“ಅರರಾಟ್ ದೇಶ”ದಲ್ಲಿ ಸತ್ಯಾರಾಧನೆಯನ್ನು ಅತ್ಯುಚ್ಚ ನ್ಯಾಯಾಲಯವು ಎತ್ತಿಹಿಡಿಯುತ್ತದೆ
“ಅರರಾಟ್ ದೇಶ”ದಲ್ಲಿ ಸತ್ಯಾರಾಧನೆಯನ್ನು ಅತ್ಯುಚ್ಚ ನ್ಯಾಯಾಲಯವು ಎತ್ತಿಹಿಡಿಯುತ್ತದೆ
ಮೂರು ಮಂದಿ ಮಕ್ಕಳ ತಂದೆಯಾಗಿರುವ ಅರ್‌ಮೇನಿಯದ ತಲೆನೆರೆತಿರುವ ಒಬ್ಬ ವ್ಯಕ್ತಿಯು ತನ್ನ ದೇಶದ ಅತ್ಯುಚ್ಚ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುತ್ತಾನೆ. ಅವನ ಹಾಗೂ ಅವನ ಅನೇಕ ಮಂದಿ ಜೊತೆ ವಿಶ್ವಾಸಿಗಳ ಸ್ವಾತಂತ್ರ್ಯವು ಗಂಡಾಂತರದಲ್ಲಿದೆ. ಅವನು ತನ್ನ ನಂಬಿಕೆಗಳನ್ನು ವಿವರಿಸಲಿಕ್ಕಾಗಿ ಬೈಬಲಿನಿಂದ ವಚನಗಳನ್ನು ಉಲ್ಲೇಖಿಸುವಾಗ ನ್ಯಾಯಾಲಯವು ಕಿವಿಗೊಡುತ್ತದೆ. ಈ ಮೊಕದ್ದಮೆಯು ಹೇಗೆ ಆ ದೇಶದಲ್ಲಿ ಸತ್ಯಾರಾಧನೆಯ ಮಹಾನ್ ವಿಜಯದಲ್ಲಿ ಫಲಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಈ ಮೊಕದ್ದಮೆಗೆ ನಡೆಸಿದಂಥ ವಿಕಸನಗಳನ್ನು ನಾವೀಗ ಪರೀಕ್ಷಿಸೋಣ.
ಅರ್‌ಮೇನಿಯವು ಟರ್ಕಿ ದೇಶದ ಪೂರ್ವದಲ್ಲಿದೆ ಮತ್ತು ವಿಸ್ತಾರವಾದ ಕಾಕಸಸ್ ಪರ್ವತ ಪ್ರಾಂತದ ದಕ್ಷಿಣದಲ್ಲಿ ನೆಲೆಸಿದೆ. ಇಲ್ಲಿ 30 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯಿದೆ. ಈ ದೇಶದ ರಾಜಧಾನಿಯಾಗಿರುವ ಯೆರಿವಾನ್‌ನಿಂದ, ಅರರಾಟ್ ಬೆಟ್ಟದ ಎರಡು ಶಿಖರಗಳ ರಮ್ಯ ನೋಟವನ್ನು ಆನಂದಿಸಸಾಧ್ಯವಿದೆ; ಮತ್ತು ಸಂಪ್ರದಾಯಕ್ಕನುಸಾರ, ಭೂವ್ಯಾಪಕವಾದ ಜಲಪ್ರಳಯದ ಬಳಿಕ ನೋಹನ ನಾವೆಯು ಬಂದು ನಿಂತದ್ದು ಇಲ್ಲಿಯೇ.—ಆದಿಕಾಂಡ 8:4. *
ಅರ್‌ಮೇನಿಯದಲ್ಲಿ ಯೆಹೋವನ ಸಾಕ್ಷಿಗಳು 1975ರಿಂದ ತಮ್ಮ ಕ್ರೈಸ್ತ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. 1991ರಲ್ಲಿ ಹಿಂದಿನ ಸೋವಿಯಟ್ ಒಕ್ಕೂಟದಿಂದ ಅರ್‌ಮೇನಿಯವು ಸ್ವಾತಂತ್ರ್ಯವನ್ನು ಪಡೆದ ಬಳಿಕ, ಧಾರ್ಮಿಕ ಸಂಸ್ಥೆಗಳನ್ನು ಅಧಿಕೃತವಾಗಿ ನೋಂದಣಿಮಾಡಲಿಕ್ಕಾಗಿ ಧಾರ್ಮಿಕ ಕಾರ್ಯಕಲಾಪಗಳಿಗಾಗಿರುವ ರಾಜ್ಯ
ಮಂತ್ರಾಲೋಚನ ಸಭೆಯೊಂದನ್ನು ರಚಿಸಲಾಯಿತು. ಆದರೆ ಈ ಮಂತ್ರಾಲೋಚನ ಸಭೆಯು ಯೆಹೋವನ ಸಾಕ್ಷಿಗಳನ್ನು ಅಧಿಕೃತವಾಗಿ ನೋಂದಾಯಿಸಲು ಅನೇಕ ಬಾರಿ ನಿರಾಕರಿಸಿತು. ಇದಕ್ಕೆ ಮುಖ್ಯ ಕಾರಣವು, ಕ್ರೈಸ್ತ ತಾಟಸ್ಥ್ಯದ ವಿವಾದವೇ ಆಗಿತ್ತು. ಇದರ ಪರಿಣಾಮವಾಗಿ, 1991ರಿಂದ ಅರ್‌ಮೇನಿಯದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಯುವ ಸಾಕ್ಷಿಗಳನ್ನು ಅಪರಾಧಿಗಳೆಂದು ನಿರ್ಣಯಿಸಲಾಗಿದೆ ಮತ್ತು ಅಧಿಕಾಂಶ ವಿದ್ಯಮಾನಗಳಲ್ಲಿ ಮಿಲಿಟರಿ ಸೇವೆಯ ಕುರಿತಾದ ಅವರ ಬೈಬಲ್ ಆಧಾರಿತ ನಿಲುವಿಗಾಗಿ ಅವರನ್ನು ಬಂಧಿಸಲಾಗಿದೆ.ಈ ಮಂತ್ರಾಲೋಚನ ಸಭೆಯು, ಒಬ್ಬ ಕ್ರೈಸ್ತ ಹಿರಿಯರೂ ಸ್ಥಳಿಕ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಶ್ರಮದಿಂದ ಕೆಲಸಮಾಡುತ್ತಿರುವ ವಕೀಲರೂ ಆಗಿರುವ ಲ್ಯೋವಾ ಮಾರ್ಕಾರಿಯಾನ್‌ರ ಧಾರ್ಮಿಕ ಚಟುವಟಿಕೆಯ ಕುರಿತು ತನಿಖೆ ನಡೆಸುವಂತೆಯೂ ಸರಕಾರಿ ಪ್ರಾಸಿಕ್ಯೂಟರ್ ಕಛೇರಿಗೆ ಮನವಿಮಾಡಿಕೊಂಡಿತು. ಕಾಲಕ್ರಮೇಣ, ಸಹೋದರ ಮಾರ್ಕಾರಿಯಾನ್‌ರ ಮೇಲೆ 244ನೆಯ ವಿಧಿಯನ್ನನುಸರಿಸಿ ತಪ್ಪುಹೊರಿಸಲಾಯಿತು. ಈ ವಿಧಿಯು, ಕ್ರೂಶ್‌ಚೀವ್‌ನ ಶಕದಲ್ಲಿ ಜಾರಿಗೆ ತರಲ್ಪಟ್ಟಿದ್ದ ಸೋವಿಯಟ್ ಕಾನೂನಿನ ಅವಶೇಷವಾಗಿತ್ತು ಮತ್ತು ಅದರ ಉದ್ದೇಶವು, ಯೆಹೋವನ ಸಾಕ್ಷಿಗಳನ್ನು ಹಾಗೂ ಇತರ ಧಾರ್ಮಿಕ ಗುಂಪುಗಳನ್ನು ತಡೆಗಟ್ಟುವುದು ಹಾಗೂ ಅಂತಿಮವಾಗಿ ನಿರ್ಮೂಲಮಾಡುವುದು ಆಗಿತ್ತು.
ಆ ಕಾನೂನು, ಧಾರ್ಮಿಕ ನಂಬಿಕೆಗಳನ್ನು ಸಾರುವ ನೆಪದಲ್ಲಿ ‘ಅಧಿಕೃತವಾಗಿ ನೋಂದಣಿಯನ್ನು ಪಡೆಯದಿರುವಂಥ ಒಂದು ಧರ್ಮದ ಧಾರ್ಮಿಕ ಕೂಟಗಳಿಗೆ ಹಾಜರಾಗುವಂತೆ ಯುವ ಜನರನ್ನು ಆಕರ್ಷಿಸುವ’ ಮತ್ತು ‘ಅದರ ಸದಸ್ಯರು ತಮ್ಮ ಪೌರ ಕರ್ತವ್ಯಗಳನ್ನು ನಿರಾಕರಿಸುವಂತೆ ಪ್ರಭಾವಿಸುವಂಥ’ ಒಂದು ಧಾರ್ಮಿಕ ಗುಂಪನ್ನು ಸಂಘಟಿಸುವುದು ಅಥವಾ ಮುನ್ನಡಿಸುವುದನ್ನು ಒಂದು ಅಪರಾಧವಾಗಿ ಪರಿಗಣಿಸುತ್ತಿತ್ತು. ತನ್ನ ಪ್ರತಿಪಾದನೆಯನ್ನು ಬೆಂಬಲಿಸಲಿಕ್ಕಾಗಿ, ಮೆಟ್ಸಾಮೋರ್ ನಗರದಲ್ಲಿ ಸಹೋದರ ಮಾರ್ಕಾರಿಯಾನ್‌ರಿಂದ ನಡೆಸಲ್ಪಟ್ಟ ಕೂಟಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಉಪಸ್ಥಿತಿಯ ಮೇಲೆ ಪ್ರಾಸಿಕ್ಯೂಟರನು ಗಮನವನ್ನು ಕೇಂದ್ರೀಕರಿಸಿದನು. ಸಹೋದರ ಮಾರ್ಕಾರಿಯಾನ್ ಆ ಸಭೆಯ ಯುವ ಸದಸ್ಯರನ್ನು ಮಿಲಿಟರಿ ಸೇವೆಯನ್ನು ನಿರಾಕರಿಸುವಂತೆ ಒತ್ತಾಯಪಡಿಸಿದ್ದರು ಎಂದು ಸಹ ಆ ಪ್ರಾಸಿಕ್ಯೂಟರನು ಆರೋಪಿಸಿದನು.
ವಿಚಾರಣೆಯು ಆರಂಭವಾಗುತ್ತದೆ
ವಿಚಾರಣೆಯು, ಇಸವಿ 2001, ಜುಲೈ 20ರ ಶುಕ್ರವಾರದಂದು, ಅಮವೇರ್ ಜಿಲ್ಲಾ ನ್ಯಾಯಾಲಯದಲ್ಲಿ ಮ್ಯಾನ್ವೆಲ್ ಸೀಮೋನ್ಯಾನ್ ಎಂಬ ನ್ಯಾಯಾಧಿಪತಿಯ ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಇದು ಆಗಸ್ಟ್ ತಿಂಗಳ ತನಕ ಮುಂದುವರಿಯಿತು. ಪ್ರಾಸಿಕ್ಯೂಷನ್ ಪಕ್ಷದ ಸಾಕ್ಷಿಗಳು ಸಾಕ್ಷ್ಯವನ್ನು ನೀಡಿದ ಸಮಯದಲ್ಲಿ ಕಟ್ಟಕಡೆಗೆ ಒಪ್ಪಿಕೊಂಡದ್ದೇನೆಂದರೆ, ರಾಷ್ಟ್ರೀಯ ಭದ್ರತಾ ಸಮಿತಿ (ಹಿಂದೆ ಕೆಜಿಬಿ)ಯ ನಿಯೋಗಿಗಳೇ ಸಹೋದರ ಮಾರ್ಕಾರಿಯಾನ್‌ರ ವಿರುದ್ಧವಾದ ಲಿಖಿತ ಹೇಳಿಕೆಗಳಲ್ಲಿ ಏನು ಬರೆಯಬೇಕೆಂಬುದನ್ನು ತಮಗೆ ಹೇಳಿ, ಆ ಹೇಳಿಕೆಗಳಿಗೆ ಸಹಿಹಾಕುವಂತೆ ತಮ್ಮನ್ನು ಬಲಾತ್ಕರಿಸಿದ್ದರು. ಒಂದು ಸಂದರ್ಭದಲ್ಲಿ, “ಯೆಹೋವನ ಸಾಕ್ಷಿಗಳು ನಮ್ಮ ಸರಕಾರ ಮತ್ತು ನಮ್ಮ ಧರ್ಮಕ್ಕೆ ವಿರೋಧಿಗಳಾಗಿದ್ದಾರೆ” ಎಂಬ ಆಪಾದನೆ ಮಾಡುವಂತೆ ಭದ್ರತಾ ಸಮಿತಿಯ ಒಬ್ಬ ಅಧಿಕಾರಿಯು ತನಗೆ ಸೂಚಿಸಿದನು ಎಂದು ಒಬ್ಬ ಮಹಿಳೆಯು ಒಪ್ಪಿಕೊಂಡಳು. ವೈಯಕ್ತಿಕವಾಗಿ ತನಗೆ ಯಾರೊಬ್ಬ ಯೆಹೋವನ ಸಾಕ್ಷಿಯ ಪರಿಚಯವೂ ಇರಲಿಲ್ಲ, ಕೇವಲ ರಾಷ್ಟ್ರೀಯ ಟೆಲಿವಿಷನ್‌ನಲ್ಲಿ ಅವರ ವಿರುದ್ಧ ಹೊರಿಸಲ್ಪಟ್ಟಿದ್ದ ಆಪಾದನೆಗಳನ್ನು ಮಾತ್ರ ತಾನು ಕೇಳಿಸಿಕೊಂಡಿದ್ದೆ ಎಂದು ಆ ಮಹಿಳೆಯೇ ನಿವೇದಿಸಿದಳು.
ಸಹೋದರ ಮಾರ್ಕಾರಿಯಾನ್‌ರ ಸರದಿಯು ಬಂದಾಗ, ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುವ ಅಪ್ರಾಪ್ತ ವಯಸ್ಸಿನ ಮಕ್ಕಳು, ತಮ್ಮ ಹೆತ್ತವರ ಅನುಮತಿಯಿಂದಲೇ ಹಾಗೆ ಹಾಜರಾಗುತ್ತಾರೆ ಎಂಬುದಕ್ಕೆ ಪುರಾವೆಯನ್ನು ನೀಡಿದರು. ಮಿಲಿಟರಿ ಸೇವೆಯು ಒಂದು ವೈಯಕ್ತಿಕ ನಿರ್ಣಯವಾಗಿದೆ ಎಂದು ಸಹ ಅವರು ವಿವರಿಸಿದರು. ಪ್ರಾಸಿಕ್ಯೂಟರ್‌ನ ವಿರೋಧವಾದವು ಅನೇಕ ದಿನಗಳ ವರೆಗೆ ಮುಂದುವರಿಯಿತು. ಬೈಬಲನ್ನು ಉಪಯೋಗಿಸುತ್ತಾ ಸಹೋದರ ಮಾರ್ಕಾರಿಯಾನ್‌ರು ತಮ್ಮ ನಂಬಿಕೆಗಳ ಕುರಿತಾದ ಪ್ರಶ್ನೆಗಳಿಗೆ ಶಾಂತಚಿತ್ತರಾಗಿ ಉತ್ತರಗಳನ್ನು ಕೊಟ್ಟರು, ಮತ್ತು ಆಗ ಪ್ರಾಸಿಕ್ಯೂಟರ್ ಆ ಶಾಸ್ತ್ರೀಯ ಆಧಾರಗಳನ್ನು ತಮ್ಮ ಸ್ವಂತ ಬೈಬಲಿನಲ್ಲಿ ಪರೀಕ್ಷಿಸಿ ನೋಡುತ್ತಿದ್ದರು.
ಇಸವಿ 2001ರ ಸೆಪ್ಟೆಂಬರ್ 18ರಂದು, ಮಾರ್ಕಾರಿಯಾನ್‌ರ ಚಟುವಟಿಕೆಯಲ್ಲಿ “ಅಪರಾಧದ ಯಾವುದೇ ಅಂಶವೂ ಇರಲಿಲ್ಲ” ಎಂದು ಹೇಳುತ್ತಾ, ಅವರು “ದೋಷಿಯಲ್ಲ” ಎಂದು ನ್ಯಾಯಾಧೀಶರು ಪ್ರಕಟಿಸಿದರು. ಈ ಮೊಕದ್ದಮೆಯ ಕುರಿತಾದ ವಿವರವಾದ ಕಥನವು ಅಸೋಸಿಯೇಟೆಡ್ ಪ್ರೆಸ್‌ನಲ್ಲಿ ಕಂಡುಬಂತು. ಅದರಲ್ಲಿ ಹೀಗಂದಿತು: “ಅರ್‌ಮೇನಿಯದಲ್ಲಿರುವ ಯೆಹೋವನ ಸಾಕ್ಷಿಗಳ ನಾಯಕರೊಬ್ಬರನ್ನು, ಮತಪರಿವರ್ತನೆ ಮಾಡುವ ಹಾಗೂ ಯುವ ಜನರನ್ನು ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳುವಂತೆ ಒತ್ತಾಯಿಸುವ ಆಪಾದನೆಗಳಿಂದ ಇಂದು ಮುಕ್ತಗೊಳಿಸಲಾಯಿತು. ಎರಡು ತಿಂಗಳುಗಳ
ವಿಚಾರಣೆಯ ಬಳಿಕ, ಲ್ಯೋವಾ ಮಾರ್ಕಾರಿಯಾನ್ [ಲ್ಯೋವಾ ಮಾರ್ಗಾರಿಯಾನ್] ಎಂಬ ಆ ನಾಯಕರ ವಿರುದ್ಧ ಸಾಕಷ್ಟು ಪುರಾವೆಯು ಸಿಕ್ಕಲಿಲ್ಲ ಎಂದು ನ್ಯಾಯಾಲಯವು ತಿಳಿಸಿತು. ಅವರು ಐದು ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿತ್ತು. . . . ಅರ್‌ಮೇನಿಯದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ಖಾತ್ರಿನೀಡುತ್ತದಾದರೂ, ಹೊಸ ಧಾರ್ಮಿಕ ಗುಂಪುಗಳು ಅಧಿಕೃತ ನೋಂದಣಿಯನ್ನು ಪಡೆಯುವುದು ತುಂಬ ಕಷ್ಟಕರವಾಗಿದೆ ಮತ್ತು ಇಲ್ಲಿನ ನಿಯಮಗಳು ಪ್ರಾಬಲ್ಯವನ್ನು ಪಡೆದಿರುವ ಅರ್‌ಮೇನಿಯನ್ ಅಪೊಸ್ಟಲಿಕ್ ಚರ್ಚಿನ ಪರವಾಗಿವೆ.” ಯೂರೋಪಿನಲ್ಲಿರುವ ಭದ್ರತೆ ಹಾಗೂ ಸಹಕಾರದ ಸಂಸ್ಥೆ (ಓಎಸ್‌ಸಿಇ)ಯು 2001, ಸೆಪ್ಟೆಂಬರ್ 18ರ ಅದರ ಅಧಿಕೃತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದು: “ಓಎಸ್‌ಸಿಇ ಆಫೀಸು ಆ ತೀರ್ಮಾನವನ್ನು ಸಂತೋಷದಿಂದ ಅಂಗೀಕರಿಸುತ್ತದಾದರೂ, ಮೊದಲಾಗಿ ಪ್ರಾಸಿಕ್ಯೂಷನ್ ಆರಂಭಿಸಲ್ಪಟ್ಟದ್ದಕ್ಕಾಗಿ ಇನ್ನೂ ವಿಷಾದಪಡುತ್ತಿದೆ.”ಪ್ರಾಸಿಕ್ಯೂಷನ್ ಮುಂದುವರಿಯುತ್ತದೆ
ಆದರೂ, ಪ್ರಾಸಿಕ್ಯೂಟರ್‌ಗಳು ಅಪ್ಪೀಲುಮಾಡಿದರು ಮತ್ತು ಅಪ್ಪೀಲಿನ ವಿಚಾರಣೆಗೆ ಇನ್ನೂ ನಾಲ್ಕು ತಿಂಗಳು ಹಿಡಿಯಿತು. ವಿಚಾರಣೆಯ ಆರಂಭದಲ್ಲಿ, ಸಹೋದರ ಮಾರ್ಕಾರಿಯಾನ್‌ರು ಸಾಕ್ಷ್ಯವನ್ನು ನೀಡುವ ಸಮಯ ಬಂದಾಗ, ಅವರಿಗೆ ಕೇಳಲ್ಪಟ್ಟ ಮೊದಲ ಪ್ರಶ್ನೆಯು ತಂಡದಲ್ಲಿದ್ದ ಒಬ್ಬ ನ್ಯಾಯಾಧೀಶರಿಂದ ಬಂತು. ಸಹೋದರ ಮಾರ್ಕಾರಿಯಾನ್ ಉತ್ತರಿಸಲು ಆರಂಭಿಸಿದಾಗ, ಸಭೆಯ ಅಧ್ಯಕ್ಷೆಯು ಸಂಭಾಷಣೆಗೆ ತಡೆಯನ್ನೊಡ್ಡಿ, ಅವರಿಗೆ ಸವಾಲನ್ನೊಡ್ಡಿದಳು. ತದನಂತರ ಅವಳು ಸಹೋದರ ಮಾರ್ಕಾರಿಯಾನ್‌ರು ಒಂದು ಪ್ರಶ್ನೆಯನ್ನೂ ಉತ್ತರಿಸಿ ಮುಗಿಸಲು ಅನುಮತಿಸಲಿಲ್ಲ. ಅಷ್ಟುಮಾತ್ರವಲ್ಲ, ಯಾವುದೇ ಕಾರಣಗಳನ್ನು ಕೊಡದೆ, ಪ್ರತಿವಾದಿ ವಕೀಲರಿಂದ ಮಾರ್ಕಾರಿಯಾನ್‌ರಿಗೆ ಕೇಳಲ್ಪಟ್ಟ ಪ್ರಶ್ನೆಗಳಲ್ಲಿ ಹೆಚ್ಚಿನವುಗಳನ್ನು ದಾಖಲೆಯಿಂದಲೇ ತೆಗೆದುಹಾಕಿದಳು. ಆ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯದಲ್ಲಿ ತುಂಬಿದ್ದ ಯೆಹೋವನ ಸಾಕ್ಷಿಗಳ ವಿರೋಧಿ ಧಾರ್ಮಿಕ ಮತಾಂಧರು, ಸಹೋದರ ಮಾರ್ಕಾರಿಯಾನ್‌ರ ಮೇಲೆ ಆಗಿಂದಾಗ್ಗೆ ಬೈಯ್ಗುಳಗಳ ಸುರಿಮಳೆಗೈದರು. ಆ ಸೆಷನ್‌ನ ಬಳಿಕ, ವಿಚಾರಣೆಯ ಕುರಿತಾದ ಅನೇಕ ಸುಳ್ಳು ಹಾಗೂ ತಪ್ಪಾದ ವರದಿಗಳು ಟೆಲಿವಿಷನ್‌ನಲ್ಲಿ ಪ್ರಸಾರಮಾಡಲ್ಪಟ್ಟವು. ಉದಾಹರಣೆಗೆ, ಸಹೋದರ ಮಾರ್ಕಾರಿಯಾನ್‌ರು ಕಾರ್ಯತಃ ತಮ್ಮ ಸ್ವಂತ ತಪ್ಪನ್ನು ಒಪ್ಪಿಕೊಂಡಿದ್ದರು ಎಂಬ ಸುದ್ದಿಯನ್ನು ಪ್ರಸಾರಮಾಡಲಾಗಿತ್ತು.
ಆ ವಿಚಾರಣೆಯು ಸುಮಾರು ಅರ್ಧಮುಗಿದಾಗ, ಮೂವರು ನ್ಯಾಯಾಧೀಶರಿದ್ದ ಆ ತಂಡದ ಅಧ್ಯಕ್ಷೆಯು, ಸಹೋದರ ಮಾರ್ಕಾರಿಯಾನ್‌ರ ವಿರುದ್ಧ ಪ್ರಾಸಿಕ್ಯೂಟರರ ಆಫೀಸು ಕ್ರಮವನ್ನು ತೆಗೆದುಕೊಳ್ಳುವಂತೆ ತಗಾದೆಮಾಡುವ, ಧಾರ್ಮಿಕ ಕಾರ್ಯಕಲಾಪಗಳಿಗಾಗಿರುವ ರಾಜ್ಯ ಮಂತ್ರಾಲೋಚನ ಸಭೆಯಿಂದ ಕೊಡಲ್ಪಟ್ಟ ಒಂದು ಪತ್ರವನ್ನು ಸಾದರಪಡಿಸುವ ಮೂಲಕ ಪ್ರೇಕ್ಷಕರನ್ನು ಚಕಿತಗೊಳಿಸಿದಳು. ಈ ಕ್ರಮವು ಆ ವಿಚಾರಣೆಯ ಸಮಯದಲ್ಲಿದ್ದ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಆಘಾತಗೊಳಿಸಿತ್ತು; ಏಕೆಂದರೆ ಕೌನ್ಸಿಲ್ ಆಫ್ ಯೂರೋಪ್ ಸಂಸ್ಥೆಯಲ್ಲಿನ ಅದರ ಸದಸ್ಯತ್ವಕ್ಕಾಗಿರುವ ಅರ್ಜಿಯಲ್ಲಿ ಅರ್‌ಮೇನಿಯವು, “ಎಲ್ಲಾ ಚರ್ಚುಗಳು ಮತ್ತು ಧಾರ್ಮಿಕ ಸಮುದಾಯಗಳು, ಅದರಲ್ಲೂ ವಿಶೇಷವಾಗಿ ‘ಅಸಂಪ್ರದಾಯಿಕ’ ಎಂದು ಸೂಚಿಸಲ್ಪಟ್ಟಿರುವ ಸಮುದಾಯಗಳು, ಯಾವುದೇ
ಪಕ್ಷಪಾತವಿಲ್ಲದೆ ತಮ್ಮ ಧರ್ಮವನ್ನು ಪಾಲಿಸಬಹುದು ಎಂಬ ಖಾತ್ರಿಯನ್ನು ನೀಡುವ” ಹಂಗನ್ನು ಅಂಗೀಕರಿಸಿತ್ತು.ಮುಂದಿನ ವಾರಗಳಲ್ಲಿ ವಿಚಾರಣೆಯು ಮುಂದುವರಿಯುತ್ತಾ ಹೋದಂತೆ, ವಾತಾವರಣವು ಸಹ ಇನ್ನಷ್ಟು ಬಿಗಿಯಾಯಿತು. ನ್ಯಾಯಾಲಯದ ಒಳಗೂ ಹೊರಗೂ ವಿರೋಧಿಗಳು ಸಾಕ್ಷಿಗಳಿಗೆ ಕಿರುಕುಳಕೊಡುತ್ತಾ ಇದ್ದರು ಮತ್ತು ಅವರ ಮೇಲೆ ಆಕ್ರಮಣ ಮಾಡುತ್ತಿದ್ದರು. ಯೆಹೋವನ ಸಾಕ್ಷಿ ಸ್ತ್ರೀಯರಿಗೆ ಮೊಣಕಾಲುಗಳ ಮೇಲೆ ಒದೆಯಲಾಯಿತು. ಒಬ್ಬ ಸಾಕ್ಷಿಯ ಮೇಲೆ ದಾಳಿಮಾಡಿದರೂ ಅವನು ಪ್ರತೀಕಾರಮಾಡಲು ನಿರಾಕರಿಸಿದಾಗ, ಹಿಂದಿನಿಂದ ಅವನ ಬೆನ್ನುಮೂಳೆಗೆ ಒದೆಯಲಾಯಿತು ಮತ್ತು ಅವನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು.
ಈ ಮಧ್ಯೆ, ಮೊಕದ್ದಮೆಯ ಅಧ್ಯಕ್ಷತೆಯನ್ನು ವಹಿಸಲಿಕ್ಕಾಗಿ ಒಬ್ಬ ಹೊಸ ನ್ಯಾಯಾಧೀಶನನ್ನು ನೇಮಿಸಲಾಯಿತು. ಸಭಿಕರಲ್ಲಿದ್ದ ಕೆಲವರು ಪ್ರತಿವಾದಿ ವಕೀಲನನ್ನು ಹೆದರಿಸಲು ಅನೇಕ ಪ್ರಯತ್ನಗಳನ್ನು ಮಾಡಿದರೂ, ಈ ಹೊಸ ಅಧ್ಯಕ್ಷ ನ್ಯಾಯಾಧೀಶನು ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದನು ಮತ್ತು ಪ್ರತಿವಾದಿ ವಕೀಲನಿಗೆ ಜೋರಾಗಿ ಬೆದರಿಕೆಹಾಕುತ್ತಿದ್ದಂಥ ಒಬ್ಬ ಸ್ತ್ರೀಯನ್ನು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಅಪ್ಪಣೆ ನೀಡಿದನು.
ಅರ್‌ಮೇನಿಯದ ಅತ್ಯುಚ್ಚ ನ್ಯಾಯಾಲಯಕ್ಕೆ
ಅಂತಿಮವಾಗಿ, 2002ರ ಮಾರ್ಚ್ 7ರಂದು, ಮೇಲ್ಮನವಿಯ ನ್ಯಾಯಾಲಯವು, ಟ್ರಾಯಲ್ ಕೋರ್ಟಿನ ತೀರ್ಮಾನವನ್ನೇ ಎತ್ತಿಹಿಡಿಯಿತು. ಕುತೂಹಲಕರ ಸಂಗತಿಯೇನೆಂದರೆ, ಈ ತೀರ್ಮಾನವನ್ನು ಪ್ರಕಟಿಸುವ ಒಂದು ದಿನಕ್ಕೆ ಮುಂಚೆ, ಧಾರ್ಮಿಕ ಕಾರ್ಯಕಲಾಪಗಳಿಗಾಗಿರುವ ರಾಜ್ಯ ಮಂತ್ರಾಲೋಚನ ಸಭೆಯನ್ನು ರದ್ದುಮಾಡಲಾಯಿತು. ಪುನಃ ಒಮ್ಮೆ, ಪ್ರಾಸಿಕ್ಯೂಷನ್ ಈ ನಿರ್ಣಯವನ್ನು ಅಪ್ಪೀಲುಮಾಡಿತು, ಆದರೆ ಈ ಬಾರಿ ಅರ್‌ಮೇನಿಯದ ಅತ್ಯುಚ್ಚ ನ್ಯಾಯಾಲಯಕ್ಕೆ ಅಂದರೆ ಕಸೇಶನ್ ನ್ಯಾಯಾಲಯಕ್ಕೆ. “ದೋಷಿ ಎಂಬ ನಿರ್ಣಯವನ್ನು ಕೊಡಲಿಕ್ಕಾಗಿ” ನ್ಯಾಯಾಲಯವು ಈ ಮೊಕದ್ದಮೆಯನ್ನು ಪುನರ್‌ವಿಚಾರಣೆಗಾಗಿ ಹಿಂದಿರುಗಿಸುವಂತೆ ಪ್ರಾಸಿಕ್ಯೂಟರ್‌ಗಳು ಕೇಳಿಕೊಂಡರು.
ಮಹರ್ ಕಾಚಾಟ್ರ್ಯಾನ್ ಎಂಬ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ, ಆರು ಮಂದಿ ನ್ಯಾಯಾಧೀಶರಿಂದ ಕೂಡಿದ್ದ ಒಂದು ತಂಡವು, 2002ರ ಏಪ್ರಿಲ್ 19ರಂದು ಬೆಳಗ್ಗೆ 11 ಗಂಟೆಗೆ ಸಭೆ ಸೇರಿತು. ಇಬ್ಬರು ಪ್ರಾಸಿಕ್ಯೂಟರ್‌ಗಳಲ್ಲಿ ಒಬ್ಬನು ತನ್ನ ಆರಂಭದ ಹೇಳಿಕೆಗಳಲ್ಲಿ, ಸಹೋದರ ಮಾರ್ಕಾರಿಯಾನ್ ದೋಷಿಯಾಗಿರುವುದನ್ನು ಕಂಡುಹಿಡಿಯಲು ಮುಂಚಿನ ಎರಡು ನ್ಯಾಯಾಲಯಗಳು ತಪ್ಪಿಹೋದದ್ದಕ್ಕಾಗಿ ತುಂಬ ಕೋಪವನ್ನು ವ್ಯಕ್ತಪಡಿಸಿದನು. ಆದರೆ ಈ ಬಾರಿ, ನ್ಯಾಯಾಧೀಶರಲ್ಲಿ ನಾಲ್ಕು ಮಂದಿ ಆ ಪ್ರಾಸಿಕ್ಯೂಟರನನ್ನು ಮಧ್ಯದಲ್ಲೇ ತಡೆದು, ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿದರು. ಸಹೋದರ ಮಾರ್ಕಾರಿಯಾನ್‌ರ ವಿರುದ್ಧವಾದ ತನ್ನ ನಿವೇದನೆಯಲ್ಲಿ, ಯೆಹೋವನ ಸಾಕ್ಷಿಗಳ ಸಾರುವ ಕಾರ್ಯ ಹಾಗೂ ಅವರು ಅಧಿಕೃತ ನೋಂದಣಿ ಪಡೆದಿಲ್ಲವೆಂಬಂಥ ವಿಷಯಗಳನ್ನು ಒಳಗೂಡಿಸುವ ಮೂಲಕ, ನ್ಯಾಯಾಧೀಶರಲ್ಲಿ ಪೂರ್ವಕಲ್ಪಿತ ಅಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಿದ್ದಕ್ಕಾಗಿ ಒಬ್ಬ ನ್ಯಾಯಾಧೀಶನು ಆ ಪ್ರಾಸಿಕ್ಯೂಟರನನ್ನು ಚೆನ್ನಾಗಿ ಬಯ್ದನು. ಏಕೆಂದರೆ 244ನೆಯ ವಿಧಿಯು, ಸಾರುವುದನ್ನಾಗಲಿ ಅಧಿಕೃತ ನೋಂದಣಿ ಪಡೆಯದಿರುವುದನ್ನಾಗಲಿ ಅಪರಾಧವೆಂದು ನಿರೂಪಿಸುವುದಿಲ್ಲ. ತದನಂತರ ನ್ಯಾಯಾಧೀಶನು ಆ ಪ್ರಾಸಿಕ್ಯೂಟರನ ಕೃತ್ಯಗಳನ್ನು “ಅಪರಾಧದ ಮೊಕದ್ದಮೆಯ ಮೂಲಕ ಹಿಂಸೆ” ಎಂದು ವರ್ಣಿಸಿದನು. ಮಾನವ ಹಕ್ಕುಗಳ ಕುರಿತಾದ ಯೂರೋಪಿಯನ್ ಒಪ್ಪಂದದಿಂದ ಸಂರಕ್ಷಣೆಗೆ ನೇಮಕವಾದ “ಜ್ಞಾತ ಧರ್ಮ”ವಾಗಿ ಯೆಹೋವನ ಸಾಕ್ಷಿಗಳು ಅಂಗೀಕರಿಸಲ್ಪಟ್ಟಿರುವ ಅನೇಕ ಯೂರೋಪಿಯನ್ ಕೋರ್ಟ್ ಮೊಕದ್ದಮೆಗಳ ಬಗ್ಗೆ ಇನ್ನೊಬ್ಬ ನ್ಯಾಯಾಧೀಶರು ತಿಳಿಸಿದರು. ಈ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ದೇಶವನ್ನೇ ವಿಭಾಗಿಸುತ್ತಿದ್ದಾರೆ ಎಂದು ಆ ಕೋಣೆಯಲ್ಲಿದ್ದ ಒಬ್ಬ ಪಾದ್ರಿಯು ಗಟ್ಟಿಯಾಗಿ ಕಿರುಚಿದನು. ನ್ಯಾಯಾಲಯವು ಅವನಿಗೆ ಸುಮ್ಮನೆ ಕುಳಿತುಕೊಳ್ಳುವಂತೆ ಅಪ್ಪಣೆ ನೀಡಿತು.
ಆ ಬಳಿಕ ನ್ಯಾಯಾಧೀಶರು ಲ್ಯೋವಾ ಮಾರ್ಕಾರಿಯಾನ್‌ರನ್ನು ಸಭಿಕರ ಮಧ್ಯದಿಂದ ಕರೆದರು, ಮತ್ತು ಇದು ಈ ಉಚ್ಚ ನ್ಯಾಯಾಲಯವು ಹಿಂದೆಂದೂ ಮಾಡಿರದಂಥ ವಿಷಯವಾಗಿತ್ತು. ಬೇರೆ ಬೇರೆ ವಿಷಯಗಳ ಬಗ್ಗೆ ಯೆಹೋವನ ಸಾಕ್ಷಿಗಳ ಕ್ರೈಸ್ತ ನಿಲುವಿನ ಕುರಿತು ಸಹೋದರ ಮಾರ್ಕಾರಿಯಾನ್ ಅತ್ಯುತ್ತಮ ಸಾಕ್ಷಿಯನ್ನು ನೀಡಿದರು. (ಮಾರ್ಕ 13:9) ಸ್ವಲ್ಪ ಹೊತ್ತಿನ ಜಾಗರೂಕ ಪರಿಗಣನೆಯ ಬಳಿಕ, ನ್ಯಾಯಾಧೀಶರು ಹಿಂದಿರುಗಿ ಬಂದು, ಆ ಸಹೋದರರು “ದೋಷಿಯಲ್ಲ” ಎಂಬ ನಿರ್ಣಯವನ್ನು ಒಮ್ಮತದಿಂದ ನೀಡಿದರು. ಸಹೋದರ ಮಾರ್ಕಾರಿಯಾನ್‌ರಿಗಾದ ನೆಮ್ಮದಿಯು ಅವರ ಮುಖಚರ್ಯೆಯಲ್ಲಿ ವ್ಯಕ್ತವಾಗುತ್ತಿತ್ತು. ತಮ್ಮ ಲಿಖಿತ ನಿರ್ಣಯದಲ್ಲಿ ನ್ಯಾಯಾಲಯವು ತಿಳಿಸಿದ್ದು: “ಸದ್ಯದ ಕಾನೂನು [ಲ್ಯೋವಾ ಮಾರ್ಕಾರಿಯಾನ್‌ರ] ಈ ಚಟುವಟಿಕೆಯನ್ನು ಒಂದು ಅಪರಾಧವಾಗಿ ಪರಿಗಣಿಸುವುದಿಲ್ಲ, ಮತ್ತು ಈ ರೀತಿಯ ದೋಷಾರೋಪವು ಅರ್‌ಮೇನಿಯದ ಸಂವಿಧಾನದ 23ನೆಯ ವಿಧಿಗೆ ಮತ್ತು ಯೂರೋಪಿಯನ್ ಒಪ್ಪಂದದ 9ನೆಯ ವಿಧಿಗೆ ವಿರುದ್ಧವಾದದ್ದಾಗಿದೆ.”
ಈ ನಿರ್ಣಯದ ಪರಿಣಾಮಗಳು
ಒಂದುವೇಳೆ ಪ್ರಾಸಿಕ್ಯೂಷನ್ ಯಶಸ್ಸನ್ನು ಪಡೆಯುತ್ತಿದ್ದಲ್ಲಿ, ಅರ್‌ಮೇನಿಯದಾದ್ಯಂತ ಎಲ್ಲಾ ಸಭೆಗಳಲ್ಲಿ ಇರುವ ಇತರ ಸಾಕ್ಷಿ ಹಿರಿಯರ ವಿರುದ್ಧ ಕಾನೂನುಬದ್ಧ ಕ್ರಮಗೈಯಲು ದಾರಿ ಸುಗಮವಾಗುತ್ತಿತ್ತು. ನ್ಯಾಯಾಲಯದಿಂದ ಕೊಡಲ್ಪಟ್ಟ ಸ್ಪಷ್ಟವಾದ ತೀರ್ಮಾನವು ಅಂಥ ಕಿರುಕುಳವನ್ನು ತಡೆಗಟ್ಟುವುದು ಎಂಬ ನಿರೀಕ್ಷೆಯಿದೆ. ಇದಕ್ಕೆ ಪ್ರತಿಕೂಲವಾದ ತೀರ್ಮಾನವು ಕೊಡಲ್ಪಟ್ಟಿರುತ್ತಿದ್ದಲ್ಲಿ, ಅದು ಯೆಹೋವನ ಸಾಕ್ಷಿಗಳ ಅಧಿಕೃತ ನೋಂದಣಿಯನ್ನು ನಿರಾಕರಿಸುತ್ತಾ ಮುಂದುವರಿಯಲು ಒಂದು ನೆಪವಾಗಿ ಪರಿಣಮಿಸಸಾಧ್ಯವಿತ್ತು. ಆದರೆ ಈಗ ನ್ಯಾಯಾಲಯವು ಈ ಸುಳ್ಳು ನೆಪವನ್ನು ತೆಗೆದುಹಾಕಿದ್ದು ತುಂಬ ಒಳ್ಳೇದೇ ಆಯಿತು.
ಈ ದೇಶದಲ್ಲಿರುವ 7,000ಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳಿಗೆ ಅಧಿಕೃತ ನೋಂದಣಿ ದೊರಕುವುದೋ ಇಲ್ಲವೋ ಎಂಬುದನ್ನು ಕಾಲವೇ ತಿಳಿಯಪಡಿಸುವುದು. ಈ ಮಧ್ಯೆ, “ಅರರಾಟ್ ದೇಶ”ದಲ್ಲಿ ಸತ್ಯಾರಾಧನೆಯು ಈಗಲೂ ಸಜೀವವಾಗಿದೆ ಮತ್ತು ಇನ್ನೂ ಸಮೃದ್ಧವಾಗಿ ಹಬ್ಬುತ್ತಲಿದೆ.
[ಪಾದಟಿಪ್ಪಣಿ]
^ ಪ್ಯಾರ. 3 ಅರ್‌ಮೇನಿಯದವರು ತಮ್ಮ ದೇಶವನ್ನು ಅರರಾಟ್ ಬೆಟ್ಟದೊಂದಿಗೆ ಸಂಬಂಧಿಸಲು ಇದು ಒಂದು ಕಾರಣವಾಗಿದೆ. ಪುರಾತನ ಸಮಯಗಳಲ್ಲಿ, ಅರ್‌ಮೇನಿಯವು ವಿಸ್ತಾರವಾದ ರಾಜ್ಯವಾಗಿದ್ದು, ಅದರ ಕ್ಷೇತ್ರವು ಆ ಬೆಟ್ಟಗಳನ್ನೂ ಆವರಿಸಿತ್ತು. ಹೀಗಿರುವುದರಿಂದ, ಬೈಬಲಿನ ಗ್ರೀಕ್ ಸೆಪ್ಟ್ಯುಅಜಿಂಟ್ ಭಾಷಾಂತರವು ಯೆಶಾಯ 37:38ರಲ್ಲಿರುವ “ಅರರಾಟ್ ದೇಶ” ಎಂಬ ಅಭಿವ್ಯಕ್ತಿಯನ್ನು “ಅರ್‌ಮೇನಿಯ” ಎಂದು ತರ್ಜುಮೆಮಾಡುತ್ತದೆ. ಈಗ ಅರರಾಟ್ ಬೆಟ್ಟವು ಟರ್ಕಿಯಲ್ಲಿ, ಅದರ ಪೂರ್ವ ಗಡಿಯ ಬಳಿಯಿದೆ.
[ಪುಟ 12ರಲ್ಲಿರುವ ಚಿತ್ರ]
ತಮ್ಮ ವಿಚಾರಣೆಯ ಸಮಯದಲ್ಲಿ ಲ್ಯೋವಾ ಮಾರ್ಕಾರಿಯಾನ್
[ಪುಟ 13ರಲ್ಲಿರುವ ಚಿತ್ರ]
ಸಹೋದರ ಮಾರ್ಕಾರಿಯಾನ್ ಮತ್ತು ಅವರ ಕುಟುಂಬ