ಹಕ್ಕಿಗಳು ನಮಗೆ ಕಲಿಸಬಲ್ಲ ವಿಷಯಗಳು
ಹಕ್ಕಿಗಳು ನಮಗೆ ಕಲಿಸಬಲ್ಲ ವಿಷಯಗಳು
“ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” (ಮತ್ತಾಯ 6:26) ಯೇಸು ಕ್ರಿಸ್ತನು, ಗಲಿಲಾಯ ಸಮುದ್ರದ ಹತ್ತಿರದಲ್ಲಿರುವ ಪರ್ವತದ ಮೇಲೆ ನೀಡಿದ ಸುಪ್ರಸಿದ್ಧವಾದ ಪ್ರಸಂಗದಲ್ಲಿ ಈ ಮಾತುಗಳನ್ನು ತಿಳಿಸಿದನು. ಅವನ ಸಭಿಕರಲ್ಲಿ, ಅವನ ಹಿಂಬಾಲಕರಲ್ಲದೆ ಇನ್ನೂ ಅನೇಕರೂ ಇದ್ದರು. ಅವನ ಭಾವೀ ಶಿಷ್ಯರಾಗಸಾಧ್ಯವಿದ್ದ ಜನರ ಒಂದು ಮಹಾಸಮೂಹವು ಆ ಪ್ರದೇಶದ ಎಲ್ಲಾ ಭಾಗಗಳಿಂದ ನೆರೆದುಬಂದಿತ್ತು. ಅವರಲ್ಲಿ ಅನೇಕರು ಬಡಜನರಾಗಿದ್ದು, ಯೇಸುವಿನಿಂದ ವಾಸಿಮಾಡಲ್ಪಡುವುದಕ್ಕಾಗಿ ಅಸ್ವಸ್ಥರನ್ನು ಅವನ ಬಳಿಗೆ ಕರೆದುಕೊಂಡು ಬಂದಿದ್ದರು.—ಮತ್ತಾಯ 4:23-5:2; ಲೂಕ 6:17-20.
ಯೇಸು ಎಲ್ಲಾ ಅಸ್ವಸ್ಥರನ್ನು ವಾಸಿಮಾಡಿದ ನಂತರ, ಜನರ ಗಮನವನ್ನು ಅತಿ ಪ್ರಾಮುಖ್ಯವಾದ ಆತ್ಮಿಕ ಅಗತ್ಯತೆಗಳ ಕಡೆಗೆ ತಿರುಗಿಸಿದನು. ಅವನು ಕಲಿಸಿದ ಪಾಠಗಳಲ್ಲಿ, ಮೇಲೆ ತಿಳಿಸಿದಂಥ ವಿಷಯವು ಒಂದಾಗಿದೆ.
ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅನೇಕ ವರುಷಗಳಿಂದ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಕೆಲವು, ಕ್ರಿಮಿಕೀಟಗಳನ್ನು ತಿನ್ನುತ್ತವೆ, ಇನ್ನೂ ಕೆಲವು ಹಣ್ಣು ಮತ್ತು ಬೀಜಗಳನ್ನು ತಿನ್ನುತ್ತವೆ. ದೇವರು ಹಕ್ಕಿಗಳಿಗಾಗಿ ಅಷ್ಟು ಹೇರಳವಾಗಿ ಆಹಾರವನ್ನು ಲಭ್ಯಗೊಳಿಸಿದ್ದಾನಾದರೆ, ಆತನು ಖಂಡಿತವಾಗಿಯೂ ತನ್ನ ಮಾನವ ಸೇವಕರಿಗೆ ಅವರ ಅನುದಿನದ ಆಹಾರವನ್ನು ಸಂಪಾದಿಸಲು ಸಹಾಯಮಾಡಶಕ್ತನಾಗಿದ್ದಾನೆ. ಅವರು ಆಹಾರವನ್ನು ಖರೀದಿಸಲು ಹಣ ಸಂಪಾದಿಸುವಂತೆ ಒಂದು ಉದ್ಯೋಗವನ್ನು ಕಂಡುಕೊಳ್ಳಲು ಸಹಾಯಮಾಡುವ ಮೂಲಕ ಆತನು ಇದನ್ನು ಮಾಡಬಹುದು. ಅಥವಾ, ಅವರು ತಮ್ಮ ಆಹಾರವನ್ನು ಸ್ವತಃ ಬೆಳೆಸುವುದರಲ್ಲಿ ಯಶಸ್ವಿಗಳಾಗುವಂತೆ ಮಾಡಬಹುದು. ತುರ್ತಿನ ಸಮಯಗಳಲ್ಲಿ, ತಮ್ಮಲ್ಲಿರುವ ಆಹಾರವನ್ನು ಅಗತ್ಯದಲ್ಲಿರುವವರೊಂದಿಗೆ ಹಂಚಿಕೊಳ್ಳುವಂತೆ ದಯಾಪರ ನೆರೆಯವರ ಮತ್ತು ಸ್ನೇಹಿತರ ಹೃದಯಗಳನ್ನು ದೇವರು ಪ್ರೇರೇಪಿಸಬಲ್ಲನು.
ಹಕ್ಕಿಯ ಜೀವಿತವನ್ನು ಜಾಗರೂಕತೆಯಿಂದ ಗಮನಿಸುವ ಮೂಲಕ ನಾವು ಇನ್ನೂ ಅನೇಕ ವಿಷಯಗಳನ್ನು ಕಲಿಯಸಾಧ್ಯವಿದೆ. ಹಕ್ಕಿಗಳು ತಮ್ಮ ಮರಿಗಳನ್ನು ಬೆಳೆಸಸಾಧ್ಯವಾಗುವಂತೆ ಗೂಡುಗಳನ್ನು ಕಟ್ಟುವ ಅದ್ಭುತಕರವಾದ ಸಹಜ ಪ್ರವೃತ್ತಿಯಿಂದ ದೇವರು ಅವುಗಳನ್ನು ಸೃಷ್ಟಿಸಿದ್ದಾನೆ. ಎರಡು ವಿವಿಧ ರೀತಿಯ ಗೂಡುಗಳನ್ನು ಗಮನಿಸಿರಿ. ಎಡಬದಿಯಲ್ಲಿರುವ ಚಿತ್ರವು, ಆಫ್ರಿಕದ ರಾಕ್ ಮಾರ್ಟಿನ್ ಹಕ್ಕಿಯ ಗೂಡು. ಇದು ಬಂಡೆಯಲ್ಲಿ ಅಥವಾ ಮನೆಯ ಗೋಡೆಯ ಮೇಲೆ ಕಟ್ಟಲ್ಪಟ್ಟಿದೆ. ಇಂಥ ಗೂಡುಗಳಿಗೆ ಚಾವಣಿಯು, ಆ ಗೂಡುಗಳ ಮೇಲೆ ಚಾಚಿರುವ ಬಂಡೆ ಅಥವಾ ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ಕಟ್ಟಡದ ಚಾವಣಿಯ ಮುಂದಕ್ಕೆ ಚಾಚಿರುವ ಸೂರು. ಈ ಗೂಡಿನ ತಳಭಾಗವನ್ನು, ಬಟ್ಟಲಿನಾಕಾರದಲ್ಲಿ ಮಣ್ಣಿನ ಸಣ್ಣ ಸಣ್ಣ ಉಂಡೆಗಳನ್ನು ಒಟ್ಟಾಗಿ ಜೋಡಿಸಿ ಮಾಡಲಾಗುತ್ತದೆ. ಮಣ್ಣಿನ ಉಂಡೆಗಳನ್ನು ಒಟ್ಟುಸೇರಿಸಲು ಗಂಡು ಹೆಣ್ಣು ಎರಡೂ ಒಟ್ಟಾಗಿ ಕಠಿಣಶ್ರಮಪಡುತ್ತವೆ ಮತ್ತು ಅವುಗಳು ಗೂಡನ್ನು ಕಟ್ಟಿ ಮುಗಿಸಲು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ತಗಲಬಹುದು. ನಂತರ ಅವುಗಳು, ಗೂಡಿನ ಒಳಭಾಗವನ್ನು ಹುಲ್ಲು ಮತ್ತು ಗರಿಗಳಿಂದ ಮುಚ್ಚುತ್ತವೆ. ಎರಡೂ ಒಟ್ಟಾಗಿ ಮರಿಗಳನ್ನು ಪೋಷಿಸುತ್ತವೆ. ಕೆಳಗೆ ತೋರಿಸಲ್ಪಟ್ಟಿರುವುದು, ಮಾಸ್ಕ್ಡ್ ವೀವರ್ ಎಂಬ ಗಂಡು ಹಕ್ಕಿಯ ಗೂಡು. ಆಫ್ರಿಕದ ಈ ಉದ್ಯೋಗಶೀಲ ಹಕ್ಕಿಯು ತನ್ನ ಗೂಡನ್ನು ಹುಲ್ಲಿನ ಗರಿಗಳಿಂದ ಅಥವಾ ಇತರ ಸಸ್ಯಗಳ ಸಿಪ್ಪೆಯಿಂದ ಕಟ್ಟುತ್ತದೆ. ಇದು, ಒಂದೇ ದಿನದಲ್ಲಿ ತನ್ನ ಗೂಡನ್ನು ಕಟ್ಟಿ ಮುಗಿಸಬಲ್ಲದು ಮತ್ತು ಒಂದು ಋತುವಿನಲ್ಲಿ 30ಕ್ಕಿಂತಲೂ ಹೆಚ್ಚು ಗೂಡುಗಳನ್ನು ಕಟ್ಟಬಹುದು!
ಇದರಿಂದ ಏನು ಪಾಠ? ಹಕ್ಕಿಗಳಿಗೆ ಅಂಥ ಕೌಶಲಗಳನ್ನು, ಮತ್ತು ಗೂಡುಗಳನ್ನು ಕಟ್ಟಲು ಬೇಕಾಗಿರುವ ಹೇರಳವಾದ ಸಾಮಾಗ್ರಿಗಳನ್ನು ದೇವರು ಒದಗಿಸುತ್ತಾನಾದರೆ, ಖಂಡಿತವಾಗಿಯೂ ಆತನು ತನ್ನ ಮಾನವ ಸೇವಕರಿಗೆ ಬೇಕಾಗಿರುವ ವಸತಿಯನ್ನು ಪಡೆದುಕೊಳ್ಳಲು ಸಹಾಯಮಾಡಶಕ್ತನಾಗಿದ್ದಾನೆ. ಹಾಗಿದ್ದರೂ, ನಮ್ಮ ಭೌತಿಕ ಆವಶ್ಯಕತೆಗಳನ್ನು ಹೊಂದಲು ನಮಗೆ ಯೆಹೋವ ದೇವರು ಸಹಾಯಮಾಡಬೇಕೆಂದು ನಾವು ಬಯಸುವುದಾದರೆ, ಬೇರೆ ಯಾವುದೋ ಒಂದು ವಿಷಯವನ್ನು ನಾವು ಮಾಡಬೇಕಾದ ಅಗತ್ಯವಿದೆ ಎಂದು ಯೇಸು ತೋರಿಸಿಕೊಟ್ಟನು. ‘ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು’ ಎಂಬುದಾಗಿ ಯೇಸು ವಾಗ್ದಾನಮಾಡಿದನು. (ಮತ್ತಾಯ 6:33) ‘ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವುದರಲ್ಲಿ ಏನು ಒಳಗೊಂಡಿದೆ?’ ಎಂಬುದಾಗಿ ನೀವು ಚಿಂತಿಸಬಹುದು. ಈ ಪತ್ರಿಕೆಯನ್ನು ವಿತರಿಸಿದ ಯೆಹೋವನ ಸಾಕ್ಷಿಗಳು, ನಿಮ್ಮ ಈ ಪ್ರಶ್ನೆಯನ್ನು ಉತ್ತರಿಸಲು ಸಂತೋಷಿಸುತ್ತಾರೆ.