ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧರು
ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧರು
“ದೇವರು . . . ನಾವು ಶುಶ್ರೂಷಕರಾಗಿರುವಂತೆ ನಮ್ಮನ್ನು ಸಮರ್ಪಕವಾಗಿ ಅರ್ಹರನ್ನಾಗಿ ಮಾಡಿದ್ದಾನೆ.”—2 ಕೊರಿಂಥ 3:5, 6, NW.
1, 2. ಕೆಲವೊಮ್ಮೆ ಸಾರಲಿಕ್ಕಾಗಿ ಯಾವ ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ಅವು ಸಾಮಾನ್ಯವಾಗಿ ವಿಫಲವಾಗಿರುವುದೇಕೆ?
ನೀವು ಮಾಡಲು ಅರ್ಹರಾಗಿರದಂಥ ಒಂದು ಕೆಲಸವು ನಿಮಗೆ ಕೊಡಲ್ಪಡುವಾಗ ನಿಮಗೆ ಹೇಗನಿಸುತ್ತದೆ? ಇದನ್ನು ಕಲ್ಪಿಸಿಕೊಳ್ಳಿ: ಆ ಕೆಲಸಕ್ಕಾಗಿ ಅವಶ್ಯವಿರುವ ಎಲ್ಲ ವಸ್ತುಗಳು ನಿಮ್ಮ ಮುಂದೆ ಇಡಲ್ಪಟ್ಟಿವೆ, ಅದಕ್ಕೆ ಬೇಕಾಗಿರುವ ಉಪಕರಣಗಳೂ ಅಲ್ಲಿವೆ. ಆದರೆ ಈ ಕೆಲಸವನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ನಿಮಗೆ ಸ್ವಲ್ಪವೂ ಗೊತ್ತಿಲ್ಲ. ಇದಲ್ಲದೆ, ಈ ನಿರ್ದಿಷ್ಟ ಕೆಲಸವು ತುಂಬ ತುರ್ತಿನದ್ದಾಗಿದೆ. ಮತ್ತು ಜನರು ನಿಮ್ಮ ಮೇಲೆ ಆತುಕೊಂಡಿದ್ದಾರೆ. ನಿಮಗೆ ಎಷ್ಟು ಹತಾಶೆಯಾಗುವುದು!
2 ಇಂತಹ ಉಭಯಸಂಕಟವು ಸಂಪೂರ್ಣವಾಗಿ ಕಾಲ್ಪನಿಕವಾದದ್ದಲ್ಲ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ಕೆಲವೊಮ್ಮೆ ಕ್ರೈಸ್ತಪ್ರಪಂಚದ ಒಂದು ಚರ್ಚು ಮನೆಮನೆಯ ಸೇವೆಯನ್ನು ಏರ್ಪಡಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದೆ. ಆದರೆ ಇಂತಹ ಪ್ರಯತ್ನಗಳು ಕೆಲವೇ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ನಿಧಾನಗೊಂಡು, ಸಾಮಾನ್ಯವಾಗಿ ವಿಫಲಗೊಂಡಿವೆ. ಅದೇಕೆ? ಏಕೆಂದರೆ ಕ್ರೈಸ್ತಪ್ರಪಂಚವು ತನ್ನ ಅನುಯಾಯಿಗಳನ್ನು ಆ ಕೆಲಸಕ್ಕೆ ಅರ್ಹರನ್ನಾಗಿ ಮಾಡಿಲ್ಲ. ಅದರ ಪಾದ್ರಿಗಳು ಅನೇಕವೇಳೆ ಐಹಿಕ ಶಾಲೆ ಮತ್ತು ಸೆಮಿನೆರಿಗಳಲ್ಲಿ ವರ್ಷಗಟ್ಟಲೆ ಸಮಯವನ್ನು ಕಳೆದರೂ, ಸ್ವತಃ ಅವರೇ ಸಾರುವ ಕೆಲಸಕ್ಕೆ ಅರ್ಹರಾಗಿರುವುದಿಲ್ಲ. ಅದನ್ನು ನಾವು ಏಕೆ ಹೇಳಬಲ್ಲೆವು?
3. ಎರಡನೆಯ ಕೊರಿಂಥ 3:5, 6ರಲ್ಲಿ ಯಾವ ಅಭಿವ್ಯಕ್ತಿಯನ್ನು ಮೂರು ಸಲ ಉಪಯೋಗಿಸಲಾಗಿದೆ, ಮತ್ತು ಅದರ ಅರ್ಥವೇನು?
3 ಸುವಾರ್ತೆಯ ನಿಜ ಪ್ರಚಾರಕನನ್ನು ಯಾವುದು ಅರ್ಹನನ್ನಾಗಿ ಮಾಡುತ್ತದೆ ಎಂಬುದನ್ನು ದೇವರ ವಾಕ್ಯವು ವಿವರಿಸುತ್ತದೆ. ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ನಮ್ಮಿಂದಲೇ ಏನಾದರೂ ಹೊರಡುತ್ತದೆಂದು ಎಣಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಪಕವಾಗಿ ಅರ್ಹರಾಗಲಿಲ್ಲ; ಬದಲಾಗಿ ದೇವರು ನಮ್ಮನ್ನು ಸಮರ್ಪಕವಾಗಿ ಅರ್ಹರನ್ನಾಗಿ ಮಾಡುತ್ತಾನೆ; . . . ಶುಶ್ರೂಷಕರಾಗಿರುವಂತೆ ನಮ್ಮನ್ನು ಸಮರ್ಪಕವಾಗಿ ಅರ್ಹರನ್ನಾಗಿ ಮಾಡಿದವನು ಆತನೇ ಆಗಿದ್ದಾನೆ.” (2 ಕೊರಿಂಥ 3:5, 6, NW) ಇಲ್ಲಿ ಮೂರು ಬಾರಿ ಉಪಯೋಗಿಸಲ್ಪಟ್ಟಿರುವ ‘ಸಮರ್ಪಕವಾಗಿ ಅರ್ಹರಾಗಿರುವುದು’ ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ಅದರ ಅರ್ಥವೇನು? ವೈನ್ಸ್ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್ ಬಿಬ್ಲಿಕಲ್ ವರ್ಡ್ಸ್ ಹೇಳುವುದು: “ವಸ್ತುಗಳ ಕುರಿತು ಮಾತಾಡುವಾಗ [ಈ ಗ್ರೀಕ್ ಪದವು] ‘ಸಾಕಷ್ಟು’ ಎಂದು ಸೂಚಿಸುತ್ತದೆ . . . ; ಆದರೆ ವ್ಯಕ್ತಿಗಳ ಕುರಿತು ಮಾತಾಡುವಾಗ ಅದರ ಅರ್ಥ ‘ಸಮರ್ಥ,’ ‘ಯೋಗ್ಯ’ ಎಂದಾಗುತ್ತದೆ.” ಆದುದರಿಂದ, “ಸಮರ್ಪಕವಾಗಿ ಅರ್ಹ”ನಾಗಿರುವವನು, ಕೊಡಲ್ಪಟ್ಟಿರುವ ಒಂದು ಕೆಲಸವನ್ನು ಮಾಡಲು ಸಮರ್ಥನೂ ಯೋಗ್ಯನೂ ಆಗಿದ್ದಾನೆ. ಹೌದು, ಸುವಾರ್ತೆಯ ನಿಜ ಶುಶ್ರೂಷಕರು ಈ ಕೆಲಸವನ್ನು ಮಾಡಲು ಅರ್ಹರಾಗಿದ್ದಾರೆ. ಅವರು ಈ ಕೆಲಸವನ್ನು ಮಾಡಲು ಸಮರ್ಥರು, ತಕ್ಕವರು ಇಲ್ಲವೆ ಯೋಗ್ಯರು ಆಗಿದ್ದಾರೆ.
4. (ಎ) ಕ್ರೈಸ್ತ ಶುಶ್ರೂಷೆಗೆ ಅರ್ಹರಾಗುವುದು, ಕೇವಲ ಕೆಲವೇ ಮಂದಿ ಗಣ್ಯ ವ್ಯಕ್ತಿಗಳಿಗೆ ಸೀಮಿತವಾಗಿಲ್ಲವೆಂಬುದನ್ನು ಪೌಲನ ಉದಾಹರಣೆಯು ಹೇಗೆ ತೋರಿಸುತ್ತದೆ? (ಬಿ) ಯೆಹೋವನು ನಮ್ಮನ್ನು ಶುಶ್ರೂಷಕರೋಪಾದಿ ಅರ್ಹಗೊಳಿಸುವ ಮೂರು ಮಾಧ್ಯಮಗಳು ಯಾವುವು?
4 ಆದರೆ ಆ ಅರ್ಹತೆಯು ಎಲ್ಲಿಂದ ಬರುತ್ತದೆ? ಸ್ವಂತ ಬುದ್ಧಿಶಕ್ತಿಯಿಂದಲೊ? ಶ್ರೇಷ್ಠ ಬುದ್ಧಿಶಕ್ತಿಯ ಕಾರಣದಿಂದಲೊ? ಗೌರವಾನ್ವಿತ ಶಾಲೆಗಳಲ್ಲಿ ವಿಶೇಷ ವಿದ್ಯಾಭ್ಯಾಸವನ್ನು ಪಡೆಯುವುದರಿಂದಲೋ? ಅಪೊಸ್ತಲ ಪೌಲನಲ್ಲಿ ಈ ಎಲ್ಲ ಅರ್ಹತೆಗಳಿದ್ದವೆಂಬುದು ಸುವ್ಯಕ್ತ. (ಅ. ಕೃತ್ಯಗಳು 22:3; ಫಿಲಿಪ್ಪಿ 3:4, 5) ಆದರೂ, ಸುವಾರ್ತೆಯ ಶುಶ್ರೂಷಕನಾಗಿರುವ ತನ್ನ ಅರ್ಹತೆಗಳು ತನ್ನಿಂದಲ್ಲ, ಬದಲಾಗಿ ಯೆಹೋವ ದೇವರಿಂದ ಬಂದಿದ್ದವು ಎಂಬುದನ್ನು ಅವನು ದೀನಭಾವದಿಂದ ಒಪ್ಪಿಕೊಂಡನು. ಇಂತಹ ಅರ್ಹತೆಗಳು ಗಣ್ಯರಾದ ಕೆಲವು ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿವೆಯೊ? “ನಾವು ಸಮರ್ಪಕವಾಗಿ ಅರ್ಹರಾಗಿ”ದ್ದೇವೆ ಎಂದು ಪೌಲನು ಕೊರಿಂಥದ ಸಭೆಗೆ ಬರೆದನು. ತನ್ನ ಎಲ್ಲ ನಂಬಿಗಸ್ತ ಸೇವಕರು, ತಾನು ಅವರಿಗೆ ನೇಮಿಸಿರುವ ಕೆಲಸವನ್ನು ಮಾಡಲು ಸಮರ್ಥರಾಗಿರುವಂತೆ ಯೆಹೋವನು ನೋಡಿಕೊಳ್ಳುತ್ತಾನೆಂಬುದನ್ನು ಅದು ಖಂಡಿತವಾಗಿಯೂ ಸೂಚಿಸುತ್ತದೆ. ಯೆಹೋವನು ಇಂದು ಸತ್ಯ ಕ್ರೈಸ್ತರನ್ನು ಹೇಗೆ ಅರ್ಹರನ್ನಾಗಿ ಮಾಡುತ್ತಾನೆ? ಆತನು ಉಪಯೋಗಿಸುವ ಮೂರು ಮಾಧ್ಯಮಗಳನ್ನು ನಾವು ಚರ್ಚಿಸೋಣ: (1) ಆತನ ವಾಕ್ಯ, (2) ಆತನ ಪವಿತ್ರಾತ್ಮ, ಮತ್ತು (3) ಆತನ ಭೂಸಂಸ್ಥೆ.
ಯೆಹೋವನ ವಾಕ್ಯವು ನಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ
5, 6. ಪವಿತ್ರ ಶಾಸ್ತ್ರಗಳು ಸತ್ಯ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ?
5 ಪ್ರಥಮವಾಗಿ, ದೇವರ ವಾಕ್ಯವು ನಮ್ಮನ್ನು ಶುಶ್ರೂಷಕರಾಗಲು ಅರ್ಹರನ್ನಾಗಿ ಮಾಡುವುದು ಹೇಗೆ? ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಹೀಗೆ ಪವಿತ್ರ ಶಾಸ್ತ್ರವು, ಜನರಿಗೆ ದೇವರ ವಾಕ್ಯದ ಕುರಿತು ಕಲಿಸುವ “ಸತ್ಕಾರ್ಯಕ್ಕೆ” ನಮ್ಮನ್ನು ‘ಪ್ರವೀಣರನ್ನಾಗಿಯೂ ಸನ್ನದ್ಧರನ್ನಾಗಿಯೂ’ ಮಾಡಬಲ್ಲದು. ಆದರೆ ಕ್ರೈಸ್ತಪ್ರಪಂಚದ ಚರ್ಚುಗಳಿಗೆ ಹೋಗುವವರೆಲ್ಲರ ಕುರಿತಾಗಿ ಏನು? ಅವರ ಬಳಿಯೂ ಬೈಬಲು ಇದೆ. ಹೀಗಿರಲಾಗಿ, ಈ ಒಂದೇ ಗ್ರಂಥವು ಕೆಲವರನ್ನು ಅರ್ಹ ಶುಶ್ರೂಷಕರನ್ನಾಗಿ ಮಾಡುವಾಗ, ಇನ್ನು ಕೆಲವರನ್ನು ಅರ್ಹರನ್ನಾಗಿ ಮಾಡದೇ ಇರಲು ಹೇಗೆ ಸಾಧ್ಯ? ಇದಕ್ಕೆ ಉತ್ತರವು ಬೈಬಲಿನ ಕಡೆಗೆ ನಮಗಿರುವ ಮನೋಭಾವದ ಮೇಲೆ ಹೊಂದಿಕೊಂಡಿದೆ.
6 ಚರ್ಚಿಗೆ ಹೋಗುವ ಹೆಚ್ಚಿನವರು ಇಂದು ಬೈಬಲಿನ ಸಂದೇಶವನ್ನು “ನಿಜವಾಗಿ ದೇವರ ವಾಕ್ಯ”ವೆಂದೇ ಸ್ವೀಕರಿಸದಿರುವುದು ದುಃಖದ ಸಂಗತಿ. (1 ಥೆಸಲೊನೀಕ 2:13) ಈ ವಿಷಯದಲ್ಲಿ ಕ್ರೈಸ್ತಪ್ರಪಂಚವು ಒಂದು ಲಜ್ಜಾಸ್ಪದ ದಾಖಲೆಯನ್ನು ರಚಿಸಿದೆ. ದೇವತಾಶಾಸ್ತ್ರೀಯ ಶಾಲೆಗಳಲ್ಲಿ ಅನೇಕ ವರ್ಷಗಳ ವರೆಗೆ ಕಲಿತ ಮೇಲೆ ಪಾದ್ರಿಗಳು ದೇವರ ವಾಕ್ಯದ ಬೋಧಕರೋಪಾದಿ ಪೂರ್ಣವಾಗಿ ಸನ್ನದ್ಧರಾಗಿದ್ದಾರೊ? ಇಲ್ಲವೇ ಇಲ್ಲ. ಕೆಲವು ವಿದ್ಯಾರ್ಥಿಗಳು ಬೈಬಲನ್ನು ನಂಬುವವರೋಪಾದಿ ಸೆಮಿನೆರಿ ವ್ಯಾಸಂಗವನ್ನು ಆರಂಭಿಸಿದರೂ ಪದವಿಪ್ರಾಪ್ತಿಯಾಗುವಷ್ಟರಲ್ಲಿ ಅವರು ಬೈಬಲಿನ ಸಂದೇಹವಾದಿಗಳಾಗಿಬಿಡುತ್ತಾರೆ! ಆ ಬಳಿಕ, ಅವರಲ್ಲಿ ಅನೇಕರು ತಾವು ಯಾವುದನ್ನು ನಂಬುವುದಿಲ್ಲವೊ ಆ ದೇವರ ವಾಕ್ಯದ ಕುರಿತು ಸಾರುವುದಕ್ಕೆ ಬದಲಾಗಿ, ತಮ್ಮ ಸೇವೆಯನ್ನು ಬೇರೆ ಕ್ಷೇತ್ರಗಳಿಗೆ ತಿರುಗಿಸುತ್ತಾರೆ. ಅಂದರೆ ರಾಜಕೀಯ ಚರ್ಚೆಗಳಲ್ಲಿ ಪಕ್ಷವಹಿಸುತ್ತಾರೆ, ಸಮಾಜದ ಸುಧಾರಣೆಯನ್ನು ಪ್ರವರ್ಧಿಸುತ್ತಾರೆ ಅಥವಾ ತಮ್ಮ ಪ್ರಸಂಗಗಳಲ್ಲಿ ಈ ಲೋಕದ ತತ್ತ್ವಜ್ಞಾನಗಳನ್ನೇ ಎತ್ತಿಹೇಳುತ್ತಾ ಇರುತ್ತಾರೆ. (2 ತಿಮೊಥೆಯ 4:3) ಇದಕ್ಕೆ ವ್ಯತಿರಿಕ್ತವಾಗಿ ನಿಜ ಕ್ರೈಸ್ತರು ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಾರೆ.
7, 8. ದೇವರ ವಾಕ್ಯದ ಕಡೆಗೆ ಯೇಸುವಿಗಿದ್ದ ಮನೋಭಾವವು, ಅವನ ದಿನದಲ್ಲಿದ್ದ ಧಾರ್ಮಿಕ ಮುಖಂಡರಿಗಿಂತ ಹೇಗೆ ಭಿನ್ನವಾಗಿತ್ತು?
7 ತನ್ನ ದಿನಗಳ ಧಾರ್ಮಿಕ ಮುಖಂಡರು ತನ್ನ ಯೋಚನೆಗಳನ್ನು ಪ್ರಭಾವಿಸುವಂತೆ ಯೇಸು ಬಿಡಲಿಲ್ಲ. ಅವನು ತನ್ನ ಅಪೊಸ್ತಲರ ಒಂದು ಚಿಕ್ಕ ಗುಂಪಿಗೆ ಕಲಿಸುತ್ತಿದ್ದಿರಲಿ ಇಲ್ಲವೇ ಒಂದು ದೊಡ್ಡ ಸಮೂಹಕ್ಕೆ ಕಲಿಸುತ್ತಿದ್ದಿರಲಿ, ಅವನು ಧಾರಾಳವಾಗಿ ಪವಿತ್ರ ಶಾಸ್ತ್ರವನ್ನು ಉಪಯೋಗಿಸಿದನು. (ಮತ್ತಾಯ 13:10-17; 15:1-11) ಈ ರೂಢಿಯು, ಆ ದಿನಗಳ ಧಾರ್ಮಿಕ ಮುಖಂಡರಿಂದ ಅವನನ್ನು ಭಿನ್ನವಾಗಿರಿಸಿತು. ಜನಸಾಮಾನ್ಯರು ದೇವರ ಗಹನವಾದ ವಿಷಯಗಳನ್ನು ಪರೀಕ್ಷಿಸಿ ನೋಡುವುದನ್ನು ಈ ಮುಖಂಡರು ಬಲವಾಗಿ ನಿರುತ್ತೇಜಿಸಿದರು. ವಾಸ್ತವದಲ್ಲಿ, ಆ ಸಮಯಗಳಲ್ಲಿ ಒಬ್ಬ ಬೋಧಕನು, ಬೈಬಲಿನ ಕೆಲವೊಂದು ಭಾಗಗಳು ತೀರ ಗಹನವಾದ ವಿಷಯಗಳಾಗಿರುವುದರಿಂದ ಅವುಗಳನ್ನು ಬೇರೆ ಯಾರೊಂದಿಗೂ ಅಲ್ಲ, ಕೇವಲ ತನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಗೆ ಮಾತ್ರ, ಅದು ಕೂಡ ತಗ್ಗಿದ ಸ್ವರದಲ್ಲಿ ತಲೆಗೆ ಮುಸುಕು ಹಾಕಿಕೊಂಡು ಮಾತ್ರ ತಿಳಿಸಬಹುದೆಂಬ ಅಭಿಪ್ರಾಯವುಳ್ಳವನಾಗಿರುವುದು ಸಾಮಾನ್ಯವಾದ ವಾಡಿಕೆಯಾಗಿತ್ತು. ಆ ಧಾರ್ಮಿಕ ಮುಖಂಡರು ದೇವರ ನಾಮವನ್ನು ಉಚ್ಚರಿಸುವ ವಿಷಯದಲ್ಲಿ ಎಷ್ಟು ಮೂಢನಂಬಿಕೆಯುಳ್ಳವರಾಗಿದ್ದರೋ, ಬೈಬಲಿನ ನಿರ್ದಿಷ್ಟ ಭಾಗಗಳ ಕುರಿತು ಚರ್ಚಿಸುವ ವಿಷಯದಲ್ಲೂ ಬಹುಮಟ್ಟಿಗೆ ಅಷ್ಟೇ ಮೂಢನಂಬಿಕೆಯುಳ್ಳವರಾಗಿದ್ದರು!
8 ಆದರೆ ಕ್ರಿಸ್ತನು ಹಾಗಿರಲಿಲ್ಲ. ಆಯ್ಕೆಮಾಡಲ್ಪಟ್ಟ ಕೆಲವರು ಮಾತ್ರವಲ್ಲ, ಬದಲಾಗಿ ಜನಸಾಮಾನ್ಯರೆಲ್ಲರೂ “ದೇವರ ಬಾಯಿಂದ ಹೊರಡುವ ಪ್ರತಿಯೊಂದು” ಮಾತನ್ನು ಪರಿಗಣಿಸುವುದು ಅಗತ್ಯವೆಂದು ಅವನು ನಂಬಿದನು. ಜ್ಞಾನದ ಕೀಲಿ ಕೈಯನ್ನು ವಿದ್ವಾಂಸರ ಒಂದು ಗಣ್ಯ ಗುಂಪಿಗೆ ಕೊಡುವುದರಲ್ಲಿ ಯೇಸುವಿಗೆ ಆಸಕ್ತಿಯಿರಲಿಲ್ಲ. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ಕತ್ತಲಲ್ಲಿ ನಿಮಗೆ ಹೇಳುವದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ.” (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 4:4; 10:27) ದೇವರ ಜ್ಞಾನವನ್ನು ಸಾಧ್ಯವಿರುವಷ್ಟು ಹೆಚ್ಚು ಮಂದಿಯೊಂದಿಗೆ ಹಂಚಿಕೊಳ್ಳುವುದು ಯೇಸುವಿನ ಉತ್ಕಟ ಬಯಕೆಯಾಗಿತ್ತು.
9. ಸತ್ಯ ಕ್ರೈಸ್ತರು ಬೈಬಲನ್ನು ಹೇಗೆ ಉಪಯೋಗಿಸುತ್ತಾರೆ?
9 ದೇವರ ವಾಕ್ಯವು ನಮ್ಮ ಬೋಧನೆಯ ಕೇಂದ್ರ ಬಿಂದುವಾಗಿರಬೇಕು. ಉದಾಹರಣೆಗೆ, ನಾವು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಒಂದು ಭಾಷಣವನ್ನು ಕೊಡುತ್ತಿರುವಾಗ, ಬೈಬಲಿನಿಂದ ಆಯ್ದ ವಚನಗಳನ್ನು ಕೇವಲ ಓದುವುದು ಮಾತ್ರ ಸಾಮಾನ್ಯವಾಗಿ ಸಾಕಾಗುವುದಿಲ್ಲ. ನಾವು ಒಂದು ವಚನವನ್ನು ವಿವರಿಸುವ, ದೃಷ್ಟಾಂತಿಸುವ ಮತ್ತು ಪೂರ್ವಾಪರಕ್ಕನುಸಾರ ಅನ್ವಯಿಸುವ ಅಗತ್ಯವಿರಬಹುದು. ನಮ್ಮ ಗುರಿಯು, ಆ ಬೈಬಲ್ ಸಂದೇಶವನ್ನು ಮುದ್ರಿತ ಪುಟಗಳಿಂದ ತೆಗೆದು, ಕೇಳುಗರ ಹೃದಯಗಳಲ್ಲಿ ಅಚ್ಚೊತ್ತಿಸುವುದೇ ಆಗಿದೆ. (ನೆಹೆಮೀಯ 8:8, 12) ಸಲಹೆ ನೀಡುವಾಗ ಇಲ್ಲವೆ ತಿದ್ದುಪಾಟಿನ ಶಿಸ್ತನ್ನು ಕೊಡುವಾಗ ಸಹ ಬೈಬಲನ್ನು ಉಪಯೋಗಿಸಬೇಕು. ಯೆಹೋವನ ಜನರು ವಿವಿಧ ಭಾಷೆಗಳನ್ನಾಡುವವರೂ, ವಿವಿಧ ಹಿನ್ನೆಲೆಗಳಿಂದ ಬಂದಿರುವವರು ಆಗಿದ್ದರೂ ಅವರೆಲ್ಲರೂ ಗ್ರಂಥಗಳ ಗ್ರಂಥವಾದ ಬೈಬಲನ್ನು ಗೌರವಿಸುತ್ತಾರೆ.
10. ಬೈಬಲಿನ ಪ್ರೇರಿತ ಸಂದೇಶವು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು?
10 ಈ ರೀತಿಯ ಗೌರವದಿಂದ ಉಪಯೋಗಿಸಲ್ಪಡುವಾಗ ಬೈಬಲಿನ ಸಂದೇಶಕ್ಕೆ ಶಕ್ತಿಯಿದೆ. (ಇಬ್ರಿಯ 4:12) ಜನರು ತಮ್ಮ ಜೀವಿತಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವಂತೆ, ಉದಾಹರಣೆಗೆ ಜನರು ಜಾರತ್ವ, ವ್ಯಭಿಚಾರ, ವಿಗ್ರಹಾರಾಧನೆ, ಕುಡಿಕತನ ಮತ್ತು ಕಳ್ಳತನದಂತಹ ಅಶಾಸ್ತ್ರೀಯ ರೂಢಿಗಳನ್ನು ಬಿಟ್ಟುಬಿಡುವಂತೆ ಅದು ಪ್ರಚೋದಿಸುತ್ತದೆ. ಪೂರ್ವ ಸ್ವಭಾವವನ್ನು ತೆಗೆದುಹಾಕಿ ನೂತನ ಸ್ವಭಾವವನ್ನು ಧರಿಸುವಂತೆಯೂ ಅದು ಅನೇಕರಿಗೆ ಸಹಾಯ ಮಾಡಿದೆ. (ಎಫೆಸ 4:20-24) ಹೌದು, ಯಾವುದೇ ಮಾನವ ಅಭಿಪ್ರಾಯ ಇಲ್ಲವೆ ಸಂಪ್ರದಾಯಕ್ಕಿಂತಲೂ ಬೈಬಲನ್ನು ನಾವು ಹೆಚ್ಚು ಗೌರವಿಸುವಲ್ಲಿ, ಅದನ್ನು ನಂಬಿಗಸ್ತಿಕೆಯಿಂದ ಉಪಯೋಗಿಸುವಲ್ಲಿ, ಅದು ನಮ್ಮನ್ನು ಸಮರ್ಥರನ್ನಾಗಿ, ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧರಾಗಿ ಮಾಡುವುದೆಂಬುದು ನಿಶ್ಚಯ.
ಯೆಹೋವನ ಆತ್ಮವು ನಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ
11. ಯೆಹೋವನ ಪವಿತ್ರಾತ್ಮವು “ಸಹಾಯಕನು” ಎಂದು ಸೂಚಿಸಲ್ಪಟ್ಟಿರುವುದು ಏಕೆ ಸೂಕ್ತವಾಗಿದೆ?
11 ಎರಡನೆಯದಾಗಿ, ನಮ್ಮನ್ನು ಪೂರ್ಣ ರೀತಿಯಲ್ಲಿ ಸನ್ನದ್ಧರಾಗಿ ಮಾಡುವುದರಲ್ಲಿ ಯೆಹೋವನ ಪವಿತ್ರಾತ್ಮವು ವಹಿಸುವ ಪಾತ್ರದ ಕುರಿತು ನಾವು ಚರ್ಚಿಸೋಣ. ಯೆಹೋವನ ಆತ್ಮವು, ಅಸ್ತಿತ್ವದಲ್ಲಿರುವವುಗಳಲ್ಲೇ ಅತ್ಯಂತ ಬಲಾಢ್ಯವಾದ ಶಕ್ತಿಯಾಗಿದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಆ ಭಯಭಕ್ತಿ ಹುಟ್ಟಿಸುವ ಶಕ್ತಿಯನ್ನು ಎಲ್ಲ ಸತ್ಯ ಕ್ರೈಸ್ತರ ಪರವಾಗಿ ಉಪಯೋಗಿಸುವಂತೆ ಯೆಹೋವನು ತನ್ನ ಪ್ರಿಯ ಪುತ್ರನಿಗೆ ಅಧಿಕಾರವನ್ನು ಕೊಟ್ಟಿದ್ದಾನೆ. ಆದುದರಿಂದ, ಯೋಗ್ಯವಾಗಿಯೇ ಯೇಸು ಪವಿತ್ರಾತ್ಮವನ್ನು “ಸಹಾಯಕನು” ಎಂದು ಸೂಚಿಸಿದನು. (ಯೋಹಾನ 16:7) ಆ ಆತ್ಮಕ್ಕಾಗಿ ಯೆಹೋವನನ್ನು ಕೇಳುವಂತೆ ಯೇಸು ತನ್ನ ಹಿಂಬಾಲಕರನ್ನು ಪ್ರೋತ್ಸಾಹಿಸಿ, ಯೆಹೋವನು ಅದನ್ನು ಉದಾರವಾಗಿ ಕೊಡುವನೆಂದು ಅವರಿಗೆ ಆಶ್ವಾಸನೆ ಕೊಟ್ಟನು.—ಲೂಕ 11:10-13; ಯಾಕೋಬ 1:17.
12, 13. (ಎ) ನಮ್ಮ ಶುಶ್ರೂಷೆಯಲ್ಲಿ ನಮಗೆ ನೆರವಾಗುವಂತೆ ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವುದು ಏಕೆ ಪ್ರಾಮುಖ್ಯವಾಗಿದೆ? (ಬಿ) ಪವಿತ್ರಾತ್ಮವು ಅವರಲ್ಲಿ ಕಾರ್ಯನಡೆಸುತ್ತಿರಲಿಲ್ಲ ಎಂಬುದನ್ನು ಫರಿಸಾಯರು ಹೇಗೆ ತೋರಿಸಿದರು?
12 ನಾವು ಪವಿತ್ರಾತ್ಮಕ್ಕಾಗಿ, ವಿಶೇಷವಾಗಿ ನಮ್ಮ ಶುಶ್ರೂಷೆಯಲ್ಲಿ ನಮಗೆ ಸಹಾಯಮಾಡುವಂತೆ ದಿನಾಲೂ ಪ್ರಾರ್ಥಿಸಬೇಕು. ಆ ಪವಿತ್ರಾತ್ಮವು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು? ಅದು ನಮ್ಮ ಹೃದಮನಗಳಲ್ಲಿ ಕಾರ್ಯನಡಿಸಿ, ನಾವು ಬದಲಾವಣೆ ಮಾಡುವಂತೆ, ಆತ್ಮಿಕವಾಗಿ ಬೆಳೆಯುವಂತೆ ಮತ್ತು ಪೂರ್ವ ಸ್ವಭಾವವನ್ನು ತೆಗೆದುಹಾಕಿ ನೂತನ ಸ್ವಭಾವವನ್ನು ಧರಿಸುವಂತೆ ಸಹಾಯಮಾಡಬಲ್ಲದು. (ಕೊಲೊಸ್ಸೆ 3:9, 10) ನಾವು ಅಮೂಲ್ಯವಾದ ಕ್ರಿಸ್ತಸದೃಶ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅದು ಸಹಾಯಮಾಡಬಲ್ಲದು. ನಮ್ಮಲ್ಲಿ ಅನೇಕರು ಗಲಾತ್ಯ 5:22, 23ನ್ನು ಬಾಯಿಪಾಠವಾಗಿ ಹೇಳಬಲ್ಲೆವು. ಆ ವಚನಗಳು ದೇವರಾತ್ಮದ ಫಲಗಳನ್ನು ಪಟ್ಟಿಮಾಡುತ್ತವೆ. ಅವುಗಳಲ್ಲಿ ಮೊದಲನೆಯದ್ದು ಪ್ರೀತಿ ಮತ್ತು ಈ ಗುಣವು ನಮ್ಮ ಶುಶ್ರೂಷೆಗೆ ಅತ್ಯಾವಶ್ಯಕವಾಗಿದೆ. ಏಕೆ?
13 ಪ್ರೀತಿಯು ಮಹಾ ಪ್ರಚೋದಕ ಗುಣವಾಗಿದೆ. ಯೆಹೋವನಿಗಾಗಿ ಮತ್ತು ನಮ್ಮ ನೆರೆಯವನಿಗಾಗಿ ಪ್ರೀತಿಯು, ನಾವು ಸುವಾರ್ತೆಯನ್ನು ಹಂಚಿಕೊಳ್ಳುವಂತೆ ನಮ್ಮನ್ನು ಪ್ರೇರಿಸುತ್ತದೆ. (ಮಾರ್ಕ 12:28-31) ಇಂತಹ ಪ್ರೀತಿಯು ಇಲ್ಲದಿರುವಲ್ಲಿ, ನಾವು ನಿಜವಾಗಿಯೂ ದೇವರ ವಾಕ್ಯದ ಬೋಧಕರಾಗಿರಲು ಅರ್ಹರಾಗಸಾಧ್ಯವಿಲ್ಲ. ಯೇಸು ಮತ್ತು ಫರಿಸಾಯರ ಮಧ್ಯೆ ಇದ್ದ ವ್ಯತ್ಯಾಸವನ್ನು ಗಮನಿಸಿರಿ. ಯೇಸುವಿನ ಬಗ್ಗೆ ಮತ್ತಾಯ 9:36 ಹೇಳುವುದು: “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ ಎಂದು ಅವರ ಮೇಲೆ ಕನಿಕರಪಟ್ಟನು.” ಆದರೆ ಫರಿಸಾಯರಿಗೆ ಜನರ ಕುರಿತು ಹೇಗನಿಸಿತು? ಅವರು ಹೇಳಿದ್ದು: “ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ.” (ಓರೆ ಅಕ್ಷರಗಳು ನಮ್ಮವು.) (ಯೋಹಾನ 7:49) ಆ ಫರಿಸಾಯರಿಗೆ ಜನರ ಕಡೆಗೆ ಸ್ವಲ್ಪವೂ ಪ್ರೀತಿಯಿರಲಿಲ್ಲ, ಬದಲಾಗಿ ತುಂಬ ತಿರಸ್ಕಾರಭಾವವಿತ್ತು. ಯೆಹೋವನ ಆತ್ಮವು ಅವರ ಮೇಲೆ ಕಾರ್ಯನಡೆಸುತ್ತಿರಲಿಲ್ಲವೆಂಬುದು ತೀರ ಸ್ಪಷ್ಟವಾಗಿತ್ತು.
14. ತನ್ನ ಶುಶ್ರೂಷೆಯಲ್ಲಿ ಪ್ರೀತಿಯನ್ನು ತೋರಿಸುವ ವಿಷಯದಲ್ಲಿ ಯೇಸುವಿನ ಮಾದರಿಯು ನಮ್ಮನ್ನು ಹೇಗೆ ಪ್ರಚೋದಿಸಬೇಕು?
14 ಯೇಸುವಿಗೆ ಜನರ ಕಡೆಗೆ ಸಹಾನುಭೂತಿ ಇತ್ತು. ಅವರ ನೋವಿನ ಅರಿವು ಅವನಿಗಿತ್ತು. ಅವರು ಕುರುಬನಿಲ್ಲದ ಕುರಿಗಳಂತೆ ದುರುಪಚರಿಸಲ್ಪಟ್ಟು, ತೊಳಲಿ ಬಳಲಿ ಹೋಗಿದ್ದರೆಂದು ಅವನಿಗೆ ತಿಳಿದಿತ್ತು. ಯೇಸು “ಪ್ರತಿ ಮನುಷ್ಯನ ಆಂತರ್ಯವನ್ನು ತಿಳಿದವ”ನಾಗಿದ್ದನು ಎಂದು ಯೋಹಾನ 2:25 ನಮಗೆ ಹೇಳುತ್ತದೆ. ಸೃಷ್ಟಿಕಾರ್ಯದ ಸಮಯದಲ್ಲಿ ಯೇಸು ಯೆಹೋವನ ಕುಶಲಕರ್ಮಿಯಾಗಿದ್ದುದರಿಂದ, ಅವನಿಗೆ ಮಾನವ ಪ್ರಕೃತಿಯ ಕುರಿತು ಆಳವಾದ ತಿಳಿವಳಿಕೆಯಿತ್ತು. (ಜ್ಞಾನೋಕ್ತಿ 8:30, 31) ಆ ತಿಳಿವಳಿಕೆಯು ಅವನ ಪ್ರೀತಿಯನ್ನು ಇನ್ನೂ ಆಳಗೊಳಿಸಿತು. ಇಂತಹ ಪ್ರೀತಿಯು ನಮ್ಮ ಸಾರುವ ಚಟುವಟಿಕೆಯ ಹಿಂದಿರುವ ಪ್ರಚೋದಕ ಶಕ್ತಿಯಾಗಿರಲಿ! ನಾವು ಈ ವಿಷಯದಲ್ಲಿ ಸುಧಾರಣೆಯನ್ನು ಮಾಡಬಹುದೆಂದು ನಮಗನಿಸುವಲ್ಲಿ, ಯೆಹೋವನ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ, ಬಳಿಕ ನಮ್ಮ ಪ್ರಾರ್ಥನೆಗನುಸಾರ ವರ್ತಿಸೋಣ. ಯೆಹೋವನು ಖಂಡಿತವಾಗಿಯೂ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವನು. ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸುವಾರ್ತೆಯನ್ನು ಸಾರಲು ಸರ್ವೋತ್ಕೃಷ್ಟವಾಗಿ ಅರ್ಹನಾಗಿದ್ದ ಕ್ರಿಸ್ತನಂತಾಗಲು ಸಹಾಯಮಾಡುವಂತಹ, ಪ್ರತಿರೋಧಿಸಲಾಗದ ಈ ಶಕ್ತಿಯನ್ನು ಯೆಹೋವನು ಕಳುಹಿಸುವನು.
15. ಯೆಶಾಯ 61:1-3ರ ಮಾತುಗಳು ಹೇಗೆ ಯೇಸುವಿಗೆ ಅನ್ವಯವಾಗಿ, ಅದೇ ಸಮಯದಲ್ಲಿ ಶಾಸ್ತ್ರಿಗಳು ಮತ್ತು ಫರಿಸಾಯರನ್ನು ಬಯಲಿಗೆಳೆದವು?
15 ಯೇಸುವಿನ ಅರ್ಹತೆಗಳು ಎಲ್ಲಿಂದ ಬಂದವು? “[ಯೆಹೋವನ] ಆತ್ಮವು ನನ್ನ ಮೇಲೆ ಅದೆ” ಎಂದು ಅವನು ಹೇಳಿದನು. (ಲೂಕ 4:17-21) ಹೌದು, ಸ್ವತಃ ಯೆಹೋವನೇ ಪವಿತ್ರಾತ್ಮದ ಮೂಲಕ ಯೇಸುವನ್ನು ನೇಮಿಸಿದನು. ಯೇಸುವಿಗೆ ಇನ್ನೂ ಹೆಚ್ಚಿನ ಅರ್ಹತೆಗಳ ಅಗತ್ಯವಿರಲಿಲ್ಲ. ಅವನ ದಿನದ ಧಾರ್ಮಿಕ ಮುಖಂಡರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದರೋ? ಇಲ್ಲ. ಮತ್ತು ಯೇಸು ಗಟ್ಟಿಯಾಗಿ ಓದಿ, ತನಗೇ ಅನ್ವಯಿಸಿಕೊಂಡ ಯೆಶಾಯ 61:1-3ನ್ನು ಪೂರೈಸಲೂ ಅವರು ಸನ್ನದ್ಧರಾಗಿರಲಿಲ್ಲ. ದಯವಿಟ್ಟು ಆ ವಚನಗಳನ್ನು ಓದಿರಿ, ಮತ್ತು ಆ ಕಪಟಿ ಶಾಸ್ತ್ರಿಗಳೂ ಫರಿಸಾಯರೂ ಬೇಕಾದ ಅರ್ಹತೆಯುಳ್ಳವರಾಗಿರಲಿಲ್ಲ ಎಂಬುದನ್ನು ನೀವೇ ನೋಡಿರಿ. ಬಡವರಿಗೆ ಸಾರಲು ಅವರಲ್ಲಿ ಸುವಾರ್ತೆ ಇರಲಿಲ್ಲ. ಮತ್ತು ಅವರು ಸೆರೆಯವರಿಗೆ ಬಿಡುಗಡೆಯಾಗುವದನ್ನು ಮತ್ತು ಕುರುಡರಿಗೆ ಕಣ್ಣು ಬರುವದನ್ನು ಸಾರುವುದಾದರೂ ಹೇಗೆ? ಏಕೆಂದರೆ ಆತ್ಮಿಕ ಅರ್ಥದಲ್ಲಿ ಅವರೇ ಕುರುಡರಾಗಿದ್ದರು ಮತ್ತು ಮಾನವ ನಿರ್ಮಿತ ಸಂಪ್ರದಾಯಗಳಿಗೆ ಬಂದಿಗಳಾಗಿದ್ದರು. ಆ ಫರಿಸಾಯರಂತಿರದೆ, ಜನರಿಗೆ ಕಲಿಸಲು ನಾವು ಅರ್ಹರಾಗಿದ್ದೇವೊ?
16. ಶುಶ್ರೂಷಕರೋಪಾದಿ ತಮಗಿರುವ ಅರ್ಹತೆಗಳ ಕುರಿತು ಯೆಹೋವನ ಜನರಿಗೆ ಇಂದು ಯಾವ ಭರವಸೆ ಇರಬಲ್ಲದು?
16 ನಾವು ಕ್ರೈಸ್ತಪ್ರಪಂಚದ ದೊಡ್ಡ ದೊಡ್ಡ ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸವನ್ನು ಪಡೆದಿರುವುದಿಲ್ಲ ಎಂಬುದೇನೊ ಸತ್ಯ. ದೇವತಾಶಾಸ್ತ್ರದ ಸೆಮಿನೆರಿಯೊಂದರಿಂದ ನಾವು ಬೋಧಕರೆಂದು ನೇಮಕವನ್ನು ಪಡೆದಿಲ್ಲ. ಹಾಗಾದರೆ ಇದರರ್ಥ ನಮಗೆ ಅರ್ಹತೆಗಳಿಲ್ಲವೆಂದೊ? ಇಲ್ಲ! ಯೆಹೋವನ ಸಾಕ್ಷಿಗಳಾಗಿರುವ ನಮ್ಮ ನೇಮಕವು ಆತನಿಂದಲೇ ಬರುತ್ತದೆ. (ಯೆಶಾಯ 43:10-12) ನಾವು ಆತನ ಆತ್ಮಕ್ಕಾಗಿ ಪ್ರಾರ್ಥಿಸಿ, ಅದರಂತೆ ವರ್ತಿಸುವಲ್ಲಿ, ನಮಗೆ ಅತ್ಯುಚ್ಛವಾದ ಅರ್ಹತೆಯಿರುತ್ತದೆ. ನಾವು ಅಪರಿಪೂರ್ಣರಾಗಿರುವುದರಿಂದ, ಮಹಾ ಬೋಧಕನಾದ ಯೇಸು ಕ್ರಿಸ್ತನು ಇಟ್ಟ ಮಾದರಿಯನ್ನು ಪೂರ್ಣ ರೀತಿಯಲ್ಲಿ ಅನುಸರಿಸಲು ತಪ್ಪಿಹೋಗುತ್ತೇವೆ ಎಂಬುದೇನೊ ನಿಜ. ಹಾಗಿದ್ದರೂ, ಯೆಹೋವನು ತನ್ನ ಆತ್ಮವನ್ನು ಉಪಯೋಗಿಸಿ, ನಾವು ಆತನ ವಾಕ್ಯದ ಬೋಧಕರಾಗಲು ಯೋಗ್ಯರನ್ನಾಗಿ ಮತ್ತು ಸನ್ನದ್ಧರನ್ನಾಗಿ ಮಾಡುತ್ತಾನೆ. ಇದಕ್ಕಾಗಿ ನಾವು ಕೃತಜ್ಞರಾಗಿರುವುದಿಲ್ಲವೊ?
ಯೆಹೋವನ ಸಂಸ್ಥೆಯು ನಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ
17-19. ಯೆಹೋವನ ಸಂಸ್ಥೆಯಿಂದ ಒದಗಿಸಲ್ಪಟ್ಟಿರುವ ವಾರದ ಐದು ಕೂಟಗಳು ಶುಶ್ರೂಷಕರೋಪಾದಿ ನಾವು ಅರ್ಹರಾಗುವಂತೆ ಹೇಗೆ ಸಹಾಯಮಾಡುತ್ತವೆ?
17 ಈಗ ನಾವು, ಯೆಹೋವನ ವಾಕ್ಯದ ಬೋಧಕರೋಪಾದಿ ನಮ್ಮನ್ನು ಪೂರ್ಣ ರೀತಿಯಲ್ಲಿ ಸನ್ನದ್ಧರನ್ನಾಗಿ ಮಾಡುವ ಆತನ ಮೂರನೆಯ ಮಾಧ್ಯಮವಾದ, ಭೂಮಿಯ ಮೇಲಿನ ಆತನ ಸಭೆ, ಇಲ್ಲವೇ ಆತನ ಸಂಸ್ಥೆಯ ಕುರಿತು ಚರ್ಚಿಸೋಣ. ಅದು ನಮ್ಮನ್ನು ಶುಶ್ರೂಷಕರಾಗಲು ತರಬೇತುಗೊಳಿಸುತ್ತದೆ. ಹೇಗೆ? ನಾವು ಆನಂದಿಸುವ ಶಿಕ್ಷಣ ಕಾರ್ಯಕ್ರಮದ ಕುರಿತು ಸ್ವಲ್ಪ ಯೋಚಿಸಿರಿ! ಒಂದು ವಾರದಲ್ಲಿ ನಾವು ಐದು ಕೂಟಗಳಿಗೆ ಹಾಜರಾಗುತ್ತೇವೆ. (ಇಬ್ರಿಯ 10:24, 25) ಸಭಾ ಪುಸ್ತಕ ಅಧ್ಯಯನದಲ್ಲಿ ನಾವು ಯೆಹೋವನ ಸಂಸ್ಥೆಯ ಮೂಲಕ ಲಭ್ಯಗೊಳಿಸಲ್ಪಡುವ ಪಠ್ಯಪುಸ್ತಕದ ಗಹನವಾದ ಬೈಬಲ್ ಅಧ್ಯಯನವನ್ನು ಮಾಡಲಿಕ್ಕಾಗಿ ಕೂಡಿಬರುತ್ತೇವೆ. ಅಲ್ಲಿ ಕಿವಿಗೊಡುವ ಮೂಲಕ ಮತ್ತು ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ನಾವು ಇತರರಿಂದ ಕಲಿಯುತ್ತೇವೆ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ. ಅಲ್ಲಿ ನಾವು ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಂದ ವ್ಯಕ್ತಿಪರ ಶಿಕ್ಷಣವನ್ನೂ ಗಮನವನ್ನೂ ಪಡೆಯುತ್ತೇವೆ. ಬಹಿರಂಗ ಕೂಟ ಮತ್ತು ಕಾವಲಿನಬುರುಜು ಅಧ್ಯಯನದಿಂದ ನಾವು ಪುಷ್ಟಿಕರವಾದ ಆತ್ಮಿಕ ಆಹಾರವನ್ನು ಹೇರಳವಾಗಿ ಪಡೆದುಕೊಳ್ಳುತ್ತೇವೆ.
18 ನಮ್ಮ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು, ಹೇಗೆ ಬೋಧಿಸುವುದು ಎಂಬುದನ್ನು ನಮಗೆ ಕಲಿಸುವ ಸಲುವಾಗಿ ರಚಿಸಲ್ಪಟ್ಟಿದೆ. ವಿದ್ಯಾರ್ಥಿ ಭಾಷಣಗಳನ್ನು ತಯಾರಿಸುವ ಮೂಲಕ, ನಾವು ಬೇರೆ ಬೇರೆ ವಿಷಯಗಳ ಕುರಿತು ಇತರರಿಗೆ ಕಲಿಸುವಾಗ ದೇವರ ವಾಕ್ಯವನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಕಲಿಯುತ್ತೇವೆ. (1 ಪೇತ್ರ 3:15) ನಿಮಗೆ ಒಂದು ಭಾಷಣವು ನೇಮಿಸಲ್ಪಟ್ಟಾಗ ಅದರ ವಿಷಯವು ತುಂಬ ಚಿರಪರಿಚಿತವಾಗಿ ತೋರಿದರೂ, ಅದಕ್ಕಾಗಿ ತಯಾರಿ ನಡೆಸುವಾಗ ಅದೇ ವಿಷಯದ ಬಗ್ಗೆ ನೀವು ಯಾವುದೊ ಹೊಸ ಸಂಗತಿಯನ್ನು ಕಲಿತಿರುವುದು ನಿಮ್ಮ ಗಮನಕ್ಕೆ ಬಂದಿದೆಯೊ? ಇದು ಸಾಮಾನ್ಯವಾಗಿ ಎಲ್ಲರಿಗೂ ಆಗುವ ಅನುಭವವಾಗಿದೆ. ಒಂದು ವಿಷಯದ ಬಗ್ಗೆ ನಮ್ಮ ಜ್ಞಾನವು ನಾವು ಇತರರಿಗೆ ಕಲಿಸುವಾಗ ಎಷ್ಟು ಹರಿತಗೊಳ್ಳುತ್ತದೊ ಅದು ಇನ್ಯಾವುದರಿಂದಲೂ ಅಷ್ಟು ಹರಿತಗೊಳ್ಳುವುದಿಲ್ಲ. ಸ್ವತಃ ನಮಗೆ ಒಂದು ಭಾಷಣದ ನೇಮಕವು ಸಿಕ್ಕದಿರುವ ಸಮಯದಲ್ಲೂ, ನಾವು ಹೆಚ್ಚು ಉತ್ತಮ ಬೋಧಕರಾಗಲು ಕಲಿಯಬಲ್ಲೆವು. ಏಕೆಂದರೆ ಶಾಲೆಯಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾವು ಒಳ್ಳೆಯ ಗುಣಗಳನ್ನು ಗಮನಿಸಿ, ಆ ಗುಣಗಳನ್ನು ನಾವು ಹೇಗೆ ಅನುಕರಿಸಬಹುದೆಂಬುದರ ಕುರಿತಾಗಿ ಯೋಚಿಸಬಹುದು.
19 ಸೇವಾಕೂಟವು ಸಹ ನಮ್ಮನ್ನು ದೇವರ ವಾಕ್ಯದ ಬೋಧಕರೋಪಾದಿ ಸನ್ನದ್ಧುಗೊಳಿಸಲಿಕ್ಕಾಗಿ ರಚಿಸಲ್ಪಟ್ಟಿದೆ. ಪ್ರತಿ ವಾರ ನಾವು ಶುಶ್ರೂಷೆಗೆ ಸಂಬಂಧಪಟ್ಟ ಉತ್ಸಾಹಭರಿತ ಭಾಷಣಗಳು, ಚರ್ಚೆಗಳು ಮತ್ತು ಪ್ರತ್ಯಕ್ಷಾಭಿನಯಗಳಲ್ಲಿ ಆನಂದಿಸುತ್ತೇವೆ. ನಾವು ಯಾವ ನಿರೂಪಣೆಯನ್ನು ಉಪಯೋಗಿಸುವೆವು? ನಮ್ಮ ಬಹಿರಂಗ ಶುಶ್ರೂಷೆಯಲ್ಲಿ ಎದುರಾಗುವ ವಿಶೇಷ ಪಂಥಾಹ್ವಾನಗಳೊಂದಿಗೆ ನಾವು ಹೇಗೆ ವ್ಯವಹರಿಸಬಲ್ಲೆವು? ಬೇರೆ ಯಾವ ರೀತಿಯ ಸಾಕ್ಷಿಕಾರ್ಯಗಳನ್ನು ನಾವು ಇನ್ನೂ ಪ್ರಯತ್ನಿಸಿ ನೋಡಬಹುದು? ಪುನರ್ಭೇಟಿಗಳನ್ನು ಮಾಡುವಾಗ ಮತ್ತು ಬೈಬಲ್ ಅಧ್ಯಯನಗಳನ್ನು ನಡಿಸುವಾಗ ನಾವು ಹೆಚ್ಚು ಪರಿಣಾಮಕಾರಿ ಶಿಕ್ಷಕರಾಗಿರುವಂತೆ ಯಾವುದು ಸಹಾಯಮಾಡುತ್ತದೆ? (1 ಕೊರಿಂಥ 9:19-22) ಇಂತಹ ಮತ್ತು ಇನ್ನೂ ಅನೇಕ ಪ್ರಶ್ನೆಗಳು ಸೇವಾ ಕೂಟದಲ್ಲಿ ಎಬ್ಬಿಸಲ್ಪಟ್ಟು ಸವಿವರವಾಗಿ ಚರ್ಚಿಸಲ್ಪಡುತ್ತವೆ. ಅನೇಕ ಸೇವಾ ಕೂಟಗಳು ನಮ್ಮ ರಾಜ್ಯದ ಸೇವೆಯ ಲೇಖನಗಳ ಮೇಲೆ ಆಧಾರಿತವಾಗಿರುತ್ತವೆ. ಇದು ನಮ್ಮ ಮಹತ್ವದ ಕೆಲಸಕ್ಕಾಗಿ ನಮ್ಮನ್ನು ಸನ್ನದ್ಧುಗೊಳಿಸಲು ಒದಗಿಸಲ್ಪಟ್ಟಿರುವ ಇನ್ನೊಂದು ಉಪಕರಣವಾಗಿದೆ.
20. ಕೂಟಗಳಿಂದಲೂ ಸಮ್ಮೇಳನಗಳಿಂದಲೂ ನಾವು ಹೇಗೆ ಪೂರ್ಣವಾಗಿ ಪ್ರಯೋಜನವನ್ನು ಪಡೆಯಬಲ್ಲೆವು?
20 ನಮ್ಮ ಕೂಟಗಳಿಗಾಗಿ ತಯಾರಿಸಿ, ಹಾಜರಾಗುವ ಮೂಲಕ ಮತ್ತು ಅನಂತರ ಅಲ್ಲಿ ನಾವು ಕಲಿತ ವಿಷಯಗಳನ್ನು ಬೋಧಕರೋಪಾದಿ ನಮಗಿರುವ ಕೆಲಸಕ್ಕೆ ಅನ್ವಯಿಸಿಕೊಳ್ಳುವುದರಿಂದ, ನಾವು ವಿಸ್ತೃತವಾದ ತರಬೇತಿಯನ್ನು ಪಡೆಯುತ್ತೇವೆ. ಆದರೆ ಅಷ್ಟೇ ಅಲ್ಲ. ನಮಗೆ ಹೆಚ್ಚು ದೊಡ್ಡದಾದ ಕೂಟಗಳು, ಅಂದರೆ ಸಮ್ಮೇಳನಗಳು ಮತ್ತು ಅಧಿವೇಶನಗಳೂ ಇವೆ. ಇವು, ದೇವರ ವಾಕ್ಯದ ಬೋಧಕರೋಪಾದಿ ನಮ್ಮನ್ನು ಇನ್ನೂ ಹೆಚ್ಚು ಉತ್ತಮವಾಗಿ ಸನ್ನದ್ಧುಗೊಳಿಸಲು ರಚಿಸಲ್ಪಟ್ಟಿವೆ. ಮತ್ತು ಗಮನಕೊಟ್ಟು ಆಲಿಸಲು ಹಾಗೂ ಅಂತಹ ಸಲಹೆಯನ್ನು ಕಾರ್ಯರೂಪಕ್ಕೆ ಹಾಕಲು ನಾವೆಷ್ಟು ಮುನ್ನೋಡುತ್ತೇವೆ!—ಲೂಕ 8:18.
21. ನಮ್ಮ ತರಬೇತಿಯು ಪರಿಣಾಮಕಾರಿಯಾಗಿದೆಯೆಂಬುದನ್ನು ಯಾವ ಸಾಕ್ಷ್ಯವು ತೋರಿಸುತ್ತದೆ, ಮತ್ತು ಇದೆಲ್ಲದ್ದಕ್ಕಾಗಿ ಕೀರ್ತಿಯು ಯಾರಿಗೆ ಸಲ್ಲಬೇಕು?
21 ಯೆಹೋವನು ಕೊಟ್ಟಿರುವ ಈ ತರಬೇತಿಯು ಪರಿಣಾಮಕಾರಿಯಾಗಿದೆಯೋ? ನಿಜತ್ವಗಳೇ ಅದನ್ನು ರುಜುಪಡಿಸಲಿ. ಪ್ರತಿ ವರ್ಷ ನೂರಾರು ಸಾವಿರ ಜನರಿಗೆ ಮೂಲಭೂತ ಬೈಬಲ್ ಮೂಲತತ್ತ್ವಗಳನ್ನು ಕಲಿಯಲು ಮತ್ತು ದೇವರು ಅವರಿಂದ ಏನನ್ನು ಅಪೇಕ್ಷಿಸುತ್ತಾನೋ ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಸಹಾಯಮಾಡಲಾಗುತ್ತಿದೆ. ನಮ್ಮ ಸಂಖ್ಯೆ ವೃದ್ಧಿಯಾಗುತ್ತಿದೆಯಾದರೂ, ನಮ್ಮಲ್ಲಿ ಯಾರೂ ಅದಕ್ಕಾಗಿ ವ್ಯಕ್ತಿಪರವಾಗಿ ಕೀರ್ತಿಯನ್ನು ತೆಗೆದುಕೊಳ್ಳಸಾಧ್ಯವಿಲ್ಲ. ನಾವು ವಿಷಯಗಳನ್ನು ಯೇಸುವಿನಂತೆ ವಾಸ್ತವಿಕವಾಗಿ ಪರಿಗಣಿಸಬೇಕು. ಅವನು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” ಹಿಂದಿನ ಕಾಲದ ಅಪೊಸ್ತಲರಂತೆ, ನಮ್ಮಲ್ಲಿ ಹೆಚ್ಚಿನವರು ಶಾಸ್ತ್ರಾಭ್ಯಾಸ ಮಾಡಿರದಂತಹ ಸಾಧಾರಣರು. (ಯೋಹಾನ 6:44; ಅ. ಕೃತ್ಯಗಳು 4:13) ನಮ್ಮ ಯಶಸ್ಸು ಯೆಹೋವನ ಮೇಲೆ ಹೊಂದಿಕೊಂಡಿದೆ. ಪ್ರಾಮಾಣಿಕ ಹೃದಯಿಗಳನ್ನು ಸತ್ಯದ ಕಡೆಗೆ ಎಳೆಯುವವನು ಆತನೇ. ಪೌಲನು ಸಮಂಜಸವಾಗಿಯೇ ಹೀಗೆ ಬರೆದನು: “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳಿಸುತ್ತಾ ಬಂದವನು ದೇವರು.”—1 ಕೊರಿಂಥ 3:6.
22. ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದರ ಕುರಿತಾಗಿ ನಾವು ಎಂದೂ ಅತಿಯಾಗಿ ನಿರುತ್ತೇಜಿತರಾಗಬಾರದು ಏಕೆ?
22 ಹೌದು, ಯೆಹೋವ ದೇವರ ವಾಕ್ಯದ ಬೋಧಕರೋಪಾದಿ ನಾವು ಮಾಡುವ ಕೆಲಸದಲ್ಲಿ ಆತನು ಕ್ರಿಯಾಶೀಲವಾಗಿ ಒಳಗೂಡಿದ್ದಾನೆ. ನಾವು ಬೋಧಕರಾಗಲು ಅರ್ಹರಾಗಿದ್ದೇವೆಂದು ನಮಗೆ ಯಾವಾಗಲೂ ಅನಿಸಲಿಕ್ಕಿಲ್ಲ. ಆದರೆ ಜನರನ್ನು ತನ್ನ ಕಡೆಗೂ ತನ್ನ ಪುತ್ರನ ಕಡೆಗೂ ಎಳೆಯುವವನು ಯೆಹೋವನೆಂಬುದು ನೆನಪಿರಲಿ. ತನ್ನ ವಾಕ್ಯ, ತನ್ನ ಪವಿತ್ರಾತ್ಮ ಮತ್ತು ತನ್ನ ಭೂಸಂಸ್ಥೆಯ ಮೂಲಕ ನಮ್ಮನ್ನು ಶುಶ್ರೂಷಕರಾಗಿ ಅರ್ಹಗೊಳಿಸುವವನು ಯೆಹೋವನೇ ಆಗಿದ್ದಾನೆ. ಆದುದರಿಂದ, ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧರಾಗುವಂತೆ ಆತನು ಈಗ ಒದಗಿಸುತ್ತಿರುವ ಒಳ್ಳೆಯ ವಿಷಯಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ನಾವು ಯೆಹೋವನ ತರಬೇತಿಗೆ ಪ್ರತಿಕ್ರಿಯೆ ತೋರಿಸೋಣ!
ನೀವು ಹೇಗೆ ಉತ್ತರಿಸುವಿರಿ?
• ಸಾರುವ ಕೆಲಸಕ್ಕಾಗಿ ಬೈಬಲ್ ನಮ್ಮನ್ನು ಹೇಗೆ ಸನ್ನದ್ಧುಗೊಳಿಸುತ್ತದೆ?
• ಶುಶ್ರೂಷಕರೋಪಾದಿ ನಮ್ಮನ್ನು ಅರ್ಹಗೊಳಿಸುವುದರಲ್ಲಿ ಪವಿತ್ರಾತ್ಮವು ಯಾವ ಪಾತ್ರವನ್ನು ವಹಿಸುತ್ತದೆ?
• ಸುವಾರ್ತೆಯನ್ನು ಸಾರುವವರೋಪಾದಿ ನೀವು ಅರ್ಹರಾಗುವಂತೆ, ಯೆಹೋವನ ಭೂಸಂಸ್ಥೆಯು ಯಾವ ವಿಧಗಳಲ್ಲಿ ಸಹಾಯಮಾಡಿದೆ?
• ಶುಶ್ರೂಷೆಯಲ್ಲಿ ಭಾಗವಹಿಸುವಾಗ ನಾವೇಕೆ ಭರವಸೆಯಿಂದಿರಬಹುದು?
[ಅಧ್ಯಯನ ಪ್ರಶ್ನೆಗಳು]
[ಪುಟ 25ರಲ್ಲಿರುವ ಚಿತ್ರ]
ದೇವರ ವಾಕ್ಯದ ಬೋಧಕನೋಪಾದಿ ಯೇಸು ಜನರಿಗಾಗಿ ಪ್ರೀತಿಯನ್ನು ತೋರಿಸಿದನು