ದೇವಜನರು ದಯೆಯನ್ನು ಪ್ರೀತಿಸಬೇಕು
ದೇವಜನರು ದಯೆಯನ್ನು ಪ್ರೀತಿಸಬೇಕು
“ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು [“ದಯೆಯನ್ನು ಪ್ರೀತಿಸುವುದು,” Nw], ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.
ಯೆಹೋವನು ದಯೆಯ ದೇವರಾಗಿದ್ದಾನೆ. (ರೋಮಾಪುರ 2:4; 11:22) ಪ್ರಥಮ ದಂಪತಿಯಾದ ಆದಾಮಹವ್ವರು ಆ ದಯೆಗಾಗಿ ಎಷ್ಟೊಂದು ಕೃತಜ್ಞರಾಗಿದ್ದಿರಬೇಕು! ಏದೆನ್ ತೋಟದಲ್ಲಿ ಅವರ ಸುತ್ತಲೂ ಇದ್ದ ದೃಶ್ಯಸೃಷ್ಟಿಯು ಮಾನವರ ಕಡೆಗಿನ ದೇವರ ದಯೆಯ ಸಾಕ್ಷ್ಯವಾಗಿತ್ತು. ಮತ್ತು ಮಾನವರಿಗೆ ಅವುಗಳಲ್ಲಿ ಆನಂದಿಸುವಂಥ ಸಾಮರ್ಥ್ಯವಿತ್ತು. ದೇವರು ಈಗಲೂ ಎಲ್ಲರಿಗೆ, ಕೃತಘ್ನ ಹಾಗೂ ದುಷ್ಟ ಜನರಿಗೂ ದಯೆ ತೋರಿಸುತ್ತಾ ಇದ್ದಾನೆ.
2 ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರಲಾಗಿ ಮಾನವರಿಗೆ ದೇವರ ಗುಣಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯವಿದೆ. (ಆದಿಕಾಂಡ 1:26) ಆದುದರಿಂದ, ನಾವೂ ದಯೆಯನ್ನು ತೋರಿಸುವಂತೆ ಯೆಹೋವನು ನಿರೀಕ್ಷಿಸುವುದು ಆಶ್ಚರ್ಯದ ಸಂಗತಿಯಲ್ಲ. ಮೀಕ 6:8 ತಿಳಿಸುವಂತೆ, ದೇವಜನರು “ದಯೆಯನ್ನು ಪ್ರೀತಿ”ಸಬೇಕು. ಆದರೆ ದಯೆ ಎಂದರೇನು? ಅದು ಇನ್ನಿತರ ದೈವಿಕ ಗುಣಗಳೊಂದಿಗೆ ಹೇಗೆ ಸಂಬಂಧಿಸಿದೆ? ಮಾನವರು ದಯೆಯನ್ನು ತೋರಿಸಲು ಸಮರ್ಥರಾಗಿರುವಾಗ, ಈ ಲೋಕವು ಇಷ್ಟೊಂದು ಕ್ರೂರ ಹಾಗೂ ಕಠೋರವಾದ ಸ್ಥಳವಾಗಿರುವುದೇಕೆ? ಕ್ರೈಸ್ತರೋಪಾದಿ ನಾವು, ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ದಯೆಯನ್ನು ಏಕೆ ತೋರಿಸಬೇಕು?
ದಯೆ ಎಂದರೇನು?
3 ಇತರರ ಕ್ಷೇಮದ ಕುರಿತು ಸಕ್ರಿಯ ಆಸಕ್ತಿಯನ್ನು ತೋರಿಸುವ ಮೂಲಕ ದಯೆಯನ್ನು ತೋರಿಸಲಾಗುತ್ತದೆ. ಸಹಾಯಕಾರಿ ಕೃತ್ಯಗಳು ಮತ್ತು ಕಾಳಜಿಭರಿತ ಮಾತುಗಳ ಮೂಲಕ ಅದನ್ನು ತೋರಿಸಲಾಗುತ್ತದೆ. ದಯಾಪರರಾಗಿರುವುದರ ಅರ್ಥ, ಹಾನಿಯನ್ನು ಮಾಡುವುದಲ್ಲ ಬದಲಾಗಿ ಒಳಿತನ್ನು ಮಾಡುವುದಾಗಿದೆ. ಒಬ್ಬ ದಯಾಪರ ವ್ಯಕ್ತಿಯು, ಸ್ನೇಹಪರ, ಸೌಮ್ಯ, ಸಹಾನುಭೂತಿಯುಳ್ಳವನು ಮತ್ತು ವಿನಯಶೀಲನೂ ಆಗಿರುತ್ತಾನೆ. ಇತರರ ಕಡೆಗೆ ಅವನಿಗೆ ಉದಾರಭಾವದ, ಕಾಳಜಿಭರಿತ ಮನೋಭಾವವಿರುತ್ತದೆ. ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:12) ಹಾಗಾದರೆ ದಯೆಯು, ಪ್ರತಿಯೊಬ್ಬ ಸತ್ಕ್ರೈಸ್ತನ ಸಾಂಕೇತಿಕ ಉಡುಪಿನ ಭಾಗವಾಗಿದೆ.
4 ದಯೆಯನ್ನು ತೋರಿಸುವುದರಲ್ಲಿ ಯೆಹೋವ ದೇವರೇ ಆರಂಭದ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ. ಪೌಲನು ಹೇಳಿದಂತೆ, “ನಮ್ಮ ರಕ್ಷಕನಾದ ದೇವರ ದಯೆಯೂ ಜನೋಪಕಾರವೂ ಪ್ರತ್ಯಕ್ಷವಾದಾಗ”ಲೇ “ಪುನರ್ಜನ್ಮವನ್ನು ಸೂಚಿಸುವ [“ನಮ್ಮನ್ನು ಜೀವಕ್ಕೆ ತಂದ,” NW] ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನು [“ಪವಿತ್ರಾತ್ಮವು,” NW] ನಮ್ಮಲ್ಲಿ ನೂತನಸ್ವಭಾವವನ್ನು ಉಂಟು ಮಾಡುವದರ ಮೂಲಕವಾಗಿಯೂ ಆತನು ನಮ್ಮನ್ನು ರಕ್ಷಿಸಿದನು.” (ತೀತ 3:4, 5) ದೇವರು ಅಭಿಷಿಕ್ತ ಕ್ರೈಸ್ತರನ್ನು ಯೇಸುವಿನ ರಕ್ತದಲ್ಲಿ ‘ಸ್ನಾನಮಾಡಿಸುತ್ತಾನೆ’ ಇಲ್ಲವೆ ಶುದ್ಧಗೊಳಿಸುತ್ತಾನೆ. ಇದರರ್ಥ, ಅವರಿಗಾಗಿ ಆತನು ಕ್ರಿಸ್ತನ ಈಡು ಯಜ್ಞದ ಮೌಲ್ಯವನ್ನು ಅನ್ವಯಿಸುತ್ತಾನೆ. ಅವರನ್ನು ಪವಿತ್ರಾತ್ಮದ ಮೂಲಕ ನೂತನ ಮಾಡಲಾಗುತ್ತದೆ. ಹೀಗೆ ಅವರು ದೇವರ ಆತ್ಮಜನಿತ ಪುತ್ರರೋಪಾದಿ “ನೂತನಸೃಷ್ಟಿ”ಯಾಗುತ್ತಾರೆ. (2 ಕೊರಿಂಥ 5:17) ಅದಲ್ಲದೆ, ದೇವರ ದಯೆ ಮತ್ತು ಪ್ರೀತಿಯು “ಮಹಾ ಸಮೂಹ”ದವರಿಗೂ ವ್ಯಾಪಿಸುತ್ತದೆ. ಇವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.”—ಪ್ರಕಟನೆ 7:9, 14; 1 ಯೋಹಾನ 2:1, 2.
5 ದಯೆಯು, ದೇವರ ಪವಿತ್ರಾತ್ಮ ಇಲ್ಲವೆ ಸಕ್ರಿಯ ಶಕ್ತಿಯ ಒಂದು ಫಲವೂ ಆಗಿದೆ. ಪೌಲನು ಹೇಳಿದ್ದು: ‘ದೇವರಾತ್ಮದಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.’ (ಗಲಾತ್ಯ 5:22, 23) ಹೀಗಿರುವುದರಿಂದ, ದೇವರಾತ್ಮದಿಂದ ನಡೆಸಲ್ಪಟ್ಟವರು ಇತರರಿಗೆ ದಯೆಯನ್ನು ತೋರಿಸಲೇಬೇಕಲ್ಲವೇ?
ನಿಜ ದಯೆಯು ದೌರ್ಬಲ್ಯವಲ್ಲ
6 ಕೆಲವು ಜನರು ದಯೆಯನ್ನು ದೌರ್ಬಲ್ಯವಾಗಿ ವೀಕ್ಷಿಸುತ್ತಾರೆ. ಒಬ್ಬ ವ್ಯಕ್ತಿಯು ಕಠೋರಸ್ವಭಾವದವನಾಗಿರಬೇಕು, ಕೆಲವೊಮ್ಮೆ ಒರಟೂ ಆಗಿರಬೇಕು, ಆಗ ಮಾತ್ರ ಬೇರೆಯವರು ಅವನ ಸ್ವಭಾವಬಲವನ್ನು ತಿಳಿಯಬಲ್ಲರೆಂದು ಅವರಿಗನಿಸುತ್ತದೆ. ಆದರೆ ವಾಸ್ತವದಲ್ಲಿ ನಿಜವಾದ ಶಕ್ತಿಯು, ಯಥಾರ್ಥವಾಗಿ ದಯೆ ತೋರಿಸಲಿಕ್ಕಾಗಿ ಮತ್ತು ತಪ್ಪಾದ ದಯೆಯನ್ನು ತೋರಿಸದಿರಲಿಕ್ಕಾಗಿ ಬೇಕಾಗುತ್ತದೆ. ನಿಜವಾದ ದಯೆಯು ದೇವರಾತ್ಮದ ಒಂದು ಫಲವಾಗಿರುವುದರಿಂದ, ಅದು ತಪ್ಪು ನಡತೆಯ ಕಡೆಗೆ ದುರ್ಬಲವಾದ, ರಾಜಿಮಾಡಿಕೊಳ್ಳುವಂಥ ಒಂದು ಮನೋಭಾವವಾಗಿರಲಾರದು. ಇನ್ನೊಂದು ಬದಿಯಲ್ಲಿ, ತಪ್ಪಾದ ದಯೆಯು ಒಂದು ದೌರ್ಬಲ್ಯವಾಗಿದ್ದು, ಒಬ್ಬನು ತಪ್ಪುಗೈಯುವಿಕೆಯನ್ನು ಅಲಕ್ಷಿಸಿ ಮನ್ನಿಸುವಂತೆ ಮಾಡುತ್ತದೆ.
7 ಉದಾಹರಣೆಗಾಗಿ, ಇಸ್ರಾಯೇಲಿನ ಮಹಾಯಾಜಕನಾದ ಏಲಿಯನ್ನು ಪರಿಗಣಿಸಿರಿ. ದೇವದರ್ಶನಗುಡಾರದಲ್ಲಿ ಯಾಜಕರಾಗಿ ಕೆಲಸಮಾಡುತ್ತಿದ್ದ ಅವನ ಪುತ್ರರಾದ ಹೊಫ್ನಿ ಮತ್ತು ಫೀನೆಹಾಸರಿಗೆ ಶಿಸ್ತು ಕೊಡುವುದನ್ನು ಅವನು ಅಲಕ್ಷ್ಯಮಾಡಿದನು. ಅವನ ಈ ಪುತ್ರರು, ಧರ್ಮಶಾಸ್ತ್ರಕ್ಕನುಸಾರವಾಗಿ ಅವರಿಗೆ ನೇಮಿಸಲ್ಪಟ್ಟಿದ್ದಂಥ ಯಜ್ಞದ ಭಾಗದಿಂದ ತೃಪ್ತರಾಗದೆ, ಯಜ್ಞಾರ್ಪಿಸುತ್ತಿದ್ದವನು ವೇದಿಯ ಮೇಲೆ ಕೊಬ್ಬನ್ನು ಹೋಮಮಾಡುವದಕ್ಕಿಂತ ಮುಂಚೆಯೇ ಹಸಿಮಾಂಸವನ್ನು ಒತ್ತಾಯದಿಂದ ತರುವಂತೆ ಒಬ್ಬ ಆಳನ್ನು ಕಳುಹಿಸುತ್ತಿದ್ದರು. ಏಲಿಯ ಈ ಪುತ್ರರು ದೇವದರ್ಶನಗುಡಾರದ ಬಾಗಲಿನಲ್ಲಿ ಸೇವೆಮಾಡುತ್ತಿದ್ದ ಸ್ತ್ರೀಯರೊಡನೆ ಅನೈತಿಕವಾದ ಲೈಂಗಿಕ ಸಂಬಂಧವನ್ನೂ ಇಟ್ಟುಕೊಂಡಿದ್ದರು. ಆದರೆ ಅವರನ್ನು ಆ ಸ್ಥಾನದಿಂದ ಉಚ್ಛಾಟಿಸುವ ಬದಲು, ಏಲಿಯು ಅವರನ್ನು ಸೌಮ್ಯವಾಗಿ ಗದರಿಸಿದನು ಅಷ್ಟೇ. (1 ಸಮುವೇಲ 2:12-29) ಹೀಗಿರುವುದರಿಂದಲೇ “ಆ ಕಾಲದಲ್ಲಿ ದೇವೋಕ್ತಿಗಳು ವಿರಳ” ಆಗಿದ್ದುದರಲ್ಲಿ ಏನೂ ಆಶ್ಚರ್ಯವಿಲ್ಲ! (1 ಸಮುವೇಲ 3:1) ಸಭೆಯ ಆಧ್ಯಾತ್ಮಿಕತೆಯನ್ನು ಅಪಾಯಕ್ಕೊಡ್ಡಬಲ್ಲ ತಪ್ಪಿತಸ್ಥರಿಗೆ ತಪ್ಪಾದ ದಯೆಯನ್ನು ತೋರಿಸಿ ರಾಜಿಮಾಡಿಕೊಳ್ಳುವ ವಿಷಯದಲ್ಲಿ ಕ್ರೈಸ್ತ ಹಿರಿಯರು ಜಾಗರೂಕರಾಗಿರಬೇಕು. ದೇವರ ಮಟ್ಟಗಳನ್ನು ಉಲ್ಲಂಘಿಸುವ ದುಷ್ಟ ಮಾತುಗಳು ಮತ್ತು ಕೃತ್ಯಗಳ ವಿಷಯದಲ್ಲಿ ನಿಜ ದಯೆಯು ಕುರುಡಾಗಿರುವುದಿಲ್ಲ.
8 ನಮ್ಮ ಆದರ್ಶವ್ಯಕ್ತಿ, ಯೇಸು ಕ್ರಿಸ್ತನು ಎಂದೂ ತಪ್ಪಾದ ದಯೆಯನ್ನು ತೋರಿಸಲಿಲ್ಲ. ಅವನು ನಿಜ ದಯೆಯ ಸಾಕಾರರೂಪವೇ ಆಗಿದ್ದನು. ದೃಷ್ಟಾಂತಕ್ಕಾಗಿ, ಅವನು ‘ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.’ ಪ್ರಾಮಾಣಿಕಹೃದಯದ ಜನರು, ಯೇಸುವಿನ ಬಳಿ ಬರಲು ಹಿಂಜರಿಯಲಿಲ್ಲ; ಅವರು ತಮ್ಮ ಚಿಕ್ಕ ಮಕ್ಕಳನ್ನೂ ಅವನ ಬಳಿ ತಂದರು. ಅವನು ಆ ಮಕ್ಕಳನ್ನು “ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿ” ತೋರಿಸಿದಂಥ ದಯೆ ಮತ್ತು ಕರುಣೆಯ ಕುರಿತು ತುಸು ಯೋಚಿಸಿ. (ಮತ್ತಾಯ 9:36; ಮಾರ್ಕ 10:13-16) ಯೇಸು ದಯಾಪರನಾಗಿದ್ದರೂ, ಅವನ ಸ್ವರ್ಗೀಯ ತಂದೆಯ ದೃಷ್ಟಿಯಲ್ಲಿ ಸರಿಯಾಗಿದ್ದದ್ದನ್ನು ಮಾಡಲು ಅವನು ಸ್ಥಿರಚಿತ್ತನಾಗಿದ್ದನು. ಯೇಸು ಎಂದೂ ದುಷ್ಟತನವನ್ನು ಅಲಕ್ಷಿಸಿ ಮನ್ನಿಸಲಿಲ್ಲ; ಕಪಟಿಗಳಾದ ಧಾರ್ಮಿಕ ಮುಖಂಡರನ್ನು ಖಂಡಿಸುವ ದೇವದತ್ತ ಧೈರ್ಯ ಅವನಿಗಿತ್ತು. ಮತ್ತಾಯ 23:13-26ರಲ್ಲಿ ತೋರಿಸಲ್ಪಟ್ಟಿರುವಂತೆ, ಅವನು ಪದೇಪದೇ “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ”! ಎಂಬ ಘೋಷಣೆಯನ್ನು ಪುನರುಚ್ಚರಿಸಿದನು.
ದಯೆ ಮತ್ತು ಇತರ ದೈವಿಕ ಗುಣಗಳು
9 ದಯೆಯು, ದೇವರಾತ್ಮದಿಂದ ಉತ್ಪಾದಿಸಲ್ಪಟ್ಟಿರುವ ಇತರ ಗುಣಗಳಿಗೆ ಸಂಬಂಧಿಸಿದೆ. ಅದನ್ನು “ದೀರ್ಘಶಾಂತಿ” ಮತ್ತು “ಉಪಕಾರ” ಎಂಬ ಗುಣಗಳ ನಡುವೆ ಪಟ್ಟಿಮಾಡಲಾಗಿದೆ. ಹೌದು, ದಯೆಯನ್ನು ಬೆಳೆಸಿಕೊಳ್ಳುವ ವ್ಯಕ್ತಿಯು, ದೀರ್ಘಶಾಂತನಾಗಿರುವ ಮೂಲಕ ಆ ಗುಣವನ್ನು ಪ್ರದರ್ಶಿಸುತ್ತಾನೆ. ನಿರ್ದಯ
ವ್ಯಕ್ತಿಗಳೊಂದಿಗೂ ಅವನು ತಾಳ್ಮೆಯಿಂದಿರುತ್ತಾನೆ. ದಯೆಯು ಉಪಕಾರ ಎಂಬ ಗುಣದೊಂದಿಗೆ ಸಂಬಂಧಿಸಿರುತ್ತದೆ ಏಕೆಂದರೆ, ಇತರರ ಪ್ರಯೋಜನಾರ್ಥವಾಗಿ ಸಹಾಯಕಾರಿ ಕೃತ್ಯಗಳಲ್ಲಿ ಅದನ್ನು ಅನೇಕವೇಳೆ ಪ್ರದರ್ಶಿಸಲಾಗುತ್ತದೆ. ಕೆಲವೊಮ್ಮೆ, ಬೈಬಲ್ನಲ್ಲಿ “ದಯೆ”ಗಾಗಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಪದವು “ಉಪಕಾರ” ಎಂದು ಭಾಷಾಂತರಿಸಲ್ಪಟ್ಟಿರಬಹುದು. ಆದಿ ಕ್ರೈಸ್ತರ ನಡುವೆ ತೋರಿಸಲ್ಪಟ್ಟ ಈ ಗುಣವು ವಿಧರ್ಮಿ ಜನರನ್ನು ಎಷ್ಟು ಬೆರಗುಗೊಳಿಸಿತ್ತೆಂದರೆ, ಟೆರ್ಟಲ್ಯನ್ಗನುಸಾರ, ಅವರು ಯೇಸುವಿನ ಹಿಂಬಾಲಕರನ್ನು ‘ದಯೆಯಿಂದ ರಚಿತರಾಗಿರುವ ಜನರು’ ಎಂದು ಕರೆಯುತ್ತಿದ್ದರು.10 ದಯೆ ಮತ್ತು ಪ್ರೀತಿಯ ನಡುವೆ ಒಂದು ಸಂಬಂಧವಿದೆ. ತನ್ನ ಹಿಂಬಾಲಕರ ಬಗ್ಗೆ ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಮತ್ತು ಈ ಪ್ರೀತಿಯ ಬಗ್ಗೆ ಪೌಲನು ಹೇಳಿದ್ದು: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು.” (1 ಕೊರಿಂಥ 13:4) ದಯೆಯು, ಶಾಸ್ತ್ರಗಳಲ್ಲಿ ಅನೇಕಸಲ ಉಪಯೋಗಿಸಲ್ಪಟ್ಟಿರುವ “ಪ್ರೀತಿಪೂರ್ವಕ ದಯೆ” (NW) ಎಂಬ ಪದದೊಂದಿಗೆ ಜೋಡಿಸಲ್ಪಟ್ಟಿದೆ. ಇದು ನಿಷ್ಠಾವಂತ ಪ್ರೀತಿಯಿಂದ ಹೊಮ್ಮುವಂಥ ದಯೆಯಾಗಿದೆ. “ಪ್ರೀತಿಪೂರ್ವಕ ದಯೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ನಾಮಪದದಲ್ಲಿ ಕೋಮಲ ವಾತ್ಸಲ್ಯಕ್ಕಿಂತಲೂ ಹೆಚ್ಚು ಒಳಗೂಡಿದೆ. ಇದು, ಒಬ್ಬ ವ್ಯಕ್ತಿ ಅಥವಾ ಒಂದು ವಿಷಯಕ್ಕೆ ತನ್ನನ್ನು ಪ್ರೀತಿಯಿಂದ ಅಂಟಿಸಿಕೊಳ್ಳುವ ಮತ್ತು ಆ ವ್ಯಕ್ತಿ ಅಥವಾ ವಿಷಯದ ಸಂಬಂಧದಲ್ಲಿ ಅದರ ಉದ್ದೇಶವು ಪೂರೈಸಲ್ಪಡುವ ತನಕ ಅದರಿಂದ ಅಗಲದಿರುವ ದಯೆ ಆಗಿದೆ. ಯೆಹೋವನ ಪ್ರೀತಿಪೂರ್ವಕ ದಯೆ, ಇಲ್ಲವೆ ನಿಷ್ಠಾವಂತ ಪ್ರೀತಿಯು, ಬೇರೆ ಬೇರೆ ವಿಧಗಳಲ್ಲಿ ತೋರಿಸಲ್ಪಡುತ್ತದೆ. ಉದಾಹರಣೆಗೆ, ಅದು ಆತನ ವಿಮೋಚನೆ ಹಾಗೂ ಸಂರಕ್ಷಣೆಯ ಕೃತ್ಯಗಳಲ್ಲಿ ತೋರಿಬರುತ್ತದೆ.—ಕೀರ್ತನೆ 6:4; 40:11; 143:12.
11 ಯೆಹೋವನ ಪ್ರೀತಿಪೂರ್ವಕ ದಯೆಯು ಜನರನ್ನು ಆತನ ಕಡೆಗೆ ಆಕರ್ಷಿಸುತ್ತದೆ. (ಯೆರೆಮೀಯ 31:3, NW) ದೇವರ ನಂಬಿಗಸ್ತ ಸೇವಕರಿಗೆ ವಿಮೋಚನೆ ಇಲ್ಲವೆ ಸಹಾಯದ ಅಗತ್ಯವಿರುವ ಸಮಯದಲ್ಲಿ ಆತನು ಅವರಿಗೆ ಪ್ರೀತಿಪೂರ್ವಕ ದಯೆಯನ್ನು ಖಂಡಿತವಾಗಿಯೂ ತೋರಿಸುವನೆಂದು ಅವರಿಗೆ ತಿಳಿದಿದೆ. ಅದು ಎಂದೂ ಕೈಗೊಡದು. ಆದುದರಿಂದ, ಅವರು “ನಾನಂತೂ ನಿನ್ನ ಕೃಪೆಯಲ್ಲಿ [“ಪ್ರೀತಿಪೂರ್ವಕ ದಯೆಯಲ್ಲಿ,” NW] ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವದು” ಎಂದು ಹೇಳಿದ ಕೀರ್ತನೆಗಾರನಂತೆ ನಂಬಿಕೆಯಿಂದ ಪ್ರಾರ್ಥಿಸಬಲ್ಲರು. (ಕೀರ್ತನೆ 13:5) ದೇವರ ಪ್ರೀತಿಯು ನಿಷ್ಠೆಯುಳ್ಳದ್ದಾಗಿರುವುದರಿಂದ, ಆತನ ಸೇವಕರು ಆತನಲ್ಲಿ ಸಂಪೂರ್ಣ ಭರವಸೆಯನ್ನಿಡಬಲ್ಲರು. ಅವರಿಗೆ ಈ ಆಶ್ವಾಸನೆಯಿದೆ: “ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವದಿಲ್ಲ; ತನ್ನ ಸ್ವಾಸ್ತ್ಯವನ್ನು ಕೈಬಿಡುವದಿಲ್ಲ.”—ಕೀರ್ತನೆ 94:14.
ಈ ಲೋಕವು ಏಕೆ ಇಷ್ಟೊಂದು ಕ್ರೂರವಾಗಿದೆ?
12 ಈ ಪ್ರಶ್ನೆಗೆ ಉತ್ತರವು, ಏದೆನ್ ತೋಟದಲ್ಲಿ ಏನು ನಡೆಯಿತೊ ಅದರೊಂದಿಗೆ ಸಂಬಂಧಿಸಿರುತ್ತದೆ. ಮಾನವ ಇತಿಹಾಸದ ಆರಂಭದಲ್ಲಿ, ಸ್ವಾರ್ಥಿ ಹಾಗೂ ಅಹಂಕಾರಿಯಾಗಿ ಪರಿಣಮಿಸಿದ ಆತ್ಮಜೀವಿಯೊಬ್ಬನು, ಲೋಕಾಧಿಪತಿಯಾಗುವ ಪಿತೂರಿ ಹೂಡಿದನು. ಅವನ ಸಂಚಿನ ಪರಿಣಾಮವಾಗಿ ಅವನು “ಇಹಲೋಕಾಧಿಪತಿ”ಯಂತೂ ಆದನು, ಆದರೆ ತುಂಬ ದಬ್ಬಾಳಿಕೆಯ ಅಧಿಪತಿಯಾದನು. (ಯೋಹಾನ 12:31) ಅವನೇ ಪಿಶಾಚನಾದ ಸೈತಾನನೆಂದು ಪ್ರಸಿದ್ಧನಾದನು. ದೇವರ ಹಾಗೂ ಮನುಷ್ಯನ ಪರಮ ವಿರೋಧಿ. (ಯೋಹಾನ 8:44; ಪ್ರಕಟನೆ 12:9) ಯೆಹೋವನ ದಯಾಪರ ಆಳ್ವಿಕೆಗೆ ಪ್ರತಿಸ್ಪರ್ಧಿಯಾಗಿರುವ ಆಳ್ವಿಕೆಯನ್ನು ಸ್ಥಾಪಿಸುವ ಅವನ ಸ್ವಾರ್ಥಪರ ಹೂಟವು, ಹವ್ವಳ ಸೃಷ್ಟಿಯ ಸ್ವಲ್ಪ ಸಮಯದ ನಂತರ ರಟ್ಟಾಯಿತು. ಹೀಗೆ, ಆದಾಮನು ದೇವರ ದಯೆಯನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾ ದೇವರ ಆಳ್ವಿಕೆಯಿಂದ ಸ್ವತಂತ್ರವಾಗುವ ಆಯ್ಕೆಯನ್ನು ಮಾಡಿದಾಗ ಕೆಟ್ಟ ಆಳ್ವಿಕೆಯ ಆರಂಭವಾಯಿತು. (ಆದಿಕಾಂಡ 3:1-6) ಆದರೆ ನಿಜವಾಗಿಯೂ ಸ್ವತಂತ್ರರಾಗುವ ಬದಲು, ಆದಾಮಹವ್ವರು, ಪಿಶಾಚನ ಸ್ವಾರ್ಥ ಹಾಗೂ ಗರ್ವಭರಿತ ಪ್ರಭಾವದಡಿ ಬರುತ್ತಾ, ಅವನ ಆಳ್ವಿಕೆಯ ಪ್ರಜೆಗಳಾದರು.
13 ಇದರ ಕೆಲವೊಂದು ಫಲಿತಾಂಶಗಳನ್ನು ಪರಿಗಣಿಸಿರಿ. ಪರದೈಸಾಗಿದ್ದ ಭೂಮಿಯ ಭಾಗದಿಂದ ಆದಾಮಹವ್ವರನ್ನು ಹೊರಹಾಕಲಾಯಿತು. ಅವರ ಸ್ಥಿತಿಯು, ಸುಲಭವಾಗಿ ಕೈಗೆಟಕುತ್ತಿದ್ದ ಆರೋಗ್ಯಪೂರ್ಣ ಹಣ್ಣುಹಂಪಲು ಮತ್ತು ತರಕಾರಿಗಳಿದ್ದ ಹಚ್ಚಹಸುರಾದ ಉದ್ಯಾನದಲ್ಲಿನ ಜೀವನದಿಂದ ಏದೆನ್ ತೋಟದ ಹೊರಗಿರುವ ಕಷ್ಟಕರವಾದ ಸ್ಥಿತಿಯಲ್ಲಿ ಜೀವಿಸುವುದಕ್ಕೆ ಬದಲಾಯಿತು. ದೇವರು ಆದಾಮನಿಗೆ ಹೀಗಂದನು: “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ಹೆಂಡತಿಯ ಮಾತು ಕೇಳಿ ತಿಂದ ಕಾರಣ ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು.” ಭೂಮಿಯ ವಿರುದ್ಧ ನುಡಿಯಲ್ಪಟ್ಟ ಶಾಪವು, ಅದರಲ್ಲಿ ವ್ಯವಸಾಯಮಾಡುವುದು ಈಗ ತುಂಬ ಕಷ್ಟಕರವಾಗಿರುವುದೆಂಬದನ್ನು ಅರ್ಥೈಸಿತು. ಮುಳ್ಳುಕಳೆಗಳಿಂದ ತುಂಬಿದ ಆ ಶಾಪಗ್ರಸ್ತ ಭೂಮಿಯ ಪರಿಣಾಮಗಳನ್ನು ಆದಿಕಾಂಡ 3:17-19; 5:29.
ಆದಾಮನ ವಂಶಜರು ಎಷ್ಟು ತೀವ್ರವಾಗಿ ಅನುಭವಿಸಿದರೆಂದರೆ, ನೋಹನ ತಂದೆಯಾದ ಲೆಮೆಕನು ‘ಯೆಹೋವನು ಶಪಿಸಿದ ಭೂಮಿಯಿಂದ ಉಂಟಾದ ಶ್ರಮೆಯ’ ಬಗ್ಗೆ ಮಾತಾಡಿದನು.—14 ಆದಾಮಹವ್ವರು ನೆಮ್ಮದಿಯನ್ನು ಸಂಕಟಕ್ಕಾಗಿ ವಿನಿಮಯಮಾಡಿಕೊಂಡರು. ದೇವರು ಹವ್ವಳಿಗೆ ಹೇಳಿದ್ದು: “ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು.” ತದನಂತರ, ಆದಾಮಹವ್ವರ ಜ್ಯೇಷ್ಠಪುತ್ರನಾದ ಕಾಯಿನನು, ತನ್ನ ತಮ್ಮನಾದ ಹೇಬೆಲನನ್ನು ಕೊಲ್ಲುವ ಕ್ರೂರ ಕೃತ್ಯಗೈದನು.—ಆದಿಕಾಂಡ 3:16; 4:8.
15 “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಅಪೊಸ್ತಲ ಯೋಹಾನನು ಘೋಷಿಸಿದನು. (1 ಯೋಹಾನ 5:19) ಈ ಲೋಕವು ಅದರ ಅಧಿಪತಿಯಂತೆಯೇ, ಸ್ವಾರ್ಥಭಾವ ಮತ್ತು ಅಹಂಕಾರವನ್ನು ಸೇರಿಸಿ ದುಷ್ಟ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಹೀಗಿರಲಾಗಿ, ಅದು ಕಠೋರತೆ ಮತ್ತು ಕ್ರೂರತೆಯಿಂದ ತುಂಬಿರುವುದರಲ್ಲಿ ಆಶ್ಚರ್ಯವೇನಿಲ್ಲ! ಆದರೆ ಇದು ಸದಾ ಹೀಗೆಯೇ ಇರದು. ತನ್ನ ರಾಜ್ಯದಲ್ಲಿ ಕಠೋರತೆ ಹಾಗೂ ಕ್ರೂರತೆಯ ಬದಲಿಗೆ ದಯೆ ಮತ್ತು ಕರುಣೆಯು ರಾರಾಜಿಸುವುದನ್ನು ಯೆಹೋವನು ಖಚಿತಪಡಿಸಿಕೊಳ್ಳುವನು.
ದೇವರ ರಾಜ್ಯದ ಕೆಳಗೆ ದಯೆಯು ರಾರಾಜಿಸುವುದು
16 ಯೆಹೋವನು ಮತ್ತು ಆತನ ರಾಜ್ಯದ ನೇಮಿತ ರಾಜನಾದ ಯೇಸು ಕ್ರಿಸ್ತನು, ತಮ್ಮ ಪ್ರಜೆಗಳು ದಯೆಗಾಗಿ ಪ್ರಸಿದ್ಧರಾಗಿರುವಂತೆ ಅಪೇಕ್ಷಿಸುತ್ತಾರೆ. (ಮೀಕ 6:8) ತನ್ನ ತಂದೆಯು ತನಗೆ ಒಪ್ಪಿಸಿರುವ ಆಡಳಿತವು ಹೇಗೆ ದಯೆಯಿಂದ ಗುರುತಿಸಲ್ಪಡುವುದು ಎಂಬುದರ ನಸುನೋಟವನ್ನು ಯೇಸು ಕ್ರಿಸ್ತನು ನಮಗೆ ಕೊಟ್ಟನು. (ಇಬ್ರಿಯ 1:3) ಜನರ ಮೇಲೆ ಭಾರವಾದ ಹೊರೆಗಳನ್ನು ಹಾಕಿದ ಸುಳ್ಳು ಧಾರ್ಮಿಕ ಮುಖಂಡರನ್ನು ಬಯಲಿಗೆಳೆದಂಥ ಯೇಸುವಿನ ಮಾತುಗಳಲ್ಲಿ ಇದನ್ನು ಗಮನಿಸಬಹುದು. ಅವನಂದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ಲೋಕದ ಹೆಚ್ಚಿನ ಧುರೀಣರು—ಧಾರ್ಮಿಕ ನಾಯಕರಾಗಿರಲಿ ಇಲ್ಲವೆ ಇತರರಾಗಿರಲಿ—ಜನರ ಮೇಲೆ ಅಂತ್ಯವಿಲ್ಲದ ನಿಯಮಗಳ ಮತ್ತು ಕೃತಜ್ಞತೆತೋರಿಸಲಾಗದಂಥ ಕೆಲಸಗಳ ಭಾರವನ್ನು ಹೇರಿ, ಬಳಲಿಬೆಂಡಾಗಿಸುತ್ತಾರೆ. ಆದರೆ ಯೇಸು ತನ್ನ ಹಿಂಬಾಲಕರಿಂದ ಏನನ್ನು ಅಪೇಕ್ಷಿಸುತ್ತಾನೊ ಅದು ಅವರ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿದ್ದು, ಅವರ ಸಾಮರ್ಥ್ಯಗಳ ಮೇರೆಗಳೊಳಗೆ ಇದೆ. ನಿಜವಾಗಿಯೂ ಇದೊಂದು ಚೈತನ್ಯದಾಯಕ, ಹೌರವಾದ ನೊಗವಾಗಿದೆ! ಇತರರಿಗೂ ಇದೇ ರೀತಿಯ ದಯೆಯನ್ನು ತೋರಿಸಿ ಅವನಂತಿರಲು ನಾವು ಪ್ರಚೋದಿಸಲ್ಪಡುವುದಿಲ್ಲವೊ?—ಯೋಹಾನ 13:15.
17 ಯೇಸು ತನ್ನ ಅಪೊಸ್ತಲರಿಗೆ ಮಾಡಿದಂಥ ಗಮನಸೆಳೆಯುವಂಥ ಹೇಳಿಕೆಗಳು, ದೇವರ ರಾಜ್ಯದಾಳಿಕೆಯು ಮಾನವಾಳ್ವಿಕೆಯಿಂದ ಹೇಗೆ ಎದ್ದುಕಾಣುವಂಥ ರೀತಿಯಲ್ಲಿ ಭಿನ್ನವಾಗಿರುವುದೆಂಬದನ್ನು ಎತ್ತಿತೋರಿಸುತ್ತವೆ. ಬೈಬಲ್ ತಿಳಿಸುವುದು: “ಇದಲ್ಲದೆ ತಮ್ಮಲ್ಲಿ ಯಾವನು ಹೆಚ್ಚಿನವನೆನಿಸಿಕೊಳ್ಳುವವನು ಎಂಬ ವಿಷಯದಲ್ಲಿ ಅವರೊಳಗೆ [ಶಿಷ್ಯರೊಳಗೆ] ಚರ್ಚೆ ಹುಟ್ಟಿತು. ಆಗ ಆತನು ಅವರಿಗೆ—ಅನ್ಯದೇಶದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನಮಾಡುತ್ತಾರೆ, ಮತ್ತು ಅವರ ಮೇಲೆ ಲೂಕ 22:24-27.
ಅಧಿಕಾರ ನಡಿಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ನೀವು ಹಾಗಿರಬಾರದು; ನಿಮ್ಮಲ್ಲಿ ಹೆಚ್ಚಿನವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು. ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.”—18 ಮಾನವ ಅಧಿಪತಿಗಳು, ಜನರ ಮೇಲೆ ‘ದೊರೆತನಮಾಡುವ’ ಮೂಲಕ ಮತ್ತು ಉನ್ನತ ಪದವಿಗಳನ್ನು ಹೊಂದುವುದು ಅವರ ಆಳ್ವಿಕೆಯ ಕೆಳಗಿರುವ ಜನರಿಗಿಂತ ಅವರನ್ನು ಶ್ರೇಷ್ಠರನ್ನಾಗಿ ಮಾಡುತ್ತದೊ ಎಂಬಂತೆ ಅಂಥ ಪದವಿಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ತಮ್ಮ ದೊಡ್ಡತನವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ. ಆದರೆ ನಿಜವಾದ ದೊಡ್ಡತನವು, ಇತರರ ಸೇವೆ ಮಾಡುವುದರಿಂದ, ಹೌದು ಇತರರ ಸೇವೆಮಾಡಲು ಶ್ರದ್ಧಾಪೂರ್ವಕವಾಗಿ ಮತ್ತು ಪಟ್ಟುಬಿಡದೆ ಪ್ರಯತ್ನಿಸುವ ಮೂಲಕ ಬರುತ್ತದೆಂದು ಯೇಸು ಹೇಳಿದನು. ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳುವವರೆಲ್ಲರೂ ಮತ್ತು ಅವನ ಭೂಪ್ರತಿನಿಧಿಗಳಾಗಿ ಸೇವೆಸಲ್ಲಿಸುವವರೆಲ್ಲರೂ ದೈನ್ಯ ಮತ್ತು ದಯೆಯ ಅವನ ಗುಣವನ್ನು ಅನುಸರಿಸಲು ಪ್ರಯತ್ನಿಸಬೇಕು.
19 ಯೇಸು ನೀಡಿದಂಥ ಇತರ ಪ್ರೀತಿಪೂರ್ವಕ ಸಲಹೆಗೆ ಗಮನ ಕೊಡೋಣ. ಯೆಹೋವನ ದಯೆಯ ವಿಸ್ತಾರ್ಯವನ್ನು ತೋರಿಸುತ್ತಾ ಯೇಸು ಹೇಳಿದ್ದು: “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ. ನಿಮಗೆ ಮೇಲನ್ನು ಮಾಡುವವರಿಗೇ ನೀವು ಮೇಲನ್ನು ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. ಅವರು ನಮಗೂ ಸಾಲಕೊಟ್ಟಾರೆಂದು ನೀವು ಯಾರಿಗಾದರೂ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಾವು ಕೊಟ್ಟಷ್ಟು ತಮಗೆ ತಿರಿಗಿ ಸಿಕ್ಕೀತೆಂದು ಪಾಪಿಷ್ಠರಿಗೆ ಸಾಲ ಕೊಡುತ್ತಾರಲ್ಲಾ. ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಧೈರ್ಯವನ್ನು ಬಿಡದೆ ಸಾಲ ಕೊಡಿರಿ; ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವದು, ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. ಆತನಂತೂ ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ. ನಿಮ್ಮ ತಂದೆ ಕರುಣವುಳ್ಳವನಾಗಿರುವ ಪ್ರಕಾರವೇ ನೀವೂ ಕರುಣವುಳ್ಳವರಾಗಿರಿ.” (ಓರೆ ಅಕ್ಷರಗಳು ನಮ್ಮವು.)—ಲೂಕ 6:32-36.
20 ದೈವಿಕ ದಯೆಯು ನಿಸ್ವಾರ್ಥವಾದದ್ದು. ಅದು ಪ್ರತಿಯಾಗಿ ಯಾವುದನ್ನೂ ಕೇಳುವುದೂ ಇಲ್ಲ, ನಿರೀಕ್ಷಿಸುವುದೂ ಇಲ್ಲ. ಯೆಹೋವನು ದಯೆಯಿಂದ “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” ಮತ್ತಾಯ 5:43-45; ಅ. ಕೃತ್ಯಗಳು 14:16, 17) ನಮ್ಮ ಸ್ವರ್ಗೀಯ ತಂದೆಯನ್ನು ಅನುಕರಿಸುತ್ತಾ, ನಾವು ಉಪಕಾರನೆನಸದವರಿಗೆ ಹಾನಿಯನ್ನು ಮಾಡುವುದರಿಂದ ದೂರವಿರುತ್ತೇವೆ ಮಾತ್ರವಲ್ಲ ನಾವು ಅವರಿಗೆ ಮತ್ತು ನಮ್ಮ ಶತ್ರುಗಳಾಗಿ ವರ್ತಿಸುವವರಿಗೂ ಒಳಿತನ್ನು ಮಾಡುತ್ತೇವೆ. ದಯೆಯನ್ನು ಪ್ರದರ್ಶಿಸುವ ಮೂಲಕ, ಎಲ್ಲಿ ದಯೆ ಮತ್ತು ಇತರ ದೈವಿಕ ಗುಣಗಳು ಬೇರೆಲ್ಲಾ ಮಾನವ ಸಂಬಂಧಗಳಲ್ಲಿ ವ್ಯಾಪಿಸಿಕೊಂಡಿರುವುದೊ ಆ ದೇವರ ರಾಜ್ಯದ ಕೆಳಗೆ ನಾವು ಜೀವಿಸಲು ಅಪೇಕ್ಷಿಸುತ್ತೇವೆಂದು ಯೆಹೋವನಿಗೂ ಯೇಸುವಿಗೂ ತೋರಿಸುತ್ತೇವೆ.
(ನಾವೇಕೆ ದಯೆಯನ್ನು ತೋರಿಸಬೇಕು?
21 ಒಬ್ಬ ನಿಜ ಕ್ರೈಸ್ತನಿಗೆ, ದಯೆಯನ್ನು ತೋರಿಸುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ನಮ್ಮಲ್ಲಿ ದೇವರಾತ್ಮವಿದೆ ಎಂಬುದಕ್ಕೆ ಅದು ಸಾಕ್ಷ್ಯವಾಗಿದೆ. ಅದಲ್ಲದೆ, ನಾವು ನಿಜವಾದ ದಯೆಯನ್ನು ತೋರಿಸುವಾಗ ಯೆಹೋವ ದೇವರನ್ನೂ ಯೇಸು ಕ್ರಿಸ್ತನನ್ನೂ ಅನುಕರಿಸುತ್ತಿದ್ದೇವೆ. ದೇವರ ರಾಜ್ಯದ ಪ್ರಜೆಗಳಾಗುವವರಿಗೆ ದಯೆ ಒಂದು ಆವಶ್ಯಕತೆಯೂ ಆಗಿದೆ. ಹೀಗಿರುವುದರಿಂದ ನಾವು ದಯೆಯನ್ನು ಪ್ರೀತಿಸಬೇಕು ಮತ್ತು ಅದನ್ನು ತೋರಿಸಲು ಕಲಿಯಬೇಕು.
22 ನಮ್ಮ ದಿನನಿತ್ಯದ ಜೀವನದಲ್ಲಿ ನಾವು ದಯೆಯನ್ನು ತೋರಿಸಬಲ್ಲ ಕೆಲವೊಂದು ಪ್ರಾಯೋಗಿಕ ವಿಧಗಳಾವುವು? ಮುಂದಿನ ಲೇಖನವು ಆ ವಿಷಯವನ್ನು ಸಂಬೋಧಿಸುವುದು.
ಹೇಗೆ ಉತ್ತರಿಸುವಿರಿ?
• ದಯೆ ಎಂದರೇನು?
• ಲೋಕವು ಒಂದು ಕ್ರೂರ ಹಾಗೂ ಕಠೋರ ಸ್ಥಳವಾಗಿರುವುದು ಏಕೆ?
• ದೇವರಾಳಿಕೆಯ ಕೆಳಗೆ ದಯೆಯು ರಾರಾಜಿಸುವುದೆಂದು ನಮಗೆ ಹೇಗೆ ತಿಳಿದಿದೆ?
• ದೇವರ ರಾಜ್ಯದ ಕೆಳಗೆ ಜೀವಿಸಲು ಬಯಸುವವರು ದಯೆಯನ್ನು ತೋರಿಸುವುದು ಏಕೆ ಪ್ರಾಮುಖ್ಯವಾಗಿದೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ತನ್ನ ಜನರು ದಯೆಯನ್ನು ತೋರಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆಂಬ ಸಂಗತಿಯು ನಮ್ಮನ್ನೇಕೆ ಆಶ್ಚರ್ಯಗೊಳಿಸಬಾರದು? (ಬಿ) ದಯೆಯ ಕುರಿತಾದ ಯಾವ ಪ್ರಶ್ನೆಗಳು ನಮ್ಮ ಪರಿಗಣನೆಗರ್ಹವಾಗಿವೆ?
3. ದಯೆಯನ್ನು ಹೇಗೆ ಅರ್ಥನಿರೂಪಿಸುವಿರಿ?
4. ಮಾನವಕುಲಕ್ಕೆ ದಯೆಯನ್ನು ತೋರಿಸುವುದರಲ್ಲಿ ಯೆಹೋವನು ಹೇಗೆ ಮುಂದಾಳುತ್ವವನ್ನು ವಹಿಸಿದ್ದಾನೆ?
5. ದೇವರಾತ್ಮದಿಂದ ನಡೆಸಲ್ಪಡುವವರು ಏಕೆ ದಯೆಯನ್ನು ತೋರಿಸಬೇಕು?
6. ದಯೆಯು ಯಾವಾಗ ಒಂದು ದೌರ್ಬಲ್ಯವಾಗಿದೆ, ಮತ್ತು ಏಕೆ?
7. (ಎ) ಏಲಿಯು ಹೇಗೆ ಅಲಕ್ಷ್ಯವನ್ನು ತೋರಿಸಿದನು? (ಬಿ) ತಪ್ಪಾದ ದಯೆಯನ್ನು ತೋರಿಸುವುದರ ವಿರುದ್ಧ ಹಿರಿಯರು ಏಕೆ ಎಚ್ಚರದಿಂದಿರಬೇಕು?
8. ಯೇಸು ನಿಜ ದಯೆಯನ್ನು ಹೇಗೆ ಪ್ರದರ್ಶಿಸಿದನು?
9. ದಯೆಗೂ, ದೀರ್ಘಶಾಂತಿ ಹಾಗೂ ಉಪಕಾರಕ್ಕೂ ಏನು ಸಂಬಂಧ?
10. ಪ್ರೀತಿ ಮತ್ತು ದಯೆ ಪರಸ್ಪರ ಜೋಡಿಸಲ್ಪಟ್ಟಿರುವುದು ಹೇಗೆ?
11. ದೇವರ ಪ್ರೀತಿಪೂರ್ವಕ ದಯೆಯು ನಮಗೆ ಯಾವ ಆಶ್ವಾಸನೆಯನ್ನು ಕೊಡುತ್ತದೆ?
12. ದಬ್ಬಾಳಿಕೆಯು ಯಾವಾಗ ಮತ್ತು ಹೇಗೆ ಆರಂಭವಾಯಿತು?
13-15. (ಎ) ಯೆಹೋವನ ನೀತಿಯುತ ಆಳ್ವಿಕೆಯನ್ನು ತಿರಸ್ಕರಿಸಿದ್ದರ ಕೆಲವೊಂದು ಫಲಿತಾಂಶಗಳಾವುವು? (ಬಿ) ಈ ಲೋಕವು ಒಂದು ಕಠೋರ ಸ್ಥಳವಾಗಿದೆಯೇಕೆ?
16. ಕ್ರಿಸ್ತ ಯೇಸುವಿನ ಮುಖಾಂತರ ದೇವರಾಳಿಕೆಯು ದಯೆಯಿಂದ ಗುರುತಿಸಲ್ಪಡುವುದು ಏಕೆ, ಮತ್ತು ಇದು ನಾವೇನನ್ನು ಮಾಡುವ ಹಂಗಿಗೊಳಪಡಿಸುತ್ತದೆ?
17, 18. ಕ್ರಿಸ್ತನೊಂದಿಗೆ ಪರಲೋಕದಲ್ಲಿ ಆಳುವವರು ಮತ್ತು ಅವನ ಭೂಪ್ರತಿನಿಧಿಗಳು ದಯೆಯನ್ನು ತೋರಿಸುವರೆಂದು ನಾವೇಕೆ ಭರವಸೆಯಿಂದಿರಬಲ್ಲೆವು?
19, 20. (ಎ) ಯೆಹೋವನ ದಯೆಯ ವ್ಯಾಪ್ತಿಯನ್ನು ಯೇಸು ಹೇಗೆ ತಿಳಿಸಿದನು? (ಬಿ) ದಯೆಯನ್ನು ಪ್ರದರ್ಶಿಸುವುದರಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಬಹುದು?
21, 22. ನಾವೇಕೆ ದಯೆಯನ್ನು ತೋರಿಸತಕ್ಕದ್ದು?
[ಪುಟ 13ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯರು ಮಂದೆಯೊಂದಿಗೆ ವ್ಯವಹರಿಸುವಾಗ ದಯಾಪರರಾಗಿರಲು ಪ್ರಯತ್ನಿಸುತ್ತಾರೆ
[ಪುಟ 15ರಲ್ಲಿರುವ ಚಿತ್ರ]
ಯೆಹೋವನ ಪ್ರೀತಿಪೂರ್ವಕ ದಯೆಯು, ಆತನ ಸೇವಕರ ಕಷ್ಟದ ಸಮಯಗಳಲ್ಲಿ ಕೈಗೊಡದು
[ಪುಟ 16ರಲ್ಲಿರುವ ಚಿತ್ರಗಳು]
ಯೆಹೋವನು ಎಲ್ಲಾ ಮಾನವರ ಮೇಲೆ ಸೂರ್ಯನು ಪ್ರಕಾಶಿಸುವಂತೆ ಮತ್ತು ಮಳೆಬೀಳುವಂತೆ ದಯೆಯಿಂದ ಅನುಮತಿಸುತ್ತಾನೆ