“ಉಚಿತವಾಗಿ ಹೊಂದಿದ್ದೀರಿ ಉಚಿತವಾಗಿ ಕೊಡಿರಿ”
“ಉಚಿತವಾಗಿ ಹೊಂದಿದ್ದೀರಿ ಉಚಿತವಾಗಿ ಕೊಡಿರಿ”
ನೀವು “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.” (ಮತ್ತಾಯ 10:8) ಯೇಸು ಸುವಾರ್ತೆಯನ್ನು ಸಾರಲಿಕ್ಕಾಗಿ ತನ್ನ ಅಪೊಸ್ತಲರನ್ನು ಕಳುಹಿಸುತ್ತಿದ್ದಾಗ, ಈ ಉಪದೇಶವನ್ನು ಅವರಿಗೆ ನೀಡಿದನು. ಅಪೊಸ್ತಲರು ಈ ನಿರ್ದೇಶನಕ್ಕೆ ವಿಧೇಯರಾದರೋ? ಹೌದು, ಮತ್ತು ಯೇಸು ಭೂಮಿಯನ್ನು ಬಿಟ್ಟುಹೋದ ಬಳಿಕವೂ ಅವರು ಹಾಗೆ ಮಾಡುತ್ತಾ ಮುಂದುವರಿದರು.
ದೃಷ್ಟಾಂತಕ್ಕಾಗಿ, ಈ ಮುಂಚೆ ಮಂತ್ರವಾದಿಯಾಗಿದ್ದ ಸೀಮೋನನು, ಅಪೊಸ್ತಲರಾದ ಪೇತ್ರ ಯೋಹಾನರಿಗಿದ್ದ ಅದ್ಭುತಕರ ಶಕ್ತಿಗಳನ್ನು ನೋಡಿದಾಗ, ಆ ಶಕ್ತಿಯನ್ನು ತನಗೆ ದಯಪಾಲಿಸಿದರೆ ತಾನು ಅವರಿಗೆ ಹಣವನ್ನು ನೀಡುವೆನೆಂದು ಹೇಳಿದನು. ಆದರೆ ಪೇತ್ರನು ಸೀಮೋನನ್ನು ಗದರಿಸುತ್ತಾ ಹೇಳಿದ್ದು: “ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ?”—ಅ. ಕೃತ್ಯಗಳು 8:18-20.
ಅಪೊಸ್ತಲ ಪೌಲನು ಸಹ ಪೇತ್ರನಂಥ ಮನೋಭಾವವನ್ನು ವ್ಯಕ್ತಪಡಿಸಿದನು. ಪೌಲನು ಕೊರಿಂಥದಲ್ಲಿದ್ದ ತನ್ನ ಕ್ರೈಸ್ತ ಸಹೋದರರಿಗೆ ತನ್ನನ್ನು ಒಂದು ಆರ್ಥಿಕ ಹೊರೆಯಾಗಿ ಮಾಡಿಕೊಳ್ಳಸಾಧ್ಯವಿತ್ತು. ಹಾಗಿದ್ದರೂ ಅವನು ತನ್ನನ್ನು ಬೆಂಬಲಿಸಿಕೊಳ್ಳಲಿಕ್ಕಾಗಿ ಸ್ವಂತ ಕೈಗಳಿಂದ ಕೆಲಸಮಾಡಿದನು. (ಅ. ಕೃತ್ಯಗಳು 18:1-3) ಹೀಗೆ, ತಾನು ಕೊರಿಂಥದವರಿಗೆ “ಉಚಿತಾರ್ಥವಾಗಿ” ಸುವಾರ್ತೆಯನ್ನು ಸಾರಿದ್ದೇನೆಂದು ಅವನು ದೃಢನಿಶ್ಚಯದಿಂದ ಹೇಳಸಾಧ್ಯವಿತ್ತು.—1 ಕೊರಿಂಥ 4:12; 9:18.
ದುಃಖಕರವಾಗಿಯೇ, ಕ್ರಿಸ್ತನ ಅನುಯಾಯಿಗಳೆಂದು ಹೇಳಿಕೊಳ್ಳುವಂಥ ಅನೇಕರು, ‘ಉಚಿತವಾಗಿ ಕೊಡಲಿಕ್ಕಾಗಿರುವ’ ಸಿದ್ಧಮನಸ್ಸನ್ನು ತೋರಿಸುತ್ತಿಲ್ಲ. ವಾಸ್ತವದಲ್ಲಿ, ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರಲ್ಲಿ ಅನೇಕರು “ಸಂಬಳಕ್ಕಾಗಿ ಉಪದೇಶಿಸುತ್ತಾರೆ.” (ಮೀಕ 3:11) ತಮ್ಮ ಮಂದೆಗಳಿಂದ ಸಂಗ್ರಹಿಸಲ್ಪಟ್ಟ ಹಣದಿಂದ ಕೆಲವು ಧಾರ್ಮಿಕ ಮುಖಂಡರು ತುಂಬ ಐಶ್ವರ್ಯವಂತರಾಗಿದ್ದಾರೆ. 1989ರಲ್ಲಿ, ಯು.ಎಸ್.ನ ಸೌವಾರ್ತಿಕನೊಬ್ಬನು 45 ವರ್ಷಗಳ ಸೆರೆಮನೆ ಶಿಕ್ಷೆಗೆ ಗುರಿಪಡಿಸಲ್ಪಟ್ಟನು. ಇದಕ್ಕೆ ಕಾರಣವೇನಾಗಿತ್ತು? ಅವನು “ತನ್ನ ಬೆಂಬಲಿಗರಿಂದ ಲಕ್ಷಾಂತರ ಡಾಲರುಗಳಷ್ಟು ಹಣವನ್ನು ಲಪಟಾಯಿಸುತ್ತಿದ್ದನು ಮತ್ತು ಆ ಹಣವನ್ನು ಮನೆಗಳನ್ನು, ಕಾರುಗಳನ್ನು ಖರೀದಿಸಲಿಕ್ಕಾಗಿ, ರಜಾಸಮಯಗಳ ಪ್ರವಾಸೋದ್ಯಮಕ್ಕಾಗಿ ಮತ್ತು ಒಂದು ಹವಾನಿಯಂತ್ರಿತ ನಾಯಿಮನೆಯನ್ನು ಖರೀದಿಸಲಿಕ್ಕಾಗಿ ಉಪಯೋಗಿಸಿದ್ದನು.”—ಪೀಪಲ್ಸ್ ಡೈಲಿ ಗ್ರ್ಯಾಫಿಕ್, ಅಕ್ಟೋಬರ್ 7, 1989.
ಇಸವಿ 1990, ಮಾರ್ಚ್ 31ರ ಘಾನೇಯನ್ ಟೈಮ್ಸ್‌ಗನುಸಾರ, ಘಾನದಲ್ಲಿರುವ ರೋಮನ್ ಕ್ಯಾಥೊಲಿಕ್ ಪಾದ್ರಿಯೊಬ್ಬನು, ಒಂದು ಚರ್ಚ್ ಆರಾಧನೆಯ ಸಮಯದಲ್ಲಿ ಸಂಗ್ರಹಿಸಲ್ಪಟ್ಟಿದ್ದ ಹಣವನ್ನು ತೆಗೆದುಕೊಂಡು, ಪುನಃ ಸಭಿಕರ ಕಡೆಗೆ ಎಸೆದುಬಿಟ್ಟನು. “ಅವನ ಈ ವರ್ತನೆಗೆ ಕಾರಣವೇನೆಂದರೆ, ವಯಸ್ಕರಾಗಿದ್ದ ಸಭಿಕರು ದೊಡ್ಡ ಮೊತ್ತದ ಹಣವನ್ನು ದಾನವಾಗಿ ನೀಡಬೇಕೆಂದು ಅವನು ನಿರೀಕ್ಷಿಸಿದ್ದನು” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ. ಹಣವನ್ನು ಸಂಗ್ರಹಿಸಲಿಕ್ಕಾಗಿ ಜೂಜಾಟದಂಥ ಚಟುವಟಿಕೆಗಳನ್ನು ಹಾಗೂ ಇನ್ನಿತರ ಸ್ಕೀಮ್‌ಗಳನ್ನು ಕ್ರಿಯಾಶೀಲವಾಗಿ ಉತ್ತೇಜಿಸುವ ಮೂಲಕ, ಅನೇಕ ಚರ್ಚುಗಳು ತಮ್ಮ ಸದಸ್ಯರಲ್ಲಿ ಲೋಭವನ್ನು ಉತ್ತೇಜಿಸಲು ಪ್ರಯತ್ನಿಸುವುದರಲ್ಲಿ ಆಶ್ಚರ್ಯವೇನಿಲ್ಲ.
ಇದಕ್ಕೆ ತದ್ವಿರುದ್ಧವಾಗಿ ಯೆಹೋವನ ಸಾಕ್ಷಿಗಳಾದರೋ ಯೇಸುವನ್ನೂ ಅವನ ಆರಂಭದ ಶಿಷ್ಯರನ್ನೂ ಅನುಕರಿಸಲು ಪ್ರಯತ್ನಿಸುತ್ತಾರೆ. ಅವರಲ್ಲಿ ಸಂಬಳವನ್ನು ಪಡೆದುಕೊಳ್ಳುವ ಪಾದ್ರಿಗಳಿಲ್ಲ. ಪ್ರತಿಯೊಬ್ಬ ಸಾಕ್ಷಿಯೂ ಒಬ್ಬ ಶುಶ್ರೂಷಕನಾಗಿದ್ದು, ಇತರರಿಗೆ ‘ಪರಲೋಕ ರಾಜ್ಯದ ಸುವಾರ್ತೆಯನ್ನು’ ಸಾರುವ ಜವಾಬ್ದಾರಿಯುಳ್ಳವನಾಗಿದ್ದಾನೆ. (ಮತ್ತಾಯ 24:14) ಆದುದರಿಂದ, ಲೋಕವ್ಯಾಪಕವಾಗಿ ಅವರಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚು ಮಂದಿ, ಉಚಿತವಾಗಿ “ಜೀವಜಲವನ್ನು” ಜನರ ಬಳಿಗೆ ಕೊಂಡೊಯ್ಯುವ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ. (ಪ್ರಕಟನೆ 22:17) ಈ ರೀತಿಯಲ್ಲಿ, ‘ಹಣವಿಲ್ಲದವರು ಸಹ’ ಬೈಬಲ್ ಸಂದೇಶದಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. (ಯೆಶಾಯ 55:1) ಅವರ ಲೋಕವ್ಯಾಪಕ ಕೆಲಸಕ್ಕೆ ಸ್ವಯಂಪ್ರೇರಿತ ದಾನಗಳಿಂದ ಧನಸಹಾಯ ದೊರಕುತ್ತದಾದರೂ, ಅವರೆಂದೂ ಹಣವನ್ನು ಕೇಳಿಪಡೆಯುವುದಿಲ್ಲ. ದೇವರ ನಿಜ ಶುಶ್ರೂಷಕರೋಪಾದಿ ಅವರು ‘ದೇವರ ವಾಕ್ಯವನ್ನು ಕಲಬೆರಿಕೆಮಾಡುವವರಲ್ಲ,’ ಬದಲಾಗಿ “ನಿಷ್ಕಪಟಿಗಳಾಗಿ ದೇವರಿಂದ ಉಪದೇಶಹೊಂದಿದವರಿಗೆ ತಕ್ಕ ಹಾಗೆ” ಮಾತಾಡುತ್ತಾರೆ.—2 ಕೊರಿಂಥ 2:17.
ಹಾಗಾದರೆ ಯೆಹೋವನ ಸಾಕ್ಷಿಗಳು ತಮ್ಮ ಖರ್ಚುವೆಚ್ಚಗಳನ್ನು ತಾವೇ ನಿಭಾಯಿಸಿಕೊಂಡು, ಇತರರಿಗೆ ಸಹಾಯಮಾಡಲು ಏಕೆ ಸಿದ್ಧರಾಗಿದ್ದಾರೆ? ಹೀಗೆ ಮಾಡುವಂತೆ ಅವರನ್ನು ಯಾವುದು ಪ್ರಚೋದಿಸುತ್ತದೆ? ಅವರು ತಮ್ಮ ಪ್ರಯತ್ನಗಳಿಗೆ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಸಂಪೂರ್ಣ ರೀತಿಯಲ್ಲಿ ಉಚಿತವಾಗಿ ಕೊಡುತ್ತಾರೆ ಎಂಬುದು ಇದರ ಅರ್ಥವಾಗಿದೆಯೋ?
ಸೈತಾನನ ಸವಾಲಿಗೆ ಒಂದು ಉತ್ತರ
ಇಂದು ಸತ್ಯ ಕ್ರೈಸ್ತರು ಮುಖ್ಯವಾಗಿ ತಮ್ಮನ್ನು ಐಶ್ವರ್ಯವಂತರನ್ನಾಗಿ ಮಾಡಿಕೊಳ್ಳಲಿಕ್ಕಾಗಿ ಅಲ್ಲ, ಬದಲಾಗಿ ಯೆಹೋವನನ್ನು ಸಂತೋಷಪಡಿಸುವ ಬಯಕೆಯಿಂದ ಪ್ರಚೋದಿತರಾಗಿದ್ದಾರೆ. ಈ ಮೂಲಕ ಅವರು ಶತಮಾನಗಳ ಹಿಂದೆ ಪಿಶಾಚನಾದ ಸೈತಾನನಿಂದ ಎಬ್ಬಿಸಲ್ಪಟ್ಟ ಒಂದು ಸವಾಲಿಗೆ ಉತ್ತರವನ್ನು ಒದಗಿಸಲು ಶಕ್ತರಾಗಿದ್ದಾರೆ. ಯೋಬನೆಂಬ ಹೆಸರಿನ ನೀತಿವಂತನ ಕುರಿತು ಸೈತಾನನು ಈ ಪ್ರಶ್ನೆಯನ್ನು ಉಪಯೋಗಿಸಿ ಯೆಹೋವನಿಗೆ ಸವಾಲೊಡ್ಡಿದನು: “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” ಯೋಬನ ಸುತ್ತಮುತ್ತಲೂ ದೇವರು ಬೇಲಿಯನ್ನು ಹಾಕಿದ್ದರಿಂದಲೇ ಅವನು ಆತನಲ್ಲಿ ಭಯಭಕ್ತಿಯನ್ನಿಟ್ಟಿದ್ದಾನೆಂದು ಸೈತಾನನು ಆರೋಪಿಸಿದನು. ಯೋಬನ ಭೌತಿಕ ಸೊತ್ತುಗಳನ್ನೆಲ್ಲಾ ಅಳಿಸಿಬಿಡುವಲ್ಲಿ, ಅವನು ದೇವರ ಎದುರಿನಲ್ಲೇ ಆತನನ್ನು ದೂಷಿಸುವನು ಎಂದು ಸೈತಾನನು ವಾಗ್ವಾದಿಸಿದನು!—ಯೋಬ 1:7-11.
ಈ ಸವಾಲಿಗೆ ಉತ್ತರ ನೀಡಲಿಕ್ಕಾಗಿ, ಸೈತಾನನು ಯೋಬನನ್ನು ಪರೀಕ್ಷೆಗೆ ಒಳಪಡಿಸುವಂತೆ ದೇವರು ಅನುಮತಿಸುತ್ತಾ ಹೇಳಿದ್ದು: “ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ.” (ಯೋಬ 1:12) ಇದರ ಪರಿಣಾಮವೇನು? ಸೈತಾನನು ಸುಳ್ಳುಗಾರನು ಎಂಬುದನ್ನು ಯೋಬನು ರುಜುಪಡಿಸಿದನು. ಯಾವ ಕೇಡುಗಳು ಯೋಬನ ಮೇಲೆ ಬರಮಾಡಲ್ಪಟ್ಟರೂ, ಅವನು ಮಾತ್ರ ನಿಷ್ಠನಾಗಿಯೇ ಉಳಿದನು. “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು” ಎಂದು ಅವನು ಹೇಳಿದನು.—ಯೋಬ 27:5, 6.
ಇಂದಿನ ಸತ್ಯ ಆರಾಧಕರು ಸಹ ಯೋಬನಂತಹದ್ದೇ ಮನೋಭಾವವನ್ನು ತೋರಿಸುತ್ತಾರೆ. ದೇವರ ಕಡೆಗಿನ ಅವರ ಸೇವೆಯು ಭೌತಿಕ ಹಿತಾಸಕ್ತಿಗಳಿಂದ ಪ್ರಚೋದಿತವಾಗಿಲ್ಲ.
ಉಚಿತವಾಗಿ ಕೊಡಲ್ಪಟ್ಟಿರುವ ದೇವರ ಕೃಪಾವರ
ಸತ್ಯ ಕ್ರೈಸ್ತರು ‘ಉಚಿತವಾಗಿ ಕೊಡಲು’ ಮನಃಪೂರ್ವಕವಾಗಿ ಸಿದ್ಧರಿರುವುದಕ್ಕೆ ಇನ್ನೊಂದು ಕಾರಣವು, ಸ್ವತಃ ಅವರೇ ದೇವರಿಂದ ‘ಉಚಿತವಾಗಿ ಪಡೆದುಕೊಂಡಿದ್ದಾರೆ.’ ನಮ್ಮ ಮೂಲಪಿತನಾದ ಆದಾಮನ ಪಾಪದ ಕಾರಣದಿಂದ ಮಾನವಕುಲವು ಪಾಪ ಮತ್ತು ಮರಣದ ದಾಸತ್ವಕ್ಕೆ ಒಳಗಾಗಿದೆ. (ರೋಮಾಪುರ 5:12) ಆದರೆ, ಯೆಹೋವನು ಪ್ರೀತಿಯಿಂದ ತನ್ನ ಪುತ್ರನು ಯಜ್ಞಾರ್ಪಿತ ಮರಣವನ್ನು ಹೊಂದುವಂತೆ ಏರ್ಪಾಡನ್ನು ಮಾಡಿದನು. ಇದು ಖಂಡಿತವಾಗಿಯೂ ದೇವರಿಗೆ ತುಂಬ ನಷ್ಟವನ್ನು ಉಂಟುಮಾಡಿತು. ಇದಲ್ಲದೆ, ಮಾನವಕುಲವು ಇದಕ್ಕೆ ಅರ್ಹತೆಯನ್ನು ಪಡೆದಿರಲಿಲ್ಲ ಎಂಬುದಂತೂ ನಿಶ್ಚಯ. ಇದು ದೇವರಿಂದ ಕೊಡಲ್ಪಟ್ಟ ಉಚಿತಾರ್ಥ ವರವಾಗಿದೆ.—ರೋಮಾಪುರ 4:4; 5:8; 6:23.
ರೋಮಾಪುರ 3:23, 24ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಹೇಳಿದ್ದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು.” ತದ್ರೀತಿಯಲ್ಲಿ, ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯಿರುವವರು, ‘ಉಚಿತಾರ್ಥ ವರವನ್ನು’ ಪಡೆದುಕೊಂಡವರಾಗಿದ್ದಾರೆ. ಮತ್ತು ಈ ವರದಲ್ಲಿ, ಯೆಹೋವನ ಸ್ನೇಹಿತರೋಪಾದಿ ನೀತಿವಂತರೆಂದು ನಿರ್ಣಯಿಸಲ್ಪಡುವ ಸುಯೋಗವೂ ಒಳಗೂಡಿದೆ.—ಯಾಕೋಬ 2:23; ಪ್ರಕಟನೆ 7:14.
ಕ್ರಿಸ್ತನ ವಿಮೋಚನಾ ಯಜ್ಞವು, ಎಲ್ಲಾ ಕ್ರೈಸ್ತರು ದೇವರ ಶುಶ್ರೂಷಕರೋಪಾದಿ ಸೇವೆಮಾಡುವುದನ್ನು ಸಾಧ್ಯಗೊಳಿಸುತ್ತದೆ. ಅಪೊಸ್ತಲ ಪೌಲನು ಬರೆದುದು: “ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಉಚಿತಾರ್ಥವಾಗಿ ಅನುಗ್ರಹಿಸಿದ ಕೆಲಸವನ್ನನುಸರಿಸಿ ನಾನು ಈ [ಪವಿತ್ರ ರಹಸ್ಯದ] ಸುವಾರ್ತೆಗೆ ಸೇವಕನಾದೆನು.” (ಎಫೆಸ 3:4-7) ದೇವರ ನಿಜ ಶುಶ್ರೂಷಕರು ಅರ್ಹತೆಯನ್ನು ಪಡೆದಿದ್ದಿರದ ಅಥವಾ ಸಂಪಾದಿಸಲು ಅಸಮರ್ಥರಾಗಿದ್ದಂಥ ಒಂದು ಒದಗಿಸುವಿಕೆಯ ಮೂಲಕ, ಈ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋಗಲು ಕರೆಕೊಡಲ್ಪಟ್ಟವರಾಗಿದ್ದದರಿಂದ, ಈ ಒದಗಿಸುವಿಕೆಯ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಭೌತಿಕವಾಗಿ ಸಂಬಳವನ್ನು ನಿರೀಕ್ಷಿಸಸಾಧ್ಯವಿರಲಿಲ್ಲ.
ನಿತ್ಯ ಜೀವ—ಒಂದು ಸ್ವಾರ್ಥಪರ ಆಕರ್ಷಣೆಯೋ?
ಹಾಗಾದರೆ, ಕ್ರೈಸ್ತರು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆಯೇ ತನ್ನ ಸೇವೆಮಾಡಬೇಕೆಂದು ದೇವರು ಬಯಸುತ್ತಾನೆಂದು ಇದು ಅರ್ಥೈಸುತ್ತದೋ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳಿಗೆ ಹೇಳಿದ್ದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಅಥವಾ ಯೆಹೋವನು ಅನ್ಯಾಯಗಾರನೂ ಅಲ್ಲ. (ಧರ್ಮೋಪದೇಶಕಾಂಡ 32:4) ಅದಕ್ಕೆ ಬದಲಾಗಿ, ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.” (ಇಬ್ರಿಯ 11:6) ಆದರೆ ಪರದೈಸಿನಲ್ಲಿ ನಿತ್ಯ ಜೀವದ ವಾಗ್ದಾನವು ಒಂದು ಸ್ವಾರ್ಥಪರ ಆಕರ್ಷಣೆಯಾಗಿಲ್ಲವೋ?—ಲೂಕ 23:43.
ಖಂಡಿತವಾಗಿಯೂ ಇಲ್ಲ. ಒಂದು ಕಾರಣವೇನೆಂದರೆ, ಭೂಪರದೈಸಿನಲ್ಲಿ ಸದಾಕಾಲ ಜೀವಿಸುವ ಬಯಕೆಯು ಸ್ವತಃ ದೇವರಿಂದಲೇ ಉಂಟುಮಾಡಲ್ಪಟ್ಟಿತು. ಪ್ರಥಮ ಮಾನವ ದಂಪತಿಗೆ ಈ ಪ್ರತೀಕ್ಷೆಯನ್ನು ಸಾದರಪಡಿಸಿದವನು ಆತನೇ ಆಗಿದ್ದನು. (ಆದಿಕಾಂಡ 1:28; 2:15-17) ಆದರೆ ಆದಾಮಹವ್ವರು ತಮ್ಮ ಸಂತತಿಯವರಿಗೆ ಈ ಪ್ರತೀಕ್ಷೆಯನ್ನು ನಷ್ಟಪಡಿಸಿದಾಗ, ಆತನು ಇದರ ಪುನಸ್ಸ್ಥಾಪನೆಯನ್ನು ಸಹ ಸಾಧ್ಯಗೊಳಿಸಿದನು. ದೇವರು ತನ್ನ ವಾಕ್ಯದಲ್ಲಿ ಹೀಗೆ ವಾಗ್ದಾನಿಸಿದ್ದಾನೆ: ‘[ಈ] ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವುದು.’ (ರೋಮಾಪುರ 8:21) ಆದುದರಿಂದಲೇ, ಪುರಾತನಕಾಲದ ಮೋಶೆಯಂತೆಯೇ ಇಂದು ಕ್ರೈಸ್ತರು ‘ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿರುವುದು’ ಸಂಪೂರ್ಣವಾಗಿ ಯೋಗ್ಯವಾದದ್ದಾಗಿದೆ. (ಇಬ್ರಿಯ 11:26) ದೇವರು ಈ ಪ್ರತಿಫಲವನ್ನು ಲಂಚವಾಗಿ ನೀಡುವುದಿಲ್ಲ. ತನ್ನ ಸೇವೆಮಾಡುವವರಿಗೆ ಆತನು ಇದನ್ನು ನಿಜವಾದ ಪ್ರೀತಿಯಿಂದ ನೀಡುತ್ತಾನೆ. (2 ಥೆಸಲೊನೀಕ 2:16, 17) ಇದಕ್ಕೆ ಪ್ರತಿಯಾಗಿ, ‘ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಆತನನ್ನು ಪ್ರೀತಿಸುತ್ತೇವೆ.’—1 ಯೋಹಾನ 4:19.
ಯೋಗ್ಯವಾದ ಹೇತುವಿನಿಂದ ದೇವರ ಸೇವೆಮಾಡುವುದು
ಆದರೂ, ಕ್ರೈಸ್ತರು ಇಂದು ದೇವರ ಸೇವೆಮಾಡುವುದರ ಹಿಂದಿರುವ ತಮ್ಮ ಸ್ವಂತ ಹೇತುಗಳನ್ನು ಯಾವಾಗಲೂ ಪರೀಕ್ಷಿಸಿಕೊಳ್ಳುತ್ತಿರಬೇಕು. ಯೋಹಾನ 6:10-13ರಲ್ಲಿ, ಐದು ಸಾವಿರಕ್ಕಿಂತಲೂ ಹೆಚ್ಚು ಮಂದಿಯಿಂದ ಕೂಡಿದ್ದ ಒಂದು ಗುಂಪಿಗೆ ಯೇಸು ಅದ್ಭುತಕರ ರೀತಿಯಲ್ಲಿ ಆಹಾರವನ್ನು ಒದಗಿಸಿದ್ದರ ಕುರಿತು ಓದುತ್ತೇವೆ. ಇದರ ಪರಿಣಾಮವಾಗಿ, ಕೆಲವರು ಕೇವಲ ಸ್ವಾರ್ಥಪರ ಕಾರಣಗಳಿಗಾಗಿ ಯೇಸುವನ್ನು ಹಿಂಬಾಲಿಸತೊಡಗಿದರು. ಯೇಸು ಅವರಿಗೆ ಹೇಳಿದ್ದು: “ನೀವು ನನ್ನನ್ನು ಹುಡುಕುವದು . . . ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ.” (ಯೋಹಾನ 6:26) ಅದೇ ರೀತಿಯಲ್ಲಿ, ದಶಕಗಳ ಬಳಿಕ ಕೆಲವು ಸಮರ್ಪಿತ ಕ್ರೈಸ್ತರು ದೇವರಿಗೆ ಸೇವೆಯನ್ನು ಸಲ್ಲಿಸಿದರು, ಆದರೆ “ಒಳ್ಳೇ ಹೇತುವಿನಿಂದಲ್ಲ.” (ಫಿಲಿಪ್ಪಿ 1:17, NW) ‘ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳನ್ನು ಸಮ್ಮತಿಸದೆ ಹೋದಂಥ’ ಕೆಲವರು, ಕ್ರೈಸ್ತರೊಂದಿಗಿನ ತಮ್ಮ ಸಹವಾಸದಿಂದ ವೈಯಕ್ತಿಕ ಲಾಭವನ್ನು ಮಾಡಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಲೂ ಪ್ರಯತ್ನಿಸಿದರು.—1 ತಿಮೊಥೆಯ 6:3-5.
ಇಂದು, ಪರದೈಸಿನಲ್ಲಿ ಸದಾಕಾಲ ಜೀವಿಸಲು ಬಯಸುವ ಕಾರಣದಿಂದ ಮಾತ್ರ ದೇವರ ಸೇವೆಯನ್ನು ಮಾಡುವಂಥ ಒಬ್ಬ ಕ್ರೈಸ್ತನು ಸಹ ಸ್ವಾರ್ಥಪರ ಹೇತುವಿನಿಂದ ಸೇವೆಮಾಡುತ್ತಿರಸಾಧ್ಯವಿದೆ. ಕಟ್ಟಕಡೆಗೆ ಇದರ ಪರಿಣಾಮವು ಆತ್ಮಿಕ ಪತನವೇ ಆಗಿರಬಲ್ಲದು. ಏಕೆಂದರೆ ಅಂಥ ವ್ಯಕ್ತಿಗೆ ಸೈತಾನನ ವಿಷಯಗಳ ವ್ಯವಸ್ಥೆಯು ನಿರೀಕ್ಷಿತ ಸಮಯಕ್ಕಿಂತಲೂ ಹೆಚ್ಚು ದೀರ್ಘವಾಗಿ ಉಳಿದಿರುವಂತೆ ತೋರಬಹುದು, ಮತ್ತು ಅಂತ್ಯವು ತಡವಾಗುತ್ತಾ ಇದೆ ಎಂದು ನೆನಸುತ್ತಾ ಅವನು ‘ಮನಗುಂದಬಹುದು.’ (ಗಲಾತ್ಯ 6:9) ತಾನು ಮಾಡಿರುವಂಥ ಭೌತಿಕ ತ್ಯಾಗಗಳ ಬಗ್ಗೆಯೂ ಅವನು ಕಹಿಮನೋಭಾವವನ್ನು ತಾಳಬಹುದು. ಯೇಸು ನಮಗೆ ಹೀಗೆ ನೆನಪು ಹುಟ್ಟಿಸುತ್ತಾನೆ: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ಹೌದು, ಯಾವ ವ್ಯಕ್ತಿಗೆ ದೇವರ ಸೇವೆಮಾಡುವುದರ ಪ್ರಮುಖ ಕಾರಣವು ಪ್ರೀತಿಯಾಗಿರುತ್ತದೋ ಅವನು ನಿರ್ದಿಷ್ಟ ಕಾಲಾವಧಿಯ ವರೆಗೆ ಮಾತ್ರ ಆ ಸೇವೆಯನ್ನು ಮುಂದುವರಿಸಬೇಕು ಎಂದು ನೆನಸುವುದಿಲ್ಲ. ಅವನು ಸದಾಕಾಲಕ್ಕೂ ಯೆಹೋವನ ಸೇವೆಮಾಡುವ ದೃಢನಿರ್ಧಾರವನ್ನು ಮಾಡಿರುತ್ತಾನೆ! (ಮೀಕ 4:5) ದೇವರಿಗೆ ಸಲ್ಲಿಸುವ ಸೇವೆಯ ಸಂಬಂಧದಲ್ಲಿ ತಾನು ಮಾಡಿರುವಂಥ ಯಾವುದೇ ತ್ಯಾಗಗಳ ಕುರಿತು ಅವನು ಎಂದಿಗೂ ವಿಷಾದಪಡುವುದಿಲ್ಲ. (ಇಬ್ರಿಯ 13:15, 16) ದೇವರಿಗಾಗಿರುವ ಪ್ರೀತಿಯು, ಆತನ ಅಭಿರುಚಿಗಳನ್ನು ತನ್ನ ಜೀವಿತದಲ್ಲಿ ಪ್ರಥಮವಾಗಿಡುವಂತೆ ಅವನನ್ನು ಪ್ರಚೋದಿಸುತ್ತದೆ.—ಮತ್ತಾಯ 6:33.
ಇಂದು 60 ಲಕ್ಷಕ್ಕಿಂತಲೂ ಹೆಚ್ಚಿನ ಸತ್ಯ ಆರಾಧಕರು, ಯೆಹೋವನ ಸೇವೆಯಲ್ಲಿ “ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳು”ತ್ತಾರೆ. (ಕೀರ್ತನೆ 110:3) ನೀವೂ ಅವರಲ್ಲಿ ಒಬ್ಬರಾಗಿದ್ದೀರೋ? ಇಲ್ಲದಿರುವಲ್ಲಿ, ದೇವರು ನೀಡುವಂಥ ವಿಷಯಗಳ ಕುರಿತು ಮನನಮಾಡಿರಿ: ಸತ್ಯದ ಶುದ್ಧವಾದ ಜ್ಞಾನ; (ಯೋಹಾನ 17:3) ಸುಳ್ಳು ಧಾರ್ಮಿಕ ಬೋಧನೆಗಳ ದಾಸತ್ವದಿಂದ ಬಿಡುಗಡೆ; (ಯೋಹಾನ 8:32) ಸದಾಕಾಲ ಜೀವಿಸುವ ನಿರೀಕ್ಷೆ. (ಪ್ರಕಟನೆ 21:3, 4) ಇದೆಲ್ಲವನ್ನೂ ನೀವು ದೇವರಿಂದ ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಉಚಿತವಾಗಿ ಸಹಾಯಮಾಡಬಲ್ಲರು.
[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಂದು ಸತ್ಯ ಕ್ರೈಸ್ತರು ಮುಖ್ಯವಾಗಿ ತಮ್ಮನ್ನು ಐಶ್ವರ್ಯವಂತರನ್ನಾಗಿ ಮಾಡಿಕೊಳ್ಳಲಿಕ್ಕಾಗಿ ಅಲ್ಲ, ಬದಲಾಗಿ ಯೆಹೋವನನ್ನು ಸಂತೋಷಪಡಿಸುವ ಬಯಕೆಯಿಂದ ಪ್ರಚೋದಿತರಾಗಿದ್ದಾರೆ
[ಪುಟ 21ರಲ್ಲಿರುವ ಚಿತ್ರ]
ದೇವರ ಉಚಿತಾರ್ಥ ವರವಾದ ವಿಮೋಚನೆಯು, ಸುವಾರ್ತೆಯನ್ನು ಉಚಿತವಾಗಿ ಹಂಚಿಕೊಳ್ಳುವಂತೆ ಕ್ರೈಸ್ತರನ್ನು ಪ್ರಚೋದಿಸುತ್ತದೆ