ಸಂತೋಷಕರ ಜೀವನಕ್ಕೆ ಭರವಸೆಯು ಅತ್ಯಮೂಲ್ಯ
ಸಂತೋಷಕರ ಜೀವನಕ್ಕೆ ಭರವಸೆಯು ಅತ್ಯಮೂಲ್ಯ
ಆಹಾರವಿಷದಿಂದ ಉಂಟಾಗುವ ಅನುಭವವು ತೀರಾ ಅಹಿತಕರ. ಪುನಃ ಪುನಃ ಇದನ್ನು ಅನುಭವಿಸುವ ಒಬ್ಬ ವ್ಯಕ್ತಿಯು ತನ್ನ ತಿನ್ನುವ ಹವ್ಯಾಸಗಳ ಕುರಿತು ಜಾಗರೂಕನಾಗಿರುವುದು ಅಗತ್ಯ. ಆದರೆ ಆಹಾರವಿಷದ ಅಪಾಯವನ್ನು ತಡೆಗಟ್ಟಲು ಆಹಾರ ಸೇವನೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ಒಂದು ಸೂಕ್ತ ಆಯ್ಕೆಯಾಗಿರುವುದಿಲ್ಲ. ಹೀಗೆ ಮಾಡುವುದು, ಸಮಸ್ಯೆಯನ್ನು ಬಗೆಹರಿಸುವ ಬದಲಾಗಿ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡಸಾಧ್ಯವಿದೆ. ಆಹಾರವನ್ನು ಸೇವಿಸದೆ ಯಾರೊಬ್ಬನೂ ಹೆಚ್ಚು ದಿವಸ ಬದುಕಲಾರನು.
ಅಂತೆಯೇ, ಒಬ್ಬನ ಭರವಸೆಯು ಮುರಿಯಲ್ಪಡುವಾಗ ಆಗುವ ಅನಿಸಿಕೆಯೂ ತೀರಾ ದುಃಖಕರ. ಪುನಃ ಪುನಃ ನಮ್ಮ ಭರವಸೆಯು ಮುರಿಯಲ್ಪಡುವಾಗ, ಅದು ನಮ್ಮನ್ನು ನಮ್ಮ ಸಹವಾಸದ ಆಯ್ಕೆಯ ಕುರಿತು ಜಾಗರೂಕತೆಯಿಂದ ಆಲೋಚಿಸುವಂತೆ ನಡಿಸಬಹುದು. ಹಾಗಿದ್ದರೂ, ಕೈಬಿಡಲ್ಪಡುವ ಅನುಭವದ ಅಪಾಯವನ್ನು ತಡೆಗಟ್ಟಲು ಜನರ ಸಹವಾಸವನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ಒಂದು ಪರಿಹಾರವಲ್ಲ. ಏಕೆ? ಏಕೆಂದರೆ ಇತರರ ಮೇಲೆ ಭರವಸೆಯಿಡದೇ ಇರುವುದು, ನಮ್ಮ ಸ್ವಂತ ಸಂತೋಷವನ್ನು ಕಸಿದುಕೊಳ್ಳುತ್ತದೆ. ಒಂದು ಸಂತೃಪ್ತಿಕರವಾದ ಜೀವನವನ್ನು ನಡೆಸಲು, ಪರಸ್ಪರ ಭರವಸೆಯ ಮೇಲಾಧಾರಿತವಾದ ಸಂಬಂಧಗಳು ನಮಗೆ ಅಗತ್ಯ.
“ಇತರರೊಂದಿಗಿನ ಪ್ರತಿದಿನದ ಪರಸ್ಪರಕ್ರಿಯೆಯು ಸರಾಗವಾಗಿರುವುದರಲ್ಲಿ, ಭರವಸೆಯು ಒಂದು ಅತ್ಯಮೂಲ್ಯವಾದ ಪಾತ್ರವನ್ನು ವಹಿಸುತ್ತದೆ,” ಎಂಬುದಾಗಿ ಜೂಜೆನ್ಟ್ 2002 ಎಂಬ ಪುಸ್ತಕವು ಹೇಳಿಕೆ ನೀಡುತ್ತದೆ. “ಪ್ರತಿಯೊಬ್ಬರೂ ಭರವಸೆಗಾಗಿ ಹಾತೊರೆಯುತ್ತಾರೆ,” ಎಂಬುದಾಗಿ ನೋಯ್ ಜೂರ್ಕ್ಅರ್ ಸಯ್ಟನ್ ಎಂಬ ವಾರ್ತಾಪತ್ರಿಕೆಯು ವರದಿಮಾಡುತ್ತದೆ. ಎಷ್ಟರ ಮಟ್ಟಿಗೆ “ಭರವಸೆಯು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆಂದರೆ ಅದು ಬದುಕಲಿಕ್ಕೆ ಅತ್ಯಾವಶ್ಯಕ.” ಆ ವಾರ್ತಾಪತ್ರಿಕೆಯು ಮುಂದುವರಿಸುವುದು, ಭರವಸೆ ಇಲ್ಲದಿದ್ದರೆ “ಒಬ್ಬ ವ್ಯಕ್ತಿಯು ಜೀವನವನ್ನು ನಿಭಾಯಿಸಲು ಸಾಧ್ಯವೇ ಇಲ್ಲ.”
ನಮ್ಮೆಲ್ಲರಿಗೂ ಯಾರೋ ಒಬ್ಬರಲ್ಲಿ ಭರವಸೆಯನ್ನಿಡುವ ಮೂಲಭೂತ ಅವಶ್ಯಕತೆಯಿರುವುದರಿಂದ, ನಮಗೆ ದ್ರೋಹಬಗೆಯಲಾಗುವುದೆಂಬ ಯಾವುದೇ ಭಯವಿಲ್ಲದೆ ಯಾರ ಮೇಲೆ ನಾವು ಭರವಸೆಯನ್ನಿಡಬಲ್ಲೆವು?
ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು
“ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು” ಎಂಬುದಾಗಿ ಬೈಬಲ್ ನಮಗೆ ಹೇಳುತ್ತದೆ. (ಜ್ಞಾನೋಕ್ತಿ 3:5) ವಾಸ್ತವದಲ್ಲಿ, ದೇವರ ವಾಕ್ಯವು ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಲ್ಲಿ ಭರವಸೆಯನ್ನಿಡುವಂತೆ ನಮ್ಮನ್ನು ಪದೇ ಪದೇ ಉತ್ತೇಜಿಸುತ್ತದೆ.
ಆದರೆ ದೇವರಲ್ಲಿ ನಾವೇಕೆ ಭರವಸೆಯನ್ನು ಇಡಸಾಧ್ಯವಿದೆ? ಮೊದಲಾಗಿ, ಯೆಹೋವ ದೇವರು ಪರಿಶುದ್ಧನಾಗಿದ್ದಾನೆ. ಪ್ರವಾದಿಯಾದ ಯೆಶಾಯನು ಬರೆದದ್ದು: “ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು.” (ಯೆಶಾಯ 6:3) ಪರಿಶುದ್ಧನು ಎಂಬ ವಿಷಯ ನಿಮ್ಮನ್ನು ಆತನ ಕಡೆಗೆ ಸೆಳೆಯುವುದಿಲ್ಲವೊ? ವಾಸ್ತವದಲ್ಲಿ, ಆ ಮಾತು ತಾನೇ ನಿಮ್ಮನ್ನು ಆತನ ಕಡೆಗೆ ಸೆಳೆಯಬೇಕು ಏಕೆಂದರೆ ಯೆಹೋವನು ಪರಿಶುದ್ಧನು ಎಂದರೆ ಆತನು ಶುದ್ಧನೂ ಎಲ್ಲಾ ಕೆಟ್ಟತನದಿಂದ ದೂರವಿರುವವನೂ ಮತ್ತು ಸಂಪೂರ್ಣ ಭರವಸೆಗೆ ಅರ್ಹನೂ ಎಂಬುದನ್ನು ಅರ್ಥೈಸುತ್ತದೆ. ಆತನು ಎಂದಿಗೂ ಭ್ರಷ್ಟ ಅಥವಾ ದುರಾಚಾರಿಯಾಗಸಾಧ್ಯವಿಲ್ಲ, ಮತ್ತು ನಮ್ಮ ಭರವಸೆಯನ್ನು ಮುರಿಯುವುದು ಆತನಿಂದ ಎಂದಿಗೂ ಆಗಲಾರದ ಕೆಲಸವಾಗಿದೆ.
1 ಯೋಹಾನ 4:8) ದೇವರ ಪ್ರೀತಿಯು ಆತನು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಭಾವಿಸುತ್ತದೆ. ದೇವರ ಪರಿಶುದ್ಧತ್ವ ಮತ್ತು ಆತನ ಇತರ ಎದ್ದುಕಾಣುವ ಗುಣಗಳು, ಆತನನ್ನು, ನಾವು ಸಂಪೂರ್ಣ ಭರವಸೆಯನ್ನು ಇಡಸಾಧ್ಯವಿರುವ ಒಬ್ಬ ಆದರ್ಶ ತಂದೆಯನ್ನಾಗಿ ಮಾಡುತ್ತದೆ. ಯೆಹೋವನಿಗಿಂತಲೂ ಹೆಚ್ಚು ಭರವಸಾರ್ಹವಾಗಿ ಯಾರೂ ಮತ್ತು ಯಾವುದೂ ಇರಸಾಧ್ಯವಿಲ್ಲ.
ಅಷ್ಟುಮಾತ್ರವಲ್ಲದೆ, ಆತನನ್ನು ಸೇವಿಸುವವರನ್ನು ಬೆಂಬಲಿಸಲು ಆತನಿಗಿರುವ ಸಾಮರ್ಥ್ಯ ಮತ್ತು ಇಚ್ಛೆಯ ಕಾರಣ ನಾವು ದೇವರಲ್ಲಿ ಭರವಸವಿಡಸಾಧ್ಯವಿದೆ. ಉದಾಹರಣೆಗೆ, ಆತನ ಅತ್ಯುಚ್ಚ ಶಕ್ತಿ, ಆತನು ಕ್ರಿಯೆಗೈಯುವಂತೆ ಸಾಧ್ಯಗೊಳಿಸುತ್ತದೆ. ಆತನ ಪರಿಪೂರ್ಣ ನ್ಯಾಯ ಮತ್ತು ವಿವೇಕ, ಆತನು ಕ್ರಿಯೆಗೈಯುವ ರೀತಿಯನ್ನು ನಿರ್ದೇಶಿಸುತ್ತದೆ. ಆತನ ಅಪ್ರತಿಮ ಪ್ರೀತಿಯು ಆತನನ್ನು ಕ್ರಿಯೆಗೈಯುವಂತೆ ಪ್ರೇರೇಪಿಸುತ್ತದೆ. “ದೇವರು ಪ್ರೀತಿಸ್ವರೂಪಿಯು,” ಎಂಬುದಾಗಿ ಅಪೊಸ್ತಲ ಯೋಹಾನನು ಬರೆದನು. (ಯೆಹೋವನಲ್ಲಿ ಭರವಸೆಯಿಟ್ಟು, ಸಂತೋಷದಿಂದಿರಿ
ಯೆಹೋವನು ಮಾತ್ರ ಇತರರೆಲ್ಲರಿಗಿಂತಲೂ ಹೆಚ್ಚು ಉತ್ತಮವಾಗಿ ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲನು ಎಂಬುದು, ಆತನಲ್ಲಿ ಭರವಸೆಯನ್ನಿಡಲು ಇನ್ನೊಂದು ಕಾರಣವಾಗಿದೆ. ಸೃಷ್ಟಿಕರ್ತನೊಂದಿಗಿನ ಭದ್ರವಾದ, ಶಾಶ್ವತವಾದ, ಮತ್ತು ಭರವಸಾರ್ಹ ಸಂಬಂಧದ ಮೂಲಭೂತ ಅಗತ್ಯತೆಯು ಪ್ರತಿಯೊಬ್ಬ ಮಾನವನಿಗಿದೆ ಎಂದು ಆತನಿಗೆ ತಿಳಿದಿದೆ. ಸೃಷ್ಟಿಕರ್ತನೊಂದಿಗೆ ಯಾರಿಗೆ ಈ ರೀತಿಯ ಸಂಬಂಧವಿದೆಯೋ ಅವರು ಹೆಚ್ಚು ಭದ್ರವಾದ ಅನಿಸಿಕೆಯನ್ನು ಅನುಭವಿಸುವರು. “ಯಾವನು . . . ಯೆಹೋವನನ್ನೇ ನಂಬುತ್ತಾನೋ ಅವನೇ ಧನ್ಯನು,” ಎಂಬುದಾಗಿ ರಾಜ ದಾವೀದನು ತಿಳಿಸುತ್ತಾನೆ. (ಕೀರ್ತನೆ 40:4) ಇಂದು ಲಕ್ಷಾಂತರ ಜನರು ದಾವೀದನ ಆಲೋಚನೆಯನ್ನೇ ಪೂರ್ಣಹೃದಯದಿಂದ ಪ್ರತಿಧ್ವನಿಸುತ್ತಿದ್ದಾರೆ.
ಕೆಲವೊಂದು ಅನುಭವಗಳನ್ನು ಪರಿಗಣಿಸಿರಿ. ಡೋರಿಸ್ ಎಂಬವಳು ಡೋಮಿನಿಕನ್ ರಿಪಬ್ಲಿಕ್, ಜರ್ಮನಿ, ಗ್ರೀಸ್, ಮತ್ತು ಅಮೆರಿಕ, ಈ ಮುಂತಾದ ದೇಶಗಳಲ್ಲಿ ವಾಸಿಸಿದ್ದಾಳೆ. ಅವಳು ಹೇಳುವುದು: “ಯೆಹೋವನಲ್ಲಿ ಭರವಸೆಯನ್ನಿಡಲು ನಾನು ಬಹಳ ಸಂತೋಷಿಸುತ್ತೇನೆ. ಶಾರೀರಿಕವಾಗಿ, ಆತ್ಮಿಕವಾಗಿ, ಮತ್ತು ಭಾವನಾತ್ಮಕವಾಗಿ ನನ್ನನ್ನು ಹೇಗೆ ನೋಡಿಕೊಳ್ಳಬೇಕೆಂಬುದು ಆತನಿಗೆ ತಿಳಿದಿದೆ. ಒಬ್ಬ ವ್ಯಕ್ತಿಯು ಹೊಂದಿರಬಹುದಾದ ಅತಿ ಉತ್ತಮ ಸ್ನೇಹಿತನು ಈತನೇ ಆಗಿದ್ದಾನೆ.” ವುಲ್ಫ್ಗ್ಯಾಂಗ್ ಎಂಬ ಒಬ್ಬ ವಕೀಲನು ವಿವರಿಸುವುದು: “ತಮ್ಮ ಹೃದಯದಲ್ಲಿ ನಿಮ್ಮ ಒಳಿತನ್ನು ಬಯಸುವವರ, ನಿಮಗೆ ಅತ್ಯುತ್ತಮವಾದದ್ದನ್ನು ಮಾಡಬಲ್ಲವರ—ಮತ್ತು ವಾಸ್ತವದಲ್ಲಿ ಮಾಡುವವರ—ಮೇಲೆ ಆತುಕೊಳ್ಳುವುದು ಅದ್ಭುತವಾದ ವಿಷಯವಾಗಿದೆ!” ಏಷ್ಯಾದಲ್ಲಿ ಹುಟ್ಟಿ, ಈಗ ಯೂರೋಪಿನಲ್ಲಿ ವಾಸಿಸುತ್ತಿರುವ ಹ್ಯಾಮ್ ಎಂಬವನು ಹೇಳುವುದು: “ಎಲ್ಲಾ ವಿಷಯಗಳು ಯೆಹೋವನ ಹತೋಟಿಯಲ್ಲಿವೆ ಎಂದು ನನಗೆ ಭರವಸೆಯಿದೆ, ಮತ್ತು ಆತನು ಎಂದಿಗೂ ತಪ್ಪುಮಾಡುವವನಲ್ಲ. ಆದುದರಿಂದ ಆತನ ಮೇಲೆ ಆತುಕೊಳ್ಳಲು ನಾನು ಸಂತೋಷಪಡುತ್ತೇನೆ.”
ನಮ್ಮಲ್ಲಿ ಪ್ರತಿಯೊಬ್ಬರಿಗೆ ಕೇವಲ ಸೃಷ್ಟಿಕರ್ತನಲ್ಲಿ ಮಾತ್ರವಲ್ಲ ಜನರಲ್ಲಿಯೂ ಭರವಸೆಯಿಡುವ ಅಗತ್ಯವಿದೆ ಎಂಬುದು ನಿಜ. ಆದುದರಿಂದಲೇ, ನಾವು ಯಾವ ರೀತಿಯ ವ್ಯಕ್ತಿಗಳಲ್ಲಿ ಭರವಸೆಯನ್ನಿಡಬೇಕು ಎಂಬುದರ ಕುರಿತು ವಿವೇಕಿಯೂ ಅನುಭವಸ್ಥನೂ ಆದ ಸ್ನೇಹಿತನೋಪಾದಿ ಯೆಹೋವನು ನಮಗೆ ಬುದ್ಧಿವಾದವನ್ನು ನೀಡುತ್ತಾನೆ. ಬೈಬಲನ್ನು ಜಾಗರೂಕತೆಯಿಂದ ಓದುವ ಮೂಲಕ, ಈ ವಿಷಯದ ಕುರಿತು ಆತನ ಸಲಹೆಯನ್ನು ನಾವು ಗಮನಕ್ಕೆ ತರಬಲ್ಲೆವು.
ನಾವು ಭರವಸೆಯಿಡಬಲ್ಲ ಜನರು
“ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ,” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 146:3) ಅನೇಕ ಮಾನವರು ನಮ್ಮ ಭರವಸೆಗೆ ಯೋಗ್ಯರಲ್ಲ ಎಂಬುದನ್ನು ಗ್ರಹಿಸುವಂತೆ ಈ ಪ್ರೇರಿತ ಮಾತುಗಳು ನಮಗೆ ಸಹಾಯಮಾಡುತ್ತವೆ. ಯಾವುದೊ ವಿಶೇಷ ರೀತಿಯ ಜ್ಞಾನ ಅಥವಾ ಚಟುವಟಿಕಾ ಕ್ಷೇತ್ರದಲ್ಲಿ ಪ್ರವೀಣರಾಗಿರುವ ಜನರಂಥ, ಈ ಲೋಕದ ‘ಪ್ರಭುಗಳು’ ಎಂದು ತುಂಬ ಮಾನ್ಯತೆ ನೀಡಲ್ಪಡುವ ವ್ಯಕ್ತಿಗಳು, ನಾವು ಹಿಂದೆಮುಂದೆ ಯೋಚಿಸದೇ ಭರವಸೆಯಿಡಲು ಯೋಗ್ಯರಾದ ಜನರಲ್ಲ. ಅವರ ಮಾರ್ಗದರ್ಶನವು ಅನೇಕವೇಳೆ ತಪ್ಪುದಾರಿಗೆ ನಡೆಸುವಂತದ್ದಾಗಿದೆ, ಮತ್ತು ಅಂಥ “ಪ್ರಭುಗಳ” ಮೇಲೆ ಇಟ್ಟಂಥ ಭರವಸೆಯು ಅತಿ ಬೇಗನೆ ಆಶಾಭಂಗಕ್ಕೆ ಬದಲಾಗಸಾಧ್ಯವಿದೆ.
ಆದರೆ ಇದು, ನಾವು ಎಲ್ಲರನ್ನೂ ಅವಿಶ್ವಾಸಿಸುವಂತೆ ಮಾಡಬಾರದು. ಹಾಗಿದ್ದರೂ, ನಾವು ಭರವಸೆಯನ್ನಿಡಲು ಜನರನ್ನು ಆಯ್ಕೆಮಾಡುವಾಗ ಅತಿ ಜಾಗರೂಕರಾಗಿರಬೇಕು. ಯಾವ ಆಧಾರದ ಮೇಲೆ ನಾವು ಆಯ್ಕೆ ಮಾಡಬೇಕು? ಪುರಾತನ ಇಸ್ರಾಯೇಲ್ ಜನಾಂಗದಿಂದ ಒಂದು ಉದಾಹರಣೆಯು ನಮಗೆ ಸಹಾಯನೀಡಬಹುದು. ಇಸ್ರಾಯೇಲಿನಲ್ಲಿ ವಿಮೋಚನಕಾಂಡ 18:21) ಇದರಿಂದ ನಾವೇನನ್ನು ಕಲಿಯಬಲ್ಲೆವು?
ಭಾರವಾದ ಜವಾಬ್ದಾರಿ ವಹಿಸಲು ಪುರುಷರನ್ನು ನೇಮಿಸುವ ಅಗತ್ಯಬಂದಾಗ, “ಸಮಸ್ತಜನರೊಳಗೆ ಸಮರ್ಥರೂ ದೇವಭಕ್ತರೂ [“ದೇವಭಯವುಳ್ಳವರೂ,” NW] ನಂಬಿಗಸ್ತರೂ [“ಭರವಸಾರ್ಹರೂ,” NW] ಲಂಚ ಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿ”ಕೊಳ್ಳುವಂತೆ ಮೋಶೆಗೆ ನಿರ್ದೇಶಿಸಲಾಯಿತು. (ಇವರು, ಭರವಸಾರ್ಹವಾದ ಸ್ಥಾನಗಳಿಗೆ ನೇಮಕವನ್ನು ಪಡೆಯುವ ಮುನ್ನವೇ ನಿರ್ದಿಷ್ಟ ದೈವಿಕ ಗುಣಗಳನ್ನು ತೋರಿಸಿದ ಪುರುಷರಾಗಿದ್ದರು. ತಾವು ದೇವಭಯವುಳ್ಳವರೆಂದು ಅವರು ಈಗಾಗಲೇ ರುಜುಪಡಿಸಿದ್ದರು; ಅವರಿಗೆ ತಮ್ಮ ಸೃಷ್ಟಿಕರ್ತನ ಕಡೆಗೆ ಹಿತಕರವಾದ ಪೂಜ್ಯಭಾವನೆ ಇತ್ತು ಮತ್ತು ಆತನನ್ನು ಅಸಂತೋಷಪಡಿಸಲು ಹೆದರಿದರು. ಈ ಪುರುಷರು ದೇವರ ಮಟ್ಟಗಳನ್ನು ಎತ್ತಿಹಿಡಿಯಲು ತಮ್ಮಿಂದಾದುದ್ದೆಲ್ಲವನ್ನು ಮಾಡಿದರು ಎಂಬುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಅವರು ಲಂಚವನ್ನು ಹಗೆಮಾಡಿದರು. ಇದು, ಅಧಿಕಾರದ ಕಾರಣ ಭ್ರಷ್ಟರಾಗದಂತೆ ತಮ್ಮನ್ನು ತಡೆಹಿಡಿಯಲು ಅವರಲ್ಲಿದ್ದ ನೈತಿಕ ಬಲವನ್ನು ತೋರಿಸುತ್ತಿತ್ತು. ಅವರು ತಮ್ಮ ಸ್ವಂತ ವೈಯಕ್ತಿಕ ಅಭಿರುಚಿಗಳನ್ನೋ ಅಥವಾ ತಮ್ಮ ಸಂಬಂಧಿಕರ ಇಲ್ಲವೆ ಸ್ನೇಹಿತರ ಅಭಿರುಚಿಗಳನ್ನೋ ಸಮರ್ಥಿಸಲಿಕ್ಕೋಸ್ಕರ ಇತರರ ಭರವಸೆಯನ್ನು ದುರುಪಯೋಗಿಸದಿರುವರು.
ನಮ್ಮ ಭರವಸೆಯನ್ನು ಯಾರ ಮೇಲಿಡಬೇಕೆಂದು ನಾವು ಆಯ್ಕೆಮಾಡುವಾಗ ಇಂಥದ್ದೇ ಮಟ್ಟವನ್ನು ಉಪಯೋಗಿಸುವುದು ವಿವೇಕಪ್ರದವಾಗಿಲ್ಲವೋ? ತಮ್ಮ ನಡವಳಿಕೆಯಲ್ಲಿ ದೇವಭಯವುಳ್ಳವರೆಂದು ತೋರಿಸಿಕೊಡುವ ವ್ಯಕ್ತಿಗಳನ್ನು ನಾವು ತಿಳಿದಿದ್ದೇವೋ? ನಡತೆಗೆ ಸಂಬಂಧಿಸಿದ ಆತನ ಮಟ್ಟಗಳನ್ನು ಕೊನೆಯ ವರೆಗೆ ಪಾಲಿಸುವ ದೃಢ ತೀರ್ಮಾನವನ್ನು ಅವರು ಮಾಡಿದ್ದಾರೋ? ತಪ್ಪಾದ ವಿಷಯಗಳನ್ನು ಮಾಡುವುದರಿಂದ ದೂರವಿರುವ ಸಮಗ್ರತೆ ಅವರಲ್ಲಿದೆಯೋ? ಸನ್ನಿವೇಶವನ್ನು ತಮ್ಮ ಸ್ವಂತ ಪ್ರಯೋಜನಕ್ಕಾಗಿ ಅಥವಾ ತಾವು ನೆನಸಿದ್ದನ್ನು ಸಾಧಿಸಲು ಬದಲಾಯಿಸಿಕೊಳ್ಳದೆ ಇರುವಷ್ಟರ ಮಟ್ಟಿನ ಪ್ರಾಮಾಣಿಕತೆ ಅವರಲ್ಲಿದೆಯೋ? ಈ ರೀತಿಯ ಗುಣಗಳನ್ನು ವ್ಯಕ್ತಪಡಿಸುವ ಸ್ತ್ರೀಪುರುಷರು ಖಂಡಿತವಾಗಿಯೂ ನಮ್ಮ ಭರವಸೆಗೆ ಯೋಗ್ಯರಾಗಿದ್ದಾರೆ.
ಆಗಾಗ್ಗೆ ಸಂಭವಿಸಬಹುದಾದ ಆಶಾಭಂಗದಿಂದಾಗಿ ನಿರಾಶರಾಗಬೇಡಿ
ಯಾರಲ್ಲಿ ನಾವು ಭರವಸೆಯನ್ನಿಡಬಲ್ಲೆವು ಎಂಬುದನ್ನು ನಿರ್ಣಯಿಸುವಂಥ ಸಮಯದಲ್ಲಿ ನಾವು ತಾಳ್ಮೆಯನ್ನು ಸಹ ಪ್ರದರ್ಶಿಸಬೇಕಾಗಿದೆ, ಏಕೆಂದರೆ ಭರವಸೆಯನ್ನಿಡಲು ಸಮಯ ಹಿಡಿಯುತ್ತದೆ. ಆದುದರಿಂದ ವಿವೇಕದ ಮಾರ್ಗವೇನೆಂದರೆ, ಇತರರ ಮೇಲೆ ನಮ್ಮ ಭರವಸೆಯನ್ನು ನಿಧಾನವಾಗಿ, ಹಂತಹಂತವಾಗಿ ಇಡುತ್ತಾ ಹೋಗಬೇಕು. ಇದು ಹೇಗೆ? ಉದಾಹರಣೆಗೆ, ಒಬ್ಬ ವ್ಯಕ್ತಿಯ ನಡತೆಯನ್ನು ಕೆಲವು ಸಮಯದ ವರೆಗೆ ನಾವು ಗಮನಿಸಬಹುದು. ಅವನು ಕೆಲವೊಂದು ಸನ್ನಿವೇಶಗಳಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ಗಮನಿಸಬಹುದು. ಆ ವ್ಯಕ್ತಿಯು ಚಿಕ್ಕ ವಿಷಯದಲ್ಲೂ ನಂಬಿಗಸ್ತನಾಗಿದ್ದಾನೋ? ಉದಾಹರಣೆಗೆ, ಇತರರಿಂದ ಎರವಲಾಗಿ ತೆಗೆದುಕೊಂಡ ವಸ್ತುವನ್ನು ಕೊಟ್ಟ ಮಾತಿಗನುಸಾರ ಹಿಂದಿರುಗಿಸುತ್ತಾನೋ ಮತ್ತು ಒಂದು ಕಡೆಗೆ ಇಂಥ ಸಮಯಕ್ಕೆ ಬರುತ್ತೇನೆಂದು ಹೇಳಿದ ನಂತರ ಚಾಚೂತಪ್ಪದೆ ಅದೇ ಸಮಯಕ್ಕೆ ಸರಿಯಾಗಿ ಬರುತ್ತಾನೋ? ಹಾಗಿರುವಲ್ಲಿ, ಯಾವುದೇ ಭಯವಿಲ್ಲದೆ ಹೆಚ್ಚು ಗಂಭೀರವಾದ ವಿಷಯದಲ್ಲಿಯೂ ಅಂಥ ವ್ಯಕ್ತಿಯ ಮೇಲೆ ನಾವು ಭರವಸೆಯನ್ನಿಡಬಲ್ಲೆವು. ಇದು, “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು,” ಎಂಬ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿದೆ. (ಲೂಕ 16:10) ಸರಿಯಾಗಿ ಆಯ್ಕೆಮಾಡುವುದು ಮತ್ತು ತಾಳ್ಮೆಯಿಂದಿರುವುದು, ದೊಡ್ಡ ಆಶಾಭಂಗಗಳನ್ನು ತಡೆಗಟ್ಟಲು ನಮಗೆ ಸಹಾಯಮಾಡಬಹುದು.
ಆದರೆ ಒಂದುವೇಳೆ ಯಾರಾದರೂ ನಮ್ಮನ್ನು ಆಶಾಭಂಗಗೊಳಿಸಿದರೆ ಆಗೇನು? ಯೇಸು ಕ್ರಿಸನು ಬಂಧಿಸಲ್ಪಟ್ಟ ರಾತ್ರಿಯಂದು ಅವನ ಅಪೊಸ್ತಲರು ಅವನನ್ನು ಬಹಳವಾಗಿ ಆಶಾಭಂಗಗೊಳಿಸಿದರೆಂದು ಬೈಬಲ್ ವಿದ್ಯಾರ್ಥಿಗಳು ಜ್ಞಾಪಿಸಿಕೊಳ್ಳುವರು. ಇಸ್ಕರಿಯೋತ ಯೂದನು ಅವನಿಗೆ ದ್ರೋಹಬಗೆದನು, ಮತ್ತು ಇತರರು ಭಯದಿಂದಾಗಿ ಆ ಸ್ಥಳವನ್ನು ಬಿಟ್ಟು ಓಡಿಹೋದರು. ಪೇತ್ರನು ಸಹ ಯೇಸುವನ್ನು ಮೂರು ಬಾರಿ ಅಲ್ಲಗಳೆದನು. ಹಾಗಿದ್ದರೂ, ಇವರಲ್ಲಿ ಕೇವಲ ಯೂದನು ಮಾತ್ರ ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಮಾಡಿದನೆಂದು ಯೇಸು ಗ್ರಹಿಸಿಕೊಂಡನು. ಆದರೆ ಅಂಥ ಕಠಿನ ಸಮಯದಲ್ಲಿ ಅವನ ಕೈಬಿಡಲ್ಪಟ್ಟರೂ, ಉಳಿದ 11 ಮಂದಿ ಅಪೊಸ್ತಲರ ಮೇಲಿದ್ದ ತನ್ನ ಭರವಸೆಯನ್ನು ಕೆಲವೇ ವಾರಗಳ ನಂತರ ಪುನಃ ದೃಢೀಕರಿಸಿ ಹೇಳುವುದರಿಂದ ಅದು ಯೇಸುವನ್ನು ತಡೆಯಲಿಲ್ಲ. (ಮತ್ತಾಯ 26:45-47, 56, 69-75; 28:16-20) ಅಂತೆಯೇ, ನಾವು ಯಾರ ಮೇಲೆ ಭರವಸೆಯಿಟ್ಟಿದ್ದೇವೋ ಆ ವ್ಯಕ್ತಿಯು ವಿಶ್ವಾಸಘಾತ ಮಾಡಿದ್ದಾನೆಂದು ನಮಗೆ ಅನಿಸಿದರೆ, ಅವನು ಭರವಸೆಗೆ ಯೋಗ್ಯನಲ್ಲ ಎಂಬ ಮನೋಭಾವವನ್ನು ಇದು ತೋರಿಸುತ್ತದೋ ಅಥವಾ ಒಂದುವೇಳೆ ಅದು ಕ್ಷಣಿಕವಾದ ಶಾರೀರಿಕ ಬಲಹೀನತೆಯನ್ನು ತೋರಿಸುತ್ತದೋ ಎಂದು ಪರಿಗಣಿಸುವುದು ಯುಕ್ತವಾಗಿದೆ.
ನಾನು ಭರವಸಾರ್ಹನಾಗಿದ್ದೇನೋ?
ತಾನು ಭರವಸೆಯಿಡಲು ಬಯಸುವಂಥ ವ್ಯಕ್ತಿಯನ್ನು ಆಯ್ಕೆಮಾಡಲು ತೀರ್ಮಾನಿಸುವ ವ್ಯಕ್ತಿಯು ಸಹ ನಿಷ್ಪಕ್ಷಪಾತಿಯಾಗಿದ್ದು, ತನ್ನ ವಿಷಯದಲ್ಲೂ ಈ ರೀತಿ ಕೇಳಿಕೊಳ್ಳಬೇಕು: ‘ನಾನು ಭರವಸಾರ್ಹನಾಗಿದ್ದೇನೋ? ನನ್ನ ಮತ್ತು ಇತರರ ವಿಷಯದಲ್ಲಿ ನಾನು ಭರವಸಾರ್ಹತೆಯ ಯಾವ ಮಟ್ಟಗಳನ್ನು ಅಪೇಕ್ಷಿಸಬೇಕು?’
ಒಬ್ಬ ವ್ಯಕ್ತಿಯು ಭರವಸಾರ್ಹನಾಗಿದ್ದಲ್ಲಿ ಖಂಡಿತವಾಗಿಯೂ ಅವನು ಯಾವಾಗಲೂ ಸತ್ಯವನ್ನೇ ಆಡುತ್ತಾನೆ. (ಎಫೆಸ 4:25) ಅವನು, ವೈಯಕ್ತಿಕ ಪ್ರಯೋಜನವನ್ನು ಪಡೆಯುವ ಸಲುವಾಗಿ ತನ್ನ ಮಾತುಗಳನ್ನು ತಾನು ಮಾತಾಡುತ್ತಿರುವ ವ್ಯಕ್ತಿಗೆ ತಕ್ಕಂತೆ ಬದಲಾಯಿಸುವವನಾಗಿರುವುದಿಲ್ಲ. ಅಷ್ಟುಮಾತ್ರವಲ್ಲದೆ, ಭರವಸಾರ್ಹನಾದ ಒಬ್ಬ ವ್ಯಕ್ತಿಯು ಮಾತು ಕೊಟ್ಟರೆ ಅದನ್ನು ಪಾಲಿಸಲು ತನ್ನಿಂದಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಾನೆ. (ಮತ್ತಾಯ 5:37) ಒಂದುವೇಳೆ ಯಾರಾದರೂ ಅವನನ್ನು ನಂಬಿ ಯಾವುದೇ ಗೋಪ್ಯ ವಿಷಯವನ್ನು ತಿಳಿಸಿದರೆ, ಭರವಸಾರ್ಹನಾದ ವ್ಯಕ್ತಿಯು ಅದನ್ನು ಗುಟ್ಟಾಗಿಡುತ್ತಾನೆ ಮತ್ತು ಅದರ ಬಗ್ಗೆ ಹರಟೆಹೊಡೆಯುವುದಿಲ್ಲ. ಭರವಸಾರ್ಹನಾದ ವ್ಯಕ್ತಿಯು ತನ್ನ ವಿವಾಹ ಸಂಗಾತಿಗೆ ನಂಬಿಗಸ್ತನಾಗಿರುತ್ತಾನೆ. ಅವನು ಅಶ್ಲೀಲ ಸಾಹಿತ್ಯವನ್ನು ನೋಡುವುದಿಲ್ಲ, ಲೈಂಗಿಕ ಕಲ್ಪನಾವಿಷಯಗಳ ಕುರಿತಾಗಿ ಯೋಚಿಸುತ್ತಾ ಇರುವುದಿಲ್ಲ, ಮತ್ತು ವಿರುದ್ಧ ಲಿಂಗದವರೊಂದಿಗೆ ಸರಸವಾಡುವುದಿಲ್ಲ. (ಮತ್ತಾಯ 5:27, 28) ನಮ್ಮ ಭರವಸೆಗೆ ಯೋಗ್ಯನಾದವನು, ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ದುಡಿದು ಹಣಗಳಿಸುತ್ತಾನೆ, ಆದರೆ ಇತರರ ಪ್ರಯೋಜನಪಡೆದುಕೊಂಡು ಸುಲಭವಾಗಿ ಹಣಗಳಿಸಲು ಪ್ರಯತ್ನಿಸುವುದಿಲ್ಲ. (1 ತಿಮೊಥೆಯ 5:8) ಇಂಥ ನ್ಯಾಯಸಮ್ಮತ ಮತ್ತು ಶಾಸ್ತ್ರೀಯ ಮಟ್ಟಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ನಾವು ಭರವಸೆಯನ್ನಿಡಬಲ್ಲ ವ್ಯಕ್ತಿಗಳನ್ನು ಗುರುತಿಸುವಂತೆ ನಮಗೆ ಸಹಾಯಮಾಡುತ್ತದೆ. ಅಷ್ಟುಮಾತ್ರವಲ್ಲದೆ, ಒಂದೇ ರೀತಿಯ ನಡವಳಿಕೆಯ ಮಟ್ಟಗಳಿಗೆ ಅಂಟಿಕೊಳ್ಳುವುದು ನಮ್ಮಲ್ಲಿ ಪ್ರತಿಯೊಬ್ಬರೂ ಇತರರಿಂದ ಭರವಸಾರ್ಹರಾಗಿ ಕಂಡುಬರುವಂತೆ ಸಹಾಯಮಾಡುತ್ತದೆ.
ಎಲ್ಲಾ ಜನರು ಭರವಸಾರ್ಹರಾಗಿರುವ ಮತ್ತು ಭರವಸೆಯ ಬಿರುಕಿನಿಂದಾಗಿ ಉಂಟಾಗುವ ಆಶಾಭಂಗಗಳು ಗತಕಾಲದ ವಿಷಯಗಳಾಗಿರುವ ಒಂದು ಲೋಕದಲ್ಲಿ ಜೀವಿಸುವುದು ಎಷ್ಟು ಆನಂದಮಯವಾಗಿರುವುದು! ಇದು ಬರೀ ಕನಸಾಗಿದೆಯೋ? ಇಲ್ಲ. ಬೈಬಲಿನ ವಾಗ್ದಾನಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನರಿಗೆ ಇದೊಂದು ಕನಸಾಗಿರುವುದಿಲ್ಲ. ಏಕೆಂದರೆ ಮೋಸ, ಸುಳ್ಳು, ಮತ್ತು ಶೋಷಣೆ ಮುಂತಾದವುಗಳು ಇಲ್ಲದಿರುವ ಮತ್ತು ದುಃಖ, ಗೋಳಾಟ ಹಾಗೂ ಮರಣದಿಂದಲೂ ಮುಕ್ತವಾಗಿರುವ “ನೂತನಭೂಮಂಡಲ”ದ ಕುರಿತು ದೇವರ ವಾಕ್ಯವು ಮುನ್ತಿಳಿಸುತ್ತದೆ! (2 ಪೇತ್ರ 3:13; ಕೀರ್ತನೆ 37:11, 29; ಪ್ರಕಟನೆ 21:3-5) ಈ ಪ್ರತೀಕ್ಷೆಯ ಕುರಿತು ಇನ್ನೂ ಹೆಚ್ಚನ್ನು ತಿಳಿದುಕೊಳ್ಳುವುದು ಪ್ರಯೋಜನದಾಯಕವಾಗಿ ಇರುವುದಲ್ಲವೋ? ಇದರ ಕುರಿತು ಮತ್ತು ಇನ್ನಿತರ ಪ್ರಾಮುಖ್ಯ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.
[ಪುಟ 4ರಲ್ಲಿರುವ ಚಿತ್ರ]
ಇತರರ ಮೇಲೆ ಭರವಸೆಯಿಡದೇ ಇರುವುದು, ನಮ್ಮ ಸ್ವಂತ ಸಂತೋಷವನ್ನು ಕಸಿದುಕೊಳ್ಳುತ್ತದೆ
[ಪುಟ 5ರಲ್ಲಿರುವ ಚಿತ್ರ]
ಯೆಹೋವನು ನಮ್ಮ ಭರವಸೆಗೆ ಅತೀ ಅರ್ಹನಾಗಿದ್ದಾನೆ
[ಪುಟ 7ರಲ್ಲಿರುವ ಚಿತ್ರಗಳು]
ಪರಸ್ಪರ ಭರವಸೆಯ ಮೇಲಾಧರಿತವಾದ ಸಂಬಂಧಗಳು ನಮ್ಮೆಲ್ಲರಿಗೆ ಅಗತ್ಯ