ಬಲಿಪೀಠ ಆರಾಧನೆಯಲ್ಲಿ ಅದರ ಸ್ಥಾನವೇನಾಗಿದೆ?
ಬಲಿಪೀಠ ಆರಾಧನೆಯಲ್ಲಿ ಅದರ ಸ್ಥಾನವೇನಾಗಿದೆ?
ಬಲಿಪೀಠವನ್ನು ನೀವು ನಿಮ್ಮ ಆರಾಧನೆಯ ಒಂದು ಮೂಲಭೂತ ಅಂಗವಾಗಿ ಪರಿಗಣಿಸುತ್ತೀರೋ? * ಕ್ರೈಸ್ತಪ್ರಪಂಚದ ಚರ್ಚುಗಳಿಗೆ ಹಾಜರಾಗುವ ಅನೇಕರಿಗೆ, ಬಲಿಪೀಠವು ತಮ್ಮ ಗಮನದ ಕೇಂದ್ರಬಿಂದುವಾಗಿರಬಹುದು. ಆದರೆ ಆರಾಧನೆಯಲ್ಲಿ ಬಲಿಪೀಠದ ಉಪಯೋಗಕ್ಕೆ ಆಧಾರವೆಂದು ಹೇಳಲಾಗುವ ಯಜ್ಞವೇದಿಗಳ ಉಪಯೋಗದ ಕುರಿತು ಬೈಬಲು ಏನನ್ನು ವ್ಯಕ್ತಪಡಿಸುತ್ತದೆ ಎಂಬುದನ್ನು ನೀವು ಎಂದಾದರೂ ಪರಿಗಣಿಸಿದ್ದೀರೋ?
ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಮೊದಲನೆಯ ಯಜ್ಞವೇದಿಯು, ಪ್ರಾಣಿ ಯಜ್ಞಗಳನ್ನು ಅರ್ಪಿಸಲಿಕ್ಕಾಗಿ ನೋಹನು ಜಲಪ್ರಳಯದ ನಂತರ ಜೀವರಕ್ಷಣೆಗಾಗಿದ್ದ ನಾವೆಯಿಂದ ಹೊರಬಂದಾಗ ಕಟ್ಟಿದ್ದಾಗಿದೆ. *—ಆದಿಕಾಂಡ 8:20.
ಬಾಬೆಲಿನಲ್ಲಿ ಭಾಷೆಗಳು ತಾರುಮಾರುಮಾಡಲ್ಪಟ್ಟ ನಂತರ, ಮಾನವಕುಲವು ಲೋಕದಲ್ಲೆಲ್ಲಾ ಚದರಿಹೋಯಿತು. (ಆದಿಕಾಂಡ 11:1-9) ಆರಾಧಿಸಬೇಕೆಂಬ ಆಂತರಿಕ ಪ್ರೇರಣೆಯಿಂದಾಗಿ ಮಾನವರು, ತಮಗೆ ತೀರ ಕಡಿಮೆ ಪರಿಚಯವಿದ್ದ ದೇವರನ್ನು ಸಮೀಪಿಸಲು ಪ್ರಯತ್ನಿಸುತ್ತಾ, ಕುರುಡರೋಪಾದಿ ಆತನಿಗಾಗಿ “ಹುಡುಕು”ವವರಾದರು. (ಅ. ಕೃತ್ಯಗಳು 17:27; ರೋಮಾಪುರ 2:14, 15) ನೋಹನ ದಿನಗಳಿಂದಲೂ ಅನೇಕ ಜನಾಂಗಗಳು ತಮ್ಮ ದೇವದೇವತೆಗಳಿಗಾಗಿ ಬಲಿಪೀಠಗಳನ್ನು ಕಟ್ಟಿವೆ. ವಿಭಿನ್ನ ಧರ್ಮಗಳ ಮತ್ತು ವಿವಿಧ ಸಂಸ್ಕೃತಿಗಳ ಜನರು ಸುಳ್ಳಾರಾಧನೆಯಲ್ಲಿ ಬಲಿಪೀಠಗಳನ್ನು ಉಪಯೋಗಿಸಿದ್ದಾರೆ. ಸತ್ಯ ದೇವರಿಂದ ವಿಮುಖಗೊಂಡವರಾಗಿ, ಕೆಲವರು ಬಲಿಪೀಠಗಳನ್ನು, ಮಕ್ಕಳನ್ನೂ ಒಳಗೊಂಡು ಮಾನವ ಬಲಿಗಳನ್ನು ಕೊಡುವ ಘೋರವಾದ ಧಾರ್ಮಿಕ ಸಂಸ್ಕಾರಗಳಲ್ಲಿ ಉಪಯೋಗಿಸಿದ್ದಾರೆ. ಇಸ್ರಾಯೇಲಿನ ಕೆಲವು ರಾಜರುಗಳು ಯೆಹೋವನನ್ನು ತೊರೆದಾಗ, ಬಾಳನಂತಹ ವಿಧರ್ಮಿ ದೇವರುಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿದರು. (1 ಅರಸುಗಳು 16:29-32) ಆದರೆ ಸತ್ಯಾರಾಧನೆಯಲ್ಲಿ ಯಜ್ಞವೇದಿಗಳ ಉಪಯೋಗದ ಕುರಿತಾಗಿ ಏನು?
ಇಸ್ರಾಯೇಲಿನಲ್ಲಿ ಯಜ್ಞವೇದಿಗಳು ಮತ್ತು ಸತ್ಯಾರಾಧನೆ
ನೋಹನ ನಂತರ, ಇತರ ನಂಬಿಗಸ್ತ ಪುರುಷರು ಸತ್ಯ ದೇವರಾದ ಯೆಹೋವನ ಆರಾಧನೆಯಲ್ಲಿ ಉಪಯೋಗಿಸಲಿಕ್ಕಾಗಿ ಯಜ್ಞವೇದಿಗಳನ್ನು ಕಟ್ಟಿದರು. ಅಬ್ರಹಾಮನು ಶೆಕೆಮ್‌ನಲ್ಲಿ, ಬೇತೇಲಿನ ಸಮೀಪದಲ್ಲಿದ್ದ ಹೆಬ್ರೋನಿನಲ್ಲಿ, ಮತ್ತು ಇಸಾಕನ ಬದಲಿಗೆ ದೇವರು ಯಜ್ಞಾರ್ಪಣೆಗೆಂದು ಒಂದು ಟಗರನ್ನು ಒದಗಿಸಿದ್ದ ಮೊರೀಯ ಬೆಟ್ಟದಲ್ಲಿ ಯಜ್ಞವೇದಿಗಳನ್ನು ಕಟ್ಟಿದನು. ಅನಂತರ, ಇಸಾಕ, ಯಾಕೋಬ, ಮತ್ತು ಮೋಶೆಯರು ದೇವರನ್ನು ಆರಾಧಿಸುವುದರಲ್ಲಿ ಉಪಯೋಗಿಸಲಿಕ್ಕಾಗಿ ಸ್ವಪ್ರೇರಣೆಯಿಂದ ಯಜ್ಞವೇದಿಗಳನ್ನು ಕಟ್ಟಿದರು.—ಆದಿಕಾಂಡ 12:6-8; 13:3, 18; 22:9-13; 26:23-25; 33:18-20; 35:1, 3, 7; ವಿಮೋಚನಕಾಂಡ 17:15, 16; 24:4-8.
ದೇವರು ಇಸ್ರಾಯೇಲ್ ಜನಾಂಗಕ್ಕೆ ತನ್ನ ಧರ್ಮಶಾಸ್ತ್ರವನ್ನು ಒದಗಿಸಿದಾಗ, ಅವರು ಗುಡಾರವನ್ನು ಅಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದಾದ ಒಂದು ಡೇರೆಯನ್ನು ಕಟ್ಟುವಂತೆ ಆಜ್ಞಾಪಿಸಿದನು. ಇದು “ದೇವದರ್ಶನದ ಗುಡಾರ”ವೆಂದೂ ಕರೆಯಲ್ಪಡುತ್ತಿತ್ತು. ಇದು ಆತನನ್ನು ಸಮೀಪಿಸುವ ಏರ್ಪಾಡಿನ ಒಂದು ಕೇಂದ್ರೀಯ ವೈಶಿಷ್ಟ್ಯವಾಗಿರಲಿತ್ತು. (ವಿಮೋಚನಕಾಂಡ 39:32, 40) ಈ ಡೇರೆಯಲ್ಲಿ ಅಥವಾ ದೇವಗುಡಾರದಲ್ಲಿ ಎರಡು ಯಜ್ಞವೇದಿಗಳಿದ್ದವು. ಒಂದು ಯಜ್ಞವೇದಿಯು ಜಾಲೀಮರದಿಂದ ಮಾಡಲ್ಪಟ್ಟಿದ್ದು, ತಾಮ್ರದಿಂದ ಹೊದಿಸಲ್ಪಟ್ಟಿತ್ತು ಮತ್ತು ಸರ್ವಾಂಗಹೋಮಗಳಿಗಾಗಿತ್ತು. ಇದು ಬಾಗಲಿನ ಬಳಿ ಇಡಲ್ಪಟ್ಟಿತ್ತು ಮತ್ತು ಪ್ರಾಣಿ ಯಜ್ಞಗಳನ್ನು ಅರ್ಪಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. (ವಿಮೋಚನಕಾಂಡ 27:1-8; 39:39; 40:6, 29) ಧೂಪವೇದಿಯು ಕೂಡ ಜಾಲೀಮರದಿಂದ ಮಾಡಲ್ಪಟ್ಟಿತ್ತು. ಆದರೆ ಅದು ಚಿನ್ನದ ತಗಡುಗಳಿಂದ ಹೊದಿಸಲ್ಪಟ್ಟದ್ದಾಗಿದ್ದು, ದೇವಗುಡಾರದ ಒಳಗೆ ಮಹಾಪವಿತ್ರಸ್ಥಾನದ ತೆರೆಯ ಮುಂದೆ ಇಡಲ್ಪಟ್ಟಿತ್ತು. (ವಿಮೋಚನಕಾಂಡ 30:1-6; 39:38; 40:5, 26, 27) ಅದರ ಮೇಲೆ ದಿನಕ್ಕೆ ಎರಡಾವರ್ತಿ, ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ಧೂಪವು ಸುಡಲ್ಪಡುತ್ತಿತ್ತು. (ವಿಮೋಚನಕಾಂಡ 30:7-9) ರಾಜ ಸೊಲೊಮೋನನಿಂದ ಕಟ್ಟಲ್ಪಟ್ಟ ಸ್ಥಾಯಿ ದೇವಾಲಯವು, ದೇವಗುಡಾರದ ವಿನ್ಯಾಸವನ್ನು ಅನುಕರಿಸುತ್ತಾ ಎರಡು ಯಜ್ಞವೇದಿಗಳನ್ನು ಹೊಂದಿತ್ತು.
“ನಿಜವಾದ ದೇವದರ್ಶನಗುಡಾರ” ಮತ್ತು ಸಾಂಕೇತಿಕ ಯಜ್ಞವೇದಿ
ಯೆಹೋವನು ಇಸ್ರಾಯೇಲಿಗೆ ಧರ್ಮಶಾಸ್ತ್ರವನ್ನು ಕೊಟ್ಟಾಗ, ತನ್ನ ಜನರ ಜೀವಿತಗಳನ್ನು ನಿಯಂತ್ರಿಸಲಿಕ್ಕಾಗಿ ಮತ್ತು ಯಜ್ಞ ಹಾಗೂ ಪ್ರಾರ್ಥನೆಯ ಮೂಲಕ ತನ್ನನ್ನು ಸಮೀಪಿಸಲಿಕ್ಕಾಗಿ ಕೇವಲ ನಿಯಮಗಳಿಗಿಂತಲೂ ಹೆಚ್ಚಿನದ್ದನ್ನು ಒದಗಿಸಿದನು. ಅದರ ಹೆಚ್ಚಿನ ಏರ್ಪಾಡುಗಳು, ಅಪೊಸ್ತಲ ಪೌಲನು ಕರೆದಂತೆಯೇ, ಒಂದು “ಪ್ರತಿರೂಪ,” ‘ಒಳಗಣ ಅರ್ಥವನ್ನು ಸೂಚಿಸುವ’ ದೃಷ್ಟಾಂತ, ಅಥವಾ “ಪರಲೋಕದಲ್ಲಿರುವ ದೇವಾಲಯದ . . . ಛಾಯೆ” ಆಗಿದ್ದವು. (ಇಬ್ರಿಯ 8:3-5; 9:9; ಇಬ್ರಿಯ 10:1; ಕೊಲೊಸ್ಸೆ 2:17) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಧರ್ಮಶಾಸ್ತ್ರದ ಅನೇಕ ವಿಷಯಾಂಶಗಳು, ಕ್ರಿಸ್ತನು ಬರುವ ತನಕ ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಿದ್ದು ಮಾತ್ರವಲ್ಲದೆ, ಅವು ಯೇಸು ಕ್ರಿಸ್ತನ ಮೂಲಕ ಪೂರೈಸಲ್ಪಡಲಿದ್ದ ದೇವರ ಉದ್ದೇಶಗಳ ಪೂರ್ವನಿದರ್ಶನವೂ ಆಗಿದ್ದವು. (ಗಲಾತ್ಯ 3:24) ಹೌದು, ಧರ್ಮಶಾಸ್ತ್ರದ ವಿಷಯಾಂಶಗಳಿಗೆ ಪ್ರವಾದನಾತ್ಮಕ ಮೌಲ್ಯವಿತ್ತು. ಉದಾಹರಣೆಗೆ, ಯಾವುದರ ರಕ್ತವು ಇಸ್ರಾಯೇಲ್ಯರ ರಕ್ಷಣಾ ಚಿಹ್ನೆಯಾಗಿ ಉಪಯೋಗಿಸಲ್ಪಟ್ಟಿತೋ ಆ ಪಸ್ಕದ ಕುರಿಮರಿಯು ಯೇಸು ಕ್ರಿಸ್ತನನ್ನು ಮುನ್‌ಚಿತ್ರಿಸಿತು. ಅವನೇ “ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಆಗಿದ್ದಾನೆ. ಇವನ ರಕ್ತವು ನಮ್ಮನ್ನು ಪಾಪದ ಹಿಡಿತದಿಂದ ಬಿಡಿಸಲು ಸುರಿಸಲ್ಪಟ್ಟಿತು.—ಯೋಹಾನ 1:29; ಎಫೆಸ 1:7.
ದೇವಗುಡಾರ ಮತ್ತು ದೇವಾಲಯ ಸೇವೆಗೆ ಸಂಬಂಧಿಸಿದ ಅನೇಕ ವಿಷಯಗಳು ಆತ್ಮಿಕ ನಿಜತ್ವಗಳನ್ನು ಮುನ್‌ಚಿತ್ರಿಸಿದವು. (ಇಬ್ರಿಯ 8:5; 9:23) ವಾಸ್ತವದಲ್ಲಿ, ಪೌಲನು “ಮನುಷ್ಯನು ಹಾಕದೆ ಕರ್ತನೇ [“ಯೆಹೋವನೇ,” NW] ಹಾಕಿದ ನಿಜವಾದ ದೇವದರ್ಶನಗುಡಾರದ” ಕುರಿತು ಬರೆಯುತ್ತಾನೆ. ಅವನು ಮುಂದುವರಿಸುವುದು: “ಕ್ರಿಸ್ತನು ಈಗ ದೊರೆತಿರುವ ಮೇಲುಗಳನ್ನು ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಸೃಷ್ಟಿಗೆ ಸಂಬಂಧಪಡದಂಥ ಘನವಾಗಿಯೂ ಉತ್ಕೃಷ್ಟವಾಗಿಯೂ ಇರುವ ಗುಡಾರದಲ್ಲಿ ಸೇವೆಯನ್ನು ಮಾಡುವವನಾಗಿ” ಬಂದನು. (ಇಬ್ರಿಯ 8:2; 9:11) “ಘನವಾಗಿಯೂ ಉತ್ಕೃಷ್ಟವಾಗಿಯೂ ಇರುವ ಗುಡಾರ”ವು ಯೆಹೋವನ ಮಹಾ ಆತ್ಮಿಕ ಆಲಯದ ಏರ್ಪಾಡಾಗಿತ್ತು. ಶಾಸ್ತ್ರವಚನಗಳ ಭಾಷೆಯಲ್ಲಿ ಈ ಮಹಾ ಆತ್ಮಿಕ ಆಲಯವು, ಯೇಸು ಕ್ರಿಸ್ತನ ಪಾಪನಿವಾರಣ ಯಜ್ಞದ ಆಧಾರದ ಮೇರೆಗೆ ಮಾನವರು ಯೆಹೋವನನ್ನು ಸಮೀಪಿಸಸಾಧ್ಯವಿರುವ ಏರ್ಪಾಡನ್ನು ಸೂಚಿಸುತ್ತದೆ.—ಇಬ್ರಿಯ 9:2-10, 23-28.
ಧರ್ಮಶಾಸ್ತ್ರದ ಕೆಲವು ಒದಗಿಸುವಿಕೆಗಳು ಮತ್ತು ಏರ್ಪಾಡುಗಳು, ಹೆಚ್ಚು ಮಹತ್ತಾದ ಮತ್ತು ಹೆಚ್ಚು ಅರ್ಥಗರ್ಭಿತವಾದ ಆತ್ಮಿಕ ನಿಜತ್ವಗಳನ್ನು ಚಿತ್ರಿಸುತ್ತವೆ ಎಂಬುದನ್ನು ದೇವರ ವಾಕ್ಯದಿಂದ ತಿಳಿದುಕೊಳ್ಳುವುದು, ಖಂಡಿತವಾಗಿಯೂ ಬೈಬಲು ದೇವರಿಂದ ಪ್ರೇರಿತವಾಗಿದೆ ಎಂಬ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಮತ್ತು ಶಾಸ್ತ್ರಗಳಲ್ಲಿ ಅದ್ವಿತೀಯವಾಗಿ ವ್ಯಕ್ತವಾಗಿರುವ ದೈವಿಕ ವಿವೇಕದ ಗಣ್ಯತೆಯನ್ನು ಅದು ಇನ್ನೂ ಉನ್ನತಕ್ಕೇರಿಸುತ್ತದೆ.—ರೋಮಾಪುರ 11:33; 2 ತಿಮೊಥೆಯ 3:16.
ಸರ್ವಾಂಗಹೋಮದ ಯಜ್ಞವೇದಿಗೂ ಪ್ರವಾದನಾತ್ಮಕ ಮೌಲ್ಯವಿದೆ. ಅದು ದೇವರ “ಚಿತ್ತವನ್ನು,” ಅಥವಾ ಯೇಸುವಿನ ಪರಿಪೂರ್ಣ ಮಾನವ ಯಜ್ಞವನ್ನು ಸ್ವೀಕರಿಸಲು ಆತನಿಗಿದ್ದ ಸಿದ್ಧಮನಸ್ಸನ್ನು ಪ್ರತಿನಿಧಿಸುವಂತೆ ತೋರುತ್ತದೆ.—ಇಬ್ರಿಯ 10:1-10.
ನಂತರ ಇಬ್ರಿಯರ ಪುಸ್ತಕದಲ್ಲಿ ಪೌಲನು ಈ ಆಸಕ್ತಿದಾಯಕ ಹೇಳಿಕೆಯನ್ನು ಮಾಡುತ್ತಾನೆ: “ನಮಗೊಂದು ಯಜ್ಞವೇದಿ ಉಂಟು, ಈ ವೇದಿಯ ಪದಾರ್ಥಗಳನ್ನು ತಿನ್ನುವದಕ್ಕೆ ಯೆಹೂದ್ಯರ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.” (ಇಬ್ರಿಯ 13:10) ಅವನು ಯಜ್ಞವೇದಿ ಎಂದು ಹೇಳಿದಾಗ ಅವನ ಮನಸ್ಸಿನಲ್ಲಿ ಏನಿತ್ತು? ಇಂದು ಯಾವುದನ್ನು ಬಲಿಪೀಠ ಎಂದು ಕರೆಯಲಾಗುತ್ತದೋ ಅದರ ಕುರಿತು ಅವನು ಮಾತಾಡುತ್ತಿದ್ದನೋ?
ಇಬ್ರಿಯ 13:10ರಲ್ಲಿ ತಿಳಿಸಲ್ಪಟ್ಟಿರುವ ಯಜ್ಞವೇದಿಯು, ಯೂಕರಿಸ್ಟ್‌ಗೆ ಅಥವಾ ಮಾಸ್‌ನ ಸಮಯದಲ್ಲಿ ಯಾವುದರ ಮೂಲಕ ಕ್ರಿಸ್ತನ ಯಜ್ಞವು ನವೀಕರಿಸಲ್ಪಡುತ್ತದೆ ಎಂದು ಹೇಳಲಾಗುತ್ತದೋ ಆ “ಪ್ರಭುಭೋಜನ ಸಂಸ್ಕಾರ”ಕ್ಕಾಗಿ ಉಪಯೋಗಿಸಲ್ಪಡುವ ಬಲಿಪೀಠಕ್ಕೆ ಸೂಚಿತವಾಗಿದೆ ಎಂದು ಅನೇಕ ಕ್ಯಾಥೊಲಿಕ್ ಅರ್ಥನಿರೂಪಕರು ಹೇಳುತ್ತಾರೆ. ಆದರೆ ಪೌಲನು ಚರ್ಚಿಸುತ್ತಿದ್ದ ಯಜ್ಞವೇದಿಯು ಸಾಂಕೇತಿಕವಾಗಿದೆ ಎಂಬುದನ್ನು ನೀವು ಪೂರ್ವಾಪರ ವಚನಗಳಿಂದ ಕಂಡುಕೊಳ್ಳಬಹುದು. ಈ ವಚನದಲ್ಲಿ ಉಪಯೋಗಿಸಲ್ಪಟ್ಟಿರುವ “ಯಜ್ಞವೇದಿ” ಎಂಬ ಪದಕ್ಕೆ ಅನೇಕ ವಿದ್ವಾಂಸರು ಸಾಂಕೇತಿಕ ಅರ್ಥವಿದೆಯೆಂದು ಹೇಳುತ್ತಾರೆ. ಒಬ್ಬ ಜೆಸ್ಯೂಟ್ ಪಾದ್ರಿಯಾಗಿರುವ ಜೂಸೆಪೇ ಬೊನ್‌ಸೀರ್‌ವನ್‌ರಿಗೆ, “ಇದು [ಇಬ್ರಿಯರಿಗೆ ಬರೆದ] ಪತ್ರದಲ್ಲಿ ಕಂಡುಬರುವ ಎಲ್ಲಾ ಸಾಂಕೇತಿಕತೆಯೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.” ಅವರು ಹೇಳುವುದು: “ಕ್ರೈಸ್ತ ಭಾಷೆಯಲ್ಲಿ, ‘ಯಜ್ಞವೇದಿ’ ಎಂಬ ಪದವು ಪ್ರಥಮವಾಗಿ ಆಧ್ಯಾತ್ಮಿಕ ರೀತಿಯಲ್ಲಿ ಉಪಯೋಗಿಸಲ್ಪಟ್ಟಿದೆ. ಆದರೆ ಐರೀನೀಯಸ್, ಮತ್ತು ವಿಶೇಷವಾಗಿ ಟೆರ್ಟಲ್ಯನ್ ಮತ್ತು ಸಂತ ಸಿಪ್ರಿಯನ್‌ನ ನಂತರವೇ ಇದನ್ನು ಯೂಕರಿಸ್ಟ್‌ಗೆ ಅಥವಾ ಹೆಚ್ಚು ನಿರ್ದಿಷ್ಟವಾಗಿ ಯೂಕರಿಸ್ಟಿಕ್ ಮೇಜಿಗೆ ಅನ್ವಯಿಸಲಾಗಿದೆ.”
ಒಂದು ಕ್ಯಾಥೊಲಿಕ್ ಪತ್ರಿಕೆಯಲ್ಲಿ ತಿಳಿಸಲ್ಪಟ್ಟಂತೆ, “ಕಾನ್‌ಸ್ಟೆಂಟೀನನ ಸಮಯ”ದಲ್ಲಿ “ಬಸಿಲಿಕಗಳ ನಿರ್ಮಾಣ”ದೊಂದಿಗೆ ಬಲಿಪೀಠಗಳ ಉಪಯೋಗವು ವ್ಯಾಪಕವಾಗಿ ಹಬ್ಬಿತು. ರೀವೀಸ್‌ಟಾ ಡೀ ಆರ್‌ಕೆಓಲೋಸೀಅ ಕ್ರೀಸ್ಟ್ಯಾನಾ (ಕ್ರೈಸ್ತ ಪ್ರಾಕ್ತನಶಾಸ್ತ್ರ ಪರಿಶೀಲನೆ) ಗಮನಿಸಿದ್ದು: “ಮೊದಲ ಎರಡು ಶತಮಾನಗಳಲ್ಲಿ, ಖಾಸಗಿ ಮನೆಗಳ ಕೋಣೆಗಳಲ್ಲಿ ನಡೆಸಲ್ಪಟ್ಟ ಆರಾಧನಾ ಕೂಟಗಳ ಹೊರತು, ಒಂದು ಸ್ಥಿರವಾದ ಆರಾಧನಾ ಸ್ಥಳದ ಉಪಯೋಗದ ಕುರಿತು ಯಾವುದೇ ಪುರಾವೆಯಿಲ್ಲ . . . , ಮತ್ತು ಆರಾಧನೆಯ ನಂತರ ಈ ಕೋಣೆಗಳು, ತಕ್ಷಣವೇ ತಮ್ಮ ಹಿಂದಿನ ಉಪಯೋಗಕ್ಕೆ ಮರಳಿದವು.”
ಕ್ರೈಸ್ತಪ್ರಪಂಚ ಮತ್ತು ಬಲಿಪೀಠ
“ಬಲಿಪೀಠವು ಕೇವಲ ಚರ್ಚ್ ಕಟ್ಟಡಕ್ಕಲ್ಲ ಬದಲಾಗಿ ಅದರ ಸದಸ್ಯರಿಗೂ ಕೇಂದ್ರಬಿಂದುವಾಗಿದೆ,” ಎಂದು ಲಾ ಚೀವೀಲ್ಟಾ ಕಾಟಲೀಕಾ ಎಂಬ ಕ್ಯಾಥೊಲಿಕ್ ಪತ್ರಿಕೆಯು ಹೇಳುತ್ತದೆ. ಆದರೆ, ಯೇಸು ಕ್ರಿಸ್ತನು ಯಜ್ಞವೇದಿಯನ್ನು ಉಪಯೋಗಿಸಿ ಮಾಡಲ್ಪಡಬೇಕಾದ ಒಂದೇ ಒಂದು ಮತಾಚರಣೆಯನ್ನೂ ಪ್ರಾರಂಭಿಸಲಿಲ್ಲ; ಅಥವಾ ಒಂದು ಯಜ್ಞವೇದಿಯನ್ನು ಉಪಯೋಗಿಸಿ ಮತಾಚರಣೆಗಳನ್ನು ಮಾಡುವಂತೆ ಅವನ ಶಿಷ್ಯರಿಗೆ ಆಜ್ಞಾಪಿಸಲೂ ಇಲ್ಲ. ಮತ್ತಾಯ 5:23, 24ರಲ್ಲಿ ಮತ್ತು ಬೇರೆ ಕಡೆಗಳಲ್ಲಿ ಯೇಸು ಯಜ್ಞವೇದಿಯ ಕುರಿತಾಗಿ ತಿಳಿಸಿದ್ದು, ಯೆಹೂದ್ಯರಲ್ಲಿ ಪ್ರಚಲಿತವಾಗಿದ್ದ ಧಾರ್ಮಿಕ ಪದ್ಧತಿಗಳಿಗೆ ಸೂಚಿಸುತ್ತದೆ. ಆದರೆ ತನ್ನ ಹಿಂಬಾಲಕರು ಒಂದು ಯಜ್ಞವೇದಿಯನ್ನು ಉಪಯೋಗಿಸುತ್ತಾ ದೇವರನ್ನು ಆರಾಧಿಸಬೇಕೆಂದು ಯೇಸು ತಿಳಿಸಲಿಲ್ಲ.
ಅಮೆರಿಕದ ಇತಿಹಾಸಕಾರರಾಗಿದ್ದ ಜಾರ್ಜ್ ಫುಟ್ ಮೊರ್ (1851-1931) ಬರೆದದ್ದು: “ಕ್ರೈಸ್ತ ಆರಾಧನೆಯ ಪ್ರಮುಖ ವೈಶಿಷ್ಟ್ಯಗಳು ಯಾವಾಗಲೂ ಒಂದೇ ರೀತಿಯಲ್ಲಿದ್ದವು. ಆದರೆ ಸಮಯಾನಂತರ, ಎರಡನೆಯ ಶತಮಾನದ ಮಧ್ಯಕ್ಕೆ ಜಸ್ಟಿನ್‌ನಿಂದ ವರ್ಣಿಸಲ್ಪಟ್ಟ ಸರಳವಾದ ಧಾರ್ಮಿಕ ಸಂಸ್ಕಾರಗಳು ಭವ್ಯವಾದ ಆರಾಧನಾ ಪದ್ಧತಿಗಳಾಗಿ ವಿಕಸಿಸಲ್ಪಟ್ಟವು.” ಕ್ಯಾಥೊಲಿಕ್ ಧಾರ್ಮಿಕ ಸಂಸ್ಕಾರಗಳು ಮತ್ತು ಸಾರ್ವಜನಿಕ ಮತಾಚರಣೆಗಳು ಎಷ್ಟು ಅಸಂಖ್ಯಾತವಾಗಿವೆ ಮತ್ತು ಜಟಿಲವಾಗಿವೆಯೆಂದರೆ, ಕ್ಯಾಥೊಲಿಕ್ ಸೆಮಿನೆರಿಗಳಲ್ಲಿ ಅದನ್ನು ಅಧ್ಯಯನ ಮಾಡಲಿಕ್ಕೆಂದೇ ಲಿಟರ್ಜಿ (ಆರಾಧನಾ ವಿಧಿಸೂತ್ರಗಳು) ಎಂಬ ಒಂದು ಪಠ್ಯವಿಷಯವೇ ಇದೆ. ಮೊರ್ ಮುಂದುವರಿಸಿ ಹೇಳಿದ್ದು: “ಎಲ್ಲಾ ಸಂಸ್ಕಾರಗಳಲ್ಲೂ ಇರುವ ಈ ಪ್ರವೃತ್ತಿಯನ್ನು, ಹೀಬ್ರು ಶಾಸ್ತ್ರಗಳ ಪ್ರಭಾವವು ಹೆಚ್ಚು ಪುಷ್ಟೀಕರಿಸಿತು. ಇದು ದೈವಿಕವಾಗಿ ನೇಮಿಸಲ್ಪಟ್ಟ ಹಿಂದಿನ ಆರಾಧನಾ ವ್ಯವಸ್ಥೆಯ ಯಾಜಕತ್ವದ ಇಂದಿನ ಉತ್ತರಾಧಿಕಾರಿ ಕ್ರೈಸ್ತ ಪಾದ್ರಿವರ್ಗವಾಗಿದೆಯೆಂದು ಪರಿಗಣಿಸಲ್ಪಡಲಾರಂಭಿಸಿದಾಗ ಸಂಭವಿಸಿತು. ಮಹಾಯಾಜಕನ ಆಕರ್ಷಕವಾದ ನಿಲುವಂಗಿ, ಇತರ ಯಾಜಕರ ವಿಧ್ಯುಕ್ತ ಉಡುಗೆಗಳು, ಪವಿತ್ರ ಮೆರವಣಿಗೆಗಳು, ಕೀರ್ತನೆಗಳನ್ನು ರಾಗದಿಂದ ಹಾಡುವ ಲೇವ್ಯರ ಗಾಯಕವೃಂದಗಳು, ತೂಗಾಡುತ್ತಿರುವ ಧೂಪಪಾತ್ರೆಗಳಿಂದ ಹೊರಬರುವ ಧೂಪವು—ಇದೆಲ್ಲವೂ ಧಾರ್ಮಿಕ ಆರಾಧನೆಯ ದೇವನಿರ್ದೇಶಿತ ಮಾದರಿಯಾಗಿ ತೋರಿತು. ಇದು ಪ್ರಾಚೀನ ಜಗತ್ತಿನ ಧರ್ಮಪಂಥಗಳ ವೈಭವದೊಂದಿಗೆ ಪ್ರತಿಸ್ಪರ್ಧಿಸಲು ಚರ್ಚಿನ ಪ್ರಯತ್ನಗಳನ್ನು ಸಮರ್ಥಿಸಿತು.”
ವಿಭಿನ್ನ ಚರ್ಚ್‌ಗಳು ಆರಾಧನೆಯಲ್ಲಿ ಉಪಯೋಗಿಸುವ ಅನೇಕ ಧಾರ್ಮಿಕ ಸಂಸ್ಕಾರಗಳು, ಮತಾಚರಣೆಗಳು, ಉಡುಗೆಗಳು, ಮತ್ತು ಇತರ ವಸ್ತುಗಳು, ಸುವಾರ್ತಾ ವೃತ್ತಾಂತಗಳಲ್ಲಿರುವ ಕ್ರೈಸ್ತ ಬೋಧನೆಗಳನ್ನು ಅನುಕರಿಸದೆ, ಯೆಹೂದಿಗಳ ಮತ್ತು ವಿಧರ್ಮಿಯರ ಪದ್ಧತಿಗಳು ಹಾಗೂ ಧಾರ್ಮಿಕ ಸಂಸ್ಕಾರಗಳನ್ನು ಅನುಕರಿಸುತ್ತವೆ ಎಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಕ್ಯಾಥೊಲಿಕ್ ಧರ್ಮವು “ಬಲಿಪೀಠದ ಉಪಯೋಗವನ್ನು ಯೂದಾಯ ಮತದಿಂದ ಮತ್ತು ಆಂಶಿಕವಾಗಿ ವಿಧರ್ಮಗಳಿಂದ ಬಾಧ್ಯತೆಯಾಗಿ ಪಡೆದುಕೊಂಡಿದೆ,” ಎಂದು ಎನ್‌ಚಿಕ್ಲೋಪಿಡೀಯಾ ಕಾಟಲೀಕಾ ಹೇಳುತ್ತದೆ. ಸಾ.ಶ. ಮೂರನೇ ಶತಮಾನದ ಮೀನೂಶಿಯುಸ್ ಫೀಲಿಕ್ಸ್ ಎಂಬ ಧರ್ಮಪ್ರಚಾರಕನು, ಕ್ರೈಸ್ತರಿಗೆ ‘ದೇವಾಲಯಗಳಾಗಲಿ ಬಲಿಪೀಠಗಳಾಗಲಿ’ ಇರಲಿಲ್ಲ ಎಂದು ಬರೆದನು. ರೇಲೀಜೋನೀ ವ ಮೀಟೀ (ಮತಗಳು ಮತ್ತು ಮಿಥ್ಯೆಗಳು) ಎಂಬ ವಿಶ್ವಕೋಶದ ಶಬ್ದಕೋಶವು ತದ್ರೀತಿಯಲ್ಲಿ ಹೇಳುವುದು: “ಆದಿ ಕ್ರೈಸ್ತರು ತಮ್ಮನ್ನು ಯೆಹೂದಿ ಮತ್ತು ವಿಧರ್ಮಿ ಆರಾಧನೆಯಿಂದ ಪ್ರತ್ಯೇಕಿಸಿಕೊಳ್ಳಲಿಕ್ಕಾಗಿ ಯಜ್ಞವೇದಿಯ ಉಪಯೋಗವನ್ನು ತಳ್ಳಿಬಿಟ್ಟರು.”
ಕ್ರೈಸ್ತತ್ವವು ಪ್ರಧಾನವಾಗಿ, ದೈನಂದಿನ ಜೀವಿತದಲ್ಲಿ ಮತ್ತು ಪ್ರತಿ ದೇಶದಲ್ಲೂ ಅಂಗೀಕರಿಸಲ್ಪಡಬೇಕಾದ ಮತ್ತು ಅನ್ವಯಿಸಲ್ಪಡಬೇಕಾದ ಮೂಲತತ್ತ್ವಗಳ ಮೇಲೆ ಆಧಾರಿತವಾಗಿದ್ದುದರಿಂದ, ಇನ್ನು ಮುಂದೆ ಭೂಮಿಯ ಮೇಲೆ ಒಂದು ಪವಿತ್ರ ನಗರದ, ಅಥವಾ ಯಜ್ಞವೇದಿಗಳಿರುವ ಒಂದು ಭೌತಿಕ ಆಲಯದ, ಇಲ್ಲವೆ ಭಿನ್ನವಾದ ವಸ್ತ್ರಗಳನ್ನು ಧರಿಸಿರುವ ವಿಶೇಷ ಪದವಿಗಳಲ್ಲಿರುವ ಮಾನವ ಯಾಜಕರ ಅಗತ್ಯ ಇರಲಿಲ್ಲ. ಯೇಸು ಹೇಳಿದ್ದು: “ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ. . . . ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ”ರು. (ಯೋಹಾನ 4:21, 23) ಅನೇಕ ಚರ್ಚ್‌ಗಳು, ತಮ್ಮ ಧಾರ್ಮಿಕ ಸಂಸ್ಕಾರಗಳ ಜಟಿಲತೆ ಮತ್ತು ಬಲಿಪೀಠಗಳ ಉಪಯೋಗದಿಂದ, ಸತ್ಯ ದೇವರು ಆರಾಧಿಸಲ್ಪಡಬೇಕಾದ ರೀತಿಯ ಕುರಿತು ಯೇಸು ಏನು ಹೇಳಿದನೋ ಅದನ್ನು ಕಡೆಗಣಿಸುತ್ತವೆ.
[ಪಾದಟಿಪ್ಪಣಿಗಳು]
^ ಪ್ಯಾರ. 2 ಬಲಿಪೀಠ ಎಂಬ ಪದವು, ಆರ್ತಡಾಕ್ಸ್ ಚರ್ಚ್‌ನಲ್ಲಿ ಧರ್ಮಶಾಸ್ತ್ರದ ಹಲಿಗೆಗಳನ್ನು ಇಡಲಿಕ್ಕಾಗಿ ಉಪಯೋಗಿಸಲ್ಪಡುವ ಸ್ಥಳವನ್ನು ಸೂಚಿಸುತ್ತದೆ. ಆದರೆ, ಈ ಲೇಖನದಲ್ಲಿ ನಾವು ಬೈಬಲ್ ಕಾಲಗಳಲ್ಲಿ ಯಜ್ಞಾರ್ಪಣೆಗೆಂದು ಉಪಯೋಗಿಸಲ್ಪಟ್ಟ ಸ್ಥಳಗಳಿಗೆ ಇಲ್ಲವೆ ರೋಮನ್ ಕ್ಯಾಥೊಲಿಕರಿಂದ ಉಪಯೋಗಿಸಲ್ಪಡುವ ಯೂಕರಿಸ್ಟಿಕ್ ಮೇಜಿಗೆ ಸೂಚಿಸುತ್ತಿದ್ದೇವೆ.
^ ಪ್ಯಾರ. 3 ಇದಕ್ಕೆ ಮುಂಚೆ, ಕಾಯಿನ ಮತ್ತು ಹೇಬೆಲರು ಯಜ್ಞವೇದಿಗಳನ್ನು ಉಪಯೋಗಿಸುತ್ತಾ ತಮ್ಮ ಕಾಣಿಕೆಗಳನ್ನು ಅರ್ಪಿಸಿರಬಹುದು.—ಆದಿಕಾಂಡ 4:3, 4.