ಧಾರ್ಮಿಕ ನಂಬಿಕೆಯು ತರ್ಕಶಕ್ತಿಯ ಮೇಲೆ ಆಧಾರಿತವಾಗಿರಬೇಕೊ?
ಧಾರ್ಮಿಕ ನಂಬಿಕೆಯು ತರ್ಕಶಕ್ತಿಯ ಮೇಲೆ ಆಧಾರಿತವಾಗಿರಬೇಕೊ?
“ಧಾರ್ಮಿಕ ನಂಬಿಕೆ ಇದೆಯೆಂದು ಹೇಳಿಕೊಳ್ಳುವ ಅನೇಕರು, ತಮ್ಮ ತರ್ಕಶಕ್ತಿಯ ಉಪಯೋಗವನ್ನು ತಪ್ಪಿಸಲಿಕ್ಕಾಗಿಯೇ ಧಾರ್ಮಿಕರಾಗಿಬಿಟ್ಟಿದ್ದಾರೆ” ಎಂದು ಅಮೆರಿಕದಲ್ಲಿರುವ ಒಂದು ದೇವತಾಶಾಸ್ತ್ರ ಸೆಮಿನೆರಿಯ ಮುಖ್ಯಾಧಿಕಾರಿಯು ಬರೆದನು. “ಅವರು ಎಲ್ಲವನ್ನೂ ಯಾವುದೇ ರುಜುವಾತಿಲ್ಲದೆ, ಕೇವಲ ‘ನಂಬಿಕೆಯ’ ಆಧಾರದ ಮೇಲೆ ಸ್ವೀಕರಿಸುತ್ತಾರೆ” ಎಂದು ಅವನು ಕೂಡಿಸಿ ಹೇಳಿದನು.
ಇದರ ಸೂಚಿತಾರ್ಥವೇನೆಂದರೆ, ತಮಗೆ ಧಾರ್ಮಿಕ ನಂಬಿಕೆಯಿದೆಯೆಂದು ಹೇಳಿಕೊಳ್ಳುವ ಹೆಚ್ಚಿನ ಜನರು, ತಾವು ಏನನ್ನು ನಂಬುತ್ತೇವೊ ಅದರ ಕಾರಣಗಳ ಬಗ್ಗೆ ಇಲ್ಲವೇ ತಮ್ಮ ನಂಬಿಕೆಗಾಗಿ ಸಾಕಷ್ಟು ಆಧಾರವಿದೆಯೊ ಎಂಬುದರ ಬಗ್ಗೆ ಯೋಚಿಸುವುದೇ ಇಲ್ಲ. ಆದುದರಿಂದ, ಧರ್ಮವು ಹೆಚ್ಚಿನವರು ಮಾತಾಡಲು ಹಿಂದೇಟು ಹಾಕುವಂಥ ವಿಷಯವಾಗಿ ಬಿಟ್ಟಿರುವುದು ಆಶ್ಚರ್ಯದ ಸಂಗತಿಯೇನಲ್ಲ.
ವಿಷಾದದ ಸಂಗತಿಯೇನೆಂದರೆ, ಧಾರ್ಮಿಕ ವಿಗ್ರಹಗಳನ್ನು ಉಪಯೋಗಿಸುವ ಮತ್ತು ಗಿಳಿಪಾಠದಂತೆ ಪ್ರಾರ್ಥನೆಗಳನ್ನು ಪುನರುಚ್ಚರಿಸುವಂಥ ಆಚರಣೆಗಳು ಸಹ, ತರ್ಕಬದ್ಧವಾಗಿ ಯೋಚಿಸುವುದನ್ನು ನಿರುತ್ತೇಜಿಸುತ್ತವೆ. ಈ ಆಚರಣೆಗಳೊಂದಿಗೆ ಅತ್ಯಾಡಂಬರದ ಕಟ್ಟಡಗಳು, ವರ್ಣರಂಜಿತ ಗಾಜುಗಳಿರುವ ಕಿಟಕಿಗಳು ಮತ್ತು ಮೋಹಕ ಸಂಗೀತ, ಇವುಗಳಷ್ಟೇ ಕೋಟಿಗಟ್ಟಲೆ ಜನರ ಧರ್ಮದಲ್ಲಿ ಒಳಗೂಡಿರುವ ಸಂಗತಿಗಳಾಗಿವೆ. ತಮ್ಮ ನಂಬಿಕೆಯು ಬೈಬಲಿನ ಮೇಲೆ ಆಧಾರಿತವಾಗಿದೆಯೆಂದು ಕೆಲವು ಚರ್ಚುಗಳು ಹೇಳುತ್ತವಾದರೂ, ‘ಯೇಸುವಿನಲ್ಲಿ ನಂಬಿರಿ, ರಕ್ಷಣೆ ಪಡೆಯಿರಿ’ ಎಂಬ ಅವರ ಸಂದೇಶವು, ಗಂಭೀರವಾದ ಬೈಬಲ್ ಅಧ್ಯಯನವನ್ನು ನಿರುತ್ತೇಜಿಸುತ್ತದೆ. ಇತರರು ಕ್ರೈಸ್ತ ತತ್ತ್ವಗಳನ್ನು ಅನ್ವಯಿಸುವ ಮೂಲಕ ರಾಜಕೀಯ ಅಥವಾ ಸಾಮಾಜಿಕ ಸಮಸ್ಯೆಗಳನ್ನು ದೂರಮಾಡಲು ತೊಡಗುತ್ತಾರೆ. ಇದೆಲ್ಲದ್ದರ ಪರಿಣಾಮವೇನು?
ಉತ್ತರ ಅಮೆರಿಕದಲ್ಲಿನ ಸನ್ನಿವೇಶದ ಕುರಿತಾಗಿ, ಧರ್ಮದ ಬಗ್ಗೆ ಬರೆಯುವ ಒಬ್ಬ ಲೇಖಕನು ಹೇಳಿದ್ದು: “ಕ್ರೈಸ್ತತ್ವವು . . . ಮೇಲುಮೇಲಿನದ್ದಾಗಿರುವಂತೆ ತೋರುತ್ತದೆ, [ಮತ್ತು] ಅದರ ಅನುಯಾಯಿಗಳು ತಮ್ಮ ನಂಬಿಕೆಯ ವಿಷಯದಲ್ಲಿ ತೀರ ಕಡಿಮೆ ಶಿಕ್ಷಿತರಾಗಿದ್ದಾರೆ.” ಸಮೀಕ್ಷೆಯಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದವನೊಬ್ಬನು, ಅಮೆರಿಕವನ್ನು “ಬೈಬಲ್ ಅನಕ್ಷರಸ್ಥರ ಒಂದು ದೇಶ” ಎಂದು ವರ್ಣಿಸುವಷ್ಟರ ಮಟ್ಟಿಗೆ ಹೋದನು. ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಈ ಅಭಿಪ್ರಾಯಗಳು ನಾಮಮಾತ್ರದ ಕ್ರೈಸ್ತತ್ವವು ರಾರಾಜಿಸುತ್ತಿರುವ ಇತರ ದೇಶಗಳ ವಿಷಯದಲ್ಲೂ ಸತ್ಯವಾಗಿರುವುದು. ಅದೇ ರೀತಿಯಲ್ಲಿ ಅನೇಕ ಕ್ರೈಸ್ತೇತರ ಧರ್ಮಗಳು, ತರ್ಕಸಂಗತವಾದ, ರಚನಾತ್ಮಕ ವಿಚಾರಮಾಡುವಿಕೆಯನ್ನು ಉತ್ತೇಜಿಸದೇ, ಭಜನೆಗಳು, ಸಂಸ್ಕಾರಬದ್ಧ ಪ್ರಾರ್ಥನೆಗಳು ಹಾಗೂ ರಹಸ್ಯವಾದವನ್ನು ಒಳಗೂಡಿರುವ ವಿಭಿನ್ನ ರೂಪಗಳ ಧ್ಯಾನಿಸುವಿಕೆಗಳಿಗೆ ಮಹತ್ವವನ್ನು ಕೊಡುತ್ತವೆ.
ಆದರೆ ತಮ್ಮ ಧಾರ್ಮಿಕ ನಂಬಿಕೆಗಳು ಎಷ್ಟು ನಿಷ್ಕೃಷ್ಟವಾಗಿವೆ ಇಲ್ಲವೇ ಸತ್ಯವಾಗಿವೆ ಎಂಬುದರ ಬಗ್ಗೆ ಸ್ವಲ್ಪವೂ ಯೋಚಿಸದ ಈ ಜನರೇ, ತಮ್ಮ ದೈನಂದಿನ ಜೀವಿತದಲ್ಲಿನ ಇತರ ವಿಷಯಗಳ ಬಗ್ಗೆ ನೂರು ಸಲ ಯೋಚಿಸುತ್ತಾರೆ. ಒಬ್ಬ ವ್ಯಕ್ತಿಯು, ಒಂದಲ್ಲ ಒಂದು ದಿನ ಕಸದ ರಾಶಿಗೆ ಸೇರಲಿರುವ ಒಂದು ಕಾರನ್ನು ಖರೀದಿಸಲಿಕ್ಕಾಗಿ ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಆದರೆ ಅದೇ ವ್ಯಕ್ತಿ ತನ್ನ ಧರ್ಮದ ವಿಷಯದಲ್ಲಿ, ‘ನನ್ನ ಹೆತ್ತವರಿಗೆ ಯಾವುದು ಒಳ್ಳೇದಾಗಿತ್ತೋ ಅದೇ ನನಗೂ ಒಳ್ಳೇದು’ ಎಂದು ಹೇಳುವುದು ಸ್ವಲ್ಪ ವಿಚಿತ್ರವಾಗಿ ತೋರುವುದಿಲ್ಲವೊ?
ನಾವು ನಿಜವಾಗಿಯೂ ದೇವರನ್ನು ಮೆಚ್ಚಿಸಲು ಆಸಕ್ತರಾಗಿರುವಲ್ಲಿ, ನಾವು ಆತನ ಬಗ್ಗೆ ಏನನ್ನು ನಂಬುತ್ತೇವೊ ಅದರ ಕುರಿತು ಗಂಭೀರವಾಗಿ ಪರಿಗಣಿಸಬೇಕಲ್ಲವೇ? ಅಪೊಸ್ತಲ ಪೌಲನು, ‘ದೇವರಲ್ಲಿ ಆಸಕ್ತರಾಗಿದ್ದ, ಆದರೂ ಅವರ ಆಸಕ್ತಿ ಜ್ಞಾನಾನುಸಾರವಾಗಿರದಿದ್ದ’ ತನ್ನ ದಿನದ ಕೆಲವು ಧಾರ್ಮಿಕ ಜನರ ಕುರಿತಾಗಿ ಮಾತಾಡಿದನು. (ರೋಮಾಪುರ 10:2) ಅಂಥವರನ್ನು ಬಾಡಿಗೆಗೆ ಕೆಲಸಮಾಡುವ ಒಬ್ಬ ಪೇಂಟರ್ಗೆ ಹೋಲಿಸಬಹುದು. ಅವನು ಮನೆಗೆ ಬಣ್ಣಹಚ್ಚಲು ತುಂಬ ಕಷ್ಟಪಟ್ಟು ಕೆಲಸಮಾಡುತ್ತಾನೆ, ಆದರೆ ಮನೆಯ ಧಣಿಯ ಸೂಚನೆಗಳಿಗೆ ಕಿವಿಗೊಡಲು ತಪ್ಪಿಹೋಗುವ ಕಾರಣದಿಂದ, ಎಲ್ಲ ತಪ್ಪಾದ ಬಣ್ಣಗಳನ್ನು ಬಳಸುತ್ತಾನೆ. ಪೇಂಟರ್ ತನ್ನ ಕೆಲಸವನ್ನು ನೋಡಿ ಸ್ವತಃ ಸಂತೋಷಪಡಬಹುದು, ಆದರೆ ಧಣಿ ಅವನ ಕೆಲಸವನ್ನು ಮೆಚ್ಚುವನೊ?
ಸತ್ಯಾರಾಧನೆಯ ವಿಷಯದಲ್ಲಿ ದೇವರಿಗೆ ಏನು ಅಂಗೀಕಾರಾರ್ಹವಾಗಿದೆ? ಬೈಬಲ್ ಉತ್ತರಿಸುವುದು: “ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:3, 4) ಇಂದಿನ ಅನೇಕ ಧರ್ಮಗಳಲ್ಲಿ ಅಂಥ ಜ್ಞಾನವನ್ನು ಕಂಡುಕೊಳ್ಳುವುದು ಅಸಾಧ್ಯವೆಂದು ಕೆಲವರಿಗೆ ಅನಿಸಬಹುದು. ಆದರೆ ಜನರಿಗೆ ಸತ್ಯದ ನಿಷ್ಕೃಷ್ಟ ಜ್ಞಾನ ಸಿಗಬೇಕೆಂಬುದು ದೇವರ ಚಿತ್ತವಾಗಿರುವುದಾದರೆ, ಆತನು ಅದನ್ನು ಅವರಿಂದ ಅನ್ಯಾಯವಾಗಿ ಮುಚ್ಚಿಡುವನೊ? ಬೈಬಲಿಗನುಸಾರ ಇಲ್ಲ, ಯಾಕೆಂದರೆ ಅದು ಹೇಳುವುದು: “ನೀನು [ದೇವರನ್ನು] ಹುಡುಕುವದಾದರೆ ಆತನು ನಿನಗೆ ಸಿಕ್ಕುವನು.”—1 ಪೂರ್ವಕಾಲವೃತ್ತಾಂತ 28:9.
ದೇವರನ್ನು ಪ್ರಾಮಾಣಿಕವಾಗಿ ಹುಡುಕುವವರಿಗೆ ಆತನು ಹೇಗೆ ಪ್ರಕಟವಾಗುತ್ತಾನೆ? ಮುಂದಿನ ಲೇಖನವು ಉತ್ತರವನ್ನು ಕೊಡುವುದು.