ಸ್ವಚ್ಛತೆ ಎಷ್ಟು ಪ್ರಾಮುಖ್ಯ?
ಸ್ವಚ್ಛತೆ ಎಷ್ಟು ಪ್ರಾಮುಖ್ಯ?
ಸ್ವಚ್ಛತೆ ಬೇರೆ ಬೇರೆ ಜನರು ಬೇರೆ ಬೇರೆ ರೀತಿಯಲ್ಲಿ ಇದರ ಅರ್ಥನಿರೂಪಿಸುತ್ತಾರೆ. ದೃಷ್ಟಾಂತಕ್ಕಾಗಿ, ಒಬ್ಬ ಚಿಕ್ಕ ಹುಡುಗನನ್ನು ತೆಗೆದುಕೊಳ್ಳಿ. ಅವನ ತಾಯಿ ಅವನಿಗೆ, ಕೈಕಾಲು ಮುಖ ತೊಳೆದುಕೊಂಡು ಬಾ ಎಂದು ಹೇಳುವಾಗ, ತನ್ನ ಬೆರಳುಗಳನ್ನೂ ತುಟಿಗಳನ್ನೂ ನೀರಿನಿಂದ ಒದ್ದೆಮಾಡಿದರೆ ಸಾಕು ಎಂದು ಅವನು ನೆನಸಬಹುದು. ಆದರೆ ತಾಯಿಗೆ ಅವನಿಗಿಂತ ಹೆಚ್ಚು ತಿಳಿದಿದೆ. ಅವಳು ಪುನಃ ಅವನನ್ನು ಸ್ನಾನದ ಕೋಣೆಗೆ ಕರೆದುಕೊಂಡು ಹೋಗಿ, ಅವನು ಕಿರಿಚಾಡುತ್ತಾ ಇದ್ದರೂ, ಅವನ ಕೈಕಾಲು ಮುಖವನ್ನು ಸಾಬೂನು ಮತ್ತು ತುಂಬ ನೀರನ್ನು ಉಪಯೋಗಿಸಿ ಚೆನ್ನಾಗಿ ತೊಳೆಯುತ್ತಾಳೆ.
ಲೋಕದ ಸುತ್ತಲೂ ಸ್ವಚ್ಛತೆಯ ಮಟ್ಟಗಳು ಒಂದೇ ರೀತಿಯದ್ದಾಗಿರುವುದಿಲ್ಲ ಮತ್ತು ಜನರು ಸ್ವಚ್ಛತೆಯ ವಿಷಯದಲ್ಲಿ ವಿಭಿನ್ನವಾದ ಅಭಿಪ್ರಾಯಗಳೊಂದಿಗೆ ಬೆಳೆಯುತ್ತಾರೆಂಬುದಂತೂ ನಿಜ. ಗತಕಾಲಗಳಲ್ಲಿ, ಸ್ವಚ್ಛವಾದ, ಸುವ್ಯವಸ್ಥಿತ ಶಾಲಾ ಪರಿಸರವು, ವಿದ್ಯಾರ್ಥಿಗಳು ಸ್ವಚ್ಛತೆಯ ಒಳ್ಳೇ ರೂಢಿಗಳನ್ನು ಮೈಗೂಡಿಸಿಕೊಳ್ಳುವಂತೆ ಸಹಾಯಮಾಡುತ್ತಿತ್ತು. ಆದರೆ ಈಗ ಕೆಲವೊಂದು ಶಾಲಾ ಮೈದಾನಗಳಲ್ಲಿ ಎಷ್ಟೊಂದು ಕಸಕಡ್ಡಿ ಮತ್ತು ಮುರುಕಲು ಗುಪ್ಪೆಗಳಿರುತ್ತವೆಂದರೆ, ಅವು ಆಟ ಅಥವಾ ವ್ಯಾಯಾಮದ ಸ್ಥಳಗಳಂತೆ ತೋರುವ ಬದಲು, ತಿಪ್ಪೆಗುಂಡಿಗಳಂತೆ ತೋರುತ್ತವೆ. ಮತ್ತು ತರಗತಿ ಕೋಣೆಯ ಕುರಿತಾಗಿ ಏನು? ಆಸ್ಟ್ರೇಲಿಯದ ಒಂದು ಪ್ರೌಢ ಶಾಲೆಯಲ್ಲಿ ಒಬ್ಬ ದ್ವಾರಪಾಲಕನಾಗಿರುವ ಡ್ಯಾರೆನ್ ಎಂಬವನು ಹೇಳಿದ್ದು: “ಈಗ ತರಗತಿ ಕೋಣೆಗಳಲ್ಲೂ ಹೊಲಸು ಇರುತ್ತದೆ.” “ಕಸವನ್ನು ಎಸೆದು ಬಾ” ಅಥವಾ “ಶುಚಿಮಾಡು” ಎಂದು ಕೆಲವು ವಿದ್ಯಾರ್ಥಿಗಳಿಗೆ ಹೇಳಲ್ಪಟ್ಟಾಗ, ಅವರು ಅದನ್ನು ಒಂದು ಶಿಕ್ಷೆಯಾಗಿ ಪರಿಗಣಿಸುತ್ತಾರೆ. ಸಮಸ್ಯೆಯೇನೆಂದರೆ, ಕೆಲವು ಶಿಕ್ಷಕರು ಅದನ್ನೇ ಮಾಡುತ್ತಾರೆ, ಅಂದರೆ ಅವರು ಸ್ವಚ್ಛಗೊಳಿಸುವಿಕೆಯನ್ನು ಒಂದು ಶಿಕ್ಷೆಯಾಗಿ ಉಪಯೋಗಿಸುತ್ತಾರೆ.
ಇನ್ನೊಂದು ಕಡೆಯಲ್ಲಿ, ಸ್ವತಃ ವಯಸ್ಕರೇ ತಮ್ಮ ದೈನಂದಿನ ಜೀವಿತದಲ್ಲಾಗಲಿ, ವ್ಯಾಪಾರೀ ಜಗತ್ತಿನಲ್ಲಾಗಲಿ ಸ್ವಚ್ಛತೆಯ ಸಂಬಂಧದಲ್ಲಿ ಯಾವಾಗಲೂ ಒಳ್ಳೆಯ ಮಾದರಿಗಳಾಗಿರುವುದಿಲ್ಲ. ಉದಾಹರಣೆಗಾಗಿ, ಅನೇಕ ಸಾರ್ವಜನಿಕ ಕ್ಷೇತ್ರಗಳನ್ನು ಕೊಳಕಾಗಿ ಮತ್ತು ಅನಾಕರ್ಷಣೀಯವಾಗಿ ಬಿಡಲಾಗುತ್ತದೆ. ಕೆಲವು ಕಾರ್ಖಾನೆಗಳು ಪರಿಸರವನ್ನು ಮಲಿನಗೊಳಿಸುತ್ತವೆ. ಆದರೆ ಈ ಮಾಲಿನ್ಯವು, ನಿರ್ಜೀವಿ ಕಾರ್ಖಾನೆಗಳು ಮತ್ತು ವ್ಯಾಪಾರಗಳಿಂದ ಆಗುತ್ತಿಲ್ಲ, ಜನರೇ ಅದನ್ನು ಮಾಡುತ್ತಿದ್ದಾರೆ. ಮಾಲಿನ್ಯ ಮತ್ತು ಅದರ ಅನೇಕಾನೇಕ ದುಷ್ಪರಿಣಾಮಗಳ ಲೋಕವ್ಯಾಪಕ ಸಮಸ್ಯೆಗೆ ಮುಖ್ಯ ಕಾರಣವು ದುರಾಸೆಯಾಗಿದ್ದರೂ, ಆ ಸಮಸ್ಯೆಯ ಒಂದು ಕಾರಣವು, ವೈಯಕ್ತಿಕವಾದ ಹೊಲಸು ದುರಾಭ್ಯಾಸಗಳೇ ಆಗಿವೆ. ಆಸ್ಟ್ರೇಲಿಯದ ಕಾಮನ್ವೆಲ್ತ್ನ ಒಬ್ಬ ಮಾಜಿ ಡೈರೆಕ್ಟರ್ ಜನರಲ್ ಹೀಗಂದಾಗ, ಅವರು ಆ ಅಭಿಪ್ರಾಯವನ್ನು ಬೆಂಬಲಿಸಿದರು: “ಸಾರ್ವಜನಿಕ ಆರೋಗ್ಯದ ಕುರಿತಾದ ಎಲ್ಲಾ ವಾದಾಂಶಗಳ ಸಾರಾಂಶವು ಇಷ್ಟೇ: ಪ್ರತಿಯೊಬ್ಬ ವ್ಯಕ್ತಿಯು ಸ್ವಚ್ಛತೆಗೆ ಮಹತ್ವವನ್ನು ಕೊಡಬೇಕು.”
ಆದರೂ, ಸ್ವಚ್ಛತೆಯು ಒಂದು ವೈಯಕ್ತಿಕ ವಿಷಯವಾಗಿದೆ, ಮತ್ತು ಅದರ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳಬಾರದೆಂದು ಕೆಲವರಿಗೆ ಅನಿಸುತ್ತದೆ. ಅದು ನಿಜವೋ?
ಆಹಾರದ ಸಂಬಂಧದಲ್ಲಿ ಸ್ವಚ್ಛತೆಯ ಮಹತ್ವವನ್ನು ಎಷ್ಟು ಹೇಳಿದರೂ ಸಾಲದು. ನಾವು ಆಹಾರವನ್ನು ಮಾರುಕಟ್ಟೆಯಿಂದ ಖರೀದಿಸುತ್ತಿರಲಿ, ಒಂದು ರೆಸ್ಟರಾಂಟ್ನಲ್ಲಿ ತಿನ್ನುತ್ತಿರಲಿ ಇಲ್ಲವೇ ಒಬ್ಬ ಮಿತ್ರನ ಮನೆಯಲ್ಲಿ ಊಟಮಾಡುತ್ತಿರಲಿ, ಸ್ವಚ್ಛತೆಯು ಮಾತ್ರ ತುಂಬ ಪ್ರಾಮುಖ್ಯ. ನಾವು ತಿನ್ನುತ್ತಿರುವ ಆಹಾರವನ್ನು ತಯಾರಿಸುತ್ತಿರುವವರು ಮತ್ತು ಬಡಿಸುವವರು ಉಚ್ಚ ಮಟ್ಟದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನಮ್ಮ ಕೈಗಳಾಗಲಿ, ಅವರ ಕೈಗಳಾಗಲಿ ಕೊಳಕಾಗಿರುವಲ್ಲಿ, ಅವು ಅನೇಕ ಕಾಯಿಲೆಗಳಿಗೆ
ಕಾರಣವಾಗಿರಬಲ್ಲವು. ನಾವು ಸ್ವಚ್ಛತೆಯನ್ನು ನಿರೀಕ್ಷಿಸುವಂಥ ಆಸ್ಪತ್ರೆಗಳ ಬಗ್ಗೆ ಏನು ಹೇಳಬಹುದು? ಔಷಧಶಾಸ್ತ್ರದ ಬಗ್ಗೆ ನ್ಯೂ ಇಂಗ್ಲೆಂಡ್ ಪತ್ರಿಕೆ (ಇಂಗ್ಲಿಷ್) ವರದಿಸಿದ್ದೇನೆಂದರೆ, ಡಾಕ್ಟರರು ಮತ್ತು ನರ್ಸ್ಗಳು ಕೈಗಳನ್ನು ತೊಳೆಯದೆ ಇರುವುದರಿಂದ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸೋಂಕು ತಗಲುತ್ತದೆ. ಮತ್ತು ಇದನ್ನು ಗುಣಪಡಿಸಲಿಕ್ಕಾಗಿ ಒಂದು ವರ್ಷದಲ್ಲಿ ಒಂದು ಸಾವಿರ ಕೋಟಿ ಡಾಲರುಗಳಷ್ಟು ಹಣವು ಖರ್ಚಾಗುತ್ತದೆ. ಯಾವುದೇ ವ್ಯಕ್ತಿ, ತನ್ನ ಕೊಳಕು ಅಭ್ಯಾಸಗಳಿಂದಾಗಿ ನಮ್ಮ ಆರೋಗ್ಯವನ್ನು ಅಪಾಯದಲ್ಲಿ ಹಾಕಬಾರದೆಂದು ನಾವು ನಿರೀಕ್ಷಿಸುವುದರಲ್ಲಿ ಏನೂ ತಪ್ಪಿಲ್ಲ.ಯಾರಾದರೊಬ್ಬರು ಬೇಕುಬೇಕೆಂದೇ ಇಲ್ಲವೇ ಆಲೋಚಿಸದೇ, ನಮ್ಮ ನೀರಿನ ಸರಬರಾಯಿಯನ್ನು ಮಲಿನಗೊಳಿಸುವುದಾದರೆ ಅದು ತುಂಬ ಗಂಭೀರವಾದ ಸಂಗತಿಯಾಗಿರುತ್ತದೆ. ಮತ್ತು ಮಾದಕ ದ್ರವ್ಯಗಳ ವ್ಯಸನಿಗಳು ಹಾಗೂ ಇತರರು ಬಿಟ್ಟುಹೋಗಿರುವ ಸಿರಿಂಜ್ಗಳು ಎಲ್ಲೆಡೆಯೂ ಬಿದ್ದಿರುವುದನ್ನು ನೋಡಬಹುದಾದ ಒಂದು ಸಮುದ್ರ ತೀರದಲ್ಲಿ ಬರಿಗಾಲಲ್ಲಿ ಅಡ್ಡಾಡುವುದು ಎಷ್ಟು ಸುರಕ್ಷಿತವಾಗಿದೆ? ಇವೆಲ್ಲಕ್ಕಿಂತಲೂ ನಮಗೆ ಅತಿ ಹೆಚ್ಚು ಪ್ರಾಮುಖ್ಯವಾಗಿರುವ ಪ್ರಶ್ನೆಯೇನೆಂದರೆ, ನಮ್ಮ ಸ್ವಂತ ಮನೆಯಲ್ಲೇ ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೇವೊ?
ಕಸ ಹೊಡೆಯುವುದು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಸೂಲೇನ್ ಹೊಯ್ ಕೇಳುವುದು: “ನಾವು ಒಂದು ಕಾಲದಲ್ಲಿ ಎಷ್ಟು ಸ್ವಚ್ಛವಾಗಿದ್ದೆವೊ ಈಗಲೂ ಅಷ್ಟೇ ಸ್ವಚ್ಛವಾಗಿದ್ದೇವೊ?” ಅವಳು ಉತ್ತರಿಸುವುದು: “ಬಹುಶಃ ಇಲ್ಲ.” ಇದಕ್ಕೆ ಮುಖ್ಯ ಕಾರಣ ಸಾಮಾಜಿಕ ಮೌಲ್ಯಗಳಲ್ಲಿನ ಬದಲಾವಣೆಗಳೆಂದು ಅವಳು ಹೇಳುತ್ತಾಳೆ. ಇಂದು ಜನರು ತಮ್ಮ ಮನೆಗಳಲ್ಲಿ ತೀರ ಕಡಿಮೆ ಸಮಯವನ್ನು ಕಳೆಯುತ್ತಿರುವುದರಿಂದ, ಶುಚಿಗೊಳಿಸುವ ಕೆಲಸವನ್ನು ಹಣಕೊಟ್ಟು ಬೇರೆಯವರಿಂದ ಮಾಡಿಸಿಕೊಳ್ಳುತ್ತಾರೆ. ಫಲಸ್ವರೂಪವಾಗಿ, ಸ್ವಚ್ಛ ಪರಿಸರವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರಾಧಾನ್ಯವನ್ನು ಕೊಡಲಾಗುವುದಿಲ್ಲ. “ನಾನು ಸ್ನಾನದ ಕೋಣೆಯಲ್ಲಿನ ಶವರ್ ಸಾಧನವನ್ನು ಸ್ವಚ್ಛಮಾಡುವುದಿಲ್ಲ—ನನ್ನನ್ನು ಸ್ವಚ್ಛಗೊಳಿಸಿಕೊಳ್ಳುತ್ತೇನೆ. ನನ್ನ ಮನೆ ಗಲೀಜಾಗಿದ್ದರೂ, ಕಡಿಮೆಪಕ್ಷ ನಾನಾದರೂ ಸ್ವಚ್ಛವಾಗಿದ್ದೇನಲ್ಲ” ಎಂದು ಒಬ್ಬ ವ್ಯಕ್ತಿ ಹೇಳಿದನು.
ಆದರೆ ಸ್ವಚ್ಛತೆಯು ಕೇವಲ ಬಾಹ್ಯರೂಪದ್ದಾಗಿರಬಾರದು. ಅದು, ಆರೋಗ್ಯಕರ ಜೀವನ ರೀತಿಯ ಸರ್ವವ್ಯಾಪಿ ನೀತಿಸೂತ್ರವಾಗಿದೆ. ಅದು ನಮ್ಮ ನೈತಿಕ ಮೌಲ್ಯಗಳು ಮತ್ತು ಆರಾಧನೆಯನ್ನು ಒಳಗೊಂಡಿರುವ ಹೃದಮನಗಳ ಒಂದು ಸ್ಥಿತಿಯೂ ಆಗಿದೆ. ಇದು ಹೇಗೆಂಬುದನ್ನು ನಾವು ನೋಡೋಣ.