ಯೆಹೋವನನ್ನು ನಿಮ್ಮ ದೇವರನ್ನಾಗಿ ಮಾಡುವುದು
ಯೆಹೋವನನ್ನು ನಿಮ್ಮ ದೇವರನ್ನಾಗಿ ಮಾಡುವುದು
ಬೈಬಲ್ ಸಮಯಗಳಲ್ಲಿ ಕೆಲವು ವ್ಯಕ್ತಿಗಳು ಯೆಹೋವನೊಂದಿಗೆ ಎಷ್ಟು ಆಪ್ತ ಸಂಬಂಧವನ್ನು ಆನಂದಿಸಿದರೆಂದರೆ ಆತನನ್ನು ಅವರ ದೇವರು ಎಂದು ಸಂಭೋದಿಸಲಾಯಿತು. ಉದಾಹರಣೆಗೆ, ಶಾಸ್ತ್ರವಚನಗಳಲ್ಲಿ ಯೆಹೋವನನ್ನು ‘ಅಬ್ರಹಾಮನ ದೇವರು,’ ‘ದಾವೀದನ ದೇವರು’ ಮತ್ತು ‘ಎಲೀಯನ ದೇವರು’ ಎಂದು ವರ್ಣಿಸಲಾಗಿದೆ.—ಆದಿಕಾಂಡ 31:42; 2 ಅರಸುಗಳು 2:14; 20:6.
ಇವರಲ್ಲಿ ಪ್ರತಿಯೊಬ್ಬರೂ ದೇವರೊಂದಿಗೆ ಆಪ್ತ ಸಂಬಂಧವನ್ನು ಹೇಗೆ ಬೆಳೆಸಿಕೊಂಡರು? ನಾವು ಸಹ ಸೃಷ್ಟಿಕರ್ತನೊಂದಿಗೆ ಬಲವಾದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡು, ಅದನ್ನು ಕಾಪಾಡಿಕೊಳ್ಳಲು ಶಕ್ತರಾಗುವಂತೆ ಅವರಿಂದ ಏನನ್ನು ಕಲಿಯಬಲ್ಲೆವು?
ಅಬ್ರಹಾಮನು “ಯೆಹೋವನಲ್ಲಿ ನಂಬಿಕೆ”ಯಿಟ್ಟನು
ಯೆಹೋವನಲ್ಲಿ ನಂಬಿಕೆಯಿಟ್ಟ ವಿಷಯದ ಕುರಿತು ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿಗಳಲ್ಲಿ ಅಬ್ರಹಾಮನು ಮೊದಲಿಗನು. ಅಬ್ರಹಾಮನಲ್ಲಿದ್ದ ನಂಬಿಕೆ ಎಂಬ ಸರ್ವೋಚ್ಚ ಗುಣದಿಂದಾಗಿ ಅವನು ದೇವರ ಒಪ್ಪಿಗೆಯನ್ನು ಹೊಂದಿದನು. ವಾಸ್ತವದಲ್ಲಿ, ಅಬ್ರಹಾಮನಿಗೆ ಯೆಹೋವನ ಅನುಗ್ರಹವು ಎಷ್ಟಿತ್ತೆಂದರೆ ಸಮಯಾನಂತರ ಮೋಶೆಗೆ ತನ್ನನ್ನು ಪರಿಚಯಿಸಿಕೊಂಡಾಗ ಯೆಹೋವನು ತಾನು “ಅಬ್ರಹಾಮನ ದೇವರು” ಮತ್ತು ಅವನ ಮಗ ಇಸಾಕ ಹಾಗೂ ಮೊಮ್ಮಗನಾದ ಯಾಕೋಬನ ದೇವರು ಎಂಬುದಾಗಿ ಹೇಳಿದನು.—ಆದಿಕಾಂಡ 15:6, NIBV; ವಿಮೋಚನಕಾಂಡ 3:6.
ದೇವರಲ್ಲಿ ಇಂಥ ನಂಬಿಕೆಯನ್ನು ಅಬ್ರಹಾಮನು ಹೇಗೆ ಬೆಳೆಸಿಕೊಂಡನು? ಮೊದಲಾಗಿ, ಅಬ್ರಹಾಮನು ಅವನ ನಂಬಿಕೆಯನ್ನು ಒಂದು ಸ್ಥಿರವಾದ ಅಸ್ತಿವಾರದ ಮೇಲೆ ಕಟ್ಟಿದನು. ಅವನು, ದೇವರ ರಕ್ಷಣಾ ಕಾರ್ಯಗಳನ್ನು ಕಣ್ಣಾರೆ ಕಂಡ ನೋಹನ ಮಗನಾದ ಶೇಮನಿಂದ ಯೆಹೋವನ ಮಾರ್ಗಗಳ ಕುರಿತು ಬೋಧಿಸಲ್ಪಟ್ಟಿರಬಹುದು. ಯೆಹೋವನು “ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು” ಎಂಬುದಕ್ಕೆ ಶೇಮನು ಜೀವಂತ ಸಾಕ್ಷಿಯಾಗಿದ್ದನು. (2 ಪೇತ್ರ 2:5) ಯೆಹೋವನು ಏನನ್ನಾದರೂ ಮುಂತಿಳಿಸಿದರೆ ಅದು ಖಂಡಿತವಾಗಿಯೂ ನೆರವೇರುವುದು ಎಂಬುದನ್ನು ಅಬ್ರಹಾಮನು ಶೇಮನಿಂದ ಕಲಿತಿರಬಹುದು. ಏನೇ ಆಗಲಿ, ಅಬ್ರಹಾಮನು ಸ್ವತಃ ದೇವರಿಂದ ಒಂದು ವಾಗ್ದಾನವನ್ನು ಪಡೆದುಕೊಂಡಾಗ, ಅವನು ಸಂತೋಷಿಸಿದನು ಮತ್ತು ಆ ವಾಗ್ದಾನವು ಖಂಡಿತವಾಗಿಯೂ ನೆರವೇರುವುದು ಎಂಬ ದೃಢ ಭರವಸೆಯ ಮೇಲಾಧಾರಿಸಿ ತನ್ನ ಜೀವನಕ್ರಮವನ್ನು ರೂಪಿಸಿದನು.
ಅಬ್ರಹಾಮನು ನಂಬಿಕೆಯ ಸ್ಥಿರವಾದ ಅಸ್ತಿವಾರವನ್ನು ಈಗಾಗಲೇ ಹೊಂದಿದ್ದ ಕಾರಣ, ಅವನ ಕೃತ್ಯಗಳ ಮೂಲಕ ಅವನ ನಂಬಿಕೆಯು ಇನ್ನಷ್ಟು ಬಲಗೊಳಿಸಲ್ಪಟ್ಟಿತು. ಅಪೊಸ್ತಲ ಪೌಲನು ಬರೆದದ್ದು: “ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟ ಕೂಡಲೆ ಕರೆದಾತನ ಮಾತನ್ನು ಕೇಳಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.” (ಇಬ್ರಿಯ 11:8) ವಿಧೇಯತೆಯ ಈ ಕೃತ್ಯವು ಅಬ್ರಹಾಮನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿತು. ಇದರ ಕುರಿತು ಶಿಷ್ಯನಾದ ಯಾಕೋಬನು ಬರೆದದ್ದು: “ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬದು ಕಾಣಬರುತ್ತದಲ್ಲಾ.”—ಯಾಕೋಬ 2:22.
ಅಷ್ಟುಮಾತ್ರವಲ್ಲದೆ, ಯೆಹೋವನು ಅಬ್ರಹಾಮನ ನಂಬಿಕೆಯು ಪರೀಕ್ಷಿಸಲ್ಪಡುವಂತೆ ಅನುಮತಿಸಿದನು. ಇದು ಅವನ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಿತು. ಪೌಲನು ಹೇಳಿದ್ದು: “ಅಬ್ರಹಾಮನು ಪರಿಶೋಧಿತನಾಗಿ ನಂಬಿಕೆಯಿಂದಲೇ ಇಸಾಕನನ್ನು ಸಮರ್ಪಿಸಿದನು.” ಪರೀಕ್ಷೆಯು ನಂಬಿಕೆಯನ್ನು ಶೋಧಿಸಿ ಬಲಗೊಳಿಸುತ್ತದೆ ಮತ್ತು ಅದನ್ನು “ಬಂಗಾರಕ್ಕಿಂತ ಅಮೂಲ್ಯ”ವಾದದ್ದನ್ನಾಗಿ ಮಾಡುತ್ತದೆ.—ಇಬ್ರಿಯ 11:17; 1 ಪೇತ್ರ 1:7.
ಅಬ್ರಹಾಮನು ತನ್ನ ಜೀವಮಾನದಲ್ಲಿ ದೇವರು ವಾಗ್ದಾನಿಸಿದ ಎಲ್ಲಾ ವಿಷಯಗಳ ನೆರವೇರಿಕೆಯನ್ನು ನೋಡದಿದ್ದರೂ, ತನ್ನ ಮಾದರಿಯನ್ನು ಇತರರು ಹಿಂಬಾಲಿಸುವುದನ್ನು ನೋಡುವ ಆನಂದ ಅವನಿಗಿತ್ತು. ಅವನ ಪತ್ನಿಯಾದ ಸಾರ ಮತ್ತು ಅವನ ಕುಟುಂಬದ ಇತರ ಮೂವರು ಸದಸ್ಯರಾದ ಇಸಾಕ, ಯಾಕೋಬ ಮತ್ತು ಯೊಸೇಫರು ಸಹ ತಮ್ಮ ಎದ್ದುಕಾಣುವ ನಂಬಿಕೆಗಾಗಿ ಬೈಬಲಿನಲ್ಲಿ ಪ್ರಶಂಸಿಸಲ್ಪಟ್ಟಿದ್ದಾರೆ.—ಇಂದು ಅಬ್ರಹಾಮನಂಥ ನಂಬಿಕೆ
ಯೆಹೋವನನ್ನು ತನ್ನ ದೇವರನ್ನಾಗಿ ಮಾಡಿಕೊಳ್ಳಲು ಅಪೇಕ್ಷಿಸುವ ಯಾವುದೇ ವ್ಯಕ್ತಿಗೆ ನಂಬಿಕೆಯು ಅತ್ಯಾವಶ್ಯಕ. “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ” ಎಂದು ಪೌಲನು ಬರೆದನು. (ಇಬ್ರಿಯ 11:6) ಹಾಗಾದರೆ, ಅಬ್ರಹಾಮನಂಥ ಬಲವಾದ ನಂಬಿಕೆಯನ್ನು ಇಂದು ದೇವರ ಸೇವಕನೊಬ್ಬನು ಹೇಗೆ ಬೆಳೆಸಿಕೊಳ್ಳಬಲ್ಲನು?
ಅಬ್ರಹಾಮನ ವಿಷಯದಲ್ಲಿ ನಿಜವಾಗಿದ್ದಂತೆ, ನಮ್ಮ ನಂಬಿಕೆಯೂ ಸ್ಥಿರವಾದ ಅಸ್ತಿವಾರದ ಮೇಲೆ ಸ್ಥಾಪಿಸಲ್ಪಟ್ಟಿರಬೇಕು. ಬೈಬಲ್ ಮತ್ತು ಬೈಬಲ್ ಆಧಾರಿತ ಸಾಹಿತ್ಯಗಳನ್ನು ಕ್ರಮವಾಗಿ ಅಧ್ಯಯನಮಾಡುವ ಮೂಲಕ ಇದನ್ನು ಮಾಡಸಾಧ್ಯವಿದೆ. ಬೈಬಲನ್ನು ಓದುವುದು ಮತ್ತು ಓದಿದ ವಿಷಯಗಳ ಕುರಿತು ಧ್ಯಾನಿಸುವುದು, ದೇವರ ವಾಗ್ದಾನಗಳು ಖಂಡಿತವಾಗಿಯೂ ನೆರವೇರುತ್ತವೆ ಎಂಬ ಆಶ್ವಾಸನೆಯನ್ನು ನಮ್ಮಲ್ಲಿ ಮೂಡಿಸಬಲ್ಲದು. ಆಗ ನಾವು ಆ ಭರವಸೆಯ ಮೇಲಾಧಾರಿಸಿ ನಮ್ಮ ಜೀವನರೀತಿಯನ್ನು ಬದಲಾಯಿಸಲು ಪ್ರಚೋದಿಸಲ್ಪಡುತ್ತೇವೆ. ನಮ್ಮ ನಂಬಿಕೆಯು, ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದರ ಸಮೇತ ವಿಧೇಯ ಕೃತ್ಯಗಳ ಮೂಲಕ ಮತ್ತಷ್ಟು ಬಲಗೊಳ್ಳುತ್ತದೆ.—ಮತ್ತಾಯ 24:14; 28:19, 20; ಇಬ್ರಿಯ 10:24, 25.
ನಮ್ಮ ನಂಬಿಕೆಯು ಖಂಡಿತವಾಗಿಯೂ ಪರೀಕ್ಷಿಸಲ್ಪಡುತ್ತದೆ. ಇದು ಒಂದುವೇಳೆ ವಿರೋಧ, ಗಂಭೀರ ಕಾಯಿಲೆ, ಪ್ರಿಯ ವ್ಯಕ್ತಿಯ ಮರಣ ಅಥವಾ ಇನ್ಯಾವುದೊ ವಿಷಯದಿಂದ ಸಂಭವಿಸಬಹುದು. ಪರೀಕ್ಷೆಯ ಕೆಳಗೆ ಯೆಹೋವನಿಗೆ ನಿಷ್ಠರಾಗಿ ಉಳಿಯುವುದು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ ಮತ್ತು ಅದನ್ನು ಬಂಗಾರಕ್ಕಿಂತ ಹೆಚ್ಚು ಅಮೂಲ್ಯವಾಗಿ ಮಾಡುತ್ತದೆ. ದೇವರ ಎಲ್ಲಾ ವಾಗ್ದಾನಗಳ ನೆರವೇರಿಕೆಯನ್ನು ನೋಡಲು ನಾವು ಜೀವದಿಂದಿರಲಿ ಇಲ್ಲದಿರಲಿ, ನಮ್ಮ ನಂಬಿಕೆಯಂತೂ ನಮ್ಮನ್ನು ಯೆಹೋವನ ಸಮೀಪಕ್ಕೆ ಸೆಳೆಯುವುದು. ಅದಲ್ಲದೆ, ನಮ್ಮ ಮಾದರಿಯು ಇತರರು ನಮ್ಮ ನಂಬಿಕೆಯನ್ನು ಅನುಸರಿಸುವಂತೆ ಪ್ರೋತ್ಸಾಹಿಸುವುದು. (ಇಬ್ರಿಯ 13:7) ರಾಲ್ಫ್‌ನ ವಿಷಯದಲ್ಲಿ ಇದು ನಿಜವಾಗಿತ್ತು. ಅವನು ತನ್ನ ಹೆತ್ತವರ ನಂಬಿಕೆಯನ್ನು ಗಮನಿಸಿ ಅದನ್ನು ಅನುಕರಿಸಿದನು. ಅವನು ವಿವರಿಸುವುದು:
“ನಾನು ನನ್ನ ಹೆತ್ತವರೊಂದಿಗಿದ್ದ ಸಮಯದಲ್ಲಿ, ಅವರು ನಮ್ಮ ಇಡೀ ಕುಟುಂಬವನ್ನು ಬೆಳಿಗ್ಗೆ ಬೇಗನೆ ಎದ್ದು ಒಟ್ಟಾಗಿ ಬೈಬಲ್ ಓದುವಂತೆ ಉತ್ತೇಜಿಸುತ್ತಿದ್ದರು. ನಾವು ಈ ರೀತಿಯಾಗಿ ಇಡೀ ಬೈಬಲನ್ನು ಓದಿದೆವು.” ರಾಲ್ಫ್ ಈಗಲೂ ಪ್ರತಿ ಬೆಳಿಗ್ಗೆ ಬೈಬಲನ್ನು ಓದುತ್ತಾನೆ, ಮತ್ತು ಇದು ಅವನಿಗೆ, ದಿನವನ್ನು ಉತ್ತಮ ರೀತಿಯಲ್ಲಿ ಆರಂಭಿಸುವಂತೆ ಸಹಾಯಮಾಡುತ್ತದೆ. ರಾಲ್ಫ್, ಪ್ರತಿ ವಾರ ತನ್ನ ತಂದೆಯೊಂದಿಗೆ ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದನು. “ಆ ಸಮಯದಲ್ಲೇ ನಾನು ಪುನರ್ಭೇಟಿಗಳನ್ನು ಮಾಡುವುದು ಮತ್ತು ಬೈಬಲ್ ಅಧ್ಯಯನಗಳನ್ನು ನಡೆಸುವುದು ಹೇಗೆಂಬದನ್ನು ಕಲಿತುಕೊಂಡೆ” ಎಂದು ಅವನು ತಿಳಿಸುತ್ತಾನೆ. ಈಗ ರಾಲ್ಫ್, ಯೂರೋಪಿನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸೊಂದರಲ್ಲಿ ಸ್ವಯಂ ಸೇವಕನಾಗಿ ಸೇವೆಮಾಡುತ್ತಿದ್ದಾನೆ. ಅವನ ಹೆತ್ತವರ ನಂಬಿಕೆಗೆ ಎಂಥ ಒಂದು ಉತ್ತಮ ಪ್ರತಿಫಲ!
ಯೆಹೋವನ ಹೃದಯಕ್ಕೆ ಒಪ್ಪುವ ಪುರುಷನು
ಅಬ್ರಹಾಮನಿಗಿಂತ ಸುಮಾರು 900 ವರುಷಗಳ ಅನಂತರ ಜನಿಸಿದ ದಾವೀದನು, ಶಾಸ್ತ್ರವಚನಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಯೆಹೋವನ ಸೇವಕರಲ್ಲಿ ಒಬ್ಬ ಗಮನಾರ್ಹ ವ್ಯಕ್ತಿಯಾಗಿದ್ದಾನೆ. ಯೆಹೋವನು ದಾವೀದನನ್ನು ಭಾವೀ ರಾಜನಾಗಿ ಆರಿಸಿಕೊಂಡ ವಿಷಯದಲ್ಲಿ ಪ್ರವಾದಿಯಾದ ಸಮುವೇಲನು ಹೇಳಿದ್ದು: “ಯೆಹೋವನು ತನ್ನ ಹೃದಯಕ್ಕೆ ಒಪ್ಪುವ ಪುರುಷನನ್ನು ಖಂಡಿತವಾಗಿಯೂ ಕಂಡುಕೊಳ್ಳುವನು.” ಯೆಹೋವನ ಮತ್ತು ದಾವೀದನ ಬಂಧವು ಎಷ್ಟು ಆಪ್ತವಾಗಿತ್ತೆಂದರೆ, ಪ್ರವಾದಿಯಾದ ಯೆಶಾಯನು ರಾಜ ಹಿಜ್ಕೀಯನಿಗೆ ಯೆಹೋವನ ಮಾತನ್ನು ತಿಳಿಸುವಾಗ “ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು” ಎಂದು ಹೇಳಿದನು.—1 ಸಮುವೇಲ 13:14, NW; 2 ಅರಸುಗಳು 20:5, 6; ಯೆಶಾಯ 38:5, 8.
ದಾವೀದನು ಯೆಹೋವನ ಹೃದಯಕ್ಕೆ ಒಪ್ಪುವ ಪುರುಷನಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಅವನು ತನ್ನ ಶಾರೀರಿಕ ಇಚ್ಛೆಗಳು ತನ್ನ ಮೇಲೆ ಹತೋಟಿ ವಹಿಸುವಂತೆ ಅನುಮತಿಸಿದ್ದನು. ಮೂರು ಬಾರಿ ಅವನು ಗಂಭೀರವಾದ ತಪ್ಪುಗಳನ್ನು ಮಾಡಿದನು: ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತರುವಾಗ ಅದನ್ನು ತಪ್ಪಾದ ರೀತಿಯಲ್ಲಿ ಸಾಗಿಸಲು ಅವನು ಅನುಮತಿಸಿದನು; ಬತ್ಷೆಬೆಯೊಂದಿಗೆ ವ್ಯಭಿಚಾರಗೈದದ್ದರೊಂದಿಗೆ ಆಕೆಯ ಗಂಡನಾದ ಊರೀಯನನ್ನು ಉಪಾಯದಿಂದ ಕೊಲ್ಲಿಸಿದನು; ಮತ್ತು ಯೆಹೋವನು ಆಜ್ಞಾಪಿಸದೆ ಇದ್ದರೂ ಅವನು ಇಸ್ರಾಯೇಲ್ ಯೆಹೂದ್ಯ ಕುಲಗಳವರ ಖಾನೇಷುಮಾರಿಮಾಡಿಸಿದನು. ಈ ಪ್ರತಿಯೊಂದು ಸಂದರ್ಭದಲ್ಲಿಯೂ, ದಾವೀದನು ದೇವರ ನಿಯಮವನ್ನು ಮುರಿದನು.—2 ಸಮುವೇಲ 6:2-10; 11:2-27; 24:1-9.
1 ಪೂರ್ವಕಾಲವೃತ್ತಾಂತ 15:13; 2 ಸಮುವೇಲ 12:13; 24:10.
ಆದರೆ, ದಾವೀದನಿಗೆ ಅವನ ತಪ್ಪುಗಳನ್ನು ತಿಳಿಯಪಡಿಸಿದಾಗ ಅವನು ತಾನು ಅದಕ್ಕೆ ಜವಾಬ್ದಾರನೆಂದು ಕೂಡಲೆ ಒಪ್ಪಿಕೊಂಡನು ಮತ್ತು ಇತರರ ಮೇಲೆ ತಪ್ಪು ಹೊರಿಸಲಿಲ್ಲ. ಮಂಜೂಷವನ್ನು ವಿಧಿವಿಹಿತವಾದ ರೀತಿಯಲ್ಲಿ ಸಾಗಿಸಲಿಲ್ಲ ಎಂಬುದನ್ನು ಅವನು ಒಪ್ಪಿಕೊಂಡನು. ಅಷ್ಟುಮಾತ್ರವಲ್ಲದೆ, “ಧರ್ಮವಿಧಿಗನುಸಾರ ನಾವು ಯೆಹೋವನ ಬಳಿ ವಿಚಾರಿಸಲಿಲ್ಲ” ಎಂಬುದಾಗಿಯೂ ಅವನು ಹೇಳಿದನು. ಪ್ರವಾದಿಯಾದ ನಾತಾನನು ದಾವೀದನ ವ್ಯಭಿಚಾರವನ್ನು ಬಯಲುಪಡಿಸಿದಾಗ, ದಾವೀದನು ಹೀಗೆ ಉತ್ತರಿಸಿದನು: “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.” ಖಾನೇಷುಮಾರಿಮಾಡಿಸಿ ತಾನು ತಪ್ಪುಮಾಡಿದೆ ಎಂದು ದಾವೀದನಿಗೆ ಮನವರಿಕೆಯಾದ ಕೂಡಲೇ ಅವನು ಹೀಗೆ ಹೇಳಿದನು: “ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು.” ತನ್ನ ಪಾಪಗಳಿಗಾಗಿ ದಾವೀದನು ಪಶ್ಚಾತ್ತಾಪಪಟ್ಟು, ದೇವರಿಗೆ ನಿಕಟವಾಗಿಯೇ ಉಳಿದನು.—ನಾವು ತಪ್ಪುಗಳನ್ನು ಮಾಡುವಾಗ
ಯೆಹೋವನನ್ನು ನಮ್ಮ ದೇವರನ್ನಾಗಿ ಮಾಡಿಕೊಳ್ಳಲು ನಾವು ಪ್ರಯತ್ನಿಸುವಾಗ, ದಾವೀದನ ಮಾದರಿಯು ನಮಗೆ ಉತ್ತೇಜನವನ್ನು ಕೊಡುತ್ತದೆ. ಯೆಹೋವನ ಹೃದಯಕ್ಕೆ ಒಪ್ಪುವ ಪುರುಷನು ಅಂಥ ಗಂಭೀರವಾದ ಪಾಪಗಳನ್ನು ಮಾಡಿದನಾದರೆ, ಒಂದುವೇಳೆ ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಾವು ಯಾವುದಾದರೂ ಚಿಕ್ಕಪುಟ್ಟ ತಪ್ಪುಗಳು ಅಥವಾ ಕೆಲವೊಮ್ಮೆ ಗಂಭೀರವಾದ ತಪ್ಪುಗಳನ್ನೂ ಮಾಡುವುದಾದರೆ ನಾವು ನಿರುತ್ತೇಜನಗೊಳ್ಳುವ ಅಗತ್ಯವಿಲ್ಲ. (ಪ್ರಸಂಗಿ 7:20) ದಾವೀದನು ಪಶ್ಚಾತ್ತಾಪಪಟ್ಟಾಗ ಅವನ ಪಾಪಗಳು ಕ್ಷಮಿಸಲ್ಪಟ್ಟವು ಎಂಬ ವಿಷಯವು ನಮ್ಮನ್ನು ಉತ್ತೇಜಿಸುತ್ತದೆ. ಊವಿ * ಎಂಬವನಿಗೆ ಕೆಲವು ವರುಷಗಳ ಹಿಂದೆ ಇದೇ ಸಂಭವಿಸಿತು.
ಊವಿ ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದನು. ಒಂದು ಸಂದರ್ಭದಲ್ಲಿ, ಅವನು ತಪ್ಪಾದ ಇಚ್ಛೆಗಳಿಗೆ ಬಲಿಬಿದ್ದು, ಲೈಂಗಿಕ ಅನೈತಿಕತೆಯನ್ನು ನಡೆಸಿದನು. ಆರಂಭದಲ್ಲಿ ಊವಿಯು ದಾವೀದನಂತೆ ಯೆಹೋವನು ತನ್ನ ಪಾಪವನ್ನು ಅಲಕ್ಷಿಸುವನು ಎಂದು ಭಾವಿಸುತ್ತಾ ತನ್ನ ಪಾಪವನ್ನು ಅಡಗಿಸಿಡಲು ಪ್ರಯತ್ನಿಸಿದನು. ಕ್ರಮೇಣ, ಊವಿಯ ಮನಸ್ಸಾಕ್ಷಿಯು ಅವನನ್ನು ಎಷ್ಟೊಂದು ಪೀಡಿಸಲಾರಂಭಿಸಿತೆಂದರೆ ಅವನು ತನ್ನ ತಪ್ಪನ್ನು ಜೊತೆ ಹಿರಿಯನೊಬ್ಬನಿಗೆ ಅರಿಕೆಮಾಡಿದನು ಮತ್ತು ನಂತರ ಊವಿಯು ತನ್ನ ಆಧ್ಯಾತ್ಮಿಕ ದುರಂತದಿಂದ ಚೇತರಿಸಿಕೊಳ್ಳಲು ಸಹಾಯಮಾಡುವ ಉದ್ದೇಶದೊಂದಿಗೆ ಕ್ರಮವನ್ನು ಕೈಗೊಳ್ಳಲಾಯಿತು.
ಊವಿ ತನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟನು ಮತ್ತು ಯೆಹೋವನಿಗೂ ಸಭೆಗೂ ನಿಕಟವಾಗಿಯೇ ಉಳಿದನು. ತನಗೆ ದೊರೆತ ಸಹಾಯಕ್ಕಾಗಿ ಅವನು ಬಹಳ ಆಭಾರಿಯಾಗಿದ್ದನು. ಹಿರಿಯರಿಂದ ದೊರೆತ ಸಹಾಯಕ್ಕಾಗಿ ತನ್ನ ಯಥಾರ್ಥ ಮತ್ತು ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಅವನು ಕೆಲವು ವಾರಗಳ ನಂತರ ಒಂದು ಪತ್ರವನ್ನು ಬರೆದನು. ಅವನು ಬರೆದದ್ದು: “ಯೆಹೋವನ ಹೆಸರಿಗೆ ಬಂದ ಕಳಂಕವನ್ನು ತೆಗೆಯುವಂತೆ ನೀವು ನನಗೆ ಸಹಾಯಮಾಡಿದಿರಿ.” ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಊವಿ ಕಾಪಾಡಿಕೊಳ್ಳಲು ಶಕ್ತನಾದನು ಮತ್ತು ಸಮಯಾನಂತರ ಅವನು ಅದೇ ಸಭೆಯಲ್ಲಿ ಸೇವಕನಾಗಿ ಪುನಃ ನೇಮಿಸಲ್ಪಟ್ಟನು.
“ನಮ್ಮಂಥ ಅನಿಸಿಕೆಗಳುಳ್ಳ ಮನುಷ್ಯ”
ದಾವೀದನ ನಂತರದ ಶತಮಾನದಲ್ಲಿ ಜೀವಿಸಿದ ಎಲೀಯನು ಇಸ್ರಾಯೇಲಿನಲ್ಲಿದ್ದ ಪ್ರಮುಖ ಪ್ರವಾದಿಗಳಲ್ಲಿ ಒಬ್ಬನಾಗಿದ್ದನು. ಭ್ರಷ್ಟಾಚಾರ ಮತ್ತು ಅನೈತಿಕತೆಯು ಅತಿಯಾಗಿ ಹಬ್ಬಿದ್ದ ಸಮಯದಲ್ಲಿ ಎಲೀಯನು ಸತ್ಯಾರಾಧನೆಯನ್ನು ಎತ್ತಿಹಿಡಿದನು ಮತ್ತು ಯೆಹೋವನಲ್ಲಿ ಅವನಿಗಿದ್ದ ಭಕ್ತಿಯು ಎಂದೂ ತತ್ತರಿಸಲಿಲ್ಲ. ಅವನ ನಂತರದವನಾದ ಎಲೀಷನು ಒಮ್ಮೆ ಯೆಹೋವನನ್ನು ‘ಎಲೀಯನ ದೇವರು’ ಎಂಬುದಾಗಿ ಕರೆದದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ!—2 ಅರಸುಗಳು 2:14.
ಹಾಗಿದ್ದರೂ ಎಲೀಯನು ಒಬ್ಬ ಸೂಪರ್ ಮ್ಯಾನ್ ಆಗಿರಲಿಲ್ಲ. ಯಾಕೋಬನು ಬರೆದದ್ದು: “ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು [“ಅನಿಸಿಕೆಗಳುಳ್ಳ ಮನುಷ್ಯನಾಗಿದ್ದನು,” NW].” (ಯಾಕೋಬ 5:17) ಉದಾಹರಣೆಗೆ, ಅವನು ಇಸ್ರಾಯೇಲಿನಲ್ಲಿದ್ದ ಬಾಳನ ಆರಾಧಕರನ್ನು ತೀಕ್ಷ್ಣವಾಗಿ ಸೋಲಿಸಿದ ನಂತರ, ರಾಣಿ ಈಜೆಬೆಲಳು ತಾನು ಅವನನ್ನು ಕೊಲ್ಲುತ್ತೇನೆಂದು ಪಣತೊಟ್ಟಳು. ಇದಕ್ಕೆ ಅವನು ಹೇಗೆ ಪ್ರತಿಕ್ರಿಯಿಸಿದನು? ಅವನು ಭಯಭೀತನಾಗಿ ಅರಣ್ಯಕ್ಕೆ ಓಡಿಹೋದನು. ಅಲ್ಲಿ, ಜಾಲೀಗಿಡದ ಕೆಳಗೆ ಕೂತುಕೊಂಡು ತನ್ನ ದುಃಖವನ್ನು ಹೀಗೆ ವ್ಯಕ್ತಪಡಿಸಿದನು: “ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು; ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ.” ಎಲೀಯನು ಪ್ರವಾದಿಯಾಗಿ ಮುಂದುವರಿಯಲು ಬಯಸದೆ ಸಾಯಲು ಬಯಸಿದನು.—1 ಅರಸುಗಳು 19:4.
ಆದರೆ ಯೆಹೋವನು ಎಲೀಯನ ಭಾವನೆಗಳನ್ನು ಅರ್ಥಮಾಡಿಕೊಂಡನು. ಮತ್ತು ಅವನನ್ನು ಬಲಪಡಿಸಿದನು. ಅವನು ಒಂಟಿಗನಾಗಿಲ್ಲ ಬದಲಾಗಿ ದೇವರಿಗೆ ನಿಷ್ಠರಾಗಿರುವ ಇನ್ನೂ ಇತರ ಸತ್ಯಾರಾಧಕರು ಇದ್ದಾರೆಂದು ಅವನಿಗೆ ಆಶ್ವಾಸನೆಕೊಟ್ಟನು. ಅಷ್ಟುಮಾತ್ರವಲ್ಲದೆ, ಆಗಲೂ ಯೆಹೋವನು ಎಲೀಯನ ಮೇಲೆ ಭರವಸವಿಟ್ಟನು ಮತ್ತು ಅವನಿಗೆ ಮಾಡಲು ಕೆಲಸವನ್ನು ನೀಡಿದನು.—1 ಅರಸುಗಳು 19:5-18.
ಎಲೀಯನು ಅನುಭವಿಸಿದ ಭಾವನಾತ್ಮಕ ಸಂಕ್ಷೋಭೆಯು ಅವನು ದೇವರ ಮೇಲಣ ನಂಬಿಕೆಯನ್ನು ಕಳೆದುಕೊಂಡನು ಎಂಬುದರ ಸೂಚನೆಯಾಗಿರಲಿಲ್ಲ. ಸುಮಾರು 1,000 ವರುಷಗಳ ಅನಂತರ, ಪೇತ್ರ, ಯಾಕೋಬ ಮತ್ತು ಯೋಹಾನರ ಮುಂದೆ ಯೇಸು ಕ್ರಿಸ್ತನು ರೂಪಾಂತರಗೊಂಡಾಗ ದರ್ಶನದಲ್ಲಿ ಯೇಸುವಿನ ಬದಿಯಲ್ಲಿ ಯಾರು ಕಂಡುಬರುವಂತೆ ಯೆಹೋವನು ಆಯ್ಕೆಮಾಡಿದನು? ಮೋಶೆ ಮತ್ತು ಎಲೀಯರನ್ನು. (ಮತ್ತಾಯ 17:1-9) ಯೆಹೋವನು ಎಲೀಯನನ್ನು ಒಬ್ಬ ಆದರ್ಶಪ್ರಾಯ ಪ್ರವಾದಿಯಾಗಿ ಪರಿಗಣಿಸಿದ್ದನು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಎಲೀಯನು ಕೇವಲ ‘ನಮ್ಮಂಥ ಅನಿಸಿಕೆಗಳುಳ್ಳ ಮನುಷ್ಯನಾಗಿದ್ದರೂ’ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವುದರಲ್ಲಿ ಮತ್ತು ದೇವರ ನಾಮವನ್ನು ಪವಿತ್ರೀಕರಿಸುವುದರಲ್ಲಿ ಅವನು ಪಟ್ಟ ಕಠಿನ ಪರಿಶ್ರಮವನ್ನು ದೇವರು ಗಣ್ಯಮಾಡಿದನು.
ನಮ್ಮ ಭಾವನಾತ್ಮಕ ಹೋರಾಟ
ಇಂದಿರುವ ಯೆಹೋವನ ಸೇವಕರು ಸಹ ಕೆಲವೊಮ್ಮೆ ಖಿನ್ನತೆ ಮತ್ತು ಚಿಂತೆಯನ್ನು ಅನುಭವಿಸಬಹುದು. ಬರೀ ನಾವು ಮಾತ್ರವೇ ಅಲ್ಲ ಎಲೀಯನು ಸಹ ಅಂಥದ್ದೇ ಭಾವನೆಗಳನ್ನು ಅನುಭವಿಸಿದನೆಂದು ತಿಳಿಯುವುದು ಎಷ್ಟು ಸಾಂತ್ವನದಾಯಕವಾಗಿದೆ! ಯೆಹೋವನು ಎಲೀಯನ ಭಾವನೆಗಳನ್ನು ಅರ್ಥಮಾಡಿಕೊಂಡಂತೆ ನಮ್ಮ ಭಾವನಾತ್ಮಕ ಹೋರಾಟವನ್ನು ಸಹ ಅರ್ಥಮಾಡಿಕೊಳ್ಳುತ್ತಾನೆ ಎಂದು ತಿಳಿಯುವುದು ಎಷ್ಟೊಂದು ಪುನರಾಶ್ವಾಸನೆಯನ್ನು ನೀಡುತ್ತದೆ.—ಕೀರ್ತನೆ 103:14.
ಒಂದು ಬದಿಯಲ್ಲಿ, ನಾವು ದೇವರನ್ನೂ ನಮ್ಮ ಜೊತೆ ಮಾನವರನ್ನೂ ಪ್ರೀತಿಸುತ್ತೇವೆ ಮತ್ತು ರಾಜ್ಯದ ಸುವಾರ್ತೆಯನ್ನು ಸಾರುವ ಯೆಹೋವನ ಕೆಲಸವನ್ನು ಮಾಡಲು ಬಯಸುತ್ತೇವೆ. ಇನ್ನೊಂದು ಬದಿಯಲ್ಲಿ, ಜನರು ಪ್ರತಿಕ್ರಿಯೆ ತೋರಿಸದೇ ಇರುವುದರಿಂದಾಗಿ ನಾವು ನಿರುತ್ಸಾಹಗೊಳ್ಳಬಹುದು ಅಥವಾ ಸತ್ಯಾರಾಧನೆಯ ವೈರಿಗಳಿಂದ ಬರುವ ಬೆದರಿಕೆಗಳಿಂದಾಗಿ ನಾವು ಭಯಭೀತರಾಗಲೂಬಹುದು. ಹಾಗಿದ್ದರೂ, ಎಲೀಯನು ತನ್ನ ಸೇವೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಯೆಹೋವನು ಅವನನ್ನು ಹೇಗೆ ಸಜ್ಜುಗೊಳಿಸಿದನೋ ಅದೇ ರೀತಿಯಲ್ಲಿ ಇಂದಿರುವ ತನ್ನ ಸೇವಕರನ್ನು ಸಹ ಆತನು ಸಿದ್ಧಗೊಳಿಸುತ್ತಾನೆ. ಉದಾಹರಣೆಗೆ, ಹರ್ಬರ್ಟ್ ಮತ್ತು ಗರ್ಟ್ರೂಟ್ ಎಂಬವರನ್ನು ಪರಿಗಣಿಸಿರಿ.
ಹರ್ಬರ್ಟ್ ಮತ್ತು ಗರ್ಟ್ರೂಟ್, 1952ರಲ್ಲಿ ಹಿಂದಿನ ಜರ್ಮನ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್‌ನ ಲೈಪ್ಸಿಗ್‌ನಲ್ಲಿ ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನಪಡೆದುಕೊಂಡರು. ಆ ಸಮಯದಲ್ಲಿ ಸಾರ್ವಜನಿಕ ಶುಶ್ರೂಷೆಯು ನಿಷೇಧಿಸಲ್ಪಟ್ಟಿದ್ದ ಕಾರಣ ದೇವರ ಸೇವಕರಿಗೆ ಜೀವನವು ಬಹಳ ಕಷ್ಟಕರವಾಗಿತ್ತು. ಮನೆಯಿಂದ ಮನೆಗೆ ಸಾರುವ ಕೆಲಸದ ಕುರಿತು ಹರ್ಬರ್ಟ್‌ಗೆ ಹೇಗನಿಸುತ್ತಿತ್ತು?
“ಕೆಲವೊಮ್ಮೆ ನಾವು ಬಹಳ ಆತಂಕದಿಂದಿರುತ್ತಿದ್ದೆವು. ನಾವು ಮನೆಯಿಂದ ಮನೆಗೆ ಸಾರುತ್ತಿರುವಾಗ ಅಧಿಕಾರಿಗಳು ತಟ್ಟನೆ ಬಂದು ನಮ್ಮನ್ನು ದಸ್ತಗಿರಿಮಾಡುವರೆಂಬ ಚಿಂತೆ ನಮಗಿತ್ತು.” ತಮ್ಮ ಭಯವನ್ನು ಹೋಗಲಾಡಿಸಲು ಹರ್ಬರ್ಟ್ ಮತ್ತು ಇತರರಿಗೆ ಯಾವುದು ಸಹಾಯಮಾಡಿತು? “ನಾವು ಬಹಳಷ್ಟು ವೈಯಕ್ತಿಕ ಬೈಬಲ್ ಅಧ್ಯಯನವನ್ನು ಮಾಡಿದೆವು. ಮತ್ತು ನಾವು ನಮ್ಮ ಸಾರುವ ಕೆಲಸವನ್ನು ಮುಂದುವರಿಸಲು ಬೇಕಾದ ಬಲವನ್ನು ಯೆಹೋವನು ಒದಗಿಸಿದನು.” ತನ್ನ ಸಾರ್ವಜನಿಕ ಶುಶ್ರೂಷೆಯಲ್ಲಿ ಹರ್ಬರ್ಟ್‌ಗೆ, ಅವನನ್ನು ಬಲಗೊಳಿಸಿದಂಥ ಮತ್ತು ಅವನಿಗೆ ನಗೆಬರಿಸಿದಂಥ ಅನೇಕ ಅನುಭವಗಳಾದವು.
ಹರ್ಬರ್ಟ್ ಒಮ್ಮೆ ತನ್ನ ಸಾರುವ ಕೆಲಸದಲ್ಲಿ, ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸಿದ ಮಧ್ಯ ಪ್ರಾಯದ ಒಬ್ಬ ಸ್ತ್ರೀಯನ್ನು ಭೇಟಿಯಾದನು. ಕೆಲವು ದಿವಸಗಳ ನಂತರ ಹರ್ಬರ್ಟ್ ಅವಳನ್ನು ಪುನರ್ಭೇಟಿಮಾಡಿದಾಗ, ಒಬ್ಬ ಯುವಕನು ಅಲ್ಲಿ ಉಪಸ್ಥಿತನಿದ್ದು ಅವರ ಸಂಭಾಷಣೆಯನ್ನು ಆಲಿಸುತ್ತಿದ್ದನು. ಕೆಲವು ನಿಮಿಷಗಳ ನಂತರ ಹರ್ಬರ್ಟ್‌ನ ದೃಷ್ಟಿ ಆ ಕೋಣೆಯ ಮೂಲೆಯಲ್ಲಿದ್ದ ಕುರ್ಚಿಯ ಮೇಲಿದ್ದ ಒಂದು ವಸ್ತುವಿನ ಮೇಲೆ ಬಿತ್ತು. ಅದು ಅವನಲ್ಲಿ ನಡುಕವನ್ನು ಉಂಟುಮಾಡಿತು. ಆ ವಸ್ತು ಪೊಲೀಸ್ ಟೋಪಿಯಾಗಿತ್ತು. ಮತ್ತು ಅದು ಅವರ ಸಂಭಾಷಣೆಯನ್ನು ಆಲಿಸುತ್ತಿದ್ದ ಆ ಯುವಕನದ್ದಾಗಿತ್ತು. ಅವನು ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಹರ್ಬರ್ಟ್‌ನನ್ನು ಬಂಧಿಸುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದನೆಂದು ಸ್ಪಷ್ಟವಾಗಿ ತೋರಿತು.
“ನೀನೊಬ್ಬ ಯೆಹೋವನ ಸಾಕ್ಷಿ ಅಲ್ಲವೇ? ನಿನ್ನ ಗುರುತು ಚೀಟಿಯನ್ನು (ಐಡೆಂಟಿಟಿ ಕಾರ್ಡ್) ತೋರಿಸು” ಎಂದು ಆ ಯುವಕನು ಕೇಳಿದನು. ಹರ್ಬರ್ಟ್ ತನ್ನ ಗುರುತು ಚೀಟಿಯನ್ನು ಅವನಿಗೆ ನೀಡಿದ. ಅನಂತರ ಒಂದು ಅನಿರೀಕ್ಷಿತ ಸಂಗತಿಯು ಸಂಭವಿಸಿತು. ಹರ್ಬರ್ಟ್ ಯಾರೊಂದಿಗೆ ಸಂಭಾಷಿಸುತ್ತಿದ್ದನೊ ಆ ಸ್ತ್ರೀಯು ಪೊಲೀಸನ ಕಡೆಗೆ ನೋಡಿ, ಅವನಿಗೆ ಹೀಗೆ ಗದರಿಸಿದಳು: “ಒಂದುವೇಳೆ ಈ ದೇವಮನುಷ್ಯನಿಗೆ ಏನಾದರೂ ಸಂಭವಿಸಿದರೆ, ಮುಂದೆಂದೂ ನೀನು ಈ ಮನೆಯನ್ನು ಪ್ರವೇಶಿಸುವಂತಿಲ್ಲ.”
ಆ ಯುವಕನು ಸ್ವಲ್ಪ ಹೊತ್ತು ಮೌನವಾಗಿದ್ದು, ನಂತರ ಹರ್ಬರ್ಟ್‌ನ ಗುರುತು ಚೀಟಿಯನ್ನು ಅವನಿಗೆ ಹಿಂದಿರುಗಿಸಿ ಅಲ್ಲಿಂದ ಹೊರಟುಹೋದನು. ಸ್ವಲ್ಪ ಸಮಯದ ನಂತರ ಹರ್ಬರ್ಟ್‌ಗೆ ನಿಜ ಸಂಗತಿಯು ತಿಳಿದುಬಂತು. ಆ ಪೊಲೀಸನು ಆ ಸ್ತ್ರೀಯ ಮಗಳೊಂದಿಗೆ ಪ್ರಣಯಾಚರಣೆಯನ್ನು ನಡೆಸುತ್ತಿದ್ದನು. ಹರ್ಬರ್ಟ್‌ನನ್ನು ಸೆರೆಗೆ ಹಾಕಿ ತನ್ನ ಪ್ರಿಯತಮೆಯನ್ನು ಕಳೆದುಕೊಳ್ಳುವ ಬದಲು ಅವಳೊಂದಿಗೆ ಪ್ರಣಯಾಚರಣೆಯನ್ನು ಮುಂದುವರಿಸುವುದೇ ಉತ್ತಮವೆಂದು ಅವನು ನೆನಸಿರಬೇಕು.
ಯೆಹೋವನನ್ನು ನಮ್ಮ ದೇವರನ್ನಾಗಿ ಮಾಡಿಕೊಳ್ಳೋಣ
ಈ ಘಟನೆಗಳಿಂದ ನಾವೇನನ್ನು ಕಲಿಯಬಲ್ಲೆವು? ಅಬ್ರಹಾಮನಂತೆ ನಮಗೂ ಯೆಹೋವನ ವಾಗ್ದಾನಗಳಲ್ಲಿ ಬಲವಾದ ನಂಬಿಕೆಯಿರಬೇಕು. ದಾವೀದನಂತೆ, ನಾವು ಸಹ ಎಂದಾದರೂ ತಪ್ಪುಮಾಡಿದಾಗ ನಿಜವಾದ ಪಶ್ಚಾತ್ತಾಪದೊಂದಿಗೆ ಯೆಹೋವನ ಕಡೆಗೆ ತಿರುಗಬೇಕು. ಎಲೀಯನಂತೆ, ಆತಂಕದ ಸಮಯಗಳಲ್ಲಿ ಬಲಕ್ಕಾಗಿ ನಾವು ಯೆಹೋವನ ಮೇಲೆ ಅವಲಂಬಿಸಬೇಕು. ಈ ರೀತಿ ನಾವು ಮಾಡುವುದಾದರೆ ಯೆಹೋವನನ್ನು ಈಗಲೂ ನಿತ್ಯಕ್ಕೂ ನಮ್ಮ ದೇವರನ್ನಾಗಿ ಮಾಡಬಲ್ಲೆವು, ಏಕೆಂದರೆ ಆತನು ‘ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರಾಗಿದ್ದಾನೆ.’—1 ತಿಮೊಥೆಯ 4:10.
[ಪಾದಟಿಪ್ಪಣಿ]
^ ಪ್ಯಾರ. 20 ಹೆಸರು ಬದಲಾಯಿಸಲ್ಪಟ್ಟಿದೆ.
[ಪುಟ 25ರಲ್ಲಿರುವ ಚಿತ್ರಗಳು]
ವಿಧೇಯತೆಯ ಕೃತ್ಯಗಳು ಅಬ್ರಹಾಮನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದವು
[ಪುಟ 26ರಲ್ಲಿರುವ ಚಿತ್ರ]
ನಾವು ಪಾಪಮಾಡಿದಾಗ ದಾವೀದನಂತೆ ಪಶ್ಚಾತ್ತಾಪಪಡಬೇಕು
[ಪುಟ 28ರಲ್ಲಿರುವ ಚಿತ್ರ]
ಯೆಹೋವನು ಎಲೀಯನ ಭಾವನೆಗಳನ್ನು ಅರ್ಥಮಾಡಿಕೊಂಡಂತೆ ನಮ್ಮ ಭಾವನೆಗಳನ್ನೂ ಅರ್ಥಮಾಡಿಕೊಳ್ಳುತ್ತಾನೆ