ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ದಿನಗಳನ್ನು ಎಣಿಸುವ ವಿಧವನ್ನು ಯೆಹೋವನು ತೋರಿಸುತ್ತಾನೆ

ನಮ್ಮ ದಿನಗಳನ್ನು ಎಣಿಸುವ ವಿಧವನ್ನು ಯೆಹೋವನು ತೋರಿಸುತ್ತಾನೆ

ನಮ್ಮ ದಿನಗಳನ್ನು ಎಣಿಸುವ ವಿಧವನ್ನು ಯೆಹೋವನು ತೋರಿಸುತ್ತಾನೆ

“ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳಲಾಗುವಂಥ ರೀತಿಯಲ್ಲಿ ನಮ್ಮ ದಿನಗಳನ್ನು ಸರಿಯಾಗಿ ಎಣಿಸುವ ವಿಧವನ್ನು ತೋರಿಸು.”​—ಕೀರ್ತನೆ 90:12, NW.

1. “ನಮ್ಮ ದಿನಗಳನ್ನು ಸರಿಯಾಗಿ ಎಣಿಸುವ” ವಿಧವನ್ನು ನಮಗೆ ತೋರಿಸು ಎಂದು ಯೆಹೋವನನ್ನು ಕೇಳಿಕೊಳ್ಳುವುದು ಏಕೆ ಸೂಕ್ತವಾಗಿದೆ?

ಯೆಹೋವ ದೇವರು ನಮ್ಮ ಸೃಷ್ಟಿಕರ್ತನೂ ಜೀವದಾತನೂ ಆಗಿದ್ದಾನೆ. (ಕೀರ್ತನೆ 36:9; ಪ್ರಕಟನೆ 4:11) ಆದುದರಿಂದ, ನಮ್ಮ ಆಯುಷ್ಯವನ್ನು ವಿವೇಕಯುತವಾದ ರೀತಿಯಲ್ಲಿ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಬೇರೆ ಯಾರೂ ನಮಗೆ ತೋರಿಸುವ ಸ್ಥಿತಿಯಲ್ಲಿಲ್ಲ. ಆದುದರಿಂದ, “ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳಲಾಗುವಂಥ ರೀತಿಯಲ್ಲಿ ನಮ್ಮ ದಿನಗಳನ್ನು ಸರಿಯಾಗಿ ಎಣಿಸುವ ವಿಧವನ್ನು ತೋರಿಸು” ಎಂದು ಕೀರ್ತನೆಗಾರನು ದೇವರನ್ನು ಬೇಡಿಕೊಂಡದ್ದು ಸೂಕ್ತವಾಗಿದೆ. (ಕೀರ್ತನೆ 90:​12, NW) ಆ ಬೇಡಿಕೆಯು ಎಲ್ಲಿ ಕಂಡುಬರುತ್ತದೋ ಆ 90ನೆಯ ಕೀರ್ತನೆಯು, ಖಂಡಿತವಾಗಿಯೂ ನಮ್ಮ ಜಾಗರೂಕ ಪರಿಗಣನೆಗೆ ಅರ್ಹವಾಗಿದೆ. ಆದರೂ, ದೇವರಿಂದ ಪ್ರೇರಿಸಲ್ಪಟ್ಟ ಈ ಸಂಗೀತದ ಸಂಕ್ಷಿಪ್ತ ಮೇಲ್ನೋಟವನ್ನು ಮೊದಲು ಪಡೆದುಕೊಳ್ಳೋಣ.

2. (ಎ) ಕೀರ್ತನೆ 90ರ ರಚಕನು ಯಾರೆಂದು ಹೆಸರಿಸಲಾಗಿದೆ, ಮತ್ತು ಅದು ಯಾವಾಗ ಬರೆಯಲ್ಪಟ್ಟಿದ್ದಿರಬಹುದು? (ಬಿ) 90ನೆಯ ಕೀರ್ತನೆಯು ಜೀವಿತದ ಕುರಿತಾದ ನಮ್ಮ ನೋಟದ ಮೇಲೆ ಹೇಗೆ ಪರಿಣಾಮ ಬೀರಬೇಕು?

2 ಕೀರ್ತನೆ 90ರ ಮೇಲ್ಬರಹವು ಅದನ್ನು “ದೇವರ ಮನುಷ್ಯನಾದ ಮೋಶೆಯ ಪ್ರಾರ್ಥನೆ” ಎಂದು ಕರೆಯುತ್ತದೆ. ಈ ಕೀರ್ತನೆಯು ಮಾನವ ಜೀವಿತದ ಅಲ್ಪಾಯುಷ್ಯವನ್ನು ಒತ್ತಿಹೇಳುತ್ತದಾದ್ದರಿಂದ, ಇಸ್ರಾಯೇಲ್ಯರು ಐಗುಪ್ತದ ಬಂಧಿವಾಸದಿಂದ ಬಿಡುಗಡೆಗೊಳಿಸಲ್ಪಟ್ಟ ಬಳಿಕ ಮತ್ತು 40 ವರ್ಷಗಳ ಅರಣ್ಯ ಪ್ರಯಾಣದ ಸಮಯದಲ್ಲಿ, ಆ ಅಪನಂಬಿಗಸ್ತ ಸಂತತಿಯವರಲ್ಲಿ ಸಾವಿರಾರು ಮಂದಿ ನಾಶಗೊಳಿಸಲ್ಪಟ್ಟ ಸಮಯದಲ್ಲಿ ಇದು ರಚಿಸಲ್ಪಟ್ಟಿದ್ದಿರಬಹುದು. (ಅರಣ್ಯಕಾಂಡ 32:9-13) 90ನೆಯ ಕೀರ್ತನೆಯು ಯಾವಾಗಲೇ ರಚಿಸಲ್ಪಟ್ಟಿರಲಿ, ಇದು ಅಪರಿಪೂರ್ಣ ಮಾನವರ ಜೀವಿತವು ತೀರ ಅಲ್ಪಾವಧಿಯದ್ದಾಗಿದೆ ಎಂಬುದನ್ನು ತೋರಿಸುತ್ತದೆ. ಆದುದರಿಂದ, ನಮ್ಮ ಅಮೂಲ್ಯ ದಿನಗಳನ್ನು ನಾವು ತುಂಬ ವಿವೇಕದಿಂದ ಉಪಯೋಗಿಸಬೇಕು ಎಂಬುದಂತೂ ಸ್ಪಷ್ಟ.

3. ಕೀರ್ತನೆ 90ರಲ್ಲಿ ಮೂಲಭೂತವಾಗಿ ಏನೆಲ್ಲಾ ಒಳಗೂಡಿದೆ?

3ಕೀರ್ತನೆ 90ರಲ್ಲಿ, ಯೆಹೋವನು ನಮ್ಮ ಶಾಶ್ವತ ವಾಸಸ್ಥಾನವಾಗಿದ್ದಾನೆ ಎಂದು 1ರಿಂದ 6ನೆಯ ವಚನಗಳು ಗುರುತಿಸುತ್ತವೆ. 7ರಿಂದ 12ನೆಯ ವಚನಗಳು, ಬೇಗ ಬೇಗನೆ ಹಾರಿಹೋಗುವ ನಮ್ಮ ಜೀವಿತದ ವರ್ಷಗಳನ್ನು ದೇವರಿಗೆ ಸ್ವೀಕಾರಾರ್ಹವಾದ ರೀತಿಯಲ್ಲಿ ಉಪಯೋಗಿಸಲಿಕ್ಕಾಗಿ ನಮಗೆ ಯಾವುದರ ಆವಶ್ಯಕತೆಯಿದೆ ಎಂಬುದನ್ನು ತೋರಿಸುತ್ತವೆ. ಮತ್ತು 13ರಿಂದ 17ನೆಯ ವಚನಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವಂತೆ, ಯೆಹೋವನ ಕೃಪೆಯನ್ನು ಹಾಗೂ ಆಶೀರ್ವಾದವನ್ನು ಪಡೆದುಕೊಳ್ಳಲು ನಾವು ತೀವ್ರಾಪೇಕ್ಷೆಪಡಬೇಕು. ಈ ಕೀರ್ತನೆಯು ನಮ್ಮ ವೈಯಕ್ತಿಕ ಅನುಭವಗಳಿಗೆ ನೇರವಾಗಿ ಅನ್ವಯವಾಗುವುದಿಲ್ಲ ಎಂಬುದಂತೂ ಖಂಡಿತ. ಆದರೂ, ವೈಯಕ್ತಿಕವಾಗಿ ನಾವು ಅದರಲ್ಲಿರುವ ಪ್ರಾರ್ಥನಾಪೂರ್ವಕ ಭಾವನೆಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು. ಆದುದರಿಂದ, ದೇವರಿಗೆ ಸಮರ್ಪಿಸಿಕೊಂಡಿರುವವರ ದೃಷ್ಟಿಯಿಂದ 90ನೆಯ ಕೀರ್ತನೆಯ ಕಡೆಗೆ ನಾವು ನಿಕಟವಾಗಿ ಗಮನಹರಿಸೋಣ.

ಯೆಹೋವನು ನಮ್ಮ “ನಿಜವಾದ ವಾಸಸ್ಥಾನ”ವಾಗಿದ್ದಾನೆ

4-6. ಯಾವ ರೀತಿಯಲ್ಲಿ ಯೆಹೋವನು ನಮಗೆ “ಒಂದು ನಿಜವಾದ ವಾಸಸ್ಥಾನವಾಗಿ” ಕಂಡುಬಂದಿದ್ದಾನೆ?

4 ಕೀರ್ತನೆಗಾರನು ಈ ಮಾತುಗಳಿಂದ ಆರಂಭಿಸುತ್ತಾನೆ: “ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮಗೆ ಒಂದು ನಿಜವಾದ ವಾಸಸ್ಥಾನವಾಗಿ ಪರಿಣಮಿಸಿದ್ದೀ. ಬೆಟ್ಟಗಳು ಹುಟ್ಟುವುದಕ್ಕೆ ಅಥವಾ ಈ ಭೂಮಿಯನ್ನು ಮತ್ತು ಅದರ ಫಲದಾಯಕ ಪ್ರದೇಶವನ್ನು ನೀನು ಪ್ರಸವ ವೇದನೆಯಿಂದಲೋ ಎಂಬಂತೆ ಉಂಟುಮಾಡುವುದಕ್ಕೆ ಮೊದಲೇ, ಅನಿಶ್ಚಿತ ಕಾಲದಿಂದ ಅನಿಶ್ಚಿತ ಕಾಲದ ವರೆಗೆ ನೀನು ದೇವರಾಗಿದ್ದೀ.”​—ಕೀರ್ತನೆ 90:​1, 2, NW.

5 ‘ನಿತ್ಯನಾದ ದೇವರಾಗಿರುವ’ ಯೆಹೋವನು ನಮಗೆ “ನಿಜವಾದ ವಾಸಸ್ಥಾನ”ವಾಗಿದ್ದಾನೆ, ಅಂದರೆ ಆತ್ಮಿಕ ಆಶ್ರಯದುರ್ಗವಾಗಿದ್ದಾನೆ. (ರೋಮಾಪುರ 16:25) ಇದರಿಂದ ನಮಗೆ ಭದ್ರವಾದ ಅನಿಸಿಕೆಯಾಗುತ್ತದೆ, ಏಕೆಂದರೆ ಆತನು “ಪ್ರಾರ್ಥನೆಯನ್ನು ಕೇಳುವವ”ನೋಪಾದಿ ನಮಗೆ ಸಹಾಯಮಾಡಲಿಕ್ಕಾಗಿ ಸದಾ ಸಿದ್ಧನಾಗಿದ್ದಾನೆ. (ಕೀರ್ತನೆ 65:2) ನಮ್ಮ ಸ್ವರ್ಗೀಯ ತಂದೆಯ ಅಚ್ಚುಮೆಚ್ಚಿನ ಪುತ್ರನ ಮೂಲಕ ನಾವು ನಮ್ಮ ಚಿಂತೆಗಳನ್ನು ಆತನ ಮೇಲೆ ಹಾಕುವಾಗ, ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕಾಯುತ್ತದೆ.’​—ಫಿಲಿಪ್ಪಿ 4:​6, 7; ಮತ್ತಾಯ 6:9; ಯೋಹಾನ 14:​6, 14.

6 ಸಾಂಕೇತಿಕವಾಗಿ ಹೇಳುವುದಾದರೆ, ಯೆಹೋವನು ನಮ್ಮ “ನಿಜವಾದ ವಾಸಸ್ಥಾನ”ವಾಗಿರುವುದರಿಂದ ನಾವು ಆತ್ಮಿಕ ಭದ್ರತೆಯನ್ನು ಅನುಭವಿಸುತ್ತೇವೆ. ಆತ್ಮಿಕ ಭದ್ರತಾ ಸ್ಥಾನಗಳೋಪಾದಿ ಆತನು “ಕೋಣೆ”ಗಳನ್ನು ಸಹ ಒದಗಿಸುತ್ತಾನೆ. ಇವು ಪ್ರೀತಿಭರಿತ ಕುರುಬರು ನಮ್ಮ ಭದ್ರತಾ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವಂತಹ ಆತನ ಜನರ ಸಭೆಗಳೊಂದಿಗೆ ನಿಕಟವಾಗಿ ಸಂಬಂಧಿಸಿರಬಹುದು. (ಯೆಶಾಯ 26:20; 32:​1, 2; ಅ. ಕೃತ್ಯಗಳು 20:​28, 29) ಇದಲ್ಲದೆ, ನಮ್ಮಲ್ಲಿ ಕೆಲವರು ಬಹಳ ದೀರ್ಘಕಾಲದಿಂದಲೂ ದೇವರ ಸೇವೆಮಾಡುತ್ತಿರುವ ಕುಟುಂಬಗಳಿಗೆ ಸೇರಿದವರಾಗಿದ್ದೇವೆ ಮತ್ತು ಆತನು ವೈಯಕ್ತಿಕವಾಗಿ ನಮಗೆ ‘ತಲತಲಾಂತರಗಳಿಂದಲೂ ಒಂದು ನಿಜವಾದ ವಾಸಸ್ಥಾನವಾಗಿ’ ಕಂಡುಬಂದಿದ್ದಾನೆ.

7. ಯಾವ ಅರ್ಥದಲ್ಲಿ ಬೆಟ್ಟಗಳು ‘ಹುಟ್ಟಿದವು’ ಮತ್ತು ಈ ಭೂಮಿಯು “ಪ್ರಸವ ವೇದನೆಯಿಂದಲೋ” ಎಂಬಂತೆ ಉಂಟುಮಾಡಲ್ಪಟ್ಟಿತು?

7 ಬೆಟ್ಟಗಳು “ಹುಟ್ಟು”ವುದಕ್ಕೆ ಮುಂಚೆಯೇ ಅಥವಾ ಈ ಭೂಮಿಯು “ಪ್ರಸವ ವೇದನೆಯಿಂದಲೋ” ಎಂಬಂತೆ ಉಂಟುಮಾಡಲ್ಪಡುವುದಕ್ಕೆ ಮುಂಚೆಯೇ ಯೆಹೋವನು ಅಸ್ತಿತ್ವದಲ್ಲಿದ್ದನು. ಮಾನವ ದೃಷ್ಟಿಕೋನದಿಂದ ನೋಡುವಾಗ, ಈ ಭೂಮಿಯನ್ನು, ಅದರ ಎಲ್ಲಾ ವೈಶಿಷ್ಟ್ಯಗಳು, ರಸಾಯನ ವಿಜ್ಞಾನ ಹಾಗೂ ಜಟಿಲ ಯಂತ್ರವ್ಯವಸ್ಥೆಗಳೊಂದಿಗೆ ಉಂಟುಮಾಡಲು ಅತ್ಯಧಿಕ ಮಟ್ಟದ ಪ್ರಯತ್ನದ ಅಗತ್ಯವಿದ್ದಂತೆ ತೋರುತ್ತದೆ. ಬೆಟ್ಟಗಳು ‘ಹುಟ್ಟಿದವು’ ಮತ್ತು ಈ ಭೂಮಿಯು “ಪ್ರಸವ ವೇದನೆಯಿಂದಲೋ” ಎಂಬಂತೆ ಉಂಟುಮಾಡಲ್ಪಟ್ಟಿತು ಎಂದು ಹೇಳುವ ಮೂಲಕ ಕೀರ್ತನೆಗಾರನು, ಯೆಹೋವನು ಈ ಸೃಷ್ಟಿಕ್ರಿಯೆಯನ್ನು ಮಾಡುವಾಗ ಒಳಗೂಡಿದ್ದ ಬೃಹತ್‌ ಪ್ರಮಾಣದ ಕೆಲಸಕ್ಕಾಗಿ ಅತ್ಯಧಿಕ ಗೌರವವನ್ನು ತೋರಿಸುತ್ತಿದ್ದಾನೆ. ಸೃಷ್ಟಿಕರ್ತನ ಕೈಕೆಲಸಕ್ಕಾಗಿ ನಾವು ಸಹ ಇದೇ ರೀತಿಯ ಗೌರವ ಹಾಗೂ ಗಣ್ಯತೆಯನ್ನು ತೋರಿಸಬಾರದೋ?

ನಮಗೆ ಸಹಾಯಮಾಡಲು ಯೆಹೋವನು ಸದಾ ಸಿದ್ಧನಾಗಿರುತ್ತಾನೆ

8. “ಅನಿಶ್ಚಿತ ಕಾಲದಿಂದ ಅನಿಶ್ಚಿತ ಕಾಲದ ವರೆಗೆ” ಯೆಹೋವನು ದೇವರಾಗಿದ್ದಾನೆ ಎಂಬ ಹೇಳಿಕೆಯ ಅರ್ಥವೇನಾಗಿದೆ?

8 “ಅನಿಶ್ಚಿತ ಕಾಲದಿಂದ ಅನಿಶ್ಚಿತ ಕಾಲದ ವರೆಗೆ ನೀನು ದೇವರಾಗಿದ್ದೀ” ಎಂದು ಕೀರ್ತನೆಗಾರನು ಹಾಡಿದನು. “ಅನಿಶ್ಚಿತ ಕಾಲ” ಎಂಬ ಶಬ್ದವು, ಒಂದು ಅಂತ್ಯವಿರುವಂತಹ, ಆದರೆ ನಿರ್ದಿಷ್ಟ ಕಾಲಾವಧಿಯು ಕೊಡಲ್ಪಟ್ಟಿರದಂತಹ ಸಮಯವನ್ನು ಸೂಚಿಸಸಾಧ್ಯವಿದೆ. (ವಿಮೋಚನಕಾಂಡ 31:​16, 17, NW; ಇಬ್ರಿಯ 9:​15) ಆದರೂ, ಹೀಬ್ರು ಶಾಸ್ತ್ರವಚನಗಳಲ್ಲಿ ಕೀರ್ತನೆ 90:2ರಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ, “ಅನಿಶ್ಚಿತ ಕಾಲ” ಎಂಬುದು “ಅನಂತಕಾಲ”ವನ್ನು ಅರ್ಥೈಸುತ್ತದೆ. (ಪ್ರಸಂಗಿ 1:​4, NW) ದೇವರು ಹೇಗೆ ಯಾವಾಗಲೂ ಅಸ್ತಿತ್ವದಲ್ಲಿರಸಾಧ್ಯವಿದೆ ಎಂಬುದನ್ನು ನಮ್ಮ ಮನಸ್ಸುಗಳು ಅರ್ಥಮಾಡಿಕೊಳ್ಳಲಾರವು. ಆದರೂ, ಯೆಹೋವನಿಗೆ ಆದಿಯಿರಲಿಲ್ಲ ಮತ್ತು ಅಂತ್ಯವೂ ಇರುವುದಿಲ್ಲ. (ಹಬಕ್ಕೂಕ 1:12) ಆತನು ಯಾವಾಗಲೂ ಜೀವಂತನಾಗಿರುವನು ಮತ್ತು ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.

9. ಮಾನವ ಅಸ್ತಿತ್ವದ ಒಂದು ಸಾವಿರ ವರ್ಷಗಳನ್ನು ಕೀರ್ತನೆಗಾರನು ಯಾವುದಕ್ಕೆ ಸಮವೆಂದು ನಿರೂಪಿಸುತ್ತಾನೆ?

9 ಮಾನವ ಅಸ್ತಿತ್ವದ ಒಂದು ಸಾವಿರ ವರ್ಷಗಳು ನಿತ್ಯನಾದ ಸೃಷ್ಟಿಕರ್ತನ ಅನುಭವದಲ್ಲಿ ತುಂಬ ಅಲ್ಪವಾದ ಸಮಯಾವಧಿಗೆ ಸಮವಾಗಿವೆಯೆಂದು ನಿರೂಪಿಸುವಂತೆ ಕೀರ್ತನೆಗಾರನು ಪ್ರೇರೇಪಿಸಲ್ಪಟ್ಟನು. ದೇವರಿಗೆ ಸಂಬೋಧಿಸುತ್ತಾ ಅವನು ಬರೆದುದು: “ಮನುಷ್ಯರೇ, ಸಾಯಿರಿ ಎಂದು ಆಜ್ಞಾಪಿಸಿ ಅವರನ್ನು ಪುನಃ ಮಣ್ಣಿಗೆ ಸೇರಿಸುತ್ತೀ. ಸಾವಿರ ವರುಷಗಳು ನಿನ್ನ ದೃಷ್ಟಿಯಲ್ಲಿ ಗತಿಸಿಹೋದ ನಿನ್ನಿನ ದಿನದಂತೆಯೂ ರಾತ್ರಿಯ ಜಾವದಂತೆಯೂ ಅವೆ.”​—ಕೀರ್ತನೆ 90:​3, 4.

10. ದೇವರು ಮನುಷ್ಯನನ್ನು ಹೇಗೆ “ಪುನಃ ಮಣ್ಣಿಗೆ ಸೇರಿಸು”ತ್ತಾನೆ?

10 ಮನುಷ್ಯನು ಮರಣಾಧೀನನಾಗಿದ್ದಾನೆ ಮತ್ತು ದೇವರು ಅವನನ್ನು “ಪುನಃ ಮಣ್ಣಿಗೆ ಸೇರಿಸು”ತ್ತಾನೆ. ಅಂದರೆ, ‘ನೀನು ಯಾವ ಮಣ್ಣಿನಿಂದ ತೆಗೆಯಲ್ಪಟ್ಟಿದ್ದೀಯೋ ಅದೇ ಮಣ್ಣಿಗೆ ಹಿಂದಿರುಗು’ ಎಂದು ಯೆಹೋವನು ಹೇಳುತ್ತಿದ್ದಾನೆ. (ಆದಿಕಾಂಡ 2:7; 3:19) ಇದು ಬಲಶಾಲಿಗಳಿಗೆ, ಬಲಹೀನರಿಗೆ, ಶ್ರೀಮಂತರಿಗೆ, ಬಡವರಿಗೆ, ಹೀಗೆ ಎಲ್ಲರಿಗೂ ಅನ್ವಯವಾಗುತ್ತದೆ. ಏಕೆಂದರೆ ಯಾವ ಅಪರಿಪೂರ್ಣ ಮಾನವನೂ ‘ತನ್ನ ಸಹೋದರನು ಸಮಾಧಿಯಲ್ಲಿ ಸೇರದೆ ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು.’ (ಕೀರ್ತನೆ 49:​6-9) ಆದರೆ ದೇವರು, ‘ತನ್ನ ಮಗನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಅವನನ್ನು ಕೊಟ್ಟಿರುವುದಕ್ಕೆ’ ನಾವೆಷ್ಟು ಕೃತಜ್ಞರಾಗಿದ್ದೇವೆ!​—ಯೋಹಾನ 3:16; ರೋಮಾಪುರ 6:23.

11. ನಮ್ಮ ದೃಷ್ಟಿಯಲ್ಲಿ ಯಾವುದು ದೀರ್ಘ ಕಾಲಾವಧಿಯಾಗಿದೆಯೋ ಅದು ದೇವರ ದೃಷ್ಟಿಯಲ್ಲಿ ತೀರ ಅಲ್ಪಾವಧಿಯಾಗಿದೆ ಎಂದು ನಾವೇಕೆ ಹೇಳಸಾಧ್ಯವಿದೆ?

11 ಯೆಹೋವನ ದೃಷ್ಟಿಕೋನದಿಂದ ನೋಡುವುದಾದರೆ, 969 ವರ್ಷ ಪ್ರಾಯದ ಮೆತೂಷೆಲಹನು ಸಹ ಒಂದು ದಿನಕ್ಕಿಂತಲೂ ಕಡಿಮೆ ಸಮಯದ ವರೆಗೆ ಬದುಕಿದ್ದನು. (ಆದಿಕಾಂಡ 5:27) ಒಂದು ಸಾವಿರ ವರ್ಷಗಳು ದೇವರ ದೃಷ್ಟಿಯಲ್ಲಿ ಗತಿಸಿಹೋದ ನಿನ್ನಿನ ದಿನದಂತೆ, ಅಂದರೆ ಕೇವಲ 24 ತಾಸುಗಳ ಸಮಯಾವಧಿಯಂತಿವೆ ಅಷ್ಟೇ. ದೇವರ ಎಣಿಕೆಯಲ್ಲಿ ಒಂದು ಸಾವಿರ ವರ್ಷಗಳು, ರಾತ್ರಿಯ ಸಮಯದಲ್ಲಿ ಪಾಳೆಯದ ಕಾವಲು ಕಾಯುವ ಕಾವಲುಗಾರನ ನಾಲ್ಕು ತಾಸುಗಳ ಕಾವಲಿಗೆ ಸಮಾನವಾಗಿವೆ ಎಂದು ಸಹ ಕೀರ್ತನೆಗಾರನು ತಿಳಿಸುತ್ತಾನೆ. (ನ್ಯಾಯಸ್ಥಾಪಕರು 7:19) ಹಾಗಾದರೆ, ನಮ್ಮ ದೃಷ್ಟಿಯಲ್ಲಿ ಯಾವುದು ದೀರ್ಘ ಕಾಲಾವಧಿಯಾಗಿದೆಯೋ ಅದು ನಿತ್ಯ ದೇವರಾದ ಯೆಹೋವನ ದೃಷ್ಟಿಯಲ್ಲಿ ತೀರ ಅಲ್ಪಾವಧಿಯಾಗಿದೆ ಎಂಬುದು ಸುಸ್ಪಷ್ಟ.

12. ಮಾನವರನ್ನು ದೇವರು ‘ಬಡುಕೊಂಡು’ ಹೋಗುವುದು ಹೇಗೆ?

12 ದೇವರ ನಿತ್ಯ ಅಸ್ತಿತ್ವಕ್ಕೆ ತದ್ವಿರುದ್ಧವಾಗಿ, ಸದ್ಯದ ಮಾನವ ಜೀವಿತವು ಖಂಡಿತವಾಗಿಯೂ ಅಲ್ಪಾವಧಿಯದ್ದಾಗಿದೆ. ಕೀರ್ತನೆಗಾರನು ಹೇಳುವುದು: “ನೀನು ಮನುಷ್ಯರನ್ನು ಪ್ರವಾಹದಿಂದ ಬಡುಕೊಂಡು ಹೋಗುತ್ತೀ; ಅವರು ನಿದ್ರೆಗೆ ಸಮಾನರೇ. ಅವರು ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಂತಿದ್ದಾರೆ. ಅದು ಉದಯದಲ್ಲಿ ಬೆಳೆದು ಹೂಬಿಡುತ್ತದೆ; ಸಂಜೆಯಲ್ಲಿ ಕೊಯ್ಯಲ್ಪಟ್ಟು [“ಬಾಡಿ,” NW] ಒಣಗಿಹೋಗುತ್ತದೆ.” (ಕೀರ್ತನೆ 90:​5, 6) ಸಾವಿರಾರು ಮಂದಿ ಇಸ್ರಾಯೇಲ್ಯರು ಅರಣ್ಯದಲ್ಲಿ ಮರಣಪಟ್ಟದ್ದನ್ನು, ದೇವರಿಂದ ಬಂದ ಒಂದು ಪ್ರವಾಹದಿಂದಲೋ ಎಂಬಂತೆ ‘ಬಡುಕೊಂಡು ಹೋದದ್ದನ್ನು’ ಮೋಶೆ ನೋಡಿದನು. ಕೀರ್ತನೆಯ ಈ ಭಾಗವನ್ನು ಹೀಗೆ ಭಾಷಾಂತರಿಸಲಾಗಿದೆ: “ಮರಣದ ನಿದ್ರೆಯಲ್ಲಿ ನೀನು ಮನುಷ್ಯರನ್ನು ಬಡುಕೊಂಡು ಹೋಗುತ್ತೀ.” (ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ಇನ್ನೊಂದು ಕಡೆಯಲ್ಲಿ, ಅಪರಿಪೂರ್ಣ ಮಾನವರ ಜೀವನಾಯುಷ್ಯವು ಕೇವಲ ಅಲ್ಪಾವಧಿಯ “ನಿದ್ರೆ”ಯಂತಿದೆ, ಅಂದರೆ ಒಂದೇ ರಾತ್ರಿಯ ನಿದ್ರಾವಸ್ಥೆಗೆ ಸಮಾನವಾಗಿದೆ.

13. ಯಾವ ರೀತಿಯಲ್ಲಿ ನಾವು ‘ಹುಲ್ಲಿನಂತಿದ್ದೇವೆ,’ ಮತ್ತು ಇದು ನಮ್ಮ ಆಲೋಚನೆಯ ಮೇಲೆ ಯಾವ ಪರಿಣಾಮವನ್ನು ಬೀರಬೇಕು?

13 ನಾವು ‘ಉದಯದಲ್ಲಿ ಬೆಳೆದು ಹೂಬಿಡುವುದಾದರೂ,’ ಸಂಜೆಯಷ್ಟಕ್ಕೆ ಸೂರ್ಯನ ತೀಕ್ಷ್ಣ ಬಿಸಿಲಿನ ತಾಪಕ್ಕೆ ಪೂರ್ಣವಾಗಿ ಬಾಡಿಹೋಗಿರುವ ‘ಹುಲ್ಲಿನಂತಿದ್ದೇವೆ.’ ಹೌದು, ನಮ್ಮ ಜೀವನವು, ಒಂದೇ ಒಂದು ದಿನದಲ್ಲಿ ಬಾಡಿಹೋಗುವ ಹುಲ್ಲಿನಂತೆ ಕ್ಷಣಿಕವಾದದ್ದಾಗಿದೆ. ಆದುದರಿಂದ, ಈ ಅಮೂಲ್ಯ ನಿಕ್ಷೇಪವನ್ನು ಎಂದೂ ವ್ಯರ್ಥವಾಗಿ ಉಪಯೋಗಿಸದಿರೋಣ. ಅದಕ್ಕೆ ಬದಲಾಗಿ, ಈ ವಿಷಯಗಳ ವ್ಯವಸ್ಥೆಯಲ್ಲಿ ನಮ್ಮ ಜೀವಿತದ ಉಳಿದ ವರ್ಷಗಳನ್ನು ನಾವು ಹೇಗೆ ಉಪಯೋಗಿಸಬೇಕು ಎಂಬ ವಿಷಯದಲ್ಲಿ, ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ನಾವು ಪ್ರಯತ್ನಿಸಬೇಕು.

ಯೆಹೋವನೇ, ‘ನಮ್ಮ ದಿನಗಳನ್ನು ಎಣಿಸಲು’ ನಮಗೆ ಸಹಾಯಮಾಡು

14, 15. ಕೀರ್ತನೆ 90:​7-9ನೆಯ ವಚನಗಳು ಇಸ್ರಾಯೇಲ್ಯರ ಮೇಲೆ ಯಾವ ನೆರವೇರಿಕೆಯನ್ನು ಪಡೆದಿದ್ದವು?

14 ದೇವರ ವಿಷಯವಾಗಿ ಕೀರ್ತನೆಗಾರನು ಕೂಡಿಸಿ ಹೇಳಿದ್ದು: “ನಿನ್ನ ಕೋಪದಿಂದ ಇಲ್ಲವಾದೆವು; ನಿನ್ನ ರೌದ್ರದಿಂದ ತಲ್ಲಣಗೊಂಡೆವು. ನಮ್ಮ ದ್ರೋಹಗಳನ್ನು ನಿನ್ನ ಮುಂದೆಯೂ ನಮ್ಮ ಗುಪ್ತಪಾಪಗಳನ್ನು ನಿನ್ನ ತೇಜೋದೃಷ್ಟಿಯಲ್ಲಿಯೂ ಇಟ್ಟುಕೊಂಡಿದ್ದೀ. ನಿನ್ನ ರೋಷದಿಂದ ನಮ್ಮ ಕಾಲವೆಲ್ಲಾ ಸಂದುಹೋಯಿತು; ನಮ್ಮ ವರುಷಗಳು ನಿಟ್ಟುಸಿರಿನಂತೆ [“ಪಿಸುಮಾತಿನಂತೆ,” NW] ತೀರಿಹೋದವು.”​—ಕೀರ್ತನೆ 90:​7-9.

15 ಅಪನಂಬಿಗಸ್ತ ಇಸ್ರಾಯೇಲ್ಯರು ‘ದೇವರ ಕೋಪದಿಂದ ಇಲ್ಲವಾದರು.’ ಅವರು ‘ಆತನ ರೌದ್ರದಿಂದ ತಲ್ಲಣಗೊಂಡರು.’ ದೈವಿಕ ನ್ಯಾಯತೀರ್ಪುಗಳ ಫಲಿತಾಂಶವಾಗಿ ಕೆಲವರು “ಅಡವಿಯಲ್ಲಿ ಸಂಹರಿಸ”ಲ್ಪಟ್ಟರು. (1 ಕೊರಿಂಥ 10:5) ಯೆಹೋವನು ‘ಅವರ ದ್ರೋಹಗಳನ್ನು ತನ್ನ ಮುಂದೆ ಇಟ್ಟುಕೊಂಡನು.’ ಅವರ ಬಹಿರಂಗ ತಪ್ಪಿಗಾಗಿ ಅವರನ್ನು ಉತ್ತರವಾದಿಗಳನ್ನಾಗಿ ಮಾಡಿದನು ಮತ್ತು ಅವರ ‘ಗುಪ್ತಪಾಪಗಳು’ ಅಥವಾ ಮರೆಮಾಡಲ್ಪಟ್ಟ ವಿಷಯಗಳು ಸಹ ‘ಆತನ ತೇಜೋದೃಷ್ಟಿಯ’ ಮುಂದೆ ತರಲ್ಪಟ್ಟವು. (ಜ್ಞಾನೋಕ್ತಿ 15:3) ದೇವರ ಕೋಪಾವೇಶಕ್ಕೆ ಗುರಿಯಾದವರೋಪಾದಿ, ಪಶ್ಚಾತ್ತಾಪಪಡದಂತಹ ಇಸ್ರಾಯೇಲ್ಯರ ‘ವರ್ಷಗಳು ಪಿಸುಮಾತಿನಂತೆ ತೀರಿಹೋದವು.’ ಹಾಗಿದ್ದ ಪಕ್ಷದಲ್ಲಿ, ನಮ್ಮ ಸ್ವಂತ ಜೀವನಾಯುಷ್ಯವು, ಒಂದು ಪಿಸುಮಾತಿನ ರೂಪದಲ್ಲಿ ನಮ್ಮ ತುಟಿಗಳಿಂದ ಹೊರಹೋಗುವ ಉಸಿರಿಗೆ ಸಮಾನವಾಗಿದೆ.

16. ಕೆಲವರು ಗುಪ್ತವಾಗಿ ಪಾಪಮಾಡುತ್ತಿರುವುದಾದರೆ, ಅವರೇನು ಮಾಡತಕ್ಕದ್ದು?

16 ಒಂದುವೇಳೆ ನಮ್ಮಲ್ಲಿ ಯಾರಾದರೂ ಗುಪ್ತವಾಗಿ ಪಾಪಮಾಡುತ್ತಿರುವಲ್ಲಿ, ಸ್ವಲ್ಪ ಕಾಲದ ವರೆಗೆ ಅಂತಹ ನಡತೆಯನ್ನು ನಾವು ಜೊತೆ ಮಾನವರ ದೃಷ್ಟಿಯಿಂದ ಮರೆಮಾಚಲು ಶಕ್ತರಾಗಿರಬಹುದು. ಆದರೆ ನಮ್ಮ ಗುಪ್ತ ತಪ್ಪು ‘ಯೆಹೋವನ ತೇಜೋದೃಷ್ಟಿಯ’ ಮುಂದೆ ತರಲ್ಪಡುವುದು ಮತ್ತು ನಮ್ಮ ಕೃತ್ಯಗಳು ಆತನೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುವವು. ಯೆಹೋವನೊಂದಿಗೆ ಪುನಃ ಆಪ್ತ ಸಂಬಂಧವನ್ನು ಪಡೆದುಕೊಳ್ಳಲಿಕ್ಕಾಗಿ, ನಾವು ಆತನ ಕ್ಷಮಾಪಣೆಗಾಗಿ ಪ್ರಾರ್ಥಿಸಬೇಕಾಗಿದೆ, ನಮ್ಮ ತಪ್ಪುಗಳನ್ನು ಬಿಟ್ಟುಬಿಡಬೇಕಾಗಿದೆ, ಮತ್ತು ಕ್ರೈಸ್ತ ಹಿರಿಯರ ಆತ್ಮಿಕ ಸಹಾಯವನ್ನು ಕೃತಜ್ಞತಾಭಾವದಿಂದ ಅಂಗೀಕರಿಸಬೇಕಾಗಿದೆ. (ಜ್ಞಾನೋಕ್ತಿ 28:13; ಯಾಕೋಬ 5:​14, 15) ನಮ್ಮ ನಿತ್ಯಜೀವದ ನಿರೀಕ್ಷೆಯನ್ನು ಅಪಾಯಕ್ಕೊಡ್ಡುತ್ತಾ, ‘ನಮ್ಮ ವರುಷಗಳನ್ನು ಪಿಸುಮಾತಿನಂತೆ ತೀರಿಸಿಬಿಡುವುದಕ್ಕಿಂತಲೂ,’ ಹೀಗೆ ಮಾಡುವುದು ಎಷ್ಟು ಉತ್ತಮವಾಗಿರುವುದು!

17. ಇಂದು ಜನರು ಸಾಮಾನ್ಯವಾಗಿ ಎಷ್ಟು ವರ್ಷ ಬದುಕುತ್ತಾರೆ, ಮತ್ತು ನಮ್ಮ ವರ್ಷಗಳು ಯಾವುದರಿಂದ ತುಂಬಿವೆ?

17 ಅಪರಿಪೂರ್ಣ ಮಾನವರ ಜೀವನಾಯುಷ್ಯದ ಕುರಿತು ಕೀರ್ತನೆಗಾರನು ಹೇಳುವುದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:​10) ಇಂದು ಜನರು ಸಾಮಾನ್ಯವಾಗಿ 70 ವರುಷ ಬದುಕುತ್ತಾರೆ, ಆದರೆ ಕಾಲೇಬನು 85ರ ಪ್ರಾಯದಲ್ಲಿಯೂ ಅಸಾಮಾನ್ಯ ಬಲವುಳ್ಳವನಾಗಿದ್ದನೆಂದು ತಿಳಿಸಲಾಗಿದೆ. ಇದಲ್ಲದೆ, ಆರೋನ (123), ಮೋಶೆ (120), ಮತ್ತು ಯೆಹೋಶುವ (110)ರ ಉದಾಹರಣೆಗಳೂ ಇವೆ. (ಅರಣ್ಯಕಾಂಡ 33:39; ಧರ್ಮೋಪದೇಶಕಾಂಡ 34:7; ಯೆಹೋಶುವ 14:​6, 10, 11; 24:29) ಆದರೆ ಐಗುಪ್ತದಿಂದ ಹೊರಬಂದ ಅಪನಂಬಿಗಸ್ತ ಸಂತತಿಯವರಲ್ಲಿ, 20 ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸಿನವರೆಲ್ಲರೂ 40 ವರ್ಷಗಳೊಳಗೆ ಸತ್ತುಹೋದರು. (ಅರಣ್ಯಕಾಂಡ 14:​29-34) ಇಂದು, ಅನೇಕ ದೇಶಗಳಲ್ಲಿ ಮಾನವರ ಜೀವನಾಯುಷ್ಯವು ಕೀರ್ತನೆಗಾರನು ತಿಳಿಸಿದಂತಹ ವ್ಯಾಪ್ತಿಯೊಳಗೇ ಇದೆ. ನಮ್ಮ ವರ್ಷಗಳು “ಕಷ್ಟಸಂಕಟ”ಗಳಿಂದ ತುಂಬಿವೆ. ಅವು ಬೇಗನೆ ಗತಿಸಿಹೋಗುತ್ತವೆ ಮತ್ತು “ನಾವು ಹಾರಿ ಹೋಗುತ್ತೇವೆ.”​—ಯೋಬ 14:​1, 2.

18, 19. (ಎ) ‘ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳಲಾಗುವಂಥ ರೀತಿಯಲ್ಲಿ ನಮ್ಮ ದಿನಗಳನ್ನು ಸರಿಯಾಗಿ ಎಣಿಸುವುದರ’ ಅರ್ಥವೇನಾಗಿದೆ? (ಬಿ) ನಾವು ವಿವೇಕವನ್ನು ತೋರಿಸುವುದು ಏನು ಮಾಡುವಂತೆ ನಮ್ಮನ್ನು ಪ್ರಚೋದಿಸುವುದು?

18 ತದನಂತರ ಕೀರ್ತನೆಗಾರನು ಹಾಡುವುದು: “ನಿನ್ನ ಕೋಪದ ಬಲವನ್ನೂ ಭಯಭಕ್ತಿಗನುಸಾರ ನಿನ್ನ ರೌದ್ರವನ್ನೂ ತಿಳಿದಿರುವವರಾರು? ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳಲಾಗುವಂಥ ರೀತಿಯಲ್ಲಿ ನಮ್ಮ ದಿನಗಳನ್ನು ಸರಿಯಾಗಿ ಎಣಿಸುವ ವಿಧವನ್ನು ತೋರಿಸು.” (ಕೀರ್ತನೆ 90:​11, 12, NW) ದೇವರ ಕೋಪದ ಬಲದ ಕುರಿತು ಅಥವಾ ಆತನ ರೌದ್ರದ ಮಟ್ಟದ ಕುರಿತು ನಮ್ಮಲ್ಲಿ ಒಬ್ಬರಿಗೂ ಪೂರ್ಣವಾಗಿ ತಿಳಿದಿಲ್ಲ; ಆದುದರಿಂದ, ಇದು ಯೆಹೋವನ ಕಡೆಗಿನ ನಮ್ಮ ಪೂಜ್ಯ ಭಯವನ್ನು ಇನ್ನಷ್ಟು ಅಧಿಕಗೊಳಿಸಬೇಕು. ವಾಸ್ತವದಲ್ಲಿ, ಇದು ‘ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳಲಾಗುವಂಥ ರೀತಿಯಲ್ಲಿ ನಮ್ಮ ದಿನಗಳನ್ನು [ನಾವು] ಹೇಗೆ ಎಣಿಸಲು [ಸಾಧ್ಯವಿದೆ]’ ಎಂದು ಆತನನ್ನು ಕೇಳುವಂತೆ ನಮ್ಮನ್ನು ಪ್ರಚೋದಿಸಬೇಕು.

19 ಕೀರ್ತನೆಗಾರನ ಮಾತುಗಳು, ಜನರು ತಮ್ಮ ಉಳಿದ ದಿನಗಳನ್ನು ದೇವರು ಅಂಗೀಕರಿಸುವಂತಹ ರೀತಿಯಲ್ಲಿ ಅಮೂಲ್ಯವಾಗಿ ಪರಿಗಣಿಸುವುದರಲ್ಲಿ ಹಾಗೂ ಉಪಯೋಗಿಸುವುದರಲ್ಲಿ ಹೇಗೆ ವಿವೇಕವನ್ನು ತೋರಿಸಸಾಧ್ಯವಿದೆ ಎಂಬುದನ್ನು ತಮಗೆ ಯೆಹೋವನು ಕಲಿಸುವಂತೆ ಕೇಳಿಕೊಂಡ ಪ್ರಾರ್ಥನೆಯಾಗಿವೆ. 70 ವರ್ಷಗಳ ಜೀವನಾಯುಷ್ಯವು ಸುಮಾರು 25,500 ದಿನಗಳ ನಿರೀಕ್ಷೆಯನ್ನು ನೀಡುತ್ತದೆ. ಆದರೂ, ನಮ್ಮ ವಯಸ್ಸು ಎಷ್ಟೇ ಆಗಿರಲಿ, ‘ನಾಳೆ ಏನಾಗುವದೋ ನಮಗೆ ತಿಳಿಯದು, ಏಕೆಂದರೆ ನಾವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿದ್ದೇವೆ.’ (ಯಾಕೋಬ 4:​13-15) ‘ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲವಾದ್ದರಿಂದ,’ ನಾವೆಷ್ಟು ಕಾಲ ಬದುಕಿರುತ್ತೇವೆ ಎಂದು ನಾವು ಹೇಳಲಾರೆವು. ಆದುದರಿಂದ, ಪರೀಕ್ಷೆಗಳನ್ನು ನಿಭಾಯಿಸಲಿಕ್ಕಾಗಿ, ಇತರರನ್ನು ಒಳ್ಳೇ ರೀತಿಯಲ್ಲಿ ಉಪಚರಿಸಲಿಕ್ಕಾಗಿ ಮತ್ತು ಯೆಹೋವನ ಸೇವೆಯಲ್ಲಿ ನಮ್ಮಿಂದಾದುದೆಲ್ಲವನ್ನೂ ಮಾಡಲಿಕ್ಕಾಗಿ ವಿವೇಕವನ್ನು ದಯಪಾಲಿಸುವಂತೆ ಈಗಲೇ, ಇಂದೇ ಪ್ರಾರ್ಥಿಸೋಣ! (ಪ್ರಸಂಗಿ 9:11; ಯಾಕೋಬ 1:​5-8) ತನ್ನ ವಾಕ್ಯ, ತನ್ನ ಪವಿತ್ರಾತ್ಮ ಮತ್ತು ತನ್ನ ಸಂಸ್ಥೆಯ ಮೂಲಕ ಯೆಹೋವನು ನಮ್ಮನ್ನು ಮಾರ್ಗದರ್ಶಿಸುತ್ತಾನೆ. (ಮತ್ತಾಯ 24:​45-47; 1 ಕೊರಿಂಥ 2:10; 2 ತಿಮೊಥೆಯ 3:​16, 17) ವಿವೇಕವನ್ನು ತೋರಿಸುವುದು ‘ದೇವರ ರಾಜ್ಯಕ್ಕಾಗಿ ತವಕಪಡುವಂತೆ’ ಮತ್ತು ಯೆಹೋವನಿಗೆ ಮಹಿಮೆಯನ್ನು ತರುವಂತಹ ಹಾಗೂ ಆತನ ಹೃದಯವನ್ನು ಸಂತೋಷಪಡಿಸುವಂತಹ ರೀತಿಯಲ್ಲಿ ನಮ್ಮ ದಿನಗಳನ್ನು ಉಪಯೋಗಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. (ಮತ್ತಾಯ 6:​25-33; ಜ್ಞಾನೋಕ್ತಿ 27:11) ಆತನನ್ನು ಮನಃಪೂರ್ವಕವಾಗಿ ಆರಾಧಿಸುವುದು ನಮ್ಮೆಲ್ಲಾ ಸಮಸ್ಯೆಗಳನ್ನು ತೆಗೆದುಹಾಕುವುದಿಲ್ಲ ಎಂಬುದು ನಿಶ್ಚಯವಾದರೂ, ಇದು ಮಹತ್ತರವಾದ ಆನಂದದಲ್ಲಿ ಫಲಿಸುತ್ತದೆಂಬುದು ಮಾತ್ರ ನಿಜ.

ಯೆಹೋವನ ಆಶೀರ್ವಾದವು ನಮಗೆ ಆನಂದವನ್ನು ತರುತ್ತದೆ

20. (ಎ) ಯಾವ ವಿಧದಲ್ಲಿ ದೇವರು “ಮರುಕ ತೋರಿಸು”ತ್ತಾನೆ? (ಬಿ) ಒಂದುವೇಳೆ ನಾವು ಗಂಭೀರವಾದ ತಪ್ಪನ್ನು ಮಾಡಿದರೂ, ನಿಜವಾದ ಪಶ್ಚಾತ್ತಾಪವನ್ನು ತೋರಿಸುವುದಾದರೆ, ಯೆಹೋವನು ನಮ್ಮೊಂದಿಗೆ ಹೇಗೆ ವ್ಯವಹರಿಸುವನು?

20 ನಮ್ಮ ಜೀವಿತದ ಉಳಿದ ಸಮಯದಾದ್ಯಂತ ನಾವು ಆನಂದದಿಂದಿರಸಾಧ್ಯವಿರುವಲ್ಲಿ ಅದೆಷ್ಟು ಹೆಮ್ಮೆಯ ಸಂಗತಿಯಾಗಿರುವುದು! ಈ ವಿಷಯದಲ್ಲಿ ಮೋಶೆಯು ಬೇಡಿಕೊಳ್ಳುವುದು: “ಯೆಹೋವನೇ, ನಮ್ಮ ಬಳಿಗೆ ಹಿಂದಿರುಗು! ಎಷ್ಟರ ವರೆಗೂ ಕೋಪಮಾಡುವಿ? ಮತ್ತು ನಿನ್ನ ಸೇವಕರ ಮೇಲೆ ಮರುಕ ತೋರಿಸು. ನಿನ್ನ ಪ್ರೀತಿದಯೆಯಿಂದ [ಅಥವಾ “ನಿಷ್ಠಾವಂತ ಪ್ರೀತಿಯಿಂದ”] ನಮ್ಮನ್ನು ಸಂತೃಪ್ತಿಪಡಿಸು, ಆಗ ನಮ್ಮ ಜೀವಮಾನದಲ್ಲೆಲ್ಲಾ ಆನಂದದಿಂದ ಹರ್ಷಧ್ವನಿಗೈಯುವೆವು ಮತ್ತು ಉಲ್ಲಾಸಿಸುವೆವು.” (ಕೀರ್ತನೆ 90:​13, 14; NW ಪಾದಟಿಪ್ಪಣಿ) ದೇವರು ತಪ್ಪುಗಳನ್ನು ಮಾಡುವುದಿಲ್ಲ. ಆದರೂ, ಕ್ರಿಯೆಗೈಯುತ್ತೇನೆಂದು ಆತನು ಕೊಡುವ ಎಚ್ಚರಿಕೆಯು, ಪಶ್ಚಾತ್ತಾಪಪಡುವ ತಪ್ಪಿತಸ್ಥರ ಮನೋಭಾವ ಹಾಗೂ ನಡತೆಯಲ್ಲಿ ಬದಲಾವಣೆಯನ್ನು ಉಂಟುಮಾಡುವಾಗ, ಆತನು “ಮರುಕ ತೋರಿಸು”ತ್ತಾನೆ ಮತ್ತು ತನ್ನ ಕೋಪವನ್ನು ತೋರಿಸುವುದನ್ನು ಹಾಗೂ ಶಿಕ್ಷೆಯನ್ನು ವಿಧಿಸುವುದನ್ನು ತಡೆಯುತ್ತಾನೆ. (ಧರ್ಮೋಪದೇಶಕಾಂಡ 13:17) ಆದುದರಿಂದ, ಒಂದುವೇಳೆ ನಾವು ಗಂಭೀರವಾದ ತಪ್ಪನ್ನು ಮಾಡಿದರೂ ನಿಜವಾದ ಪಶ್ಚಾತ್ತಾಪವನ್ನು ತೋರಿಸುವುದಾದರೆ, ಯೆಹೋವನು ‘ನಮ್ಮನ್ನು ತನ್ನ ಪ್ರೀತಿದಯೆಯಿಂದ ಸಂತೃಪ್ತಿಪಡಿಸುತ್ತಾನೆ’ ಮತ್ತು ನಮಗೆ ‘ಆನಂದದಿಂದ ಹರ್ಷಧ್ವನಿಗೈಯಲು’ ಸಕಾರಣವಿರುತ್ತದೆ. (ಕೀರ್ತನೆ 32:​1-5) ಮತ್ತು ನೀತಿಯ ಜೀವನಮಾರ್ಗವನ್ನು ಅನುಸರಿಸುವ ಮೂಲಕ ನಮ್ಮ ಕಡೆಗಿನ ದೇವರ ನಿಷ್ಠಾವಂತ ಪ್ರೀತಿಯನ್ನು ನಾವು ಗ್ರಹಿಸುತ್ತೇವೆ ಮತ್ತು ನಾವು ‘ಜೀವಮಾನದಲ್ಲೆಲ್ಲಾ’ ಅಂದರೆ ನಮ್ಮ ಜೀವಿತದ ಉಳಿದ ಸಮಯದಲ್ಲೆಲ್ಲಾ ‘ಉಲ್ಲಾಸಿಸಲು’ ಶಕ್ತರಾಗುತ್ತೇವೆ.

21. ಕೀರ್ತನೆ 90:​15, 16ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳಲ್ಲಿ ಮೋಶೆಯು ಏನನ್ನು ಕೇಳಿಕೊಳ್ಳುತ್ತಿದ್ದಿರಬಹುದು?

21 ಕೀರ್ತನೆಗಾರನು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದು: “ನೀನು ನಮ್ಮನ್ನು ಕುಗ್ಗಿಸಿದ ದಿವಸಗಳಿಗೂ ನಾವು ಕೇಡನ್ನು ಅನುಭವಿಸಿದ ವರುಷಗಳಿಗೂ ತಕ್ಕಂತೆ ನಮ್ಮನ್ನು ಸಂತೋಷಪಡಿಸು. ನಿನ್ನ ಸೇವಕರಿಗೆ ನಿನ್ನ ರಕ್ಷಾಕಾರ್ಯವೂ ಅವರ ಮಕ್ಕಳಿಗೋಸ್ಕರ ನಿನ್ನ ಮಹತ್ತೂ ಪ್ರಕಟವಾಗಲಿ.” (ಕೀರ್ತನೆ 90:​15, 16) ಇಸ್ರಾಯೇಲ್ಯರು ಕುಗ್ಗಿಸಲ್ಪಟ್ಟ ದಿವಸಗಳಿಗೂ ಕೇಡನ್ನು ಅನುಭವಿಸಿದ ವರ್ಷಗಳಿಗೂ ತಕ್ಕಂತೆ ಅಥವಾ ಅವುಗಳಿಗೆ ಅನುರೂಪವಾಗಿ ಅವರನ್ನು ಸಂತೋಷಪಡಿಸುವಂತೆ ಮೋಶೆಯು ದೇವರನ್ನು ಬೇಡಿಕೊಳ್ಳುತ್ತಿದ್ದನು. ಇಸ್ರಾಯೇಲ್ಯರನ್ನು ಆಶೀರ್ವದಿಸಲಿಕ್ಕಾಗಿ ದೇವರು ಮಾಡಿದ “ರಕ್ಷಾಕಾರ್ಯ”ವು ಆತನ ಸೇವಕರಿಗೆ ಪ್ರಕಟವಾಗಲಿ ಮತ್ತು ಆತನ ಮಹತ್ತು ಅವರ ಮಕ್ಕಳ ಮೇಲೆ ಅಥವಾ ಸಂತತಿಯವರ ಮೇಲೆ ಪ್ರಕಟವಾಗಲಿ ಎಂದು ಮೋಶೆಯು ಕೇಳಿಕೊಂಡನು. ನಾವು ಸಹ ದೇವರ ವಾಗ್ದತ್ತ ನೂತನ ಲೋಕದಲ್ಲಿ ವಿಧೇಯ ಮಾನವಕುಲದ ಮೇಲೆ ಆಶೀರ್ವಾದಗಳು ಸುರಿಸಲ್ಪಡಲಿ ಎಂದು ಯೋಗ್ಯವಾಗಿಯೇ ಪ್ರಾರ್ಥಿಸಸಾಧ್ಯವಿದೆ.​—2 ಪೇತ್ರ 3:13.

22. ಕೀರ್ತನೆ 90:17ಕ್ಕನುಸಾರ, ನಾವು ಯಾವುದಕ್ಕಾಗಿ ಪ್ರಾರ್ಥಿಸುವುದು ಸೂಕ್ತವಾದದ್ದಾಗಿದೆ?

22 ಈ ಬೇಡಿಕೆಯೊಂದಿಗೆ 90ನೆಯ ಕೀರ್ತನೆಯು ಮುಕ್ತಾಯಗೊಳ್ಳುತ್ತದೆ: “ನಮ್ಮ ಯೆಹೋವದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ. ನಾವು ಕೈಹಾಕಿದ ಕೆಲಸವನ್ನು ನಮಗೆ ಸಫಲಪಡಿಸು; ನಾವು ಕೈಹಾಕಿದ ಕೆಲಸವನ್ನು ಸಫಲಪಡಿಸು.” (ಕೀರ್ತನೆ 90:​17) ದೇವರ ಸೇವೆಯಲ್ಲಿ ನಾವು ಮಾಡುವ ಪ್ರಯತ್ನಗಳನ್ನು ಆಶೀರ್ವದಿಸುವಂತೆ ನಾವು ಪ್ರಾರ್ಥಿಸುವುದು ಸೂಕ್ತವಾದದ್ದಾಗಿದೆ ಎಂಬುದನ್ನು ಈ ಮಾತುಗಳು ತೋರಿಸುತ್ತವೆ. “ಯೆಹೋವದೇವರ ಪ್ರಸನ್ನತೆಯು” ನಮ್ಮೊಂದಿಗೆ ಇರುತ್ತದೆ ಎಂಬುದನ್ನು ತಿಳಿದವರಾಗಿದ್ದು, ಅಭಿಷಿಕ್ತ ಕ್ರೈಸ್ತರು ಅಥವಾ ಅವರ ಸಂಗಾತಿಗಳಾಗಿರುವ ‘ಬೇರೆ ಕುರಿಗಳೋಪಾದಿ’ ನಾವು ಸಂತೋಷಿಸುತ್ತೇವೆ. (ಯೋಹಾನ 10:16) ರಾಜ್ಯ ಘೋಷಕರೋಪಾದಿ ಮತ್ತು ಇನ್ನೂ ಅನೇಕ ವಿಧಗಳಲ್ಲಿ ದೇವರು ‘ನಾವು ಕೈಹಾಕಿದ ಕೆಲಸವನ್ನು ಸಫಲಪಡಿಸಿರುವುದಕ್ಕಾಗಿ’ ನಾವೆಷ್ಟು ಸಂತೋಷಿತರಾಗಿದ್ದೇವೆ!

ನಮ್ಮ ದಿನಗಳನ್ನು ನಾವು ಎಣಿಸುತ್ತಾ ಮುಂದುವರಿಯೋಣ

23, 24. ಕೀರ್ತನೆ 90ರ ಕುರಿತು ಮನನಮಾಡುವ ಮೂಲಕ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲೆವು?

23ಕೀರ್ತನೆ 90ರ ಕುರಿತು ಮನನಮಾಡುವುದು, ನಮ್ಮ “ನಿಜವಾದ ವಾಸಸ್ಥಾನ”ವಾಗಿರುವ ಯೆಹೋವನ ಮೇಲೆ ನಾವು ಆತುಕೊಳ್ಳುವುದನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಜೀವನದ ಅಲ್ಪಾಯುಷ್ಯದ ಕುರಿತು ಆ ಕೀರ್ತನೆಯು ತಿಳಿಸುವ ಮಾತುಗಳನ್ನು ಮನನಮಾಡುತ್ತಾ, ನಮ್ಮ ದಿನಗಳನ್ನು ಎಣಿಸುವುದರಲ್ಲಿ ದೇವರ ಮಾರ್ಗದರ್ಶನದ ಆವಶ್ಯಕತೆಯ ಆಳವಾದ ಅರಿವು ನಮ್ಮಲ್ಲಿ ಉಂಟಾಗಬೇಕು. ಮತ್ತು ನಾವು ದೇವರ ವಿವೇಕವನ್ನು ಹುಡುಕುತ್ತಾ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಮುಂದುವರಿಯುವಲ್ಲಿ, ಖಂಡಿತವಾಗಿಯೂ ಯೆಹೋವನ ಕೃಪೆ ಮತ್ತು ಆಶೀರ್ವಾದವನ್ನು ನಾವು ಪಡೆಯುವೆವು ಎಂಬ ವಿಷಯದಲ್ಲಿ ಖಾತ್ರಿಯಿಂದಿರಸಾಧ್ಯವಿದೆ.

24 ನಮ್ಮ ದಿನಗಳನ್ನು ಹೇಗೆ ಎಣಿಸುವುದು ಎಂಬುದನ್ನು ಯೆಹೋವನು ನಮಗೆ ತೋರಿಸುತ್ತಾ ಮುಂದುವರಿಯುವನು. ಮತ್ತು ನಾವು ಆತನ ಉಪದೇಶಕ್ಕೆ ಮಣಿಯುವಲ್ಲಿ, ನಾವು ಸದಾಕಾಲಕ್ಕೂ ನಮ್ಮ ದಿನಗಳನ್ನು ಎಣಿಸುತ್ತಾ ಮುಂದುವರಿಯಲು ಶಕ್ತರಾಗಿರುವೆವು. (ಯೋಹಾನ 17:3) ನಮಗೆ ನಿಜವಾಗಿಯೂ ನಿತ್ಯಜೀವದ ಬಯಕೆಯಿರುವಲ್ಲಿ, ಯೆಹೋವನು ನಮ್ಮ ಆಶ್ರಯದುರ್ಗವಾಗಿರಬೇಕು. (ಯೂದ 20, 21) ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ, 91ನೇ ಕೀರ್ತನೆಯ ಉತ್ತೇಜನದಾಯಕ ಮಾತುಗಳಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ತಿಳಿಯಪಡಿಸಲಾಗಿದೆ.

ನೀವು ಹೇಗೆ ಉತ್ತರಿಸುವಿರಿ?

• ಯಾವ ರೀತಿಯಲ್ಲಿ ಯೆಹೋವನು ನಮಗೆ “ನಿಜವಾದ ವಾಸಸ್ಥಾನ”ವಾಗಿದ್ದಾನೆ?

• ನಮಗೆ ಸಹಾಯಮಾಡಲು ಯೆಹೋವನು ಸದಾ ಸಿದ್ಧನಾಗಿದ್ದಾನೆ ಎಂದು ನಾವೇಕೆ ಹೇಳಸಾಧ್ಯವಿದೆ?

• “ನಮ್ಮ ದಿನಗಳನ್ನು ಎಣಿಸಲು” ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?

• ‘ನಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸಿಸುವಂತೆ’ ಯಾವುದು ನಮ್ಮನ್ನು ಶಕ್ತರನ್ನಾಗಿಮಾಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

“ಬೆಟ್ಟಗಳು ಹುಟ್ಟುವುದಕ್ಕೆ” ಮೊದಲೇ ಯೆಹೋವನು ದೇವರಾಗಿದ್ದನು

[ಪುಟ 12ರಲ್ಲಿರುವ ಚಿತ್ರ]

ಯೆಹೋವನ ದೃಷ್ಟಿಕೋನದಿಂದ ನೋಡುವುದಾದರೆ, 969 ವರ್ಷ ಪ್ರಾಯದ ಮೆತೂಷೆಲಹನು ಸಹ ಒಂದು ದಿನಕ್ಕಿಂತಲೂ ಕಡಿಮೆ ಸಮಯದ ವರೆಗೆ ಬದುಕಿದ್ದನು

[ಪುಟ 14ರಲ್ಲಿರುವ ಚಿತ್ರಗಳು]

ಯೆಹೋವನು ‘ನಾವು ಕೈಹಾಕಿದ ಕೆಲಸವನ್ನು ಸಫಲಪಡಿಸಿದ್ದಾನೆ’