ಕೆಡುಕು ಜಯಗಳಿಸಿದೆಯೆ?
ಕೆಡುಕು ಜಯಗಳಿಸಿದೆಯೆ?
ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ಮಧ್ಯೆ ನಡೆಯುವ ವಿಶ್ವ ಹೋರಾಟದ ವಿಚಾರವು, ಲೇಖಕರು ಮತ್ತು ತತ್ತ್ವಜ್ಞಾನಿಗಳು ಇತಿಹಾಸದಾದ್ಯಂತ ಅನೇಕ ಊಹಾಪೋಹಗಳನ್ನು ಮಾಡುವಂತೆ ಪ್ರಚೋದಿಸಿದೆ. ಆದರೂ, ದೇವರು ಮತ್ತು ಪಿಶಾಚನ ಮಧ್ಯೆ ನಡೆಯುತ್ತಿರುವ ಹೋರಾಟದ ನಿಷ್ಕೃಷ್ಟ ವೃತ್ತಾಂತವನ್ನು ಒಳಗೊಂಡಿರುವ ಗ್ರಂಥವೊಂದಿದೆ. ಆ ಗ್ರಂಥವು ಬೈಬಲೇ. ಅದು ಈ ಹೋರಾಟದಲ್ಲಿ ಒಳಗೂಡಿರುವ ವಿವಾದಾಂಶಗಳ ಮೇಲೆ ಬೆಳಕನ್ನು ಬೀರಿ, ನಿಜವಾಗಿಯೂ ಯಾರು ಗೆದ್ದಿದ್ದಾರೆ ಎಂಬುದನ್ನು ಒಬ್ಬನು ತಿಳಿದುಕೊಳ್ಳುವಂತೆ ಸಹಾಯಮಾಡುತ್ತದೆ.
ಪ್ರಥಮ ಪುರುಷ ಮತ್ತು ಸ್ತ್ರೀಯು ಸೃಷ್ಟಿಸಲ್ಪಟ್ಟು ಸ್ವಲ್ಪ ಸಮಯ ಕಳೆಯುವಷ್ಟರಲ್ಲೇ, ಪಿಶಾಚನಾದ ಸೈತಾನನೆಂಬ ಅದೃಶ್ಯ ಆತ್ಮಜೀವಿಯೊಬ್ಬನು ದೇವರ ಆಳಿಕೆಯನ್ನು ಪಂಥಾಹ್ವಾನಿಸಿದನು. ಹೇಗೆ? ದೇವರು ತನ್ನ ಸೃಷ್ಟಿಜೀವಿಗಳಿಂದ ಒಳ್ಳೆಯ ವಿಷಯಗಳನ್ನು ತಡೆಹಿಡಿದಿದ್ದಾನೆಂದೂ ಮಾನವರು ಆತನಿಂದ ಸ್ವತಂತ್ರರಾಗಿರುವಲ್ಲಿ ಅವರಿಗೆ ಒಳಿತಾಗುವುದೆಂದೂ ಕುಯುಕ್ತಿಯಿಂದ ಸೂಚಿಸುವ ಮೂಲಕವೇ.—ಆದಿಕಾಂಡ 3:1-5; ಪ್ರಕಟನೆ 12:9.
ತರುವಾಯ, ಮೂಲಪಿತನಾಗಿದ್ದ ಯೋಬನ ದಿನಗಳಲ್ಲಿ ಸೈತಾನನು ಇನ್ನೊಂದು ವಿವಾದಾಂಶವನ್ನು ಎಬ್ಬಿಸಿದನು. ದೇವರ ಕಡೆಗೆ ಯೋಬನಿಗಿದ್ದ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸುತ್ತಾ ಸೈತಾನನು, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಹೇಳಿದನು. (ಯೋಬ 2:4) ಈ ವಾದವು ಎಷ್ಟು ವಿಸ್ತಾರವ್ಯಾಪ್ತಿಯುಳ್ಳದ್ದಾಗಿತ್ತು! ಯೋಬ ಎಂಬ ಹೆಸರಿನ ಬದಲು “ಒಬ್ಬ ಮನುಷ್ಯನು” ಎಂಬ ಸಾಮಾನ್ಯ ಪದವನ್ನು ಉಪಯೋಗಿಸುವ ಮೂಲಕ, ಸೈತಾನನು ಪ್ರತಿಯೊಬ್ಬ ಮಾನವನ ಸಮಗ್ರತೆಯನ್ನು ಸಂದೇಹಕ್ಕೆ ಒಳಪಡಿಸಿದನು. ಅವನು ಕಾರ್ಯತಃ ಹೇಳಿದ್ದು: ‘ತನ್ನ ಜೀವವನ್ನು ಉಳಿಸಿಕೊಳ್ಳಲು ಒಬ್ಬ ಮನುಷ್ಯನು ಏನು ಬೇಕಾದರೂ ಮಾಡುವನು. ನೀನು ನನಗೆ ಒಂದು ಅವಕಾಶವನ್ನು ಕೊಟ್ಟರೆ ಸಾಕು, ನಾನು ಯಾರನ್ನೇ ಆಗಲಿ ನಿನ್ನಿಂದ ದೂರಮಾಡುವೆನು.’
ದೇವರ ಮತ್ತು ಪಿಶಾಚನ ನಡುವಣ ಹೋರಾಟದಲ್ಲಿನ ವಿಜಯವು, ಈ ಎರಡು ಪ್ರಶ್ನೆಗಳಿಗೆ ಸಿಗುವ ಉತ್ತರಗಳ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ: ಮನುಷ್ಯನು ತನ್ನನ್ನು ತಾನೇ ಯಶಸ್ವಿಯಾಗಿ ಆಳಿಕೊಳ್ಳಲು ಸಮರ್ಥನಾಗಿದ್ದಾನೊ? ಪಿಶಾಚನು ಎಲ್ಲರನ್ನೂ ಸತ್ಯ ದೇವರಿಂದ ದೂರ ತಿರುಗಿಸಲು ಶಕ್ತನಾಗಿದ್ದಾನೊ?
ಮನುಷ್ಯರು ತಮ್ಮನ್ನು ಯಶಸ್ವಿಯಾಗಿ ಆಳಿಕೊಳ್ಳಲು ಶಕ್ತರೊ?
ಸಾವಿರಾರು ವರುಷಗಳಿಂದಲೂ ಮಾನವರು ವಿವಿಧ ರೀತಿಯ ಆಳಿಕೆಗಳನ್ನು ಪ್ರಯೋಗಿಸಿ ನೋಡಿದ್ದಾರೆ. ಇತಿಹಾಸದಲ್ಲೆಲ್ಲ ಬೇರೆ ಬೇರೆ ರೀತಿಯ ಸರಕಾರಗಳು, ರಾಜಪ್ರಭುತ್ವ, ಶ್ರೀಮಂತಪ್ರಭುತ್ವ, ಪ್ರಜಾಪ್ರಭುತ್ವ, ನಿರಂಕುಶಪ್ರಭುತ್ವ, ಫ್ಯಾಸಿಸಮ್ ಮತ್ತು ಸಮತಾವಾದದಂತಹ ಪ್ರಭುತ್ವಗಳನ್ನು ಪ್ರಯೋಗಿಸಿ ನೋಡಲಾಗಿದೆ. ಬೇರೆ ಬೇರೆ ರೀತಿಯ ಸರಕಾರಗಳನ್ನು ಪ್ರಯೋಗಿಸಿ ನೋಡಬೇಕಾಯಿತೆಂಬ ನಿಜತ್ವವೇ, ಈ ವಿಭಿನ್ನ ಆಳುವ ವಿಧಾನಗಳು ತೃಪ್ತಿಕರವಾಗಿಲ್ಲ ಎಂಬುದನ್ನು ಸೂಚಿಸುವುದಿಲ್ಲವೊ?
ಲೋಕದ ಇತಿಹಾಸ (ಇಂಗ್ಲಿಷ್) ಎಂಬ 1922ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಏಚ್. ಜಿ. ವೆಲ್ಸ್ ಬರೆಯುವುದು: “ರೋಮನರು ಹೆಚ್ಚುಕಡಮೆ ಅರಿವಿಲ್ಲದೆ ಒಂದು ವ್ಯಾಪಕವಾದ ಆಡಳಿತ ಪ್ರಯೋಗದಲ್ಲಿ ಭಾಗವಹಿಸುತ್ತಿದ್ದರು.” ಅವರು ಮುಂದುವರಿಸುವುದು: “ಅದರ ಆಡಳಿತ ರೀತಿಯು ಯಾವಾಗಲೂ ಬದಲಾಗುತ್ತಾ ಇತ್ತು. ಅದು ಸ್ಥಿರತೆಯ ಹಂತವನ್ನೇ ತಲಪಲಿಲ್ಲ. ಒಂದರ್ಥದಲ್ಲಿ ಈ ಪ್ರಯೋಗವು ನೆಲಕಚ್ಚಿತು. ಇನ್ನೊಂದು ಅರ್ಥದಲ್ಲಿ ಆ ಪ್ರಯೋಗವು ಪೂರ್ತಿಯಾಗದೆ ಹಾಗೆಯೇ ಉಳಿದಿದ್ದು, ಇಂದು ಯೂರೋಪ್ ಹಾಗೂ ಅಮೆರಿಕಗಳು, ರೋಮನರು ಮೊದಲಾಗಿ ಎದುರಿಸಿದ ಆ ಲೋಕವ್ಯಾಪಕ ರಾಜ್ಯಭಾರದ ಜಟಿಲತೆಯನ್ನು ಬಗೆಹರಿಸಲು ಇನ್ನೂ ಪ್ರಯತ್ನಿಸುತ್ತಾ ಇವೆ.”
ಸರಕಾರದ ಸಂಬಂಧದಲ್ಲಿ ನಡೆದ ಈ ಪ್ರಯೋಗವು 20ನೆಯ ಶತಮಾನದಲ್ಲೂ ಮುಂದುವರಿಯಿತು. ಆ ಶತಮಾನವು ಅಂತ್ಯಗೊಂಡಾಗ, ಪ್ರಜಾಪ್ರಭುತ್ವವು ಜನರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಸ್ವೀಕರಿಸಲ್ಪಟ್ಟಿತು. ಪ್ರಜಾಪ್ರಭುತ್ವವು ಎಲ್ಲರಿಗೂ ಸರಕಾರದಲ್ಲಿ ಪಾಲ್ಗೊಳ್ಳುವಂತೆ ಅನುಮತಿಸುತ್ತದೆಂದು ಹೇಳಲಾಗುತ್ತದೆ. ಆದರೆ ಪ್ರಜಾಪ್ರಭುತ್ವವು, ದೇವರಿಲ್ಲದೆ ಮನುಷ್ಯನು ತನ್ನನ್ನು ಆಳಿಕೊಳ್ಳಶಕ್ತನೆಂಬುದನ್ನು ತೋರಿಸಿದೆಯೆ? ಭಾರತದ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಪ್ರಜಾಪ್ರಭುತ್ವವನ್ನು ಒಳ್ಳೆಯದೆಂದು ಕರೆದರೂ, ಅವರೇ ಕೂಡಿಸಿ ಹೇಳಿದ್ದು: “ನಾನು ಹೀಗೆ ಹೇಳುವುದೇಕೆಂದರೆ, ಮಿಕ್ಕ ವ್ಯವಸ್ಥೆಗಳು ಅದಕ್ಕಿಂತಲೂ ಕೀಳಾಗಿರುವುದರಿಂದಲೇ.” ಮಾಜಿ ಫ್ರೆಂಚ್ ಅಧ್ಯಕ್ಷ ವ್ಯಾಲರಿ ಗಿಸ್ಕಾರ್ಡ್ ಡೆಸ್ಟ್ಯಾಂಗ್ ಹೇಳಿದ್ದು: “ನಾವು ಪ್ರತಿನಿಧಿ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಕಣ್ಣಾರೆ ನೋಡುತ್ತಾ ಇದ್ದೇವೆ.”
ಸಾ.ಶ.ಪೂ. 5ನೆಯ ಶತಮಾನದಲ್ಲಿಯೂ, ಗ್ರೀಕ್ ತತ್ತ್ವಜ್ಞಾನಿಯಾಗಿದ್ದ ಪ್ಲೇಟೊ, ಪ್ರಜಾಪ್ರಭುತ್ವಾತ್ಮಕವಾಗಿ ಆಳುವ ವಿಧಾನದಲ್ಲಿ ಒಂದು ದೌರ್ಬಲ್ಯವನ್ನು ಕಂಡುಹಿಡಿದನು. ರಾಜಕೀಯ ತತ್ತ್ವದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ,
“ಯಾವುದು ಪ್ರಜಾಪ್ರಭುತ್ವಗಳ ದೊಡ್ಡ ಶಾಪವಾಗಿದೆಯೊ, ರಾಜಕಾರಣಿಗಳ ಆ ಅಜ್ಞಾನ ಮತ್ತು ಅಸಾಮರ್ಥ್ಯವನ್ನು” ಅವನು ಖಂಡಿಸಿದನು. ಇಂದಿನ ಅನೇಕ ರಾಜಕಾರಣಿಗಳು, ಸರಕಾರದಲ್ಲಿ ಕೆಲಸಮಾಡಲು ಯೋಗ್ಯತೆಯಿರುವವರನ್ನು ಕಂಡುಹಿಡಿಯುವ ಸಮಸ್ಯೆಯ ಕುರಿತು ಪ್ರಲಾಪಿಸುತ್ತಾರೆ. ಜನರಿಗೆ ಎದುರಾಗುವ “ಸಮಸ್ಯೆಗಳು ಅತಿ ದೊಡ್ಡದಾಗಿರುವಾಗ, ಅನರ್ಹರಾಗಿ ಕಾಣುವ ನಾಯಕರನ್ನು ನೋಡಿ ಅವರು ರೇಗುತ್ತಾರೆ,” ಎನ್ನುತ್ತದೆ ದ ವಾಲ್ ಸ್ಟ್ರೀಟ್ ಜರ್ನಲ್. ಅದು ಮುಂದುವರಿಸಿದ್ದು: “ಅವರು ಮಾರ್ಗದರ್ಶನಕ್ಕಾಗಿ ನೋಡುವಾಗ, ತಮ್ಮ ನಾಯಕರಲ್ಲಿರುವ ಅನಿಶ್ಚಿತತೆ ಮತ್ತು ಭ್ರಷ್ಟತೆಯಿಂದಾಗಿ ಅವರು ಜುಗುಪ್ಸೆಗೊಂಡಿದ್ದಾರೆ.”ಆದರೆ ಈಗ ಪುರಾತನ ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನ ಆಳಿಕೆಯನ್ನು ಪರಿಗಣಿಸಿರಿ. ಯೆಹೋವ ದೇವರು ಸೊಲೊಮೋನನಿಗೆ ಗಮನಾರ್ಹವಾದ ವಿವೇಕವನ್ನು ಕೊಟ್ಟನು. (1 ಅರಸುಗಳು 4:29-34) ಸೊಲೊಮೋನನ ಆ 40 ವರುಷಗಳ ಆಳಿಕೆಯ ಸಮಯದಲ್ಲಿ ಇಸ್ರಾಯೇಲ್ ಜನಾಂಗದ ಸ್ಥಿತಿ ಹೇಗಿತ್ತು? ಬೈಬಲು ಉತ್ತರ ಕೊಡುವುದು: “ಇಸ್ರಾಯೇಲ್‌ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು.” ಅದೇ ವೃತ್ತಾಂತವು ಹೀಗೂ ಹೇಳುತ್ತದೆ: “ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್‌ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.” (1 ಅರಸುಗಳು 4:20, 25) ಅದೃಶ್ಯ ಪರಮಾಧಿಕಾರಿಯಾಗಿದ್ದ ಯೆಹೋವ ದೇವರ ಪ್ರತಿನಿಧಿಯೋಪಾದಿ ವಿವೇಕಿಯಾದ ರಾಜನೊಬ್ಬನು ಅವರನ್ನು ಆಳುತ್ತಿದ್ದಾಗ, ಆ ಜನಾಂಗವು ಅಪಾರ ಸ್ಥಿರತೆ, ಸಮೃದ್ಧಿ ಮತ್ತು ಸಂತೋಷವನ್ನು ಅನುಭವಿಸಿತು.
ಮಾನವನ ಆಳಿಕೆ ಮತ್ತು ದೇವರ ಆಳಿಕೆಯ ಮಧ್ಯೆ ಎಷ್ಟೊಂದು ಅಜಗಜಾಂತರವಿದೆ! ಆಳಿಕೆಯ ವಿಷಯದಲ್ಲಿ ಎದ್ದ ವಿವಾದಾಂಶದಲ್ಲಿ ಸೈತಾನನು ಗೆದ್ದಿದ್ದಾನೆಂದು ಯಾರಾದರೂ ನಿಜವಾಗಿಯೂ ಹೇಳಸಾಧ್ಯವಿದೆಯೊ? ಸಾಧ್ಯವಿಲ್ಲ. ಕಾರಣವೇನೆಂಬದನ್ನು ಪ್ರವಾದಿಯಾದ ಯೆರೆಮೀಯನು ನಿಷ್ಕೃಷ್ಟ ರೀತಿಯಲ್ಲಿ ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
ಸೈತಾನನು ಎಲ್ಲರನ್ನೂ ದೇವರಿಂದ ದೂರ ತಿರುಗಿಸಬಲ್ಲನೊ?
ತಾನು ಪ್ರತಿಯೊಬ್ಬನನ್ನೂ ದೇವರಿಂದ ದೂರ ತಿರುಗಿಸಬಲ್ಲೆನೆಂಬ ವಾದವನ್ನು ಸಾಬೀತುಪಡಿಸುವುದರಲ್ಲಿ ಸೈತಾನನು ಯಶಸ್ವಿಯಾಗಿದ್ದಾನೊ? ಬೈಬಲಿನ ಇಬ್ರಿಯ ಪುಸ್ತಕದ 11ನೆಯ ಅಧ್ಯಾಯದಲ್ಲಿ, ಅಪೊಸ್ತಲ ಪೌಲನು ಕ್ರೈಸ್ತಪೂರ್ವ ಸಮಯಗಳ ಅನೇಕ ನಂಬಿಗಸ್ತ ಸ್ತ್ರೀಪುರುಷರ ಹೆಸರನ್ನು ದಾಖಲಿಸುತ್ತಾನೆ. ಬಳಿಕ ಅವನು ಹೇಳುವುದು: “ಗಿಡಿಯೋನ್ ಬಾರಾಕ್ ಸಂಸೋನ್ ಎಫ್‌ಥ ದಾವೀದ್ ಸಮುವೇಲ್ ಎಂಬವರ ವೃತ್ತಾಂತವನ್ನೂ ಪ್ರವಾದಿಗಳ ವೃತ್ತಾಂತವನ್ನೂ ವಿವರವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು.” (ಇಬ್ರಿಯ 11:32) ದೇವರ ಈ ನಿಷ್ಠಾವಂತ ಸೇವಕರನ್ನು ಪೌಲನು ‘ಸಾಕ್ಷಿಗಳ ಮಹಾ ಮೇಘ’ ಎಂದಷ್ಟೇ ಹೇಳಿ ಸೂಚಿಸುತ್ತಾನೆ. (ಇಬ್ರಿಯ 12:1, NW) ಇಲ್ಲಿ “ಮೇಘ” ಎಂಬುದಕ್ಕೆ ಉಪಯೋಗಿಸಲಾಗಿರುವ ಗ್ರೀಕ್ ಪದದ ಅರ್ಥವು, ಬೇರ್ಪಟ್ಟಿರುವ, ನಿಶ್ಚಿತ ಗಾತ್ರ ಹಾಗೂ ಆಕಾರವಿರುವ ಮೋಡವೆಂದಾಗಿರದೆ, ಬೃಹದ್ಗಾತ್ರದ ಆಕಾರರಹಿತ ಮೇಘರಾಶಿ ಎಂದಾಗಿದೆ. ಇದು ಸಮಂಜಸವಾದ ವರ್ಣನೆಯಾಗಿದೆ, ಏಕೆಂದರೆ ದೇವರ ಗತಕಾಲದ ನಂಬಿಗಸ್ತ ಸೇವಕರು ಎಷ್ಟು ಅಸಂಖ್ಯಾತರಾಗಿದ್ದರೆಂದರೆ, ಅವರು ಮಹಾ ಮೇಘರಾಶಿಗೆ ಸಮಾನರಾಗಿದ್ದರು. ಹೌದು, ಗತ ಶತಮಾನಗಳಲ್ಲಿ, ಅಸಂಖ್ಯಾತ ಜನಸಮೂಹವೊಂದು ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು, ಯೆಹೋವ ದೇವರಿಗೆ ತಮ್ಮ ಸ್ವಾಮಿನಿಷ್ಠೆಯನ್ನು ತೋರಿಸುವ ಆಯ್ಕೆಯನ್ನು ಮಾಡಿದೆ.—ಯೆಹೋಶುವ 24:15.
ನಮ್ಮ ದಿನಗಳಲ್ಲಿ ನಾವೇನನ್ನು ನೋಡುತ್ತಿದ್ದೇವೆ? 20ನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ಭಯಂಕರ ಹಿಂಸೆ ಮತ್ತು ವಿರೋಧಗಳು ಬಂದಿದ್ದರೂ, ಲೋಕದಾದ್ಯಂತವಾಗಿ ಅವರ ಸಂಖ್ಯೆ 60 ಲಕ್ಷಗಳಿಗಿಂತಲೂ ಹೆಚ್ಚಾಗಿದೆ. ಇದಲ್ಲದೆ, ಇನ್ನೂ ಸುಮಾರು 90 ಲಕ್ಷ ಜನರು ಅವರೊಂದಿಗೆ ಸಹವಾಸಮಾಡುತ್ತಿದ್ದು, ಇವರಲ್ಲಿ ಅನೇಕರು ದೇವರೊಂದಿಗೆ ನಿಕಟವಾದ ವೈಯಕ್ತಿಕ ಸಂಬಂಧಕ್ಕೆ ಬರಲು ನಿರ್ಣಯಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ತಾನು ಮಾನವರನ್ನು ಯೆಹೋವನಿಂದ ದೂರ ತಿರುಗಿಸುವೆನೆಂಬ ಸೈತಾನನ ವಾದಕ್ಕೆ ಅತಿ ಗಮನಾರ್ಹವಾದ ಉತ್ತರವು ದೇವರ ಸ್ವಂತ ಮಗನಾದ ಯೇಸು ಕ್ರಿಸ್ತನಿಂದ ಕೊಡಲ್ಪಟ್ಟಿತು. ಯಾತನಾ ಕಂಬದ ಮೇಲೆ ಅವನಿಗಾದ ಅತಿ ಸಂಕಟಕರಮಯ ವೇದನೆಯೂ ಅವನ ಸಮಗ್ರತೆಯನ್ನು ಮುರಿಯಲಿಲ್ಲ. ಯೇಸು ಕೊನೆಯುಸಿರೆಳೆಯುತ್ತಿದ್ದಾಗ, ಗಟ್ಟಿಯಾಗಿ “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಮಹಾಧ್ವನಿಯಿಂದ ಕೂಗಿದನು.—ಲೂಕ 23:46.
ಜನರನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾ ಸೈತಾನನು ತನ್ನ ಕೈಲಾದುದೆಲ್ಲವನ್ನೂ, ಅಂದರೆ ಶೋಧನೆಗಳಿಂದ ಹಿಡಿದು ಸಾಕ್ಷಾತ್ ಹಿಂಸೆಯ ವರೆಗೆ ಎಲ್ಲವನ್ನೂ ಉಪಯೋಗಿಸುತ್ತಾನೆ. ಜನರನ್ನು ದುಷ್ಪ್ರೇರಣೆಗೆ ಒಳಗಾಗುವಂತೆ ಮಾಡಲು ಅವನು, “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ”ಗಳನ್ನು ಉಪಯೋಗಿಸುತ್ತಾ, ಅವರನ್ನು ಯೆಹೋವನಿಂದ ದೂರಮಾಡಲು ಇಲ್ಲವೆ ಆತನ ಬಳಿಯಿಂದ ಅವರನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಾನೆ. (1 ಯೋಹಾನ 2:16) ಸೈತಾನನು “ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು . . . ನಂಬಿಕೆಯಿಲ್ಲದವರ ಮನಸ್ಸನ್ನು” ಕುರುಡು ಮಾಡಿರುವುದೂ ನಿಜ. (2 ಕೊರಿಂಥ 4:4) ಮತ್ತು ತನ್ನ ಉದ್ದೇಶವನ್ನು ಸಾಧಿಸಲು ಬೆದರಿಕೆಯನ್ನೂ ಮನುಷ್ಯರ ಭಯವನ್ನೂ ಉಪಯೋಗಿಸಲು ಅವನು ಹೇಸುವುದಿಲ್ಲ.—ಅ. ಕೃತ್ಯಗಳು 5:40.
ಆದರೆ ದೇವರ ಪಕ್ಷದಲ್ಲಿರುವವರನ್ನು ಪಿಶಾಚನು ಗೆಲ್ಲಲಾರನು. ಏಕೆಂದರೆ ಅವರು ಯೆಹೋವ ದೇವರನ್ನು ತಿಳಿದುಕೊಂಡಿದ್ದಾರೆ ಮತ್ತು ಅವರು ಆತನನ್ನು ‘ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ’ ಪ್ರೀತಿಸಲು ಕಲಿತಿದ್ದಾರೆ. (ಮತ್ತಾಯ 22:37) ಹೌದು, ಯೇಸು ಕ್ರಿಸ್ತನ ಮತ್ತು ಅಸಂಖ್ಯಾತ ಮಾನವರ ಅಚಲ ನಿಷ್ಠೆಯು, ಪಿಶಾಚನಾದ ಸೈತಾನನಿಗೆ ಭಾರೀ ಅಪಜಯವಾಗಿ ಪರಿಣಮಿಸಿದೆ.
ಭವಿಷ್ಯತ್ತಿನಲ್ಲಿ ಏನು ಕಾದಿದೆ?
ಸರಕಾರಗಳ ವಿಷಯದಲ್ಲಿ ಮನುಷ್ಯರು ಮಾಡುವ ಪ್ರಯೋಗವು ಅನಿಶ್ಚಿತ ಕಾಲದ ವರೆಗೆ ಮುಂದುವರಿಯುವುದೊ? ದಾನಿಯೇಲ ಪ್ರವಾದಿಯು ಮುಂತಿಳಿಸಿದ್ದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಸ್ವರ್ಗದ ದೇವರು ಸ್ಥಾಪಿಸುವ ಆ ರಾಜ್ಯವು, ಯೇಸು ಕ್ರಿಸ್ತನ ಕೈಕೆಳಗಿರುವ ಸ್ವರ್ಗೀಯ ಸರಕಾರವೇ. ತನ್ನ ಹಿಂಬಾಲಕರು ಪ್ರಾರ್ಥಿಸುವಂತೆ ಯೇಸು ಕಲಿಸಿದ್ದು ಆ ರಾಜ್ಯಕ್ಕಾಗಿಯೇ. (ಮತ್ತಾಯ 6:9, 10) ಆ ರಾಜ್ಯವು, “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧದಲ್ಲಿ” ಸಕಲ ಮಾನವ ಸರಕಾರಗಳನ್ನು ನಾಶಗೊಳಿಸಿ, ಇಡೀ ಭೂಮಿಯ ಮೇಲೆ ಪ್ರಭಾವ ಬೀರುವುದು.—ಪ್ರಕಟನೆ 16:14, 16.
ಹಾಗಾದರೆ, ಸೈತಾನನಿಗೇನು ಸಂಭವಿಸುವುದು? ಈ ಭಾವೀ ಘಟನೆಯನ್ನು ಬೈಬಲು ವರ್ಣಿಸುತ್ತದೆ: “[ಯೆಹೋವನ ದೇವದೂತನು] ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು.” (ಪ್ರಕಟನೆ 20:1-3) ಸೈತಾನನು ಆ ನಿಷ್ಕ್ರಿಯೆಯ ಅಧೋಲೋಕಕ್ಕೆ ದೊಬ್ಬಲ್ಪಟ್ಟ ಬಳಿಕವೇ, ಯೇಸು ಕ್ರಿಸ್ತನ ಸಹಸ್ರ ವರ್ಷಗಳ ಆಳಿಕೆಯು ಆರಂಭವಾಗುವುದು.
ಆಗ ಈ ಭೂಮಿಯು ಅದೆಷ್ಟು ಆಹ್ಲಾದಕರವಾದ ಸ್ಥಳವಾಗಿರುವುದು! ದುಷ್ಟತ್ವವೂ ಅದಕ್ಕೆ ಕಾರಣರಾಗಿರುವವರೂ ಇಲ್ಲದೇ ಹೋಗುವರು. ಬೈಬಲು ವಚನ ಕೊಡುವುದು: “ಕೆಡುಕರು ತೆಗೆದುಹಾಕಲ್ಪಡುವರು. . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:9-11) ಆಗ ಅವರ ಶಾಂತಿಗೆ ಮಾನವರಿಂದಾಗಲಿ ಮೃಗಗಳಿಂದಾಗಲಿ ಭಂಗವು ತರಲ್ಪಡುವ ಭಯವು ಇರದು. (ಯೆಶಾಯ 11:6-9) ಅಜ್ಞಾನದ ಕಾರಣದಿಂದಾಗಲಿ ಯೆಹೋವನನ್ನು ತಿಳಿಯುವ ಸಂದರ್ಭವಿದ್ದಿರದ ಕಾರಣದಿಂದಾಗಲಿ ಇತಿಹಾಸದಾದ್ಯಂತ ಪಿಶಾಚನ ಪಕ್ಷವನ್ನು ವಹಿಸಿರುವ ಲಕ್ಷಾಂತರ ಮಂದಿ ಸಹ ಪುನಃ ಉಜ್ಜೀವಿಸಲ್ಪಟ್ಟು, ದೈವಿಕ ಶಿಕ್ಷಣವನ್ನು ಪಡೆಯುವರು.—ಅ. ಕೃತ್ಯಗಳು 24:15.
ಆ ಸಾವಿರ ವರುಷಗಳ ಅಂತ್ಯದೊಳಗೆ ಭೂಮಿಯು ಪರದೈಸಿಕ ಸ್ಥಿತಿಗೆ ತರಲ್ಪಟ್ಟು, ಅದರಲ್ಲಿರುವ ಮಾನವಕುಲವು ಪರಿಪೂರ್ಣತೆಗೆ ತರಲ್ಪಟ್ಟಿರುವುದು. ಆ ಬಳಿಕ ಸೈತಾನನನ್ನು “ಸ್ಪಲ್ಪ ಕಾಲ” ಬಿಡುಗಡೆ ಮಾಡಲಾಗುವುದು. ಇದಾದ ಬಳಿಕ ಅವನು ದೇವರಾಳಿಕೆಯನ್ನು ವಿರೋಧಿಸುವ ಸಕಲರೊಂದಿಗೆ ನಿತ್ಯಕ್ಕೂ ನಾಶಮಾಡಲ್ಪಡುವನು.—ಪ್ರಕಟನೆ 20:3, 7-10.
ನೀವು ಯಾರ ಪಕ್ಷ ವಹಿಸುವಿರಿ?
ಇಪ್ಪತ್ತನೆಯ ಶತಮಾನವು ಸೈತಾನನು ಭೂಮಿಯನ್ನು ಧ್ವಂಸಮಾಡಿದ ಕಾಲವಾಗಿತ್ತು. ಆದರೆ ಭೂಪರಿಸ್ಥಿತಿಗಳು, ಸೈತಾನನು ಮತ್ತಾಯ 24:3-14; ಪ್ರಕಟನೆ 6:1-8) ಯಾರು ಗೆದ್ದಿದ್ದಾರೆ ಎಂಬುದನ್ನು ವಿವೇಚಿಸಿ ತಿಳಿಯಲು ಇರುವ ನಿರ್ಣಾಯಕ ಸಂಗತಿಯು, ದುಷ್ಟತ್ವದ ತೀಕ್ಷ್ಣತೆಯೂ ಆಗಿರುವುದಿಲ್ಲ, ಬಹುಪಕ್ಷದವರ ದೃಷ್ಟಿಕೋನವೂ ಆಗಿರುವುದಿಲ್ಲ. ಅತ್ಯುತ್ತಮವಾಗಿ ಆಳುವ ವಿಧಾನವು ಯಾರದ್ದು ಮತ್ತು ಪ್ರೀತಿಯ ಕಾರಣದಿಂದ ಯಾರಾದರೂ ದೇವರನ್ನು ಸೇವಿಸಿದ್ದಾರೊ ಎಂಬವು ನಿರ್ಣಾಯಕ ಅಂಶಗಳಾಗಿವೆ. ಈ ಎರಡು ವಿವಾದಾಂಶಗಳ ಫಲಿತಾಂಶವು, ವಿಜಯವು ಯೆಹೋವನದ್ದೆಂದು ತೋರಿಸುತ್ತದೆ.
ಜಯಗಳಿಸಿದ್ದಾನೆಂದು ಸೂಚಿಸುವ ಬದಲು ನಾವು ಈ ದುಷ್ಟ ಲೋಕದ ಕೊನೇ ದಿನಗಳಲ್ಲಿದ್ದೇವೆಂಬುದರ ಸೂಚನೆಯನ್ನು ತೋರಿಸುತ್ತವೆ. (ಅನುಮತಿಸಲ್ಪಟ್ಟಿರುವ ಸಮಯವು ಸೈತಾನನು ತಪ್ಪುಗೈದಿದ್ದಾನೆಂಬುದನ್ನು ಈಗಾಗಲೇ ರುಜುಪಡಿಸಿರುವುದಾದರೆ, ದುಷ್ಟತನವು ಮುಂದುವರಿಯುವಂತೆ ದೇವರು ಏಕೆ ಬಿಟ್ಟಿದ್ದಾನೆ? “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು” ಯೆಹೋವನು ತಾಳ್ಮೆಯನ್ನು ತೋರಿಸುತ್ತಿದ್ದಾನೆ. (2 ಪೇತ್ರ 3:9) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:4) ಆದುದರಿಂದ, ಉಳಿದಿರುವ ಸಮಯವನ್ನು ನೀವು, ಬೈಬಲ್ ಅಧ್ಯಯನಕ್ಕಾಗಿ ಮತ್ತು ‘ಒಬ್ಬನೇ ಸತ್ಯದೇವರ ಮತ್ತು ಆತನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ತೆಗೆದುಕೊಳ್ಳಲಿಕ್ಕಾಗಿ’ ಉಪಯೋಗಿಸುವಂತಾಗಲಿ. (ಯೋಹಾನ 17:3) ಜಯಗಳಿಸುವ ಪಕ್ಷದಲ್ಲಿ ಸ್ಥಿರವಾಗಿ ನಿಂತಿರುವ ಲಕ್ಷಾಂತರ ಮಂದಿಯಲ್ಲಿ ನೀವೂ ಕೂಡಿಕೊಳ್ಳುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.
[ಪುಟ 5ರಲ್ಲಿರುವ ಚಿತ್ರಗಳು]
ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ಯೆಹೋವನ ಸಾಕ್ಷಿಗಳು ಸೈತಾನನ ಅಪಜಯಕ್ಕೆ ಇನ್ನೂ ಹೆಚ್ಚಿನ ರುಜುವಾತನ್ನು ಒದಗಿಸಿದ್ದಾರೆ
[ಪುಟ 7ರಲ್ಲಿರುವ ಚಿತ್ರ]
ಯೆಹೋವನ ಪಕ್ಷದಲ್ಲಿ ಆತನಿಗೆ ಅನೇಕ ನಿಷ್ಠಾವಂತರಿದ್ದಾರೆ