ಯೆಹೋವನ ಆಮಂತ್ರಣಗಳನ್ನು ಸ್ವೀಕರಿಸುವುದು ಪ್ರತಿಫಲಗಳನ್ನು ತರುತ್ತದೆ
ಜೀವನ ಕಥೆ
ಯೆಹೋವನ ಆಮಂತ್ರಣಗಳನ್ನು ಸ್ವೀಕರಿಸುವುದು ಪ್ರತಿಫಲಗಳನ್ನು ತರುತ್ತದೆ
ಮಾರೀಅ ದೊ ಸೇವು ಸಾನಾರ್ಡೀ ಅವರು ಹೇಳಿದಂತೆ
“ತಾನೇನು ಮಾಡುತ್ತಿದ್ದೇನೆ ಎಂಬುದು ಯೆಹೋವನಿಗೆ ಗೊತ್ತಿದೆ. ಆತನು ನಿನಗೆ ಆಮಂತ್ರಣವನ್ನು ಕಳುಹಿಸಿರುವುದಾದರೆ, ನೀನು ಅದನ್ನು ಖಂಡಿತವಾಗಿಯೂ ದೀನಭಾವದಿಂದ ಸ್ವೀಕರಿಸಬೇಕು.” ಸುಮಾರು 45 ವರ್ಷಗಳ ಮುಂಚೆ ನನ್ನ ತಂದೆಯು ನುಡಿದ ಈ ಮಾತುಗಳು, ಒಬ್ಬ ಪೂರ್ಣ ಸಮಯದ ಶುಶ್ರೂಷಕಿಯೋಪಾದಿ ಸೇವೆಮಾಡಲಿಕ್ಕಾಗಿ ಯೆಹೋವನ ಸಂಸ್ಥೆಯಿಂದ ನಾನು ಪಡೆದುಕೊಂಡ ಮೊದಲ ಆಮಂತ್ರಣವನ್ನು ಸ್ವೀಕರಿಸುವಂತೆ ನನಗೆ ಸಹಾಯಮಾಡಿದವು. ಈಗಲೂ ನಾನು ನನ್ನ ತಂದೆಯ ಬುದ್ಧಿವಾದಕ್ಕಾಗಿ ಕೃತಜ್ಞಳಾಗಿದ್ದೇನೆ. ಏಕೆಂದರೆ ಅಂತಹ ಆಮಂತ್ರಣಗಳನ್ನು ಸ್ವೀಕರಿಸುವುದು ನನಗೆ ಸಮೃದ್ಧವಾದ ಪ್ರತಿಫಲಗಳನ್ನು ತಂದಿದೆ.
ಇಸವಿ 1928ರಲ್ಲಿ, ತಂದೆಯವರು ಕಾವಲಿನಬುರುಜು ಪತ್ರಿಕೆಗೆ ಚಂದಾಮಾಡಿದರು ಮತ್ತು ಬೈಬಲಿನಲ್ಲಿ ಆಸಕ್ತರಾದರು. ಅವರು ಪೋರ್ಚುಗಲ್‌ನ ಮಧ್ಯ ಭಾಗದಲ್ಲಿ ವಾಸಿಸುತ್ತಿದ್ದುದರಿಂದ, ದೇವರ ಸಭೆಯೊಂದಿಗಿನ ಅವರ ಏಕಮಾತ್ರ ಸಂಪರ್ಕವು, ಅಂಚೆಯ ಮೂಲಕ ಅವರು ಪಡೆದುಕೊಳ್ಳುತ್ತಿದ್ದ ಪ್ರಕಾಶನಗಳು ಹಾಗೂ ನನ್ನ ಅಜ್ಜಅಜ್ಜಿಯರಿಗೆ ಸೇರಿದ್ದ ಒಂದು ಬೈಬಲೇ ಆಗಿತ್ತು. 1949ರಲ್ಲಿ, ನಾನು 13 ವರ್ಷ ಪ್ರಾಯದವಳಾಗಿದ್ದಾಗ, ನಮ್ಮ ಕುಟುಂಬವು ನನ್ನ ತಾಯಿಯ ಸ್ವದೇಶವಾಗಿದ್ದ ಬ್ರಸಿಲ್‌ಗೆ ವಲಸೆಹೋಗಿ, ರಿಯೋ ಡೇ ಜನೆರೋದ ಹೊರವಲಯಗಳಲ್ಲಿ ನೆಲೆಸಿತು.
ನಮ್ಮ ಹೊಸ ನೆರೆಯವರು ನಮ್ಮನ್ನು ತಮ್ಮ ಚರ್ಚಿಗೆ ಭೇಟಿ ನೀಡುವಂತೆ ಕರೆಕೊಟ್ಟರು ಮತ್ತು ನಾವು ಕೆಲವು ಬಾರಿ ಅಲ್ಲಿಗೆ ಹೋದೆವು. ನರಕಾಗ್ನಿ, ಆತ್ಮ, ಮತ್ತು ಭೂಮಿಯ ಭವಿಷ್ಯತ್ತಿನ ಕುರಿತು ಅವರನ್ನು ಪ್ರಶ್ನಿಸುವುದು ತಂದೆಯವರಿಗೆ ತುಂಬ ಪ್ರಿಯವಾಗಿತ್ತಾದರೂ, ಈ ವಿಷಯಗಳ ಕುರಿತಾದ ಯಾವುದೇ ಉತ್ತರಗಳು ಆ ನೆರೆಯವರಲ್ಲಿರಲಿಲ್ಲ. “ನಿಜವಾದ ಬೈಬಲ್ ವಿದ್ಯಾರ್ಥಿಗಳಿಗಾಗಿ ನಾವು ಕಾಯಬೇಕಾಗಿದೆ ಅಷ್ಟೇ” ಎಂದು ತಂದೆಯವರು ಯಾವಾಗಲೂ ಹೇಳುತ್ತಿದ್ದರು.
ಒಂದು ದಿನ, ಒಬ್ಬ ಕುರುಡ ವ್ಯಕ್ತಿಯು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುತ್ತಾ ನಮ್ಮ ಮನೆಗೆ ಭೇಟಿ ನೀಡಿದನು. ತಂದೆಯವರು ಅದೇ ವಿಷಯಗಳ ಕುರಿತು ಅವನನ್ನು ಪ್ರಶ್ನಿಸಿದಾಗ, ಅವನು ಸದೃಢವಾದ ಬೈಬಲ್ ಆಧಾರಿತ ಉತ್ತರಗಳನ್ನು ಕೊಟ್ಟನು. ಮುಂದಿನ ವಾರ, ಮತ್ತೊಬ್ಬ ಯೆಹೋವನ ಸಾಕ್ಷಿಯು ನಮ್ಮನ್ನು ಭೇಟಿಮಾಡಿದಳು. ಹೆಚ್ಚು ಪ್ರಶ್ನೆಗಳನ್ನು ಉತ್ತರಿಸಿದ ನಂತರ, ಮತ್ತಾಯ 13:38ರಿಂದ ಓದಿದಳು. “ನಾನೂ ಬರಬಹುದೇ?” ಎಂದು ತಂದೆಯವರು ಕೇಳಿದರು. “ಖಂಡಿತ” ಎಂದುತ್ತರಿಸಲಾಯಿತು. ಬೈಬಲ್ ಸತ್ಯವನ್ನು ಪುನಃ ಕಂಡುಕೊಂಡದ್ದಕ್ಕಾಗಿ ನಮಗೆ ಅತ್ಯಾನಂದ ಉಂಟಾಯಿತು! ಮುಂದಿನ ಅಧಿವೇಶನದಲ್ಲಿ ತಂದೆಯವರು ದೀಕ್ಷಾಸ್ನಾನ ಪಡೆದುಕೊಂಡರು, ಮತ್ತು ನಂತರ 1955ರ ನವೆಂಬರ್ ತಿಂಗಳಿನಲ್ಲಿ ನನ್ನ ದೀಕ್ಷಾಸ್ನಾನವಾಯಿತು.
ವಿದಾಯ ಹೇಳುತ್ತಾ, ತಾನು “ಕ್ಷೇತ್ರಕ್ಕೆ” ಹೋಗಬೇಕೆಂದು ಹೇಳಿದಳು. ಸಾಕ್ಷಿಗಳು ಕ್ರೀಡಾಕ್ಷೇತ್ರಕ್ಕೆ ಹೋಗುತ್ತಾರೋ ಎಂದು ತಂದೆಯವರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದಾಗ, ಅವಳು ಅವರಿಗೆ “ಹೊಲ [ಕ್ಷೇತ್ರ]ವೆಂದರೆ ಈ ಲೋಕ” ಎಂಬುದನ್ನುನನ್ನ ಮೊದಲ ಆಮಂತ್ರಣವನ್ನು ಸ್ವೀಕರಿಸುವುದು
ಒಂದೂವರೆ ವರ್ಷಗಳ ನಂತರ, ಪೂರ್ಣ ಸಮಯದ ಸಾರುವ ಕೆಲಸದಲ್ಲಿ ಸೇರುವಂತೆ ಕೋರುವ ಆಮಂತ್ರಣದೊಂದಿಗೆ ರಿಯೋ ಡೇ ಜನೆರೋದ ಬ್ರಾಂಚ್ ಆಫೀಸ್‌ನಿಂದ ಬಂದ ಒಂದು ದೊಡ್ಡ ಕಂದುಬಣ್ಣದ ಲಕೋಟೆಯನ್ನು ನಾನು ಪಡೆದುಕೊಂಡೆ. ಆಗ ನನ್ನ ತಾಯಿ ತುಂಬ ಅಸ್ವಸ್ಥರಾಗಿದ್ದರು, ಆದುದರಿಂದ ನಾನು ನನ್ನ ತಂದೆಯ ಸಲಹೆಯನ್ನು ಕೇಳಿದೆ. “ತಾನೇನು ಮಾಡುತ್ತಿದ್ದೇನೆ ಎಂಬುದು ಯೆಹೋವನಿಗೆ ಗೊತ್ತಿದೆ” ಎಂಬುದು ತಂದೆಯವರ ದೃಢ ಉತ್ತರವಾಗಿತ್ತು. “ಆತನು ನಿನಗೆ ಆಮಂತ್ರಣವನ್ನು ಕಳುಹಿಸಿರುವುದಾದರೆ, ನೀನು ಅದನ್ನು ಖಂಡಿತವಾಗಿಯೂ ದೀನಭಾವದಿಂದ ಸ್ವೀಕರಿಸಬೇಕು.” ಈ ಮಾತುಗಳಿಂದ ಹುರಿದುಂಬಿಸಲ್ಪಟ್ಟವಳಾಗಿ, ನಾನು ಆ ಅರ್ಜಿಯನ್ನು ಭರ್ತಿಮಾಡಿದೆ ಮತ್ತು 1957ರ ಜುಲೈ 1ರಂದು ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದೆ. ನನ್ನ ಮೊದಲ ನೇಮಕ ರಿಯೋ ಡೇ ಜನೆರೋದಲ್ಲಿದ್ದ ಟ್ರೇಸ್ ರೀಯೂಸ್ ಎಂಬ ಪಟ್ಟಣವಾಗಿತ್ತು.
ಪ್ರಾರಂಭದಲ್ಲಿ, ಟ್ರೇಸ್ ರೀಯೂಸ್‌ನ ನಿವಾಸಿಗಳು ನಮ್ಮ ಸಂದೇಶಕ್ಕೆ ಕಿವಿಗೊಡಲು ಹಿಂಜರಿಯುತ್ತಿದ್ದರು, ಏಕೆಂದರೆ ನಾವು ಬೈಬಲಿನ ಕ್ಯಾಥೊಲಿಕ್ ತರ್ಜುಮೆಯನ್ನು ಉಪಯೋಗಿಸುತ್ತಿರಲಿಲ್ಲ. ಜರಾಲ್ಡು ರಾಮಾಲ್ಯು ಎಂಬ ಕ್ಯಾಥೊಲಿಕ್ ಮತದ ಅನುಯಾಯಿಯೊಂದಿಗೆ ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಾಗ ಸಹಾಯವು ಸಿಕ್ಕಿತು. ಅವನ ಸಹಾಯದಿಂದ ಸ್ಥಳಿಕ ಪಾದ್ರಿಯ ಸಹಿಯಿದ್ದ ಒಂದು ಬೈಬಲನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಆಗಿನಿಂದ, ಯಾರಾದರೂ ಆಕ್ಷೇಪಣೆಯನ್ನು ಎತ್ತುತ್ತಿದ್ದಾಗ, ನಾನು ಅವರಿಗೆ ಪಾದ್ರಿಯ ಸಹಿಯನ್ನು ತೋರಿಸುತ್ತಿದ್ದೆ ಮತ್ತು ಇನ್ನಾವ ಪ್ರಶ್ನೆಗಳೂ ಎಬ್ಬಿಸಲ್ಪಡುತ್ತಿರಲಿಲ್ಲ. ಸಮಯಾನಂತರ ಜರಾಲ್ಡು ದೀಕ್ಷಾಸ್ನಾನ ಹೊಂದಿದನು.
ಟ್ರೇಸ್ ರೀಯೂಸ್ ನಗರದ ಮಧ್ಯ ಭಾಗದಲ್ಲೇ 1959ರಲ್ಲಿ ಒಂದು ಸರ್ಕಿಟ್ ಸಮ್ಮೇಳನವು ನಡೆಸಲ್ಪಟ್ಟಾಗ ನಾನು ಪುಳಕಿತಳಾದೆ. ಆ ಸಮಯದಲ್ಲಿ ಬೈಬಲ್ ಅಧ್ಯಯನಮಾಡುತ್ತಿದ್ದ ಪೊಲೀಸ್ ಅಧಿಕಾರಿಯು, ಕಾರ್ಯಕ್ರಮವನ್ನು ಉದ್ಘೋಷಿಸುತ್ತಾ ಪಟ್ಟಣವಿಡೀ ಬ್ಯಾನರ್‌ಗಳನ್ನು ಹಾಕುವ ಏರ್ಪಾಡನ್ನು ಮಾಡಿದನು. ಟ್ರೇಸ್ ರೀಯೂಸ್‌ನಲ್ಲಿ ಮೂರು ವರ್ಷಗಳು ಕೆಲಸಮಾಡಿದ ನಂತರ, ಸಾವೊ ಪೌಲೋವಿನ ಪಶ್ಚಿಮಕ್ಕೆ 110 ಕಿಲೊಮೀಟರ್ ದೂರದಲ್ಲಿರುವ ಈಟುವಿನಲ್ಲಿ ಹೊಸ ನೇಮಕವನ್ನು ಸ್ವೀಕರಿಸುವಂತೆ ನನ್ನನ್ನು ಆಮಂತ್ರಿಸಲಾಯಿತು.
ಕೆಂಪು, ನೀಲಿ ಮತ್ತು ಹಳದಿ ಪುಸ್ತಕಗಳು
ಸ್ವಲ್ಪ ಮಟ್ಟಿಗಿನ ಹುಡುಕಾಟದ ನಂತರ, ನನ್ನ ಪಯನೀಯರ್ ಸಂಗಾತಿ ಮತ್ತು ನಾನು, ಪಟ್ಟಣದ ಮಧ್ಯ ಭಾಗದಲ್ಲಿ ಮರೀಯ ಎಂಬ ಕರುಣಾಳು ವಿಧವೆಯೊಂದಿಗೆ ಅನುಕೂಲಕರ ವಾಸಸ್ಥಳವನ್ನು ಕಂಡುಕೊಂಡೆವು. ಮರೀಯ ನಮ್ಮನ್ನು ತನ್ನ ಸ್ವಂತ ಮಕ್ಕಳಂತೆಯೇ ನೋಡಿಕೊಂಡಳು. ಆದರೆ ಸ್ವಲ್ಪದರಲ್ಲೇ, ಈಟುವಿನ ರೋಮನ್ ಕ್ಯಾಥೊಲಿಕ್ ಬಿಷಪ್ ಅವಳನ್ನು ಭೇಟಿಮಾಡಿ, ನಮ್ಮನ್ನು ಕಳುಹಿಸಿಬಿಡಬೇಕೆಂದು ಹೇಳಿದನು. ಆದರೆ ಅವಳು ಸ್ಥಿರವಾಗಿ ನಿಂತಳು: “ನನ್ನ ಗಂಡ ಸತ್ತಾಗ, ನನ್ನನ್ನು ಸಂತೈಸಲು ನೀವು ಏನೂ ಮಾಡಲಿಲ್ಲ. ನಾನು ಅವರ ಧರ್ಮದವಳಾಗಿರದಿದ್ದರೂ ಈ ಯೆಹೋವನ ಸಾಕ್ಷಿಗಳು ನನಗೆ ಸಹಾಯಮಾಡಿದ್ದಾರೆ.”
ಸುಮಾರು ಆ ಸಮಯಕ್ಕೆ, ಈಟುವಿನ ಕ್ಯಾಥೊಲಿಕ್ ಪಾದ್ರಿಗಳು, ತಮ್ಮ ಚರ್ಚ್‌ಹೋಕರು “ಪಿಶಾಚನ ಕುರಿತಾದ ಕೆಂಪು ಪುಸ್ತಕವನ್ನು” ಸ್ವೀಕರಿಸುವುದನ್ನು ನಿಷೇಧಿಸಿದ್ದಾರೆ ಎಂದು ಒಬ್ಬ ಮಹಿಳೆಯು ನಮಗೆ ತಿಳಿಸಿದಳು. ಅವರು, ಆ ವಾರದಲ್ಲಿ ನಾವು ನೀಡುತ್ತಿದ್ದ “ದೇವರು ಸತ್ಯವಂತನೇ ಸರಿ” ಎಂಬ ಬೈಬಲ್ ಪ್ರಕಾಶನವನ್ನು ಸೂಚಿಸಿ ಹಾಗೆ ಹೇಳಿದ್ದರು. ಆ ಕೆಂಪು ಪುಸ್ತಕವು ಪಾದ್ರಿಗಳಿಂದ “ನಿಷೇಧಿಸಲ್ಪಟ್ಟ” ಕಾರಣ, ನಾವು ನೀಲಿ ಪುಸ್ತಕವನ್ನು ನೀಡಲು ನಿರೂಪಣೆಯನ್ನು ತಯಾರಿಸಿದೆವು (“ನೂತನಾಕಾಶಮಂಡಲ ಮತ್ತು ನೂತನಭೂಮಂಡಲ,” ಇಂಗ್ಲಿಷ್). ನಂತರ, ಈ ಬದಲಾವಣೆಯ ಸುದ್ದಿಯು
ಪಾದ್ರಿವರ್ಗದ ಕಿವಿಗೆ ಮುಟ್ಟಿದಾಗ, ನಾವು ಹಳದಿ ಪುಸ್ತಕವನ್ನು ಉಪಯೋಗಿಸತೊಡಗಿದೆವು (ಧರ್ಮವು ಮಾನವಕುಲಕ್ಕಾಗಿ ಏನನ್ನು ಮಾಡಿದೆ, ಇಂಗ್ಲಿಷ್) ಇತ್ಯಾದಿ. ಬೇರೆ ಬೇರೆ ಬಣ್ಣಗಳಿರುವ ವಿವಿಧ ಪುಸ್ತಕಗಳು ನಮ್ಮಲ್ಲಿದ್ದದ್ದು ಒಳ್ಳೇದಾಗಿತ್ತು!ಈಟುವಿನಲ್ಲಿ ಒಂದು ವರ್ಷ ಕಳೆದ ನಂತರ, ರಾಷ್ಟ್ರೀಯ ಸಮ್ಮೇಳನದ ತಯಾರಿಯಾಗಿ ಬೆತೆಲ್‌ನಲ್ಲಿ—ರಿಯೋ ಡೇ ಜನೆರೋದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್‌ನಲ್ಲಿ—ತಾತ್ಕಾಲಿಕವಾಗಿ ಕೆಲಸಮಾಡುವಂತೆ ಆಮಂತ್ರಿಸಿದ ತಂತಿ ನನಗೆ ಸಿಕ್ಕಿತು. ಅದನ್ನು ನಾನು ಸಂತೋಷದಿಂದ ಸ್ವೀಕರಿಸಿದೆ.
ಹೆಚ್ಚಿನ ಸುಯೋಗಗಳು ಮತ್ತು ಪಂಥಾಹ್ವಾನಗಳು
ಬೆತೆಲ್‌ನಲ್ಲಿ ಕೆಲಸದ ಕೊರತೆಯೇ ಇರಲಿಲ್ಲ, ಮತ್ತು ನಾನು ಸಾಧ್ಯವಿರುವ ಯಾವುದೇ ರೀತಿಯಲ್ಲಿ ಸಹಾಯಮಾಡಲು ಸಂತೋಷಿಸಿದೆ. ಪ್ರತಿದಿನ ಬೆಳಗ್ಗಿನ ದಿನದ ವಚನದ ಚರ್ಚೆ ಮತ್ತು ಸೋಮವಾರ ಸಾಯಂಕಾಲಗಳಲ್ಲಿರುವ ಕುಟುಂಬ ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾಗುವುದು ಎಷ್ಟು ಪುಷ್ಟಿದಾಯಕವಾಗಿತ್ತು! ಆಟೊ ಎಸ್ಟೆಲ್‌ಮಾನ್ ಮತ್ತು ಬೆತೆಲ್ ಕುಟುಂಬದ ಇತರ ಅನುಭವಸ್ಥ ಸದಸ್ಯರ ಹೃತ್ಪೂರ್ವಕ ಪ್ರಾರ್ಥನೆಗಳು ನನ್ನನ್ನು ಆಳವಾಗಿ ಪ್ರಭಾವಿಸಿದವು.
ರಾಷ್ಟ್ರೀಯ ಸಮ್ಮೇಳನದ ನಂತರ, ಈಟುವಿಗೆ ಹಿಂದಿರುಗಲು ನಾನು ನನ್ನ ಸಾಮಾನುಗಳನ್ನು ಸಿದ್ಧಪಡಿಸುತ್ತಿದ್ದೆ. ಆದರೆ ನನ್ನ ಆಶ್ಚರ್ಯಕ್ಕೆ, ಬ್ರಾಂಚ್ ಸರ್ವೆಂಟ್ ಗ್ರಾಂಟ್ ಮಿಲ್ಲರ್, ಬೆತೆಲ್ ಕುಟುಂಬದ ಖಾಯಂ ಸದಸ್ಯಳಾಗುವ ಆಮಂತ್ರಣ ಪತ್ರವನ್ನು ನನ್ನ ಕೈಗಿತ್ತರು. ನನ್ನ ಕೋಣೆ ಸಂಗಾತಿ ಹಾಸ ಯಾಸೆಡ್‌ಜೀಅನ್ ಎಂಬ ಸಹೋದರಿಯಾಗಿದ್ದರು. ಆ ಸಹೋದರಿಯು ಈಗಲೂ ಬ್ರಸಿಲ್‌ನ ಬೆತೆಲ್‌ನಲ್ಲಿ ಸೇವೆ ಮಾಡುತ್ತಿದ್ದಾರೆ. ಆ ದಿನಗಳಲ್ಲಿ ಬೆತೆಲ್ ಕುಟುಂಬವು ಚಿಕ್ಕದಾಗಿತ್ತು—ಕೇವಲ 28 ಮಂದಿ—ಮತ್ತು ನಾವೆಲ್ಲರೂ ಆಪ್ತ ಸ್ನೇಹಿತರಾಗಿದ್ದೆವು.
ಇಸವಿ 1964ರಲ್ಲಿ, ಸೇವು ಸಾನಾರ್ಡೀ ಎಂಬ ಪೂರ್ಣ ಸಮಯದ ಶುಶ್ರೂಷಕನು ತರಬೇತಿಯನ್ನು ಪಡೆದುಕೊಳ್ಳಲಿಕ್ಕಾಗಿ ಬೆತೆಲಿಗೆ ಬಂದನು. ನಂತರ ಅವನು ಒಬ್ಬ ಸರ್ಕಿಟ್ ಸರ್ವೆಂಟ್ ಅಥವಾ ಸಂಚರಣ ಮೇಲ್ವಿಚಾರಕನಾಗಿ ಅಲ್ಲಿಯೇ ಸಮೀಪದಲ್ಲಿ ನೇಮಿಸಲ್ಪಟ್ಟನು. ಅವನು ತನ್ನ ವರದಿಗಳನ್ನು ತಲಪಿಸಲಿಕ್ಕಾಗಿ ಬೆತೆಲ್‌ಗೆ ಬರುತ್ತಿದ್ದಾಗ, ಕೆಲವೊಮ್ಮೆ ನಾವು ಭೇಟಿಯಾಗುತ್ತಿದ್ದೆವು. ಸೋಮವಾರ ಸಾಯಂಕಾಲಗಳಲ್ಲಿ ನಡೆಯುವ ಕುಟುಂಬ ಅಭ್ಯಾಸಕ್ಕೆ ಹಾಜರಾಗಬಹುದಾದ ಅನುಮತಿಯನ್ನು ಬ್ರಾಂಚ್ ಸರ್ವೆಂಟ್ ಸೇವುಗೆ ಕೊಟ್ಟರು, ಆದುದರಿಂದ ನಾವು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಸೇವು ಮತ್ತು ನಾನು 1965ರ ಆಗಸ್ಟ್ ತಿಂಗಳಿನಲ್ಲಿ ಮದುವೆಯಾದೆವು. ನನ್ನ ಗಂಡನೊಂದಿಗೆ ಸರ್ಕಿಟ್ ಕೆಲಸದಲ್ಲಿ ಜೊತೆಗೂಡುವ ಆಮಂತ್ರಣವನ್ನು ನಾನು ಸಂತೋಷದಿಂದ ಸ್ವೀಕರಿಸಿದೆ.
ಆ ದಿನಗಳಲ್ಲಿ ಬ್ರಸಿಲ್‌ನ ಒಳನಾಡಿನಲ್ಲಿ ಸಂಚರಣ ಕೆಲಸ ಮಾಡುವುದು ಒಂದು ಸಾಹಸದಂತಿತ್ತು. ಮೀನಾಸ್ ಸರೈಸ್ ರಾಜ್ಯದ ಆರಾನ್ಹದಲ್ಲಿರುವ ಪ್ರಚಾರಕರಿಗೆ ನಾವಿತ್ತ ಭೇಟಿಗಳನ್ನು ನಾನೆಂದಿಗೂ ಮರೆಯಲಾರೆ. ನಾವು ಮೊದಲು ಒಂದು ಟ್ರೈನನ್ನು ಹಿಡಿಯಬೇಕಾಗಿತ್ತು, ನಂತರ ಉಳಿದ ದಾರಿಯನ್ನು ಸೂಟ್ಕೇಸ್‌ಗಳು, ಟೈಪ್‌ರೈಟರ್, ಸ್ಲೈಡ್ ಪ್ರೊಜೆಕ್ಟರ್, ಸೇವಾ ಬ್ಯಾಗ್‌ಗಳು ಮತ್ತು ಸಾಹಿತ್ಯವನ್ನು ಹೊತ್ತುಕೊಂಡು ನಡೆಯಬೇಕಾಗಿತ್ತು. ಲುರಿವಾಲ್ ಶಾಂಟಾಲ್ ಎಂಬ ವೃದ್ಧ ಸಹೋದರರು, ನಮ್ಮ ಸಾಮಾನುಗಳನ್ನು ಕೊಂಡೊಯ್ಯುವುದರಲ್ಲಿ ಸಹಾಯಮಾಡಲಿಕ್ಕಾಗಿ ಯಾವಾಗಲೂ ಸ್ಟೇಷನಿನಲ್ಲಿ ಕಾದುಕೊಂಡಿರುವುದನ್ನು ನೋಡುವುದು ನಮಗೆ ಎಷ್ಟು ಸಂತೋಷ ತರುತ್ತಿತ್ತು!
ಆರಾನ್ಹದಲ್ಲಿನ ಕೂಟಗಳು ಬಾಡಿಗೆ ಮನೆಯೊಂದರಲ್ಲಿ ನಡೆಸಲ್ಪಡುತ್ತಿದ್ದವು. ಅದರ ಹಿಂಬದಿಯಲ್ಲಿರುವ ಒಂದು ಕೋಣೆಯಲ್ಲಿ ನಾವು ಮಲಗುತ್ತಿದ್ದೆವು. ಅದರ ಒಂದು ಪಕ್ಕದಲ್ಲಿ ಒಂದು ಕಟ್ಟಿಗೆ ಒಲೆಯಿತ್ತು, ಮತ್ತು ನಾವದನ್ನು ಅಡಿಗೆಮಾಡಲಿಕ್ಕಾಗಿ ಹಾಗೂ ಸಹೋದರರು ನಮಗಾಗಿ ಬಕೆಟ್‌ಗಳಲ್ಲಿ ತರುತ್ತಿದ್ದ ನೀರನ್ನು ಬಿಸಿಮಾಡಲಿಕ್ಕಾಗಿ ಉಪಯೋಗಿಸುತ್ತಿದ್ದೆವು. ಹತ್ತಿರದ ಬಿದಿರು ತೋಪಿನ ಮಧ್ಯೆ ನೆಲದಲ್ಲಿ ಮಾಡಲ್ಪಟ್ಟಿದ್ದ ಒಂದು ಗುಂಡಿಯು ನಮ್ಮ ಶೌಚಾಲಯವಾಗಿತ್ತು. ರಾತ್ರಿಗಳಲ್ಲಿ, ಶಾಗಸ್ ರೋಗವಾಹಕವಾಗಿರುವ ಬಾರ್ಬರ್ ಬೀಟಲ್‌ಗಳನ್ನು ಓಡಿಸಲಿಕ್ಕಾಗಿ ಗ್ಯಾಸ್‌ಲೈಟನ್ನು ಉರಿಸುತ್ತಿದ್ದೆವು. ಬೆಳಗ್ಗಿನಷ್ಟಕ್ಕೆ ನಮ್ಮ ಮೂಗಿನ ಹೊಳ್ಳೆಗಳು ಹೊಗೆಯಿಂದ ಕಪ್ಪಾಗಿಬಿಡುತ್ತಿದ್ದವು. ಆಸಕ್ತಿಕರವಾದ ಅನುಭವವೇ ಸರಿ!
ಪಾರನಾ ರಾಜ್ಯದಲ್ಲಿ ನಾವು ಸೇವೆ ಮಾಡುತ್ತಿದ್ದಾಗ, ಬ್ರಾಂಚ್ ಆಫೀಸ್‌ನಿಂದ ಅದೇ ರೀತಿಯ ದೊಡ್ಡ ಕಂದುಬಣ್ಣದ ಲಕೋಟೆಗಳಲ್ಲೊಂದು ನಮಗೆ ಸಿಕ್ಕಿತು. ಯೆಹೋವನ ಸಂಸ್ಥೆಯಿಂದ ಮತ್ತೆ ಇನ್ನೊಂದು ಆಮಂತ್ರಣ—ಈ ಬಾರಿ ಪೋರ್ಚುಗಲ್‌ನಲ್ಲಿ ಸೇವೆಮಾಡುವಂತೆ ಆಮಂತ್ರಣ ಸಿಕ್ಕಿತು. ಈ ನೇಮಕವನ್ನು ಸ್ವೀಕರಿಸುವ ಮುನ್ನ ಲೂಕ 14:28ರಲ್ಲಿರುವ ತತ್ತ್ವವನ್ನು ಪರಿಶೀಲಿಸುವಂತೆ ಮತ್ತು ಕಷ್ಟನಷ್ಟಗಳನ್ನು ಸರಿದೂಗಿಸಿನೋಡುವಂತೆ ಆ ಪತ್ರವು ಸಲಹೆ ನೀಡಿತ್ತು. ಏಕೆಂದರೆ ನಮ್ಮ ಕ್ರೈಸ್ತ ಕೆಲಸವು ಅಲ್ಲಿ ನಿಷೇಧಿಸಲ್ಪಟ್ಟಿತ್ತು, ಮತ್ತು ಪೋರ್ಚುಗೀಸ್ ಸರಕಾರವು ಈಗಾಗಲೇ ಅನೇಕ ಸಹೋದರರನ್ನು ಬಂಧಿಸಿತ್ತು.
ಇಂತಹ ಹಿಂಸೆಯನ್ನು ಎದುರಿಸಬೇಕಾಗಿರುವ ಸ್ಥಳಕ್ಕೆ ನಾವು ಹೋಗುವೆವೋ? “ನಮ್ಮ ಪೋರ್ಚುಗೀಸ್ ಸಹೋದರರು ಅಲ್ಲಿ ಜೀವಿಸುತ್ತಾ, ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಸಾಧ್ಯವಿರುವುದಾದರೆ, ನಮಗೇಕೆ ಸಾಧ್ಯವಿಲ್ಲ?” ಎಂದು ಸೇವು ಹೇಳಿದರು. ನನ್ನ ತಂದೆಯ ಪ್ರೋತ್ಸಾಹನೀಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ, “ಯೆಹೋವನು ನಮಗೆ ಆಮಂತ್ರಣವನ್ನು ಕಳುಹಿಸಿರುವುದಾದರೆ, ನಾವು ಅದನ್ನು ಖಂಡಿತವಾಗಿಯೂ ದೀನಭಾವದಿಂದ ಸ್ವೀಕರಿಸಬೇಕು” ಎಂದು ನಾನು ಒಪ್ಪಿಕೊಂಡೆ. ಕೂಡಲೇ, ನಾವು ಸಾವೊ ಪೌಲೋವಿನ ಬೆತೆಲ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಾ, ಪ್ರಯಾಣಕ್ಕೆ ಬೇಕಾಗಿರುವ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಿದೆವು.
ಸೇವು ಮಾರೀಅ ಮತ್ತು ಮಾರೀಅ ಸೇವು
ಏವುಸೇನ್ಯೂ ಸೇ ಎಂಬ ನಮ್ಮ ಹಡಗು, 1969ರ ಸೆಪ್ಟೆಂಬರ್ 6ರಂದು ಸಾವೊ ಪೌಲೋ ರಾಜ್ಯದ ಸ್ಯಾಂಟಸ್ ಬಂದರಿನಿಂದ ತನ್ನ ಪ್ರಯಾಣವನ್ನು ಆರಂಭಿಸಿತು. ಸಮುದ್ರದಲ್ಲಿ ಒಂಬತ್ತು ದಿನಗಳನ್ನು ಕಳೆದ ನಂತರ, ನಾವು ಪೋರ್ಚುಗಲ್‌ಗೆ ಬಂದು ತಲಪಿದೆವು. ಆರಂಭದಲ್ಲಿ, ಲಿಸ್‌ಬನ್‌ನ ಹಳೆಯ ಜಿಲ್ಲೆಯಲ್ಲಿರುವ ಅಲ್ಪಾಮಾ ಮತ್ತು ಮೊರಾರೀಅದ ಕಿರಿದಾದ ಬೀದಿಗಳಲ್ಲಿ ಅನುಭವಸ್ಥ ಸಹೋದರರೊಂದಿಗೆ ಕೆಲಸಮಾಡುತ್ತಾ ಹಲವಾರು ತಿಂಗಳುಗಳನ್ನು ಕಳೆದೆವು. ಪೊಲೀಸರ ಕೈಯಲ್ಲಿ ಸುಲಭವಾಗಿ ಸಿಕ್ಕಿಬೀಳದಿರಲು ಹೇಗೆ ಎಚ್ಚರದಿಂದಿರಬೇಕು ಎಂಬುದನ್ನು ಅವರು ಕಲಿಸಿಕೊಟ್ಟರು.
ಸಭಾ ಕೂಟಗಳು ಸಾಕ್ಷಿಗಳ ಮನೆಗಳಲ್ಲಿ ನಡೆಸಲ್ಪಡುತ್ತಿದ್ದವು. ಆದರೆ ನೆರೆಹೊರೆಯವರು ಶಂಕಿಸತೊಡಗಿದ್ದಾರೆ ಎಂಬುದು ಗಮನಕ್ಕೆ ಬರುವುದಾದರೆ, ಮನೆಯು ತನಿಖೆಗೊಳಗಾಗದಂತೆ ಅಥವಾ ಸಹೋದರರು ಬಂಧಿಸಲ್ಪಡದಂತೆ ತತ್‌ಕ್ಷಣವೇ ಕೂಟಗಳು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲ್ಪಡುತ್ತಿದ್ದವು. ಪಿಕ್‌ನಿಕ್‌ಗಳು ಎಂದು ನಾವು ಕರೆಯುತ್ತಿದ್ದ ಸಮ್ಮೇಳನಗಳು, ಲಿಸ್‌ಬನ್‌ನ ಹೊರವಲಯದಲ್ಲಿರುವ ಮಾನ್‌ಸಾಂಟು ಪಾರ್ಕ್‌ನಲ್ಲಿ ಮತ್ತು ತೀರದಲ್ಲಿರುವ ಮರಗಳು ತುಂಬಿರುವ ಪ್ರದೇಶವಾದ ಕಾಸ್ಟ ಡ ಕಾಪಾರೀಕದಲ್ಲಿ ನಡೆಸಲ್ಪಡುತ್ತಿದ್ದವು. ನಾವು ಆ ಸಂದರ್ಭಕ್ಕಾಗಿ ಮಾಮೂಲಿ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಿದ್ದೆವು, ಮತ್ತು ಎಚ್ಚರಿಕೆಯಿಂದಿರುವ ಅಟೆಂಡೆಂಟ್‌ಗಳ ಒಂದು ತಂಡವು ಹೊಂಚಿನೋಡುವ ಸ್ಥಳಗಳಲ್ಲಿ ನಿಂತು ಕಾಯುತ್ತಿತ್ತು. ಸಂಶಯಪಡುವ ರೀತಿಯಲ್ಲಿ ಯಾರಾದರೂ ಸಮೀಪಿಸುವುದಾದರೆ, ಒಂದು ಆಟವನ್ನು ಆರಂಭಿಸಲು, ಒಂದು ಪಿಕ್‌ನಿಕನ್ನು ಏರ್ಪಡಿಸಲು, ಅಥವಾ ಒಂದು ಜನಪದಗೀತೆಯನ್ನು ಹಾಡಲಾರಂಭಿಸಲು ಸಮಯವಿರುತ್ತಿತ್ತು.
ಭದ್ರತಾ ಪೊಲೀಸರು ನಮ್ಮನ್ನು ಗುರುತಿಸುವುದು ಇನ್ನೂ ಕಷ್ಟಕರವಾಗುವಂತೆ, ನಾವು ನಮ್ಮ ನಿಜವಾದ ಹೆಸರುಗಳ ಉಪಯೋಗವನ್ನು ಮಾಡಲಿಲ್ಲ. ಸಹೋದರರು ನಮ್ಮನ್ನು ಸೇವು ಮಾರೀಅ ಮತ್ತು ಮಾರೀಅ ಸೇವು ಎಂಬ ಹೆಸರಿನಿಂದ ತಿಳಿದಿದ್ದರು. ನಮ್ಮ ಹೆಸರುಗಳು ಯಾವುದೇ ಪತ್ರವ್ಯವಹಾರದಲ್ಲಿ ಅಥವಾ ದಾಖಲೆಪತ್ರಗಳಲ್ಲಿ ಉಪಯೋಗಿಸಲ್ಪಡುತ್ತಿರಲಿಲ್ಲ. ಬದಲಾಗಿ ನಮಗೆ ಸಂಖ್ಯೆಗಳು ನೇಮಿಸಲ್ಪಟ್ಟಿದ್ದವು. ಸಹೋದರರ ವಿಳಾಸಗಳನ್ನು ಬಾಯಿಪಾಠಮಾಡಿಕೊಳ್ಳಬಾರದು ಎಂಬ ಪ್ರಜ್ಞಾಪೂರ್ವಕ ತೀರ್ಮಾನವನ್ನು ನಾನು ಮಾಡಿದ್ದೆ. ಹೀಗೆ, ನಾನು ಬಂಧಿಸಲ್ಪಡುವುದಾದರೆ, ನಾನು ಅವರಿಗೆ ದ್ರೋಹಮಾಡಲು ಸಾಧ್ಯವಿದ್ದಿರಲಿಲ್ಲ.
ನಿರ್ಬಂಧಗಳ ಹೊರತೂ, ಸಾಕ್ಷಿಕೊಡಲು ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಳ್ಳಲು ಸೇವು ಮತ್ತು ನಾನು ದೃಢತೀರ್ಮಾನಮಾಡಿದ್ದೆವು, ಏಕೆಂದರೆ ಯಾವುದೇ ಗಳಿಗೆಯಲ್ಲಿ ನಾವು ಇಬ್ರಿಯ 11:27.
ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು ಎಂಬುದು ನಮಗೆ ಗೊತ್ತಿತ್ತು. ನಾವು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಮೇಲೆ ಆತುಕೊಳ್ಳಲು ಕಲಿತುಕೊಂಡೆವು. ನಮ್ಮ ಸಂರಕ್ಷಕನೋಪಾದಿ, ಆತನು ತನ್ನ ದೇವದೂತರನ್ನು ಉಪಯೋಗಿಸಿದ ರೀತಿಯಿಂದ, ನಾವು ‘ಅದೃಶ್ಯನಾಗಿರುವಾತನನ್ನು ದೃಷ್ಟಿಸುತ್ತಿದ್ದೇವೋ’ ಎಂಬ ಅನಿಸಿಕೆ ನಮಗಾಯಿತು.—ಒಂದು ಸಂದರ್ಭದಲ್ಲಿ, ಪೊರ್ಟೊದಲ್ಲಿ ಮನೆಯಿಂದ ಮನೆಗೆ ಸಾರುತ್ತಿದ್ದಾಗ, ಒಳಬರುವಂತೆ ಒತ್ತಾಯಿಸಿದ ಒಬ್ಬ ಮನುಷ್ಯನನ್ನು ನಾವು ಭೇಟಿಯಾದೆವು. ನಾನು ಯಾರೊಂದಿಗೆ ಕೆಲಸಮಾಡುತ್ತಿದ್ದೆನೋ ಆ ಸಹೋದರಿಯು ಯಾವುದೇ ಹಿಂಜರಿಕೆಯಿಲ್ಲದೆ ಒಳಗೆ ಹೋಗಲು ಒಪ್ಪಿಕೊಂಡಳು, ನನಗೆ ಬೇರಾವುದೇ ಆಯ್ಕೆಯಿರಲಿಲ್ಲ. ನನ್ನ ಉಸಿರೇ ನಿಂತುಹೋಗುವಂಥ ರೀತಿಯಲ್ಲಿ, ಹಜಾರದಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ್ದ ಯಾರೋ ಒಬ್ಬರ ಛಾಯಾಚಿತ್ರವಿತ್ತು. ಈಗೇನು ಮಾಡುವುದು? ನಮ್ಮ ಆತಿಥೇಯನು ನಮ್ಮನ್ನು ಕುಳ್ಳಿರಿಸಿ, ನನ್ನನ್ನು ಕೇಳಿದ್ದು: “ನಿಮ್ಮ ಮಗನು ಸೈನ್ಯಕ್ಕೆ ಕರೆಯಲ್ಪಡುವುದಾದರೆ ನೀವು ಅವನನ್ನು ಕಳುಹಿಸಿಕೊಡುವಿರೋ?” ಅದು ಒಂದು ಸಂದಿಗ್ಧ ಪರಿಸ್ಥಿತಿಯಾಗಿತ್ತು. ಆದರೆ ಮೌನವಾಗಿ ಪ್ರಾರ್ಥಿಸಿದ ನಂತರ ನಾನು ಶಾಂತವಾಗಿ ಉತ್ತರಿಸಿದ್ದು: “ನನಗೆ ಮಕ್ಕಳಾರೂ ಇಲ್ಲ, ಮತ್ತು ಇದೇ ರೀತಿಯ ಊಹಾಪೋಹದ ಪ್ರಶ್ನೆಯನ್ನು ನಾನು ಕೇಳುವುದಾದರೆ, ನೀವೂ ಇದೇ ಉತ್ತರವನ್ನು ಕೊಡುವಿರಿ.” ಆಗ ಅವನು ಏನೂ ಮಾತಾಡಲಿಲ್ಲ. ಆಗ ನಾನು ಮುಂದುವರಿಸಿದ್ದು: “ಆದರೆ ಒಂದುವೇಳೆ ನೀವು, ಒಬ್ಬ ಸಹೋದರನನ್ನು ಅಥವಾ ತಂದೆಯನ್ನು ಕಳೆದುಕೊಳ್ಳುವುದಾದರೆ ನನಗೆ ಹೇಗನಿಸಬಹುದು ಎಂದು ಕೇಳುವುದಾದರೆ ನಾನು ಉತ್ತರಿಸಬಲ್ಲೆ, ಏಕೆಂದರೆ ನನ್ನ ಸಹೋದರನೂ ತಂದೆಯೂ ಮೃತಪಟ್ಟಿದ್ದಾರೆ.” ನಾನು ಮಾತಾಡುತ್ತಿರುವಾಗಲೇ ನನ್ನ ಕಣ್ಣುಗಳು ತುಂಬಿಬಂದವು, ಮತ್ತು ಅವನೂ ಇನ್ನೇನು ಅತ್ತುಬಿಡುವನೋ ಎಂಬಂತಿದ್ದನು. ಅವನ ಹೆಂಡತಿ ಇತ್ತೀಚೆಗೆ ಮರಣಪಟ್ಟಿದ್ದಳು ಎಂದು ಅವನು ವಿವರಿಸಿದನು. ನಾನು ಪುನರುತ್ಥಾನದ ನಿರೀಕ್ಷೆಯನ್ನು ವಿವರಿಸಿದಾಗ, ಅವನು ತುಂಬ ಗಮನಕೊಟ್ಟು ಆಲಿಸಿದನು. ನಂತರ ನಾವು ವಿನಯದಿಂದ ವಿದಾಯ ಹೇಳಿ, ವಿಷಯವನ್ನು ಯೆಹೋವನ ಹಸ್ತಗಳಲ್ಲಿ ಒಪ್ಪಿಸಿ, ಸುರಕ್ಷಿತವಾಗಿ ಅಲ್ಲಿಂದ ಹೊರಟೆವು.
ನಿಷೇಧದ ಹೊರತೂ, ಪ್ರಾಮಾಣಿಕ ಜನರಿಗೆ ಸತ್ಯದ ಜ್ಞಾನವನ್ನು ಪಡೆದುಕೊಳ್ಳುವ ಸಹಾಯ ದೊರಕಿತು. ಪೊರ್ಟೊದಲ್ಲೇ ನನ್ನ ಗಂಡ, ಓರಾಸ್‌ಯು ಎಂಬ ವ್ಯಾಪಾರಸ್ಥನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದರು, ಮತ್ತು ಅವನು ಕ್ಷಿಪ್ರವಾದ ಪ್ರಗತಿಯನ್ನು ಮಾಡಿದನು. ನಂತರ, ಒಬ್ಬ ನುರಿತ ಡಾಕ್ಟರನಾದ ಅವನ ಮಗ ಏಮೀಲ್ಯು ಕೂಡ ಯೆಹೋವನ ಪರವಾಗಿ ತನ್ನ ನಿಲುವನ್ನು ತೆಗೆದುಕೊಂಡು ದೀಕ್ಷಾಸ್ನಾನ ಪಡೆದುಕೊಂಡನು. ಯಾವುದೇ ವಿಷಯವೂ ಯೆಹೋವನ ಪವಿತ್ರಾತ್ಮವನ್ನು ನಿಲ್ಲಿಸಲಾರದು ಎಂಬುದು ಸತ್ಯವೇ.
“ಯೆಹೋವನು ಏನನ್ನು ಅನುಮತಿಸುವನು ಎಂಬುದು ನಿಮಗೆ ಎಂದಿಗೂ ಗೊತ್ತಿರುವುದಿಲ್ಲ”
ಇಸವಿ 1973ರಲ್ಲಿ, ಸೇವು ಮತ್ತು ನಾನು ಬೆಲ್ಜಿಯಮ್‌ನಲ್ಲಿರುವ ಬ್ರಸಲ್ಸ್‌ನಲ್ಲಿ “ದೈವಿಕ ವಿಜಯ” ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟೆವು. ಸಾವಿರಾರು ಸ್ಪ್ಯಾನಿಷ್ ಮತ್ತು ಬೆಲ್ಜಿಯನ್ ಸಹೋದರರು ಹಾಜರಿದ್ದರು, ಮಾತ್ರವಲ್ಲದೆ ಮೊಸಾಂಬೀಕ್, ಅಂಗೋಲ, ಕೇಪ್ ವರ್ಡ್, ಮಡೀರ, ಮತ್ತು ಏಸೋರ್ಸ್‌ನಿಂದಲೂ ಪ್ರತಿನಿಧಿಗಳು ಬಂದಿದ್ದರು. ತನ್ನ ಸಮಾಪ್ತಿಯ ಹೇಳಿಕೆಗಳಲ್ಲಿ, ನ್ಯೂ ಯಾರ್ಕ್‌ನಲ್ಲಿರುವ ಮುಖ್ಯಕಾರ್ಯಾಲಯದಿಂದ ಬಂದಿದ್ದ ಸಹೋದರ ನಾರ್ ಉತ್ತೇಜಿಸಿದ್ದು: “ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಇರ್ರಿ. ಯೆಹೋವನು ಏನನ್ನು ಅನುಮತಿಸುವನು ಎಂಬುದು ನಿಮಗೆ ಎಂದಿಗೂ ಗೊತ್ತಿರುವುದಿಲ್ಲ. ಯಾರಿಗೆ ಗೊತ್ತು, ನಿಮ್ಮ ಮುಂದಿನ ಅಂತಾರಾಷ್ಟ್ರೀಯ ಅಧಿವೇಶನವನ್ನು ನೀವು ಪೋರ್ಚುಗಲ್‌ನಲ್ಲೇ ಹಾಜರಾಗುವಿರೋ ಏನೋ!”
ಮುಂದಿನ ವರ್ಷ ಸಾರುವ ಕೆಲಸವು ಪೋರ್ಚುಗಲ್‌ನಲ್ಲಿ ಕಾನೂನುಬದ್ಧ ಮನ್ನಣೆಯನ್ನು ಪಡೆದುಕೊಂಡಿತು. ಮತ್ತು ಸಹೋದರ ನಾರ್ ಅವರ ಮಾತುಗಳು ನಿಜವಾದವು. 1978ರಲ್ಲಿ ಲಿಸ್‌ಬನ್‌ನಲ್ಲಿ ನಾವು ನಮ್ಮ ಮೊದಲ ಅಂತಾರಾಷ್ಟ್ರೀಯ ಅಧಿವೇಶನವನ್ನು ನಡೆಸಿದೆವು. ಲಿಸ್‌ಬನ್‌ನ ಬೀದಿಗಳಲ್ಲಿ ನಡೆಯುತ್ತಾ, ಪ್ರಕಟನಾಫಲಕಗಳು ಮತ್ತು ಪತ್ರಿಕೆಗಳ ಮೂಲಕ ಸಾಕ್ಷಿಯನ್ನು ಕೊಡುವುದು ಮತ್ತು ಬಹಿರಂಗ
ಭಾಷಣಕ್ಕೆ ಆಮಂತ್ರಣಗಳನ್ನು ಕೊಡುತ್ತಾ ಹೋಗುವುದು ಎಂತಹ ಸುಯೋಗವಾಗಿತ್ತು! ಅದು ಕನಸು ನನಸಾದಂತಿತ್ತು.ನಾವು ನಮ್ಮ ಪೋರ್ಚುಗೀಸ್ ಸಹೋದರರನ್ನು ಪ್ರೀತಿಸಲಾರಂಭಿಸಿದ್ದೆವು, ಮತ್ತು ಇವರಲ್ಲಿ ಅನೇಕರು ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಂಡದ್ದಕ್ಕಾಗಿ ಸೆರೆವಾಸ ಮತ್ತು ಹೊಡೆತಗಳನ್ನು ಅನುಭವಿಸಿದ್ದರು. ಪೋರ್ಚುಗಲ್‌ನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ ವಿಷಯವು ಹಾಗಾಗಲಿಲ್ಲ. 1982ರಲ್ಲಿ, ಸೇವುಗೆ ಗಂಭೀರವಾದ ಹೃದ್ರೋಗವಿದೆಯೆಂದು ತಿಳಿದುಬಂತು. ಮತ್ತು ನಾವು ಬ್ರಸಿಲ್‌ಗೆ ಹಿಂದಿರುಗುವಂತೆ ಬ್ರಾಂಚ್ ಸಲಹೆ ನೀಡಿತು.
ಪರೀಕ್ಷೆಯ ಸಮಯ
ಬ್ರಸಿಲ್ ಬ್ರಾಂಚ್ ಆಫೀಸ್‌ನಲ್ಲಿರುವ ಸಹೋದರರು ತುಂಬ ಬೆಂಬಲ ನೀಡುತ್ತ, ನಮ್ಮನ್ನು ಸಾವೊ ಪೌಲೋವಿನ ಟೌಬಾಟೇಯಲ್ಲಿರುವ ಕೀರೀರೀನ್ ಸಭೆಯಲ್ಲಿ ಸೇವೆಸಲ್ಲಿಸುವಂತೆ ನೇಮಿಸಿದರು. ಸೇವು ಅವರ ಆರೋಗ್ಯವು ಬೇಗನೆ ಹದಗೆಟ್ಟಿತು, ಮತ್ತು ಶೀಘ್ರದಲ್ಲೇ ಅವರು ಮನೆಯಲ್ಲಿಯೇ ಇರಬೇಕಾಯಿತು. ಆಸಕ್ತ ವ್ಯಕ್ತಿಗಳು ಬೈಬಲನ್ನು ಅಧ್ಯಯನಮಾಡಲಿಕ್ಕಾಗಿ ನಮ್ಮ ಮನೆಗೆ ಬರುತ್ತಿದ್ದರು, ಮತ್ತು ಸೇವೆಗಾಗಿರುವ ಕೂಟಗಳು ದಿನನಿತ್ಯ ನಡೆಯುತ್ತಿದ್ದವು, ಮಾತ್ರವಲ್ಲದೆ ಸಾಪ್ತಾಹಿಕ ಪುಸ್ತಕ ಅಭ್ಯಾಸವೂ ಅಲ್ಲಿ ನಡೆಸಲ್ಪಡುತ್ತಿತ್ತು. ನಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಲು ಈ ಒದಗಿಸುವಿಕೆಗಳು ಸಹಾಯಮಾಡಿದವು.
ಸೇವು, 1985ರ ಅಕ್ಟೋಬರ್ 1ರಂದು ಮರಣಪಡುವ ವರೆಗೂ ಯೆಹೋವನ ಸೇವೆಯಲ್ಲಿ ತಮ್ಮಿಂದಾದ ಎಲ್ಲವನ್ನೂ ಮಾಡಿದರು. ನಾನು ದುಃಖಿತಳಾಗಿ ತುಸು ಖಿನ್ನಳಾದರೂ, ನನ್ನ ನೇಮಕದಲ್ಲಿ ಮುಂದುವರಿಯಲು ದೃಢನಿಶ್ಚಿತಳಾಗಿದ್ದೆ. ತದನಂತರ ಇನ್ನೊಂದು ಧಕ್ಕೆಯು ಬಂದೆರಗಿತು. 1986ರ ಏಪ್ರಿಲ್ ತಿಂಗಳಿನಲ್ಲಿ, ಕಳ್ಳರು ನನ್ನ ಮನೆಯೊಳಕ್ಕೆ ನುಗ್ಗಿ ಹೆಚ್ಚುಕಡಿಮೆ ಎಲ್ಲವನ್ನೂ ಕದ್ದುಕೊಂಡು ಹೋದರು. ನನ್ನ ಜೀವನದಲ್ಲಿ ಮೊದಲ ಬಾರಿ ನನಗೆ ಒಂಟಿಯಾದ ಅನಿಸಿಕೆಯಾಯಿತು ಮತ್ತು ಗಾಬರಿಯೂ ಆಯಿತು. ಒಬ್ಬ ದಂಪತಿಯು ಪ್ರೀತಿಯಿಂದ ನನ್ನನ್ನು ಅವರೊಂದಿಗೆ ಒಂದಷ್ಟು ಸಮಯ ಉಳಿಯುವಂತೆ ಆಮಂತ್ರಿಸಿದರು, ಮತ್ತು ನಾನು ಅದಕ್ಕೆ ತುಂಬ ಕೃತಜ್ಞಳಾದೆ.
ಸೇವುವಿನ ಮರಣ ಹಾಗೂ ನನ್ನ ಮನೆಯಲ್ಲಾದ ಕಳವು ಯೆಹೋವನಿಗೆ ನಾನು ಮಾಡುತ್ತಿದ್ದ ನನ್ನ ಸೇವೆಯನ್ನೂ ಬಾಧಿಸಿತು. ನಾನು ಶುಶ್ರೂಷೆಯಲ್ಲಿ ಧೈರ್ಯದಿಂದಿರಲು ಸಾಧ್ಯವಾಗಲಿಲ್ಲ. ನನ್ನ ಕಷ್ಟದ ಕುರಿತಾಗಿ ಬ್ರಾಂಚ್ ಆಫೀಸ್‌ಗೆ ಬರೆದ ನಂತರ, ನಾನು ನನ್ನ ಭಾವನಾತ್ಮಕ ಸಮತೋಲನವನ್ನು ಪುನಃ ಪಡೆದುಕೊಳ್ಳುವ ತನಕ ಬೆತೆಲ್‌ನಲ್ಲಿ ಇರುವಂತೆ ಕರೆದ ಒಂದು ಆಮಂತ್ರಣ ನನಗೆ ಸಿಕ್ಕಿತು. ಅದು ಎಂತಹ ಬಲದಾಯಕ ಸಮಯವಾಗಿತ್ತು!
ನನಗೆ ಸ್ವಲ್ಪ ಚೇತರಿಸಿಕೊಂಡ ಅನಿಸಿಕೆಯಾದಾಗ, ಸಾವೊ ಪೌಲೋ ರಾಜ್ಯದಲ್ಲಿರುವ ಈಪೂಆ ಎಂಬ ಪಟ್ಟಣದಲ್ಲಿ ಒಂದು ನೇಮಕವನ್ನು ಸ್ವೀಕರಿಸಿದೆ. ಸಾರುವ ಕೆಲಸವು ನನ್ನನ್ನು ಕಾರ್ಯಮಗ್ನಳಾಗಿ ಇರಿಸಿತು, ಆದರೆ ನಾನು ಮನಗುಂದುತ್ತಿದ್ದ ಸಮಯಗಳೂ ಇದ್ದವು. ಇಂತಹ ಸಮಯಗಳಲ್ಲಿ, ನಾನು ಕೀರೀರೀನ್‌ನಲ್ಲಿರುವ ಸಹೋದರರಿಗೆ ಫೋನ್ ಮಾಡುತ್ತಿದ್ದೆ ಮತ್ತು ಕೆಲವು ದಿನಗಳ ವರೆಗೆ ಒಂದು ಕುಟುಂಬವು ನನಗೆ ಭೇಟಿನೀಡುತ್ತಿತ್ತು. ಆ ಭೇಟಿಗಳು ನಿಜವಾಗಿಯೂ ಉತ್ತೇಜನದಾಯಕವಾಗಿದ್ದವು! ಈಪೂಆದಲ್ಲಿನ ನನ್ನ ಮೊದಲ ವರ್ಷದಲ್ಲಿ, 38 ವಿಭಿನ್ನ ಸಹೋದರ ಸಹೋದರಿಯರು ನನ್ನನ್ನು ನೋಡಲಿಕ್ಕಾಗಿ ಆ ದೀರ್ಘ ಪ್ರಯಾಣವನ್ನು ಮಾಡಿದರು.
ಸೇವುವಿನ ಮರಣದ ಆರು ವರ್ಷಗಳ ನಂತರ, 1992ರಲ್ಲಿ ಯೆಹೋವನ ಸಂಸ್ಥೆಯಿಂದ ಮತ್ತೊಂದು ಆಮಂತ್ರಣವನ್ನು ನಾನು ಪಡೆದುಕೊಂಡೆ. ಈ ಬಾರಿ ಅದು ಸಾವೊ ಪೌಲೋ ರಾಜ್ಯದಲ್ಲಿರುವ ಫ್ರಾಂಕ ಎಂಬ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಆಮಂತ್ರಣವಾಗಿತ್ತು, ಮತ್ತು ಇಂದಿನ ವರೆಗೂ ನಾನು ಅಲ್ಲಿಯೇ ಒಬ್ಬ ಪೂರ್ಣ ಸಮಯದ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿನ ಟೆರಿಟೊರಿಯು ಹೆಚ್ಚು ಫಲಕಾರಿಯಾಗಿದೆ. 1994ರಲ್ಲಿ ಅಲ್ಲಿಯ ಮೇಯರ್‌ನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದೆ. ಆ ಸಮಯದಲ್ಲಿ ಅವರು ಬ್ರಸಿಲ್‌ನ ಕಾಂಗ್ರೆಸ್‌ನಲ್ಲಿ ಒಂದು ಸೀಟ್‌ಗಾಗಿ ಚುನಾವಣಾ ಪ್ರಚಾರದಲ್ಲಿ ಒಳಗೂಡಿದ್ದರು. ಈ ಕಾರ್ಯಮಗ್ನ ಶೆಡ್ಯೂಲ್‌ನ ಹೊರತೂ ನಾವು ಪ್ರತಿ ಸೋಮವಾರ ಮಧ್ಯಾಹ್ನ ಅಧ್ಯಯನ ಮಾಡಿದೆವು. ಮಧ್ಯೆ ಬರುವ ಅಡಚಣೆಗಳನ್ನು ತಡೆಯಲಿಕ್ಕಾಗಿ ಅವರು ತಮ್ಮ ಫೋನನ್ನು ಆಫ್ ಮಾಡಿಬಿಡುತ್ತಿದ್ದರು. ಅವರು ಕ್ರಮೇಣ ರಾಜಕೀಯವನ್ನು ತೊರೆದು, ಸತ್ಯದ ಸಹಾಯದಿಂದಾಗಿ ತಮ್ಮ ವಿವಾಹವನ್ನು ಪುನಃ ಕಟ್ಟಲು ಸಾಧ್ಯವಾದದ್ದನ್ನು ನೋಡುವುದು ನನ್ನನ್ನು ಎಷ್ಟು ಸಂತೋಷಗೊಳಿಸಿತು! ಅವರು ಮತ್ತು ಅವರ ಪತ್ನಿ 1998ರಲ್ಲಿ ದೀಕ್ಷಾಸ್ನಾನ ಹೊಂದಿದರು.
ಹಿಂದಿರುಗಿ ನೋಡುವಾಗ, ಪೂರ್ಣ ಸಮಯದ ಶುಶ್ರೂಷಕಿಯಾಗಿದ್ದ ನನ್ನ ಜೀವಿತವು ಅಪಾರವಾದ ಆಶೀರ್ವಾದಗಳು ಮತ್ತು ಸುಯೋಗಗಳಿಂದ ತುಂಬಿತ್ತು ಎಂದು ನಾನು ಹೇಳಬಲ್ಲೆ. ಯೆಹೋವನು ತನ್ನ ಸಂಸ್ಥೆಯ ಮೂಲಕ ನೀಡಿದಂಥ ಆಮಂತ್ರಣಗಳನ್ನು ಸ್ವೀಕರಿಸಿದ್ದು, ನಿಜವಾಗಿಯೂ ಸಮೃದ್ಧವಾದ ಪ್ರತಿಫಲಗಳನ್ನು ತಂದಿದೆ. ಮತ್ತು ಮುಂದಕ್ಕೆ ಭವಿಷ್ಯದಲ್ಲಿ ಯಾವುದೇ ಆಮಂತ್ರಣಗಳು ಬರಲಿ, ಅವುಗಳನ್ನು ಸ್ವೀಕರಿಸಲಿಕ್ಕಾಗಿರುವ ನನ್ನ ಸಿದ್ಧಮನಸ್ಸು ಎಂದಿನಂತೆ ಬಲವುಳ್ಳದ್ದಾಗಿದೆ.
[ಪುಟ 25ರಲ್ಲಿರುವ ಚಿತ್ರಗಳು]
1957ರಲ್ಲಿ ನಾನು ಪೂರ್ಣ ಸಮಯದ ಸೇವೆಯನ್ನು ಸೇರಿಕೊಂಡಾಗ, ಮತ್ತು ಇಂದು
[ಪುಟ 26ರಲ್ಲಿರುವ ಚಿತ್ರ]
1963ರಲ್ಲಿ ಬ್ರಸಿಲ್‌ನ ಬೆತೆಲ್ ಕುಟುಂಬದೊಂದಿಗೆ
[ಪುಟ 27ರಲ್ಲಿರುವ ಚಿತ್ರ]
ಆಗಸ್ಟ್ 1965ರಲ್ಲಿ ನಮ್ಮ ಮದುವೆ
[ಪುಟ 27ರಲ್ಲಿರುವ ಚಿತ್ರ]
ಕೆಲಸವು ನಿಷೇಧಕ್ಕೊಳಗಾಗಿದ್ದಾಗ ಪೋರ್ಚುಗಲ್‌ನಲ್ಲಿ ಒಂದು ಸಮ್ಮೇಳನ
[ಪುಟ 28ರಲ್ಲಿರುವ ಚಿತ್ರ]
1978ರ “ವಿಜಯಪ್ರದ ನಂಬಿಕೆ” ಅಂತಾರಾಷ್ಟ್ರೀಯ ಅಧಿವೇಶನದ ಸಮಯದಲ್ಲಿ ಲಿಸ್‌ಬನ್‌ನಲ್ಲಿ ಬೀದಿ ಸಾಕ್ಷಿಕಾರ್ಯ