ನಿರಾಶ್ರಿತರ ಶಿಬಿರವೊಂದರಲ್ಲಿ ಜೀವನ
ನಿರಾಶ್ರಿತರ ಶಿಬಿರವೊಂದರಲ್ಲಿ ಜೀವನ
“ನಿರಾಶ್ರಿತರ ಶಿಬಿರ” ಎಂದಾಕ್ಷಣ ನಿಮ್ಮ ಮನಸ್ಸಿಗೆ ಯಾವ ಚಿತ್ರಣವು ಬರುತ್ತದೆ? ನೀವೆಂದಾದರೂ ಅಂಥ ಶಿಬಿರಕ್ಕೆ ಭೇಟಿ ನೀಡಿದ್ದೀರೊ? ಅದು ಹೇಗೆ ತೋರುತ್ತದೆ?
ಈ ಲೇಖನವನ್ನು ಬರೆಯುತ್ತಿರುವ ಸಮಯದಲ್ಲಿ, ಟಾನ್ಸೇನಿಯದ ಪಾಶ್ಚಾತ್ಯ ಭಾಗದಲ್ಲಿ ನಿರಾಶ್ರಿತರ 13 ವಿಭಿನ್ನ ಶಿಬಿರಗಳು ಸ್ಥಾಪಿಸಲ್ಪಟ್ಟಿದ್ದವು. ಪೌರ ಯುದ್ಧಗಳಿಂದಾಗಿ ಚದರಿಸಲ್ಪಟ್ಟಿದ್ದ ಸುಮಾರು 5,00,000 ನಿರಾಶ್ರಿತರು, ಇತರ ಆಫ್ರಿಕನ್ ದೇಶಗಳಿಂದ ಬಂದವರಾಗಿದ್ದರು. ಇವರಿಗೆ ಟಾನ್ಸೇನಿಯದ ಸರಕಾರವು, ಯುನೈಟೆಡ್ ನೇಶನ್ಸ್ ಹೈ ಕಮಿಷನರ್ ಆಫ್ ರೆಫ್ಯೂಜೀಸ್ರವರ ಸಹಕಾರದಿಂದ ಸಹಾಯ ನೀಡುತ್ತಿತ್ತು. ಇಂಥ ಶಿಬಿರವೊಂದರಲ್ಲಿನ ಬದುಕು ಹೇಗಿರುತ್ತದೆ?
ಶಿಬಿರಕ್ಕೆ ಆಗಮಿಸುವುದು
ಕ್ಯಾಂಡೀಡ ಎಂಬ ಹದಿವಯಸ್ಕ ಹುಡುಗಿ, ತಾನು ಮತ್ತು ತನ್ನ ಕುಟುಂಬವು ಕೆಲವು ವರ್ಷಗಳ ಹಿಂದೆ ಶಿಬಿರಕ್ಕೆ ಆಗಮಿಸಿದಾಗ ಏನಾಯಿತೆಂಬದನ್ನು ವಿವರಿಸುತ್ತಾಳೆ: “ಅವರು ನಮಗೆ ಐ.ಡಿ. ಸಂಖ್ಯೆಯುಳ್ಳ ಒಂದು ರೇಷನ್ ಕಾರ್ಡನ್ನು ಕೊಟ್ಟರು, ಮತ್ತು ನಮ್ಮ ಕುಟುಂಬವನ್ನು ನೀಅರುಗೂಸು ಎಂಬ ನಿರಾಶ್ರಿತರ ಶಿಬಿರಕ್ಕೆ ನೇಮಿಸಲಾಯಿತು. ಆ ಶಿಬಿರದಲ್ಲಿ ನಮಗೊಂದು ಜಮೀನಿನ ನಂಬರ್ ಮತ್ತು ಬೀದಿಯ ನಂಬರನ್ನು ಕೊಡಲಾಯಿತು. ನಮ್ಮ ಸ್ವಂತ ಪುಟ್ಟ ಮನೆಯನ್ನು ಕಟ್ಟಲಿಕ್ಕಾಗಿ ನಾವೆಲ್ಲಿಂದ ಮರಗಳನ್ನು ಕಡಿದು, ಹುಲ್ಲನ್ನು ಒಟ್ಟುಗೂಡಿಸಬಹುದೆಂಬುದನ್ನು ತೋರಿಸಲಾಯಿತು. ನಾವು ಮಣ್ಣಿನ ಇಟ್ಟಿಗೆಗಳನ್ನು ತಯಾರಿಸಿದೆವು. ಯುಎನ್ಏಚ್ಸಿಆರ್ ನಮಗೆ ಕೊಟ್ಟ ಒಂದು ಪ್ಲ್ಯಾಸ್ಟಿಕ್ ಶೀಟನ್ನು ನಾವು ಚಾವಣಿಯಾಗಿ ಉಪಯೋಗಿಸಿದೆವು. ಅದು ತುಂಬ ಕಷ್ಟಕರವಾದ ಕೆಲಸವಾಗಿತ್ತಾದರೂ, ನಮ್ಮ ಸರಳವಾದ ಮನೆಯು ಪೂರ್ಣಗೊಂಡಾಗ ನಮಗೆ ತುಂಬಾ ಸಂತೋಷವಾಯಿತು.”
ರೇಷನ್ ಕಾರ್ಡ್ನ್ನು ಪ್ರತಿ ಎರಡು ವಾರಕ್ಕೊಮ್ಮೆ ಬುಧವಾರದಂದು ಉಪಯೋಗಿಸಲಾಗುತ್ತದೆ. ಕ್ಯಾಂಡೀಡ ಮುಂದುವರಿಸಿ ಹೇಳುವುದು, “ಹೌದು, ಯುಎನ್ಏಚ್ಸಿಆರ್ ವಿತರಿಸುವ ಮೂಲಭೂತ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲಿಕ್ಕಾಗಿ ನಾವು ಕ್ಯಾಂಟೀನ್ ಬಳಿಯಲ್ಲಿ ಸಾಲಾಗಿ ನಿಲ್ಲಬೇಕು.”
ಒಬ್ಬ ವ್ಯಕ್ತಿಗೆ ಸಿಗುವ ದೈನಂದಿನ ಆಹಾರ ಸಾಮಗ್ರಿ ಏನಾಗಿರುತ್ತದೆ?
“ನಮಗೆ ಪ್ರತಿಯೊಬ್ಬರಿಗೆ ಸುಮಾರು ಮುಕ್ಕಾಲು ಕಿಲೊಗ್ರಾಮ್ ಜೋಳದ ಹಿಟ್ಟು, ಕಾಲು ಕಿಲೊಗ್ರಾಮ್ ಬಟಾಣಿ, 20 ಗ್ರಾಮ್ ಸೋಯಾ ಅವರೆಯ ಹಿಟ್ಟು, 30 ಮಿಲಿಲೀಟರ್ ಅಡಿಗೆ ಎಣ್ಣೆ, ಮತ್ತು 10 ಗ್ರಾಮ್ ಉಪ್ಪು ಸಿಗುತ್ತದೆ. ಕೆಲವೊಮ್ಮೆ ನಮಗೆ ಒಂದು ಸೋಪಿನ ತುಂಡೂ ಸಿಗುತ್ತದೆ, ಇದನ್ನು ಒಂದು ಇಡೀ ತಿಂಗಳು ಉಪಯೋಗಿಸಬೇಕು.”
ಸ್ವಚ್ಛ ನೀರಿನ ಕುರಿತಾಗಿ ಏನು? ಅದು ಲಭ್ಯವಿರುತ್ತದೊ?
ರಿಜೀಕೀ ಎಂಬ ಯುವತಿಯು ಹೇಳುವುದು: “ಹೌದು, ಹತ್ತಿರದಲ್ಲೇ ಇರುವ ನದಿಗಳಿಂದ ದೊಡ್ಡ ಜಲಾಶಯಗಳಿಗೆ ಪೈಪ್ಲೈನ್ಗಳ ಮೂಲಕ ನೀರನ್ನು ಪಂಪ್ಮಾಡಲಾಗುತ್ತದೆ. ಪ್ರತಿಯೊಂದು ಶಿಬಿರದಲ್ಲಿರುವ ಅನೇಕ ನೀರಿನ ತೊಟ್ಟಿಗಳಿಗೆ ಪಂಪ್ಮಾಡುವ ಮೊದಲು ಆ ನೀರನ್ನು ಕ್ಲೋರೀನ್ನೊಂದಿಗೆ ಸಂಸ್ಕರಿಸಲಾಗುತ್ತದೆ. ಆದರೂ, ನಮಗೆ ಕಾಯಿಲೆ ಬರದಂತೆ, ನೀರನ್ನು ಕುಡಿಯುವ ಮುಂಚೆ ನಾವು ಅದನ್ನು ಕುದಿಸುತ್ತೇವೆ. ಬೆಳಗ್ಗಿನಿಂದ ಹಿಡಿದು ಸಂಜೆ ವರೆಗೂ ನಾವು ನೀರನ್ನು ಸಂಗ್ರಹಿಸುತ್ತಾ, ಈ ನೀರಿನ ತೊಟ್ಟಿಗಳ ಬಳಿಯಲ್ಲಿ ಬಟ್ಟೆಗಳನ್ನು ಒಗೆಯುವುದರಲ್ಲೇ ಹೆಚ್ಚಾಗಿ ಕಾರ್ಯಮಗ್ನರಾಗಿರುತ್ತೇವೆ. ನಮಗೆ ದಿನವೊಂದಕ್ಕೆ ಒಂದೂವರೆ ಬಕೆಟ್ ನೀರು ಮಾತ್ರ ಲಭ್ಯ.”ಈ ಶಿಬಿರಗಳಲ್ಲೊಂದರ ಮಧ್ಯದಿಂದ ನೀವು ವಾಹನದಲ್ಲಿ ಸುತ್ತಾಡುವಲ್ಲಿ, ನೀವು ಶಿಶುವಿಹಾರಗಳನ್ನು, ಪ್ರಾಥಮಿಕ ಶಾಲೆಗಳನ್ನು ಮತ್ತು ಮಾಧ್ಯಮಿಕ ಶಾಲೆಗಳನ್ನು ಗಮನಿಸುವಿರಿ. ಶಿಬಿರದಲ್ಲಿ ವಯಸ್ಕರ ಶಿಕ್ಷಣವೂ ಇರಬಹುದು. ಆ ಶಿಬಿರದ ಹೊರಗೇ ಇರುವ ಒಂದು ಪೊಲೀಸ್ ಠಾಣೆ ಮತ್ತು ಸರ್ಕಾರಿ ಆಫೀಸು, ಶಿಬಿರವು ಭದ್ರವೂ ಸುರಕ್ಷಿತವೂ ಆಗಿರುವಂತೆ ನೋಡಿಕೊಳ್ಳುತ್ತದೆ. ಚಿಕ್ಕ ಚಿಕ್ಕ ಅಂಗಡಿಗಳಿರುವ ಒಂದು ದೊಡ್ಡ ಮಾರುಕಟ್ಟೆ ನಿಮ್ಮ ಕಣ್ಣಿಗೆ ಬೀಳಬಹುದು. ಅಲ್ಲಿಂದ ನಿರಾಶ್ರಿತರು, ತರಕಾರಿಗಳು, ಹಣ್ಣುಹಂಪಲು, ಮೀನು, ಕೋಳಿ, ಮತ್ತು ಇತರ ಮೂಲಭೂತ ಆಹಾರ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು. ಕೆಲವು ಮಂದಿ ಸ್ಥಳೀಯರು ಆ ಮಾರುಕಟ್ಟೆಯಲ್ಲಿ ವ್ಯಾಪಾರ ನಡಿಸುತ್ತಾರೆ. ಆದರೆ ನಿರಾಶ್ರಿತರಿಗೆ ಖರೀದಿಮಾಡಲು ಹಣ ಎಲ್ಲಿಂದ ಸಿಗುತ್ತದೆ? ಕೆಲವರು ಒಂದು ಚಿಕ್ಕ ತರಕಾರಿ ತೋಟವನ್ನು ಬೆಳೆಸಿ, ಆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇನ್ನಿತರರು, ತಮಗೆ ಸಿಗುತ್ತಿರುವ ಹಿಟ್ಟು ಇಲ್ಲವೆ ಬಟಾಣಿಯಲ್ಲಿ ಸ್ವಲ್ಪವನ್ನು ಮಾರಿ, ಸ್ವಲ್ಪ ಮಾಂಸ ಇಲ್ಲವೆ ಹಣ್ಣನ್ನು ಖರೀದಿಸಬಹುದು. ಹೌದು, ಆ ಶಿಬಿರವು ಒಂದು ಶಿಬಿರದಂತೆ ಅಲ್ಲ ಬದಲಾಗಿ ಒಂದು ದೊಡ್ಡ ಹಳ್ಳಿಯಂತೆ ತೋರಬಹುದು. ತಮ್ಮ ಸ್ವದೇಶಗಳಲ್ಲಿ ಕೆಲವರು ಮಾಡುವಂತೆಯೇ ಇಲ್ಲಿಯೂ ಮಾರುಕಟ್ಟೆಯಲ್ಲಿ ಕೆಲವರು ನಗಾಡುತ್ತಾ, ಮೋಜು ಮಾಡುತ್ತಿರುವ ದೃಶ್ಯವು ಸಾಮಾನ್ಯವಾಗಿದೆ.
ನೀವು ಆಸ್ಪತ್ರೆಗೆ ಭೇಟಿ ನೀಡುವಲ್ಲಿ, ಸಾಮಾನ್ಯವಾದ ಸಮಸ್ಯೆಗಳಿಗಾಗಿ ಚಿಕಿತ್ಸೆಯನ್ನು ಕೊಡುವ ಚಿಕಿತ್ಸಾಲಯಗಳು ಶಿಬಿರದಲ್ಲಿ ಇವೆಯೆಂದು ಡಾಕ್ಟರರಲ್ಲೊಬ್ಬರು ನಿಮಗೆ ಹೇಳಬಹುದು. ಆದರೆ ತುರ್ತು ಪರಿಸ್ಥಿತಿಗಳಲ್ಲಿ ಮತ್ತು ತೀವ್ರವಾದ ರೋಗಸ್ಥಿತಿಗಳಿರುವ ರೋಗಿಗಳನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆಸ್ಪತ್ರೆಯಲ್ಲಿರುವ ಹೆರಿಗೆ ವಿಭಾಗ ಮತ್ತು ಹೆರಿಗೆ ಕೋಣೆ ಪ್ರಾಮುಖ್ಯವಾಗಿದೆ ಎಂಬುದನ್ನು ಹೇಳಬೇಕಾಗಿಲ್ಲ. ಏಕೆಂದರೆ, 48,000 ನಿರಾಶ್ರಿತರಿರುವ ಶಿಬಿರವೊಂದರಲ್ಲಿ ಪ್ರತಿ ತಿಂಗಳು ಸುಮಾರು 250 ಶಿಶುಗಳು ಜನಿಸಸಾಧ್ಯವಿದೆ.
ಆತ್ಮಿಕವಾಗಿ ಚೆನ್ನಾಗಿ ಉಣಿಸಲ್ಪಟ್ಟವರು
ಭೂಗೋಳದಾದ್ಯಂತ ಇರುವ ಯೆಹೋವನ ಸಾಕ್ಷಿಗಳು, ಟಾನ್ಸೇನಿಯದ ಶಿಬಿರಗಳಲ್ಲಿ ವಾಸಿಸುತ್ತಿರುವ ತಮ್ಮ ಆತ್ಮಿಕ ಸಹೋದರರ ಕುರಿತು ಕುತೂಹಲದಿಂದಿರಬಹುದು. ಒಟ್ಟಿಗೆ, ಸುಮಾರು 1,200 ಮಂದಿ ಅಲ್ಲಿದ್ದಾರೆ, ಮತ್ತು ಅವರು 14 ಸಭೆಗಳು ಹಾಗೂ 3 ಗುಂಪುಗಳಾಗಿ ಸಂಘಟಿಸಲ್ಪಟ್ಟಿದ್ದಾರೆ. ಅವರು ಯಾವ ಸ್ಥಿತಿಯಲ್ಲಿದ್ದಾರೆ?
ದೇವಭಕ್ತಿಯಿರುವ ಈ ಕ್ರೈಸ್ತರು ಶಿಬಿರಗಳಿಗೆ ಬಂದಾಗ ಮಾಡಿದ ಮೊದಲನೆ ಕೆಲಸವು, ಒಂದು ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಒಂದು ಜಮೀನನ್ನು ವಿನಂತಿಸಿಕೊಳ್ಳುವುದಾಗಿತ್ತು. ಇದು, ಇತರ ನಿರಾಶ್ರಿತರು ಸಾಕ್ಷಿಗಳನ್ನು ಭೇಟಿಮಾಡಲು ಮತ್ತು ಅವರ ಸಾಪ್ತಾಹಿಕ ಕೂಟಗಳಿಗೆ ಹಾಜರಾಗಲಿಕ್ಕಾಗಿ ಎಲ್ಲಿ ಹೋಗಬೇಕೆಂಬದನ್ನು ತಿಳಿಯಲು ಸಹಾಯಮಾಡಿತು. ಲುಗುಫು ಶಿಬಿರದಲ್ಲಿ 7 ಸಭೆಗಳಿವೆ, ಮತ್ತು ಒಟ್ಟು 659 ಸಕ್ರಿಯ ಕ್ರೈಸ್ತರಿದ್ದಾರೆ. ಈ ಎಲ್ಲಾ ಸಭೆಗಳಲ್ಲಿ ಪ್ರತಿ ಭಾನುವಾರದಂದು ನಡೆಯುವ ಕೂಟಗಳ ಹಾಜರಿಯು ಸಾಮಾನ್ಯವಾಗಿ ಸುಮಾರು 1,700ಕ್ಕೆ ತಲಪುತ್ತದೆ.
ಎಲ್ಲಾ ಶಿಬಿರಗಳಲ್ಲಿರುವ ಸಾಕ್ಷಿಗಳು, ದೊಡ್ಡ ಕ್ರೈಸ್ತ ಸಮ್ಮೇಳನಗಳು ಮತ್ತು ಅಧಿವೇಶನಗಳ ಪ್ರಯೋಜನಗಳನ್ನೂ ಪಡೆಯುತ್ತಾರೆ. ಲುಗುಫು ಶಿಬಿರದಲ್ಲಿ ಪ್ರಥಮ ಜಿಲ್ಲಾ ಅಧಿವೇಶನವು ನಡೆಸಲ್ಪಟ್ಟಾಗ, 2,363 ಜನರು ಹಾಜರಾಗಿದ್ದರು. ಸಾಕ್ಷಿಗಳು ಅಧಿವೇಶನ ನಿವೇಶನದ ಹೊರಗೆ ದೀಕ್ಷಾಸ್ನಾನಕ್ಕಾಗಿ ಒಂದು ಕೊಳವನ್ನು ಮಾಡಿದ್ದರು. ಆ ಕೊಳಕ್ಕಾಗಿ ನೆಲದಲ್ಲಿ ಗುಂಡಿಯನ್ನು ತೋಡಿ, ನೀರನ್ನು ಸಂಗ್ರಹಿಸಲಿಕ್ಕಾಗಿ ಪ್ಲ್ಯಾಸ್ಟಿಕ್ ಶೀಟ್ಗಳನ್ನು ಹಾಸಲಾಗಿತ್ತು. ಸಹೋದರರು ಸುಮಾರು ಎರಡು ಕಿಲೊಮೀಟರ್ ದೂರದಲ್ಲಿದ್ದ ನದಿಯಿಂದ ಸೈಕಲ್ನಲ್ಲಿ ನೀರನ್ನು ತಂದು ಅದರಲ್ಲಿ ತುಂಬಿಸಿದರು. ಪ್ರತಿ ಬಾರಿ 20 ಲೀಟರ್ಗಳನ್ನು ತರುತ್ತಾ, ಹೀಗೆ ಅವರು ಅನೇಕ ಸಲ ನದಿಗೆ ಹೋಗಿ ಬರಬೇಕಾಯಿತು. ಸಭ್ಯ ಉಡುಪನ್ನು ಧರಿಸಿದ್ದ ದೀಕ್ಷಾಸ್ನಾನದ ಅಭ್ಯರ್ಥಿಗಳು ದೀಕ್ಷಾಸ್ನಾನಕ್ಕಾಗಿ ಸಾಲುಗಟ್ಟಿ ನಿಂತರು. ಸಂಪೂರ್ಣವಾದ ನಿಮಜ್ಜನದ ಮೂಲಕ ಒಟ್ಟು 56 ಮಂದಿ ದೀಕ್ಷಾಸ್ನಾನ ಪಡೆದರು. ಅಧಿವೇಶನದಲ್ಲಿ ಇಂಟರ್ವ್ಯೂ ಮಾಡಲಾದ ಒಬ್ಬ ಪೂರ್ಣ ಸಮಯದ ಶುಶ್ರೂಷಕನು, ತಾನು 40 ವ್ಯಕ್ತಿಗಳೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದೇನೆಂದು ವಿವರಿಸಿದನು. ಅವನ ವಿದ್ಯಾರ್ಥಿಗಳಲ್ಲಿ ನಾಲ್ವರು ಆ ಅಧಿವೇಶನದಲ್ಲಿ ದೀಕ್ಷಾಸ್ನಾನಹೊಂದಿದರು.
ಸಂಚರಣ ಮೇಲ್ವಿಚಾರಕರು ಈ ಶಿಬಿರಗಳಲ್ಲಿ ಕ್ರಮವಾದ ಭೇಟಿಗಳನ್ನು ನಡೆಸುವಂತೆ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು ಏರ್ಪಾಡನ್ನು ಮಾಡಿದೆ. ಒಬ್ಬ ಸಂಚರಣ ಮೇಲ್ವಿಚಾರಕರು ಹೇಳುವುದು: “ನಮ್ಮ ಸಹೋದರರು ಶುಶ್ರೂಷೆಯಲ್ಲಿ ಹುರುಪುಳ್ಳವರಾಗಿದ್ದಾರೆ. ಸಾರಲಿಕ್ಕಾಗಿ ಅವರ ಬಳಿ ಒಂದು ದೊಡ್ಡ ಕ್ಷೇತ್ರವಿದೆ. ಮತ್ತು ಒಂದು ಸಭೆಯಲ್ಲಿ ಪ್ರತಿಯೊಬ್ಬ ಸಾಕ್ಷಿಯು, ಒಂದು ತಿಂಗಳಿನಲ್ಲಿ ಶುಶ್ರೂಷೆಯಲ್ಲಿ ಸುಮಾರು 34 ತಾಸುಗಳನ್ನು ಕಳೆಯುತ್ತಾನೆ. ಅನೇಕರು ಆಸಕ್ತ ವ್ಯಕ್ತಿಗಳೊಂದಿಗೆ ಐದು ಇಲ್ಲವೆ ಹೆಚ್ಚು ಬೈಬಲ್ ಅಧ್ಯಯನಗಳನ್ನು ನಡೆಸುತ್ತಾರೆ. ಒಬ್ಬ ಪಯನೀಯರಳು [ಪೂರ್ಣ ಸಮಯದ ಶುಶ್ರೂಷಕಿ] ತನಗೆ ಇದಕ್ಕಿಂತಲೂ ಹೆಚ್ಚು ಉತ್ತಮವಾದ ಟೆರಿಟೊರಿಯು ಇನ್ನೆಲ್ಲಿಯೂ ಸಿಗಲಿಕ್ಕಿಲ್ಲವೆಂದು ಹೇಳುತ್ತಾಳೆ. ಶಿಬಿರಗಳಲ್ಲಿರುವ ಜನರು ನಮ್ಮ ಪ್ರಕಾಶನಗಳನ್ನು ಓದಿ ಬಹಳಷ್ಟು ಆನಂದಿಸುತ್ತಾರೆ.”
ಬೈಬಲ್ ಸಾಹಿತ್ಯಗಳು ಶಿಬಿರಗಳಿಗೆ ಹೇಗೆ ತಲಪುತ್ತವೆ? ಬ್ರಾಂಚ್ ಆಫೀಸು ಸಾಹಿತ್ಯಗಳನ್ನು ರೈಲಿನ ಮೂಲಕ ಕೀಗೋಮಾಕ್ಕೆ ಕಳುಹಿಸುತ್ತದೆ. ಇದು, ಲೇಕ್ ಟಾಂಗಾನ್ಯೀಕಾದ ಪೂರ್ವ ಕರಾವಳಿಯಲ್ಲಿರುವ ಒಂದು ಪಟ್ಟಣವಾಗಿದೆ. ಸಹೋದರರು ಅಲ್ಲಿಂದ ಪ್ರಕಾಶನಗಳನ್ನು ಪಡೆದುಕೊಂಡು, ಸಭೆಗಳಿಗೆ ರವಾನಿಸಲು ಏರ್ಪಾಡುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಅವರು ಒಂದು ಟ್ರಕ್ಕನ್ನು ಬಾಡಿಗೆಗೆ ತೆಗೆದುಕೊಂಡು, ಎಲ್ಲಾ ಶಿಬಿರಗಳಿಗೆ ಆ ಸಾಹಿತ್ಯವನ್ನು ತಲಪಿಸುತ್ತಾರೆ. ಇದಕ್ಕೆ ಒರಟೊರಟಾದ ರಸ್ತೆಯಲ್ಲಿ ಮೂರು ಅಥವಾ ನಾಲ್ಕು ದಿನಗಳ ಪ್ರಯಾಣ ಹಿಡಿಯುತ್ತದೆ.
ಭೌತಿಕ ನೆರವು
ಈ ಶಿಬಿರಗಳಲ್ಲಿರುವ ನಿರಾಶ್ರಿತರಿಗೆ ನೆರವನ್ನು ನೀಡಲು, ಫ್ರಾನ್ಸ್, ಬೆಲ್ಜಿಯಮ್ ಮತ್ತು ಸ್ವಿಟ್ಸರ್ಲೆಂಡ್ನಲ್ಲಿರುವ ಯೆಹೋವನ ಸಾಕ್ಷಿಗಳು ವಿಶೇಷವಾಗಿ ಸಹಾಯಮಾಡಿದ್ದಾರೆ. ಗೃಹ ಕಾರ್ಯಾಂಗ ಖಾತೆ ಮತ್ತು ಯುಎನ್ಏಚ್ಸಿಆರ್ನ ಒಪ್ಪಿಗೆಯೊಂದಿಗೆ, ಕೆಲವರು ಟಾನ್ಸೇನಿಯದಲ್ಲಿರುವ ಶಿಬಿರಗಳಿಗೆ ಭೇಟಿಯನ್ನೂ ನೀಡಿದ್ದಾರೆ. ಯೂರೋಪ್ನಲ್ಲಿರುವ ಸಾಕ್ಷಿಗಳು ಟನ್ನುಗಟ್ಟಲೆ ಸೋಯಾ ಅವರೆಯ ಹಾಲು, ಬಟ್ಟೆಗಳು, ಪಾದರಕ್ಷೆಗಳು, ಶಾಲಾಪುಸ್ತಕಗಳು ಮತ್ತು ಸಾಬೂನುಗಳನ್ನು ಶೇಖರಿಸಿ, ಇವುಗಳನ್ನು ಎಲ್ಲಾ ನಿರಾಶ್ರಿತರಿಗೆ ವಿತರಿಸಲಿಕ್ಕಾಗಿ ದಾನಮಾಡಿದ್ದಾರೆ. ಮತ್ತು ಇದು ಬೈಬಲಿನ ಈ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿದೆ: “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—ಗಲಾತ್ಯ 6:10.
ಈ ಮಾನವೀಯಭಾವದ ಪ್ರಯತ್ನಗಳು ಅನೇಕ ನಿರಾಶ್ರಿತರಿಗೆ ನೆರವನ್ನಿತ್ತಿರುವುದರಿಂದ, ಅವು ಉತ್ತಮ ಫಲಿತಾಂಶಗಳನ್ನು ತಂದಿವೆ. ಈ ಶಿಬಿರಗಳಲ್ಲೊಂದರ ನಿರಾಶ್ರಿತರ ಸಮುದಾಯದ ಕಮಿಟಿಯು, ಈ ಮಾತುಗಳಲ್ಲಿ ಗಣ್ಯತೆಯನ್ನು ವ್ಯಕ್ತಪಡಿಸಿತು: “ನಿಮ್ಮ ಸಂಸ್ಥೆಯು ಮೂರು ಸಲ ಮಾಡಿರುವ ಜನೋಪಕಾರಿ ಕೆಲಸಕ್ಕಾಗಿ, ನಮ್ಮ ಇಡೀ ಸಮುದಾಯದ ಪರವಾಗಿ ನಿಮಗೆ ಉಪಕಾರ ಹೇಳುವ ಭಾಗ್ಯ ನಮಗೆ ಸಿಕ್ಕಿದೆ. . . . ಆ ಬಟ್ಟೆಗಳು 12,654 ಮಂದಿ ದರಿದ್ರ ಪುರುಷರ, ಸ್ತ್ರೀಯರ ಮತ್ತು ಮಕ್ಕಳ ಹಾಗೂ ನವಜನಿತ ಶಿಶುಗಳ ಅಗತ್ಯಗಳನ್ನು ಪೂರೈಸಿವೆ . . . ಮೂಯೋವೋಸೀ ನಿರಾಶ್ರಿತರ ಶಿಬಿರದಲ್ಲಿರುವ ನಿರಾಶ್ರಿತರ ಸಂಖ್ಯೆಯು ಸದ್ಯಕ್ಕೆ 37,000ವಾಗಿದೆ. ಒಟ್ಟಿನಲ್ಲಿ 12,654 ಮಂದಿಗೆ, ಇಲ್ಲವೆ ಜನಸಂಖ್ಯೆಯ 34.2 ಪ್ರತಿಶತ ಮಂದಿಗೆ ಸಹಾಯ ಸಿಕ್ಕಿತು.”
ಇನ್ನೊಂದು ಶಿಬಿರದಲ್ಲಿರುವ 12,382 ನಿರಾಶ್ರಿತರಲ್ಲಿ ಪ್ರತಿಯೊಬ್ಬರಿಗೆ ಮೂರು ಬಟ್ಟೆಗಳನ್ನು ಕೊಡಲಾಯಿತು, ಮತ್ತು ಇನ್ನೊಂದು ಶಿಬಿರದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಮತ್ತು ಶಿಶುವಿಹಾರಗಳಲ್ಲಿ ಉಪಯೋಗಿಸಲಿಕ್ಕಾಗಿ ಸಾವಿರಾರು ಶಾಲಾಪುಸ್ತಕಗಳನ್ನು ಕೊಡಲಾಯಿತು. ಆ ಪ್ರದೇಶಗಳಲ್ಲೊಂದರಲ್ಲಿರುವ ಯುಎನ್ಸಿಏಚ್ಆರ್ ವ್ಯವಸ್ಥಾಪನಾ ಆಫೀಸರನೊಬ್ಬನು ಹೇಳಿದ್ದು: “ನಿರಾಶ್ರಿತರ ಶಿಬಿರಗಳಲ್ಲಿರುವ ಜನರ ದೊಡ್ಡ ಅಗತ್ಯಗಳನ್ನು [ಪೂರೈಸುವ] ದಾನಕ್ಕಾಗಿ ನಾವು ತುಂಬ ಆಭಾರಿಗಳಾಗಿದ್ದೇವೆ. ತೀರ ಇತ್ತೀಚೆಗೆ ನಾವು ಪಡೆದಂಥ ಸರಕು, ಶಾಲಾಪುಸ್ತಕಗಳ 5 ಕಂಟೇನರ್ಗಳಾಗಿದ್ದವು. ನಮ್ಮ ಸಮುದಾಯ ಸೇವಾ ಇಲಾಖೆಯವರು ಈ ಪುಸ್ತಕಗಳನ್ನು ನಿರಾಶ್ರಿತರಿಗೆ ಹಂಚಿದ್ದಾರೆ. . . . ನಿಮಗೆ ತುಂಬ ಉಪಕಾರ.”
ಕೊಡಲ್ಪಟ್ಟಿರುವ ನೆರವಿನ ಕುರಿತಾಗಿ ಸ್ಥಳಿಕ ವಾರ್ತಾಪತ್ರಿಕೆಗಳು ಸಹ ಹೇಳಿಕೆಯನ್ನು ಕೊಟ್ಟಿವೆ. 2001, ಮೇ 20ರ ಸಂಡೇ ನ್ಯೂಸ್ ವಾರ್ತಾಪತ್ರಿಕೆಯಲ್ಲಿನ ತಲೆಬರಹವು ಹೇಳಿದ್ದು: “ಟಾನ್ಸೇನಿಯದಲ್ಲಿರುವ ನಿರಾಶ್ರಿತರಿಗೆ ಬಟ್ಟೆಬರೆ ಬರುತ್ತಿದೆ.” ಅದರ 2002, ಫೆಬ್ರವರಿ 10ರ ಸಂಚಿಕೆಯು ಹೇಳಿದ್ದು: “ನಿರಾಶ್ರಿತರ ಸಮುದಾಯವು ಈ ದಾನವನ್ನು ಗಣ್ಯಮಾಡುತ್ತದೆ, ಯಾಕೆಂದರೆ ಬಟ್ಟೆಗಳಿಲ್ಲದ ಕಾರಣ ಶಾಲೆಗೆ ಹೋಗುವುದನ್ನು ನಿಲ್ಲಿಸಿದ ಕೆಲವು ಮಂದಿ ಮಕ್ಕಳು ಈಗ ಕ್ರಮವಾಗಿ ಶಾಲೆಗೆ ಹೋಗುತ್ತಿದ್ದಾರೆ.”
ಇಕ್ಕಟ್ಟು ಇದ್ದರೂ, ದೆಸೆಗೆಟ್ಟವರಲ್ಲ
ಹೆಚ್ಚಿನ ನಿರಾಶ್ರಿತರಿಗೆ, ಶಿಬಿರದಲ್ಲಿನ ಹೊಸ ಜೀವನ ರೀತಿಗೆ ಹೊಂದಿಕೊಳ್ಳಲು ಸುಮಾರು ಒಂದು ವರ್ಷ ಬೇಕಾಗುತ್ತದೆ. ಅವರು ಸರಳವಾದ ಜೀವನಗಳನ್ನು ನಡೆಸುತ್ತಾರೆ. ಈ ಶಿಬಿರಗಳಲ್ಲಿರುವ ಯೆಹೋವನ ಸಾಕ್ಷಿಗಳು, ತಮ್ಮ ನಿರಾಶ್ರಿತ ನೆರೆಹೊರೆಯವರಿಗೆ ದೇವರ ವಾಕ್ಯವಾದ ಬೈಬಲಿನ ಸಾಂತ್ವನದಾಯಕ ಸುವಾರ್ತೆಯನ್ನು ಹಂಚುವುದಕ್ಕಾಗಿ ತಮ್ಮ ಹೆಚ್ಚಿನ ಸಮಯವನ್ನು ಉಪಯೋಗಿಸುತ್ತಾರೆ. ಅವರು ಒಂದು ಹೊಸ ಲೋಕದ ಕುರಿತಾಗಿ ಹೇಳುತ್ತಾರೆ. ಅಲ್ಲಿ ಎಲ್ಲರೂ “ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” ಆಗ “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.” ಸ್ಪಷ್ಟವಾಗಿಯೇ, ದೇವರ ಆಶೀರ್ವಾದದೊಂದಿಗೆ ಆ ಲೋಕವು ನಿರಾಶ್ರಿತರ ಶಿಬಿರಗಳೇ ಇಲ್ಲದಿರುವ ಒಂದು ಲೋಕವಾಗುವುದು.—ಮೀಕ 4:3, 4; ಕೀರ್ತನೆ 46:9.
[ಪುಟ 8ರಲ್ಲಿರುವ ಚಿತ್ರ]
ಎನ್ಡೂಟಾ ಶಿಬಿರದಲ್ಲಿರುವ ಮನೆಗಳು
[ಪುಟ 10ರಲ್ಲಿರುವ ಚಿತ್ರಗಳು]
ಲೂಕೋಲೆ ರಾಜ್ಯ ಸಭಾಗೃಹ (ಬಲಕ್ಕೆ) ಲುಗುಫುನಲ್ಲಿ ದೀಕ್ಷಾಸ್ನಾನ (ಕೆಳಗೆ)
[ಪುಟ 10ರಲ್ಲಿರುವ ಚಿತ್ರ]
ಲುಗುಫು ಶಿಬಿರದಲ್ಲಿ ಜಿಲ್ಲಾ ಅಧಿವೇಶನ