ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಭಯಪಡುವಂಥ ಹೃದಯವನ್ನು ಬೆಳೆಸಿಕೊಳ್ಳಿರಿ

ಯೆಹೋವನಿಗೆ ಭಯಪಡುವಂಥ ಹೃದಯವನ್ನು ಬೆಳೆಸಿಕೊಳ್ಳಿರಿ

ಯೆಹೋವನಿಗೆ ಭಯಪಡುವಂಥ ಹೃದಯವನ್ನು ಬೆಳೆಸಿಕೊಳ್ಳಿರಿ

“ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು [“ಹೃದಯವು,” NW] ಯಾವಾಗಲೂ ಅವರಲ್ಲಿ ಇದ್ದರೆ ಎಷ್ಟೋ ಮೇಲು.”​—ಧರ್ಮೋಪದೇಶಕಾಂಡ 5:29.

1. ಒಂದು ದಿನ ಎಲ್ಲ ಜನರು ಭಯದಿಂದ ಬಿಡುಗಡೆಯನ್ನು ಅನುಭವಿಸುವರೆಂಬ ವಿಷಯದಲ್ಲಿ ನಾವು ಹೇಗೆ ನಿಶ್ಚಿತರಾಗಿರಬಲ್ಲೆವು?

ಶತಮಾನಗಳಿಂದ ಭಯವು ಮಾನವಕುಲದ ಮೇಲೆ ಸವಾರಿಮಾಡಿದೆ. ಹಸಿವೆ, ರೋಗರುಜಿನ, ಪಾತಕ ಅಥವಾ ಯುದ್ಧದ ಭಯವು ಜನರನ್ನು ಸದಾ ಚಿಂತೆಯಲ್ಲಿ ಮುಳುಗಿಸುತ್ತದೆ. ಈ ಕಾರಣದಿಂದಾಗಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಪ್ರಸ್ತಾವನೆಯು, ಎಲ್ಲ ಮಾನವರು ಭಯದಿಂದ ಬಿಡುಗಡೆಯನ್ನು ಅನುಭವಿಸುವ ಒಂದು ಜಗತ್ತನ್ನು ತರುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತದೆ. * ಸಂತೋಷದ ಸಂಗತಿಯೇನೆಂದರೆ, ಅಂಥ ಒಂದು ಜಗತ್ತು ಬಂದೇ ಬರುವುದೆಂದು ದೇವರೇ ನಮಗೆ ಆಶ್ವಾಸನೆ ಕೊಡುತ್ತಾನೆ. ಆದರೆ ಅದು ಮಾನವ ಪ್ರಯತ್ನಗಳಿಂದ ಬರುವುದಿಲ್ಲ. ತನ್ನ ನೀತಿಯ ಹೊಸ ಲೋಕದಲ್ಲಿ ‘ತನ್ನ ಜನರನ್ನು ಯಾರೂ ಹೆದರಿಸರು’ ಎಂದು ಯೆಹೋವನು ತನ್ನ ಪ್ರವಾದಿಯಾದ ಮೀಕನ ಮೂಲಕ ಮಾತುಕೊಡುತ್ತಾನೆ.​—ಮೀಕ 4:4.

2. (ಎ) ದೇವರಿಗೆ ಭಯಪಡುವಂತೆ ಶಾಸ್ತ್ರವಚನಗಳು ಹೇಗೆ ನಮ್ಮನ್ನು ಪ್ರೇರೇಪಿಸುತ್ತವೆ? (ಬಿ) ದೇವರಿಗೆ ಭಯಪಡುವ ನಮ್ಮ ಕರ್ತವ್ಯದ ಕುರಿತಾಗಿ ಯೋಚಿಸುವಾಗ ಯಾವ ಪ್ರಶ್ನೆಗಳೇಳಬಹುದು?

2 ಇನ್ನೊಂದು ಬದಿಯಲ್ಲಿ ನೋಡುವುದಾದರೆ, ಭಯವು ಒಳಿತನ್ನು ಮಾಡುವ ಶಕ್ತಿಯೂ ಆಗಿರಬಲ್ಲದು. ದೇವರ ಸೇವಕರು ಯೆಹೋವನಿಗೆ ಭಯಪಡುವಂತೆ ಶಾಸ್ತ್ರವಚನಗಳಲ್ಲಿ ಪದೇ ಪದೇ ಪ್ರೇರೇಪಿಸಲ್ಪಟ್ಟಿದ್ದಾರೆ. ಮೋಶೆಯು ಇಸ್ರಾಯೇಲ್ಯರಿಗೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು; ಆತನನ್ನೇ ಸೇವಿಸಬೇಕು.” (ಧರ್ಮೋಪದೇಶಕಾಂಡ 6:13) ಶತಮಾನಗಳಾನಂತರ ಸೊಲೊಮೋನನು ಬರೆದುದು: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 12:13) ದೇವದೂತರ ಮೇಲ್ವಿಚಾರಣೆಯ ಕೆಳಗೆ ನಡೆಯುತ್ತಿರುವ ನಮ್ಮ ಸಾಕ್ಷಿಕಾರ್ಯದ ಮೂಲಕ, ಎಲ್ಲ ಜನರು ‘ದೇವರಿಗೆ ಭಯಪಟ್ಟು ಆತನನ್ನು ಘನಪಡಿಸುವಂತೆ’ ನಾವು ಸಹ ಅದೇ ರೀತಿಯಲ್ಲಿ ಉತ್ತೇಜಿಸುತ್ತೇವೆ. (ಪ್ರಕಟನೆ 14:​6, 7) ಕ್ರೈಸ್ತರು ಯೆಹೋವನಿಗೆ ಭಯಪಡಬೇಕು ಮಾತ್ರವಲ್ಲ, ಅವರು ತಮ್ಮ ಪೂರ್ಣ ಹೃದಯದಿಂದ ಆತನನ್ನು ಪ್ರೀತಿಸಲೂಬೇಕು. (ಮತ್ತಾಯ 22:​37, 38) ಆದರೆ ನಾವು ದೇವರನ್ನು ಪ್ರೀತಿಸಿ, ಅದೇ ಸಮಯದಲ್ಲಿ ಆತನಿಗೆ ಭಯಪಡುವುದಾದರೂ ಹೇಗೆ? ಒಬ್ಬ ಪ್ರೀತಿಪರ ದೇವರಿಗೆ ನಾವೇಕೆ ಭಯಪಡಬೇಕು? ದೈವಿಕ ಭಯವನ್ನು ಬೆಳೆಸಿಕೊಳ್ಳುವುದರಿಂದ ನಾವು ಯಾವ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ? ಈ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ, ದೇವರ ಭಯ ಎಂದರೇನು ಮತ್ತು ಈ ರೀತಿಯ ಭಯವು ಹೇಗೆ ಯೆಹೋವನೊಂದಿಗಿನ ನಮ್ಮ ಸಂಬಂಧದ ಒಂದು ಮೂಲಭೂತ ಅಂಗವಾಗಿದೆ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಭಯಾಶ್ಚರ್ಯ, ಪೂಜ್ಯಭಕ್ತಿ ಮತ್ತು ಭಯ

3. ದೇವಭಯ ಎಂದರೇನು?

3 ದೇವಭಯವು, ಕ್ರೈಸ್ತರಿಗೆ ತಮ್ಮ ನಿರ್ಮಾಣಿಕನ ಕಡೆಗೆ ಇರಲೇಬೇಕಾದ ಒಂದು ಭಾವನೆಯಾಗಿದೆ. ಈ ಭಯದ ಒಂದು ಅರ್ಥವು, “ಸೃಷ್ಟಿಕರ್ತನ ಕುರಿತು ಭಯಾಶ್ಚರ್ಯದಿಂದ ಕೂಡಿದ ಮತ್ತು ಗಾಢವಾದ ಪೂಜ್ಯಭಕ್ತಿ ಹಾಗೂ ಆತನನ್ನು ಅಸಂತೋಷಪಡಿಸುವ ಹಿತಕರವಾದ ಭೀತಿ” ಎಂದಾಗಿದೆ. ಹೀಗೆ, ದೇವಭಯವು ನಮ್ಮ ಜೀವಿತದ ಎರಡು ಪ್ರಾಮುಖ್ಯ ಅಂಶಗಳ ಮೇಲೆ, ಅಂದರೆ ದೇವರ ಕಡೆಗಿನ ನಮ್ಮ ಮನೋಭಾವ ಹಾಗೂ ಆತನು ದ್ವೇಷಿಸುವಂಥ ನಡತೆಯ ಕಡೆಗಿನ ನಮ್ಮ ಮನೋಭಾವದ ಮೇಲೆ ಪ್ರಭಾವ ಬೀರುತ್ತದೆ. ಈ ಎರಡೂ ಅಂಶಗಳು ತುಂಬ ಪ್ರಾಮುಖ್ಯವಾಗಿವೆ ಹಾಗೂ ನಾವು ತುಂಬ ಜಾಗರೂಕ ಗಮನ ಕೊಡಬೇಕಾದ ವಿಷಯಗಳಾಗಿವೆ ಎಂಬುದು ಸುವ್ಯಕ್ತ. ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೇಳುವಂತೆ, ಪೂಜ್ಯಭಕ್ತಿಯಿಂದ ಕೂಡಿರುವ ಈ ಭಯವು ಕ್ರೈಸ್ತರಿಗೆ, ‘ಆತ್ಮಿಕ ಹಾಗೂ ನೈತಿಕ ವಿಷಯಗಳಲ್ಲಿ ಜೀವಿತವನ್ನು ನಿಯಂತ್ರಿಸುವ ಚಾಲಕಶಕ್ತಿಯಾಗಿದೆ.’

4. ನಮ್ಮ ಸೃಷ್ಟಿಕರ್ತನ ಕುರಿತಾಗಿ ನಾವು ಭಯಾಶ್ಚರ್ಯ ಮತ್ತು ಪೂಜ್ಯಭಕ್ತಿಯ ಭಾವನೆಗಳನ್ನು ಹೇಗೆ ಬೆಳೆಸಿಕೊಳ್ಳಬಹುದು?

4 ನಮ್ಮ ಸೃಷ್ಟಿಕರ್ತನ ಕುರಿತಾಗಿ ಭಯಾಶ್ಚರ್ಯ ಹಾಗೂ ಪೂಜ್ಯಭಕ್ತಿಯ ಭಾವನೆಗಳನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಒಂದು ರಮಣೀಯವಾದ ಭೂದೃಶ್ಯ, ಒಂದು ಭಾವೋತ್ತೇಜಕ ಜಲಪಾತ, ಅಥವಾ ಕಣ್ಮನವನ್ನು ಸೂರೆಗೊಳಿಸುವಂಥ ಸೂರ್ಯಾಸ್ತಮಾನವನ್ನು ನೋಡುವಾಗ ನಾವು ಭಯಾಶ್ಚರ್ಯದಿಂದ ದಂಗಾಗಿಹೋಗುತ್ತೇವೆ. ಇಂಥ ಸೃಷ್ಟಿಕಾರ್ಯಗಳ ಹಿಂದಿರುವ ದೇವರ ಹಸ್ತವನ್ನು ನಾವು ನಂಬಿಕೆಯ ಕಣ್ಣುಗಳಿಂದ ವಿವೇಚಿಸುವಾಗ, ಈ ಭಾವನೆಯು ಇನ್ನೂ ಎತ್ತರಕ್ಕೇರುತ್ತದೆ. ಅಷ್ಟುಮಾತ್ರವಲ್ಲದೆ, ಯೆಹೋವನ ಭಯಚಕಿತಗೊಳಿಸುವಂಥ ಸೃಷ್ಟಿಗೆ ಹೋಲಿಸುವಾಗ ನಾವು ಎಷ್ಟು ಅಲ್ಪವಾಗಿದ್ದೇವೆಂಬುದನ್ನು ರಾಜ ದಾವೀದನಂತೆಯೇ ಗ್ರಹಿಸುತ್ತೇವೆ. “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ​—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” (ಕೀರ್ತನೆ 8:3, 4) ಈ ಗಾಢವಾದ ಭಯಾಶ್ಚರ್ಯವು ಪೂಜ್ಯಭಕ್ತಿಗೆ ನಡೆಸುತ್ತದೆ, ಮತ್ತು ಇದು ಯೆಹೋವನು ನಮಗಾಗಿ ಏನೇನು ಮಾಡಿದ್ದಾನೊ ಅದೆಲ್ಲದ್ದಕ್ಕಾಗಿ ಆತನಿಗೆ ಉಪಕಾರಸ್ತುತಿಯನ್ನು ಸಲ್ಲಿಸುವಂತೆ ನಮ್ಮನ್ನು ಪ್ರೇರಿಸುತ್ತದೆ. ದಾವೀದನು ಹೀಗೂ ಬರೆದನು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.”​—ಕೀರ್ತನೆ 139:14.

5. ನಾವು ಯೆಹೋವನಿಗೆ ಏಕೆ ಭಯಪಡಬೇಕು, ಮತ್ತು ಈ ವಿಷಯದಲ್ಲಿ ನಮಗೆ ಯಾವ ಉತ್ತಮ ಮಾದರಿಯಿದೆ?

5 ಭಯಾಶ್ಚರ್ಯ ಮತ್ತು ಪೂಜ್ಯಭಕ್ತಿಯ ಭಾವನೆಗಳು, ಸೃಷ್ಟಿಕರ್ತನೋಪಾದಿ ದೇವರ ಶಕ್ತಿಗಾಗಿ ಮತ್ತು ವಿಶ್ವದ ನ್ಯಾಯವಂತ ಅಧಿಪತಿಯೋಪಾದಿ ಆತನ ಅಧಿಕಾರಕ್ಕಾಗಿ ಹಿತಕರವಾದ ಮತ್ತು ಗೌರವಪೂರ್ವಕವಾದ ಭಯವನ್ನು ನಮ್ಮಲ್ಲಿ ಹುಟ್ಟಿಸುತ್ತವೆ. ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ ‘ಕಾಡುಮೃಗ ಮತ್ತು ಅದರ ವಿಗ್ರಹದ ಮೇಲೆ ಜಯಹೊಂದಿದವರನ್ನು’ ನೋಡಿದನು. ಇವರು ತಮ್ಮ ಸ್ವರ್ಗೀಯ ಸ್ಥಾನದಲ್ಲಿರುವ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಾಗಿದ್ದಾರೆ. ಅವರು ಹೀಗೆ ಘೋಷಿಸಿದರು: “ಯೆಹೋವ ದೇವರೇ ಸರ್ವಶಕ್ತನೇ, ನಿನ್ನ ಕೃತ್ಯಗಳು ಅಸಾಧಾರಣ ಮತ್ತು ಆಶ್ಚರ್ಯಕರವಾಗಿವೆ. ನಿತ್ಯತೆಯ ಅರಸನೇ, ನಿನ್ನ ಮಾರ್ಗಗಳು ನೀತಿಯವುಗಳೂ, ಸತ್ಯವೂ ಆಗಿವೆ. ಯೆಹೋವನೇ, ನೀನೊಬ್ಬನೇ ನಿಷ್ಠನಾಗಿರುವದರಿಂದ, ನಿನಗೆ ಭಯಪಡದವರು ಮತ್ತು ನಿನ್ನ ನಾಮವನ್ನು ಮಹಿಮೆಪಡಿಸದವರು ಯಾರು?” (ಪ್ರಕಟನೆ 15:2-4, NW) ದೇವರ ಮಹಾವೈಭವಕ್ಕಾಗಿರುವ ಗಾಢವಾದ ಪೂಜ್ಯಭಕ್ತಿಯಿಂದ ಹೊಮ್ಮುವ ದೇವಭಯವು, ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಜೊತೆ ರಾಜರಾಗಿರುವ ಇವರನ್ನು, ಸರ್ವಶ್ರೇಷ್ಠ ಅಧಿಕಾರಿಯೋಪಾದಿ ದೇವರನ್ನು ಸನ್ಮಾನಿಸುವಂತೆ ನಡೆಸುತ್ತದೆ. ಯೆಹೋವನು ಮಾಡಿರುವಂಥದ್ದೆಲ್ಲವನ್ನೂ ಮತ್ತು ಆತನು ಈ ವಿಶ್ವವನ್ನು ನಿಯಂತ್ರಿಸುವ ನೀತಿವಂತ ವಿಧವನ್ನು ಪರಿಗಣಿಸುವಾಗ, ಆತನಿಗೆ ಭಯಪಡಲು ನಮಗೆ ಸಾಕಷ್ಟು ಕಾರಣ ಸಿಗುತ್ತದಲ್ಲವೊ?​—ಕೀರ್ತನೆ 2:​11; ಯೆರೆಮೀಯ 10:7.

6. ಯೆಹೋವನನ್ನು ಅಪ್ರಸನ್ನಗೊಳಿಸುವ ಹಿತಕರವಾದ ಭೀತಿ ನಮಗೇಕೆ ಇರಬೇಕು?

6 ಆದರೆ ಭಯಾಶ್ಚರ್ಯ ಮತ್ತು ಪೂಜ್ಯಭಕ್ತಿಯ ಜೊತೆಗೆ, ದೇವರನ್ನು ಅಪ್ರಸನ್ನಗೊಳಿಸುವ ಅಥವಾ ಆತನಿಗೆ ಅವಿಧೇಯರಾಗುವ ಹಿತಕರವಾದ ಭೀತಿಯೂ ದೇವಭಯದಲ್ಲಿ ಸೇರಿರಬೇಕು. ಏಕೆ? ಏಕೆಂದರೆ ಯೆಹೋವನು “ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಆಗಿದ್ದರೂ, ಆತನು “[ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು” ಆಗಿದ್ದಾನೆಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. (ವಿಮೋಚನಕಾಂಡ 34:​6, 7) ಯೆಹೋವನು ಪ್ರೀತಿಪರನೂ ಕರುಣಾಮಯಿಯೂ ಆಗಿರುವುದಾದರೂ, ಆತನು ಅನೀತಿ ಮತ್ತು ಉದ್ದೇಶಪೂರ್ವಕ ತಪ್ಪುಮಾಡುವಿಕೆಯನ್ನು ಸಹಿಸುವವನಲ್ಲ. (ಕೀರ್ತನೆ 5:​4, 5; ಹಬಕ್ಕೂಕ 1:13) ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಬೇಕುಬೇಕೆಂದೇ ಮತ್ತು ಪಶ್ಚಾತ್ತಾಪವಿಲ್ಲದೆ ಮಾಡುವವರು ಹಾಗೂ ಆತನಿಗೆ ವಿರೋಧವಾಗಿ ನಿಂತುಕೊಳ್ಳುವವರು, ಎಂದೆಂದಿಗೂ ದಂಡನೆಯಿಂದ ತಪ್ಪಿಸಿಕೊಳ್ಳಲಾರರು. ಅಪೊಸ್ತಲ ಪೌಲನು ಹೇಳಿದಂತೆ, “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿ ಬೀಳುವದು ಭಯಂಕರವಾದದ್ದು.” ಅಂಥ ಪರಿಸ್ಥಿತಿಯಲ್ಲಿ ಬೀಳುವ ಬಗ್ಗೆ ಹಿತಕರವಾದ ಭೀತಿಯಿರುವುದು, ಕಟ್ಟಕಡೆಯಲ್ಲಿ ನಮಗೇ ಒಂದು ಸಂರಕ್ಷಣೆಯಾಗಿದೆ.​—ಇಬ್ರಿಯ 10:31.

‘ಆತನಿಗೆ ಅಂಟಿಕೊಂಡಿರಬೇಕು’

7. ಯೆಹೋವನ ರಕ್ಷಣಾ ಶಕ್ತಿಯಲ್ಲಿ ಭರವಸೆಯಿಡಲು ನಮಗೆ ಯಾವ ಕಾರಣಗಳಿವೆ?

7 ಯೆಹೋವನಲ್ಲಿ ಭರವಸೆ ಮತ್ತು ದೃಢವಿಶ್ವಾಸವಿರಲಿಕ್ಕಾಗಿ, ಮೊದಲು ದೇವರ ಪೂಜ್ಯಭಕ್ತಿಯ ಭಯ ಮತ್ತು ಆತನ ಭಯಚಕಿತಗೊಳಿಸುವ ಶಕ್ತಿಯ ಸೂಕ್ಷ್ಮ ಅರಿವು ನಮಗೆ ಇರಬೇಕು. ತನ್ನ ತಂದೆಯು ಹತ್ತಿರದಲ್ಲಿರುವಾಗ ಒಬ್ಬ ಎಳೆಯ ಮಗುವಿಗೆ ಹೇಗೆ ತುಂಬ ಸುರಕ್ಷಿತಭಾವನೆಯಿರುತ್ತದೋ ಹಾಗೆಯೇ, ಯೆಹೋವನ ಮಾರ್ಗದರ್ಶಕ ಹಸ್ತದ ಕೆಳಗೆ ನಮಗೆ ತುಂಬ ಭದ್ರವಾದ ಹಾಗೂ ಭರವಸೆಯ ಭಾವನೆಯಿರುತ್ತದೆ. ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರಗೆ ತಂದಾಗ, ಅವರ ಪ್ರತಿಕ್ರಿಯೆ ಏನಾಗಿತ್ತೆಂಬುದನ್ನು ಗಮನಿಸಿರಿ: “ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.” (ವಿಮೋಚನಕಾಂಡ 14:31) ಎಲೀಷನ ಅನುಭವವು ಸಹ, ‘ಭಯಭಕ್ತಿಯುಳ್ಳವರ ಸುತ್ತಲೂ ಯೆಹೋವನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ’ ಎಂಬ ವಾಸ್ತವಾಂಶಕ್ಕೆ ಸಾಕ್ಷ್ಯವಾಗಿದೆ. (ಕೀರ್ತನೆ 34:7; 2 ಅರಸುಗಳು 6:​15-17) ಯೆಹೋವನ ಜನರ ಆಧುನಿಕ ದಿನದ ಇತಿಹಾಸ ಮತ್ತು ಬಹುಶಃ ನಮ್ಮ ವೈಯಕ್ತಿಕ ಅನುಭವವೇ, ತನ್ನನ್ನು ಸೇವಿಸುವವರ ಪರವಾಗಿ ದೇವರು ತನ್ನ ಶಕ್ತಿಯನ್ನು ತೋರಿಸುತ್ತಾನೆಂಬುದನ್ನು ದೃಢೀಕರಿಸುತ್ತದೆ. (2 ಪೂರ್ವಕಾಲವೃತ್ತಾಂತ 16:9) “ಯೆಹೋವನಿಗೆ ಭಯಪಡುವದರಿಂದ ಕೇವಲ ನಿರ್ಭಯ”ವಿದೆ ಎಂಬುದನ್ನು ನಾವು ಹೀಗೆ ಗ್ರಹಿಸಲಾರಂಭಿಸುತ್ತೇವೆ.​—ಜ್ಞಾನೋಕ್ತಿ 14:26.

8. (ಎ) ದೇವಭಯವು ನಾವು ಆತನ ಮಾರ್ಗಗಳಲ್ಲಿ ನಡೆಯುವಂತೆ ಏಕೆ ಪ್ರೇರಿಸುತ್ತದೆ? (ಬಿ) ನಾವು ಯೆಹೋವನಿಗೆ ಹೇಗೆ ‘ಅಂಟಿಕೊಳ್ಳಬೇಕು’ ಎಂಬುದನ್ನು ವಿವರಿಸಿರಿ.

8 ದೇವರ ಹಿತಕರವಾದ ಭಯವು, ಆತನಲ್ಲಿ ಭರವಸೆ ಮತ್ತು ದೃಢವಿಶ್ವಾಸವನ್ನು ಹುಟ್ಟಿಸುತ್ತದೆ ಮಾತ್ರವಲ್ಲ, ನಾವು ಆತನ ಮಾರ್ಗಗಳಲ್ಲಿ ನಡೆಯುವಂತೆ ನಮ್ಮನ್ನು ಪ್ರಚೋದಿಸುತ್ತದೆ ಕೂಡ. ಸೊಲೊಮೋನನು ದೇವಾಲಯವನ್ನು ಉದ್ಘಾಟಿಸಿದಾಗ, ಅವನು ಯೆಹೋವನಿಗೆ ಹೀಗೆ ಪ್ರಾರ್ಥಿಸಿದನು: “ಆಗ ನಮ್ಮ ಪಿತೃಗಳಿಗೆ ನೀನು ಕೊಟ್ಟ ದೇಶದಲ್ಲಿ ಅವರು [ಇಸ್ರಾಯೇಲ್‌ ಜನಾಂಗವು] ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಿನ್ನ ಮಾರ್ಗಗಳಲ್ಲಿ ನಡೆಯುವರು.” (2 ಪೂರ್ವಕಾಲವೃತ್ತಾಂತ 6:31) ಇದಕ್ಕಿಂತಲೂ ಮುಂಚೆ ಮೋಶೆ ಇಸ್ರಾಯೇಲ್ಯರಿಗೆ ಹೀಗೆ ಉತ್ತೇಜಿಸಿದನು: “ಆತನು ಹೇಳುವ ಮಾರ್ಗದಲ್ಲೇ ನೀವು ನಡೆದು ಆತನಲ್ಲಿಯೇ ಭಯಭಕ್ತಿಯುಳ್ಳವರಾಗಿ ಆತನ ಆಜ್ಞೆಗಳನ್ನೇ ಅನುಸರಿಸಿ ಆತನಿಗೇ ವಿಧೇಯರಾಗಿ ಆತನನ್ನೇ ಸೇವಿಸುತ್ತಾ ಹೊಂದಿಕೊಂಡಿರಬೇಕು [“ಅಂಟಿಕೊಂಡಿರಬೇಕು,” NW].” (ಧರ್ಮೋಪದೇಶಕಾಂಡ 13:4) ಈ ವಚನಗಳು ಸ್ಪಷ್ಟವಾಗಿ ತೋರಿಸುವಂತೆ, ಯೆಹೋವನಲ್ಲಿ ಭರವಸೆ ಮತ್ತು ವಿಶ್ವಾಸವನ್ನಿಡುವುದರಿಂದ, ದೇವರ ಮಾರ್ಗಗಳಲ್ಲಿ ನಡೆಯುವ ಮತ್ತು ಆತನಿಗೆ ‘ಅಂಟಿಕೊಳ್ಳುವ’ ಅಪೇಕ್ಷೆಯು ಹುಟ್ಟುತ್ತದೆ. ಪೂರ್ಣ ಭರವಸೆ ಮತ್ತು ವಿಶ್ವಾಸವುಳ್ಳ ತಂದೆಗೆ ಅಕ್ಷರಶಃ ಅಂಟಿಕೊಂಡಿರುವ ಒಬ್ಬ ಎಳೆಯ ಮಗುವಿನಂತೆ, ದೇವಭಯವು ನಾವು ಯೆಹೋವನಿಗೆ ವಿಧೇಯರಾಗುವಂತೆ, ಆತನನ್ನು ಸೇವಿಸುವಂತೆ, ಮತ್ತು ಆತನಿಗೆ ಅಂಟಿಕೊಂಡಿರುವಂತೆ ನಮ್ಮನ್ನು ನಡೆಸುತ್ತದೆ.​—ಕೀರ್ತನೆ 63:8; ಯೆಶಾಯ 41:13.

ದೇವರನ್ನು ಪ್ರೀತಿಸುವುದೆಂದರೆ ಆತನಿಗೆ ಭಯಪಡುವುದೇ

9. ದೇವರ ಪ್ರೀತಿ ಮತ್ತು ದೇವಭಯದ ನಡುವೆ ಯಾವ ಸಂಬಂಧವಿದೆ?

9 ಶಾಸ್ತ್ರೀಯ ದೃಷ್ಟಿಕೋನದಿಂದ ನೋಡುವುದಾದರೆ, ದೇವರಿಗೆ ಭಯಪಡುವುದು ಆತನನ್ನು ಪ್ರೀತಿಸುವುದನ್ನು ಅಸಾಧ್ಯಗೊಳಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಇಸ್ರಾಯೇಲ್ಯರಿಗೆ, “ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೇ ನಡೆಯುತ್ತಾ ಆತನನ್ನು ಪ್ರೀತಿಸುತ್ತಾ” ಇರುವಂತೆ ಹೇಳಲಾಯಿತು. (ಧರ್ಮೋಪದೇಶಕಾಂಡ 10:12) ಹೀಗೆ ದೇವಭಯ ಮತ್ತು ದೇವಪ್ರೀತಿಯ ಮಧ್ಯೆ ನಿಕಟ ಸಂಬಂಧವಿದೆ. ದೇವಭಯವು, ನಾವು ಆತನ ಮಾರ್ಗಗಳಲ್ಲಿ ನಡೆಯುವಂತೆ ನಮ್ಮನ್ನು ಪ್ರಚೋದಿಸುತ್ತದೆ ಮತ್ತು ಇದು ನಾವು ಆತನನ್ನು ಪ್ರೀತಿಸುತ್ತೇವೆಂಬ ರುಜುವಾತನ್ನು ಕೊಡುತ್ತದೆ. (1 ಯೋಹಾನ 5:3) ಇದು ತರ್ಕಸಂಗತವಾದ ವಿಷಯವಾಗಿದೆ, ಯಾಕೆಂದರೆ ನಾವು ಯಾರಾದರೊಬ್ಬರನ್ನು ಪ್ರೀತಿಸುತ್ತಿರುವುದಾದರೆ, ಆ ವ್ಯಕ್ತಿಯನ್ನು ನೋಯಿಸಲು ಹೆದರುವುದು ಸಹಜ. ಇಸ್ರಾಯೇಲ್ಯರು ಅರಣ್ಯದಲ್ಲಿ ದಂಗೆಕೋರತನವನ್ನು ಮಾಡುವ ಮೂಲಕ ಯೆಹೋವನನ್ನು ನೋಯಿಸಿದರು. ನಾವಾದರೊ ನಮ್ಮ ಸ್ವರ್ಗೀಯ ತಂದೆಗೆ ಅಂಥ ದುಃಖವನ್ನು ತರುವ ಯಾವುದೇ ವಿಷಯವನ್ನು ಖಂಡಿತವಾಗಿಯೂ ಮಾಡಲು ಬಯಸೆವು. (ಕೀರ್ತನೆ 78:​40, 41) ಆದರೆ ಇನ್ನೊಂದು ಕಡೆ, ‘ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಯೆಹೋವನು ಮೆಚ್ಚುವ’ ಕಾರಣದಿಂದ, ನಮ್ಮ ವಿಧೇಯತೆ ಮತ್ತು ನಂಬಿಗಸ್ತಿಕೆಯು ಆತನ ಮನಸ್ಸನ್ನು ಸಂತೋಷಪಡಿಸುತ್ತದೆ. (ಕೀರ್ತನೆ 147:11; ಜ್ಞಾನೋಕ್ತಿ 27:11) ದೇವರ ಪ್ರೀತಿಯು ನಾವು ಆತನನ್ನು ಸಂತೋಷಪಡಿಸುವಂತೆ ಪ್ರಚೋದಿಸುತ್ತದೆ, ಮತ್ತು ದೇವಭಯವು ನಾವು ಆತನನ್ನು ನೋಯಿಸುವುದರಿಂದ ತಡೆದುಹಿಡಿಯುತ್ತದೆ. ಇವೆರಡೂ ಪರಸ್ಪರ ವಿರುದ್ಧ ಗುಣಗಳಾಗಿರದೆ ಸಂಪೂರಕ ಗುಣಗಳಾಗಿವೆ.

10. ಯೆಹೋವನಿಗೆ ಭಯಪಡುವುದರಲ್ಲಿ ಯೇಸು ಹರ್ಷಿಸಿದನೆಂಬುದನ್ನು ಅವನು ಹೇಗೆ ತೋರಿಸಿದನು?

10 ಯೇಸು ಕ್ರಿಸ್ತನ ಜೀವನ ಕ್ರಮವು, ನಾವು ದೇವರನ್ನು ಪ್ರೀತಿಸುತ್ತಿರುವಾಗಲೇ ಆತನಿಗೆ ಭಯಪಡುವುದೂ ಹೇಗೆಂಬುದನ್ನು ದೃಷ್ಟಾಂತಿಸುತ್ತದೆ. ಪ್ರವಾದಿಯಾದ ಯೆಶಾಯನು ಯೇಸುವಿನ ಕುರಿತಾಗಿ ಬರೆದುದು: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು.” (ಯೆಶಾಯ 11:2, 3) ಈ ಪ್ರವಾದನೆಗನುಸಾರ, ದೇವರಾತ್ಮವು ಯೇಸುವನ್ನು ತನ್ನ ಸ್ವರ್ಗೀಯ ತಂದೆಗೆ ಭಯಪಡುವಂತೆ ಪ್ರಚೋದಿಸಿತು. ಅಷ್ಟುಮಾತ್ರವಲ್ಲದೆ, ಈ ಭಯವು ನಿರ್ಬಂಧದಾಯಕವಾಗಿರುವ ಬದಲು, ತೃಪ್ತಿಯ ಮೂಲವಾಗಿತ್ತೆಂಬುದನ್ನು ನಾವು ಗಮನಿಸುತ್ತೇವೆ. ಅತಿ ಕಷ್ಟಕರವಾದ ಪರಿಸ್ಥಿತಿಗಳಲ್ಲೂ ದೇವರ ಚಿತ್ತವನ್ನು ಮಾಡುವುದರಲ್ಲಿ ಮತ್ತು ಆತನನ್ನು ಸಂತೋಷಪಡಿಸುವುದರಲ್ಲಿ ಯೇಸು ಹರ್ಷಿಸಿದನು. ಯಾತನಾ ಕಂಭದ ಮೇಲೆ ಇನ್ನೇನು ಹತಿಸಲ್ಪಡಲಿದ್ದಾಗ ಅವನು ಯೆಹೋವನಿಗೆ ಹೇಳಿದ್ದು: “ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” (ಮತ್ತಾಯ 26:39) ಈ ದೇವಭಯದಿಂದಾಗಿ, ಯೆಹೋವನು ತನ್ನ ಪುತ್ರನ ಪ್ರಾರ್ಥನೆಗಳಿಗೆ ಕಿವಿಗೊಟ್ಟು, ಅವನನ್ನು ಬಲಪಡಿಸಿ, ಮರಣದ ಹಿಡಿತದಿಂದ ಬಿಡಿಸಿದನು.​—ಇಬ್ರಿಯ 5:7.

ಯೆಹೋವನಿಗೆ ಭಯಪಡಲು ಕಲಿಯುವುದು

11, 12. (ಎ) ನಾವು ಏಕೆ ದೇವರಿಗೆ ಭಯಪಡಲು ಕಲಿಯಬೇಕು? (ಬಿ) ನಾವು ಯೆಹೋವನಿಗೆ ಭಯಪಡುವಂತೆ ಯೇಸು ಹೇಗೆ ಕಲಿಸುತ್ತಾನೆ?

11 ನಿಸರ್ಗದ ಶಕ್ತಿ ಮತ್ತು ಘನಗಾಂಭೀರ್ಯವನ್ನು ನೋಡುವಾಗ, ತನ್ನಷ್ಟಕ್ಕೇ ನಮ್ಮಲ್ಲಿ ಭಯವಿಸ್ಮಯವು ಹುಟ್ಟಿಕೊಳ್ಳುತ್ತದೆ. ಆದರೆ ದೇವಭಯವು ಹಾಗೆ ಉಂಟಾಗುವುದಿಲ್ಲ. ಆದುದರಿಂದ, ಮಹಾ ದಾವೀದನಾಗಿರುವ ಯೇಸು ಕ್ರಿಸ್ತನು ಪ್ರವಾದನಾತ್ಮಕವಾಗಿ ನಮಗೆ ಈ ಆಮಂತ್ರಣವನ್ನು ಕೊಡುತ್ತಾನೆ: “ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು.” (ಕೀರ್ತನೆ 34:11) ಯೆಹೋವನಿಗೆ ಭಯಪಡುವುದನ್ನು ನಾವು ಯೇಸುವಿನಿಂದ ಹೇಗೆ ಕಲಿಯಬಲ್ಲೆವು?

12 ನಮ್ಮ ಸ್ವರ್ಗೀಯ ತಂದೆಯ ಅತ್ಯದ್ಭುತ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುವ ಮೂಲಕ ಯೆಹೋವನಿಗೆ ಭಯಪಡುವುದನ್ನು ಯೇಸು ಕಲಿಸುತ್ತಾನೆ. (ಯೋಹಾನ 1:18) ದೇವರು ಯೋಚಿಸುವ ರೀತಿ ಮತ್ತು ಇತರರೊಂದಿಗೆ ವ್ಯವಹರಿಸುವ ರೀತಿಯು ಯೇಸುವಿನ ಸ್ವಂತ ಮಾದರಿಯಿಂದ ಪ್ರಕಟವಾಗುತ್ತದೆ, ಯಾಕೆಂದರೆ ಯೇಸು ತನ್ನ ತಂದೆಯ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. (ಯೋಹಾನ 14:​9, 10) ಅಲ್ಲದೆ, ನಮ್ಮ ಪಾಪಗಳ ಕ್ಷಮೆಗಾಗಿ ಪ್ರಾರ್ಥಿಸುವಾಗ ನಾವು ಯೇಸುವಿನ ಯಜ್ಞದ ಮುಖಾಂತರ ಯೆಹೋವನ ಬಳಿ ಹೋಗಬಹುದು. ದೇವರ ಕರುಣೆಯ ಈ ಎದ್ದುಕಾಣುವ ಅಭಿವ್ಯಕ್ತಿಯೇ, ನಾವು ಆತನಿಗೆ ಭಯಪಡಲು ಒಂದು ಬಲವಾದ ಕಾರಣವಾಗಿದೆ. ಕೀರ್ತನೆಗಾರನು ಹೀಗೆ ಬರೆದನು: “ನೀನು ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.”​—ಕೀರ್ತನೆ 130:4.

13. ಜ್ಞಾನೋಕ್ತಿಗಳ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಯಾವ ಕ್ರಮಗಳು ಯೆಹೋವನಿಗೆ ಭಯಪಡಲು ನಮಗೆ ಸಹಾಯಮಾಡುವವು?

13 ದೈವಿಕ ಭಯವನ್ನು ಬೆಳೆಸಿಕೊಳ್ಳಲು ನಮ್ಮನ್ನು ಶಕ್ತಗೊಳಿಸುವ ಕ್ರಮಗಳ ಒಂದು ಸರಣಿಯನ್ನೇ ಜ್ಞಾನೋಕ್ತಿಗಳ ಪುಸ್ತಕವು ರೇಖಿಸುತ್ತದೆ. “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು . . . ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.” (ಜ್ಞಾನೋಕ್ತಿ 2:1-5) ಆದುದರಿಂದ, ದೇವರಿಗೆ ಭಯಪಡಬೇಕಾದರೆ ನಾವು ಆತನ ವಾಕ್ಯವನ್ನು ಅಭ್ಯಾಸಮಾಡಬೇಕು, ಅದರ ಉಪದೇಶವನ್ನು ಅರ್ಥಮಾಡಿಕೊಳ್ಳಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕು, ಮತ್ತು ಅನಂತರ ಅದರ ಸಲಹೆಗೆ ಜಾಗರೂಕತೆಯಿಂದ ಗಮನ ಕೊಡಬೇಕು.

14. ಇಸ್ರಾಯೇಲಿನ ರಾಜರುಗಳಿಗೆ ಕೊಡಲ್ಪಟ್ಟಿದ್ದ ಸಲಹೆಯನ್ನು ನಾವು ಹೇಗೆ ಅನುಸರಿಸಬಹುದು?

14 ಪುರಾತನ ಇಸ್ರಾಯೇಲಿನ ಪ್ರತಿಯೊಬ್ಬ ರಾಜನಿಗೆ, ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಮಾಡಿಸಿಕೊಂಡು, ‘ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನು . . . ಅನುಸರಿಸುವದಕ್ಕೆ . . . ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರುವಂತೆ’ ಅಪ್ಪಣೆಯನ್ನು ಕೊಡಲಾಯಿತು. (ಧರ್ಮೋಪದೇಶಕಾಂಡ 17:​18, 19) ನಾವು ಯೆಹೋವನಿಗೆ ಭಯಪಡಲು ಕಲಿಯಬೇಕಾದರೆ, ಬೈಬಲ್‌ ವಾಚನ ಮತ್ತು ಅಧ್ಯಯನವು ನಮಗೂ ಅಷ್ಟೇ ಪ್ರಾಮುಖ್ಯವಾಗಿದೆ. ಬೈಬಲ್‌ ಮೂಲತತ್ತ್ವಗಳನ್ನು ನಮ್ಮ ಜೀವಿತದಲ್ಲಿ ನಾವು ಅನ್ವಯಿಸುವಾಗ, ನಾವು ಕ್ರಮೇಣವಾಗಿ ದೈವಿಕ ವಿವೇಕ ಮತ್ತು ಜ್ಞಾನವನ್ನು ಪಡೆದುಕೊಳ್ಳುತ್ತೇವೆ. ನಾವು ‘ಯೆಹೋವನ ಭಯವನ್ನು ಅರಿತು’ಕೊಳ್ಳಲಾರಂಭಿಸುತ್ತೇವೆ, ಯಾಕಂದರೆ ಅದು ನಮ್ಮ ಜೀವಿತದಲ್ಲಿ ಉಂಟುಮಾಡುವ ಒಳ್ಳೆಯ ಪರಿಣಾಮಗಳನ್ನು ನಾವು ನೋಡಿರುತ್ತೇವೆ ಮತ್ತು ದೇವರೊಂದಿಗಿನ ನಮ್ಮ ಸಂಬಂಧವನ್ನು ನಾವು ಅಮೂಲ್ಯವೆಂದೆಣಿಸುತ್ತೇವೆ. ಇನ್ನೂ ಹೆಚ್ಚಾಗಿ, ಜೊತೆ ವಿಶ್ವಾಸಿಗಳೊಂದಿಗೆ ಕ್ರಮವಾಗಿ ಕೂಡಿಬರುವ ಮೂಲಕ ಆಬಾಲವೃದ್ಧರೆಲ್ಲರೂ ದೈವಿಕ ಬೋಧನೆಗೆ ಕಿವಿಗೊಡಬಲ್ಲರು, ದೇವರಿಗೆ ಭಯಪಡಲು ಕಲಿಯಬಲ್ಲರು ಮತ್ತು ಆತನ ಮಾರ್ಗಗಳಲ್ಲಿ ನಡೆಯಬಲ್ಲರು.​—ಧರ್ಮೋಪದೇಶಕಾಂಡ 31:12.

ಯೆಹೋವನಿಗೆ ಭಯಪಡುವವರೆಲ್ಲರೂ ಸಂತೋಷಿತರು

15. ದೇವಭಯವು, ನಾವು ಆತನಿಗೆ ಸಲ್ಲಿಸುವ ಆರಾಧನೆಯೊಂದಿಗೆ ಹೇಗೆ ಸಂಬಂಧಿಸುತ್ತದೆ?

15 ಈ ಮೊದಲೇ ಹೇಳಿರುವ ವಿಷಯಗಳಿಂದ, ದೇವಭಯವು ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಒಂದು ಹಿತಕರವಾದ ಮನೋಭಾವವಾಗಿದೆ ಎಂಬುದನ್ನು ನಾವು ನೋಡಬಲ್ಲೆವು. ಯಾಕಂದರೆ ಅದು ನಾವು ಯೆಹೋವನಿಗೆ ಸಲ್ಲಿಸುವ ಆರಾಧನೆಯ ಮೂಲಭೂತ ಅಂಗವಾಗಿದೆ ಎಂಬುದನ್ನು ನಾವು ನೋಡಬಲ್ಲೆವು. ದೇವಭಯವು, ನಾವು ಆತನಲ್ಲಿ ಸಂಪೂರ್ಣವಾಗಿ ಭರವಸೆಯಿಡುವಂತೆ, ಆತನ ಮಾರ್ಗಗಳಲ್ಲಿ ನಡೆಯುವಂತೆ ಮತ್ತು ಆತನಿಗೆ ಅಂಟಿಕೊಂಡಿರುವಂತೆ ಮಾಡುತ್ತದೆ. ಯೇಸು ಕ್ರಿಸ್ತನ ವಿಷಯದಲ್ಲಿ ಸತ್ಯವಾಗಿದ್ದಂತೆ, ದೇವಭಯವು ನಮ್ಮ ಸಮರ್ಪಣೆಯ ಪ್ರತಿಜ್ಞೆಯನ್ನು ಈಗಲೂ ನಿತ್ಯತೆಗೂ ಪೂರೈಸುವಂತೆ ನಮ್ಮನ್ನೂ ನಡೆಸಬಲ್ಲದು.

16. ನಾವು ಆತನಿಗೆ ಭಯಪಡುವಂತೆ ಯೆಹೋವನು ಏಕೆ ಉತ್ತೇಜಿಸುತ್ತಾನೆ?

16 ದೈವಿಕ ಭಯವು ಎಂದಿಗೂ ವಿಕಾರವಾದದ್ದಲ್ಲ ಇಲ್ಲವೇ ಅಯೋಗ್ಯವಾಗಿ ನಿರ್ಬಂಧಿಸುವಂಥದ್ದೂ ಆಗಿರುವುದಿಲ್ಲ. “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು [“ಸಂತೋಷಿತನು,” NW]” ಎಂದು ಬೈಬಲ್‌ ನಮಗೆ ಆಶ್ವಾಸನೆ ಕೊಡುತ್ತದೆ. (ಕೀರ್ತನೆ 128:1) ನಾವು ಆತನಿಗೆ ಭಯಪಡುವಂತೆ ಯೆಹೋವನು ಉತ್ತೇಜಿಸುತ್ತಾನೆ, ಯಾಕೆಂದರೆ ಈ ಗುಣವು ನಮ್ಮನ್ನು ಸಂರಕ್ಷಿಸಬಲ್ಲದೆಂದು ಆತನಿಗೆ ತಿಳಿದಿದೆ. ಆತನು ಮೋಶೆಗೆ ಹೇಳಿದ ಮಾತುಗಳಲ್ಲಿ ಆತನ ಪ್ರೀತಿಪರ ಚಿಂತೆಯನ್ನು ನಾವು ಗಮನಿಸಬಲ್ಲೆವು: “ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು ಯಾವಾಗಲೂ ಅವರಲ್ಲಿ ಇದ್ದರೆ ಎಷ್ಟೋ ಮೇಲು; ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವದು.”​—ಧರ್ಮೋಪದೇಶಕಾಂಡ 5:29.

17. (ಎ) ದೇವರಿಗೆ ಭಯಪಡುವುದರಿಂದ ನಮಗೆ ಯಾವ ಪ್ರಯೋಜನಗಳು ಸಿಗುವವು? (ಬಿ) ಮುಂದಿನ ಲೇಖನದಲ್ಲಿ ದೇವಭಯದ ಯಾವ ಅಂಶಗಳನ್ನು ಪರಿಗಣಿಸಲಾಗುವುದು?

17 ತದ್ರೀತಿಯಲ್ಲಿ ಯೆಹೋವನಿಗೆ ಭಯಪಡುವಂಥ ಒಂದು ಹೃದಯವನ್ನು ನಾವು ಬೆಳೆಸಿಕೊಳ್ಳುವಲ್ಲಿ, ನಮಗೆ ಒಳಿತಾಗುವುದು. ಯಾವ ರೀತಿಯಲ್ಲಿ? ಎಲ್ಲಕ್ಕಿಂತಲೂ ಮೊದಲಾಗಿ, ಅಂಥ ಮನೋಭಾವವು ದೇವರನ್ನು ಸಂತೋಷಪಡಿಸುವುದು ಮತ್ತು ನಮ್ಮನ್ನು ಆತನ ಸಮೀಪಕ್ಕೆ ತರುವುದು. ಆತನು “ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ” ಎಂದು ದಾವೀದನಿಗೆ ತನ್ನ ವೈಯಕ್ತಿಕ ಅನುಭವದಿಂದ ತಿಳಿದಿತ್ತು. (ಕೀರ್ತನೆ 145:19) ಎರಡನೆಯದಾಗಿ, ದೈವಿಕ ಭಯವು ನಮಗೆ ಪ್ರಯೋಜನ ತರುವುದು; ಯಾಕೆಂದರೆ ಕೆಟ್ಟದ್ದರ ಕಡೆಗಿನ ನಮ್ಮ ಮನೋಭಾವದ ಮೇಲೆ ಅದು ಪ್ರಭಾವ ಬೀರುವುದು. (ಜ್ಞಾನೋಕ್ತಿ 3:7) ಈ ಭಯವು ಆತ್ಮಿಕ ಅಪಾಯದಿಂದ ನಮ್ಮನ್ನು ಹೇಗೆ ಕಾಪಾಡುವುದೆಂಬುದನ್ನು ಮುಂದಿನ ಲೇಖನವು ಪರಿಶೀಲಿಸುವುದು, ಮತ್ತು ದೇವರಿಗೆ ಭಯಪಟ್ಟು ಕೆಟ್ಟದ್ದರಿಂದ ದೂರಸರಿದ ವ್ಯಕ್ತಿಗಳ ಶಾಸ್ತ್ರೀಯ ಮಾದರಿಗಳನ್ನು ಅದು ಪುನರ್ವಿಮರ್ಶಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 1 ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು, 1948ರ ಡಿಸೆಂಬರ್‌ 10ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ವಿಧಿವತ್ತಾಗಿ ಅನುಮೋದಿಸಿತು.

ಮುಂದಿನ ಪ್ರಶ್ನೆಗಳನ್ನು ಉತ್ತರಿಸಬಲ್ಲಿರೊ?

• ದೇವಭಯ ಎಂದರೇನು, ಮತ್ತು ಅದು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ?

• ದೇವರಿಗೆ ಭಯಪಡುವುದು ಮತ್ತು ದೇವರೊಂದಿಗೆ ನಡೆಯುವುದರ ನಡುವೆ ಯಾವ ಸಂಬಂಧವಿದೆ?

• ಯೇಸುವಿನ ಮಾದರಿಯು, ದೇವಭಯವು ಆತನ ಪ್ರೀತಿಯೊಂದಿಗೆ ಸಂಬಂಧವುಳ್ಳದ್ದಾಗಿದೆ ಎಂಬುದನ್ನು ಹೇಗೆ ತೋರಿಸುತ್ತದೆ?

• ಯೆಹೋವನಿಗೆ ಭಯಪಡುವ ಒಂದು ಹೃದಯವನ್ನು ನಾವು ಯಾವ ವಿಧಗಳಲ್ಲಿ ಬೆಳೆಸಿಕೊಳ್ಳಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ಇಸ್ರಾಯೇಲ್ಯ ರಾಜರು ಧರ್ಮಶಾಸ್ತ್ರದ ವೈಯಕ್ತಿಕ ಪ್ರತಿಯನ್ನು ಮಾಡಿಸಿಕೊಂಡು, ಅದನ್ನು ದಿನಾಲೂ ಓದುವಂತೆ ಆಜ್ಞಾಪಿಸಲ್ಪಟ್ಟಿದ್ದರು

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ಭಯವು, ಒಬ್ಬ ಮಗನು ತಂದೆಯಲ್ಲಿ ಭರವಸೆಯಿಡುವಂತೆಯೇ ನಾವು ಆತನಲ್ಲಿ ಭರವಸೆಯಿಡುವಂತೆ ಮಾಡುತ್ತದೆ

[ಪುಟ 15ರಲ್ಲಿರುವ ಚಿತ್ರ ಕೃಪೆ]

ನಕ್ಷತ್ರಗಳು: Photo by Malin, © IAC/RGO 1991