ಯಥಾರ್ಥತೆ ಅಪೇಕ್ಷಣೀಯ, ಆದರೆ ಅಷ್ಟೇ ಸಾಕೋ?
ಯಥಾರ್ಥತೆ ಅಪೇಕ್ಷಣೀಯ, ಆದರೆ ಅಷ್ಟೇ ಸಾಕೋ?
ನಮ್ಮ ದೈನಂದಿನ ಜೀವನದಲ್ಲಿ ಯಥಾರ್ಥವಂತರಾಗಿರುವುದು ನಿಜವಾಗಿಯೂ ಅಪೇಕ್ಷಣೀಯವಾಗಿದೆಯೋ? ಒಂದು ಶಬ್ದಕೋಶವು “ಯಥಾರ್ಥತೆ”ಯನ್ನು, “ಕಪಟತನ ಅಥವಾ ವಂಚನೆಯಿಂದ ವಿಮುಕ್ತವಾದದ್ದು, ಪ್ರಾಮಾಣಿಕತೆ, ಮುಚ್ಚುಮರೆಯಿಲ್ಲದಿರುವಿಕೆ, ಸಾಚಾತನ” ಎಂದು ವರ್ಣಿಸುತ್ತದೆ. ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನು ಬೆಳೆಸುವುದರಲ್ಲಿ ಈ ಗುಣವು ಪ್ರಯೋಜನದಾಯಕವಾಗಿದೆ ಎಂಬುದು ಸುಸ್ಪಷ್ಟ. ಅಪೊಸ್ತಲ ಪೌಲನು ಪ್ರೋತ್ಸಾಹಿಸಿದ್ದು: “ಈ ಲೋಕದಲ್ಲಿನ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ; ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕರ್ತನಿಗೆ [“ಯೆಹೋವನಿಗೆ,” NW] ಭಯಪಡುವವರಾಗಿ ಸರಳಮನಸ್ಸಿನಿಂದ [“ಯಥಾರ್ಥ ಹೃದಯದಿಂದ,” NW] ಕೆಲಸಮಾಡಿರಿ.” (ಕೊಲೊಸ್ಸೆ 3:22) ನೌಕರನಾಗಿ ತಮ್ಮಲ್ಲಿ ಕೆಲಸಮಾಡುವ ಈ ರೀತಿಯ ಯಥಾರ್ಥ ವ್ಯಕ್ತಿಯನ್ನು ಯಾರು ತಾನೇ ಮೆಚ್ಚದಿರುವರು? ಇಂದು, ಉದ್ಯೋಗಗಳನ್ನು ಪಡೆದುಕೊಂಡು ಅವುಗಳನ್ನು ಕಳೆದುಕೊಳ್ಳದಿರುವ ಸಾಧ್ಯತೆಯಿರುವುದು ಹೆಚ್ಚಾಗಿ ಯಥಾರ್ಥ ಜನರಿಗೇ.
ಆದರೆ ಯಥಾರ್ಥತೆಯನ್ನು ಅತಿ ಹೆಚ್ಚು ಅಪೇಕ್ಷಣೀಯವಾಗಿ ಮಾಡುವಂಥ ಸಂಗತಿಯು, ಅದು ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ಪ್ರಭಾವ ಬೀರುವ ವಿಧವೇ ಆಗಿದೆ. ಪುರಾತನ ಇಸ್ರಾಯೇಲ್ಯರು ಜಾಗರೂಕತೆಯಿಂದ ಆಜ್ಞೆಗಳನ್ನು ಪಾಲಿಸಿ, ಹಬ್ಬಗಳನ್ನು ಆಚರಿಸಿದಾಗ ದೇವರ ಆಶೀರ್ವಾದಗಳಲ್ಲಿ ಅವರು ಆನಂದಿಸಿದರು. ಸಭೆಯ ಶುದ್ಧತೆಯ ಕುರಿತು ಚರ್ಚಿಸುತ್ತಿರುವಾಗ, ಪೌಲನು ಕ್ರೈಸ್ತರಿಗೆ ಉತ್ತೇಜಿಸಿದ್ದು: “ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ [“ಯಥಾರ್ಥತೆ,” NW] ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.” (1 ಕೊರಿಂಥ 5:8) ನಮ್ಮ ಆರಾಧನೆಯು ದೇವರು ಮೆಚ್ಚುವಂಥದ್ದಾಗಿರಬೇಕಾದರೆ, ಯಥಾರ್ಥತೆಯು ಅಪೇಕ್ಷಣೀಯವಾದದ್ದು ಮಾತ್ರವಲ್ಲ, ಆವಶ್ಯಕವಾದದ್ದೂ ಆಗಿದೆ. ಆದರೂ, ಯಥಾರ್ಥತೆ ಮಾತ್ರ ಸಾಲದು ಎಂಬುದನ್ನು ಗಮನಿಸಿರಿ. ಅದು ಸತ್ಯತೆಯೊಂದಿಗೆ ಜೊತೆಗೂಡಿರಬೇಕು.
ಟೈಟ್ಯಾನಿಕ್ ಹಡಗನ್ನು ಕಟ್ಟಿದವರು ಮತ್ತು ಅದರಲ್ಲಿ ಪ್ರಯಾಣಿಸಿದವರು ಈ ದೊಡ್ಡ ಪ್ರಯಾಣಿಕ ಹಡಗು ಮುಳುಗಲು ಅಸಾಧ್ಯವಾದದ್ದೆಂದು ಯಥಾರ್ಥವಾಗಿ ನಂಬಿದ್ದಿರಬಹುದು. ಆದರೆ 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಅದು ಒಂದು ನೀರ್ಗಲ್ಲ ಬಂಡೆಗೆ ಢಿಕ್ಕಿಹೊಡೆಯಿತು ಮತ್ತು 1,517 ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡರು. ಪ್ರಥಮ ಶತಮಾನದ ಕೆಲವು ಯೆಹೂದ್ಯರು ತಾವು ದೇವರನ್ನು ಆರಾಧಿಸುತ್ತಿದ್ದ ರೀತಿಯಲ್ಲಿ ಯಥಾರ್ಥತೆಯಿಂದ ನಂಬಿಕೆಯಿಟ್ಟಿದ್ದಿರಬಹುದು, ಆದರೆ ಅವರ ಹುರುಪು ‘ಜ್ಞಾನಾನುಸಾರವಾದದ್ದಾಗಿರಲಿಲ್ಲ.’ (ರೋಮಾಪುರ 10:2) ನಾವು ದೇವರು ಮೆಚ್ಚುವಂಥವರಾಗಿರಬೇಕಾದರೆ, ನಮ್ಮ ಯಥಾರ್ಥ ನಂಬಿಕೆಗಳು ನಿಷ್ಕೃಷ್ಟ ಮಾಹಿತಿಯ ಮೇಲೆ ಆಧಾರಿತವಾಗಿರಬೇಕು. ನಿಮ್ಮ ಸಮಾಜದಲ್ಲಿರುವ ಯೆಹೋವನ ಸಾಕ್ಷಿಗಳು, ದೇವರನ್ನು ಯಥಾರ್ಥತೆ ಮತ್ತು ಸತ್ಯತೆಯೊಂದಿಗೆ ಸೇವಿಸುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಪರೀಕ್ಷಿಸುವುದರಲ್ಲಿ ನಿಮಗೆ ಸಹಾಯಮಾಡಲು ಸಂತೋಷಪಡುವರು.