ಯೇಸುವಿನ ಮಾನವ ಕುಟುಂಬದಿಂದ ಪಾಠವನ್ನು ಕಲಿಯುವುದು
ಯೇಸುವಿನ ಮಾನವ ಕುಟುಂಬದಿಂದ ಪಾಠವನ್ನು ಕಲಿಯುವುದು
ಭೂಮಿಯ ಮೇಲಿನ ತನ್ನ ಜೀವಿತದ ಮೊದಲ 30 ವರ್ಷಗಳ ವರೆಗೆ, ತನ್ನ ದೀಕ್ಷಾಸ್ನಾನದ ತನಕ ಯೇಸು ಯಾರೊಂದಿಗೆ ಜೀವಿಸುತ್ತಿದ್ದನೋ ಅವನ ಆ ಕುಟುಂಬದ ಸದಸ್ಯರ ಕುರಿತು ನಿಮಗೆ ಏನು ತಿಳಿದಿದೆ? ಸುವಾರ್ತಾ ವೃತ್ತಾಂತಗಳು ನಮಗೆ ಏನನ್ನು ತಿಳಿಯಪಡಿಸುತ್ತವೆ? ಅವನ ಕುಟುಂಬದ ಕುರಿತು ಹೆಚ್ಚನ್ನು ತಿಳಿದುಕೊಳ್ಳುವುದರಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ? ಈ ಪ್ರಶ್ನೆಗಳಿಗೆ ಕೊಡಲ್ಪಡುವ ಉತ್ತರಗಳಿಂದ ನೀವು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ.
ಯೇಸು ತುಂಬ ಶ್ರೀಮಂತ ಮನೆತನದಲ್ಲಿ ಜನಿಸಿದ್ದನೋ? ಅವನ ಸಾಕುತಂದೆಯಾಗಿದ್ದ ಯೋಸೇಫನು ಒಬ್ಬ ಬಡಗಿಯಾಗಿ ಕೆಲಸಮಾಡುತ್ತಿದ್ದನು. ಇದು ಶಾರೀರಿಕ ಪರಿಶ್ರಮವನ್ನು ಅಗತ್ಯಪಡಿಸುವಂಥ ಒಂದು ಕೆಲಸವಾಗಿದ್ದು, ಅನೇಕವೇಳೆ ತೊಲೆಗಳಿಗಾಗಿ ಮರಗಳನ್ನು ಕಡಿಯುವುದೂ ಇದರಲ್ಲಿ ಒಳಗೂಡಿತ್ತು. ಯೇಸುವಿನ ಜನನದ 40 ದಿನಗಳ ಬಳಿಕ ಅವನ ಮಾನವ ಹೆತ್ತವರು ಯೆರೂಸಲೇಮಿಗೆ ಹೋದಾಗ, ಧರ್ಮಶಾಸ್ತ್ರವು ಅಗತ್ಯಪಡಿಸಿದ್ದ ಒಂದು ಯಜ್ಞವನ್ನು ಅರ್ಪಿಸಿದರು. ಧರ್ಮಶಾಸ್ತ್ರವು ನಿರ್ಬಂಧಿಸಿದ್ದ ಒಂದು ಬೆಳವಕ್ಕಿ ಅಥವಾ ಪಾರಿವಾಳದ ಜೊತೆಗೆ ಒಂದು ಕುರಿಯನ್ನೂ ಅವರು ಸರ್ವಾಂಗಹೋಮಕ್ಕಾಗಿ ಅರ್ಪಿಸಿದರೋ? ಇಲ್ಲ. ಬಹುಶಃ ಇಂಥ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇಕಾಗುವಷ್ಟು ಹಣಕಾಸು ಅವರ ಬಳಿ ಇರಲಿಲ್ಲ. ಆದರೂ, ಧರ್ಮಶಾಸ್ತ್ರವು ಬಡವರಿಗಾಗಿ ಒಂದು ಏರ್ಪಾಡನ್ನು ಮಾಡಿತ್ತು. ಆ ಏರ್ಪಾಡಿಗನುಸಾರ, ಯೋಸೇಫ ಮರಿಯರು ‘ಒಂದು ಜೋಡಿ ಬೆಳವಕ್ಕಿಯನ್ನು ಮತ್ತು ಎರಡು ಪಾರಿವಾಳದ ಮರಿಗಳನ್ನು’ ಅರ್ಪಿಸಿದರು. ಅವರು ಕಡಿಮೆ ವೆಚ್ಚದ ಪ್ರಾಣಿಗಳನ್ನು ಆಯ್ಕೆಮಾಡಿದ್ದು, ಸೀಮಿತ ಆದಾಯವಿದ್ದ ಕುಟುಂಬವು ಅವರದಾಗಿತ್ತು ಎಂಬುದನ್ನು ರುಜುಪಡಿಸುತ್ತದೆ.—ಲೂಕ 2:22-24; ಯಾಜಕಕಾಂಡ 12:6, 8.
ಸರ್ವ ಮಾನವಕುಲದ ಭಾವೀ ಅರಸನಾಗಿದ್ದ ಯೇಸು ಕ್ರಿಸ್ತನು, ಬಡವರ ಮಧ್ಯೆ ಅಂದರೆ ತಮ್ಮ ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯಬೇಕಾಗಿದ್ದಂಥ ಜನರ ಮಧ್ಯೆ ಜನಿಸಿದನು ಎಂಬುದನ್ನು ಮತ್ತಾಯ 13:55; ಮಾರ್ಕ 6:3) ಶಕ್ತಿಶಾಲಿ ಆತ್ಮಜೀವಿಯಾಗಿದ್ದ ಯೇಸು ಸ್ವರ್ಗದಲ್ಲಿ “ಐಶ್ವರ್ಯವಂತ”ನಾಗಿದ್ದನಾದರೂ, ನಮಗೋಸ್ಕರ “ಬಡವನಾದನು” ಎಂದು ಬೈಬಲ್ ಹೇಳುತ್ತದೆ. ಒಬ್ಬ ಮಾನವನೋಪಾದಿ ಅವನು ಕೆಳಮಟ್ಟದ ಸ್ಥಾನವನ್ನು ಸ್ವೀಕರಿಸಿ, ಸಾಮಾನ್ಯ ಜನರ ಕುಟುಂಬವೊಂದರಲ್ಲಿ ಬೆಳೆದು ದೊಡ್ಡವನಾದನು. (2 ಕೊರಿಂಥ 8:9; ಫಿಲಿಪ್ಪಿ 2:5-9; ಇಬ್ರಿಯ 2:9) ಯೇಸು ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿರಲಿಲ್ಲ ಮತ್ತು ಇದು ತಾನೇ ಕೆಲವು ಜನರು ಅವನ ಬಳಿ ನಿರಾತಂಕವಾಗಿ ವರ್ತಿಸುವಂತೆ ಸಹಾಯಮಾಡಿದ್ದಿರಬಹುದು. ಅವರು ಅವನ ಸ್ಥಾನಮಾನ ಅಥವಾ ಪದವಿಯಿಂದ ಅಪಕರ್ಷಿತರಾಗಲಿಲ್ಲ. ಅವನ ಬೋಧನೆಗಳಿಗಾಗಿ, ಅವನ ಆಕರ್ಷಕ ಗುಣಗಳಿಗಾಗಿ ಮತ್ತು ಅವನ ಅದ್ಭುತಕಾರ್ಯಗಳಿಗಾಗಿ ಅವರು ಅವನನ್ನು ಗಣ್ಯಮಾಡಸಾಧ್ಯವಿತ್ತು. (ಮತ್ತಾಯ 7:28, 29; 9:19-33; 11:28, 29) ಸಾಧಾರಣವಾದ ಒಂದು ಕುಟುಂಬದಲ್ಲಿ ಯೇಸು ಜನಿಸುವಂತೆ ಅನುಮತಿಸಿದ್ದರಲ್ಲಿ ಯೆಹೋವ ದೇವರ ವಿವೇಕವನ್ನು ನಾವು ಮನಗಾಣಸಾಧ್ಯವಿದೆ.
ನೀವು ಮನಗಾಣಸಾಧ್ಯವಿದೆ. ತನ್ನ ಸಾಕುತಂದೆಯಂತೆಯೇ ಇವನೂ ಒಬ್ಬ ಬಡಗಿಯಾಗಿ ಬೆಳೆದನು. (ಈಗ ನಾವು ಯೇಸುವಿನ ಕುಟುಂಬ ಸದಸ್ಯರನ್ನು ಪರಿಗಣಿಸೋಣ ಮತ್ತು ಅವರಿಂದ ಯಾವ ಪಾಠಗಳನ್ನು ಕಲಿಯಸಾಧ್ಯವಿದೆ ಎಂಬುದನ್ನು ನೋಡೋಣ.
ಯೋಸೇಫ—ನೀತಿವಂತನಾಗಿದ್ದ ಒಬ್ಬ ಮನುಷ್ಯ
ತನಗೆ ನಿಶ್ಚಯವಾಗಿದ್ದ ವಧು ‘ತಾವು ಕೂಡುವುದಕ್ಕಿಂತ ಮುಂಚೆಯೇ’ ಗರ್ಭಿಣಿಯಾಗಿದ್ದಾಳೆ ಎಂಬುದು ಯೋಸೇಫನಿಗೆ ತಿಳಿದುಬಂದಾಗ, ಮರಿಯಳ ಕಡೆಗಿನ ತನ್ನ ಪ್ರೀತಿ ಹಾಗೂ ಯಾವುದನ್ನು ಅನೈತಿಕತೆಯೆಂದು ನೆನಸಸಾಧ್ಯವಿತ್ತೋ ಅದರ ಕಡೆಗಿನ ಹೇಸಿಗೆಭಾವದ ಮಧ್ಯೆ ಅವನು ಬಹಳಷ್ಟು ತೊಳಲಾಡಿದ್ದಿರಬೇಕು. ಈ ಇಡೀ ಸನ್ನಿವೇಶವು, ಅವಳ ಭಾವೀ ಗಂಡನೋಪಾದಿ ಅವನ ಹಕ್ಕನ್ನು ಸಂಪೂರ್ಣವಾಗಿ ಅತಿಕ್ರಮಿಸಿದಂತೆ ಕಂಡುಬಂದಿದ್ದಿರಬಹುದು. ಅವನ ದಿನಗಳಲ್ಲಿ, ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಆ ಪುರುಷನ ಹೆಂಡತಿಯಂತೆಯೇ ಪರಿಗಣಿಸಲಾಗುತ್ತಿತ್ತು. ಯೋಸೇಫನು ಸಾಕಷ್ಟು ಮಟ್ಟಿಗೆ ಆಲೋಚಿಸಿದ ಬಳಿಕ, ವ್ಯಭಿಚಾರಿಣಿಯೋಪಾದಿ ಕಲ್ಲೆಸೆದು ಕೊಲ್ಲಲ್ಪಡುವುದರಿಂದ ಮರಿಯಳನ್ನು ಉಳಿಸಲಿಕ್ಕಾಗಿ ರಹಸ್ಯವಾಗಿ ಅವಳನ್ನು ವಿಚ್ಛೇದಿಸಲು ನಿರ್ಧರಿಸಿದನು.—ಮತ್ತಾಯ 1:18; ಧರ್ಮೋಪದೇಶಕಾಂಡ 22:23, 24.
ಆಗ ಕನಸಿನಲ್ಲಿ ಒಬ್ಬ ದೇವದೂತನು ಯೋಸೇಫನಿಗೆ ಕಾಣಿಸಿಕೊಂಡು ಹೇಳಿದ್ದು: “ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿಕಾಯುವನು.” ಆ ದೈವಿಕ ಮಾರ್ಗದರ್ಶನವನ್ನು ಪಡೆದುಕೊಂಡ ಬಳಿಕ ಯೋಸೇಫನು ಅಪ್ಪಣೆಕೊಟ್ಟ ಹಾಗೇ ಮಾಡಿದನು ಮತ್ತು ಮರಿಯಳನ್ನು ಸೇರಿಸಿಕೊಂಡನು.—ಮತ್ತಾಯ 1:20-24.
ಈ ನಿರ್ಧಾರವನ್ನು ಮಾಡಿದ್ದರಿಂದ, ನೀತಿವಂತನೂ ನಂಬಿಗಸ್ತನೂ ಆಗಿದ್ದ ಈ ವ್ಯಕ್ತಿಯು, ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಏನನ್ನು ಮುಂತಿಳಿಸಿದ್ದನೋ ಅದರ ನೆರವೇರಿಕೆಯಲ್ಲಿ ಒಳಗೂಡಿದವನಾದನು: “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.” (ಯೆಶಾಯ 7:14) ಖಂಡಿತವಾಗಿಯೂ ಯೋಸೇಫನು ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದನು; ಮರಿಯಳ ಚೊಚ್ಚಲಮಗನು ತನ್ನ ಸ್ವಂತ ಮಗನಾಗಿರಲಾರನು ಎಂಬ ವಾಸ್ತವಾಂಶದ ಅರಿವಿದ್ದರೂ, ಮೆಸ್ಸೀಯನ ಸಾಕುತಂದೆಯಾಗುವ ಸುಯೋಗವನ್ನು ಅವನು ಗಣ್ಯಮಾಡಿದನು.
ಮರಿಯಳು ತನ್ನ ಮಗನಿಗೆ ಜನ್ಮನೀಡುವ ವರೆಗೂ ಯೋಸೇಫನು ಅವಳೊಂದಿಗೆ ಸಂಭೋಗ ನಡೆಸಲಿಲ್ಲ. (ಮತ್ತಾಯ 1:25) ಹೊಸದಾಗಿ ಮದುವೆಯಾಗಿದ್ದ ಈ ದಂಪತಿಗೆ ಸಂಭೋಗಾಪೇಕ್ಷೆಯಿಂದ ದೂರವಿರುವುದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿದ್ದಿರಬಹುದು, ಆದರೆ ಆ ಮಗುವಿನ ತಂದೆ ಯಾರು ಎಂಬ ವಿಷಯದಲ್ಲಿ ಯಾವುದೇ ಅಪಾರ್ಥಕ್ಕೆ ಎಡೆಮಾಡಿಕೊಡಲು ಅವರು ಬಯಸಲಿಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಸ್ವನಿಯಂತ್ರಣದ ಎಂಥ ಮಹಾನ್ ಮಾದರಿಯಿದು! ಯೋಸೇಫನು ತನ್ನ ಸಹಜ ಬಯಕೆಗಳಿಗಿಂತಲೂ ಆತ್ಮಿಕ ಮೌಲ್ಯಗಳಿಗೆ ಪ್ರಮುಖತೆ ನೀಡಿದನು.
ತನ್ನ ಸಾಕುಮಗನನ್ನು ಹೇಗೆ ಬೆಳೆಸಬೇಕು ಎಂಬ ವಿಷಯದಲ್ಲಿ ಯೋಸೇಫನು ನಾಲ್ಕು ಸಂದರ್ಭಗಳಲ್ಲಿ ದೇವದೂತರಿಂದ ಮಾರ್ಗದರ್ಶನವನ್ನು ಪಡೆದುಕೊಂಡನು. ಇವುಗಳಲ್ಲಿ ಮೂರು, ಈ ಮಗುವನ್ನು ಎಲ್ಲಿ ಬೆಳೆಸಬೇಕು ಎಂಬುದರ ಕುರಿತಾಗಿತ್ತು. ಈ ಮಾರ್ಗದರ್ಶನಕ್ಕೆ ಆ ಕೂಡಲೆ ವಿಧೇಯತೆ ತೋರಿಸುವುದು ಈ ಮಗುವಿನ ಬದುಕಿ ಉಳಿಯುವಿಕೆಗೆ ಅತ್ಯಾವಶ್ಯಕವಾಗಿತ್ತು. ಆ ಚಿಕ್ಕ ಮಗುವನ್ನು ಮೊದಲು ಐಗುಪ್ತದೇಶಕ್ಕೆ, ತದನಂತರ ಪುನಃ ಇಸ್ರಾಯೇಲ್ಗೆ ಹಿಂದೆ ಕರೆದೊಯ್ಯುವ ಮೂಲಕ ಎಲ್ಲಾ ಸಂದರ್ಭಗಳಲ್ಲೂ ಯೋಸೇಫನು ಒಡನೆಯೇ ಕ್ರಿಯೆಗೈದನು. ಇದು ಹೆರೋದನು ಅಪ್ಪಣೆ ನೀಡಿದ್ದ ಶಿಶುಗಳ ಹತ್ಯಾಕಾಂಡದಿಂದ ಬಾಲಯೇಸುವನ್ನು ಕಾಪಾಡಿತು. ಅಷ್ಟುಮಾತ್ರವಲ್ಲ, ಯೋಸೇಫನ ವಿಧೇಯತೆಯ ಫಲಿತಾಂಶವು ಮೆಸ್ಸೀಯನ ಕುರಿತಾದ ಪ್ರವಾದನೆಗಳ ನೆರವೇರಿಕೆಯಾಗಿತ್ತು.—ಮತ್ತಾಯ 2:13-23.
ಯೇಸು ತನ್ನನ್ನೇ ಪೋಷಿಸಿಕೊಳ್ಳಸಾಧ್ಯವಾಗುವಂತೆ ಯೋಸೇಫನು ಅವನಿಗೆ ಒಂದು ವೃತ್ತಿಯನ್ನು ಕಲಿಸಿದನು. ಹೀಗೆ, ಯೇಸು ಕೇವಲ ‘ಬಡಗಿಯ ಮಗನಾಗಿ’ ಮಾತ್ರವಲ್ಲ “ಬಡಗಿ”ಯಾಗಿಯೂ ಪ್ರಸಿದ್ಧನಾದನು. (ಮತ್ತಾಯ 13:55; ಮಾರ್ಕ 6:3) ಯೇಸು “ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು” ಎಂದು ಅಪೊಸ್ತಲ ಪೌಲನು ಬರೆದನು. ಸಹಜವಾಗಿಯೇ, ಕುಟುಂಬವನ್ನು ಬೆಂಬಲಿಸಲು ಸಹಾಯಮಾಡಲಿಕ್ಕಾಗಿ ಕಷ್ಟಪಟ್ಟು ದುಡಿಯುವುದನ್ನೂ ಇದು ಒಳಗೂಡಿದ್ದಿರಬೇಕು.—ಇಬ್ರಿಯ 4:15.
ಕೊನೆಯದಾಗಿ, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಯೋಸೇಫನ ಬಗ್ಗೆ ತಿಳಿಸಲ್ಪಟ್ಟಿರುವ ಅಂತಿಮ ವೃತ್ತಾಂತದಲ್ಲಿ, ಸತ್ಯಾರಾಧನೆಯ ಕಡೆಗೆ ಅವನಿಗಿದ್ದ ಪೂಜ್ಯಭಾವದ ಕುರಿತಾದ ಪುರಾವೆಯನ್ನು ನಾವು ನೋಡುತ್ತೇವೆ. ಯೋಸೇಫನು ಪಸ್ಕಹಬ್ಬಕ್ಕಾಗಿ ತನ್ನ ಕುಟುಂಬವನ್ನು ಯೆರೂಸಲೇಮಿಗೆ ಕರೆದೊಯ್ದನು. ಧರ್ಮಶಾಸ್ತ್ರದ ಪ್ರಕಾರ ಪುರುಷರು ಮಾತ್ರವೇ ಅಲ್ಲಿಗೆ ಹೋಗುವ ಆವಶ್ಯಕತೆಯಿತ್ತಾದರೂ, ತನ್ನ ಕುಟುಂಬವನ್ನು “ಪ್ರತಿವರುಷವೂ” ಯೆರೂಸಲೇಮಿಗೆ ಕರೆದುಕೊಂಡುಹೋಗುವುದನ್ನು ಯೋಸೇಫನು ಒಂದು ರೂಢಿಯಾಗಿ ಮಾಡಿಕೊಂಡಿದ್ದನು. ಅವನು ಅನೇಕ ತ್ಯಾಗಗಳನ್ನು ಮಾಡಿದನು, ಏಕೆಂದರೆ ಅವರು ನಜರೇತಿನಿಂದ ಯೆರೂಸಲೇಮಿಗೆ ಸುಮಾರು 100 ಕಿಲೊಮೀಟರುಗಳಷ್ಟು ದೂರ ನಡೆಯಬೇಕಾಗಿತ್ತು. ಹಾಗಿದ್ದರೂ, ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿರುವ ಒಂದು ಸಂದರ್ಭದಲ್ಲಿ, ಯೇಸು ಆ ಗುಂಪಿನಿಂದ ಆಕಸ್ಮಿಕವಾಗಿ ತಪ್ಪಿಸಿಕೊಂಡನು. ಅವನು ದೇವಾಲಯದಲ್ಲಿ ಬೋಧಕರ ನಡುವೆ ಕುಳಿತುಕೊಂಡು, ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇರುವುದು ಅವರ ಕಣ್ಣಿಗೆ ಬಿತ್ತು. ಆಗ ಯೇಸು ಕೇವಲ 12 ವರ್ಷದವನಾಗಿದ್ದರೂ, ದೇವರ ವಾಕ್ಯದ ಅಪಾರ ವಿವೇಕ ಹಾಗೂ ಜ್ಞಾನವನ್ನು ಅವನು ತೋರಿಸಿದನು. ಈ ಘಟನೆಯಿಂದ, ಯೇಸುವಿನ ಹೆತ್ತವರು ಅವನನ್ನು ಆತ್ಮಿಕ ಮನೋಭಾವವುಳ್ಳ ಒಬ್ಬ ಹುಡುಗನಾಗಿ ಬೆಳೆಸುತ್ತಾ ಅವನಿಗೆ ಒಳ್ಳೇ ರೀತಿಯಲ್ಲಿ ಕಲಿಸಿದ್ದಿರಬೇಕು ಎಂಬುದು ತಿಳಿದುಬರುತ್ತದೆ. (ಲೂಕ 2:41-50) ಇದಾದ ಸ್ವಲ್ಪ ಸಮಯದ ನಂತರ ಯೋಸೇಫನು ಮರಣಪಟ್ಟಿದ್ದಿರಬೇಕು ಎಂಬುದು ಸುವ್ಯಕ್ತ, ಏಕೆಂದರೆ ಅಂದಿನಿಂದ ಶಾಸ್ತ್ರೀಯ ವೃತ್ತಾಂತಗಳಲ್ಲಿ ಅವನ ಕುರಿತು ಯಾವುದೇ ಉಲ್ಲೇಖವಿಲ್ಲ.
ಹೌದು, ಯೋಸೇಫನು ತನ್ನ ಕುಟುಂಬವನ್ನು ಆತ್ಮಿಕವಾಗಿಯೂ ಶಾರೀರಿಕವಾಗಿಯೂ ಪೋಷಿಸಿದ ಒಬ್ಬ ನೀತಿವಂತ ಪುರುಷನಾಗಿದ್ದನು. ಇಂದು ನಮಗಾಗಿರುವ ದೇವರ ಚಿತ್ತವು ಏನಾಗಿದೆ ಎಂಬುದನ್ನು ನೀವು ವಿವೇಚಿಸಿ ತಿಳಿದುಕೊಳ್ಳುವಾಗ, ನೀವು ಸಹ ಯೋಸೇಫನಂತೆ ನಿಮ್ಮ ಜೀವಿತದಲ್ಲಿ ಆತ್ಮಿಕ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುತ್ತೀರೋ? (1 ತಿಮೊಥೆಯ 2:4, 5) ದೇವರ ವಾಕ್ಯದಲ್ಲಿ ತಿಳಿಸಲ್ಪಟ್ಟಿರುವಂತೆ ದೇವರು ಏನು ಹೇಳುತ್ತಾನೋ ಅದಕ್ಕೆ ನೀವು ಮನಃಪೂರ್ವಕವಾಗಿ ವಿಧೇಯರಾಗಿ, ಯೋಸೇಫನು ತೋರಿಸಿದಂಥ ಅಧೀನತೆಯನ್ನು ತೋರಿಸುತ್ತೀರೋ? ಇತರರೊಂದಿಗೆ ಆತ್ಮಿಕವಾಗಿ ಅರ್ಥಭರಿತವಾದ ಸಂಭಾಷಣೆಗಳನ್ನು ಮಾಡಲು ಸಾಧ್ಯವಾಗುವಂಥ ರೀತಿಯಲ್ಲಿ ನೀವು ನಿಮ್ಮ ಮಕ್ಕಳಿಗೆ ಕಲಿಸುತ್ತೀರೋ?
ಮರಿಯಳು—ದೇವರ ನಿಸ್ವಾರ್ಥ ಸೇವಕಿ
ಯೇಸುವಿನ ತಾಯಿಯಾಗಿದ್ದ ಮರಿಯಳು ದೇವರ ಅತ್ಯುತ್ತಮ ಸೇವಕಿಯಾಗಿದ್ದಳು. ಅವಳು ಒಂದು ಮಗುವಿಗೆ ಜನನ ನೀಡಲಿದ್ದಾಳೆ ಎಂದು ಗಬ್ರಿಯೇಲ ದೂತನು ಹೇಳಿದಾಗ, ಅವಳಿಗೆ ಆಶ್ಚರ್ಯವಾಯಿತು. ಒಬ್ಬ ಕನ್ಯೆಯಾಗಿದ್ದ ಅವಳು “ಪುರುಷನೊಂದಿಗೆ ಸಂಭೋಗ” (NW) ನಡೆಸಿರಲಿಲ್ಲ. ಆ ಜನನವು ಪವಿತ್ರಾತ್ಮದ ಸಹಾಯದಿಂದ ಆಗಲಿತ್ತು ಎಂಬುದನ್ನು ತಿಳಿದ ಬಳಿಕ, ಆ ಸಂದೇಶವನ್ನು ದೀನಭಾವದಿಂದ ಅಂಗೀಕರಿಸುತ್ತಾ ಅವಳು ಹೇಳಿದ್ದು: “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ ಅಂದಳು.” (ಲೂಕ 1:30-38) ಅವಳು ಈ ಆತ್ಮಿಕ ಸುಯೋಗವನ್ನು ಎಷ್ಟು ಅಮೂಲ್ಯವಾಗಿ ಪರಿಗಣಿಸಿದಳೆಂದರೆ, ತನ್ನ ಈ ನಿರ್ಧಾರವು ತಂದೊಡ್ಡಬಹುದಾದ ಯಾವುದೇ ಕಷ್ಟತೊಂದರೆಯನ್ನು ಸಹಿಸಲು ಅವಳು ಮನಃಪೂರ್ವಕವಾಗಿ ಸಿದ್ಧಳಾಗಿದ್ದಳು.
ಈ ನೇಮಕವನ್ನು ಸ್ವೀಕರಿಸಿದ್ದು ಒಬ್ಬ ಸ್ತ್ರೀಯೋಪಾದಿ ಅವಳ ಇಡೀ ಜೀವಿತವನ್ನೇ ಬದಲಾಯಿಸಿತು ಎಂಬುದಂತೂ ನಿಜ. ತನ್ನ ಶುದ್ಧೀಕರಣಕ್ಕಾಗಿ ಅವಳು ಯೆರೂಸಲೇಮಿಗೆ ಹೋದಾಗ, ದೇವಭಕ್ತನಾಗಿದ್ದ ಸಿಮೆಯೋನನೆಂಬ ಹೆಸರಿನ ಒಬ್ಬ ವೃದ್ಧ ಪುರುಷನು ಅವಳಿಗೆ ಹೇಳಿದ್ದು: “ನಿನ್ನ ಪ್ರಾಣಕ್ಕಂತೂ ಅಲಗು ನಾಟಿದಂತಾಗುವದು.” ಲೂಕ 2:25-35) ಯೇಸು ಅನೇಕರಿಂದ ತಿರಸ್ಕರಿಸಲ್ಪಡುವುದನ್ನು ಹಾಗೂ ಅಂತಿಮವಾಗಿ ಒಂದು ಯಾತನಾಸ್ತಂಭಕ್ಕೆ ಜಡಿಯಲ್ಪಡುವುದನ್ನು ನೋಡಿದಾಗ ಮರಿಯಳಿಗೆ ಹೇಗನಿಸುವುದು ಎಂಬುದನ್ನು ಅವನು ಈ ಮಾತುಗಳಿಂದ ಸೂಚಿಸುತ್ತಿದ್ದನು ಎಂಬುದಂತೂ ಸುವ್ಯಕ್ತ.
(ಯೇಸು ಬೆಳೆದು ದೊಡ್ಡವನಾದಂತೆ, ಮರಿಯಳು “ತನ್ನ ಹೃದಯದಲ್ಲೇ ನಿರ್ಣಯಗಳನ್ನು ಮಾಡುತ್ತಾ,” ಅವನ ಜೀವಿತದಲ್ಲಿ ಏನು ಸಂಭವಿಸಿತೋ ಅದರ ಮಾನಸಿಕ ದಾಖಲೆಯನ್ನು ಇಟ್ಟಳು. (ಲೂಕ 2:19, 51, NW) ಯೋಸೇಫನಂತೆ ಇವಳೂ ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದಳು ಮತ್ತು ಪ್ರವಾದನೆಗಳನ್ನು ನೆರವೇರಿಸಿದಂಥ ಘಟನೆಗಳು ಹಾಗೂ ಹೇಳಿಕೆಗಳನ್ನು ಅಮೂಲ್ಯವಾಗಿ ಪರಿಗಣಿಸಿದಳು. ಗಬ್ರಿಯೇಲ ದೂತನು ಅವಳಿಗೆ ಏನು ಹೇಳಿದನೋ ಅದು ಅವಳ ಮನಸ್ಸಿನ ಮೇಲೆ ಬಲವಾಗಿ ಅಚ್ಚೊತ್ತಿದ್ದಿರಬೇಕು: “ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು [“ಯೆಹೋವನು,” NW] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.” (ಲೂಕ 1:32, 33) ಹೌದು, ಮೆಸ್ಸೀಯನ ಮಾನವ ತಾಯಿಯಾಗುವ ಸುಯೋಗವನ್ನು ಅವಳು ಗಂಭೀರವಾಗಿ ಪರಿಗಣಿಸಿದಳು.
ತನ್ನ ಸಂಬಂಧಿಕಳೂ ಅದ್ಭುತಕರವಾದ ರೀತಿಯಲ್ಲಿ ಗರ್ಭವತಿಯಾಗಿದ್ದವಳೂ ಆದ ಎಲಿಸಬೇತಳನ್ನು ಮರಿಯಳು ಸಂಧಿಸಿದಾಗ, ಅವಳ ಆತ್ಮಿಕತೆಯು ಪುನಃ ಸುವ್ಯಕ್ತವಾಯಿತು. ಅವಳನ್ನು ಭೇಟಿಯಾದಾಗ ಮರಿಯಳು ಯೆಹೋವನನ್ನು ಸ್ತುತಿಸಿದಳು ಮತ್ತು ದೇವರ ವಾಕ್ಯಕ್ಕಾಗಿರುವ ತನ್ನ ಪ್ರೀತಿಯನ್ನು ಪ್ರಕಟಪಡಿಸಿದಳು. 1 ಸಮುವೇಲ 2ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಹನ್ನಳ ಪ್ರಾರ್ಥನೆಯ ಕುರಿತು ಪ್ರಸ್ತಾಪಿಸಿದಳು ಮಾತ್ರವಲ್ಲ ಹೀಬ್ರು ಶಾಸ್ತ್ರವಚನಗಳ ಇತರ ಪುಸ್ತಕಗಳಿಂದ ಕೆಲವು ವಿಚಾರಗಳನ್ನೂ ಒಳಗೂಡಿಸಿದಳು. ಶಾಸ್ತ್ರವಚನಗಳ ಕುರಿತಾದ ಇಂಥ ಜ್ಞಾನವು, ಶ್ರದ್ಧಾಳುವಾದ ಹಾಗೂ ದೇವಭಯವಿದ್ದ ತಾಯಿಯಾಗಲು ಅವಳು ಅರ್ಹಳಾಗಿದ್ದಾಳೆ ಎಂಬುದನ್ನು ತೋರಿಸಿತು. ತನ್ನ ಮಗನನ್ನು ಆತ್ಮಿಕವಾಗಿ ಪೋಷಿಸುವುದರಲ್ಲಿ ಅವಳು ಯೋಸೇಫನೊಂದಿಗೆ ಸಹಕರಿಸಿದಳು.—ಆದಿಕಾಂಡ 30:13; 1 ಸಮುವೇಲ 2:1-10; ಮಲಾಕಿಯ 3:12; ಲೂಕ 1:46-55.
ಮೆಸ್ಸೀಯನಾದ ತನ್ನ ಪುತ್ರನಲ್ಲಿ ಮರಿಯಳಿಗೆ ಅಪಾರ ನಂಬಿಕೆಯಿತ್ತು, ಮತ್ತು ಯೇಸುವಿನ ಮರಣದ ಬಳಿಕವೂ ಆ ನಂಬಿಕೆ ಸ್ವಲ್ಪವೂ ಕಡಿಮೆಯಾಗಲಿಲ್ಲ. ಅವನ ಪುನರುತ್ಥಾನವಾದ ಕೂಡಲೆ, ಅಪೊಸ್ತಲರೊಂದಿಗೆ ಪ್ರಾರ್ಥನೆಗಾಗಿ ಕೂಡಿಬಂದಿದ್ದ ನಂಬಿಗಸ್ತ ಶಿಷ್ಯರಲ್ಲಿ ಮರಿಯಳೂ ಇದ್ದಳು. (ಅ. ಕೃತ್ಯಗಳು 1:13, 14) ತನ್ನ ಪ್ರಿಯ ಪುತ್ರನು ಯಾತನಾಸ್ತಂಭದ ಮೇಲೆ ಸಾಯುವುದನ್ನು ನೋಡುವ ಕಡುವೇದನೆಯನ್ನು ತಾಳಿಕೊಳ್ಳಬೇಕಾಗಿತ್ತಾದರೂ, ಅವಳು ತನ್ನ ನಂಬಿಗಸ್ತಿಕೆಯನ್ನು ಕಾಪಾಡಿಕೊಂಡಳು.
ಮರಿಯಳ ಜೀವಿತದ ಕುರಿತು ಕಲಿಯುವ ಮೂಲಕ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ? ಯಾವುದೇ ತ್ಯಾಗಗಳು ಒಳಗೂಡಿರುವುದಾದರೂ ದೇವರ ಸೇವೆಯನ್ನು ಮಾಡುವ ಸುಯೋಗವನ್ನು ನೀವು ಸ್ವೀಕರಿಸುವಿರೋ? ಇಂದು ಈ ಸುಯೋಗದ ಗಂಭೀರತೆಯ ಕುರಿತು ನೀವು ಚಿಂತಿತರಾಗಿದ್ದೀರೋ? ಯೇಸು ಏನನ್ನು ಮುಂತಿಳಿಸಿದನೋ ಅದನ್ನು ನೀವು ಮನಸ್ಸಿನಲ್ಲಿಟ್ಟುಕೊಂಡು, ಇಂದು ಏನು ಸಂಭವಿಸುತ್ತಿದೆಯೋ ಅದರೊಂದಿಗೆ ಇದನ್ನು ಹೋಲಿಸಿ ನೋಡುತ್ತಾ ‘ನಿಮ್ಮ ಹೃದಯದಲ್ಲೇ ನಿರ್ಣಯಗಳನ್ನು ಮಾಡುತ್ತೀರೋ’? (ಮತ್ತಾಯ, 24 ಮತ್ತು 25ನೆಯ ಅಧ್ಯಾಯಗಳು; ಮಾರ್ಕ, 13ನೆಯ ಅಧ್ಯಾಯ; ಲೂಕ, 21ನೆಯ ಅಧ್ಯಾಯ) ದೇವರ ವಾಕ್ಯದಲ್ಲಿ ಸುಶಿಕ್ಷಿತರಾಗುವುದರಲ್ಲಿ, ನಿಮ್ಮ ಸಂಭಾಷಣೆಗಳಲ್ಲಿ ಅದನ್ನು ಆಗಿಂದಾಗ್ಗೆ ಉಪಯೋಗಿಸುವುದರಲ್ಲಿ ನೀವು ಮರಿಯಳನ್ನು ಅನುಕರಿಸುತ್ತೀರೋ? ಯೇಸುವಿನ ಹಿಂಬಾಲಕರಾಗಿರುವ ಕಾರಣ ನೀವು ಅನುಭವಿಸಬಹುದಾದ ಮಾನಸಿಕ ಬೇಗುದಿಯ ಹೊರತಾಗಿಯೂ ನೀವು ಅವನಲ್ಲಿ ನಿಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುತ್ತೀರೋ?
ಯೇಸುವಿನ ತಮ್ಮಂದಿರು—ಬದಲಾವಣೆಯ ಸಾಧ್ಯತೆಯಿದೆ
ಯೇಸುವಿನ ಮರಣದ ತನಕ ಅವನ ತಮ್ಮಂದಿರು ಅವನಲ್ಲಿ ನಂಬಿಕೆಯನ್ನಿಡಲಿಲ್ಲವೆಂಬಂತೆ ತೋರುತ್ತದೆ. ಆದುದರಿಂದಲೇ ಯೇಸು ಯಾತನಾಸ್ತಂಭದ ಮೇಲೆ ಮರಣಪಟ್ಟಾಗ ಅವರು ಅಲ್ಲಿ ಅನುಪಸ್ಥಿತರಾಗಿರಬಹುದು ಮತ್ತು ಈ ಕಾರಣದಿಂದಲೇ ಅವನು ತನ್ನ ತಾಯಿಯ ಜವಾಬ್ದಾರಿಯನ್ನು ಅಪೊಸ್ತಲ ಯೋಹಾನನಿಗೆ ವಹಿಸಿಕೊಟ್ಟಿದ್ದಿರಬಹುದು. ಒಂದು ಸಂದರ್ಭದಲ್ಲಿ ಯೇಸುವಿಗೆ “ಹುಚ್ಚುಹಿಡಿದದೆ” ಎಂದು ಹೇಳುವ ಮೂಲಕ, ತಾವು ಅವನನ್ನು ಎಳ್ಳಷ್ಟೂ ಗಣ್ಯಮಾಡುವುದಿಲ್ಲ ಎಂಬುದನ್ನು ಯೇಸುವಿನ ಕುಟುಂಬದ ಸದಸ್ಯರು ತೋರಿಸಿದರು. (ಮಾರ್ಕ 3:21) ಯೇಸುವಿಗೆ ಅವಿಶ್ವಾಸಿಗಳಾಗಿದ್ದ ಕುಟುಂಬ ಸದಸ್ಯರು ಇದ್ದದರಿಂದ, ಇಂದು ಯಾರ ಮನೆವಾರ್ತೆಯಲ್ಲಿ ಅವಿಶ್ವಾಸಿಗಳಿದ್ದಾರೋ ಅವರು, ನಂಬಿಕೆಯ ವಿಷಯದಲ್ಲಿ ಸಂಬಂಧಿಕರೆಲ್ಲಾ ಗೇಲಿಮಾಡುವಾಗ ಇವರಿಗೆ ಹೇಗನಿಸುತ್ತದೆ ಎಂಬುದನ್ನು ಯೇಸು ಅರ್ಥಮಾಡಿಕೊಳ್ಳುತ್ತಾನೆ ಎಂಬ ಆಶ್ವಾಸನೆಯಿಂದಿರಸಾಧ್ಯವಿದೆ.
ಆದರೂ, ಯೇಸುವಿನ ಪುನರುತ್ಥಾನದ ಬಳಿಕ ಅವನ ಸಹೋದರರು ಅವನಲ್ಲಿ ನಂಬಿಕೆಯಿಡಲು ಆರಂಭಿಸಿದರು ಎಂಬುದು ಸುವ್ಯಕ್ತವಾಗುತ್ತದೆ. ಸಾ.ಶ. 33ರ ಪಂಚಾಶತ್ತಮಕ್ಕೆ ಮುಂಚೆ ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಗುಂಪಿನಲ್ಲಿ ಇವರೂ ಇದ್ದರು ಮತ್ತು ಅಪೊಸ್ತಲರೊಂದಿಗೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದರು. (ಅ. ಕೃತ್ಯಗಳು 1:14) ಅವರ ಮಲಸಹೋದರನ ಪುನರುತ್ಥಾನವು, ಅವರೂ ಅವನ ಶಿಷ್ಯರಾಗಿ ಪರಿಣಮಿಸುವ ಹಂತದ ವರೆಗೆ ಅವರ ಹೃದಯವನ್ನು ಬದಲಾಯಿಸಿತೆಂಬುದು ಸುಸ್ಪಷ್ಟ. ನಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವಂಥ ಸಂಬಂಧಿಕರ ವಿಷಯದಲ್ಲಿಯೂ ನಾವು ಎಂದಿಗೂ ಪ್ರಯತ್ನವನ್ನು ನಿಲ್ಲಿಸಬಾರದು.
ಯಾರಿಗೆ ಯೇಸು ವ್ಯಕ್ತಿಗತವಾಗಿ ಕಾಣಿಸಿಕೊಂಡನೋ ಅವನ ಆ ಮಲತಮ್ಮನಾಗಿದ್ದ ಯಾಕೋಬನು ಕ್ರೈಸ್ತ ಸಭೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದನು ಎಂದು ಶಾಸ್ತ್ರವಚನಗಳು ಪ್ರಸ್ತುತಪಡಿಸುತ್ತವೆ. ಅವನು ತನ್ನ ಜೊತೆ ಕ್ರೈಸ್ತರಿಗೆ ದೈವಪ್ರೇರಿತವಾದ ಒಂದು ಪತ್ರವನ್ನು ಬರೆದು, ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಬುದ್ಧಿಹೇಳಿದನು. (ಅ. ಕೃತ್ಯಗಳು 15:6-29; 1 ಕೊರಿಂಥ 15:7; ಗಲಾತ್ಯ 1:18, 19; 2:9; ಯಾಕೋಬ 1:1) ಯೇಸುವಿನ ಇನ್ನೊಬ್ಬ ಮಲತಮ್ಮನಾಗಿದ್ದ ಯೂದನು, ನಂಬಿಕೆಗೋಸ್ಕರ ಬಲವಾದ ಹೋರಾಟವನ್ನು ನಡೆಸುವಂತೆ ಜೊತೆ ವಿಶ್ವಾಸಿಗಳನ್ನು ಉತ್ತೇಜಿಸುತ್ತಾ ಒಂದು ಪ್ರೇರಿತ ಪತ್ರವನ್ನು ಬರೆದನು. (ಯೂದ 1) ಜೊತೆ ಕ್ರೈಸ್ತರನ್ನು ಒಡಂಬಡಿಸಲಿಕ್ಕಾಗಿ ಯೇಸುವಿನೊಂದಿಗೆ ತಮಗಿರುವ ಸಂಬಂಧದ ಮೇಲೆ ಆಧಾರಿತವಾದ ಅಧಿಕಾರ ತಮಗಿದೆ ಎಂಬುದನ್ನು ಯಾಕೋಬನಾಗಲಿ ಯೂದನಾಗಲಿ ಎಂದೂ ತಮ್ಮ ಪತ್ರಗಳಲ್ಲಿ ಸೂಚಿಸಲಿಲ್ಲವೆಂಬುದು ಗಮನಾರ್ಹ ಸಂಗತಿಯಾಗಿದೆ. ಇವರಿಂದ ನಾವು ವಿನಯಶೀಲತೆಯಲ್ಲಿ ಎಷ್ಟು ಅಮೂಲ್ಯವಾದ ಪಾಠವನ್ನು ಕಲಿಯಸಾಧ್ಯವಿದೆ!
ಆದುದರಿಂದ, ಯೇಸುವಿನ ಕುಟುಂಬದಿಂದ ನಾವು ಕಲಿಯಬಹುದಾದ ಕೆಲವು ವಿಷಯಗಳು ಯಾವುವು? ನಿಶ್ಚಯವಾಗಿಯೂ ಇವು ಭಕ್ತಿಯ ಕುರಿತಾದ ಪಾಠಗಳಾಗಿದ್ದು, ಈ ಮುಂದಿನ ವಿಧಗಳಲ್ಲಿ ಅವುಗಳನ್ನು ತೋರಿಸಸಾಧ್ಯವಿದೆ: (1) ದೇವರು ವ್ಯಕ್ತಪಡಿಸಿದ ಚಿತ್ತಕ್ಕೆ ನಂಬಿಗಸ್ತಿಕೆಯಿಂದ ಅಧೀನರಾಗಿರಿ, ಮತ್ತು ಹಾಗೆ ಮಾಡುವುದರಿಂದ ಉಂಟಾಗುವ ಎಲ್ಲಾ ಪರೀಕ್ಷೆಗಳನ್ನು ಎದುರಿಸಿರಿ. (2) ತ್ಯಾಗಗಳನ್ನು ಮಾಡುವ ಆವಶ್ಯಕತೆಯಿರುವುದಾದರೂ ಆತ್ಮಿಕ ಮೌಲ್ಯಗಳಿಗೆ ಪ್ರಥಮ ಸ್ಥಾನವನ್ನು ಕೊಡಿರಿ. (3) ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿ ನಿಮ್ಮ ಮಕ್ಕಳಿಗೆ ತರಬೇತಿ ನೀಡಿರಿ. (4) ನಿಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವಂಥ ಕುಟುಂಬ ಸದಸ್ಯರ ವಿಷಯದಲ್ಲಿ ಎಂದಿಗೂ ಪ್ರಯತ್ನವನ್ನು ನಿಲ್ಲಿಸದಿರಿ. (5) ಕ್ರೈಸ್ತ ಸಭೆಯಲ್ಲಿ ಅಗ್ರಗಣ್ಯರಾಗಿರುವಂಥ ಜನರೊಂದಿಗೆ ನಿಮಗಿರಬಹುದಾದ ಯಾವುದೇ ಸಂಬಂಧದ ಕುರಿತು ಜಂಬಕೊಚ್ಚಿಕೊಳ್ಳಬೇಡಿ. ಹೌದು, ಯೇಸುವಿನ ಮಾನವ ಕುಟುಂಬದ ಕುರಿತು ಕಲಿಯುವುದು, ನಾವು ಅವನಿಗೆ ಇನ್ನಷ್ಟು ಸಮೀಪವಾಗುವಂತೆ ಮತ್ತು ಯೇಸುವಿನ ಬಾಲ್ಯಾವಸ್ಥೆಯಲ್ಲಿ ಅವನನ್ನು ಪೋಷಿಸಲಿಕ್ಕಾಗಿ ಒಂದು ಸಾಧಾರಣವಾದ ಕುಟುಂಬವನ್ನು ಯೆಹೋವನು ಆಯ್ಕೆಮಾಡಿದ್ದಕ್ಕಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸುವಂತೆ ಮಾಡುತ್ತದೆ.
[ಪುಟ 4, 5ರಲ್ಲಿರುವ ಚಿತ್ರಗಳು]
ಯೋಸೇಫನು ಮರಿಯಳನ್ನು ತನ್ನ ಪತ್ನಿಯಾಗಿ ಸೇರಿಸಿಕೊಂಡನು ಮತ್ತು ಈ ಮೂಲಕ ಮೆಸ್ಸೀಯನ ಕುರಿತಾದ ಪ್ರವಾದನೆಗಳ ನೆರವೇರಿಕೆಯಲ್ಲಿ ಒಳಗೂಡಿದವನಾದನು
[ಪುಟ 6ರಲ್ಲಿರುವ ಚಿತ್ರಗಳು]
ಯೋಸೇಫ ಮರಿಯರು ತಮ್ಮ ಮಕ್ಕಳಿಗೆ ಆತ್ಮಿಕ ಮೌಲ್ಯಗಳನ್ನು ಹಾಗೂ ಕೆಲಸದ ಪಾತ್ರವನ್ನು ಕಲಿಸಿದರು
[ಪುಟ 7ರಲ್ಲಿರುವ ಚಿತ್ರಗಳು]
ಯೇಸುವಿನ ತಮ್ಮಂದಿರು ಒಂದು ಆತ್ಮಿಕ ಮನೆವಾರ್ತೆಯಲ್ಲಿ ಬೆಳೆಸಲ್ಪಟ್ಟವರಾಗಿದ್ದರೂ, ಅವನ ಮರಣದ ತನಕ ಅವರು ಅವನಲ್ಲಿ ನಂಬಿಕೆಯಿಡಲಿಲ್ಲ
[ಪುಟ 8ರಲ್ಲಿರುವ ಚಿತ್ರಗಳು]
ಯೇಸುವಿನ ಮಲತಮ್ಮಂದಿರಾದ ಯಾಕೋಬ ಮತ್ತು ಯೂದರು ಜೊತೆ ಕ್ರೈಸ್ತರನ್ನು ಉತ್ತೇಜಿಸಿದರು