“ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯೆ ಯೋಗ್ಯವಾಗಿರಲಿ”
“ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯೆ ಯೋಗ್ಯವಾಗಿರಲಿ”
“ಎಲ್ಲ ಬಗೆಯ ಜನರನ್ನು ಸನ್ಮಾನಿಸಿರಿ, ಸಹೋದರರ ಸಂಪೂರ್ಣ ಸಂಘವನ್ನು ಪ್ರೀತಿಸುವವರಾಗಿರಿ.”—1 ಪೇತ್ರ 2:17, NW.
1, 2. (ಎ) ಯೆಹೋವನ ಸಾಕ್ಷಿಗಳ ಬಗ್ಗೆ ಪತ್ರಕಾರನೊಬ್ಬನು ಏನು ಹೇಳಿದನು? (ಬಿ) ಯೆಹೋವನ ಸಾಕ್ಷಿಗಳು ನಡತೆಯ ಉನ್ನತ ಮಟ್ಟಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದೇಕೆ?
ಹಲವಾರು ವರುಷಗಳ ಹಿಂದೆ, ಅಮೆರಿಕದ ಟೆಕ್ಸಸ್ನ ಆ್ಯಮರಿಲೊ ನಗರದ ಪತ್ರಕಾರನೊಬ್ಬನು ಆ ಪ್ರದೇಶದ ಅನೇಕ ಚರ್ಚುಗಳನ್ನು ಭೇಟಿಮಾಡಿ, ಅವನ ತನಿಖೆಯಿಂದ ಕಂಡುಹಿಡಿದ ಸಂಗತಿಗಳ ವರದಿಯನ್ನು ಕೊಟ್ಟನು. ಒಂದು ಗುಂಪು ಮಾತ್ರ ಅವನ ಮನಸ್ಸಿನ ಮೇಲೆ ವಿಶೇಷ ಪ್ರಭಾವವನ್ನು ಬೀರಿತ್ತು. ಅವನು ಹೇಳಿದ್ದು: “ನಾನು ಮೂರು ವರುಷ ಕಾಲ ಆ್ಯಮರಿಲೊ ಸಿವಿಕ್ ಸೆಂಟರಿನಲ್ಲಿ ನಡೆದ ಯೆಹೋವನ ಸಾಕ್ಷಿಗಳ ವಾರ್ಷಿಕ ಅಧಿವೇಶನಗಳಿಗೆ ಹಾಜರಾದೆ. ನಾನು ಅವರೊಂದಿಗೆ ಬೆರೆತಾಗ, ಅಲ್ಲಿ ಸಿಗರೇಟನ್ನು ಹೊತ್ತಿಸಿಕೊಂಡ, ಬಿಯರ್ ಮದ್ಯದ ಡಬ್ಬಿಯನ್ನು ತೆರೆದ ಅಥವಾ ಬಂಡುಮಾತುಗಳನ್ನಾಡಿದ ಒಬ್ಬನನ್ನೂ ಒಮ್ಮೆಯೂ ನೋಡಲಿಲ್ಲ. ನಾನು ಇದುವರೆಗೆ ಭೇಟಿಯಾಗಿರುವವರಲ್ಲಿ ಅವರು ಅತಿ ನಿರ್ಮಲರೂ, ಅತಿ ಸಭ್ಯ ನಡತೆಯವರೂ, ಮರ್ಯಾದೆಯ ಉಡುಪುಟ್ಟವರೂ, ಹಿತಕರ ಸ್ವಭಾವದ ಜನರೂ ಆಗಿದ್ದರು.” ಯೆಹೋವನ ಸಾಕ್ಷಿಗಳ ಕುರಿತು ಈ ರೀತಿಯ ಹೇಳಿಕೆಗಳು ಅನೇಕ ಬಾರಿ ಮುದ್ರಿತವಾಗಿವೆ. ಸಾಕ್ಷಿಗಳ ನಂಬಿಕೆಯಲ್ಲಿ ಪಾಲಿಗರಾಗದಿರುವ ಜನರು ಅವರನ್ನು ಆಗಾಗ್ಗೆ ಕೊಂಡಾಡುವುದೇಕೆ?
2 ಸಾಮಾನ್ಯವಾಗಿ ದೇವಜನರ ಸುನಡತೆಗಾಗಿ ಅವರನ್ನು ಕೊಂಡಾಡಲಾಗುತ್ತದೆ. ನಡತೆಯ ಮಟ್ಟಗಳು ಕೆಳಮಟ್ಟಕ್ಕೆ ಇಳಿಯುತ್ತಿವೆಯಾದರೂ, ಯೆಹೋವನ ಸಾಕ್ಷಿಗಳು ನಡತೆಯ ಉನ್ನತ ಮಟ್ಟವನ್ನು ಒಂದು ಕರ್ತವ್ಯದೋಪಾದಿ, ಅವರ ಆರಾಧನೆಯ ಒಂದು ಭಾಗವಾಗಿ ವೀಕ್ಷಿಸುತ್ತಾರೆ. ಅವರ ಕ್ರಿಯೆಗಳು ಯೆಹೋವನ ಕುರಿತಾಗಿ, ಅವರ ಕ್ರೈಸ್ತ ಸಹೋದರರ ಕುರಿತಾಗಿ ಜನರ ಮನಸ್ಸುಗಳಲ್ಲಿ ಸದಭಿಪ್ರಾಯವನ್ನು ಮೂಡಿಸುತ್ತವೆಂದೂ, ಅವರ ಸುನಡತೆಯು ಅವರು ಸಾರುವ ಸತ್ಯವನ್ನು ಶಿಫಾರಸ್ಸು ಮಾಡುತ್ತದೆಂದೂ ಅವರಿಗೆ ತಿಳಿದಿದೆ. (ಯೋಹಾನ 15:8; ತೀತ 2:7, 8) ಆದಕಾರಣ, ನಾವು ನಮ್ಮ ಸುನಡತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ಹೀಗೆ ಯೆಹೋವನ ಮತ್ತು ಆತನ ಸಾಕ್ಷಿಗಳ ಸತ್ಕೀರ್ತಿಯನ್ನು ಹೇಗೆ ಎತ್ತಿಹಿಡಿಯುತ್ತಾ ಹೋಗಬಹುದು ಹಾಗೂ ಹೀಗೆ ಮಾಡುವುದರಿಂದ ನಾವೇ ಹೇಗೆ ಪ್ರಯೋಜನ ಪಡೆದುಕೊಳ್ಳುತ್ತೇವೆ ಎಂಬುದನ್ನು ಈಗ ನೋಡೋಣ.
ಕ್ರೈಸ್ತ ಕುಟುಂಬ
3. ಕ್ರೈಸ್ತ ಕುಟುಂಬಗಳನ್ನು ಯಾವುದರಿಂದ ಕಾಪಾಡುವ ಅಗತ್ಯವಿದೆ?
3 ಕುಟುಂಬದೊಳಗಿನ ನಮ್ಮ ನಡತೆಯ ಕುರಿತು ಪರ್ಯಾಲೋಚಿಸಿರಿ. ಗೇರ್ಹಾರ್ಟ್ ಬೆಸೀರ್ ಮತ್ತು ಎರ್ವೀನ್ ಕೆ. ಶೋಯಿಕ್ ಬರೆದ ಡೀ ನಾಯ್ನ್ ಇಂಕ್ವೀಸೀಟೋರ್ನ್: ರೇಲೀಜಾನ್ಸ್ ಫ್ರೈಹೈಟ್ ಉಂಟ್ ಗ್ಲಾಬೆನ್ಸ್ನೈಟ್ (ಹೊಸ ತನಿಖೆಗಾರರು: ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಮಾತ್ಸರ್ಯ) ಎಂಬ ಪುಸ್ತಕವು ಹೇಳುವುದು: “[ಯೆಹೋವನ ಸಾಕ್ಷಿಗಳಿಗೆ] ಕುಟುಂಬವು ವಿಶೇಷವಾಗಿ ಸಂರಕ್ಷಿಸಬೇಕಾದ ಒಂದು ವಿಷಯವಾಗಿದೆ.” ಈ ಹೇಳಿಕೆಯು ಸತ್ಯವಾಗಿದೆ, ಮತ್ತು ಇಂದು ಕುಟುಂಬಕ್ಕೆ ಯಾವುದರಿಂದ ಸಂರಕ್ಷಣೆ ಬೇಕಾಗಿದೆಯೊ ಅಂತಹ ಅನೇಕ ವಿಷಯಗಳಿವೆ. “ತಂದೆತಾಯಿಗಳಿಗೆ ಅವಿಧೇಯ”ರಾದ ಮಕ್ಕಳು ಮತ್ತು “ಮಮತೆಯಿಲ್ಲದ” ಇಲ್ಲವೆ “ದಮೆಯಿಲ್ಲದ” ವಯಸ್ಕರೂ ಇದ್ದಾರೆ. (2 ತಿಮೊಥೆಯ 3:2, 3) ಕುಟುಂಬಗಳಲ್ಲಿ ಗಂಡಹೆಂಡಿರ ಮಧ್ಯೆ ಹಿಂಸಾಚಾರ ನಡೆಯುತ್ತದೆ; ಹೆತ್ತವರು ಒಂದೇ ತಮ್ಮ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಇಲ್ಲವೆ ಅವರನ್ನು ಅಸಡ್ಡೆಮಾಡುತ್ತಾರೆ; ಮತ್ತು ಮಕ್ಕಳು ಪ್ರತಿಭಟನೆ ತೋರಿಸಿ, ಅಮಲೌಷಧದ ದುರುಪಯೋಗ ಹಾಗೂ ಅನೈತಿಕತೆಯಲ್ಲಿ ತೊಡಗುತ್ತಾರೆ, ಇಲ್ಲವೆ ಮನೆಬಿಟ್ಟು ಓಡಿಹೋಗುತ್ತಾರೆ. ಇದೆಲ್ಲವೂ ‘ಲೋಕದ ಆತ್ಮದ’ ನಾಶಕರ ಪ್ರಭಾವದ ಫಲವಾಗಿದೆ. (ಎಫೆಸ 2:1, 2) ಈ ಆತ್ಮಕ್ಕೆ ವಿರುದ್ಧವಾಗಿ ನಾವು ನಮ್ಮ ಕುಟುಂಬವನ್ನು ಸಂರಕ್ಷಿಸುವ ಅಗತ್ಯವಿದೆ. ಆದರೆ ಹೇಗೆ? ಕುಟುಂಬ ಸದಸ್ಯರಿಗೆ ಯೆಹೋವನು ಕೊಟ್ಟಿರುವ ಸಲಹೆಯನ್ನು ಮತ್ತು ನಿರ್ದೇಶನವನ್ನು ಪಾಲಿಸುವ ಮೂಲಕವೇ.
4. ಕ್ರೈಸ್ತ ಕುಟುಂಬದ ಸದಸ್ಯರಿಗೆ ಪರಸ್ಪರವಾಗಿ ಯಾವ ಜವಾಬ್ದಾರಿಗಳಿವೆ?
4 ತಮಗೆ ಪರಸ್ಪರರ ಕಡೆಗೆ ಭಾವಾತ್ಮಕ, ಆತ್ಮಿಕ ಮತ್ತು ಶಾರೀರಿಕ ಹೊಣೆಗಾರಿಕೆಯಿದೆ ಎಂಬುದನ್ನು ಕ್ರೈಸ್ತ ದಂಪತಿಗಳು ಒಪ್ಪಿಕೊಳ್ಳುತ್ತಾರೆ. (1 ಕೊರಿಂಥ 7:3-5; ಎಫೆಸ 5:21-23; 1 ಪೇತ್ರ 3:7) ಕ್ರೈಸ್ತ ಹೆತ್ತವರಿಗೆ ತಮ್ಮ ಮಕ್ಕಳ ವಿಷಯದಲ್ಲಿ ಗುರುತರವಾದ ಜವಾಬ್ದಾರಿಯಿದೆ. (ಜ್ಞಾನೋಕ್ತಿ 22:6; 2 ಕೊರಿಂಥ 12:14; ಎಫೆಸ 6:4) ಮತ್ತು ಕ್ರೈಸ್ತ ಮನೆಗಳಲ್ಲಿರುವ ಮಕ್ಕಳು ದೊಡ್ಡವರಾಗುವಾಗ, ತಮಗೂ ಹೊಣೆಗಾರಿಕೆಗಳಿವೆ ಎಂಬುದನ್ನು ಅವರು ಕಲಿತುಕೊಳ್ಳುತ್ತಾರೆ. (ಜ್ಞಾನೋಕ್ತಿ 1:8, 9; 23:22; ಎಫೆಸ 6:1; 1 ತಿಮೊಥೆಯ 5:3, 4, 8) ಇಂತಹ ಕುಟುಂಬ ಹೊಣೆಗಾರಿಕೆಗಳನ್ನು ಪೂರೈಸಲು ಪ್ರಯತ್ನ, ಬದ್ಧತೆ ಮತ್ತು ಪ್ರೀತಿ ಹಾಗೂ ಆತ್ಮತ್ಯಾಗದ ಮನೋಭಾವ ಅಗತ್ಯ. ಆದರೂ, ಎಷ್ಟರ ಮಟ್ಟಿಗೆ ಕುಟುಂಬದ ಸಕಲ ಸದಸ್ಯರು ತಮ್ಮ ದೇವದತ್ತ ಹೊಣೆಗಾರಿಕೆಗಳನ್ನು ಪೂರೈಸುತ್ತಾರೊ ಅಷ್ಟರ ಮಟ್ಟಿಗೆ ಅವರು ಒಬ್ಬರು ಇನ್ನೊಬ್ಬರಿಗೆ ಮತ್ತು ಸಭೆಗೆ ಆಶೀರ್ವಾದಪ್ರದರಾಗಿರುತ್ತಾರೆ. ಇದಕ್ಕೂ ಹೆಚ್ಚು ಪ್ರಾಮುಖ್ಯವಾಗಿ, ಅವರು ಕುಟುಂಬದ ರಚಕನಾದ ಯೆಹೋವ ದೇವರನ್ನು ಗೌರವಿಸುತ್ತಾರೆ.—ಆದಿಕಾಂಡ 1:27, 28; ಎಫೆಸ 3:14, 15.
ಕ್ರೈಸ್ತ ಸಹೋದರತ್ವ
5. ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡುವುದರಿಂದ ನಾವು ಯಾವ ಪ್ರಯೋಜನಗಳನ್ನು ಪಡೆಯುತ್ತೇವೆ?
5 ಕ್ರೈಸ್ತರಾಗಿರುವ ನಮಗೆ ಸಭೆಯಲ್ಲಿರುವ ಜೊತೆ ವಿಶ್ವಾಸಿಗಳ ಕಡೆಗಿನ ಜವಾಬ್ದಾರಿಗಳೂ ಇವೆ ಮತ್ತು ಮೂಲಭೂತವಾಗಿ, “ಲೋಕದಲ್ಲಿರುವ . . . ಸಹೋದರರ ಸಂಪೂರ್ಣ ಸಂಘ”ದ ಕಡೆಗಿನ ಜವಾಬ್ದಾರಿಗಳಿವೆ. (1 ಪೇತ್ರ 5:9, NW) ಸಭೆಯೊಂದಿಗೆ ನಮಗಿರುವ ಸಂಬಂಧವು ನಮ್ಮ ಆಧ್ಯಾತ್ಮಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ನಾವು ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡುವಾಗ, ಅವರ ಬಲಪಡಿಸುವಂಥ ಸಾಹಚರ್ಯದಲ್ಲಿ ನಾವು ಸಂತೋಷಿಸುತ್ತೇವೆ ಮಾತ್ರವಲ್ಲ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೊಡುವ ಪೌಷ್ಟಿಕ ಆತ್ಮಿಕ ಆಹಾರದಲ್ಲಿಯೂ ಆನಂದಿಸುತ್ತೇವೆ. (ಮತ್ತಾಯ 24:45-47) ನಮಗೆ ಸಮಸ್ಯೆಗಳಿರುವಲ್ಲಿ, ಶಾಸ್ತ್ರೀಯ ಮೂಲತತ್ತ್ವಗಳ ಮೇಲೆ ಆಧಾರಿತವಾಗಿರುವ ಸ್ವಸ್ಥ ಸಲಹೆಗಾಗಿ ನಾವು ನಮ್ಮ ಸಹೋದರರ ಬಳಿಗೆ ಹೋಗಬಲ್ಲೆವು. (ಜ್ಞಾನೋಕ್ತಿ 17:17; ಪ್ರಸಂಗಿ 4:9; ಯಾಕೋಬ 5:13-18) ನಮಗೆ ಸಹಾಯದ ಅಗತ್ಯವಿರುವಾಗ, ನಮ್ಮ ಸಹೋದರರು ನಮ್ಮ ಕೈಬಿಡುವುದಿಲ್ಲ. ಹೀಗೆ, ದೇವರ ಸಂಸ್ಥೆಯ ಭಾಗವಾಗಿರುವುದು ಎಷ್ಟು ಆಶೀರ್ವಾದದಾಯಕ!
6. ಬೇರೆ ಕ್ರೈಸ್ತರ ಕಡೆಗೆ ನಮಗೆ ಜವಾಬ್ದಾರಿಗಳಿವೆ ಎಂಬುದನ್ನು ಪೌಲನು ಹೇಗೆ ತೋರಿಸಿದನು?
6 ಆದರೂ, ನಾವು ಸಭೆಯಲ್ಲಿರುವುದು ಕೇವಲ ಪಡೆದುಕೊಳ್ಳಲಿಕ್ಕಾಗಿ ಅಲ್ಲ. ಕೊಡಲಿಕ್ಕಾಗಿಯೂ ನಾವು ಅಲ್ಲಿರುತ್ತೇವೆ. ಹೌದು, ಯೇಸು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” (ಅ. ಕೃತ್ಯಗಳು 20:35) ಅಪೊಸ್ತಲ ಪೌಲನು, “ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು [“ನಮ್ಮ ನಿರೀಕ್ಷೆಯ ಬಹಿರಂಗ ಪ್ರಕಟನೆಯನ್ನು,” NW] ನಿಶ್ಚಂಚಲವಾಗಿ ಪರಿಗ್ರಹಿಸೋಣ; ವಾಗ್ದಾನಮಾಡಿದಾತನು ನಂಬಿಗಸ್ತನು. ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ,” ಎಂದು ಹೇಳಿದಾಗ, ಅವನು ಕೊಡಲಿಕ್ಕಾಗಿರುವ ಸಿದ್ಧಮನಸ್ಸನ್ನು ಎತ್ತಿ ತೋರಿಸಿದನು.—ಇಬ್ರಿಯ 10:23-25.
7, 8. ನಮ್ಮ ಸ್ವಂತ ಸಭೆಯಲ್ಲಿ ಮತ್ತು ಬೇರೆ ದೇಶಗಳಲ್ಲಿರುವ ಕ್ರೈಸ್ತರ ಕಡೆಗೆ ನಾವು ಕೊಡುವಿಕೆಯ ಮನೋಭಾವವನ್ನು ಹೇಗೆ ತೋರಿಸುತ್ತೇವೆ?
7 ಸಭೆಯೊಳಗೆ, ನಾವು ಕೂಟದ ಸಮಯದಲ್ಲಿ ನಮ್ಮ ಹೇಳಿಕೆಗಳನ್ನು ಕೊಡುವಾಗ ಅಥವಾ ಕಾರ್ಯಕ್ರಮದಲ್ಲಿ ಬೇರೆ ರೀತಿಗಳಲ್ಲಿ ಭಾಗವಹಿಸುವಾಗ, “ನಮ್ಮ ನಿರೀಕ್ಷೆಯನ್ನು” ತಿಳಿಯಪಡಿಸುತ್ತೇವೆ. ಈ ರೀತಿಯ ಪ್ರಯತ್ನಗಳು ನಮ್ಮ ಸಹೋದರರನ್ನು ನಿಶ್ಚಯವಾಗಿಯೂ ಪ್ರೋತ್ಸಾಹಿಸುತ್ತವೆ. ನಾವು ಕೂಟಗಳಿಗೆ ಮೊದಲು ಮತ್ತು ಕೂಟಗಳ ನಂತರ ನಡೆಸುವ ಸಂಭಾಷಣೆಗಳ ಮೂಲಕವೂ ಅವರನ್ನು ಪ್ರೋತ್ಸಾಹಿಸುತ್ತೇವೆ. ನಾವು ಬಲಹೀನರನ್ನು ಬಲಪಡಿಸುವ, ಖಿನ್ನರನ್ನು ಸಂತೈಸುವ ಮತ್ತು ರೋಗಿಗಳಿಗೆ ಸಾಂತ್ವನ ನೀಡಬಲ್ಲ ಸಮಯವು ಅದೇ ಆಗಿದೆ. (1 ಥೆಸಲೊನೀಕ 5:14) ಈ ರೀತಿಯ ಕೊಡುವಿಕೆಯಲ್ಲಿ ಯಥಾರ್ಥವಂತರಾದ ಕ್ರೈಸ್ತರು ಉದಾರ ಮನಸ್ಸಿನವರಾಗಿರುತ್ತಾರೆ. ಇದರಿಂದಾಗಿಯೇ, ನಮ್ಮ ಕೂಟಗಳಿಗೆ ಮೊದಲ ಬಾರಿ ಹಾಜರಾಗುವ ಅನೇಕರು ನಮ್ಮಲ್ಲಿ ಕಂಡುಬರುವ ಪ್ರೀತಿಯಿಂದ ಪ್ರಭಾವಿತರಾಗುತ್ತಾರೆ.—ಕೀರ್ತನೆ 37:21; ಯೋಹಾನ 15:12; 1 ಕೊರಿಂಥ 14:25.
8 ಆದರೂ, ನಮ್ಮ ಪ್ರೀತಿಯು ನಮ್ಮ ಸ್ವಂತ ಸಭೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಜಗದ್ವ್ಯಾಪಕವಾಗಿರುವ ನಮ್ಮ ಸಹೋದರರ ಸಂಪೂರ್ಣ ಸಂಘವನ್ನು ಆವರಿಸುತ್ತದೆ. ಉದಾಹರಣೆಗೆ, ಈ ಕಾರಣದಿಂದಲೇ, ಪ್ರತಿಯೊಂದು ರಾಜ್ಯ ಸಭಾಗೃಹದಲ್ಲಿ ರಾಜ್ಯ ಸಭಾಗೃಹ ನಿಧಿಗಾಗಿ ಒಂದು ಕಾಣಿಕೆ ಪೆಟ್ಟಿಗೆಯಿರುತ್ತದೆ. ನಮ್ಮ ಸ್ವಂತ ರಾಜ್ಯ ಸಭಾಗೃಹವು ಉತ್ತಮ ಸ್ಥಿತಿಯಲ್ಲಿರಬಹುದಾದರೂ, ಇತರ ದೇಶಗಳಲ್ಲಿರುವ ಸಾವಿರಾರು ಮಂದಿ ಜೊತೆ ಕ್ರೈಸ್ತರಿಗೆ ಕೂಡಿಬರಲು ಯೋಗ್ಯವಾದ ಸ್ಥಳವಿರುವುದಿಲ್ಲ. ನಾವು ಕಿಂಗ್ಡಮ್ ಹಾಲ್ ಫಂಡಿಗೆ ಕಾಣಿಕೆ ನೀಡುವಾಗ, ನಮಗೆ ಇಂತಹ ವ್ಯಕ್ತಿಗಳ ವ್ಯಕ್ತಿಗತ ಪರಿಚಯವಿಲ್ಲದಿರಬಹುದಾದರೂ, ಅವರಿಗಾಗಿರುವ ನಮ್ಮ ಪ್ರೀತಿಯನ್ನು ನಾವು ತೋರಿಸುತ್ತೇವೆ.
9. ಯೆಹೋವನ ಸಾಕ್ಷಿಗಳು ಒಬ್ಬರನ್ನೊಬ್ಬರು ಪ್ರೀತಿಸಲು ಮೂಲ ಕಾರಣವೇನು?
9 ಯೆಹೋವನ ಸಾಕ್ಷಿಗಳು ಪರಸ್ಪರರನ್ನು ಪ್ರೀತಿಸುವುದೇಕೆ? ಏಕೆಂದರೆ, ಯೇಸು ಹಾಗೆ ಪ್ರೀತಿಸುವಂತೆ ಅವರಿಗೆ ಆಜ್ಞಾಪಿಸಿದನು. (ಯೋಹಾನ 15:17) ಮತ್ತು ಅವರಲ್ಲಿ ಪರಸ್ಪರರಿಗಾಗಿರುವ ಪ್ರೀತಿಯು, ದೇವರಾತ್ಮವು ಅವರಲ್ಲಿ ಒಬ್ಬೊಬ್ಬರ ಮೇಲೆ ಮತ್ತು ಒಂದು ಗುಂಪಿನೋಪಾದಿ ಅವರ ಮೇಲೆ ಕಾರ್ಯನಡಿಸುತ್ತಿದೆ ಎಂಬುದಕ್ಕೆ ಇನ್ನೊಂದು ಪುರಾವೆಯಾಗಿದೆ. ಏಕೆಂದರೆ ಪ್ರೀತಿಯು ದೇವರಾತ್ಮದ ಒಂದು “ಫಲ”ವಾಗಿದೆ. (ಗಲಾತ್ಯ 5:22) “ಬಹು ಜನರ ಪ್ರೀತಿಯು ತಣ್ಣಗಾಗಿ”ಹೋಗಿರುವ ಒಂದು ಲೋಕದಲ್ಲಿ ಜೀವಿಸುತ್ತಿರುವುದಾದರೂ, ಯೆಹೋವನ ಸಾಕ್ಷಿಗಳು ಬೈಬಲನ್ನು ಅಧ್ಯಯನ ಮಾಡುವಾಗ, ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ ಮತ್ತು ದೇವರಿಗೆ ಎಡೆಬಿಡದೆ ಪ್ರಾರ್ಥಿಸುವಾಗ, ಈ ಪ್ರೀತಿ ಅವರಿಗೆ ಸ್ವಾಭಾವಿಕವಾಗಿ ಪರಿಣಮಿಸುತ್ತದೆ.—ಮತ್ತಾಯ 24:12.
ನಮ್ಮ ಸುತ್ತಲಿರುವ ಲೋಕದೊಂದಿಗೆ ವ್ಯವಹರಿಸುವುದು
10. ನಮ್ಮ ಸುತ್ತಲಿರುವ ಲೋಕದ ಕಡೆಗೆ ನಮಗಿರುವ ಜವಾಬ್ದಾರಿಯೇನು?
10 “ನಮ್ಮ ನಿರೀಕ್ಷೆಯ ಬಹಿರಂಗ ಪ್ರಕಟನೆ,” ಎಂಬ ಪೌಲನ ಮಾತುಗಳು ನಮಗೆ ಇನ್ನೊಂದು ಜವಾಬ್ದಾರಿಯ ಕುರಿತು ಜ್ಞಾಪಕಹುಟ್ಟಿಸುತ್ತವೆ. ಈ ಬಹಿರಂಗ ಪ್ರಕಟನೆಯಲ್ಲಿ, ಇನ್ನೂ ನಮ್ಮ ಕ್ರೈಸ್ತ ಸಹೋದರರಾಗಿಲ್ಲದ ಜನರಿಗೆ ಸುವಾರ್ತೆಯನ್ನು ಸಾರುವ ಕೆಲಸವು ಸೇರಿದೆ. (ಮತ್ತಾಯ 24:14; 28:19, 20; ರೋಮಾಪುರ 10:9, 10, 13-15) ಇಂತಹ ಸಾರುವಿಕೆಯು, ಕೊಡುವಿಕೆಯ ಇನ್ನೊಂದು ರೀತಿಯಾಗಿದೆ. ಇದರಲ್ಲಿ ಭಾಗವಹಿಸಲು ಸಮಯ, ಶಕ್ತಿ, ತಯಾರಿ, ತರಬೇತು ಮತ್ತು ಸ್ವಂತ ಸಂಪನ್ಮೂಲಗಳ ಉಪಯೋಗದ ಅಗತ್ಯವಿದೆ. ಆದರೆ ಪೌಲನು ಹೀಗೂ ಬರೆದನು: “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲೆ ಅದೆ. ಹೀಗಿರುವದರಿಂದ ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.” (ರೋಮಾಪುರ 1:14, 15) ಈ “ಋಣ”ವನ್ನು ತೀರಿಸುವಾಗ ಪೌಲನಂತೆಯೇ ನಾವು ಕೂಡ ಜಿಪುಣತೆಯನ್ನು ತೋರಿಸದಿರೋಣ.
11. ಲೋಕದೊಂದಿಗೆ ನಮಗಿರುವ ಸಂಬಂಧವನ್ನು ಯಾವ ಎರಡು ಶಾಸ್ತ್ರೀಯ ಮೂಲತತ್ತ್ವಗಳು ನಿರ್ದೇಶಿಸುತ್ತವೆ, ಆದರೂ ನಾವು ಏನನ್ನು ಒಪ್ಪಿಕೊಳ್ಳುತ್ತೇವೆ?
11 ಜೊತೆ ವಿಶ್ವಾಸಿಗಳಲ್ಲದವರ ಕಡೆಗೆ ನಮಗೆ ಇನ್ನಿತರ ಜವಾಬ್ದಾರಿಗಳಿವೆಯೆ? ನಿಶ್ಚಯವಾಗಿಯೂ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ ನಿಜ. (1 ಯೋಹಾನ 5:19) ಯೇಸು ತನ್ನ ಶಿಷ್ಯರ ಬಗ್ಗೆ, “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ” ಎಂದು ಹೇಳಿದ್ದನೆಂದು ನಮಗೆ ಗೊತ್ತಿದೆ. ಆದರೂ, ನಾವು ಈ ಲೋಕದಲ್ಲಿ ಜೀವಿಸುತ್ತಿದ್ದೇವೆ, ಅದರಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತೇವೆ, ಮತ್ತು ಅದರಿಂದ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದೇವೆ. (ಯೋಹಾನ 17:11, 15, 16) ಹೀಗಿರುವುದರಿಂದ, ಈ ಪ್ರಪಂಚದಲ್ಲಿ ನಮಗೆ ಹೊಣೆಗಾರಿಕೆಗಳಿವೆ. ಅವು ಯಾವುವು? ಅಪೊಸ್ತಲ ಪೇತ್ರನು ಈ ಪ್ರಶ್ನೆಗೆ ಉತ್ತರ ಕೊಡುತ್ತಾನೆ. ಯೆರೂಸಲೇಮು ನಾಶಗೊಳ್ಳುವುದಕ್ಕೆ ಸ್ವಲ್ಪ ಮುಂಚೆ, ಅವನು ಏಷ್ಯಾ ಮೈನರಿನಲ್ಲಿದ್ದ ಕ್ರೈಸ್ತರಿಗೆ ಒಂದು ಪತ್ರವನ್ನು ಬರೆದನು. ಆ ಪತ್ರದಲ್ಲಿರುವ ಒಂದು ಭಾಗವು, ನಾವು ಈ ಲೋಕದೊಂದಿಗೆ ಸಮತೋಲನದ ಸಂಬಂಧವನ್ನಿಡುವಂತೆ ನಮಗೆ ಸಹಾಯಮಾಡುತ್ತದೆ.
12. ಕ್ರೈಸ್ತರು ಯಾವ ವಿಧದಲ್ಲಿ “ಪರದೇಶೀಯರೂ ಅಲ್ಪಕಾಲಿಕ ನಿವಾಸಿಗಳೂ” ಆಗಿದ್ದಾರೆ, ಮತ್ತು ಅವರು ಹಾಗಿರುವುದರಿಂದ ಯಾವುದರಿಂದ ದೂರವಿರಬೇಕು?
12 ಪೇತ್ರನು ಮೊದಲಾಗಿ ಹೇಳಿದ್ದು: “ಪ್ರಿಯರೇ, ಪ್ರವಾಸಿಗಳೂ ಪರದೇಶಸ್ಥರೂ [“ಪರದೇಶೀಯರೂ ಅಲ್ಪಕಾಲಿಕ ನಿವಾಸಿಗಳೂ,” NW] ಆಗಿರುವ ನೀವು ನಿಮ್ಮ ಆತ್ಮದ [“ಪ್ರಾಣದ,” NW] ಮೇಲೆ ಯುದ್ಧಮಾಡುವ ಶಾರೀರಿಕ ಅಭಿಲಾಷೆಗಳಿಗೆ ದೂರವಾಗಿರಬೇಕೆಂದು ನಿಮ್ಮನ್ನು ಎಚ್ಚರಿಸುತ್ತೇನೆ.” (1 ಪೇತ್ರ 2:11) ಸತ್ಯ ಕ್ರೈಸ್ತರು ಆತ್ಮಿಕಾರ್ಥದಲ್ಲಿ, “ಪರದೇಶೀಯರೂ ಅಲ್ಪಕಾಲಿಕ ನಿವಾಸಿಗಳೂ” ಆಗಿದ್ದಾರೆ. ಹೇಗೆಂದರೆ ಅವರ ಜೀವನದ ನಿಜ ಕೇಂದ್ರಭಾಗವು ನಿತ್ಯಜೀವದ ನಿರೀಕ್ಷೆಯಾಗಿದೆ. ಇದು ಆತ್ಮಾಭಿಷಿಕ್ತರಿಗೆ ಸ್ವರ್ಗದಲ್ಲಿ ಮತ್ತು “ಬೇರೆ ಕುರಿ”ಗಳಿಗೆ ಭಾವೀ ಭೂಪರದೈಸಿನಲ್ಲಿದೆ. (ಯೋಹಾನ 10:16; ಫಿಲಿಪ್ಪಿ 3:20, 21; ಇಬ್ರಿಯ 11:13; ಪ್ರಕಟನೆ 7:9, 14-17) ಆದರೆ ಆ ಶಾರೀರಿಕ ಅಭಿಲಾಷೆಗಳು ಏನಾಗಿವೆ? ಇವುಗಳಲ್ಲಿ ಧನಿಕರಾಗುವ ಅಭಿಲಾಷೆ, ಪ್ರಖ್ಯಾತಿಯನ್ನು ಪಡೆಯುವ ಆಸೆ, ಅನೈತಿಕ ಲೈಂಗಿಕಾಪೇಕ್ಷೆಗಳಂತಹ ವಿಷಯಗಳು ಮತ್ತು “ಹೊಟ್ಟೇಕಿಚ್ಚು” ಹಾಗೂ “ದುರಾಶೆ” ಎಂದು ವರ್ಣಿಸಲಾಗಿರುವ ಅಪೇಕ್ಷೆಗಳು ಸೇರಿವೆ.—ಕೊಲೊಸ್ಸೆ 3:5; 1 ತಿಮೊಥೆಯ 6:4, 9; 1 ಯೋಹಾನ 2:15, 16.
13. ಶಾರೀರಿಕ ಅಭಿಲಾಷೆಗಳು “[ನಮ್ಮ] ಪ್ರಾಣದ ಮೇಲೆ ಯುದ್ಧ”ಮಾಡುವುದು ಹೇಗೆ?
13 ಇಂತಹ ಅಭಿಲಾಷೆಗಳು, “[ನಮ್ಮ] ಪ್ರಾಣದ ಮೇಲೆ ಯುದ್ಧ”ಮಾಡುತ್ತವೆ ಎಂಬುದು ನಿಶ್ಚಯ. ದೇವರೊಂದಿಗೆ ನಮಗಿರುವ ಸಂಬಂಧವನ್ನು ಅವು ಸವೆಯಿಸಿ, ಹೀಗೆ ನಮ್ಮ ಕ್ರೈಸ್ತ ನಿರೀಕ್ಷೆಯನ್ನು (ನಮ್ಮ “ಪ್ರಾಣ” ಅಥವಾ ಜೀವವನ್ನು) ಅಪಾಯಕ್ಕೊಳಪಡಿಸುತ್ತವೆ. ದೃಷ್ಟಾಂತಕ್ಕೆ, ನಾವು ಅನೈತಿಕ ವಿಚಾರಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವುದಾದರೆ, ನಾವು ನಮ್ಮ ದೇಹಗಳನ್ನು “ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ” ಹೇಗೆ ಅರ್ಪಿಸಬಲ್ಲೆವು? ಪ್ರಾಪಂಚಿಕತೆಯ ಬೋನಿನೊಳಗೆ ನಾವು ಸಿಕ್ಕಿಬೀಳುವಲ್ಲಿ, ನಾವು ‘ಮೊದಲು ದೇವರ ರಾಜ್ಯವನ್ನು’ ಹೇಗೆ ಹುಡುಕೇವು? (ರೋಮಾಪುರ 12:1, 2; ಮತ್ತಾಯ 6:33; 1 ತಿಮೊಥೆಯ 6:17-19) ಆದುದರಿಂದ, ಹೆಚ್ಚು ಉತ್ತಮವಾದ ಮಾರ್ಗವು ಮೋಶೆಯ ಮಾದರಿಯನ್ನು ಅನುಸರಿಸಿ, ಲೋಕದ ಆಕರ್ಷಣೆಗಳಿಗೆ ಬೆನ್ನು ಹಾಕಿ, ಯೆಹೋವನ ಸೇವೆಯನ್ನು ನಮ್ಮ ಜೀವಿತಗಳಲ್ಲಿ ಪ್ರಥಮವಾಗಿರಿಸುವುದೇ ಆಗಿದೆ. (ಮತ್ತಾಯ 6:19, 20; ಇಬ್ರಿಯ 11:24-26) ಲೋಕದೊಂದಿಗೆ ಸಮತೋಲನವುಳ್ಳ ಸಂಬಂಧವನ್ನು ಇಟ್ಟುಕೊಳ್ಳಲು ಇದೊಂದು ಪ್ರಮುಖ ಕೀಲಿ ಕೈಯಾಗಿದೆ.
“ನಡವಳಿಕೆಯು . . . ಯೋಗ್ಯವಾಗಿರಲಿ”
14. ಕ್ರೈಸ್ತರೋಪಾದಿ ನಾವು ಯೋಗ್ಯವಾದ ನಡವಳಿಕೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದೇಕೆ?
14 ಇನ್ನೊಂದು ಮಹತ್ವವುಳ್ಳ ಮಾರ್ಗದರ್ಶನವು ಪೇತ್ರನ ಮುಂದಿನ ಮಾತುಗಳಲ್ಲಿದೆ: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಕ್ರೈಸ್ತರೋಪಾದಿ ನಾವು ಆದರ್ಶಪ್ರಾಯರಾಗಿರಲು ಪ್ರಯತ್ನಿಸುತ್ತೇವೆ. ಶಾಲೆಯಲ್ಲಿ ನಾವು ಶ್ರದ್ಧೆಯಿಂದ ಪಾಠಗಳನ್ನು ಅಧ್ಯಯನ ಮಾಡುತ್ತೇವೆ. ಕೆಲಸದ ಸ್ಥಳದಲ್ಲಿ ನಮ್ಮ ಧಣಿಗಳು ವಿಚಾರಹೀನರಾಗಿದ್ದರೂ, ನಾವು ಶ್ರದ್ಧೆಯಿಂದ ಕೆಲಸಮಾಡುವವರೂ ಪ್ರಾಮಾಣಿಕರೂ ಆಗಿರುತ್ತೇವೆ. ವಿಭಾಜಿತ ಕುಟುಂಬವೊಂದರಲ್ಲಿ ಸಾಕ್ಷಿಯಾಗಿರುವ ಗಂಡನಾಗಲಿ ಹೆಂಡತಿಯಾಗಲಿ ಕ್ರೈಸ್ತ ಮೂಲತತ್ತ್ವಗಳನ್ನು ಅನುಸರಿಸಲು ವಿಶೇಷ ಪ್ರಯತ್ನವನ್ನು ಮಾಡುತ್ತಾರೆ. ಇದು ಸದಾ ಸುಲಭವಲ್ಲ. ಆದರೆ ನಮ್ಮ ಆದರ್ಶಪ್ರಾಯ ನಡತೆಯು ಯೆಹೋವನನ್ನು ಮೆಚ್ಚಿಸುತ್ತದೆ ಮತ್ತು ಅನೇಕವೇಳೆ ಅದು ಸಾಕ್ಷ್ಯೇತರರ ಮೇಲೆ ಒಳ್ಳೇ ಪರಿಣಾಮವನ್ನು ಬೀರುತ್ತದೆಂದು ನಮಗೆ ಗೊತ್ತಿದೆ.—1 ಪೇತ್ರ 2:18-20; 3:1.
15. ಯೆಹೋವನ ಸಾಕ್ಷಿಗಳ ನಡತೆಯ ಉನ್ನತ ಮಟ್ಟವು ವ್ಯಾಪಕವಾಗಿ ಮಾನ್ಯಮಾಡಲ್ಪಟ್ಟಿದೆಯೆಂದು ನಮಗೆ ಹೇಗೆ ಗೊತ್ತು?
15 ಆದರ್ಶಪ್ರಾಯ ಮಟ್ಟಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೆಚ್ಚಿನ ಯೆಹೋವನ ಸಾಕ್ಷಿಗಳ ಸಾಫಲ್ಯವನ್ನು, ವರುಷಗಳಿಂದ ಅವರ ಬಗ್ಗೆ ಪ್ರಕಟಿಸಲ್ಪಟ್ಟಿರುವ ಹೇಳಿಕೆಗಳಿಂದ ತಿಳಿದುಕೊಳ್ಳಸಾಧ್ಯವಿದೆ. ಉದಾಹರಣೆಗೆ, ಇಟಲಿಯ ಈಲ್ ಟೆಂಪೋ ಎಂಬ ವಾರ್ತಾಪತ್ರಿಕೆಯು ವರದಿಮಾಡಿದ್ದು: “ಯಾರ ಜೊತೆ ಕಾರ್ಮಿಕರು ಯೆಹೋವನ ಸಾಕ್ಷಿಗಳಾಗಿದ್ದಾರೊ ಆ ಜನರು ಅವರನ್ನು ಪ್ರಾಮಾಣಿಕ ಕಾರ್ಮಿಕರಾಗಿ ವರ್ಣಿಸುತ್ತಾರೆ. ತಮ್ಮ ನಂಬಿಕೆಯ ವಿಷಯದಲ್ಲಿ ಅವರು ಎಷ್ಟು ನಿಶ್ಚಿತಾಭಿಪ್ರಾಯವುಳ್ಳವರೆಂದರೆ, ಅವರಿಗೆ ಭ್ರಾಂತಿಹಿಡಿದಿದೆ ಎಂಬಂತೆ ತೋರಿಬರಬಹುದು; ಹಾಗಿದ್ದರೂ ಅವರ ನೈತಿಕ ಸಮಗ್ರತೆಗಾಗಿ ಅವರು ಗೌರವಾರ್ಹರು.” ಆರ್ಜೆಂಟೀನದ ಬ್ವೇನಸ್ ಅರೀಸ್ನ ಹೆರಾಲ್ಡ್ ವಾರ್ತಾಪತ್ರಿಕೆಯು ಹೇಳಿದ್ದು: “ಯೆಹೋವನ ಸಾಕ್ಷಿಗಳು ಅನೇಕ ವರುಷಗಳಿಂದ, ಶ್ರಮಪಟ್ಟು ಕೆಲಸ ಮಾಡುವವರು, ಗಂಭೀರರು, ಮಿತವ್ಯಯಿಗಳು ಮತ್ತು ದೇವಭಯವುಳ್ಳ ನಾಗರಿಕರೆಂಬುದನ್ನು ತೋರಿಸಿಕೊಟ್ಟಿದ್ದಾರೆ.” ರಷ್ಯನ್ ವಿದ್ವಾಂಸರಾದ ಸ್ಯಿರ್ಗ್ಯೇ ಈವಾನ್ಯಂಕೊ ಹೇಳಿದ್ದು: “ಯೆಹೋವನ ಸಾಕ್ಷಿಗಳು ಜಗದ್ವ್ಯಾಪಕವಾಗಿ ಚಾಚೂತಪ್ಪದ ಕಾನೂನುಪಾಲಕರೆಂದು ಪ್ರಸಿದ್ಧರಾಗಿದ್ದಾರೆ ಮತ್ತು ಎಚ್ಚರಿಕೆಯಿಂದ ತೆರಿಗೆಗಳನ್ನು ಸಲ್ಲಿಸುವ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.” ಸಿಂಬಾಬ್ವೆಯಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಅಧಿವೇಶನಕ್ಕಾಗಿ ಉಪಯೋಗಿಸಿದ ಸೌಕರ್ಯದ ಮ್ಯಾನೆಜರಳು ಹೇಳಿದ್ದು: “ಕೆಲವು ಮಂದಿ ಸಾಕ್ಷಿಗಳು ಕಾಗದದ ಚೂರುಗಳನ್ನು ಹೆಕ್ಕುವುದನ್ನೂ ಶೌಚಾಲಯಗಳನ್ನು ಶುಚಿಗೊಳಿಸುವುದನ್ನೂ ನಾನು ನೋಡಿದ್ದೇನೆ. ಇಡೀ ಮೈದಾನವನ್ನು ಈ ಮುಂಚಿಗಿಂತಲೂ ಹೆಚ್ಚು ನಿರ್ಮಲವಾಗಿ ಇಡಲಾಗಿದೆ. ನಿಮ್ಮ ಹದಿಪ್ರಾಯದವರು ನೀತಿನಿಷ್ಠೆಯುಳ್ಳವರು. ಇಡೀ ಲೋಕವೇ ಯೆಹೋವನ ಸಾಕ್ಷಿಗಳಿಂದ ತುಂಬಿರುತ್ತಿದ್ದರೆ ಎಷ್ಟು ಒಳ್ಳೇದಿರುತ್ತಿತ್ತು ಎಂಬುದೇ ನನ್ನ ಹಾರೈಕೆ.”
ಕ್ರೈಸ್ತ ಅಧೀನತೆ
16. ಐಹಿಕ ಅಧಿಕಾರಿಗಳೊಂದಿಗೆ ನಮಗಿರುವ ಸಂಬಂಧವೇನು, ಮತ್ತು ಏಕೆ?
16 ಲೌಕಿಕ ಅಧಿಕಾರಿಗಳೊಂದಿಗೆ ನಮಗಿರುವ ಸಂಬಂಧದ ಕುರಿತೂ ಪೇತ್ರನು ಮಾತಾಡುತ್ತಾನೆ. ಅವನನ್ನುವುದು: “ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರೂ ಕರ್ತನ ನಿಮಿತ್ತ ಅಧೀನರಾಗಿರಿ. ಅರಸನು ಸರ್ವಾಧಿಕಾರಿ ಎಂತಲೂ ಬೇರೆ ಅಧಿಪತಿಗಳು ಕೆಟ್ಟ ನಡತೆಯುಳ್ಳವರನ್ನು ದಂಡಿಸುವದಕ್ಕೂ ಒಳ್ಳೇ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರಿ. ತಿಳಿಯದೆ ಮಾತಾಡುವ ಮೂಢಜನರ [“ವಿಚಾರಹೀನರ,” NW] ಬಾಯನ್ನು ನೀವು ಒಳ್ಳೇ ನಡತೆಯಿಂದ ಕಟ್ಟಬೇಕೆಂಬದೇ ದೇವರ ಚಿತ್ತ.” (1 ಪೇತ್ರ 2:13-15) ವ್ಯವಸ್ಥಿತವಾದ ಸರಕಾರದಿಂದ ನಾವು ಪಡೆದುಕೊಳ್ಳುವ ಪ್ರಯೋಜನಗಳಿಗಾಗಿ ನಾವು ಕೃತಜ್ಞರು ಮತ್ತು ಪೇತ್ರನ ಮಾತುಗಳಿಂದ ನಡೆಸಲ್ಪಟ್ಟವರಾಗಿ ನಾವು ಸರಕಾರದ ಕಾನೂನುಗಳಿಗೆ ವಿಧೇಯರಾಗಿ, ನಮ್ಮ ತೆರಿಗೆಯನ್ನು ಸಲ್ಲಿಸುತ್ತೇವೆ. ಕಾನೂನನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವ ದೇವದತ್ತ ಹಕ್ಕು ಸರಕಾರಗಳಿಗಿದೆಯೆಂಬುದನ್ನು ನಾವು ಒಪ್ಪಿಕೊಳ್ಳುತ್ತೇವಾದರೂ, ಐಹಿಕ ಅಧಿಕಾರಿಗಳಿಗೆ ನಾವು ಅಧೀನರಾಗಿರುವ ಮುಖ್ಯ ಕಾರಣವು “ಕರ್ತನ ನಿಮಿತ್ತ”ವೇ ಆಗಿದೆ. ಇದು ದೇವರ ಚಿತ್ತವಾಗಿದೆ. ಇದಲ್ಲದೆ, ತಪ್ಪುಗೈಯುವಿಕೆಗಾಗಿ ಶಿಕ್ಷಿಸಲ್ಪಡುವ ಮೂಲಕ ಯೆಹೋವನ ನಾಮಕ್ಕೆ ನಾವು ನಿಂದೆಯನ್ನು ತರಬಯಸುವುದಿಲ್ಲ.—ರೋಮಾಪುರ 13:1, 4-7; ತೀತ 3:1; 1 ಪೇತ್ರ 3:17.
17. “ವಿಚಾರಹೀನರು” ನಮ್ಮನ್ನು ವಿರೋಧಿಸುವಾಗ ಯಾವುದರ ಕುರಿತು ನಾವು ಭರವಸೆಯುಳ್ಳವರಾಗಿರಬಹುದು?
17 ವಿಷಾದಕರವಾಗಿ, ಅಧಿಕಾರದಲ್ಲಿರುವ ಕೆಲವು ಮಂದಿ “ವಿಚಾರಹೀನರು” ನಮ್ಮನ್ನು ಹಿಂಸಿಸುತ್ತಾರೆ, ಇಲ್ಲವೆ ಹೆಸರನ್ನು ಕೆಡಿಸುವ ಗಾಳಿಸುದ್ದಿಗಳನ್ನು ಹಬ್ಬಿಸುವಂಥ ಇತರ ವಿಧಾನಗಳ ಮೂಲಕ ನಮ್ಮನ್ನು ವಿರೋಧಿಸುತ್ತಾರೆ. ಆದರೂ ಯೆಹೋವನ ತಕ್ಕ ಸಮಯದಲ್ಲಿ, ಅವರ ಸುಳ್ಳುಗಳು ಯಾವಾಗಲೂ ಬಯಲಾಗುತ್ತವೆ ಮತ್ತು ಅವರ ‘ತಿಳಿಯದೆ ಮಾತಾಡುವ’ ಬಾಯಿ ಕಾರ್ಯಸಾಧಕವಾಗಿ ಮುಚ್ಚಲ್ಪಡುತ್ತದೆ. ನಮ್ಮ ಕ್ರೈಸ್ತ ನಡತೆಯ ದಾಖಲೆಯು ತಾನೇ ಸತ್ಯ ಸಾಕ್ಷಿಯನ್ನು ಕೊಡುತ್ತದೆ. ಈ ಕಾರಣದಿಂದಲೇ, ಸರಕಾರದ ಪ್ರಾಮಾಣಿಕ ಅಧಿಕಾರಿಗಳು ಅನೇಕವೇಳೆ ನಮ್ಮನ್ನು ಒಳ್ಳೇದನ್ನು ಮಾಡುವವರೆಂದು ಪ್ರಶಂಸಿಸುತ್ತಾರೆ.—ರೋಮಾಪುರ 13:3; ತೀತ 2:7, 8.
ದೇವರ ದಾಸರು
18. ಕ್ರೈಸ್ತರೋಪಾದಿ ನಾವು, ನಮ್ಮ ಸ್ವಾತಂತ್ರ್ಯವನ್ನು ದುರುಪಯೋಗಿಸುವುದನ್ನು ಯಾವ ವಿಧಗಳಲ್ಲಿ ತಪ್ಪಿಸಬಹುದು?
18 ಪೇತ್ರನು ಈಗ ಎಚ್ಚರಿಸುವುದು: “ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಲ್ಲಾ.” (1 ಪೇತ್ರ 2:16; ಗಲಾತ್ಯ 5:13) ಇಂದು ನಮಗಿರುವ ಬೈಬಲ್ ಸತ್ಯದ ಜ್ಞಾನವು, ಸುಳ್ಳು ಧಾರ್ಮಿಕ ಬೋಧನೆಗಳಿಂದ ನಮ್ಮನ್ನು ಸ್ವತಂತ್ರಗೊಳಿಸುತ್ತದೆ. (ಯೋಹಾನ 8:32) ಅಲ್ಲದೆ, ನಮಗೆ ಇಚ್ಛಾ ಸ್ವಾತಂತ್ರ್ಯವಿದೆ ಮತ್ತು ನಾವು ಆಯ್ಕೆಗಳನ್ನು ಮಾಡಬಲ್ಲೆವು. ಹೀಗಿದ್ದರೂ ನಾವು ನಮ್ಮ ಸ್ವಾತಂತ್ರ್ಯವನ್ನು ದುರುಪಯೋಗಿಸುವುದಿಲ್ಲ. ಒಡನಾಟ, ಉಡುಪು, ಕೇಶಶೈಲಿ, ವಿನೋದಾವಳಿ ಮತ್ತು ಆಹಾರಪಾನೀಯಗಳ ವಿಷಯದಲ್ಲಿ ಆಯ್ಕೆಗಳನ್ನು ಮಾಡುವಾಗ ಸಹ, ಸತ್ಯ ಕ್ರೈಸ್ತರು ದೇವರ ದಾಸರಾಗಿದ್ದು ತಮ್ಮನ್ನೇ ಮೆಚ್ಚಿಸಿಕೊಳ್ಳುವವರಾಗಿಲ್ಲ ಎಂಬುದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ನಾವು ಯೆಹೋವನನ್ನು ಸೇವಿಸುವ ಆಯ್ಕೆಮಾಡುತ್ತೇವೆ ಹೊರತು ನಮ್ಮ ಸ್ವಂತ ಶಾರೀರಿಕ ಅಭಿಲಾಷೆಗಳಿಗೆ ಅಥವಾ ಲೋಕದ ಗೀಳು ಮತ್ತು ಪ್ರವೃತ್ತಿಗಳಿಗೆ ದಾಸರಾಗಿರುವ ಆಯ್ಕೆಮಾಡುವುದಿಲ್ಲ.—ಗಲಾತ್ಯ 5:24; 2 ತಿಮೊಥೆಯ 2:22; ತೀತ 2:11-13.
19-21. (ಎ) ಐಹಿಕ ಅಧಿಕಾರದ ಸ್ಥಾನದಲ್ಲಿರುವವರ ಬಗ್ಗೆ ನಮ್ಮ ದೃಷ್ಟಿಕೋನವೇನಾಗಿದೆ? (ಬಿ) ಕೆಲವರು, “ಸಹೋದರರ ಸಂಪೂರ್ಣ ಸಂಘ”ಕ್ಕಾಗಿ ಪ್ರೀತಿಯನ್ನು ತೋರಿಸಿರುವುದು ಹೇಗೆ? (ಸಿ) ನಮಗಿರುವ ಅತ್ಯಂತ ಪ್ರಮುಖ ಜವಾಬ್ದಾರಿಯೇನು?
19 ಪೇತ್ರನು ಮುಂದುವರಿಸುವುದು: “ಎಲ್ಲ ಬಗೆಯ ಜನರನ್ನು ಸನ್ಮಾನಿಸಿರಿ, ಸಹೋದರರ ಸಂಪೂರ್ಣ ಸಂಘವನ್ನು ಪ್ರೀತಿಸುವವರಾಗಿರಿ, ದೇವರಿಗೆ ಭಯಪಡಿರಿ, ರಾಜನನ್ನು ಸನ್ಮಾನಿಸಿರಿ.” (1 ಪೇತ್ರ 2:17, NW) ಮನುಷ್ಯರು ಅಧಿಕಾರದ ವಿವಿಧ ಸ್ಥಾನಗಳನ್ನು ವಹಿಸಿಕೊಳ್ಳುವಂತೆ ಯೆಹೋವ ದೇವರು ಅನುಮತಿ ಕೊಡುವುದರಿಂದ, ನಾವು ಈ ಮನುಷ್ಯರಿಗೆ ಸೂಕ್ತವಾದ ಸನ್ಮಾನವನ್ನು ಕೊಡುತ್ತೇವೆ. ನಮ್ಮ ಶುಶ್ರೂಷೆಯನ್ನು ನಾವು ಶಾಂತಿಯಿಂದಲೂ ದೇವಭಕ್ತಿಯಿಂದಲೂ ಮುಂದುವರಿಸಲು ನಮಗೆ ಅನುಮತಿ ಸಿಗುವಂತೆ ನಾವು ಅವರ ವಿಷಯದಲ್ಲಿ ಪ್ರಾರ್ಥಿಸುತ್ತೇವೆ ಸಹ. (1 ತಿಮೊಥೆಯ 2:1-4) ಆದರೆ ಅದೇ ಸಮಯದಲ್ಲಿ ನಾವು “ಸಹೋದರರ ಸಂಪೂರ್ಣ ಸಂಘವನ್ನು ಪ್ರೀತಿಸುವವರು” ಆಗಿರುತ್ತೇವೆ. ನಾವು ಯಾವಾಗಲೂ ನಮ್ಮ ಕ್ರೈಸ್ತ ಸಹೋದರರ ಒಳಿತಿಗಾಗಿಯೇ ಕೆಲಸ ಮಾಡುತ್ತೇವೆ, ಹಾನಿಗಾಗಿ ಅಲ್ಲ.
20 ದೃಷ್ಟಾಂತಕ್ಕೆ, ಆಫ್ರಿಕದ ಒಂದು ರಾಷ್ಟ್ರವು ಕುಲಸಂಬಂಧವಾದ ಹಿಂಸಾಚಾರದಲ್ಲಿ ಛಿದ್ರಗೊಂಡಾಗ, ಯೆಹೋವನ ಸಾಕ್ಷಿಗಳ ಕ್ರೈಸ್ತ ನಡತೆಯು ಗಮನಾರ್ಹವಾಗಿ ಕಂಡುಬಂತು. ಸ್ವಿಟ್ಸರ್ಲೆಂಡಿನ ರೇಫಾರ್ಮೀಟೆ ಪ್ರೆಸೆ ಎಂಬ ವಾರ್ತಾಪತ್ರಿಕೆಯು ವರದಿಮಾಡಿದ್ದು: “1995ರಲ್ಲಿ ಆಫ್ರಿಕನ್ ರೈಟ್ಸ್ ಸಂಸ್ಥೆಯು, . . . [ಆ ಸಂಘರ್ಷದಲ್ಲಿ] ಯೆಹೋವನ ಸಾಕ್ಷಿಗಳನ್ನು ಬಿಟ್ಟು ಬೇರೆಲ್ಲ ಚರ್ಚ್ಗಳ ಭಾಗವಹಿಸುವಿಕೆಯನ್ನು ರುಜುಪಡಿಸಲು ಶಕ್ತವಾಯಿತು.” ಅಲ್ಲಿ ನಡೆಯುತ್ತಿದ್ದ ದುರಂತಕರವಾದ ಸಂಭವಗಳ ವಾರ್ತೆಯು ಬಾಹ್ಯ ಜಗತ್ತಿಗೆ ತಲಪಿದಾಗ, ಯೂರೋಪಿನಲ್ಲಿದ್ದ ಯೆಹೋವನ ಸಾಕ್ಷಿಗಳು ಒಡನೆ ಆ ಸಂಕಟಕ್ಕೊಳಗಾಗಿದ್ದ ದೇಶದ ತಮ್ಮ ಸಹೋದರರ ಮತ್ತು ಇತರರ ಸಹಾಯಾರ್ಥವಾಗಿ ಆಹಾರ ಮತ್ತು ಔಷಧ ಸಾಮಗ್ರಿಗಳನ್ನು ಕಳುಹಿಸಿದರು. (ಗಲಾತ್ಯ 6:10) ಅವರು ಜ್ಞಾನೋಕ್ತಿ 3:27ರ ಈ ಮಾತುಗಳಿಗೆ ಕಿವಿಗೊಟ್ಟರು: “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.”
21 ಆದರೆ ನಾವು ಯಾವುದೇ ಐಹಿಕ ಅಧಿಕಾರಿಗಳಿಗೆ ಸಲ್ಲಿಸತಕ್ಕ ಸನ್ಮಾನಕ್ಕಿಂತ ಮತ್ತು ನಮ್ಮ ಸಹೋದರರಿಗೂ ತೋರಿಸಬೇಕಾದ ಪ್ರೀತಿಗಿಂತ ಹೆಚ್ಚು ಪ್ರಾಮುಖ್ಯವಾದ ಜವಾಬ್ದಾರಿಯೊಂದಿದೆ. ಅದಾವುದು? ಪೇತ್ರನು ಹೇಳಿದ್ದು: “ದೇವರಿಗೆ ಭಯಪಡಿರಿ.” ನಾವು ಒಬ್ಬ ಮಾನವನಿಗೆ ಸಲ್ಲಿಸಬೇಕಾದುದಕ್ಕಿಂತಲೂ ಎಷ್ಟೋ ಹೆಚ್ಚಿನ ಋಣವನ್ನು ದೇವರಿಗೆ ಸಲ್ಲಿಸಬೇಕಾಗಿದೆ. ಇದು ಹೇಗೆ ನಿಜವಾಗಿದೆ? ಮತ್ತು ನಾವು ದೇವರಿಗೆ ಸಲ್ಲಿಸಬೇಕಾದ ಋಣವನ್ನು ಐಹಿಕ ಅಧಿಕಾರಿಗಳಿಗೆ ಸಲ್ಲಿಸಬೇಕಾದ ಋಣದೊಂದಿಗೆ ಹೇಗೆ ಸರಿದೂಗಿಸಸಾಧ್ಯವಿದೆ? ಈ ಪ್ರಶ್ನೆಗಳಿಗೆ ಮುಂದಿನ ಲೇಖನದಲ್ಲಿ ಉತ್ತರಗಳನ್ನು ಕೊಡಲಾಗುವುದು.
ನಿಮಗೆ ನೆನಪಿದೆಯೆ?
• ಕುಟುಂಬದೊಳಗೆ ಕ್ರೈಸ್ತರಿಗೆ ಯಾವ ಜವಾಬ್ದಾರಿಗಳಿವೆ?
• ಕೊಡುವ ಮನೋಭಾವವನ್ನು ನಾವು ಸಭೆಯಲ್ಲಿ ಹೇಗೆ ತೋರಿಸಬಲ್ಲೆವು?
• ನಮ್ಮ ಸುತ್ತಲಿರುವ ಲೋಕದ ಕಡೆಗೆ ನಮಗೆ ಯಾವ ಜವಾಬ್ದಾರಿಗಳಿವೆ?
• ನಾವು ನಡತೆಯ ಉನ್ನತ ಮಟ್ಟವನ್ನು ಕಾಪಾಡಿಕೊಳ್ಳುವುದರಿಂದ ನಮಗೆ ಸಿಗುವ ಕೆಲವು ಪ್ರಯೋಜನಗಳಾವುವು?
[ಅಧ್ಯಯನ ಪ್ರಶ್ನೆಗಳು]
[ಪುಟ 9ರಲ್ಲಿರುವ ಚಿತ್ರ]
ಕ್ರೈಸ್ತ ಕುಟುಂಬವು ಮಹಾ ಸಂತೋಷದ ಬುಗ್ಗೆಯಾಗಿರಸಾಧ್ಯವಿದೆ ಹೇಗೆ?
[ಪುಟ 10ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳು ಪರಸ್ಪರರನ್ನು ಪ್ರೀತಿಸುವುದೇಕೆ?
[ಪುಟ 10ರಲ್ಲಿರುವ ಚಿತ್ರಗಳು]
ನಮಗೆ ವ್ಯಕ್ತಿಗತವಾಗಿ ಪರಿಚಯವಿಲ್ಲದಿದ್ದರೂ ನಮ್ಮ ಸಹೋದರರಿಗೆ ನಾವು ಪ್ರೀತಿಯನ್ನು ತೋರಿಸಬಲ್ಲೆವೊ?