ಅವರು ದಯೆಯನ್ನು ಪ್ರೀತಿಸಿದರು
ಅವರು ದಯೆಯನ್ನು ಪ್ರೀತಿಸಿದರು
ಬಹಳ ಸಮಯದಿಂದ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಮಿಲ್ಟನ್ ಜಿ. ಹೆನ್ಶೆಲ್‌ರವರು, 2003, ಮಾರ್ಚ್ 22ರ ಶನಿವಾರದಂದು ತಮ್ಮ ಭೂಜೀವಿತವನ್ನು ಮುಗಿಸಿದರು. ಅವರು 82 ವರುಷ ಪ್ರಾಯದವರಾಗಿದ್ದರು.
ಯೌವನಸ್ಥರಾಗಿದ್ದಾಗ ಮಿಲ್ಟನ್ ಹೆನ್ಶೆಲ್‌ರವರು ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ಸದಸ್ಯರಾಗಿ ಸೇರಿದರು ಮತ್ತು 60 ವರುಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ ನಂಬಿಗಸ್ತರಾಗಿ ಸೇವೆಸಲ್ಲಿಸಿದರು. ಅವರು ತಮ್ಮ ಒಳ್ಳೆಯ ವಿವೇಚನಾಶಕ್ತಿ ಮತ್ತು ರಾಜ್ಯದ ಸಾರುವಿಕೆಯ ಕೆಲಸದಲ್ಲಿನ ಯಥಾರ್ಥ ಆಸಕ್ತಿಗಾಗಿ ಬಹು ಬೇಗನೆ ಪ್ರಖ್ಯಾತರಾದರು. 1939ರಲ್ಲಿ, ಆಗ ಯೆಹೋವನ ಸಾಕ್ಷಿಗಳ ಬ್ರೂಕ್ಲಿನ್ ಮುದ್ರಣಾಲಯದ ಮೇಲ್ವಿಚಾರಕರಾಗಿದ್ದ ಎನ್. ಏಚ್. ನಾರ್‌ರವರ ಸೆಕ್ರಿಟರಿಯಾದರು. 1942ರಲ್ಲಿ ಸಹೋದರ ನಾರ್‌ರವರು ಲೋಕವ್ಯಾಪಕ ಸಾಕ್ಷಿಗಳ ಮುಂದಾಳತ್ವವನ್ನು ವಹಿಸತೊಡಗಿದಾಗ, ಅವರು ಸಹೋದರ ಹೆನ್ಶೆಲ್‌ರವರನ್ನು ತಮ್ಮ ಸಹಾಯಕರನ್ನಾಗಿ ಉಪಯೋಗಿಸಿದರು. 1956ರಲ್ಲಿ ಸಹೋದರ ಹೆನ್ಶೆಲ್‌ರವರು ಲುಸೀಲ್ ಬೆನೆಟ್‌ರನ್ನು ವಿವಾಹವಾದರು. ಅಂದಿನಿಂದ ಅವರಿಬ್ಬರೂ ತಮ್ಮ ಜೀವಿತದ ಆನಂದ ಮತ್ತು ಪಂಥಾಹ್ವಾನಗಳನ್ನು ಜೊತೆಯಾಗಿ ಹಂಚಿಕೊಂಡರು.
ಸಹೋದರ ಹೆನ್ಶೆಲ್‌ರವರು, 1977ರಲ್ಲಿ ಸಹೋದರ ನಾರ್‌ರವರು ಮರಣಹೊಂದುವ ಸಮಯದ ವರೆಗೂ ಅವರೊಂದಿಗೆ ಆಪ್ತತೆಯಲ್ಲಿ ಕೆಲಸಮಾಡಿದರು. ಸಹೋದರ ಹೆನ್ಶೆಲ್‌ರವರು, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳನ್ನು, ಅದರಲ್ಲಿಯೂ ಮುಖ್ಯವಾಗಿ ಮಿಷನೆರಿಗಳು ಮತ್ತು ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡುವವರನ್ನು ಭೇಟಿಮಾಡಿ, ಅವರನ್ನು ಉತ್ತೇಜಿಸುತ್ತಾ ಸುಮಾರು 150 ದೇಶಗಳನ್ನು—ಅನೇಕಬಾರಿ ಸಹೋದರ ನಾರ್‌ರೊಂದಿಗೆ—ಸಂಚರಿಸಿದರು. ಕೆಲವೊಮ್ಮೆ ಅಂಥ ಪ್ರಯಾಣಗಳು ಶ್ರಮದಾಯಕವಾಗಿದ್ದವು, ಮಾತ್ರವಲ್ಲದೆ ಅಪಾಯಕಾರಿಯೂ ಆಗಿದ್ದವು. 1963ರಲ್ಲಿ ಸಹೋದರ ಹೆನ್ಶೆಲ್‌ರವರು ಲೈಬೀರಿಯದ ಅಧಿವೇಶನಕ್ಕೆ ಹೋದಾಗ, ದೇಶಭಕ್ತಿಯ ಒಂದು ಆಚರಣೆಯಲ್ಲಿ ಭಾಗವಹಿಸಲು ನಿರಾಕರಿಸಿದ ಕಾರಣ ತೀವ್ರವಾದ ಹಿಂಸೆಗೆ ಬಲಿಯಾದರು. * ಒಂದಿಷ್ಟೂ ಹೆದರದೆ ಧೈರ್ಯದಿಂದ ಸಹೋದರ ಹೆನ್ಶೆಲ್‌ರವರು, ಕೆಲವು ತಿಂಗಳುಗಳ ನಂತರ ಲೈಬೀರಿಯಕ್ಕೆ ಹಿಂದಿರುಗಿ ಆ ದೇಶದ ಪ್ರಧಾನಿಯವರನ್ನು ಭೇಟಿಯಾಗಿ, ಅಲ್ಲಿರುವ ಯೆಹೋವನ ಸಾಕ್ಷಿಗಳಿಗಾಗಿ ಆರಾಧನಾ ಸ್ವಾತಂತ್ರ್ಯವನ್ನು ವಿನಂತಿಸಿದರು.
ಕಠಿನ ಸಮಸ್ಯೆಗಳನ್ನು ಮತ್ತು ಪಂಥಾಹ್ವಾನಗಳನ್ನು ನಿಭಾಯಿಸುವುದರಲ್ಲಿ, ಪ್ರಾಯೋಗಿಕ ಮನಸ್ಸಿನವರು, ಮಣಿಯುವವರು, ಮತ್ತು ಸಮಂಜಸ ಮನೋಭಾವದವರು ಎಂಬ ಸತ್ಕೀರ್ತಿಯನ್ನು ಸಹೋದರ ಹೆನ್ಶೆಲ್‌ರವರು ಹೊಂದಿದ್ದರು. ಅವರ ಜೊತೆ ಕೆಲಸಗಾರರು, ಅವರ ಕ್ರಮಬದ್ಧತೆ, ನಮ್ರತೆ, ಮತ್ತು ಹಾಸ್ಯ ಪ್ರಜ್ಞೆಯನ್ನು ಬಹಳ ಗಣ್ಯಮಾಡಿದರು. ಗಮನಾರ್ಹವಾದ ಜ್ಞಾಪಕ ಶಕ್ತಿಯಿಂದ ಆಶೀರ್ವದಿಸಲ್ಪಟ್ಟವರಾದ ಕಾರಣ ಅವರು ಅನೇಕ ಮಿಷನೆರಿಗಳನ್ನು ಅವರ ಹೆಸರನ್ನು ಕೂಡಲೆ ಹೇಳುವ ಮೂಲಕ, ಸ್ಥಳಿಕ ಭಾಷೆಯಲ್ಲಿ ಒಂದೆರಡು ಮಾತುಗಳನ್ನು ಹೇಳುವ ಮೂಲಕ, ಮತ್ತು ಚಾತುರ್ಯದ ಹಾಸ್ಯಪ್ರಯೋಗಗಳಿಂದ—ಇದನ್ನು ಕಣ್ಣು ಮಿಟುಕಿಸುತ್ತಾ ಹೇಳಿ—ಸಂತೋಷಗೊಳಿಸುತ್ತಿದ್ದರು.
ನಾವೆಲ್ಲರೂ “ದಯೆಯನ್ನು ಪ್ರೀತಿಸಬೇಕು” ಎಂದು ಯೆಹೋವ ದೇವರು ಬಯಸುತ್ತಾನೆ ಎಂಬುದಾಗಿ ಮೀಕ 6:8 (NW) ನಮಗೆ ಜ್ಞಾಪಿಸುತ್ತದೆ. ಈ ವಿಷಯದಲ್ಲಿ ಮಾದರಿಯನ್ನಿಟ್ಟದ್ದಕ್ಕಾಗಿ ಮಿಲ್ಟನ್ ಹೆನ್ಶೆಲ್‌ರವರು ಜ್ಞಾಪಿಸಿಕೊಳ್ಳಲ್ಪಡುವರು. ಜವಾಬ್ದಾರಿಯ ಹೆಚ್ಚಿನ ಹೊರೆಯು ಅವರ ಮೇಲೆ ಇದ್ದ ಹೊರತಾಗಿಯೂ ಅವರು ಸ್ನೇಹಪರರೂ ಮೃದುಸ್ವಭಾವದವರೂ ದಯಾಪರರೂ ಆಗಿದ್ದರು. “ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದೆಂಬುದು ತಿಳಿಯದಿರುವ ಸಮಯದಲ್ಲಿ, ನೆನಪಿನಲ್ಲಿಡಿರಿ, ದಯೆಯ ವಿಷಯವೇ ಸರಿಯಾದ ವಿಷಯ,” ಎಂಬ ಈ ಮಾತು ಅವರಿಗೆ ಬಹಳ ಪ್ರಿಯವಾದ ಮಾತು. ಈ ಪ್ರಿಯ ಸಹೋದರರ ಮರಣಕ್ಕಾಗಿ ನಾವು ದುಃಖಿಸುವುದಾದರೂ, ಅವರು ಕೊನೆಯ ವರೆಗೂ ನಂಬಿಗಸ್ತರಾಗಿ ತಾಳಿಕೊಂಡು, “ಜೀವವೆಂಬ ಜಯಮಾಲೆಯನ್ನು” ಪ್ರತಿಫಲವಾಗಿ ಹೊಂದಿದ್ದಕ್ಕಾಗಿ ನಾವು ಹರ್ಷಿಸುತ್ತೇವೆ.—ಪ್ರಕಟನೆ 2:10.
[ಪಾದಟಿಪ್ಪಣಿ]
^ ಪ್ಯಾರ. 4 ಇಸವಿ 1977ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್) ಪುಟ 171-7ನ್ನು ನೋಡಿರಿ.
[ಪುಟ 31ರಲ್ಲಿರುವ ಚಿತ್ರ]
ಎನ್. ಏಚ್. ನಾರ್‌ರೊಂದಿಗೆ ಎಮ್. ಜಿ. ಹೆನ್ಶೆಲ್
[ಪುಟ 31ರಲ್ಲಿರುವ ಚಿತ್ರ]
ಅವರ ಹೆಂಡತಿಯಾದ ಲುಸೀಲ್‌ರೊಂದಿಗೆ