ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಯೆರೆಮೀಯ 7:16ರಲ್ಲಿ ದಾಖಲಿಸಲ್ಪಟ್ಟಿರುವ ದೇವರ ನಿರ್ದೇಶನವು, ಪಶ್ಚಾತ್ತಾಪಪಡದ ಪಾಪಿಯಾಗಿದ್ದದರಿಂದ ಸಭೆಯಿಂದ ಬಹಿಷ್ಕರಿಸಲ್ಪಟ್ಟ ಒಬ್ಬ ವ್ಯಕ್ತಿಯ ಕುರಿತು ಕ್ರೈಸ್ತರು ಪ್ರಾರ್ಥಿಸಕೂಡದು ಎಂಬುದನ್ನು ಅರ್ಥೈಸುತ್ತದೋ?
ಅಪನಂಬಿಗಸ್ತ ಯೆಹೂದದ ವಿರುದ್ಧ ತನ್ನ ನ್ಯಾಯತೀರ್ಪನ್ನು ಪ್ರಕಟಪಡಿಸಿದ ನಂತರ ಯೆಹೋವನು ಯೆರೆಮೀಯನಿಗೆ ಹೇಳಿದ್ದು: “ನೀನಂತು ಈ ಜನರಿಗೋಸ್ಕರ ಬೇಡಿಕೊಳ್ಳಬೇಡ, ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಬೇಡ, ನನಗೆ ವಿಜ್ಞಾಪಿಸಲೂ ಬೇಡ, ನಾನು ಕೇಳಲೊಲ್ಲೆ.”—ಯೆರೆಮೀಯ 7:16.
ಇಸ್ರಾಯೇಲ್ಯರಿಗಾಗಿ ಯೆರೆಮೀಯನು ಪ್ರಾರ್ಥಿಸುವುದನ್ನು ಯೆಹೋವನು ತಡೆದದ್ದು ಏಕೆ? ಆತನ ಧರ್ಮಶಾಸ್ತ್ರದ ವಿಷಯದಲ್ಲಿ ಅವರು ಮಾಡಿದ ಎದ್ದುಕಾಣುವ ಪಾಪಗಳಿಂದಾಗಿಯೇ ಆತನು ಹೀಗೆ ಹೇಳಿದನು ಎಂಬುದು ಸ್ಪಷ್ಟ. ಬಹಿರಂಗವಾಗಿ ಮತ್ತು ನಾಚಿಕೆಗೆಟ್ಟ ರೀತಿಯಲ್ಲಿ ಅವರು “ಕಳುವು ಕೊಲೆ ಹಾದರಗಳನ್ನು ಮಾಡಿ ಸುಳ್ಳುಸಾಕ್ಷಿ ಹೇಳಿ ಬಾಳನಿಗೆ ಹೋಮವನ್ನರ್ಪಿಸಿ ಕಂಡುಕೇಳದ ಅನ್ಯದೇವತೆಗಳನ್ನು ಹಿಂಬಾಲಿಸಿ”ದರು. ಇದರ ಪರಿಣಾಮವಾಗಿ, “ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ಎಸೆದುಬಿಟ್ಟ ಹಾಗೆ ನಿಮ್ಮನ್ನೂ ನನ್ನ ಕಣ್ಣೆದುರಿನಿಂದ ಎಸೆದುಬಿಡುವೆನು” ಎಂದು ಯೆಹೋವನು ಅಪನಂಬಿಗಸ್ತ ಯೆಹೂದ್ಯರಿಗೆ ಹೇಳಿದನು. ಆದುದರಿಂದ, ಯೆರೆಮೀಯನೇ ಆಗಲಿ ಅಥವಾ ಯಾರೊಬ್ಬರೇ ಆಗಲಿ, ಯೆಹೋವನು ತನ್ನ ನ್ಯಾಯತೀರ್ಪನ್ನು ಸಂಪೂರ್ಣವಾಗಿ ಬದಲಾಯಿಸುವಂತೆ ಪ್ರಾರ್ಥಿಸುವುದು ಯೋಗ್ಯವಾಗಿರುತ್ತಿರಲಿಲ್ಲ ಎಂಬುದಂತೂ ಖಂಡಿತ.—ಯೆರೆಮೀಯ 7:9, 15.
ಇದಕ್ಕೆ ಹೊಂದಿಕೆಯಲ್ಲಿ, ಅಪೊಸ್ತಲನಾದ ಯೋಹಾನನು ದೇವರಿಗೆ ಮಾಡತಕ್ಕ ಯೋಗ್ಯವಾದ ಪ್ರಾರ್ಥನೆಯ ಕುರಿತಾಗಿ ಬರೆದನು. ಮೊದಲು ಅವನು ಕ್ರೈಸ್ತರಿಗೆ ಆಶ್ವಾಸನೆ ನೀಡಿದ್ದು: “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.” (1 ಯೋಹಾನ 5:14) ನಂತರ, ಇತರರ ಪರವಾಗಿ ಪ್ರಾರ್ಥನೆ ಮಾಡುವುದರ ಕುರಿತು ಯೋಹಾನನು ಮುಂದುವರಿಸಿದ್ದು: “ಯಾವನಾದರೂ ತನ್ನ ಸಹೋದರನು ಮರಣಕರವಲ್ಲದ ಪಾಪಮಾಡುವದನ್ನು ಕಂಡರೆ ಅವನು ದೇವರನ್ನು ಬೇಡಿಕೊಳ್ಳಲಿ; ಆಗ ದೇವರು ಮರಣಕರವಲ್ಲದ ಪಾಪ ಮಾಡುವವರಿಗೆ ಜೀವವನ್ನು ದಯಪಾಲಿಸುವನು. ಮರಣಕರವಾದ ಪಾಪವುಂಟು; ಈ ಪಾಪದ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುವದಿಲ್ಲ.” (1 ಯೋಹಾನ 5:16) ಯೇಸು ಕೂಡ “ಕ್ಷಮಾಪಣೆಯಿಲ್ಲ”ದ ಪಾಪದ ಕುರಿತಾಗಿ ಮಾತಾಡಿದನು. ಅದು ಪವಿತ್ರಾತ್ಮದ ವಿರುದ್ಧವಾದ ಪಾಪವಾಗಿದೆ.—ಮತ್ತಾಯ 12:31, 32.
2 ಅರಸುಗಳು 21:1-9; 2 ಪೂರ್ವಕಾಲವೃತ್ತಾಂತ 33:1-11.
ಪಾಪಮಾಡಿದರೂ ಪಶ್ಚಾತ್ತಾಪಪಡದೆ ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಟ್ಟವರು “ಮರಣಕರವಾದ” ಪಾಪವನ್ನು ಮಾಡಿದ್ದಾರೆ, ಆದುದರಿಂದ ಅವರಿಗಾಗಿ ಪ್ರಾರ್ಥಿಸಬಾರದು ಎಂಬುದು ಇದರ ಅರ್ಥವೋ? ವಿಷಯವು ಹೀಗಿರಬೇಕೆಂದೇನಿಲ್ಲ, ಏಕೆಂದರೆ ಕೆಲವು ಸಂದರ್ಭಗಳಲ್ಲಿ ಈ ರೀತಿಯ ತಪ್ಪುಗಳು ಮರಣಕರವಾದ ಪಾಪಗಳಾಗಿರುವುದಿಲ್ಲ. ಅವು ಆ ರೀತಿಯವು ಎಂದು ಹೇಳುವುದು ಸಹ ಕಷ್ಟಕರವಾಗಿದೆ. ಯೆಹೂದದ ಅರಸನಾದ ಮನಸ್ಸೆಯು ಒಂದು ಉದಾಹರಣೆಯಾಗಿದ್ದಾನೆ. ಅವನು ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನು ಕಟ್ಟಿಸಿದನು, ತನ್ನ ಸ್ವಂತ ಮಕ್ಕಳನ್ನು ಯಜ್ಞವಾಗಿ ಅರ್ಪಿಸಿದನು, ಪ್ರೇತಾತ್ಮವಾದವನ್ನು ಅಭ್ಯಾಸಿಸಿದನು, ಮತ್ತು ಯೆಹೋವನ ದೇವಾಲಯದಲ್ಲಿ ಒಂದು ವಿಗ್ರಹವನ್ನು ತಂದಿಟ್ಟನು. ವಾಸ್ತವದಲ್ಲಿ, ಮನಸ್ಸೆ ಮತ್ತು ಜನಸಮೂಹವು, “ಯೆಹೋವನು ಇಸ್ರಾಯೇಲ್ಯರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯ”ಗಳಿಗಿಂತ ಹೆಚ್ಚಿನದ್ದನ್ನು ಮಾಡಿತು ಎಂಬುದಾಗಿ ಬೈಬಲ್ ಹೇಳುತ್ತದೆ. ಇವೆಲ್ಲವುಗಳಿಗಾಗಿ, ಮನಸ್ಸೆಯು ಬಂಧಿಸಲ್ಪಟ್ಟವನಾಗಿ ಬೇಡಿಗಳಲ್ಲಿ ಬಾಬೆಲಿಗೆ ಕೊಂಡೊಯ್ಯಲ್ಪಡುವಂತೆ ಮಾಡುವ ಮೂಲಕ ಯೆಹೋವನು ಅವನನ್ನು ದಂಡಿಸಿದನು.—ಮನಸ್ಸೆಯ ಪಾಪಗಳು ಘೋರವಾಗಿದ್ದರೂ, ಮರಣಕರವಾಗಿದ್ದವೋ? ಇಲ್ಲವೆಂಬುದು ಸ್ಪಷ್ಟ, ಏಕೆಂದರೆ ದಾಖಲೆಯು ಅವನ ಕುರಿತಾಗಿ ತಿಳಿಸುತ್ತಾ ಮುಂದುವರಿಯುವುದು: “ಆದರೆ ಆ ಕಷ್ಟದಲ್ಲಿ ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಲು ಆತನು ಲಾಲಿಸಿ ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ತಿರಿಗಿ ಯೆರೂಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟನು. ಆಗ ಯೆಹೋವನೇ ದೇವರೆಂಬದು ಮನಸ್ಸೆಗೆ ಮಂದಟ್ಟಾಯಿತು.”—2 ಪೂರ್ವಕಾಲವೃತ್ತಾಂತ 33:12, 13.
ಆದುದರಿಂದ, ಒಬ್ಬ ವ್ಯಕ್ತಿಯು ಸಭೆಯಿಂದ ಬಹಿಷ್ಕರಿಸಲ್ಪಟ್ಟ ಮಾತ್ರಕ್ಕೆ ಅವನು ಮರಣಕರವಾದ ಪಾಪಮಾಡಿರಬೇಕು ಎಂದು ನಾವು ಕೂಡಲೇ ತೀರ್ಮಾನಿಸಿಬಿಡಬಾರದು. ಆ ವ್ಯಕ್ತಿಯ ನಿಜವಾದ ಹೃದಯದ ಸ್ಥಿತಿಯು ವ್ಯಕ್ತವಾಗಲು ಸಮಯವು ತಗಲಬಹುದು. ವಾಸ್ತವದಲ್ಲಿ, ಬಹಿಷ್ಕಾರಮಾಡುವುದರ ಒಂದು ಉದ್ದೇಶವು ಆ ಪಾಪಿಯು ಎಚ್ಚತ್ತುಕೊಂಡು, ಪ್ರಾಯಶಃ ಪಶ್ಚಾತ್ತಾಪಪಟ್ಟು ತಿರುಗಿಕೊಳ್ಳಬೇಕು ಎಂಬುದಕ್ಕಾಗಿಯೇ ಎಂದು ಹಲವಾರು ಬಾರಿ ತಿಳಿಸಲಾಗುತ್ತದೆ.
ಆ ವ್ಯಕ್ತಿಯು ಇನ್ನು ಮುಂದೆ ಸಭೆಯಲ್ಲಿ ಇಲ್ಲದಿರುವ ಕಾರಣ, ಹೃದಯದಲ್ಲಿ ಅಥವಾ ಮನೋಭಾವದಲ್ಲಿ ಆಗುವಂಥ ಯಾವುದೇ ಬದಲಾವಣೆಯು ಅವನ ಆಪ್ತ ಸಂಬಂಧಿಕರಾಗಿರುವ ಜೀವನ ಸಂಗಾತಿಯಿಂದಲೋ ಅಥವಾ ಕುಟುಂಬ ಸದಸ್ಯರಿಂದಲೋ ಮೊದಲು ಗಮನಿಸಲ್ಪಡಬಹುದು. ಇಂತಹ ಬದಲಾವಣೆಗಳನ್ನು ಗಮನಿಸುವವರು, ತಪ್ಪಿತಸ್ಥನು ಮರಣಕರವಾದ ಪಾಪವನ್ನು ಮಾಡಲಿಲ್ಲ ಎಂದು ತೀರ್ಮಾನಿಸಬಹುದು. ಅವನು ದೇವರ ಪ್ರೇರಿತ ವಾಕ್ಯದಿಂದ ಬಲವನ್ನು ಪಡೆದುಕೊಳ್ಳುವಂತೆ ಮತ್ತು ಯೆಹೋವನು ತನ್ನ ಚಿತ್ತಾನುಸಾರವಾಗಿ ಆ ಪಾಪಿಯ ಕಡೆಗೆ ಕ್ರಿಯೆಗೈಯುವಂತೆ ಪ್ರಾರ್ಥಿಸಲು ಅವರು ಪ್ರೇರಿಸಲ್ಪಡಬಹುದು.—ಕೀರ್ತನೆ 44:21; ಪ್ರಸಂಗಿ 12:14.
ಪಾಪಿಯು ಪಶ್ಚಾತ್ತಾಪಪಟ್ಟಿದ್ದಾನೆ ಎಂಬುದನ್ನು ನಂಬಲು ಸಾಕಷ್ಟು ಪುರಾವೆಯನ್ನು ಗಮನಿಸುವ ಸ್ಥಾನದಲ್ಲಿ ಕೆಲವರು ಇರಬಹುದಾದರೂ, ಸಾಮಾನ್ಯವಾಗಿ ಸಭೆಯವರೆಲ್ಲರ ವಿಷಯದಲ್ಲಿ ಹೀಗಿರಲು ಸಾಧ್ಯವಿಲ್ಲದಿರಬಹುದು. ಯಾರಾದರೊಬ್ಬರು ತಪ್ಪಿತಸ್ಥನ ಕುರಿತಾಗಿ ಬಹಿರಂಗವಾಗಿ ಪ್ರಾರ್ಥಿಸುತ್ತಿರುವುದನ್ನು ಕೇಳಿಸಿಕೊಳ್ಳುವುದರಿಂದ ಸಭೆಯವರು ಗಲಿಬಿಲಿಗೊಳ್ಳಬಹುದು, ಗೊಂದಲಕ್ಕೀಡಾಗಬಹುದು, ಅಥವಾ ಎಡವಲೂಬಹುದು. ಈ ಕಾರಣದಿಂದಾಗಿ, ಪಾಪಿಯ ಕುರಿತಾಗಿ ಪ್ರಾರ್ಥಿಸಲು ಪ್ರೇರಿಸಲ್ಪಟ್ಟವರು ಇದನ್ನು ಖಾಸಗಿಯಾಗಿ ಮಾತ್ರ ಮಾಡಬೇಕು, ಮತ್ತು ಮುಂದಿನ ಯಾವುದೇ ಕ್ರಮವನ್ನು ಸಭೆಯಲ್ಲಿರುವ ಜವಾಬ್ದಾರಿಯುತ ಹಿರಿಯರ ಕೈಯಲ್ಲಿ ಬಿಡಬೇಕು.
[ಪುಟ 31ರಲ್ಲಿರುವ ಚಿತ್ರ]
ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡ ಕಾರಣದಿಂದಾಗಿ ಅವನ ಘೋರ ಪಾಪಗಳು ಕ್ಷಮಿಸಲ್ಪಟ್ಟವು
[ಪುಟ 30ರಲ್ಲಿರುವ ಚಿತ್ರ ಕೃಪೆ]
Reproduced from Illustrierte Pracht - Bibel/Heilige Schrift des Alten und Neuen Testaments, nach der deutschen Uebersetzung D. Martin Luther’s