ನೀವು ದೇವರನ್ನು ಸಂತೋಷಪಡಿಸಬಲ್ಲಿರಿ
ನೀವು ದೇವರನ್ನು ಸಂತೋಷಪಡಿಸಬಲ್ಲಿರಿ
ನಾವು ದೇವರ ಭಾವನೆಗಳನ್ನು ನಿಜವಾಗಿಯೂ ಪ್ರಭಾವಿಸಬಲ್ಲೆವೊ? ದೇವರಿಗೆ ಸಂತೋಷಪಡುವ ಸಾಮರ್ಥ್ಯವಿದೆಯೊ? ದೇವರು ಕೇವಲ ಒಂದು ಶಕ್ತಿ ಎಂದು ಕೆಲವರ ಅನಿಸಿಕೆಯಾಗಿದೆ. ವ್ಯಕ್ತಿಸ್ವರೂಪವಿಲ್ಲದ ಒಂದು ಶಕ್ತಿಯು ಸಂತೋಷಿಸುವುದನ್ನು ನಾವು ನಿರೀಕ್ಷಿಸಸಾಧ್ಯವೊ? ಖಂಡಿತವಾಗಿಯೂ ಇಲ್ಲ. ಆದರೆ ಬೈಬಲ್ ದೇವರ ಕುರಿತಾಗಿ ಏನು ಹೇಳುತ್ತದೆಂಬುದನ್ನು ಪರಿಗಣಿಸಿರಿ.
“ದೇವರು ಆತ್ಮಸ್ವರೂಪನು” ಎಂದು ಯೇಸು ಕ್ರಿಸ್ತನು ಹೇಳಿದನು. (ಯೋಹಾನ 4:24) ಒಂದು ಆತ್ಮಜೀವಿಯು ಮಾನವರಿಗಿಂತ ಭಿನ್ನವಾಗಿರುವ ಜೀವದ ಒಂದು ರೂಪವಾಗಿದೆ. ಮಾನವ ದೃಷ್ಟಿಗೆ ಅಗೋಚರವಾಗಿದ್ದರೂ ಆತ್ಮಜೀವಿಗೆ ಒಂದು ದೇಹವಿದೆ ಅಂದರೆ ಒಂದು “ಆತ್ಮಿಕದೇಹ” ಇದೆ. (1 ಕೊರಿಂಥ 15:44; ಯೋಹಾನ 1:18) ಬೈಬಲು ಭಾಷಾಲಂಕಾರಗಳನ್ನು ಬಳಸುತ್ತಾ, ದೇವರಿಗೆ ಕಣ್ಣುಗಳು, ಕಿವಿಗಳು, ಕೈಗಳು ಇತ್ಯಾದಿ ಅಂಗಗಳಿರುವುದಾಗಿಯೂ ತಿಳಿಸುತ್ತದೆ. * ದೇವರಿಗೆ ಒಂದು ಹೆಸರೂ ಇದೆ. ಅದು ಯೆಹೋವ ಎಂದಾಗಿದೆ. (ಕೀರ್ತನೆ 83:18) ಹಾಗಾದರೆ ಬೈಬಲಿನ ದೇವರು, ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದಾನೆ. (ಇಬ್ರಿಯ 9:24) “ಆತನು ಚೈತನ್ಯಸ್ವರೂಪನಾದ [“ಜೀವಂತ,” NW] ದೇವನೂ ಶಾಶ್ವತರಾಜನೂ ಆಗಿದ್ದಾನೆ.”—ಯೆರೆಮೀಯ 10:10.
ಯೆಹೋವನು ಒಬ್ಬ ನೈಜ, ಜೀವಂತ ವ್ಯಕ್ತಿಯಾಗಿರಲಾಗಿ, ಯೋಚಿಸಲು ಮತ್ತು ಕ್ರಿಯೆಗೈಯಲು ಸಮರ್ಥನಾಗಿದ್ದಾನೆ. ಆತನು ತನ್ನ ಗುಣಗಳನ್ನೂ ಭಾವನೆಗಳನ್ನೂ ಇಷ್ಟಾನಿಷ್ಟಗಳನ್ನೂ ವ್ಯಕ್ತಪಡಿಸುತ್ತಾನೆ. ವಾಸ್ತವದಲ್ಲಿ ಬೈಬಲಿನಲ್ಲಿ, ಯಾವ ವಿಷಯಗಳು ಆತನನ್ನು ಸಂತೋಷಪಡಿಸುತ್ತವೆ ಮತ್ತು ಅಸಂತೋಷಪಡಿಸುತ್ತವೆ ಎಂಬುದನ್ನು ಪ್ರಕಟಪಡಿಸುವ ಅಗಣಿತ ಅಭಿವ್ಯಕ್ತಿಗಳು ತುಂಬಿವೆ. ಮಾನವನಿರ್ಮಿತ ದೇವರುಗಳು ಮತ್ತು ವಿಗ್ರಹಗಳು ಅವುಗಳನ್ನು ರಚಿಸಿದಂಥ ಮಾನವರ ಲಕ್ಷಣಗಳನ್ನು ಅಥವಾ ಗುಣಗಳನ್ನು ಪ್ರತಿಬಿಂಬಿಸುತ್ತವೆ. ಆದರೆ ಸರ್ವಶಕ್ತ ದೇವರಾದ ಯೆಹೋವನಾದರೊ, ಮಾನವರಲ್ಲಿ ಆತನು ಬೇರೂರಿಸಿದಂಥ ಭಾವನೆಗಳ ಮೂಲದಾತನಾಗಿದ್ದಾನೆ.—ಆದಿಕಾಂಡ 1:27; ಯೆಶಾಯ 44:7-11.
ಯೆಹೋವನು ನಿಸ್ಸಂದೇಹವಾಗಿಯೂ “ಸಂತೋಷಭರಿತ ದೇವರು” ಆಗಿದ್ದಾನೆ. (1 ತಿಮೊಥೆಯ 1:11, NW) ಆತನು ತನ್ನ ಸೃಷ್ಟಿಕಾರ್ಯಗಳಲ್ಲಿ ಹರ್ಷಿಸುತ್ತಾನೆ ಮಾತ್ರವಲ್ಲ, ತನ್ನ ಉದ್ದೇಶವನ್ನು ಪೂರೈಸುವುದರಲ್ಲೂ ಸಂತೋಷಪಡುತ್ತಾನೆ. ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಘೋಷಿಸುವುದು: “ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು . . . ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.” (ಯೆಶಾಯ 46:9-11) “ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 104:31, ಪರಿಶುದ್ಧ ಬೈಬಲ್ *) ಆದರೆ ದೇವರಿಗೆ ಇನ್ನೊಂದು ಮೂಲದಿಂದಲೂ ಆನಂದ ಸಿಗುತ್ತದೆ. ಆತನು ಹೇಳುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು.” (ಜ್ಞಾನೋಕ್ತಿ 27:11) ಇದರ ಅರ್ಥದ ಕುರಿತು ಸ್ವಲ್ಪ ಯೋಚಿಸಿ. ನಾವು ದೇವರನ್ನು ಸಂತೋಷಪಡಿಸಬಲ್ಲೆವು!
ದೇವರ ಮನಸ್ಸನ್ನು ಸಂತೋಷಪಡಿಸಲು ನಮಗೆ ಹೇಗೆ ಸಾಧ್ಯ?
ಕುಟುಂಬದ ತಲೆಯಾಗಿದ್ದ ನೋಹನು ಯೆಹೋವನ ಮನಸ್ಸನ್ನು ಸಂತೋಷಪಡಿಸಿದ ರೀತಿಯನ್ನು ಪರಿಗಣಿಸಿರಿ. “ನೋಹನಿಗೆ ಯೆಹೋವನ ದಯವು [“ಅನುಗ್ರಹವು,” NW] ದೊರಕಿತು” ಯಾಕಂದರೆ ಅವನು ‘ತನ್ನ ಕಾಲದವರಲ್ಲಿ ತಪ್ಪಿಲ್ಲದವನು ಆಗಿದ್ದನು.’ ಆದಿಕಾಂಡ 6:6, 8, 9, 22) “ನಂಬಿಕೆಯಿಂದಲೇ ನೋಹನು . . . ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” (ಇಬ್ರಿಯ 11:7) ಯೆಹೋವನು ನೋಹನನ್ನು ಮೆಚ್ಚಿದನು, ಮತ್ತು ಅವನನ್ನೂ ಅವನ ಕುಟುಂಬವನ್ನೂ ಮಾನವ ಚರಿತ್ರೆಯ ಆ ಪ್ರಕ್ಷುಬ್ಧ ಅವಧಿಯಿಂದ ಪಾರುಗೊಳಿಸುವ ಮೂಲಕ ಆಶೀರ್ವದಿಸಿದನು.
ಆ ಕಾಲದ ದುಷ್ಟ ಜನರಿಗೆ ತದ್ವಿರುದ್ಧವಾಗಿ, ನೋಹನ ನಂಬಿಕೆ ಮತ್ತು ವಿಧೇಯತೆಯು ದೇವರನ್ನು ಎಷ್ಟು ಸಂತೋಷಪಡಿಸಿತೆಂದರೆ, ಅವನು “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು” ಎಂದು ಹೇಳಸಾಧ್ಯವಿತ್ತು. (ಮೂಲಪಿತೃನಾದ ಅಬ್ರಹಾಮನಿಗೂ ಯೆಹೋವನ ಭಾವನೆಗಳ ಬಗ್ಗೆ ಸೂಕ್ಷ್ಮವಾದ ಅರಿವಿತ್ತು. ದೇವರ ಯೋಚನಾಧಾಟಿಯ ಬಗ್ಗೆ ಅವನಿಗೆ ಗಾಢ ತಿಳಿವಳಿಕೆಯಿತ್ತೆಂಬುದು, ಸೋದೋಮ್ ಗೊಮೋರಗಳ ನೀಚ ಸ್ಥಿತಿಯ ಕಾರಣದಿಂದ ಆ ಪಟ್ಟಣಗಳನ್ನು ನಾಶಮಾಡುವೆನೆಂದು ಯೆಹೋವನು ತಿಳಿಸಿದ ಸಮಯದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ದುಷ್ಟ ವ್ಯಕ್ತಿಯೊಂದಿಗೆ ದೇವರು ನೀತಿವಂತನನ್ನೂ ಸಾಯಿಸುವನೆಂಬುದು ಯೋಚಿಸಲೂ ಅಸಾಧ್ಯವಾದ ಸಂಗತಿಯೆಂಬ ತೀರ್ಮಾನಕ್ಕೆ ಬರುವಷ್ಟರ ಮಟ್ಟಿಗೆ ಅಬ್ರಹಾಮನು ಆತನನ್ನು ಚೆನ್ನಾಗಿ ಬಲ್ಲವನಾಗಿದ್ದನು. (ಆದಿಕಾಂಡ 18:17-33) ವರ್ಷಗಳಾನಂತರ, ದೇವರ ನಿರ್ದೇಶನಕ್ಕೆ ವಿಧೇಯತೆಯಲ್ಲಿ ಅಬ್ರಹಾಮನು ‘ಇಸಾಕನನ್ನು ಸಮರ್ಪಿಸುವದಕ್ಕಿದ್ದನು.’ ಯಾಕಂದರೆ “ತನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು.” (ಇಬ್ರಿಯ 11:17-19; ಆದಿಕಾಂಡ 22:1-18) ಅಬ್ರಹಾಮನು ದೇವರ ಭಾವನೆಗಳಿಗೆ ಎಷ್ಟೊಂದು ಚೆನ್ನಾಗಿ ಹೊಂದಿಕೊಂಡು, ಬಲವಾದ ನಂಬಿಕೆ ಮತ್ತು ವಿಧೇಯತೆಯನ್ನು ತೋರಿಸಿದನೆಂದರೆ, “ದೇವರ [“ಯೆಹೋವನ,” NW] ಸ್ನೇಹಿತನೆಂಬ ಹೆಸರು ಅವನಿಗೆ ಉಂಟಾಯಿತು.”—ಯಾಕೋಬ 2:23.
ದೇವರ ಮನಸ್ಸನ್ನು ಸಂತೋಷಪಡಿಸಲು ಪ್ರಯತ್ನಿಸಿದ ಮತ್ತೊಬ್ಬ ವ್ಯಕ್ತಿಯು, ಪುರಾತನ ಕಾಲದ ರಾಜ ದಾವೀದನಾಗಿದ್ದನು. ಅವನ ಬಗ್ಗೆ ಯೆಹೋವನು ಹೇಳಿದ್ದು: “ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು.” (ಅ. ಕೃತ್ಯಗಳು 13:22) ದೈತ್ಯನಾದ ಗೊಲ್ಯಾತನನ್ನು ಎದುರಿಸುವ ಮುಂಚೆ ದಾವೀದನು ದೇವರಲ್ಲಿ ಸಂಪೂರ್ಣ ಭರವಸೆಯನ್ನಿಡುತ್ತಾ ಇಸ್ರಾಯೇಲ್ಯ ರಾಜನಾದ ಸೌಲನಿಗೆ ಅಂದದ್ದು: “ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಗೂ ತಪ್ಪಿಸುವನು.” ದಾವೀದನು ತನ್ನಲ್ಲಿಟ್ಟಿದ್ದ ಭರವಸೆಯನ್ನು ಯೆಹೋವನು ಹರಸಿ, ದಾವೀದನು ಗೊಲ್ಯಾತನನ್ನು ಹತಿಸುವಂತೆ ಶಕ್ತಗೊಳಿಸಿದನು. (1 ಸಮುವೇಲ 17:37, 45-54) ತನ್ನ ಕ್ರಿಯೆಗಳು ಮಾತ್ರವಲ್ಲದೆ, ‘ತನ್ನ ಮಾತುಗಳೂ ತನ್ನ ಹೃದಯದ ಧ್ಯಾನವೂ ಯೆಹೋವನಿಗೆ ಸಮರ್ಪಕವಾಗಿರುವಂತೆ’ ದಾವೀದನು ಬಯಸಿದನು.—ಕೀರ್ತನೆ 19:14.
ನಮ್ಮ ಕುರಿತಾಗಿ ಏನು? ನಾವು ಹೇಗೆ ಯೆಹೋವನನ್ನು ಮೆಚ್ಚಿಸಬಲ್ಲೆವು? ನಾವು ದೇವರ ಭಾವನೆಗಳ ಬಗ್ಗೆ ಹೆಚ್ಚೆಚ್ಚು ಕಲಿತಂತೆ, ಆತನ ಮನಸ್ಸನ್ನು ಸಂತೋಷಪಡಿಸಲು ನಾವೇನು ಮಾಡಬೇಕೆಂಬುದು ನಮಗೆ ಇನ್ನೂ ಹೆಚ್ಚೆಚ್ಚಾಗಿ ತಿಳಿದುಬರುವುದು. ಆದುದರಿಂದ ಬೈಬಲನ್ನು ಓದುವಾಗ, ನಾವು ದೇವರ ಭಾವನೆಗಳ ಕುರಿತಾಗಿ ಕಲಿಯಲು ಪ್ರಯತ್ನಮಾಡುವುದು ಆವಶ್ಯಕ. ಆಗ ನಾವು “ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿ” ಇರಲು ಸಾಧ್ಯವಾಗುವುದು. (ಕೊಲೊಸ್ಸೆ 1:9, 10) ಈ ಜ್ಞಾನವು, ನಂಬಿಕೆಯನ್ನು ಕಟ್ಟುವಂತೆ ನಮಗೆ ಸಹಾಯಮಾಡುತ್ತದೆ. ಮತ್ತು ಇದು ಅತ್ಯಾವಶ್ಯಕ ಯಾಕಂದರೆ “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ.” (ಇಬ್ರಿಯ 11:6) ಹೌದು, ಬಲವಾದ ನಂಬಿಕೆಯನ್ನು ಕಟ್ಟಲಿಕ್ಕಾಗಿ ಪ್ರಯಾಸಪಡುವ ಮೂಲಕ ಮತ್ತು ನಮ್ಮ ಜೀವಿತಗಳನ್ನು ಯೆಹೋವನ ಚಿತ್ತಕ್ಕೆ ಅನುಗುಣವಾಗಿ ತರುವ ಮೂಲಕ ನಾವು ಆತನ ಮನಸ್ಸನ್ನು ಸಂತೋಷಪಡಿಸಬಲ್ಲೆವು. ಆದರೆ ಅದೇ ಸಮಯದಲ್ಲಿ, ಯೆಹೋವನ ಮನಸ್ಸನ್ನು ನೋಯಿಸದಂತೆಯೂ ನಾವು ಜಾಗ್ರತೆ ವಹಿಸಬೇಕು.
ದೇವರು ನೊಂದುಕೊಳ್ಳುವಂತೆ ಮಾಡಬೇಡಿ
ಯೆಹೋವನ ಮನಸ್ಸಿಗೆ ಹೇಗೆ ನೋವಾಗಬಹುದೆಂಬುದರ ಒಂದು ಉದಾಹರಣೆಯು, ನೋಹನ ದಿನಗಳ ಕುರಿತಾದ ವೃತ್ತಾಂತದಲ್ಲಿ ಕಾಣಸಿಗುತ್ತದೆ. ಆ ಸಮಯದಲ್ಲಿ, “ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು. ದೇವರು ಲೋಕವನ್ನು ನೋಡಿದಾಗ ಅದು ಕೆಟ್ಟುಹೋಗಿತ್ತು; ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.” ದೇವರು ಆ ನೀತಿಭ್ರಷ್ಟತೆ ಮತ್ತು ಅನ್ಯಾಯವನ್ನು ಪರಿಶೀಲಿಸಿದಾಗ ಆತನಿಗೆ ಹೇಗನಿಸಿತು? ಯೆಹೋವನು “ತಾನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು” ಎಂದು ಬೈಬಲ್ ಹೇಳುತ್ತದೆ. (ಆದಿಕಾಂಡ 6:5, 6, 11, 12) ಮನುಷ್ಯರ ನಡತೆಯು ಎಷ್ಟು ಕೆಟ್ಟದ್ದಾಗಿತ್ತೆಂದರೆ ಪ್ರಳಯಪೂರ್ವದ ದುಷ್ಟ ತಲೆಮಾರಿನ ಕಡೆಗೆ ತನ್ನ ಮನೋಭಾವವನ್ನು ಬದಲಾಯಿಸಬೇಕಾದದ್ದರ ಅರ್ಥದಲ್ಲಿ ದೇವರು ಪಶ್ಚಾತ್ತಾಪಪಟ್ಟನು. ದೇವರಿಗೆ ಅವರ ದುಷ್ಟತನದ ಕಡೆಗಿದ್ದ ಅಪ್ರಸನ್ನತೆಯಿಂದಾಗಿ ಆತನು ಮಾನವರ ಸೃಷ್ಟಿಕರ್ತನೆಂಬ ಮನೋಭಾವದಿಂದ ಅವರ ಸಂಹಾರಕನಾಗಿ ಬದಲಾದನು.
ತನ್ನ ಸ್ವಜನರಾದ ಪ್ರಾಚೀನಕಾಲದ ಇಸ್ರಾಯೇಲ್ ಜನಾಂಗವು ಪದೇಪದೇ ತನ್ನ ಭಾವನೆಗಳನ್ನು ಮತ್ತು ಪ್ರೀತಿಪರ ನಿರ್ದೇಶನವನ್ನು ಅಲಕ್ಷಿಸಿದಾಗಲೂ ಯೆಹೋವನಿಗೆ ತುಂಬ ಸಂಕಟವಾಯಿತು. ಕೀರ್ತನೆಗಾರನು ಪ್ರಲಾಪಿಸಿದ್ದು: “ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ ಅಲ್ಲಿ ಆತನನ್ನು ನೋಯಿಸಿದರು. ಆತನನ್ನು ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.” ಆದರೂ “ಆತನು ಕರುಣಾಳುವೂ ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ ತನ್ನ ಸಿಟ್ಟನ್ನೆಲ್ಲಾ ಏರಗೊಡದೆ ಅದನ್ನು ಹಲವು ಸಾರಿ ತಡೆಯುತ್ತಾ ಬಂದನು.” (ಕೀರ್ತನೆ 78:38-41) ದಂಗೆಕೋರ ಇಸ್ರಾಯೇಲ್ಯರು ನ್ಯಾಯವಾಗಿಯೇ ತಮ್ಮ ಸ್ವಂತ ಪಾಪದ ಫಲಿತಾಂಶಗಳನ್ನು ಅನುಭವಿಸಿದರೂ, “ಅವರ ಎಲ್ಲಾ ಸಂಕಷ್ಟದ ಸಮಯದಲ್ಲಿ ಆತನು ಸಂಕಟಪಟ್ಟನು.”—ಯೆಶಾಯ 63:9, NW.
ಇಸ್ರಾಯೇಲ್ಯರು, ತಮ್ಮ ಕಡೆಗೆ ದೇವರು ಹೊಂದಿದ್ದ ಕೋಮಲ ಭಾವನೆಗಳನ್ನು ಉಪೇಕ್ಷಿಸುತ್ತಾ, “ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅದರ ತಾಪವು ಆರಿಹೋಗಲೇ ಇಲ್ಲ.” (2 ಪೂರ್ವಕಾಲವೃತ್ತಾಂತ 36:16) ಕೊನೆಗೆ, ಅವರ ಉದ್ಧಟತನದ ದಂಗೆಯ ರೂಢಿಯು ‘ಆತನ ಪವಿತ್ರಾತ್ಮವನ್ನು ದುಃಖಪಡಿಸಿತು.’ ಎಷ್ಟರ ಮಟ್ಟಿಗೆಯೆಂದರೆ ಅವರು ಯೆಹೋವನ ಅನುಗ್ರಹವನ್ನು ಕಳೆದುಕೊಂಡರು. (ಯೆಶಾಯ 63:10) ಪರಿಣಾಮವೇನಾಯಿತು? ನ್ಯಾಯಯುತವಾಗಿಯೇ ದೇವರು ತನ್ನ ಸಂರಕ್ಷಣೆಯನ್ನು ಹಿಂದೆಗೆದನು, ಮತ್ತು ಬಾಬೆಲಿನವರು ಯೆಹೂದವನ್ನು ಜಯಿಸಿ, ಯೆರೂಸಲೇಮನ್ನು ನಾಶಮಾಡಿದಾಗ ಅವರ ಮೇಲೆ ವಿಪತ್ತು ಬಂದೆರಗಿತು. (2 ಪೂರ್ವಕಾಲವೃತ್ತಾಂತ 36:17-21) ಜನರು ತಮ್ಮ ಸೃಷ್ಟಿಕರ್ತನನ್ನು ರೇಗಿಸುವ ಮತ್ತು ಸಂಕಟಕ್ಕೊಳಪಡಿಸುವಂಥ ಪಾಪಪೂರ್ಣ ಜೀವನಮಾರ್ಗವನ್ನು ಬೆನ್ನಟ್ಟಲು ಆಯ್ಕೆಮಾಡುವುದು ಎಂಥ ದುಃಖದ ಸಂಗತಿ!
ಅನೀತಿವಂತ ನಡತೆಯು ದೇವರನ್ನು ತುಂಬ ನೋಯಿಸುತ್ತದೆಂಬ ವಿಷಯದಲ್ಲಿ ಬೈಬಲು ಕಿಂಚಿತ್ತೂ ಸಂದೇಹವನ್ನು ಮೂಡಿಸುವುದಿಲ್ಲ. (ಕೀರ್ತನೆ 78:41) ದೇವರನ್ನು ರೇಗಿಸುವಂಥ ಮತ್ತು ಆತನಿಗೆ ಅಸಹ್ಯಕರವೂ ಆಗಿರುವಂಥ ವಿಷಯಗಳಲ್ಲಿ ಹೆಮ್ಮೆ, ಸುಳ್ಳಾಡುವಿಕೆ, ಕೊಲೆ, ಮಾಟಮಂತ್ರ, ಕಣಿಹೇಳುವುದು, ಪೂರ್ವಜರ ಆರಾಧನೆ, ಸಡಿಲ ನೈತಿಕತೆ, ಸಲಿಂಗಿಕಾಮ, ವೈವಾಹಿಕ ಅಪನಂಬಿಗಸ್ತಿಕೆ, ಅಗಮ್ಯಗಮನ ಮತ್ತು ಬಡವರ ದಬ್ಬಾಳಿಕೆಯು ಸೇರಿವೆ.—ಯಾಜಕಕಾಂಡ 18:9-29; 19:29; ಧರ್ಮೋಪದೇಶಕಾಂಡ 18:9-12; ಜ್ಞಾನೋಕ್ತಿ 6:16-19; ಯೆರೆಮೀಯ 7:5-7; ಮಲಾಕಿಯ 2:14-16.
ವಿಗ್ರಹಾರಾಧನೆಯ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ? ವಿಮೋಚನಕಾಂಡ 20:4, 5 ತಿಳಿಸುವುದು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂಬಾರದು ಪೂಜೆಮಾಡಲೂಬಾರದು.” ಯಾಕೆ? ಯಾಕಂದರೆ ವಿಗ್ರಹವು “ಯೆಹೋವನಿಗೆ ಹೇಯವಾದದ್ದು.” (ಧರ್ಮೋಪದೇಶಕಾಂಡ 7:25, 26) ಅಪೊಸ್ತಲ ಯೋಹಾನನು ಎಚ್ಚರಿಸಿದ್ದು: “ಪ್ರಿಯರಾದ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.” (1 ಯೋಹಾನ 5:21) ಮತ್ತು ಅಪೊಸ್ತಲ ಪೌಲನು ಬರೆದುದು: “ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ.”—1 ಕೊರಿಂಥ 10:14.
ದೇವರ ಮೆಚ್ಚುಗೆಯನ್ನು ಪಡೆಯಲು ಪ್ರಯತ್ನಿಸಿರಿ
“ಯಥಾರ್ಥರಿಗೆ [ದೇವರ] ಸ್ನೇಹವು ದೊರೆಯುವದು.” “ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.” (ಜ್ಞಾನೋಕ್ತಿ 3:32; 11:20, ಪರಿಶುದ್ಧ ಬೈಬಲ್) ಇದಕ್ಕೆ ವ್ಯತಿರಿಕ್ತವಾಗಿ, ದೇವರ ನೀತಿಯುತ ಭಾವನೆಗಳನ್ನು ಹಟಮಾರಿತನದಿಂದ ಉಪೇಕ್ಷಿಸಲು ಇಲ್ಲವೆ ಧಿಕ್ಕರಿಸಲು ಪಟ್ಟುಹಿಡಿಯುವುದರ ಮೂಲಕ ಆತನ ಮನಸ್ಸನ್ನು ನೋಯಿಸುವವರು, ಬೇಗನೆ ಆತನ ಕೋಪಕ್ಕೆ ಗುರಿಯಾಗುವರು. (2 ಥೆಸಲೊನೀಕ 1:6-10) ಹೌದು, ಶೀಘ್ರದಲ್ಲೇ ಆತನು, ಇಂದು ಪ್ರಚಲಿತವಾಗಿರುವ ಎಲ್ಲಾ ದುಷ್ಟತನಕ್ಕೆ ಅಂತ್ಯವನ್ನು ತರುವನು.—ಕೀರ್ತನೆ 37:9-11; ಚೆಫನ್ಯ 2:2, 3.
ಹೀಗಿದ್ದರೂ, ಯೆಹೋವನು ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುತ್ತಾನೆ’ ಎಂದು ಬೈಬಲು ಅತಿ ಸ್ಪಷ್ಟವಾಗಿ ಹೇಳುತ್ತದೆ. (2 ಪೇತ್ರ 3:9) ತಮ್ಮಲ್ಲಿ ಸುಧಾರಣೆಮಾಡದೆ ಇರಲು ಆಯ್ಕೆಮಾಡುವವರ ಮೇಲೆ ತನ್ನ ಕೋಪವನ್ನು ತೋರಿಸುವುದಕ್ಕಿಂತಲೂ ಹೆಚ್ಚಾಗಿ, ಆತನು ತನ್ನನ್ನು ಪ್ರೀತಿಸುವ ನೀತಿವಂತರಿಗಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾನೆ. ಯೆಹೋವನಿಗೆ ‘ದುಷ್ಟನ ಸಾವಿನಲ್ಲಿ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ಆತನಿಗೆ ಸಂತೋಷ.’—ಯೆಹೆಜ್ಕೇಲ 33:11.
ಆದುದರಿಂದ ಯಾರೂ ಯೆಹೋವನ ಕೋಪಕ್ಕೆ ಗುರಿಯಾಗಲೇಬೇಕೆಂದಿಲ್ಲ. “ಕರ್ತನು [“ಯೆಹೋವನು,” NW] ಕರುಣಾಸಾಗರನೂ ಯಾಕೋಬ 5:11) ದೇವರಿಗಿರುವ ಭಾವನೆಗಳ ವಿಷಯದಲ್ಲಿ ಪೂರ್ಣ ಭರವಸೆಯೊಂದಿಗೆ, ನೀವು “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ದೇವರ ಮನಸ್ಸನ್ನು ಸಂತೋಷಪಡಿಸುವವರಿಗೆ ಆತನ ಅನುಗ್ರಹ ಹಾಗೂ ಸ್ನೇಹದಲ್ಲಿ ಆನಂದಿಸುವ ಅದ್ಭುತಕರ ಪ್ರತೀಕ್ಷೆಯಿದೆಯೆಂಬ ಆಶ್ವಾಸನೆಯಿರಲಿ. ಹೀಗಿರುವುದರಿಂದ ಹಿಂದೆಂದಿಗಿಂತಲೂ ಈಗ ‘ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳುವುದು’ ಹೆಚ್ಚು ತುರ್ತಿನದ್ದಾಗಿದೆ.—ಎಫೆಸ 5:10.
ದಯಾಳುವೂ ಆಗಿದ್ದಾನೆ.” (ದೇವರು ಅಪಾತ್ರ ದಯೆಯಿಂದ ತನ್ನ ಮಹಿಮಾಯುಕ್ತ ಗುಣಗಳು ಹಾಗೂ ಭಾವನೆಗಳ ಕುರಿತಾಗಿ ಪ್ರಕಟಪಡಿಸಿರುವುದು ಎಷ್ಟು ಅದ್ಭುತವಾದ ಸಂಗತಿ! ಮತ್ತು ನೀವು ಆತನ ಮನಸ್ಸನ್ನು ಸಂತೋಷಪಡಿಸಲು ಸಾಧ್ಯವಿದೆ. ಇದು ನಿಮ್ಮ ಅಭಿಲಾಷೆಯಾಗಿರುವಲ್ಲಿ, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ದೇವರನ್ನು ಮೆಚ್ಚಿಸಲಿಕ್ಕಾಗಿ ಅವರು ಮಾಡುವ ಪ್ರಯತ್ನದಲ್ಲಿ ಯಾವುದು ಕಾರ್ಯಸಾಧಕವೂ ಸಾಧ್ಯವಿರುವಂಥದ್ದೂ ಆಗಿದೆಯೆಂದು ಅವರು ಕಂಡುಹಿಡಿದಿದ್ದಾರೊ ಅದನ್ನು ನಿಮಗೆ ತೋರಿಸಲು ಅವರು ಸಂತೋಷಿಸುವರು.
[ಪಾದಟಿಪ್ಪಣಿ]
^ ಪ್ಯಾರ. 3 “ದೇವರ ಬಗ್ಗೆ ವರ್ಣಿಸುವಾಗ ಬೈಬಲು ಮನುಷ್ಯನ ಗುಣರೂಪಗಳನ್ನು ಏಕೆ ಬಳಸುತ್ತದೆ?” ಎಂಬ ಶೀರ್ಷಿಕೆಯುಳ್ಳ ಚೌಕವನ್ನು ನೋಡಿರಿ.
^ ಪ್ಯಾರ. 5 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 7ರಲ್ಲಿರುವ ಚೌಕ]
ದೇವರ ಬಗ್ಗೆ ವರ್ಣಿಸುವಾಗ ಬೈಬಲು ಮನುಷ್ಯನ ಗುಣರೂಪಗಳನ್ನು ಏಕೆ ಬಳಸುತ್ತದೆ?
“ದೇವರು ಆತ್ಮಸ್ವರೂಪನು” ಆಗಿರುವುದರಿಂದ ನಾವು ಆತನನ್ನು ನಮ್ಮ ಶಾರೀರಿಕ ಕಣ್ಣುಗಳಿಂದ ನೋಡಲಾರೆವು. (ಯೋಹಾನ 4:24) ಈ ಕಾರಣದಿಂದ ಬೈಬಲು, ಉಪಮಾಲಂಕಾರ, ರೂಪಕಾಲಂಕಾರ ಮತ್ತು ಮನುಷ್ಯತ್ವಾರೋಪಣೆಗಳಂಥ ಭಾಷಾಲಂಕಾರಗಳನ್ನು ಉಪಯೋಗಿಸಿ, ನಾವು ದೇವರ ಬಲ, ಘನತೆ ಮತ್ತು ಚಟುವಟಿಕೆಗಳನ್ನು ಗ್ರಹಿಸುವಂತೆ ಸಹಾಯಮಾಡುತ್ತದೆ. ಮನುಷ್ಯತ್ವಾರೋಪಣೆ (ಗ್ರೀಕ್‌ನಲ್ಲಿ, “ಮಾನವ-ರೂಪ”) ಅಂದರೆ, ಮಾನವನಾಗಿರದ ಒಂದು ವಿಷಯಕ್ಕೆ ಮಾನವ ಗುಣರೂಪಗಳನ್ನು ಆರೋಪಿಸುವುದು. ಆದುದರಿಂದ ದೇವರ ಆತ್ಮಿಕ ದೇಹವು ಹೇಗೆ ತೋರುತ್ತದೆಂದು ನಮಗೆ ಗೊತ್ತಿಲ್ಲದಿದ್ದರೂ, ದೇವರಿಗೆ ಕಣ್ಣುಗಳು, ಕಿವಿಗಳು, ಕೈಗಳು, ತೋಳುಗಳು, ಬೆರಳುಗಳು, ಪಾದಗಳು ಮತ್ತು ಹೃದಯವಿರುವುದಾಗಿ ಬೈಬಲಿನಲ್ಲಿ ತಿಳಿಸಲಾಗಿದೆ.—ಆದಿಕಾಂಡ 8:21; ವಿಮೋಚನಕಾಂಡ 3:20; 31:18, ಪರಿಶುದ್ಧ ಬೈಬಲ್; ಯೋಬ 40:9, ಪರಿಶುದ್ಧ ಬೈಬಲ್; ಕೀರ್ತನೆ 18:9; 34:15.
ಈ ವರ್ಣನಾತ್ಮಕ ಭಾಷೆಯು, ದೇವರ ಆತ್ಮಿಕ ದೇಹಕ್ಕೆ ಮಾನವ ದೇಹಗಳಲ್ಲಿರುವಂಥದ್ದೇ ರೀತಿಯ ಅಂಗಗಳಿವೆ ಎಂಬುದನ್ನು ಅರ್ಥೈಸುವುದಿಲ್ಲ. ಮನುಷ್ಯತ್ವಾರೋಪಣೆಗಳನ್ನು ಅಕ್ಷರಶಃವಾಗಿ ತೆಗೆದುಕೊಳ್ಳಬಾರದು. ಅವು ಕೇವಲ ದೇವರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲಿಕ್ಕಾಗಿ ಇವೆ. ಇಂಥ ಭಾಷಾಲಂಕಾರಗಳು ಇಲ್ಲದಿರುವಲ್ಲಿ, ಮನುಷ್ಯಮಾತ್ರದವರಿಗೆ ದೇವರ ಕುರಿತಾದ ಯಾವುದೇ ವರ್ಣನೆಯು ಗ್ರಹಿಸಲು ಕಷ್ಟ, ಇಲ್ಲವೆ ಅಸಾಧ್ಯವೇ ಆಗಿರುತ್ತಿತ್ತು. ಆದರೆ ಯೆಹೋವ ದೇವರ ವ್ಯಕ್ತಿತ್ವವನ್ನು ಮಾನವರು ತಮ್ಮ ಊಹೆಗನುಸಾರ ರಚಿಸಿದ್ದಾರೆಂದು ಇದರರ್ಥವಲ್ಲ. ಮನುಷ್ಯನನ್ನು ದೇವರ ಸ್ವರೂಪದಲ್ಲಿ ಸೃಷ್ಟಿಸಲಾಯಿತೇ ವಿನಾ ದೇವರನ್ನು ಮನುಷ್ಯನ ಸ್ವರೂಪದಲ್ಲಿ ಅಲ್ಲವೆಂದು ಬೈಬಲು ಸ್ಪಷ್ಟವಾಗಿ ವಿವರಿಸುತ್ತದೆ. (ಆದಿಕಾಂಡ 1:27) ಬೈಬಲ್ ಬರಹಗಾರರು ‘ದೈವಪ್ರೇರಿತ’ರಾಗಿದ್ದದರಿಂದ, ದೇವರ ವ್ಯಕ್ತಿತ್ವದ ಕುರಿತಾಗಿ ಅವರು ಕೊಟ್ಟಿರುವ ಚಿತ್ರಣವು ವಾಸ್ತವದಲ್ಲಿ ಸ್ವತಃ ಆತನೇ ತನ್ನ ವೈಯಕ್ತಿಕ ಗುಣಗಳ ಕುರಿತಾಗಿ ಕೊಟ್ಟಿರುವ ವರ್ಣನೆಯಾಗಿದೆ. ಮತ್ತು ಈ ಗುಣಗಳನ್ನೇ ಆತನು ತನ್ನ ಮಾನವ ಸೃಷ್ಟಿಯಲ್ಲಿ ಭಿನ್ನ ಭಿನ್ನ ಪ್ರಮಾಣಗಳಲ್ಲಿ ಬೇರೂರಿಸಿದ್ದಾನೆ. (2 ತಿಮೊಥೆಯ 3:16, 17) ಹಾಗಾದರೆ, ದೇವರ ಬಗ್ಗೆ ವರ್ಣಿಸಲಿಕ್ಕಾಗಿ ಬಳಸಲಾಗಿರುವ ಗುಣಗಳು ಮನುಷ್ಯನದ್ದಾಗಿರುವ ಬದಲು, ಅವು ನಿಜವಾಗಿ ದೇವರ ಗುಣಗಳೇ ಆಗಿವೆ.
[ಪುಟ 4ರಲ್ಲಿರುವ ಚಿತ್ರ]
ನೋಹನು ದೇವರ ಅನುಗ್ರಹಪಡೆದನು
[ಪುಟ 5ರಲ್ಲಿರುವ ಚಿತ್ರ]
ಅಬ್ರಹಾಮನು ದೇವರ ಭಾವನೆಗಳಿಗೆ ಚೆನ್ನಾಗಿ ಹೊಂದಿಕೊಂಡಿದ್ದನು
[ಪುಟ 6ರಲ್ಲಿರುವ ಚಿತ್ರ]
ದಾವೀದನು ಯೆಹೋವನಲ್ಲಿ ತನ್ನ ಸಂಪೂರ್ಣ ಭರವಸೆಯನ್ನಿಟ್ಟನು
[ಪುಟ 7ರಲ್ಲಿರುವ ಚಿತ್ರ]
ನೀವು ಬೈಬಲನ್ನು ಓದುವಾಗ, ದೇವರನ್ನು ಸಂತೋಷಪಡಿಸುವುದು ಹೇಗೆಂಬುದನ್ನು ಕಲಿಯಬಲ್ಲಿರಿ
[ಪುಟ 4ರಲ್ಲಿರುವ ಚಿತ್ರ ಕೃಪೆ]
Courtesy of Anglo-Australian Observatory, photograph by David Malin