ನಮಗೆ ದೊರೆತ ನೇಮಕಕ್ಕೆ ನಾವು ಅಂಟಿಕೊಂಡೆವು
ಜೀವನ ಕಥೆ
ನಮಗೆ ದೊರೆತ ನೇಮಕಕ್ಕೆ ನಾವು ಅಂಟಿಕೊಂಡೆವು
ಹರ್ಮಾನ್ ಬ್ರೂಎಡರ್ ಅವರು ಹೇಳಿದಂತೆ
ನನ್ನ ಮುಂದಿದ್ದ ಆಯ್ಕೆಯು ತುಂಬ ಸರಳವಾಗಿತ್ತು: ಒಂದೇ ಫ್ರೆಂಚ್ ಫಾರೀನ್ ಲೀಜನ್ ಸೇನಾಪಡೆಯಲ್ಲಿ ಐದು ವರುಷಗಳ ಸೇವೆಮಾಡಬೇಕು ಇಲ್ಲವೆ ಮೊರಾಕೋ ದೇಶದಲ್ಲಿ ಸೆರೆವಾಸ ಅನುಭವಿಸಬೇಕು. ನಾನು ಈ ಸಂದಿಗ್ಧ ಸ್ಥಿತಿಯಲ್ಲಿ ಹೇಗೆ ಸಿಕ್ಕಿಕೊಂಡೆ ಎಂಬುದನ್ನು ಹೇಳುತ್ತೇನೆ ಕೇಳಿ.
ನಾನು ಜರ್ಮನಿಯ ಆಪನಾ ಎಂಬ ಊರಲ್ಲಿ ಒಂದನೆಯ ಲೋಕ ಯುದ್ಧವು ಆರಂಭಗೊಳ್ಳುವುದಕ್ಕೆ ಕೇವಲ ಮೂರು ವರುಷಗಳ ಮುಂಚೆ, ಅಂದರೆ 1911ರಲ್ಲಿ ಜನಿಸಿದೆ. ನನ್ನ ಹೆತ್ತವರಾದ ಯೋಸೆಫ್ ಮತ್ತು ಫ್ರೀಡಾ ಬ್ರೂಎಡರ್ ಎಂಬವರಿಗೆ 17 ಮಂದಿ ಮಕ್ಕಳು. ನಾನು ಅವರ 13ನೆಯ ಮಗುವಾಗಿದ್ದೆ.
ನಮ್ಮ ಹುಟ್ಟೂರಿನ ಮುಖ್ಯ ಬೀದಿಯಲ್ಲಿ ಮಿಲಿಟರಿ ವಾದ್ಯಮೇಳದ ಶಿಸ್ತಿನ ನಡಗೆಯನ್ನು ನೋಡುತ್ತಿದ್ದದ್ದು ನನಗಿರುವ ಆದಿಸ್ಮರಣೆ. ಶಿಸ್ತಿನ ನಡಗೆಯ ಶ್ರುತಿಯಿಂದ ಆಕರ್ಷಿತನಾದ ನಾನು ಆ ವಾದ್ಯಮೇಳದ ಹಿಂದಿನಿಂದ ರೈಲು ನಿಲ್ದಾಣದ ತನಕ ಹೋದಾಗ ಮಿಲಿಟರಿ ಸಮವಸ್ತ್ರಧಾರಿಗಳಾಗಿದ್ದ ನನ್ನ ತಂದೆ ಮತ್ತು ಬೇರೆ ವ್ಯಕ್ತಿಗಳು ರೈಲು ಹತ್ತುತ್ತಿರುವುದನ್ನು ನೋಡಿದೆ. ರೈಲು ಹೊರಟಾಗ ಆ ನಿಲ್ದಾಣದಲ್ಲಿದ್ದ ಕೆಲವು ಮಂದಿ ಹೆಂಗಸರು ತುಂಬ ಅಳಲಾರಂಭಿಸಿದರು. ಇದಾಗಿ ಸ್ವಲ್ಪದರಲ್ಲಿ, ನಮ್ಮ ಪಾದ್ರಿಯು ಚರ್ಚಿನಲ್ಲಿ ಒಂದು ದೀರ್ಘ ಪ್ರಸಂಗವನ್ನು ಕೊಟ್ಟು, ಮಾತೃಭೂಮಿಯನ್ನು ಕಾಪಾಡಲು ಪ್ರಯತ್ನಿಸಿ ಮಡಿದ ನಾಲ್ವರು ಪುರುಷರ ಹೆಸರನ್ನು ಓದಿದರು. “ಅವರೀಗ ಸ್ವರ್ಗದಲ್ಲಿದ್ದಾರೆ” ಎಂದು ಅವರು ವಿವರಿಸಿದರು. ಆಗ ನನ್ನ ಬಳಿ ನಿಂತಿದ್ದ ಒಬ್ಬ ಸ್ತ್ರೀ ಮೂರ್ಛೆಹೋದಳು.
ತಂದೆಯವರು ರಷ್ಯನ್ ಯುದ್ಧರಂಗದಲ್ಲಿದ್ದಾಗ ಅವರಿಗೆ ಟೈಫಾಯ್ಡ್ ಜ್ವರ ಬಂತು. ಅವರು ತೀರ ನಿತ್ರಾಣಗೊಂಡು ಮನೆಗೆ ಬಂದಾಗ ಅವರನ್ನು ಕೂಡಲೇ ಸ್ಥಳಿಕ ಆಸ್ಪತ್ರೆಗೆ ಸೇರಿಸಲಾಯಿತು. “ಸಮಾಧಿಗಳ ಬಳಿಯಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ಹೋಗಿ 50 ಬಾರಿ ಕರ್ತನ ಪ್ರಾರ್ಥನೆಯನ್ನೂ 50 ಬಾರಿ ಹೇಲ್ ಮೇರಿ ಜಪವನ್ನೂ ಹೇಳು. ಆಗ ನಿನ್ನ ತಂದೆಗೆ ಗುಣವಾಗುವುದು,” ಎಂದು ಆ ಪಾದ್ರಿ ನನಗೆ ಹೇಳಿದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಆದರೆ ತಂದೆ ಮರುದಿನ ಸತ್ತುಹೋದರು. ನಾನು ಚಿಕ್ಕ ಹುಡುಗನಾಗಿದ್ದರೂ ಆ ಯುದ್ಧ ನನಗೆ ಅತಿ ದುಃಖಕರವಾದ ಅನುಭವವಾಗಿತ್ತು.
ನನಗೆ ಸತ್ಯ ದೊರೆತ ರೀತಿ
ಎರಡು ಲೋಕ ಯುದ್ಧಗಳ ಮಧ್ಯಕಾಲದಲ್ಲಿ ಜರ್ಮನಿಯಲ್ಲಿ ಕೆಲಸ ದೊರೆಯುವುದು ಕಷ್ಟಕರವಾಗಿತ್ತು. ಆದರೆ ನಾನು 1928ರಲ್ಲಿ ಶಾಲೆಯನ್ನು ಬಿಟ್ಟ ನಂತರ ನನಗೆ ಸ್ವಿಟ್ಸರ್ಲೆಂಡಿನ ಬಾಸೆಲ್ ನಗರದಲ್ಲಿ ತೋಟಗಾರನ ಕೆಲಸ ಸಿಕ್ಕಿತು.
ನನ್ನ ತಂದೆಯಂತೆಯೇ ನಾನೂ ಒಬ್ಬ ನಿಷ್ಠಾವಂತ ಕ್ಯಾಥೊಲಿಕನಾಗಿದ್ದೆ. ಕಪ್ಯಷನ್ ಸಂನ್ಯಾಸಿಯಾಗಿ ಭಾರತದಲ್ಲಿ ಸೇವೆಮಾಡುವುದು ನನಗಿದ್ದ ಹೆಬ್ಬಯಕೆಯಾಗಿತ್ತು. ಅಷ್ಟರಲ್ಲಾಗಲೇ ಯೆಹೋವನ ಸಾಕ್ಷಿಗಳಲ್ಲೊಬ್ಬನಾಗಿದ್ದ ನನ್ನ ತಮ್ಮ ರಿಕಾರ್ಟನು ನನ್ನ ಯೋಜನೆಗಳ ವಿಷಯವಾಗಿ ಕೇಳಿಸಿಕೊಂಡಾಗ, ಹಾಗೆ ಮಾಡುವುದರಿಂದ ನನ್ನನ್ನು ತಡೆಯಲು ಪ್ರಯತ್ನಿಸಲಿಕ್ಕಾಗಿ ಸ್ವಿಟ್ಸರ್ಲೆಂಡಿಗೆ ವಿಶೇಷ ಪ್ರಯಾಣವನ್ನು ಮಾಡಿದನು. ಮನುಷ್ಯರನ್ನು, ಅದರಲ್ಲೂ ವಿಶೇಷವಾಗಿ ಪಾದ್ರಿಗಳನ್ನು ನಂಬುವ ಅಪಾಯದ ವಿಷಯದಲ್ಲಿ ಅವನು ನನ್ನನ್ನು ಎಚ್ಚರಿಸಿ, ಬೈಬಲನ್ನು ಓದುವಂತೆಯೂ ಅದರಲ್ಲಿ ಮಾತ್ರ ಭರವಸೆಯಿಡುವಂತೆಯೂ ನನ್ನನ್ನು ಪ್ರೋತ್ಸಾಹಿಸಿದನು. ಅವನ ಮಾತುಗಳ ಬಗ್ಗೆ ನನಗೆ ಶಂಕೆಗಳಿದ್ದರೂ, ನಾನು ಹೊಸ ಒಡಂಬಡಿಕೆಯ ಒಂದು ಪ್ರತಿಯನ್ನು ಪಡೆದುಕೊಂಡು ಅದನ್ನು ಓದಲಾರಂಭಿಸಿದೆ. ನನ್ನ ಅನೇಕ ನಂಬಿಕೆಗಳು ಬೈಬಲ್ ಬೋಧನೆಗಳಿಗೆ ಹೊಂದಿಕೆಯಲ್ಲಿಲ್ಲವೆಂಬುದು ಕ್ರಮೇಣ ನನಗೆ ತಿಳಿದುಬಂತು.
ಇಸವಿ 1933ರಲ್ಲಿ ಒಂದು ಭಾನುವಾರ ನಾನು ಜರ್ಮನಿಯಲ್ಲಿ ರಿಕಾರ್ಟ್‌ನ ಮನೆಯಲ್ಲಿದ್ದಾಗ, ಅವನು ಯೆಹೋವನ ಸಾಕ್ಷಿಗಳಾಗಿದ್ದ ಒಬ್ಬ ದಂಪತಿಗೆ ನನ್ನನ್ನು ಪರಿಚಯಿಸಿದ. ನಾನು ಬೈಬಲನ್ನು ಓದುತ್ತಿದ್ದೇನೆಂದು ಅವರಿಗೆ ತಿಳಿದುಬಂದಾಗ, ಬಿಕ್ಕಟ್ಟು (ಇಂಗ್ಲಿಷ್) * ಎಂಬ ಪುಸ್ತಿಕೆಯನ್ನು ಅವರು ನನಗೆ ಕೊಟ್ಟರು. ನಾನು ಆ ಪುಸ್ತಿಕೆಯನ್ನು ಓದಿ ಮುಗಿಸಿದಾಗ ಹೆಚ್ಚುಕಡಿಮೆ ಮಧ್ಯರಾತ್ರಿಯಾಗಿತ್ತು. ನನಗೆ ಸತ್ಯ ದೊರಕಿದೆ ಎಂಬುದು ನನಗೆ ಮನದಟ್ಟಾಯಿತು!
ಬಾಸೆಲ್‌ನಲ್ಲಿದ್ದ ಯೆಹೋವನ ಸಾಕ್ಷಿಗಳು ನನಗೆ ಶಾಸ್ತ್ರವಚನಗಳಲ್ಲಿನ ಅಧ್ಯಯನ (ಇಂಗ್ಲಿಷ್) * ಎಂಬ ಪುಸ್ತಕದ ಎರಡು ಸಂಪುಟಗಳನ್ನು ಕೊಟ್ಟರು. ನಾನು ಓದಿದಂಥ ಸಂಗತಿಗಳು ನನ್ನ ಮನಸ್ಸಿನ ಮೇಲೆ ಎಷ್ಟೊಂದು ಪ್ರಭಾವ ಬೀರಿದವೆಂದರೆ, ನಾನು ಸ್ಥಳಿಕ ಪಾದ್ರಿಯನ್ನು ಸಂಪರ್ಕಿಸಿ, ಚರ್ಚ್ ರಿಜಿಸ್ಟರ್‌ನಿಂದ ನನ್ನ ಹೆಸರನ್ನು ತೆಗೆದುಹಾಕುವಂತೆ ಕೇಳಿಕೊಂಡೆ. ಪಾದ್ರಿಯು ಬಹು ಕೋಪಗೊಂಡು, ನೀನು ನಿನ್ನ ನಂಬಿಕೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದೀ ಎಂದು ಎಚ್ಚರಿಸಿದರು. ಆದರೆ ಆ ಮಾತುಗಳಲ್ಲಿ ಸ್ವಲ್ಪವೂ ಸತ್ಯವಿರಲಿಲ್ಲ. ವಾಸ್ತವದಲ್ಲಿ, ನನ್ನ ಜೀವನದಲ್ಲಿ ಪ್ರಥಮ ಬಾರಿ ನಾನು ನಿಜ ನಂಬಿಕೆಯನ್ನು ಬೆಳೆಸಿಕೊಳ್ಳತೊಡಗಿದ್ದೆ.
ಬಾಸೆಲ್‌ನಲ್ಲಿದ್ದ ಸಹೋದರರು ಆ ವಾರಾಂತ್ಯದಲ್ಲಿ ಸಾರುವ ಸೇವೆಗಾಗಿ ಗಡಿಯನ್ನು ದಾಟಿ ಫ್ರಾನ್ಸ್ ದೇಶಕ್ಕೆ ಹೋಗಲು ಯೋಜಿಸುತ್ತಿದ್ದರು. ಸಹೋದರರಲ್ಲಿ ಒಬ್ಬರು ನನಗೆ ದಯಾಭಾವದಿಂದ, ನೀನು ಈಗ ತಾನೆ ಸಭೆಯೊಂದಿಗೆ ಸಹವಾಸಮಾಡುತ್ತಿರುವುದರಿಂದ ನಿನಗೆ ಆಮಂತ್ರಣವಿಲ್ಲವೆಂದರು. ನಿರಾಶನಾಗದೆ, ನಾನು ಅವರಿಗೆ ಸಾರಲಾರಂಭಿಸಲು ನನಗಿದ್ದ ಕಟ್ಟಾಸೆಯನ್ನು ವ್ಯಕ್ತಪಡಿಸಿದೆ. ಇನ್ನೊಬ್ಬ ಹಿರಿಯನೊಂದಿಗೆ ವಿಚಾರಿಸಿ, ಅವರು ನನಗೆ ಸ್ವಿಟ್ಸರ್ಲೆಂಡಿನಲ್ಲಿಯೇ ಒಂದು ಟೆರಿಟೊರಿಯನ್ನು ಕೊಟ್ಟರು. ಭಾನುವಾರ ಮುಂಜಾನೆಯೇ ನಾನು ಸೈಕಲ್ ಹತ್ತಿ ಬಾಸೆಲ್ ಸಮೀಪದಲ್ಲಿದ್ದ ಒಂದು ಚಿಕ್ಕ ಹಳ್ಳಿಗೆ ಹೋದೆ. 4 ಪುಸ್ತಕಗಳು, 28 ಪತ್ರಿಕೆಗಳು ಮತ್ತು 20 ಬ್ರೋಷರ್‌ಗಳು ನನ್ನ ಸೇವಾ ಬ್ಯಾಗ್‌ನಲ್ಲಿದ್ದವು. ನಾನು ಅಲ್ಲಿಗೆ ಹೋಗಿ ಮುಟ್ಟಿದಾಗ ಹಳ್ಳಿಯವರಲ್ಲಿ ಹೆಚ್ಚಿನವರು ಚರ್ಚಿಗೆ ಹೋಗಿದ್ದರೂ, ಬೆಳಗ್ಗೆ 11 ಗಂಟೆಯೊಳಗೆ ನನ್ನ ಬ್ಯಾಗ್ ಖಾಲಿಯಾಗಿತ್ತು.
ನಾನು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಯಸುತ್ತೇನೆಂದು ಸಹೋದರರಿಗೆ ತಿಳಿಯಪಡಿಸಿದಾಗ, ಅವರು ನನ್ನೊಂದಿಗೆ ಗಂಭೀರವಾದ ಮಾತುಕತೆಯನ್ನು ನಡೆಸಿ, ಸತ್ಯದ ಕುರಿತು ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿದರು. ಯೆಹೋವನ ಮತ್ತು ಆತನ ಸಂಸ್ಥೆಯ ಕಡೆಗೆ ಅವರಲ್ಲಿದ್ದ ಹುರುಪು ಮತ್ತು ನಿಷ್ಠೆ ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಆಗ ಚಳಿಗಾಲವಾಗಿದ್ದುದರಿಂದ, ಒಬ್ಬ ಹಿರಿಯನ ಮನೆಯಲ್ಲಿ ಒಬ್ಬ ಸಹೋದರರು ಸ್ನಾನದ ತೊಟ್ಟಿಯಲ್ಲಿ ನನಗೆ ದೀಕ್ಷಾಸ್ನಾನ ಕೊಟ್ಟರು. ನನಗಾದ ಅವರ್ಣನೀಯ ಸಂತೋಷ ಮತ್ತು ಮಹಾ ಆಂತರಿಕ ಶಕ್ತಿಯ ಅನುಭವದ ಅನಿಸಿಕೆಯ ನೆನಪು ಈಗಲೂ ನನಗಿದೆ. ಅದು 1934ನೆಯ ವರುಷವಾಗಿತ್ತು.
ಕಿಂಗ್‌ಡಮ್ ಫಾರ್ಮ್‌ನಲ್ಲಿ ಕೆಲಸ
ಯೆಹೋವನ ಸಾಕ್ಷಿಗಳು ಸ್ವಿಟ್ಸರ್ಲೆಂಡಿನಲ್ಲಿ ಜಮೀನನ್ನು ಖರೀದಿಸಿದ್ದಾರೆಂದು ನನಗೆ 1936ರಲ್ಲಿ ತಿಳಿದುಬಂತು. ಒಬ್ಬ ತೋಟಗಾರನಾಗಿ ಕೆಲಸಮಾಡಲು ನಾನು ಸಿದ್ಧನೆಂದು ಹೇಳಿದೆ. ಮತ್ತು ಬರ್ನ್ ನಗರದಿಂದ ಸುಮಾರು 30 ಕಿಲೋಮೀಟರ್ ದೂರದ ಷ್ಟೆಫೀಸ್‌ಬರ್ಗಿನ ಕಿಂಗ್‌ಡಮ್ ಫಾರ್ಮ್‌ನಲ್ಲಿ ಕೆಲಸಮಾಡಲು ನನಗೆ ಕರೆಬಂದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ನನ್ನ ಕೆಲಸವನ್ನು ಮಾಡುತ್ತಿದ್ದದ್ದು ಮಾತ್ರವಲ್ಲ, ಸಾಧ್ಯವಿರುವಾಗೆಲ್ಲ ಬೇರೆಯವರ
ಕೆಲಸದಲ್ಲೂ ನಾನು ಸಹಾಯಮಾಡಿದೆ. ಬೆತೆಲ್ ನನಗೆ ಸಹಕಾರದ ಮನೋಭಾವವನ್ನು ಹೊಂದುವ ಪ್ರಮುಖತೆಯನ್ನು ಕಲಿಸಿತು.ನನ್ನ ಬೆತೆಲ್ ವಾಸದ ವರುಷಗಳ ಒಂದು ಮಹತ್ವಪೂರ್ಣ ಘಟನೆಯು, 1936ರಲ್ಲಿ ಸಹೋದರ ರದರ್‌ಫರ್ಡ್ ಅವರು ಫಾರ್ಮಿಗೆ ಭೇಟಿ ಕೊಟ್ಟದ್ದೇ ಆಗಿತ್ತು. ನಮ್ಮ ಟೊಮಾಟೊಗಳ ಗಾತ್ರವನ್ನೂ ಪೈರುಗಳ ಫಲೋತ್ಪಾದಕತೆಯನ್ನೂ ನೋಡಿ ಅವರು ಮುಗುಳುನಗೆ ಬೀರುತ್ತಾ, ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಅವರೆಷ್ಟು ಪ್ರಿಯರಾದ ಸಹೋದರರಾಗಿದ್ದರು!
ನಾನು ಆ ಫಾರ್ಮಿನಲ್ಲಿ ಕೆಲಸ ಮಾಡುತ್ತಾ ಮೂರು ವರುಷಗಳಿಗಿಂತ ಸ್ವಲ್ಪ ಹೆಚ್ಚು ಸಮಯವನ್ನು ಕಳೆದಾಗ, ಅಮೆರಿಕದಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದಿಂದ ಬಂದ ಪತ್ರವನ್ನು ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಓದಲಾಯಿತು. ಅದು ಸಾರುವ ಕೆಲಸದ ಜರೂರಿಯನ್ನು ಒತ್ತಿಹೇಳಿ, ಪಯನೀಯರರಾಗಿ ವಿದೇಶದಲ್ಲಿ ಸೇವೆಮಾಡಲು ಮನಸ್ಸುಳ್ಳವರಿಗೆ ಆಮಂತ್ರಣವನ್ನು ಕೊಟ್ಟಿತು. ಸ್ವಲ್ಪವೂ ಹಿಂಜರಿಯದೆ ನಾನು ಆ ಕೆಲಸಕ್ಕಾಗಿ ಮುಂದೆ ಬಂದೆ. 1939ರ ಮೇ ತಿಂಗಳಿನಲ್ಲಿ ನನ್ನ ನೇಮಕದ ಸ್ಥಾನವು ಪತ್ರ ಮುಖೇನ ತಿಳಿಸಲ್ಪಟ್ಟಿತು—ಬ್ರಸಿಲ್!
ಆ ಸಮಯದಲ್ಲಿ ನಾನು ಕಿಂಗ್‌ಡಮ್ ಫಾರ್ಮ್‌ನ ಸಮೀಪದ ಟೂನ್ ಸಭೆಯಲ್ಲಿ ಕೂಟಗಳಿಗೆ ಹೋಗುತ್ತಿದ್ದೆ. ಭಾನುವಾರಗಳಲ್ಲಿ, ನಮ್ಮ ಒಂದು ಗುಂಪು ಟೂನ್‌ನಿಂದ ಆಲ್‌ಪ್ಸ್ ಪರ್ವತಗಳಿಗೆ ಸಾರಲಿಕ್ಕಾಗಿ ಸೈಕಲ್‌ಗಳಲ್ಲಿ ಹೋಗುತ್ತಿತ್ತು. ಆ ಗುಂಪಿನಲ್ಲಿದ್ದ ಒಬ್ಬ ಸಹೋದರಿ ಮಾರ್ಗಾರೀಟಾ ಸ್ಟೈನರ್ ಆಗಿದ್ದಳು. ತತ್‌ಕ್ಷಣ ನನ್ನ ಮನಸ್ಸಿಗೆ ಒಂದು ವಿಷಯ ಹೊಳೆಯಿತು: ಯೇಸು ತನ್ನ ಶಿಷ್ಯರನ್ನು ಇಬ್ಬಿಬ್ಬರಾಗಿ ಕಳುಹಿಸಲಿಲ್ಲವೊ? ನಾನು ಮಾರ್ಗಾರೀಟಾಗೆ ನನ್ನನ್ನು ಬ್ರಸಿಲ್‌ಗೆ ನೇಮಿಸಲಾಗಿದೆ ಎಂದು ಸಾಂದರ್ಭಿಕವಾಗಿ ಹೇಳಲಾಗಿ, ಹೆಚ್ಚು ಆವಶ್ಯಕತೆಯಿರುವ ಸ್ಥಳಗಳಲ್ಲಿ ಸೇವೆಮಾಡಲಿಕ್ಕಾಗಿರುವ ತನ್ನ ಸ್ವಂತ ಬಯಕೆಯನ್ನು ಅವಳು ವ್ಯಕ್ತಪಡಿಸಿದಳು. ನಾವು1939ರ ಜುಲೈ 31ರಂದು ವಿವಾಹಿತರಾದೆವು.
ಅನಿರೀಕ್ಷಿತವಾದ ನಿಲುಗಡೆ
ಇಸವಿ 1939ರ ಆಗಸ್ಟ್ ತಿಂಗಳ ಅಂತ್ಯದಲ್ಲಿ ನಾವು ಫ್ರಾನ್ಸ್ ದೇಶದ ಲಹಾವ್ರ್ ಬಂದರಿನಿಂದ ಬ್ರಸಿಲ್‌ನ ಸಾಂಟೋಸ್‌ಗೆ ಸಮುದ್ರ ಪ್ರಯಾಣ ಮಾಡಿದೆವು. ಜೋಡಿ ಶಯನಸ್ಥಳಗಳು ಲಭ್ಯವಿಲ್ಲದಿದ್ದರಿಂದ ನಾವು ಬೇರೆ ಬೇರೆ ಕ್ಯಾಬಿನ್‌ಗಳಲ್ಲಿ ಪ್ರಯಾಣಿಸಬೇಕಾಯಿತು. ಪ್ರಯಾಣದ ಮಧ್ಯದಲ್ಲಿ, ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಜರ್ಮನಿಯ ಮೇಲೆ ಯುದ್ಧದ ಘೋಷಣೆ ಮಾಡಿವೆ ಎಂಬ ಸುದ್ದಿ ಸಿಕ್ಕಿತು. ಇದಕ್ಕೆ ಪ್ರತಿಕ್ರಿಯಿಸುತ್ತಾ ಹಡಗಿನಲ್ಲಿದ್ದ 30 ಮಂದಿ ಜರ್ಮನ್ ಪ್ರಯಾಣಿಕರು ಜರ್ಮನ್ ರಾಷ್ಟ್ರಗೀತೆಯನ್ನು ಹಾಡಿದರು. ಇದು ಹಡಗಿನ ಕ್ಯಾಪ್ಟನ್‌ನನ್ನು ಎಷ್ಟು ಸಿಟ್ಟುಗೊಳಿಸಿತೆಂದರೆ, ಅವನು ತನ್ನ ಮಾರ್ಗ ಬದಲಾಯಿಸಿ, ಮೊರಾಕೋ ದೇಶದ ಸಾಫೀಗೆ ಹಡಗನ್ನು ಒಯ್ದನು. ಜರ್ಮನ್ ಪ್ರಯಾಣ ದಾಖಲೆಪತ್ರಗಳಿದ್ದ ಪ್ರಯಾಣಿಕರಿಗೆ ಹಡಗಿನಿಂದ ಇಳಿಯಲು 5 ನಿಮಿಷಗಳು ಮಾತ್ರ ಕೊಡಲ್ಪಟ್ಟವು. ಆ ಪ್ರಯಾಣಿಕರಲ್ಲಿ ನಾವೂ ಇದ್ದೆವು.
ನಮ್ಮನ್ನು ಅಲ್ಲಿಯ ಪೊಲೀಸ್ ಠಾಣೆಯಲ್ಲಿ ಒಂದು ದಿನ ಬಂದಿಗಳಾಗಿಟ್ಟ ಬಳಿಕ, ಒಂದು ಹಳೆಯ ಕುಲುಕುವ ಬಸ್ಸಿನಲ್ಲಿ ಸುಮಾರು 140 ಕಿಲೊಮೀಟರ್ ದೂರದ ಮಾರಕೇಶ್ ನಗರದ ಸೆರೆಮನೆಗೆ ನಮ್ಮನ್ನು ಒಯ್ಯಲಾಯಿತು. ಮುಂದಿನ ದಿನಗಳು ಕಷ್ಟಕರವಾಗಿದ್ದವು. ನಮ್ಮ ಸೆರೆಕೋಣೆಗಳಲ್ಲಿ ಕತ್ತಲೆ ಕವಿದಿದ್ದು, ಅವು ಅಧಿಕ ಜನರಿಂದ ಕಿಕ್ಕಿರಿದಿದ್ದವು. ಸಾಮುದಾಯಿಕ ಪಾಯಿಖಾನೆ, ಅಂದರೆ ನೆಲದಲ್ಲಿದ್ದ ಒಂದು ಗುಂಡಿಯು, ಸದಾ ತುಂಬಿಹೋಗುತ್ತಿತ್ತು. ಮಲಗಲಿಕ್ಕಾಗಿ ಪ್ರತಿಯೊಬ್ಬರಿಗೆ ಒಂದೊಂದು ಕೊಳಕಾದ ಗೋಣಿಚೀಲಗಳು ಕೊಡಲ್ಪಟ್ಟಿದ್ದವು ಮತ್ತು ರಾತ್ರಿಯಲ್ಲಿ ಇಲಿಗಳು ನಮ್ಮ ಮೀನಖಂಡಗಳನ್ನು ಕಚ್ಚುತ್ತಿದ್ದವು. ಆಹಾರವು ದಿನಕ್ಕೆ ಎರಡಾವರ್ತಿ ತುಕ್ಕುಹಿಡಿದ ಟಿನ್ನುಗಳಲ್ಲಿ ಕೊಡಲ್ಪಡುತ್ತಿತ್ತು.
ನಾನು ಫ್ರೆಂಚ್ ಫಾರೀನ್ ಲೀಜನ್ ಸೇನಾಪಡೆಯನ್ನು ಸೇರಿ 5 ವರ್ಷಕಾಲ ಕೆಲಸಮಾಡುವಲ್ಲಿ ನನಗೆ ಬಿಡುಗಡೆಯಾಗುವುದೆಂದು ಒಬ್ಬ ಸೇನಾಧಿಕಾರಿಯು ಹೇಳಿದನು. ನನ್ನ ನಿರಾಕರಣೆಯ ಫಲವಾಗಿ ನನಗೆ ಭಯಂಕರಾವಸ್ಥೆಯೆಂದು ಮಾತ್ರ ವರ್ಣಿಸಸಾಧ್ಯವಿರುವ 24 ತಾಸುಗಳ ಶಿಕ್ಷೆ ಫಲಿಸಿತು. ಹೆಚ್ಚಿನ ಸಮಯವನ್ನು ನಾನು ಪ್ರಾರ್ಥಿಸುವುದರಲ್ಲೇ ಕಳೆದೆ.
ಎಂಟು ದಿನಗಳಾನಂತರ ಸೆರೆಮನೆಯ ಅಧಿಕಾರಿಗಳು ಮಾರ್ಗಾರೀಟಾಳನ್ನು ಭೇಟಿಮಾಡಲು ನನಗೆ ಅನುಮತಿ ಕೊಟ್ಟರು. ಆಕೆ ತುಂಬ ಬಡಕಲಾಗಿದ್ದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆಕೆಯನ್ನು ಉತ್ತೇಜಿಸಲು ನಾನು ನನ್ನಿಂದ ಸಾಧ್ಯವಿರುವುದನ್ನೆಲ್ಲಾ ಮಾಡಿದೆ. ನಮ್ಮನ್ನು ವಿಚಾರಣೆಗೊಳಪಡಿಸಿ, ರೈಲಿನಲ್ಲಿ ಕಾಸಬ್ಲಾಂಕಕ್ಕೆ ಒಯ್ಯಲಾಯಿತು ಮತ್ತು ಅಲ್ಲಿ ಮಾರ್ಗಾರೀಟಾಗೆ ಬಿಡುಗಡೆಯಾಯಿತು. ನನ್ನನ್ನು ಸುಮಾರು 180 ಕಿಲೊಮೀಟರ್‌ಗಳಷ್ಟು ದೂರದಲ್ಲಿದ್ದ ಪಾರ್ಲೀಓಟೇ (ಈಗ ಕನೀಟ್ರ) ಸೆರೆಶಿಬಿರಕ್ಕೆ ಕಳುಹಿಸಲಾಯಿತು. ಮಾರ್ಗಾರೀಟಾಳನ್ನು ಸ್ವಿಟ್ಸರ್ಲೆಂಡಿಗೆ ಹಿಂದಿರುಗಿ ಹೋಗುವಂತೆ ಸ್ವಿಸ್ ರಾಯಭಾರಿ ಹೇಳಿದರೂ, ನಾನಿಲ್ಲದೆ ಹಿಂದೆ ಹೋಗಲು ಅವಳು ನಿಷ್ಠೆಯಿಂದ ನಿರಾಕರಿಸಿದಳು. ನಾನು ಪಾರ್ಲೀಓಟೇಯಲ್ಲಿ ಎರಡು ತಿಂಗಳು ಉಳಿದಿದ್ದಾಗ, ಅವಳು ಪ್ರತಿದಿನ ಕಾಸಬ್ಲಾಂಕದಿಂದ ಬಂದು ನನ್ನನ್ನು ಭೇಟಿಮಾಡಿ, ನನಗೆ ಆಹಾರವನ್ನು ತರುತ್ತಿದ್ದಳು.
ಯೆಹೋವನ ಸಾಕ್ಷಿಗಳು ಒಂದು ವರುಷದ ಹಿಂದೆ ಕ್ರಾಇಟ್ಸ್‌ಟ್ಸೂಗ್ ಗೇಗನ್ ಡಾಸ್ ಕ್ರಿಸ್ಟನ್‌ಟೂಮ್ (ಕ್ರೈಸ್ತತ್ವದ ಎದುರಾಗಿ ಧಾರ್ಮಿಕ ಯುದ್ಧ) ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ನಾಸೀ ಸರಕಾರದೊಂದಿಗೆ ಸಾಕ್ಷಿಗಳಿಗೆ ಯಾವ ಸಂಬಂಧವೂ ಇಲ್ಲವೆಂಬುದರ ಕಡೆಗೆ ಸಾರ್ವಜನಿಕರ ಗಮನ ಸೆಳೆಯುವುದು ಇದರ ಉದ್ದೇಶವಾಗಿತ್ತು. ನಾನು ಸೆರೆಶಿಬಿರದಲ್ಲಿದ್ದಾಗ, ಯೆಹೋವನ ಸಾಕ್ಷಿಗಳ ಬರ್ನ್ ಬ್ರಾಂಚ್ ಆಫೀಸು ಫ್ರೆಂಚ್ ಅಧಿಕಾರಿಗಳಿಗೆ ಪತ್ರ ಬರೆದು, ನಾವು ನಾಸಿಗಳಲ್ಲವೆಂದು ತೋರಿಸಪ್ರಯತ್ನಿಸಲು ಆ ಪುಸ್ತಕದ ಒಂದು ಪ್ರತಿಯನ್ನು ಅದರಲ್ಲಿ ಇಟ್ಟು ಕಳುಹಿಸಿತು. ಮಾರ್ಗಾರೀಟಾ ಸಹ ಪ್ರಶಂಸನೀಯವಾದ ಕೆಲಸವನ್ನು ಮಾಡಿದಳು. ಆಕೆ
ನಾವು ನಿರಪರಾಧಿಗಳೆಂದು ತೋರಿಸಪ್ರಯತ್ನಿಸಲು ಸರಕಾರೀ ಅಧಿಕಾರಿಗಳನ್ನು ಭೇಟಿಮಾಡಿದಳು. ಕೊನೆಗೆ, 1939ರ ಅಂತ್ಯದಲ್ಲಿ ಮೊರಾಕೋ ದೇಶವನ್ನು ಬಿಟ್ಟುಹೋಗಲು ನಮಗೆ ಅನುಮತಿ ಸಿಕ್ಕಿತು.ನಾವು ಪುನಃ ಬ್ರಸಿಲ್‌ಗೆ ಹೊರಟಾದ ಮೇಲೆ ಮಾತ್ರ, ಜರ್ಮನ್ ಸಬ್‌ಮೆರಿನ್‌ಗಳು ಅಟ್ಲಾಂಟಿಕ್ ಸಾಗರದಲ್ಲಿ ಹಡಗುಗಳ ಮೇಲೆ ದಾಳಿಮಾಡತೊಡಗಿವೆಯೆಂದೂ ನಮ್ಮ ಹಡಗಿನ ಮೇಲೆ ಅದರ ಮುಖ್ಯ ಲಕ್ಷ್ಯವಿದೆಯೆಂದೂ ತಿಳಿದುಬಂತು. ನಮ್ಮದು ಸಮೈಕ್ ಎಂಬ ವ್ಯಾಪಾರಿ ಹಡಗಾಗಿದ್ದರೂ ಅದರ ಹಿಂದೂ ಮುಂದೂ ಫಿರಂಗಿಗಳನ್ನು ಇಡಲಾಗಿತ್ತು. ಹಗಲು ಹೊತ್ತಿನಲ್ಲಿ ಕ್ಯಾಪ್ಟನನು ಅಂಕುಡೊಂಕಾಗಿ ಹಡಗನ್ನು ನಡೆಸುತ್ತಾ ಸಿಡಿಗುಂಡುಗಳನ್ನು ಹಾರಿಸುತ್ತಾ ಹೋಗುತ್ತಿದ್ದನು. ರಾತ್ರಿವೇಳೆಯಲ್ಲಿ ಜರ್ಮನರು ನಮ್ಮನ್ನು ಪತ್ತೆಹಚ್ಚದಂತೆ ದೀಪಗಳನ್ನೆಲ್ಲ ಆರಿಸಿಬಿಡುತ್ತಿದ್ದೆವು. ಹೀಗಿದ್ದ ಕಾರಣ, ನಾವು 1940ರ ಫೆಬ್ರವರಿ 6ರಂದು, ಯೂರೋಪನ್ನು ಬಿಟ್ಟು ಐದು ತಿಂಗಳುಗಳು ಕಳೆದ ಬಳಿಕ ಕೊನೆಗೂ ಬ್ರಸಿಲ್‌ನ ಸಾಂಟಸ್‌ಗೆ ಬಂದು ಸೇರಿದಾಗ ನಮಗಾದ ನಮ್ಮೆದಿಯನ್ನು ಹೇಳಲಾಗದು!
ಪುನಃ ಸೆರೆಮನೆಗೆ
ನಮಗೆ ಸಾರಲು ನೇಮಿಸಲ್ಪಟ್ಟ ಪ್ರಥಮ ಪಟ್ಟಣವು ಬ್ರಸಿಲ್‌ನ ದಕ್ಷಿಣ ರಾಜ್ಯವಾದ ರೀಓ ಗ್ರಾಂಡೀ ಡೊಸೂಲ್‌ನ ಮೋಂಟೀನೆಗ್ರೂ ಆಗಿತ್ತು. ನಮ್ಮ ಆಗಮನದ ಕುರಿತು ಚರ್ಚ್ ಅಧಿಕಾರಿಗಳಿಗೆ ಸುದ್ದಿಯನ್ನು ಕೊಡಲಾಗಿತ್ತೆಂದು ತೋರುತ್ತದೆ. ನಾವು ಸಾರಲಾರಂಭಿಸಿದ ಎರಡೇ ತಾಸುಗಳಲ್ಲಿ ಪೊಲೀಸರು ನಮ್ಮನ್ನು ದಸ್ತಗಿರಿ ಮಾಡಿ, ಬೈಬಲ್ ಭಾಷಣಗಳಿದ್ದ ನಮ್ಮ ಫೋನೋಗ್ರಾಫ್ ರೆಕಾರ್ಡ್‌ಗಳ ಸಂಗ್ರಹವನ್ನು, ನಮ್ಮ ಎಲ್ಲ ಸಾಹಿತ್ಯಗಳು ಮತ್ತು ಮೊರಾಕೋ ದೇಶದಲ್ಲಿ ಕೊಂಡುಕೊಂಡಿದ್ದ ಒಂಟೆ ಚರ್ಮದ ನಮ್ಮ ಸೇವಾ ಬ್ಯಾಗ್‌ಗಳನ್ನು ಸಹ ವಶಪಡಿಸಿಕೊಂಡರು. ಪೊಲೀಸ್ ಠಾಣೆಯಲ್ಲಿ ಒಬ್ಬ ಕ್ಯಾಥೊಲಿಕ್ ಪಾದ್ರಿ ಮತ್ತು ಜರ್ಮನ್ ಭಾಷೆಯನ್ನು ಮಾತಾಡುವ ಪ್ರಾಟೆಸ್ಟಂಟ್ ಪಾದ್ರಿಗಳು ನಮಗಾಗಿ ಕಾದಿದ್ದರು. ಪೊಲೀಸ್ ಮುಖ್ಯಾಧಿಕಾರಿಯು ನಮ್ಮಿಂದ ಯಾವುದನ್ನು ವಶಪಡಿಸಿಕೊಂಡಿದ್ದನೊ ಆ ಗ್ರ್ಯಾಮಫೋನಿನಲ್ಲಿ ಸಹೋದರ ರದರ್‌ಫರ್ಡರ ಒಂದು ಭಾಷಣವನ್ನು ನುಡಿಸಿದಾಗ, ಅವರು ಕೇಳಿಸಿಕೊಳ್ಳುತ್ತಿದ್ದರು. ಸಹೋದರ ರದರ್‌ಫರ್ಡ್ ಸ್ವಲ್ಪವೂ ಮುಚ್ಚುಮರೆಯಿಲ್ಲದೆ ಮಾತಾಡುತ್ತಿದ್ದರು! ಅವರು ವ್ಯಾಟಿಕನ್‌ನ ವಿಷಯದಲ್ಲಿ ಮಾತಾಡುವ ಭಾಗಕ್ಕೆ ಬಂದಾಗ, ಆ ಕ್ಯಾಥೊಲಿಕ್ ಪಾದ್ರಿಯ ಮುಖವು ಕೆಂಪಗಾಗಿ, ಅವನು ದಡಬಡಿಸಿ ಅಲ್ಲಿಂದ ಹೊರಟೇಬಿಟ್ಟನು.
ಸಾಂಟ ಮರೀಯದ ಬಿಷಪರ ವಿನಂತಿಯ ಮೇರೆಗೆ ಪೊಲೀಸರು ನಮ್ಮನ್ನು ಆ ರಾಜ್ಯದ ರಾಜಧಾನಿ ಪೋರ್ಟೂಅಲೆಗ್ರಕ್ಕೆ ವರ್ಗಾಯಿಸಿದರು. ಮಾರ್ಗಾರೀಟಾಗೆ ಬೇಗನೆ ಬಿಡುಗಡೆಯಾಗಲಾಗಿ ಆಕೆ ಸ್ವಿಸ್ ದೂತಾವಾಸದ ಕಚೇರಿಯ ಸಹಾಯವನ್ನು ಕೇಳಿದಳು. ಆ ಅಧಿಕಾರಿಯು ಆಕೆಗೆ ಸ್ವಿಟ್ಸರ್ಲೆಂಡಿಗೆ ಹಿಂದಿರುಗುವಂತೆ ಸೂಚಿಸಲಾಗಿ, ನನ್ನನ್ನು ಬಿಟ್ಟುಹೋಗಲು ಆಕೆ ಪುನಃ ನಿರಾಕರಿಸಿದಳು. ಮಾರ್ಗಾರೀಟಾ ಸದಾ ತುಂಬ ನಿಷ್ಠೆಯ ಸಂಗಾತಿಯಾಗಿದ್ದಳು. ಮೂವತ್ತು ದಿನಗಳ ಬಳಿಕ ನನ್ನ ವಿಚಾರಣೆ ನಡೆಸಿ ನನ್ನನ್ನು ಬಿಡುಗಡೆಮಾಡಲಾಯಿತು. ಪೊಲೀಸರು ನಮ್ಮ ಮುಂದೆ ಈ ಆಯ್ಕೆಯನ್ನಿಟ್ಟರು: ಒಂದೇ ಹತ್ತು ದಿನಗಳೊಳಗೆ ರಾಜ್ಯವನ್ನು ಬಿಟ್ಟುಹೋಗಿ, ಇಲ್ಲವೆ “ಪರಿಣಾಮಗಳನ್ನು ಅನುಭವಿಸಿರಿ.” ಮುಖ್ಯಕಾರ್ಯಾಲಯದ ಸೂಚನೆಯ ಮೇರೆಗೆ ನಾವು ಆ ಸ್ಥಳವನ್ನು ಬಿಟ್ಟು ರೀಯೋ ಡೇ ಸನೆರೋ ನಗರಕ್ಕೆ ಹೊರಟೆವು.
“ದಯವಿಟ್ಟು ಈ ಕಾರ್ಡನ್ನು ಓದಿ”
ಬ್ರಸಿಲ್‌ನಲ್ಲಿ ಸಾರುವ ಚಟುವಟಿಕೆಗಾಗಿ ಬಂದ ನಮಗೆ ಇಂತಹ ಅಹಿತಕರ ಪರಿಚಯಿಸುವಿಕೆ ಆಯಿತಾದರೂ ನಾವೆಷ್ಟು ಸಂತೋಷಪಟ್ಟೆವು! ಹೇಗೂ ನಾವು ಇನ್ನೂ ಬದುಕಿದ್ದೆವು, ನಮ್ಮ ಬ್ಯಾಗುಗಳು ಪುನಃ ಸಾಹಿತ್ಯದಿಂದ ತುಂಬಿದ್ದವು ಮತ್ತು ಸಾರಲು ಇಡೀ ರೀಯೋ ಡೇ ಸನೆರೋ ನಗರ ನಮಗಿತ್ತು. ಆದರೆ ಪೋರ್ಚುಗೀಸ್ ಭಾಷೆಯ ಸೀಮಿತ ಜ್ಞಾನದ ಕಾರಣ ನಾವು ಸಾರುವುದಾದರೂ ಹೇಗೆ? ಟೆಸ್ಟಿಮನಿ ಕಾರ್ಡ್ ಎಂಬ ಸಾಕ್ಷಿನೀಡುವ ಕಾರ್ಡಿನ ಸಹಾಯದಿಂದಲೇ. “ಪೋರ್ ಫಾವೋರ್ ಲೇಯ ಎಸ್ಟೆ ಕಾರ್ಟಾವೋ” (“ದಯವಿಟ್ಟು ಈ ಕಾರ್ಡನ್ನು ಓದಿ”) ಎಂಬುದು ಸಾರುವ ಕೆಲಸದಲ್ಲಿ ನಾವು ಕಲಿತ ಆರಂಭದ ಪೋರ್ಚುಗೀಸ್ ಅಭಿವ್ಯಕ್ತಿಯಾಗಿತ್ತು. ಮತ್ತು ಆ ಕಾರ್ಡ್ ಎಷ್ಟೊಂದು ಕಾರ್ಯಸಾಧಕವಾಗಿತ್ತು! ಒಂದೇ ಒಂದು ತಿಂಗಳಲ್ಲಿ ನಾವು 1,000ಕ್ಕೂ ಹೆಚ್ಚು ಪುಸ್ತಕಗಳನ್ನು ಹಂಚಿದೆವು. ನಮ್ಮ ಬೈಬಲ್ ಸಾಹಿತ್ಯಗಳನ್ನು ಸ್ವೀಕರಿಸಿದ್ದ ಅನೇಕರು ಆ ಬಳಿಕ ಸತ್ಯವನ್ನು ಅಂಗೀಕರಿಸಿದರು. ಸತ್ಯ ಸಂಗತಿ ಏನೆಂದರೆ, ನಾವು ಎಂದಾದರೂ ಮಾಡಸಾಧ್ಯವಿದ್ದುದಕ್ಕಿಂತ ಎಷ್ಟೋ ಹೆಚ್ಚು ಪರಿಣಾಮಕಾರಿಯಾದ ಸಾಕ್ಷಿಯನ್ನು ನಮ್ಮ ಪ್ರಕಾಶನಗಳು ಕೊಟ್ಟವು. ನಮ್ಮ ಪ್ರಕಾಶನಗಳನ್ನು ಆಸಕ್ತರ ಕೈಗೆ ತಲಪಿಸುವುದರ ಮಹತ್ವವನ್ನು ಇದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಸಿತು.
ಆ ಸಮಯದಲ್ಲಿ ರೀಯೋ ಡೇ ಸನೆರೋ ಬ್ರಸಿಲ್‌ನ ರಾಜಧಾನಿಯಾಗಿತ್ತು ಮತ್ತು ವಿಶೇಷವಾಗಿ ಸರಕಾರೀ ಕಟ್ಟಡಗಳಲ್ಲಿ ನಮ್ಮ ಸಂದೇಶವು ಒಳ್ಳೆಯದಾಗಿ ಅಂಗೀಕರಿಸಲ್ಪಟ್ಟಿತು. ನನಗೆ ಹಣಕಾಸಿನ ಸಚಿವರಿಗೆ ಮತ್ತು ಸೇನಾಪಡೆಗಳ ಮಂತ್ರಿಗಳಿಗೆ ವೈಯಕ್ತಿಕವಾಗಿ ಸಾಕ್ಷಿನೀಡುವ ಸಂದರ್ಭವಿತ್ತು. ಈ ಸಂದರ್ಭಗಳಲ್ಲಿ ಯೆಹೋವನ ಆತ್ಮದ ಕಾರ್ಯನಡಿಸುವಿಕೆಯ ಸಾಕ್ಷ್ಯವನ್ನು ನಾನು ಸ್ಪಷ್ಟವಾಗಿ ಕಂಡೆ.
ನಾನೊಮ್ಮೆ ರೀಯೋ ನಗರದ ಮಧ್ಯದಲ್ಲಿರುವ ಚೌಕವೊಂದರಲ್ಲಿ ಸಾರುತ್ತಿದ್ದಾಗ, ಉಚ್ಚ ನ್ಯಾಯಾಲಯವನ್ನು ಪ್ರವೇಶಿಸಿದೆ. ನಾನು ಹೇಗೋ, ಒಂದು ಶವಸಂಸ್ಕಾರ ನಡೆಯುತ್ತಿರುವಂತೆ ಕಂಡುಬಂದ, ಕಪ್ಪು ವಸ್ತ್ರಧಾರಿ ಜನರಿದ್ದ ಕೋಣೆಯೊಳಗೆ ಹೋದೆ. ನಾನು ಅಲ್ಲಿ ಗೌರವಾನ್ವಿತನೋಪಾದಿ ಕಂಡುಬಂದ ಮನುಷ್ಯನ ಬಳಿಗೆ ಹೋಗಿ ನನ್ನ ಟೆಸ್ಟಿಮನಿ ಕಾರ್ಡನ್ನು ಕೊಟ್ಟೆ. ಅದು ಶವಸಂಸ್ಕಾರವಾಗಿರಲಿಲ್ಲ. ವಾಸ್ತವದಲ್ಲಿ, ನಾನು ಕೋರ್ಟ್ ಕೇಸ್ ನಡೆಯುತ್ತಿರುವಾಗ ಮಧ್ಯೆ ಪ್ರವೇಶಿಸಿದ್ದೆ. ಮತ್ತು ನಾನು ಮಾತಾಡುತ್ತಿದ್ದದ್ದು ನ್ಯಾಯಾಧೀಶರೊಂದಿಗೆ. ಅವರು ನಗುತ್ತಾ, ನನ್ನ ಮೇಲೆ ಕ್ರಮ ಕೈಕೊಳ್ಳಬಾರದೆಂದು ಪಹರೆಯವರಿಗೆ ಸನ್ನೆ ಮಾಡಿದರು. ಅವರು ವಿನಯಭಾವದಿಂದ ಚಿಲ್‌ಡ್ರನ್ (ಮಕ್ಕಳು) * ಎಂಬ ಪುಸ್ತಕವನ್ನು ಪಡೆದುಕೊಂಡು, ಕಾಣಿಕೆಯನ್ನು ನೀಡಿದರು. ನಾನು ಹಿಂದಿರುಗಿ ಹೋಗುತ್ತಿದ್ದಾಗ, ಪಹರೆಯವರಲ್ಲಿ ಒಬ್ಬನು ಬಾಗಿಲ ಮೇಲೆ ಎದ್ದುಕಾಣುವಂತಿದ್ದ ಒಂದು ನೋಟೀಸನ್ನು ನನಗೆ ತೋರಿಸಿದನು: ಪ್ರೋಬೀಡ ಆ ಎಂಟ್ರಾಡ ಡ ಪೆಸೋಆಸ್ ಎಸ್ಟ್ರಾನ್ಯಾಸ್ (ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ).
ಫಲದಾಯಕವಾದ ಇನ್ನೊಂದು ಸ್ಥಳವು ಅಲ್ಲಿಯ ಬಂದರಾಗಿತ್ತು. ಒಂದು ಸಂದರ್ಭದಲ್ಲಿ, ಸಮುದ್ರ ಪ್ರಯಾಣವನ್ನು ಮುಂದುವರಿಸುವ ಮೊದಲು, ನಮ್ಮ ಸಾಹಿತ್ಯಗಳನ್ನು ಪಡೆದುಕೊಂಡಂಥ ಒಬ್ಬ ನಾವಿಕನನ್ನು ನಾನು ಭೇಟಿಯಾದೆ. ತರುವಾಯ ನನಗೆ ಅವನ ಭೇಟಿಯಾದದ್ದು ಒಂದು ಸಮ್ಮೇಳನದಲ್ಲೇ. ಅವನ ಇಡೀ ಕುಟುಂಬ ಸತ್ಯವನ್ನು ಸ್ವೀಕರಿಸಿತ್ತು ಮತ್ತು ಅವನೂ ಒಳ್ಳೆಯ ಪ್ರಗತಿಯನ್ನು ಮಾಡುತ್ತಿದ್ದನು. ಇದು ನಮ್ಮನ್ನು ತುಂಬ ಹರ್ಷಗೊಳಿಸಿತು.
ಆದರೂ ಎಲ್ಲವೂ ಸುಗಮವಾಗಿ ಸಾಗಲಿಲ್ಲ. ನಮ್ಮ ಆರು ತಿಂಗಳ ವೀಸಾ ಕೊನೆಗೊಳ್ಳಲಾಗಿ ನಮಗೆ ದೇಶದಿಂದ ಹೊರಗೆ ಕಳುಹಿಸಲ್ಪಡುವ ಸಮಸ್ಯೆ ಬಂತು. ನಾವು ಇದರ ವಿಷಯದಲ್ಲಿ ಮುಖ್ಯಕಾರ್ಯಾಲಯಕ್ಕೆ ಬರೆಯಲಾಗಿ, ನಮಗೆ ಸಹೋದರ ರದರ್‌ಫರ್ಡರಿಂದ ಪ್ರೀತಿಪೂರ್ವಕವಾದ ಪತ್ರವೊಂದು ಬಂತು. ನಾವು ಪಟ್ಟುಹಿಡಿಯುತ್ತಾ ಇರುವಂತೆ ಅದು ನಮ್ಮನ್ನು ಪ್ರೋತ್ಸಾಹಿಸಿ, ನಾವು ಹೇಗೆ ಮುಂದುವರಿಯಬೇಕೆಂಬ ಸೂಚನೆಗಳನ್ನು ಕೊಟ್ಟಿತು. ನಮ್ಮ ಮನಸ್ಸು ಬ್ರಸಿಲ್‌ನಲ್ಲಿ ಉಳಿಯುವುದೇ ಆಗಿತ್ತು. ಮತ್ತು ಒಬ್ಬ ವಕೀಲನ ನೆರವಿನಿಂದ, 1945ರಲ್ಲಿ ನಮಗೆ ಕಾಯಂ ವೀಸಾ ದೊರೆಯಿತು.
ದೀರ್ಘಾವಧಿಯ ನೇಮಕ
ಆದರೆ ಇದಕ್ಕೆ ಮೊದಲಾಗಿ, 1941ರಲ್ಲಿ ನಮ್ಮ ಮಗ ಜಾನತನ್, 1943ರಲ್ಲಿ ರೂತ್ ಮತ್ತು 1945ರಲ್ಲಿ ಎಸ್ತರ್ ನಮಗೆ ಹುಟ್ಟಿದ್ದರು. ಬೆಳೆಯುತ್ತಿದ್ದ ನಮ್ಮ ಕುಟುಂಬವನ್ನು ಪರಾಮರಿಸಲಿಕ್ಕಾಗಿ ನಾನು ಐಹಿಕ ಕೆಲಸವನ್ನು ಮಾಡಬೇಕಾಯಿತು. ಮಾರ್ಗಾರೀಟಾ ಮೂರನೆಯ ಮಗುವನ್ನು ಹೆರುವ ತನಕ ಪೂರ್ಣ ಸಮಯದ ಸಾರುವ ಕೆಲಸದಲ್ಲಿ ಮುಂದುವರಿದಳು.
ನಾವು ಆರಂಭದಿಂದಲೂ, ನಗರದ ಚೌಕಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಮತ್ತು ವ್ಯಾಪಾರ ಸ್ಥಳಗಳಲ್ಲಿ ಒಂದು ಕುಟುಂಬವಾಗಿ ಸಾರುವ ಕಾರ್ಯದಲ್ಲಿ ಜೊತೆಗೂಡಿ ಕೆಲಸ ಮಾಡಿದೆವು. ಶನಿವಾರ ರಾತ್ರಿಗಳಂದು ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು
ಕುಟುಂಬವಾಗಿ ಹಂಚಿದೆವು. ಮತ್ತು ಇವು ವಿಶೇಷವಾಗಿ ಸಂತೋಷಕರ ಸಂದರ್ಭಗಳಾಗಿದ್ದವು.ಮನೆಯಲ್ಲಿ ಮಕ್ಕಳಲ್ಲಿ ಪ್ರತಿಯೊಬ್ಬರಿಗೆ ಮಾಡಲು ದಿನನಿತ್ಯದ ಕೆಲಸಗಳಿದ್ದವು. ಜಾನತನ್ ಸ್ಟೋವನ್ನೂ ಅಡುಗೆಮನೆಯನ್ನೂ ಶುಚಿಯಾಗಿಡಬೇಕಿತ್ತು. ಹೆಣ್ಣುಮಕ್ಕಳು ಫ್ರಿಜ್ ಶುಚಿಮಾಡಿ, ಅಂಗಳವನ್ನು ಗುಡಿಸಿ, ನಮ್ಮ ಪಾದರಕ್ಷೆಗಳಿಗೆ ಪಾಲಿಶ್ ಹಾಕಬೇಕಿತ್ತು. ಇದು ಅವರಿಗೆ ಸಂಘಟನೆಯನ್ನು ಕಲಿಸಿ, ಯಾವುದೇ ಕಾರ್ಯವನ್ನು ಮಾಡಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿತು. ಇಂದು ನಮ್ಮ ಮಕ್ಕಳು ಶ್ರಮಪಟ್ಟು ಕೆಲಸ ಮಾಡುವವರಾಗಿದ್ದಾರೆ. ಅವರು ತಮ್ಮ ಮನೆಗಳನ್ನೂ ಸ್ವತ್ತುಗಳನ್ನೂ ಒಳ್ಳೆಯದಾಗಿ ನೋಡಿಕೊಳ್ಳುವವರಾಗಿದ್ದಾರೆ ಮತ್ತು ಇದು ನನಗೂ ಮಾರ್ಗಾರೀಟಾಳಿಗೂ ತುಂಬ ಸಂತೋಷವನ್ನು ತರುತ್ತದೆ.
ಮಕ್ಕಳು ಕೂಟಗಳಲ್ಲಿ ಚೆನ್ನಾಗಿ ವರ್ತಿಸಬೇಕೆಂಬುದು ನಮ್ಮ ಬಯಕೆಯಾಗಿತ್ತು. ಕಾರ್ಯಕ್ರಮಕ್ಕೆ ಮೊದಲು ಅವರು ನೀರು ಕುಡಿದು ಶೌಚಾಲಯಕ್ಕೆ ಹೋಗಿ ಬರುತ್ತಿದ್ದರು. ಕೂಟದ ಸಮಯದಲ್ಲಿ ಜಾನತನ್ ನನ್ನ ಎಡಕ್ಕೆ, ರೂತ್ ನನ್ನ ಬಲಕ್ಕೆ, ಬಳಿಕ ಮಾರ್ಗಾರೀಟಾ ಮತ್ತು ಆಕೆಯ ಬಲಕ್ಕೆ ಎಸ್ತರ್ ಕುಳಿತುಕೊಳ್ಳುತ್ತಿದ್ದರು. ಇದು ಅವರು ಬಾಲ್ಯದಿಂದಲೂ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಆತ್ಮಿಕ ಆಹಾರವನ್ನು ಸೇವಿಸಲು ಅವರಿಗೆ ಸಹಾಯಮಾಡಿತು.
ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸಿದ್ದಾನೆ. ನಮ್ಮ ಮಕ್ಕಳೆಲ್ಲರೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದು, ಸಾರುವ ಕೆಲಸದಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದಾರೆ. ಜಾನತನ್ ಈಗ ರೀಯೋ ಡೇ ಸನೆರೋ ನಗರದ ನೋವೂ ಮೇಅರ್ ಸಭೆಯಲ್ಲಿ ಹಿರಿಯನಾಗಿ ಸೇವೆ ಸಲ್ಲಿಸುತ್ತಾನೆ.
ನಮ್ಮ ಮೂವರೂ ಮಕ್ಕಳು 1970ರೊಳಗೆ ಮದುವೆಯಾಗಿ ಮನೆಬಿಟ್ಟು ಹೋಗಿರಲಾಗಿ, ಮಾರ್ಗಾರೀಟಾ ಮತ್ತು ನಾನು ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡಲು ನಿಶ್ಚಯಿಸಿದೆವು. ನಮ್ಮ ಪ್ರಥಮ ಸ್ಥಳವು ಮೀನಸ್ ಸರೈಸ್ ರಾಜ್ಯದ ಪೋಸೂಸ್ ಡೀ ಕಾಲ್ಡಾಸ್ ಆಗಿತ್ತು. ಅಲ್ಲಿ ಆಗ 19 ಮಂದಿ ರಾಜ್ಯ ಪ್ರಚಾರಕರ ಒಂದು ಚಿಕ್ಕ ಗುಂಪು ಇತ್ತು. ಕೂಟದ ಸ್ಥಳವನ್ನು ಮೊದಲು ನೋಡಿದಾಗ ನನಗೆ ವ್ಯಥೆಯಾಯಿತು. ಕಿಟಿಕಿಗಳಿಲ್ಲದ ನೆಲಮಾಳಿಗೆ ಅದಾಗಿತ್ತು. ದುರಸ್ತುಗೊಳಿಸುವಿಕೆ ಅತ್ಯಗತ್ಯವಾಗಿತ್ತು. ನಾವು ಆ ಕೂಡಲೇ ಹೆಚ್ಚು ಅನುಕೂಲವಾದ ರಾಜ್ಯ ಸಭಾಗೃಹಕ್ಕಾಗಿ ಹುಡುಕತೊಡಗಿದೆವು ಮತ್ತು ಬೇಗನೆ ಅತ್ಯುತ್ತಮವಾದ ಸ್ಥಳದಲ್ಲಿದ್ದ ಒಂದು ಆಕರ್ಷಕ ಕಟ್ಟಡ ನಮಗೆ ಸಿಕ್ಕಿತು. ಇದು ಎಂತಹ ವ್ಯತ್ಯಾಸವನ್ನು ಮಾಡಿತು! ನಾಲ್ಕೂವರೆ ವರುಷಗಳಲ್ಲಿ, ಪ್ರಚಾರಕರ ಸಂಖ್ಯೆ 155ಕ್ಕೆ ಏರಿತು. ನಾವು 1989ರಲ್ಲಿ ರೀಯೋ ಡೇ ಸನೆರೋ ರಾಜ್ಯದ ಆರಾರೂಆಮಾಕ್ಕೆ ಹೋಗಿ ಅಲ್ಲಿ ಒಂಬತ್ತು ವರುಷ ಸೇವೆಮಾಡಿದೆವು. ಆ ಸಮಯದಲ್ಲಿ ಎರಡು ಹೊಸ ಸಭೆಗಳು ಆರಂಭವಾಗುವುದನ್ನು ನಾವು ನೋಡಿದೆವು.
ನಮ್ಮ ನೇಮಕಕ್ಕೆ ಅಂಟಿಕೊಂಡದ್ದಕ್ಕಾಗಿ ಬಹುಮಾನಿತರು
ಇಸವಿ 1998ರಲ್ಲಿ, ಆರೋಗ್ಯ ಸಮಸ್ಯೆಗಳು ಮತ್ತು ನಮ್ಮ ಮಕ್ಕಳ ಹತ್ತಿರದಲ್ಲಿರಬೇಕೆಂಬ ಹಂಬಲವು, ನಾವು ರೀಯೋ ಡೇ ಸನೆರೋ ರಾಜ್ಯದ ಸಾವ್ ಗೋಸಾಲೂನಲ್ಲಿ ಮನೆಮಾಡುವಂತೆ ನಡೆಸಿತು. ನಾನಿನ್ನೂ ಅದೇ ಸ್ಥಳದಲ್ಲಿ ಸಭಾ ಹಿರಿಯನಾಗಿ ಸೇವೆಮಾಡುತ್ತಿದ್ದೇನೆ. ಸಾರುವ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸಲು ನಾವು ಸಾಧ್ಯವಿರುವುದನ್ನೆಲ್ಲ ಮಾಡುತ್ತೇವೆ. ಹತ್ತಿರದಲ್ಲಿರುವ ಸೂಪರ್‌ಮಾರ್ಕೆಟ್‌ನಲ್ಲಿ ಜನರಿಗೆ ಸಾಕ್ಷಿ ನೀಡುವುದರಲ್ಲಿ ಮಾರ್ಗಾರೀಟಾ ಆನಂದಿಸುತ್ತಾಳೆ. ನಮ್ಮ ಸಭೆಯು ದಯಾಪೂರ್ವಕವಾಗಿ ನಮ್ಮ ಮನೆಯ ಹತ್ತಿರ ನಮಗೆ ಸ್ವಲ್ಪ ಟೆರಿಟೊರಿಯನ್ನು ಬದಿಗಿರಿಸಿದೆ. ಇದರಿಂದಾಗಿ, ನಮ್ಮ ಆರೋಗ್ಯ ಅನುಮತಿಸುವಾಗೆಲ್ಲ ಸಾರಲು ನಮಗೆ ಸುಲಭವಾಗುತ್ತದೆ.
ನಾನು ಮತ್ತು ಮಾರ್ಗಾರೀಟಾ ಯೆಹೋವನ ಸಮರ್ಪಿತ ಸೇವಕರಾಗಿ ಇಂದಿಗೆ 60ಕ್ಕೂ ಹೆಚ್ಚು ವರುಷಗಳಾಗಿವೆ. ‘ಸರಕಾರಗಳಾಗಲಿ, ಈಗಿನ ಮತ್ತು ಮುಂದಣ ವಿಷಯಗಳಾಗಲಿ, ಮಹತ್ವಗಳಾಗಲಿ, ಮೇಲಣ ಅಥವಾ ಕೆಳಗಣ ಲೋಕವಾಗಲಿ, ಇನ್ನಾವ ಸೃಷ್ಟಿಯೇ ಆಗಲಿ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದು’ ಎಂಬುದನ್ನು ನಾವು ವ್ಯಕ್ತಿಪರವಾಗಿ ಅನುಭವಿಸಿದ್ದೇವೆ. (ರೋಮಾಪುರ 8:38, 39, NW) ಮತ್ತು ಯಾರಿಗೆ ದೇವರ ಸುಂದರ ಸೃಷ್ಟಿಯಿಂದ ಸುತ್ತುವರಿಯಲ್ಪಟ್ಟ ಒಂದು ಪರಿಪೂರ್ಣ ಭೂಮಿಯಲ್ಲಿ ನಿತ್ಯಜೀವದ ಅದ್ಭುತಕರವಾದ ನಿರೀಕ್ಷೆಯಿದೆಯೊ, ಆ “ಬೇರೆ ಕುರಿಗಳ” ಒಟ್ಟುಗೂಡಿಸುವಿಕೆಯನ್ನು ನೋಡುವುದು ಎಷ್ಟು ಆಹ್ಲಾದಕರವಾದ ವಿಷಯವಾಗಿದೆ! (ಯೋಹಾನ 10:16) ನಾವು 1940ರಲ್ಲಿ ರೀಯೋ ಡೇ ಸನೆರೋಗೆ ಬಂದಾಗ ಅಲ್ಲಿ 28 ಮಂದಿ ಪ್ರಚಾರಕರ ಒಂದೇ ಒಂದು ಸಭೆ ಇತ್ತು. ಆದರೆ ಇಂದು ಅಲ್ಲಿ ಸುಮಾರು 250 ಸಭೆಗಳೂ 20,000ಕ್ಕಿಂತಲೂ ಹೆಚ್ಚು ಮಂದಿ ರಾಜ್ಯ ಪ್ರಚಾರಕರೂ ಇದ್ದಾರೆ.
ನಾವು ಯೂರೋಪಿನಲ್ಲಿದ್ದ ನಮ್ಮ ಕುಟುಂಬಗಳಿಗೆ ಹಿಂದೆ ಹೋಗಬಹುದಾಗಿದ್ದ ಸಂದರ್ಭಗಳಿದ್ದವು. ಆದರೆ ಯೆಹೋವನಿಂದ ನಮಗೆ ಸಿಕ್ಕಿದ ನೇಮಕವು ಬ್ರಸಿಲ್‌ನಲ್ಲೇ ಆಗಿತ್ತು. ನಾವು ಅದಕ್ಕೆ ಅಂಟಿಕೊಂಡಿರುವುದಕ್ಕೆ ಎಷ್ಟು ಸಂತೋಷಿತರು!
[ಪಾದಟಿಪ್ಪಣಿಗಳು]
^ ಯೆಹೋವನ ಸಾಕ್ಷಿಗಳ ಪ್ರಕಾಶನ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.
^ ಯೆಹೋವನ ಸಾಕ್ಷಿಗಳ ಪ್ರಕಾಶನ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.
^ ಯೆಹೋವನ ಸಾಕ್ಷಿಗಳ ಪ್ರಕಾಶನ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.
[ಪುಟ 21ರಲ್ಲಿರುವ ಚಿತ್ರ]
ಸ್ವಿಟ್ಸರ್ಲೆಂಡಿನ ಷ್ಟೆಫೀಸ್‌ಬರ್ಗಿನ ಕಿಂಗ್‌ಡಮ್ ಫಾರ್ಮ್‌ನಲ್ಲಿ, 1930ಗಳ ಕೊನೆಯಲ್ಲಿ (ನಾನು ತೀರ ಎಡಬದಿಯಲ್ಲಿದ್ದೇನೆ)
[ಪುಟ 23ರಲ್ಲಿರುವ ಚಿತ್ರ]
ನಮ್ಮ ಮದುವೆಗೆ ತುಸು ಮುಂಚೆ, 1939
[ಪುಟ 23ರಲ್ಲಿರುವ ಚಿತ್ರ]
ಕಾಸಬ್ಲಾಂಕದಲ್ಲಿ, 1940ಗಳಲ್ಲಿ
[ಪುಟ 23ರಲ್ಲಿರುವ ಚಿತ್ರ]
ಕುಟುಂಬವಾಗಿ ಸಾರುವುದು
[ಪುಟ 24ರಲ್ಲಿರುವ ಚಿತ್ರ]
ಇಂದು ಕ್ರಮವಾಗಿ ಶುಶ್ರೂಷೆಯಲ್ಲಿ ಭಾಗವಹಿಸುವುದು