ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:
• ಯಾವ ಕೆಲವು ವಿಧಗಳಲ್ಲಿ ರೂತಳು ಉತ್ತಮ ಮಾದರಿಯಾಗಿ ಸೇವೆಸಲ್ಲಿಸಿದಳು?
ರೂತಳು, ಯೆಹೋವನಿಗಾಗಿದ್ದ ಅವಳ ಪ್ರೀತಿ, ನೊವೊಮಿಯ ಕಡೆಗಿನ ಅವಳ ನಿಷ್ಠಾವಂತ ಪ್ರೀತಿ, ಮತ್ತು ಉದ್ಯೋಗಶೀಲತೆ ಹಾಗೂ ದೀನತೆಗಾಗಿ ಮಾದರಿಯಾಗಿದ್ದಳು. ಜನರು ಅವಳನ್ನು “ಗುಣವಂತೆ” ಎಂದು ಅಭಿಪ್ರಾಯಪಟ್ಟದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. (ರೂತಳು 3:11)—4/15, ಪುಟಗಳು 23-6.
• ಸಾಮಾನ್ಯ ಜನರ ಬಗ್ಗೆ ಯೆಹೋವನು ಚಿಂತಿಸುತ್ತಾನೆಂದು ನಮಗೆ ಹೇಗೆ ತಿಳಿದಿದೆ?
ಸಾಮಾನ್ಯ ಜನರಿಗೆ ಅನ್ಯಾಯಮಾಡಬಾರದೆಂದು, ಐಗುಪ್ತದಲ್ಲಿ ಕ್ರೂರವಾಗಿ ಉಪಚರಿಸಲ್ಪಟ್ಟ ಇಸ್ರಾಯೇಲ್ಯರಿಗೆ ಆತನು ಹೇಳಿದನು. (ವಿಮೋಚನಕಾಂಡ 22:21-24) ತನ್ನ ತಂದೆಯನ್ನು ಅನುಕರಿಸಿದ ಯೇಸು, ಸಾಮಾನ್ಯ ಜನರಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿದನು ಮತ್ತು “ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು” ವರ್ಣಿಸಲಾದ ಜನರನ್ನು ಅಪೊಸ್ತಲರಾಗಿ ಆರಿಸಿಕೊಂಡನು. (ಅ. ಕೃತ್ಯಗಳು 4:13; ಮತ್ತಾಯ 9:36) ಇತರರ—ಯುವ ಜನರ—ಕಡೆಗೆ ಕಾಳಜಿವಹಿಸುವ ಮೂಲಕ ನಾವು ದೇವರನ್ನು ಅನುಕರಿಸಸಾಧ್ಯವಿದೆ.—4/15, ಪುಟಗಳು 28-31.
• ನಾವು ಏನು ಮಾಡುತ್ತೇವೋ ಅದನ್ನು ಯೆಹೋವನು ಗಮನಿಸುತ್ತಾನೆ ಎಂಬುದನ್ನು ನಂಬಲು ನಮಗೆ ಯಾವ ಕಾರಣವಿದೆ?
ಯೆಹೋವನು ಮಾನವರ ಸಾಧನೆಗಳನ್ನು ಗಮನಿಸುತ್ತಾನೆಂದು ಬೈಬಲ್ ವೃತ್ತಾಂತಗಳು ನಮಗೆ ತೋರಿಸುತ್ತವೆ. ಆತನು ಹೇಬೆಲನು ಅರ್ಪಿಸಿದ ಯಜ್ಞವನ್ನು ಗಮನಿಸಿದನು ಮತ್ತು ನಾವು ‘ಸ್ತುತಿಯಜ್ಞವನ್ನು, ಅಂದರೆ ಬಾಯಿಂದ ಅರಿಕೆಮಾಡುವ ಯಜ್ಞವನ್ನು’ ಅರ್ಪಿಸುವಾಗಲೂ ಆತನು ಗಮನಿಸುತ್ತಾನೆ. (ಇಬ್ರಿಯ 13:15) ಯೆಹೋವನನ್ನು ಮೆಚ್ಚಿಸುವ ಸಲುವಾಗಿ ಹನೋಕನು ಒಂದು ಶುದ್ಧವಾದ ನೈತಿಕ ಜೀವನವನ್ನು ನಡೆಸಲು ಬಹಳ ಪ್ರಯಾಸಪಟ್ಟನು ಎಂಬುದು ಆತನಿಗೆ ತಿಳಿದಿತ್ತು. ಚಾರಪ್ತ ಊರಿನ ಇಸ್ರಾಯೇಲ್ಯಳಾಗಿರದ ಒಬ್ಬಾಕೆ ವಿಧವೆಯು ತನ್ನಲ್ಲಿದ್ದ ಸ್ವಲ್ಪ ಆಹಾರವನ್ನು ಎಲೀಯನೊಂದಿಗೆ ಹಂಚಿಕೊಂಡದ್ದನ್ನು ಯೆಹೋವನು ಗಮನಿಸಿದನು. ಯೆಹೋವನು ನಮ್ಮ ನಂಬಿಕೆಯ ಕೃತ್ಯಗಳನ್ನು ಸಹ ಗಮನಿಸುತ್ತಾನೆ.—5/1, ಪುಟಗಳು 28-31.
• ಸಾ.ಶ. 33ರ ಪಂಚಾಶತ್ತಮದ ನಂತರ ಕ್ರೈಸ್ತರಾದ ಯೆಹೂದ್ಯರು ದೇವರಿಗೆ ತಮ್ಮನ್ನು ವೈಯಕ್ತಿಕವಾಗಿ ಸಮರ್ಪಿಸಿಕೊಳ್ಳಬೇಕಿತ್ತು ಎಂಬುದಾಗಿ ಏಕೆ ಹೇಳಸಾಧ್ಯವಿದೆ?
ಪುರಾತನ ಇಸ್ರಾಯೇಲ್ಯರು ಸಾ.ಶ.ಪೂ. 1513ರಲ್ಲಿ ಯೆಹೋವನೊಂದಿಗೆ ಒಂದು ಸಮರ್ಪಿತ ಸಂಬಂಧದೊಳಕ್ಕೆ ತರಲ್ಪಟ್ಟರು. (ವಿಮೋಚನಕಾಂಡ 19:3-8) ಅಂದಿನಿಂದ, ಧರ್ಮಶಾಸ್ತ್ರದೊಡಂಬಡಿಕೆಯ ಕೆಳಗೆ ಯೆಹೂದ್ಯರ ಸಂತತಿಯು ಹುಟ್ಟಿನಿಂದಲೇ ಸಮರ್ಪಿತ ಜನಾಂಗವಾಗಿತ್ತು. ಸಾ.ಶ. 33ರಲ್ಲಿ ಸಂಭವಿಸಿದ ಕ್ರಿಸ್ತನ ಮರಣದ ಮೂಲಕ ಯೆಹೋವನು ಧರ್ಮಶಾಸ್ತ್ರದೊಡಂಬಡಿಕೆಯನ್ನು ತೆಗೆದುಹಾಕಿದನು. (ಕೊಲೊಸ್ಸೆ 2:14) ಆದಕಾರಣ ಅಂದಿನಿಂದ ದೇವರನ್ನು ಸ್ವೀಕಾರಯೋಗ್ಯ ರೀತಿಯಲ್ಲಿ ಸೇವಿಸಲು ಇಷ್ಟಪಡುವ ಯೆಹೂದ್ಯರು ಆತನಿಗೆ ತಮ್ಮನ್ನು ಸಮರ್ಪಿಸಿಕೊಂಡು, ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯುವ ಅಗತ್ಯವಿತ್ತು.—5/15, ಪುಟಗಳು 30-1.
• ಧೂಪ ಸುಡುವುದು ಇಂದು ಸತ್ಯಾರಾಧನೆಯ ಭಾಗವಾಗಿದೆಯೋ?
ಪುರಾತನ ಇಸ್ರಾಯೇಲ್ಯರಲ್ಲಿ ಧೂಪ ಸುಡುವುದು ಸತ್ಯಾರಾಧನೆಯ ಭಾಗವಾಗಿತ್ತು. (ವಿಮೋಚನಕಾಂಡ 30:37, 38; ಯಾಜಕಕಾಂಡ 16:12, 13) ಆದರೆ, ಕ್ರಿಸ್ತನ ಮರಣದೊಂದಿಗೆ ಪವಿತ್ರ ಧೂಪದ ಉಪಯೋಗವನ್ನು ಸೇರಿಸಿ ನಿಯಮದೊಡಂಬಡಿಕೆಯು ಅಂತ್ಯಗೊಂಡಿತು. ಧಾರ್ಮಿಕ ಉದ್ದೇಶಕ್ಕಲ್ಲದೆ ಧೂಪವನ್ನು ಉಪಯೋಗಿಸಬೇಕೋ ಬೇಡವೋ ಎಂಬುದನ್ನು ಕ್ರೈಸ್ತರು ಸ್ವತಃ ನಿರ್ಣಯಿಸಸಾಧ್ಯವಿದೆ. ಆದರೆ ಅದು, ಇಂದು ಸತ್ಯಾರಾಧನೆಯ ಭಾಗವಾಗಿಲ್ಲ. ಆದರೆ ಕ್ರೈಸ್ತನೊಬ್ಬನು ಆ ನಿರ್ಣಯವನ್ನು ಮಾಡುವ ಮೊದಲು, ಇತರರಿಗೆ ಅಡ್ಡಿಯಾಗದಂತೆ ಇತರರ ಭಾವನೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು.—6/1, ಪುಟಗಳು 28-30.
• ಇತ್ತೀಚೆಗೆ ಪತ್ರಿಕೆಯಲ್ಲಿ ಕಂಡುಬಂದ ಯಾವ ವಾರ್ತೆಯು, ಯೇಸು ಭೂಮಿಯಲ್ಲಿ ಅಸ್ತಿತ್ವದಲ್ಲಿದ್ದನು ಎಂಬ ನಿಜತ್ವದ ಕುರಿತು ಅನೇಕರನ್ನು ಚಿಂತಿಸುವಂತೆ ಮಾಡಿತು?
ಇಸ್ರಾಯೇಲಿನಲ್ಲಿ ಪತ್ತೆಯಾಗಿದ್ದ ಒಂದು ಅಸ್ಥಿಪಾತ್ರೆ ಎಂಬ ಶೀರ್ಷಿಕೆಯಿದ್ದ ಒಂದು ಚೌಕಟ್ಟು ಬಹಳ ಜನಪ್ರಿಯವಾಯಿತು. ಈ ಅಸ್ಥಿಪಾತ್ರೆಯು ಒಂದನೆಯ ಶತಮಾನಕ್ಕೆ ಸೇರಿದ್ದಾಗಿದೆ ಮತ್ತು ಈ ಪಾತ್ರೆಯಲ್ಲಿ ಹೀಗೆಂದು ಕೆತ್ತಲ್ಪಟ್ಟಿತ್ತು: “ಯೋಸೇಫನ ಪುತ್ರನೂ ಯೇಸುವಿನ ಸಹೋದರನೂ ಆದ ಯಾಕೋಬನು.” ಇದು ಯೇಸುವಿನ ಅಸ್ತಿತ್ವದ ಕುರಿತಾದ “ಬೈಬಲೇತರ ಪ್ರಾಕ್ತನಶಾಸ್ತ್ರೀಯ ರುಜುವಾತುಗಳಲ್ಲಿ ಅತಿ ಹಳೆಯದಾಗಿದೆ” ಎಂದು ಕೆಲವರು ಪ್ರತಿಪಾದಿಸುತ್ತಾರೆ.—6/15, ಪುಟಗಳು 3-4.
• ಮಾನವರು ಪ್ರೀತಿಸಲು ಕಲಿಯುವುದು ಹೇಗೆ?
ಮಾನವರು ಮೊದಲಾಗಿ ತಮ್ಮ ಹೆತ್ತವರ ಮಾದರಿ ಮತ್ತು ತರಬೇತಿಯಿಂದ ಪ್ರೀತಿಸಲು ಕಲಿಯುತ್ತಾರೆ. ಗಂಡಹೆಂಡತಿಯರು ಒಬ್ಬರಿಗೊಬ್ಬರು ಪ್ರೀತಿಯನ್ನು ತೋರಿಸುವುದನ್ನು ಮಕ್ಕಳು ನೋಡುವಾಗ ಅವರು ಸಹ ಪ್ರೀತಿಸಲು ಕಲಿಯುತ್ತಾರೆ. (ಎಫೆಸ 5:28; ತೀತ 2:4) ಒಬ್ಬ ವ್ಯಕ್ತಿಯು ಪ್ರೀತಿಪರ ಕುಟುಂಬದಿಂದ ಬಂದಿರದಿದ್ದರೂ, ಅವನು ಯೆಹೋವನ ಪಿತೃಸದೃಶ ಮಾರ್ಗದರ್ಶನದಿಂದ, ಪವಿತ್ರಾತ್ಮದ ಸಹಾಯದಿಂದ, ಮತ್ತು ಕ್ರೈಸ್ತ ಸಹೋದರತ್ವದ ಬೆಚ್ಚಗಿನ ಬೆಂಬಲದಿಂದ ಪ್ರೀತಿಸಲು ಕಲಿಯಸಾಧ್ಯವಿದೆ.—7/1, ಪುಟಗಳು 4-7.
• ಯುಸೀಬಿಯಸ್ ಯಾರು, ಮತ್ತು ಅವನ ಜೀವಿತದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
ಯುಸೀಬಿಯಸ್ ಒಬ್ಬ ಪ್ರಾಚೀನಕಾಲದ ಇತಿಹಾಸಗಾರ. ಅವನು ಸಾ.ಶ. 324ರಲ್ಲಿ ಕ್ರೈಸ್ತ ಚರ್ಚಿನ ಇತಿಹಾಸ (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಹತ್ತು ಸಂಪುಟಗಳ ಕೃತಿಯನ್ನು ಬರೆದನು. ತಂದೆಯು ಮಗನಿಗಿಂತಲೂ ಮುಂಚೆಯೇ ಅಸ್ತಿತ್ವದಲ್ಲಿದ್ದನೆಂದು ಯುಸೀಬಿಯಸನು ನಂಬಿದನಾದರೂ, ನೈಸೀಯ ಸಭೆಯಲ್ಲಿ ಒಂದು ವಿಭಿನ್ನ ದೃಷ್ಟಿಕೋನವನ್ನು ಅವನು ಸ್ವೀಕರಿಸಿದನು. ತನ್ನ ಹಿಂಬಾಲಕರು ‘ಲೋಕದ ಭಾಗವಾಗಿರಬಾರದು’ ಎಂಬ ಯೇಸುವಿನ ಷರತ್ತನ್ನು ಯುಸೀಬಿಯಸನು ಅಲಕ್ಷಿಸಿದನೆಬುಂದು ಸುವ್ಯಕ್ತ. (ಯೋಹಾನ 17:16)—7/15, ಪುಟಗಳು 29-31.
• ಯೆಹೋವನು ಬಹುಪತ್ನಿತ್ವದ ಕುರಿತಾದ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ದಾನೋ?
ಇಲ್ಲ. ಯೆಹೋವನು ಬಹುಪತ್ನಿತ್ವದ ಕುರಿತಾದ ತನ್ನ ದೃಷ್ಟಿಕೋನವನ್ನು ಬದಲಾಯಿಸಲಿಲ್ಲ. (ಮಲಾಕಿಯ 3:6) ಮೊದಲನೆಯ ಮನುಷ್ಯನಿಗೆ ದೇವರ ಮಾಡಿದ ಏರ್ಪಾಡು, ಅವನು “ತನ್ನ ಹೆಂಡತಿಯನ್ನು ಸೇರಿ”ಕೊಂಡು, ಅವರಿಬ್ಬರೂ ಒಂದೇ ಶರೀರವಾಗಿರಬೇಕಿತ್ತು. (ಆದಿಕಾಂಡ 2:24) ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ ಎಂಬುದಾಗಿ ಯೇಸು ತಿಳಿಸಿದನು. (ಮತ್ತಾಯ 19:4-6, 9) ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಾಗ, ಬಹುಪತ್ನಿತ್ವದ ಕಡೆಗಿನ ಯೆಹೋವನ ಸಹಿಷ್ಣತೆಯು ಅಂತ್ಯಗೊಂಡಿತು.—8/1, ಪುಟಗಳು 28.