‘ದೇವರೇ, ಹೀಗಾಗುವಂತೆ ಏಕೆ ಅನುಮತಿಸಿದೆ?’
‘ದೇವರೇ, ಹೀಗಾಗುವಂತೆ ಏಕೆ ಅನುಮತಿಸಿದೆ?’
ರಿಕಾರ್ಡೊ, ತನ್ನ ಪತ್ನಿ ಮಾರಿಯಾಳೊಂದಿಗೆ ಡಾಕ್ಟರರಿಗಾಗಿ ಕಾಯುವ ಕೋಣೆಯಲ್ಲಿ ಕುಳಿತುಕೊಂಡಿದ್ದದ್ದನ್ನು ಈಗಲೂ ಜ್ಞಾಪಿಸಿಕೊಳ್ಳುತ್ತಾನೆ. * ಅವರ ಕೈಯಲ್ಲಿ ಮಾರಿಯಾಳ ಇತ್ತೀಚಿನ ವೈದ್ಯಕೀಯ ತಪಾಸಣೆಯ ಫಲಿತಾಂಶಗಳಿದ್ದವು. ಆದರೆ ಅವರಿಬ್ಬರಿಗೂ ಅದನ್ನು ತೆರೆದು ಓದುವಷ್ಟು ಧೈರ್ಯವಿರಲಿಲ್ಲ. ಆದರೂ, ರಿಕಾರ್ಡೊ ಹೇಗೊ ಆ ಲಕೋಟೆಯನ್ನು ತೆರೆದನು. ಇಬ್ಬರೂ ಅವಸರದಿಂದ, ಆ ವರದಿಯಲ್ಲಿದ್ದ ವೈದ್ಯಕೀಯ ಪದಗಳ ಮೇಲೆ ದೃಷ್ಟಿಹಾಯಿಸಿದರು. ಅವರಿಬ್ಬರ ದೃಷ್ಟಿಯೂ “ಕ್ಯಾನ್ಸರ್” ಎಂಬ ಪದದ ಮೇಲೆ ಬಿತ್ತು. ಆ ಪದದ ಪೂರ್ಣಾರ್ಥವೇನೆಂಬದನ್ನು ಅವರು ಗ್ರಹಿಸಿದ ಕಾರಣ, ಅವರಿಬ್ಬರೂ ಅಳಲಾರಂಭಿಸಿದರು.
“ಡಾಕ್ಟರರು ತುಂಬ ದಯಾಪರರಾಗಿದ್ದರು. ಆದರೂ ಪರಿಸ್ಥಿತಿಯು ಎಷ್ಟು ಗಂಭೀರವಾಗಿದೆ ಎಂಬುದು ಅವರಿಗೆ ಗೊತ್ತಿದ್ದರಿಂದ, ಅವರು ಆಗಾಗ್ಗೆ ನಮಗೆ ದೇವರಲ್ಲಿ ಭರವಸೆಯಿಡಿರಿ ಎಂದು ಹೇಳಿದರು” ಎಂಬದನ್ನು ರಿಕಾರ್ಡೊ ಜ್ಞಾಪಿಸಿಕೊಳ್ಳುತ್ತಾನೆ.
ವಿಕಿರಣ ಚಿಕಿತ್ಸೆಯನ್ನಾರಂಭಿಸುವ ಮುಂಚೆ, ಮಾರಿಯಾಳ ಡಾಕ್ಟರರು ಅವಳ ಬಲಗಾಲಿನಲ್ಲಿ ಆಗುತ್ತಿದ್ದ ಅನೈಚ್ಛಿಕ ಚಲನೆಗಳನ್ನು ಗಮನಿಸಿದರು. ಹೆಚ್ಚಿನ ಪರೀಕ್ಷೆಗಳನ್ನು ಮಾಡಿದಾಗ, ಆ ಕ್ಯಾನ್ಸರ್ ಅವಳ ಮಿದುಳಿಗೆ ತಲಪಿದೆಯೆಂಬುದು ತಿಳಿದುಬಂತು. ವಿಕಿರಣ ಚಿಕಿತ್ಸೆಯನ್ನಾರಂಭಿಸಿದ ಒಂದೇ ವಾರದೊಳಗೆ ಅದನ್ನು ನಿಲ್ಲಿಸಲಾಯಿತು. ಮಾರಿಯಾ ಕೋಮಾವಸ್ಥೆಗೆ ಜಾರಿದಳು. ಎರಡು ತಿಂಗಳುಗಳ ನಂತರ ಅವಳು ತೀರಿಕೊಂಡಳು. “ಅವಳ ನರಳಾಟ ಕೊನೆಗೊಂಡಿತಲ್ಲಾ ಎಂದು ನನಗೆ ಸಂತೋಷವಾಯಿತಾದರೂ, ಅವಳ ಅನುಪಸ್ಥಿತಿಯು ನನ್ನನ್ನು ಎಷ್ಟು ಕಿತ್ತುತಿನ್ನುತ್ತಿತ್ತೆಂದರೆ, ನನ್ನ ಜೀವನವೂ ಕೊನೆಗೊಂಡರೆ ಒಳ್ಳೇದಿತ್ತೆಂದು ನಾನು ಹಾರೈಸಲಾರಂಭಿಸಿದೆ. ಎಷ್ಟೋ ಸಾರಿ ನಾನು ‘ಹೀಗಾಗುವಂತೆ ಏಕೆ ಅನುಮತಿಸಿದೆ?’ ಎಂದು ದೇವರ ಬಳಿ ರೋದಿಸುತ್ತಿದ್ದೆ.”
ದುರಂತವು ಬಂದೆರಗುವಾಗ, ಅನೇಕ ಪ್ರಶ್ನೆಗಳೇಳುತ್ತವೆ
ರಿಕಾರ್ಡೊನಂತೆಯೇ, ಜಗತ್ತಿನಾದ್ಯಂತ ಅಸಂಖ್ಯಾತ ಜನರು ಕಷ್ಟಾನುಭವದ ವಾಸ್ತವಿಕತೆಯನ್ನು ಎದುರಿಸುವಂತೆ ಒತ್ತಾಯಿಸಲ್ಪಡುತ್ತಾರೆ. ಹೆಚ್ಚಾಗಿ ಕಷ್ಟಾನುಭವಿಸುವವರು ಮುಗ್ಧ ಜನರಾಗಿರುತ್ತಾರೆ. ಮಾನವಕುಲವನ್ನು ಬಾಧಿಸುತ್ತಿರುವ ನಿರಂತರವಾದ ಸಶಸ್ತ್ರ ಹೋರಾಟಗಳಿಂದಾಗಿ ಉಂಟಾಗುವ ಎದೆಬಿರಿಯುವಂಥ ದುಃಖದ ಕುರಿತಾಗಿ ಯೋಚಿಸಿರಿ. ಇಲ್ಲವೆ ಬಲಾತ್ಕಾರ ಸಂಭೋಗ, ಮಕ್ಕಳ ಮೇಲಿನ ದೌರ್ಜನ್ಯ, ಗೃಹ ಹಿಂಸಾಚಾರ ಮತ್ತು ಮನುಷ್ಯರಿಂದ ಮಾಡಲ್ಪಡುವ ಇನ್ನಿತರ ದುಷ್ಕೃತ್ಯಗಳಿಗೆ ಬಲಿಯಾದವರು ಅನುಭವಿಸುತ್ತಿರುವ ವೇದನೆಯನ್ನು ಪರಿಗಣಿಸಿರಿ. ಇತಿಹಾಸದಾದ್ಯಂತ ಸ್ತ್ರೀಪುರುಷರು ಪರಸ್ಪರರ ಮೇಲೆ ಹೇರಲು ಸಿದ್ಧವಾಗಿರುವ ಅನ್ಯಾಯ ಮತ್ತು ನೋವಿಗೆ ಮಿತಿಯೇ ಇಲ್ಲದಿರುವಂತೆ ತೋರುತ್ತದೆ. (ಪ್ರಸಂಗಿ 4:1-3) ಅದಲ್ಲದೆ, ನೈಸರ್ಗಿಕ ವಿಪತ್ತುಗಳು ಇಲ್ಲವೆ ಭಾವನಾತ್ಮಕ, ಮಾನಸಿಕ, ಮತ್ತು ಶಾರೀರಿಕ ಕಾಯಿಲೆಗಳಿಗೆ ತುತ್ತಾಗಿರುವವರ ಸಂಕಷ್ಟವೂ ಇದೆ. ಹೀಗಿರುವುದರಿಂದ, “ದೇವರು ಇಂಥ ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?” ಎಂದು ಅನೇಕರು ಕೇಳುವುದು, ಅಚ್ಚರಿಯನ್ನು ಹುಟ್ಟಿಸುವ ಸಂಗತಿಯಾಗಿರುವುದಿಲ್ಲ.
ಧಾರ್ಮಿಕ ನಿಶ್ಚಿತಾಭಿಪ್ರಾಯಗಳಿರುವವರಿಗೂ ಕಷ್ಟಾನುಭವಿಸುವುದು ಸುಲಭದ ಸಂಗತಿಯಾಗಿರುವುದಿಲ್ಲ. ಒಬ್ಬ ಪ್ರೀತಿಯ, ಸರ್ವಶಕ್ತ ದೇವರು, ಮನುಷ್ಯರು ಕಷ್ಟಾನುಭವಿಸುವಂತೆ ಅನುಮತಿಸಲು ಕಾರಣವು ಏನಾಗಿರಬಹುದೆಂದು ನೀವು ಸಹ ಯೋಚಿಸುತ್ತಿರಬಹುದು. ಗೊಂದಲಕ್ಕೀಡುಮಾಡುವಂಥ ಈ ಪ್ರಶ್ನೆಗೆ ತೃಪ್ತಿದಾಯಕವಾದ ಹಾಗೂ ಸತ್ಯಭರಿತವಾದ ಉತ್ತರವನ್ನು ಕಂಡುಕೊಳ್ಳುವುದು, ನಮ್ಮ ಮನಶ್ಶಾಂತಿ ಹಾಗೂ ದೇವರೊಂದಿಗಿನ ನಮ್ಮ ಸಂಬಂಧಕ್ಕಾಗಿ ಅತ್ಯಾವಶ್ಯಕವಾಗಿದೆ. ಬೈಬಲು ಅಂಥ ಉತ್ತರವನ್ನು ಕೊಡುತ್ತದೆ. ಅದು ಏನು ಹೇಳುತ್ತದೆಂಬದನ್ನು ದಯವಿಟ್ಟು ಮುಂದಿನ ಲೇಖನದಲ್ಲಿ ಗಮನಿಸಿರಿ.
[ಪಾದಟಿಪ್ಪಣಿ]
^ ಪ್ಯಾರ. 2 ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 3ರಲ್ಲಿರುವ ಚಿತ್ರಗಳು]
ದೇವರಲ್ಲಿ ಭರವಸೆಯಿಡುವಂತೆ ಡಾಕ್ಟರರು ನಮಗೆ ಹೇಳುತ್ತಾ ಇದ್ದರು