ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನ ನಾಯಕತ್ವವು ನಿಮಗೆ ನೈಜವಾದದ್ದಾಗಿದೆಯೋ?

ಕ್ರಿಸ್ತನ ನಾಯಕತ್ವವು ನಿಮಗೆ ನೈಜವಾದದ್ದಾಗಿದೆಯೋ?

ಕ್ರಿಸ್ತನ ನಾಯಕತ್ವವು ನಿಮಗೆ ನೈಜವಾದದ್ದಾಗಿದೆಯೋ?

“ಗುರುಗಳು [“ನಾಯಕರು,” NW] ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು [“ನಾಯಕನು,” NW].”​—ಮತ್ತಾಯ 23:10.

1. ಸತ್ಯ ಕ್ರೈಸ್ತರ ಏಕಮಾತ್ರ ನಾಯಕನು ಯಾರು?

ಅದು ಮಂಗಳವಾರ, ನೈಸಾನ್‌ 11ನೆಯ ತಾರೀಖಾಗಿತ್ತು. ಇನ್ನು ಮೂರು ದಿನಗಳಲ್ಲಿ ಯೇಸು ಕ್ರಿಸ್ತನನ್ನು ವಧಿಸಲಾಗುವುದು. ಇದು ದೇವಾಲಯಕ್ಕೆ ಅವನ ಕೊನೆಯ ಭೇಟಿಯಾಗಿತ್ತು. ಈ ದಿನ ಯೇಸು ಅಲ್ಲಿ ನೆರೆದು ಬಂದಿದ್ದ ಜನರಿಗೂ ತನ್ನ ಶಿಷ್ಯರಿಗೂ ಪ್ರಾಮುಖ್ಯವಾದ ಬೋಧನೆಯೊಂದನ್ನು ತಿಳಿಯಪಡಿಸಿದನು. ಅವನಂದದ್ದು: “ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ. ಮತ್ತು ಗುರುಗಳು [“ನಾಯಕರು,” NW] ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು [“ನಾಯಕನು,” NW].” (ಮತ್ತಾಯ 23:​8-10) ಹೀಗೆ ಯೇಸು ಕ್ರಿಸ್ತನು ಸತ್ಯ ಕ್ರೈಸ್ತರ ನಾಯಕನೆಂಬುದು ಸ್ಪಷ್ಟ.

2, 3. ಯೆಹೋವನಿಗೆ ಕಿವಿಗೊಟ್ಟು, ಆತನು ನೇಮಿಸಿರುವ ನಾಯಕನನ್ನು ಅಂಗೀಕರಿಸುವುದು ನಮ್ಮ ಜೀವನಗಳ ಮೇಲೆ ಯಾವ ಪರಿಣಾಮವನ್ನು ತರುತ್ತದೆ?

2 ನಾವು ಯೇಸುವಿನ ನಾಯಕತ್ವವನ್ನು ಅಂಗೀಕರಿಸುವಲ್ಲಿ, ಅದು ನಮ್ಮ ಜೀವನಗಳ ಮೇಲೆ ಎಷ್ಟು ಪ್ರಯೋಜನಕರವಾದ ಪರಿಣಾಮಗಳನ್ನು ಬೀರುತ್ತದೆ! ಈ ನಾಯಕನ ಬರೋಣವನ್ನು ಮುಂತಿಳಿಸುತ್ತ, ಯೆಹೋವನು ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಪ್ರಕಟಿಸಿದ್ದು: “ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ! ಬಂದು ದ್ರಾಕ್ಷಾರಸವನ್ನೂ ಹಾಲನ್ನೂ ಹಣಕೊಡದೆ ಕ್ರಯವಿಲ್ಲದೆ ತೆಗೆದುಕೊಳ್ಳಿರಿ. . . . ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. . . . ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.”​—ಯೆಶಾಯ 55:​1-4.

3 ನಾವು ಯೆಹೋವನಿಗೆ ಕಿವಿಗೊಟ್ಟು, ಆತನು ನಮಗೆ ಕೊಟ್ಟಿರುವ ನಾಯಕನನ್ನೂ ಅಧಿಪತಿಯನ್ನೂ ಅನುಸರಿಸುವಲ್ಲಿ, ನಮ್ಮ ಸ್ವಂತ ಜೀವನವು ಹೇಗೆ ಪ್ರಭಾವಿಸಲ್ಪಡುತ್ತದೆ ಎಂಬುದನ್ನು ತೋರಿಸಲಿಕ್ಕಾಗಿ ಯೆಶಾಯನು, ಸಾಮಾನ್ಯ ದ್ರವಗಳಾದ ಜಲ, ಹಾಲು ಮತ್ತು ದ್ರಾಕ್ಷಾಮದ್ಯಗಳನ್ನು ರೂಪಕಾಲಂಕಾರವಾಗಿ ಉಪಯೋಗಿಸಿದನು. ಅದರ ಫಲಿತಾಂಶವು ಚೈತನ್ಯದಾಯಕವಾಗಿರುತ್ತದೆ. ಇದು ಶೆಖೆಯ ದಿನದಲ್ಲಿ ತಂಪಾದ ನೀರು ಕುಡಿದಂತಿರುತ್ತದೆ. ಸತ್ಯ ಮತ್ತು ನೀತಿಗಾಗಿ ನಮಗಿರುವ ದಾಹವು ತಣಿಸಲ್ಪಡುತ್ತದೆ. ಹಾಲು ಹೇಗೆ ಶಿಶುಗಳನ್ನು ಬಲಗೊಳಿಸಿ ಬೆಳೆಯಲು ಸಹಾಯಮಾಡುತ್ತದೋ ಹಾಗೆಯೇ ‘ಪಾರಮಾರ್ಥಿಕ ಹಾಲು’ ನಮ್ಮನ್ನು ಬಲಗೊಳಿಸಿ, ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಆತ್ಮಿಕ ಬೆಳವಣಿಗೆಯನ್ನು ವರ್ಧಿಸುತ್ತದೆ. (1 ಪೇತ್ರ 2:​1-3) ಮತ್ತು ದ್ರಾಕ್ಷಾಮದ್ಯವು ಸಂತೋಷ ಸಮಾರಂಭಗಳಲ್ಲಿ ಹರ್ಷವನ್ನು ಬರಮಾಡುತ್ತದೆಂಬುದನ್ನು ಯಾರು ತಾನೇ ಅಲ್ಲಗಳೆಯಸಾಧ್ಯವಿದೆ? ಇದಕ್ಕೆ ಹೋಲಿಕೆಯಾಗಿ, ಸತ್ಯ ದೇವರನ್ನು ಆರಾಧಿಸಿ, ಆತನು ನೇಮಿಸಿರುವ ನಾಯಕನ ಹೆಜ್ಜೆಜಾಡಿನಲ್ಲಿ ನಡೆಯುವುದು, ಜೀವನವನ್ನು “ಬಹಳ ಆನಂದ”ದಾಯಕವಾಗಿ ಮಾಡುತ್ತದೆ. (ಧರ್ಮೋಪದೇಶಕಾಂಡ 16:15) ಹಾಗಾದರೆ, ಆಬಾಲವೃದ್ಧರು, ಗಂಡಸರು ಹೆಂಗಸರು ಹೀಗೆ ಎಲ್ಲರೂ, ಕ್ರಿಸ್ತನ ನಾಯಕತ್ವವು ತಮಗೆ ನೈಜವಾದುದಾಗಿದೆಯೆಂದು ತೋರಿಸುವುದು ಪ್ರಾಮುಖ್ಯ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಮೆಸ್ಸೀಯನು ನಮ್ಮ ನಾಯಕನೆಂಬುದನ್ನು ನಾವು ಹೇಗೆ ತೋರಿಸಬಹುದು?

ಯುವ ಜನರೇ, “ವಿವೇಕದಲ್ಲಿ ವೃದ್ಧಿಯಾಗುತ್ತಾ” ಹೋಗಿರಿ

4. (ಎ) ಪಸ್ಕದ ಸಮಯದಲ್ಲಿ ಯೇಸು ಯೆರೂಸಲೇಮಿಗೆ ಭೇಟಿ ನೀಡಿದಾಗ ಏನು ನಡೆಯಿತು? (ಬಿ) ಯೇಸು ಕೇವಲ 12 ವರ್ಷ ಪ್ರಾಯದವನಾಗಿದ್ದಾಗಲೇ ಅವನೆಷ್ಟು ಒಳ್ಳೇ ತಿಳಿವಳಿಕೆಯುಳ್ಳವನಾಗಿದ್ದನು?

4 ನಮ್ಮ ನಾಯಕನು ಎಳೆಯರಿಗಾಗಿ ಇಟ್ಟ ಮಾದರಿಯನ್ನು ಪರಿಗಣಿಸಿರಿ. ಯೇಸುವಿನ ಬಾಲ್ಯದ ವಿಷಯದಲ್ಲಿ ಸ್ವಲ್ಪ ಸಂಗತಿಗಳು ಮಾತ್ರ ನಮಗೆ ತಿಳಿದುಬಂದಿವೆಯಾದರೂ, ಒಂದು ಸಂಭವವು ಮಹತ್ವವುಳ್ಳದ್ದಾಗಿ ಗೋಚರವಾಗುತ್ತದೆ. ಯೇಸು 12ರ ವಯಸ್ಸಿನವನಾಗಿದ್ದಾಗ, ಅವನ ಹೆತ್ತವರು ಅವನನ್ನು ಪಸ್ಕದ ವಾರ್ಷಿಕ ಭೇಟಿಗಾಗಿ ಯೆರೂಸಲೇಮಿಗೆ ಕರೆದೊಯ್ದರು. ಆ ಸಂದರ್ಭದಲ್ಲಿ ಅವನು ಶಾಸ್ತ್ರೀಯ ಚರ್ಚೆಯಲ್ಲಿ ತೀರ ಮಗ್ನನಾಗಿದ್ದಾಗ, ಅವನ ಹೆತ್ತವರು ಅವನನ್ನು​—ಉದ್ದೇಶಪೂರ್ವಕವಾಗಿ ಅಲ್ಲ​—ಬಿಟ್ಟುಹೋದರು. ಮೂರು ದಿನಗಳ ಬಳಿಕ ಅವನ ಚಿಂತಿತ ಹೆತ್ತವರಾದ ಯೋಸೇಫ ಮತ್ತು ಮರಿಯರು, ಅವನು ದೇವಾಲಯದಲ್ಲಿ “ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ” ಇದ್ದುದನ್ನು ಕಂಡುಹಿಡಿದರು. ಅಲ್ಲದೆ, “ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.” ಕೇವಲ 12ರ ವಯಸ್ಸಿನವನಾಗಿದ್ದಾಗಲೇ ಯೇಸು ಯೋಚನೆಯನ್ನು ಪ್ರೇರಿಸುವ, ಆತ್ಮಿಕಾಭಿಮುಖವಾದ ಪ್ರಶ್ನೆಗಳನ್ನು ಕೇಳಿ, ಬುದ್ಧಿವಂತ ಉತ್ತರಗಳನ್ನು ಕೊಡುತ್ತಿದ್ದುದನ್ನು ಊಹಿಸಿಕೊಳ್ಳಿ! ಅವನ ಹೆತ್ತವರ ತರಬೇತು ಅವನಿಗೆ ಸಹಾಯ ಮಾಡಿತ್ತು ಎಂಬುದರಲ್ಲಿ ಸಂಶಯವಿಲ್ಲ.​—ಲೂಕ 2:​41-50.

5. ಚಿಕ್ಕ ಪ್ರಾಯದವರು ಕುಟುಂಬ ಬೈಬಲ್‌ ಅಧ್ಯಯನದ ಕಡೆಗಿರುವ ತಮ್ಮ ಮನೋಭಾವವನ್ನು ಹೇಗೆ ಪರೀಕ್ಷಿಸಬಹುದು?

5 ಪ್ರಾಯಶಃ ನೀವು ಚಿಕ್ಕ ಪ್ರಾಯದವರಾಗಿರಬಹುದು. ನಿಮ್ಮ ಹೆತ್ತವರು ದೇವರ ಶ್ರದ್ಧಾಪೂರ್ವಕ ಸೇವಕರಾಗಿರುವಲ್ಲಿ, ನಿಮ್ಮ ಮನೆಯಲ್ಲಿ ಕ್ರಮಬದ್ಧವಾದ ಕುಟುಂಬ ಬೈಬಲ್‌ ಅಧ್ಯಯನ ನಡೆಯುತ್ತಿರಬಹುದು. ಆ ಕುಟುಂಬ ಅಧ್ಯಯನದ ವಿಷಯದಲ್ಲಿ ನಿಮ್ಮ ಮನೋಭಾವವೇನು? ಇದನ್ನು ತೋರಿಸಲು, ಈ ಮುಂದಿನ ಪ್ರಶ್ನೆಗಳ ವಿಷಯದಲ್ಲಿ ಏಕೆ ಚಿಂತಿಸಬಾರದು? ‘ನನ್ನ ಕುಟುಂಬದ ಬೈಬಲ್‌ ಅಧ್ಯಯನದ ಏರ್ಪಾಡನ್ನು ನಾನು ಪೂರ್ಣ ಮನಸ್ಸಿನಿಂದ ಬೆಂಬಲಿಸುತ್ತಿದ್ದೇನೊ? ನಾನು ಆ ಏರ್ಪಾಡಿಗೆ ಯಾವ ತಡೆಯನ್ನೂ ತರದೆ ಅದರೊಂದಿಗೆ ಸಹಕರಿಸುತ್ತಿದ್ದೇನೊ?’ (ಫಿಲಿಪ್ಪಿ 3:16) ‘ಆ ಅಧ್ಯಯನದಲ್ಲಿ ನಾನು ಕ್ರಿಯಾಶೀಲನಾಗಿ ಭಾಗವಹಿಸುತ್ತಿದ್ದೇನೊ? ತಕ್ಕ ಸಂದರ್ಭ ಬಂದಾಗ, ನಾನು ಆ ಅಧ್ಯಯನ ಭಾಗದ ಸಂಬಂಧದಲ್ಲಿ ಪ್ರಶ್ನೆಗಳನ್ನು ಹಾಕಿ, ಅದರ ಅನ್ವಯದ ಬಗ್ಗೆ ಹೇಳಿಕೆಗಳನ್ನು ಮಾಡುತ್ತೇನೊ? ನಾನು ಆತ್ಮಿಕವಾಗಿ ಪ್ರಗತಿ ಹೊಂದುತ್ತಿರುವಾಗ, “ಪ್ರಾಯಸ್ಥರಿಗಾಗಿರುವ ಗಟ್ಟಿಯಾದ ಆಹಾರ”ಕ್ಕಾಗಿ ನಾನು ರುಚಿಯನ್ನು ಬೆಳೆಸಿಕೊಳ್ಳುತ್ತಿದ್ದೇನೊ?’​—ಇಬ್ರಿಯ 5:​13, 14.

6, 7. ಯುವ ಜನರಿಗೆ ದೈನಂದಿನ ಬೈಬಲ್‌ ವಾಚನದ ಕಾರ್ಯಕ್ರಮವು ಎಷ್ಟು ಬೆಲೆಯುಳ್ಳದ್ದಾಗಿರುತ್ತದೆ?

6 ದೈನಂದಿನ ಬೈಬಲ್‌ ವಾಚನ ಕಾರ್ಯಕ್ರಮವೂ ಬೆಲೆಬಾಳುವ ವಿಷಯವಾಗಿದೆ. ಕೀರ್ತನೆಗಾರನು ಹಾಡಿದ್ದು: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು.” (ಕೀರ್ತನೆ 1:​1, 2) ಮೋಶೆಯ ಉತ್ತರಾಧಿಕಾರಿಯಾಗಿದ್ದ ಯೆಹೋಶುವನು, ‘ಹಗಲಿರುಳು ಧರ್ಮಶಾಸ್ತ್ರವನ್ನು ಧ್ಯಾನಿಸುತ್ತಿದ್ದನು.’ ಇದು ಅವನು ವಿವೇಕದಿಂದ ಕ್ರಿಯೆಗೈಯುವಂತೆ ಮಾಡಿ, ದೇವದತ್ತ ನೇಮಕವನ್ನು ನಿರ್ವಹಿಸುವುದರಲ್ಲಿ ಅವನಿಗೆ ಯಶಸ್ಸನ್ನು ನೀಡಿತು. (ಯೆಹೋಶುವ 1:8) ನಮ್ಮ ನಾಯಕನಾದ ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4) ನಮಗೆ ದಿನಾಲೂ ಶಾರೀರಿಕ ಆಹಾರದ ಅಗತ್ಯವಿರುವಲ್ಲಿ, ನಮಗೆ ಕ್ರಮವಾಗಿ ಆತ್ಮಿಕ ಆಹಾರದ ಇನ್ನೂ ಹೆಚ್ಚಿನ ಅಗತ್ಯವಿದೆ!

7 ತನ್ನ ಆತ್ಮಿಕ ಆವಶ್ಯಕತೆಯನ್ನು ಗ್ರಹಿಸುತ್ತ, 13 ವರ್ಷ ಪ್ರಾಯದ ನಿಕೋಲ್‌ ಪ್ರತಿದಿನ ಬೈಬಲನ್ನು ಓದಲಾರಂಭಿಸಿದಳು. * ಈಗ 16ರ ವಯಸ್ಸಿನವಳಾಗಿರುವ ಅವಳು, ಪೂರ್ತಿ ಬೈಬಲನ್ನು ಒಮ್ಮೆ ಓದಿ ಮುಗಿಸಿರುವುದು ಮಾತ್ರವಲ್ಲ, ಎರಡನೆಯ ಬಾರಿ ಸುಮಾರು ಅರ್ಧಭಾಗವನ್ನು ಮುಗಿಸಿರುತ್ತಾಳೆ. ಆಕೆಯ ಪದ್ಧತಿ ಸರಳ. ಆಕೆ ಹೇಳುವುದು: “ನಾನು ದಿನಕ್ಕೆ ಒಂದು ಅಧ್ಯಾಯವನ್ನಾದರೂ ಓದುವ ನಿರ್ಣಯ ಮಾಡಿದ್ದೇನೆ.” ಈ ದೈನಂದಿನ ಬೈಬಲ್‌ ವಾಚನ ಆಕೆಗೆ ಹೇಗೆ ಸಹಾಯಮಾಡಿದೆ? ಆಕೆಯ ಉತ್ತರ: “ಇಂದು ಕೆಟ್ಟ ಪ್ರಭಾವಗಳು ತುಂಬ ಇವೆ. ಶಾಲೆಯಲ್ಲಿಯೂ ಬೇರೆ ಕಡೆಗಳಲ್ಲಿಯೂ ನನ್ನ ನಂಬಿಕೆಗೆ ಸವಾಲೊಡ್ಡುವ ಒತ್ತಡಗಳು ದಿನಾಲೂ ಎದುರಾಗುತ್ತವೆ. ಆದರೆ ನನ್ನ ಬೈಬಲ್‌ ವಾಚನದ ಕಾರಣ ಈ ಒತ್ತಡಗಳನ್ನು ತಡೆಯುವಂತೆ ನನ್ನನ್ನು ಪ್ರೋತ್ಸಾಹಿಸುವ ಬೈಬಲ್‌ ಆಜ್ಞೆಗಳನ್ನು ಮತ್ತು ಮೂಲತತ್ತ್ವಗಳನ್ನು ನಾನು ಬೇಗನೆ ಜ್ಞಾಪಿಸಿಕೊಳ್ಳುವಂತೆ ಸಹಾಯ ದೊರೆಯುತ್ತದೆ. ಪರಿಣಾಮವಾಗಿ, ನಾನು ಯೆಹೋವನಿಗೂ ಯೇಸುವಿಗೂ ಹೆಚ್ಚು ನಿಕಟವಾಗಿದ್ದೇನೆಂದು ನನಗನಿಸುತ್ತದೆ.”

8. ಸಭಾಮಂದಿರದ ವಿಷಯದಲ್ಲಿ ಯೇಸುವಿನ ರೂಢಿ ಏನಾಗಿತ್ತು, ಮತ್ತು ಚಿಕ್ಕವರು ಅವನನ್ನು ಹೇಗೆ ಅನುಕರಿಸಬಲ್ಲರು?

8 ಯೇಸುವಿಗೆ ಸಭಾಮಂದಿರದಲ್ಲಿ ಧರ್ಮಶಾಸ್ತ್ರದ ವಾಚನಕ್ಕೆ ಕಿವಿಗೊಡುವ ಮತ್ತು ಅದರಲ್ಲಿ ಪಾಲ್ಗೊಳ್ಳುವ ರೂಢಿಯಿತ್ತು. (ಲೂಕ 4:​16; ಅ. ಕೃತ್ಯಗಳು 15:21) ಹಾಗಾದರೆ, ಯುವ ಜನರು ಬೈಬಲ್‌ ವಾಚನ ಮತ್ತು ಅಧ್ಯಯನ ನಡೆಯುತ್ತಿರುವ ಕ್ರೈಸ್ತ ಕೂಟಗಳಲ್ಲಿ ಕ್ರಮವಾಗಿ ಹಾಜರಾಗುವುದು ಅದೆಷ್ಟು ಪ್ರಯೋಜನಕರವಾಗಿರುವುದು! ಇಂತಹ ಕೂಟಗಳಿಗೆ ಕೃತಜ್ಞತೆ ತೋರಿಸುತ್ತ, 14ರ ವಯಸ್ಸಿನ ರಿಚರ್ಡ್‌ ಹೇಳುವುದು: “ನನಗೆ ಕೂಟಗಳು ಬೆಲೆಯುಳ್ಳವುಗಳಾಗಿವೆ. ಅಲ್ಲಿ ನನಗೆ ಇದು ಸರಿ, ಅದು ತಪ್ಪು, ಇದು ನೈತಿಕ, ಅದು ಅನೈತಿಕ, ಇದು ಕ್ರಿಸ್ತಸದೃಶ ಅದು ಅಲ್ಲ ಎಂಬ ಮರುಜ್ಞಾಪನ ಸದಾ ದೊರೆಯುತ್ತದೆ. ನನಗೆ ಅದನ್ನು ಅನುಭವಿಸಿ ಕಷ್ಟದಿಂದ ತಿಳಿಯಬೇಕೆಂದಿರುವುದಿಲ್ಲ.” ಹೌದು, “ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” (ಕೀರ್ತನೆ 19:7) ನಿಕೋಲ್‌ ಸಹ ಪ್ರತಿ ವಾರ ಐದು ಸಭಾಕೂಟಗಳಿಗೆ ಹಾಜರಾಗಬೇಕೆಂಬ ದೃಢನಿಶ್ಚಯವನ್ನು ಮಾಡಿದ್ದಾಳೆ. ಅವುಗಳಿಗಾಗಿ ತಯಾರಿಸಲು ಅವಳು ಎರಡರಿಂದ ಮೂರು ತಾಸುಗಳನ್ನು ವ್ಯಯಿಸುತ್ತಾಳೆ.​—ಎಫೆಸ 5:​15, 16.

9. ಯುವ ಜನರು ಹೇಗೆ “ವಿವೇಕದಲ್ಲಿ ವೃದ್ಧಿಯಾಗುತ್ತ” ಹೋಗಬಲ್ಲರು?

9 ಯುವ ಪ್ರಾಯವು, ‘ಒಬ್ಬನೇ ಸತ್ಯದೇವರ ಮತ್ತು ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು’ ಪಡೆಯಲು ಸುಸಮಯವಾಗಿದೆ. (ಯೋಹಾನ 17:3) ಕಾಮಿಕ್‌ ಪುಸ್ತಕಗಳನ್ನು ಓದುತ್ತ, ಟಿ.ವಿ. ನೋಡುತ್ತ, ವಿಡಿಯೋ ಆಟಗಳನ್ನಾಡುತ್ತ ಅಥವಾ ಇಂಟರ್‌ನೆಟ್‌ ಅನ್ನು ಸರ್ಫ್‌ ಮಾಡುತ್ತ ಬಹಳ ಸಮಯವನ್ನು ಕಳೆಯುವ ಯುವ ಜನರ ಪರಿಚಯ ನಿಮಗಿರಬಹುದು. ನಮ್ಮ ನಾಯಕನ ಪರಿಪೂರ್ಣ ಮಾದರಿಯನ್ನು ನೀವು ಅನುಕರಿಸಸಾಧ್ಯವಿರುವಾಗ, ನೀವು ಅವರ ಮಾದರಿಯನ್ನು ಏಕೆ ಅನುಕರಿಸಬೇಕು? ಯೇಸು, ಹುಡುಗ ಪ್ರಾಯದಲ್ಲಿ ಯೆಹೋವನ ಕುರಿತು ಕಲಿಯಲು ಸಂತೋಷಪಟ್ಟನು. ಅದರ ಪರಿಣಾಮವೇನಾಯಿತು? ಆತ್ಮಿಕ ವಿಷಯಗಳ ಮೇಲೆ ಅವನಿಗಿದ್ದ ಪ್ರೀತಿಯ ಕಾರಣ ಯೇಸು, “ವಿವೇಕದಲ್ಲಿ ವೃದ್ಧಿಯಾಗುತ್ತ ಹೋದನು.” (ಲೂಕ 2:​52, NW) ನೀವೂ ಹಾಗೆಯೇ ವಿವೇಕದಲ್ಲಿ ವೃದ್ಧಿಯಾಗಬಲ್ಲಿರಿ.

‘ಒಬ್ಬರಿಗೊಬ್ಬರು ಅಧೀನರಾಗಿರಿ’

10. ಕುಟುಂಬ ಜೀವನವು ಶಾಂತಿ, ಸಂತೋಷಗಳ ಉಗಮವಾಗಿರುವಂತೆ ಯಾವುದು ಸಹಾಯಮಾಡುವುದು?

10 ಒಂದು ಮನೆಯು ಶಾಂತಿ ಮತ್ತು ಸಂತೃಪ್ತಿಯ ಸುರಕ್ಷಿತ ಸ್ಥಳವಾಗಿರಬಲ್ಲದು, ಇಲ್ಲವೇ ಕಲಹ ಮತ್ತು ಬಿಕ್ಕಟ್ಟಿನ ರಣರಂಗವೂ ಆಗಿರಬಲ್ಲದು. (ಜ್ಞಾನೋಕ್ತಿ 21:19; 26:21) ಆದರೆ ನಾವು ಕ್ರಿಸ್ತನ ನಾಯಕತ್ವವನ್ನು ಅಂಗೀಕರಿಸುವಲ್ಲಿ ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷವಿರುವುದು. ವಾಸ್ತವವಾಗಿ, ಯೇಸುವಿನ ಮಾದರಿಯೇ ಕುಟುಂಬ ಸಂಬಂಧಗಳಿಗಾಗಿ ಆದರ್ಶವಾಗಿರುತ್ತದೆ. ಶಾಸ್ತ್ರವು ಹೇಳುವುದು: “ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ [“ಅಧೀನರಾಗಿರಿ,” NW]. ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. . . . ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ 5:​21-25) ಪೌಲನು ಕೊಲೊಸ್ಸೆ ಸಭೆಗೆ ಬರೆದುದು: “ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.”​—ಕೊಲೊಸ್ಸೆ 3:​18-20.

11. ಕ್ರಿಸ್ತನ ನಾಯಕತ್ವವು ನಿಜವೆಂಬುದನ್ನು ಪತಿಯು ಹೇಗೆ ತೋರಿಸಬಲ್ಲನು?

11 ಈ ಸಲಹೆಯನ್ನು ಅನುಸರಿಸುವುದೆಂದರೆ, ಪತಿಯು ಕುಟುಂಬದಲ್ಲಿ ನಾಯಕತ್ವವನ್ನು ವಹಿಸುವಾಗ, ಅವನ ಪತ್ನಿಯು ನಿಷ್ಠೆಯಿಂದ ಅವನನ್ನು ಬೆಂಬಲಿಸುತ್ತಾಳೆಂದೂ, ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯತೆ ತೋರಿಸುತ್ತಾರೆಂದೂ ಅರ್ಥ. ಆದರೆ ಪುರುಷನ ತಲೆತನವು ಯೋಗ್ಯವಾಗಿ ನಡೆಸಲ್ಪಡುವಲ್ಲಿ ಮಾತ್ರ ಸಂತೋಷವನ್ನು ಫಲಿಸುತ್ತದೆ. ತನ್ನ ಸ್ವಂತ ಶಿರಸ್ಸೂ ನಾಯಕನೂ ಆಗಿರುವ ಕ್ರಿಸ್ತ ಯೇಸುವನ್ನು ಅನುಕರಿಸುವ ಮೂಲಕ, ವಿವೇಕಿಯಾದ ಪತಿಯು ತಲೆತನವನ್ನು ನಡೆಸುವ ವಿಧವನ್ನು ಕಲಿಯತಕ್ಕದ್ದು. (1 ಕೊರಿಂಥ 11:3) ಯೇಸು ಸಮಯಾನಂತರ “ಎಲ್ಲಾದರ ಮೇಲೆ . . . ಸಭೆಗೆ ಶಿರಸ್ಸಾಗಿ” ಪರಿಣಮಿಸಿದರೂ, ಅವನು ಭೂಮಿಗೆ ಬಂದ ಕಾರಣವು “ಸೇವೆಮಾಡಿಸಿಕೊಳ್ಳುವದಕ್ಕೆ” ಅಲ್ಲ, “ಸೇವೆ ಮಾಡುವದಕ್ಕೆ” ಆಗಿತ್ತು. (ಎಫೆಸ 1:22; ಮತ್ತಾಯ 20:28) ತದ್ರೀತಿಯಲ್ಲೇ, ಕ್ರೈಸ್ತ ಪತಿಯು ಸ್ವಾರ್ಥಕ್ಕಾಗಿ ಅಧಿಕಾರ ನಡೆಸದೆ, ತನ್ನ ಪತ್ನಿ ಮತ್ತು ಮಕ್ಕಳ ಹಿತವನ್ನು ನೋಡಿಕೊಳ್ಳಲಿಕ್ಕಾಗಿಯೇ ತಲೆತನವನ್ನು ನಡೆಸುತ್ತಾನೆ. (1 ಕೊರಿಂಥ 13:​4, 5) ಅವನು ತನ್ನ ಶಿರಸ್ಸಾದ ಯೇಸು ಕ್ರಿಸ್ತನ ದೈವಿಕ ಗುಣಗಳನ್ನು ಅನುಕರಿಸಲು ಪ್ರಯತ್ನಿಸುತ್ತಾನೆ. ಯೇಸುವಿನಂತೆ, ಅವನು “ಸಾತ್ವಿಕನೂ ದೀನಮನಸ್ಸುಳ್ಳವನೂ” ಆಗಿರುತ್ತಾನೆ. (ಮತ್ತಾಯ 11:​28-30) ಅವನು ತಪ್ಪು ಮಾಡಿದಾಗ, “ನನ್ನಿಂದ ತಪ್ಪಾಯಿತು, ಕ್ಷಮಿಸಿ” ಎಂದೊ, “ನೀವೇ ಸರಿ” ಎಂದೊ ಹೇಳುವುದು ಅವನಿಗೆ ಕಷ್ಟಕರವಾಗಿರುವುದಿಲ್ಲ. ಇಂತಹ ಉತ್ತಮ ಮಾದರಿಯು ಅವನ ಹೆಂಡತಿಗೆ, ಆಕೆ ಅಂತಹ ಪುರುಷನಿಗೆ “ಸರಿಬೀಳುವ ಸಹಕಾರಿ” ಮತ್ತು “ಸಹಚಾರಿಣಿ” ಆಗಿದ್ದು, ಅವನಿಂದ ಕಲಿತುಕೊಳ್ಳುವುದನ್ನೂ ಅವನ ಜೊತೆಗೂಡಿ ಕೆಲಸಮಾಡುವುದನ್ನೂ ಸುಲಭವಾಗಿ ಮಾಡುವುದು.​—ಆದಿಕಾಂಡ 2:20; ಮಲಾಕಿಯ 2:14.

12. ತಲೆತನದ ಮೂಲತತ್ತ್ವಕ್ಕೆ ಹೊಂದಿಕೊಳ್ಳುವಂತೆ ಪತ್ನಿಗೆ ಯಾವುದು ಸಹಾಯಮಾಡುವುದು?

12 ಪತ್ನಿಯ ಸಂಬಂಧದಲ್ಲಿ, ಆಕೆ ಪತಿಗೆ ಅಧೀನಳಾಗಿರಬೇಕೆಂದು ಕೇಳಿಕೊಳ್ಳಲಾಗಿದೆ. ಆದರೆ, ಆಕೆಗೆ ಲೋಕದ ಆತ್ಮವು ತಟ್ಟಿರುವಲ್ಲಿ, ತಲೆತನದ ಮೂಲತತ್ತ್ವವನ್ನು ಇದು ಬುಡದಿಂದಲೇ ಕೊರೆದುಬಿಡಲಾರಂಭಿಸಿ, ಒಬ್ಬ ಪುರುಷನಿಗೆ ಅಧೀನಳಾಗಿರುವ ವಿಚಾರವು ಆಕೆಗೆ ಹಿಡಿಸಲಿಕ್ಕಿಲ್ಲ. ಪುರುಷನು ದಬ್ಬಾಳಿಕೆ ನಡೆಸಬೇಕೆಂದು ಶಾಸ್ತ್ರವು ಹೇಳುವುದಿಲ್ಲವಾದರೂ, ಪತ್ನಿಯರು ಗಂಡಂದಿರಿಗೆ ಅಧೀನರಾಗಿರಬೇಕೆಂದು ಅದು ಕೇಳಿಕೊಳ್ಳುತ್ತದೆ. (ಎಫೆಸ 5:24) ಬೈಬಲು ಪತಿ ಅಥವಾ ತಂದೆಯನ್ನು ಉತ್ತರವಾದಿಯನ್ನಾಗಿ ಮಾಡುತ್ತದೆ ಮತ್ತು ಅದರ ಸಲಹೆಯನ್ನು ಅನ್ವಯಿಸಿಕೊಳ್ಳುವಲ್ಲಿ, ಅದು ಕುಟುಂಬದ ಶಾಂತಿ ಮತ್ತು ವ್ಯವಸ್ಥೆಗೆ ನೆರವನ್ನು ಕೊಡುತ್ತದೆ.​—ಫಿಲಿಪ್ಪಿ 2:5.

13. ಯೇಸು ಮಕ್ಕಳಿಗೆ ಅಧೀನತೆಯ ಯಾವ ಮಾದರಿಯನ್ನು ಒದಗಿಸಿದ್ದಾನೆ?

13 ಮಕ್ಕಳು ತಂದೆತಾಯಿಗಳಿಗೆ ವಿಧೇಯರಾಗಿರಬೇಕೆಂದು ಕೇಳಿಕೊಳ್ಳಲಾಗಿದೆ. ಈ ಸಂಬಂಧದಲ್ಲಿ ಯೇಸು ಉತ್ತಮ ಮಾದರಿಯನ್ನಿಟ್ಟನು. ಹನ್ನೆರಡು ವರ್ಷ ಪ್ರಾಯದ ಯೇಸುವನ್ನು ಬಿಟ್ಟುಹೋದಾಗ ನಡೆದ ಆ ದೇವಾಲಯದ ಘಟನೆಯ ಬಳಿಕ, “ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು.” (ಲೂಕ 2:51) ಮಕ್ಕಳು ಹೆತ್ತವರಿಗೆ ಅಧೀನರಾಗಿರುವ ವಿಷಯವು ಕುಟುಂಬದ ಶಾಂತಿ ಮತ್ತು ಐಕ್ಯಕ್ಕೆ ನೆರವಾಗುತ್ತದೆ. ಕ್ರಿಸ್ತನ ನಾಯಕತ್ವಕ್ಕೆ ಸರ್ವರೂ ಅಧೀನರಾಗುವಾಗ ಸಂತುಷ್ಟ ಕುಟುಂಬವು ಫಲಿಸುತ್ತದೆ.

14, 15. ಮನೆಯಲ್ಲಿ ಸವಾಲೊಡ್ಡುವ ಸನ್ನಿವೇಶಗಳು ಏಳುವಲ್ಲಿ ಜಯಪಡೆಯುವಂತೆ ಯಾವುದು ಸಹಾಯಮಾಡುವುದು? ಉದಾಹರಣೆ ಕೊಡಿ.

14 ಮನೆಯಲ್ಲಿ ಕಷ್ಟಕರವಾದ ಸನ್ನಿವೇಶಗಳು ಏಳುವಾಗಲೂ, ಯೇಸುವನ್ನು ಅನುಕರಿಸಿ ಅವನ ಮಾರ್ಗದರ್ಶನವನ್ನು ಅಂಗೀಕರಿಸುವುದೇ ಜಯಗಳಿಸುವ ಕೀಲಿ ಕೈಯಾಗಿರುತ್ತದೆ. ಉದಾಹರಣೆಗೆ, 35ರ ವಯಸ್ಸಿನ ಜೆರಿ, ಹದಿಹರೆಯದ ಒಬ್ಬ ಮಗಳಿದ್ದ ಒಬ್ಬ ತಾಯಿ ಲಾನಳನ್ನು ಮದುವೆಯಾದಾಗ, ಅವರಿಬ್ಬರೂ ಎಂದಿಗೂ ನೆನಸಿದ್ದಿರದಂಥ ಸವಾಲೊಂದನ್ನು ಎದುರಿಸಿದರು. ಜೆರಿ ಹೇಳುವುದು: “ಉತ್ತಮ ಶಿರಸ್ಸಾಗಿರಬೇಕಾದರೆ, ಇತರ ಕುಟುಂಬಗಳಲ್ಲಿ ಯಶಸ್ಸನ್ನು ಪಡೆದಿರುವ ಬೈಬಲ್‌ ಮೂಲತತ್ತ್ವಗಳನ್ನು ಆಚರಣೆಗೆ ತರಬೇಕೆಂದು ನನಗೆ ಗೊತ್ತಿತ್ತು. ಆದರೆ ಅದನ್ನು ಹೆಚ್ಚು ವಿವೇಕ ಮತ್ತು ವಿವೇಚನಾಶಕ್ತಿಯಿಂದ ಉಪಯೋಗಿಸಬೇಕೆಂದು ನನಗೆ ಬೇಗನೆ ತಿಳಿದುಬಂತು.” ಏಕೆಂದರೆ ಅವನ ಮಲಮಗಳು, ಅವನು ತನ್ನ ಮತ್ತು ತನ್ನ ತಾಯಿಯ ಮಧ್ಯೆ ಬಂದಿರುವ ಅಪರಿಚಿತನೆಂದು ಪರಿಗಣಿಸಿ, ಅವನನ್ನು ತುಂಬ ದ್ವೇಷಿಸುತ್ತಿದ್ದಳು. ಈ ಮನೋಭಾವವು ಆ ಹುಡುಗಿಯ ನಡೆನುಡಿಗಳನ್ನು ಪ್ರಭಾವಿಸಿತೆಂಬುದನ್ನು ನೋಡಲು ಜೆರಿಗೆ ವಿವೇಚನಾಶಕ್ತಿಯ ಆವಶ್ಯಕತೆಯಿತ್ತು. ಅವನು ಅದನ್ನು ಹೇಗೆ ನಿಭಾಯಿಸಿದನು? ಜೆರಿ ಹೇಳುವುದು: “ಸದ್ಯಕ್ಕಾದರೂ ಲಾನ ಹೆತ್ತವರು ಕೊಡಬೇಕಾದ ಶಿಸ್ತನ್ನು ಒದಗಿಸುವ ಕರ್ತವ್ಯವನ್ನು ನೋಡಿಕೊಳ್ಳಬೇಕೆಂದೂ, ಅದೇ ಸಮಯದಲ್ಲಿ ನಾನು ನನ್ನ ಮಲಮಗಳೊಂದಿಗೆ ಸುಸಂಬಂಧವನ್ನು ಬೆಳೆಸಿಕೊಳ್ಳುವ ಕೆಲಸವನ್ನು ಮಾಡುತ್ತಿರಬೇಕೆಂದು ಲಾನ ಮತ್ತು ನಾನು ತೀರ್ಮಾನಿಸಿದೆವು. ತಕ್ಕ ಸಮಯದಲ್ಲಿ ಈ ಕಾರ್ಯರೀತಿಯು ಉತ್ತಮ ಫಲಿತಾಂಶವನ್ನು ತಂದಿತು.”

15 ಮನೆಯಲ್ಲಿ ಕಷ್ಟಕರ ಸನ್ನಿವೇಶಗಳು ಎದುರಾಗುವಾಗ, ಕುಟುಂಬ ಸದಸ್ಯರು ಏಕೆ ಹಾಗೆ ಮಾತಾಡುತ್ತಾರೆ ಮತ್ತು ನಡೆದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿಯಲು ವಿವೇಚನಾಶಕ್ತಿ ಅಗತ್ಯ. ದೈವಿಕ ಮೂಲತತ್ತ್ವಗಳನ್ನು ಸರಿಯಾಗಿ ಅನ್ವಯಿಸಿಕೊಳ್ಳಲು ನಮಗೆ ವಿವೇಕವೂ ಅಗತ್ಯ. ಉದಾಹರಣೆಗೆ, ರಕ್ತಕುಸುಮ ರೋಗವಿದ್ದ ಆ ಸ್ತ್ರೀ ತನ್ನನ್ನು ಮುಟ್ಟಿದ್ದೇಕೆಂಬುದನ್ನು ಯೇಸು ಸ್ಪಷ್ಟವಾಗಿ ಗ್ರಹಿಸಿದ್ದುದರಿಂದಲೇ ಅವನು ಆಕೆಯೊಂದಿಗೆ ವಿವೇಕದಿಂದಲೂ ಕನಿಕರದಿಂದಲೂ ವ್ಯವಹರಿಸಿದನು. (ಯಾಜಕಕಾಂಡ 15:​25-27; ಮಾರ್ಕ 5:30-34) ವಿವೇಕವೂ ವಿವೇಚನಾಶಕ್ತಿಯೂ ನಮ್ಮ ನಾಯಕನ ವಿಶೇಷ ಲಕ್ಷಣಗಳಾಗಿದ್ದವು. (ಜ್ಞಾನೋಕ್ತಿ 8:12) ಅವನು ವರ್ತಿಸಿದಂತೆ ನಾವು ವರ್ತಿಸುವಲ್ಲಿ ಸಂತೋಷವನ್ನು ಪಡೆಯುವೆವು.

‘ಮೊದಲು ರಾಜ್ಯಕ್ಕಾಗಿ ತವಕಪಡಿರಿ’

16. ನಮ್ಮ ಜೀವಿತಗಳ ಕೇಂದ್ರ ಸ್ಥಳವನ್ನು ಯಾವುದು ಆಕ್ರಮಿಸಬೇಕು, ಮತ್ತು ಯೇಸು ಇದನ್ನು ತನ್ನ ಮಾದರಿಯಿಂದ ಹೇಗೆ ತೋರಿಸಿದನು?

16 ತನ್ನ ನಾಯಕತ್ವವನ್ನು ಒಪ್ಪಿಕೊಳ್ಳುವವರ ಜೀವಿತಗಳಲ್ಲಿ ಯಾವುದು ಕೇಂದ್ರ ಸ್ಥಾನವನ್ನು ಪಡೆದುಕೊಂಡಿರಬೇಕೆಂಬುದನ್ನು ಯೇಸು ಸ್ಪಷ್ಟವಾಗಿ ತಿಳಿಸಿದನು. ಅವನಂದದ್ದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ [“ಆತನ,” NW] ನೀತಿಗಾಗಿಯೂ ತವಕಪಡಿರಿ.” (ಮತ್ತಾಯ 6:33) ಮತ್ತು ಅದನ್ನು ಹೇಗೆ ಮಾಡುವುದೆಂಬುದನ್ನು ಅವನು ಮಾದರಿಯ ಮೂಲಕ ತೋರಿಸಿದನು. ತನ್ನ ದೀಕ್ಷಾಸ್ನಾನದ ನಂತರ ಅವನು ಮಾಡಿದ 40 ದಿನಗಳ ಉಪವಾಸ, ಮನನ ಮತ್ತು ಪ್ರಾರ್ಥನೆಯ ಸಮಯದ ಅಂತ್ಯದಲ್ಲಿ, ಯೇಸುವಿಗೆ ಒಂದು ಶೋಧನೆ ಬಂತು. ಸೈತಾನನು ಅವನಿಗೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನು” ತಾನು ಕೊಡುವೆನೆಂದು ಹೇಳಿದನು. ಯೇಸು ಪಿಶಾಚನ ಆ ನೀಡಿಕೆಯನ್ನು ಸ್ವೀಕರಿಸುತ್ತಿದ್ದಲ್ಲಿ, ಅವನ ಬದುಕು ಹೇಗಿರುತ್ತಿತ್ತೆಂಬುದನ್ನು ಸ್ವಲ್ಪ ಊಹಿಸಿರಿ! ಆದರೆ ಕ್ರಿಸ್ತನ ಮನಸ್ಸು ಅವನ ತಂದೆಯ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರೀಕರಿಸಿತ್ತು. ಸೈತಾನನ ಲೋಕದಲ್ಲಿ ಅಂತಹ ಜೀವನವು ತಾತ್ಕಾಲಿಕವಾಗಿರುವುದೆಂದೂ ಅವನಿಗೆ ತಿಳಿದಿತ್ತು. ಆದಕಾರಣ, ಅವನು ಆ ಕೂಡಲೇ ಪಿಶಾಚನ ನೀಡಿಕೆಯನ್ನು ತಳ್ಳಿಹಾಕುತ್ತ ಹೇಳಿದ್ದು: “ಸೈತಾನನೇ, ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” ತದನಂತರ, “ಯೇಸು​—ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.” (ಮತ್ತಾಯ 4:​2, 8-10, 17) ತನ್ನ ಭೂಜೀವನದ ಉಳಿದ ಸಮಯದಲ್ಲಿ ಕ್ರಿಸ್ತನು ದೇವರ ರಾಜ್ಯದ ಪೂರ್ಣ ಸಮಯದ ಘೋಷಕನಾಗಿದ್ದನು.

17. ರಾಜ್ಯಾಭಿರುಚಿಗಳು ನಮ್ಮ ಜೀವನದಲ್ಲಿ ಪ್ರಥಮ ಸ್ಥಾನದಲ್ಲಿವೆಯೆಂದು ನಾವು ಹೇಗೆ ತೋರಿಸಬಲ್ಲೆವು?

17 ನಾವು ನಮ್ಮ ನಾಯಕನನ್ನು ಅನುಕರಿಸಬೇಕೇ ಹೊರತು ದೊಡ್ಡ ವೇತನ ದೊರೆಯುವ ಕೆಲಸವನ್ನೊ ಜೀವನೋಪಾಯವನ್ನೊ ನಮ್ಮ ಜೀವನದ ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳುವ ಬಲೆಯೊಳಗೆ ಸೈತಾನನ ಲೋಕವು ನಮ್ಮನ್ನು ಸಿಕ್ಕಿಸಿ ಹಾಕುವಂತೆ ಬಿಡಬಾರದು. (ಮಾರ್ಕ 1:​17-21) ರಾಜ್ಯಾಭಿರುಚಿಗಳು ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಡುವಷ್ಟರ ಮಟ್ಟಿಗೆ ನಾವು ಲೌಕಿಕ ಬೆನ್ನಟ್ಟುವಿಕೆಗಳ ಜಾಲದಲ್ಲಿ ಸಿಕ್ಕಿಕೊಳ್ಳುವುದು ಅದೆಂಥ ಮೂರ್ಖತನ! ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಯೇಸು ನಮಗೊಪ್ಪಿಸಿದ್ದಾನೆ. (ಮತ್ತಾಯ 24:14; 28:​19, 20) ಹೌದು, ನಾವು ಪರಾಮರಿಸಬೇಕಾದ ಕುಟುಂಬ ಅಥವಾ ಬೇರೆ ಜವಾಬ್ದಾರಿಗಳು ನಮಗಿರಬಹುದಾದರೂ, ಸಾರುವ ಮತ್ತು ಕಲಿಸುವ ನಮ್ಮ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸಲಿಕ್ಕಾಗಿ, ಸಾಯಂಕಾಲಗಳನ್ನು ಮತ್ತು ವಾರಾಂತ್ಯಗಳನ್ನು ಉಪಯೋಗಿಸಲು ನಾವು ಸಂತೋಷಪಡುವುದಿಲ್ಲವೊ? ಮತ್ತು 2001ನೆಯ ಸೇವಾ ವರ್ಷದಲ್ಲಿ ಸುಮಾರು 7,80,000 ಮಂದಿ ಪೂರ್ಣ ಸಮಯದ ಶುಶ್ರೂಷಕರಾಗಿ ಅಥವಾ ಪಯನೀಯರರಾಗಿ ಸೇವೆಮಾಡುವಂಥಾದದ್ದು ಅದೆಷ್ಟು ಉತ್ತೇಜನೀಯ!

18. ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳುವಂತೆ ಯಾವುದು ಸಹಾಯಮಾಡುತ್ತದೆ?

18 ಸುವಾರ್ತಾ ವೃತ್ತಾಂತಗಳು ಯೇಸುವನ್ನು ಕ್ರಿಯಾಶೀಲ ಪುರುಷನಾಗಿಯೂ ಕೋಮಲ ಮನೋಭಾವಗಳಿದ್ದ ವ್ಯಕ್ತಿಯಾಗಿಯೂ ಚಿತ್ರಿಸುತ್ತವೆ. ತನ್ನ ಸುತ್ತಲಿನ ಜನರ ಆತ್ಮಿಕ ಆವಶ್ಯಕತೆಗಳನ್ನು ಕಂಡಾಗ, ಅವನು ಕನಿಕರಪಟ್ಟು ಅವರಿಗೆ ತೀವ್ರಾಸಕ್ತಿಯಿಂದ ಸಹಾಯ ನೀಡಿದನು. (ಮಾರ್ಕ 6:​31-34) ಇತರರಿಗೆ ನಮ್ಮಲ್ಲಿರುವ ಪ್ರೀತಿಯ ಕಾರಣ ಮತ್ತು ಅವರಿಗೆ ಸಹಾಯಮಾಡುವ ಯಥಾರ್ಥವಾದ ಬಯಕೆಯ ಕಾರಣ ನಾವು ಶುಶ್ರೂಷೆಯಲ್ಲಿ ಭಾಗವಹಿಸುವಲ್ಲಿ, ಅದು ಹರ್ಷದಾಯಕವಾಗುತ್ತದೆ. ಆದರೆ ಅಂತಹ ಬಯಕೆಯನ್ನು ನಾವು ಹೇಗೆ ಪಡೆಯಬಲ್ಲೆವು? ಜೇಸನ್‌ ಎಂಬ ಯುವಕನು ಹೇಳುವುದು: “ನಾನು ಹದಿಹರೆಯದವನಾಗಿದ್ದಾಗ ನನಗೆ ಸೇವೆಗೆ ಹೋಗುವುದೆಂದರೆ ಇಷ್ಟವೇ ಇರಲಿಲ್ಲ.” ಹಾಗಾದರೆ ಅವನಿಗೆ ಈ ಕೆಲಸದಲ್ಲಿ ಪ್ರೀತಿಯನ್ನು ಬೆಳೆಸುವಂತೆ ಯಾವುದು ಸಹಾಯಮಾಡಿತು? ಜೇಸನ್‌ ಉತ್ತರ ಕೊಡುವುದು: “ನಮ್ಮ ಕುಟುಂಬದಲ್ಲಿ, ಶನಿವಾರ ಬೆಳಗ್ಗೆಗಳನ್ನು ಯಾವಾಗಲೂ ಕ್ಷೇತ್ರ ಸೇವೆಗಾಗಿ ಬದಿಗಿರಿಸಲಾಗುತ್ತಿತ್ತು. ಇದರಿಂದ ನನಗೆ ಒಳಿತಾಯಿತು, ಹೇಗೆಂದರೆ ನಾನು ಶುಶ್ರೂಷೆಗೆ ಎಷ್ಟು ಹೆಚ್ಚು ಬಾರಿ ಹೋದೆನೊ ಅಷ್ಟು ಹೆಚ್ಚು ನನಗೆ ಅದರಿಂದ ಸಾಧಿಸಲಾಗುತ್ತಿದ್ದ ಒಳಿತನ್ನು ನೋಡಸಾಧ್ಯವಾಯಿತು ಮತ್ತು ನಾನು ಅದರಲ್ಲಿ ಹೆಚ್ಚು ಆನಂದಿಸಿದೆ.” ನಾವೂ ಶುಶ್ರೂಷೆಯಲ್ಲಿ ಕ್ರಮವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಭಾಗವಹಿಸಬೇಕು.

19. ಕ್ರಿಸ್ತನ ನಾಯಕತ್ವದ ಸಂಬಂಧದಲ್ಲಿ ನಮ್ಮ ದೃಢನಿಶ್ಚಯ ಏನಾಗಿರಬೇಕು?

19 ಕ್ರಿಸ್ತನ ನಾಯಕತ್ವವನ್ನು ಅಂಗೀಕರಿಸುವುದು ಚೈತನ್ಯದಾಯಕವೂ ಪ್ರತಿಫಲದಾಯಕವೂ ಆಗಿದೆಯೆಂಬುದು ನಿಶ್ಚಯ. ನಾವು ಹಾಗೆ ಮಾಡುವಾಗ, ಯೌವನವು ಜ್ಞಾನ, ವಿವೇಕಗಳ ಪ್ರಗತಿಯ ಸಮಯವಾಗಿ ಪರಿಣಮಿಸುತ್ತದೆ. ಕುಟುಂಬ ಜೀವನವು ಶಾಂತಿ, ಸಂತೋಷಗಳ ಬುಗ್ಗೆಯಾಗಿಯೂ ಶುಶ್ರೂಷೆಯು ಸಂತೋಷ ಮತ್ತು ಸಂತೃಪ್ತಿಯನ್ನು ತರುವ ಚಟುವಟಿಕೆಯಾಗಿಯೂ ಪರಿಣಮಿಸುತ್ತದೆ. ಆದುದರಿಂದ ನಿಶ್ಚಯವಾಗಿಯೂ, ಕ್ರಿಸ್ತನ ನಾಯಕತ್ವವು ನಮಗೆ ನೈಜವಾದದ್ದಾಗಿದೆ ಎಂಬುದನ್ನು ನಮ್ಮ ದೈನಂದಿನ ಜೀವನದಲ್ಲಿ ಮತ್ತು ನಾವು ಮಾಡುವ ನಿರ್ಣಯಗಳಲ್ಲಿ ತೋರಿಸಲು ದೃಢನಿಶ್ಚಯವನ್ನು ಮಾಡೋಣ. (ಕೊಲೊಸ್ಸೆ 3:​23, 24) ಆದರೆ ಯೇಸು ಕ್ರಿಸ್ತನು ಇನ್ನೊಂದು ಮಾಧ್ಯಮದ ಮೂಲಕವೂ ನಾಯಕತ್ವವನ್ನು ಒದಗಿಸಿದ್ದಾನೆ. ಈ ಏರ್ಪಾಡಿನಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವೆಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 7 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ನಿಮಗೆ ನೆನಪಿದೆಯೆ?

• ದೇವರು ನೇಮಿಸಿರುವ ನಾಯಕನನ್ನು ಅನುಕರಿಸುವುದು ನಮಗೆ ಹೇಗೆ ಪ್ರಯೋಜನದಾಯಕವಾಗಿದೆ?

• ತಾವು ಯೇಸುವಿನ ನಾಯಕತ್ವವನ್ನು ಅನುಕರಿಸಲು ಬಯಸುತ್ತೇವೆ ಎಂಬುದನ್ನು ಯುವ ಜನರು ಹೇಗೆ ತೋರಿಸಬಲ್ಲರು?

• ಯಾರು ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗುತ್ತಾರೋ ಅವರ ಕುಟುಂಬ ಜೀವನದ ಮೇಲೆ ಅದು ಯಾವ ಪರಿಣಾಮವನ್ನು ಬೀರುತ್ತದೆ?

• ಕ್ರಿಸ್ತನ ನಾಯಕತ್ವವು ನಮಗೆ ನೈಜವಾದದ್ದಾಗಿದೆ ಎಂಬುದನ್ನು ನಮ್ಮ ಶುಶ್ರೂಷೆಯು ಹೇಗೆ ತೋರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಯೌವನವು ದೇವರ ಮತ್ತು ನಮ್ಮ ನೇಮಿತ ನಾಯಕನ ಜ್ಞಾನವನ್ನು ಪಡೆಯಲು ಉತ್ತಮ ಸಮಯವಾಗಿದೆ

[ಪುಟ 10ರಲ್ಲಿರುವ ಚಿತ್ರ]

ಕ್ರಿಸ್ತನ ನಾಯಕತ್ವಕ್ಕೆ ತೋರಿಸುವ ಅಧೀನತೆಯು, ಕುಟುಂಬ ಸಂತೋಷವನ್ನು ವರ್ಧಿಸುತ್ತದೆ

[ಪುಟ 12ರಲ್ಲಿರುವ ಚಿತ್ರಗಳು]

ಯೇಸು ಮೊದಲಾಗಿ ರಾಜ್ಯಕ್ಕಾಗಿ ತವಕಪಟ್ಟನು. ನೀವೂ ಹಾಗೆ ಮಾಡುತ್ತೀರೊ?