“ನನಗೆ ಬೇಕಾದದ್ದೆಲ್ಲವೂ ಸಿಕ್ಕಿತು”
“ನನಗೆ ಬೇಕಾದದ್ದೆಲ್ಲವೂ ಸಿಕ್ಕಿತು”
ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿಗನುಸಾರ, ಸದ್ಯಕ್ಕೆ ಲೋಕವ್ಯಾಪಕವಾಗಿ 12 ಕೋಟಿಗಿಂತಲೂ ಹೆಚ್ಚು ಜನರು ಖಿನ್ನತೆಗೊಳಗಾಗಿದ್ದಾರೆಂದು ಅಂದಾಜುಮಾಡಲಾಗಿದೆ. ಪ್ರತಿ ವರ್ಷ ಹತ್ತು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಒಂದರಿಂದ ಎರಡು ಕೋಟಿಗಳಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಖಿನ್ನತೆಯಿಂದ ಬಳಲುವವರಿಗೆ ಯಾವ ಸಹಾಯವು ಇದೆ? ವೈದ್ಯಕೀಯ ಚಿಕಿತ್ಸೆಯು ಅವರ ಕಷ್ಟವನ್ನು ಕಡಿಮೆಮಾಡಬಹುದು ಮತ್ತು ಭಾವಾತ್ಮಕ ಬೆಂಬಲವು ಅತ್ಯಗತ್ಯ. ಅಷ್ಟುಮಾತ್ರವಲ್ಲದೆ, ಅಂಥ ಅನಿಸಿಕೆಗಳನ್ನು ಅನುಭವಿಸುವಂಥ ಕೆಲವರಿಗೆ, ಯೆಹೋವನ ಸಾಕ್ಷಿಗಳ ಬೈಬಲಾಧಾರಿತ ಪ್ರಕಾಶನಗಳಿಂದಲೂ ಅಧಿಕ ಸಹಾಯವು ದೊರೆತಿದೆ. ಫ್ರಾನ್ಸ್ನಿಂದ ಬಂದ ಈ ಕೆಳಗಿನ ಪತ್ರವು ಅದನ್ನು ತೋರಿಸುತ್ತದೆ.
“ಸ್ವಲ್ಪ ಸಮಯದ ಹಿಂದೆ, ಜೀವಿಸುವುದರಲ್ಲೇನೂ ಅರ್ಥವಿಲ್ಲ ಎಂಬದನ್ನು ನಾನು ಕಂಡುಕೊಂಡೆ. ನನ್ನನ್ನು ಸಾಯಲು ಬಿಡು ಎಂದು ನಾನು ದೇವರಿಗೆ ಪ್ರಾರ್ಥಿಸಿದೆ. ಒಳಗೆ ನಾನು ಸತ್ತಿದ್ದೇನೊ ಎಂಬಂತೆ ನನಗನಿಸುತ್ತಿತ್ತು. ಮಾರ್ಗದರ್ಶನಕ್ಕಾಗಿ ಬೇಡುತ್ತಾ ನಾನು ಯೆಹೋವನಿಗೆ ಎಡೆಬಿಡದೆ ಪ್ರಾರ್ಥಿಸಿದೆ. 2002 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ವನ್ನು ನಾನು ಓದಲು ನಿರ್ಣಯಿಸಿ, ಅದನ್ನು ಮೂರು ದಿನಗಳಲ್ಲಿ ಓದಿ ಮುಗಿಸಿದೆ. ಅದು ನನ್ನನ್ನು ಬಹಳಷ್ಟು ಪ್ರೋತ್ಸಾಹಿಸಿ ನನ್ನ ವಿಶ್ವಾಸವನ್ನು ಬಲಗೊಳಿಸಿತೆಂದು ನಾನು ಹೇಳಲೇಬೇಕು.
“ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಸ್ವಲ್ಪ ಸಂಶೋಧನೆಯನ್ನು ಮಾಡಿದೆ ಮತ್ತು ಎಂಥ ಆಶ್ಚರ್ಯವು ನನಗಾಗಿ ಕಾದಿತ್ತು! ಸುಮಾರು 15 ವರ್ಷಗಳಿಂದ ನಾನು ಈ ಪತ್ರಿಕೆಗಳನ್ನು ಕ್ರಮವಾಗಿ ಓದುತ್ತಿದ್ದೇನೆ, ಆದರೆ ಅವೆಷ್ಟು ಪ್ರೋತ್ಸಾಹನೀಯವೂ ಉತ್ತೇಜಕವೂ ಆಗಿವೆಯೆಂಬದು ನನಗೆ ಮನದಟ್ಟೇ ಆಗಿರಲಿಲ್ಲ. ಅವುಗಳು, ಈ ದಿನಗಳಲ್ಲಿ ಬಹಳ ಅಪರೂಪವಾಗಿಬಿಟ್ಟಿರುವ ಪ್ರೀತಿಯಿಂದ ತುಂಬಿತುಳುಕುತ್ತಿದ್ದವು. ನನಗೆ ಬೇಕಾದದ್ದೆಲ್ಲವೂ ಸಿಕ್ಕಿತು.”
ಬೈಬಲು ಹೇಳುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ. ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:18) “ಮುರಿದ ಮನಸ್ಸುಳ್ಳವರು” ಅಥವಾ “ಕುಗ್ಗಿಹೋದವರು” ನಿಸ್ಸಂದೇಹವಾಗಿಯೂ ಬೈಬಲಿನಿಂದ ಪ್ರೋತ್ಸಾಹವನ್ನೂ ಭವಿಷ್ಯಕ್ಕಾಗಿ ನಿರೀಕ್ಷೆಯನ್ನೂ ಪಡೆದುಕೊಳ್ಳಬಲ್ಲರು. ಸಾಂತ್ವನದ ಈ ದೇವಪ್ರೇರಿತ ಮೂಲದಿಂದ ಪ್ರಯೋಜನಹೊಂದುವಂತೆ ಅಗತ್ಯದಲ್ಲಿರುವವರಿಗೆ ನೆರವಾಗಲು, ಯೆಹೋವನ ಸಾಕ್ಷಿಗಳು ಬೈಬಲಾಧಾರಿತ ಪ್ರಕಾಶನಗಳನ್ನು ಹಂಚುತ್ತಾರೆ.