ಕಪ್ಪದೋಕ್ಯ ಗಾಳಿ ಮತ್ತು ನೀರಿನಿಂದ ಕೆತ್ತಲ್ಪಟ್ಟ ಬೀಡುಗಳಲ್ಲಿ ಜನರು ವಾಸಿಸುತ್ತಿದ್ದ ಸ್ಥಳ
ಕಪ್ಪದೋಕ್ಯ ಗಾಳಿ ಮತ್ತು ನೀರಿನಿಂದ ಕೆತ್ತಲ್ಪಟ್ಟ ಬೀಡುಗಳಲ್ಲಿ ಜನರು ವಾಸಿಸುತ್ತಿದ್ದ ಸ್ಥಳ
ಕಪ್ಪದೋಕ್ಯದ ಬಗ್ಗೆ ಮಾತಾಡಿದವನು ಅಪೊಸ್ತಲ ಪೇತ್ರನು. ಅವನು ತನ್ನ ಪ್ರಥಮ ಪ್ರೇರಿತ ಪತ್ರವನ್ನು, ಬೇರೆಯವರೊಂದಿಗೆ ‘ಕಪ್ಪದೋಕ್ಯ ಸೀಮೆಯಲ್ಲಿ ಚದರಿದ್ದ ಪ್ರವಾಸಿಗಳಾದ ದೇವಜನರಿಗೆ’ ಸಂಬೋಧಿಸಿದನು. (1 ಪೇತ್ರ 1:1) ಕಪ್ಪದೋಕ್ಯವು ಯಾವ ರೀತಿಯ ನಾಡಾಗಿತ್ತು? ಅದರ ನಿವಾಸಿಗಳು, ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಬೀಡುಗಳಲ್ಲಿ ವಾಸಿಸುತ್ತಿದ್ದದ್ದೇಕೆ? ಅವರಿಗೆ ಕ್ರೈಸ್ತತ್ವದೊಂದಿಗೆ ಸಂಪರ್ಕವಾದದ್ದು ಹೇಗೆ?
“ನಾವು ಅಲ್ಲಿ ತಲಪಿದಾಗ, ಎಲ್ಲೊ ತಪ್ಪಿಹೋಗಿ ಕಲ್ಲುಬಂಡೆಗಳ ಶಂಕುಗಳು ಹಾಗೂ ಕಂಬಗಳ ಒಂದು ಕಾಡಿನಲ್ಲಿದ್ದೇವೊ ಎಂಬಂತೆ ಭಾಸವಾಯಿತು” ಎಂದು 1840ರ ದಶಕದಲ್ಲಿ ಕಪ್ಪದೋಕ್ಯಕ್ಕೆ ಭೇಟಿನೀಡಿದ ಬ್ರಿಟಿಷ್ ಪ್ರವಾಸಿಗ ವಿಲ್ಯಮ್ ಎಫ್. ಏನ್ಸ್‌ವರ್ತ್ ಹೇಳಿದನು. ಈ ವಿಚಿತ್ರವಾದ ಭೂದೃಶ್ಯವು ಈಗಲೂ, ಟರ್ಕಿ ದೇಶದಲ್ಲಿರುವ ಈ ಪ್ರದೇಶಕ್ಕೆ ಹೋಗುವ ಸಂದರ್ಶಕರನ್ನು ಚಕಿತಗೊಳಿಸುತ್ತದೆ. ಕಲ್ಲಿನ ವಿಚಿತ್ರವಾದ ‘ಪ್ರತಿಮೆಗಳು’ ಕಪ್ಪದೋಕ್ಯದ ಕಣಿವೆಗಳ ನಡುವೆ ಮೂಕ ಸಿಪಾಯಿಗಳಂತೆ ಗುಂಪುಗುಂಪಾಗಿ ನಿಂತಿವೆ. ಇವುಗಳಲ್ಲಿ ಕೆಲವೊಂದು, ಬಾನಿನತ್ತ 30 ಮೀಟರುಗಳು ಅಥವಾ ಅದಕ್ಕಿಂತಲೂ ಹೆಚ್ಚು ಎತ್ತರಕ್ಕೆ ತಲೆಯೆತ್ತಿ ನಿಂತಿರುವ ರಾಕ್ಷಸ ಕೊಳವಿಗಳಂತೆ ತೋರುತ್ತವೆ. ಇನ್ನೂ ಕೆಲವೊಂದು, ಬೃಹದಾಕಾರದ ಐಸ್‌ಕ್ರೀಮ್ ಕೋನ್‌ಗಳು, ಚೌಕಸೂಜಿಯಂಥ ಕಂಬಗಳು ಇಲ್ಲವೆ ಅಣಬೆಗಳಂತೆ ತೋರುತ್ತವೆ.
ದಿನದಾದ್ಯಂತ ಸೂರ್ಯನು ಈ ಪ್ರತಿಮೆಗಳಿಗೆ ಎಷ್ಟು ಸುಂದರವಾದ ವಿವಿಧ ಬಣ್ಣಗಳನ್ನು ಹಚ್ಚುತ್ತಾನೆ! ಬೆಳಗ್ಗಿನ ಜಾವದಲ್ಲಿ ಅವು ನಸು ಗುಲಾಬಿ ಬಣ್ಣದ್ದಾಗಿರುತ್ತವೆ. ನಡುಹಗಲಿನಲ್ಲಿ ಅವು ಬಿಳಿಚಿರುವ ದಂತಬಣ್ಣದ್ದಾಗಿರುತ್ತವೆ, ಮತ್ತು ಅಸ್ತಮಿಸುವ ಸೂರ್ಯನು ಅವುಗಳನ್ನು ಹಳದಿಗಂದು ಬಣ್ಣಕ್ಕೆ ತಿರುಗಿಸುತ್ತಾನೆ. ಈ ‘ಕಲ್ಲುಬಂಡೆಗಳ ಶಂಕುಗಳು ಹಾಗೂ ಕಂಬಗಳ ಕಾಡು’ ಉಂಟಾದದ್ದು ಹೇಗೆ? ಮತ್ತು ಆ ಪ್ರದೇಶದ ಜನರು ಇವುಗಳನ್ನು ತಮ್ಮ ಬೀಡಾಗಿ ಮಾಡಿದ್ದೇಕೆ?
ಗಾಳಿ ಮತ್ತು ನೀರಿನಿಂದ ಕೆತ್ತಲ್ಪಟ್ಟದ್ದು
ಕಪ್ಪದೋಕ್ಯವು ಆ್ಯನಟೋಲ್ಯ ದ್ವೀಪಕಲ್ಪದ ಮಧ್ಯಭಾಗದಲ್ಲಿದೆ. ಈ ದ್ವೀಪಕಲ್ಪವು, ಏಷ್ಯಾ ಮತ್ತು ಯೂರೋಪನ್ನು ಜೋಡಿಸುವ ಸೇತುವೆಯಂತಿದೆ. ಈ ಪ್ರದೇಶದಲ್ಲಿ ಎರಡು ಜ್ವಾಲಾಮುಖಿಗಳು ಇಲ್ಲದಿರುತ್ತಿದ್ದರೆ ಅದೊಂದು ಸಮತಲ ಪ್ರಸ್ಥಭೂಮಿಯಾಗಿರುತ್ತಿತ್ತು. ಸಹಸ್ರಾರು ವರ್ಷಗಳ ಹಿಂದೆ, ಈ ಜ್ವಾಲಾಮುಖಿಗಳ ಅತಿ ಬಲಾಢ್ಯ ಸ್ಫೋಟಗಳು, ಆ ಇಡೀ ಕ್ಷೇತ್ರವನ್ನು ಎರಡು ವಿಧಗಳ ಬಂಡೆಗಳಿಂದ ಆವರಿಸಿದವು. ಒಂದು, ಗಟ್ಟಿಯಾದ ಅಗ್ನಿಶಿಲೆ ಮತ್ತು ಇನ್ನೊಂದು, ಮೆತ್ತನೆಯ ಸರಂಧ್ರ ಶಿಲೆ (ಟೂಫಾ ಕಲ್ಲು). ಈ ಮೆತ್ತನೆಯ ಟೂಫಾ ಕಲ್ಲು, ಗಟ್ಟಿಯಾಗಿರುವ ಜ್ವಾಲಾಮುಖಿ ಬೂದಿಯಿಂದ ರಚಿಸಲ್ಪಟ್ಟಿರುವ ಬಿಳಿ ಕಲ್ಲಾಗಿದೆ.
ನದಿಗಳು, ಮಳೆ, ಮತ್ತು ಗಾಳಿಯು ಈ ಮೆತ್ತನೆಯ ಟೂಫಾ ಕಲ್ಲನ್ನು ಸವೆಯಿಸಲಾರಂಭಿಸಿದಂತೆ, ಕಮ್ಮರಿಗಳು ಹುಟ್ಟಿಕೊಂಡವು. ಕಾಲಾನಂತರ, ಈ ಕಮ್ಮರಿಗಳ ಅಂಚಿನಲ್ಲಿದ್ದ ಕೆಲವೊಂದು ಬಂಡೆಗಳು ಕ್ರಮೇಣ ಸೀಳಿಹೋಗಿ, ಅಸಂಖ್ಯಾತ ಶಿಲಾ ಕೋನುಗಳ ಕಂಬಗಳಾದವು. ಮತ್ತು ಇದರಿಂದಾಗಿ, ಪ್ರಪಂಚದಲ್ಲೆಲ್ಲೂ ಕಾಣಸಿಗದಂಥ ಶಿಲಾಕೃತಿಗಳು ಆ ಪ್ರದೇಶಕ್ಕೆ ಒದಗಿಸಲ್ಪಟ್ಟವು. ಕೆಲವು ಶಿಲಾ ಕೋನುಗಳಲ್ಲಿ ಎಷ್ಟೊಂದು ರಂಧ್ರಗಳಿವೆಯೆಂದರೆ, ಅವು ಸಾಕ್ಷಾತ್ ಜೇನುಗೂಡುಗಳಂತೆ ತೋರುತ್ತವೆ. ಸ್ಥಳಿಕ ನಿವಾಸಿಗಳು ಆ ಮೆತ್ತನೆಯ ಶಿಲೆಗಳಲ್ಲಿ ಕೋಣೆಗಳನ್ನು ಕೆತ್ತಿಕೊಂಡು, ಕುಟುಂಬವು ಬೆಳೆಯುತ್ತಾ ಹೋದಂತೆ ಇನ್ನೂ ಹೆಚ್ಚಿನ ಕೋಣೆಗಳನ್ನು ಕೆತ್ತಿದರು. ಅಲ್ಲದೆ, ಈ ಬೀಡುಗಳು ಬೇಸಗೆಕಾಲದಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೂ ಇರುವುದಾಗಿ ಅವರು ಕಂಡುಕೊಂಡರು.
ನಾಗರಿಕತೆಯ ಸಂಧಿಸ್ಥಾನದಲ್ಲಿ ವಾಸಿಸುವುದು
ಒಂದುವೇಳೆ ಕಪ್ಪದೋಕ್ಯದ ಈ ಗುಹೆನಿವಾಸಿಗಳು, ನಾಗರಿಕತೆಯ ಒಂದು ಪ್ರಮುಖ ಸಂಧಿಸ್ಥಾನದಲ್ಲಿಲ್ಲದಿರುತ್ತಿದ್ದಲ್ಲಿ, ಅವರು ಬಹುಶಃ ಬೇರಾವ ಜನರ ಸಂಪರ್ಕಕ್ಕೆ ಬರುತ್ತಿರಲಿಲ್ಲವೇನೋ. ಪ್ರಸಿದ್ಧವಾದ ರೇಶ್ಮೆ ಮಾರ್ಗ, ಅಂದರೆ ರೋಮನ್ ಸಾಮ್ರಾಜ್ಯವನ್ನು ಚೀನದೊಂದಿಗೆ ಜೋಡಿಸಿದ 6,500 ಕಿಲೊಮೀಟರ್ ಉದ್ದದ ವ್ಯಾಪಾರಿ ಮಾರ್ಗವು, ಕಪ್ಪದೋಕ್ಯದ ಮಧ್ಯದಿಂದ ಹಾದುಹೋಗುತ್ತಿತ್ತು. ವ್ಯಾಪಾರಿಗಳು ಮಾತ್ರವಲ್ಲ, ಪರ್ಷಿಯನ್, ಗ್ರೀಕ್, ಹಾಗೂ ರೋಮನ್ ಸೇನೆಗಳು ಈ ಮಾರ್ಗದಲ್ಲಿ ಪ್ರಯಾಣಿಸಿದವು. ಮತ್ತು ಈ ಪ್ರಯಾಣಿಕರು ತಮ್ಮೊಂದಿಗೆ ಹೊಸ ಧಾರ್ಮಿಕ ವಿಚಾರಗಳನ್ನು ತಂದರು.
ಸಾ.ಶ.ಪೂ. ಎರಡನೆಯ ಶತಮಾನದೊಳಗಾಗಿ, ಕಪ್ಪದೋಕ್ಯದಲ್ಲಿ ಯೆಹೂದಿ ವಸಾಹತುಗಳಿದ್ದವು. ಮತ್ತು ಈ ಪ್ರದೇಶದ ಯೆಹೂದ್ಯರು, ಸಾ.ಶ. 33ರಲ್ಲಿ ಪಂಚಾಶತ್ತಮದ ಹಬ್ಬವನ್ನು ಆಚರಿಸಲಿಕ್ಕೋಸ್ಕರ ಯೆರೂಸಲೇಮಿನಲ್ಲಿ ಉಪಸ್ಥಿತರಿದ್ದರು. ಹೀಗೆ, ಅಪೊಸ್ತಲ ಪೇತ್ರನು ಪವಿತ್ರಾತ್ಮವು ಸುರಿಸಲ್ಪಟ್ಟ ನಂತರ ಕಪ್ಪದೋಕ್ಯದ ಯೆಹೂದ್ಯರಿಗೆ ಸಾರಿದನು. (ಅ. ಕೃತ್ಯಗಳು 2:1-9) ಇವರಲ್ಲಿ ಕೆಲವರು ಅವನ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿ, ತಮ್ಮ ನವೀನ ನಂಬಿಕೆಗಳನ್ನು ತಮ್ಮ ನಾಡಿಗೆ ಕೊಂಡೊಯ್ದರೆಂದು ವ್ಯಕ್ತವಾಗುತ್ತದೆ. ಹೀಗಿರುವುದರಿಂದಲೇ, ಪೇತ್ರನು ತನ್ನ ಪ್ರಥಮ ಪತ್ರದಲ್ಲಿ ಕಪ್ಪದೋಕ್ಯದ ಕ್ರೈಸ್ತರನ್ನು ಸಂಬೋಧಿಸುತ್ತಾನೆ.
ಆದರೆ ವರ್ಷಗಳು ದಾಟಿದಂತೆ, ಕಪ್ಪದೋಕ್ಯದಲ್ಲಿದ್ದ ಕ್ರೈಸ್ತರು ವಿಧರ್ಮಿ ತತ್ತ್ವಜ್ಞಾನಗಳ ಪ್ರಭಾವಕ್ಕೆ ಒಳಗಾಗಲಾರಂಭಿಸಿದರು. ನಾಲ್ಕನೆಯ ಶತಮಾನದಲ್ಲಿ ಕಪ್ಪದೋಕ್ಯದ ಮೂರು ಪ್ರಮುಖ ಚರ್ಚು ನಾಯಕರು, ತ್ರಯೈಕ್ಯವೆಂಬ ಅಶಾಸ್ತ್ರೀಯ ಬೋಧನೆಯನ್ನು ಬಲವಾಗಿ ಸಮರ್ಥಿಸಿದರು ಸಹ. ಇವರು ನೇಸಿಯನ್ಸಸ್‌ನ ಗ್ರೆಗರಿ, ಮಹಾ ಬ್ಯಾಸಿಲ್, ಮತ್ತು ಅವನ ತಮ್ಮನಾದ ನಿಸಾದ ಗ್ರೆಗರಿ ಎಂಬವರಾಗಿದ್ದರು.
ಮಹಾ ಬ್ಯಾಸಿಲ್, ಒಂದು ಸನ್ಯಾಸಿ ಜೀವನಶೈಲಿಯನ್ನೂ ಉತ್ತೇಜಿಸಿದನು. ಕಪ್ಪದೋಕ್ಯದ ಕಲ್ಲಿನಲ್ಲಿ ಕೆತ್ತಲ್ಪಟ್ಟ ವಿನಮ್ರ ಶೈಲಿಯ ಬೀಡುಗಳು, ಅವನು ಶಿಫಾರಸ್ಸುಮಾಡಿದ ಸನ್ಯಾಸಿ ಜೀವನಕ್ಕೆ ತಕ್ಕದ್ದಾಗಿದ್ದವು. ಆ ಸನ್ಯಾಸಿ ಸಮುದಾಯವು ಬೆಳೆಯುತ್ತಾ ಹೋದಂತೆ, ಕೆಲವು ದೊಡ್ಡದಾದ ಕೋನುಗಳೊಳಗೆಯೇ ಇಡೀ ಚರ್ಚುಗಳನ್ನು ನಿರ್ಮಿಸಲಾಯಿತು. 13ನೆಯ ಶತಮಾನದೊಳಗೆ, ಮುನ್ನೂರು ಚರ್ಚುಗಳನ್ನು ಶಿಲೆಯಲ್ಲಿ ಕೆತ್ತಲಾಗಿತ್ತು. ಇವುಗಳಲ್ಲಿ ಅನೇಕ ಚರ್ಚುಗಳು ಇಂದಿನವರೆಗೂ ಸಂರಕ್ಷಿಸಲ್ಪಟ್ಟಿವೆ.
ಈ ಚರ್ಚುಗಳು ಮತ್ತು ಸನ್ಯಾಸಿಮಠಗಳು ಈಗ ಬಳಕೆಯಲ್ಲಿಲ್ಲವಾದರೂ, ಈ ಎಲ್ಲಾ ಶತಮಾನಗಳಾದ್ಯಂತ ಸ್ಥಳಿಕ ಜನರ ಜೀವನಶೈಲಿಯಲ್ಲಂತೂ ಹೆಚ್ಚೇನೂ ಬದಲಾವಣೆಯಾಗಿಲ್ಲ. ಈಗಲೂ ಅನೇಕ ಗುಹೆಗಳು ಬೀಡುಗಳಾಗಿವೆ. ಕಪ್ಪದೋಕ್ಯಕ್ಕೆ ಭೇಟಿನೀಡಿರುವವರಲ್ಲಿ ಅನೇಕರು, ವ್ಯವಹಾರ ಚಾತುರ್ಯವುಳ್ಳ ಅಲ್ಲಿನ ನಿವಾಸಿಗಳು ನೈಸರ್ಗಿಕ ರಚನೆಗಳನ್ನೇ ಪ್ರಾಯೋಗಿಕ ಮನೆಗಳಾಗಿ ಮಾರ್ಪಡಿಸಿರುವ ರೀತಿಯನ್ನು ನೋಡಿ ವಿಸ್ಮಯಪಡುತ್ತಾರೆ.
[ಪುಟ 24, 25ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಕಪ್ಪದೋಕ್ಯ
ಚೀನಾ (ಕ್ಯಾಥೆ)