ಅಗತ್ಯದ ಸಮಯದಲ್ಲಿ ಒಳ್ಳೇದನ್ನು ಮಾಡುವುದು
ಅಗತ್ಯದ ಸಮಯದಲ್ಲಿ ಒಳ್ಳೇದನ್ನು ಮಾಡುವುದು
“ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು, ಪ್ರತಿಯೊಬ್ಬರಿಗೆ ಅದರಲ್ಲೂ ವಿಶೇಷವಾಗಿ ಜೊತೆ ವಿಶ್ವಾಸಿಗಳಿಗೆ ಒಳ್ಳೇದನ್ನು ಮಾಡಲು ಪ್ರಯತ್ನಿಸುತ್ತಾ, ಈ ಮೂಲತತ್ತ್ವವನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಾರೆ. ಅಗತ್ಯದ ಸಮಯದಲ್ಲಿ ಅನೇಕಾವರ್ತಿ ಇದು ರುಜುಪಡಿಸಲ್ಪಟ್ಟಿದೆ. ಮೂರು ದೇಶಗಳಿಂದ ಬಂದ ಇತ್ತೀಚಿನ ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ.
ಇಸವಿ 2002ರ ಡಿಸೆಂಬರ್ ತಿಂಗಳಿನಲ್ಲಿ, ಒಂದು ತಾಸಿಗೆ 300 ಕಿಲೊಮೀಟರುಗಳಿಗಿಂತಲೂ ಹೆಚ್ಚು ರಭಸವಾಗಿ ಬೀಸುವ ಬಿರುಗಾಳಿಯು ಗ್ವಾಮ್‌ನಲ್ಲಿ ಭಾರಿ ದೊಡ್ಡ ತುಫಾನನ್ನು ಎಬ್ಬಿಸಿತು. ಅನೇಕ ಮನೆಗಳು ಕುಸಿದುಬಿದ್ದವು ಮತ್ತು ಕೆಲವು ಸಂಪೂರ್ಣವಾಗಿ ಧ್ವಂಸಗೊಳಿಸಲ್ಪಟ್ಟವು. ಗಂಭೀರವಾಗಿ ಬಾಧಿಸಲ್ಪಟ್ಟ ಸಾಕ್ಷಿ ಕುಟುಂಬಗಳಿಗೆ ಸಹಾಯಮಾಡಲಿಕ್ಕಾಗಿ, ಸ್ವಚ್ಛಗೊಳಿಸುವ ತಂಡಗಳನ್ನು ಸ್ಥಳಿಕ ಸಭೆಗಳು ಆ ಕೂಡಲೆ ವ್ಯವಸ್ಥಾಪಿಸಿದವು. ಕುಸಿದುಬಿದ್ದ ಮನೆಗಳನ್ನು ರಿಪೇರಿಮಾಡಲಿಕ್ಕಾಗಿ ಬೇಕಾಗಿರುವ ಸಾಮಗ್ರಿಗಳು ಮತ್ತು ಕೆಲಸಗಾರರನ್ನು ಗ್ವಾಮ್ ಬ್ರಾಂಚ್ ಒದಗಿಸಿತು, ಮತ್ತು ಹವಾಯೀ ಬ್ರಾಂಚ್ ಇದಕ್ಕೆ ಬೆಂಬಲವನ್ನು ನೀಡಿತು. ಕೆಲವೇ ವಾರಗಳಲ್ಲಿ, ಪುನರ್ನಿರ್ಮಾಣದ ಕೆಲಸದಲ್ಲಿ ಸಹಾಯಮಾಡಲಿಕ್ಕಾಗಿ ಬಡಗಿಗಳ ಒಂದು ತಂಡವು ಹವಾಯೀ ಇಂದ ಆಗಮಿಸಿತು, ಮತ್ತು ಇವರಿಗೆ ನೆರವು ನೀಡಲಿಕ್ಕಾಗಿ ಸ್ಥಳಿಕ ಸಹೋದರರಲ್ಲಿ ಕೆಲವರು ತಮ್ಮ ಉದ್ಯೋಗಗಳಿಂದ ರಜೆಯನ್ನೂ ತೆಗೆದುಕೊಂಡರು. ಈ ಹರ್ಷಭರಿತ ಸಹಕಾರ ಮನೋಭಾವವು ಆ ಸಮುದಾಯದಲ್ಲಿದ್ದ ಜನರಿಗೆಲ್ಲಾ ಒಂದು ಸಾಕ್ಷಿಯಾಗಿತ್ತು.
ಮ್ಯಾನ್ಮಾರ್‌ನ ಮ್ಯಾಂಡಲೇ ನಗರದ ಉಪನಗರವೊಂದರಲ್ಲಿ, ರಾಜ್ಯ ಸಭಾಗೃಹವೊಂದರ ಸಮೀಪದಲ್ಲೇ ಇದ್ದಕ್ಕಿದ್ದಂತೆ ಬೆಂಕಿಯು ಹೊತ್ತಿಕೊಂಡಿತು. ಅದರ ಹತ್ತಿರದಲ್ಲೇ ಒಬ್ಬ ಅಕ್ರಿಯ ಸಹೋದರಿ ಹಾಗೂ ಅವಳ ಕುಟುಂಬಕ್ಕೆ ಸೇರಿದ್ದ ಒಂದು ಮನೆಯಿತ್ತು. ಅವಳ ಮನೆಯಿದ್ದ ದಿಕ್ಕಿನಲ್ಲಿ ಬಿರುಗಾಳಿಯು ಜೋರಾಗಿ ಬೀಸುತ್ತಿತ್ತು, ಆದುದರಿಂದ ಅವಳು ಸಹಾಯವನ್ನು ಕೇಳಲಿಕ್ಕಾಗಿ ಸಭಾಗೃಹಕ್ಕೆ ಓಡಿದಳು. ಆ ಸಮಯದಲ್ಲಿ, ಸಭಾಗೃಹವು ನವೀಕರಿಸಲ್ಪಡುತ್ತಿದ್ದದರಿಂದ ಅಲ್ಲಿ ಅನೇಕ ಸಹೋದರರು ಇದ್ದರು. ಈ ಸಹೋದರಿಯನ್ನು ನೋಡಿದಾಗ ಅವರಿಗೆ ಅತ್ಯಾಶ್ಚರ್ಯವಾಯಿತು, ಏಕೆಂದರೆ ಅವಳು ಆ ಕ್ಷೇತ್ರದಲ್ಲೇ ವಾಸಿಸುತ್ತಿದ್ದಾಳೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಕೂಡಲೆ ಸಹೋದರರು ಆ ಕುಟುಂಬದ ಸಾಮಾನು-ಸರಂಜಾಮುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಹಾಯಮಾಡಿದರು. ಆ ಸಹೋದರಿಯ ಅವಿಶ್ವಾಸಿ ಗಂಡನು ಬೆಂಕಿಹೊತ್ತಿಕೊಂಡ ಸುದ್ದಿಯನ್ನು ಕೇಳಿಸಿಕೊಂಡು ಮನೆಗೆ ಧಾವಿಸಿದಾಗ, ಸಹೋದರರು ತನ್ನ ಕುಟುಂಬಕ್ಕೆ ಸಹಾಯಮಾಡುತ್ತಿರುವುದನ್ನು ನೋಡಿ ಬೆರಗಾದನು. ಅವನು ಇದರಿಂದ ಪ್ರಭಾವಿತನೂ ಕೃತಜ್ಞನೂ ಆದನು; ಅಷ್ಟುಮಾತ್ರವಲ್ಲ ಇಂಥ ಸನ್ನಿವೇಶಗಳಲ್ಲಿ ಲೂಟಿಮಾಡುವವರು ವಸ್ತುಗಳನ್ನು ಕದಿಯುವುದು ಸರ್ವಸಾಮಾನ್ಯವಾಗಿದ್ದುದರಿಂದ, ಸಾಕ್ಷಿಗಳು ಅಲ್ಲಿದ್ದದ್ದು ಅವನಿಗೆ ಸುರಕ್ಷೆಯ ಅನಿಸಿಕೆಯನ್ನು ನೀಡಿತು. ಸಹೋದರರಿಂದ ತೋರಿಸಲ್ಪಟ್ಟ ಕರುಣೆಯ ಈ ಅಭಿವ್ಯಕ್ತಿಯು, ಆ ಸಹೋದರಿಯೂ ಅವಳ ಮಗನೂ ಪುನಃ ಒಮ್ಮೆ ಕ್ರೈಸ್ತ ಸಭೆಯೊಂದಿಗೆ ಸಹವಾಸಮಾಡುವಂತೆ ಪ್ರಚೋದಿಸಿತು, ಮತ್ತು ಈಗ ಅವರು ಎಲ್ಲಾ ಕೂಟಗಳಿಗೆ ಹಾಜರಾಗುತ್ತಿದ್ದಾರೆ.
ಕಳೆದ ಸೇವಾ ವರ್ಷದಲ್ಲಿ, ಅನಾವೃಷ್ಟಿಯಿಂದ ಹಾಗೂ ಫಸಲಿನ ನಷ್ಟದಿಂದಾಗಿ ಮೊಸಾಂಬೀಕ್‌ನಲ್ಲಿ ಅನೇಕರು ಬರವನ್ನು ಅನುಭವಿಸಿದರು. ಯೆಹೋವನ ಸಾಕ್ಷಿಗಳ ಸ್ಥಳಿಕ ಬ್ರಾಂಚ್ ಆಫೀಸು ಅಗತ್ಯದಲ್ಲಿರುವವರಿಗೆ ಆಹಾರವನ್ನು ಒದಗಿಸುವ ಮೂಲಕ ಆ ಕೂಡಲೆ ಪ್ರತಿಕ್ರಿಯಿಸಿತು. ಆಹಾರ ವಿತರಣೆಯು ಕೆಲವೊಮ್ಮೆ ರಾಜ್ಯ ಸಭಾಗೃಹಗಳಲ್ಲಿ ಸಭಾ ಕೂಟಗಳ ಬಳಿಕ ನಡೆಸಲ್ಪಟ್ಟಿತು. ಒಂಟಿ ಹೆತ್ತವಳಾಗಿರುವ
ಒಬ್ಬ ಸಹೋದರಿಯು ಹೇಳಿದ್ದು: “ತುಂಬ ಖಿನ್ನತೆಯಿಂದಲೇ ನಾನು ಕೂಟಕ್ಕೆ ಬಂದೆ, ನಾವು ಮನೆಗೆ ಹಿಂದಿರುಗಿ ಹೋಗುವಾಗ ನನ್ನ ಮಕ್ಕಳಿಗೆ ಊಟವನ್ನು ಕೊಡಶಕ್ತಳಾಗುವೆ ಎಂಬುದು ನನಗೆ ಗೊತ್ತಿರಲಿಲ್ಲ.” ಸಹೋದರರಿಂದ ಒದಗಿಸಲ್ಪಟ್ಟ ಪ್ರೀತಿಪರ ಸಹಾಯವು ಅವಳನ್ನು ಉತ್ತೇಜಿಸಿತು. “ಅದು ನನಗೆ ಒಂದು ಪುನರುತ್ಥಾನದಂತೆ ಭಾಸವಾಯಿತು!” ಎಂದು ಅವಳು ಹೇಳಿದಳು.ಸಾಂತ್ವನ ಹಾಗೂ ನಿರೀಕ್ಷೆಯ ಬೈಬಲ್ ಸಂದೇಶವನ್ನು ಹಂಚುವ ಮೂಲಕ ಸಾಕ್ಷಿಗಳು ಆಧ್ಯಾತ್ಮಿಕ ವಿಧದಲ್ಲಿಯೂ ‘ಒಳ್ಳೇದನ್ನು ಮಾಡುತ್ತಾರೆ.’ ಬಹಳ ದೀರ್ಘ ಸಮಯದ ಹಿಂದೆ ಇದ್ದ ಒಬ್ಬ ಜ್ಞಾನಿಯು ಏನನ್ನು ನಂಬಿದನೋ ಅದನ್ನು ಇವರೂ ನಂಬುತ್ತಾರೆ: “ನನ್ನ ಮಾತಿಗೆ [ದೈವಿಕ ವಿವೇಕಕ್ಕೆ] ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.”—ಜ್ಞಾನೋಕ್ತಿ 1:33.
[ಪುಟ 31ರಲ್ಲಿರುವ ಚಿತ್ರಗಳು]
1, 2. ಮೊಸಾಂಬೀಕ್‌ನಲ್ಲಿ ಅಗತ್ಯದಲ್ಲಿರುವವರಿಗೆ ಆಹಾರವನ್ನು ವಿತರಿಸುತ್ತಿರುವುದು
3, 4. ಗ್ವಾಮ್‌ನಲ್ಲಿ ಎದ್ದ ತುಫಾನು ಅನೇಕ ಮನೆಗಳನ್ನು ಧ್ವಂಸಮಾಡಿತು
[ಕೃಪೆ]
ಮಗು, ಎಡಭಾಗದಲ್ಲಿ: Andrea Booher/FEMA News Photo; ಸ್ತ್ರೀ, ಮೇಲೆ: AP Photo/Pacific Daily News, Masako Watanabe