ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲರಿಗೆ ಒಳ್ಳೇದನ್ನು ಮಾಡೋಣ”

“ಎಲ್ಲರಿಗೆ ಒಳ್ಳೇದನ್ನು ಮಾಡೋಣ”

“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು”

“ಎಲ್ಲರಿಗೆ ಒಳ್ಳೇದನ್ನು ಮಾಡೋಣ”

ಯೇಸುವಿನ ಪ್ರಧಾನ ಕಾರ್ಯವು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೂ ಅದರ ಬಗ್ಗೆ ಕಲಿಸುವುದೂ ಆಗಿತ್ತು. (ಮಾರ್ಕ 1:14; ಲೂಕ 8:1) ಕ್ರಿಸ್ತನ ಹಿಂಬಾಲಕರು ಅವನನ್ನು ಅನುಕರಿಸಲು ಅಪೇಕ್ಷಿಸುವುದರಿಂದ, ದೇವರ ರಾಜ್ಯದ ಕುರಿತಾದ ಬೈಬಲ್‌ ಸಂದೇಶವನ್ನು ಬೋಧಿಸುವ ಕೆಲಸವನ್ನು ಅವರು ತಮ್ಮ ಪ್ರಧಾನ ಕೆಲಸವಾಗಿ ವೀಕ್ಷಿಸುತ್ತಾರೆ. (ಲೂಕ 6:40) ಆದಕಾರಣ, ಯೇಸು ಭೂಮಿಯಲ್ಲಿದ್ದಾಗ ನಡೆದಂತೆಯೇ, ರಾಜ್ಯ ಸಂದೇಶವು ಅದನ್ನು ಅಂಗೀಕರಿಸುವವರಿಗೆ ಹೇಗೆ ಬಾಳಿಕೆ ಬರುವ ಚೈತನ್ಯವನ್ನು ತರುತ್ತದೆ ಎಂಬುದನ್ನು ನೋಡುವುದು ಯೆಹೋವನ ಸಾಕ್ಷಿಗಳಿಗೆ ಹೃದಯೋಲ್ಲಾಸ ತರುವ ಸಂಗತಿಯಾಗಿದೆ.​—ಮತ್ತಾಯ 11:​28-30.

ಯೇಸು ದೇವರ ವಾಕ್ಯವನ್ನು ಬೋಧಿಸಿದ್ದಲ್ಲದೆ, ರೋಗಿಗಳನ್ನು ಗುಣಪಡಿಸುವಂತಹ ಮತ್ತು ಹಸಿದವರಿಗೆ ಉಣಿಸುವಂತಹ ಇತರ ಸತ್ಕಾರ್ಯಗಳನ್ನೂ ಮಾಡಿದನು. (ಮತ್ತಾಯ 14:​14-21) ತದ್ರೀತಿಯೇ, ಯೆಹೋವನ ಸಾಕ್ಷಿಗಳು ಬೈಬಲನ್ನು ಬೋಧಿಸುವ ಕೆಲಸದ ಜೊತೆಗೆ, ಕೊರತೆಯುಳ್ಳವರಿಗೆ ಸಹಾಯಮಾಡುವ ಕೆಲಸಗಳನ್ನೂ ಮಾಡುತ್ತಾರೆ. ಕಾರ್ಯತಃ, ಶಾಸ್ತ್ರವು ಕ್ರೈಸ್ತರನ್ನು “ಸಕಲ ಸತ್ಕಾರ್ಯಕ್ಕೆ” ಸನ್ನದ್ಧರಾಗಿ ಮಾಡಿ, “ಎಲ್ಲರಿಗೆ ಒಳ್ಳೇದನ್ನು” ಮಾಡುವಂತೆ ಪ್ರೋತ್ಸಾಹಿಸುತ್ತದೆ. (ಓರೆ ಅಕ್ಷರಗಳು ನಮ್ಮವು.)​—2 ತಿಮೊಥೆಯ 3:16, 17; ಗಲಾತ್ಯ 6:10.

‘ನಮ್ಮ ಸಹೋದರರು ಬಂದರು’

ಸೆಪ್ಟೆಂಬರ್‌ 1999ರಲ್ಲಿ, ಟೈವಾನ್‌ನಲ್ಲಿ ವಿಪತ್ಕಾರಕವಾದ ಒಂದು ಭೂಕಂಪವು ಸಂಭವಿಸಿತು. ಕೆಲವು ತಿಂಗಳುಗಳ ಬಳಿಕ, ಧಾರಾಕಾರವಾದ ಮಳೆಸುರಿತ ಮತ್ತು ಹಿಮಕುಸಿತಗಳು, ವೆನಿಸ್ವೇಲದ ಇತಿಹಾಸದ ಅತಿ ದುರಂತಕರವಾದ ನೈಸರ್ಗಿಕ ವಿಪತ್ತುಗಳಲ್ಲಿ ಒಂದನ್ನು ತಂದವು. ಇತ್ತೀಚೆಗೆ ಮೊಸಾಂಬೀಕ್‌ ದೇಶವನ್ನು ಅತಿರೇಕ ನೆರೆಯು ಹಾಳುಗೆಡವಿತು. ಈ ಮೂರೂ ಸಂದರ್ಭಗಳಲ್ಲಿ, ಯೆಹೋವನ ಸಾಕ್ಷಿಗಳು ಬೇಗನೆ ಅಲ್ಲಿಗೆ ಹೋಗಿ, ಪೀಡಿತರಿಗೆ ಆಹಾರ, ನೀರು, ಔಷಧ, ಬಟ್ಟೆ, ಡೇರೆಗಳು ಮತ್ತು ಅಡುಗೆಯ ಸಾಮಾನುಗಳನ್ನು ಒದಗಿಸಿದರು. ವೈದ್ಯಕೀಯ ಕೌಶಲವಿದ್ದ ಸ್ವಯಂಸೇವಕರು ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿದರು ಮತ್ತು ಕಟ್ಟಡದ ಕೆಲಸ ಗೊತ್ತಿದ್ದ ಸ್ವಯಂಸೇವಕರು ಮನೆಗಳನ್ನು ಕಳೆದುಕೊಂಡಿದ್ದವರಿಗೋಸ್ಕರ ಹೊಸ ಮನೆಗಳನ್ನು ಕಟ್ಟಿದರು.

ಆ ಪೀಡಿತರು ಸಮಯೋಚಿತವಾಗಿ ಬಂದ ಈ ಸಹಾಯದಿಂದ ಭಾವೋದ್ರೇಕಿತರಾದರು. “ನಾವು ಅತಿ ಹತಾಶೆಯಿಂದಿದ್ದಾಗ ನಮ್ಮ ಸಹೋದರರು ಇಲ್ಲಿಗೆ ಬಂದರು,” ಎಂದಳು ಮಾಲ್ಯೋರೀ ಎಂಬಾಕೆ. ವೆನಿಸ್ವೇಲದಲ್ಲಿದ್ದ ಆಕೆಯ ಮನೆಯನ್ನು ಹಿಮಕುಸಿತವು ಕೆಡವಿಹಾಕಿತ್ತು. ಸ್ವಯಂಸೇವಕರು ಆಕೆಯ ಕುಟುಂಬಕ್ಕೆ ಹೊಚ್ಚಹೊಸತಾದ ಮನೆಯನ್ನು ನಿರ್ಮಿಸಿದಾಗ ಮಾಲ್ಯೋರೀ ಹೇಳಿದ್ದು: “ಯೆಹೋವನು ನಮಗಾಗಿ ಏನು ಮಾಡಿರುತ್ತಾನೊ ಅದಕ್ಕೆ ನಾವೆಂದಿಗೂ ಸಾಕಷ್ಟು ಕೃತಜ್ಞತೆಯನ್ನು ತೋರಿಸುವುದೇ ಅಸಾಧ್ಯ!” ಮತ್ತು ನೆರೆಹಾವಳಿ ಪೀಡಿತರು ಮೊಸಾಂಬೀಕ್‌ನಲ್ಲಿ ತಮ್ಮ ಹೊಸ ಮನೆಗಳ ಕೀಲಿ ಕೈಗಳನ್ನು ಪಡೆದಾಗ, ಇಡೀ ಗುಂಪೇ, “ಯೆಹೋವನು ನಮ್ಮ ಆಶ್ರಯ” ಎಂಬ ಗೀತೆಯನ್ನು ಹಾಡತೊಡಗಿತು. *

ಕೊರತೆಯುಳ್ಳವರಿಗೆ ಸಹಾಯಮಾಡುವ ಈ ವಿಷಯವು ಸ್ವಯಂಸೇವಕರಿಗೂ ಉಪಶಮನವನ್ನು ತಂದಿತು. ಮೊಸಾಂಬೀಕ್‌ನ ನಿರಾಶ್ರಿತ ಶಿಬಿರದಲ್ಲಿ ಪುರುಷನರ್ಸ್‌ ಆಗಿ ಕೆಲಸ ಮಾಡಿದ ಮಾರ್ಸೆಲೊ ಎಂಬವನು ಹೇಳಿದ್ದು: “ಅಷ್ಟು ಕಷ್ಟದಿಂದ ಬಾಧಿತರಾಗಿರುವ ಸಹೋದರರಿಗೆ ಸಹಾಯಮಾಡುವ ಕೆಲಸದಿಂದ ನನಗೆ ಸಂತೋಷ ದೊರೆಯಿತು.” ಟೈವಾನ್‌ನಲ್ಲಿ ಸ್ವಯಂಸೇವಕನಾಗಿದ್ದ ಹ್ವಾಂಗ್‌ ಹೇಳಿದ್ದು: “ಕೊರತೆಯಿದ್ದ ಸಹೋದರರಿಗೆ ಆಹಾರ ಮತ್ತು ಡೇರೆಗಳನ್ನು ಹಂಚುವುದರಲ್ಲಿ ನನಗೆ ಸಿಕ್ಕಿದ ಭಾಗವು ನನಗೆ ಮಹಾ ಸಂತೋಷವನ್ನು ತಂದಿದೆ. ಅದು ನಂಬಿಕೆವರ್ಧಕವಾಗಿತ್ತು.”

ಫಲೋತ್ಪಾದಕವಾದ ಸ್ವಯಂಸೇವಾ ಕಾರ್ಯಕ್ರಮ

ಇಂತಹ ಸ್ವಯಂಸೇವೆಯು ಲೋಕವ್ಯಾಪಕವಾಗಿ ಹತ್ತಾರು ಸಾವಿರ ಕೈದಿಗಳಿಗೂ ಆತ್ಮಿಕ ಚೈತನ್ಯವನ್ನು ತಂದಿದೆ. ಹೇಗೆ? ಇತ್ತೀಚಿನ ವರುಷಗಳಲ್ಲಿ, ಅಮೆರಿಕದಲ್ಲಿಯೇ ಸುಮಾರು 4,000 ಸೆರೆಮನೆಗಳಲ್ಲಿರುವ 30,000ಗಳಿಗೂ ಹೆಚ್ಚು ಮಂದಿ ಬಂದಿವಾಸಿಗಳಿಗೆ ಯೆಹೋವನ ಸಾಕ್ಷಿಗಳು ಬೈಬಲ್‌ ಸಾಹಿತ್ಯಗಳನ್ನು ಒದಗಿಸಿರುತ್ತಾರೆ. ಇದಕ್ಕೆ ಕೂಡಿಸಿ, ಸಾಧ್ಯವಿರುವಲ್ಲಿ, ಬಂದಿವಾಸಿಗಳೊಡನೆ ಬೈಬಲ್‌ ಅಧ್ಯಯನ ನಡೆಸಲು ಮತ್ತು ಕ್ರೈಸ್ತ ಕೂಟಗಳನ್ನು ನಡೆಸಲು ಸಾಕ್ಷಿಗಳು ಖುದ್ದಾಗಿ ಸೆರೆಮನೆಗಳಿಗೆ ಭೇಟಿ ನೀಡುತ್ತಾರೆ. ಬಂದಿವಾಸಿಗಳಿಗೆ ಇದರಿಂದ ಪ್ರಯೋಜನವಾಗಿದೆಯೊ?

ಬೈಬಲನ್ನು ಅಧ್ಯಯನ ಮಾಡುತ್ತಿರುವ ಕೆಲವು ಕೈದಿಗಳು ಈ ಚೈತನ್ಯದಾಯಕ ಬೋಧನೆಗಳನ್ನು ಜೊತೆಕೈದಿಗಳಿಗೆ ಹಂಚುತ್ತಾರೆ. ಇದರ ಫಲವಾಗಿ, ಲೋಕದಾದ್ಯಂತ ಅನೇಕ ಸೆರೆಮನೆಗಳಲ್ಲಿ ಯೆಹೋವನನ್ನು ಕೂಡಿ ಆರಾಧಿಸುವ ಕೈದಿಗಳ ಗುಂಪುಗಳಿವೆ. ಅಮೆರಿಕದ ಆರೆಗನ್‌ನಲ್ಲಿರುವ ಒಬ್ಬ ಕೈದಿಯು 2001ರಲ್ಲಿ ವರದಿ ಮಾಡಿದ್ದು: “ನಮ್ಮ ಗುಂಪು ವೃದ್ಧಿಯಾಗುತ್ತಿದೆ. ನಾವು 7 ಮಂದಿ ರಾಜ್ಯ ಪ್ರಚಾರಕರಿದ್ದೇವೆ ಮತ್ತು 38 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇವೆ. ಬಹಿರಂಗ ಭಾಷಣಕ್ಕೂ ಕಾವಲಿನಬುರುಜು ಅಧ್ಯಯನಕ್ಕೂ 25ಕ್ಕೂ ಹೆಚ್ಚು ಮಂದಿ ಹಾಜರಾಗುತ್ತಾರೆ ಮತ್ತು [ಕ್ರಿಸ್ತನ ಮರಣದ] ಜ್ಞಾಪಕಾಚರಣೆಗೆ 39 ಮಂದಿ ಹಾಜರಿದ್ದರು. ಬೇಗನೆ ಮೂವರು ದೀಕ್ಷಾಸ್ನಾನ ಹೊಂದಲಿದ್ದಾರೆ!”

ಪ್ರಯೋಜನಗಳೂ ಆನಂದಗಳೂ

ಈ ಸ್ವಯಂಸೇವೆಯ ಕಾರ್ಯಕ್ರಮ ಜಯಪ್ರದವೆಂಬುದನ್ನು ಸೆರೆಮನೆಯ ಅಧಿಕಾರಿಗಳು ಗಮನಿಸಿದ್ದಾರೆ. ಆದರೆ ಈ ಅಧಿಕಾರಿಗಳ ಅತಿ ಹೆಚ್ಚು ಮನವೊಪ್ಪಿಸುವ ವಿಷಯವು, ಈ ಸ್ವಯಂಸೇವಕ ಕಾರ್ಯಕ್ರಮದ ದೀರ್ಘವಾಗಿ ಬಾಳಿಕೆ ಬರುವ ಪ್ರಯೋಜನವೇ. ಒಂದು ವರದಿಯು ನುಡಿಯುವುದು: “ಈ ಕಾರ್ಯಕ್ರಮವು ಆರಂಭವಾಗಿ ಈಗ ಹತ್ತು ವರುಷಗಳಾಗಿವೆಯಾದರೂ, ಸೆರೆಮನೆಯಲ್ಲಿ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಹೊಂದಿ, ಬಳಿಕ ಬಿಡುಗಡೆಯಾಗಿರುವ ಒಬ್ಬನೂ ಪುನಃ ಸೆರೆಮನೆಗೆ ಹಿಂದಿರುಗಿ ಬಂದಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೇರೆ ಗುಂಪುಗಳಿಂದ ಹಿಂದಿರುಗುವವರ ಪ್ರಮಾಣವು 50-60 ಪ್ರತಿಶತವಾಗಿದೆ.” ಸಾಕ್ಷಿ ಸ್ವಯಂಸೇವಕರು ಪಡೆದ ಫಲಿತಾಂಶದಿಂದ ಪ್ರಚೋದಿತನಾದ ಐಡಹೋ ಪ್ರಾಂತ್ಯದ ಒಬ್ಬ ಸೆರೆಮನೆಯ ಪಾದ್ರಿಯು, ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಬರೆದ ಪತ್ರದಲ್ಲಿ ಹೇಳಿದ್ದು: “ನಿಮ್ಮ ದೇವಜ್ಞಾನಶಾಸ್ತ್ರದೊಂದಿಗೆ ನನಗೆ ಸ್ವತಃ ಸಹಮತವಿಲ್ಲದಿದ್ದರೂ, ನಿಮ್ಮ ಸಂಸ್ಥಾ ವ್ಯವಸ್ಥೆಯಿಂದ ನಾನು ತೀರ ಪ್ರಭಾವಿತನಾಗಿದ್ದೇನೆ.”

ಸೆರೆಮನೆಯವರಿಗೆ ಸಹಾಯಮಾಡುವ ಈ ವಿಷಯವು ಸ್ವಯಂಸೇವಕರಿಗೂ ಫತಿಫಲದಾಯಕವಾಗಿ ಪರಿಣಮಿಸಿದೆ. ಕೈದಿಗಳ ಒಂದು ಗುಂಪಿನಲ್ಲಿ ಕೂಟವನ್ನು ನಡೆಸಿ, ಅಲ್ಲಿ ಅವರು ಪ್ರಥಮ ಬಾರಿ ರಾಜ್ಯ ಗೀತೆಯನ್ನು ಹಾಡಿದುದನ್ನು ಕೇಳಿಸಿಕೊಂಡ ಒಬ್ಬ ಸ್ವಯಂಸೇವಕನು ಬರೆದುದು: “ಯೆಹೋವನಿಗೆ ಸ್ತುತಿಯನ್ನು ಹಾಡುವುದರಲ್ಲಿ 28 ಮಂದಿ ಪುರುಷರು ಕೂಡಿಬಂದುದನ್ನು ಗಮನಿಸುವುದು ಪ್ರೋತ್ಸಾಹದಾಯಕವಾಗಿತ್ತು. ಮತ್ತು ಅವರು ಅದನ್ನು ಗಟ್ಟಿಯಾಗಿ ಹಾಡಿದರು! ಅಂತಹ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತನಿದ್ದದ್ದು ವಿಶೇಷಾವಕಾಶವೇ ಸರಿ!” ಆ್ಯರಿಸೋನದಲ್ಲಿ ಸೆರೆಮನೆಗಳಿಗೆ ಭೇಟಿಕೊಡುತ್ತಿದ್ದ ಒಬ್ಬ ಸ್ವಯಂಸೇವಕನು ಹೇಳಿದ್ದು: “ಈ ವಿಶೇಷ ಕೆಲಸದಲ್ಲಿ ಭಾಗವಹಿಸುವ ವಿಷಯವು ನಿಶ್ಚಯವಾಗಿಯೂ ಆಶೀರ್ವಾದದಾಯಕವಾಗಿದೆ!”

“ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂದು ಹೇಳಿದ ಯೇಸು ಕ್ರಿಸ್ತನೊಂದಿಗೆ ಸಾಕ್ಷಿ ಸ್ವಯಂಸೇವಕರು ಲೋಕಾದ್ಯಂತವಾಗಿ ಸಮ್ಮತಿಸುತ್ತಾರೆ. (ಅ. ಕೃತ್ಯಗಳು 20:35) ಮತ್ತು ಎಲ್ಲರಿಗೆ ಒಳ್ಳೇದನ್ನು ಮಾಡಬೇಕೆಂಬ ಬೈಬಲಿನ ಸಲಹೆಯನ್ನು ಅನುಸರಿಸುವುದು ನಿಶ್ಚಯವಾಗಿಯೂ ಚೈತನ್ಯ ನೀಡುತ್ತದೆಂಬುದನ್ನೂ ಅವರು ದೃಢೀಕರಿಸುತ್ತಾರೆ.​—ಜ್ಞಾನೋಕ್ತಿ 11:25.

[ಪಾದಟಿಪ್ಪಣಿ]

^ ಪ್ಯಾರ. 7 ಯೆಹೋವನ ಸಾಕ್ಷಿಗಳ, ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ಎಂಬ ಬ್ರೋಷರ್‌ನಲ್ಲಿ 11 (85)ನೆಯ ಗೀತೆಯನ್ನು ನೋಡಿ.

[ಪುಟ 8ರಲ್ಲಿರುವ ಚಿತ್ರ]

ವೆನಿಸ್ವೇಲ

[ಪುಟ 8ರಲ್ಲಿರುವ ಚಿತ್ರ]

ಟೈವಾನ್‌

[ಪುಟ 8ರಲ್ಲಿರುವ ಚಿತ್ರ]

ಮೊಸಾಂಬೀಕ್‌