ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವಸ್ವರೂಪನಾದ ದೇವರ ಮಾರ್ಗದರ್ಶನವನ್ನು ಅಂಗೀಕರಿಸಿರಿ

ಜೀವಸ್ವರೂಪನಾದ ದೇವರ ಮಾರ್ಗದರ್ಶನವನ್ನು ಅಂಗೀಕರಿಸಿರಿ

ಜೀವಸ್ವರೂಪನಾದ ದೇವರ ಮಾರ್ಗದರ್ಶನವನ್ನು ಅಂಗೀಕರಿಸಿರಿ

‘ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ.’​—⁠ಅ. ಕೃತ್ಯಗಳು 14:15.

ಅಪೊಸ್ತಲ ಪೌಲ ಮತ್ತು ಬಾರ್ನಬರು ಒಬ್ಬ ವ್ಯಕ್ತಿಯನ್ನು ವಾಸಿಮಾಡಿದ ಮೇಲೆ, ಅಲ್ಲಿದ್ದ ಪ್ರೇಕ್ಷಕರಿಗೆ ಪೌಲನು ಈ ಆಶ್ವಾಸನೆಯನ್ನು ನೀಡಿದನು: “ನಾವೂ ಮನುಷ್ಯರು, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ.”​—⁠ಅ. ಕೃತ್ಯಗಳು 14:15.

2 ಯೆಹೋವನು ಒಂದು ನಿರ್ಜೀವ ವಿಗ್ರಹವಾಗಿರದೆ, “ಜೀವಸ್ವರೂಪನಾದ” ಇಲ್ಲವೆ ‘ಜೀವವುಳ್ಳ’ ದೇವರಾಗಿರುವುದು ಎಷ್ಟು ನಿಜ! (1 ಥೆಸಲೋನಿಕ 1:9, 10; 1 ತಿಮೊಥೆಯ 4:10) ಯೆಹೋವನು ಸ್ವತಃ ಜೀವವುಳ್ಳವನಾಗಿರುವುದು ಮಾತ್ರವಲ್ಲ, ಆತನು ನಮ್ಮ ಜೀವದ ಮೂಲನೂ ಆಗಿದ್ದಾನೆ. ‘ಆತನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿದ್ದಾನೆ.’ (ಅ. ಕೃತ್ಯಗಳು 17:25) ನಾವು ಈಗಲೂ ಭವಿಷ್ಯತ್ತಿನಲ್ಲೂ ಜೀವನದಲ್ಲಿ ಆನಂದಿಸಬೇಕೆಂಬ ವಿಷಯದಲ್ಲಿ ಆತನು ಆಸಕ್ತನಾಗಿದ್ದಾನೆ. ಆದುದರಿಂದಲೇ, ದೇವರು “ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರ ಮಾಡುತ್ತಾ” ಬಂದಿದ್ದಾನೆ ಎಂದು ಪೌಲನು ಕೂಡಿಸಿ ಹೇಳಿದನು.​—⁠ಅ. ಕೃತ್ಯಗಳು 14:17.

3 ನಮ್ಮ ಜೀವದ ಬಗ್ಗೆ ದೇವರು ತೋರಿಸುವ ಆಸಕ್ತಿಯು ಆತನ ಮಾರ್ಗದರ್ಶನದಲ್ಲಿ ನಾವು ಭರವಸೆಯಿಡಲು ಕಾರಣವನ್ನು ಕೊಡುತ್ತದೆ. (ಕೀರ್ತನೆ 147:8; ಮತ್ತಾಯ 5:45) ಆದರೆ ಕೆಲವರು, ತಮಗೆ ಯಾವುದಾದರೊಂದು ಬೈಬಲ್‌ ಆಜ್ಞೆಯು ಅರ್ಥವಾಗದಿರುವಲ್ಲಿ ಇಲ್ಲವೆ ಅದು ತೀರ ನಿರ್ಬಂಧಕವಾಗಿ ಕಂಡುಬರುವಲ್ಲಿ ಆತನ ಮಾರ್ಗದರ್ಶನದಲ್ಲಿ ಭರವಸೆಯಿಡಲಿಕ್ಕಿಲ್ಲ. ಆದರೂ, ಯೆಹೋವನ ಮಾರ್ಗದರ್ಶನದಲ್ಲಿ ಭರವಸೆಯಿಡುವುದು ವಿವೇಕಪ್ರದವೆಂದು ರುಜುವಾಗಿದೆ. ದೃಷ್ಟಾಂತಕ್ಕೆ, ಒಬ್ಬ ಇಸ್ರಾಯೇಲ್ಯನಿಗೆ, ಹೆಣವನ್ನು ಮುಟ್ಟಬಾರದೆಂಬ ಆಜ್ಞೆಯು ಏಕೆ ಕೊಡಲ್ಪಟ್ಟಿದೆಯೆಂದು ಅರ್ಥವಾಗದಿದ್ದರೂ, ಅದಕ್ಕೆ ವಿಧೇಯನಾಗುವುದರಿಂದ ಅವನಿಗೆ ಪ್ರಯೋಜನವಾಗುತ್ತಿತ್ತು. ಪ್ರಥಮವಾಗಿ, ಅವನ ವಿಧೇಯತೆ ಅವನನ್ನು ಜೀವಸ್ವರೂಪನಾದ ದೇವರ ಸಮೀಪಕ್ಕೆ ಸೆಳೆಯುತ್ತಿತ್ತು, ಮತ್ತು ಎರಡನೆಯದಾಗಿ, ಅವನು ರೋಗಗಳಿಂದ ದೂರವಾಗಿರುವಂತೆ ಅದು ಸಹಾಯಮಾಡುತ್ತಿತ್ತು.​—⁠ಯಾಜಕಕಾಂಡ 5:​2; 11:24.

4 ರಕ್ತದ ಕುರಿತಾದ ದೇವರ ಮಾರ್ಗದರ್ಶನವೂ ಹೀಗೆಯೇ. ಮಾನವರು ರಕ್ತಸೇವನೆ ಮಾಡಬಾರದೆಂದು ಆತನು ನೋಹನಿಗೆ ಹೇಳಿದನು. ಬಳಿಕ ಧರ್ಮಶಾಸ್ತ್ರದಲ್ಲಿ, ಏಕಮಾತ್ರ ಸ್ವೀಕೃತ ರಕ್ತೋಪಯೋಗವು ಯಜ್ಞವೇದಿಯ ಮೇಲೆ ಪಾಪಗಳ ಕ್ಷಮೆಗಾಗಿತ್ತೆಂದು ದೇವರು ತಿಳಿಯಪಡಿಸಿದನು. ಆ ಆಜ್ಞೆಗಳ ಮೂಲಕ ದೇವರು ರಕ್ತದ ಪರಮೋಪಯೋಗಕ್ಕಾಗಿ, ಅಂದರೆ ಯೇಸುವಿನ ಈಡಿನ ಮೂಲಕ ಜೀವರಕ್ಷಣೆಗೆ ಅಸ್ತಿವಾರವನ್ನು ಹಾಕುತ್ತಿದ್ದನು. (ಇಬ್ರಿಯ 9:14) ಹೌದು, ನಮ್ಮ ಜೀವ ಮತ್ತು ಹಿತಕ್ಷೇಮವನ್ನು ಮನಸ್ಸಿನಲ್ಲಿಟ್ಟು ದೇವರು ಆ ಮಾರ್ಗದರ್ಶನವನ್ನು ನೀಡಿದನು. ಆದಿಕಾಂಡ 9:4ನ್ನು ಚರ್ಚಿಸುತ್ತ, 19ನೇ ಶತಮಾನದ ಬೈಬಲ್‌ ವಿದ್ವಾಂಸ ಆ್ಯಡಮ್‌ ಕ್ಲಾರ್ಕ್‌ ಬರೆದುದು: “[ನೋಹನಿಗೆ ಕೊಡಲ್ಪಟ್ಟ] ಈ ಆಜ್ಞೆಯು ಈಸ್ಟರ್ನ್‌ ಆರ್ತೊಡಾಕ್ಸ್‌ ಚರ್ಚಿನ ಕ್ರೈಸ್ತರಿಂದ ಈಗಲೂ ಬಹು ಜಾಗರೂಕತೆಯಿಂದ ಪಾಲಿಸಲ್ಪಡುತ್ತದೆ. . . . ಧರ್ಮಶಾಸ್ತ್ರವು ರಕ್ತಸೇವನೆಯನ್ನು ನಿಷೇಧಿಸಿತು. ಏಕೆಂದರೆ ಅದು ಲೋಕದ ಪಾಪಕ್ಕಾಗಿ ಸುರಿಸಲ್ಪಡಲಿದ್ದ ರಕ್ತವನ್ನು ಸೂಚಿಸಿತು; ಮತ್ತು ಸುವಾರ್ತೆಗನುಸಾರವೂ ಅದನ್ನು ತಿನ್ನಬಾರದಾಗಿತ್ತು. ಏಕೆಂದರೆ ಅದು ಪಾಪಕ್ಷಮೆಗಾಗಿ ಸುರಿಸಲ್ಪಟ್ಟ ರಕ್ತವನ್ನು ಸದಾ ಪ್ರತಿನಿಧಿಸಬೇಕಾಗಿತ್ತು.”

5 ಈ ವಿದ್ವಾಂಸನು ಯೇಸುವಿನ ಮೇಲೆ ಕೇಂದ್ರೀಕೃತವಾಗಿದ್ದ ಸುವಾರ್ತೆ ಇಲ್ಲವೆ ಶುಭ ವರ್ತಮಾನಕ್ಕೆ ಸೂಚಿಸುತ್ತಿದ್ದಿರಬಹುದು. ಅದರಲ್ಲಿ, ನಾವು ನಿತ್ಯಜೀವವನ್ನು ಪಡೆಯಲು ಸಾಧ್ಯವಾಗುವಂತೆ ದೇವರು ತನ್ನ ಮಗನನ್ನು ನಮಗಾಗಿ ಸಾಯಲು, ಅವನ ರಕ್ತವನ್ನು ಸುರಿಸಲು ಕಳುಹಿಸಿದ್ದು ಸೇರಿತ್ತು. (ಮತ್ತಾಯ 20:28; ಯೋಹಾನ 3:16; ರೋಮಾಪುರ 5:8, 9) ಆ ವಿದ್ವಾಂಸನ ಹೇಳಿಕೆಯಲ್ಲಿ, ಕ್ರಿಸ್ತನ ಹಿಂಬಾಲಕರು ರಕ್ತವನ್ನು ವಿಸರ್ಜಿಸಬೇಕೆಂದು ಸಮಯಾನಂತರ ಕೊಡಲ್ಪಟ್ಟ ಆಜ್ಞೆಯೂ ಒಳಗೂಡಿತ್ತು.

6 ದೇವರು ಇಸ್ರಾಯೇಲ್ಯರಿಗೆ ನೂರಾರು ಕಟ್ಟಳೆಗಳನ್ನು ಕೊಟ್ಟನೆಂಬುದು ನಿಮಗೆ ತಿಳಿದದೆ. ಆದರೆ, ಯೇಸುವಿನ ಮರಣಾನಂತರ ಅವನ ಶಿಷ್ಯರಿಗೆ ಅವುಗಳನ್ನು ಪಾಲಿಸುವ ಹಂಗು ಇರಲಿಲ್ಲ. (ರೋಮಾಪುರ 7:4, 6; ಕೊಲೊಸ್ಸೆ 2:13, 14, 17; ಇಬ್ರಿಯ 8:6, 13) ಹಾಗಿದ್ದರೂ ಸಮಯಾನಂತರ, ಗಂಡಿನ ಸುನ್ನತಿಯೆಂಬ ಒಂದು ಮೂಲಭೂತ ಹಂಗಿನ ಬಗ್ಗೆ ಪ್ರಶ್ನೆಯೆದ್ದು ಬಂತು. ಕ್ರಿಸ್ತನ ರಕ್ತದಿಂದ ಪ್ರಯೋಜನ ಪಡೆಯಬೇಕಾದರೆ ಯೆಹೂದ್ಯೇತರರು ತಾವಿನ್ನೂ ಧರ್ಮಶಾಸ್ತ್ರದ ಕೆಳಗೆ ಇದ್ದೇವೆಂದು ಸೂಚಿಸುತ್ತ ಸುನ್ನತಿಮಾಡಿಸಿಕೊಳ್ಳಬೇಕಿತ್ತೊ? ಸಾ.ಶ. 49ರಲ್ಲಿ ಕ್ರೈಸ್ತ ಆಡಳಿತ ಮಂಡಲಿಯು ಆ ವಿವಾದಾಂಶವನ್ನು ಸಂಬೋಧಿಸಿತು. (ಅ. ಕೃತ್ಯಗಳು, ಅಧ್ಯಾಯ 15) ದೇವರಾತ್ಮದ ಸಹಾಯದಿಂದ ಅಲ್ಲಿದ್ದ ಅಪೋಸ್ತಲರೂ ಹಿರೀ ಪುರುಷರೂ, ಬಂಧಕವಾಗಿದ್ದ ಸುನ್ನತಿಮಾಡಿಸುವಿಕೆಯು ಧರ್ಮಶಾಸ್ತ್ರದೊಂದಿಗೆ ಅಂತ್ಯಗೊಂಡಿತೆಂದು ತೀರ್ಮಾನಿಸಿದರು. ಹಾಗಿದ್ದರೂ, ಕ್ರೈಸ್ತರಿಗಾಗಿ ಕೆಲವೊಂದು ದೈವಿಕ ಆವಶ್ಯಕತೆಗಳು ಇನ್ನೂ ಜಾರಿಯಲ್ಲಿದ್ದವು. ಸಭೆಗಳಿಗೆ ಕಳುಹಿಸಲ್ಪಟ್ಟ ಪತ್ರದಲ್ಲಿ ಆಡಳಿತ ಮಂಡಲಿಯು ಬರೆದುದು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ [“ಪವಿತ್ರಾತ್ಮಕ್ಕೂ,” NW] ನಮಗೂ ವಿಹಿತವಾಗಿ ತೋರಿತು. ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೇದಾಗುವದು.”​—⁠ಅ. ಕೃತ್ಯಗಳು 15:28, 29.

7 ಹಾಗಾದರೆ ಆಡಳಿತ ಮಂಡಲಿಯು, ‘ರಕ್ತ ವಿಸರ್ಜಿಸುವುದನ್ನು’ ಲೈಂಗಿಕ ದುರಾಚಾರ ಅಥವಾ ವಿಗ್ರಹಾರಾಧನೆಯನ್ನು ವಿಸರ್ಜಿಸುವಷ್ಟೇ ನೈತಿಕ ಮಹತ್ವವುಳ್ಳದ್ದಾಗಿ ದೃಷ್ಟಿಸಿತು. ರಕ್ತದ ಕುರಿತಾದ ನಿಷೇಧವು ಗಂಭೀರವಾದುದೆಂದು ಇದು ರುಜುಪಡಿಸುತ್ತದೆ. ಪಶ್ಚಾತ್ತಾಪಪಡದೆ ವಿಗ್ರಹಾರಾಧನೆಯನ್ನು ಅಥವಾ ಲೈಂಗಿಕ ದುರಾಚಾರವನ್ನು ನಡೆಸುತ್ತಿರುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಮಾತ್ರವಲ್ಲ, “ಇವರಿಗೆ ಸಿಕ್ಕುವ ಪಾಲು . . . ಎರಡನೆಯ ಮರಣ.” (1 ಕೊರಿಂಥ 6:9, 10; ಪ್ರಕಟನೆ 21:8; 22:15) ಈ ವೈದೃಶ್ಯವನ್ನು ಗಮನಿಸಿರಿ: ಜೀವರಕ್ತದ ಪಾವಿತ್ರ್ಯದ ಬಗ್ಗೆ ದೇವರ ಮಾರ್ಗದರ್ಶನವನ್ನು ಅಲಕ್ಷ್ಯಮಾಡುವುದು ನಿತ್ಯಮರಣಕ್ಕೆ ನಡೆಸಬಲ್ಲದು. ಆದರೆ ಯೇಸುವಿನ ಯಜ್ಞಕ್ಕೆ ಗೌರವವು ನಿತ್ಯಜೀವಕ್ಕೆ ನಡೆಸಬಲ್ಲದು.

8 ರಕ್ತದ ಬಗ್ಗೆ ದೇವರ ಈ ಮಾರ್ಗದರ್ಶನವನ್ನು ಆದಿ ಕ್ರೈಸ್ತರು ಹೇಗೆ ಅರ್ಥಮಾಡಿಕೊಂಡರು ಮತ್ತು ಅನುಸರಿಸಿದರು? ಕ್ಲಾರ್ಕ್‌ ಅವರ ಹೇಳಿಕೆಗಳನ್ನು ಜ್ಞಾಪಿಸಿಕೊಳ್ಳಿ: “ಸುವಾರ್ತೆಗನುಸಾರವೂ ಅದನ್ನು ತಿನ್ನಬಾರದಾಗಿತ್ತು. ಏಕೆಂದರೆ ಅದು ಪಾಪಕ್ಷಮೆಗಾಗಿ ಸುರಿಸಲ್ಪಟ್ಟ ರಕ್ತವನ್ನು ಸದಾ ಪ್ರತಿನಿಧಿಸಬೇಕಾಗಿತ್ತು.” ಈ ವಿಷಯವನ್ನು ಆದಿ ಕ್ರೈಸ್ತರು ಗಂಭೀರವಾಗಿ ತೆಗೆದುಕೊಂಡರೆಂದು ಇತಿಹಾಸವು ದೃಢೀಕರಿಸುತ್ತದೆ. ಟೆರ್ಟಲಿಯನನು ಬರೆದುದು: “ಅಖಾಡದಲ್ಲಿ ಒಂದು ಪ್ರದರ್ಶನದಲ್ಲಿ, ದುಷ್ಟ ಪಾತಕಿಗಳ ಹಸಿ ರಕ್ತವನ್ನು . . . ತಮ್ಮ ಅಪಸ್ಮಾರ ರೋಗವಾಸಿಗಾಗಿ ಅತೀ ದಾಹದಿಂದ ಒಯ್ಯುವವರನ್ನು ಪರಿಗಣಿಸಿ.” ವಿಧರ್ಮಿಗಳು ರಕ್ತಸೇವನೆ ಮಾಡಿದರೂ, ಕ್ರೈಸ್ತರಾದರೊ “[ತಮ್ಮ] ಊಟಗಳಲ್ಲಿ ಪ್ರಾಣಿಗಳ ರಕ್ತವನ್ನೂ ತೆಗೆದುಕೊಳ್ಳುವುದಿಲ್ಲ . . . ಕ್ರೈಸ್ತರ ನ್ಯಾಯವಿಚಾರಣೆಗಳಲ್ಲಿ ರಕ್ತತುಂಬಿದ ಮಾಂಸದ ಸಾಸೆಜ್‌ಗಳನ್ನು ಅವರಿಗೆ ಕೊಡುತ್ತೀರಿ. ಅವರಿಗದು ನ್ಯಾಯಬದ್ಧವಲ್ಲವೆಂಬುದು ನಿಮಗೆ ತಿಳಿದೇ ಇದೆ,” ಎಂದು ಟೆರ್ಟಲಿಯನನು ಹೇಳಿದನು. ಹೌದು, ಮರಣದ ಬೆದರಿಕೆಯಿದ್ದರೂ ಕ್ರೈಸ್ತರು ರಕ್ತಸೇವನೆ ಮಾಡುತ್ತಿರಲಿಲ್ಲ. ದೇವರ ಮಾರ್ಗದರ್ಶನವು ಅವರಿಗೆ ಅಷ್ಟು ಪ್ರಾಮುಖ್ಯವಾಗಿತ್ತು.

9 ಈ ಆಜ್ಞೆಯು ಕೊಡಲ್ಪಟ್ಟಾಗ ಆಡಳಿತ ಮಂಡಲಿಯ ಉದ್ದೇಶವು, ಕ್ರೈಸ್ತರು ನೇರವಾಗಿ ರಕ್ತವನ್ನು ತಿನ್ನಬಾರದು ಅಥವಾ ಕುಡಿಯಬಾರದು ಇಲ್ಲವೆ ರಕ್ತ ಸ್ರವಿಸದ ಮಾಂಸವನ್ನಾಗಲಿ ರಕ್ತಮಿಶ್ರಿತ ಆಹಾರವನ್ನಾಗಲಿ ತಿನ್ನಬಾರದೆಂದಷ್ಟೇ ಆಗಿತ್ತೆಂದು ಕೆಲವರು ಭಾವಿಸಬಹುದು. ದೇವರು ನೋಹನಿಗೆ ಕೊಟ್ಟ ಆಜ್ಞೆಯ ಪ್ರಥಮ ಮಹತ್ವವು ಅದೇ ಆಗಿತ್ತೆಂಬುದು ನಿಜ. ಮತ್ತು ಅಪೊಸ್ತಲಿಕ ಆಜ್ಞೆಯು ಸಹ ‘ಕುತ್ತಿಗೆ ಹಿಸುಕಿದ್ದನ್ನು’ ಅಂದರೆ ರಕ್ತ ಸ್ರವಿಸದ ಮಾಂಸವನ್ನು ತಿನ್ನಬಾರದೆಂದು ಹೇಳಿತ್ತು. (ಆದಿಕಾಂಡ 9:3, 4; ಅ. ಕೃತ್ಯಗಳು 21:25) ಆದರೂ, ಅದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿತ್ತೆಂಬುದು ಆದಿ ಕ್ರೈಸ್ತರಿಗೆ ತಿಳಿದಿತ್ತು. ಕೆಲವು ಸಲ ರಕ್ತವನ್ನು ವೈದ್ಯಕೀಯ ಕಾರಣಗಳಿಗಾಗಿ ಸೇವಿಸಲಾಗುತ್ತಿತ್ತು. ಅಪಸ್ಮಾರ ರೋಗವನ್ನು ಗುಣಪಡಿಸುವ ಪ್ರಯತ್ನದಲ್ಲಿ ಕೆಲವು ವಿಧರ್ಮಿಗಳು ಹಸಿ ರಕ್ತವನ್ನು ಕುಡಿಯುತ್ತಿದ್ದರೆಂದು ಟೆರ್ಟಲಿಯನನು ಹೇಳಿದನು. ಮತ್ತು ರಕ್ತವನ್ನು ರೋಗಚಿಕಿತ್ಸೆಗಾಗಿ ಅಥವಾ ಆರೋಗ್ಯಾಭಿವೃದ್ಧಿಗಾಗಿ ಎಂದೆಣಿಸಲಾಗುತ್ತಿದ್ದ ಬೇರೆ ರೀತಿಗಳಲ್ಲಿಯೂ ಉಪಯೋಗಿಸಲಾಗುತ್ತಿದ್ದಿರಬಹುದು. ಆದಕಾರಣ, ಕ್ರೈಸ್ತರು ರಕ್ತವನ್ನು ವಿಸರ್ಜಿಸುವುದರಲ್ಲಿ, “ವೈದ್ಯಕೀಯ” ಕಾರಣಗಳಿಗಾಗಿಯೂ ಅದನ್ನು ತೆಗೆದುಕೊಳ್ಳದಿರುವುದು ಒಳಗೂಡಿತ್ತು. ಅವರು ಜೀವಾಪಾಯದ ಎದುರಿನಲ್ಲಿಯೂ ಈ ನಿಲುವನ್ನು ಕಾಪಾಡಿಕೊಂಡರು.

ಔಷಧವಾಗಿ ರಕ್ತದ ಉಪಯೋಗ

10 ಇಂದು ರಕ್ತವನ್ನು ವೈದ್ಯಕೀಯವಾಗಿ ಉಪಯೋಗಿಸುವುದು ಸರ್ವಸಾಮಾನ್ಯ. ಆರಂಭದ ರಕ್ತಪೂರಣಗಳು ದಾನಿಯಿಂದ ಪಡೆದು, ಶೇಖರಿಸಿಡಲ್ಪಟ್ಟು, ಚಿಕಿತ್ಸೆ ಬೇಕಾಗಿರುವವನಿಗೆ ಅಂದರೆ ಪ್ರಾಯಶಃ ಕದನದಲ್ಲಿ ಗಾಯಗೊಂಡಿರುವವನಿಗೆ ಕೊಡಲ್ಪಡುವ ಪೂರ್ಣ ರಕ್ತದ್ದಾಗಿರುತ್ತಿದ್ದವು. ಆದರೆ ಬಳಿಕ, ಸಂಶೋಧಕರು ರಕ್ತವನ್ನು ಪ್ರಮುಖ ಘಟಕಗಳಾಗಿ ಬೇರ್ಪಡಿಸಲು ಕಲಿತರು. ರಕ್ತಘಟಕ ಪೂರಣಗಳನ್ನು ಬಳಸುವ ಮೂಲಕ ವೈದ್ಯರು ದಾನಮಾಡಲ್ಪಟ್ಟ ರಕ್ತವನ್ನು ಹೆಚ್ಚು ಮಂದಿ ರೋಗಿಗಳಿಗೆ, ಅಂದರೆ ಪ್ರಾಯಶಃ ಗಾಯಗೊಂಡ ಒಬ್ಬನಿಗೆ ಪ್ಲಾಸ್ಮಾವನ್ನು ಮತ್ತು ಇನ್ನೊಬ್ಬನಿಗೆ ಕೆಂಪು ರಕ್ತಕಣಗಳನ್ನು ಹಂಚಲು ಸಾಧ್ಯವಾಯಿತು. ಮುಂದುವರಿದ ಸಂಶೋಧನೆಯು, ರಕ್ತದ ಪ್ಲಾಸ್ಮಾ (ರಕ್ತದ್ರವ)ದಂತಹ ಒಂದು ಘಟಕದಿಂದ ಹೆಚ್ಚಿನ ಅಂಶಗಳನ್ನು ತೆಗೆದು ಅವುಗಳನ್ನು ಇನ್ನೂ ಹೆಚ್ಚು ಮಂದಿ ರೋಗಿಗಳಿಗೆ ಕೊಡಸಾಧ್ಯವಿದೆ ಎಂಬುದನ್ನು ತೋರಿಸಿತು. ಈ ಕಾರ್ಯಗತಿಯು ಮುಂದುವರಿಯುತ್ತ ಇದೆ ಮತ್ತು ಈ ಅಂಶಗಳಿಗೆ ಹೊಸ ಉಪಯೋಗಗಳಿವೆಯೆಂದು ವರದಿಸಲಾಗುತ್ತದೆ. ಹಾಗಾದರೆ ಕ್ರೈಸ್ತನೊಬ್ಬನು ರಕ್ತಾಂಶಗಳ ಈ ಉಪಯೋಗಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ರಕ್ತಪೂರಣವನ್ನು ತಾನೆಂದಿಗೂ ತೆಗೆದುಕೊಳ್ಳೆನೆಂದು ಅವನು ದೃಢನಿಶ್ಚಯ ಮಾಡಿರುತ್ತಾನೆ. ಆದರೆ ಅವನ ಚಿಕಿತ್ಸಕನು ಅವನು ಆ ರಕ್ತದ ಒಂದೇ ಒಂದು ಪ್ರಧಾನ ಘಟಕವನ್ನು, ಒಂದುವೇಳೆ ಸಾಂದ್ರೀಕೃತ ಕೆಂಪು ರಕ್ತಕಣಗಳನ್ನು ತೆಗೆದುಕೊಳ್ಳಬೇಕೆಂದು ಪ್ರೋತ್ಸಾಹಿಸುತ್ತಾನೆ. ಇಲ್ಲವೆ, ಆ ಚಿಕಿತ್ಸೆಯಲ್ಲಿ ಒಂದು ಘಟಕದಿಂದ ತೆಗೆಯಲಾಗಿರುವ ಒಂದು ಅತಿ ಚಿಕ್ಕ ಅಂಶವು ಸೇರಿರಬಹುದು. ಇಂತಹ ಪ್ರಶ್ನೆಗಳ ಬಗ್ಗೆ, ರಕ್ತವು ಪವಿತ್ರವೆಂದೂ ಕ್ರಿಸ್ತನ ರಕ್ತವು ಅತಿ ಶ್ರೇಷ್ಠಾರ್ಥದಲ್ಲಿ ಜೀವರಕ್ಷಕವೆಂದೂ ನಂಬುವ ದೇವರ ಸೇವಕನೊಬ್ಬನು ಹೇಗೆ ನಿರ್ಣಯಮಾಡಬಲ್ಲನು?

11 ದಶಕಗಳ ಹಿಂದೆ, ಯೆಹೋವನ ಸಾಕ್ಷಿಗಳು ತಮ್ಮ ನಿಲುವನ್ನು ಸ್ಪಷ್ಟವಾಗಿ ತೋರಿಸಿದರು. ದೃಷ್ಟಾಂತಕ್ಕೆ, ಅವರು ಒಂದು ಲೇಖನವನ್ನು ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ಗೆ (ನವೆಂಬರ್‌ 27, 1981; ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರಿನ 27-9ನೆಯ ಪುಟಗಳಲ್ಲಿ ಪುನರ್‌ಮುದ್ರಿಸಲಾಗಿದೆ) ಒದಗಿಸಿದರು. * ಈ ಲೇಖನವು ಆದಿಕಾಂಡ, ಯಾಜಕಕಾಂಡ ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕಗಳಿಂದ ಉದ್ಧರಿಸಿತು. ಅದು ತಿಳಿಸಿದ್ದು: “ಈ ವಚನಗಳನ್ನು ವೈದ್ಯಕೀಯ ಭಾಷೆಯಲ್ಲಿ ಕೊಟ್ಟಿರುವುದಿಲ್ಲವಾದರೂ, ಸಾಕ್ಷಿಗಳು ಅವನ್ನು ಅವು ಪೂರ್ಣ ರಕ್ತ, ಒತ್ತಿ ತುಂಬಿದ ಕೆಂಪು ರಕ್ತಕಣ, ರಕ್ತದ್ರವ, ಬಿಳಿ ರಕ್ತಕಣ ಹಾಗೂ ರಕ್ತದ ಕಿರುಫಲಕ (ಪ್ಲೇಟ್‌ಲೆಟ್‌)ಗಳ ಪೂರಣವನ್ನು ನಿಷೇಧಿಸುತ್ತವೆಂಬಂತೆ ವೀಕ್ಷಿಸುತ್ತಾರೆ.” ತುರ್ತು ಆರೈಕೆ (ಇಂಗ್ಲಿಷ್‌) ಎಂಬ 2001ರ ಪಠ್ಯಪುಸ್ತಕವು, “ರಕ್ತದ ರಚನಾಂಶಗಳು” ಎಂಬ ಶೀರ್ಷಿಕೆಯ ಕೆಳಗೆ ಹೇಳಿದ್ದು: “ರಕ್ತದಲ್ಲಿ ಅನೇಕ ಘಟಕಗಳಿವೆ: ಪ್ಲಾಸ್ಮಾ, ಕೆಂಪು ಮತ್ತು ಬಿಳಿ ರಕ್ತಕಣಗಳು ಮತ್ತು ಪ್ಲೇಟ್‌ಲೆಟ್‌ಗಳು.” ಹೀಗೆ, ವೈದ್ಯಕೀಯ ನಿಜತ್ವಗಳಿಗೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳು ಪೂರ್ಣ ರಕ್ತವನ್ನಾಗಲಿ, ಅದರ ನಾಲ್ಕು ಪ್ರಧಾನ ಘಟಕಗಳನ್ನಾಗಲಿ ಪೂರಣ ಮಾಡಿಸಿಕೊಳ್ಳಲು ನಿರಾಕರಿಸುತ್ತಾರೆ.

12 ಆ ವೈದ್ಯಕೀಯ ಲೇಖನವು ಮುಂದುವರಿಸಿದ್ದು: “ಸಾಕ್ಷಿಗಳ ಧಾರ್ಮಿಕ ತಿಳುವಳಿಕೆ, ಆಲ್ಬುಮಿನ್‌, ಇಮ್ಯೂನ್‌ ಗ್ಲಾಬುಲಿನ್‌ ಅಂಗಾಂಶಗಳನ್ನೂ ಹಿಮೋಫಿಲಿಯ ತಯಾರಿಕೆಗಳನ್ನೂ ಪೂರ್ತಿಯಾಗಿ ನಿಷೇಧಿಸುವುದಿಲ್ಲ. ಇವುಗಳನ್ನು ಅಂಗೀಕರಿಸಬೇಕೊ ಬೇಡವೊ ಎಂಬ ನಿರ್ಣಯವನ್ನು ಪ್ರತಿಯೊಬ್ಬ ಸಾಕ್ಷಿ ಮಾಡತಕ್ಕದ್ದು.” ಇಸವಿ 1981ರಿಂದ, ಅನೇಕ ರಕ್ತಾಂಶಗಳು (ನಾಲ್ಕು ಪ್ರಮುಖ ಘಟಕಗಳಲ್ಲಿ ಒಂದರಿಂದ ತೆಗೆಯಲ್ಪಟ್ಟಿರುವ ಪ್ರತ್ಯೇಕ ಚಿಕ್ಕ ಧಾತುಗಳು) ಉಪಯೋಗಕ್ಕಾಗಿ ಬೇರ್ಪಡಿಸಲ್ಪಟ್ಟಿವೆ. ಆದಕಾರಣ, 2000, ಜೂನ್‌ 15ರ ಕಾವಲಿನಬುರುಜು, “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನದಲ್ಲಿ ಸಹಾಯಕರವಾದ ಮಾಹಿತಿಯನ್ನು ಒದಗಿಸಿತು. ಈಗ ಈ ಪತ್ರಿಕೆಯನ್ನು ಓದುತ್ತಿರುವ ಲಕ್ಷಾಂತರ ಮಂದಿ ವಾಚಕರ ಪ್ರಯೋಜನಾರ್ಥವಾಗಿ, ಆ ಉತ್ತರವನ್ನು ಈ ಪತ್ರಿಕೆಯ 29-31ನೆಯ ಪುಟಗಳಲ್ಲಿ ಪುನರ್‌ಮುದ್ರಿಸಲಾಗಿದೆ. ಅದು ವಿವರಣೆ ಮತ್ತು ತಾರ್ಕಿಕ ವಾದಗಳನ್ನು ಕೊಡುತ್ತದಾದರೂ, 1981ರಲ್ಲಿ ಕೊಡಲ್ಪಟ್ಟ ವಿಷಯಗಳೊಂದಿಗೆ ಮೂಲತಃ ಒಮ್ಮತದಲ್ಲಿದೆ ಎಂಬುದನ್ನು ನೀವು ಮನಗಾಣುವಿರಿ.

ನಿಮ್ಮ ಮನಸ್ಸಾಕ್ಷಿಯ ಪಾತ್ರ

13 ಇಂತಹ ಮಾಹಿತಿಯು, ನಿರ್ಣಯಗಳನ್ನು ಮಾಡುವಾಗ ನಮ್ಮ ಮನಸ್ಸಾಕ್ಷಿಯ ಉಪಯೋಗವನ್ನು ಆವಶ್ಯಪಡಿಸುತ್ತದೆ. ಏಕೆ? ದೇವರ ಮಾರ್ಗದರ್ಶನವನ್ನು ಅನುಸರಿಸಲು ಕ್ರೈಸ್ತರು ಒಪ್ಪುತ್ತಾರಾದರೂ, ಕೆಲವು ಸಂದರ್ಭಗಳಲ್ಲಿ ನಾವು ವೈಯಕ್ತಿಕ ನಿರ್ಣಯಗಳನ್ನು ಮಾಡಬೇಕಾಗುತ್ತದೆ ಮತ್ತು ಮನಸ್ಸಾಕ್ಷಿಯು ಅದರಲ್ಲಿ ಸೇರಿರುತ್ತದೆ. ಮನಸ್ಸಾಕ್ಷಿಯೆಂದರೆ, ಸಂಗತಿಗಳ, ಅನೇಕವೇಳೆ ನೈತಿಕ ಪ್ರಶ್ನೆಗಳ ಮೌಲ್ಯಮಾಪನ ಮಾಡಿ ನಿರ್ಣಯಿಸುವ ಅಂತರ್ಗತ ಸಾಮರ್ಥ್ಯವಾಗಿದೆ. (ರೋಮಾಪುರ 2:​14, 15) ಆದರೂ, ಒಬ್ಬನ ಮನಸ್ಸಾಕ್ಷಿಯು ಇನ್ನೊಬ್ಬನ ಮನಸ್ಸಾಕ್ಷಿಗಿಂತ ಭಿನ್ನವಾಗಿರುತ್ತದೆಂದು ನಿಮಗೆ ಗೊತ್ತು. * ಕೆಲವರಲ್ಲಿ ‘ನಿರ್ಬಲವಾದ ಮನಸ್ಸು’ ಅಥವಾ ಮನಸ್ಸಾಕ್ಷಿಗಳು ಇವೆಯೆಂದು ಬೈಬಲು ತಿಳಿಸುತ್ತದೆ, ಮತ್ತು ಇದು, ಇತರರಿಗೆ ಬಲವಾದ ಮನಸ್ಸಾಕ್ಷಿಗಳಿವೆ ಎಂಬುದನ್ನು ಸೂಚಿಸುತ್ತದೆ. (1 ಕೊರಿಂಥ 8:​12) ದೇವರು ಏನು ಹೇಳುತ್ತಾನೊ ಅದನ್ನು ಕಲಿಯುವುದರಲ್ಲಿ, ಆತನ ಯೋಚನೆಗಳಂತೆ ನಡೆಯುವುದರ ಬಗ್ಗೆ ಚಿಂತಿತರಾಗುವುದರಲ್ಲಿ, ಮತ್ತು ಅವುಗಳನ್ನು ತಮ್ಮ ನಿರ್ಣಯಗಳಿಗೆ ಅನ್ವಯಿಸಿಕೊಳ್ಳುವುದರಲ್ಲಿ ಕ್ರೈಸ್ತರು ಬೇರೆ ಬೇರೆ ಮಟ್ಟದಲ್ಲಿ ಪ್ರಗತಿಯನ್ನು ಮಾಡಿರುತ್ತಾರೆ. ನಾವಿದನ್ನು ಯೆಹೂದ್ಯರು ಮತ್ತು ಮಾಂಸಸೇವನೆಯ ಕುರಿತಾದ ವಿಷಯದಿಂದ ದೃಷ್ಟಾಂತಿಸಬಹುದು.

14 ದೇವರಿಗೆ ವಿಧೇಯನಾಗಿರುವವನು ರಕ್ತ ಸ್ರವಿಸದ ಮಾಂಸವನ್ನು ತಿನ್ನುವುದಿಲ್ಲ ಎಂಬ ವಿಷಯದಲ್ಲಿ ಬೈಬಲಿನ ನಿಲುವು ಸ್ಪಷ್ಟ. ಆ ಆಜ್ಞೆ ಎಷ್ಟು ಪ್ರಾಮುಖ್ಯವಾಗಿತ್ತೆಂದರೆ, ಇಸ್ರಾಯೇಲ್ಯ ಸೈನಿಕರು ಒಂದು ತುರ್ತುಸ್ಥಿತಿಯಲ್ಲಿಯೂ ರಕ್ತ ಸ್ರವಿಸದ ಮಾಂಸವನ್ನು ತಿಂದಾಗ ಅವರು ಒಂದು ಗಂಭೀರವಾದ ತಪ್ಪು ಅಥವಾ ಪಾಪವನ್ನು ಮಾಡಿದ್ದಕ್ಕೆ ದೋಷಿಗಳಾದರು. (ಧರ್ಮೋಪದೇಶಕಾಂಡ 12:15, 16; 1 ಸಮುವೇಲ 14:31-35) ಆದರೂ, ಈ ವಿಷಯದಲ್ಲಿ ಅನೇಕ ಪ್ರಶ್ನೆಗಳು ಎದ್ದಿರಬಹುದು. ಇಸ್ರಾಯೇಲ್ಯನೊಬ್ಬನು ಒಂದು ಕುರಿಯನ್ನು ಕೊಯ್ದ ನಂತರ ಎಷ್ಟು ಬೇಗನೆ ಅದರ ರಕ್ತವನ್ನು ಹರಿಸಿಬಿಡಬೇಕಾಗಿತ್ತು? ಆ ರಕ್ತವನ್ನು ಹರಿಸಲು ಅದರ ಕುತ್ತಿಗೆಯನ್ನು ಕೊಯ್ಯಬೇಕಾಗಿತ್ತೊ? ಆ ಕುರಿಯನ್ನು ಅದರ ಹಿಂಗಾಲುಗಳಿಂದ ನೇತುಹಾಕಿ ರಕ್ತವನ್ನು ಹರಿಸಬೇಕಾಗಿತ್ತೊ? ಎಷ್ಟು ಹೊತ್ತು ನೇತುಹಾಕಬೇಕಾಗಿತ್ತು? ಅವನು ಒಂದು ದೊಡ್ಡ ದನವನ್ನು ಕೊಲ್ಲುತ್ತಿದ್ದಲ್ಲಿ ಏನು ಮಾಡಬೇಕಿತ್ತು? ರಕ್ತ ಹರಿಸಿದ ಬಳಿಕವೂ ಸ್ವಲ್ಪ ರಕ್ತವು ಮಾಂಸದಲ್ಲಿಯೇ ಇರಬಹುದಲ್ಲವೆ? ಅಂತಹ ಮಾಂಸವನ್ನು ಅವನು ತಿನ್ನಬಹುದಾಗಿತ್ತೊ? ಇದನ್ನು ಯಾರು ನಿರ್ಣಯಿಸುವುದು?

15 ಇಂತಹ ಪ್ರಶ್ನೆಗಳನ್ನು ಹುರುಪುಳ್ಳ ಯೆಹೂದ್ಯನೊಬ್ಬನು ಎದುರಿಸುವುದನ್ನು ತುಸು ಊಹಿಸಿಕೊಳ್ಳಿರಿ. ಒಬ್ಬ ಯೆಹೂದ್ಯನು ಮಾಂಸದ ಮಾರುಕಟ್ಟೆಯಲ್ಲಿ ಮಾರಲಾಗುವ ಮಾಂಸವನ್ನು ತಿನ್ನುವುದೇ ಅತೀ ಸುರಕ್ಷಿತವೆಂದು ನೆನಸಿರಬಹುದು, ಆದರೆ ಇನ್ನೊಬ್ಬನು ಅಂಥ ಮಾಂಸವನ್ನು ಒಮ್ಮೆ ವಿಗ್ರಹಕ್ಕೆ ಅರ್ಪಿಸಲಾಗಿರುವ ಸಾಧ್ಯತೆಯಿರುವಲ್ಲಿ ಅದನ್ನು ತಿನ್ನದೇ ಇದ್ದಿರಬಹುದು. ಇತರ ಯೆಹೂದ್ಯರು, ರಕ್ತವನ್ನು ತೆಗೆಯುವ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಿದ ಬಳಿಕವೇ ಮಾಂಸವನ್ನು ತಿನ್ನುತ್ತಿದ್ದಿರಬಹುದು. * (ಮತ್ತಾಯ 23:​23, 24) ಈ ರೀತಿಯ ವಿವಿಧ ಪ್ರತಿಕ್ರಿಯೆಗಳ ಕುರಿತು ನೀವೇನು ನೆನಸುತ್ತೀರಿ? ಅಲ್ಲದೆ, ದೇವರು ಇಂತಹ ಪ್ರತಿವರ್ತನೆಗಳನ್ನು ಅಪೇಕ್ಷಿಸದ ಕಾರಣ, ಯೆಹೂದ್ಯರು ಇವುಗಳಲ್ಲಿ ಪ್ರತಿಯೊಂದಕ್ಕೆ ಉತ್ತರಗಳನ್ನು ಪಡೆಯುವ ಸಲುವಾಗಿ ಪ್ರಶ್ನೆಗಳ ರಾಶಿಯನ್ನೇ ರಬ್ಬಿಗಳ ಸಮಿತಿಗೆ ಕಳುಹಿಸುವುದು ಉತ್ತಮವಾಗಿದ್ದೀತೊ? ಈ ಪದ್ಧತಿಯು ಮುಂದಕ್ಕೆ ಯೆಹೂದಿ ಮತದಲ್ಲಿ ಬೆಳೆಯಿತಾದರೂ, ಸತ್ಯಾರಾಧಕರು ರಕ್ತದ ಕುರಿತಾದ ನಿರ್ಣಯಗಳನ್ನು ಆ ವಿಧದಲ್ಲಿ ಪಡೆಯುವಂತೆ ಯೆಹೋವನು ನಿರ್ದೇಶಿಸಲಿಲ್ಲವೆಂಬುದಕ್ಕೆ ನಾವು ಸಂತೋಷಪಡಬಹುದು. ದೇವರು, ಶುದ್ಧ ಪ್ರಾಣಿಗಳನ್ನು ಕೊಲ್ಲುವ ಮತ್ತು ಅವುಗಳ ರಕ್ತವನ್ನು ಹರಿಸಿಬಿಡುವುದರ ಬಗ್ಗೆ ಮೂಲ ಮಾರ್ಗದರ್ಶನವನ್ನು ಕೊಟ್ಟನೇ ಹೊರತು, ಬೇರೆ ವಿವರಗಳನ್ನು ಕೊಡಲಿಲ್ಲ.​—⁠ಯೋಹಾನ 8:32.

16 ಪ್ಯಾರಗ್ರಾಫ್‌ 11 ಮತ್ತು 12ರಲ್ಲಿ ತಿಳಿಸಲ್ಪಟ್ಟಿರುವಂತೆ, ಯೆಹೋವನ ಸಾಕ್ಷಿಗಳು ಸಂಯೋಜಿತ ರಕ್ತ ಇಲ್ಲವೆ ಅದರ ನಾಲ್ಕು ಪ್ರಮುಖ ಘಟಕಗಳಾದ ಪ್ಲಾಸ್ಮಾ, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು ಮತ್ತು ಪ್ಲೇಟ್‌ಲೆಟ್‌ (ಕಿರುಫಲಕ)ಗಳ ಪೂರಣಗಳನ್ನು ಅಂಗೀಕರಿಸುವುದಿಲ್ಲ. ಆದರೆ ಒಂದು ಪ್ರಮುಖ ಘಟಕದಿಂದ ತೆಗೆಯಲ್ಪಟ್ಟ ಚಿಕ್ಕ ಅಂಶಗಳು, ಉದಾಹರಣೆಗೆ ರೋಗದ ವಿರುದ್ಧ ಹೋರಾಡಲು ಅಥವಾ ಹಾವಿನ ವಿಷದ ವಿರುದ್ಧ ಕಾರ್ಯನಡೆಸಲು ಪ್ರತಿಕಾಯ (ಆ್ಯಂಟಿಬಾಡಿ)ಗಳಿರುವ ಸೀರಮ್‌ (ರಕ್ತಸಾರ)ಗಳನ್ನು ತೆಗೆದುಕೊಳ್ಳುವುದರ ಕುರಿತೇನು? (ಪುಟ 30, ಪ್ಯಾರಗ್ರಾಫ್‌ 4ನ್ನು ನೋಡಿ.) ಕೆಲವರು, ಅಂತಹ ಸೂಕ್ಷ್ಮ ಅಂಶಗಳು ವಾಸ್ತವವಾಗಿ ರಕ್ತವಾಗಿರುವುದಿಲ್ಲ, ಮತ್ತು ಆ ಕಾರಣದಿಂದ ಅದು ‘ರಕ್ತವನ್ನು ವಿಸರ್ಜಿಸುವ’ ಆಜ್ಞೆಯೊಳಗೆ ಬರುವುದಿಲ್ಲವೆಂದು ತೀರ್ಮಾನಿಸಿದ್ದಾರೆ. (ಅ. ಕೃತ್ಯಗಳು 15:29; 21:25; ಪುಟ 31, ಪ್ಯಾರಗ್ರಾಫ್‌ 1) ಅದು ಅವರ ಜವಾಬ್ದಾರಿ. ಆದರೆ ಇತರರ ಮನಸ್ಸಾಕ್ಷಿಗಳು, ಅವರು ರಕ್ತದಿಂದ (ಪ್ರಾಣಿಯದ್ದಾಗಿರಲಿ ಅಥವಾ ಮನುಷ್ಯನದ್ದಾಗಿರಲಿ) ತೆಗೆಯಲ್ಪಟ್ಟ ಸಕಲವನ್ನೂ, ಅಂದರೆ ಒಂದೇ ಒಂದು ಘಟಕದ ಸೂಕ್ಷ್ಮಾಂಶವನ್ನು ಸಹ ತಿರಸ್ಕರಿಸುವಂತೆ ಮಾಡುತ್ತವೆ. * ಇನ್ನಿತರರು ರೋಗದೊಂದಿಗೆ ಹೋರಾಡಲು ಇಲ್ಲವೆ ಹಾವಿನ ವಿಷವನ್ನು ಪ್ರತಿರೋಧಿಸಲು ಪ್ಲಾಸ್ಮಾ ಪ್ರೋಟೀನ್‌ನ ಇಂಜೆಕ್ಷನನ್ನು ಸ್ವೀಕರಿಸಬಹುದಾದರೂ ಬೇರೆಲ್ಲ ಚಿಕ್ಕ ಅಂಶಗಳನ್ನು ಬೇಡವೆನ್ನಬಹುದು. ಅಲ್ಲದೆ, ಈ ನಾಲ್ಕು ಪ್ರಮುಖ ಘಟಕಗಳಿಂದ ತೆಗೆಯಲಾಗಿರುವ ಕೆಲವು ಉತ್ಪನ್ನಗಳು, ಪೂರ್ಣವಾದ ಘಟಕವು ಮಾಡುವ ಕೆಲಸಕ್ಕೆ ಎಷ್ಟೊಂದು ಹೋಲಿಕೆಯುಳ್ಳವುಗಳೂ ಶರೀರದಲ್ಲಿ ಜೀವಪೋಷಕ ಕೆಲಸವನ್ನು ನಡೆಸುವಂಥವುಗಳೂ ಆಗಿರಬಹುದೆಂದರೆ, ಹೆಚ್ಚಿನ ಕ್ರೈಸ್ತರು ಅದನ್ನು ಆಕ್ಷೇಪಣೀಯವಾಗಿ ಕಾಣಬಹುದು.

17 ಬೈಬಲು ಮನಸ್ಸಾಕ್ಷಿಯ ಕುರಿತು ಏನನ್ನುತ್ತದೊ ಅದು, ನಾವು ಇಂತಹ ನಿರ್ಣಯಗಳನ್ನು ಮಾಡುವಾಗ ಸಹಾಯಕಾರಿಯಾಗಿದೆ. ದೇವರ ವಾಕ್ಯವು ಏನನ್ನುತ್ತದೆಂದು ಕಲಿಯುವುದು ಮತ್ತು ಅದಕ್ಕನುಸಾರ ನಿಮ್ಮ ಮನಸ್ಸಾಕ್ಷಿಯನ್ನು ರೂಪಿಸುವುದು ಪ್ರಥಮ ಹೆಜ್ಜೆಯಾಗಿದೆ. ಹೀಗೆ ಮಾಡುವಲ್ಲಿ, ಇನ್ನೊಬ್ಬರು ನಿಮಗಾಗಿ ನಿರ್ಣಯಿಸುವಂತೆ ಕೇಳುವ ಬದಲು ನೀವೇ ದೇವರ ಮಾರ್ಗದರ್ಶನಕ್ಕನುಸಾರ ನಿರ್ಣಯಿಸಲು ಸನ್ನದ್ಧರಾಗುವಿರಿ. (ಕೀರ್ತನೆ 25:​4, 5) ರಕ್ತದ ಅಂಶಗಳನ್ನು ತೆಗೆದುಕೊಳ್ಳುವುದರ ಕುರಿತು ಕೆಲವರು, ‘ಇದು ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಅದು ಅಷ್ಟೇನೂ ಮಹತ್ವದ್ದಲ್ಲ’ ಎಂದು ನೆನಸಿದ್ದಾರೆ. ಆದರೆ ಈ ರೀತಿಯ ತರ್ಕ ನ್ಯಾಯಸಮ್ಮತವಲ್ಲ. ಒಂದು ವಿಷಯವು ಮನಸ್ಸಾಕ್ಷಿಯ ಮೇಲೆ ಹೊಂದಿಕೊಂಡಿರುವ ವಿಷಯವಾಗಿರುವುದರಿಂದ ಅದು ಅಮುಖ್ಯವಾದದ್ದಾಗುವುದಿಲ್ಲ. ಅದು ಅತೀ ಗಂಭೀರವಾದ ವಿಷಯವಾಗಿರಬಲ್ಲದು. ಇದಕ್ಕೆ ಒಂದು ಕಾರಣವು, ಅದು ನಮ್ಮದಕ್ಕಿಂತ ಭಿನ್ನವಾದ ಮನಸ್ಸಾಕ್ಷಿಗಳುಳ್ಳ ವ್ಯಕ್ತಿಗಳನ್ನು ಬಾಧಿಸಬಲ್ಲದು. ಇದನ್ನು ನಾವು, ವಿಗ್ರಹಕ್ಕೆ ಒಂದುವೇಳೆ ಅರ್ಪಿಸಲ್ಪಟ್ಟಿದ್ದು, ಬಳಿಕ ಮಾರುಕಟ್ಟೆಯಲ್ಲಿ ಮಾರಲಾದ ಮಾಂಸದ ಕುರಿತು ಪೌಲನು ಕೊಟ್ಟ ಬುದ್ಧಿವಾದದಿಂದ ಗ್ರಹಿಸುತ್ತೇವೆ. ‘ನಿರ್ಬಲವಾದ ಮನಸ್ಸಾಕ್ಷಿಗಳನ್ನು ನೋಯಿಸ’ದಿರುವ ವಿಷಯದಲ್ಲಿ ಕ್ರೈಸ್ತನೊಬ್ಬನು ಚಿಂತಿತನಾಗಿರಬೇಕು. ಅವನು ಇತರರನ್ನು ಎಡವಿಹಾಕುವಲ್ಲಿ, ಯಾರಿಗಾಗಿ ‘ಕ್ರಿಸ್ತನು ಪ್ರಾಣಕೊಟ್ಟನೊ ಆ ಸಹೋದರನನ್ನು ಅವನು ನಾಶ’ಗೊಳಿಸುವ ಸಾಧ್ಯತೆಯಿದೆ. ಆದಕಾರಣ, ಇಂತಹ ರಕ್ತದ ಚಿಕ್ಕ ಅಂಶಗಳನ್ನು ತೆಗೆದುಕೊಳ್ಳುವುದು ವೈಯಕ್ತಿಕ ನಿರ್ಣಯವಾಗಿದ್ದರೂ, ಈ ನಿರ್ಣಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.​—⁠1 ಕೊರಿಂಥ 8:8, 11-13; 10:25-31.

18 ಇನ್ನೊಂದು ಸಂಬಂಧಿತ ಸಂಗತಿಯು ರಕ್ತದ ಕುರಿತಾದ ನಿರ್ಣಯಗಳ ಗಂಭೀರತೆಯನ್ನು ಒತ್ತಿಹೇಳುತ್ತದೆ. ಇದು, ಅಂಥ ನಿರ್ಣಯಗಳು ನಿಮ್ಮ ಮೇಲೆ ಬೀರುವ ಪರಿಣಾಮವಾಗಿದೆ. ರಕ್ತದ ಒಂದು ಚಿಕ್ಕ ಅಂಶವನ್ನು ತೆಗೆದುಕೊಳ್ಳುವುದು ನಿಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯನ್ನು ಕಾಡಿಸುವುದಾದರೆ, ನೀವು ಅದನ್ನು ಅಲಕ್ಷಿಸಬಾರದು. ಮತ್ತು ಯಾರಾದರೂ, “ಇದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ, ಅನೇಕರು ತೆಗೆದುಕೊಂಡಿದ್ದಾರೆ” ಎಂದು ಹೇಳಿದ ಮಾತ್ರಕ್ಕೆ, ನೀವು ನಿಮ್ಮ ಮನಸ್ಸಾಕ್ಷಿಯ ಮಾತನ್ನು ಅಸಡ್ಡೆಮಾಡಬಾರದು. ಇದನ್ನು ನೆನಪಿನಲ್ಲಿಡಿರಿ, ಇಂದು ಕೋಟ್ಯಂತರ ಮಂದಿ ತಮ್ಮ ಮನಸ್ಸಾಕ್ಷಿಯನ್ನು ಅಲಕ್ಷಿಸುವುದರಿಂದ ಅದು ಜಡವಾಗಿ, ಅವರು ಕಿಂಚಿತ್ತೂ ಅಳುಕಿಲ್ಲದೆ ಸುಳ್ಳಾಡುವಂತೆ ಅಥವಾ ಇತರ ತಪ್ಪುಗಳನ್ನು ಮಾಡುವಂತೆಯೂ ಬಿಡುತ್ತದೆ. ಕ್ರೈಸ್ತರು ಅಂಥ ಮಾರ್ಗಕ್ರಮದಿಂದ ದೂರವಿರಲು ನಿಶ್ಚಯವಾಗಿಯೂ ಬಯಸುತ್ತಾರೆ.​—⁠2 ಸಮುವೇಲ 24:10; 1 ತಿಮೊಥೆಯ 4:1, 2.

19 ಪುಟ 29-31ರಲ್ಲಿ ಆ ಪುನರ್‌ಮುದ್ರಿತ ಉತ್ತರವು ಕೊನೆಯಲ್ಲಿ ಹೇಳುವುದು: “ವೈಯಕ್ತಿಕ ಅಭಿಪ್ರಾಯಗಳು ಮತ್ತು ಮನಸ್ಸಾಕ್ಷಿಗನುಸಾರ ಮಾಡಲಾಗುವ ನಿರ್ಣಯಗಳಲ್ಲಿ ವ್ಯತ್ಯಾಸಗಳಿರುವುದರಿಂದ, ಈ ವಿವಾದಾಂಶವು ಅಷ್ಟೇನೂ ಪ್ರಾಮುಖ್ಯವಲ್ಲವೆಂದು ಇದರರ್ಥವೊ? ಇಲ್ಲ. ಇದು ಒಂದು ಗಂಭೀರ ವಿಷಯವಾಗಿದೆ.” ಇದು ವಿಶೇಷವಾಗಿ ಗಂಭೀರವಾಗಿದೆ, ಏಕೆಂದರೆ “ಜೀವಸ್ವರೂಪನಾದ ದೇವರ” ಸಂಗಡ ನಿಮಗಿರುವ ಸಂಬಂಧವು ಇದರಲ್ಲಿ ಒಳಗೂಡಿದೆ. ಆ ಸಂಬಂಧವೊಂದೇ ನಿತ್ಯಜೀವಕ್ಕೆ ನಡೆಸಬಲ್ಲದು ಮತ್ತು ಅದು ಯೇಸುವಿನ ಸುರಿಸಲ್ಪಟ್ಟ ರಕ್ತದ ರಕ್ಷಕ ಶಕ್ತಿಯ ಮೇಲೆ ಆಧಾರಿತವಾಗಿದೆ. ದೇವರು ರಕ್ತದ ಮೂಲಕ ಏನು ಮಾಡುತ್ತಿದ್ದಾನೊ ಅದರ​—⁠ಜೀವಗಳನ್ನು ರಕ್ಷಿಸುತ್ತಿರುವ​—⁠ಕಾರಣ ರಕ್ತಕ್ಕಾಗಿ ಆಳವಾದ ಗೌರವವನ್ನು ಬೆಳೆಸಿಕೊಳ್ಳಿರಿ. ಪೌಲನು ಯೋಗ್ಯವಾಗಿಯೇ ಬರೆದುದು: “ನೀವು ಪೂರ್ವಕಾಲದಲ್ಲಿ . . . ಈ ಲೋಕದಲ್ಲಿ ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ. ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ.”​—⁠ಎಫೆಸ 2:12, 13, ಓರೆ ಅಕ್ಷರಗಳು ನಮ್ಮವು.

[ಪಾದಟಿಪ್ಪಣಿಗಳು]

^ ಪ್ಯಾರ. 14 ಯೆಹೋವನ ಸಾಕ್ಷಿಗಳ ಪ್ರಕಾಶನ.

^ ಪ್ಯಾರ. 17 ಒಮ್ಮೆ ಪೌಲನು ಮತ್ತು ಇತರ ನಾಲ್ಕು ಮಂದಿ ಕ್ರೈಸ್ತರು ತಮ್ಮನ್ನು ಶುದ್ಧೀಕರಿಸಿಕೊಳ್ಳಲು ದೇವಾಲಯಕ್ಕೆ ಹೋದರು. ಧರ್ಮಶಾಸ್ತ್ರವು ಆಗ ಜಾರಿಯಲ್ಲಿರಲಿಲ್ಲ. ಆದರೂ ಪೌಲನು ಯೆರೂಸಲೇಮಿನ ಹಿರೀ ಪುರುಷರ ಸಲಹೆಯಂತೆ ಕ್ರಿಯೆಗೈದನು. (ಅ. ಕೃತ್ಯಗಳು 21:​23-25) ಆದರೂ ಕೆಲವು ಮಂದಿ ಕ್ರೈಸ್ತರು, ತಾವು ಹಾಗೆ ದೇವಾಲಯಕ್ಕೆ ಹೋಗಲು ಅಥವಾ ಅಂಥ ಕಾರ್ಯವಿಧಾನಕ್ಕೆ ಒಳಗಾಗಲು ಮನಸ್ಸುಮಾಡುತ್ತಿರಲಿಲ್ಲ ಎಂದು ಭಾವಿಸಿದ್ದಿರಬಹುದು. ಹೀಗೆ, ಆ ಸಮಯದಲ್ಲಿ ಮನಸ್ಸಾಕ್ಷಿಗಳಲ್ಲಿ ಭಿನ್ನತೆ ಇತ್ತು, ಮತ್ತು ಈಗಲೂ ಇದೆ.

^ ಪ್ಯಾರ. 19 ಎನ್‌ಸೈಕ್ಲಪೀಡಿಯ ಜೂಡೈಕ, ಮಾಂಸವನ್ನು “ಕೋಷರ್‌ ಮಾಡಿಸು”ವುದರ ಕುರಿತು “ಜಟಿಲ ಹಾಗೂ ಕೂಲಂಕಷ” ನಿಯಮಗಳನ್ನು ಕೊಡುತ್ತದೆ. ಮಾಂಸವನ್ನು ನೀರಿನಲ್ಲಿ ಎಷ್ಟು ನಿಮಿಷಗಳ ವರೆಗೆ ಇಡಬೇಕು, ಅದನ್ನು ಫಲಕದ ಮೇಲಿಟ್ಟು ನೀರನ್ನು ಹೇಗೆ ಹರಿಸಿಬಿಡಬೇಕು, ಅದಕ್ಕೆ ಉಜ್ಜಬೇಕಾದ ಉಪ್ಪು ಎಷ್ಟು ನಯವಾಗಿರಬೇಕು, ಮತ್ತು ನಂತರ ತಣ್ಣೀರಿನಲ್ಲಿ ಅದನ್ನು ಎಷ್ಟು ಬಾರಿ ತೊಳೆಯಬೇಕು, ಮುಂತಾದ ವಿಷಯಗಳನ್ನು ಹೇಳುತ್ತದೆ.

^ ಪ್ಯಾರ. 20 ಕೆಲವು ಇಂಜೆಕ್ಷನ್‌ಗಳ ಮುಖ್ಯ ಅಥವಾ ಸಕ್ರಿಯ ಅಂಶವು ಈಗ ಹೆಚ್ಚೆಚ್ಚಾಗಿ ಕೃತಕವಾಗಿ ತಯಾರಿಸಲಾಗಿರುವ ಉತ್ಪನ್ನವಾಗಿರುತ್ತದೆ, ರಕ್ತದ್ದಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ, ಆಲ್ಬುಮಿನ್‌ನಂತಹ ರಕ್ತಾಂಶದ ಚಿಕ್ಕ ಮೊತ್ತ ಅದರಲ್ಲಿರಬಹುದು.​—⁠ಅಕ್ಟೋಬರ್‌ 1, 1994ರ ಕಾವಲಿನಬುರುಜುವಿನಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿ.

ಜ್ಞಾಪಿಸಿಕೊಳ್ಳಬಲ್ಲಿರಾ?

• ದೇವರು ರಕ್ತದ ಕುರಿತು ನೋಹನಿಗೆ, ಇಸ್ರಾಯೇಲ್ಯರಿಗೆ, ಮತ್ತು ಕ್ರೈಸ್ತರಿಗೆ ಯಾವ ಮಾರ್ಗದರ್ಶನವನ್ನು ಕೊಟ್ಟನು?

• ರಕ್ತದ ಸಂಬಂಧದಲ್ಲಿ, ಯೆಹೋವನ ಸಾಕ್ಷಿಗಳು ಯಾವುದನ್ನು ಕಡಾಖಂಡಿತವಾಗಿ ನಿರಾಕರಿಸುತ್ತಾರೆ?

• ರಕ್ತದ ಒಂದು ಪ್ರಮುಖ ಘಟಕದಿಂದ ಚಿಕ್ಕ ಅಂಶಗಳನ್ನು ಸ್ವೀಕರಿಸುವುದು ಯಾವ ಅರ್ಥದಲ್ಲಿ ಒಬ್ಬನ ಮನಸ್ಸಾಕ್ಷಿಯ ಮೇಲೆ ಹೊಂದಿಕೊಂಡಿದೆ, ಆದರೆ ಅದರ ಅರ್ಥವು ಏನಾಗಿರುವುದಿಲ್ಲ?

• ನಿರ್ಣಯಗಳನ್ನು ಮಾಡುವಾಗ, ದೇವರೊಂದಿಗಿನ ನಮ್ಮ ಸಂಬಂಧವನ್ನು ನಾವೇಕೆ ನಮ್ಮ ಮನಸ್ಸಿನಲ್ಲಿ ಅತಿ ಪ್ರಧಾನವಾದುದಾಗಿ ಇಡಬೇಕು?

[ಅಧ್ಯಯನ ಪ್ರಶ್ನೆಗಳು]

1, 2. ಯೆಹೋವನು “ಜೀವಸ್ವರೂಪನಾದ ದೇವರು” ಎಂದು ಒಪ್ಪಿಕೊಳ್ಳುವುದು ಏಕೆ ತಕ್ಕದ್ದಾಗಿದೆ?

3. ದೇವರು ಕೊಡುವ ಮಾರ್ಗದರ್ಶನದಲ್ಲಿ ನಾವೇಕೆ ಭರವಸೆಯಿಡಬಲ್ಲೆವು?

4, 5. (ಎ) ಕ್ರಿಸ್ತ ಶಕಕ್ಕೆ ಮುಂಚೆ ಯೆಹೋವನು ರಕ್ತದ ಕುರಿತು ಯಾವ ಮಾರ್ಗದರ್ಶನವನ್ನು ಕೊಟ್ಟನು? (ಬಿ) ರಕ್ತದ ಕುರಿತಾದ ದೇವರ ಮಾರ್ಗದರ್ಶನವು ಕ್ರೈಸ್ತರಿಗೂ ಅನ್ವಯಿಸುತ್ತದೆಂದು ನಮಗೆ ಹೇಗೆ ಗೊತ್ತು?

6. ಕ್ರೈಸ್ತರಿಗೆ ರಕ್ತದ ಬಗ್ಗೆ ಯಾವ ನಿರ್ದೇಶನಗಳು ಕೊಡಲ್ಪಟ್ಟವು, ಮತ್ತು ಏಕೆ?

7. ‘ರಕ್ತವನ್ನು ವಿಸರ್ಜಿಸುವುದು’ ಕ್ರೈಸ್ತರಿಗೆ ಎಷ್ಟು ಪ್ರಾಮುಖ್ಯವಾಗಿದೆ?

8. ಆದಿ ಕ್ರೈಸ್ತರು ರಕ್ತದ ಬಗ್ಗೆ ದೇವರ ಮಾರ್ಗದರ್ಶನವನ್ನು ಗಂಭೀರವಾಗಿ ತೆಗೆದುಕೊಂಡರೆಂದು ಯಾವುದು ಸೂಚಿಸುತ್ತದೆ?

9. ರಕ್ತವನ್ನು ವಿಸರ್ಜಿಸುವುದರಲ್ಲಿ ನೇರವಾದ ರಕ್ತಸೇವನೆ ಮಾಡದಿರುವುದಲ್ಲದೆ ಇನ್ನಾವುದೂ ಸೇರಿತ್ತು?

10. ರಕ್ತವು ವೈದ್ಯಕೀಯವಾಗಿ ಉಪಯೋಗಿಸಲ್ಪಡುತ್ತಿರುವ ಕೆಲವು ವಿಧಗಳಾವುವು, ಮತ್ತು ಇದು ಯಾವ ಪ್ರಶ್ನೆಯನ್ನು ಎಬ್ಬಿಸುತ್ತದೆ?

11. ಸಾಕ್ಷಿಗಳು ದೀರ್ಘಕಾಲದಿಂದ ವೈದ್ಯಕೀಯವಾಗಿ ಸರಿಯಾಗಿರುವ ಯಾವ ಸ್ಥಾನವನ್ನು ತೆಗೆದುಕೊಂಡಿದ್ದಾರೆ?

12. (ಎ) ರಕ್ತದ ಪ್ರಮುಖ ಘಟಕಗಳಿಂದ ತೆಗೆದಿರುವ ಅಂಶಗಳ ಕುರಿತು ಯಾವ ನಿಲುವನ್ನು ಪ್ರಸ್ತುತಪಡಿಸಲಾಗಿದೆ? (ಬಿ) ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಎಲ್ಲಿ ಕಂಡುಕೊಳ್ಳಬಹುದು?

13, 14. (ಎ) ಮನಸ್ಸಾಕ್ಷಿಯೆಂದರೇನು, ಮತ್ತು ಅದು ರಕ್ತದ ವಿಷಯದಲ್ಲಿ ಯಾವ ಪಾತ್ರ ವಹಿಸುತ್ತದೆ? (ಬಿ) ಮಾಂಸವನ್ನು ತಿನ್ನುವುದರ ಕುರಿತು ದೇವರು ಇಸ್ರಾಯೇಲ್ಯರಿಗೆ ಯಾವ ಮಾರ್ಗದರ್ಶನವನ್ನು ಕೊಟ್ಟನು, ಆದರೆ ಯಾವ ಪ್ರಶ್ನೆಗಳು ಆಗ ಎದ್ದಿರಬಹುದು?

15. ಕೆಲವು ಯೆಹೂದ್ಯರು ಮಾಂಸಸೇವನೆಯ ಕುರಿತು ಹೇಗೆ ಪ್ರತಿಕ್ರಿಯಿಸಿದರು, ಆದರೆ ದೇವರು ಏನೆಂದು ನಿರ್ದೇಶಿಸಿದನು?

16. ರಕ್ತದ ಒಂದು ಘಟಕದಿಂದ ತೆಗೆಯಲಾಗಿರುವ ಒಂದು ಚಿಕ್ಕ ಅಂಶವಿರುವ ಇಂಜೆಕ್ಷನನ್ನು ತೆಗೆದುಕೊಳ್ಳುವುದರ ಬಗ್ಗೆ ಕ್ರೈಸ್ತರಲ್ಲಿ ವಿಭಿನ್ನಾಭಿಪ್ರಾಯಗಳು ಏಕಿರಬಹುದು?

17. (ಎ) ರಕ್ತದ ಅಂಶಗಳನ್ನು ತೆಗೆದುಕೊಳ್ಳುವುದರ ಕುರಿತಾದ ಪ್ರಶ್ನೆಗಳು ನಮಗೆ ಎದುರಾಗುವಾಗ ನಮ್ಮ ಮನಸ್ಸಾಕ್ಷಿಯು ಹೇಗೆ ಸಹಾಯಕರವಾಗಿರಬಲ್ಲದು? (ಬಿ) ಈ ವಿಷಯದಲ್ಲಿ ನಿರ್ಣಯಗಳನ್ನು ಮಾಡುವುದು ತುಂಬ ಗಂಭೀರವಾಗಿರುವುದೇಕೆ?

18. ರಕ್ತದ ವಿಷಯದಲ್ಲಿ ನಿರ್ಣಯಗಳನ್ನು ಮಾಡುವಾಗ ಕ್ರೈಸ್ತನೊಬ್ಬನು ತನ್ನ ಮನಸ್ಸಾಕ್ಷಿಯನ್ನು ಜಡಗೊಳಿಸುವುದರಿಂದ ಹೇಗೆ ದೂರವಿರಬಲ್ಲನು?

19. ರಕ್ತವು ಸೇರಿರುವ ವೈದ್ಯಕೀಯ ವಿವಾದಾಂಶಗಳ ಬಗ್ಗೆ ನಿರ್ಣಯಗಳನ್ನು ಮಾಡುವಾಗ ನಾವು ಅತಿ ಪ್ರಾಮುಖ್ಯವಾಗಿ ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

[ಪುಟ 22ರಲ್ಲಿರುವ ಚಾರ್ಟು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ರಕ್ತದ ವಿಷಯದಲ್ಲಿ ನಮ್ಮ ಮೂಲಭೂತ ನಿಲುವು

ಪೂರ್ಣ ರಕ್ತ

ಅನಂಗೀಕೃತ ಕೆಂಪು ರಕ್ತಕಣಗಳು ಬಿಳಿ ರಕ್ತಕಣಗಳು ಪ್ಲೇಟ್‌ಲೆಟ್‌ಗಳು ಪ್ಲಾಸ್ಮಾ

ಕ್ರೈಸ್ತನ ನಿರ್ಣಯ ಕೆಂಪು ರಕ್ತಕಣಗಳ ಅಂಶಗಳು ಬಿಳಿ ರಕ್ತಕಣಗಳ ಅಂಶಗಳು ಪ್ಲೇಟ್‌ಲೆಟ್‌ಗಳ

ಅಂಶಗಳು ಪ್ಲಾಸ್ಮಾದ ಅಂಶಗಳು

from from from from

red cells white cells platelets plasma

[ಪುಟ 20ರಲ್ಲಿರುವ ಚಿತ್ರ]

ಕ್ರೈಸ್ತರು ‘ರಕ್ತವನ್ನು ವಿಸರ್ಜಿಸಬೇಕು’ ಎಂದು ಆಡಳಿತ ಮಂಡಲಿಯು ತೀರ್ಮಾನಿಸಿತು

[ಪುಟ 23ರಲ್ಲಿರುವ ಚಿತ್ರ]

ರಕ್ತಾಂಶದ ಸಂಬಂಧದಲ್ಲಿ ನಿರ್ಣಯವನ್ನು ಎದುರಿಸುವಾಗ ನಿಮ್ಮ ಮನಸ್ಸಾಕ್ಷಿಯನ್ನು ಅಲಕ್ಷಿಸಬೇಡಿ