ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜವಾದ ಆಧ್ಯಾತ್ಮಿಕ ಮೌಲ್ಯಗಳನ್ನು ನೀವೆಲ್ಲಿ ಕಂಡುಕೊಳ್ಳಬಲ್ಲಿರಿ?

ನಿಜವಾದ ಆಧ್ಯಾತ್ಮಿಕ ಮೌಲ್ಯಗಳನ್ನು ನೀವೆಲ್ಲಿ ಕಂಡುಕೊಳ್ಳಬಲ್ಲಿರಿ?

ನಿಜವಾದ ಆಧ್ಯಾತ್ಮಿಕ ಮೌಲ್ಯಗಳನ್ನು ನೀವೆಲ್ಲಿ ಕಂಡುಕೊಳ್ಳಬಲ್ಲಿರಿ?

“ಕೇವಲ ಕುಟುಂಬದ ಸಂಪ್ರದಾಯಕ್ಕನುಸಾರ ನೀವು ಒಂದು ಧರ್ಮವನ್ನು ಆಚರಿಸುತ್ತಿರುವುದಾದರೆ, ನಮ್ಮ ಪೂರ್ವಜರು 2,000 ವರ್ಷಗಳ ಹಿಂದೆ ಅನುಸರಿಸಿದ್ದ ಕೆಲ್ಟ್‌ ಧರ್ಮವನ್ನು ನೀವೇಕೆ ಆರಿಸಿಕೊಳ್ಳಬಾರದು?” ಎಂದು ಕೇಳಿದರು ರೊಡೊಲ್ಫ್‌, ಹಾಸ್ಯವ್ಯಂಗ್ಯ ದನಿಯಿಂದ. ಅವರಿಗೆ ಕಿವಿಗೊಡುತ್ತಿದ್ದ ಯುವ ವ್ಯಕ್ತಿಗೆ ಆ ಮಾತು ನಗುಬರಿಸಿತು.

“ದೇವರೊಂದಿಗಿನ ನನ್ನ ಸಂಬಂಧವು ನನಗೆ ಅತಿ ಪ್ರಾಮುಖ್ಯವಾದ ವಿಷಯ” ಎಂದು ಹೇಳುತ್ತಾರೆ ರೊಡೊಲ್ಫ್‌. “ಹತ್ತಾರು ಇಲ್ಲವೆ ನೂರಾರು ವರ್ಷಗಳ ಹಿಂದೆ ಜೀವಿಸಿದ್ದ ನನ್ನ ಕುಟುಂಬ ಸದಸ್ಯರು ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸಿದ್ದ ಕಾರಣಮಾತ್ರಕ್ಕೆ, ಆ ಧಾರ್ಮಿಕ ನಂಬಿಕೆಗಳು ಸಂಪ್ರದಾಯಬದ್ಧವಾಗಿ ನನ್ನ ಮೇಲೆ ಹೊರಿಸಲ್ಪಡಬೇಕೆಂಬ ವಿಚಾರವು ನನಗೆ ತದ್ವಿರುದ್ಧ.” ರೊಡೊಲ್ಫ್‌ ವಿಷಯವನ್ನು ಜಾಗರೂಕತೆಯಿಂದ ತೂಗಿನೋಡಿದರು; ಈ ಮಹತ್ವದ ವಿಷಯವನ್ನು ಕೇವಲ ಪೂರ್ವಿಕರಿಂದ ಬಾಧ್ಯವಾಗಿ ಬಂದ ಸಂಗತಿಯಾಗಿ ಅವರು ವೀಕ್ಷಿಸಲಿಲ್ಲ.

ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ಧರ್ಮವು ರೂಡಿಯಾಗಿ ದಾಟಿಸಲ್ಪಡುವ ಸಂಗತಿಯು ಇಂದು ವಿರಳವಾಗಿರುವುದಾದರೂ, ಅಧಿಕ ಸಂಖ್ಯಾತರು ಇನ್ನೂ ತಮ್ಮ ಪೂರ್ವಿಕರ ಧರ್ಮಕ್ಕೆ ನಿಷ್ಠರಾಗಿ ಉಳಿಯುತ್ತಾರೆ. ಆದರೆ ಒಬ್ಬನು ತನ್ನ ತಂದೆತಾಯಿಗಳ ಧಾರ್ಮಿಕ ಮೌಲ್ಯಗಳಿಗೆ ಅಂಟಿಕೊಂಡಿರುವುದು ಯಾವಾಗಲೂ ಸರಿಯೊ? ಬೈಬಲ್‌ ಏನನ್ನುತ್ತದೆ?

ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನು, ಇಸ್ರಾಯೇಲ್ಯರ ನಾಲ್ವತ್ತು ವರ್ಷಗಳ ಅರಣ್ಯ ಪ್ರಯಾಣದ ಅನಂತರ, ಅವರ ಮುಂದೆ ಈ ಆಯ್ಕೆಯನ್ನು ಇಟ್ಟನು: “ಯೆಹೋವನನ್ನು ಸೇವಿಸುವದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು [ಯೂಫ್ರೇಟೀಸ್‌] ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲನಿವಾಸಿಗಳಾದ ಅಮೋರಿಯರ ದೇವತೆಗಳೋ, ಹೇಳಿರಿ. ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.”​—ಯೆಹೋಶುವ 24:15.

ಯೆಹೋಶುವನು ಸೂಚಿಸಿದ ಆ ಪೂರ್ವಿಕರಲ್ಲಿ ಒಬ್ಬನು ಅಬ್ರಹಾಮನ ತಂದೆಯಾದ ತೆರಹನು ಆಗಿದ್ದನು. ಅವನು ಯೂಫ್ರೇಟೀಸ್‌ ನದಿಯ ಪೂರ್ವ ದಿಕ್ಕಿನಲ್ಲಿ ಆಗ ನೆಲೆಸಿದ್ದ ಊರ್‌ ದೇಶದಲ್ಲಿ ವಾಸಿಸುತ್ತಿದ್ದನು. ತೆರಹನ ಕುರಿತಾಗಿ ಬೈಬಲು ಹೆಚ್ಚೇನನ್ನೂ ತಿಳಿಸದಿದ್ದರೂ, ಅವನು ಅನ್ಯದೇವತೆಗಳನ್ನು ಪೂಜಿಸುತ್ತಿದ್ದನೆಂಬ ನಿಜತ್ವವನ್ನು ಮಾತ್ರ ತಿಳಿಸಿದೆ. (ಯೆಹೋಶುವ 24:2) ಅವನ ಮಗನಾದ ಅಬ್ರಹಾಮನಿಗೆ ಆಗ ದೇವರ ಉದ್ದೇಶದ ಕುರಿತ ಪೂರ್ಣ ಜ್ಞಾನವು ಇರದಿದ್ದಾಗ್ಯೂ, ತನ್ನ ಸ್ವದೇಶವಾದ ಊರ್‌ ಅನ್ನು ಬಿಟ್ಟು ಯೆಹೋವನು ಆಜ್ಞಾಪಿಸಿದ ಸ್ಥಳಕ್ಕೆ ಹೋಗಲು ಅವನು ಸಿದ್ಧನಾಗಿದ್ದನು. ಹೌದು, ಅಬ್ರಹಾಮನು ತನ್ನ ತಂದೆಯ ಧರ್ಮಕ್ಕಿಂತ ಭಿನ್ನವಾದ ಒಂದು ಧರ್ಮವನ್ನು ಆರಿಸಿಕೊಂಡನು. ಹಾಗೆ ಮಾಡಿದುದಕ್ಕಾಗಿ, ದೇವರು ವಾಗ್ದಾನಿಸಿದ್ದ ಆಶೀರ್ವಾದಗಳು ಅಬ್ರಹಾಮನಿಗೆ ಲಭಿಸಿದವು, ಮತ್ತು ಅವನು, ಯಾರನ್ನು ಅನೇಕ ಧರ್ಮಗಳು “ನಂಬುವವರೆಲ್ಲರಿಗೂ . . . ಮೂಲತಂದೆ”ಯೆಂದು ಅಂಗೀಕರಿಸುತ್ತವೊ ಆ ವ್ಯಕ್ತಿಯಾಗಿ ಪರಿಣಮಿಸಿದನು.​—ರೋಮಾಪುರ 4:11.

ಯೇಸು ಕ್ರಿಸ್ತನ ಪೂರ್ವಜೆಯಾಗಿದ್ದ ರೂತಳ ವೃತ್ತಾಂತವನ್ನೂ ಬೈಬಲು ಸಕಾರಾತ್ಮಕ ರೀತಿಯಲ್ಲಿ ತಿಳಿಸುತ್ತದೆ. ಒಬ್ಬ ಇಸ್ರಾಯೇಲ್ಯನನ್ನು ವಿವಾಹವಾಗಿದ್ದ ಮೋವಾಬ್ಯ ಸ್ತ್ರೀಯಾದ ರೂತಳು ವಿಧವೆಯಾದಾಗ ಅವಳಿಗೆ ಒಂದು ಆಯ್ಕೆಯನ್ನು ಮಾಡಬೇಕಾಯಿತು. ಅದೇನೆಂದರೆ, ತನ್ನ ಸ್ವದೇಶದಲ್ಲಿ ನೆಲೆಸುವುದು ಇಲ್ಲವೆ ಅತ್ತೆಯೊಂದಿಗೆ ಇಸ್ರಾಯೇಲಿಗೆ ತೆರಳುವುದು. ತನ್ನ ಹೆತ್ತವರಿಂದ ಅನುಸರಿಸಲ್ಪಟ್ಟ ವಿಗ್ರಹಾರಾಧನೆಗೆ ಹೋಲಿಕೆಯಲ್ಲಿ, ಯೆಹೋವನಾರಾಧನೆಯ ಶ್ರೇಷ್ಠ ಮೌಲ್ಯವನ್ನು ಅಂಗೀಕರಿಸುತ್ತಾ ರೂತಳು ತನ್ನ ಅತ್ತೆಗೆ ಹೇಳಿದ್ದು: “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.”​—ರೂತಳು 1:16, 17.

ಈ ಬೈಬಲ್‌ ಅಂಗೀಕೃತ ದಾಖಲೆಯ ಮಹತ್ವಾರ್ಥದ ಕುರಿತು ವಿವರಿಸುತ್ತಾ, ಡಿಕ್ಸ್‌ಯೊನರ್‌ ಡ ಲಾ ಬೀಬಲ್‌ ಹೇಳುವುದೇನಂದರೆ, “ಹೀಗೆ ಪರದೇಶಸ್ಥಳಾದ ಸ್ತ್ರೀಯೊಬ್ಬಳು, ಇಸ್ರಾಯೇಲ್ಯರಿಂದ ದ್ವೇಷಿಸಲ್ಪಟ್ಟವರೂ ವೈರಿಗಳೂ ಆಗಿದ್ದ ಅನ್ಯಜನರ ನಡುವೆ ಹುಟ್ಟಿದ್ದರೂ . . . ಯೆಹೋವನ ಜನಾಂಗ ಮತ್ತು ಆರಾಧನೆಯ ಕಡೆಗಿನ ಪ್ರೀತಿಯಿಂದಾಗಿ, ಪವಿತ್ರ ರಾಜ ದಾವೀದನ ಪೂರ್ವಜೆಯಾದದ್ದು ದೈವಾನುಗ್ರಹದಿಂದಲೇ.” ತನ್ನ ತಂದೆತಾಯಿಗಳ ಧರ್ಮಕ್ಕಿಂತ ಪ್ರತ್ಯೇಕವಾದ ಒಂದು ಧರ್ಮವನ್ನು ಆರಿಸಿಕೊಳ್ಳಲು ರೂತಳು ಹಿಂಜರಿಯಲಿಲ್ಲ. ಆಕೆಯ ಆ ನಿರ್ಣಯವು ಆಕೆಗೆ ದೇವರಾಶೀರ್ವಾದವನ್ನು ತಂದಿತು.

ಯೇಸು ಕ್ರಿಸ್ತನ ಶಿಷ್ಯರು ತಮ್ಮ ಪೂರ್ವಜರ ಧರ್ಮವನ್ನು ತ್ಯಜಿಸಿದ್ದೇಕೆಂಬ ಕಾರಣಗಳ ಕುರಿತು ಕ್ರೈಸ್ತತ್ವದ ಆರಂಭದ ದಾಖಲೆಯು ಹೆಚ್ಚು ಸ್ಪಷ್ಟಪಡಿಸಿರುತ್ತದೆ. ಮನವೊಲಿಸುವ ಪ್ರೇರಕ ಭಾಷಣದಲ್ಲಿ ಅಪೊಸ್ತಲ ಪೇತ್ರನು ತನ್ನ ಸಭಿಕರನ್ನು “ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ” ಎಂದು ಎಚ್ಚರಿಸಿದನು. ಅವರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮೂಲಕ ಅದನ್ನು ಮಾಡಬೇಕಿತ್ತು. (ಅ. ಕೃತ್ಯಗಳು 2:​37-41) ಕ್ರೈಸ್ತರ ಯೆಹೂದಿ ಹಿಂಸಕನಾದ ಸೌಲನದ್ದು, ಒಂದು ಅತಿ ಗಮನಾರ್ಹವಾದ ಉದಾಹರಣೆಯಾಗಿದೆ. ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಅವನಿಗೆ ಕ್ರಿಸ್ತನ ದರ್ಶನವಾಯಿತು. ತದನಂತರ, ಅವನು ಕ್ರೈಸ್ತನಾಗಿ ಅಪೊಸ್ತಲ ಪೌಲನೆಂಬ ಹೆಸರಿನಿಂದ ಪ್ರಖ್ಯಾತನಾದನು.​—ಅ. ಕೃತ್ಯಗಳು 9:​1-9.

ಆದಿಕ್ರೈಸ್ತರಲ್ಲಿ ಅಧಿಕ ಸಂಖ್ಯಾತರಿಗೆ ಪೌಲನಿಗಾದಂಥ ಆ ಆಶ್ಚರ್ಯಚಕಿತ ಅನುಭವವಾಗಿರಲಿಲ್ಲ ನಿಜ. ಆದರೂ ಅವರೆಲ್ಲರೂ, ಯೆಹೂದಿ ಮತ ಅಥವಾ ವಿವಿಧ ಅನ್ಯದೇವತೆಗಳ ಭಕ್ತಿಯನ್ನು ತ್ಯಜಿಸಲೇಬೇಕಾಗಿತ್ತು. ಯಾರು ಕ್ರೈಸ್ತತ್ವವನ್ನು ಸ್ವೀಕರಿಸಿದರೊ ಅವರು ನಿಜತ್ವಗಳ ಪೂರ್ಣ ಜ್ಞಾನವಿದ್ದೇ ಹಾಗೆ ಮಾಡಿದ್ದರು. ಮೆಸ್ಸೀಯನೋಪಾದಿ ಯೇಸುವಿನ ಪಾತ್ರದ ಕುರಿತು ಕೆಲವೊಮ್ಮೆ ಅವರು ದೀರ್ಘ ಚರ್ಚೆಗಳನ್ನು ಮಾಡಿದ್ದರು. (ಅ. ಕೃತ್ಯಗಳು 8:​26-40; 13:​16-43; 17:​22-34) ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವನ್ನು ಆ ಆದಿಕ್ರೈಸ್ತರು ಸ್ಪಷ್ಟವಾಗಿ ಮನಗಂಡಿದ್ದರು. ಯೆಹೂದ್ಯರು ಮತ್ತು ಯೆಹೂದ್ಯೇತರರಾದ ಎಲ್ಲರಿಗೂ ಕರೆಯನ್ನು ಕೊಡಲಾಗಿತ್ತಾದರೂ ಸಂದೇಶವು ಒಂದೇ ಆಗಿತ್ತು. ಏನಂದರೆ, ಅವರು ದೇವರನ್ನು ಮೆಚ್ಚಿಸಬೇಕಾದರೆ ಕ್ರೈಸ್ತತ್ವದ ಹೊಸ ಆರಾಧನಾಕ್ರಮವನ್ನು ಅನುಸರಿಸುವ ಅಗತ್ಯವಿತ್ತು.

ನಮಗೆ ಸಂಬಂಧಿಸಿದ ಒಂದು ಆಯ್ಕೆ

ಯೆಹೂದಿಮತ, ಸಾಮ್ರಾಟನ ಆರಾಧನೆ ಅಥವಾ ಅನ್ಯದೇವತೆಗಳ ಭಕ್ತಿ ಮುಂತಾದ ಕೌಟುಂಬಿಕ ಧಾರ್ಮಿಕ ಸಂಪ್ರದಾಯಗಳನ್ನು ತಿರಸ್ಕರಿಸುವುದಕ್ಕೆ​—ಮತ್ತು ಯೆಹೂದ್ಯರಿಂದಲೂ ರೋಮಿನವರಿಂದಲೂ ತುಚ್ಛವೆಣಿಸಲ್ಪಟ್ಟಿದ್ದ ಒಂದು ಹೊಸ ಧಾರ್ಮಿಕ ಪರಂಪರೆಗೆ ಸೇರಿಕೊಳ್ಳುವುದಕ್ಕೆ ಪ್ರಥಮ ಶತಮಾನದಲ್ಲಿ ಧೈರ್ಯವು ಅವಶ್ಯವಾಗಿತ್ತು. ಈ ಆಯ್ಕೆಯು ಬೇಗನೆ ಹಿಂಸೆಗೆ ನಡೆಸಿತು. “ಎಲ್ಲೆಡೆಯೂ ವ್ಯಾಪಿಸಿದ್ದ ವಾತಾವರಣದ ಪದ್ಧತಿಗಳಿಗೆ ಬಗ್ಗಿನಡೆಯಲು ಬಿಟ್ಟುಕೊಡದೆ” ಅವನ್ನು ನಿರಾಕರಿಸಲು, ಇಂದು ಸಹ ತದ್ರೀತಿಯ ಧೈರ್ಯವು ಅವಶ್ಯ ಎಂಬುದಾಗಿ ಕ್ಲೆರ್‌ಮಂಟ್‌-ಫೆರಾಂಡ್‌ನ ಕ್ಯಾತಲಿಕ್‌ ಬಿಷಪರಾದ ಈಪೊಲೀಟ್‌ ಸೀಮೊನ್‌, ತನ್ನ ಪುಸ್ತಕವಾದ ವರ್‌ವ್ಯೂನ್‌ ಫ್ರಾನ್ಸ್‌ ಪಾಯೀನ್‌ನಲ್ಲಿ ವಿವರಿಸುತ್ತಾರೆ. ಕೆಲವೊಮ್ಮೆ ಟೀಕೆಗೆ ಒಳಗಾಗಿರುವ ಯೆಹೋವನ ಸಾಕ್ಷಿಗಳ ಅಲ್ಪಸಂಖ್ಯಾತ ಧಾರ್ಮಿಕ ಗುಂಪಿನೊಂದಿಗೆ ಜೊತೆಗೂಡಲು ಧೈರ್ಯವು ಬೇಕೆಂಬುದು ನಿಶ್ಚಯ.

ಕಾರ್‌ಸಿಕದ ಬಾಸ್ಟೀಯ ನಗರದ ಯುವಕನಾದ ಪಾಲ್‌, ಕ್ಯಾತಲಿಕ್‌ ಧರ್ಮದಲ್ಲಿ ಬೆಳೆಸಲ್ಪಟ್ಟಿದ್ದನು. ಕ್ಯಾತಲಿಕ್‌ ಧರ್ಮಕಾರ್ಯದ ಸಂಸ್ಥೆಯೊಂದಕ್ಕೆ ಹಣವೆತ್ತಲು ಕೇಕ್‌ಗಳನ್ನು ಮಾರುತ್ತಾ, ಮುಂತಾದ ಚರ್ಚ್‌ ಚಟುವಟಿಕೆಗಳಲ್ಲಿ ಅವನು ಆಗಿಂದಾಗ್ಯೆ ಭಾಗವಹಿಸುತ್ತಿದ್ದನು. ಬೈಬಲಿನ ಹೆಚ್ಚು ಉತ್ತಮವಾದ ಜ್ಞಾನವನ್ನು ಪಡೆಯಲಿಕ್ಕಾಗಿ ಯೆಹೋವನ ಸಾಕ್ಷಿಗಳೊಂದಿಗೆ ಕ್ರಮವಾದ ಚರ್ಚೆಗಳನ್ನು ನಡೆಸಲು ಅವನು ಒಪ್ಪಿಕೊಂಡನು. ತಾನು ಏನನ್ನು ಕಲಿಯುತ್ತಿದ್ದನೊ ಅದು ಅವನಿಗೆ ಬಾಳುವ ಪ್ರಯೋಜನವನ್ನು ತರಲಿದೆಯೆಂದು ಅವನಿಗೆ ಕ್ರಮೇಣ ಮನವರಿಕೆಯಾಯಿತು. ಪಾಲ್‌ ಬೈಬಲಿನ ಅಮೂಲ್ಯ ತತ್ತ್ವಗಳನ್ನು ಪೂರ್ಣವಾಗಿ ಸ್ವೀಕರಿಸಿಕೊಂಡು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದನು. ಅವನ ಹೆತ್ತವರು ಅವನ ಆಯ್ಕೆಯನ್ನು ಗೌರವಿಸಿದರು. ಅದು ಅವರ ಆಪ್ತ ಕುಟುಂಬ ಸಂಬಂಧವನ್ನು ಬಾಧಿಸಲಿಲ್ಲ.

ಅಮಾಲೀ, ದಕ್ಷಿಣ ಫ್ರಾನ್ಸ್‌ನಲ್ಲಿ ವಾಸಿಸುತ್ತಿದ್ದಾಳೆ. ಅವಳ ಕುಟುಂಬ ಸದಸ್ಯರು ನಾಲ್ಕು ಸಂತತಿಗಳಿಂದ ಯೆಹೋವನ ಸಾಕ್ಷಿಗಳಾಗಿದ್ದರು. ತನ್ನ ಹೆತ್ತವರ ಧಾರ್ಮಿಕ ಮೌಲ್ಯಗಳನ್ನು ಸ್ವೀಕರಿಸಲು ಆಕೆ ಆಯ್ಕೆಮಾಡಿದ್ದೇಕೆ? “ನಿಮ್ಮ ಹೆತ್ತವರು ಅಥವಾ ಅಜ್ಜ-ಅಜ್ಜಿಯಂದಿರು ಯೆಹೋವನ ಸಾಕ್ಷಿಗಳಾಗಿದ್ದಾರೆ ಅಥವಾ ಆಗಿದ್ದರು ಎಂಬ ಕಾರಣಮಾತ್ರದಿಂದ ನೀವು ಯೆಹೋವನ ಸಾಕ್ಷಿಗಳಾಗುವುದಿಲ್ಲ. ಇಂದೊ ನಾಳೆಯೊ​—⁠ಇದು ನನ್ನ ಧರ್ಮ ಯಾಕಂದರೆ ಇವು ನನ್ನ ದೃಢನಂಬಿಕೆಗಳು​—ಎಂಬ ಭಾವನೆ ನಿಮ್ಮಲ್ಲಿ ಮೂಡಿಬರುವುದು,” ಎನ್ನುತ್ತಾಳೆ ಆಕೆ. ಇತರ ಅನೇಕ ಯೆಹೋವನ ಸಾಕ್ಷಿಗಳಂತೆ, ಅಮಾಲೀಗೂ, ತನ್ನ ಬಲವಾದ ಧಾರ್ಮಿಕ ದೃಢನಂಬಿಕೆಗಳೇ ತನ್ನ ಜೀವಿತಕ್ಕೆ ಒಂದು ಉದ್ದೇಶವನ್ನು ಕೊಡುತ್ತವೆ ಎಂಬುದು ತಿಳಿದಿದೆ ಮತ್ತು ಅವು ಬಾಳುವ ಸಂತೋಷಕ್ಕೆ ಮೂಲವಾಗಿವೆ.

ದೇವರ ಮೌಲ್ಯಗಳನ್ನೇಕೆ ಸ್ವೀಕರಿಸಬೇಕು

ಜ್ಞಾನೋಕ್ತಿ ಪುಸ್ತಕದ 6ನೆಯ ಅಧ್ಯಾಯ 20ನೆಯ ವಚನವು, ದೇವರನ್ನು ಮೆಚ್ಚಿಸಬಯಸುವವರನ್ನು ಹೀಗೆ ಉತ್ತೇಜಿಸುತ್ತದೆ: “ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ.” ಇಂಥ ಸಲಹೆಗಳು, ಕುರುಡು ವಿಧೇಯತೆಯನ್ನು ಶಿಫಾರಸ್ಸು ಮಾಡುವ ಬದಲಿಗೆ, ಯುವಕರು ತಮ್ಮ ನಂಬಿಕೆಯನ್ನು ಆಳಗೊಳಿಸುವ ಮೂಲಕ ಮತ್ತು ದೇವರೆಡೆಗೆ ತಮ್ಮ ಸ್ವಂತ ನಿಲುವನ್ನು ತೆಗೆದುಕೊಳ್ಳುವ ಮೂಲಕ ದೇವರ ಮಟ್ಟಗಳನ್ನು ಸ್ವೀಕರಿಸುವಂತೆ ಉಪದೇಶಿಸುತ್ತವೆ. “ಎಲ್ಲವನ್ನೂ ಪರಿಶೋಧಿಸಿ” ಎಂದು ಅಪೊಸ್ತಲ ಪೌಲನು ಕರೆಕೊಟ್ಟನು. ತಮಗೆ ಕಲಿಸಿಕೊಟ್ಟ ವಿಷಯಗಳೆಲ್ಲವು ದೇವರ ವಾಕ್ಯಕ್ಕನುಸಾರ ಮತ್ತು ಆತನ ಚಿತ್ತಕ್ಕನುಸಾರ ಇವೆಯೊ ಎಂಬುದಾಗಿ ಪರೀಕ್ಷಿಸಿ, ಅವುಗಳಿಗನುಸಾರ ನಡೆಯುವಂತೆ ಅವನು ಬೋಧಿಸಿದನು.​—1 ಥೆಸಲೊನೀಕ 5:21.

ಕ್ರೈಸ್ತ ಮನೆವಾರ್ತೆಯಲ್ಲಿ ಬೆಳೆಸಲ್ಪಡಲಿ ಅಥವಾ ಬೆಳೆಸಲ್ಪಡದಿರಲಿ, ಸುಮಾರು 60 ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳಲ್ಲಿ ಆಬಾಲವೃದ್ಧರು, ಅಂತಹ ನಿರ್ಣಯವನ್ನು ಮಾಡಿರುತ್ತಾರೆ. ಬೈಬಲಿನ ಜಾಗರೂಕತೆಯ ಅಧ್ಯಯನದ ಮೂಲಕ, ಜೀವಿತದ ಉದ್ದೇಶದ ಕುರಿತ ಅವರ ಪ್ರಶ್ನೆಗಳಿಗೆ ಭರವಸಯೋಗ್ಯ ಉತ್ತರಗಳು ದೊರೆತಿವೆ. ಮಾನವಕುಲಕ್ಕಾಗಿ ದೇವರ ಚಿತ್ತವೇನೆಂಬ ಸ್ಪಷ್ಟ ತಿಳಿವಳಿಕೆಯನ್ನು ಅವರು ಪಡೆದಿದ್ದಾರೆ. ಈ ಜ್ಞಾನವನ್ನು ಪಡೆದುಕೊಂಡ ಮೇಲೆ, ಅವರು ದೇವರ ಮೌಲ್ಯಗಳನ್ನು ಸ್ವೀಕರಿಸಿ, ಆತನ ಚಿತ್ತವನ್ನು ಮಾಡಲು ತಮ್ಮ ಕೈಲಾದಷ್ಟನ್ನು ಪ್ರಯತ್ನಿಸುತ್ತಾರೆ.

ನೀವು ಈ ಪತ್ರಿಕೆಯ ಕ್ರಮದ ವಾಚಕರಾಗಿರಲಿ ಇಲ್ಲದಿರಲಿ, ಬೈಬಲಿನ ಆಧ್ಯಾತ್ಮಿಕ ಮೌಲ್ಯಗಳನ್ನು ಪರೀಕ್ಷಿಸಲು, ನಿಮಗೆ ನೆರವಾಗಲು, ಯೆಹೋವನ ಸಾಕ್ಷಿಗಳು ನೀಡುವ ಕರೆಯನ್ನು ನೀವೇಕೆ ಸ್ವೀಕರಿಸಬಾರದು? ಈ ರೀತಿಯಲ್ಲಿ ನೀವು, “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು”ನೋಡ ಶಕ್ತರಾಗುವಿರಿ ಮತ್ತು ಆ ಮೂಲಕ ದೊರೆತ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕುವಲ್ಲಿ ನಿತ್ಯಜೀವದ ಕಡೆಗೆ ನಡಿಸಲ್ಪಡುವಿರಿ.​—ಕೀರ್ತನೆ 34:8; ಯೋಹಾನ 17:3.

[ಪುಟ 5ರಲ್ಲಿರುವ ಚಿತ್ರ]

ಫ್ರಾನ್ಸ್‌ನಲ್ಲಿ ನಾಲ್ಕು ಸಂತತಿಗಳಿಂದ ಯೆಹೋವನ ಸಾಕ್ಷಿಗಳಾಗಿರುವ ಒಂದು ಕುಟುಂಬ

[ಪುಟ 7ರಲ್ಲಿರುವ ಚಿತ್ರ]

ರೂತಳು ತನ್ನ ಪೂರ್ವಿಕರ ದೇವತೆಗಳನ್ನು ಆರಾಧಿಸುವ ಬದಲಿಗೆ ಯೆಹೋವನನ್ನು ಆರಾಧಿಸಲು ಆರಿಸಿಕೊಂಡಳು