ಎಲ್ಲರೂ ಯೆಹೋವನ ಘನವನ್ನು ಪ್ರಕಟಪಡಿಸಲಿ
ಎಲ್ಲರೂ ಯೆಹೋವನ ಘನವನ್ನು ಪ್ರಕಟಪಡಿಸಲಿ
“ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ. ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ.”—ಕೀರ್ತನೆ 96:7, 8.
ಇಷಯನ ಮಗನಾದ ದಾವೀದನು ಬೇತ್ಲೆಹೇಮಿನ ಆಸುಪಾಸಿನಲ್ಲಿ ಒಬ್ಬ ಕುರುಬನಾಗಿ ಬೆಳೆದನು. ಆ ಏಕಾಂತವಾದ ಹುಲ್ಲುಗಾವಲುಗಳಲ್ಲಿ ತನ್ನ ತಂದೆಯ ಮಂದೆಗಳನ್ನು ಕಾಯುತ್ತಿದ್ದಾಗ, ಪ್ರಶಾಂತವಾದ ರಾತ್ರಿಗಳಲ್ಲಿ ಅವನೆಷ್ಟು ಬಾರಿ ತಾರೆಗಳಿಂದ ತುಂಬಿದ್ದ ವಿಸ್ತಾರವಾದ ಆಕಾಶವನ್ನು ಕಣ್ಣೆತ್ತಿ ನೋಡಿದ್ದಿರಬೇಕು! ಆದುದರಿಂದಲೇ, ಅವನ ಮನಸ್ಸಿನಲ್ಲಿ ಈ ರೀತಿಯ ಸಜೀವವಾದ ಅಭಿವ್ಯಕ್ತಿಗಳು ಹೊರಹೊಮ್ಮಿದವು, ಮತ್ತು ಪವಿತ್ರಾತ್ಮದಿಂದ ಪ್ರೇರಿಸಲ್ಪಟ್ಟವನಾಗಿ ಅವನು 19ನೆಯ ಕೀರ್ತನೆಯ ಸುಂದರವಾದ ಮಾತುಗಳನ್ನು ರಚಿಸಿ ಹಾಡಿದನು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿರುತ್ತವೆ.”—ಕೀರ್ತನೆ 19:1, 4.
2 ಯೆಹೋವನು ಭಯಚಕಿತಗೊಳಿಸುವ ರೀತಿಯಲ್ಲಿ ಸೃಷ್ಟಿಸಿರುವ ಆಕಾಶವು ಶಬ್ದವಿಲ್ಲದೆ, ಮಾತಿಲ್ಲದೆ, ಸ್ವರವಿಲ್ಲದೆ ಆತನ ಘನವನ್ನು ದಿನದಿಂದ ದಿನಕ್ಕೆ, ರಾತ್ರಿಯಿಂದ ರಾತ್ರಿಗೆ ಪ್ರಕಟಪಡಿಸುತ್ತದೆ. ಸೃಷ್ಟಿಯು ಎಡೆಬಿಡದೆ ದೇವರ ಘನತೆಯನ್ನು ಪ್ರಚುರಪಡಿಸುತ್ತದೆ, ಮತ್ತು ಭೂನಿವಾಸಿಗಳೆಲ್ಲರೂ ನೋಡುವಂತೆ “ಭೂಮಿಯಲ್ಲೆಲ್ಲಾ” ಹರಡಿಕೊಂಡಿರುವ ಈ ಮೌನ ಸಾಕ್ಷ್ಯದ ಎದುರಿನಲ್ಲಿ ನಾವೆಷ್ಟು ಅಲ್ಪಮಾತ್ರರು ಎಂಬುದು ನಮ್ಮ ಮನಸ್ಸಿಗೆ ತಟ್ಟುತ್ತದೆ. ಆದರೂ, ಸೃಷ್ಟಿಯ ಮೌನ ಸಾಕ್ಷಿಯೊಂದೇ ಸಾಲದು. ಈ ಮೌನ ಸಾಕ್ಷ್ಯಕ್ಕೆ ಮಾನವರು ತಮ್ಮ ಸ್ವರವನ್ನು ಸೇರಿಸುವಂತೆ ಪ್ರೋತ್ಸಾಹಿಸಲಾಗಿದೆ. ಒಬ್ಬ ಅನಾಮಧೇಯ ಕೀರ್ತನೆಗಾರನು ಈ ಪ್ರೇರಿತ ಮಾತುಗಳೊಂದಿಗೆ ನಂಬಿಗಸ್ತ ಆರಾಧಕರನ್ನು ಸಂಬೋಧಿಸುತ್ತಾನೆ: “ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ. ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ.” (ಕೀರ್ತನೆ 96:7, 8) ಯೆಹೋವನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುವವರು ಆ ಪ್ರಚೋದನೆಗೆ ಪ್ರತಿಕ್ರಿಯಿಸುವುದರಲ್ಲಿ ಪುಳಕಿತಗೊಳ್ಳುತ್ತಾರೆ. ಆದರೂ, ದೇವರಿಗೆ ಘನವನ್ನು ಸಲ್ಲಿಸುವುದರಲ್ಲಿ ಏನು ಒಳಗೂಡಿದೆ?
3 ಕೇವಲ ಮಾತುಗಳಿಗಿಂತಲೂ ಇದರಲ್ಲಿ ಹೆಚ್ಚಿನದ್ದು ಒಳಗೂಡಿದೆ. ಯೆಶಾಯನ ದಿನದ ಇಸ್ರಾಯೇಲ್ಯರು ತಮ್ಮ ತುಟಿಗಳಿಂದ ದೇವರನ್ನು ಘನಪಡಿಸಿದರು, ಆದರೆ ಹೆಚ್ಚಿನವರಲ್ಲಿ ಪ್ರಾಮಾಣಿಕತೆಯ ಕೊರತೆಯಿತ್ತು. ಯೆಶಾಯನ ಮೂಲಕ ಯೆಹೋವನು ತಿಳಿಸಿದ್ದು: “ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ, ಮನಸ್ಸನ್ನೋ ದೂರಮಾಡಿ”ಕೊಂಡಿದ್ದಾರೆ. (ಯೆಶಾಯ 29:13) ಇಂಥ ವ್ಯಕ್ತಿಗಳಿಂದ ಸಲ್ಲಿಸಲ್ಪಡುವ ಯಾವುದೇ ಸ್ತುತಿಯು ನಿರರ್ಥಕವಾಗಿರುತ್ತದೆ. ಸ್ತುತಿಯು ಅರ್ಥಗರ್ಭಿತವಾಗಿರಬೇಕಾದರೆ, ಅದು ಯೆಹೋವನಿಗಾಗಿರುವ ಪ್ರೀತಿಯಿಂದ ತುಂಬಿದ ಹೃದಯದಿಂದ ಮತ್ತು ಆತನ ಅದ್ವಿತೀಯ ಘನತೆಯ ಪ್ರಾಮಾಣಿಕ ಪರಿಗಣನೆಯಿಂದ ಹೊರಹೊಮ್ಮಬೇಕು. ಯೆಹೋವನು ಮಾತ್ರ ಸೃಷ್ಟಿಕರ್ತನಾಗಿದ್ದಾನೆ. ಆತನು ಸರ್ವಶಕ್ತನಾಗಿದ್ದಾನೆ, ನ್ಯಾಯವಂತನಾಗಿದ್ದಾನೆ, ಪ್ರೀತಿಯ ಸಾಕಾರರೂಪವೇ ಆಗಿದ್ದಾನೆ. ಆತನು ನಮ್ಮ ರಕ್ಷಣೆಯ ಮೂಲಕರ್ತನಾಗಿದ್ದಾನೆ ಮತ್ತು ಭೂಪರಲೋಕಗಳಲ್ಲಿರುವ ಸಕಲರ ಅಧೀನತೆಯನ್ನು ಪಡೆದುಕೊಳ್ಳಲು ಅರ್ಹನಾದ ಪರಮಾಧಿಕಾರಿಯಾಗಿದ್ದಾನೆ. (ಪ್ರಕಟನೆ 4:11; 19:1) ನಾವು ಈ ವಿಷಯಗಳನ್ನು ನಿಜವಾಗಿಯೂ ನಂಬುವುದಾದರೆ, ನಮ್ಮ ಪೂರ್ಣ ಹೃದಯದಿಂದ ಆತನನ್ನು ಘನಪಡಿಸೋಣ.
4 ನಾವು ದೇವರನ್ನು ಹೇಗೆ ಘನಪಡಿಸಬಹುದೆಂಬುದನ್ನು ಯೇಸು ಕ್ರಿಸ್ತನು ತಿಳಿಸಿದನು. ಅವನು ಹೇಳಿದ್ದು: “ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.” (ಯೋಹಾನ 15:8) ನಾವು ಬಹಳ ಫಲಕೊಡುವುದಾದರೂ ಹೇಗೆ? ಮೊದಲನೆಯದಾಗಿ, ‘ರಾಜ್ಯದ ಸುವಾರ್ತೆಯನ್ನು’ ಸಾರುವುದರಲ್ಲಿ ಪೂರ್ಣ ಪ್ರಾಣದಿಂದ ಭಾಗವಹಿಸುವ ಮೂಲಕವೇ; ಮತ್ತು ಹೀಗೆ ನಾವು ‘ಕಣ್ಣಿಗೆ ಕಾಣದಿರುವ ದೇವರ ಗುಣಲಕ್ಷಣಗಳ’ ಕುರಿತು ‘ತಿಳಿಸುವುದರಲ್ಲಿ’ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳೊಂದಿಗೆ ಸೇರಿಕೊಳ್ಳುವೆವು. (ಮತ್ತಾಯ 24:14; ರೋಮಾಪುರ 1:20) ಮಾತ್ರವಲ್ಲದೆ, ಈ ರೀತಿಯಲ್ಲಿ ನಾವೆಲ್ಲರೂ ಹೊಸ ಶಿಷ್ಯರನ್ನು ಮಾಡುವುದರಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಗಳಾಗುತ್ತೇವೆ ಮತ್ತು ಇವರೂ ಯೆಹೋವ ದೇವರಿಗೆ ಸ್ತುತಿಗೀತೆಯನ್ನು ಹಾಡುವುದರಲ್ಲಿ ಧ್ವನಿಗೂಡಿಸುತ್ತಾರೆ. ಎರಡನೆಯದಾಗಿ, ನಾವು ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ನಮ್ಮಲ್ಲಿ ಬೆಳೆಸಿಕೊಳ್ಳುತ್ತೇವೆ ಮತ್ತು ಯೆಹೋವ ದೇವರ ಅತ್ಯುನ್ನತ ಗುಣಗಳನ್ನು ಅನುಕರಿಸಲು ಪ್ರಯತ್ನಿಸುತ್ತೇವೆ. (ಗಲಾತ್ಯ 5:22, 23; ಎಫೆಸ 5:1; ಕೊಲೊಸ್ಸೆ 3:9ಬಿ, 10) ಇದರ ಫಲಿತಾಂಶವಾಗಿ, ನಮ್ಮ ದೈನಂದಿನ ನಡತೆಯು ದೇವರನ್ನು ಘನಪಡಿಸುತ್ತದೆ.
“ಭೂಮಿಯಲ್ಲೆಲ್ಲಾ”
5 ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ, ಇತರರೊಂದಿಗೆ ತಮ್ಮ ನಂಬಿಕೆಯನ್ನು ಹಂಚಿಕೊಳ್ಳುವ ಮೂಲಕ ದೇವರನ್ನು ಘನಪಡಿಸುವುದು ಕ್ರೈಸ್ತರ ಜವಾಬ್ದಾರಿಯಾಗಿದೆ ಎಂದು ಪೌಲನು ಒತ್ತಿಹೇಳಿದನು. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವವನು ಮಾತ್ರವೇ ರಕ್ಷಣೆಯನ್ನು ಹೊಂದುವನು ಎಂಬುದು ರೋಮಾಪುರ ಪುಸ್ತಕದ ಮುಖ್ಯ ಸಂದೇಶವಾಗಿತ್ತು. ಪೌಲನು ತನ್ನ ಪತ್ರದ 10ನೆಯ ಅಧ್ಯಾಯದಲ್ಲಿ, “ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗೊಳಿಸಿ”ದ್ದರೂ, ತನ್ನ ದಿನದ ಯೆಹೂದ್ಯರು ಮೋಶೆಯ ಆ ಧರ್ಮಶಾಸ್ತ್ರವನ್ನೇ ಅನುಸರಿಸುವುದರ ಮೂಲಕ ನೀತಿಯ ನಿಲುವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂಬುದನ್ನು ತೋರಿಸಿದನು. ಆದುದರಿಂದ ಪೌಲನು ಹೇಳುವುದು: “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು.” ಆ ಸಮಯದಿಂದ, ‘ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚುಕಡಿಮೆ ಏನೂ ಇರಲಿಲ್ಲ. ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ. ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.’—ರೋಮಾಪುರ 10:4, ಪರಿಶುದ್ಧ ಬೈಬಲ್, * 9-13.
6 ನಂತರ, ಪೌಲನು ತರ್ಕಬದ್ಧವಾಗಿ ಕೇಳುವುದು: “ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” (ರೋಮಾಪುರ 10:14, 15) ಇಸ್ರಾಯೇಲಿನ ಕುರಿತು ಪೌಲನು ಹೇಳುವುದು: “ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ.” ಇಸ್ರಾಯೇಲ್ ಏಕೆ ಕಿವಿಗೊಡಲಿಲ್ಲ? ಅವರು ಪ್ರತಿಕ್ರಿಯೆ ತೋರಿಸದಿದ್ದದ್ದು ಅವರಿಗಿದ್ದ ನಂಬಿಕೆಯ ಕೊರತೆಯಿಂದಲೇ ಹೊರತು ಅವಕಾಶ ಸಿಗದ ಕಾರಣದಿಂದಲ್ಲ. ಇದನ್ನು ಪೌಲನು, ಕೀರ್ತನೆ 19:4ನ್ನು ಉಲ್ಲೇಖಿಸಿ, ಸೃಷ್ಟಿಯ ಮೌನ ಸಾಕ್ಷ್ಯಕ್ಕೆ ಅನ್ವಯಿಸುವ ಬದಲಿಗೆ ಕ್ರೈಸ್ತ ಸಾರುವ ಕೆಲಸಕ್ಕೆ ಅನ್ವಯಿಸುತ್ತಾ ತೋರಿಸುತ್ತಾನೆ. ಅವನು ಹೇಳುವುದು: “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು.” (ರೋಮಾಪುರ 10:16, 18) ಹೌದು, ನಿರ್ಜೀವ ಸೃಷ್ಟಿಯು ಯೆಹೋವನನ್ನು ಘನಪಡಿಸುವಂತೆಯೇ, ಪ್ರಥಮ ಶತಮಾನದ ಕ್ರೈಸ್ತರು ರಕ್ಷಣೆಯ ಸುವಾರ್ತೆಯನ್ನು ಎಲ್ಲಾ ಕಡೆಯಲ್ಲಿಯೂ ಸಾರುವ ಮೂಲಕ “ಭೂಮಿಯಲ್ಲೆಲ್ಲಾ” ದೇವರನ್ನು ಸ್ತುತಿಸಿದರು. ಪೌಲನು ಕೊಲೊಸ್ಸೆಯವರಿಗೆ ಬರೆದ ತನ್ನ ಪತ್ರದಲ್ಲಿ, ಸುವಾರ್ತೆಯು ಎಷ್ಟು ವ್ಯಾಪಕವಾಗಿ ಹರಡಿದೆ ಎಂಬುದನ್ನೂ ವಿವರಿಸಿದನು. ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿದೆ ಎಂದು ಅವನು ಹೇಳಿದನು.—ಕೊಲೊಸ್ಸೆ 1:23.
ಹುರುಪುಳ್ಳ ಸಾಕ್ಷಿಗಳು
7 ಯೇಸು ಕ್ರಿಸ್ತನು ಮೃತಪಟ್ಟು 27 ವರ್ಷಗಳು ಕಳೆದ ನಂತರ, ಪೌಲನು ಕೊಲೊಸ್ಸೆಯವರಿಗೆ ತನ್ನ ಪತ್ರವನ್ನು ಬರೆದಿರಬಹುದು. ಈ ಅಲ್ಪ ಸಮಯಾವಧಿಯಲ್ಲಿ ಸಾರುವ ಕೆಲಸವು ಕೊಲೊಸ್ಸೆಯ ವರೆಗೆ ಹಬ್ಬಲು ಹೇಗೆ ಸಾಧ್ಯವಾಯಿತು? ಇದು ಸಾಧ್ಯವಾದದ್ದು ಪ್ರಥಮ ಶತಮಾನದ ಕ್ರೈಸ್ತರು ಹುರುಪುಳ್ಳವರಾಗಿದ್ದುದರಿಂದಲೇ, ಮತ್ತು ಯೆಹೋವನು ಅವರ ಹುರುಪನ್ನು ಆಶೀರ್ವದಿಸಿದನು. “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು” ಎಂದು ಯೇಸು ಹೇಳಿದಾಗ, ತನ್ನ ಹಿಂಬಾಲಕರು ಕ್ರಿಯಾಶೀಲ ಪ್ರಚಾರಕರಾಗಿರುವರು ಎಂದು ಮುಂತಿಳಿಸಿದನು. (ಮಾರ್ಕ 13:10) ಆ ಪ್ರವಾದನೆಗೆ, ಮತ್ತಾಯ ಸುವಾರ್ತಾ ಪುಸ್ತಕದ ಕೊನೆಯ ವಚನಗಳಲ್ಲಿರುವ ಆಜ್ಞೆಯನ್ನು ಯೇಸು ಕೂಡಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಯೇಸುವಿನ ಸ್ವರ್ಗಾರೋಹಣವಾಗಿ ಸ್ವಲ್ಪ ಸಮಯದೊಳಗಾಗಿಯೇ, ಅವನ ಹಿಂಬಾಲಕರು ಆ ಮಾತುಗಳನ್ನು ನೆರವೇರಿಸಲು ಆರಂಭಿಸಿದರು.
8 ಸಾ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮವು ಸುರಿಸಲ್ಪಟ್ಟಾಗ ಯೇಸುವಿನ ನಿಷ್ಠಾವಂತ ಹಿಂಬಾಲಕರು ಮಾಡಿದ ಮೊದಲ ಕೆಲಸವು, ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಗುಂಪುಗಳಿಗೆ “ದೇವರ ಮಹತ್ತುಗಳ ವಿಷಯವಾಗಿ” ಸಾರಿದ್ದೇ ಆಗಿದೆ. ಅವರ ಸಾರುವಿಕೆಯು ಅತ್ಯಂತ ಪ್ರತಿಫಲದಾಯಕವಾಗಿತ್ತು, ಮತ್ತು “ಸುಮಾರು ಮೂರು ಸಾವಿರ ಜನರು” ದೀಕ್ಷಾಸ್ನಾನ ಹೊಂದಿದರು. ಶಿಷ್ಯರು ಬಹಿರಂಗವಾಗಿಯೂ ಹುರುಪಿನಿಂದಲೂ ದೇವರನ್ನು ಸ್ತುತಿಸುತ್ತಾ ಮುಂದುವರಿದರು, ಮತ್ತು ಇದು ಉತ್ತಮ ಪ್ರತಿಫಲಗಳನ್ನು ತಂದಿತು.—ಅ. ಕೃತ್ಯಗಳು 2:4, 11, 41, 46, 47.
9 ಆ ಕ್ರೈಸ್ತರ ಚಟುವಟಿಕೆಗಳು ಶೀಘ್ರವೇ ಧಾರ್ಮಿಕ ಮುಖಂಡರ ಗಮನಕ್ಕೆ ಬಂದವು. ಪೇತ್ರಯೋಹಾನರು ಧೈರ್ಯದಿಂದ ಮಾತಾಡುವುದನ್ನು ನೋಡಿ ಅಸಮಾಧಾನಗೊಂಡವರಾಗಿ, ಸಾರುವುದನ್ನು ನಿಲ್ಲಿಸುವಂತೆ ಈ ಇಬ್ಬರು ಅಪೊಸ್ತಲರಿಗೆ ಆಜ್ಞೆಯಿತ್ತರು. ಅಪೊಸ್ತಲರ ಪ್ರತಿಕ್ರಿಯೆಯು, “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದಾಗಿತ್ತು. ಬೆದರಿಸಲ್ಪಟ್ಟು ಬಿಡುಗಡೆ ಮಾಡಲ್ಪಟ್ಟ ನಂತರ, ಪೇತ್ರಯೋಹಾನರು ತಮ್ಮ ಸಹೋದರರ ಬಳಿಗೆ ಹಿಂದಿರುಗಿದರು, ಮತ್ತು ಎಲ್ಲರೂ ಜೊತೆಗೂಡಿ ಯೆಹೋವನಿಗೆ ಪ್ರಾರ್ಥಿಸಿದರು. ಅವರು ಧೈರ್ಯದಿಂದ ಯೆಹೋವನಲ್ಲಿ ಹೀಗೆ ಕೇಳಿದರು: “ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು.”—ಅ. ಕೃತ್ಯಗಳು 4:13, 20, 29.
10 ಆ ಪ್ರಾರ್ಥನೆಯು ಯೆಹೋವನ ಚಿತ್ತಾನುಸಾರವಾಗಿತ್ತು, ಮತ್ತು ಇದು ಸ್ವಲ್ಪ ಸಮಯದ ನಂತರ ವ್ಯಕ್ತವಾಯಿತು. ಅಪೊಸ್ತಲರು ಬಂಧಿಸಲ್ಪಟ್ಟರು ಮತ್ತು ನಂತರ ಒಬ್ಬ ದೇವದೂತನಿಂದ ಅದ್ಭುತಕರವಾಗಿ ಬಿಡುಗಡೆ ಮಾಡಲ್ಪಟ್ಟರು. ಆ ದೇವದೂತನು ಅವರಿಗೆ ಹೇಳಿದ್ದು: “ನೀವು ಹೋಗಿ ದೇವಾಲಯದಲ್ಲಿ ಅ. ಕೃತ್ಯಗಳು 5:18-20) ಅಪೊಸ್ತಲರು ವಿಧೇಯರಾದ ಕಾರಣ, ಯೆಹೋವನು ಅವರನ್ನು ಆಶೀರ್ವದಿಸುತ್ತಾ ಬಂದನು. ಆದುದರಿಂದಲೇ, ಅವರು “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ. ಕೃತ್ಯಗಳು 5:42) ಕಡು ವಿರೋಧವು, ದೇವರಿಗೆ ಬಹಿರಂಗವಾಗಿ ಘನವನ್ನು ಸಲ್ಲಿಸುವುದರಿಂದ ಯೇಸುವಿನ ಹಿಂಬಾಲಕರನ್ನು ತಡೆಯಲು ಸಂಪೂರ್ಣವಾಗಿ ವಿಫಲಗೊಂಡಿತೆಂಬುದು ಸ್ಪಷ್ಟ.
ನಿಂತುಕೊಂಡು ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ.” (11 ಸ್ವಲ್ಪದರಲ್ಲಿಯೇ ಸ್ತೆಫನನನ್ನು ದಸ್ತಗಿರಿ ಮಾಡಲಾಯಿತು ಮತ್ತು ಅವನನ್ನು ಕಲ್ಲೆಸೆದು ಕೊಲ್ಲಲಾಯಿತು. ಅವನ ಹತ್ಯೆಯು ಯೆರೂಸಲೇಮಿನಲ್ಲಿ ಘೋರವಾದ ಹಿಂಸೆಯ ಕಿಡಿಯನ್ನು ಹೊತ್ತಿಸಿತು, ಮತ್ತು ಅಪೊಸ್ತಲರನ್ನು ಬಿಟ್ಟು ಎಲ್ಲಾ ಶಿಷ್ಯರು ಯೆರೂಸಲೇಮಿನಿಂದ ಪಲಾಯನಗೈಯುವಂತೆ ಒತ್ತಾಯಿಸಲ್ಪಟ್ಟರು. ಹಿಂಸೆಯಿಂದಾಗಿ ಅವರು ನಿರುತ್ತೇಜನಗೊಂಡರೋ? ಎಂದಿಗೂ ಇಲ್ಲ. ನಾವು ಓದುವುದು: “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾ ವಾಕ್ಯವನ್ನು ಸಾರುತ್ತಿದ್ದರು.” (ಅ. ಕೃತ್ಯಗಳು 8:1, 4) ದೇವರ ಘನವನ್ನು ಪ್ರಕಟಪಡಿಸುವುದರಲ್ಲಿ ತೋರಿಸಲ್ಪಟ್ಟ ಆ ಹುರುಪು ಪುನಃ ಪುನಃ ಕಂಡುಬಂತು. ದಮಸ್ಕದಲ್ಲಿದ್ದ ಯೇಸುವಿನ ಶಿಷ್ಯರನ್ನು ಹಿಂಸಿಸಲು ತಾರ್ಸದ ಫರಿಸಾಯನಾದ ಸೌಲನು ಪ್ರಯಾಣಿಸುತ್ತಿದ್ದಾಗ, ಯೇಸುವಿನ ಒಂದು ದರ್ಶನವನ್ನು ಕಂಡು ಕುರುಡುಗೊಳಿಸಲ್ಪಟ್ಟನು ಎಂದು ಅಪೊಸ್ತಲರ ಕೃತ್ಯಗಳು 9ನೇ ಅಧ್ಯಾಯದಲ್ಲಿ ನಾವು ಓದುತ್ತೇವೆ. ದಮಸ್ಕದಲ್ಲಿ, ಅನನೀಯನು ಸೌಲನ ಕಣ್ಣು ಕಾಣುವಂತೆ ಮಾಡಿದನು. ನಂತರ ಪೌಲನೆಂದು ಕರೆಯಲ್ಪಟ್ಟ ಸೌಲನು ಮಾಡಿದ ಮೊದಲ ಕೆಲಸ ಯಾವುದಾಗಿತ್ತು? ದಾಖಲೆಯು ತಿಳಿಸುವುದು: “ತಡಮಾಡದೆ ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವದಕ್ಕೆ ಪ್ರಾರಂಭಮಾಡಿದನು.” (ಓರೆ ಅಕ್ಷರಗಳು ನಮ್ಮವು.)—ಅ. ಕೃತ್ಯಗಳು 9:20.
ಸಾರುವಿಕೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿದರು
12 ಆದಿ ಕ್ರೈಸ್ತ ಸಭೆಯಲ್ಲಿದ್ದವರೆಲ್ಲರೂ ಸಾರುವ ಕೆಲಸದಲ್ಲಿ ಭಾಗವಹಿಸಿದರು ಎಂಬುದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವಿಷಯವಾಗಿದೆ. ಆ ದಿನಗಳಲ್ಲಿದ್ದ ಕ್ರೈಸ್ತರ ಕುರಿತಾಗಿ ಫಿಲಿಪ್ ಶ್ಯಾಫ್ ಬರೆಯುವುದು: “ಪ್ರತಿಯೊಂದು ಸಭೆಯೂ ಒಂದು ಮಿಷನೆರಿ ಸಮಾಜವಾಗಿತ್ತು, ಮತ್ತು ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಯೂ ಒಬ್ಬ ಮಿಷನೆರಿಯಾಗಿದ್ದನು.” (ಕ್ರೈಸ್ತ ಚರ್ಚಿನ ಇತಿಹಾಸ, ಇಂಗ್ಲಿಷ್) ಜನಸಾಮಾನ್ಯರ ಮಹಿಮಾನ್ವಿತ ಶುಶ್ರೂಷೆ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಡಬ್ಲ್ಯೂ. ಎಸ್. ವಿಲ್ಯಮ್ಸ್ ಹೇಳುವುದು: “ಆದಿ ಚರ್ಚಿನಲ್ಲಿದ್ದ ಎಲ್ಲಾ ಕ್ರೈಸ್ತರೂ, ಅದರಲ್ಲೂ ವಿಶೇಷವಾಗಿ ದೈವಶಕ್ತಿಯ ವರದಾನವನ್ನು [ಆತ್ಮದ ಫಲಗಳನ್ನು] ಹೊಂದಿದ್ದವರು, ಸುವಾರ್ತೆಯನ್ನು ಸಾರಿದರೆಂಬುದು ಸಾಮಾನ್ಯವಾಗಿ ಎಲ್ಲರೂ ಕೊಟ್ಟ ಸಾಕ್ಷ್ಯವಾಗಿದೆ.” ವಿಲ್ಯಮ್ಸ್ ಪುನಃ ಒತ್ತಿ ಹೇಳುವುದು: “ಸಾರುವ ಕೆಲಸವು ಶುಶ್ರೂಷೆಯ ಕೇವಲ ಕೆಲವು ನಿರ್ದಿಷ್ಟ ಪದವಿಯಲ್ಲಿದ್ದವರಿಗೆ ಮಾತ್ರ ಸೀಮಿತವಾಗಿದೆ ಎಂದು ಯೇಸು ಕ್ರಿಸ್ತನು ಎಂದೂ ಅರ್ಥೈಸಲಿಲ್ಲ.” ಕ್ರೈಸ್ತತ್ವದ ಹಳೆಯ ವೈರಿಯಾಗಿದ್ದ ಸೆಲ್ಸಸ್ ಸಹ ಬರೆದದ್ದು: “ಉಣ್ಣೆ ಕೆಲಸದವರು, ಚಮ್ಮಾರರು, ಚರ್ಮಕಾರರು, ಮಾನವಕುಲದ ಅನಕ್ಷರಸ್ಥರು ಹಾಗೂ ಸಾಮಾನ್ಯರು ಸುವಾರ್ತೆಯ ಹುರುಪಿನ ಪ್ರಚಾರಕರಾಗಿದ್ದರು.”
13 ಈ ಹೇಳಿಕೆಗಳ ನಿಷ್ಕೃಷ್ಟತೆಯನ್ನು ಅಪೊಸ್ತಲರ ಕೃತ್ಯಗಳು ಪುಸ್ತಕದ ಐತಿಹಾಸಿಕ ದಾಖಲೆಯಲ್ಲಿ ನೋಡಬಹುದು. ಸಾ.ಶ. 33ರ ಪಂಚಾಶತ್ತಮದಲ್ಲಿ, ಪವಿತ್ರಾತ್ಮವು ಸುರಿಸಲ್ಪಟ್ಟ ನಂತರ, ಸ್ತ್ರೀಪುರುಷರು ಸೇರಿ ಎಲ್ಲಾ ಶಿಷ್ಯರೂ ದೇವರ ಮಹತ್ತುಗಳ ಕುರಿತು ಬಹಿರಂಗವಾಗಿ ಪ್ರಕಟಪಡಿಸಿದರು. ಸ್ತೆಫನನ ಹತ್ಯೆಯ ನಂತರ ಹಿಂಸೆಯಿಂದಾಗಿ ಚದರಿಹೋದ ಕ್ರೈಸ್ತರು, ದೂರ ದೂರದಲ್ಲಿ ಸುವಾರ್ತೆಯನ್ನು ಹಬ್ಬಿಸಿದರು. ಸುಮಾರು 28 ವರ್ಷಗಳು ದಾಟಿದ ನಂತರ, ಇಬ್ರಿಯ ಕ್ರೈಸ್ತರ ಕೇವಲ ಒಂದು ಚಿಕ್ಕ ಪಾದ್ರಿ ವರ್ಗಕ್ಕಲ್ಲ, ಬದಲಾಗಿ ಕ್ರೈಸ್ತರೆಲ್ಲರಿಗೆ ಬರೆಯುತ್ತಿದ್ದಾಗ ಪೌಲನು ಹೀಗಂದನು: “ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿಯ 13:15) ಸಾರುವ ಕೆಲಸದ ಕುರಿತು ತನ್ನ ಸ್ವಂತ ದೃಷ್ಟಿಕೋನವನ್ನು ವರ್ಣಿಸುತ್ತಾ, ಪೌಲನು ಹೇಳಿದ್ದು: “ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.” (1 ಕೊರಿಂಥ 9:16) ಪ್ರಥಮ ಶತಮಾನದಲ್ಲಿದ್ದ ಎಲ್ಲಾ ನಂಬಿಗಸ್ತ ಕ್ರೈಸ್ತರಿಗೂ ಇದೇ ಅನಿಸಿಕೆಯಿತ್ತು ಎಂಬುದರಲ್ಲಿ ಸಂದೇಹವಿಲ್ಲ.
14 ವಾಸ್ತವದಲ್ಲಿ, ಒಬ್ಬ ನಿಜ ಕ್ರೈಸ್ತನು ಸಾರುವ ಕೆಲಸದಲ್ಲಿ ಭಾಗವಹಿಸಲೇಬೇಕಾಗಿದೆ, ಏಕೆಂದರೆ ಅದು ನಂಬಿಕೆಯೊಂದಿಗೆ ಮುರಿಯಲಾಗದಂತೆ ಜೋಡಿಸಲ್ಪಟ್ಟಿದೆ. ಪೌಲನು ಹೇಳಿದ್ದು: “ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.” (ರೋಮಾಪುರ 10:10) ಸಭೆಯಲ್ಲಿರುವ ಪಾದ್ರಿವರ್ಗದಂಥ ಒಂದು ಚಿಕ್ಕ ಗುಂಪು ಮಾತ್ರ ನಂಬಿಕೆಯನ್ನು ವ್ಯಕ್ತಪಡಿಸುತ್ತಾ ಸಾರುವ ಜವಾಬ್ದಾರಿಯುಳ್ಳದ್ದಾಗಿದೆಯೋ? ಖಂಡಿತವಾಗಿಯೂ ಇಲ್ಲ! ಎಲ್ಲಾ ನಿಜ ಕ್ರೈಸ್ತರು ಕರ್ತನಾದ ಯೇಸು ಕ್ರಿಸ್ತನಲ್ಲಿ ಸಜೀವವಾದ ನಂಬಿಕೆಯನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಆ ನಂಬಿಕೆಯನ್ನು ಇತರರಿಗೆ ಬಹಿರಂಗವಾಗಿ ಪ್ರಕಟಿಸಲು ಪ್ರೇರಿಸಲ್ಪಡುತ್ತಾರೆ. ಇಲ್ಲವಾದರೆ, ಅವರ ನಂಬಿಕೆಯು ಸತ್ತದ್ದೇ. (ಯಾಕೋಬ 2:26) ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿದ್ದ ಎಲ್ಲಾ ನಿಷ್ಠಾವಂತ ಕ್ರೈಸ್ತರು ಈ ರೀತಿಯಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದರಿಂದ, ಯೆಹೋವನ ನಾಮವನ್ನು ಸ್ತುತಿಸುವ ಒಂದು ಮಹಾ ಕೂಗು ಕೇಳಿಬಂತು.
15 ಪ್ರಥಮ ಶತಮಾನದಲ್ಲಿ, ಸಭೆಯ ಒಳಗೆ ಮತ್ತು ಹೊರಗೆ ಸಮಸ್ಯೆಗಳಿದ್ದರೂ ಯೆಹೋವನು ತನ್ನ ಜನರನ್ನು ಅಭಿವೃದ್ಧಿಗೊಳಿಸುವ ಮೂಲಕ ಆಶೀರ್ವದಿಸಿದನು. ಉದಾಹರಣೆಗೆ, ಇಬ್ರಿಯ ಮತ್ತು ಗ್ರೀಕ್ ಭಾಷೆಯ ಮತಾಂತರಿಗಳ ಮಧ್ಯೆ ಉಂಟಾದ ಒಂದು ಭಿನ್ನಾಭಿಪ್ರಾಯದ ಕುರಿತು ಅಪೊಸ್ತಲರ ಕೃತ್ಯಗಳು 6ನೇ ಅಧ್ಯಾಯವು ದಾಖಲಿಸುತ್ತದೆ. ಈ ಸಮಸ್ಯೆಯು ಅಪೊಸ್ತಲರಿಂದ ಬಗೆಹರಿಸಲ್ಪಟ್ಟಿತು. ಇದರ ಫಲಿತಾಂಶವಾಗಿ, ನಾವು ಓದುವುದು: “ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.”—ಅ. ಕೃತ್ಯಗಳು 6:7.
16 ನಂತರ, ಯೆಹೂದದ ರಾಜನಾದ ಹೆರೋದ ಅಗ್ರಿಪ್ಪ ಮತ್ತು ತೂರ್ ಹಾಗೂ ಸೀದೋನ್ ಜನರ ಮಧ್ಯೆ ರಾಜಕೀಯ ವೈಮನಸ್ಯ ಉಂಟಾಯಿತು. ಆ ನಗರವಾಸಿಗಳು, ಸಮಾಧಾನವನ್ನು ಪುನಸ್ಸ್ಥಾಪಿಸಲಿಕ್ಕಾಗಿ ಹೆರೋದ ಅಗ್ರಿಪ್ಪನನ್ನು ಮುಖಸ್ತುತಿಮಾಡುವಂಥ ಕೋರಿಕೆಗಳನ್ನು ಮಾಡಿದರು, ಮತ್ತು ಇದಕ್ಕೆ ಪ್ರತಿಕ್ರಿಯಿಸುತ್ತಾ ಹೆರೋದನು ಒಂದು ಬಹಿರಂಗ ಭಾಷಣವನ್ನು ನೀಡಿದನು. ಕೂಡಿಬಂದಿದ್ದ ಸಭೆಯು ಹೀಗೆ ಆರ್ಭಟಿಸಿತು: “ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ”! ಆ ಕ್ಷಣದಲ್ಲೇ, ಯೆಹೋವನ ದೂತನು ಹೆರೋದ ಅಗ್ರಿಪ್ಪನನ್ನು ಬಡಿದನು ಮತ್ತು “ಘನವನ್ನು ಅವನು ದೇವರಿಗೆ ಸಲ್ಲಿಸದೆ ಹೋದದರಿಂದ” ಸತ್ತನು. (ಅ. ಕೃತ್ಯಗಳು 12:20-23) ಮಾನವ ನಾಯಕರಲ್ಲಿ ಭರವಸೆಯಿಡುವವರಿಗೆ ಎಂತಹ ಧಕ್ಕೆಯಿದು! (ಕೀರ್ತನೆ 146:3, 4) ಕ್ರೈಸ್ತರಾದರೋ, ಯೆಹೋವನನ್ನು ಘನಪಡಿಸುತ್ತಾ ಮುಂದುವರಿದರು. ಇದರ ಪರಿಣಾಮವಾಗಿ, ರಾಜಕೀಯ ಅಸ್ಥಿರತೆಗಳ ಹೊರತಾಗಿಯೂ “ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು.”—ಅ. ಕೃತ್ಯಗಳು 12:24.
ಅಂದು ಮತ್ತು ಇಂದು
17 ಹೌದು, ಪ್ರಥಮ ಶತಮಾನದಲ್ಲಿದ್ದ ಲೋಕವ್ಯಾಪಕ ಕ್ರೈಸ್ತ ಸಭೆಯು ಹುರುಪಿನ ಹಾಗೂ ಯೆಹೋವ ದೇವರ ಕ್ರಿಯಾಶೀಲ ಸ್ತುತಿಗಾರರಿಂದ ರಚಿಸಲ್ಪಟ್ಟಿತ್ತು. ಎಲ್ಲಾ ನಿಷ್ಠಾವಂತ ಕ್ರೈಸ್ತರು ಸುವಾರ್ತೆಯನ್ನು ಸಾರುವುದರಲ್ಲಿ ಭಾಗವಹಿಸಿದರು. ಕೆಲವರು ಪ್ರತಿಕ್ರಿಯಾಶೀಲ ವ್ಯಕ್ತಿಗಳನ್ನು ಕಂಡುಕೊಂಡರು, ಮತ್ತು ಯೇಸು ಹೇಳಿದಂತೆ, ಅವನು ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವಂತೆ ಅವರು ಉಪದೇಶ ಮಾಡಿದರು. (ಮತ್ತಾಯ 28:19) ಇದರ ಫಲಿತಾಂಶವಾಗಿ ಸಭೆಯು ಬೆಳೆಯಿತು, ಮತ್ತು ಹೆಚ್ಚೆಚ್ಚು ಜನರು ಯೆಹೋವನಿಗೆ ಸ್ತುತಿಯನ್ನು ಸಲ್ಲಿಸುವುದರಲ್ಲಿ ಪ್ರಾಚೀನ ಕಾಲದ ದಾವೀದನನ್ನು ಜೊತೆಗೂಡಿದರು. ಎಲ್ಲರೂ ಈ ಪ್ರೇರಿತ ಮಾತುಗಳನ್ನು ಪ್ರತಿಧ್ವನಿಸಿದರು: ‘ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು. ನೀನು ಬಹಳವಾಗಿ ಕನಿಕರಿಸಿದ್ದಿ.’—ಕೀರ್ತನೆ 86:12, 13.
18 ಇದರ ದೃಷ್ಟಿಯಲ್ಲಿ, ದೇವತಾಶಾಸ್ತ್ರೀಯ ಪ್ರೊಫೆಸರರಾದ ಆ್ಯಲಸನ್ ಎ. ಟ್ರೈಟ್ಸ್‌ರವರ ಮಾತುಗಳು ಆಲೋಚನಾ ಪ್ರೇರಕವಾಗಿವೆ. ಆಧುನಿಕ ದಿನದ ಕ್ರೈಸ್ತಪ್ರಪಂಚವನ್ನು ಪ್ರಥಮ ಶತಮಾನದ ಕ್ರೈಸ್ತತ್ವಕ್ಕೆ ಹೋಲಿಸುತ್ತಾ ಅವರಂದದ್ದು: “ಚರ್ಚುಗಳು ಇಂದು ಸಾಮಾನ್ಯವಾಗಿ ಜೈವಿಕವಾಗಿ ಬೆಳೆಯುತ್ತವೆ (ಇದು ಸ್ಥಳಿಕ ಚರ್ಚಿನ ಒಂದು ಕುಟುಂಬಕ್ಕೆ ಸೇರಿದ ಮಕ್ಕಳು ತಮ್ಮ ವೈಯಕ್ತಿಕ ನಂಬಿಕೆಯನ್ನು ವ್ಯಕ್ತಪಡಿಸಿದಾಗ ಆಗುತ್ತದೆ) ಅಥವಾ ಸ್ಥಳಾಂತರವಾಗಿ ಬೆಳೆಯುತ್ತವೆ (ಇದು ಒಬ್ಬ ಹೊಸಬನು ಮತ್ತೊಂದು ಸ್ಥಳಿಕ ಚರ್ಚಿನಿಂದ ತನ್ನ ಸದಸ್ಯತ್ವವನ್ನು ಸ್ಥಳಾಂತರಿಸಿಕೊಂಡಾಗ ಆಗುತ್ತದೆ). ಆದರೆ, ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ, ಬೆಳವಣಿಗೆಯು ಮತಾಂತರ ಬೆಳವಣಿಗೆಯಾಗಿತ್ತು, ಏಕೆಂದರೆ ಚರ್ಚು ಈಗ ತಾನೇ ತನ್ನ ಕೆಲಸವನ್ನು ಆರಂಭಿಸುತ್ತಿತ್ತು.” ಹಾಗಾದರೆ, ನಿಜ ಕ್ರೈಸ್ತತ್ವವು ಯೇಸು ಹೇಳಿದಂತೆ ಈಗ ಬೆಳವಣಿಗೆ ಹೊಂದುತ್ತಿಲ್ಲ ಎಂಬುದು ಇದರ ಅರ್ಥವೋ? ಖಂಡಿತವಾಗಿಯೂ ಇಲ್ಲ. ದೇವರಿಗೆ ಬಹಿರಂಗವಾಗಿ ಘನವನ್ನು ಸಲ್ಲಿಸುವುದರಲ್ಲಿ ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರಿಗಿದ್ದ ಅದೇ ಹುರುಪನ್ನು ನಿಜ ಕ್ರೈಸ್ತರು ಇಂದು ಸಹ ತೋರಿಸುತ್ತಿದ್ದಾರೆ. ಇದನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸುವೆವು.
[ಪಾದಟಿಪ್ಪಣಿ]
^ ಪ್ಯಾರ. 8 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
ನೀವು ವಿವರಿಸಬಲ್ಲಿರೋ?
• ನಾವು ಯಾವ ವಿಧಗಳಲ್ಲಿ ದೇವರಿಗೆ ಘನವನ್ನು ಸಲ್ಲಿಸುತ್ತೇವೆ?
• ಪೌಲನು ಕೀರ್ತನೆ 19:4ರ ಯಾವ ಅನ್ವಯವನ್ನು ಮಾಡಿದನು?
• ನಂಬಿಕೆ ಮತ್ತು ಸಾರುವಿಕೆಯ ಮಧ್ಯೆಯಿರುವ ಸಂಬಂಧವೇನು?
• ಪ್ರಥಮ ಶತಮಾನದ ಕ್ರೈಸ್ತ ಸಭೆಯ ವಿಷಯದಲ್ಲಿ ಯಾವುದು ಗಮನಾರ್ಹವಾಗಿತ್ತು?
[ಅಧ್ಯಯನ ಪ್ರಶ್ನೆಗಳು]
1, 2. ಯಾವ ಮೂಲದಿಂದ ಯೆಹೋವನಿಗೆ ಸ್ತುತಿಯು ಸಲ್ಲಿಸಲ್ಪಡುತ್ತಿದೆ, ಮತ್ತು ಇದರೊಂದಿಗೆ ಜೊತೆಗೂಡುವಂತೆ ಯಾರನ್ನು ಪ್ರೋತ್ಸಾಹಿಸಲಾಗಿದೆ?
3. ಯಾವ ವಿಧಗಳಲ್ಲಿ ಮನುಷ್ಯರು ದೇವರಿಗೆ ಘನವನ್ನು ಸಲ್ಲಿಸುತ್ತಾರೆ?
4. ದೇವರನ್ನು ಹೇಗೆ ಘನಪಡಿಸುವುದು ಎಂಬುದರ ಕುರಿತು ಯೇಸು ಯಾವ ಸೂಚನೆಗಳನ್ನು ಕೊಟ್ಟನು, ಮತ್ತು ನಾವು ಅವುಗಳನ್ನು ಹೇಗೆ ಪೂರೈಸಬಲ್ಲೆವು?
5. ಇತರರೊಂದಿಗೆ ತಮ್ಮ ನಂಬಿಕೆಯನ್ನು ಹಂಚಿಕೊಳ್ಳುವ ಮೂಲಕ ದೇವರನ್ನು ಘನಪಡಿಸುವುದು ಕ್ರೈಸ್ತರ ಜವಾಬ್ದಾರಿಯಾಗಿದೆ ಎಂಬುದನ್ನು ಪೌಲನು ಹೇಗೆ ಒತ್ತಿಹೇಳಿದನು ಎಂಬುದನ್ನು ವಿವರಿಸಿರಿ.
6. ಪೌಲನು ಕೀರ್ತನೆ 19:4ನ್ನು ಹೇಗೆ ಅನ್ವಯಿಸಿದನು?
7. ಯೇಸುವಿಗನುಸಾರ, ಕ್ರೈಸ್ತರಿಗೆ ಯಾವ ಜವಾಬ್ದಾರಿಯಿದೆ?
8, 9. ಅಪೊಸ್ತಲರ ಕೃತ್ಯಗಳು ಪುಸ್ತಕಕ್ಕನುಸಾರವಾಗಿ, ಕ್ರೈಸ್ತರು ಯೇಸುವಿನ ಆಜ್ಞೆಗಳಿಗೆ ಹೇಗೆ ಪ್ರತಿಕ್ರಿಯಿಸಿದರು?
10. ಯಾವ ವಿರೋಧವು ತೋರಿಬಂತು, ಮತ್ತು ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರು?
11. ಸಾರುವ ಕೆಲಸದ ಕುರಿತು ಆದಿ ಕ್ರೈಸ್ತರಿಗೆ ಯಾವ ಮನೋಭಾವವಿತ್ತು?
12, 13. (ಎ) ಇತಿಹಾಸಕಾರರಿಗನುಸಾರ, ಆದಿ ಕ್ರೈಸ್ತ ಸಭೆಯ ವಿಷಯದಲ್ಲಿ ಯಾವುದು ಗಮನಾರ್ಹವಾಗಿತ್ತು? (ಬಿ) ಇತಿಹಾಸಕಾರರ ಹೇಳಿಕೆಗಳೊಂದಿಗೆ ಅಪೊಸ್ತಲರ ಕೃತ್ಯಗಳು ಪುಸ್ತಕವು ಹೇಗೆ ಸಮ್ಮತದಲ್ಲಿದೆ?
14. ನಂಬಿಕೆ ಮತ್ತು ಸಾರುವಿಕೆಯ ಮಧ್ಯೆಯಿರುವ ಸಂಬಂಧವೇನು?
15, 16. ಸಮಸ್ಯೆಗಳ ಹೊರತಾಗಿಯೂ ಸಾರುವ ಕೆಲಸವು ಪ್ರಗತಿಹೊಂದಿತು ಎಂಬುದನ್ನು ತೋರಿಸಲು ಉದಾಹರಣೆಗಳನ್ನು ಕೊಡಿರಿ.
17. ಪ್ರಥಮ ಶತಮಾನದಲ್ಲಿ, ಹೆಚ್ಚುತ್ತಿದ್ದ ಜನರು ಯಾವುದನ್ನು ಮಾಡುವುದರಲ್ಲಿ ಜೊತೆಗೂಡಿದರು?
18. (ಎ) ಪ್ರಥಮ ಶತಮಾನದ ಕ್ರೈಸ್ತ ಸಭೆ ಮತ್ತು ಇಂದಿನ ಕ್ರೈಸ್ತಪ್ರಪಂಚದ ಮಧ್ಯೆ ಯಾವ ವ್ಯತ್ಯಾಸವು ಕಂಡುಬರುತ್ತದೆ? (ಬಿ) ಮುಂದಿನ ಲೇಖನದಲ್ಲಿ ಯಾವುದನ್ನು ಪರಿಗಣಿಸಲಾಗುವುದು?
[ಪುಟ 8, 9ರಲ್ಲಿರುವ ಚಿತ್ರ]
ಆಕಾಶಗಳು ಯೆಹೋವನ ಘನತೆಗೆ ಸದಾ ಸಾಕ್ಷ್ಯವನ್ನು ಕೊಡುತ್ತಾ ಇರುತ್ತವೆ
[ಕೃಪೆ]
Courtesy of Anglo-Australian Observatory, photograph by David Malin
[ಪುಟ 10ರಲ್ಲಿರುವ ಚಿತ್ರಗಳು]
ಸಾರುವ ಕೆಲಸ ಮತ್ತು ಪ್ರಾರ್ಥನೆಯು ನಿಕಟವಾಗಿ ಸಂಬಂಧಿಸಲ್ಪಟ್ಟಿದೆ