೆರೆದುಬಂದವರಿಗೆ ತಮ್ಮ ಅತ್ಯುತ್ತಮ ಅನುಭವಗಳನ್ನೂ ಆತ್ಮಿಕ ಸತ್ಯತೆಗಳನ್ನೂ ವಿವರಿಸುತ್ತಿದ್ದರು. ಅವು ಎಂತಹ ಪ್ರೋತ್ಸಾಹನೀಯ ಸಮಯಗಳಾಗಿದ್ದವು!

ನಮ್ಮ ತಂದೆ ಒಬ್ಬ ಅಧ್ಯಾಪಕರಾಗಿದ್ದರು, ಆದರೆ ಅವರ ಹೃದಮನವು ಅತ್ಯಂತ ಮಹಾನ್‌ ಶಿಕ್ಷಣ ಕಾರ್ಯವಾದ ಕ್ರಿಸ್ತೀಯ ಶುಶ್ರೂಷೆಯಲ್ಲಿತ್ತು. ತನ್ನ ಕುಟುಂಬಕ್ಕೆ ಯೆಹೋವನ ಕುರಿತು ಕಲಿಸುವುದನ್ನು ಅವರು ತಪ್ಪಿಸಲಿಲ್ಲ. ಮತ್ತು ಪ್ರತಿದಿನ ಸಂಜೆ ನಾವು ಕುಟುಂಬವಾಗಿ ಒಟ್ಟಿಗೆ ಪ್ರಾರ್ಥನೆಮಾಡುತ್ತಿದ್ದೆವು. ಸಾರುವ ಕಾರ್ಯದಲ್ಲಿ ನಾವು ಹೆಚ್ಚು ಜನರನ್ನು ತಲಪುವಂತಾಗಲು, 1919ರ ಶರತ್ಕಾಲದಲ್ಲಿ ನಮ್ಮ ತಂದೆಯವರು ನಮ್ಮ ಕುದುರೆ ಮತ್ತು ಗಾಡಿಯನ್ನು ಮಾರಿದರು ಹಾಗೂ 175 ಡಾಲರ್‌ ಬೆಲೆಬಾಳುವ 1914ರ ಫೋರ್ಡ್‌ ಕಾರೊಂದನ್ನು ಖರೀದಿಸಿದರು. 1919 ಮತ್ತು 1922ರಲ್ಲಿ ಆ ಕಾರು ನಮ್ಮ ಕುಟುಂಬವನ್ನು, ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ನಡೆದ ಬೈಬಲ್‌ ವಿದ್ಯಾರ್ಥಿಗಳ ಗಮನಾರ್ಹ ಅಧಿವೇಶನಗಳಿಗೆ ಕೊಂಡೊಯ್ಯಿತು.

ನಮ್ಮ ಇಡೀ ಕುಟುಂಬವು, ಅಂದರೆ ತಂದೆ, ತಾಯಿ, ಎಸ್ತರ್‌, ತಮ್ಮನಾದ ಜಾನ್‌ ಮತ್ತು ನಾನು ಸಾರ್ವಜನಿಕ ಸಾರುವಿಕೆಯಲ್ಲಿ ಪಾಲ್ಗೊಂಡೆವು. ಮನೆಯವನೊಬ್ಬನು ಪ್ರಥಮಬಾರಿ ನನಗೊಂದು ಬೈಬಲ್‌ ಪ್ರಶ್ನೆಯನ್ನು ಕೇಳಿದ್ದು ನನಗೆ ಚೆನ್ನಾಗಿ ನೆನಪುಂಟು. ನಾನು ಸುಮಾರು ಏಳು ವರ್ಷದವನಾಗಿದ್ದೆ. “ಪುಟ್ಟಾ, ಹರ್ಮಗೆದೋನ್‌ ಎಂದರೇನಪ್ಪಾ?” ಎಂದು ಆತ ಕೇಳಿದ. ತಂದೆಯ ಸಹಾಯದೊಂದಿಗೆ ಆ ಪ್ರಶ್ನೆಗೆ ನಾನು ಬೈಬಲ್‌ ಉತ್ತರವನ್ನು ಕೊಡಶಕ್ತನಾದೆ.

ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವುದು

ಇಸವಿ 1931ರಲ್ಲಿ ಒಹಾಯೋದ ಕೊಲಂಬಸ್‌ ಅಧಿವೇಶನಕ್ಕೆ ನಮ್ಮ ಕುಟುಂಬವು ಹಾಜರಾಯಿತು. ಅಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೊಸ ಹೆಸರನ್ನು ಅಂಗೀಕರಿಸುವುದರಲ್ಲಿ ಪಾಲ್ಗೊಂಡಾಗ ನಾವು ಪುಳಕಿತರಾದೆವು. ಜಾನ್‌ ಎಷ್ಟು ಉದ್ರೇಕಗೊಂಡಿದ್ದನೆಂದರೆ, ನಾನು ಮತ್ತು ಅವನು ಇಬ್ಬರೂ ಪಯನೀಯರ್‌ ಸೇವೆಗಿಳಿಯಬೇಕೆಂಬ ತೀರ್ಮಾನವನ್ನು ಅವನು ಮಾಡಿದನು. * ನಾವು ಪಯನೀಯರರಾಗಿಬಿಟ್ಟೆವು, ಮತ್ತು ನಮ್ಮೊಂದಿಗೆ ನಮ್ಮ ತಾಯಿ, ತಂದೆ ಮತ್ತು ಎಸ್ತರ್‌ ಕೂಡ ಅದನ್ನೇ ಮಾಡಿದರು. ಎಂಥ ನಿಕ್ಷೇಪವು ನಮಗಿತ್ತು​—ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಸಂತಸದ ಕೆಲಸದಲ್ಲಿ ಐಕ್ಯವಾಗಿರುವ ಒಂದು ಕುಟುಂಬ! ಈ ಆಶೀರ್ವಾದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳಿದಷ್ಟು ಸಾಕಾಗುವುದಿಲ್ಲ. ನಾವು ಅತಿ ಸಂತೋಷದಿಂದಿದ್ದರೂ, ಇನ್ನೂ ಹೆಚ್ಚು ಸಂತೋಷಗಳು ನಮಗಾಗಿ ಕಾದಿದ್ದವು.

ಫೆಬ್ರವರಿ 1934ರಲ್ಲಿ ನ್ಯೂ ಯಾರ್ಕ್‌ನ, ಬ್ರೂಕ್‌ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯ (ಬೆತೆಲ್‌)ದಲ್ಲಿ ನಾನು ಸೇವೆಮಾಡಲಾರಂಭಿಸಿದೆ. ಕೆಲವು ವಾರಗಳಲ್ಲಿ ಜಾನ್‌ ಕೂಡ ನನ್ನ ಜೊತೆಸೇರಿದ. ಅವನು 1953ರಲ್ಲಿ ತನ್ನ ಪ್ರಿಯ ಪತ್ನಿ ಜೆಸ್ಸಿಯನ್ನು ಮದುವೆಯಾಗುವ ತನಕ ನಾವು ಒಂದೇ ರೂಮಿನಲ್ಲಿ ವಾಸಿಸುತ್ತಿದ್ದೆವು.

ಜಾನ್‌ ಮತ್ತು ನಾನು ಬೆತೆಲ್‌ಗೆ ಹೋದನಂತರ, ನಮ್ಮ ಹೆತ್ತವರು ದೇಶದ ವಿವಿಧ ಭಾಗಗಳಲ್ಲಿ ಪಯನೀಯರ್‌ ನೇಮಕಗಳನ್ನು ಸ್ವೀಕರಿಸಿದರು. ಎಸ್ತರ್‌ ಮತ್ತು ಅವಳ ಪತಿ ಜಾರ್ಜ್‌ ರೀಡ್‌ ನಮ್ಮ ಹೆತ್ತವರೊಂದಿಗೆ ಜೊತೆಗೂಡಿದರು. ನಮ್ಮ ಹೆತ್ತವರು, 1963ರಲ್ಲಿ ತಮ್ಮ ಭೂಜೀವಿತವನ್ನು ಮುಗಿಸುವ ತನಕ ಪಯನೀಯರ್‌ ಸೇವೆಯಲ್ಲಿ ಮುಂದುವರಿದರು. ಎಸ್ತರ್‌ ಮತ್ತು ಅವಳ ಪತಿ ಒಂದು ಒಳ್ಳೆಯ ಕುಟುಂಬವನ್ನು ಬೆಳೆಸಿದ್ದಾರೆ. ಮತ್ತು ಹೀಗೆ ನನಗೆ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಅಳಿಯಂದಿರು ಹಾಗೂ ಸೊಸೆಯಂದಿರಿದ್ದಾರೆ. ನಾನವರನ್ನು ತುಂಬಾ ಪ್ರೀತಿಸುತ್ತೇನೆ.

ಬೆತೆಲಿನಲ್ಲಿ ಕೆಲಸ ಮತ್ತು ಸಹವಾಸ

ಜಾನ್‌ ತನ್ನ ಯಂತ್ರಕಲೆಯ ಕುಶಲತೆಗಳನ್ನು ಬೆತೆಲ್‌ ಕೆಲಸದಲ್ಲಿ ಉಪಯೋಗಿಸಿ, ಸುಲಭವಾಗಿ ಹೊತ್ತುಕೊಂಡು ಹೋಗಬಹುದಾದ ಫೋನೊಗ್ರಾಫ್‌ ತಯಾರಿಸುವಂಥ ಯೋಜನೆಗಳಲ್ಲಿ ಇತರ ಬೆತೆಲ್‌ ಸಹೋದರರೊಂದಿಗೆ ಜೊತೆಗೂಡಿದನು. ಅಂಥ ಫೋನೊಗ್ರಾಫ್‌ಗಳನ್ನು ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳು ತಮ್ಮ ಮನೆಮನೆಯ ಶುಶ್ರೂಷೆಯಲ್ಲಿ ಉಪಯೋಗಿಸಿದರು. ಒಬ್ಬೊಬ್ಬ ಚಂದಾದಾರರಿಗೆ ಅಂಚೆಯ ಮೂಲಕ ಕಳುಹಿಸಲಾಗುತ್ತಿದ್ದ ಪತ್ರಿಕೆಗಳನ್ನು ಕಾಗದದಿಂದ ಸುತ್ತಿ, ಲೇಬಲ್‌ ಹಚ್ಚುವ ಮೆಷಿನ್‌ಗಳನ್ನು ವಿನ್ಯಾಸಿಸಿ ರಚಿಸುವುದರಲ್ಲಿ ಸಹ ಜಾನ್‌ ನೆರವಾದನು.

ನಾನು ಬೆತೆಲ್‌ ಸೇವೆಯನ್ನಾರಂಭಿಸಿದ್ದು ಬುಕ್‌ ಬೈಂಡರಿಯಲ್ಲಿ. ಆಗ ಫ್ಯಾಕ್ಟರಿಯಲ್ಲಿ ಕೆಲಸಮಾಡುತ್ತಿದ್ದ ಬೇರೆ ಯುವಕರು ಈಗಲೂ ಬೆತೆಲಿನಲ್ಲಿ ನಂಬಿಗಸ್ತರಾಗಿ ಸೇವೆನಡಿಸುತ್ತಿದ್ದಾರೆ. ಅವರಲ್ಲಿ ಕ್ಯಾರಿ ಬಾರ್ಬರ್‌ ಮತ್ತು ರಾಬರ್ಟ್‌ ಹ್ಯಾಟ್ಸೆಫೆಲ್ಟ್‌ ಸೇರಿರುತ್ತಾರೆ. ನಾನು ಅಕ್ಕರೆಯಿಂದ ಜ್ಞಾಪಿಸಿಕೊಳ್ಳುವ​—ಆದರೆ ಈಗ ತೀರಿಕೊಂಡಿರುವ​—ಇತರ ಸಹೋದರರಲ್ಲಿ ನೇತನ್‌ ನಾರ್‌, ಕಾರ್ಲ್‌ ಕ್ಲೈನ್‌, ಲೈಮನ್‌ ಸ್ವಿಂಗಲ್‌, ಕ್ಲಾಸ್‌ ಜೆನ್ಸನ್‌, ಗ್ರಾಂಟ್‌ ಸ್ಯೂಟರ್‌, ಜಾರ್ಜ್‌ ಗ್ಯಾಂಗಸ್‌, ಓರೆನ್‌ ಹಿಬ್ಬರ್ಡ್‌, ಜಾನ್‌ ಸಿಆರಸ್‌, ರಾಬರ್ಟ್‌ ಪೇನ್‌, ಚಾರ್ಲ್ಸ್‌ ಫೆಕಲ್‌, ಬೆನೊ ಬರ್ಕಿಕ್‌ ಮತ್ತು ಜಾನ್‌ ಪೆರಿ ಸಹ ಸೇರಿದ್ದಾರೆ. ಅವರೆಂದಿಗೂ ಗುಣುಗುಟ್ಟದೆ ಅಥವಾ “ಬಡತಿಯನ್ನು” ಅಪೇಕ್ಷಿಸದೆ ವರ್ಷಾನುವರ್ಷ ನಂಬಿಕೆಯಿಂದ ಎಡೆಬಿಡದೆ ಸೇವೆಸಲ್ಲಿಸಿದರು. ಆದರೂ ಸಂಸ್ಥೆಯು ಬೆಳೆಯುತ್ತಾ ಹೋದಂತೆ, ಈ ನಿಷ್ಠಾವಂತ ಆತ್ಮಾಭಿಷಿಕ್ತ ಕ್ರೈಸ್ತರಲ್ಲಿ ಕೆಲವರಿಗೆ ಹೆಚ್ಚಿನ ಜವಾಬ್ದಾರಿಗಳು ದೊರಕಿದವು. ಅವರಲ್ಲಿ ಕೆಲವರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಲ್ಲೂ ಸೇವೆಸಲ್ಲಿಸಿದರು.

ಸ್ವತ್ಯಾಗಿಗಳಾದ ಈ ಸಹೋದರರೊಂದಿಗೆ ಕೆಲಸಮಾಡುವುದರಿಂದ ನಾನು ಒಂದು ಮಹತ್ತರವಾದ ಪಾಠವನ್ನು ಕಲಿತೆ. ಐಹಿಕ ಉದ್ಯೋಗಗಳಲ್ಲಿ ಕೆಲಸಗಾರರಿಗೆ ಅವರ ದುಡಿತಕ್ಕಾಗಿ ಸಂಬಳವು ದೊರಕುತ್ತದೆ. ಅದು ಅವರ ಇನಾಮು. ಬೆತೆಲ್‌ ಸೇವೆಯಾದರೊ ಸಮೃದ್ಧ ಆತ್ಮಿಕ ಆಶೀರ್ವಾದಗಳನ್ನು ಫಲಿಸುತ್ತದೆ. ಮತ್ತು ಇಂಥ ಪ್ರತಿಫಲಗಳನ್ನು ಕೇವಲ ಆತ್ಮಿಕ ಪುರುಷರು ಮತ್ತು ಸ್ತ್ರೀಯರು ಮಾತ್ರವೇ ಗಣ್ಯಮಾಡುತ್ತಾರೆ.​—1 ಕೊರಿಂಥ 2:6-16.

ನೇತನ್‌ ನಾರ್‌ 1923ರಲ್ಲಿ ಬೆತೆಲಿಗೆ ಬಂದದ್ದು ತಮ್ಮ ಹದಿಹರೆಯದಲ್ಲಿ. 1930ರಲ್ಲಿ ಅವರು ಫ್ಯಾಕ್ಟರಿ ಮೇಲ್ವಿಚಾರಕರಾದರು. ಅವರು ಪ್ರತಿದಿನ ಫ್ಯಾಕ್ಟರಿಯಲ್ಲಿ ಸುತ್ತಾಡುತ್ತಾ ಪ್ರತಿಯೊಬ್ಬ ಕೆಲಸಗಾರನನ್ನು ವಂದಿಸುತ್ತಿದ್ದರು. ಬೆತೆಲಿಗೆ ಹೊಸದಾಗಿ ಬಂದಿದ್ದ ನನ್ನಂಥವರು ಅಂಥ ವೈಯಕ್ತಿಕ ಅಭಿರುಚಿಯನ್ನು ಗಣ್ಯಮಾಡುತ್ತಿದ್ದರು. 1936ರಲ್ಲಿ ಒಂದು ಹೊಸ ಪ್ರಿಂಟಿಂಗ್‌ ಪ್ರೆಸ್‌ ನಮಗೆ ಜರ್ಮನಿಯಿಂದ ಸಿಕ್ಕಿತು, ಮತ್ತು ಕೆಲವು ಯುವ ಸಹೋದರರಿಗೆ ಅದನ್ನು ಜೋಡಿಸುವುದು ತುಂಬಾ ಕಷ್ಟಕರವಾಗಿತ್ತು. ಆದುದರಿಂದ ಸಹೋದರ ನಾರ್‌ ಕೆಲಸದ ಮೇಲುಡುಪನ್ನು ಧರಿಸಿಕೊಂಡು, ಪ್ರೆಸ್‌ ಜೋಡಿಸಲ್ಪಟ್ಟು, ಕೆಲಸಮಾಡಲಾರಂಭಿಸುವ ವರೆಗೆ ಅವರೊಂದಿಗೆ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ದುಡಿದರು.

ಸಹೋದರ ನಾರ್‌ ಎಷ್ಟು ಪರಿಶ್ರಮಿ ಕೆಲಸಗಾರರಾಗಿದ್ದರೆಂದರೆ, ನಮ್ಮಲ್ಲಿ ಹೆಚ್ಚಿನವರಿಗೆ ಅಷ್ಟು ದಕ್ಷತೆಯಿಂದ ಕೆಲಸಮಾಡಲು ಆಗುತ್ತಿರಲಿಲ್ಲ. ಆದರೆ ಕೆಲಸದಿಂದ ವಿಶ್ರಾಂತಿ ಪಡೆಯುವುದು ಹೇಗೆಂಬುದು ಸಹ ಅವರಿಗೆ ತಿಳಿದಿತ್ತು. 1942ರ ಜನವರಿಯಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಕಾರ್ಯದ ಜಗದ್ವ್ಯಾಪಕ ಮೇಲ್ವಿಚಾರಣೆಯ ಜವಾಬ್ದಾರಿಯು ಅವರಿಗೆ ಸಿಕ್ಕಿದ ಮೇಲೂ, ಅವರು ಕೆಲವೊಮ್ಮೆ ಬೆತೆಲ್‌ ಕುಟುಂಬದ ಸದಸ್ಯರೊಂದಿಗೆ ಮತ್ತು ಗಿಲ್ಯಡ್‌ ಮಿಷನೆರಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ನ್ಯೂಯಾರ್ಕ್‌ನ ಸೌತ್‌ ಲ್ಯಾನ್ಸಿಂಗ್‌ ಬಳಿಯಲ್ಲಿದ್ದ ಕ್ಯಾಂಪಸ್‌ನಲ್ಲಿ ಬೇಸ್‌ಬಾಲ್‌ ಆಟವನ್ನು ಆಡುತ್ತಿದ್ದರು.

ಇಸವಿ 1950ರ ಏಪ್ರಿಲ್‌ ತಿಂಗಳಲ್ಲಿ, ಬ್ರೂಕ್‌ಲಿನ್‌ನ 124 ಕೊಲಂಬಿಯ ಹೈಟ್ಸ್‌ನಲ್ಲಿ ಹೊಸದಾಗಿ ಕಟ್ಟಲ್ಪಟ್ಟ ಹತ್ತು ಮಾಳಿಗೆಯ ನಿವಾಸದ ಕಟ್ಟಡಕ್ಕೆ ಬೆತೆಲ್‌ ಕುಟುಂಬವು ಸ್ಥಳಾಂತರಿಸಿತು. ಹೊಸ ಊಟದ ಕೋಣೆಯು, ನಾವೆಲ್ಲರೂ ಒಟ್ಟಾಗಿ ಕುಳಿತುಕೊಂಡು ಊಟಮಾಡುವ ಅವಕಾಶವನ್ನು ನೀಡಿತು. ಈ ಕಟ್ಟಡವು ಕಟ್ಟಲ್ಪಡುತ್ತಾ ಇದ್ದ ಸುಮಾರು ಮೂರು ವರ್ಷಗಳಲ್ಲಿ ನಮಗೆ ಬೆಳಗ್ಗಿನ ಆರಾಧನಾ ಕಾರ್ಯಕ್ರಮವನ್ನು ನಡಿಸಲು ಆಗಿರಲಿಲ್ಲ. ಆ ಕಾರ್ಯಕ್ರಮವು ಪುನರಾರಂಭಿಸಿದಾಗ ನಾವೆಷ್ಟು ಉಲ್ಲಾಸಗೊಂಡೆವು! ಬೆತೆಲ್‌ ಕುಟುಂಬಕ್ಕೆ ಬರುವ ಹೊಸಬರ ಹೆಸರುಗಳನ್ನು ನೆನಪಿಸಿಕೊಳ್ಳಲು ಅವರಿಗೆ ಸಹಾಯಮಾಡಲಿಕ್ಕಾಗಿ ಸಹೋದರ ನಾರ್‌ ನನ್ನನ್ನು ಅಧ್ಯಕ್ಷರ ಮೇಜಿನಲ್ಲಿ ತಮ್ಮ ಬಳಿ ಕುಳಿತುಕೊಳ್ಳುವ ನೇಮಕವನ್ನಿತ್ತರು. ಬೆಳಗ್ಗಿನ ಆರಾಧನೆ ಮತ್ತು ಉಪಾಹಾರಕ್ಕಾಗಿ ನಾನು ಇದೇ ಸೀಟ್‌ನಲ್ಲಿ 50 ವರ್ಷಗಳ ತನಕ ಕುಳಿತುಕೊಂಡಿದ್ದೆ. ಅನಂತರ, 2000ದ ಏಪ್ರಿಲ್‌ 4ರಂದು, ಆ ಊಟದ ಕೋಣೆಯು ಮುಚ್ಚಲ್ಪಟ್ಟಿತು ಮತ್ತು ಹಿಂದಣ ಟವರ್ಸ್‌ ಹೋಟೇಲಿನ ನವೀಕರಿಸಲ್ಪಟ್ಟ ಊಟದ ಕೋಣೆಗಳಲ್ಲಿ ಒಂದಕ್ಕೆ ನನ್ನನ್ನು ನೇಮಿಸಲಾಯಿತು.

ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ, ಫ್ಯಾಕ್ಟರಿಯ ಲಿನೊಟೈಪ್‌ ಮಷೀನ್‌ನಲ್ಲಿ ನಾನು ಸ್ವಲ್ಪ ಸಮಯ ಕೆಲಸಮಾಡಿದೆ. ಪ್ರಿಂಟಿಂಗ್‌ ಪ್ಲೇಟ್‌ಗಳನ್ನು ಮಾಡುವ ಕಾರ್ಯವಿಧಾನದ ಭಾಗವಾಗಿ ಪುಟಗಳಲ್ಲಿ ಒಟ್ಟು ಜೋಡಿಸಲಾಗುತ್ತಿದ್ದ ಲೋಹದ ಗಟ್ಟಿ ಸಾಲುಗಳನ್ನು ತಯಾರಿಸುತ್ತಿದ್ದೆ. ಇದು ನನ್ನ ಅಚ್ಚುಮೆಚ್ಚಿನ ಕೆಲಸವಾಗಿರಲಿಲ್ಲ. ಆದರೆ ಈ ಮಷೀನುಗಳ ಮೇಲ್ವಿಚಾರಣೆ ಮಾಡುತ್ತಿದ್ದ ವಿಲ್ಯಮ್‌ ಪೀಟರ್ಸನ್‌ ಎಂಬುವವರು ನನ್ನನ್ನು ಚೆನ್ನಾಗಿ ನೋಡಿಕೊಂಡದ್ದರಿಂದ ಅಲ್ಲಿ ವ್ಯಯಿಸಿದ ಸಮಯವನ್ನು ನಾನು ಹೇಗೊ ಆನಂದಿಸಿದೆ. ಆಮೇಲೆ 1960ರಲ್ಲಿ, 107 ಕೊಲಂಬಿಯ ಹೈಟ್ಸ್‌ನಲ್ಲಿ ಹೊಸದಾದ ನಿವಾಸದ ಕಟ್ಟಡಗಳಿಗೆ ಬಣ್ಣಬಳಿಯಲು ಸ್ವಯಂಸೇವಕರ ಅಗತ್ಯವಿತ್ತು. ನಮ್ಮ ಬೆಳೆಯುತ್ತಿರುವ ಬೆತೆಲ್‌ ಕುಟುಂಬಕ್ಕಾಗಿ ಈ ಹೊಸ ಸೌಕರ್ಯಗಳನ್ನು ತಯಾರಿಸಲು ಸಹಾಯಮಾಡುವುದಕ್ಕಾಗಿ ನಾನು ಸಂತೋಷದಿಂದ ನನ್ನ ಸೇವೆಯನ್ನು ನೀಡಿದೆ.

ಆ 107 ಕೊಲಂಬಿಯ ಹೈಟ್ಸ್‌ನ ಕಟ್ಟಡಕ್ಕೆ ಬಣ್ಣಬಳಿದಾದ ಸ್ವಲ್ಪ ಸಮಯದಲ್ಲೇ, ಬೆತೆಲ್‌ಗೆ ಬರುವ ಸಂದರ್ಶಕರನ್ನು ಸ್ವಾಗತಿಸುವ ಕೆಲಸವು ನನಗೆ ನೇಮಿಸಲ್ಪಟ್ಟಾಗ ನನಗೆ ಸಂತೋಷವೂ ಆಶ್ಚರ್ಯವೂ ಆಯಿತು. ನಾನು ಸ್ವಾಗತಕಾರನಾಗಿ ಕೆಲಸಮಾಡಿರುವ ಕಳೆದ 40 ವರ್ಷಗಳು, ನಾನು ಬೆತೆಲಿನಲ್ಲಿ ಕಳೆದಿರುವ ಬೇರೆಲ್ಲ ವರ್ಷಗಳಷ್ಟೇ ಹರ್ಷಾನಂದದ್ದಾಗಿವೆ. ಬೆತೆಲಿನ ಪ್ರವೇಶದ್ವಾರದೊಳಗೆ ಬಂದಿರುವವರು ಸಂದರ್ಶಕರಾಗಿರಲಿ, ಇಲ್ಲವೇ ಬೆತೆಲ್‌ ಕುಟುಂಬದ ಹೊಸ ಸದಸ್ಯರಾಗಿರಲಿ, ರಾಜ್ಯಾಭಿವೃದ್ಧಿಗಾಗಿ ಕೆಲಸಮಾಡುವ ನಮ್ಮೆಲ್ಲರ ಸಂಘಟಿತ ಪ್ರಯತ್ನಗಳ ಪ್ರತಿಫಲಗಳ ಕುರಿತು ಪುನರಾಲೋಚಿಸುವುದು ರೋಮಾಂಚಕವಾಗಿತ್ತು.

ಬೈಬಲಿನ ಉತ್ಸುಕ ವಿದ್ಯಾರ್ಥಿಗಳು

ನಮ್ಮ ಬೆತೆಲ್‌ ಕುಟುಂಬವು ಆತ್ಮಿಕವಾಗಿ ಐಶ್ವರ್ಯದಾಯಕವಾಗಿರಲು ಕಾರಣ, ಅದರ ಸದಸ್ಯರಿಗೆ ಬೈಬಲೆಂದರೆ ಅಚ್ಚುಮೆಚ್ಚು. ನಾನು ಬೆತೆಲಿಗೆ ಬಂದ ಆರಂಭದಲ್ಲಿ, ಕರಡಚ್ಚು ತಿದ್ದುವವರಾಗಿ ಕೆಲಸಮಾಡುತ್ತಿದ್ದ ಎಮ್ಮ ಹೆಮಿಲ್ಟನ್‌ರನ್ನು, ನೀವೆಷ್ಟು ಬಾರಿ ಬೈಬಲನ್ನು ಓದಿದ್ದೀರಿ ಎಂದು ಕೇಳಿದೆ. “ಮೂವತ್ತೈದು ಬಾರಿ, ಮತ್ತು ಅನಂತರ ನನಗೆ ಲೆಕ್ಕ ತಪ್ಪಿತು,” ಎಂದರವರು. ಬೆತೆಲಿನಲ್ಲಿ ಇದೇ ಸಮಯದಲ್ಲಿ ಸೇವೆಮಾಡುತ್ತಿದ್ದ ಇನ್ನೊಬ್ಬ ಕಟ್ಟಾಳು ಕ್ರೈಸ್ತರಾಗಿದ್ದ ಆ್ಯಂಟನ್‌ ಕರ್‌ಬರ್‌ ಹೀಗನ್ನುತ್ತಿದ್ದರು: “ಯಾವಾಗಲೂ ಬೈಬಲನ್ನು ಕೈಗೆಟುಕುವಷ್ಟು ಹತ್ತಿರದಲ್ಲಿಡಿರಿ.”

ಇಸವಿ 1916ರಲ್ಲಿ ಸಹೋದರ ರಸಲರ ಮರಣದ ನಂತರ, ಜೋಸೆಫ್‌ ಎಫ್‌. ರದರ್‌ಫರ್ಡರು, ಸಹೋದರ ರಸಲ್‌ ಹೊತ್ತಿದ್ದ ಸಂಘಟನಾ ಜವಾಬ್ದಾರಿಗಳನ್ನು ವಹಿಸಿಕೊಂಡರು. ರದರ್‌ಫರ್ಡರು ನಿಪುಣ ಹಾಗೂ ಪ್ರಭಾವಶಾಲಿ ಸಾರ್ವಜನಿಕ ಭಾಷಣಕರ್ತರಾಗಿದ್ದರು. ಇವರು ವಕೀಲರಾಗಿದ್ದಾಗ, ಅಮೆರಿಕದ ಸರ್ವೋಚ್ಛ ನ್ಯಾಯಾಲಯದಲ್ಲಿ ಯೆಹೋವನ ಸಾಕ್ಷಿಗಳ ಪರವಾಗಿ ಮೊಕದ್ದಮೆಗಳನ್ನು ವಾದಿಸುತ್ತಿದ್ದರು. ರದರ್‌ಫರ್ಡರು 1942ರಲ್ಲಿ ತೀರಿಕೊಂಡ ನಂತರ ಸಹೋದರ ನಾರ್‌ ಅವರ ಸ್ಥಾನವನ್ನು ತೆಗೆದುಕೊಂಡು, ಸಾರ್ವಜನಿಕ ಭಾಷಣಕಲೆಯಲ್ಲಿ ತಮ್ಮ ನಿಪುಣತೆಯನ್ನು ವಿಕಸಿಸಲು ತುಂಬ ಪ್ರಯಾಸಪಟ್ಟರು. ನಾನು ಅವರ ಕೋಣೆಯ ಹತ್ತಿರದಲ್ಲೇ ವಾಸಿಸುತ್ತಿದ್ದುದರಿಂದ, ಅವರು ತಮ್ಮ ಭಾಷಣಗಳನ್ನು ಪುನಃ ಪುನಃ ಪ್ರ್ಯಾಕ್ಟಿಸ್‌ ಮಾಡುತ್ತಿದ್ದದ್ದನ್ನು ನಾನು ಅನೇಕ ಸಲ ಕೇಳಿಸಿಕೊಳ್ಳುತ್ತಿದ್ದೆ. ಸಮಯಾನಂತರ, ಅಂಥ ಶ್ರದ್ಧಾಯುಕ್ತ ಪ್ರಯತ್ನಗಳಿಂದಾಗಿ ಅವರು ಒಬ್ಬ ಅತ್ಯುತ್ತಮ ಸಾರ್ವಜನಿಕ ಭಾಷಣಕರ್ತರಾದರು.

ಇಸವಿ 1942ರ ಫೆಬ್ರವರಿಯಲ್ಲಿ, ಬೆತೆಲಿನ ಸಹೋದರರಾದ ನಾವೆಲ್ಲರೂ ನಮ್ಮ ಕಲಿಸುವ ಮತ್ತು ಮಾತಾಡುವ ಸಾಮರ್ಥ್ಯವನ್ನು ಉತ್ತಮಗೊಳಿಸಲಿಕ್ಕಾಗಿ ಒಂದು ಕಾರ್ಯಕ್ರಮವನ್ನು ಸಂಘಟಿಸಲು ಸಹೋದರ ನಾರ್‌ ಸಹಾಯಮಾಡಿದರು. ಬೈಬಲ್‌ ರಿಸರ್ಚ್‌ ಮತ್ತು ಸಾರ್ವಜನಿಕವಾಗಿ ಭಾಷಣ ಕೊಡುವ ಕಲೆಯ ಮೇಲೆ ಆ ಶಾಲೆಯು ಗಮನವನ್ನು ಕೇಂದ್ರೀಕರಿಸಿತ್ತು. ಆರಂಭದಲ್ಲಿ, ಬೈಬಲ್‌ ವ್ಯಕ್ತಿಗಳ ಕುರಿತು ಚಿಕ್ಕ ಚಿಕ್ಕ ಭಾಷಣಗಳನ್ನು ಕೊಡುವಂತೆ ನಮ್ಮಲ್ಲಿ ಪ್ರತಿಯೊಬ್ಬನನ್ನು ನೇಮಿಸಲಾಯಿತು. ನನ್ನ ಮೊದಲನೆಯ ಭಾಷಣ ಮೋಶೆಯ ಕುರಿತಾಗಿತ್ತು. ತದ್ರೀತಿಯ ಶಾಲೆಯು 1943ರಲ್ಲಿ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಆರಂಭಿಸಲ್ಪಟ್ಟಿತು ಮತ್ತು ಈ ವರೆಗೂ ಅದು ಮುಂದುವರಿಯುತ್ತಿದೆ. ಬೆತೆಲಿನಲ್ಲಿ ಈಗಲೂ ಬೈಬಲ್‌ ಜ್ಞಾನಾರ್ಜನೆ ಮತ್ತು ಪರಿಣಾಮಕಾರಿ ಶಿಕ್ಷಣಾ ವಿಧಾನಗಳನ್ನು ವಿಕಸಿಸುವುದು ಒತ್ತಿಹೇಳಲ್ಪಡುತ್ತದೆ.

ಗಿಲ್ಯಡ್‌ ಮಿಷನೆರಿ ಶಾಲೆಯ ಮೊದಲನೆಯ ತರಗತಿ 1943ನೆಯ ಫೆಬ್ರವರಿ ತಿಂಗಳಲ್ಲಿ ಆರಂಭವಾಯಿತು. ಮತ್ತು ಈಗತಾನೇ, ಗಿಲ್ಯಡ್‌ನ 111ನೆಯ ತರಗತಿಯು ಪದವಿಪ್ರಾಪ್ತಿಯನ್ನು ಪಡೆದುಕೊಂಡಿತು! ಅದರ 58 ವರ್ಷಗಳ ಮಿಕ್ಕಿದ ಕಾರ್ಯಾಚರಣೆಯಲ್ಲಿ ಈ ಶಾಲೆಯು, ಲೋಕದಾದ್ಯಂತ ಮಿಷನೆರಿಗಳಾಗಿ ಸೇವೆಮಾಡಲಿಕ್ಕಾಗಿ 7,000ಕ್ಕಿಂತಲೂ ಹೆಚ್ಚು ಜನರಿಗೆ ತರಬೇತಿಯನ್ನು ನೀಡಿದೆ. 1943ರಲ್ಲಿ ಈ ಶಾಲೆಯು ಪ್ರಾರಂಭವಾದಾಗ, ಲೋಕದಾದ್ಯಂತ ಇದ್ದ ಸಾಕ್ಷಿಗಳ ಒಟ್ಟು ಸಂಖ್ಯೆ 1,00,000ಕ್ಕಿಂತ ಸ್ವಲ್ಪ ಹೆಚ್ಚು ಆಗಿತ್ತಷ್ಟೆ. ಆದರೆ ಈಗ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯು 60,00,000ಕ್ಕಿಂತಲೂ ಹೆಚ್ಚಾಗಿದೆ!

ನನ್ನ ಆತ್ಮಿಕ ಪರಂಪರೆಗಾಗಿ ಆಭಾರಿ

ಗಿಲ್ಯಡ್‌ನ ಸ್ಥಾಪನೆಗೆ ತುಸು ಮುಂಚೆ, ಅಮೆರಿಕದಲ್ಲೆಲ್ಲೂ ಇರುವ ಸಭೆಗಳನ್ನು ಸಂದರ್ಶಿಸಲು ಬೆತೆಲಿನಿಂದ ಮೂವರನ್ನು ನೇಮಿಸಲಾಯಿತು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಈ ಸಭೆಗಳನ್ನು ಆತ್ಮಿಕವಾಗಿ ಬಲಪಡಿಸುವ ಪ್ರಯತ್ನದಲ್ಲಿ ಒಂದು ದಿನ, ಕೆಲವು ದಿನಗಳು, ಅಥವಾ ಒಂದು ವಾರವನ್ನು ನಾವು ಕಳೆಯುತ್ತಿದ್ದೆವು. ಸಹೋದರರ ಸೇವಕರು ಎಂದು ನಮ್ಮನ್ನು ಕರೆಯಲಾಗುತ್ತಿತ್ತು. ಈ ಹೆಸರು ಅನಂತರ ಸರ್ಕಿಟ್‌ ಸೇವಕರು ಅಥವಾ ಸರ್ಕಿಟ್‌ ಮೇಲ್ವಿಚಾರಕರು ಎಂದು ಬದಲಾಯಿಸಲ್ಪಟ್ಟಿತು. ಆದರೆ ಗಿಲ್ಯಡ್‌ ಶಾಲೆಯು ಆರಂಭವಾದ ಸ್ವಲ್ಪ ಸಮಯದಲ್ಲೇ, ಕೆಲವು ಪಾಠಕ್ರಮಗಳನ್ನು ಕಲಿಸಲಿಕ್ಕಾಗಿ ನನ್ನನ್ನು ಪುನಃ ಹಿಂದೆ ಕರೆಸಲಾಯಿತು. 2ರಿಂದ 5ನೆಯ ತರಗತಿಗೆ ನಾನು ಕ್ರಮದ ಶಿಕ್ಷಕನಾಗಿದ್ದೆ. ಮತ್ತು 14ನೆಯ ತರಗತಿಗೆ, ಕ್ರಮದ ಶಿಕ್ಷಕರೊಬ್ಬರಿಗಾಗಿ ನಾನು ಬದಲಿ ಶಿಕ್ಷಕನಾಗಿ ಕಲಿಸಿದೆ. ಯೆಹೋವನ ಸಂಸ್ಥೆಯ ಆಧುನಿಕ ದಿನದ ಇತಿಹಾಸದ ಆರಂಭದ ಘಟನೆಗಳನ್ನು ವಿದ್ಯಾರ್ಥಿಗಳೊಂದಿಗೆ ಪರಾಮರ್ಶಿಸಲು ಶಕ್ತನಾದದ್ದು, ಮತ್ತು ಅವುಗಳಲ್ಲಿ ಅನೇಕ ಘಟನೆಗಳನ್ನು ನನ್ನ ವೈಯಕ್ತಿಕ ಅನುಭವದಿಂದ ಹೇಳಲು ಸಾಧ್ಯವಾದದ್ದು, ನನ್ನ ಐಶ್ವರ್ಯದಾಯಕ ಆತ್ಮಿಕ ಪರಂಪರೆಗಾಗಿ ನಾನು ಇನ್ನೂ ಹೆಚ್ಚು ಆಭಾರಿಯಾಗಿರುವಂತೆ ಮಾಡಿತು.

ಯೆಹೋವನ ಜನರ ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಹಾಜರಾಗುವುದು, ನಾನು ಹಲವಾರು ವರ್ಷಗಳಿಂದ ಆನಂದಿಸಿರುವ ಇನ್ನೊಂದು ಸುಯೋಗವಾಗಿದೆ. 1963ರಲ್ಲಿ “ನಿತ್ಯ ಶುಭವರ್ತಮಾನ” ಎಂಬ ಅಧಿವೇಶನಗಳಿಗೆ ಸುಮಾರು 500 ಮಂದಿ ಬೇರೆ ಪ್ರತಿನಿಧಿಗಳೊಂದಿಗೆ ನಾನು ಭೂಸುತ್ತಲೂ ಸಂಚಾರಮಾಡಿದೆ. ನಾನು ಹಾಜರಾದ ಇತರ ಇತಿಹಾಸ ಪ್ರಸಿದ್ಧ ಅಧಿವೇಶನಗಳು, 1989ರಲ್ಲಿ ಪೋಲೆಂಡಿನ ವಾರ್ಸಾ, 1990ರಲ್ಲಿ ಜರ್ಮನಿಯ ಬರ್ಲಿನ್‌, ಮತ್ತು 1993ರಲ್ಲಿ ರಷ್ಯಾದ ಮಾಸ್ಕೊವಿನದ್ದಾಗಿತ್ತು. ನಾಸಿ ಆಡಳಿತ ಮತ್ತು ಕಮ್ಯೂನಿಸ್ಟ್‌ ಆಳ್ವಿಕೆ ಅಥವಾ ಎರಡರ ಕೆಳಗೂ ಅನೇಕ ದಶಕಗಳ ವರೆಗೆ ಹಿಂಸೆಯನ್ನು ತಾಳಿಕೊಂಡಿದ್ದ ಕೆಲವು ಪ್ರಿಯ ಸಹೋದರ ಸಹೋದರಿಯರನ್ನು ಭೇಟಿಯಾಗುವ ಸುಸಂಧಿಯು ನನಗೆ ಲಭಿಸಿತು. ಅವರ ಅನುಭವಗಳು ನಂಬಿಕೆಯನ್ನು ಎಷ್ಟೊಂದು ಬಲಪಡಿಸುವಂಥವುಗಳಾಗಿದ್ದವು!

ಯೆಹೋವನ ಸೇವೆಯಲ್ಲಿ ನನ್ನ ಜೀವನವು ನಿಜವಾಗಿಯೂ ಐಶ್ವರ್ಯದಾಯಕವಾಗಿತ್ತು! ಆತ್ಮಿಕ ಆಶೀರ್ವಾದಗಳ ಸರಬರಾಯಿಗೆ ಕೊನೆಯೇ ಇಲ್ಲ. ಭೌತಿಕ ಐಶ್ವರ್ಯಕ್ಕೆ ಅಸದೃಶವಾಗಿ ಈ ಅಮೂಲ್ಯ ವಿಷಯಗಳನ್ನು ನಾವು ಎಷ್ಟು ಹೆಚ್ಚು ಹಂಚಿಕೊಳ್ಳುತ್ತೇವೊ ನಮ್ಮ ಐಶ್ವರ್ಯವು ಅಷ್ಟೇ ಹೆಚ್ಚು ವೃದ್ಧಿಯಾಗುವುದು. ತಾವು ಚಿಕ್ಕಂದಿನಿಂದಲೇ ಯೆಹೋವನ ಸಾಕ್ಷಿಗಳಾಗಿ ಬೆಳೆಸಲ್ಪಟ್ಟಿರದಿದ್ದರೆ ಒಳ್ಳೇದಿತ್ತು ಎಂದು ಕೆಲವರು ಹೇಳುವುದನ್ನು ನಾನು ಕೆಲವೊಮ್ಮೆ ಕೇಳಿಸಿಕೊಂಡಿದ್ದೇನೆ. ತಾವು ಮೊದಲು ಈ ದೇವರ ಸಂಸ್ಥೆಯಿಂದ ಹೊರಗೆ ಜೀವನವನ್ನು ಅನುಭವಿಸುತ್ತಿದ್ದರೆ, ಬೈಬಲ್‌ ಸತ್ಯಗಳನ್ನು ಇನ್ನೂ ಹೆಚ್ಚು ಗಣ್ಯಮಾಡುತ್ತಿದ್ದೆವೇನೊ ಎಂದವರು ಹೇಳುತ್ತಾರೆ.

ಯುವ ಜನರು ಹೀಗನ್ನುವುದನ್ನು ಕೇಳಿಸಿಕೊಳ್ಳುವಾಗ ನನಗೆ ತುಂಬ ಬೇಸರವಾಗುತ್ತದೆ. ಯಾಕೆಂದರೆ ಯೆಹೋವನ ಜ್ಞಾನದಲ್ಲಿ ಚಿಕ್ಕಂದಿನಿಂದಲೇ ಬೆಳೆಸಲ್ಪಡುವುದು ಒಳ್ಳೇದಲ್ಲ ಎಂಬುದು ಅವರ ಮಾತಿನ ನಿಜ ತಾತ್ಪರ್ಯ. ಆದರೂ, ಜೀವನದಲ್ಲಿ ತಡವಾಗಿ ಬೈಬಲ್‌ ಸತ್ಯವು ಸಿಗುವಾಗ, ಜನರು ಎಷ್ಟೆಲ್ಲಾ ದುರಭ್ಯಾಸಗಳನ್ನು ಮತ್ತು ಭ್ರಷ್ಟ ಯೋಚನೆಗಳನ್ನು ಕಳಚಿಹಾಕಬೇಕೆಂಬುದರ ಕುರಿತು ತುಸು ಯೋಚಿಸಿರಿ. ತಮ್ಮ ಮೂವರು ಮಕ್ಕಳನ್ನು ನೀತಿಯ ಮಾರ್ಗದಲ್ಲಿ ಬೆಳೆಸಿದ್ದಕ್ಕಾಗಿ ನಾನು ನನ್ನ ಹೆತ್ತವರಿಗೆ ಚಿರಋಣಿ. ಜಾನ್‌, 1980ರ ಜುಲೈ ತಿಂಗಳಲ್ಲಿ ಮೃತನಾಗುವ ತನಕ ಯೆಹೋವನ ನಂಬಿಗಸ್ತ ಸೇವಕನಾಗಿ ಉಳಿದನು, ಮತ್ತು ಎಸ್ತರ್‌ ಈ ವರೆಗೂ ಒಬ್ಬ ನಂಬಿಗಸ್ತ ಸಾಕ್ಷಿಯಾಗಿದ್ದಾಳೆ.

ನಂಬಿಗಸ್ತ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ಆನಂದಿಸಿರುವ ಅನೇಕ ಉತ್ತಮ ಮಿತ್ರತ್ವಗಳನ್ನು ನಾನು ತುಂಬ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತೇನೆ. ನಾನೀಗ 67ಕ್ಕಿಂತಲೂ ಹೆಚ್ಚು ವರ್ಷಗಳಿಂದ ಬೆತೆಲಿನಲ್ಲಿದ್ದೇನೆ ಮತ್ತು ನಾನು ಕಳೆದಿರುವ ಈ ಸಮಯವು ತುಂಬ ಅದ್ಭುತವಾದದ್ದಾಗಿದೆ. ನಾನು ಅವಿವಾಹಿತನಾಗಿಯೇ ಉಳಿದರೂ ನನಗೆ ಅನೇಕ ಆತ್ಮಿಕ ಪುತ್ರಪುತ್ರಿಯರೂ ಮೊಮ್ಮಕ್ಕಳೂ ಇದ್ದಾರೆ. ನಾನಿನ್ನೂ ಭೇಟಿಯಾಗಲಿರುವ ಲೋಕವ್ಯಾಪಕ ಆತ್ಮಿಕ ಕುಟುಂಬದ ಪ್ರಿಯ ಹೊಸ ಸದಸ್ಯರನ್ನು ನೆನಸುವಾಗ ನನಗೆ ಸಂತೋಷವಾಗುತ್ತದೆ. ಅವರಲ್ಲಿ ಪ್ರತಿಯೊಬ್ಬರೂ ಅಮೂಲ್ಯರು. ನಿಜವಾಗಿಯೂ “ಯೆಹೋವನ ಆಶೀರ್ವಾದವು ಐಶ್ವರ್ಯದಾಯಕ” ಎಂಬ ಮಾತುಗಳು ಅದೆಷ್ಟು ಸತ್ಯ!​—ಜ್ಞಾನೋಕ್ತಿ 10:​22, NW.

[ಪಾದಟಿಪ್ಪಣಿ]

^ ಪ್ಯಾರ. 16 ಮಾರ್ಚ್‌ 8, 1932ರಲ್ಲಿ ನನಗೆ ದೀಕ್ಷಾಸ್ನಾನವಾಯಿತು. ಹೀಗೆ ನಾನು ಪಯನೀಯರನಾಗಬೇಕೆಂದು ನಿರ್ಣಯಿಸಲ್ಪಟ್ಟ ಬಳಿಕ ಕಾರ್ಯತಃ ನನಗೆ ದೀಕ್ಷಾಸ್ನಾನವಾಯಿತು.

[ಪುಟ 20ರಲ್ಲಿರುವ ಚಿತ್ರ]

ಎಡದಿಂದ ಬಲಕ್ಕೆ: ನನ್ನ ತಂದೆ, ಅವರ ತೊಡೆಯ ಮೇಲೆ ನನ್ನ ತಮ್ಮ ಜಾನ್‌, ಎಸ್ತರ್‌, ನಾನು ಮತ್ತು ನನ್ನ ತಾಯಿ

[ಪುಟ 23ರಲ್ಲಿರುವ ಚಿತ್ರಗಳು]

1945ರ ಗಿಲ್ಯಡ್‌ ತರಗತಿಯೊಂದರಲ್ಲಿ ಕಲಿಸುತ್ತಿರುವುದು

ಮೇಲೆ ಬಲಗಡೆ: ಗಿಲ್ಯಡ್‌ ಶಾಲಾ ಶಿಕ್ಷಕರಾದ ಎಡ್ವರ್ಡೊ ಕೆಲರ್‌, ಫ್ರೆಡ್‌ ಫ್ರಾಂಜ್‌, ನಾನು ಮತ್ತು ಆಲ್ಬರ್ಟ್‌ ಶ್ರೋಡರ್‌

[ಪುಟ 24ರಲ್ಲಿರುವ ಚಿತ್ರ]

ಯೆಹೋವನ ಸೇವೆಯಲ್ಲಿ ನನ್ನ ಐಶ್ವರ್ಯದಾಯಕ ಜೀವನದ ಬಗ್ಗೆ ಪುನರಾಲೋಚಿಸುವುದು