“ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು”
“ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು”
ಕರ್ತನ ಪ್ರಾರ್ಥನೆಯಲ್ಲಿರುವ ನುಡಿಗಳು ನಿಮಗೆ ಗೊತ್ತಿವೆಯೋ? ಇದು ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟ ಒಂದು ಮಾದರಿ ಪ್ರಾರ್ಥನೆಯಾಗಿದೆ. ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು.” (ಮತ್ತಾಯ 6:9) ಇದು ಯೇಸುವಿನಿಂದ ಪರಿಚಯಿಸಲ್ಪಟ್ಟ ಕಾರಣ ಇದನ್ನು ಕರ್ತನ ಪ್ರಾರ್ಥನೆ ಎಂದು ಕರೆಯಲಾಗುತ್ತದೆ.
ಲೋಕದಾದ್ಯಂತ ಇರುವ ಅನೇಕಾನೇಕ ಜನರು ಕರ್ತನ ಪ್ರಾರ್ಥನೆಯನ್ನು ಬಾಯಿಪಾಠಮಾಡಿದ್ದಾರೆ ಮತ್ತು ಅದನ್ನು ಅನೇಕವೇಳೆ, ಬಹುಶಃ ಪ್ರತಿ ದಿನ ಪುನರಾವರ್ತಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಅನೇಕರು ಈ ಪ್ರಾರ್ಥನೆಯನ್ನು ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಗಟ್ಟಿಯಾದ ಧ್ವನಿಯಲ್ಲಿ ಪಠಿಸುತ್ತಾರೆ. ಕರ್ತನ ಪ್ರಾರ್ಥನೆಯು ಇಷ್ಟೇಕೆ ಮಾನ್ಯಮಾಡಲ್ಪಡುತ್ತದೆ?
ಮೂರನೆಯ ಶತಮಾನದ ದೇವತಾಶಾಸ್ತ್ರಜ್ಞನಾದ ಸಿಪ್ರಿಯನ್ ಬರೆದುದು: “ನಮಗೆ ಯೇಸು ಕ್ರಿಸ್ತನಿಂದ ಕೊಡಲ್ಪಟ್ಟಿರುವ ಪ್ರಾರ್ಥನೆಗಿಂತಲೂ ಹೆಚ್ಚು ಆಧ್ಯಾತ್ಮಿಕವಾದ ಪ್ರಾರ್ಥನೆಯು ಬೇರಾವುದಿರಸಾಧ್ಯವಿದೆ . . . ? ತಂದೆಗೆ ಮಾಡಲ್ಪಡುವ ಬೇರೆ ಯಾವ ಪ್ರಾರ್ಥನೆಯು, ಸತ್ಯನಾಗಿರುವಂಥ ಮಗನಿಂದಲೇ ನಮಗೆ ಕೊಡಲ್ಪಟ್ಟಿರುವ ಪ್ರಾರ್ಥನೆಗಿಂತಲೂ ಹೆಚ್ಚು ಸತ್ಯಭರಿತವಾದದ್ದಾಗಿ ಇರಸಾಧ್ಯವಿದೆ?”—ಯೋಹಾನ 14:6.
ರೋಮನ್ ಕ್ಯಾಥೊಲಿಕ್ ಚರ್ಚು ಅದರ ಮತಬೋಧೆಯಲ್ಲಿ ಕರ್ತನ ಪ್ರಾರ್ಥನೆಯನ್ನು “ಮೂಲಭೂತ ಕ್ರೈಸ್ತ ಪ್ರಾರ್ಥನೆ”ಯಾಗಿ ಪರಿಗಣಿಸುತ್ತದೆ. ದ ವರ್ಲ್ಡ್ ಬುಕ್ ಎನ್ಸೈಕ್ಲಪೀಡೀಯವು, ಕ್ರೈಸ್ತಪ್ರಪಂಚದ ಎಲ್ಲಾ ಧರ್ಮಗಳಲ್ಲಿ ಈ ಪ್ರಾರ್ಥನೆಗಿರುವ ಪ್ರಮುಖ ಸ್ಥಾನವನ್ನು ಅಂಗೀಕರಿಸುತ್ತಾ, ಇದನ್ನು “ಕ್ರೈಸ್ತ ನಂಬಿಕೆಯ ಮೂಲಭೂತ ನಿರೂಪಣೆಗಳಲ್ಲಿ” ಒಂದು ಎಂದು ಕರೆಯುತ್ತದೆ.
ಆದರೂ, ಕರ್ತನ ಪ್ರಾರ್ಥನೆಯನ್ನು ಪಠಿಸುವಂಥ ಅನೇಕರು ಅದನ್ನು ಪೂರ್ಣವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಕೆನಡದ ಒಟಾವ ಸಿಟಿಸನ್ ಎಂಬ ವಾರ್ತಾಪತ್ರಿಕೆಯು ಹೇಳುವುದು: “ನಿಮಗೆ ಯಾವುದೇ ರೀತಿಯ ಕ್ರೈಸ್ತ ಹಿನ್ನೆಲೆಯಿರುವಲ್ಲಿ, ನೀವು ಕರ್ತನ ಪ್ರಾರ್ಥನೆಯನ್ನು ಒಂದೇ ಉಸಿರಿಗೆ ಬಡಬಡನೆ ಹೇಳಿಬಿಡಲು ಶಕ್ತರಾಗಿರಬಹುದು, ಆದರೆ ಅದನ್ನು ನಿಧಾನವಾಗಿ ಮತ್ತು ಅರ್ಥಮಾಡಿಕೊಂಡು ಹೇಳುವುದು ನಿಮಗೆ ಕಷ್ಟಕರವಾಗಿರಬಹುದು.”
ದೇವರಿಗೆ ನಾವು ಮಾಡುವ ಪ್ರಾರ್ಥನೆಗಳನ್ನು ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಪ್ರಾಮುಖ್ಯವಾಗಿದೆಯೋ? ಯೇಸು ನಮಗೆ ಕರ್ತನ ಪ್ರಾರ್ಥನೆಯನ್ನು ಏಕೆ ಕಲಿಸಿದನು? ಇದು ನಿಮಗೆ ಏನನ್ನು ಅರ್ಥೈಸುತ್ತದೆ? ನಾವೀಗ ಈ ಪ್ರಶ್ನೆಗಳ ಕಡೆಗೆ ಗಮನಹರಿಸೋಣ.