“ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನ”
“ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನ”
ಮೊದಲ ಶತಮಾನದಲ್ಲಿ ಏಷಿಯಾ ಮೈನರ್ನ ಲವೊದಿಕೀಯದ ಕ್ರೈಸ್ತ ಸಭೆಗೆ ಯೇಸು ಕ್ರಿಸ್ತನು ಈ ಔಷಧಿಯನ್ನು ಸೂಚಿಸಿದನು.
ಯೇಸು ಹೇಳಿದ್ದು: ‘ಕಣ್ಣುಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನು . . . ಕೊಂಡುಕೊ’. ಇದು ಅಕ್ಷರಶಃ ಕಣ್ಣಿನ ರೋಗವಾಗಿರಲಿಲ್ಲ, ಬದಲಾಗಿ ಚಿಕಿತ್ಸೆಯನ್ನು ಅಗತ್ಯಪಡಿಸುವ ಆತ್ಮಿಕ ಕುರುಡುತನವಾಗಿತ್ತು. ಲವೊದಿಕೀಯದಲ್ಲಿದ್ದ ಕ್ರೈಸ್ತರು, ತಾವು ಜೀವಿಸುತ್ತಿದ್ದ ಪಟ್ಟಣದ ಪ್ರಾಪಂಚಿಕವಾಗಿ ಸಮೃದ್ಧವಾಗಿರುವ ಆತ್ಮದಿಂದ ಪ್ರಭಾವಿಸಲ್ಪಟ್ಟಿದ್ದರು, ಮತ್ತು ತಮ್ಮ ನಿಜ ಆತ್ಮಿಕ ಅಗತ್ಯಗಳ ಕುರಿತು ಉದಾಸೀನತೆ ತೋರಿಸುತ್ತಿದ್ದರು.
ಅವರ ದುರ್ಬಲಗೊಂಡಿದ್ದ ದೃಷ್ಟಿಗೆ ಇದೇ ಕಾರಣ ಎಂಬುದನ್ನು ಸೂಚಿಸುತ್ತಾ ಯೇಸು ಹೇಳಿದ್ದು: “ನಾನು ಐಶ್ವರ್ಯವಂತನು, ಸಂಪನ್ನನು, ಒಂದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವದನ್ನು ತಿಳಿಯದೆ ಇದ್ದೀ.” (ಓರೆ ಅಕ್ಷರಗಳು ನಮ್ಮವು.) ಅದರ ಅರಿವು ಇಲ್ಲದಿದ್ದರೂ, ಸಭೆಯ ಸದಸ್ಯರಿಗೆ ವಾಸಿಕಾರಕ “ಅಂಜನ” ಬೇಕಾಗಿತ್ತು, ಮತ್ತು ಇದನ್ನು ಅವರು ಯೇಸು ಕ್ರಿಸ್ತನ ಬೋಧನೆಗಳಿಗೆ ಮತ್ತು ಶಿಸ್ತಿಗೆ ಅಧೀನರಾಗುವುದರಿಂದ ಮಾತ್ರವೇ ಪಡೆದುಕೊಳ್ಳಸಾಧ್ಯವಿತ್ತು. ಆದುದರಿಂದಲೇ, “ನನ್ನಿಂದ ಕೊಂಡುಕೊ” ಎಂದು ಯೇಸು ಹೇಳಿದನು.—ಪ್ರಕಟನೆ 3:17, 18, ಓರೆ ಅಕ್ಷರಗಳು ನಮ್ಮವು.
ಲವೊದಿಕೀಯದಲ್ಲಿದ್ದವರ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಸತ್ಯ ಕ್ರೈಸ್ತರು ಇಂದು ತಾವು ಜೀವಿಸುತ್ತಿರುವಂಥ ಪ್ರಾಪಂಚಿಕ ಮತ್ತು ಭೋಗಾಸಕ್ತ ವಾತಾವರಣದಿಂದ ತಮಗರಿವಿಲ್ಲದೇ ಅನಾವಶ್ಯಕವಾಗಿ ಪ್ರಭಾವಿಸಲ್ಪಡುವುದರ ವಿರುದ್ಧ ತಮ್ಮನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರವಾದ ಆತ್ಮಿಕ ದೃಷ್ಟಿಯನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಔಷಧವು ಈ ಉತ್ತೇಜನದಲ್ಲಿ ಸೂಚಿಸಲ್ಪಟ್ಟಿದೆ: ‘ಕಣ್ಣುಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನು [ಯೇಸುವಿನಿಂದ] ಕೊಂಡುಕೊ.’
ಗಮನಿಸಲು ಯೋಗ್ಯವಾದ ವಿಷಯವೊಂದಿದೆ: ಈ ‘ಅಂಜನವನ್ನು’ ಕೊಂಡುಕೊಳ್ಳಬೇಕಾಗಿದೆ. ಇದರಲ್ಲಿ ವೆಚ್ಚವು ಒಳಗೂಡಿದೆ. ದೇವರ ವಾಕ್ಯವನ್ನು ಅಭ್ಯಾಸಿಸಲು ಮತ್ತು ಮನನಮಾಡಲು ಸಮಯವನ್ನು ವಿನಿಯೋಗಿಸಬೇಕಾಗಿದೆ. ಈ ವಾಕ್ಯವು, “ಪವಿತ್ರವಾದದ್ದು; [ಆತ್ಮಿಕ] ಕಣ್ಣುಗಳನ್ನು ಕಳೆಗೊಳಿಸುತ್ತದೆ” ಎಂದು ಕೀರ್ತನೆಗಾರನು ನಮಗೆ ಆಶ್ವಾಸನೆ ನೀಡುತ್ತಾನೆ.—ಕೀರ್ತನೆ 19:8.