ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳಿರಿ

ಯೆಹೋವನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳಿರಿ

ಯೆಹೋವನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳಿರಿ

“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”​—ಪ್ರಸಂಗಿ 12:13.

1, 2. (ಎ) ಭಯವು ನಮ್ಮನ್ನು ಶಾರೀರಿಕವಾಗಿ ಹೇಗೆ ಸಂರಕ್ಷಿಸಬಲ್ಲದು? (ಬಿ) ವಿವೇಕವುಳ್ಳ ಹೆತ್ತವರು ತಮ್ಮ ಮಕ್ಕಳಲ್ಲಿ ಹಿತಕರವಾದ ಭಯವನ್ನು ಮೂಡಿಸಲು ಏಕೆ ಪ್ರಯತ್ನಿಸುತ್ತಾರೆ?

“ಧೈರ್ಯವು ಜೀವವನ್ನು ಸಂಕಷ್ಟಕ್ಕೀಡುಮಾಡುತ್ತದೆ, ಆದರೆ ಭಯವು ಅದನ್ನು ಸಂರಕ್ಷಿಸುತ್ತದೆ” ಎಂದು ಲಿಯೊನಾರ್ಡೊ ಡವಿಂಚಿ ಹೇಳಿದರು. ಧೈರ್ಯ ಅಥವಾ ಹುಚ್ಚು ಸಾಹಸವು ಅಪಾಯದ ವಿಷಯದಲ್ಲಿ ಒಬ್ಬ ವ್ಯಕ್ತಿಯನ್ನು ಕುರುಡುಗೊಳಿಸುತ್ತದೆ, ಆದರೆ ಭಯವು ಅವನು ಜಾಗರೂಕನಾಗಿರುವಂತೆ ಜ್ಞಾಪಕಹುಟ್ಟಿಸುತ್ತದೆ. ಉದಾಹರಣೆಗೆ, ನಾವು ಒಂದು ಬೆಟ್ಟದ ತುದಿಗೆ ಹೋಗಿ, ಕೆಳಗೆ ಬಿದ್ದರೆ ಎಲ್ಲಿ ತಲಪುವೆವು ಎಂದು ನೋಡುವುದಾದರೆ, ನಮ್ಮಲ್ಲಿ ಹೆಚ್ಚಿನವರು ಸಹಜವಾದ ಭಯದಿಂದಾಗಿ ಥಟ್ಟನೆ ಹಿಂದೆ ಸರಿಯುವೆವು. ಹಾಗೆಯೇ, ನಾವು ಹಿಂದಿನ ಲೇಖನದಲ್ಲಿ ಕಲಿತಂತೆ ಹಿತಕರವಾದ ಭಯವು ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಪ್ರೋತ್ಸಾಹಿಸುತ್ತದೆ ಮಾತ್ರವಲ್ಲ, ಅದು ನಮ್ಮನ್ನು ಹಾನಿಯಿಂದಲೂ ಕಾಪಾಡುತ್ತದೆ.

2 ಆದರೆ ಅನೇಕ ಆಧುನಿಕ ಅಪಾಯಗಳ ಕುರಿತಾದ ಭಯವನ್ನಾದರೋ ಕಲಿತುಕೊಳ್ಳಬೇಕಾಗುತ್ತದೆ. ಎಳೆಯ ಮಕ್ಕಳಿಗೆ ವಿದ್ಯುಚ್ಛಕ್ತಿ ಇಲ್ಲವೇ ವಾಹನ ಸಂಚಾರದ ಅಪಾಯಗಳ ಕುರಿತಾಗಿ ಏನೂ ಗೊತ್ತಿಲ್ಲದಿರುವುದರಿಂದ, ಅವರು ಸುಲಭವಾಗಿ ಗಂಭೀರವಾದ ಅಪಘಾತಕ್ಕೆ ತುತ್ತಾಗಸಾಧ್ಯವಿದೆ. * ವಿವೇಕವುಳ್ಳ ಹೆತ್ತವರು ಅವರ ಮಕ್ಕಳಲ್ಲಿ ಹಿತಕರವಾದ ಭಯವನ್ನು ಮೂಡಿಸಲು ಪ್ರಯತ್ನಿಸುತ್ತಾರೆ, ತಮ್ಮ ಸುತ್ತಮುತ್ತಲಿರುವ ಅಪಾಯಗಳ ಕುರಿತಾಗಿ ಅವರಿಗೆ ಪದೇ ಪದೇ ಎಚ್ಚರಿಕೆ ಕೊಡುತ್ತಾ ಇರುತ್ತಾರೆ. ಏಕೆಂದರೆ ಈ ರೀತಿಯ ಭಯವು ತಮ್ಮ ಮಕ್ಕಳ ಜೀವವನ್ನು ರಕ್ಷಿಸಬಲ್ಲದೆಂಬುದು ಹೆತ್ತವರಿಗೆ ಗೊತ್ತಿದೆ.

3. ಆತ್ಮಿಕ ಅಪಾಯಗಳ ಕುರಿತಾಗಿ ಯೆಹೋವನು ನಮಗೆ ಏಕೆ ಮತ್ತು ಹೇಗೆ ಎಚ್ಚರಿಕೆಯನ್ನು ಕೊಡುತ್ತಾನೆ?

3 ಅದೇ ರೀತಿಯಲ್ಲಿ ಯೆಹೋವನಿಗೆ ನಮ್ಮ ಹಿತಕ್ಷೇಮದ ಕುರಿತು ಚಿಂತೆಯಿದೆ. ಅಕ್ಕರೆಯುಳ್ಳ ತಂದೆಯೋಪಾದಿ, ಆತನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ ನಮಗೆ ಪ್ರಯೋಜನ ತರುವಂಥ ರೀತಿಯಲ್ಲಿ ಕಲಿಸುತ್ತಾನೆ. (ಯೆಶಾಯ 48:17) ಈ ದೈವಿಕ ಶೈಕ್ಷಣಿಕ ಕಾರ್ಯಕ್ರಮದ ಒಂದು ಭಾಗವು, ಆತ್ಮಿಕ ಕುಳಿಗಳ ಕುರಿತಾಗಿ ನಮಗೆ “ಪುನಃ ಪುನಃ” ಎಚ್ಚರಿಸುತ್ತಾ ಇರುವುದಾಗಿದೆ. ಹೀಗೆ ನಾವು ಅಂಥ ಅಪಾಯದ ವಿಷಯದಲ್ಲಿ ಸ್ವಸ್ಥವಾದ ಭಯವನ್ನು ಬೆಳೆಸಿಕೊಳ್ಳಸಾಧ್ಯವಿದೆ. (2 ಪೂರ್ವಕಾಲವೃತ್ತಾಂತ 36:​15, NW; 2 ಪೇತ್ರ 3:1) ‘ದೇವರಲ್ಲಿ ಭಯಭಕ್ತಿಯುಳ್ಳವರಾಗಿ ಆತನ ಆಜ್ಞೆಗಳನ್ನು ಅನುಸರಿಸುವ ಹೃದಯವು ಜನರಲ್ಲಿ ಇರುತ್ತಿದ್ದಲ್ಲಿ’ ಇತಿಹಾಸದಾದ್ಯಂತ ಅನೇಕ ಆತ್ಮಿಕ ವಿಪತ್ತುಗಳನ್ನು ದೂರಮಾಡಬಹುದಿತ್ತು ಮತ್ತು ಎಷ್ಟೋ ಕಷ್ಟಾನುಭವವನ್ನು ತಪ್ಪಿಸಬಹುದಿತ್ತು. (ಧರ್ಮೋಪದೇಶಕಾಂಡ 5:29) ನಿಭಾಯಿಸಲು ಕಷ್ಟಕರವಾದ ಈ “ಕಠಿನಕಾಲ”ಗಳಲ್ಲಿ ದೇವರಿಗೆ ಭಯಪಡುವ ಹೃದಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ಆತ್ಮಿಕ ಅಪಾಯದಿಂದ ಹೇಗೆ ದೂರವಿರಬಹುದು?​—2 ತಿಮೊಥೆಯ 3:1.

ಕೆಟ್ಟತನದಿಂದ ದೂರ ಹೋಗಿರಿ

4. (ಎ) ಕ್ರೈಸ್ತರು ಯಾವ ದ್ವೇಷವನ್ನು ಬೆಳೆಸಿಕೊಳ್ಳಬೇಕು? (ಬಿ) ಪಾಪಪೂರ್ಣ ನಡತೆಯ ಕುರಿತು ಯೆಹೋವನಿಗೆ ಹೇಗನಿಸುತ್ತದೆ? (ಪಾದಟಿಪ್ಪಣಿ ನೋಡಿ.)

4 “ಯೆಹೋವನ ಭಯವು ಪಾಪ [“ಕೆಟ್ಟತನದ,” NW] ದ್ವೇಷವನ್ನು ಹುಟ್ಟಿಸುತ್ತದೆ” ಎಂದು ಬೈಬಲ್‌ ವಿವರಿಸುತ್ತದೆ. (ಜ್ಞಾನೋಕ್ತಿ 8:13) ಈ ದ್ವೇಷವು, “ವಿರೋಧಿಸಲ್ಪಡುವ, ಹೇಸಲ್ಪಡುವ ಮತ್ತು ಕಡೆಗಣಿಸಲ್ಪಡುವ ವ್ಯಕ್ತಿಗಳ ಮತ್ತು ವಸ್ತುಗಳ ಕಡೆಗಿನ ಒಂದು ಭಾವನಾತ್ಮಕ ಮನೋಭಾವ ಆಗಿದೆ ಮತ್ತು ಅವರೊಂದಿಗೆ ಯಾವುದೇ ರೀತಿಯ ಸಂಪರ್ಕ ಇಲ್ಲವೇ ಸಂಬಂಧವನ್ನಿಡಲು ಬಯಸದ ಸ್ಥಿತಿಯಾಗಿದೆ” ಎಂದು ಒಂದು ಬೈಬಲ್‌ ನಿಘಂಟು ವರ್ಣಿಸುತ್ತದೆ. ಆದುದರಿಂದ, ಯೆಹೋವನ ದೃಷ್ಟಿಯಲ್ಲಿ ಏನೆಲ್ಲ ಕೆಟ್ಟದ್ದಾಗಿದೆಯೊ ಅದೆಲ್ಲದ್ದರ ಕಡೆಗಿನ ಆಂತರಿಕ ಅಸಹ್ಯಭಾವ ಅಥವಾ ಹೇವರಿಕೆಯು ದೈವಿಕ ಭಯದಲ್ಲಿ ಸೇರಿರುತ್ತದೆ. * (ಕೀರ್ತನೆ 97:10) ನಮ್ಮಲ್ಲಿರುವ ಸಹಜವಾದ ಭಯವು ಎಚ್ಚರಿಕೆಯ ಗಂಟೆಯನ್ನು ಬಾರಿಸುವಾಗ, ನಾವು ಬೆಟ್ಟದ ತುದಿಯಿಂದ ಹೇಗೆ ಹಿಂದೆ ಸರಿಯುವೆವೊ ಹಾಗೆಯೇ, ಈ ದೈವಿಕ ಭಯವು ನಾವು ಕೆಟ್ಟದ್ದರಿಂದ ದೂರ ಸರಿಯುವಂತೆ ನಮ್ಮನ್ನು ಬಲವಂತಪಡಿಸುತ್ತದೆ. “ಯೆಹೋವನ ಭಯದಿಂದ ಒಬ್ಬನು ಕೆಟ್ಟತನದಿಂದ ದೂರಹೋಗುತ್ತಾನೆ,” ಎಂದು ಬೈಬಲ್‌ ಹೇಳುತ್ತದೆ.​—ಜ್ಞಾನೋಕ್ತಿ 16:6, NW.

5. (ಎ) ನಾವು ನಮ್ಮ ದೈವಿಕ ಭಯವನ್ನು ಮತ್ತು ಕೆಟ್ಟದ್ದರ ದ್ವೇಷವನ್ನು ಹೇಗೆ ಬಲಪಡಿಸಬಹುದು? (ಬಿ) ಈ ವಿಷಯದಲ್ಲಿ ಇಸ್ರಾಯೇಲ್‌ ಜನಾಂಗದ ಇತಿಹಾಸವು ನಮಗೆ ಯಾವ ಪಾಠವನ್ನು ಕಲಿಸುತ್ತದೆ?

5 ಪಾಪವು ಅನಿವಾರ್ಯವಾಗಿ ಬರಮಾಡುವಂಥ ಹಾನಿಕರ ಫಲಿತಾಂಶಗಳನ್ನು ಪರಿಗಣಿಸುವ ಮೂಲಕ ನಾವು ಈ ಹಿತಕರವಾದ ಭಯವನ್ನು ಮತ್ತು ಕೆಟ್ಟದ್ದಕ್ಕಾಗಿರುವ ದ್ವೇಷವನ್ನು ಇನ್ನೂ ತೀವ್ರಗೊಳಿಸಬಹುದು. ನಾವು ಶರೀರಭಾವದ ಕುರಿತಾಗಿ ಬಿತ್ತಲಿ ಇಲ್ಲವೆ ಆತ್ಮದ ಕುರಿತಾಗಿ ಬಿತ್ತಲಿ, ನಾವೇನನ್ನು ಬಿತ್ತುತ್ತೇವೊ ಅದನ್ನೇ ಕೊಯ್ಯುವೆವು ಎಂದು ಬೈಬಲ್‌ ದೃಢವಾಗಿ ಹೇಳುತ್ತದೆ. (ಗಲಾತ್ಯ 6:​7, 8) ಈ ಕಾರಣಕ್ಕಾಗಿ ಯೆಹೋವನು, ತನ್ನ ಆಜ್ಞೆಗಳನ್ನು ಉಪೇಕ್ಷಿಸುವ ಮತ್ತು ಸತ್ಯಾರಾಧನೆಯನ್ನು ತೊರೆಯುವುದರ ಅನಿವಾರ್ಯ ಪರಿಣಾಮಗಳನ್ನು ಸುಸ್ಪಷ್ಟವಾಗಿ ವಿವರಿಸಿದನು. ದೈವಿಕ ಸಂರಕ್ಷಣೆಯಿಲ್ಲದಿದ್ದಲ್ಲಿ, ಆ ಚಿಕ್ಕ ಸುಲಭಬೇಧ್ಯ ಇಸ್ರಾಯೇಲ್‌ ಜನಾಂಗವು, ಅದರ ಕ್ರೂರ ಮತ್ತು ಶಕ್ತಿಶಾಲಿ ನೆರೆಹೊರೆ ಜನಾಂಗಗಳ ಕಾಲುಗಳ ಕೆಳಗೆ ಇರುತ್ತಿತ್ತು. (ಧರ್ಮೋಪದೇಶಕಾಂಡ 28:​15, 45-48) ಇಸ್ರಾಯೇಲಿನ ಅವಿಧೇಯತೆಯ ವಿಪತ್ಕಾರಕ ಪರಿಣಾಮವು, ನಾವು ಪಾಠವನ್ನು ಕಲಿತುಕೊಂಡು ದೈವಿಕ ಭಯವನ್ನು ಬೆಳೆಸಿಕೊಳ್ಳಲು “ಬುದ್ಧಿವಾದ”ಕ್ಕಾಗಿ ಬೈಬಲಿನಲ್ಲಿ ವಿವರವಾಗಿ ದಾಖಲಿಸಲ್ಪಟ್ಟಿದೆ.​—1 ಕೊರಿಂಥ 10:11.

6. ದೈವಿಕ ಭಯವನ್ನು ಕಲಿಯಲಿಕ್ಕಾಗಿ ನಾವು ಯಾವ ಶಾಸ್ತ್ರೀಯ ಮಾದರಿಗಳನ್ನು ಪರಿಗಣಿಸಬಹುದು? (ಪಾದಟಿಪ್ಪಣಿ ನೋಡಿ.)

6 ಒಂದು ಜನಾಂಗದೋಪಾದಿ ಇಸ್ರಾಯೇಲಿನೊಂದಿಗೆ ಏನು ಸಂಭವಿಸಿತೊ ಅದು, ಮತ್ತು ಮತ್ಸರ, ಅನೈತಿಕತೆ, ದುರಾಶೆ, ಅಥವಾ ಅಹಂಕಾರಕ್ಕೆ ತುತ್ತಾದ ವ್ಯಕ್ತಿಗಳ ನಿಜ ಜೀವನದ ಅನುಭವಗಳು ಸಹ ಬೈಬಲಿನಲ್ಲಿ ಅಡಕವಾಗಿವೆ. * ಈ ಪುರುಷರಲ್ಲಿ ಕೆಲವರು ಅನೇಕ ವರ್ಷಗಳ ವರೆಗೆ ಯೆಹೋವನ ಸೇವೆಯನ್ನು ಮಾಡಿದ್ದರು. ಆದರೆ ತಮ್ಮ ಜೀವಿತದ ಒಂದು ನಿರ್ಣಾಯಕ ಕ್ಷಣದಲ್ಲಿ ಅವರಿಗಿದ್ದ ದೇವಭಯವು ಸಾಕಷ್ಟು ಬಲವಾಗಿರಲಿಲ್ಲ ಮತ್ತು ಈ ಕಾರಣದಿಂದ ಅವರು ಕಹಿಯಾದ ಫಲವನ್ನು ಕೊಯ್ಯಬೇಕಾಯಿತು. ಅಂಥ ಶಾಸ್ತ್ರೀಯ ಮಾದರಿಗಳ ಕುರಿತಾಗಿ ಮನನಮಾಡುವುದು, ನಾವು ಅದೇ ರೀತಿಯ ತಪ್ಪುಗಳನ್ನು ಮಾಡಬಾರದೆಂಬ ನಮ್ಮ ದೃಢಸಂಕಲ್ಪವನ್ನು ಇನ್ನಷ್ಟು ಬಲಪಡಿಸಬಲ್ಲದು. ನಮ್ಮ ಮೇಲೆ ಒಂದು ವೈಯಕ್ತಿಕ ದುರಂತವು ಬಂದೆರಗಿದ ಬಳಿಕವೇ ನಾವು ದೇವರ ಬುದ್ಧಿವಾದವನ್ನು ಪಾಲಿಸಲಿಕ್ಕಾಗಿ ಕಾಯುತ್ತಿರುವುದಾದರೆ ಅದೆಷ್ಟು ದುಃಖದ ಸಂಗತಿ! ಏಕೆಂದರೆ, ಅನುಭವವು ಅತ್ಯುತ್ತಮ ಶಿಕ್ಷಕವೆಂದು ಸಾಮಾನ್ಯವಾಗಿ ಎಣಿಸಲಾಗುತ್ತದಾದರೂ, ಈ ವಿಷಯದಲ್ಲಿ ವಿಶೇಷವಾಗಿ ಭೋಗಾಸಕ್ತಿಯ ವಿಷಯದಲ್ಲಿ ಅದು ವಿರುದ್ಧವಾಗಿದೆ.​—ಕೀರ್ತನೆ 19:7.

7. ಯೆಹೋವನು ತನ್ನ ಸಾಂಕೇತಿಕ ಗುಡಾರದೊಳಗೆ ಯಾರನ್ನು ಆಮಂತ್ರಿಸುತ್ತಾನೆ?

7 ದೈವಿಕ ಭಯವನ್ನು ಬೆಳೆಸಿಕೊಳ್ಳಲು ಇರುವ ಇನ್ನೊಂದು ಬಲವಾದ ಕಾರಣವು, ದೇವರೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವ ಅಪೇಕ್ಷೆಯೇ ಆಗಿದೆ. ಯೆಹೋವನ ಸ್ನೇಹವು ನಮಗೆ ತುಂಬ ಅಮೂಲ್ಯವಾಗಿರುವುದರಿಂದ ನಾವು ಆತನನ್ನು ಅಪ್ರಸನ್ನಗೊಳಿಸಲು ಭಯಪಡುತ್ತೇವೆ. ದೇವರು ಯಾರನ್ನು ತನ್ನ ಮಿತ್ರನೆಂದು ಪರಿಗಣಿಸುತ್ತಾ ತನ್ನ ಸಾಂಕೇತಿಕ ಗುಡಾರಕ್ಕೆ ಆಮಂತ್ರಿಸುತ್ತಾನೆ? ‘ಸಜ್ಜನನೂ ನೀತಿವಂತನೂ’ ಆಗಿರುವವನನ್ನು ಮಾತ್ರವೇ. (ಕೀರ್ತನೆ 15:​1, 2) ನಮ್ಮ ಸೃಷ್ಟಿಕರ್ತನೊಂದಿಗಿನ ಈ ಸುಯೋಗವುಳ್ಳ ಸಂಬಂಧವು ನಮಗೆ ತುಂಬ ಅಮೂಲ್ಯವಾಗಿರುವಲ್ಲಿ, ನಾವು ಆತನ ದೃಷ್ಟಿಯಲ್ಲಿ ಸಜ್ಜನರಾಗಿ ನಡೆಯಲು ತುಂಬ ಜಾಗ್ರತೆ ವಹಿಸುವೆವು.

8. ಮಲಾಕಿಯನ ದಿನಗಳಲ್ಲಿದ್ದ ಕೆಲವು ಇಸ್ರಾಯೇಲ್ಯರು, ದೇವರೊಂದಿಗಿನ ಸ್ನೇಹವನ್ನು ಹೇಗೆ ಲಘುವಾಗಿ ಪರಿಗಣಿಸಿದರು?

8 ದುಃಖಕರ ಸಂಗತಿಯೇನೆಂದರೆ, ಮಲಾಕಿಯನ ದಿನಗಳಲ್ಲಿದ್ದ ಕೆಲವು ಇಸ್ರಾಯೇಲ್ಯರು ದೇವರೊಂದಿಗಿದ್ದ ತಮ್ಮ ಸ್ನೇಹವನ್ನು ಲಘುವಾಗಿ ಪರಿಗಣಿಸಿದರು. ಯೆಹೋವನಿಗೆ ಭಯಪಡುವ ಅಥವಾ ಆತನನ್ನು ಗೌರವಿಸುವ ಬದಲು, ಅವರು ಆತನ ವೇದಿಯ ಮೇಲೆ ಅಸ್ವಸ್ಥ ಮತ್ತು ಕುಂಟ ಪಶುಗಳನ್ನು ಅರ್ಪಿಸಿದರು. ವಿವಾಹದ ಕಡೆಗಿನ ಅವರ ಮನೋಭಾವದಲ್ಲೂ ಅವರ ದೇವಭಯದ ಕೊರತೆಯು ಪ್ರತಿಬಿಂಬಿಸಲ್ಪಟ್ಟಿತು. ಹೆಚ್ಚು ಯುವ ಸ್ತ್ರೀಯರನ್ನು ಮದುವೆಯಾಗಲಿಕ್ಕೋಸ್ಕರ ಅವರು ತಮ್ಮ ಯುವ ಪ್ರಾಯದಲ್ಲಿ ಮದುವೆಯಾಗಿದ್ದ ಹೆಂಡತಿಯರನ್ನು ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದಿಸಿದರು. ಯೆಹೋವನು “ವಿವಾಹ ವಿಚ್ಛೇದವನ್ನು” ಹಗೆಮಾಡುತ್ತಾನೆಂದು ಮತ್ತು ಅವರ ವಂಚನಾತ್ಮಕ ಮನೋವೃತ್ತಿಯು ಅವರನ್ನು ತಮ್ಮ ದೇವರಿಂದ ದೂರ ಕೊಂಡೊಯ್ದಿತ್ತೆಂದು ಮಲಾಕಿಯನು ಅವರಿಗೆ ಹೇಳಿದನು. ಅವರ ಹೆಂಡತಿಯರ ವ್ಯಥೆತುಂಬಿದ ಕಣ್ಣೀರುಗಳಿಂದ ವೇದಿಯು ಮರೆಯಾಗಿರುವಾಗ ದೇವರು ಅವರ ಯಜ್ಞಗಳಿಂದ ಪ್ರಸನ್ನನಾಗುವುದಾದರೂ ಹೇಗೆ? ತನ್ನ ಮಟ್ಟಗಳ ಕಡೆಗೆ ಅವರಿಗಿದ್ದ ಭಂಡ ಅಗೌರವವು, ಯೆಹೋವನು ಹೀಗೆ ಕೇಳುವಂತೆ ಪ್ರಚೋದಿಸಿತು: “ನನಗೆ ತೋರಿಸುವ ಭಯಭಕ್ತಿಯೆಲ್ಲಿ?”​—ಮಲಾಕಿಯ 1:6-8; 2:13-16, NW.

9, 10. ಯೆಹೋವನ ಸ್ನೇಹವು ನಮಗೆ ತುಂಬ ಅಮೂಲ್ಯವಾದದ್ದಾಗಿದೆ ಎಂದು ಹೇಗೆ ತೋರಿಸಬಲ್ಲೆವು?

9 ಇಂದು, ಸ್ವಾರ್ಥ ಮತ್ತು ಅನೈತಿಕ ಗಂಡಂದಿರು ಹಾಗೂ ತಂದೆಗಳು ಮತ್ತು ಹೆಂಡತಿಯರು ಹಾಗೂ ತಾಯಂದಿರಿಂದಲೂ ಛಿದ್ರಛಿದ್ರಗೊಳಿಸಲ್ಪಟ್ಟಿರುವ ಅನೇಕಾನೇಕ ನಿರ್ದೋಷಿ ಸಂಗಾತಿಗಳು ಮತ್ತು ಮಕ್ಕಳ ಹೃದಯಗಳು ದುಃಖದಿಂದ ಒಡೆದಿರುವುದನ್ನು ಯೆಹೋವನು ಅದೇ ರೀತಿಯಲ್ಲಿ ನೋಡುತ್ತಾನೆ. ಖಂಡಿತವಾಗಿಯೂ ಅದು ಆತನನ್ನು ದುಃಖಕ್ಕೀಡುಮಾಡುತ್ತದೆ. ದೇವರ ಸ್ನೇಹಿತನಾಗಿರುವವನು, ಸಂಗತಿಗಳನ್ನು ದೇವರ ದೃಷ್ಟಿಕೋನದಿಂದ ನೋಡುವನು ಮತ್ತು ತನ್ನ ವಿವಾಹವನ್ನು ಬಲಗೊಳಿಸಲು ಕಠಿನವಾಗಿ ಕೆಲಸಮಾಡುವನು, ವಿವಾಹ ಬಂಧದ ಮಹತ್ವವನ್ನು ಕಡಿಮೆಗೊಳಿಸುವ ಲೌಕಿಕ ಯೋಚನೆಯನ್ನು ತಿರಸ್ಕರಿಸುವನು ಹಾಗೂ ‘ಜಾರತ್ವಕ್ಕೆ ದೂರವಾಗಿ ಓಡಿಹೋಗುವನು.’​—1 ಕೊರಿಂಥ 6:18.

10 ವಿವಾಹದಲ್ಲಿ ಮತ್ತು ನಮ್ಮ ಜೀವಿತದ ಬೇರೆ ಕ್ಷೇತ್ರಗಳಲ್ಲಿ ಯೆಹೋವನ ದೃಷ್ಟಿಯಲ್ಲಿ ಯಾವುದು ಕೆಟ್ಟದ್ದಾಗಿದೆಯೊ ಅದೆಲ್ಲದ್ದಕ್ಕಾಗಿ ದ್ವೇಷವನ್ನು ಬೆಳೆಸಿಕೊಳ್ಳುವುದರೊಂದಿಗೆ ಆತನ ಸ್ನೇಹಕ್ಕಾಗಿ ಗಾಢವಾದ ಗಣ್ಯತೆಯು ಯೆಹೋವನ ಅನುಗ್ರಹ ಮತ್ತು ಮೆಚ್ಚಿಕೆಯನ್ನು ತರುವುದು. ಅಪೊಸ್ತಲ ಪೇತ್ರನು ದೃಢವಾಗಿ ತಿಳಿಸಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಕಷ್ಟಕರವಾದ ವಿವಿಧ ಪರಿಸ್ಥಿತಿಗಳಲ್ಲಿ ವ್ಯಕ್ತಿಗಳು ಸರಿಯಾದದ್ದನ್ನು ಮಾಡುವಂತೆ ದೈವಿಕ ಭಯವು ಹೇಗೆ ಪ್ರಚೋದಿಸಿತ್ತೆಂಬುದನ್ನು ತೋರಿಸುವ ಅನೇಕ ಶಾಸ್ತ್ರೀಯ ಉದಾಹರಣೆಗಳು ಇವೆ.

ದೇವರಿಗೆ ಭಯಪಟ್ಟ ಮೂವರು ವ್ಯಕ್ತಿಗಳು

11. ಅಬ್ರಹಾಮನು ‘ದೇವರಲ್ಲಿ ಭಯಭಕ್ತಿಯುಳ್ಳವನೆಂದು’ ಯಾವ ಪರಿಸ್ಥಿತಿಗಳಲ್ಲಿ ಘೋಷಿಸಲಾಯಿತು?

11 ಯೆಹೋವನು ವೈಯಕ್ತಿಕವಾಗಿ ತನ್ನ ಸ್ನೇಹಿತನೆಂದು ವರ್ಣಿಸಿದಂಥ ಒಬ್ಬ ವ್ಯಕ್ತಿಯ ಕುರಿತಾಗಿ ಬೈಬಲ್‌ ಹೇಳುತ್ತದೆ. ಅವನೇ ಪೂರ್ವಜನಾದ ಅಬ್ರಹಾಮನು. (ಯೆಶಾಯ 41:8) ಯಾರ ಮೂಲಕ ದೇವರು ಅಬ್ರಹಾಮನ ಸಂತತಿಯನ್ನು ಒಂದು ದೊಡ್ಡ ಜನಾಂಗವಾಗಿ ಮಾಡುವ ತನ್ನ ವಾಗ್ದಾನವನ್ನು ಪೂರೈಸಲಿದ್ದನೊ, ಆ ಒಬ್ಬನೇ ಮಗನಾದ ಇಸಾಕನನ್ನೇ ಬಲಿಯಾಗಿ ಅರ್ಪಿಸಲು ದೇವರು ಕೇಳಿಕೊಂಡಾಗ, ಅಬ್ರಹಾಮನ ದೈವಿಕ ಭಯವು ಪರೀಕ್ಷೆಗೊಡ್ಡಲ್ಪಟ್ಟಿತು. (ಆದಿಕಾಂಡ 12:​2, 3; 17:19) ಈ ಮನನೋಯಿಸುವಂಥ ಪರೀಕ್ಷೆಯಲ್ಲಿ ‘ಯೆಹೋವನ ಸ್ನೇಹಿತನು’ ಉತ್ತೀರ್ಣನಾಗುವನೊ? (ಯಾಕೋಬ 2:23) ಅಬ್ರಹಾಮನು ಇಸಾಕನನ್ನು ಕೊಲ್ಲಲು ತನ್ನ ಕತ್ತಿಯನ್ನು ಎತ್ತಿದಾಕ್ಷಣವೇ, ಯೆಹೋವನ ದೂತನು ಅಂದದ್ದು: “ನಿನ್ನ ಹುಡುಗನ ಮೇಲೆ ಕೈಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು.”​—ಆದಿಕಾಂಡ 22:10-12.

12. ಅಬ್ರಹಾಮನ ದೈವಿಕ ಭಯಕ್ಕೆ ಪ್ರೇರಣೆ ಏನಾಗಿತ್ತು, ಮತ್ತು ನಾವು ಅದೇ ರೀತಿಯ ಮನೋವೃತ್ತಿಯನ್ನು ಹೇಗೆ ತೋರಿಸಬಲ್ಲೆವು?

12 ಈ ಮುಂಚೆಯೂ ಅಬ್ರಹಾಮನು ತಾನು ಯೆಹೋವನಿಗೆ ಭಯಪಡುವವನಾಗಿದ್ದೇನೆ ಎಂಬುದನ್ನು ರುಜುಪಡಿಸಿದ್ದರೂ, ಆ ಸಂದರ್ಭದಲ್ಲಿ ಅವನು ತನ್ನ ದೈವಿಕ ಭಯವನ್ನು ಗಮನಾರ್ಹವಾದೊಂದು ರೀತಿಯಲ್ಲಿ ಪ್ರದರ್ಶಿಸಿದನು. ಇಸಾಕನನ್ನು ಬಲಿಯರ್ಪಿಸಲು ಅವನಿಗಿದ್ದ ಸಿದ್ಧಮನಸ್ಸು, ಕೇವಲ ಗೌರವಪೂರ್ವಕವಾದ ವಿಧೇಯತೆಯ ತೋರಿಕೆಯಾಗಿರದೆ ಅದಕ್ಕಿಂತಲೂ ಹೆಚ್ಚಿನದ್ದಾಗಿತ್ತು. ಅಗತ್ಯವಿರುವಲ್ಲಿ, ತನ್ನ ಸ್ವರ್ಗೀಯ ತಂದೆಯು ಇಸಾಕನನ್ನು ಪುನರುತ್ಥಾನಗೊಳಿಸುವ ಮೂಲಕ ತನ್ನ ವಾಗ್ದಾನವನ್ನು ನೆರವೇರಿಸುವನು ಎಂಬ ಪೂರ್ಣ ಭರವಸೆಯಿಂದ ಅಬ್ರಹಾಮನು ಪ್ರಚೋದಿಸಲ್ಪಟ್ಟನು. ಪೌಲನು ಬರೆದಂತೆ, ಅಬ್ರಹಾಮನು “[ದೇವರು] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢ ನಂಬಿಕೆಯುಳ್ಳವನಾದನು.” (ರೋಮಾಪುರ 4:16-21) ದೊಡ್ಡ ತ್ಯಾಗಗಳನ್ನು ಮಾಡಬೇಕಾಗುವಲ್ಲಿಯೂ ನಾವು ದೇವರ ಚಿತ್ತವನ್ನು ಮಾಡಲು ಸಿದ್ಧರಾಗಿದ್ದೇವೊ? ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡು”ವವನಾಗಿದ್ದಾನೆಂದು ತಿಳಿದವರಾಗಿ, ಅಂಥ ವಿಧೇಯತೆಯು ದೀರ್ಘ ಕಾಲದ ವರೆಗೆ ಬಾಳುವ ಪ್ರಯೋಜನಗಳನ್ನು ತರುವದೆಂಬ ಪೂರ್ಣ ಭರವಸೆ ನಮಗಿದೆಯೊ? (ಇಬ್ರಿಯ 11:6) ಅದೇ ದೇವರ ನಿಜ ಭಯವಾಗಿದೆ.​—ಕೀರ್ತನೆ 115:11.

13. ‘ದೇವರಿಗೆ ಭಯಪಡುವವನು’ ಎಂದು ಯೋಸೇಫನು ಸರಿಯಾಗಿಯೇ ತನ್ನನ್ನು ವರ್ಣಿಸಸಾಧ್ಯವಿತ್ತು ಏಕೆ?

13 ದೈವಿಕ ಭಯವನ್ನು ಕ್ರಿಯೆಯಲ್ಲಿ ತೋರಿಸಿದ ಇನ್ನೊಂದು ಮಾದರಿಯನ್ನು ಪರಿಶೀಲಿಸೋಣ. ಅದು ಯೋಸೇಫನ ಮಾದರಿಯೇ. ಪೋಟೀಫರನ ಮನೆವಾರ್ತೆಯಲ್ಲಿ ಒಬ್ಬ ದಾಸನಾಗಿದ್ದಾಗ ಯೋಸೇಫನಿಗೆ ವ್ಯಭಿಚಾರಮಾಡುವ ಶೋಧನೆಯನ್ನು ಪ್ರತಿದಿನ ಎದುರಿಸಬೇಕಾಯಿತು. ಅವನ ಧಣಿಯ ಹೆಂಡತಿಯು ನಿರಂತರವಾಗಿ ಅನೈತಿಕ ಪ್ರಸ್ತಾವನೆಗಳನ್ನು ಮಾಡುತ್ತಾ ಇದ್ದಳು. ಅವಳೊಂದಿಗಿನ ದೈನಂದಿನ ಸಂಪರ್ಕವನ್ನು ಪೂರ್ಣವಾಗಿ ತಪ್ಪಿಸಲು ಯಾವುದೇ ಮಾರ್ಗವಿರಲಿಲ್ಲವೆಂಬುದು ಸ್ಪಷ್ಟ. ಕೊನೆಗೆ ಅವಳು ‘ಅವನ ಬಟ್ಟೆಯನ್ನು ಹಿಡಿದುಕೊಂಡಾಗ’ ಅವನು ‘ತಪ್ಪಿಸಿಕೊಂಡು ಓಡಿಹೋದನು.’ ಕೆಟ್ಟದ್ದರಿಂದ ಆ ಕೂಡಲೇ ದೂರ ಹೋಗುವಂತೆ ಅವನನ್ನು ಯಾವುದು ಬಲವಂತಪಡಿಸಿತು? ನಿಸ್ಸಂದೇಹವಾಗಿಯೂ ಪ್ರಧಾನ ಕಾರಣವು, ‘ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಪಾಪಮಾಡುವುದನ್ನು’ ತಪ್ಪಿಸುವ ಅಪೇಕ್ಷೆ, ದೇವರ ಭಯವೇ ಆಗಿತ್ತು. (ಆದಿಕಾಂಡ 39:7-12) ಯೋಸೇಫನು ಸರಿಯಾಗಿಯೇ ತನ್ನನ್ನು ‘ದೇವರಿಗೆ ಭಯಪಡುವವನು’ ಎಂದು ವರ್ಣಿಸಸಾಧ್ಯವಿತ್ತು.​—ಆದಿಕಾಂಡ 42:18.

14. ಯೋಸೇಫನ ಕರುಣೆಯು ನಿಜವಾದ ದೇವಭಯವನ್ನು ಹೇಗೆ ಪ್ರತಿಬಿಂಬಿಸಿತು?

14 ತನ್ನನ್ನು ನಿರ್ದಯವಾಗಿ ದಾಸತ್ವಕ್ಕೆ ಮಾರಿದ ತನ್ನ ಸಹೋದರರನ್ನು ಯೋಸೇಫನು ವರ್ಷಗಳಾನಂತರ ಮುಖಾಮುಖಿಯಾಗಿ ಭೇಟಿಯಾದನು. ಆ ಸಮಯದಲ್ಲಿ ಅವರಿಗೆ ತೀವ್ರವಾದ ಆಹಾರದ ಕೊರತೆಯಿದ್ದಾಗ, ಅವರು ತನಗೆ ಮಾಡಿದ ಅನ್ಯಾಯಕ್ಕಾಗಿ ಪ್ರತೀಕಾರವನ್ನು ಸಲ್ಲಿಸಲು ಇದೇ ಸರಿಯಾದ ಸಂದರ್ಭವೆಂದು ಅವನು ಆ ಅವಕಾಶವನ್ನು ಉಪಯೋಗಿಸಬಹುದಿತ್ತು. ಆದರೆ ಜನರನ್ನು ಕ್ರೂರವಾಗಿ ಉಪಚರಿಸುವುದು, ದೇವಭಯವನ್ನು ಪ್ರತಿಬಿಂಬಿಸುವುದಿಲ್ಲ. (ಯಾಜಕಕಾಂಡ 25:43) ಹೀಗಿರುವುದರಿಂದ, ತನ್ನ ಸಹೋದರರ ಹೃದಯವು ಬದಲಾಗಿದೆಯೆಂಬ ಹೇರಳವಾದ ಪುರಾವೆಯನ್ನು ಯೋಸೇಫನು ನೋಡಿದಾಗ, ಅವನು ಕರುಣಾಪೂರ್ವಕವಾಗಿ ಅವರನ್ನು ಕ್ಷಮಿಸಿದನು. ಯೋಸೇಫನಂತೆ, ನಮ್ಮ ದೇವಭಯವು ನಾವು ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸುವಂತೆಯೂ ನಾವು ಶೋಧನೆಗೆ ಬಲಿಬೀಳದಂತೆಯೂ ನಮ್ಮನ್ನು ತಡೆಯುವುದು.​—ಆದಿಕಾಂಡ 45:​1-11; ಕೀರ್ತನೆ 130:​3, 4; ರೋಮಾಪುರ 12:​17-21.

15. ಯೋಬನ ನಡತೆಯು ಯೆಹೋವನ ಹೃದಯವನ್ನು ಏಕೆ ಸಂತೋಷಪಡಿಸಿತು?

15 ದೇವರಿಗೆ ಭಯಪಟ್ಟವರ ಇನ್ನೊಂದು ಮಾದರಿಯು ಯೋಬನದ್ದಾಗಿದೆ. ಯೆಹೋವನು ಪಿಶಾಚನಿಗೆ ಹೇಳಿದ್ದು: “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ.” (ಯೋಬ 1:8) ಅನೇಕ ವರ್ಷಗಳಿಂದ ಯೋಬನ ನಿರ್ದೋಷ ನಡತೆಯು, ಅವನ ಸ್ವರ್ಗೀಯ ತಂದೆಯನ್ನು ಸಂತೋಷಪಡಿಸಿತ್ತು. ಯೋಬನು ದೇವರಿಗೆ ಭಯಪಡುತ್ತಿದ್ದನು, ಯಾಕಂದರೆ ಹಾಗೆ ಮಾಡುವುದು ಸರಿಯಾದ ಸಂಗತಿಯಾಗಿದೆ ಮತ್ತು ಜೀವಿಸುವ ಅತ್ಯುತ್ತಮ ರೀತಿಯಾಗಿದೆ ಎಂಬುದು ಅವನಿಗೆ ತಿಳಿದಿತ್ತು. “ಇಗೋ, ಕರ್ತನ [“ಯೆಹೋವನ,” NW] ಭಯವೇ ಜ್ಞಾನವು ದುಷ್ಟತನವನ್ನು ಬಿಡುವದೇ ವಿವೇಕವು” ಎಂದು ಯೋಬನು ಉದ್ಗರಿಸಿದನು. (ಯೋಬ 28:28) ಒಬ್ಬ ವಿವಾಹಿತ ಪುರುಷನೋಪಾದಿ ಯೋಬನು, ಯುವ ಸ್ತ್ರೀಯರಿಗೆ ಅನುಚಿತವಾದ ಗಮನವನ್ನು ಕೊಡುತ್ತಿರಲಿಲ್ಲ, ಇಲ್ಲವೇ ತನ್ನ ಹೃದಯದಲ್ಲೇ ವ್ಯಭಿಚಾರಿ ಸಂಚುಗಳನ್ನು ಹೂಡುತ್ತಿರಲಿಲ್ಲ. ಅವನೊಬ್ಬ ಶ್ರೀಮಂತ ವ್ಯಕ್ತಿಯಾಗಿದ್ದರೂ, ಅವನು ತನ್ನ ಐಶ್ವರ್ಯದಲ್ಲಿ ಭರವಸೆಯನ್ನಿಡಲಿಲ್ಲ, ಮತ್ತು ಪ್ರತಿಯೊಂದು ವಿಧದ ವಿಗ್ರಹಾರಾಧನೆಯಿಂದ ದೂರವಿದ್ದನು.​—ಯೋಬ 31:​1, 9-11, 24-28.

16. (ಎ) ಯೋಬನು ಯಾವ ವಿಧಗಳಲ್ಲಿ ಪ್ರೀತಿದಯೆಯನ್ನು ತೋರಿಸಿದನು? (ಬಿ) ಯೋಬನು ಕ್ಷಮೆಯನ್ನು ತಡೆದುಹಿಡಿಯಲಿಲ್ಲವೆಂಬುದನ್ನು ಹೇಗೆ ತೋರಿಸಿದನು?

16 ಆದರೆ ದೇವರ ಭಯವೆಂದರೆ, ಒಳ್ಳೇದನ್ನು ಮಾಡುವುದು ಮಾತ್ರವಲ್ಲದೆ ಕೆಟ್ಟದ್ದರಿಂದ ದೂರ ಸರಿಯುವುದೂ ಆಗಿದೆ. ಹೀಗಿರುವುದರಿಂದ, ಯೋಬನು ಕುರುಡರು, ಕುಂಟರು ಮತ್ತು ಬಡವರಲ್ಲಿ ದಯಾಪರ ಆಸಕ್ತಿಯನ್ನು ವಹಿಸಿದನು. (ಯಾಜಕಕಾಂಡ 19:14; ಯೋಬ 29:​15, 16) “ತನ್ನ ಸ್ವಂತ ಜೊತೆ ಮಾನವನಿಂದ ಪ್ರೀತಿದಯೆಯನ್ನು ತಡೆದುಹಿಡಿಯುವ ಯಾವುದೇ ವ್ಯಕ್ತಿ, ಸರ್ವಶಕ್ತನ ಭಯವನ್ನೂ ಬಿಟ್ಟುಬಿಡುವನು” ಎಂಬುದು ಯೋಬನಿಗೆ ತಿಳಿದಿತ್ತು. (ಯೋಬ 6:​14, NW) ಪ್ರೀತಿದಯೆಯನ್ನು ತಡೆದುಹಿಡಿಯುವುದರಲ್ಲಿ, ಕ್ಷಮೆಯನ್ನು ತಡೆದುಹಿಡಿಯುವುದು ಅಥವಾ ಮನಸ್ಸಿನಲ್ಲೇ ದ್ವೇಷವನ್ನಿಟ್ಟುಕೊಳ್ಳುವುದು ಸೇರಿರುತ್ತದೆ. ದೇವರ ನಿರ್ದೇಶನದ ಮೇರೆಗೆ, ಯೋಬನು ತನಗೆ ತುಂಬ ದುಃಖವನ್ನುಂಟುಮಾಡಿದ ತನ್ನ ಮೂರು ಮಂದಿ ಸಂಗಡಿಗರ ಪರವಾಗಿ ಪ್ರಾರ್ಥಿಸಿದನು. (ಯೋಬ 42:​7-10) ಯಾವುದೇ ರೀತಿಯಲ್ಲಿ ನಮ್ಮ ಮನನೋಯಿಸಿರಬಹುದಾದ ಒಬ್ಬ ಜೊತೆ ವಿಶ್ವಾಸಿಯ ಕಡೆಗೆ ನಾವು ಸಹ ತದ್ರೀತಿಯ ಕ್ಷಮಾಭಾವವನ್ನು ತೋರಿಸಬಹುದೊ? ನಮಗೆ ನೋವನ್ನುಂಟುಮಾಡಿರುವ ಆ ವ್ಯಕ್ತಿಯ ಪರವಾಗಿ ಮನಃಪೂರ್ವಕವಾಗಿ ಪ್ರಾರ್ಥನೆಮಾಡುವುದು, ನಮಗಿರುವ ತೀವ್ರ ಅಸಮಾಧಾನವನ್ನು ಜಯಿಸಲು ಬಹಳಷ್ಟು ಸಹಾಯವನ್ನು ಮಾಡಬಲ್ಲದು. ತನ್ನ ದೈವಿಕ ಭಯಕ್ಕಾಗಿ ಯೋಬನು ಅನುಭವಿಸಿದ ಆಶೀರ್ವಾದಗಳು, ‘ತನಗೆ ಭಯಪಡುವವರಿಗೋಸ್ಕರ ಯೆಹೋವನು ಕಾದಿರಿಸಿರುವ ಹೇರಳವಾದ ಒಳ್ಳೇತನದ’ ಒಂದು ಮುನ್ನೋಟವನ್ನು ಒದಗಿಸುತ್ತವೆ.​—ಕೀರ್ತನೆ 31:19; ಯಾಕೋಬ 5:11.

ಮನುಷ್ಯರ ಭಯ ಮತ್ತು ದೇವಭಯ

17. ಮನುಷ್ಯರ ಭಯವು ನಮಗೆ ಏನು ಮಾಡಬಲ್ಲದು, ಆದರೆ ಅಂಥ ಭಯವು ದೂರದೃಷ್ಟಿಯದ್ದಲ್ಲವೇಕೆ?

17 ದೇವಭಯವು, ಸರಿಯಾದದ್ದನ್ನು ಮಾಡುವಂತೆ ನಮ್ಮನ್ನು ಬಲವಂತಪಡಿಸುವುದು, ಆದರೆ ಮನುಷ್ಯರ ಭಯವು ನಮ್ಮ ನಂಬಿಕೆಯನ್ನು ಶಿಥಿಲಗೊಳಿಸಬಲ್ಲದು. ಈ ಕಾರಣಕ್ಕಾಗಿಯೇ, ಸುವಾರ್ತೆಯ ಹುರುಪಿನ ಪ್ರಚಾರಕರಾಗಿರುವಂತೆ ತನ್ನ ಅಪೊಸ್ತಲರನ್ನು ಉತ್ತೇಜಿಸುತ್ತಿದ್ದಾಗ ಯೇಸು ಅವರಿಗೆ ಹೇಳಿದ್ದು: “ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.” (ಮತ್ತಾಯ 10:28) ನಮಗೆ ಮನುಷ್ಯರ ಭಯವಿರುವಲ್ಲಿ ಅದು ದೂರದೃಷ್ಟಿಯದ್ದಾಗಿರುವುದಿಲ್ಲ, ಯಾಕಂದರೆ ಈ ಮನುಷ್ಯರು ನಮ್ಮ ಭವಿಷ್ಯತ್ತಿನ ಜೀವಿತದ ಪ್ರತೀಕ್ಷೆಗಳನ್ನು ನಾಶಗೊಳಿಸಲಾರರು ಎಂದು ಯೇಸು ವಿವರಿಸಿ ಹೇಳುತ್ತಿದ್ದನು. ಅಷ್ಟುಮಾತ್ರವಲ್ಲದೆ, ನಾವು ದೇವರ ಭಯಚಕಿತಗೊಳಿಸುವ ಶಕ್ತಿಯನ್ನು ಅಂಗೀಕರಿಸುವುದರಿಂದ ಆತನಿಗೆ ಭಯಪಡುತ್ತೇವೆ. ಯಾಕೆಂದರೆ ಅದಕ್ಕೆ ತುಲನೆಮಾಡಿ ನೋಡುವಾಗ ಎಲ್ಲ ಜನಾಂಗಗಳ ಶಕ್ತಿಯು ಗೌಣವಾಗಿದೆ. (ಯೆಶಾಯ 40:15) ತನ್ನ ನಂಬಿಗಸ್ತ ಸೇವಕರನ್ನು ಪುನರುತ್ಥಾನಗೊಳಿಸಲು ಯೆಹೋವನಿಗಿರುವ ಶಕ್ತಿಯಲ್ಲಿ ನಮಗೆ ಅಬ್ರಹಾಮನಂತೆ ಸಂಪೂರ್ಣ ಭರವಸೆಯಿದೆ. (ಪ್ರಕಟನೆ 2:10) ಆದುದರಿಂದ ನಾವು ದೃಢಭರವಸೆಯಿಂದ ಹೀಗೆ ಹೇಳುತ್ತೇವೆ: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”​—ರೋಮಾಪುರ 8:31.

18. ಯೆಹೋವನು ತನಗೆ ಭಯಪಡುವವರಿಗೆ ಯಾವ ರೀತಿಯಲ್ಲಿ ಪ್ರತಿಫಲವನ್ನು ಕೊಡುತ್ತಾನೆ?

18 ನಮ್ಮ ವಿರೋಧಿಯು ಒಬ್ಬ ಕುಟುಂಬ ಸದಸ್ಯನಾಗಿರಲಿ ಇಲ್ಲವೇ ಶಾಲೆಯಲ್ಲಿನ ಪುಂಡನಾಗಿರಲಿ, ನಾವು ‘ಯೆಹೋವನಿಗೆ ಭಯಪಡುವದರಿಂದ ನಿರ್ಭಯ’ದಿಂದಿರುವೆವು ಎಂಬುದನ್ನು ಕಂಡುಕೊಳ್ಳುವೆವು. (ಜ್ಞಾನೋಕ್ತಿ 14:26) ದೇವರು ನಮಗೆ ಕಿವಿಗೊಡುವನು ಎಂಬುದನ್ನು ತಿಳಿದವರಾಗಿ ನಾವು ಬಲಕ್ಕಾಗಿ ಆತನಿಗೆ ಪ್ರಾರ್ಥಿಸಬಲ್ಲೆವು. (ಕೀರ್ತನೆ 145:19) ತನಗೆ ಭಯಪಡುವವರನ್ನು ಯೆಹೋವನು ಎಂದೂ ಮರೆಯುವುದಿಲ್ಲ. ತನ್ನ ಪ್ರವಾದಿಯಾದ ಮಲಾಕಿಯನ ಮೂಲಕ ಆತನು ನಮಗೆ ಈ ಪುನರಾಶ್ವಾಸನೆಯನ್ನು ಕೊಡುತ್ತಾನೆ: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು [“ಯೆಹೋವನ ಭಯದಲ್ಲಿದ್ದವರು,” NW] ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.”​—ಮಲಾಕಿಯ 3:16.

19. ಯಾವ ವಿಧದ ಭಯಗಳು ಅಂತ್ಯವಾಗುವವು, ಆದರೆ ಯಾವ ರೀತಿಯ ಭಯವು ಸದಾಕಾಲ ಉಳಿಯುವುದು?

19 ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಯೆಹೋವನನ್ನು ಆರಾಧಿಸುವ ಮತ್ತು ಮನುಷ್ಯರ ಭಯವು ಕಣ್ಮರೆಯಾಗುವ ಸಮಯವು ಹತ್ತಿರವಿದೆ. (ಯೆಶಾಯ 11:9) ಹಸಿವೆ, ರೋಗ, ಪಾತಕ ಮತ್ತು ಯುದ್ಧದ ಭಯ ಸಹ ಇಲ್ಲದೇ ಹೋಗುವುದು. ಆದರೆ ಭೂಪರಲೋಕಗಳಲ್ಲಿರುವ ದೇವರ ನಂಬಿಗಸ್ತ ಸೇವಕರು ನಿತ್ಯತೆಗೂ ಆತನಿಗೆ ತಕ್ಕ ಗೌರವ, ವಿಧೇಯತೆ ಮತ್ತು ಮಾನವನ್ನು ತೋರಿಸುತ್ತಾ ಇರುವರು. (ಪ್ರಕಟನೆ 15:4) ಅಷ್ಟರ ವರೆಗೆ, ನಾವೆಲ್ಲರೂ ಸೊಲೊಮೋನನ ಈ ಪ್ರೇರಿತ ಸಲಹೆಯನ್ನು ಅನ್ವಯಿಸಿಕೊಳ್ಳೋಣ: “ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ; ಯೆಹೋವನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿರು. ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.”​—ಜ್ಞಾನೋಕ್ತಿ 23:17, 18.

[ಪಾದಟಿಪ್ಪಣಿಗಳು]

^ ಪ್ಯಾರ. 2 ಕೆಲವು ಮಂದಿ ವಯಸ್ಕರು, ತಮ್ಮ ಕೆಲಸದಿಂದಾಗಿ ನಿರಂತರವಾಗಿ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಬೇಕಾಗುವಾಗ, ಅಪಾಯದ ಕುರಿತಾದ ಭಯವನ್ನು ಕ್ರಮೇಣ ಕಳೆದುಕೊಳ್ಳುತ್ತಾರೆ. ಅನೇಕ ಮಂದಿ ಬಡಗಿಗಳಿಗೆ ಒಂದು ಬೆರಳು ಏಕೆ ಇರುವುದಿಲ್ಲವೆಂದು ಪ್ರಶ್ನಿಸಿದಾಗ, ಒಬ್ಬ ಅನುಭವೀ ಕುಶಲಕರ್ಮಿಯು ಸರಳವಾಗಿ ಹೇಳಿದ್ದು: “ಆ ಉಚ್ಛ ವೇಗದ ವಿದ್ಯುತ್‌ ಗರಗಸಗಳ ಭಯವೇ ಅವರಿಗೆ ಇಲ್ಲವಾಗಿ ಹೋಗಿದೆ.”

^ ಪ್ಯಾರ. 4 ಸ್ವತಃ ಯೆಹೋವನಿಗೆ ಈ ಹೇವರಿಕೆಯುಂಟಾಗುತ್ತದೆ. ಉದಾಹರಣೆಗಾಗಿ, ಎಫೆಸ 4:29ರಲ್ಲಿ ನಾವು “ಕೆಟ್ಟ ಮಾತ”ನ್ನು ಉಪಯೋಗಿಸಬಾರದೆಂದು ನಮಗೆ ಬುದ್ಧಿಹೇಳಲಾಗಿದೆ. “ಕೆಟ್ಟ” ಎಂಬುದರ ಗ್ರೀಕ್‌ ಪದವು, ಅಕ್ಷರಾರ್ಥವಾಗಿ ಕೆಟ್ಟುಹೋಗುತ್ತಿರುವ ಹಣ್ಣು, ಮೀನು ಅಥವಾ ಮಾಂಸಕ್ಕೆ ಸೂಚಿಸುತ್ತದೆ. ದೂಷಣೀಯ ಅಥವಾ ಹೊಲಸು ಮಾತುಗಳ ಕಡೆಗೆ ನಮಗೆ ಎಷ್ಟೊಂದು ಹೇವರಿಕೆ ಇರಬೇಕೆಂಬುದನ್ನು ಆ ಪದವು ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ವರ್ಣಿಸುತ್ತದೆ. ತದ್ರೀತಿಯಲ್ಲಿ, ಧರ್ಮೋಪದೇಶಕಾಂಡ 29:17 ಮತ್ತು ಯೆಹೆಜ್ಕೇಲ 6:9ರಂಥ ವಚನಗಳಲ್ಲಿರುವ ‘ಬೊಂಬೆಗಳು’ ಎಂಬ ಪದವು ವಾಸ್ತವದಲ್ಲಿ ಹೀಬ್ರು ಭಾಷೆಯಲ್ಲಿ “ಹೊಲಸಿಗೆ ಸಮಾನವಾದ ವಿಗ್ರಹಗಳು” ಎಂದಾಗಿದೆ. ಹೊಲಸು ಅಥವಾ ಮಲವು ನಮ್ಮಲ್ಲಿ ಸ್ವಾಭಾವಿಕವಾದ ಹೇಸಿಕೆಯನ್ನುಂಟುಮಾಡುವಂತೆಯೇ, ವಿಗ್ರಹಾರಾಧನೆಯ ಯಾವುದೇ ರೂಪದ ಕುರಿತು ದೇವರಿಗಿರುವ ಹೇವರಿಕೆಯ ಭಾವನೆಯನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯಮಾಡುತ್ತದೆ.

^ ಪ್ಯಾರ. 6 ಉದಾಹರಣೆಗಾಗಿ, ಕಾಯಿನ (ಆದಿಕಾಂಡ 4:​3-12), ದಾವೀದ (2 ಸಮುವೇಲ 11:​2–12:14), ಗೇಹಜಿ (2 ಅರಸುಗಳು 5:​20-27), ಮತ್ತು ಉಜ್ಜೀಯ (2 ಪೂರ್ವಕಾಲವೃತ್ತಾಂತ 26:​16-21) ಇವರ ಶಾಸ್ತ್ರೀಯ ವೃತ್ತಾಂತಗಳನ್ನು ಪರಿಗಣಿಸಿರಿ.

ನಿಮಗೆ ನೆನಪಿದೆಯೊ?

• ನಾವು ಹೇಗೆ ಕೆಟ್ಟದ್ದನ್ನು ದ್ವೇಷಿಸಲು ಕಲಿಯುತ್ತೇವೆ?

• ಮಲಾಕಿಯನ ದಿನಗಳಲ್ಲಿದ್ದ ಕೆಲವು ಇಸ್ರಾಯೇಲ್ಯರು ಯೆಹೋವನ ಸ್ನೇಹವನ್ನು ಹೇಗೆ ಲಘುವಾಗಿ ಪರಿಗಣಿಸಿದರು?

• ಅಬ್ರಹಾಮ, ಯೋಸೇಫ ಮತ್ತು ಯೋಬರಿಂದ ನಾವು ದೇವಭಯದ ಕುರಿತಾಗಿ ಏನನ್ನು ಕಲಿಯಬಲ್ಲೆವು?

• ಯಾವ ಭಯವು ಎಂದಿಗೂ ಅಳಿಯದು, ಮತ್ತು ಏಕೆ?

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚಿತ್ರ]

ವಿವೇಕಿ ಹೆತ್ತವರು ತಮ್ಮ ಮಕ್ಕಳಲ್ಲಿ ಹಿತಕರವಾದ ಭಯವನ್ನು ತುಂಬುತ್ತಾರೆ

[ಪುಟ 20ರಲ್ಲಿರುವ ಚಿತ್ರ]

ಹೇಗೆ ಭಯವು ನಾವು ಅಪಾಯದಿಂದ ದೂರ ಸರಿಯುವಂತೆ ಮಾಡುತ್ತದೋ ಹಾಗೆಯೇ ದೈವಿಕ ಭಯವು ನಾವು ಕೆಟ್ಟದ್ದರಿಂದ ದೂರ ಹೋಗುವಂತೆ ಮಾಡುತ್ತದೆ

[ಪುಟ 23ರಲ್ಲಿರುವ ಚಿತ್ರ]

ತನ್ನ ಮೂರು ಮಂದಿ ಸುಳ್ಳು ಸ್ನೇಹಿತರ ಎದುರಿನಲ್ಲೂ ಯೋಬನು ತನ್ನ ದೇವಭಯವನ್ನು ಕಾಪಾಡಿಕೊಂಡನು

[ಕೃಪೆ]

From the Bible translation Vulgata Latina, 1795