ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉಪಯುಕ್ತವಾದ ಭಾಷಾಂತರ ಸಹಾಯಕ

ಉಪಯುಕ್ತವಾದ ಭಾಷಾಂತರ ಸಹಾಯಕ

ಉಪಯುಕ್ತವಾದ ಭಾಷಾಂತರ ಸಹಾಯಕ

ಬೈಬಲಿನ ಗ್ರಂಥಕರ್ತನಾಗಿರುವ ಯೆಹೋವ ದೇವರು, ತನ್ನ ರಾಜ್ಯದ ಸುವಾರ್ತೆಯು “ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ” ಪ್ರಕಟಿಸಲ್ಪಡುವಂತೆ ಬಯಸುತ್ತಾನೆ. (ಪ್ರಕಟನೆ 14:6) ತನ್ನ ಲಿಖಿತ ವಾಕ್ಯವು ಇಡೀ ಮಾನವಕುಲಕ್ಕೆ ಸುಲಭವಾಗಿ ಲಭ್ಯವಾಗಬೇಕೆಂಬುದು ಆತನ ಬಯಕೆಯಾಗಿದೆ. ಈ ಗುರಿಯನ್ನು ಸಾಧಿಸಲಿಕ್ಕಾಗಿ, ಲೋಕದಲ್ಲಿರುವ ಇತರ ಯಾವುದೇ ಗ್ರಂಥಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಬೈಬಲು ಭಾಷಾಂತರಿಸಲ್ಪಟ್ಟಿದೆ. ಸಾವಿರಾರು ಮಂದಿ ಭಾಷಾಂತರಕಾರರು ದೇವರ ವಿಚಾರಧಾರೆಗಳನ್ನು ಇನ್ನೊಂದು ಭಾಷೆಯಲ್ಲಿ ಅನುವಾದಿಸಲಿಕ್ಕಾಗಿ ಅತ್ಯಧಿಕ ಸಮಯ ಹಾಗೂ ಪ್ರಯತ್ನವನ್ನು ವಿನಿಯೋಗಿಸಿದ್ದಾರೆ.

ಆದರೆ ಭಾಷಾಂತರಕಾರರ ದೃಷ್ಟಿಯಲ್ಲಿ ಬೈಬಲು ಭಾಷಾಂತರಿಸಲಿಕ್ಕಾಗಿರುವ ಒಂದು ಮೂಲಗ್ರಂಥಪಾಠವಾಗಿ ಮಾತ್ರವೇ ಉಳಿದಿಲ್ಲ. ಅನೇಕಾವರ್ತಿ, ಇತರ ಮೂಲಪಾಠಗಳನ್ನು ಭಾಷಾಂತರಿಸುವುದರಲ್ಲಿ ಬೈಬಲು ಒಂದು ಸಹಾಯಕವಾಗಿ ಉಪಯೋಗಿಸಲ್ಪಟ್ಟಿದೆ. ಅನೇಕ ಭಾಷಾಂತರಕಾರರು ಕೆಲವೊಂದು ಪದಗಳನ್ನು ಸೂಕ್ತವಾಗಿ ಭಾಷಾಂತರಿಸಲಿಕ್ಕಾಗಿ ಬೇರೆ ಬೇರೆ ಭಾಷೆಗಳಲ್ಲಿರುವ ಬೈಬಲಿನ ಶಬ್ದಗಳ ಅನುವಾದಗಳನ್ನು ಹೋಲಿಸಿನೋಡಿದ್ದಾರೆ. ಒಂದು ಭಾಷಾಂತರ ಸಹಾಯಕದೋಪಾದಿ ಬೈಬಲಿಗಿರುವ ವೈಶಿಷ್ಟ್ಯವನ್ನು ಈಗ ಕಂಪ್ಯೂಟರ್‌ ಭಾಷಾಂತರದಲ್ಲಿಯೂ ಉಪಯೋಗಿಸಲಾಗುತ್ತಿದೆ.

ಕಂಪ್ಯೂಟರ್‌ನ ಸಹಾಯದಿಂದ ಒಳ್ಳೇ ಗುಣಮಟ್ಟದ ಭಾಷಾಂತರವನ್ನು ಸಿದ್ಧಪಡಿಸುವುದು ತುಂಬ ಕಷ್ಟಕರವಾಗಿದೆ. ಭಾಷಾಂತರವು ಕಂಪ್ಯೂಟರ್‌ನ ಸಾಮರ್ಥ್ಯಕ್ಕೆ ನಿಲುಕದ ಒಂದು ಕೆಲಸವಾಗಿದೆ ಎಂದು ಸಹ ಕೆಲವು ಪರಿಣತರಿಗೆ ಅನಿಸಿದೆ. ಏಕೆ? ಭಾಷೆ ಅನ್ನುವುದು ಕೇವಲ ಪದಗಳ ಜೋಡನೆಯಲ್ಲ. ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಸಂಯೋಜನೆಗಳು, ನಿಯಮಗಳು, ಈ ನಿಯಮಗಳಲ್ಲಿ ವಿನಾಯಿತಿಗಳು, ನುಡಿಗಟ್ಟುಗಳು ಮತ್ತು ಪರೋಕ್ಷ ಸೂಚನೆಗಳು ಇರುತ್ತವೆ. ಇವೆಲ್ಲವನ್ನೂ ಒಂದು ಕಂಪ್ಯೂಟರಿಗೆ ಕಲಿಸಲು ಮಾಡುವ ಪ್ರಯತ್ನಗಳು ತೀರ ಕಡಿಮೆ ಯಶಸ್ಸನ್ನು ಪಡೆದಿವೆ. ಕಂಪ್ಯೂಟರಿನಿಂದ ಮಾಡಲ್ಪಟ್ಟ ಅಧಿಕಾಂಶ ಭಾಷಾಂತರಗಳು ಅರ್ಥಮಾಡಿಕೊಳ್ಳಲು ತುಂಬ ಕಷ್ಟಕರವಾಗಿವೆ.

ಆದರೂ, ಕಂಪ್ಯೂಟರ್‌ ಭಾಷಾಂತರದಲ್ಲಿ ಪ್ರಮುಖ ವಿಜ್ಞಾನಿಯಾಗಿರುವ ಫ್ರಾಂಟ್ಸ್‌ ಯೋಸಫ್‌ ಆಕ್‌ ಅವರಿಗನುಸಾರ, ಈಗ ಕಂಪ್ಯೂಟರ್‌ ವಿಜ್ಞಾನಿಗಳು ಭಾಷಾಂತರಿಸುವ ಹೊಸ ವಿಧಾನಗಳನ್ನು ಅನ್ವೇಷಿಸುತ್ತಿದ್ದಾರೆ. ನೀವು ಇಂಗ್ಲಿಷ್‌ ಭಾಷೆಯನ್ನು ಕನ್ನಡ ಭಾಷೆಗೆ ಭಾಷಾಂತರಿಸಬೇಕು ಎಂದಿಟ್ಟುಕೊಳ್ಳಿ. ಪ್ರಥಮವಾಗಿ, ಎರಡೂ ಭಾಷೆಗಳಲ್ಲಿ ಈಗಾಗಲೇ ಲಭ್ಯವಿರುವ ಯಾವುದಾದರೊಂದು ಮೂಲಪಾಠವನ್ನು ತೆಗೆದುಕೊಳ್ಳಿ. ಅದನ್ನು ಕಂಪ್ಯೂಟರ್‌ಗೆ ಫೀಡ್‌ ಮಾಡಿ. ಆಗ ಕಂಪ್ಯೂಟರ್‌ ಎರಡೂ ಮೂಲಪಾಠಗಳನ್ನು ಹೋಲಿಸಿನೋಡುತ್ತದೆ. ಉದಾಹರಣೆಗೆ, ಒಂದೇ ಇಂಗ್ಲಿಷ್‌ ಪದವನ್ನು ಬೇರೆ ಬೇರೆ ಸ್ಥಳಗಳಲ್ಲಿ ಕಂಡುಕೊಳ್ಳುವಾಗ ಮತ್ತು ಪ್ರತಿ ಬಾರಿ ಕನ್ನಡದ ಅದೇ ವಾಕ್ಸರಣಿಯಲ್ಲಿ “ಮನೆ” ಎಂಬ ಪದವನ್ನು ಕಂಪ್ಯೂಟರ್‌ ಗಮನಿಸುವಾಗ, ಆ ಇಂಗ್ಲಿಷ್‌ ಪದವು “ಮನೆ” ಎಂಬ ಪದಕ್ಕೆ ಸಮಾನಾರ್ಥಕವಾದ ಪದವಾಗಿದೆ ಎಂದು ಕಂಪ್ಯೂಟರ್‌ ತೀರ್ಮಾನಿಸುತ್ತದೆ. ಮತ್ತು ಹತ್ತಿರದಲ್ಲಿ “ದೊಡ್ಡ,” “ಚಿಕ್ಕ,” “ಹಳೆಯ,” ಅಥವಾ “ಹೊಸ”ಗಳಂಥ ಗುಣವಾಚಕಗಳು ಇರುವ ಸಾಧ್ಯತೆಯಿದೆ. ಆದುದರಿಂದ, ಕಂಪ್ಯೂಟರ್‌ ಸಮಾನಾರ್ಥಕ ಪದಗಳ ಮತ್ತು ಪದ ಸಂಯೋಗಗಳ ಒಂದು ಪಟ್ಟಿಯನ್ನು ರೂಪಿಸಿಕೊಳ್ಳುತ್ತದೆ. ಕೆಲವೇ ದಿನಗಳು ಅಥವಾ ವಾರಗಳಷ್ಟು ಸಮಯ ತಗಲಬಹುದಾದ ಇಂಥ “ತರಬೇತಿಯ” ಬಳಿಕ ಕಂಪ್ಯೂಟರ್‌, ಅದು ಏನನ್ನು “ಕಲಿತಿದೆಯೋ” ಅದನ್ನು ಮುಂದಿನ ಪಾಠಕ್ಕೆ ಅನ್ವಯಿಸಬಲ್ಲದು. ಇದರಿಂದ ಉಂಟಾಗಬಹುದಾದ ಭಾಷಾಂತರದ ವ್ಯಾಕರಣ ಹಾಗೂ ಶೈಲಿಯಲ್ಲಿ ಉತ್ತಮ ಗುಣಮಟ್ಟ ಕಂಡುಬರದಿದ್ದರೂ, ಇದು ಸಾಮಾನ್ಯವಾಗಿ ಅರ್ಥವನ್ನು ಮತ್ತು ಪ್ರಮುಖ ವಿವರಣೆಗಳನ್ನು ತಿಳಿಯಪಡಿಸುವಷ್ಟರ ಮಟ್ಟಿಗೆ ವಾಚನಯೋಗ್ಯವಾಗಿರುತ್ತದೆ.

ಈ ರೀತಿಯ ಭಾಷಾಂತರದ ಗುಣಮಟ್ಟವು ಹೆಚ್ಚಾಗಿ, ಮೂಲತಃ ಕಂಪ್ಯೂಟರ್‌ಗೆ ಫೀಡ್‌ ಮಾಡಲ್ಪಡುವ ಮೂಲಗ್ರಂಥಪಾಠದ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ ಹೊಂದಿಕೊಂಡಿರುತ್ತದೆ. ಮತ್ತು ಈ ಅಂಶದಲ್ಲಿ ಬೈಬಲ್‌ ಅಮೂಲ್ಯವಾದ ಸಹಾಯಕವಾಗಿ ಪರಿಣಮಿಸಿದೆ. ಇದು ಹೆಚ್ಚು ಜಾಗರೂಕತೆಯಿಂದ ಅನೇಕ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿದೆ, ಸುಲಭವಾಗಿ ಸಿಗುತ್ತದೆ ಮತ್ತು ಅತ್ಯಧಿಕ ಪ್ರಮಾಣದ ಮೂಲಗ್ರಂಥಪಾಠವನ್ನು ಒಳಗೂಡಿದೆ. ಒಂದು ಹೊಸ ಭಾಷೆಗಾಗಿ ಕಂಪ್ಯೂಟರ್‌ಗೆ ತರಬೇತಿ ನೀಡುತ್ತಿರುವಾಗ, ಸಂಶೋಧಕರ ಪ್ರಥಮ ಆಯ್ಕೆಯು ಬೈಬಲೇ ಆಗಿತ್ತು.