ಯುದ್ಧವು ತಾಳಿರುವ ಹೊಸ ರೂಪ
ಯುದ್ಧವು ತಾಳಿರುವ ಹೊಸ ರೂಪ
ಯುದ್ಧವು ಯಾವಾಗಲೂ ಕ್ರೂರವಾಗಿಯೇ ಇತ್ತು. ಅದು ಯಾವಾಗಲೂ ಸೈನಿಕರ ಜೀವನಗಳನ್ನು ಧ್ವಂಸಗೊಳಿಸಿ, ಸಾರ್ವಜನಿಕರಿಗೆ ನರಳಾಟವನ್ನು ಉಂಟುಮಾಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಯುದ್ಧವು ಒಂದು ಹೊಸ ರೂಪವನ್ನು ತಾಳಿದೆ. ಅದು ಯಾವ ರೀತಿಯಲ್ಲಿ?
ಇಂದಿನ ಯುದ್ಧಗಳು ಹೆಚ್ಚಾಗಿ ಆಂತರಿಕ ಯುದ್ಧಗಳಾಗಿವೆ, ಅಂದರೆ ಒಂದೇ ದೇಶದ ಪ್ರಜೆಗಳಲ್ಲಿರುವ ವಿರುದ್ಧಪಕ್ಷಗಳ ಮಧ್ಯೆ ನಡೆಯುವ ಯುದ್ಧಗಳಾಗಿವೆ. ಈ ಆಂತರಿಕ ಯುದ್ಧಗಳು ಅನೇಕವೇಳೆ ದೀರ್ಘಸಮಯದ ವರೆಗೆ ನಡೆಯುತ್ತವೆ, ಜನಸಾಮಾನ್ಯರನ್ನು ಹೆಚ್ಚು ಆಘಾತಗೊಳಿಸುತ್ತವೆ, ಮತ್ತು ರಾಷ್ಟ್ರಗಳ ಮಧ್ಯೆ ನಡೆಯುವ ಯುದ್ಧಗಳಿಗಿಂತಲೂ ದೇಶವನ್ನು ಹೆಚ್ಚು ಸಂಪೂರ್ಣವಾಗಿ ನಿರ್ನಾಮಗೊಳಿಸುತ್ತವೆ. “ಆಂತರಿಕ ಯುದ್ಧಗಳು, ಸಾವಿರಾರು ಮರಣಗಳನ್ನು, ಲೈಂಗಿಕ ಹಲ್ಲೆಗಳನ್ನು, ನಿರ್ಬಂಧಿತ ದೇಶಭ್ರಷ್ಟತೆಗಳನ್ನು ಉಂಟುಮಾಡುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ ಇದರ ವೈಪರೀತ್ಯವು ಜನಾಂಗಹತ್ಯೆಗಳನ್ನೂ ಉಂಟುಮಾಡುವ ಕ್ರೂರವಾದ, ರಕ್ತಮಯ ಕಾರ್ಯಾಚರಣೆಗಳಾಗಿವೆ,” ಎಂದು ಸ್ಪೆಯಿನ್ನ ಇತಿಹಾಸಕಾರ ಹೂಲ್ಯಾನ್ ಕ್ಯಾಸನೋವ ಹೇಳುತ್ತಾರೆ. ವಾಸ್ತವದಲ್ಲಿ, ನೆರೆಯವರ ಮಧ್ಯೆಯೇ ಭೀಕರವಾದ ಹಲ್ಲೆಗಳು ಮಾಡಲ್ಪಡುವಾಗ, ಅದರಿಂದಾಗುವ ಗಾಯಗಳು ವಾಸಿಯಾಗಲು ಶತಮಾನಗಳು ತಗಲಬಹುದು.
ಶೀತಲ ಯುದ್ಧವು ಕೊನೆಗೊಂಡಾಗಿನಿಂದ, ವಿಭಿನ್ನ ರಾಷ್ಟ್ರಗಳ ಸೇನೆಗಳ ಮಧ್ಯೆ ತೀರ ಕಡಿಮೆ ಯುದ್ಧಗಳು ಸಂಭವಿಸಿವೆ. “1990ರಿಂದ 2000ದ ವರೆಗೆ ದಾಖಲಿಸಲ್ಪಟ್ಟ ಕದನಗಳಲ್ಲಿ, ಮೂರು ದೊಡ್ಡದಾದ ಶಸ್ತ್ರಸಜ್ಜಿತ ಕದನಗಳನ್ನು ಬಿಟ್ಟರೆ ಬೇರೆಲ್ಲವೂ ಆಂತರಿಕ ಕದನಗಳಾಗಿದ್ದವು,” ಎಂದು ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಘ (SIPRI) ವರದಿಸುತ್ತದೆ.
ವಾಸ್ತವದಲ್ಲಿ, ಆಂತರಿಕ ಕದನಗಳು ಅಷ್ಟು ಭೀತಿದಾಯಕವಾಗಿ ತೋರದಿರಬಹುದಾದರೂ ಮತ್ತು ಅಂತಾರಾಷ್ಟ್ರೀಯ ವಾರ್ತಾಮಾಧ್ಯಮದಿಂದ ಗಮನಿಸಲ್ಪಡದೆ ಹೋಗಬಹುದಾದರೂ, ಈ ರೀತಿಯ ಕಾದಾಟಗಳಿಂದ ಉಂಟಾಗುವ ನೋವು ಮತ್ತು ವಿನಾಶವು ವಿಧ್ವಂಸಕ. ಕೋಟ್ಯಂತರ ಜನರು ಆಂತರಿಕ ಕದನಗಳಲ್ಲಿ ಮೃತಪಟ್ಟಿದ್ದಾರೆ. ನಿಜಾಂಶವೇನೆಂದರೆ, ಕಳೆದ ಎರಡು ದಶಕಗಳಲ್ಲಿ ಆಫ್ಘಾನಿಸ್ತಾನ್, ಡೆಮಾಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಮತ್ತು ಸೂಡಾನ್ ಎಂಬ ಕೇವಲ ಮೂರು ಯುದ್ಧಪೀಡಿತ ದೇಶಗಳಲ್ಲಿ ಸುಮಾರು 50 ಲಕ್ಷ ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಬಾಲ್ಕನ್ ಪರ್ಯಾಯ ದ್ವೀಪಗಳಲ್ಲಿ, ಭೀಕರವಾದ ಕೋಮುಗಲಭೆಗಳು ಕಡಿಮೆಪಕ್ಷ 2,50,000 ಜನರ ಜೀವಗಳನ್ನು ಆಹುತಿ ತೆಗೆದುಕೊಂಡಿವೆ, ಮತ್ತು ಕೊಲಂಬಿಯದಲ್ಲಿ ನಡೆದ ದೀರ್ಘವಾದ ಗೆರಿಲ್ಲ ಯುದ್ಧಗಳು 1,00,000 ಜನರ ಮರಣಗಳಿಗೆ ಕಾರಣವಾಗಿವೆ.
ಆಂತರಿಕ ಯುದ್ಧದ ಕ್ರೌರ್ಯವು ಮಕ್ಕಳ ಮೇಲೆ ಹೆಚ್ಚು ಪರಿಣಾಮವನ್ನು ಬೀರಿದೆ. ಕಳೆದ ದಶಕದಲ್ಲಿ, ಯುನೈಟಡ್ ನೇಷನ್ಸ್ ಕಮಿಷನರ್ ಫಾರ್ ರೆಫ್ಯುಜೀಸ್ಗನುಸಾರ, 20 ಲಕ್ಷ ಮಕ್ಕಳು ಆಂತರಿಕ ಕದನಗಳಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡರು. 60 ಲಕ್ಷ ಮಂದಿ ಗಾಯಗೊಂಡರು. ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಸೈನಿಕರಾಗಿ ತರಬೇತುಗೊಳಿಸಲಾಗುತ್ತಿದೆ. ಒಬ್ಬ ಬಾಲ ಯೋಧನು ಹೇಳುವುದು: “ಅವರು ನನಗೆ ತರಬೇತಿಯನ್ನು ಕೊಟ್ಟರು. ಒಂದು ಬಂದೂಕನ್ನು ಕೊಟ್ಟರು. ನಾನು ಅಮಲೌಷಧವನ್ನು ತೆಗೆದುಕೊಂಡೆ. ಸಾರ್ವಜನಿಕರನ್ನು ಹತಿಸಿದೆ. ಲೆಕ್ಕವಿಲ್ಲದಷ್ಟು ಸಾರ್ವಜನಿಕರನ್ನು ಕೊಂದೆ. ಇದು ಕೇವಲ ಯುದ್ಧವಾಗಿತ್ತು . . . ನಾನು ಕೇವಲ ಆಜ್ಞೆಗಳಿಗೆ ವಿಧೇಯನಾದೆ. ಅದು ತಪ್ಪೆಂದು ನನಗೆ ತಿಳಿದಿತ್ತು. ಅದು ನನ್ನ ಆಯ್ಕೆಯಾಗಿರಲಿಲ್ಲ.”
ಆಂತರಿಕ ಯುದ್ಧವು ಸರ್ವಸಾಮಾನ್ಯವಾಗಿರುವ ದೇಶಗಳಲ್ಲಿ ಜೀವಿಸುತ್ತಿರುವ ಅನೇಕ ಮಕ್ಕಳು ಶಾಂತಿಯೆಂದರೇನೆಂಬುದನ್ನು ಕೂಡ ತಿಳಿಯದೇ ಬೆಳೆಯುತ್ತಿದ್ದಾರೆ. ಅವರಿಗೆ ತಿಳಿದಿರುವ ಲೋಕದಲ್ಲಿ ಶಾಲೆಗಳು ನಾಶನಕ್ಕೀಡಾಗಿವೆ ಮತ್ತು ಮಾತುಕತೆಯು ಬಂದೂಕಿನಿಂದ ಆಗುತ್ತದೆ. 14 ವರ್ಷ ಪ್ರಾಯದ ಡೂಂಜಾ ಹೇಳುವುದು: “ಎಷ್ಟೋ ಜನರು ಕೊಲ್ಲಲ್ಪಟ್ಟಿದ್ದಾರೆ . . . ಪಕ್ಷಿಗಳ ಮಧುರ ಗಾಯನಗಳು ಎಲ್ಲಿಯೂ ಕೇಳಿಬರುವುದಿಲ್ಲ, ಹತಿಸಲ್ಪಟ್ಟ ಒಬ್ಬ ತಾಯಿ ಅಥವಾ ತಂದೆ, ಸಹೋದರ ಅಥವಾ ಸಹೋದರಿಗಾಗಿ ಗೋಳಾಡುತ್ತಿರುವ ಮಕ್ಕಳ ಧ್ವನಿಗಳೇ ಎಲ್ಲೆಲ್ಲಿಯೂ ಕೇಳಿಬರುತ್ತದೆ.”
ಇದರ ಕಾರಣಗಳಾವುವು?
ಈ ರೀತಿಯ ಕ್ರೂರವಾದ ಆಂತರಿಕ ಯುದ್ಧಗಳ ಜ್ವಾಲೆಗೆ ತುಪ್ಪವನ್ನು ಸೇರಿಸುವದಾವುದು? ಕುಲಸಂಬಂಧಿತ ಮತ್ತು ಜಾತೀಯ
ದ್ವೇಷ, ಧಾರ್ಮಿಕ ಭಿನ್ನತೆಗಳು, ಅನ್ಯಾಯ, ಮತ್ತು ರಾಜಕೀಯ ಅಶಾಂತಿಯು ವಿಶೇಷ ಕಾರಣಗಳಾಗಿವೆ. ಮತ್ತೊಂದು ಮೂಲ ಕಾರಣ ದುರಾಶೆಯಾಗಿದೆ—ಪದವಿಗಾಗಿ ದುರಾಶೆ ಮತ್ತು ಹಣಕ್ಕಾಗಿ ದುರಾಶೆ. ಅನೇಕವೇಳೆ ದುರಾಶೆಯಿಂದ ಪ್ರೇರಿತರಾದ ರಾಜಕೀಯ ಮುಖಂಡರು, ಈ ಹೋರಾಟಗಳನ್ನು ತೀವ್ರಗೊಳಿಸುವ ದ್ವೇಷವನ್ನು ಹೊತ್ತಿಸಿಬಿಡುತ್ತಾರೆ. ಶಸ್ತ್ರಸಜ್ಜಿತ ಕದನಗಳಲ್ಲಿ ಪಾಲಿಗರಾಗುವ ಹೆಚ್ಚು ಮಂದಿ “ಸ್ವಪ್ರಯೋಜನದಿಂದ ಪ್ರೇರಿಸಲ್ಪಟ್ಟಿದ್ದಾರೆ” ಎಂದು SIPRIಯಿಂದ ಪ್ರಕಾಶಿಸಲ್ಪಟ್ಟ ಒಂದು ವರದಿಯು ತಿಳಿಸುತ್ತದೆ. ಆ ವರದಿಯು ಕೂಡಿಸಿ ಹೇಳುವುದು: “ಮಿಲಿಟರಿ ಮತ್ತು ರಾಜಕೀಯ ಮುಖಂಡರಿಂದ ನಡೆಸಲ್ಪಡುವ ದೊಡ್ಡದಾದ ವಜ್ರದ ವಹಿವಾಟಿನಿಂದ ಹಿಡಿದು ಬಂದೂಕುಗಳನ್ನು ಹೊಂದಿರುವ ಯುವಕರು ಗ್ರಾಮಗಳಲ್ಲಿ ಮಾಡುವ ಕೊಳ್ಳೆಯ ವರೆಗೂ ದುರಾಶೆಯು ವಿಭಿನ್ನ ರೂಪಗಳಲ್ಲಿ ವ್ಯಕ್ತವಾಗುತ್ತದೆ.”ಮಾರಕವಾದ ಆದರೆ ಅದೇ ಸಮಯದಲ್ಲಿ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುವ ಶಸ್ತ್ರಗಳು ಕಗ್ಗೊಲೆಗೆ ಹೆಚ್ಚನ್ನು ಕೂಡಿಸುತ್ತವೆ. ಕಿರುಶಸ್ತ್ರಗಳು ಎಂದು ಕರೆಯಲ್ಪಡುವ ಈ ಆಯುಧಗಳನ್ನು ಉಪಯೋಗಿಸುತ್ತಾ ವರ್ಷಕ್ಕೆ 5,00,000 ಜನರನ್ನು ಹತಿಸಲಾಗುತ್ತದೆ, ಮತ್ತು ಇದರಲ್ಲಿ ಮುಖ್ಯವಾಗಿ ಸ್ತ್ರೀಯರು ಮತ್ತು ಮಕ್ಕಳು ಸೇರಿದ್ದಾರೆ. ಆಫ್ರಿಕನ್ ದೇಶವೊಂದರಲ್ಲಿ, ಒಂದು ಎ.ಕೆ. 47 ಅಸಾಲ್ಟ್ ರೈಫಲನ್ನು ಒಂದು ಕೋಳಿಯ ಬೆಲೆಗೆ ಖರೀದಿಸಬಹುದು. ವಿಷಾದಕರವಾಗಿ, ಕೆಲವು ಸ್ಥಳಗಳಲ್ಲಿ ಈ ಸಾಕುಕೋಳಿಗಳಿರುವಷ್ಟೇ ಹೆಚ್ಚು ಸಂಖ್ಯೆಯಲ್ಲಿ ಈ ರೈಫಲ್ಲುಗಳು ಲಭ್ಯವಾಗುತ್ತಿವೆ. ಲೋಕವ್ಯಾಪಕವಾಗಿ ಈ ಕಿರುಶಸ್ತ್ರಗಳು ಮತ್ತು ಸಣ್ಣ ಆಯುಧಗಳು 50 ಕೋಟಿಯಷ್ಟಿವೆ ಎಂದು ಅಂದಾಜುಮಾಡಲಾಗಿದೆ, ಅಂದರೆ ಇದು ಜೀವಂತವಾಗಿರುವ 12 ವ್ಯಕ್ತಿಗಳಿಗೆ ಒಂದು ಆಯುಧದ ಪ್ರಮಾಣದಲ್ಲಿದೆ.
ಉಗ್ರವಾದ ಆಂತರಿಕ ಕದನಗಳೇ 21ನೇ ಶತಮಾನದ ಗುರುತು ಚಿಹ್ನೆಯಾಗುವವೋ? ಆಂತರಿಕ ಯುದ್ಧಗಳನ್ನು ನಿಯಂತ್ರಿಸಲು ಸಾಧ್ಯವಿದೆಯೇ? ಜನರು ಎಂದಾದರೂ ಈ ಕೊಲೆಪಾತಕಗಳನ್ನು ನಿಲ್ಲಿಸುವರೋ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಸಂಬೋಧಿಸುವುದು.
[ಪುಟ 4ರಲ್ಲಿರುವ ಚೌಕ]
ಆಂತರಿಕ ಯುದ್ಧಗಳು ಉಂಟುಮಾಡುವ ಘೋರ ಪ್ರಾಣಹಾನಿ
ಹೆಚ್ಚು ತಾಂತ್ರಿಕವಲ್ಲದಿದ್ದರೂ, ಭೀಕರವಾದ ಆಂತರಿಕ ಯುದ್ಧಗಳಲ್ಲಿ ಅನಾಹುತಕ್ಕೀಡಾಗುವವರಲ್ಲಿ 90 ಪ್ರತಿಶತ ಮಂದಿ ಸಾರ್ವಜನಿಕರೇ ಹೊರತು ಪರಸ್ಪರ ಹೋರಾಡುತ್ತಿರುವ ಪಕ್ಷಗಳ ಯೋಧರಲ್ಲ. “ಸಶಸ್ತ್ರ ಕದನಗಳಲ್ಲಿ, ಮಕ್ಕಳು ಪ್ರಾಸಂಗಿಕ ಬಲಿಗಳಾಗಿರದೆ, ಅದರ ಗುರಿಹಲಗೆಗಳಾಗಿದ್ದಾರೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗಿದೆ,” ಎಂದು ‘ಶಸ್ತ್ರಸಜ್ಜಿತ ಕದನಗಳು ಮಕ್ಕಳ ಮೇಲೆ ಬೀರುವ ಪರಿಣಾಮ’ದ ಕುರಿತು ಯುನೈಟಡ್ ನೇಷನ್ಸ್ ಸೆಕ್ರೆಟರಿ ಜನರಲ್ ಅವರಿಗೆ ಮಾಹಿತಿಯನ್ನು ನೀಡುವ ಪರಿಣತೆಯಾದ ಗ್ರಾಸ್ ಮಾಶೆಲ್ ತಿಳಿಸಿದರು.
ಬಲಾತ್ಕಾರವು ಒಂದು ಉದ್ದೇಶಿತ ಮಿಲಿಟರಿ ತಂತ್ರವಾಗಿ ಪರಿಣಮಿಸಿದೆ. ಕೆಲವು ಯುದ್ಧಪೀಡಿತ ಕ್ಷೇತ್ರಗಳಲ್ಲಿ, ತಾವು ಆಕ್ರಮಿಸಿ ಜಯಗಳಿಸುವ ಊರುಗಳಲ್ಲಿರುವ ಬಹುಮಟ್ಟಿಗೆ ಪ್ರತಿಯೊಬ್ಬ ಎಳೆಯ ತರುಣಿಯ ಮೇಲೆ ಪ್ರತಿಭಟನಕಾರರು ಬಲಾತ್ಕಾರ ಸಂಭೋಗ ನಡೆಸುತ್ತಾರೆ. ಜಾತೀಯ ವೈರಿಗಳಲ್ಲಿ ಭೀತಿಯನ್ನು ಹುಟ್ಟಿಸುವುದು ಮತ್ತು ಕೌಟುಂಬಿಕ ಬಂಧಗಳನ್ನು ನಾಶಗೊಳಿಸುವುದೇ ಈ ಬಲಾತ್ಕಾರ ಸಂಭೋಗಿಗಳ ಉದ್ದೇಶವಾಗಿದೆ.
ಯುದ್ಧವು ಆರಂಭಿಸಿತೆಂದರೆ ಅದನ್ನು ಕ್ಷಾಮ ಮತ್ತು ರೋಗ ಹಿಂಬಾಲಿಸುತ್ತದೆ. ಆಂತರಿಕ ಯುದ್ಧವೆಂದರೆ ನೆಡುವ ಬೆಳೆಯೂ ಕಡಿಮೆ, ಕೊಯ್ಯುವ ಕೊಯ್ಲೂ ಕಡಿಮೆ, ವೈದ್ಯಕೀಯ ಸೇವೆಗಳೂ ಕಡಿಮೆ, ಆವಶ್ಯಕತೆಯುಳ್ಳವರಿಗೆ ಸಿಗುವ ಅಂತಾರಾಷ್ಟ್ರೀಯ ಸಹಾಯವೂ ಕಡಿಮೆ ಎಂದರ್ಥ. ಆಫ್ರಿಕದ ಆಂತರಿಕ ಯುದ್ಧದ ಕುರಿತಾದ ಒಂದು ಅಧ್ಯಯನವು, ಯುದ್ಧದ ಗಾಯಾಳುಗಳಲ್ಲಿ 20 ಪ್ರತಿಶತ ಮಂದಿ ರೋಗದಿಂದಲೂ 78 ಪ್ರತಿಶತ ಮಂದಿ ಹಸಿವೆಯಿಂದಲೂ ಸತ್ತರೆಂದು ತಿಳಿಯಪಡಿಸಿತು. ಆದರೆ ಕಾದಾಟದ ಕಾರಣದಿಂದ ಮೃತಪಟ್ಟವರ ಸಂಖ್ಯೆ ಕೇವಲ 2 ಪ್ರತಿಶತದಷ್ಟು ಮಾತ್ರ.
ಸರಾಸರಿ ಪ್ರತಿ 22 ನಿಮಿಷಕ್ಕೊಮ್ಮೆ ಯಾರಾದರೊಬ್ಬರು ನೆಲಸಿಡಿಮದ್ದನ್ನು ತುಳಿಯುವ ಮೂಲಕ ಒಂದು ಕಾಲನ್ನು ಅಥವಾ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. 60ಕ್ಕಿಂತ ಹೆಚ್ಚು ದೇಶಗಳಲ್ಲಿ ಸುಮಾರು 6ರಿಂದ 7 ಕೋಟಿಯಷ್ಟು ನೆಲಸಿಡಿಮದ್ದುಗಳು ಹೂತಿಡಲ್ಪಟ್ಟಿವೆ ಎಂದು ಅಂದಾಜು ಮಾಡಲಾಗಿದೆ.
ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನಗೈಯುವಂತೆ ನಿರ್ಬಂಧಿಸಲ್ಪಡುತ್ತಾರೆ. ಲೋಕದ ಸುತ್ತಲೂ, ಈಗ 5 ಕೋಟಿ ನಿರಾಶ್ರಿತರು ಮತ್ತು ಪಲಾಯನಗೈಯುವಂತೆ ಒತ್ತಾಯಿಸಲ್ಪಟ್ಟವರು ಇದ್ದಾರೆ. ಇವರಲ್ಲಿ ಅರ್ಧ ಮಂದಿ ಮಕ್ಕಳಾಗಿದ್ದಾರೆ.
[ಪುಟ 2ರಲ್ಲಿರುವ ಚಿತ್ರ ಕೃಪೆ]
COVER: Boy: Photo by Chris Hondros/Getty Images
[ಪುಟ 3ರಲ್ಲಿರುವ ಚಿತ್ರ ಕೃಪೆ]
Photo by Chris Hondros/Getty Images