ಯೇಸುವಿನ ಜನನ ಹೇಗೆ ಮತ್ತು ಏಕೆ ಸಂಭವಿಸಿತು?
ಯೇಸುವಿನ ಜನನ ಹೇಗೆ ಮತ್ತು ಏಕೆ ಸಂಭವಿಸಿತು?
“ಸಾಧ್ಯವೇ ಇಲ್ಲ!” ಯೇಸುವಿನ ಜನನದ ವೃತ್ತಾಂತವನ್ನು ಕೇಳಿದಾಗ ಅನೇಕ ಮಂದಿ ಕ್ರೈಸ್ತ್ಯೇತರರು ಹೀಗೆ ಉದ್ಗರಿಸಬಹುದು. ಒಬ್ಬ ಮಾನವ ತಂದೆಯ ಸಹಾಯವಿಲ್ಲದೆ ಕನ್ಯೆಯೊಬ್ಬಳು ಗರ್ಭಧರಿಸಿ, ಒಂದು ಮಗುವನ್ನು ಹೆರುವಳೆಂದು ನಂಬುವುದು ವೈಜ್ಞಾನಿಕವಲ್ಲವೆಂಬುದು ಅವರ ಅಭಿಪ್ರಾಯ. ಆದರೆ ನಿಮ್ಮ ಅಭಿಪ್ರಾಯವೇನು?
ಲಂಡನ್ನಿನ ದ ಟೈಮ್ಸ್ ವಾರ್ತಾಪತ್ರವು 1984ರಲ್ಲಿ, ಈ ವಿಷಯದ ಮೇಲೆ ತರ್ಕಿಸುತ್ತಾ ಕಳುಹಿಸಲ್ಪಟ್ಟಿದ್ದ ಒಂದು ಪತ್ರವನ್ನು ಪ್ರಕಟಿಸಿತು: “ವಿಜ್ಞಾನವು ಅದ್ಭುತಕಾರ್ಯಗಳನ್ನು ವಿರೋಧಿಸುತ್ತದೆ ಎಂಬ ವಾದವು ನ್ಯಾಯಸಮ್ಮತವಾಗಿರುವುದಿಲ್ಲ. ಅದ್ಭುತಗಳು ನಡೆಯುವುದೇ ಇಲ್ಲವೆಂದು ನಂಬುವುದು, ಅವು ಸಂಭವಿಸುವುದು ಸಾಧ್ಯ ಎಂದು ಹೇಳುವಂತೆಯೇ ಒಂದು ನಂಬಿಕೆಯ ಕ್ರಿಯೆಯಾಗಿದೆ.” ಬ್ರಿಟಿಷ್ ವಿಶ್ವವಿದ್ಯಾನಿಲಯಗಳ 14 ಮಂದಿ ವಿಜ್ಞಾನದ ಪ್ರೊಫೆಸರರು ಆ ಪತ್ರಕ್ಕೆ ಸಹಿ ಹಾಕಿದ್ದರು. ಅವರು ಹೇಳಿದ್ದು: “ಕನ್ನಿಕೆಯಿಂದಾದ ಜನನವನ್ನು, ಸುವಾರ್ತೆಗಳಲ್ಲಿರುವ ಅದ್ಭುತಗಳನ್ನು ಮತ್ತು ಕ್ರಿಸ್ತನ ಪುನರುತ್ಥಾನವು ಐತಿಹಾಸಿಕ ಘಟನೆಗಳಾಗಿದ್ದವೆಂಬುದನ್ನು ನಾವು ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ.”
ಆದರೂ, ಯೇಸು ಒಬ್ಬ ಕನ್ಯೆಯಿಂದ ಜನಿಸಿರುವುದರ ಬಗ್ಗೆ ಯಾರಾದರೂ ಪ್ರಥಮ ಬಾರಿ ಕೇಳುವಾಗ ಕಕ್ಕಾಬಿಕ್ಕಿಯಾಗುವುದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ. “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು” ಎಂದು ದೇವದೂತನು ಕನ್ನಿಕೆಯಾಗಿದ್ದ ಯೇಸುವಿನ ತಾಯಿಗೆ ಹೇಳಿದಾಗ ಅವಳೇ ಕಕ್ಕಾಬಿಕ್ಕಿಯಾದಳು. ಅವನಿಗೆ ಉತ್ತರಿಸುತ್ತಾ, ಮರಿಯಳು ಕೇಳಿದ್ದು: “ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ”? ಆಗ ದೇವದೂತನು, ದೇವರು ಈ ಅದ್ಭುತವನ್ನು ತನ್ನ ಪವಿತ್ರಾತ್ಮದ ಮೂಲಕ ನಡೆಸುವನೆಂದು ವಿವರಿಸುತ್ತಾ ಹೀಗಂದನು: “ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.” (ಲೂಕ 1:31, 34-37) ಮಾನವ ಸಂತಾನೋತ್ಪತ್ತಿಯ ಬೆರಗುಗೊಳಿಸುವ ಕಾರ್ಯವಿಧಾನವನ್ನು ಸೃಷ್ಟಿಸಿದಾತನು, ಯೇಸು ಒಬ್ಬ ಶುದ್ಧ ಕನ್ಯೆಯ ಗರ್ಭದಲ್ಲಿ ಜೀವತಾಳಿ, ಜನಿಸುವಂತೆಯೂ ಮಾಡಶಕ್ತನೆಂಬುದು ನಿಶ್ಚಯ. ದೇವರು ಈ ವಿಶ್ವವನ್ನೂ ಅದರ ನಿಕರವಾದ ನಿಯಮಗಳನ್ನೂ ಸೃಷ್ಟಿಸಿರುವಲ್ಲಿ, ಮರಿಯಳ ಅಂಡಾಶಯದಿಂದ ಒಂದು ಅಂಡಾಣುವನ್ನು ಉಪಯೋಗಿಸಿ ಅದನ್ನು ಪರಿಪೂರ್ಣ ಮಾನವ ಪುತ್ರನಾಗಿ ನಿರ್ಮಿಸಲೂ ಶಕ್ತನಾಗಿದ್ದಾನೆ.
ಇದೇಕೆ ಅಗತ್ಯವಾಗಿತ್ತು?
ಮರಿಯಳು ಗರ್ಭವತಿಯಾದಾಗ ಯೋಸೇಫನೆಂಬ ದೇವಭಕ್ತನೊಂದಿಗೆ ಈಗಾಗಲೇ ಆಕೆಯ ನಿಶ್ಚಿತಾರ್ಥವಾಗಿತ್ತು. ದೇವದೂತನು ಒಂದು ಸ್ವಪ್ನದಲ್ಲಿ ಯೋಸೇಫನಿಗೆ, ಅವನ ಕನ್ಯಾ ನಿಶ್ಚಿತ ವಧು ಗರ್ಭವತಿಯಾದುದ್ದರ ಆಶ್ಚರ್ಯಕರವಾದ ಕಾರಣವನ್ನು ತಿಳಿಸಿದನು. ಆ ದೇವದೂತನು ಹೇಳಿದ್ದು: “ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿಕಾಯುವನು.” (ಮತ್ತಾಯ 1:20, 21) ಹೀಬ್ರು ಭಾಷೆಯಲ್ಲಿ ಯೇಸು ಎಂಬ ಹೆಸರಿನ ಅರ್ಥವು, “ಯೆಹೋವನು ರಕ್ಷಣೆ” ಎಂದಾಗಿದೆ. ಇದು ನಮಗೆ ಪಾಪ ಮತ್ತು ಮರಣದಿಂದ ರಕ್ಷಣೆಯ ಅಗತ್ಯವಿದೆ ಎಂಬುದನ್ನು ಮತ್ತು ಇಂತಹ ರಕ್ಷಣೆಗಾಗಿ ಯೆಹೋವ ದೇವರು ಯೇಸುವಿನ ಮೂಲಕ ಮಾಡಿರುವ ಏರ್ಪಾಡನ್ನು ಜ್ಞಾಪಕಕ್ಕೆ ತರುತ್ತದೆ.
ರೋಮಾಪುರ 5:12) ಹಾಗಾದರೆ ಆದಾಮನ ವಂಶಸ್ಥರು ಪಾಪದಿಂದ ರಕ್ಷಿಸಲ್ಪಟ್ಟು ಪರಿಪೂರ್ಣತೆಯನ್ನು ಪಡೆಯಸಾಧ್ಯವಿರುವುದಾದರೂ ಹೇಗೆ? ನ್ಯಾಯದ ತಕ್ಕಡಿಯನ್ನು ಸಮತೋಲನಗೊಳಿಸಲು ಆದಾಮನ ಜೀವಕ್ಕೆ ಅನುರೂಪವಾದ ಬೆಲೆಯಿರುವ ಇನ್ನೊಂದು ಪರಿಪೂರ್ಣ ಮಾನವ ಜೀವವು ತೆರಲ್ಪಡಲೇಬೇಕಾಗಿತ್ತು. ದೇವರು ಪರಿಪೂರ್ಣ ಮನುಷ್ಯನಾದ ಯೇಸು ಅದ್ಭುತಕರವಾಗಿ ಜನಿಸುವಂತೆ ಮಾಡಲು ಇದೇ ಕಾರಣ. ಮತ್ತು ತನ್ನ ವೈರಿಗಳು ತನ್ನನ್ನು ಕೊಲ್ಲುವಂತೆ ಯೇಸು ಒಪ್ಪಿಸಿಕೊಟ್ಟ ಕಾರಣವೂ ಇದೇ. (ಯೋಹಾನ 10:17, 18; 1 ತಿಮೊಥೆಯ 2:5, 6) ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣದ ಬಳಿಕ ಯೇಸು ಭರವಸೆಯಿಂದ ಹೀಗೆ ಹೇಳಸಾಧ್ಯವಾಗಿತ್ತು: “ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ [“ಹೇಡೀಸ್,” NW, ಮಾನವಕುಲದ ಸಾಮಾನ್ಯ ಸಮಾಧಿ] ಬೀಗದಕೈಗಳು ನನ್ನಲ್ಲಿ ಅವೆ.”—ಪ್ರಕಟನೆ 1:18.
ಪ್ರಥಮ ಮನುಷ್ಯನಾಗಿದ್ದ ಆದಾಮನು ಪಾಪ ಮಾಡಿದ್ದರಿಂದ, ಅವನ ಸಂತತಿಯವರೆಲ್ಲರೂ ಅಪರಿಪೂರ್ಣರಾಗಿ, ದೇವರ ನಿಯಮಗಳನ್ನು ಮುರಿಯುವ ಪ್ರವೃತ್ತಿಯುಳ್ಳವರಾಗಿ ಜನಿಸಿದರು. (ಮರಣ ಮತ್ತು ಹೇಡೀಸ್ನ ಸಾಂಕೇತಿಕ ಬೀಗದಕೈಗಳೊಂದಿಗೆ, ಆದಾಮನು ಕಳೆದುಕೊಂಡದ್ದನ್ನು ಪುನಃ ಪಡೆದುಕೊಳ್ಳುವ ಮಾರ್ಗವನ್ನು ಪಾಪಿಗಳಾದ ಮಾನವರಿಗೆ ಯೇಸು ತೆರೆಯುತ್ತಾನೆ. ಯೇಸು ವಿವರಿಸಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.” (ಯೋಹಾನ 11:25, 26) ಎಷ್ಟು ಬೆರಗುಗೊಳಿಸುವಂಥ ವಾಗ್ದಾನವಿದು! ಆದರೂ, ಯೇಸುವಿನ ಜನನಕ್ಕೆ ಇದಕ್ಕಿಂತಲೂ ಹೆಚ್ಚು ಮಹತ್ವದ ಇನ್ನೊಂದು ಕಾರಣವಿದೆ.
ಅತ್ಯಂತ ಪ್ರಮುಖ ಕಾರಣ
ಮರಿಯಳ ಗರ್ಭದಲ್ಲಿ ಯೇಸುವಿನ ಬಸಿರಾಗುವಿಕೆಯು ಅವನ ಜೀವನದಾರಂಭವಾಗಿರಲಿಲ್ಲ. ನಾನು “ಪರಲೋಕದಿಂದ ಬಂದೆನು” ಎಂದು ಯೇಸು ಸ್ಪಷ್ಟವಾಗಿ ತಿಳಿಸಿದನು. (ಯೋಹಾನ 6:38) ಯೇಸು ಸೃಷ್ಟಿಯ ಆರಂಭದಿಂದಲೇ ತನ್ನ ಸ್ವರ್ಗೀಯ ಪಿತನೊಂದಿಗೆ ಆತ್ಮಜೀವಿಗಳ ಲೋಕದಲ್ಲಿ ಜೀವಿಸಿದ್ದನು. ವಾಸ್ತವದಲ್ಲಿ, ಬೈಬಲು ಅವನನ್ನು ‘ದೇವರ ಸೃಷ್ಟಿಗೆ ಮೂಲನು’ ಎಂದು ವರ್ಣಿಸುತ್ತದೆ. (ಪ್ರಕಟನೆ 3:14) ಯೇಸು ಸ್ವರ್ಗದಲ್ಲಿದ್ದಾಗ, ಪ್ರಥಮ ಮಾನವರನ್ನು ದೇವರಾಳ್ವಿಕೆಗೆ ವಿರುದ್ಧವಾಗಿ ತಿರುಗಿಸಿದ ಒಬ್ಬ ದುಷ್ಟ ದೇವದೂತನ ದಂಗೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದನು. ಇದು ಯೇಸುವಿಗೆ, ದೇವರ ಪರಿಪೂರ್ಣ ಮಾನವ ಪುತ್ರನಾಗಿ ಹುಟ್ಟಿಬರುವ ಅಪೇಕ್ಷೆಗೆ ಅತಿ ಪ್ರಾಮುಖ್ಯವಾದ ಕಾರಣವನ್ನು ಒದಗಿಸಿತು. ಅದೇನಾಗಿತ್ತು?
ತನ್ನ ಸ್ವರ್ಗೀಯ ತಂದೆಗೆ ಮಾತ್ರವೇ ವಿಶ್ವವನ್ನಾಳುವ ಹಕ್ಕಿದೆ ಎಂಬುದನ್ನು ರುಜುಪಡಿಸುವುದೇ. ಭೂಮಿಯಲ್ಲಿ ತನ್ನ ಜನನದಿಂದ ಹಿಡಿದು ಮರಣಪರ್ಯಂತ ನಂಬಿಗಸ್ತನಾಗಿದ್ದುದರ ಮೂಲಕ, ಯೆಹೋವನು ತನ್ನ ಸೃಷ್ಟಿಜೀವಿಗಳನ್ನು ಆಳುವ ವಿಧಕ್ಕೆ ಅಧೀನನಾಗಿರಲು ತನಗಿದ್ದ ಸಿದ್ಧಮನಸ್ಸನ್ನು ಯೇಸು ತೋರಿಸಿಕೊಟ್ಟನು. ದೇವರ ವೈರಿಗಳು ಯೇಸುವನ್ನು ಕೊಲ್ಲುವ ಮೊದಲು, ಅವನು ತನ್ನ ಜೀವವನ್ನು ಯಜ್ಞಾರ್ಪಿಸಲು ಇಷ್ಟಪಡುವ ಕಾರಣವನ್ನು ಯೇಸು ಸ್ಪಷ್ಟವಾಗಿ ಹೇಳಿದನು. ಅವನು ತಿಳಿಸಿದ್ದೇನೆಂದರೆ, ತಾನು ದೇವರನ್ನು ಪ್ರೀತಿಸಿದೆ ಎಂಬುದನ್ನು ಲೋಕವು ತಿಳಿದುಕೊಳ್ಳುವುದೇ ಆ ಕಾರಣವಾಗಿತ್ತು. (ಯೋಹಾನ 14:31) ಪ್ರಥಮ ಮಾನವರಿಬ್ಬರೂ, ಅಂದರೆ ಆದಾಮಹವ್ವರು ಇಂತಹ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಿದ್ದಲ್ಲಿ, ಅವರಿಗೆ ಬಂದ ಹೆಚ್ಚು ಸುಲಭವಾದ ಪರೀಕ್ಷೆಯಲ್ಲಿ ಅವರು ನಂಬಿಗಸ್ತರಾಗಿರಬಹುದಿತ್ತು.—ಆದಿಕಾಂಡ 2:15-17.
ಯೇಸುವಿನ ನಂಬಿಗಸ್ತಿಕೆಯು, ಆ ದುಷ್ಟ ದೂತನಾದ ಸೈತಾನನನ್ನು ಸುಳ್ಳುಗಾರನೆಂದೂ ಬಯಲುಪಡಿಸಿತು. ಸೈತಾನನು ಸ್ವರ್ಗದ ದೇವದೂತರ ಮುಂದೆ, “ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಹೇಳಿ, ದೇವರ ಮೇಲೂ ಮನುಷ್ಯನ ಮೇಲೂ ಮಿಥ್ಯಾಪವಾದವನ್ನು ಹೊರಿಸಿದ್ದನು. ಯೋಬ 2:1, 4) ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಲಿಕ್ಕೋಸ್ಕರ ಎಲ್ಲಾ ಮಾನವರು ದೇವರಿಗೆ ಅವಿಧೇಯರಾಗುವರು ಎಂದು ಸೈತಾನನು ತಪ್ಪಾರೋಪ ಹೊರಿಸಿದನು.
(ಮೇಲೆ ಹೇಳಲಾಗಿರುವ ವಿವಾದಾಂಶಗಳು ದೇವರ ಆಳ್ವಿಕೆಯ ನೀತಿಪರತೆ ಮತ್ತು ನ್ಯಾಯಾತ್ಮಕ ಹಕ್ಕಿಗೆ ಸವಾಲನ್ನೊಡ್ಡಿದವು. ಈ ವಿವಾದಾಂಶಗಳನ್ನು ಇತ್ಯರ್ಥಗೊಳಿಸಲು, ಯೇಸು ಮನುಷ್ಯನಾಗಿ ಹುಟ್ಟಿ ಮರಣಪರ್ಯಂತ ನಂಬಿಗಸ್ತನಾಗಿರಲು ಸಿದ್ಧಮನಸ್ಸುಳ್ಳವನಾಗಿದ್ದನು.
ಹೀಗೆ, ಯೇಸು ಭೂಮಿಯ ಮೇಲೆ ಹುಟ್ಟಿಬರಲು ಮುಖ್ಯ ಕಾರಣವು, ಅವನೇ ಹೇಳಿದಂತೆ, “ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ” ಆಗಿತ್ತು. (ಯೋಹಾನ 18:37) ದೇವರಾಳ್ವಿಕೆಯು ಸಂಪೂರ್ಣವಾಗಿ ನೀತಿಭರಿತವಾಗಿದ್ದು, ಅದಕ್ಕೆ ಅಧೀನರಾಗಿರುವುದು ಬಾಳಿಕೆ ಬರುವ ಸಂತೋಷವನ್ನು ತರುತ್ತದೆಂಬುದನ್ನು ಅವನು ನಡೆನುಡಿಗಳಲ್ಲಿ ತೋರಿಸಿದನು. ತಾನು ಲೋಕಕ್ಕೆ ಬಂದಿರುವುದು ತನ್ನ ಪ್ರಾಣವನ್ನು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡುಕೊಡುವದಕ್ಕೆ,’ ಮತ್ತು ಹೀಗೆ ಪಾಪಿಗಳಾದ ಮಾನವರಿಗೆ ಪರಿಪೂರ್ಣತೆ ಹಾಗೂ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನು ತೆರೆಯಲಿಕ್ಕಾಗಿ ಎಂದು ಸಹ ಯೇಸು ವಿವರಿಸಿದನು. (ಮಾರ್ಕ 10:45) ಮಾನವಕುಲವು ಈ ಮಹತ್ವಪೂರ್ಣ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಯೇಸುವಿನ ಜನನದ ದಾಖಲೆಯ ಅಗತ್ಯವಿತ್ತು. ಇದಲ್ಲದೆ, ಮುಂದಿನ ಲೇಖನವು ತಿಳಿಸುವಂತೆ ಯೇಸುವಿನ ಜನನವನ್ನಾವರಿಸುವ ಘಟನೆಗಳಲ್ಲಿ, ಇತರ ಪ್ರಮುಖ ಪಾಠಗಳೂ ಅಡಕವಾಗಿವೆ.
[ಪುಟ 4ರಲ್ಲಿರುವ ಚಿತ್ರಗಳು]
ಆದಾಮನ ವಂಶಸ್ಥರು ಪಾಪದಿಂದ ಹೇಗೆ ರಕ್ಷಿಸಲ್ಪಡಸಾಧ್ಯವಿತ್ತು?