“ಸದಾ ಎಚ್ಚರವಾಗಿರಿ”
“ಸದಾ ಎಚ್ಚರವಾಗಿರಿ”
ಪುರಾತನ ಕಾಲಗಳಲ್ಲಿ ದ್ವಾರಪಾಲಕರು, ನಗರದ ದ್ವಾರಗಳ ಬಳಿ ಮತ್ತು ದೇವಾಲಯದ ಪ್ರವೇಶ ದ್ವಾರಗಳ ಬಳಿ ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಖಾಸಗಿ ಮನೆಗಳ ಪ್ರವೇಶ ದ್ವಾರಗಳ ಬಳಿಯೂ ಸೇವೆಸಲ್ಲಿಸುತ್ತಿದ್ದರು. ರಾತ್ರಿಯಲ್ಲಿ ದ್ವಾರಗಳು ಮುಚ್ಚಲ್ಪಟ್ಟಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಲ್ಲದೆ, ದ್ವಾರಪಾಲಕರು ಕಾವಲುಗಾರರಾಗಿಯೂ ಸೇವೆಸಲ್ಲಿಸುತ್ತಿದ್ದರು. ಇದೊಂದು ಅತಿ ಜವಾಬ್ದಾರಿಯುತ ನೇಮಕವಾಗಿತ್ತು, ಏಕೆಂದರೆ ಯಾವುದೇ ಅಪಾಯವು ಕಂಡುಬಂದೊಡನೆ ಅವರು ಜನರಿಗೆ ನೀಡುವ ಎಚ್ಚರಿಕೆಯ ಕರೆಯ ಮೇಲೆ ನಗರದ ಭದ್ರತೆಯು ಅವಲಂಬಿಸಿತ್ತು.
ಬಾಗಿಲು ಕಾಯುವವರು ಎಂಬುದಾಗಿಯೂ ಕರೆಯಲ್ಪಡುತ್ತಿದ್ದ ದ್ವಾರಪಾಲಕರ ಪಾತ್ರದ ಕುರಿತು ಯೇಸು ಕ್ರಿಸ್ತನಿಗೆ ಚಿರಪರಿಚಯವಿತ್ತು. ಒಂದು ಸಂದರ್ಭದಲ್ಲಿ, ಅವನು ತನ್ನ ಶಿಷ್ಯರನ್ನು ಬಾಗಿಲು ಕಾಯುವವರಿಗೆ ಹೋಲಿಸಿದನು ಮತ್ತು ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತಾಗಿ ಸದಾ ಎಚ್ಚರವಾಗಿರುವಂತೆ ಅವರನ್ನು ಉತ್ತೇಜಿಸಿದನು. ಅವನು ಹೇಳಿದ್ದು: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ. ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋಗುವಾಗ . . . ಬಾಗಿಲು ಕಾಯುವವನನ್ನು ಕರೆದು—ನೀನು ಎಚ್ಚರವಾಗಿರಬೇಕೆಂದು ಅಪ್ಪಣೆ ಕೊಡುವ ಪ್ರಕಾರ [ನಾನು ನಿಮಗೆ ಅಪ್ಪಣೆ ಕೊಡುತ್ತೇನೆ]. ಮನೇಯಜಮಾನನು . . . ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ [“ಸದಾ ಎಚ್ಚರವಾಗಿರಿ,” NW].”—ಮಾರ್ಕ 13:33-35.
ತದ್ರೀತಿಯಲ್ಲಿ, ಕಾವಲಿನಬುರುಜು ಎಂಬ ಈ ಪತ್ರಿಕೆಯು 125ಕ್ಕಿಂತಲೂ ಹೆಚ್ಚು ವರುಷಗಳಿಂದ, “ಸದಾ ಎಚ್ಚರವಾಗಿರಿ” ಎಂಬ ಯೇಸುವಿನ ಉತ್ತೇಜನವನ್ನು ತಿಳಿಸುತ್ತಾ ಬಂದಿದೆ. ಹೇಗೆ? ಈ ಪತ್ರಿಕೆಯ ಪುಟ 2ರಲ್ಲಿ ತಿಳಿಸಿರುವಂತೆ, “ಲೋಕದ ಘಟನೆಗಳು ಬೈಬಲ್ ಪ್ರವಾದನೆಯನ್ನು ನೆರವೇರಿಸುವಾಗ ಇದು ಅವುಗಳ ಮೇಲೆ ಕಾವಲಿಡುತ್ತದೆ. ತಮ್ಮ ಜೊತೆಮಾನವರ ಮೇಲೆ ದಬ್ಬಾಳಿಕೆ ನಡೆಸುವವರನ್ನು ದೇವರ ರಾಜ್ಯವು ಶೀಘ್ರವೇ ನಾಶಗೊಳಿಸುವುದು ಮತ್ತು ಈ ಭೂಮಿಯನ್ನು ಪರದೈಸಾಗಿ ಮಾರ್ಪಡಿಸುವುದೆಂಬ ಸುವಾರ್ತೆಯಿಂದ ಇದು ಮಾನವರೆಲ್ಲರನ್ನು ಸಂತೈಸುತ್ತದೆ.” ಕಾವಲಿನಬುರುಜು, ಲೋಕದಲ್ಲಿಯೇ ಅತಿ ಹೆಚ್ಚು ವ್ಯಾಪಕವಾಗಿ ವಿತರಿಸಲ್ಪಡುವ ಧಾರ್ಮಿಕ ಪತ್ರಿಕೆಯಾಗಿದೆ. ಲೋಕವ್ಯಾಪಕವಾಗಿ 2,60,00,000ಕ್ಕಿಂತಲೂ ಹೆಚ್ಚು ಪ್ರತಿಗಳು 150 ಭಾಷೆಗಳಲ್ಲಿ ವಿತರಿಸಲ್ಪಡುತ್ತಿವೆ. ಈ ಪತ್ರಿಕೆಯ ಮೂಲಕ ಯೆಹೋವನ ಸಾಕ್ಷಿಗಳು, ಪುರಾತನ ದ್ವಾರಪಾಲಕರಂತೆ, ಎಲ್ಲೆಡೆಯೂ ಇರುವ ಜನರನ್ನು ಆಧ್ಯಾತ್ಮಿಕವಾಗಿ “ಸದಾ ಎಚ್ಚರವಾಗಿರಿ” ಎಂಬುದಾಗಿ ಉತ್ತೇಜಿಸುತ್ತಿದ್ದಾರೆ. ಏಕೆಂದರೆ, ಮನೇಯಜಮಾನನಾದ ಯೇಸು ಕ್ರಿಸ್ತನು ಹಿಂದಿರುಗಿ ಬಂದು ಈ ವಿಷಯಗಳ ವ್ಯವಸ್ಥೆಯ ಮೇಲೆ ನ್ಯಾಯತೀರ್ಪನ್ನು ವಿಧಿಸಲಿದ್ದಾನೆ.—ಮಾರ್ಕ 13:26, 37.