ದೈವಿಕ ಬೆಳಕು ಕತ್ತಲನ್ನು ತೊಲಗಿಸುತ್ತದೆ!
ದೈವಿಕ ಬೆಳಕು ಕತ್ತಲನ್ನು ತೊಲಗಿಸುತ್ತದೆ!
“ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು.”—2 ಸಮುವೇಲ 22:29.
1. ಬೆಳಕಿಗೂ ಜೀವಕ್ಕೂ ಏನು ಸಂಬಂಧವಿದೆ?
“ಆಗ ದೇವರು—ಬೆಳಕಾಗಲಿ ಅನ್ನಲು ಬೆಳಕಾಯಿತು.” (ಆದಿಕಾಂಡ 1:3) ಆ ಮಹತ್ವಪೂರ್ಣ ಮಾತುಗಳ ಮೂಲಕ, ಯೆಹೋವನೇ ಬೆಳಕಿನ ಮೂಲನೆಂಬುದನ್ನು ಆದಿಕಾಂಡದ ವೃತ್ತಾಂತವು ಗುರುತಿಸುತ್ತದೆ. ಆ ಬೆಳಕಿಲ್ಲದೆ ಭೂಮಿಯ ಮೇಲೆ ಜೀವಿಸುವುದು ಅಸಾಧ್ಯವಾಗಿರುತ್ತಿತ್ತು. ಯೆಹೋವನು ಆತ್ಮಿಕ ಬೆಳಕಿನ ಮೂಲನೂ ಆಗಿದ್ದಾನೆ. ಈ ಬೆಳಕು ನಮ್ಮ ಜೀವನವೆಂಬ ಹಾದಿಯಲ್ಲಿ ಮಾರ್ಗದರ್ಶನಕ್ಕಾಗಿ ಅತ್ಯಾವಶ್ಯಕವಾಗಿದೆ. (ಕೀರ್ತನೆ 43:3) “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ; ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ” ಎಂಬ ಮಾತುಗಳನ್ನು ರಾಜ ದಾವೀದನು ಬರೆದಾಗ, ಆತ್ಮಿಕ ಬೆಳಕು ಮತ್ತು ಜೀವನದ ನಡುವೆಯಿರುವ ನಿಕಟ ಸಂಬಂಧವನ್ನು ತೋರಿಸಿದನು.—ಕೀರ್ತನೆ 36:9.
2. ಪೌಲನು ತೋರಿಸಿದಂತೆ, ಬೆಳಕು ಯಾವುದರೊಂದಿಗೆ ನಿಕಟವಾಗಿ ಸಂಬಂಧಿಸಿದೆ?
2 ದಾವೀದನ ನಂತರ ಸುಮಾರು 1,000 ವರ್ಷಗಳ ಬಳಿಕ, ಅಪೊಸ್ತಲ ಪೌಲನು ಸೃಷ್ಟಿಯ ವೃತ್ತಾಂತಕ್ಕೆ ಸೂಚಿಸಿದನು. ಕೊರಿಂಥದಲ್ಲಿದ್ದ ಕ್ರೈಸ್ತ ಸಭೆಗೆ ಬರೆಯುತ್ತಾ ಅವನು ಹೇಳಿದ್ದು: ‘ಕತ್ತಲೆಯೊಳಗಿಂದ ಬೆಳಕುಹೊಳೆಯಲಿ ಎಂದು ಹೇಳಿದವನು ದೇವರು.’ ಅನಂತರ ಅವನು ‘ದೇವರು, ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು’ ಎಂದು ಕೂಡಿಸಿ ಹೇಳಿದಾಗ, ಆತ್ಮಿಕ ಬೆಳಕು ಯೆಹೋವನಿಂದ ಬರುವ ಜ್ಞಾನದೊಂದಿಗೆ ನಿಕಟವಾಗಿ ಸಂಬಂಧಿಸಿದೆಯೆಂಬುದನ್ನು ತೋರಿಸಿದನು. (2 ಕೊರಿಂಥ 4:6) ಈ ಬೆಳಕು ನಮಗೆ ಹೇಗೆ ತಲಪುತ್ತದೆ?
ಬೈಬಲ್—ಬೆಳಕಿನ ವಾಹಕ
3. ಬೈಬಲಿನ ಮೂಲಕ, ಯೆಹೋವನು ಯಾವ ಬೆಳಕನ್ನು ಕೊಡುತ್ತಾನೆ?
3 ಯೆಹೋವನು ಪ್ರಮುಖವಾಗಿ ತನ್ನ ಪ್ರೇರಿತ ವಾಕ್ಯವಾದ ಬೈಬಲಿನ ಮೂಲಕ ಆತ್ಮಿಕ ಬೆಳಕನ್ನು ರವಾನಿಸುತ್ತಾನೆ. ಆದುದರಿಂದ ನಾವು ಬೈಬಲನ್ನು ಅಧ್ಯಯನ ಮಾಡಿ, ದೇವರಿಂದ ಬರುವ ಜ್ಞಾನವನ್ನು ಪಡೆದುಕೊಳ್ಳುವಾಗ, ಆತನ ಬೆಳಕು ನಮ್ಮ ಮೇಲೆ ಪ್ರಕಾಶಿಸುವಂತೆ ನಾವು ಅನುಮತಿಸುತ್ತಿದ್ದೇವೆ. ಬೈಬಲಿನ ಮೂಲಕ ಯೆಹೋವನು ತನ್ನ ಉದ್ದೇಶಗಳ ಮೇಲೆ ಬೆಳಕನ್ನು ಬೀರುತ್ತಾನೆ ಮತ್ತು ನಾವು ಹೇಗೆ ಆತನ ಚಿತ್ತವನ್ನು ಮಾಡಬಲ್ಲೆವೆಂಬುದನ್ನು ನಮಗೆ ತಿಳಿಸುತ್ತಾನೆ. ಇದರಿಂದಾಗಿ ನಮ್ಮ ಜೀವಿತಗಳಿಗೆ ಉದ್ದೇಶವು ಸಿಗುತ್ತದೆ ಮತ್ತು ಇದು ನಮ್ಮ ಆತ್ಮಿಕ ಅಗತ್ಯಗಳನ್ನು ತೃಪ್ತಿಪಡಿಸಲು ಸಹಾಯಮಾಡುತ್ತದೆ. (ಪ್ರಸಂಗಿ 12:1; ಮತ್ತಾಯ 5:3) ಮೋಶೆಯ ಧರ್ಮಶಾಸ್ತ್ರವನ್ನು ಉಲ್ಲೇಖಿಸುತ್ತಾ ಯೇಸು, “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು” ಎಂದು ಹೇಳಿದಾಗ, ನಾವು ನಮ್ಮ ಆತ್ಮಿಕ ಅಗತ್ಯಗಳಿಗೆ ಲಕ್ಷ್ಯಕೊಡಬೇಕೆಂಬುದನ್ನು ಒತ್ತಿಹೇಳಿದನು.—ಮತ್ತಾಯ 4:4; ಧರ್ಮೋಪದೇಶಕಾಂಡ 8:3.
4. ಯೇಸು ಯಾವ ವಿಧದಲ್ಲಿ ‘ಲೋಕಕ್ಕೆ ಬೆಳಕಾಗಿದ್ದಾನೆ’?
4 ಯೇಸು ಆತ್ಮಿಕ ಬೆಳಕಿನೊಂದಿಗೆ ನಿಕಟವಾದ ಸಂಬಂಧವುಳ್ಳವನಾಗಿದ್ದಾನೆ. ತಾನು “ಲೋಕಕ್ಕೆ ಬೆಳಕು” ಎಂದು ತನ್ನ ಬಗ್ಗೆ ಮಾತಾಡುತ್ತಾ ಅವನಂದದ್ದು: “ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು.” (ಯೋಹಾನ 8:12) ಯೆಹೋವನ ಸತ್ಯವನ್ನು ಮಾನವಕುಲಕ್ಕೆ ದಾಟಿಸುವುದರಲ್ಲಿ ಯೇಸುವಿಗಿರುವ ಪ್ರಧಾನ ಪಾತ್ರವನ್ನು ಅರ್ಥಮಾಡಿಕೊಳ್ಳಲು ಈ ಅಭಿವ್ಯಕ್ತಿಯು ಸಹಾಯಮಾಡುತ್ತದೆ. ನಾವು ಕತ್ತಲಿನಿಂದ ದೂರವಿದ್ದು ದೇವರ ಬೆಳಕಿನಲ್ಲಿ ನಡೆಯಬೇಕಾದರೆ, ಯೇಸು ಹೇಳಿದ ಎಲ್ಲ ವಿಷಯಗಳಿಗೆ ಕಿವಿಗೊಡಬೇಕು ಮತ್ತು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಅವನ ಮಾದರಿ ಹಾಗೂ ಬೋಧನೆಗಳನ್ನು ನಿಕಟವಾಗಿ ಅನುಸರಿಸಬೇಕು.
5. ಯೇಸುವಿನ ಮರಣದ ನಂತರ ಅವನ ಹಿಂಬಾಲಕರಿಗೆ ಯಾವ ಜವಾಬ್ದಾರಿಯಿತ್ತು?
5 ತನ್ನ ಮರಣದ ಕೆಲವು ದಿನಗಳ ಮುಂಚೆ ಯೇಸು, ತಾನು ಬೆಳಕಾಗಿದ್ದೇನೆಂಬುದನ್ನು ಸೂಚಿಸುತ್ತಾ ತನ್ನ ಶಿಷ್ಯರಿಗೆ ಹೇಳಿದ್ದು: “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ; ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ನಿಮಗೆ ಇರುವಾಗಲೇ ಸಂಚಾರಮಾಡಿರಿ. ಕತ್ತಲೆಯಲ್ಲಿ ಸಂಚಾರಮಾಡುವವನಿಗೆ ತಾನು ಎಲ್ಲಿ ಹೋಗುತ್ತೇನೆಂದು ತಿಳಿಯದು. ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ; ನಂಬಿದರೆ ನೀವು ಬೆಳಕಿನವರಾಗುವಿರಿ.” (ಯೋಹಾನ 12:35, 36) ಬೆಳಕಿನವರಾಗಿ ಪರಿಣಮಿಸಿದವರು, ಬೈಬಲಿನ ‘ಸ್ವಸ್ಥಬೋಧನಾವಾಕ್ಯಗಳ ಮಾದರಿಯನ್ನು’ ಕಲಿತುಕೊಂಡರು. (2 ತಿಮೊಥೆಯ 1:13, 14) ಅನಂತರ ಅವರು ಈ ಸ್ವಸ್ಥಬೋಧನಾವಾಕ್ಯಗಳನ್ನು ಇನ್ನಿತರ ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಕತ್ತಲಿನಿಂದ ದೇವರ ಬೆಳಕಿನೊಳಗೆ ಬರುವಂತೆ ಆಕರ್ಷಿಸಲು ಉಪಯೋಗಿಸಿದರು.
6. ಒಂದನೆಯ ಯೋಹಾನ 1:5ರಲ್ಲಿ ಬೆಳಕು ಮತ್ತು ಕತ್ತಲಿನ ಕುರಿತಾಗಿ ನಾವು ಯಾವ ಮೂಲಭೂತ ಸತ್ಯವನ್ನು ನೋಡುತ್ತೇವೆ?
6 ಅಪೊಸ್ತಲ ಯೋಹಾನನು ಬರೆದುದು: “ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ.” (1 ಯೋಹಾನ 1:5) ಇಲ್ಲಿ ಬೆಳಕು ಮತ್ತು ಕತ್ತಲೆಯ ನಡುವಿನ ವ್ಯತ್ಯಾಸವನ್ನು ಗಮನಿಸಿರಿ. ಆತ್ಮಿಕ ಬೆಳಕಿನ ಉಗಮನು ಯೆಹೋವನಾಗಿದ್ದಾನೆ ಮತ್ತು ಆತ್ಮಿಕ ಕತ್ತಲನ್ನು ಆತನೊಂದಿಗೆ ಸಂಬಂಧಿಸಲು ಸಾಧ್ಯವೇ ಇಲ್ಲ. ಹಾಗಾದರೆ ಕತ್ತಲಿನ ಮೂಲನು ಯಾರು?
ಆತ್ಮಿಕ ಕತ್ತಲಿನ ಮೂಲ
7. ಲೋಕದ ಆತ್ಮಿಕ ಕತ್ತಲಿಗೆ ಯಾರು ಕಾರಣನು, ಮತ್ತು ಅವನು ಯಾವ ಪ್ರಭಾವವನ್ನು ಬೀರುತ್ತಾನೆ?
7 ಅಪೊಸ್ತಲ ಪೌಲನು “ಈ ಪ್ರಪಂಚದ ದೇವರ” ಕುರಿತಾಗಿ ಮಾತಾಡಿದನು. ಈ ಅಭಿವ್ಯಕ್ತಿಯ ಮೂಲಕ ಅವನು ಪಿಶಾಚನಾದ ಸೈತಾನನ ಬಗ್ಗೆ ತಿಳಿಸುತ್ತಿದ್ದನು. ಇವನು ‘ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ್ದಾನೆ’ ಎಂದೂ ಪೌಲನು ಹೇಳಿದನು. (2 ಕೊರಿಂಥ 4:4) ಅನೇಕರು ತಮಗೆ ದೇವರಲ್ಲಿ ನಂಬಿಕೆಯಿದೆಯೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರಲ್ಲಿ ಹೆಚ್ಚುತ್ತಿರುವ ಸಂಖ್ಯೆಯ ಜನರು, ಒಬ್ಬ ಪಿಶಾಚನಿದ್ದಾನೆಂದು ನಂಬುವುದಿಲ್ಲ. ಏಕೆ? ಯಾವುದೊ ದುಷ್ಟ, ಅತಿಮಾನುಷ ಶಕ್ತಿಯು ಅಸ್ತಿತ್ವದಲ್ಲಿದ್ದು, ತಾವು ಯೋಚಿಸುವ ವಿಧವನ್ನು ಪ್ರಭಾವಿಸಬಲ್ಲದೆಂಬುದನ್ನು ಅವರು ಒಪ್ಪಿಕೊಳ್ಳಲಿಕ್ಕೇ ಸಿದ್ಧರಿಲ್ಲ. ಹಾಗಿದ್ದರೂ ಪೌಲನು ತೋರಿಸುವಂತೆ, ಪಿಶಾಚನು ಖಂಡಿತವಾಗಿಯೂ ಅಸ್ತಿತ್ವದಲ್ಲಿದ್ದಾನೆ, ಮತ್ತು ಜನರು ಸತ್ಯದ ಬೆಳಕನ್ನು ಕಾಣದಿರುವಂತೆ ಅವರನ್ನು ಖಂಡಿತವಾಗಿಯೂ ಪ್ರಭಾವಿಸುತ್ತಾನೆ. ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುವವನು’ ಎಂಬ ಅವನ ಕುರಿತಾದ ವರ್ಣನೆಯಿಂದ, ಸೈತಾನನಿಗೆ ಮಾನವನ ಯೋಚನಾ ಧಾಟಿಯನ್ನು ಪ್ರಭಾವಿಸಲು ಇರುವ ಶಕ್ತಿಯನ್ನು ಮನಗಾಣಸಾಧ್ಯವಿದೆ. (ಪ್ರಕಟನೆ 12:9) ಸೈತಾನನ ಚಟುವಟಿಕೆಗಳ ಫಲಿತಾಂಶವಾಗಿ, ಪ್ರವಾದಿಯಾದ ಯೆಶಾಯನಿಂದ ಮುಂತಿಳಿಸಲ್ಪಟ್ಟ ಸ್ಥಿತಿಯು ಯೆಹೋವನನ್ನು ಸೇವಿಸುವವರನ್ನು ಬಿಟ್ಟು ಇಡೀ ಮಾನವಜಾತಿಗೆ ಈಗ ಅನ್ವಯಿಸುತ್ತದೆ: “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.”—ಯೆಶಾಯ 60:2.
8. ಆತ್ಮಿಕ ಕತ್ತಲಲ್ಲಿರುವವರು ತಾವು ಗಲಿಬಿಲಿಗೊಂಡಿದ್ದೇವೆಂಬುದನ್ನು ಯಾವ ವಿಧಗಳಲ್ಲಿ ತೋರಿಸುತ್ತಾರೆ?
8 ದಟ್ಟ ಕತ್ತಲಿನಲ್ಲಿ ಏನನ್ನೂ ನೋಡಲು ಸಾಧ್ಯವಿಲ್ಲ. ಒಬ್ಬನು ಸುಲಭವಾಗಿ ದಾರಿ ತಪ್ಪಿಹೋಗಬಹುದು ಅಥವಾ ಗಲಿಬಿಲಿಗೊಳ್ಳಬಹುದು. ತದ್ರೀತಿಯಲ್ಲಿ ಆತ್ಮಿಕ ಕತ್ತಲಿನಲ್ಲಿರುವವರಿಗೆ ಗ್ರಹಣಶಕ್ತಿಯ ಕೊರತೆಯಿರುತ್ತದೆ ಮತ್ತು ಅವರು ಆತ್ಮಿಕ ಅರ್ಥದಲ್ಲಿ ಬೇಗನೆ ಗಲಿಬಿಲಿಗೊಳ್ಳುತ್ತಾರೆ. ಸತ್ಯ ಮತ್ತು ಸುಳ್ಳು, ಒಳ್ಳೇದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ನೋಡುವ ಸಾಮರ್ಥ್ಯವನ್ನು ಅವರು ಕಳೆದುಕೊಳ್ಳಸಾಧ್ಯವಿದೆ. ಅಂಥ ಕತ್ತಲಲ್ಲಿರುವವರ ಬಗ್ಗೆ ಪ್ರವಾದಿಯಾದ ಯೆಶಾಯನು ಹೀಗೆ ಬರೆದನು: “ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ!” (ಯೆಶಾಯ 5:20) ಆತ್ಮಿಕ ಕತ್ತಲಲ್ಲಿ ವಾಸಿಸುತ್ತಿರುವವರು ಕತ್ತಲಿನ ದೇವರಾದ ಪಿಶಾಚನಾದ ಸೈತಾನನಿಂದ ಪ್ರಭಾವಿಸಲ್ಪಡುತ್ತಾರೆ ಮತ್ತು ಈ ಕಾರಣದಿಂದ ಅವರು ಬೆಳಕು ಹಾಗೂ ಜೀವದ ಮೂಲದಿಂದ ದೂರಸರಿದಿರುತ್ತಾರೆ.—ಎಫೆಸ 4:17-19.
ಕತ್ತಲಿನಿಂದ ಬೆಳಕಿಗೆ ಬರುವ ಪಂಥಾಹ್ವಾನ
9. ಅನ್ಯಾಯಗಾರರಿಗೆ ಹೇಗೆ ಅಕ್ಷರಶಃ ಹಾಗೂ ಆತ್ಮಿಕ ಅರ್ಥದಲ್ಲಿ ಕತ್ತಲಿನ ಕಡೆಗೆ ಆಕರ್ಷಣೆಯಿದೆ ಎಂಬುದನ್ನು ವಿವರಿಸಿರಿ.
9 ಅಕ್ಷರಾರ್ಥಕ ಕತ್ತಲಿನ ಕಡೆಗೆ ಅನ್ಯಾಯಗಾರರಿಗಿರುವ ಆಕರ್ಷಣೆಯನ್ನು ನಂಬಿಗಸ್ತ ಯೋಬನು ಹೀಗೆ ಹೇಳುತ್ತಾ ತೋರಿಸಿದನು: “ಜಾರನು ತಾನು ಯಾರ ಕಣ್ಣಿಗೂ ಬೀಳಬಾರದೆಂದು ಸಂಜೆಯನ್ನೆದುರುನೋಡುತ್ತಿದ್ದು ಮುಖಕ್ಕೆ ಮುಸುಕುಹಾಕಿಕೊಳ್ಳುವನು.” (ಯೋಬ 24:15) ಅನ್ಯಾಯಗಾರರು ಆತ್ಮಿಕ ಕತ್ತಲಲ್ಲೂ ಇದ್ದಾರೆ. ಮತ್ತು ಈ ರೀತಿಯ ಕತ್ತಲು ತುಂಬ ಶಕ್ತಿಯುತವಾಗಿರಬಲ್ಲದು. ಅಂಥ ಕತ್ತಲಲ್ಲಿ ಸಿಕ್ಕಿಬಿದ್ದವರ ನಡುವೆ ಲೈಂಗಿಕ ಅನೈತಿಕತೆ, ಕಳ್ಳತನ, ಲೋಭ, ಕುಡಿಕತನ, ಬೈಯುವಿಕೆ ಮತ್ತು ಸುಲುಕೊಳ್ಳುವಿಕೆ ಸಾಮಾನ್ಯವಾಗಿದೆ. ಆದರೆ ದೇವರ ವಾಕ್ಯದ ಬೆಳಕಿಗೆ ಬರುವ ಯಾವುದೇ ವ್ಯಕ್ತಿಯು ಬದಲಾಗಬಲ್ಲನು. ಅಂಥ ಬದಲಾವಣೆಯು ಸಾಧ್ಯ ಎಂಬುದನ್ನು ಪೌಲನು ಕೊರಿಂಥದವರಿಗೆ ಬರೆದ ತನ್ನ ಪತ್ರದಲ್ಲಿ ಸ್ಪಷ್ಟಪಡಿಸುತ್ತಾನೆ. ಕೊರಿಂಥದಲ್ಲಿದ್ದ ಅನೇಕ ಕ್ರೈಸ್ತರು ಒಂದು ಸಮಯದಲ್ಲಿ ಕತ್ತಲಿನ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಪೌಲನು ಅವರಿಗೆ ಹೇಳಿದ್ದು: “ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:9-11.
10, 11. (ಎ) ಯೇಸು ಯಾರ ದೃಷ್ಟಿಯನ್ನು ಪುನಸ್ಸ್ಥಾಪಿಸಿದನೊ ಆ ವ್ಯಕ್ತಿಗೆ ಹೇಗೆ ಪರಿಗಣನೆಯನ್ನು ತೋರಿಸಿದನು? (ಬಿ) ಅನೇಕರು ಬೆಳಕನ್ನು ಏಕೆ ಆಯ್ಕೆಮಾಡುವುದಿಲ್ಲ?
10 ಒಬ್ಬ ವ್ಯಕ್ತಿಯು ದಟ್ಟವಾದ ಕತ್ತಲಿನಿಂದ ಬೆಳಕಿಗೆ ಬರುವಾಗ, ಆ ಬೆಳಕಿಗೆ ಹೊಂದಿಕೊಳ್ಳಲು ಅವನ ಕಣ್ಣುಗಳಿಗೆ ಬಹುಶಃ ಸ್ವಲ್ಪ ಸಮಯ ಹಿಡಿಯಬಹುದು. ಬೇತ್ಸಾಯಿದ ಊರಿನಲ್ಲಿ, ಯೇಸು ಒಬ್ಬ ಕುರುಡನನ್ನು ಗುಣಪಡಿಸಿದನು. ಆದರೆ ಅವನು ಅದನ್ನು ದಯೆಯಿಂದ ಹಂತಹಂತವಾಗಿ ಮಾಡಿದನು. “ಆತನು ಕುರುಡನ ಕೈ ಹಿಡುಕೊಂಡು ಊರ ಹೊರಕ್ಕೆ ಕರಕೊಂಡು ಹೋಗಿ ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ಕೈಯಿಟ್ಟು—ನಿನಗೇನಾದರೂ ಕಾಣುತ್ತದೋ? ಎಂದು ಅವನನ್ನು ಕೇಳಿದನು. ಅವನು ತಲೆಯೆತ್ತಿ ನೋಡಿ—ನನಗೆ ಜನರು ಕಾಣುತ್ತಾರೆ; ಅವರು ಮರಗಳಂತೆ ಕಾಣಿಸಿದರೂ ತಿರುಗಾಡುತ್ತಾ ಇದ್ದಾರೆ ಅಂದನು. ಆಗ ಆತನು ಅವನ ಕಣ್ಣುಗಳ ಮೇಲೆ ತಿರಿಗಿ ಕೈಯಿಟ್ಟನು; ಅವನು ಕಣ್ಣುಬಿಟ್ಟು ನೋಡಲು ಅವನಿಗೆ ಗುಣವಾಗಿತ್ತು; ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.” (ಮಾರ್ಕ 8:23-25) ಆ ವ್ಯಕ್ತಿಯು, ಸೂರ್ಯನ ಪ್ರಕಾಶಮಾನ ಬೆಳಕಿಗೆ ತನ್ನನ್ನೇ ಹೊಂದಿಸಿಕೊಳ್ಳುವಂತೆ, ಯೇಸು ಅವನ ದೃಷ್ಟಿಶಕ್ತಿಯನ್ನು ನಿಧಾನವಾಗಿ ಪುನಸ್ಸ್ಥಾಪಿಸಿದನೆಂದು ತೋರುತ್ತದೆ. ಆ ವ್ಯಕ್ತಿಯು ನೋಡಲು ಶಕ್ತನಾದಾಗ ಅವನಿಗೆಷ್ಟು ಆನಂದವಾಗಿದ್ದಿರಬೇಕೆಂಬುದನ್ನು ನಾವು ಕಲ್ಪಿಸಿಕೊಳ್ಳಬಹುದು.
11 ಆದರೆ ಯಾರು ಒಂದೊಂದೇ ಹೆಜ್ಜೆಯನ್ನಿಡುತ್ತಾ ಆತ್ಮಿಕ ಕತ್ತಲಿನಿಂದ ಸತ್ಯದ ಬೆಳಕಿಗೆ ಬರಲು ಸಹಾಯವನ್ನು ಪಡೆಯುತ್ತಾರೊ ಅವರು ಅನುಭವಿಸುವ ಆನಂದವು, ಆ ಮನುಷ್ಯನು ಅನುಭವಿಸಿದ ಆನಂದಕ್ಕಿಂತಲೂ ಎಷ್ಟೋ ಹೆಚ್ಚಾಗಿರುತ್ತದೆ. ನಾವು ಅವರ ಆನಂದವನ್ನು ನೋಡುವಾಗ, ಹೆಚ್ಚೆಚ್ಚು ಜನರು ಬೆಳಕಿನ ಕಡೆಗೆ ಏಕೆ ಆಕರ್ಷಿಸಲ್ಪಡುವುದಿಲ್ಲವೆಂದು ಸೋಜಿಗಪಡುತ್ತಿರಬಹುದು. ಇದಕ್ಕೆ ಕಾರಣವನ್ನು ಯೇಸು ಕೊಡುತ್ತಾನೆ: “ಆ ತೀರ್ಪು ಏನಂದರೆ—ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ.” (ಯೋಹಾನ 3:19, 20) ಹೌದು, ಅನೇಕರು ಅನೈತಿಕತೆ, ದಬ್ಬಾಳಿಕೆ, ಸುಳ್ಳುಹೇಳುವಿಕೆ, ವಂಚನೆ, ಮತ್ತು ಕದಿಯುವಿಕೆಯಂಥ ‘ದುಷ್ಕೃತ್ಯಗಳನ್ನು’ ನಡೆಸಲು ಇಷ್ಟಪಡುತ್ತಾರೆ, ಮತ್ತು ಸೈತಾನನ ಆತ್ಮಿಕ ಅಂಧಕಾರವು ಅವರು ತಮ್ಮ ಇಷ್ಟದಂತೆ ಮಾಡಲು ಬೇಕಾಗುವ ತಕ್ಕ ವಾತಾವರಣವನ್ನು ಒದಗಿಸುತ್ತದೆ.
ಬೆಳಕಿನಲ್ಲಿ ಪ್ರಗತಿಯನ್ನು ಮಾಡುವುದು
12. ಬೆಳಕಿಗೆ ಬರುವ ಮೂಲಕ ನಾವು ಯಾವ ವಿಧಗಳಲ್ಲಿ ಪ್ರಯೋಜನ ಪಡೆದಿದ್ದೇವೆ?
12 ನಾವು ಬೆಳಕಿನ ಜ್ಞಾನವನ್ನು ಪಡೆದಾಗಿನಿಂದ, ನಮ್ಮಲ್ಲಿಯೇ ಯಾವ ರೀತಿಯ ಬದಲಾವಣೆಗಳನ್ನು ನೋಡಿದ್ದೇವೆ? ಕೆಲವೊಮ್ಮೆ ಹಿಂದಿನದ್ದನ್ನು ಜ್ಞಾಪಕಕ್ಕೆ ತರುತ್ತಾ, ನಾವು ಮಾಡಿರುವಂಥ ಆತ್ಮಿಕ ಪ್ರಗತಿಯನ್ನು ಪರಿಶೀಲಿಸುವುದು ಒಳ್ಳೇದು. ನಾವು ಯಾವ ದುರಭ್ಯಾಸಗಳನ್ನು ಬಿಟ್ಟುಬಿಟ್ಟಿದ್ದೇವೆ? ನಮ್ಮ ಜೀವಿತದಲ್ಲಿನ ಯಾವ ಸಮಸ್ಯೆಗಳನ್ನು ನಾವು ಸರಿಪಡಿಸಲು ಶಕ್ತರಾಗಿದ್ದೇವೆ? ಭವಿಷ್ಯಕ್ಕಾಗಿರುವ ನಮ್ಮ ಯೋಜನೆಗಳು ಹೇಗೆ ಬದಲಾಗಿವೆ? ಯೆಹೋವನ ಬಲ ಮತ್ತು ಆತನ ಪವಿತ್ರಾತ್ಮದ ಸಹಾಯದಿಂದ ನಾವು ನಮ್ಮ ವ್ಯಕ್ತಿತ್ವದಲ್ಲಿ ಮತ್ತು ಯೋಚನೆಯ ಮಾದರಿಯಲ್ಲಿ ಬದಲಾವಣೆಗಳನ್ನು ಮಾಡುತ್ತಾ ಇರುವ ಮೂಲಕ, ನಾವು ಬೆಳಕಿಗೆ ಸ್ಪಂದಿಸುತ್ತಾ ಇದ್ದೇವೆಂಬುದನ್ನು ತೋರಿಸುತ್ತಾ ಇರಬಲ್ಲೆವು. (ಎಫೆಸ 4:23, 24) ಪೌಲನು ಅದನ್ನು ಈ ರೀತಿಯಲ್ಲಿ ಹೇಳುತ್ತಾನೆ: “ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕ್ರಿಸ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.” (ಎಫೆಸ 5:8, 9) ನಮ್ಮನ್ನೇ ಯೆಹೋವನ ಬೆಳಕಿನಿಂದ ಮಾರ್ಗದರ್ಶಿಸಲ್ಪಡುವಂತೆ ಅನುಮತಿಸುವುದರಿಂದ, ನಮಗೆ ಒಂದು ನಿರೀಕ್ಷೆ ಹಾಗೂ ಉದ್ದೇಶ ಸಿಗುತ್ತದೆ ಮಾತ್ರವಲ್ಲ, ನಮ್ಮ ಸುತ್ತಲಿರುವವರ ಬಾಳಿಗೂ ಹರ್ಷವನ್ನು ಕೂಡಿಸುತ್ತದೆ. ಮತ್ತು ಅಂಥ ಬದಲಾವಣೆಗಳನ್ನು ಮಾಡುವುದು ಯೆಹೋವನಿಗೆ ಎಷ್ಟೊಂದು ಆನಂದವನ್ನು ತರುತ್ತದೆ!—ಜ್ಞಾನೋಕ್ತಿ 27:11.
13. ಯೆಹೋವನ ಬೆಳಕಿಗಾಗಿ ನಾವು ಹೇಗೆ ನಮ್ಮ ಕೃತಜ್ಞತೆಯನ್ನು ತೋರಿಸಬಲ್ಲೆವು, ಮತ್ತು ಅಂಥ ಮಾರ್ಗಕ್ರಮಕ್ಕಾಗಿ ಯಾವುದರ ಅಗತ್ಯವಿದೆ?
13 ನಾವು ಬೈಬಲಿನಿಂದ ಏನನ್ನು ಕಲಿತಿದ್ದೇವೊ ಅದನ್ನು ನಮ್ಮ ಕುಟುಂಬ ಸದಸ್ಯರು, ಮಿತ್ರರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾ ಯೆಹೋವನ ಬೆಳಕನ್ನು ಪ್ರತಿಫಲಿಸುವ ಮೂಲಕ, ನಾವು ಆನಂದಿಸುತ್ತಿರುವ ಹೆಚ್ಚು ಸಂತೋಷಕರವಾದ ಜೀವನಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ತೋರಿಸುತ್ತೇವೆ. (ಮತ್ತಾಯ 5:12-16; 24:14) ನಮಗೆ ಕಿವಿಗೊಡಲು ನಿರಾಕರಿಸುವವರಿಗೆ, ನಮ್ಮ ಸಾರುವಿಕೆ ಹಾಗೂ ನಮ್ಮ ಆದರ್ಶಪ್ರಾಯ ಕ್ರೈಸ್ತ ಜೀವನಮಾರ್ಗವು ಒಂದು ಖಂಡನೆಯಾಗಿ ಪರಿಣಮಿಸುತ್ತದೆ. ಪೌಲನು ವಿವರಿಸುವುದು: “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ. ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬೈಲಿಗೆ ತಂದು ಖಂಡಿಸಿರಿ.” (ಎಫೆಸ 5:10, 11) ಕತ್ತಲನ್ನು ತೊರೆಯುವಂತೆ ಮತ್ತು ಬೆಳಕನ್ನು ಆರಿಸಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದು ನಮ್ಮಿಂದ ಧೈರ್ಯವನ್ನು ಕೇಳಿಕೊಳ್ಳುತ್ತದೆ. ಇನ್ನೂ ಪ್ರಾಮುಖ್ಯವಾಗಿ, ಇತರರಿಗಾಗಿ ಕರುಣೆ ಮತ್ತು ಚಿಂತೆ ಹಾಗೂ ಅವರ ನಿತ್ಯ ಪ್ರಯೋಜನಕ್ಕಾಗಿ ಸತ್ಯದ ಬೆಳಕನ್ನು ಹಂಚಿಕೊಳ್ಳುವ ಒಂದು ಹೃತ್ಪೂರ್ವಕ ಆಸೆಯು ಆವಶ್ಯಕವಾಗಿದೆ.—ಮತ್ತಾಯ 28:19, 20.
ಮೋಸಕರ ಬೆಳಕುಗಳ ಕುರಿತು ಎಚ್ಚರಿಕೆಯಿಂದಿರಿ!
14. ಬೆಳಕಿನ ಸಂಬಂಧದಲ್ಲಿ ಯಾವ ಎಚ್ಚರಿಕೆಯು ಪಾಲಿಸಲ್ಪಡಬೇಕು?
14 ಕತ್ತಲಿನ ಸಮಯದಲ್ಲಿ ಸಮುದ್ರದಲ್ಲಿ ಪ್ರಯಾಣಿಸುತ್ತಿರುವವರಿಗೆ, ಯಾವುದೇ ರೀತಿಯ ಬೆಳಕು ಪ್ರಿಯವಾದದ್ದಾಗಿರುತ್ತದೆ. ಗತಕಾಲಗಳಲ್ಲಿ, ಇಂಗ್ಲೆಂಡಿನ ಬಂಡೆಗಳ ಮೇಲೆ ಬೆಂಕಿಯನ್ನು ಹೊತ್ತಿಸಲಾಗುತ್ತಿತ್ತು. ಬಿರುಗಾಳಿಯ ಸಮಯದಲ್ಲಿ ಎಲ್ಲಿ ಆಶ್ರಯವನ್ನು ಪಡೆಯಬಹುದೆಂಬುದನ್ನು ಇದು ಸೂಚಿಸುತ್ತಿತ್ತು. ಈ ಬೆಳಕುಗಳು ಹಡಗುಗಳನ್ನು ಸುರಕ್ಷಿತವಾದ ಬಂದರುಗಳಿಗೆ ಮಾರ್ಗದರ್ಶಿಸುತ್ತಿದ್ದದ್ದಕ್ಕಾಗಿ, ಹಡಗಿನ ನಾವಿಕ ತಂಡಗಳು ಆಭಾರಿಗಳಾಗಿರುತ್ತಿದ್ದವು. ಆದರೆ ಕೆಲವೊಂದು ಬೆಂಕಿಗಳು ಮೋಸಕರವಾಗಿದ್ದವು. ಬಂದರನ್ನು ತಲಪುವ ಬದಲಿಗೆ, ಅನೇಕ ಹಡಗುಗಳು ತಪ್ಪುದಾರಿಯಲ್ಲಿ ನಡೆಸಲ್ಪಟ್ಟು, ಬಂಡೆಗಳಿಂದ ತುಂಬಿದ ದಡಗಳಲ್ಲಿ ಧ್ವಂಸವಾಗುತ್ತಿದ್ದವು, ಮತ್ತು ಅಲ್ಲಿ ಅವುಗಳ ಸರಕುಗಳನ್ನು ಕದಿಯಲಾಗುತ್ತಿತ್ತು. ಈ ವಂಚಕ ಲೋಕದಲ್ಲಿ, ನಮ್ಮನ್ನು ಆತ್ಮಿಕ ಹಡಗೊಡೆತಕ್ಕೆ ಸೆಳೆಯಬಹುದಾದ ಮೋಸಕರ ಬೆಳಕುಗಳಿಂದ ಆಕರ್ಷಿಸಲ್ಪಡದಂತೆ ನಾವು ಜಾಗರೂಕರಾಗಿರಬೇಕು. “ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು”ತ್ತಾನೆಂದು ನಮಗೆ ಹೇಳಲಾಗಿದೆ. ಅದೇ ರೀತಿಯಲ್ಲಿ, ಧರ್ಮಭ್ರಷ್ಟರ ಜೊತೆಗೆ ಅವನ ಸೇವಕರು ಸಹ ‘ಮೋಸಗಾರರು’ ಆಗಿದ್ದು, ಇವರೂ ‘ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ವೇಷಹಾಕಿಕೊಳ್ಳುತ್ತಾರೆ.’ ಅಂಥವರ ಸುಳ್ಳು ತರ್ಕಗಳನ್ನು ನಾವು ಸ್ವೀಕರಿಸಿದರೆ, ಯೆಹೋವನ ಸತ್ಯವಾಕ್ಯವಾಗಿರುವ ಬೈಬಲಿನಲ್ಲಿನ ನಮ್ಮ ಭರವಸೆಯು ದುರ್ಬಲವಾಗಬಲ್ಲದು ಮತ್ತು ನಮ್ಮ ನಂಬಿಕೆಯು ನಶಿಸಿಹೋಗಬಲ್ಲದು.—2 ಕೊರಿಂಥ 11:13-15; 1 ತಿಮೊಥೆಯ 1:19.
15. ನಿತ್ಯಜೀವಕ್ಕೆ ಹೋಗುವ ದಾರಿಯಲ್ಲಿ ಉಳಿಯುವಂತೆ ನಮಗೆ ಯಾವುದು ಸಹಾಯಮಾಡುವುದು?
ಕೀರ್ತನೆ 119:105) ಹೌದು, ‘ನಿತ್ಯಜೀವಕ್ಕೆ ಹೋಗುವ ಬಿಕ್ಕಟ್ಟಿನ ದಾರಿಯು’ ನಮ್ಮ ಪ್ರೀತಿಯ ದೇವರಾದ ಯೆಹೋವನಿಂದ ಉಜ್ವಲವಾಗಿ ಬೆಳಗಿಸಲ್ಪಟ್ಟಿದೆ, ಮತ್ತು “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (ಮತ್ತಾಯ 7:14; 1 ತಿಮೊಥೆಯ 2:4) ಬೈಬಲಿನ ಸಿದ್ಧಾಂತಗಳನ್ನು ಅನ್ವಯಿಸಿಕೊಳ್ಳುವುದು, ಬಿಕ್ಕಟ್ಟಿನ ದಾರಿಯನ್ನು ಬಿಟ್ಟು ಕತ್ತಲಿನ ಹಾದಿಗಳಲ್ಲಿ ಅಲೆದಾಡುವುದರಿಂದ ನಮ್ಮನ್ನು ರಕ್ಷಿಸುವುದು. ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ನಾವು ಆತ್ಮಿಕವಾಗಿ ಬೆಳೆದಂತೆ ದೇವರ ವಾಕ್ಯದಿಂದ ನಾವು ಕಲಿಸಲ್ಪಡುತ್ತೇವೆ. ದೇವರ ವಾಕ್ಯದ ಬೆಳಕಿನಲ್ಲಿ ನಾವು ನಮ್ಮನ್ನೇ ಖಂಡಿಸಿಕೊಳ್ಳಬಹುದು, ಇಲ್ಲವೆ ಅಗತ್ಯವಿರುವಲ್ಲಿ ಸಭೆಯಲ್ಲಿರುವ ಪ್ರೀತಿಯ ಕುರುಬರಿಂದ ಖಂಡಿಸಲ್ಪಡಬಹುದು. ತದ್ರೀತಿಯಲ್ಲಿ ನಾವು ಜೀವದ ಮಾರ್ಗದಲ್ಲಿ ನಡೆಯುತ್ತಾ ಇರುವಂತೆ, ತಿದ್ದುಪಾಟನ್ನೂ, ನೀತಿಶಿಕ್ಷೆಯನ್ನೂ ನಮ್ರಭಾವದಿಂದ ಸ್ವೀಕರಿಸಸಾಧ್ಯವಿದೆ.
15 ಕೀರ್ತನೆಗಾರನು ಬರೆದುದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಗಣ್ಯತಾಭಾವದಿಂದ ಬೆಳಕಿನಲ್ಲಿ ನಡೆಯಿರಿ
16. ಬೆಳಕೆಂಬ ಯೆಹೋವನ ಅದ್ಭುತಕರ ವರದಾನಕ್ಕಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಬಹುದು?
16 ಬೆಳಕೆಂಬ ಯೆಹೋವನ ಅದ್ಭುತಕರವಾದ ವರದಾನಕ್ಕಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಬಲ್ಲೆವು? ಹುಟ್ಟು ಕುರುಡನಾಗಿದ್ದ ವ್ಯಕ್ತಿಯನ್ನು ಯೇಸು ಗುಣಪಡಿಸಿದಾಗ, ಅವನು ಗಣ್ಯತೆಯನ್ನು ವ್ಯಕ್ತಪಡಿಸುವಂತೆ ಪ್ರೇರಿಸಲ್ಪಟ್ಟನೆಂದು ಯೋಹಾನ ಅಧ್ಯಾಯ 9 ನಮಗೆ ಹೇಳುತ್ತದೆ. ಅದನ್ನು ಅವನು ಹೇಗೆ ವ್ಯಕ್ತಪಡಿಸಿದನು? ಯೇಸು ದೇವರ ಮಗನಾಗಿದ್ದಾನೆಂದು ಅವನು ನಂಬಿಕೆಯಿಟ್ಟನು ಮತ್ತು ಬಹಿರಂಗವಾಗಿ ಅವನನ್ನು ಒಬ್ಬ “ಪ್ರವಾದಿ” ಎಂದು ಗುರುತಿಸಿದನು. ಅಷ್ಟುಮಾತ್ರವಲ್ಲದೆ, ಯೇಸುವಿನ ಅದ್ಭುತವನ್ನು ತುಚ್ಛೀಕರಿಸಲು ಪ್ರಯತ್ನಿಸುವವರ ವಿರುದ್ಧ ಅವನು ಧೈರ್ಯದಿಂದ ತನ್ನ ದನಿಯನ್ನೆತ್ತಿದನು. (ಯೋಹಾನ 9:17, 30-34) ಅಪೊಸ್ತಲ ಪೇತ್ರನು ಕ್ರೈಸ್ತ ಸಭೆಯ ಅಭಿಷಿಕ್ತ ಸದಸ್ಯರನ್ನು “ಮೀಸಲಾದ ಜನ” ಎಂದು ಕರೆಯುತ್ತಾನೆ. ಅವರು ಏಕೆ ಮೀಸಲಾಗಿದ್ದಾರೆ? ಏಕೆಂದರೆ, ಹುಟ್ಟುಕುರುಡನಾಗಿದ್ದ ಆದರೆ ಗುಣಪಡಿಸಲ್ಪಟ್ಟ ಆ ವ್ಯಕ್ತಿಗಿದ್ದಂಥದ್ದೇ ರೀತಿಯ ಗಣ್ಯತಾಭಾವ ಅವರಿಗಿದೆ. ‘ತಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವ’ ಮೂಲಕ ಅವರು ತಮ್ಮ ಆಶ್ರಯದಾತನಾದ ಯೆಹೋವನಿಗೆ ಗಣ್ಯತೆಯನ್ನು ತೋರಿಸುತ್ತಾರೆ. (1 ಪೇತ್ರ 2:9; ಕೊಲೊಸ್ಸೆ 1:13) ಭೂನಿರೀಕ್ಷೆಯುಳ್ಳವರಿಗೆ ಅದೇ ರೀತಿಯ ಮನೋಭಾವವಿದೆ, ಮತ್ತು ಯೆಹೋವನ ‘ಗುಣಾತಿಶಯಗಳ’ ಕುರಿತಾಗಿ ಬಹಿರಂಗ ಘೋಷಣೆಯನ್ನು ಮಾಡುವುದರಲ್ಲಿ ಅವರು ತಮ್ಮ ಅಭಿಷಿಕ್ತ ಸಹೋದರರನ್ನು ಬೆಂಬಲಿಸುತ್ತಾರೆ. ಅಪರಿಪೂರ್ಣರಾದ ಮಾನವರಿಗೆ ದೇವರು ಎಂಥ ಅನರ್ಘ್ಯವಾದ ಸುಯೋಗವನ್ನು ಕೊಡುತ್ತಾನೆ!
17, 18. (ಎ) ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಏನಾಗಿದೆ? (ಬಿ) ತಿಮೊಥೆಯನನ್ನು ಅನುಕರಿಸುತ್ತಾ, ಪ್ರತಿಯೊಬ್ಬ ಕ್ರೈಸ್ತನಿಗೆ ಯಾವುದರಿಂದ ದೂರವಿರುವಂತೆ ಪ್ರೋತ್ಸಾಹಿಸಲಾಗಿದೆ?
17 ಸತ್ಯದ ಬೆಳಕಿಗಾಗಿ ಮನಃಪೂರ್ವಕವಾದ ಗಣ್ಯತೆ ಇರುವುದು ಅತ್ಯಾವಶ್ಯಕವಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಹುಟ್ಟುವಾಗಲೇ ಸತ್ಯವು ತಿಳಿದಿರಲಿಲ್ಲವೆಂಬುದನ್ನು ನೆನಪಿನಲ್ಲಿಡಿರಿ. ಕೆಲವರು ವಯಸ್ಕರಾದಾಗ ಅದನ್ನು ಕಲಿತರು, ಮತ್ತು ಕತ್ತಲಿಗಿಂತ ಬೆಳಕು ಎಷ್ಟು ಶ್ರೇಷ್ಠವಾಗಿದೆಯೆಂಬುದನ್ನು ಬೇಗನೆ ಮನಗಂಡರು. ಇನ್ನಿತರರು, ದೇವಭೀರು ಹೆತ್ತವರಿಂದ ಬೆಳೆಸಲ್ಪಡುವ ಮಹಾ ಸುಯೋಗವನ್ನು ಪಡೆದಿದ್ದಾರೆ. ಅಂಥವರು ಸತ್ಯವನ್ನು ಮಾಮೂಲಿಯಾಗಿ ತೆಗೆದುಕೊಳ್ಳುವುದು ಸುಲಭವಾಗಿರುತ್ತದೆ. ತನ್ನ ಜನನಕ್ಕಿಂತಲೂ ಮುಂಚಿನಿಂದಲೇ ಯೆಹೋವನನ್ನು ಸೇವಿಸುತ್ತಿದ್ದ ಹೆತ್ತವರುಳ್ಳ ಒಬ್ಬ ಸಾಕ್ಷಿಯು, ತನಗೆ ಬಾಲ್ಯದಿಂದಲೇ ಕಲಿಸಲ್ಪಟ್ಟಿದ್ದಂಥ ಸತ್ಯಗಳ ಪೂರ್ಣ ಅರ್ಥ ಮತ್ತು ಮಹತ್ವವನ್ನು ಗ್ರಹಿಸಲು ತುಂಬ ಸಮಯ ಮತ್ತು ಪ್ರಯತ್ನ ಬೇಕಾಯಿತು ಎಂದು ಒಪ್ಪಿಕೊಳ್ಳುತ್ತಾಳೆ. (2 ತಿಮೊಥೆಯ 3:14, 15) ಎಳೆಯರಾಗಿರಲಿ, ವೃದ್ಧರಾಗಿರಲಿ ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನು ಪ್ರಕಟಿಸಿರುವಂಥ ಸತ್ಯಕ್ಕಾಗಿ ಗಾಢವಾದ ಗಣ್ಯತೆಯನ್ನು ಬೆಳೆಸಿಕೊಳ್ಳಬೇಕು.
18 ಯುವಕನಾದ ತಿಮೊಥೆಯನಿಗೆ ಶೈಶವಾವಸ್ಥೆಯಿಂದಲೇ “ಪರಿಶುದ್ಧಗ್ರಂಥಗಳ”ನ್ನು ಕಲಿಸಲಾಗಿತ್ತು. ಆದರೆ ಅವನು ತಾನೇ ಶುಶ್ರೂಷೆಯಲ್ಲಿ ಪರಿಶ್ರಮಪಟ್ಟಾಗ, ಅವನೊಬ್ಬ ಕ್ರೈಸ್ತನಾಗಿ ಪ್ರೌಢನಾದನು. (2 ತಿಮೊಥೆಯ 3:14) ಆಗ ಅವನು ಅಪೊಸ್ತಲ ಪೌಲನಿಗೆ ಸಹಾಯಮಾಡಲು ಅರ್ಹನಾದನು. ಪೌಲನು ಅವನಿಗೆ ಬುದ್ಧಿವಾದ ನೀಡಿದ್ದು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.” ನಾವೆಲ್ಲರೂ ತಿಮೊಥೆಯನಂತೆ, ನಮ್ಮನ್ನು ಅವಮಾನಗೊಳಿಸುವ, ಇಲ್ಲವೆ ನಮ್ಮಿಂದಾಗಿ ಯೆಹೋವನಿಗೆ ಅವಮಾನವಾಗುವಂಥ ಯಾವುದೇ ಕೆಲಸವನ್ನು ಮಾಡುವುದರಿಂದ ದೂರವಿರೋಣ!—2 ತಿಮೊಥೆಯ 2:15.
19. (ಎ) ದಾವೀದನಂತೆ ನಮಗೆಲ್ಲರಿಗೆ ಏನನ್ನು ಹೇಳಲು ಕಾರಣವಿದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
19 ನಮಗೆ ತನ್ನ ಸತ್ಯದ ಬೆಳಕನ್ನು ಕೊಟ್ಟಿರುವ ಯೆಹೋವನನ್ನು ಸ್ತುತಿಸಲು ಪ್ರತಿಯೊಂದು ಕಾರಣವೂ ಇದೆ. ರಾಜ ದಾವೀದನಂತೆ ನಾವು ಹೀಗನ್ನುತ್ತೇವೆ: “ಯೆಹೋವನೇ, ನನ್ನ ದೀಪವು ನೀನೇ; ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು.” (2 ಸಮುವೇಲ 22:29) ಆದರೂ ನಾವು ಇಷ್ಟರ ವರೆಗೆ ಏನನ್ನು ಮಾಡಿದ್ದೇವೊ ಅದರೊಂದಿಗೆ ತೃಪ್ತರಾಗಿ ಸುಮ್ಮನಾಗಬಾರದು. ಏಕೆಂದರೆ ಆಗ ನಾವು ಯಾವ ಕತ್ತಲಿನಿಂದ ರಕ್ಷಿಸಲ್ಪಟ್ಟಿದ್ದೇವೊ ಅದೇ ಕತ್ತಲಿಗೆ ಹಿಂದೆ ಜಾರಿಹೋಗುವ ಸಾಧ್ಯತೆಯಿದೆ. ಆದುದರಿಂದಲೇ, ನಮ್ಮ ಜೀವಿತಗಳಲ್ಲಿ ನಾವು ದೈವಿಕ ಸತ್ಯಕ್ಕೆ ಎಷ್ಟು ಮಹತ್ವವನ್ನು ಕೊಡುತ್ತೇವೆಂಬುದನ್ನು ಪರೀಕ್ಷಿಸಲು ಮುಂದಿನ ಲೇಖನವು ನಮಗೆ ಸಹಾಯಮಾಡುವುದು.
ನೀವೇನನ್ನು ಕಲಿತಿದ್ದೀರಿ?
• ಯೆಹೋವನು ಹೇಗೆ ಆತ್ಮಿಕ ಜ್ಞಾನೋದಯವನ್ನು ಒದಗಿಸುತ್ತಾನೆ?
• ನಮ್ಮ ಸುತ್ತಲಿರುವ ಆತ್ಮಿಕ ಕತ್ತಲೆಯು ಯಾವ ಪಂಥಾಹ್ವಾನವನ್ನೊಡ್ಡುತ್ತದೆ?
• ನಾವು ಯಾವ ಅಪಾಯಗಳಿಂದ ದೂರವಿರಬೇಕು?
• ಸತ್ಯದ ಬೆಳಕಿಗಾಗಿ ನಾವು ನಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
[ಪುಟ 8ರಲ್ಲಿರುವ ಚಿತ್ರ]
ಯೆಹೋವನು ಭೌತಿಕ ಮತ್ತು ಆತ್ಮಿಕ ಬೆಳಕಿನ ಮೂಲನಾಗಿದ್ದಾನೆ
[ಪುಟ 10ರಲ್ಲಿರುವ ಚಿತ್ರ]
ಯೇಸು ಒಬ್ಬ ಕುರುಡನನ್ನು ನಿಧಾನವಾಗಿ ಗುಣಪಡಿಸಿದಂತೆಯೇ, ನಾವು ಆತ್ಮಿಕ ಕತ್ತಲಿನಿಂದ ಕ್ರಮೇಣ ಹೊರಬರುವಂತೆ ಅವನು ನಮಗೆ ಸಹಾಯಮಾಡುತ್ತಾನೆ
[ಪುಟ 11ರಲ್ಲಿರುವ ಚಿತ್ರ]
ಸೈತಾನನ ಮೋಸಕರ ಬೆಳಕುಗಳಿಗೆ ಮರುಳಾಗುವುದು, ಆತ್ಮಿಕ ಹಡಗೊಡೆತದಲ್ಲಿ ಫಲಿಸುತ್ತದೆ